ಸೋಮವಾರ, ಜುಲೈ 30, 2018

ಬದುಕಿನ ಬಂಡಿ ಸಾಗಿಸುವ ರೈಲು....


  ⇰ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ದೇಶ ಸುತ್ತಬೇಕು ಇಲ್ಲವೇ ಕೋಶ ಓದಬೇಕು ಎಂದು ಹಿರಿಯರು ಹೇಳುತ್ತಾರೆ. ಈ ವಾಕ್ಯವು ಅಕ್ಷರಃಹ ನಿಜವೂ ಹೌದು. ಹಾಗೆಯೇ ಹೊಸ ಮಾತೊಂದಿದೆ ರೈಲಲ್ಲಿ ಸಂಚರಿಸಿದರೆ ಸಾಕು ಪ್ರಪಂಚದ ಜ್ಞಾನ ಸುಲಭವಾಗಿ ಅರ್ಥವಾಗುತ್ತದೆ. 
ರೈಲು ಕೇವಲ ಜನರನ್ನು ಕೊಂಡೊಯ್ಯುವ ವಾಹನವಲ್ಲ, ಬದಲಾಗಿ ಹಲವ ಬಡ ಜೀವಗಳ ಆಪತ್ಬಾಂಧವ, ಹಲವರ ಬಾಳಿಗೆ ಬೆಳಕು ನೀಡುತ್ತಿದೆ ಎಂದು ಅಶೋಕ್ತಿಯಲ್ಲ. 
ಎಷ್ಟೋ ಜನರಿಗೆ ರೈಲಿನ ಜೊತೆ ಅವಿನಾಭಾವ ಸಂಬಂಧವಿರುತ್ತದೆ. ತಮ್ಮ ನಿತ್ಯದ ಶಾಲಾ, ಕಾಲೇಜು ಅಥವಾ ಕಚೇರಿ ಕೆಲಸಗಳಿಗೆ ತಲುಪಲು ರೈಲೇ ಆಧಾರ.
ನಾನು ಸಾಕಷ್ಟು ಬಾರಿ ರೈಲಲ್ಲಿ ಓಡಾಡಿದ್ದೇನೆ. ರೈಲಿನಲ್ಲಿ ಕಾಣುವ ಕೆಲ ಸನ್ನಿವೇಶಗಳು ಬದುಕಿನ ಪಾಠವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಬಹುಃಶ ಅದು ನನ್ನ ಪದವಿ ಓದುವ ದಿನಗಳು. ಮೊದಲ ಬಾರಿಗೆ ರೈಲು ಹತ್ತಿದ ಸಂಭ್ರಮ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಕೋರಮಂಡಲ್ ರೈಲ್ವೆ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್ ನಿಲ್ದಾಣಕ್ಕೆ)ಕ್ಕೆ ಬಂದಿದ್ದು ಇನ್ನು ನೆನಪಿದೆ.
ಕಳೆದ ಹಲವು ವರ್ಷಗಳಿಂದ ಕರ್ನಾಟಕ ,ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ರೈಲಿನಲ್ಲಿ ಸಂಚರಿಸಿದ್ದೇನೆ. ರೈಲಿನಲ್ಲಿ ಸಾಗುವಾಗ ಕಾಣುವ ರೋಮಾಂಚನಕಾರಿ ದೃಶ್ಯಗಳು ಬೇರೆಲ್ಲೂ ಕಾಣ ಸಿಗಲ್ಲ.
ಅದರಲ್ಲೂ ನಮ್ಮ ದೇಶದಲ್ಲಿ ಬಹುಪಾಲು ರೈಲುಗಳು ಬೆಟ್ಟ-ಗುಡ್ಡ, ಅರಣ್ಯ, ನದಿಗಳ ನಡುವೆ ಹಾದು ಹೋಗುವುದರಿಂದ ಪ್ರಕೃತಿ ಸೌಂದರ್ಯವನ್ನು ರೈಲುಗಳಲ್ಲಿ ಸಂಚರಿಸುವವರು ಹೆಚ್ಚಾಗಿಯೇ ಆಹ್ಲಾದಿಸುತ್ತಾರೆ. ನಿಸರ್ಗದ ಅಂದವನ್ನು ಕಣ್ತುಂಬಿಕೊಳ್ಳಬೇಕಾದರೆ ರೈಲಲ್ಲೇ ಸಾಗಬೇಕು.      
ರೈಲ್ವೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಕರೆದೊಯ್ಯುವ ವಾಹನವಷ್ಟೇ ಅಲ್ಲ, ಬದಲಾಗಿ ಲಕ್ಷಾಂತರ ಜನಸಾಮಾನ್ಯರ ಜೀವನಕ್ಕೆ ಬೆಳಕು ನೀಡುತ್ತಿದೆ.
ನಮ್ಮ ದೇಶದಲ್ಲಿ ರೈಲ್ವೆ ಇಲಾಖೆ ಸಾರಿಗೆ ವಲಯದಲ್ಲಿ ತನ್ನದೇ ಅಧಿಪತ್ಯ ಸಾಗಿಸುತ್ತಿರುವುದರ ಜೊತೆಗೆ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವಕಾಶವನ್ನು ಒದಗಿಸುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಅದು ಕೇವಲ ಒಂದು ದಿನದ ರೈಲ್ವೆ ಪ್ರಯಾಣವಾದರೂ, ರೈಲಿನಲ್ಲಿ ಸಂಚರಿಸುವಾಗ ಹಲವು ಮಹತ್ವದ ಅಂಶಗಳು ಕಾಣುತ್ತವೆ. ಸಹಜವಾಗಿಯೇ ರೈಲಿನ ಟಿಕೆಟ್ ದರ ಕಡಿಮೆ ಇರುವುದರಿಂದ ಹಾಗೂ ಸುರಕ್ಷಿತ ಎಂಬ ಕಾರಣಕ್ಕೆ ಹತ್ತಿರದ ಪ್ರದೇಶಗಳಿಂದ ಹಿಡಿದು ದೂರದ ಪ್ರದೇಶಗಳವರೆಗೂ ಸಾಗುವ ಪ್ರಯಾಣಿಕರು ರೈಲ್ವೆ ಸಂಚಾರವನ್ನೇ ಆಯ್ದುಕೊಳ್ಳುತ್ತಾರೆ.
ಅದರಲ್ಲೂ ಪ್ರಮುಖವಾಗಿ ಬಡ ಮಧ್ಯಮ ವರ್ಗದವರಿಗೆ ರೈಲು ಅಚ್ಚುಮೆಚ್ಚು. ದುಬಾರಿ ಹಣ ಕೊಟ್ಟು ಬಸ್ ಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದಿರುವುದರಿಂದ ರೈಲಿನ ಮೇಲೆ ಈ ಎರಡು ವರ್ಗಗಳಿಗೆ ಹೆಚ್ಚಿನ ಮಮಕಾರ.
ಇನ್ನು ಬಸ್ಗಳಲ್ಲಿ ನಿಗದಿತ ಸ್ಥಳಗಳಿಗೆ ತಲುಪುವ ಪ್ರಯಾಣಿಕರನ್ನು ಮಾತ್ರ ಕಾಣಬಹುದು. ಆದರೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ವಿವಿಧ ಭಾಷೆ, ಹಲವು ಧರ್ಮ, ಹತ್ತಾರು ಜಾತಿ, ಬಡ, ಮಧ್ಯಮ, ಶ್ರೀಮಂತ ಹೀಗೆ ಎಲ್ಲಾ ವರ್ಗಗಳಿಗೆ ಸೇರಿದ ಜನರು ಪ್ರಯಾಣಿಕರು ಒಂದೇ ರೈಲಲ್ಲಿ ಜರ್ನಿ ಮಾಡುವುದರಿಂದ ರೈಲನ್ನು ಜಾತ್ಯಾತೀತೆಯ ವಾಹನವೆಂದು ವರ್ಣಿಸಿದರು ತಪ್ಪಾಗಲಾರದು.
ಕೆಲವೊಮ್ಮೆ ಸರಿಯಾದ ಸಮಯಕ್ಕೆ ರೈಲು ಬರಲಿಲ್ಲ ಎಂದು ಅಸಮಾಧಾನವಾದರೂ, ಕಿಕ್ಕಿರಿದು ತುಂಬುವ, ಕಾಲಿಡಲು ಜಾಗವಿಲ್ಲದ ಪ್ಯಾಸೆಂಜರ್ ರೈಲಿನಲ್ಲಿ ಸಾಗುವ ಪ್ರಯಾಣವೇ ಬಲು ರೋಮಾಂಚನ. ಉಸಿರಾಡಲು ಸಾಧ್ಯವಾಗದ ಜಾಗದಲ್ಲಿ ನಿಂತು, ಅಬ್ಬಾ ಏನು ಈ ಕಷ್ಟ ಎಂದು ಗೊಣಗುತ್ತ ದಿನನಿತ್ಯ ಸಾಗುವವನಿಗೆ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಎದುರಿಸುವ ಸಾಮರ್ಥ್ಯ ತನ್ನಿಂದತಾನೇ ಬೆಳೆದಿರುತ್ತದೆ. 
ಇನ್ನು ರೈಲಿನಲ್ಲಿ ಕೆಲವರು ಮೊಬೈಲ್ ಲೋಕದಲ್ಲಿ ಮಗ್ನರಾಗಿ ಇಹಲೋಕದ ಜ್ಞಾನವೇ ಇಲ್ಲದೇ ಫೇಸ್ ಬುಕ್, ವಾಟ್ಸಾಪ್, ವಿಡಿಯೋ ಚಾಟಿಂಗ್ಳಲ್ಲಿ ತಲ್ಲೀನವಾಗುವ ಪ್ರಸಂಗಗಳು ಸಾಮಾನ್ಯ. 
ದಿಢೀರ್ ಎಂದು ಶೌಚಾಲಯಕ್ಕೆ ಹೋಗಬೇಕಾದರೆ ಆ ಜನರನ್ನು ತಳ್ಳಿಕೊಂಡು ಶೌಚಾಲಯದ ಬಾಗಿಲು ಹತ್ತಿರ ಹೋಗುವುದೇ ಪ್ಯಾಸೆಂಜರ್ ರೈಲುಗಳಲ್ಲಿ ಹರಸಾಹಸ. ಒಂತರ ಇದು ಸರ್ಕಸ್ ಆಟ.  
ಈ ಮಧ್ಯೆ ಅತ್ತಿಂದಿತ್ತ ಬಿಸಿ ಬಿಸಿ ಕಾಫಿ, ಕಾಫಿ ಟೀ, ಟೀ ಎಂದು ಜೋರು ಧ್ವನಿಯಲ್ಲಿ ಹೇಳುತ್ತ ಕಾಫಿ ಮಾರುವ ಹುಡುಗರ ರನ್ನೀಂಗ್ ರೇಸ್ ರೈಲಿನಲ್ಲಿ ಕಾಣುವ ಸಾಮಾನ್ಯ ಪ್ರಸಂಗ. ಬಿಸಿ ಬಿಸಿ ಇಡ್ಲಿ, ವಡೆ ಮಾರಾಟ ಮಾಡುವ ಮಂದಿಯು ಕಾಣ ಸಿಗುತ್ತಾರೆ. ಕಳ್ಳೆ ಬೀಜ, ಚಕ್ಕುಲಿ, ನೀರಿನ ಬಾಟೆಲ್, ಬೇಲ್ ಪೂರಿ, ಕಳ್ಳೆ ಕಾಯಿ, ದಿನಪತ್ರಿಕೆ, ಕಥೆ, ಕಾದಂಬರಿ ಪುಸ್ತಕಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ಹಲವರು ಕಣ್ಣಿಗೆ ಕಾಣುತ್ತಾರೆ.   
ಈಗಂತು ಕೆಲ ರೈತರು ರೈಲಿನಲ್ಲೇ ತಾಜ ತರಕಾರಿ ಹಾಗೂ ಹೂಗಳನ್ನು ಮಾರಾಟ ಮಾಡುವ ಸಂಪ್ರದಾಯ ಬೆಳೆಯುತ್ತಿದೆ. ಕೆಲವರು ಕೀ ಚೈನ್, ಕಿವಿ ಓಲೆ, ಬ್ರಾಸ್ ಲೈಟ್, ಹೆಣ್ಣು ಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಜನ ರೈಲುಗಳಲ್ಲಿ ತುಂಬಾನೆ ಇದ್ದಾರೆ. ವಿಧಿಯಿಲ್ಲದೇ ಭಿಕ್ಷೆ ಬೇಡುವ ಕೆಲವರಿಗೆ ರೈಲೇ ಆಧಾರ. ಎಷ್ಟೋ ಜನರಿಗೆ ರೈಲೆ ಬದುಕಿನ ಬಂಡಿ ಸಾಗಿಸಲು ನೆರವಾಗಿದೆ. ರೈಲು ಗಾಡಿಯೇ ಇವರಿಗೆ ನೆರವಿನ ಹಸ್ತ ಚಾಚುತ್ತಿದೆ.  ರೈಲಿಲ್ಲದೇ ಇವರಿಗೆ ಬದುಕೇ ಇಲ್ಲ. 
ರೈಲಿನ ಒಳಗೆ ಕೆಲವರು ವಸ್ತು, ಪದಾರ್ಥಗಳನ್ನು ಮಾರಾಟ ಮಾಡಿ ಬದುಕುತ್ತಿದ್ದರೆ, ಮತ್ತೆ ಕೆಲವರು
ರೈಲ್ವೆ ನಿಲ್ದಾಣಗಳಲ್ಲಿ ಸಣ್ಣದಾದ ಕಾಫಿ, ಟೀ, ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಅಂಗಡಿ, ದಿನ, ವಾರಪತ್ರಿಕೆ ಮಾರಾಟ ಮಾಡುವ ಅಂಗಡಿ ಸೇರಿದಂತೆ ಮತ್ತಿತರ ಮಳಿಗೆಗಳನ್ನು ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. 
ಕೇವಲ ಒಂದು ದಿನದ ಮಟ್ಟಿಗೆ ರೈಲಿನ ಸಂಚಾರ ಸ್ಥಬ್ದಗೊಂಡರೆ ಸಾಕು ಲಕ್ಷಾಂತರ ಜನರ ಬದುಕು ಅಸ್ತವ್ಯಸ್ಥವಾಗುತ್ತದೆ. ಹಲವರು ಕಂಗಲಾಗುತ್ತರೆ, ಅಷ್ಟರ ಮಟ್ಟಿಗೆ ರೈಲು ಸಮಾಜ ಹಾಗೂ ನಾಗರಿಕರ ಮೇಲೆ ಭಾರಿ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಎಷ್ಟೋ ಜನರು ರೈಲಿನ ಸಂಚಾರದಲ್ಲೇ ಆಪ್ತ ಸ್ನೇಹಿತರನ್ನು ಹುಡುಕಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಎದುರಾಗಿರುವ ಕಷ್ಟಗಳನ್ನು ಹೇಳಿಕೊಳ್ಳಲು ಆಪ್ತ ಸ್ನೇಹಿತರ ಅವಶ್ಯಕತೆ ಇರುತ್ತದೆ. ಅಂತಹ ಆಪ್ತ ಸ್ನೇಹಿತ ಸಿಕ್ಕಿದು ರೈಲಿನ ಪ್ರಯಾಣದಲ್ಲೇ ಎಂದು ಹಲವರು ಹೇಳುತ್ತಾರೆ. ಸುದೀರ್ಘವಾಗಿ ರೈಲಿನಲ್ಲಿ ಪ್ರಯಾಣಿಸಿದವರಿಗೆ ರೈಲು ತಮ್ಮ ಜೀವನದ ಒಂದು ಭಾಗವಾಗಿರುತ್ತದೆ. ಎಷ್ಟೋ ಬಾರಿ ರೈಲು ತಡವಾಗಿ ಬಂದಿದ್ದಕ್ಕೆ ಬೇಸರ, ಕೋಪ ಬಂದಿದ್ದರು ಕೂಡ ರೈಲಿನಿಂದ ಆದ ಲಾಭ ಮರೆಯಲು ಸಾಕಷ್ಟು ಜನರಿಗೆ ಸಾಧ್ಯವಾಗುವುದಿಲ್ಲ.
ಕೆಲವರಿಗಂತೂ ಸಂಬಂಧಿಕರಿಗಿಂತ ಹೆಚ್ಚಾಗಿ ರೈಲಿನಲ್ಲಿ ಪರಿಚಯವಾದವರನ್ನೇ ಆತ್ಮೀಯ ಒಡನಾಡಿಗಳಾಗಿ ಮಾಡಿಕೊಂಡಿರುತ್ತಾರೆ.ರೈಲು ಸಂಬಂಧಿಕರನ್ನು ಸೃಷ್ಟಿಸುವ ಅದ್ಬುತ ಶಕ್ತಿ ಇದೆ. ನಾನು ರೈಲಲ್ಲಿ ಸಂಚರಿಸುವಾಗ ಅಕ್ಕ, ಪಕ್ಕ ಸೀಟುಗಳಲ್ಲಿ ಕುಳಿತಿರುವವರು ತಮ್ಮ ಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿದ್ದೇನೆ, ಕೇಳಿದ್ದೇನೆ. ಹಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾಗಿರುವ ಹಣಕಾಸು, ಕುಟುಂಬ ಜಂಜಾಟ, ಮಕ್ಕಳ ಶಿಕ್ಷಣ, ಮದುವೆ ಮುಂತಾದ ವಿಚಾರಗಳಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಬೇಸರದಿಂದ ಮಾತನಾಡಿಕೊಳ್ಳುವುದನ್ನು ಕೇಳಿದಾಗ, ನನಗನಿಸಿದ್ದು ಈ ಲೋಕದಲ್ಲಿ ಸಮಸ್ಯೆಗಳಿಂದ ಹೊರತಾದ ಜನರು ಯಾರು ಇಲ್ಲ ಎಂದು.
ಎಷ್ಟೋ ಜನರು ದೊಡ್ಡ ದೊಡ್ಡ ಸಮಸ್ಯೆಗಳಿಂದ ನರಳುತ್ತಿರುವುದನ್ನು ರೈಲಲ್ಲಿ ಪ್ರಯಾಣಿಸಿದಾಗ ಹಲವರ ಬಾಯಲ್ಲಿ ಕೇಳಿದ್ದೇನೆ. ಬಹುಃಶ ಇಂತಹ ಸನ್ನಿವೇಶ, ಸಂದರ್ಭಗಳನ್ನು ಕಂಡಾಗಲೇ ನಮಗೂ ತುಸು ಧೈರ್ಯ ಬರುವುದು. ರೈಲಲ್ಲಿ ಪಯಣಿಸಿದವರಿಗೆ ಇಂತಹ ಸನ್ನಿವೇಶಗಳು ಲೆಕ್ಕವಿಲ್ಲದಷ್ಟು ಆಗಿರುತ್ತದೆ. ಅಂತಹ ಘಟನೆಗಳೇ ನಮ ಬದುಕಿಗೂ ಹೊಸ ದಾರಿಯನ್ನು ತೋರುತ್ತದೆ. 
ಇಂದು ವಿಮಾನ, ಎಲಿಕಾಪ್ಟರ್, ಹವಾನಿಯಂತ್ರಿತ ಬಸ್ ಗಳು, ಐಷರಾಮಿ ಕಾರ್ ಗಳು ಸೇರಿದಂತೆ ಮತ್ತಿತರರ ವಾಹನಗಳು ಸಂಚರಿಸಲು ಆವಿಷ್ಕಾರವಾಗಿದ್ದರು, ರೈಲಿನ ಅನುಭವವನ್ನು ಕಟ್ಟಿಕೊಡಲು ಅವುಗಳಿಂದ ಖಂಡಿತ ಸಾಧ್ಯವಾಗುವುದಿಲ್ಲ. ರೈಲು ನಿಮ್ಮ ಕಲ್ಪನೆಗೂ ಮೀರಿದ ಅದ್ಬುತ ಜಗತ್ತನ್ನು ಹೊಂದಿದೆ.

1 ಕಾಮೆಂಟ್‌:

Unknown ಹೇಳಿದರು...

ಲೇಖನ ಬಹಳ ಸುಂದರವಾಗಿ ಮೂಡಿ ಬಂದಿದೆ. ಅನುಭವವನ್ನು ಸೂಕ್ಷ್ಮವಾಗಿ ಗಮನಿಸಿ ಪದ ಪುಂಜದೊಡನೆ ಓದುಗರಿಗೆ ತಲುಪಿಸುವ ಕಲೆ ನಿಮ್ಮಲ್ಲಿ ಇದೆ.ಅಭಿನಂದನೆಗಳು.