➤ ದೇವಲಪಲ್ಲಿ
ಎನ್.ಗಿರೀಶ್ ರೆಡ್ಡಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಒಂದು ರಾಷ್ಟ್ರದ ಅಭಿವೃದ್ದಿಯ ಮೇಲೆ ಪರಿಣಾಮ ಬೀರುತ್ತದೆ. ದೇಶದ ಅಭಿವೃದ್ದಿಯು ಚುನಾವಣೆಯಲ್ಲಿ ನಾವು ಎಂಥಹ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುವುದರ ಮೇಲೆ ನಿಂತಿದೆ ಎಂಬುವುದನ್ನು ಒಪ್ಪಲೇ ಬೇಕು.
ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ರ ಣಕಹಳೆ ಮೊಳಗಿದೆ. ಚುನಾವಣೆ ಸಮೀಪದಲ್ಲಿ ರುವುದರಿಂದ ಜನಸಾಮಾನ್ಯರಿಗೆ ಎಲ್ಲಿಲ್ಲದ ರಾಜಮರ್ಯಾದೆ. ಆತ ಎಂತಹ ದೊಡ್ಡ ಜನಪ್ರತಿ ನಿಧಿಯಾದರೂ ಜಾತಿ, ಧರ್ಮ , ಬಡತನ, ಸಿರಿತನ ನೋಡದೆ ಎದುರಿಗೆ ಬರುವ ಪ್ರತಿಯೊಬ್ಬರಿಗೂ ಕೈ ಮುಗಿತ್ತಾರೆ. ಪ್ರತಿಯೊಬ್ಬರನ್ನು ಅಣ್ಣ, ತಮ್ಮ, ಅಕ್ಕ, ತಂಗಿ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಮೇ 12 ನಂತರ ಈ ಪರಿಸ್ಥಿತಿಯನ್ನು ಕಾಣಲು ಖಂಡಿತಾ ಸಾಧ್ಯವಿಲ್ಲ. ಕಳೆದ ಐದು ವರ್ಷಗಳಿಂದ ಮತದಾರರ ಕಷ್ಟ ಸುಖಗಳ ಬಗ್ಗೆ ಕ್ಯಾರೆ ಎನ್ನದ ಶಾಸಕರು, ಮಾಜಿ ಶಾಸಕರು, ರಾಜಕಾರಣಿಗಳು ಈಗ ಬಿಸಿಲ್ಲೆನ್ನದೆ ಮನೆ ಮನೆ ಸುತ್ತುತ್ತಾ ಜನರ ಮತ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇದೊಂಥರ ಚುನಾವಣೆಯ ಮಹಿಮೆ.
ಅದೆಷ್ಟೋ ಬಾರಿ ಜನರು ನಮ್ಮೂರ ರಸ್ತೆ ಸರಿಯಿಲ್ಲ. ಊರಲ್ಲಿ ಕುಡಿಯಲು ನೀರು ಬರಲ್ಲ, ಸರಿಯಾಗಿ ವೃದ್ದಾಪ್ಯ, ವಿಧವಾ , ವಿಶೇಷಚೇತನಾ ವೇತನ ಸಿಗುತ್ತಿಲ್ಲ, ಬೆಳೆದ ಬೆಳೆ ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟವಾಗಿದೆ. ನಮ್ಮೂರ ಶಾಲೆಯಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಜನರು ಕಣ್ಣೀರು ಹಾಕಿ ಗೋಗೆರೆದರೂ ಜನಪ್ರತಿನಿಧಿಗಳಿಗೆ ಕರುಣೆ ಬರಲಿಲ್ಲ. ಯಾವುದಕ್ಕೂ ಮನಸ್ಸು ಕರಗಲಿಲ್ಲ.
1947 ರಿಂದ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲೇ ಇವೆ. ಹಲವಾರು ಪಕ್ಷಗಳಿಂದ ಆಯ್ಕೆಗೊಂಡವರು ಮುಖ್ಯಮಂತ್ರಿಗಳಾಗಿ ಅಧಿಕಾರ ಚಲಾಯಿಸಿದ್ದಾರೆ. ಒಂದಷ್ಟು ಸಮಸ್ಯೆಗಳು ಬಗೆಹರಿದಿವೆಯಾದರೂ ಸಾವಿರಾರು ಜ್ವಲಂತ ಸಮಸ್ಯೆಗಳು ದಶಕಗಳಿಂದಲೂ ಹಾಗೆ ಉಳಿದಿರುವುದು ಕಣ್ಣಿಗೆ ಇನ್ನು ಕಾಣುತ್ತದೆ.
ಚುನಾವಣೆಗಳಲ್ಲಿ ಆಯ್ಕೆಯಾಗಿ ಬರುತ್ತಿರುವ ಜನಪ್ರತಿನಿಧಿಗಳು ತಮ್ಮನ್ನು ತಾವು ಸರ್ವಾಧಿಕಾರಿಗ ಳಂತೆ ಭಾವಿಸಿದ್ದಾರೆ. ತಾವು ಸಮಾಜ ಸೇವಕರು, ಮಾಲೀಕರಲ್ಲ ಎಂಬ ಅಂ ಶವನ್ನೇ ಅವರು ಮರೆತು ಬಿಟ್ಟಿದ್ದಾರೆ.
ದಶಕಗಳಿಂದಲೂ ಅಧಿಕಾರ ಚಲಾಯಿಸಿದ ಅದೆಷ್ಟೋ ಸರಕಾರಗಳು ಗುಡಿಸಲು ಮುಕ್ತ ರಾಜ್ಯವನ್ನು ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ಎಷ್ಟೋ ಹಳ್ಳಿಗಳಲ್ಲಿ ಗುಡಿಸಲಲ್ಲಿ ವಾಸಿಸುತ್ತಿರುವ ಜನರನ್ನು ಈಗಲೂ ಕಾಣಬಹುದು. ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ಹೇಳುವುದೇ ಬೇಡ. ಚುನಾವಣೆಗಳು ಬಂದರೆ ತೇಪೆ ಹಾಕಿ ರಸ್ತೆಗಳ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡುವ ರಾಜಕಾರಣಿಗಳಿಂದ ಏನು ನಿರೀಕ್ಷಿಸಲು ಸಾಧ್ಯ. ರಸ್ತೆಗಳಲ್ಲಿನ ಗುಂಡಿಗಳಿಂದ ಅಪಘಾತಗಳಾಗಿ ಸಾವಿರಾರು ಜನ ಶಿವನ ಪಾದ ಸೇರಿದರು ಸಮಸ್ಯೆ ಬಗೆಹರಿಸ ಬೇಕಾದವರಿಗೆ ಬುದ್ದಿ ಬರಲಿಲ್ಲ. ಅಮಾಯಕರ ಪ್ರಾಣ ಹಾರಿ ಹೋಗುತ್ತಿದ್ದರು, ಇದೊಂದು ಗಂಭೀರ ಸಮಸ್ಯೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.
ಕೃಷಿ ರಂಗದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚುಡುತ್ತ ಹೋದರೆ ಪುಟಗಟ್ಟಲೇ ಲೇಖನ ಬರೆಯಬಹುದು. ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲದಿದ್ದರೆ ರೈತರು ಕಣ್ಣಲ್ಲಿ ಬರುವ ರಕ್ತವನ್ನು ಒರೆಸಲು ಸಾಧ್ಯವಿಲ್ಲ ಎಂದು ಪ್ರತಿಭಟನೆಗಳು, ವಾದಗಳು ಕೇಳಿ ಬರುತ್ತಿದ್ದರು ಕಿವಿ ಹಾಕಿಕೊಳ್ಳುವ ನಾಯಕರಿಲ್ಲ.
ಮಾರುಕಟ್ಟೆಗಳಲ್ಲಿ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ ಎಂದು ರೈತರು ತಾವು ಬೆಳೆದ ಬೆಳೆಗಳನ್ನು ರಸ್ತೆಗಳಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುವುದು ಎಲ್ಲೆಡೆಯ ಸಾಮಾನ್ಯ ಚಿತ್ರಣ. ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ರೈತರು ವಿಧಿಯಿಲ್ಲದೆ ಆತ್ಮಹತ್ಯೆ ಹಾದಿ ಹಿಡಿದಿರುವುದರಿಂದ, ಸಾವುಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ.
ರೈತರು ಕಣ್ಣೀರನ್ನು ಹೊರೆಸುವ ರೈತ ಪರ ನಾಯಕ ಇಂದಿಗೂ ಹುಟ್ಟದಿರುವುದು ದುರ್ದೈವ. ಎಲ್ಲಾ ಪಕ್ಷಗಳು ರೈತ ಸಮುದಾಯದ ಮತಗಳನ್ನು ಪಡೆಯಲು ರೈತರಿಗೆ ಸುಳ್ಳು ಭರವಸೆಗಳನ್ನು ನೀಡುವ ಕಾಯಕವನ್ನು ಮಾತ್ರ ರೂಡಿ ಮಾಡಿಕೊಂಡಿವೆ.
ಯುವ ಸಮೂಹವಂತು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿ ಹೋಗುತ್ತಿದೆ. ಪ್ರತಿ ವರ್ಷವು ಶಿಕ್ಷಣ ಪಡೆದು ಹೊರ ಬರುತ್ತಿರುವ ಲಕ್ಷಾಂತರ ಯುವ ಜನರು ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೆ ಅನಿವಾರ್ಯವಾಗಿ ತಮ್ಮ ಅರ್ಹತೆಗಲ್ಲದ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ನಿರುದ್ಯೋಗಿಗಳನ್ನು ಕೆಲ ಸಮಾಜಘಾತುಕ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಿದರ್ಶನಗಳು ಹಲವಾರಿವೆ. ಬಹುಃಶ ಎಂದು ಕೂಡ ಅಧಿವೇಶನಗಳಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ವಿಸ್ತೃತವಾಗಿ ಚರ್ಚೆ ಮಾಡಿದ ಸಂದರ್ಭಗಳು ಬಹಳ ವಿರಳ.
ಇಂದು ಯಾವುದೇ ಪಕ್ಷದವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಉಳಿಸಿಕೊಂಡಿಲ್ಲ. ಪ್ರತಿ ರಾಜಕೀಯ ಪಕ್ಷದವರು ಕುಟುಂಬ ವ್ಯಾಮೋಹಕ್ಕೆ ಜೊತು ಬಿದ್ದಿವೆ. ಇದರಿಂದಲೇ ನಿಜವಾದ ಜನಸಾಮಾನ್ಯರ ಪರ ನಾಯಕ ಕಾಣುತ್ತಿಲ್ಲ. ವಿಧಾನಸಭೆಯನ್ನು ಕುಟುಂಬ ಕೇಂದ್ರಿತ ಶಾಸನಸಭೆ ಎಂದು ಕರೆದರೂ ಅಶೋಕ್ತಿಯೇನಲ್ಲ.
ಮೊದಲೇ ವಿಧಾನಸಭೆ ಮತ್ತು ವಿಧಾನಪರಿಷತ್ತು ಅಧಿವೇಶನಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಚರ್ಚೆಯಾಗಿ ಪರಿಹಾರ ಕಂಡು ಹಿಡಿಯಬೇಕಾಗಿದ್ದ ಅಧಿವೇಶನಗಳು ದುಂದು ವೆಚ್ಚದ ಸಭೆಗಳಾಗಿ ಯಾರಿಗೂ ಎಳ್ಳೆಷ್ಟು ಪ್ರಯೋಜನಕ್ಕೆ ಬರದ ಸಭೆಗಳಾಗಿ ಮಾರ್ಪಡಾಗಿವೆ. ಅಂತಹವುದರಲ್ಲಿ ರಾಜಕೀಯ ಕುಟುಂಬದ ಹಿನ್ನಲೆಯವರೆ ಅಲ್ಲಿ ತುಂಬಿಕೊಂಡರೆ ಪರಿಸ್ಥಿತಿ ಏನಾಗಲಿದೆ ಊಹಿಸುವುದು ಕಷ್ಟ.
ಯಾವ ಜನಪ್ರತಿನಿಧಿಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆಸುವ ಪುರಸೊತ್ತು, ಕಾಳಜಿ ಇಲ್ಲದಾಗಿದೆ. ಆದರೆ ಅಧಿವೇಶನಗಳಲ್ಲಿ ಭಾಗವಹಿಸಿದರೆ ಸಿಗುವ ವೇತನ, ಭತ್ಯೆಗಳನ್ನು ಚಾಚು ತಪ್ಪದೇ ಪಡೆದು ಜೇಬಿಗಿಳಿಸುತ್ತಾರೆ.
ರಾಜ್ಯದ ಮತದಾರರು ತುಂಬಾ ಗಂಭೀರವಾಗಿ ಆಲೋಚಿಸಬೇಕಾದ ಸಂದರ್ಭವಿದು. ಸ್ವಲ್ಪ ಎಡವಿದದೂ ಮತ್ತೆ ಐದು ವರ್ಷ ಅಸಹಾಯಕರಾಗಿ ಕಷ್ಟಗಳ ಸರಮಾಲೆಯಲ್ಲಿ ಮುಳುಗಬೇಕಾದ ಅನಿವಾರ್ಯತೆಗೆ ಸಿಲುಕು ಬೇಕಾಗುತ್ತದೆ.
ಚುನಾವಣೆ ಸಮಯದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳು ಕೊಡುವ ಕುಕ್ಕರ್, ಸೀರೆ, ಹಣ, ಹೆಂಡ, ಬಾಡೂಟ ಎಷ್ಟು ದಿನ ಬರುತ್ತೇ ಎಂಬುವುದು ಆಲೋಚಿಸಬೇಕು. ಅವರು ನೀಡುವ ಹಣ ಒಂದಕ್ಕೆ ದಿನಕ್ಕೆ ಖಾಲಿಯಾಗುತ್ತದೆ. ಆಸೆ, ಆಮಿಷಗಳಿಗೆ ಬಲಿಯಾಗಿ ಮತ ಮಾರಾಟ ಮಾಡಿಕೊಂಡರೆ ನಮ್ಮ ಸ್ವಾಭಿಮಾನವನ್ನೇ ಹರಾಜಿಗಿಟ್ಟಂತೆ.
ಜಾತಿ, ಧರ್ಮ ಆಧಾರದಲ್ಲೂ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರಿಪಾಠಕ್ಕೆ ತಿಲಾಂಜಲಿ ಬೀಳದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬಿರುಕು ಬೀಳುತ್ತದೆ. ಸ್ವ ಜಾತಿ, ಸ್ವ ಸ್ವಧರ್ಮೀಯ ಎಂಬ ಒಂದೇ ಕಾರಣಕ್ಕೆ ಮತ ಚಲಾಯಿಸಿದರೆ ಅದು ನಮಗೆ ನಾವೇ ಮೋಸ ಮಾಡಿಕೊಂಡಂಗೆ ಆಗುತ್ತದೆ.
ಕೇಂದ್ರ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಸುಧಾರಣೆಗಾಗಿ ಎಷ್ಟೇ ಬದಲಾವಣೆಗಳು ಮಾಡಿದರೂ, ರಾಜಕೀಯ ಪಕ್ಷಗಳು ಅವುಗಳನ್ನು ಉಲ್ಲಂಘಿಸುವ ಪ್ರಕರಣಗಳು ಜಾಸ್ತಿ. ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಲಕ್ಷ ರೂ.ಗಳಲ್ಲಿ ಮಾತ್ರ ಖರ್ಚು ಮಾಡ ಬೇಕೆಂಬ ನಿಯಮವಿದ್ದರೂ, ಕೋಟಿ ರೂ. ಗಳಲ್ಲಿ ಖರ್ಚು ಮಾಡುವ ಅಭ್ಯರ್ಥಿಗಳಿಗೇನು ನಮ್ಮಲ್ಲಿ ಕೊರತೆ ಇಲ್ಲ.
ಚುನಾವಣಾ ಆಕ್ರಮಗಳಲ್ಲಿ ಭಾಗಿಯಾದರೂ ಕಠಿಣ ಶಿಕ್ಷೆ ಕೊಡುವ ಸೂಕ್ತ ಕಾನೂನು ವ್ಯವಸ್ಥೆ ನಮ್ಮಲ್ಲಿ ಇಲ್ಲ. ದಶಕಗಳ ಹಿಂದೆ ದಾಖಲಾಗಿರುವ ಚುನಾವಣಾ ಅಕ್ರಮ ಪ್ರಕರಣಗಳು ನ್ಯಾಯಾಲಯಗಳಲ್ಲಿ ಧೂಳು ಹಿಡಿಯುತ್ತಿವೆ.
ಇನ್ನು ಮತದಾನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಳವಾಗುತ್ತಿಲ್ಲ ಎಂಬುವುದು ಮತದಾರರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. ಚುನಾವಣೆ ದಿನ ರಜೆ ಬಂತೆಂದು ಹಲವರು ಜಾಲಿ ಟ್ರಿಪ್ ಹೋಗುವ ನಿದರ್ಶನಗಳು ಕೂಡ ನಡೆಯುತ್ತವೆ. ಇದು ಮತದಾರರು ಮಾಡುವ ಅಕ್ಷಮ್ಯ ಅಪರಾಧ. ಸಂವಿಧಾನದತ್ತವಾಗಿ ಸಿಕ್ಕ ಪವಿತ್ರವಾದ ಮತದಾನವನ್ನೇ ಚಲಾಯಿಸದೇ ಹೋದರೆ ಏನೇನ್ನ ಬೇಕೋ ಗೊತ್ತಿಲ್ಲ.? ನಾಳೆ ಜನಪ್ರತಿನಿಧಿಗಳು ತಪ್ಪು ಮಾಡಿದರೆ ಪ್ರಶ್ನಿಸುವ ನೈತಿಕ ಹಕ್ಕು ಮತದಾನದಿಂದ ದೂರವಿದ್ದವರಿಗೆ ಖಂಡಿತಾ ಇರುವುದಿಲ್ಲ.
ನಾವು ಎಂದು ಪ್ರಾಮಾಣಿಕವಾಗಿ ಮತದಾನ ಮಾಡಿ ಅಭಿವೃದ್ದಿಪರ ಚಿಂತಿಸುವ ಅಭ್ಯಥರ್ಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹಣೆ ಬರಹ ಬದಲಾಗುವುದಿಲ್ಲ. ನಮ್ಮ ಹಣೆ ಬರಹವನ್ನು ಬದಲಿಸುವ ಶಕ್ತಿ, ಸಾಮಥ್ರ್ಯ ಚುನಾವಣೆ ಎಂಬ ಅಸ್ತ್ರಕ್ಕಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಅಷ್ಟೇ. ಚುನಾವಣೆಯ ಹೊಸ್ತಿಲಲ್ಲಿ ಇರುವ ನಾವು ಎಡುವುದು ಬೇಡ. ಪ್ರಲೋಬಗಳಿಗೆ ಬಲಿಯಾಗಿ ಮತ ಹಾಕಿದರೆ ಮುಂದಿನ 5 ವರ್ಷ ದೇವರೇ ಗತಿ, ಚುನಾವಣೆಗೆ ಜನರ ಬದುಕು ಬದಲಿಸುವ ಶಕ್ತಿ ಇದೆ ನೆನಪಿರಲಿ.


