ಸೋಮವಾರ, ಏಪ್ರಿಲ್ 20, 2026

ಭರವಸೆಯೇ ಇಲ್ಲದಿದ್ದರೆ, ಬದುಕಿಗೆ ನೆಮ್ಮದಿ ಎಲ್ಲಿದೆ..?

 ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ    

ನೀವು ಗೂಗಲ್‌ನಲ್ಲಿ How many Years I will live ಎಂದು ಟೈಪಿಸಿದರೆ ಕ್ಷಣಮಾತ್ರದಲ್ಲಿ ಬರುವ ಉತ್ತರ While it is impossible to predict exactly how many years you will live ಎಂದು ಉತ್ತರ ಬರುತ್ತದೆ. ಬಹುಃಶ ಯಾವುದಾದರೂ ಒಂದು ಪ್ರಶ್ನೆಗೆ ಗೂಗಲ್ ಅಥವಾ ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಎರಡರಿಂದಲೂ ಉತ್ತರ ಸಿಗುವುದಿಲ್ಲ ಎಂದರೆ, ಅದು ಈ ಪ್ರಶ್ನೆಯೇ ಇರಬಹುದೆನೋ. 

ಗಮನಾರ್ಹ ಅಂಶವೆಂದರೆ ಭಾರತದಲ್ಲಿ ಇಂದು ಮನುಷ್ಯನ ಜೀವತಾವಧಿ 70 ರಿಂದ 72 ವರ್ಷಗಳಿಗೆ ಕುಸಿದು ಹೋಗಿದೆ. ಹಲವು ವರ್ಷಗಳ ಹಿಂದೆ ಹಲವು ಕುಟುಂಬಗಳಲ್ಲಿ 80 ವರ್ಷ, 90 ವರ್ಷ, 100 ವರ್ಷ, 110 ವರ್ಷ ಬದುಕಿದ್ದವರನ್ನು ಸ್ವತಃ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇತ್ತಿಚೀನ ವರ್ಷಗಳಲ್ಲಂತೂ 60 ವರ್ಷ ಬದುಕುವುದೇ ದೊಡ್ಡ ಸಾಧನೆಯಾಗಿ ಪರಿಣಮಿಸಿದೆ.

ಅಷ್ಟರ ಮಟ್ಟಿಗೆ ನಮ್ಮ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ ಅತಂತ್ರವಾಗಿದೆ. ಮಾನಸಿಕ ಹಾಗೂ ದೈಹಿಕ ಅನಾರೋಗ್ಯಗಳ ಮಧ್ಯೆ ವಿಲವಿಲ ಒದ್ದಾಡುತ್ತ, ನಮ್ಮ ಜೀವನ ಯಾವ ಕ್ಷಣದಲ್ಲಿ ಕೊನೆಯಾಗುತ್ತದೆಂದು ಕಲ್ಪಿಸಿಕೊಳ್ಳಲು ಸಾಧ್ಯವಾಗದೆ ಮಟ್ಟಿಗೆ ಬದುಕು ದುಸ್ಥರವಾಗಿದೆ.

ಈ ಮಧ್ಯೆ ನಮ್ಮ ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಹಲವರಿಂದ ಎದುರಾಗುವ ಕೆಲ ನಕಾರಾತ್ಮಕ (ನೆಗಟಿವ್) ಪ್ರಶ್ನೆಗಳು, ನಮ್ಮ ಮಾನಸಿಕ, ದೈಹಿಕ ನೆಮ್ಮದಿಯನ್ನೇ ಸಂಪೂರ್ಣ ಕಸಿದು, ಸುಂದರ ಜೀವನಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ ಎಂಬುವುದೇ ವಿಪರ್ಯಾಸ.

ಇತ್ತಿಚೀಗೆ ಪರಿಚಿತರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ಹಳ್ಳಿಗೆ ಹೋಗಿದ್ದೆ. ಮದುವೆ ನಂತರ ಆ ಪುಟ್ಟ ಹಳ್ಳಿಯಲ್ಲಿ ಸಂತೋಷ್ ಎಂಬ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದೆ. ಅವರ ವಯಸ್ಸು 35 ವರ್ಷ ಇರಬಹುದು. ಎಂ.ಕಾಂ ಪದವೀಧರ. ಇವರ ತಂದೆ, ತಾಯಿ ಕೂಲಿ ಮಾಡಿ ಇತನನ್ನು ಎಂ.ಕಾಂ ಪದವಿಯವರೆಗೂ ಕಷ್ಟ ಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದರು. ಇವರಿಗೆ ಇರುವುದು ಕೇವಲ 1 ಎಕರೆ ಜಮೀನು ಮಾತ್ರ. ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬ. ಇಂದಿಗೂ ಸಣ್ಣ ಮನೆಯಲ್ಲೇ ವಾಸ.

ಸಂತೋಷ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತ ಜೀವನ ಸಾಗಿಸುತ್ತಿದ್ದ, ಈತ ಹಣ ಸಂಪಾದಿಸಲು ಪ್ರಾರಂಭಿಸಿದ ಮೇಲೆಯೆ ಇವರ ಕುಟುಂಬ ನಿಧಾನವಾಗಿ ಆರ್ಥಿಕವಾಗಿ ಸದೃಢರಾಗಲು ಪ್ರಾರಂಭಿಸಿತು. ಮಗ ಸಂಪಾದಿಸುತ್ತಿದ್ದಾನೆ, ಇನ್ನು ನಮ್ಮ ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೇ ಅವರ ಪೋಷಕರು ಭಾವಿಸಿದ್ದರು.

ಆದರೆ ಯಾರು ಊಹೆ ಮಾಡದ ರೀತಿಯಲ್ಲಿ ಕಳೆದ 2 ವರ್ಷಗಳ ಹಿಂದೆ ಸಂತೋಷ್ ಪಾರ್ಶ್ವವಾಯುವಿಗೆ ತುತ್ತಾಗಿ ಕೈ ಮತ್ತು ಕಾಲು ಸ್ವಾಧೀನವಿಲ್ಲದೆ ದೈಹಿಕ ನ್ಯೂನ್ಯತೆಯೊಂದಿಗೆ ಹಾಸಿಗೆ ಹಿಡಿದಿದ್ದಾನೆ. ಈತ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಲು ಮೂಲ ಕಾರಣ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು. ಈತನ ಸ್ನೇಹಿತರು, ಪರಿಚಿತರು, ಸಂಬಂಧಿಕರು ಪದೇ ಪದೇ ಕೇಳುತ್ತಿದ್ದ ಮದುವೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಹಾಗೂ ಮದುವೆ ತಡವಾಗುತ್ತಿರುವುದರ ಬಗ್ಗೆ ಅತಿಯಾಗಿ ಆಲೋಚನೆ ಮಾಡಿದ್ದ ಪರಿಣಾಮ, ಈತ ಈ ದಯನೀಯ ಸ್ಥಿತಿ ತಲುಪಲು ಮೂಲ ಕಾರಣ.

ಸಂತೋಷ್‌ನ ಬಹುತೇಕ ಗೆಳೆಯರಿಗೆಲ್ಲಾ ವಿವಾಹವಾಗಿದೆ. ಈತ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಪ್ರಯತ್ನಪಟ್ಟರು, ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ವಯಸ್ಸು 35 ವರ್ಷ ದಾಟಿದೆ, ಇನ್ನೂ ಕೂಡ ಮದುವೆ ಮಾಡಿಕೊಳ್ಳದೆ ಈಗೆ ಇದ್ದು ಬಿಡುತ್ತಿಯಾ? ಅಷ್ಟಕ್ಕೂ ನಿನಗೆ ಹುಡುಗಿ ಯಾರು ತಾನೇ ಕೊಡುತ್ತಾರೆ ಹೇಳು? ತಡವಾಗಿ ಮದುವೆ ಮಾಡಿಕೊಳ್ಳುವ ಬದಲು ಸುಮ್ಮನೆ ಇರುವುದೇ ಉತ್ತಮ ಎಂಬ ಕೆಲವರ ಹೀಯಾಳಿಸುವ ಮಾತುಗಳು, ಪ್ರಶ್ನೆಗಳು ಈತನನ್ನು ಅತಿಯಾಗಿ ಆಲೋಚಿಸುವಂತೆ ಪ್ರೇರೆಪಿಸಿತು. 

ಇನ್ನೂ ಈತನ ಸ್ನೇಹಿತರಂತೂ ನಿನಗೆ ಮದುವೆ ಯೋಗ ಇಲ್ಲ ಬಿಡೋ, ನಿನ್ನ ಜೀವನವೇ ವ್ಯರ್ಥ ಎಂದು ವ್ಯಂಗ್ಯವಾಗಿ ಹೇಳಿದ್ದ ಸಂದರ್ಭಗಳು ಹತ್ತಾರಿವೆ. ಈಗೆ ಪ್ರತಿದಿನವು ಸಹದ್ಯೋಗಿಗಳು, ಸ್ನೇಹಿತರು, ಸಂಬಂಧಿಕರು ಮದುವೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಕೇಳಿ ಈತ ಅದರ ಬಗ್ಗೆ ವಿಪರಿತವಾಗಿ ಆಲೋಚಿಸಿ, ಮಾನಸಿಕ ನೆಮ್ಮದಿ ಕಳೆದಕೊಂಡು ಪಾರ್ಶ್ವವಾಯುಗೆ ತುತ್ತಾಗಿ ದೈಹಿಕ ನ್ಯೂನ್ಯತೆಯೊಂದಿಗೆ ಶಾಶ್ವತವಾಗಿ ಹಾಸಿಗೆಯಲ್ಲೇ ಮಲಗುವಂತಾಗಿದೆ.

ದುರ್ದೈವವೆಂದರೆ ಸಂತೋಷ್‌ನ ತಂದೆ, ತಾಯಿಗೆ ಈತ ಒಬ್ಬನೇ ಮಗ. ಈತ ದುಡಿದು ತಂದೆ, ತಾಯಿಯನ್ನು ಪೋಷಿಸಬೇಕಾಗಿತ್ತು. ಆದರೆ ಈಗ ವಯಸ್ಸಾದ ತಂದೆ, ತಾಯಿಯೇ ಕೂಲಿ ಕೆಲಸ ಮಾಡಿ, ಬರುವ ಅಲ್ಪ ಆದಾಯದಲ್ಲೇ ಮಗನನ್ನು ಬದುಕಿಸಿಕೊಳ್ಳ ಬೇಕಾದ ಸಂದರ್ಭ ಬಂತಲ್ಲಾ, ಇಂತಹ ಕರುಳು ಹಿಂಡುವ ಸ್ಥಿತಿ, ನಮ್ಮ ಶತ್ರುವಿಗೂ ಬರಬಾರದು.

ಇನ್ನೊಂದು ಘಟನೆ ಹೇಳುತ್ತೇನೆ, ಕೆಲ ದಿನಗಳ ಹಿಂದೆ ಆಕಾಶ್ ಎಂಬ 28 ವರ್ಷದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಈತ ಇಂಜಿನಿಯರಿಂಗ್ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಣ್ಣ ಕೆಲಸ ಮಾಡುತ್ತಿದ್ದ. 

ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪರಿಣಾಮ, ಇಂಗ್ಲೀಷ್‌ನಲ್ಲಿ ಮಾತನಾಡುವುದು, ಬರವಣಿಗೆ ಸೇರಿದಂತೆ ಹಲವು ಕೌಶಲ್ಯದ ಕೊರತೆಯಿಂದ ಇಂಜಿನಿಯರಿಂಗ್‌ನ್ನು 4 ವರ್ಷಗಳಲ್ಲಿ ಮುಗಿಸಲು ಸಾಧ್ಯವಾಗಲಿಲ್ಲ. ಕೆಲ ಸಬ್ಜೆಟ್‌ಗಳು ಬ್ಯಾಕ್ ಇದ್ದ ಕಾರಣ ಇಂಜಿನಿಯರಿಂಗ್ ಪದವಿ ಮುಗಿಯಲು 2 ವರ್ಷ ತಡವಾಯಿತು.

ಇಂಜಿನಿಯರಿಂಗ್‌ನಲ್ಲಿ ಹೆಚ್ಚು ಅಂಕ ಇಲ್ಲದಿರುವುದು, ವಿವಿಧ ಕೌಶಲ್ಯಗಳ ಕೊರತೆಯಿಂದ ಒಳ್ಳೆಯ ಕಂಪನಿಯಲ್ಲಿ ಕೆಲಸ ದೊರಕದೆ, ಕೊನೆಗೆ ಕಾಲ್ ಸೆಂಟರ್‌ವೊಂದರಲ್ಲಿ ಸಣ್ಣ ಕೆಲಸಕ್ಕೆ ಸೇರಿದ್ದ. ಅದು ತೀರ ಕಡಿಮೆ ವೇತನಕ್ಕೆ. ಬರುವ ಅಲ್ಪ ವೇತನದಿಂದ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗದೆ, ಅನಾರೋಗ್ಯಪೀಡಿತ ತಂದೆಯನ್ನು ಆಸ್ಪತ್ರೆಯಲ್ಲಿ ತೋರಿಸಲು ಮಾಡಿದ್ದ ವಿಪರಿತ ಸಾಲದ ಬಡ್ಡಿ ಕಟ್ಟಲಾಗದೆ, ತಂಗಿಯ ಮದುವೆ ಮಾಡಬೇಕಾದ ಒತ್ತಡ ಸೇರಿದಂತೆ ಎಲ್ಲವೂ ಈತನ ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳುಗೆಡವಿತ್ತು.

ಇತನಿಗೆ ಬರುವ ಅಲ್ಪ ಆದಾಯದಲ್ಲಿ ಈತ ಹೊಸ ಮನೆ ಕಟ್ಟುವುದು ಯಾವಾಗ? ಈತನ ತಂಗಿಗೆ ಮದುವೆ ಮಾಡುವುದೆಂದು? ಇತನ ತಂದೆಗೆ ಒಳ್ಳೆ ಆಸ್ಪತ್ರೆಯಲ್ಲಿ ತೋರಿಸುವುದು ಸಾಧ್ಯವೇ? ಎಂಬ ವಿಪರಿತವಾದ ಪ್ರಶ್ನೆಗಳು ಈತನ ಸ್ನೇಹಿತರು, ಸಂಬಂಧಿಕರ ಕಡೆಯಿಂದ ನಿಲ್ಲದೆ ಸದಾ ಹರಿದು ಬರುತ್ತಿತ್ತು. ಅವುಗಳಿಗೆ ಉತ್ತರಿಸಲಾಗದೆ ತೀರ ಅಸಹಾಯಕನಾಗಿದ್ದ. 

ವೈಯಕ್ತಿಕ ಹಾಗೂ ಕುಟುಂಬದ ಸಮಸ್ಯೆಗಳ ನೋವಿನಿಂದ ಮತ್ತು ಸಮಾಜದಲ್ಲಿ ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜೀವನದಲ್ಲಿ ತತ್ತರಿಸಿ ಹೋಗಿದ್ದ. ಈತ ಅತಿಯಾಗಿ ಆಲೋಚಿಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದರ ಜೊತೆಗೆ ಒಂದರ್ಥದಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದ. 

ಮಾನಸಿಕ ನೆಮ್ಮದಿ ಇಲ್ಲದೆ, ದಿನವೆಲ್ಲವೂ ಅತಿಯಾಗಿ ಜೀವನದ ಸಮಸ್ಯೆಗಳ ಬಗ್ಗೆ ಆಲೋಚಿಸುತ್ತ, ಆ ಮಾನಸಿಕ ಒತ್ತಡದಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಈತ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಡುತ್ತಾನೆ. ದ್ವಿಚಕ್ರ ವಾಹನ ಚಲಾಯಿಸುವಾಗಲು ವಿಪರಿತವಾದ ಆಲೋಚನೆಗಳು ಆತನ ಬದುಕನ್ನೇ ಸಂಪೂರ್ಣ ಕತ್ತಲನ್ನಾಗಿಸಿತು. ಆ ಮೂಲಕ ಇವರ ಇಡೀ ಕುಟುಂಬ ಪೂರ್ಣವಾಗಿ ಬೀದಿಗೆ ಬರುವಂತಹ ಹಂತಕ್ಕೆ ಬಂದು ತಲುಪಿತು.

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಹೇಳುತ್ತೇನೆ, ಸಾಮಾನ್ಯವಾಗಿ ಚಿತ್ರ ನಟ, ನಟಿಯರನ್ನು ನೋಡಿದರೆ ಅವರಿಗೆ ಯಾವುದೇ ರೀತಿಯ ನೋವು, ಸಮಸ್ಯೆ ಇರುವುದಿಲ್ಲ ಬಹಳ ಐಷಾರಾಮಿಯಾಗಿ ಜೀವನ ಸಾಗಿಸುತ್ತಾರೆ ಎಂದೇ ಭಾವಿಸಿಕೊಳ್ಳುತ್ತೇವೆ. ಆದರೆ ಇದಕ್ಕೆ ಅಪವಾದವೆಂಬಂತೆ ದಕ್ಷಿಣ ಭಾರತದ ಖ್ಯಾತ ನಟಿ ಅಭಿನಯ ಎಂಬುವವರ ಜೀವನವಿದೆ. 

ಬಾಲ್ಯದಿಂದಲೇ ಇವರಿಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಮಾತು ಬರುವುದಿಲ್ಲ. ಸನ್ನೆಗಳ ಮೂಲಕವೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸ್ವತಃ ಇವರು ಕೂಡ ಹಲವು ಸಂಬಂಧಿಕರು ಮತ್ತು ಸ್ನೇಹಿತರ ಅವಮಾನ, ಟೀಕೆಗಳ ನಡುವೆಯೇ ಬೆಳೆದವರು. ಹಲವರ ನೆಗೆಟಿವ್ ಮಾತುಗಳನ್ನು ಸದಾ ಎದುರಿಸಿದವರು. ಆದರೂ ಅಭಿನಯರವರು ನನಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಮಾತು ಬರುವುದಿಲ್ಲ ಎಂದು ಅತಿಯಾಗಿ ಆಲೋಚಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಳ್ಳಲಿಲ್ಲ.

ಸ್ನೇಹಿತರ, ಸಂಬಂಧಿಕರ ನೆಗೆಟಿವ್, ಚಚ್ಚು ಮಾತುಗಳಿಗೆ ಬೇಸರ ಪಟ್ಟುಕೊಂಡವರಲ್ಲ. ಆತ್ಮಸ್ಥೈರ್ಯದಿಂದ ಜೀವನ ಸಾಗಿಸುತ್ತ, ಛಲ ಬಿಡದೆ, ಅವಕಾಶಗಳನ್ನು ಸೃಷ್ಟಿಸಿಕೊಂಡು ಇಂದು ಉತ್ತಮ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. 

ತಮಿಳು, ತೆಲುಗು, ಕನ್ನಡ, ಹಿಂದಿ, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಿತ್ರ ನಟಿಯಾಗಿ, ಸಹ ನಟಿಯಾಗಿ ಅಭಿನಯಿಸಿದ್ದಾರೆ. ತಮಿಳಿನ ನಾಡೋಡಿಗಲ್, ಈಸನ್, ವೀರಂ, ಕುಟ್ರಂ, ಓರುವನ್, ತೆಲುಗಿನ ನೆನಿಂತೆ, ಶಂಭೋ ಶಿವ ಶಂಭೋ, ಡಮರುಕಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಕನ್ನಡದ ಹುಡುಗರು, ಕಿಚ್ಚು, ಕ್ರಶ್ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅದ್ಬುತವಾಗಿ ನಟಿಸಿದ್ದಾರೆ. 

ಇವರನ್ನು ನೋಡಿದರೆ ಇವರಿಗೆ ಮಾತನಾಡಲು ಬರುವುದಿಲ್ಲ ಹಾಗೂ ಕಿವಿ ಕೇಳಿಸುವುದಿಲ್ಲ ಎಂಬ ಭಾವನೆ ನಮಗ್ಯಾರಿಗೂ ಬರುವುದಿಲ್ಲ. ಅಷ್ಟರ ಮಟ್ಟಿಗೆ ಸದಾ ಆತ್ಮವಿಶ್ವಾಸ ಹಾಗೂ ಕ್ರಿಯಾಶೀಲತೆಯಿಂದ ಜೀವನ ನಿರ್ವಹಿಸುತ್ತಾರೆ.

ಹಾಗೆ ನೋಡಿದರೆ ಪ್ರತಿಯೊಬ್ಬರು ಬಾಲ್ಯದಲ್ಲೇ ಹಲವು ಕನಸು ಕಟ್ಟಿಕೊಂಡಿರುತ್ತಾರೆ. ನಾನು ಉತ್ತಮ ಶಿಕ್ಷಣ ಪಡೆಯಬೇಕು. ಹೆಚ್ಚು ಅಂಕ ಪಡೆದು ಒಳ್ಳೆಯ ವೇತನವಿರುವ ಉದ್ಯೋಗಕ್ಕೆ ಸೇರಬೇಕು. ಬೇಗ ಮದುವೆಯಾಗಿ ಹೆಂಡತಿ, ಮಕ್ಕಳೊಂದಿಗೆ ಖುಷಿ, ಸಂತೋಷದಿಂದ ಜೀವನ ಸಾಗಿಸಬೇಕು. ಮನೆ, ಆಸ್ತಿ, ಜಮೀನು, ಒಡವೆ ಸಂಪಾದಿಸಿ ಜೀವನವನ್ನು ಎಂಜಾಯ್ ಮಾಡಬೇಕು ಎಂದು ಬಣ್ಣದ ಬಣ್ಣದ ಕನಸಿನ ಗೋಪುರ ಕಟ್ಟಿಕೊಂಡಿರುತ್ತಾರೆ.

ಆದರೆ ನಮ್ಮ ಜೀವನದಲ್ಲಿ ನಡೆಯುವುದೇ ವಿಭಿನ್ನ, ವಿದ್ಯಾಭ್ಯಾಸ ಮಾಡುವಾಗ ಹಲವು ಸಮಸ್ಯೆಗಳಿಂದ ಸರಿಯಾಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾಬ್ಯಾಸ ಮುಗಿದ ನಂತರ ಹಲವು ವರ್ಷ ಹುಡುಕಿದರೂ ಸೂಕ್ತ ಉದ್ಯೋಗ ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕರು ನಮ್ಮ ನಿರೀಕ್ಷೆಯಷ್ಟು ವೇತನ ಬರುವುದಿಲ್ಲ. ಬರುವ ಅಲ್ಪ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಲು ಹೆಣಗಾಡಬೇಕಾಗುತ್ತದೆ. ಇನ್ನೂ ಮದುವೆ ಸರಿಯಾದ ವಯಸ್ಸಿನಲ್ಲಿ ಆಗಲು ಸಾಧ್ಯವಾಗುವುದೇ ಇಲ್ಲ, ಅದಕ್ಕೆ ನೂರೊಂದು ಕಾರಣ. ಜೀವನದಲ್ಲಿ ಸಂತೋಷಕ್ಕಿಂತ ದುಃಖವೇ ಅತಿಯಾಗಿ ಕಾಡುತ್ತದೆ.

ನಾವು ದೊಡ್ಡ ದೊಡ್ಡ ಕೋರ್ಸ್ಗಳನ್ನು ಓದಲು ಸಾಧ್ಯವಾಗಲಿಲ್ಲ ಎಂದು ದುಃಖಿಸುವುದರಲ್ಲಿ ಅರ್ಥವೇನಿದೆ ಹೇಳಿ. ಪ್ರಪಂಚದಲ್ಲಿ ಅದೆಷ್ಟೋ ಜನ ಕಡಿಮೆ ಓದಿರುವವರು ಕೂಡ ಹಲವು ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಇನ್ನು ಉದ್ಯೋಗದಿಂದ ಬರುತ್ತಿರುವ ಸಂಬಳ ತುಂಬಾ ಕಡಿಮೆ ಎಂದು ಆಲೋಚಿಸುತ್ತ ಕೂರುವುದು ಎಷ್ಟರ ಮಟ್ಟಿಗೆ ತಾನೇ ಸರಿ. ಕಡಿಮೆ ಸಂಬಳ ಪಡೆಯುತ್ತಿರುವ ಅದೆಷ್ಟು ಜನ ನಮ್ಮಂತೆಯೇ ಅಳುತ್ತ ಕೂತರೆ ಆ ಕಣ್ಣೀರಿನಿಂದ ಮಳೆ ಇಲ್ಲದೆ ಒಣಗಿರುವ ಅದೆಷ್ಟೋ ಕೆರೆಗಳೇ ತುಂಬುತ್ತವೆ. ಅಷ್ಟರ ಮಟ್ಟಿಗೆ ಕಡಿಮೆ ಸಂಬಳದಿಂದ ಜೀವನ ಸಾಗಿಸುತ್ತಿರುವವರ ಸಂಖ್ಯೆ ದ್ವಿಗುಣವಿದೆ. 

ಮದುವೆ ತಡವಾಯಿತು ಎಂದು ಬೇಸರ ಪಡುವ ಅಗತ್ಯವೇ ಇಲ್ಲ. ಅದೆಷ್ಟು ಜನ ಬೇಗ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ ಡೈವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದವರು ಸಾವಿರಾರು ಜನ. ಮದುವೆಯಾದ ಹಲವರು ಅನ್ಯೋನ್ಯತೆ ಇಲ್ಲದೆ, ಪ್ರೀತಿ, ವಿಶ್ವಾಸವಿಲ್ಲದೆ ವಿಧಿಯಿಲ್ಲದೆ ಜೀವನ ನಡೆಸುತ್ತಿದ್ದಾರೆ, ಇಂತವರ ಸಂಖ್ಯೆ ಲೆಕ್ಕವಿಲ್ಲದಷ್ಟು.

ಪ್ರತಿನಿತ್ಯವೂ ಯಾರೋ ಒಬ್ಬರು ನಮ್ಮನ್ನು ಉದ್ಯೋಗ, ಸಂಬಳ, ಮದುವೆ, ಮಕ್ಕಳು, ಕುಟುಂಬ ಸೇರಿದಂತೆ ನಮ್ಮಲ್ಲಿ ಇರಬಹುದಾದ ಕೆಲ ಸಮಸ್ಯೆಗಳ ಬಗ್ಗೆ ಬೇಕಂತಲೇ ಪ್ರಶ್ನೆ ಕೇಳುತ್ತಾರೆ. ಹೃದಯಕ್ಕೆ ನೋವಾಗುವಂತೆ ವರ್ತಿಸುತ್ತ, ಅವರ ಮಾತುಗಳ ಮೂಲಕ ಚುಚ್ಚುತ್ತಾರೆ. ಆಗಂತ ನಾವು ಅವರು ಕೇಳುವ ಪ್ರಶ್ನೆಗಳ ಬಗ್ಗೆ ಆಲೋಚಿಸುತ್ತ, ಚಿಂತಿಸುತ್ತ, ದುಃಖಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಂಡು, ದೈಹಿಕವಾಗಿ ಆರೋಗ್ಯ ಕೆಡಿಸಿಕೊಳ್ಳುವುದು ಮೂರ್ಖರ ಲಕ್ಷಣವಲ್ಲದೇ ಮತ್ತೇನು.

ನಾವು ಬದುಕುವುದೇ 60 ಅಥವಾ 65 ವರ್ಷ ಇರಬಹುದು, ಒಂದರ್ಥದಲ್ಲಿ ಇದು ಕೂಡ ಗ್ಯಾರಂಟಿ ಇಲ್ಲ. ಯಾವ ಕ್ಷಣ ಏನು ಬೇಕಾದರೂ ಆಗಬಹುದು. ಅಂತಹವುದರಲ್ಲಿ ನೆಗೆಟಿವ್ ವಿಷಯಗಳ ಬಗ್ಗೆ ಆಲೋಚಿಸುತ್ತ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡುವುದು ಸರಿಯೇ. 

ಶಿಕ್ಷಣ, ಉದ್ಯೋಗ, ಮದುವೆ, ವೇತನ, ಮಕ್ಕಳು, ಕುಟುಂಬ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಏನಾಗಬೇಕೋ ಅದೇ ಆಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಮುಂದೆ ಹೆಜ್ಜೆಯಾಕುತ್ತ ಜೀವನ ಸಾಗಿಸಬೇಕಷ್ಟೇ.

ಆತ್ಮವಿಶ್ವಾಸ, ಛಲದೊಂದಿಗೆ ಇರುವ ಈ ಅಲ್ಪ ವರ್ಷಗಳನ್ನು ಖುಷಿಯಿಂದ ಕಳೆಯೋಣ. ಯಾಕಂದ್ರೆ Life is too short, make the most of it. You don't know when your last day is. Live the way you want to live. ಇರುವಷ್ಟು ದಿನ ಖುಷಿ, ಸಂತೋಷ, ನೆಮ್ಮದಿಯಿಂದ ಇರೋಣ. ಭವಿಷ್ಯದ ಬದುಕಿನ ಬಗ್ಗೆ ಭರವಸೆ ಇಟ್ಟುಕೊಳ್ಳೊಣ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.

ಭಾನುವಾರ, ಆಗಸ್ಟ್ 17, 2025

"ಬದುಕು ಕಲಿಸುವ ಜೀವನದ ಪಾಠ"..

   ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಜೀವನವೇ ಹಾಗೇ, ಅದು ಯಾವಾಗ, ಯಾವ ದಾರಿಯಲ್ಲಿ ಹೇಗೆ ಸಾಗುತ್ತದೆಂದು ಹೇಳುವುದು ಅಸಾಧ್ಯ. ಜೀವನದ ನೈಜ ಸತ್ಯವನ್ನು ಕೆಲವೊಮ್ಮೆ ನಮಗೆ ಎದುರಾಗುವ ಸನ್ನಿವೇಶಗಳು, ಘಟನೆಗಳು ತಿಳಿಸುತ್ತವೆ. ಕೆಲವರ ಜೀವನದಲ್ಲಿ ಆದ ಘಟನೆಗಳು, ಎದುರಾದ ಸಂದರ್ಭಗಳು, ಅದರಿಂದ ಅವರು ಅನುಭವಿಸಿದ ಸಮಸ್ಯೆಗಳು, ಆ ಸಮಸ್ಯೆಗಳಿಂದ ಹುಟ್ಟಿಕೊಂಡ ಆಲೋಚನೆಗಳು, ಅವರು ತೊಟ್ಟ ಗುರಿ, ಧ್ಯೇಯಗಳು ಬದುಕಿನ ಒಳಾರ್ಥವನ್ನು ಎಳೆ ಎಳೆಯಾಗಿ ವಿವರಿಸುತ್ತದೆ.

ಹಲವು ಕಾರಣಗಳಿಗಾಗಿ ನಾನು ಹಲವು ಬಾರಿ ಹತ್ತಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಹಲವು ಮಕ್ಕಳ ಜೊತೆ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ. ಅವುಗಳ ಪೈಕಿ ಮೂವರು ಮಕ್ಕಳ ಹೇಳಿದ ಘಟನೆಗಳು ನಿಜಕ್ಕೂ ಜೀವನದ ವಾಸ್ತವ ಸತ್ಯ ಏನೆಂಬುವುದು ಹಾಗೂ ಭವಿಷ್ಯದ ಕಲ್ಪನೆಗಳ ಬಗ್ಗೆ ಆಳವಾಗಿ ಆಲೋಚಿಸುತ್ತ ಆತ್ಮವಲೋಕನ ಮಾಡುವಂತಿತ್ತು. ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದರು ಸಿಗದ ಅದೆಷ್ಟು ವಿಚಾರಗಳು, ವಿಷಯಗಳು ಹಾಗೂ ಜ್ಞಾನವು ಕೆಲವರ ಜೀವನದ ವಿಚಾರಗಳನ್ನು ಕೇಳಿದಾಗ, ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ ಹಾಗೂ ಅರ್ಥವಾಗುತ್ತದೆ ಎಂದರೆ ಅಶೋಕ್ತಿಯಲ್ಲ.

ಒಮ್ಮೆ ಸರ್ಕಾರಿ ಪ್ರಾಥಮಿಕ ಶಾಲೆಯೊಂದಕ್ಕೆ ಹೋಗಿದ್ದೆ. ಆ ಶಾಲೆಯು ಕೋಲಾರ ಜಿಲ್ಲಾ ವ್ಯಾಪ್ತಿಯ ಆಂಧ್ರದ ಗಡಿ ಭಾಗದಲ್ಲಿ ಇದೆ. ಆ ಊರು ಕೋಲಾರ ಜಿಲ್ಲೆಯ ಕೊನೆಯ ಹಳ್ಳಿ. ಆ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಬಹುತೇಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಸೇರಿದ ಕಡುಬಡವರು. 

ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸ್ಕೂಲ್ ಬ್ಯಾಗ್‌ಗಳನ್ನು ನೀಡಿದೆ. ಬ್ಯಾಗ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಸುಮ್ಮನೆ ಕುಳಿತಿದ್ದರೆ, ಅದರಲ್ಲಿ ಒಬ್ಬ ಮಾತ್ರ ತನ್ನ ಹಳೆಯ ಬ್ಯಾಗ್ ನಿಂದ ಪುಸ್ತಕಗಳನ್ನು ಹೊರ ತೆಗೆದು, ಹೊಸ ಬ್ಯಾಗ್ ನಲ್ಲಿ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತ, ಮುಗ್ದವಾಗಿ ಕೂತಿದ್ದ ಹಾಗೂ ಬಹಳ ಕ್ರಿಯಾಶೀಲತೆಯಿಂದ ಕಾಣುತ್ತಿದ್ದ, ನಾನು ಕುತೂಹಲದಿಂದ ಆತನ ಬಗ್ಗೆ ವಿಚಾರಿಸಿದೆ. 

ಆತನ ಹೆಸರು ಆಕಾಶ್, 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸುಮಾರು 12 ವರ್ಷ ವಯಸ್ಸು, ಆತನಿಗೆ 7 ವರ್ಷ ವಯಸ್ಸಿದ್ದಾಗ ಆತನ ತಂದೆ, ತಾಯಿ ಇಬ್ಬರು ಕೂಡ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. 

ಆಕಾಶ್ ಮತ್ತು ಆತನ ತಂದೆ, ತಾಯಿ ಎಲ್ಲರೂ ಒಟ್ಟಿಗೆ ಸಂಬಂಧಿಕರ ಮನೆಗೆ ಹಬ್ಬವೊಂದರಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಆತನ ತಂದೆ, ತಾಯಿ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟರು. ಅಚ್ಚರಿಯೆಂದರೆ ಆಕಾಶ್ ಮಾತ್ರ ಆ ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದಿದ್ದೆ ವಿಪರ್ಯಾಸ. ಆತನ ಆಯುಷ್ಯ ರೇಖೆ ಕಟ್ಟಿ ಇದ್ದ ಕಾರಣ, ಅಂತಹ ಭೀಕರ ಅಪಘಾತದಲ್ಲೂ ಕೂಡ ಪ್ರಾಣ ಉಳಿದಿತ್ತು. 

ತಂದೆ, ತಾಯಿಯ ಅಕಾಲಿಕ ಮರಣದ ನಂತರ ಆಕಾಶ್ ಈಗ ಅವರ ಅಜ್ಜಿಯ ಆಶ್ರಯದಲ್ಲಿ ಬಡತನದ ನಡುವೆಯೇ ಬೆಳೆಯುತ್ತಿದ್ದಾನೆ. ಚಿಕ್ಕವಯಸ್ಸಿನಲ್ಲೇ ತಂದೆ, ತಾಯಿಯ ಪ್ರೀತಿ, ಪ್ರೇಮ, ವಾತ್ಸಾಲ್ಯದಿಂದ ವಂಚಿತನಾದವನು.

ಆತನನ್ನು ಹತ್ತಿರಕ್ಕೆ ಕರೆದು ದೊಡ್ಡವನಾದ ಮೇಲೆ ಭವಿಷ್ಯದಲ್ಲಿ ಏನಾಗಬೇಕು ಎಂದು ಭಾವಿಸಿದ್ದೀಯ ಎಂದು ಕೇಳಿದ, ಮರುಕ್ಷಣ ಆತ ಹೇಳಿದ ಉತ್ತರ ಎಂಬಿಬಿಎಸ್ ಮುಗಿಸಿ ವೈದ್ಯನಾಗಬೇಕು ಎಂದು ಭಾವಿಸಿದ್ದೇನೆ ಸಾರ್ ಎಂದು ಹೇಳಿದ.

ವೈದ್ಯ ವೃತ್ತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರುವೆ ಎಂದರೆ, ಅದಕ್ಕೆ ಆತನ ಉತ್ತರ ತನ್ನ ತಂದೆ, ತಾಯಿಗೆ ಅಪಘಾತವಾದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬಹುಃಶ ಬದುಕಿ ಉಳಿಯುತ್ತಿದ್ದರೇನೋ. ಅವರು ಜೀವಂತವಾಗಿದ್ದಿದ್ದರೆ ನಾನು ಅನಾಥನಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ. 

ಸಮಾಜದಲ್ಲಿ ಪ್ರತಿನಿತ್ಯವು ಅವರದಲ್ಲದ ತಪ್ಪಿಗೆ ಅದೆಷ್ಟೋ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಹಲವರು ದೈಹಿಕ ವಿಕಲಚೇತನರಾಗುತ್ತಾರೆ. ಹಲವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಾರೆ. 

ಆದ್ದರಿಂದ ನಾನು ವೈದ್ಯನಾಗಿ ಕನಿಷ್ಠ ಕೆಲ ಬಡವರ ಹಾಗೂ ಕಷ್ಟದಲ್ಲಿರುವವರ ಪ್ರಾಣ ಉಳಿಸಲು ಪ್ರಯತ್ನಿಸುವೆ ಎಂದು ಹೇಳುವ ಆತನ ಉತ್ತರದಲ್ಲಿ ತನ್ನ ತಂದೆ, ತಾಯಿಯನ್ನು ಕಳೆದುಕೊಂಡ ಅತಿಯಾದ ನೋವು, ಸಂಕಟ ಹಾಗೂ ಆ ಅಪಘಾತದಿಂದ ಅನುಭವಿಸುತ್ತಿರುವ ಹಲವು ಸಂಕಷ್ಟಗಳು ಕಾಣುತ್ತಿತ್ತು.

ತನ್ನಂತೆ ಯಾರು ಕೂಡ ತಂದೆ, ತಾಯಿಯನ್ನು ಕಳೆದುಕೊಳ್ಳಬಾರದು. ತಂದೆ, ತಾಯಿ ಇಲ್ಲದವರ ನೋವು, ಕಷ್ಟ ನನಗೆ ಮಾತ್ರ ಗೊತ್ತು. ಸೂಕ್ತ ಚಿಕಿತ್ಸೆ ಸಿಗದೆ ಯಾರು ಕೂಡ ಪ್ರಾಣ ಬಿಡಬಾರದೆಂದು ನಾನು ವೈದ್ಯನಾಗಲು ನಿಶ್ಚಯಿಸಿದ್ದೇನೆ. ವೈದ್ಯ ಸೇವೆಯನ್ನು ಬಡವರ ಸೇವೆಗಾಗಿ ಮೀಸಲಿಟ್ಟು, ತನ್ನ ತಂದೆ, ತಾಯಿಗೆ ಮಾಡಲು ಸಾಧ್ಯವಾಗದ ಸೇವೆಯನ್ನು ಬಡವರಿಗೆ, ಅಶಕ್ತರಿಗೆ ಮಾಡಿ ಅವರಲ್ಲಿ ನನ್ನ ತಂದೆ, ತಾಯಿಯನ್ನು ಕಾಣುತ್ತೇನೆ ಎನ್ನುವ ಆತನ ವಿಶ್ವಾಸ, ಧ್ಯೇಯದಲ್ಲಿ ಆತನ ಸಂಕಲ್ಪ, ಸೇವಾ ಮನೋಭಾವ ಎದ್ದು ಕಾಣಿಸುತ್ತಿತ್ತು. 

ಇನ್ನೊಂದು ಸರ್ಕಾರಿ ಶಾಲೆಗೆ ಒಮ್ಮೆ ಹೋಗಿದ್ದೆ. ಆ ಶಾಲೆ ಇರುವ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಕಾರಣ ಸುತ್ತಲೂ ಅರಣ್ಯ ಹಾಗೂ ಬೆಟ್ಟ ಗುಡ್ಡಗಳು ಇರುವುದರಿಂದ ಅಲ್ಲಿ ನೆಟ್‌ವರ್ಕ್ ಸಿಕ್ಕರೆ ಅದೇ ಅದೃಷ್ಟ. ಇಂದಿಗೂ ಆ ಊರಿಗೆ ಸರ್ಕಾರಿ ಬಸ್ ಕೂಡ ಬರುವುದಿಲ್ಲ. 

ಆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಹಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆ. ಆ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಬ್ಬ ವಿದ್ಯಾರ್ಥಿನಿ ತುಂಬಾ ಚೆನ್ನಾಗಿ ಎಲ್ಲಾ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಸಂಘಟಿಸಿದ್ದಳು. ಜಾನಪದ ಹಾಗೂ ಚಲನಚಿತ್ರ ಗೀತೆಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಸಂಘಟಿಸಿದ ವಿದ್ಯಾರ್ಥಿನಿ ಹೆಸರು ಕವನ. ಆಕೆ 8 ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಕರೆದು ನೀನು ತುಂಬಾ ಚೆನ್ನಾಗಿ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಕಾರ್ಯಕ್ರಮ ಸಂಘಟಿಸಿದ್ದೀಯಮ್ಮ ಎಂದು ಆಕೆಯನ್ನು ಅಭಿನಂದಿಸಿದೆ.

ಕಾರ್ಯಕ್ರಮದ ಮುಗಿದ ನಂತರ ವಿದ್ಯಾರ್ಥಿನಿ ಕವನ ಆಹ್ವಾನದ ಮೇರೆಗೆ ಅವರ ಮನೆಗೆ ಹೋಗಿದ್ದೆ. ಅವರ ಮನೆ ಊರಿನ ಕೊನೆಯಲ್ಲಿದ್ದು, ಅದು ಮಣ್ಣಲ್ಲಿ ಕಟ್ಟಿರುವ ತೀರ ಹಳೆಯದಾದ ಮನೆ. ಆ ಮನೆಯೊಳಗೆ ಇಬ್ಬರು ಮಾತ್ರ ಮಲಗುವಷ್ಟು ಸ್ಥಳವಕಾಶವಿತ್ತು. ಆ ಮನೆ ಒಳಹೊಕ್ಕರೆ ಮೊದಲು ಕಣ್ಣಿಗೆ ಕಾಣುವುದು ಪುಸ್ತಕಗಳ ಭಂಡಾರ. ಟೊಮೊಟೊ ತುಂಬಿಸಿ ಮಾರಾಟ ಮಾಡುವ ಟೊಮೊಟೊ ಕ್ರೇಟ್ ಗಳು ಹತ್ತಾರು ಇದ್ದವು, ಅವುಗಳ ತುಂಬಾ ಬರೀ ಪುಸ್ತಕಗಳೇ ತುಂಬಿದ್ದವು. ಅವುಗಳಲ್ಲಿ ಬರೀ ಶಾಲೆಯ ಪುಸ್ತಕಗಳಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸಾಹಿತ್ಯ, ಕಥೆಗೆ ಸಂಬಂಧಿಸಿದ ಪುಸ್ತಕಗಳು ಇದ್ದದ್ದು ನನಗೆ ಅಚ್ಚರಿ ಮೂಡಿಸಿತು.

ಕವನ ತಾಯಿ ಮಾತನಾಡುತ್ತ ನಮ್ಮ ಮನೆ ಬಹಳ ಚಿಕ್ಕದು ಸಾರ್, ಅನ್ಯತಾ ಭಾವಿಸಿಕೊಳ್ಳದೇ ಕುಳಿತುಕೊಳ್ಳಿ ಸಾರ್ ಎಂದು ಹೇಳುತ್ತ ಕಾಫಿ ಮಾಡಿಕೊಂಡು ಬಂದಳು. ಹಾಗೆ ಅವರ ಜೊತೆ ಮಾತನಾಡುತ್ತ ಇದ್ದಾಗ ಗೊತ್ತಾಗಿದ್ದು, ಕವನ ತಂದೆ ರೈತರು. ಅವರ ಬಳಿ ಇದ್ದ 2 ಎಕರೆ ಜಮೀನಿನಲ್ಲೇ ಕೃಷಿ ಮಾಡುತ್ತಿದ್ದರಂತೆ. ಬಿಸಿಲಲ್ಲಿ ಹಗಲಿರುಳು ಹಲವು ವರ್ಷಗಳು ದುಡಿದರು, ಯಾವ ಬೆಳೆಗೂ ಲಾಭ ಸಿಗದೆ ವಿಪರಿತ ಸಾಲಗಳಾಗಿ, ಬಡ್ಡಿ ಹಾಗೂ ಸಾಲ ತೀರಿಸಲಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದರಂತೆ.

ಆಗ ಕವನ ಕೇವಲ 3ನೇ ತರಗತಿ ವಿದ್ಯಾರ್ಥಿನಿ. ತಂದೆಯ ಆತ್ಮಹತ್ಯೆ ಹಾಗೂ ತಾಯಿಯ ಅಸಹಾಯಕತೆ ನೋಡಿ ತನ್ನ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ಏಕೈಕ ಆಸೆ ಹುಟ್ಟಿಕೊಳ್ಳುತ್ತದೆ. 

ಕೃಷಿ ಬೆಳೆಗಳಿಗೆ ಯಾವುದೇ ಲಾಭ ಸಿಗದೆ ಪರಿತಪಿಸುವ ಕೋಟ್ಯಾಂತರ ರೈತರ ನೆರವಿಗೆ ಧಾವಿಸಬೇಕೆಂಬುವುದು ಕವನ ಅಚಲ ಛಲ. ಪ್ರತಿವರ್ಷವು ಕೃಷಿ ಬೆಳೆಗಳಿಗೆ ಬೆಲೆ ಸಿಗದೆ, ಬೆಳೆಗಳನ್ನು ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶೋಚನೀಯ ಪರಿಸ್ಥಿತಿ, ಅವರ ನೋವು, ಸಂಕಷ್ಟಗಳು, ತಂದೆಯನ್ನು ಕಳೆದುಕೊಂಡ ರೈತನ ಮಗಳಾಗಿ ನನಗೆ ಮಾತ್ರ ಗೊತ್ತು. 

ನನ್ನಂತೆ ಸಂಕಷ್ಟ ಅನುಭವಿಸುವ ರೈತರ ಮಕ್ಕಳ ನೆರವಿಗೆ ಧಾವಿಸಬೇಕು ಹಾಗೂ ನನ್ನಿಂದ ಸ್ವಲ್ಪ ಮಟ್ಟಿಗೆಯಾದರೂ ಪರಿಹಾರ ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದ್ದೆ ಐ.ಎ.ಎಸ್ ಹುದ್ದೆ ಹೊರತು ನಾನು ಉನ್ನತ ಹುದ್ದೆಗೆ ಹೋದರೆ ಸಿಗುವ ಸೌಲಭ್ಯಗಳಿಗಾಗಿ ಅಲ್ಲ ಎನ್ನುವುದು ಕವನ ಮನದಾಳದ ಮಾತು. 

ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಒಂದೇ ಆಸೆಯಿಂದ ತಾಯಿಯು ಕೂಲಿ ಮಾಡಿ ಸಂಪಾದಿಸಿದ ಉಳಿದ ಹಣದಿಂದ ನಾನು ಪುಸ್ತಕಗಳನ್ನು ಖರೀದಿಸುತ್ತೇನೆ. ಬೇರೆಯವರಂತೆ ತಿಂಡಿ, ತಿನಿಸುಗಳಿಗೆ, ದುಂದುವೆಚ್ಚಗಳಿಗೆ ಹಣ ಖರ್ಚು ಮಾಡುವ ಬದಲು ಪುಸ್ತಕಗಳ ಮೇಲೆ ವಿನಿಯೋಗಿಸುತ್ತೇನೆ ಸಾರ್ ಎಂದು ಹೇಳುವ ಆಕೆಯ ಮಾತಿನಲ್ಲಿ ಏನೋ ಒಂದು ಜೀವನದಲ್ಲಿ ಸಾಧಿಸಬೇಕೆಂಬ ಹಠ ಮಾತ್ರ ಸ್ಪಷ್ಟವಾಗಿತ್ತು.

ಇನ್ನೊಂದು ಶಾಲೆಗೆ ಹೋಗಿದ್ದೆ, ಆ ಶಾಲೆಯಲ್ಲಿ ತೀರ ಬಡ ಕುಟುಂಬಕ್ಕೆ ಸೇರಿದ ವಿಕಲಚೇತನ ವಿದ್ಯಾರ್ಥಿಯೊಬ್ಬನಿದ್ದ. ಆತನ ಹೆಸರು ಸಾಗರ್. ಆತನಿಗೆ ಹುಟ್ಟಿನಿಂದಲೇ ದೈಹಿಕ ನ್ಯೂನತೆ ಇತ್ತು. ಎರಡು ಕಾಲುಗಳು ನಡೆಯಲು ಸಾಧ್ಯವಾಗದ ಮಟ್ಟಿಗೆ ದೈಹಿಕ ನ್ಯೂನತೆಯಿಂದ ಕೂಡಿದ್ದ. ಹಾಗೆಯೇ ಆತನ ಜೊತೆ ಮಾತನಾಡುತ್ತಿದ್ದಾಗ ಗೊತ್ತಾಗಿದ್ದು, ಆತ ತನ್ನ ಮನೆಯಲ್ಲಿ ಒಂದು ಹಣ ಸಂಗ್ರಹ ಮಾಡುವ ಹುಂಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಅದರಲ್ಲಿ ಆತ ತನ್ನ ಬಳಿ 5, 10 ರೂಪಾಯಿ ಇದ್ದಾಗ ಹಣವನ್ನು ಹುಂಡಿಯಲ್ಲಿ ಹಾಕಿ ಹಣ ಸಂಗ್ರಹಿಸಿ ಇಡುತ್ತಿದ್ದಾನೆಂದು.

ಕಾರಣ ಈತನ ತಂದೆ ವಿಪರಿತ ಮದ್ಯಪಾನ ಮಾಡಿ, ಮಾಡಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ. ತಂದೆ ಮರಣದ ನಂತರ ಇವರ ಇಡೀ ಕುಟುಂಬವೇ ಛಿದ್ರ ಛಿದ್ರವಾಗುತ್ತದೆ. ತಂದೆ ಮರಣ ನಂತರ ತಾಯಿ ಕುಟುಂಬ ನಿರ್ವಹಣೆಗಾಗಿ ಕೂಲಿ ಮಾಡುತ್ತ ಪ್ರತಿನಿತ್ಯವು ತರುವ 300 ರೂ.ಗಳ ಸಂಪಾದನೆಯಿಂದ 3 ಜನರ ಜೀವನ ಸಾಗಿಸಬೇಕು.

ಒಂದೊತ್ತು ಊಟಕ್ಕೂ ಪರದಾಡುವ ಸಂಕಷ್ಟ, ಪುಸ್ತಕಗಳನ್ನು ಖರೀದಿಸಲು ಕೂಡ ಸಾಧ್ಯವಾಗದ ದುಸ್ಥಿತಿ ನಮಗೆ ಮಾತ್ರ ಗೊತ್ತು. ತಮ್ಮ ಕುಟುಂಬ ಈ ಸ್ಥಿತಿಗೆ ಬರಲು ಕಾರಣ ತಮ್ಮ ತಂದೆಗಿದ್ದ ವಿಪರಿತ ಮದ್ಯಪಾನ ಚಟ. ಅದೆಷ್ಟೋ ಕುಟುಂಬಗಳು ಮದ್ಯಪಾನಕ್ಕೆ ಬಲಿಯಾಗಿ ಬೀದಿಗೆ ಬಂದಿದ್ದಾವೆ. ನಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟ, ನೋವುಗಳನ್ನು ಬೇರೆಯವರು ಅನುಭವಿಸದೆ ಇರಬೇಕಾದರೆ ಮದ್ಯಪಾನದಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ನನ್ನ ಆದ್ಯ ಕರ್ತವ್ಯ. 

ಆ ಕಾರಣದಿಂದಲೇ ನಾನು ಉಳಿಸುವ ಹಣದಿಂದ ಮುಂದೊಂದು ದಿನ ಹಲವು ಭಾಗಗಳಲ್ಲಿ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ತೊಡಗುತ್ತೇನೆ, ಆ ಮೂಲಕ ಒಂದು ಕುಟುಂಬವನ್ನಾದರೂ ಬೀದಿಗೆ ಬರದಂತೆ ತಡೆಯುತ್ತೇನೆ ಎನ್ನುವ ಆತನ ಮಾತಿನಲ್ಲಿ ಸಾಮಾಜಿಕ ಬದ್ದತೆ ಹಾಗೂ ಸಮಾಜದ ಹಿತ ಒಳಗೊಂಡಿತ್ತು. 

ಹಲವರು ತಾವು ಎದುರಿಸುವ ಸಮಸ್ಯೆಗಳಿಂದ ತಾವು ಸಾಗಬೇಕಾದ ಹಾದಿಯನ್ನು ಕಂಡುಕೊಳ್ಳುತ್ತಾರೆ. ಸಮಸ್ಯೆ ಬಂದಿದೆ ಎಂದು ಬರೀ ಅಳುತ್ತ, ಶಪಿಸುತ್ತ ಕೂರುವ ಹಲವರ ಮಧ್ಯೆ ಆಕಾಶ್, ಕವನ, ಸಾಗರ್ ಎಂಬ ವಿದ್ಯಾರ್ಥಿಗಳು ಬಹಳ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಸಮಸ್ಯೆಗಳ ಮಧ್ಯೆಯು ತಮ್ಮ ಜೀವನದ ಜೊತೆಗೆ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಅವರ ಆಸೆ, ಛಲ, ಧ್ಯೇಯ, ಹಠ ಯಾರಿಗೆ ಬರುತ್ತದೆ ಹೇಳಿ.

ಚಿಕ್ಕವಯಸ್ಸಿನಲ್ಲೇ ಹಲವು ಸಮಸ್ಯೆಗಳು ಬೆನ್ನ ಹತ್ತಿದರು, ಮನೆ ತುಂಬಾ ಸಮಸ್ಯೆಗಳೇ ತುಂಬಿದ್ದರು ಕೂಡ ಆತ್ಮವಿಶ್ವಾಸ ಕಳೆದುಕೊಳ್ಳದೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಮುಂದಿನ ಹಾದಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುವ ಇವರ ಆಲೋಚನೆಗಳು ನಿಜಕ್ಕೂ ಗ್ರೇಟ್, ವಂಡರ್‌ಪುಲ್.

ನಮ್ಮ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳ ಬಗ್ಗೆ ಆಲೋಚಿಸುತ್ತ, ಚಿಂತಿಸುತ್ತ, ಸಮಯ ವ್ಯರ್ಥ ಮಾಡುತ್ತ ಕೂರುವ ಬದಲು ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜೊತೆಗೆ ವಿಶಾಲವಾಗಿ, ವಿಭಿನ್ನವಾಗಿ ಆಲೋಚಿಸುತ್ತ, ಜೀವನ ಸಾಗಿಸುವುದರಲ್ಲಿ ಏನೋ ಒಂಥರ ತ್ರಿಲ್ ಇದೆ.

ಭಾನುವಾರ, ಏಪ್ರಿಲ್ 13, 2025

ಲವ್ ಇಸ್ ಬ್ಲೈಂಡ್, Is it True..?

  ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇಂಗ್ಲೀಷ್ ನಲ್ಲಿ ಒಂದು ಹಳೆಯ ವಾಕ್ಯವಿದೆ, Love is Blind ಎಂದು. ಇದರರ್ಥ ಪ್ರೀತಿ, ಪ್ರೇಮದಲ್ಲಿ ಬಿದ್ದವರಿಗೆ ಪ್ರಪಂಚವೇ ಕುರುಡಾಗಿ ಕಾಣುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇಂದು ಕೆಲವರು ತೆಗೆದುಕೊಳ್ಳುವ ತೀರ್ಮಾನಗಳು ಹಾಗೂ ಅವರ ವರ್ತನೆ ನೋಡಿದರೆ ಅದು ಸತ್ಯವೇನೋ ಅಂತಾ ಅನ್ನಿಸದೇ ಇರಲಾರದು.

ಗಮನಾರ್ಹ ಅಂಶವೆಂದರೆ ಹಲವರು ಕೇವಲ ಫ್ಯಾಶನ್ ಗಾಗಿ ಪ್ರೀತಿಸುವುದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ಕಪಟ ನಾಟಕ ಮಾಡುವುದು ಪ್ರಪಂಚಕ್ಕೆ ತಿಳಿದ ಸತ್ಯ. ಹಾಗೆಯೇ ಮನಸ್ಸಿನಲ್ಲಿ ಕಾಮದ ದುರುದ್ದೇಶವಿಟ್ಟುಕೊಂಡು ಪ್ರೀತಿ ಎಂದು ಸುತ್ತಾಡುವವರ ಸಂಖ್ಯೆಯು ಹೇರಳವಾಗಿದೆ. ಇನ್ನೂ ಪ್ರೀತಿ, ಪ್ರೇಮದಲ್ಲಿ ಫೇಲ್ ಆದವರು, ಜೀವನದಲ್ಲೇ ಸೋತೆವೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಕಡಿಮೆಯೇನಿಲ್ಲ. ಇಂತಹ ವರದಿಗಳು ಪ್ರತಿನಿತ್ಯವು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.

ಹಾಗೆ ನೋಡಿದರೆ ಬಹುತೇಕರಿಗೆ ಅದು ಕಾಲೇಜೋ, ಆಫೀಸೋ ಅಥವಾ ಎಲ್ಲೋ ಒಂದು ಜಾಗದಲ್ಲಿ ಹುಡುಗನಿಗೆ ಹುಡುಗಿಯ ಮೇಲೆ ಹಾಗೂ ಹುಡುಗಿಗೇ ಹುಡುಗನ ಮೇಲೆ ಕ್ರಷ್ ಹಾಗೂ ಪ್ರೀತಿ, ಪ್ರೇಮ ಎಂಬ ಭಾವನೆ ಬಂದು ಹೋಗಿರುತ್ತದೆ. ಅದು ಕೆಲವರು ಹೇಳಬಹುದು, ಕೆಲವರು ಪ್ರಸ್ತಾಪಿಸದೆ ಇರಬಹುದು. ಅದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ, ಅದು ತಪ್ಪೆಂದು ಹೇಳಲು ಸಾಧ್ಯವಿಲ್ಲ.

ಆದರೆ ಕೆಲವರ ಪ್ರೀತಿ ಹಲವು ಕಾರಣಗಳಿಗಾಗಿ ಅರ್ಧಕ್ಕೆ ನಿಂತು ಹೋಗಿರುತ್ತದೆ, ಮತ್ತೆ ಕೆಲವರದ್ದು ಕೊನೆಯವರೆಗೂ ಸಾಗಿ ಪರಿಪೂರ್ಣ ಜೀವನದತ್ತ ಸಾಗಿರುತ್ತದೆ. ಮತ್ತೆ ಕೆಲವರಂತೂ ಈ ಪ್ರೀತಿ, ಪ್ರೇಮಕ್ಕಾಗಿ ಅಮೂಲ್ಯವಾದ ಶಿಕ್ಷಣ, ಉದ್ಯೋಗ, ಕುಟುಂಬ, ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ ಎಂಬುವುದು ಕೂಡ ಅಷ್ಟೇ ನಿಜ. 

ಮೊನ್ನೆ ನಮ್ಮ ಸ್ನೇಹಿತ ಅರವಿಂದ್ ಎಂಬುವವರು ತಮ್ಮ ಊರಿನ ಜಾತ್ರಾ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಗೌರವ ಕೊಟ್ಟು ಅವರ ಊರಿಗೆ ಹೋಗಿದ್ದೆ. ಅವರ ಗ್ರಾಮದಲ್ಲಿ ಹಲವು ವರ್ಷಗಳ ಇತಿಹಾಸವಿರುವ ಪುರಾತನ ಕಾಲದ ಈಶ್ವರ ದೇಗುಲವಿದೆ. ಪ್ರತಿವರ್ಷವು ವಿಜೃಂಭಣೆಯಿಂದ ಜಾತ್ರೆ ಹಾಗೂ ದೇವರ ರಥೋತ್ಸವ ನಡೆಯುತ್ತದೆ.

ಜಾತ್ರೆಯ ದಿನದಂದು ಗ್ರಾಮದಲ್ಲಿ ಓಡಾಡುವುದೇ ಏನೋ ಒಂಥರ ಸಂತೋಷ. ನಾನು, ನನ್ನ ಸ್ನೇಹಿತ ದೇವರ ದರ್ಶನದ ನಂತರ ದೇಗುಲದ ಆವರಣದಲ್ಲಿದ್ದ ವಿಶಾಲವಾದ ಜಾಗದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡೆವು. ಆಗ ನನ್ನ ಸ್ನೇಹಿತ ತನ್ನ ಕುಟುಂಬದ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತ ಬಂದ.

ಆತನ ಕಿರಿಯ ಸಹೋದರ ಕಳೆದ 6 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದನಂತೆ. ಅಂತಿಮ ವರ್ಷದ ಬಿ.ಕಾಂ ಪದವಿ ಓದುತ್ತಿದ್ದ ಆತ, ತನ್ನ ಕಾಲೇಜಿನ ಸಹಪಾಠಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಮದುವೆಗೆ ಪೋಷಕರ ವಿರೋಧವಿತ್ತು. ಇದರಿಂದ ಆತ ಬೇಸರ ಮಾಡಿಕೊಂಡು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರ ಕೈಗೊಂಡು, ನಮ್ಮ ಕುಟುಂಬಕ್ಕೆ ದುಃಖ ಬಿಟ್ಟು ಹೋಗಿದ್ದಾನೆ ಎಂದು ಹೇಳುವಾಗ ಸ್ನೇಹಿತ ಅರವಿಂದನ ಕಣ್ಣುಗಳಲ್ಲಿ ಕಣ್ಣೀರು ತಾನಾಗಿಯೇ ಬಂತು.

ನನ್ನ ಸಹೋದರ ಪದವಿ ಮುಗಿಸಿ, ಕೆಲಸಕ್ಕೆ ಸೇರಿಕೊಂಡು ಜೀವನ ನಿರ್ವಹಣೆ ಮಾಡುವ ಶಕ್ತಿ ಸಂಪಾದಿಸಲಿ ಎಂದು ಎರಡು ಕುಟುಂಬದವರು ಮದುವೆಗೆ ನಿರಾಕರಿಸಿದ್ದು ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ. ಕನಿಷ್ಠ ಪದವಿ ಮುಗಿಸು, ನಂತರ ನಾನೇ ಎರಡು ಕುಟುಂಬದವರನ್ನು ಒಪ್ಪಿಸಿ ಮುಂದೆ ನಿಂತು, ಮದುವೆ ಮಾಡಿಸುತ್ತೇನೆ. ಆ ನಂತರ ಬೇಕಾದರೆ ನಾನು ಮದುವೆ ಮಾಡಿಕೊಳ್ಳುತ್ತೇನೆ, ಇದರಿಂದ ನನಗಾಗುವ ನಷ್ಟವೇನಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರು, ಆತ ಅರ್ಥ ಮಾಡಿಕೊಳ್ಳದೇ ಆತ್ಮಹತ್ಯೆ ಮಾಡಿಕೊಂಡು ನಮ್ಮನ್ನೆಲ್ಲ ಅನಾಥವಾಗಿ ಬಿಟ್ಟು ಹೋದ ಎಂದು ತನ್ನ ನೋವನ್ನು ತೋಡಿಕೊಂಡ.

ಆತ ನಮ್ಮ ಕುಟುಂಬದ ಕಿರಿಯ ಮಗನಾಗಿದ್ದರಿಂದ ನಮ್ಮ ತಂದೆ, ತಾಯಿಗೆ ಆತನ ಬಗ್ಗೆ ಎಲ್ಲಿಲ್ಲದ ಅಪಾರ ಪ್ರೀತಿ. ನಮ್ಮ ತಾಯಿಗಂತು ಆತ ಎಂದರೆ ಪಂಚ ಪ್ರಾಣ. ಅವನು ನಮ್ಮನ್ನು ಬಿಟ್ಟು ಹೋದ ದಿನದಿಂದ ತಾಯಿಯ ಆರೋಗ್ಯ ಸಂಪೂರ್ಣ ಹದೆಗೆಟ್ಟಿದ್ದು, ಇಲ್ಲಿಯವರೆಗೂ ಸುಧಾರಿಸಿಲ್ಲ ಎಂದು ತನ್ನ ಅಳಲನ್ನು ವ್ಯಕ್ತಪಡಿಸಿದ.

ಇನ್ನೊಂದು ಘಟನೆ ಹೇಳುತ್ತೇನೆ, ನನಗೆ ಪರಮೇಶ್ ಎಂಬ ಹಿರಿಯ ಸ್ನೇಹಿತರೊಬ್ಬರಿದ್ದರು. ವೃತ್ತಿಯಲ್ಲಿ ವ್ಯಾಪಾರಸ್ಥರು ಜೊತೆಗೆ ಸಭ್ಯರು ಹಾಗೂ ಆರ್ಥಿಕ ಶಕ್ತಿವಂತರು. ಅವರಿಗೆ ಒಬ್ಬಳೇ ಮಗಳು. ಆಕೆಯ ವಯಸ್ಸು 20 ವರ್ಷವಿರಬಹುದು. ಕಾಲೇಜಿನಲ್ಲಿ ಓದುವಾಗ ಪರಿಚಯವಾದ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇವರ ಪ್ರೀತಿಗೆ ಪ್ರಾರಂಭದಲ್ಲಿ ಹುಡುಗಿ ತಂದೆ ಒಪ್ಪಿರುವುದಿಲ್ಲ.

ಕಾರಣ ಮಗಳು ಪ್ರೀತಿಸಿದ ಹುಡುಗ ಕಾಲೇಜನ್ನು ಅರ್ಧಕ್ಕೆ ಬಿಟ್ಟು, ಸ್ನೇಹಿತರ ಸಹವಾಸ ಮಾಡಿಕೊಂಡು ದುರಾಭ್ಯಾಸಗಳಿಗೆ ದಾಸನಾಗಿದ್ದ. ಈ ವಿಷಯ ತಿಳಿದ ಪರಮೇಶ್ ಅವರು ತಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಆ ಹುಡುಗನಿಗೆ ಮದುವೆ ಮಾಡಿಕೊಡಲು ಸುತಾರಂ ಇಷ್ಟವಿರಲಿಲ್ಲ. ಆದರೆ ಮಗಳ ಹಠದ ಮುಂದೆ ತಂದೆ ತಲೆ ತಗ್ಗಿಸಿ, ವಿಧಿಯಿಲ್ಲದೇ ಇದ್ದ ಒಬ್ಬಳೇ ಮಗಳನ್ನು ಆಕೆ ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾರೆ. ಒಬ್ಬಳೇ ಮಗಳಾದ್ದರಿಂದ ಅವರಿಗೆ ಇಷ್ಟವಿಲ್ಲದಿದ್ದರು, ಮದುವೆಯ ಸಂಪೂರ್ಣ ಖರ್ಚನ್ನು ಇವರೇ ಭರಿಸಿ, ವಿಜೃಂಭಣೆಯಿಂದ ಮದುವೆ ಮಾಡಿ, ಹುಡುಗನಿಗೆ ವರದಕ್ಷಿಣೆಯಾಗಿ ಬಂಗಾರ ಸೇರಿದಂತೆ ಮತ್ತಿತರ ವಸ್ತುಗಳನ್ನು ಕೂಡ ನೀಡುತ್ತಾರೆ.

ವಿಪರ್ಯಾಸವೆಂದರೆ ಮದುವೆಯಾದ 6 ತಿಂಗಳಿಗೆ ಆ ಹುಡುಗಿ ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡು ಬಲಿಯಾಗುತ್ತಾಳೆ. ಮೊದಲೇ ದುರಾಭ್ಯಾಸಗಳಿಗೆ ದಾಸನಾಗಿದ್ದ ಆತ, ಸರಿಯಾಗಿ ಕೆಲಸಕ್ಕೆ ಹೋಗದೆ ಪ್ರತಿದಿನವು ಕುಡಿದು, ಕುಡಿದು ಆ ಹುಡುಗಿಗೇ ಚಿತ್ರ ಹಿಂಸೆ ಕೊಟ್ಟು, ವರದಕ್ಷಿಣೆ ದಾಹಕ್ಕೆ ಆಕೆಯನ್ನೇ ಬಲಿ ತೆಗೆದುಕೊಳ್ಳುತ್ತಾನೆ.

ಇದರಿಂದ ಕಷ್ಟ ಬಿದ್ದು 20 ವರ್ಷ ಬೆಳೆಸಿದ ಮಗಳನ್ನು ಕಣ್ಣೆದುರೆ ಕಳೆದುಕೊಂಡ ಪರಮೇಶ್ ಅವರ ನೋವು, ಕಷ್ಟ ವಿವರಿಸಲು ಅಸಾಧ್ಯ. ಅವರು ಜೀವಂತವಾಗಿ ಬದುಕಿದ್ದರು, ಪ್ರತಿಕ್ಷಣವೂ ಮಗಳ ನೆನಪಿನಲ್ಲೇ ಕಣ್ಣೀರು ಹಾಕುತ್ತ ಬದುಕಲು ಇಷ್ಟವಿಲ್ಲದಿದ್ದರೂ ಜೀವನ ಸಾಗಿಸುತ್ತಿದ್ದಾರೆ ಅಷ್ಟೇ.

ಇನ್ನೊಂದು ಘಟನೆ ಹೇಳುತ್ತೇನೆ, ಸಾಗರ್ ಎಂಬ ಯುವ ಸಹಾಯಕ ಪ್ರಾಧ್ಯಾಪಕರೊಬ್ಬರು ನನಗೆ ತುಂಬಾ ಪರಿಚಿತರು. ಗಣಿತ ವಿಷಯಲ್ಲಿ ಎಂ.ಎಸ್ಸಿ, ಬಿ.ಎಡ್ ಮಾಡಿ ಈಗ ಸರ್ಕಾರಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಗರ್ ಅವರದ್ದು ತುಂಬಾ ಬಡತನ ಕುಟುಂಬ. ಅದೆಷ್ಟರ ಮಟ್ಟಿಗೆ ಎಂದರೆ ತಿನ್ನಲು ಊಟ ಕೂಡ ಸಿಗದ ಪರಿಸ್ಥಿತಿ. ಇವರಿಗೆ 4 ವರ್ಷವಿರುವಾಗಲೇ ಅನಾರೋಗ್ಯದಿಂದ ತಂದೆ ವಿಧಿವಶರಾಗುತ್ತಾರೆ. ತಾಯಿಯೇ ಕೂಲಿ ಮಾಡಿ ಅವರನ್ನು ಬೆಳೆಸಿದ್ದು, ಓದಿಸಿದ್ದು. ಅವರಿಗೆ ಈ ಪ್ರೀತಿ, ಪ್ರೇಮ ಎಂಬ ವಿಷಯಗಳ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಜೀವನ ನಡೆಸುವುದಕ್ಕೆ ಕಷ್ಟವಿದ್ದರಿಂದ ಪ್ರೀತಿ ಪ್ರೇಮ ಸಮೀಪವು ಹೋಗಿರುವುದಿಲ್ಲ. ಆದರೆ ಎಂ.ಎಸ್ಸಿ ಓದುವಾಗ ಕಾಲೇಜಿನಲ್ಲಿ ಮಹಿಳಾ ಸ್ನೇಹಿತರೊಬ್ಬರು ಪರಿಚಯವಾಗುತ್ತದೆ. ಇಬ್ಬರು ಓದುವುದರಲ್ಲಿ ಬ್ರಿಲಿಯೆಂಟ್, ಇಬ್ಬರ ವ್ಯಕ್ತಿತ್ವಗಳು ಪರಸ್ಪರ ಹೋಲಿಕೆಯಾಗುತ್ತಿದ್ದರಿಂದ ಅವರಿಗೆ ಗೊತ್ತಿಲ್ಲದೆಯೇ ಸ್ನೇಹವು ಬರುತ್ತಾ ಪ್ರೀತಿಯಾಗಿ ಪರಿರ್ವತನೆಯಾಗುತ್ತದೆ. 4 ವರ್ಷಗಳು ಇಬ್ಬರೂ ಪ್ರೀತಿಯಲ್ಲಿ ಸಾಗುತ್ತಾರೆ.

ಆದರೆ ಅವರು ಪ್ರೀತಿಸುತ್ತಿದ್ದವರ ತಂದೆ ತಾಲ್ಲೂಕಿನ ಪ್ರಭಾವಿ ರಾಜಕಾರಣಿಗಳು ಹಾಗೂ ಆರ್ಥಿಕವಾಗಿ ತುಂಬಾ ಬಲಾಢ್ಯರು. ತುಂಬಾ ಕಡು ಬಡವರಾಗಿರುವ ಸಾಗರ್ ಅವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಲು ಇಷ್ಟವಿಲ್ಲದೇ, ಸಾಗರ್ ಅವರಿಗೆ ಬೆದರಿಕೆ ಹಾಕಿ, ಕಿರುಕುಳ ನೀಡಿ ದೂರ ಮಾಡುತ್ತಾರೆ.

ಈ ಮಧ್ಯೆ ಸಾಗರ್ ರವರಿಗೆ ತಮ್ಮ ನಾಲ್ಕು ವರ್ಷಗಳ ಪ್ರೀತಿ ಮರೆಯಲು ಅಷ್ಟು ಸುಲಭವಾಗಿರಲಿಲ್ಲ. ಹಲವು ವರ್ಷಗಳ ಕಾಲ ನೋವು, ವೇದನೆ ಪಟ್ಟುಕೊಳ್ಳುತ್ತಾರೆ. ಆದರೆ ಅವರಿಗೆ ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಈ ಮಧ್ಯೆ ಸಾಗರ್ ಅವರು ತಮ್ಮ ಪ್ರೇಮಿಯನ್ನು ಮರೆಯಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿಯನ್ನು ಹಿಡಿಯಲು ಹೋದಾಗ ಅವರ ಕಣ್ಣೆದುರಿಗೆ ಬಂದಿದ್ದು, ಅವರ ತಾಯಿ. ಇರುವ ಒಬ್ಬನೇ ಮಗ ಎಂದು ನನ್ನನ್ನು ಬಿಸಿಲಲ್ಲಿ ದುಡಿದು, ಕೂಲಿ ಮಾಡಿ ಸಾಕಿದ ತಾಯಿಯನ್ನು ಬಿಟ್ಟು ಹೋಗುವುದು ನ್ಯಾಯವೇ ಎಂಬ ಆಲೋಚನೆ ಮನಸ್ಸಲ್ಲಿ ಬರುತ್ತದೆ. ಕೂಲಿ ಮಾಡಿ ಇಷ್ಟು ವರ್ಷ ಓದಿಸಿ, ಜೋಪಾನವಾಗಿ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಮಾಡಿ ಹೋಗುವುದು ಸರಿಯಲ್ಲ ಎಂದು ಭಾವಿಸಿ ಆತ್ಮಹತ್ಯೆ ಹಾದಿ ಬಿಟ್ಟು ವಿಶಾಲವಾಗಿ ಆಲೋಚಿಸಲು ಪ್ರಾರಂಭಿಸುತ್ತಾರೆ. ಹುಡುಗಿ ಪ್ರೀತಿ ಹೋದರು ಚಿಂತೆಯಿಲ್ಲ, ಕನಿಷ್ಠ ತಾಯಿ ಪ್ರೀತಿಯಾದರೂ ಸಿಕ್ಕಿದೆ ಅಷ್ಟೇ ನನಗೆ ಸಾಕು ಎಂದು ಭಾವಿಸಿ ತಮ್ಮ ಮನಸ್ಥಿತಿಯನ್ನೇ ಬದಲಿಸಿಕೊಳ್ಳುತ್ತಾರೆ.

ತಮ್ಮ ಶಿಕ್ಷಣವನ್ನು ಮುಂದುವರೆಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ, ಸದ್ಯ ನೂರಾರು ವಿದ್ಯಾರ್ಥಿಗಳಿಗೆ ಜೀವನದ ಪಾಠ ಭೋದಿಸುವ ಮಟ್ಟಕ್ಕೆ ಬೆಳೆದಿದ್ದಾರೆ.

ಇವತ್ತಿನ ಯುವ ಸಮೂಹದ ವ್ಯಕ್ತಿತ್ವ ಹೇಗಿದೆಯೆಂದರೆ ಪ್ರೀತಿ ಪ್ರೇಮ ಎಂಬುವುದು ಒಂದು ಫ್ಯಾಶನ್ ಆಗಿದೆ. ಕಾಲೇಜು ಮೆಟ್ಟಿಲು ಹತ್ತುತ್ತಿದ್ದೇವೆ ಎಂದರೆ ಪ್ರೀತಿ, ಪ್ರೇಮ ಎಂಬುವುದಕ್ಕೆ ಜೋತು ಬೀಳಲೇ ಬೇಕೆಂಬ ಅಲಿಖಿತ ನಿಯಮವನ್ನು ಹಲವು ಹುಡುಗ, ಹುಡುಗಿಯರು ಪಾಲಿಸಲು ಹೊರಟಿರುವುದು ಕಣ್ಣಿಗೆ ಕಾಣುವ ವಾಸ್ತವ ಹಾಗೂ ದುರ್ದೈವ.

ಸ್ನೇಹಿತರ ಬಳಿ ಹೇಳಿಕೊಳ್ಳಲು, ವ್ಯಾಲು ಬರುತ್ತದೆ ಎಂದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ನಾಟಕವನ್ನು ಮಾಡುವ ಮೈಂಡ್ ಸೆಟ್ ಇರಬಾರದು. ಪ್ರೀತಿ, ಪ್ರೇಮ ಮಾಡುವುದೇ ತಪ್ಪೆಂದು ಅರ್ಥವಲ್ಲ, ಅದು ಅವರವರ ವೈಯಕ್ತಿಕ ನಿರ್ಧಾರಗಳು. ಯಾರೊಬ್ಬರನ್ನು ಯಾರು ಪ್ರಶ್ನಿಸಲು ಸಾಧ್ಯವಿಲ್ಲ.

ಆದರೆ ನಮ್ಮ ಹಣೆಬರಹದಲ್ಲಿ ಪ್ರೀತಿ, ಪ್ರೇಮ ಎಂಬುವುದು ಬರೆದಿದ್ದರೆ ಅದಾಗಲೇ ಆಗಲಿ. ಅದು ಬಿಟ್ಟು ಶಿಕ್ಷಣ, ಜೀವನ ಎಲ್ಲವನ್ನೂ ಮಧ್ಯೆದಲ್ಲೇ ಕೈ ಬಿಟ್ಟು ಯಾರೋ ಒಬ್ಬರನ್ನು ಪ್ರೀತಿ, ಪ್ರೇಮ ಮಾಡಲೇ ಬೇಕೆಂದು ಹಠ ಹಿಡಿದು ನಿರ್ಧರಿಸಿ, ಹಾದಿ ತಪ್ಪುವುದು ಮಾತ್ರ, ನಮ್ಮ ಜೀವನಕ್ಕೆ ನಾವೇ ಬೆಂಕಿ ಇಟ್ಟುಕೊಂಡಂಗೆ.

ನಮ್ಮ ಪ್ರೀತಿಯಲ್ಲಿ ನಿಷ್ಕಲ್ಮಶತೆ, ನೈತಿಕತೆ, ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಹಾಗೂ ಮೌಲ್ಯಗಳು ಉದಾರವಾಗಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬದವರು ನಮ್ಮ ಪ್ರೀತಿಯನ್ನು ಒಪ್ಪುವ ಮಟ್ಟಿಗೆ ಅರ್ಥಪೂರ್ಣವಾಗಿ ಇರಬೇಕು ಹಾಗೂ ಯಾರ ಸಹಕಾರವಿಲ್ಲದೇ ಬದುಕಿ ತೋರಿಸುತ್ತೇವೆ ಎಂಬ ನಂಬಿಕೆ ಕುಟುಂಬದವರಿಗೆ ಬರುವ ರೀತಿಯಲ್ಲಿ ಜವಾಬ್ದಾರಿ, ಕರ್ತವ್ಯ ನಿರ್ವಹಿಸಬೇಕು.

ಹಲವು ವರ್ಷ ಪ್ರೀತಿಸಿ ಮದುವೆಯಾದ ಹಲವರು 6 ತಿಂಗಳಿಗೆ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ ಎಂದರೆ ಏನರ್ಥ..? ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಹಾದಿ ತಪ್ಪದೇ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು. 

ಇನ್ನು ಪ್ರೀತಿ, ಪ್ರೇಮ ಎಂದು ಶಿಕ್ಷಣ, ಜೀವನ, ಕುಟುಂಬವನ್ನು ಬಲಿಪಶು ಮಾಡಿ ಪಡೆದುಕೊಳ್ಳುವುದರಲ್ಲಿ ಏನರ್ಥವಿರುತ್ತದೆ..? ಪ್ರೀತಿ ಪ್ರೇಮದ ಜೊತೆಗೆ ಶಿಕ್ಷಣ, ಉದ್ಯೋಗ, ಕುಟುಂಬ, ಮಾನ, ಮಾರ್ಯಾದೆಯನ್ನು ಕೂಡ ಅತ್ಯಂತ ಅಗತ್ಯ ಎಂಬ ಪರಿಜ್ಞಾನ ಪ್ರತಿಯೊಬ್ಬರಿಗೂ ಇರಬೇಕು. ಎಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ, ಶಕ್ತಿ ಪ್ರೀತಿಸುವವರಲ್ಲಿ ಇರಲೇ ಬೇಕು.

ಈ ಮಧ್ಯೆ ಪ್ರೀತಿಯಲ್ಲಿ ಸೋತೆ, ಪ್ರೀತಿಸಿದವರನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆತ್ಮಹತ್ಯೆ ದಾರಿ ಹಿಡಿಯುವ ನಿರ್ಧಾರವೇ ಅತ್ಯಂತ ಘೋರ ಹಾಗೂ ಆಘಾತ. ಯಾವುದೋ ಒಂದು ವಿಚಾರಕ್ಕೆ ನಮ್ಮ ಲೈಪ್ ನ್ನೇ ಕೊನೆ ಮಾಡಿಕೊಳ್ಳುತ್ತೇವೆ ಎಂದರೆ ಅದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನು ಅಲ್ಲ. ಪ್ರತಿಯೊಬ್ಬರಿಗೂ ಪ್ರೀತಿಸಿದವರೇ ಸಿಗಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಒಬ್ಬೊಬ್ಬರ ಹಣೆ ಬರಹ ಒಂದೊಂದು ರೀತಿಯಲ್ಲಿ ಇರುತ್ತದೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.

ಹುಡುಗ ಅಥವಾ ಹುಡುಗಿ ಪ್ರೀತಿ ಸಿಗದೇ ಇದ್ದರೂ, ತಂದೆ, ತಾಯಿ, ಕುಟುಂಬದವರ ಹಾಗೂ ಸ್ನೇಹಿತರ ಪ್ರೀತಿ ಸಿಕ್ಕಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಲೇಬೇಕು. 

ಜೀವನದಲ್ಲಿ ಯಾವುದೇ ಸಂದರ್ಭಗಳು ಬಂದರೂ, ಅದನ್ನು ಸವಾಲಾಗಿ ಸ್ವೀಕರಿಸುವ ಮಾನಸಿಕತೆ ನಮ್ಮದಾಗಿರಬೇಕು, ಮನಸ್ಸನ್ನು ಗಟ್ಟಿ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ..? ಕೊನೆಯಾಗಿ ಒಂದು ವಿಚಾರ ಹೇಳುತ್ತೇನೆ, ಪ್ರೀತಿ ಯಾವತ್ತೂ ಕುರುಡಾಗಿಲ್ಲ. ಪ್ರೀತಿಸುವವರು ಮಾತ್ರ ಕುರುಡಾಗಿ ಜೀವಿಸಬಾರದಷ್ಟೆ.

ಭಾನುವಾರ, ಫೆಬ್ರವರಿ 16, 2025

"ಅಮ್ಮನ ಹೃದಯದೊಳಗಿನ ಅಂತರಾಳ"..

⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ
ಇಂಗ್ಲೀಷ್ನಲ್ಲಿ ಒಂದು ಸುಂದರವಾದ ವಾಕ್ಯವಿದೆ, God could not be every where and therefore he created mothers. ಇದರರ್ಥ ದೇವರು ಎಲ್ಲಾ ಜಾಗದಲ್ಲಿರಲು ಸಾಧ್ಯವಾಗದೆ ಇರುವುದರಿಂದ, ಪ್ರತಿ ಮನೆಯಲ್ಲೂ ತಾಯಿಯನ್ನು ದೇವರು ಸೃಷ್ಟಿಸಿದ್ದಾನೆ. ಆ ತಾಯಿಯೇ ದೇವರಿಗಿಂತ ಹೆಚ್ಚಾಗಿ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಾಳೆ ಎಂಬ ಭಾವನಾತ್ಮಕ ಸಂದೇಶವನ್ನು ಈ ವಾಕ್ಯವು ಸಾರುತ್ತದೆ.

ಹಾಗೇ ನೋಡಿದರೆ ತಾಯಿ ಪ್ರೀತಿಯ ಮುಂದೆ, ಉಳಿದ ಎಲ್ಲಾ ಪ್ರೀತಿ, ಪ್ರೇಮ, ಇತರೆ ವಿಷಯಗಳು ನಗಣ್ಯ. ಈ ಪ್ರಪಂಚದಲ್ಲಿ ಯಾವುದೇ ಸ್ವಾರ್ಥ, ಆಸೆ, ಲಾಭಗಳಿಲ್ಲದೇ ತನ್ನ ಇಡೀ ಜೀವನವನ್ನು ತನ್ನ ಮಕ್ಕಳ ಅಭಿವೃದ್ದಿಗಾಗಿ ಮುಡಿಪಾಗಿಯಿಡುವ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.

ನನ್ನ ಪರಿಚಿತ ಹಿರಿಯ ಸ್ನೇಹಿತ ಕಾರ್ತಿಕ್ ಎಂಬುವವರು ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರೂ ಒಂದೇ ಕಾಲೇಜಿನಲ್ಲಿ 3 ವರ್ಷ ವಿದ್ಯಾಭ್ಯಾಸ ಮಾಡಿದವರು. ಅವರ ಸ್ನೇಹವು ಕಾಲಾನಂತರ ಪ್ರೀತಿಯಾಗಿ ಮಾರ್ಪಾಡಾಗಿ ಮದುವೆಯಾಗಲು ನಿರ್ಧರಿಸುತ್ತಾರೆ. ಪ್ರಾರಂಭದಲ್ಲಿ ಹುಡುಗಿ ಕುಟುಂಬದವರ ವಿರೋಧವಿದ್ದರು, ನಂತರ ಮಕ್ಕಳ ಆಸೆಗೆ ಬೆಲೆ ಕೊಟ್ಟು ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿಸುತ್ತಾರೆ. ವಿಶೇಷವೆಂದರೆ ತಮ್ಮ ಪ್ರೀತಿ ಸದಾ ನೆನಪಿನಲ್ಲಿ ಇರಲಿ ಎಂದು ಫೆ.14 ರ ವ್ಯಾಲೆಂಟೆನ್ಸ್ ಡೇ ದಿನವೇ ಮದುವೆಯಾಗುತ್ತಾರೆ.

ನನ್ನ ಸ್ನೇಹಿತನಿಗೆ ತಂದೆ ಇಲ್ಲ. ತಾಯಿ ಗಾರ್ಮೆಂಟ್ಸ್ ಒಂದರಲ್ಲಿ ಸಹಾಯಕಿಯಾಗಿ ಸಣ್ಣ ಕೆಲಸ ಮಾಡುತ್ತ, ಕಷ್ಟಪಟ್ಟು ಮಗನನ್ನು ಪದವಿಯವರೆಗೂ ಓದಿಸುತ್ತಾಳೆ. ತನ್ನ ಮಗನಿಗೆ ಯಾವುದೇ ಕೊರತೆಯಾಗದಂತೆ ಪ್ರೀತಿಯಿಂದ ಸಾಕುತ್ತಾಳೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಆತ ಇಷ್ಟ ಪಟ್ಟ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಲು ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಒಪ್ಪಿಕೊಳ್ಳುತ್ತಾಳೆ. ಮಗ ಜೀವನದಲ್ಲಿ ನೆಮ್ಮದಿ, ಖುಷಿಯಾಗಿದ್ದಾರೆ ಸಾಕು ಎಂಬ ಆಸೆ ತಾಯಿಯದ್ದು.

ವಿವಾಹವಾದ ಒಂದೇ ವರ್ಷಕ್ಕೆ ನನ್ನ ಸ್ನೇಹಿತನ ಹೆಂಡತಿ ಒಂದಾಗಿದ್ದ ಮನೆಯನ್ನು ಎರಡು ಮನೆ ಮಾಡಿಸುತ್ತಾಳೆ. ವಯಸ್ಸಾದ ನಿಮ್ಮ ತಾಯಿಯ ಸೇವೆ ಮಾಡಲು ನನಗೇನು ಕರ್ಮ..? ಅವರ ಆರೋಗ್ಯ ಸರಿ ಇಲ್ಲವೆಂದರೆ ನಾನು ನಿದ್ದೆಗೆಟ್ಟು ಹಾರೈಕೆ ಮಾಡಬೇಕೆ. ನನ್ನನ್ನು ಪ್ರೀತಿಸಿ, ಮದುವೆಯಾಗಿದ್ದು ಯಾವ ಪುರುಷಾರ್ಥಕ್ಕೆ, ವಯಸ್ಸಾದವರನ್ನು ನೋಡಿಕೊಳ್ಳಲು ನನ್ನ ಇಡೀ ಜೀವನ ವ್ಯರ್ಥ ಮಾಡಬೇಕೆ, ಜೀವನದಲ್ಲಿ ಯಾವುದೇ ಸಂತೋಷವಿಲ್ಲ, ಯಾವುದೇ ಜಾಲಿ ಟ್ರಿಪ್ ಹೋಗಲು ಸಾಧ್ಯವಿಲ್ಲ. ಈ ಮನೆಯೇ ನನಗೆ ನರಕಕ್ಕೆ ಸಮಾನ ಎಂದು ಪದೇ ಪದೇ ಗಂಡನ ಮುಂದೆ ಗಲಾಟೆ ಮಾಡುತ್ತಾಳೆ. 

ನಾವು ಬೇರೆ ಮನೆ ಮಾಡಿ, ಇಲ್ಲಿಂದ ಹೊರಟು ಖುಷಿಯಾಗಿ ಜೀವನ ಕಳೆಯ ಬೇಕೆಂಬ ಹೆಂಡತಿಯ ಒತ್ತಾಯಕ್ಕೆ ಮಣಿದು, ನನ್ನ ಸ್ನೇಹಿತ ಹೆತ್ತು, ಹೊತ್ತು ಸಾಕಿ, ಕಷ್ಟ ಎಂದರೆ ಏನು ತಿಳಿಯದಂತೆ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೆಂಡತಿ ಜೊತೆಗೆ ಹೊಸ ಮನೆಯನ್ನು ಸೇರುತ್ತಾನೆ.

ಆದರೂ ಆ ತಾಯಿಯು ಮಗನ ಬಗ್ಗೆಯಾಗಲಿ, ಸೊಸೆಯ ಬಗ್ಗೆಯಾಗಲಿ ಒಂದೇ ಒಂದು ದಿನವೂ ಕೂಡ ಕೆಟ್ಟದಾಗಿ ಹೇಳುವುದಿಲ್ಲ, ಬೇಸರ ಮಾಡಿ ಕೊಳ್ಳುವುದಿಲ್ಲ. ನನ್ನ ಮಗ ನನ್ನಿಂದ ದೂರವಾಗಿ, ಬೇರೆ ಮನೆಯಲ್ಲಿದ್ದರೂ ಚಿಂತೆಯಿಲ್ಲ. ಆತ, ಆತನ ಹೆಂಡತಿ ಸಂತೋಷವಾಗಿದ್ದರೆ, ನನಗೆ ಅಷ್ಟೇ ಸಾಕು ಎಂದು ಮನದಲ್ಲೇ ಭಾವಿಸುತ್ತಿದ್ದಳು.

ಇತ್ತ ಹೊಸ ಮನೆ ಮಾಡಿದರು, ತನ್ನ ಐಷಾರಾಮಿ ಜೀವನ, ಅತಿಯಾದ ಆಸೆಗಳ ಈಡೇರಿಕೆ ಪೂರಕವಾಗಿ ಗಂಡ ಸ್ಪಂದಿಸುತ್ತಿಲ್ಲ ಎಂದು ಪ್ರತಿನಿತ್ಯವು ಜಗಳವಾಡುತ್ತ, ಕೊನೆಗೆ ಆತನ ಹೆಂಡತಿ ವಿವಾಹ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರುತ್ತಾಳೆ. ಅಂತೂ ಇಬ್ಬರಿಗೂ ನ್ಯಾಯಾಲಯ ವಿಚ್ಛೇದನ ನೀಡಿತು. ಆ ಮೂಲಕ ವ್ಯಾಲೆಂಟೆನ್ಸ್ ಡೇ ದಿನ ಮದುವೆಯಾಗಿದ್ದಕ್ಕೆ, ಈ ಇಬ್ಬರ ಜೀವನವು ಸಾರ್ಥಕವಾಯಿತು. 

ಗಮನಾರ್ಹ ಅಂಶವೆಂದರೆ ನನ್ನ ಸ್ನೇಹಿತ ವಿಚ್ಛೇದನ ನಂತರ ಜೀವನದಲ್ಲಿ ಜಿಗುಪ್ಸೆ, ನೋವು ಹೊಂದಿ, ಕೊನೆಗೆ ತನ್ನ ತಾಯಿಯ ಮನೆ ಸೇರಿಕೊಳ್ಳುತ್ತಾನೆ. ಆದರೂ ಆ ತಾಯಿ ನಿನ್ನ ಹೆಂಡತಿ ಮಾತು ಕೇಳಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆ. ಈಗ ನೀನು ಯಾವ ಮುಖವಿಟ್ಟು ಕೊಂಡು ಮತ್ತೆ ವಾಪಸ್ ಬಂದೇ ಎಂದು ಒಂದೇ ಒಂದು ಮಾತನ್ನು ಸಹ ಆ ತಾಯಿ ಕೇಳಲಿಲ್ಲ. ಸದ್ಯ ಮಗ ಬಂದಿದ್ದಾನೆ ಅಷ್ಟೇ ಸಾಕು ಎಂದು ಭಾವಿಸುತ್ತಾಳೆ. 

ಮಗ ಬೇಸರದಲ್ಲಿರುವುದನ್ನು ಕಂಡು ಆತನನ್ನು ಸಂತೈಸಿ, ಕಷ್ಟವೆನೆಂದು ಕೇಳುತ್ತಾಳೆ. ಮಗ, ಸೊಸೆಯ ಡೈರ್ವೋಸ್ ವಿಷಯ ತಿಳಿದ ತಾಯಿ ಸಾಕಷ್ಟು ನೊಂದು, ತನ್ನ ಒಬ್ಬನೇ ಮಗನಿಗೆ ಈ ರೀತಿಯಲ್ಲಿ ಆಯಿತ್ತಲ್ಲವೇ ಎಂದು ಚಿಂತಿಸಿ, ಆಲೋಚಿಸಿ ನನ್ನ ಹೆಸರಲ್ಲಿರುವ 1 ಎಕರೆ ಜಮೀನು, ಈ ಸಣ್ಣ ಮನೆಯನ್ನು ಬೇಕಾದರೆ ನಿನ್ನ ಹೆಂಡತಿ ಹೆಸರಿಗೆ ನಾನು ಮಾಡಿಕೊಡುತ್ತೇನೆ. ಉಳಿಸಿರುವ ಸ್ವಲ್ಪ ಹಣವಿದ್ದು, ಅದನ್ನು ಆಕೆಗೆ ಕೋಡೋಣ. ನೀವಿಬ್ಬರೂ ಜೊತೆಗಿದ್ದು, ಖುಷಿಯಾಗಿದ್ದರೆ ಸಾಕು. ಸೊಸೆ ನನ್ನನ್ನು ನೋಡಿಕೊಳ್ಳದಿದ್ದರು ನನಗೇನು ಕೋಪವಿಲ್ಲ. 

ಆದರೆ ನೀವಿಬ್ಬರು ಅನ್ಯೋನ್ಯವಾಗಿ ಜೀವನ ನಡೆಸಿದರೆ ನನಗೆ ಅಷ್ಟೇ ಸಾಕು, ಅದೇ ನನಗೆ 100 ವರ್ಷ ಬದುಕಿದ ಹಾಗೇ ಎಂದು ಆ ತಾಯಿಯ ಮಾತೃ ಹೃದಯದ ಅನಿಸಿಕೆಗಳು ಕೇಳಿದರೆ ಎಂತವರ ಹೃದಯವು ಕರಗುತ್ತದೆ. 

ಕಷ್ಟ ಪಟ್ಟು ಬೆಳೆಸಿದ ಮಗ ನೀನು ನನಗೆ ಬೇಡ ಎಂದು ನೇರವಾಗಿ ತಿರಸ್ಕರಿಸಿ ಹೇಳಿದರು, ಸ್ವಲ್ಪವು ಬೇಸರಿಸಿಕೊಳ್ಳದೇ ಮಗನ ಯೋಗಕ್ಷೇಮದ ಬಗ್ಗೆ ಆಲೋಚಿಸುವ ಆ ತಾಯಿಯ ವ್ಯಕ್ತಿತ್ವ ಬೇರೆಲ್ಲಿ ಕಾಣಲು ಸಾಧ್ಯ..?

ಮೊನ್ನೆ ಕಾರ್ಯ ನಿಮ್ಮಿತ್ತ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಆ ಮಹಿಳೆಯು ತನ್ನ ಮಗನಿಗೆ ಊಟ ಮಾಡಿಸಿ, ನಂತರ ಕೈ ಎಲ್ಲಿ ಎತ್ತಿಕೊಂಡು ರೂಂ ಒಳಗೆ ಹೋಗಿ ಮಲಗಿಸಿ ಬಂದಳು. ಆತನ ಹೆಸರು ಪ್ರವೀಣ್, ವಯಸ್ಸು 21 ವರ್ಷವಿರಬಹುದು. ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶಾಲೆ ಮುಗಿಸಿ ಮನೆಗೆ ಬರಲು ರಸ್ತೆ ದಾಟುವಾಗ ದುರ್ದೈವದಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿ ತನ್ನ ಎರಡು ಕೈ ಮತ್ತು ಎರಡು ಕಾಲುಗಳ ಪೂರ್ತಿ ಸ್ವಾಧೀನ ಕಳೆದು ಕೊಂಡಿದ್ದಾನೆ. 

ಪೂರ್ಣ ವಿಕಲಚೇತನಕ್ಕೆ ತುತ್ತಾದ ಕಾರಣ, ಕಳೆದ 5 ವರ್ಷಗಳಿಂದ ಮಲಗಿದ ಜಾಗದಲ್ಲೇ ಉಳಿಯುವಂತಹ ಧಾರುಣ ಸ್ಥಿತಿ ಈ ಹುಡುಗನದ್ದು. ದುರದೃಷ್ಟವೆಂದರೆ ಈ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡು 3 ವರ್ಷಗಳಾಗಿದೆ. ಇದ್ದ ಒಬ್ಬ ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ, ತನ್ನನ್ನು ಖುಷಿಯಿಂದ ನೋಡಿಕೊಳ್ಳುತ್ತಾನೆ ಎಂದು ಭಾವಿಸಿದ್ದಳು, ಆದರೆ ವಿಧಿ ನಿರ್ಣಯಕ್ಕೆ ತಲೆ ಭಾಗಿ ಈಗ ಭುಜದ ಎತ್ತರಕ್ಕೆ ಬೆಳೆದ ಮಗನನ್ನು ಶಾಶ್ವತವಾಗಿ ಹಾಸಿಗೆಯಲ್ಲೇ ನೋಡುವ ಆಕೆಯ ಸ್ಥಿತಿ ಶತ್ರುವಿಗೂ ಬರಬಾರದು.

ಕಳೆದ 5 ವರ್ಷಗಳಿಂದ ಈಕೆ ತನ್ನ ಮಗನಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮಾಡುತ್ತ, ಆ ನಂತರ ಕೂಲಿ ಕೆಲಸ ಮಾಡಿ, ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಮಗನನ್ನು ಸಾಕುತ್ತಿದ್ದಾಳೆ. ತನ್ನ ಮಗನನ್ನು ಚಿಕ್ಕ ಮಗುವಿನಂತೆ, ಹಾರೈಕೆ ಮಾಡುತ್ತಾಳೆ. ಆ ತಾಯಿಯ ಹೃದಯದ ನಿಷ್ಕಲ್ಮಷ ಪ್ರೀತಿಯನ್ನು ವರ್ಣಿಸಲು ಹುಡುಕಿದರು ಪದಗಳು ಸಿಗುವುದಿಲ್ಲ. 

ನನ್ನ ಮಗನ ಈ ಸ್ಥಿತಿ ನೋಡಿ, ನಾನೆಂದೋ ಪ್ರಾಣ ಬಿಡಬೇಕು ಎಂದುಕೊಂಡಿದ್ದೆ. ಆದರೆ ಆತನಿಗೆ ಇರುವುದು ನಾನೊಬ್ಬಳೇ ದಿಕ್ಕು. ನಾನೇನಾದರೂ ಪ್ರಾಣ ಕಳೆದುಕೊಂಡರೆ, ನನ್ನ ಮಗನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ. ಮೊದಲೇ ಆತ ಅಪಘಾತವಾಗಿ ಜೀವನದಲ್ಲಿ ತತ್ತರಿಸಿ ಹೋಗಿದ್ದಾನೆ. ನಾನು ಇಲ್ಲದೇ ಹೋದರೆ ಆತ ಅನಾಥನಾಗುತ್ತಾನೆ, ನನ್ನ ಮಗನಿಗೆ ಆ ಸ್ಥಿತಿ ಬರಬಾರದೆಂಬ ಏಕೈಕ ಉದ್ದೇಶವೇ ನಾನಿಂದು ಜೀವಿಸಿರುವುದಕ್ಕೆ ಮೂಲ ಕಾರಣ ಎಂದು ಆಕೆ ತನ್ನ ಮನಸ್ಸಿನ ಅಂತರಾಳವನ್ನು ಹೇಳುವ ಮೂಲಕ ಮಗನ ಮೇಲಿನ ಮಮಕಾರವನ್ನು ವ್ಯಕ್ತಪಡಿಸುತ್ತಾಳೆ. 

ಸ್ವಯಂ ಸೇವಾ ಸಂಸ್ಥೆಯೊಂದು ಹಳ್ಳಿಯೊಂದರಲ್ಲಿ ಮಹಿಳೆಯರ ಸಬಲೀಕರಣ ಸಂಬಂಧ ಕಾರ್ಯಕ್ರಮವೊಂದು ಹಮ್ಮಿಕೊಂಡಿತ್ತು. ನನ್ನನ್ನು ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಪೈಕಿ ಒಬ್ಬ ಮಹಿಳೆ ಕಾರ್ಯಕ್ರಮ ಮುಗಿದ ನಂತರ, ನನ್ನ ಬಳಿಗೆ ಬಂದು ಸಾರ್ ಐಎಎಸ್ ಅಧಿಕಾರಿ ಆಗಬೇಕಾದರೆ ಏನು ವಿದ್ಯಾಭ್ಯಾಸ ಮಾಡಬೇಕು ಎಂದು ಪ್ರಶ್ನೆ ಕೇಳಿದಳು. ನಾನು ಯಾರನ್ನು ಓದಿಸಲು ಕೇಳುತ್ತಿದ್ದೀಯಮ್ಮ ಎಂದಾಗ ನನ್ನ ಮಗಳನ್ನು ಸಾರ್ ಎಂದು ಉತ್ತರಿಸಿದಳು.

ಹಾಗೆಯೇ ಆಕೆ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತ, ಅವರ ತಂದೆ ತಾಯಿ ತುಂಬಾ ಕಡು ಬಡವರಾದ್ದರಿಂದ ಈಕೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, 16 ನೇ ವಯಸ್ಸಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಗಂಡನ ಮನೆಯವರು ಕೂಡ ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲ. ಅದರಲ್ಲೂ ಆಕೆಯ ಗಂಡ ಪ್ರತಿದಿನವೂ ಕುಡಿದು ಬಂದು ಗಲಾಟೆ ಮಾಡುತ್ತ, ಜೀವನ ನಿರ್ವಹಣೆಗೆ ಒಂದು ರೂಪಾಯಿಯನ್ನು ಕೊಡದೇ ನರಕ ತೋರಿಸುತ್ತಿದ್ದ. ದಿನವೂ ಕುಡಿದು, ಕುಡಿದು ಆರೋಗ್ಯ ಹಾಳಾಗಿ ಹಲವು ವರ್ಷಗಳ ಹಿಂದೆಯೇ ಆತ ನಿಧನ ಹೊಂದಿದ್ದನಂತೆ. 

ನನಗೆ ಇಬ್ಬರೂ ಹೆಣ್ಣು ಮಕ್ಕಳು ಸಾರ್, ದೊಡ್ಡ ಮಗಳು 7 ನೇ ತರಗತಿ, 2 ನೇ ಮಗಳು 4 ನೇ ತರಗತಿಯನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

ಜೀವನದ ನಿರ್ವಹಣೆಗಾಗಿ, ಮಕ್ಕಳ ಶಿಕ್ಷಣ, ಅವರ ಮದುವೆಗಾಗಿ ಅನಿವಾರ್ಯವಾಗಿ ಸರಿಯೋ, ತಪ್ಪೋ ವೇಶ್ಯೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ ಸಾರ್. ನಮ್ಮ ತವರು ಮನೆಯವರು ಅವರ ಬಡತನ ಕಾರಣದಿಂದ ನನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಬಾಲ್ಯ ವಿವಾಹ ಮಾಡಿದರು. ಇನ್ನು ಮದುವೆಯಾದ ನಂತರ ಗಂಡ ಮದ್ಯಪಾನ ದಾಸನಾಗಿ ಕುಡಿದು ನಮ್ಮನ್ನು ಹೊಡೆಯುವುದು ಬಿಟ್ಟರೆ ಆತ ನಮಗಾಗಿ ಒಂದು ರೂಪಾಯಿಯನ್ನು ಸಂಪಾದಿಸಿ ಕೊಡಲಿಲ್ಲ, ಬದಲಾಗಿ ನಮ್ಮ ಮೂರು ಜನರನ್ನು ಬೀದಿಪಾಲು ಮಾಡಿ ಹೋದ. ನಮ್ಮ ಕಷ್ಟಗಳನ್ನು ನೋಡಿ ಸಂಬಂಧಿರ‍್ಯಾರು ಹತ್ತಿರವು ಸುಳಿಯಲಿಲ್ಲ. 

ಬಡತನ, ಅಸಹಾಯಕತೆ, ನೋವು ಹಾಗೂ ನನ್ನ ಇಬ್ಬರ ಮಕ್ಕಳ ಜೀವನಕ್ಕಾಗಿ ನನಗೆ ಇಷ್ಟವಿಲ್ಲದಿದ್ದರು ವೇಶ್ಯೆ ವೃತ್ತಿಗೆ ತಳ್ಳಲ್ಪಟ್ಟೆ. ಈ ವೃತ್ತಿಯಲ್ಲಿ ಪ್ರತಿದಿನವೂ ಅನುಭವಿಸುವ ನರಕಯಾತನೆ, ಸಂಕಟ, ಕಣ್ಣೀರಿನ ನೋವು ನನಗೆ ಮಾತ್ರ ಗೊತ್ತು, ಹೊರಗಿನ ಪ್ರಪಂಚದವರಿಗೆ ನಾನು ಮಾಡುವ ಕೆಲಸದ ಬಗ್ಗೆ ಕೀಳರಿಮೆ ಇರಬಹುದು. ಆದರೆ ಇದು ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲ, ಬದಲಾಗಿ ನನ್ನ ಹಣೆಬರಹವೇ ಈ ಕೂಪಕ್ಕೆ ನನ್ನನ್ನು ತಳ್ಳಿತು. 

ಈಗ ಇಲ್ಲಿಂದ ಹೊರ ಬರಬೇಕಾದರೂ ಅಸಾಧ್ಯವಾದ ಮಟ್ಟಿಗೆ ನನ್ನ ಬದುಕು ನಿಂತಿದೆ ಎಂದು ಹೇಳಿದಾಗ ಆಕೆಯ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬಂತು. ನೆಮ್ಮದಿ, ಸಂತೋಷವಿಲ್ಲದ ಜೀವನ ಯಾರಿಗೆ ತಾನೇ ಬೇಕು ಸಾರ್. ಆದರೂ ವಿಧಿಯ ಆಟಕ್ಕೆ ನಾನು ಬಲಿಯಾಗಿದ್ದೇನೆ ಅಷ್ಟೇ ಎನ್ನುತ್ತಾಳೆ.

ಕೆಲವರು ನನ್ನನ್ನು ತಾತ್ಸಾರವಾಗಿ ಕಾಣಬಹುದು, ಆದರೂ ನನ್ನ ವೇದನೆ, ನೋವು, ಕಷ್ಟ ಯಾರಿಗೇ ಹೇಳುವುದು. ಯಾರು ತಾನೇ ನಮ್ಮ ಕಷ್ಟಗಳಿಗೆ ಆಸರೆಯಾಗುತ್ತಾರೆ ಹೇಳಿ. ನನ್ನ ದೊಡ್ಡ ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕು. ಚಿಕ್ಕ ಮಗಳನ್ನು ವೈದ್ಯಳಾಗಿ ಮಾಡಬೇಕು. ಪ್ರತಿದಿನವೂ ಕಣ್ಣಿರಾಕಿ ಸಂಪಾದಿಸುವ ಅಷ್ಟು ಹಣ ನನ್ನ ಮಕ್ಕಳ ಶಿಕ್ಷಣ, ಅವರ ಸಂತೋಷಕ್ಕಾಗಿ ಮಾತ್ರ ವಿನಿಯೋಗಿಸುತ್ತೇನೆ. ನನಗಂತೂ ಬೇರೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ನನ್ನ ಜೀವನವಂತೂ ಹೇಗೋ ಅತಂತ್ರವಾಯಿತು. ನನ್ನ ಇಂತಹ ಸ್ಥಿತಿ ಯಾವುದೇ ಕಾರಣಕ್ಕೂ ನನ್ನ ಮಕ್ಕಳಿಗೆ ಬರಬಾರದು. 

ನನ್ನ ಮಕ್ಕಳು ಚೆನ್ನಾಗಿ ಓದಿ, ದೊಡ್ಡ ಅಧಿಕಾರಿಗಳಾಗಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಹೇಳುವ ಆಕೆಯು ತನ್ನ ಮಕ್ಕಳ ಮೇಲಿಟ್ಟಿರುವ ಅತೀವ ಪ್ರೀತಿಗೆ ಬೆಲೆ ಕಟ್ಟಲು ಹೇಗೆ ಸಾಧ್ಯ..? 

ಹಾಗೇ ನೋಡಿದರೆ ಈ ಪ್ರಪಂಚದಲ್ಲಿ ನಮ್ಮನ್ನು ಅತಿಯಾಗಿ ಪ್ರೀತಿಸುವ, ನಮ್ಮ ನೋವಿಗಳಿಗೆ ಸ್ಪಂದಿಸುವ ಏಕೈಕ ಹೃದಯ ಅದು ತಾಯಿ ಮಾತ್ರ. ತಾನು ಊಟ ಮಾಡಲಿ ಬಿಡಲಿ, ಮಕ್ಕಳ ಊಟ ಮಾಡುವುದರ ಬಗ್ಗೆ ಆಲೋಚಿಸುತ್ತಾಳೆ. ತನಗೆ ಆರೋಗ್ಯ ಇಲ್ಲದಿದ್ದರು, ಕಷ್ಟವಾದರೂ ಮಕ್ಕಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತಾಳೆ. 

ವಿಪರ್ಯಾಸವೆಂದರೆ ಇತ್ತಿಚೀನ ದಿನಗಳಲ್ಲಂತೂ ವಯಸ್ಸಾದ ತಂದೆ ತಾಯಿಯನ್ನು ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸುವ ಪದ್ದತಿಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಮನುಷ್ಯತ್ವವು ವಿನಾಶದ ಅಂಚಿಗೆ ತಲುಪಿದೆಯೇ ಎಂಬ ಸಂದೇಹ ಬರದೇ ಇರಲಾರದು. 

ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿ, ಸ್ವಂತ ತಂದೆ, ತಾಯಿಯನ್ನೇ ಬೀದಿ ಪಾಲು ಮಾಡುವವರ ಮನಸ್ಥಿತಿ ಅತ್ಯಂತ ಹೀನಾಯ ಹಾಗು ಘೋರ. ಆರೋಗ್ಯ ಹದೆಗೆಟ್ಟಿದೆ, ವಯಸ್ಸಾಗಿದೆ, ಇವರಿಗೆ ಸೇವೆ ಮಾಡಬೇಕು ಎಂದು ತಂದೆ, ತಾಯಿಗಳನ್ನೇ ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸಿ ಕೈ ತೊಳೆದುಕೊಳ್ಳುವ ಕೆಲ ಮಕ್ಕಳ ಮಾನಸಿಕತೆ ಯಾರಿಗೂ ಅರ್ಥವಾಗುವುದಿಲ್ಲ.

ಪ್ರತಿ ತಂದೆ, ತಾಯಿಯು ಮಕ್ಕಳಿಂದ ಅಪೇಕ್ಷಿಸುವುದು ದುಡ್ಡು, ಐಷಾರಾಮಿ ಜೀವನವಲ್ಲ. ಬದಲಾಗಿ ಪ್ರೀತಿ, ಪ್ರೇಮ, ಗೌರವ. ಅದನ್ನಾದರೂ ನಾವು ಅವರಿಗೆ ಕೊಡದೆ ಹೋದರೆ, ನಾವು ಮನುಷ್ಯರಾಗಿ ಜನ್ಮಿಸಿದಕ್ಕೆ ಅರ್ಥವಿರುವುದಿಲ್ಲ. ತಂದೆ, ತಾಯಿ ಇದ್ದಾಗ ಅವರ ಬೆಲೆ ನಮಗೆ ಖಂಡಿತವಾಗಿ ಗೊತ್ತಾಗುವುದಿಲ್ಲ, ಅವರು ಕಣ್ಮರೆಯಾದಾಗ ಮಾತ್ರ ಅವರ ಮಹತ್ವ ಆಳವಾಗಿ ಅರ್ಥವಾಗುತ್ತದೆ. 

ಬೀದಿಗೊಂದರಂತೆ ಅನಾಥಶ್ರಮಗಳು, ವೃದ್ದಾಶ್ರಮಗಳು ತಲೆ ಎತ್ತುತ್ತಿರುವುದು ನಮ್ಮಲ್ಲಿನ ಹೃದಯಹೀನತೆಗೆ ನಿದರ್ಶನವಲ್ಲದೇ ಮತ್ತೇನು ಅಲ್ಲ. Mother means sacrifice. She sacrifices everything for her child ಎಂಬ ಈ ಅಭೂತ ಪೂರ್ವ ವಾಕ್ಯ ನಮ್ಮ ಹೃದಯನ್ನು ಸ್ಪರ್ಶಿಸುವುದು ಯಾವಾಗ..?

ಭಾನುವಾರ, ಡಿಸೆಂಬರ್ 22, 2024

ಲವ್ ಸ್ಟೋರಿಯಲ್ಲಿನ, ಜೀವನದ ಲೈಪ್ ಪಾಠ..

⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 
ನನ್ನ ಸ್ನೇಹಿತ ಒಬ್ಬ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ತನ್ನ ವ್ಯಾಪ್ತಿಯಲ್ಲಿನ ಅರಣ್ಯಕ್ಕೆ ಒಮ್ಮೆಯಾದರೂ ಭೇಟಿ ನೀಡು, ಅರಣ್ಯ ಪ್ರಕೃತಿಯು ಅತ್ಯಂತ ಸುಂದರವಾಗಿ ಕಾಣುತ್ತದೆ. ನಗರಗಳ ಜಂಜಾಟದಿಂದ ದೂರ ಬಂದು ಈ ಅರಣ್ಯ ನೋಡಿದರೆ ಮನಸ್ಸಿಗೆ ಆಹ್ಲಾದಕರ ಸಿಗುತ್ತದೆ ಎಂದು ಪದೇ ಪದೇ ಬರಲು ಹೇಳುತ್ತಿದ್ದ.

ಅವನ ಅಪೇಕ್ಷೆಯಂತೆ ಒಮ್ಮೆ ಆ ಅರಣ್ಯಕ್ಕೆ ಹೋಗಿದ್ದೆ, ಅಲ್ಲಿ ಗಿಡ ಮರಗಳಿಗಿಂತ ಕಾಲೇಜಿನ ಹುಡುಗ, ಹುಡುಗಿಯರ ಸಂಖ್ಯೆಯೇ ಅಧಿಕವಾಗಿತ್ತು. ಅದಕ್ಕೆ ನಮ್ಮ ಸ್ನೇಹಿತನನ್ನು ಕೇಳಿದೆ, ಇವರಿಗೆಲ್ಲ ಕಾಲೇಜಿಲ್ಲವೇ ಅಂತಾ..? ಅದಕ್ಕೆ ಆತ ಅವರೆಲ್ಲರೂ ಪ್ರೇಮಿಗಳು ಹಾಗೂ ಪಿ.ಯು ವಿದ್ಯಾರ್ಥಿಗಳು, ಕಾಲೇಜು ಮುಗಿದು 2 ಗಂಟೆ ಆಗಿದೆ. ಸ್ಪೆಷಲ್ ಕ್ಲಾಸ್ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿ, ಇಲ್ಲೇ ಸಂಜೆವರೆಗೂ ಕಾಲ ಕಳೆಯುತ್ತಾರೆ. ನಾವು ಅವರಿಗೆ ಬುದ್ದಿವಾದ ಹೇಳಿ ಸಾಕಾಗಿದೆ. ಮನೆಯವರ ಮಾತೇ ಅವರು ಕೇಳುವುದಿಲ್ಲ, ಇನ್ನು ನಮ್ಮ ಮಾತು ಅವರೆಲ್ಲಿ ಕೇಳುತ್ತಾರೆ ಎಂದು ಉತ್ತರಿಸಿದ.

ವಿಪರ್ಯಾಸವೆಂದರೆ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಆ ವಿದ್ಯಾರ್ಥಿಗಳ ವರ್ತನೆ ಪ್ರತಿಯೊಬ್ಬರು ನಾಚಿಕೆ ಪಡುವಂತಿತ್ತು. ಪ್ರೀತಿಸುವುದು ತಪ್ಪಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಆದರೆ ಅವರ ವಯಸ್ಸು, ಅವರ ನಡವಳಿಕೆ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಿತ್ತು. 

ಇಂದಿನ ಪ್ರೇಮಿಗಳು ಪಾರ್ಕು, ಪಬ್, ರೆಸಾರ್ಟ್, ಟ್ರಿಪ್, ಪಾರ್ಟಿ ಅಂತಾ ಓಡಾಡುತ್ತ, ಜಾಲಿಯಾಗಿ ಲೈಪ್ ನ್ನು ಎಂಜಾಯ್ ಮಾಡಬಹುದು ಎಂದು ಕನಸಿನ ಬೆಟ್ಟ ನಿರ್ಮಿಸಿಕೊಂಡಿರುತ್ತಾರೆ,  ಆ ಜೀವನಕ್ಕಾಗಿ ಹಲವರು ಹಂಬಲಿಸುತ್ತಾರೆ, ತುದಿಗಾಲಲ್ಲಿ ನಿಲ್ಲುತ್ತಾರೆ.

ಸಾಮಾನ್ಯವಾಗಿ ಸಮಯ ಸಿಕ್ಕಾಗಲೆಲ್ಲ ಹೊಸದಾಗಿ ಬಿಡುಗಡೆಯಾದ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಹವ್ಯಾಸ ನನಗೆ ಮೊದಲಿನಿಂದಲೂ ಇದೆ. ಆದರೆ ನೋಡಿದ ಎಲ್ಲಾ ಚಿತ್ರಗಳು ನಮ್ಮ ಮನಸ್ಸಿನ ಅಂತರಾಳಕ್ಕೆ ಹೋಗುವುದಿಲ್ಲ ಹಾಗೂ ನಮ್ಮ ಹೃದಯವನ್ನೇ ಕರಗಿಸುವಂತೆ ಮಾಡುವುದಿಲ್ಲ. ವೀಕ್ಷಿಸಿದ ಸಾವಿರಾರು ಚಿತ್ರಗಳ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಸದಾ ನಮ್ಮ ನೆನಪಿನ ಪುಟಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದು ಬಿಡುತ್ತೇವೆ.

ಇತ್ತಿಚೀಗೆ ನನ್ನನ್ನು ತುಂಬಾ ಆಕರ್ಷಿಸಿ, ಆಲೋಚಿಸುವಂತೆ ಮಾಡಿ, ಹೃದಯ ಸ್ಪರ್ಶಿಸುವಂತೆ ಮಾಡಿದ ಚಿತ್ರ “ಅಮರನ್”. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಲವ್ ಸ್ಟೋರಿ ಮತ್ತು ದೇಶಭಕ್ತಿ ಸಂದೇಶವನ್ನು ಹೊಂದಿರುವ ಚಿತ್ರವಿದು. ಈ ಚಿತ್ರದ ಹೇ ರಂಗುಲೇ, ಹೇ ರಂಗುಲೇ, ನೀ ರಾಕತೋ ಲೋಕಮೇ ರಂಗುಲೇ ಪೊಂಗೇನೆ ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.

ನೈಜ ಘಟನೆಗಳನ್ನು ಆಧರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಬರೆದ “ಇಂಡಿಯಾಸ್ ಮೋಸ್ಟ್ ಫೀಯರ್ ಲೆಸ್, ಟ್ರೂ ಸ್ಟೋರಿಸ್ ಆಫ್ ಮಾಡ್ರನ್ ಮಿಲಿಟರಿ ಹಿರೋಸ್” (India's Most Fearless: True Stories of Modern Military Heroes) ಎಂಬ ಪುಸ್ತಕದ ಕಥೆಯನ್ನಾಧಾರಿಸಿ ನಿರ್ಮಾಣವಾದ ಚಿತ್ರವೇ “ಅಮರನ್”. 

ಅಮರನ್ ಚಿತ್ರವನ್ನು ತಮಿಳಿನ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಿದ್ದು, ನಟ ಶಿವ ಕಾರ್ತಿಕೇಯನ್, ನಟಿ ಸಾಯಿಪಲ್ಲವಿ ಚಿತ್ರದಲ್ಲಿ ನಟಿಸಿದ್ದಾರೆ. ಅಮರನ್ ಮೇಲ್ನೋಟಕ್ಕೆ ಲವ್ ಸ್ಟೋರಿ ಚಿತ್ರ ಎಂದು ಭಾವಿಸಿಕೊಂಡರು, ಪೂರ್ಣ ಚಿತ್ರ ನೋಡಿದ ಮೇಲೆಯೇ ಅರ್ಥವಾಗುವುದು, ಅದರಲ್ಲಿನ ದೇಶಭಕ್ತಿಯ ವಿವಿಧ ಆಯಾಮಗಳು ಹಾಗೂ ಪ್ರೇಮಿಗಳೆಂದರೇ ಈಗೂ ಇರುತ್ತಾರೆಯೇ ಎಂದು.

ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ತಮಿಳುನಾಡಿನ ಮುಕುಂದ್ ವರದರಾಜನ್ ಹಾಗೂ ಆತನ ಪತ್ನಿ ಕೇರಳದ ಇಂದು ರೆಬಿಕಾ ವರ್ಗಿಸ್ ಜೀವನದಲ್ಲಿ ನಡೆದ ನಿಜ ಘಟನೆಗಳನ್ನು ಆಧಾರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಪುಸ್ತಕ ಬರೆದರೆ, ಆ ಪುಸ್ತಕವನ್ನು ಆಧಾರ ಮಾಡಿಕೊಂಡು ರಾಜಕುಮಾರ್ ಪೆರಿಸ್ವಾಮಿ ಅಮರನ್ ಚಿತ್ರ ನಿರ್ದೇಶಿಸಿದ್ದಾರೆ.

ತಮಿಳುನಾಡಿನ ತಾಂಬರಂ ಮೂಲದ ಮುಕುಂದ್ ವರದರಾಜನ್ ಸಾಧಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ಬಿ.ಕಾಂ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಪದವೀಧರರು. ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಿ, ದೇಶಕ್ಕಾಗಿ ಸೇವೆ ಸಲ್ಲಿಸಿ, ಪರಿಪೂರ್ಣ ಜೀವನ ಸಾಗಿಸಬೇಕೆಂಬ ಹಠ ಮುಕುಂದ್ ವರದರಾಜನ್‌ರದ್ದು.

ಮುಕುಂದ್ ವರದರಾಜನ್ ತಾಂಬರಂನಲ್ಲಿರುವ ಮದ್ರಾಸ್ ಕ್ರಿಸ್ಟಿಯನ್ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಮಾಡುವಾಗ ಪರಿಚಯವಾದರೇ ಕೇರಳ ಮೂಲದ ಇಂದು ರೆಬಿಕಾ ವರ್ಗೀಸ್. 

ಮುಕುಂದ್ ವರದರಾಜನ್ ಕಾಲೇಜಿನ ಸ್ನೇಹಿತೆ ಇಂದು ರೆಬಿಕಾ ವರ್ಗೀಸ್ ನ್ನು ಪ್ರೀತಿಸಿ, ಮದುವೆಯಾಗುತ್ತಾರೆ. ಚಿಕ್ಕವಯಸ್ಸಿನಿಂದಲೂ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಗೆ ಕುಟುಂಬದ ಕೆಲವರ ವಿರೋಧದ ನಡುವೆಯು ಮುಕುಂದ್ ವರದರಾಜನ್ ತನ್ನ ಸಂಕಲ್ಪದಂತೆ ಎಲ್ಲಾ ಅಡೆತಡೆ ಮೀರಿ ಭಾರತೀಯ ಸೇನೆಗೆ ಸೇರುತ್ತಾರೆ. ಒಬ್ಬನೇ ಮಗನಾದ್ದರಿಂದ ತಾಯಿಗೆ ಅವರು ಸೇನೆಗೆ ಸೇರುವುದು ಇಷ್ಟವಿರಲಿಲ್ಲ. ತನ್ನ ಮಗ ತನ್ನ ಮಧ್ಯದಲ್ಲೇ ಸಂತೋಷದಿಂದ ಜೀವನ ಸಾಗಿಸಲಿ ಎಂದು ತಾಯಿಯ ಆಕಾಂಕ್ಷೆಯಾಗಿತ್ತು.

ತಾನು ಪ್ರೀತಿಸಿದ ಇಂದು ರೆಬಿಕಾ ವರ್ಗೀಸ್ ಕುಟುಂಬದವರು ಪ್ರಾರಂಭದಲ್ಲಿ ಮುಕುಂದ್ ವರದರಾಜನ್ ಜೊತೆ ಮದುವೆಗೆ ವಿರೋಧಿಸುತ್ತಾರೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಯಾವ ಕ್ಷಣದಲ್ಲಾದರೂ ಪ್ರಾಣಕ್ಕೆ ಸಂಚಕಾರ ಎಂಬ ಭಯದಿಂದ. ಅದರಲ್ಲೂ ಇಂದು ರೆಬಿಕಾ ವರ್ಗೀಸ್ ತಂದೆ ಸೇನೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರಿಂದ ಸೈನಿಕರ ಸಾವು, ನೋವುಗಳ ಬಗ್ಗೆ ಅರಿತಿದ್ದರಿಂದ, ತಮ್ಮ ಮಗಳನ್ನು ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊಡಲು ಅವರಿಗೆ ಸ್ವಲ್ಪವು ಇಷ್ಟವಿರಲಿಲ್ಲ.

ಕೊನೆಗೂ ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ರವರ ಪ್ರೀತಿಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ, ನಿಸ್ವಾರ್ಥವಿದ್ದರಿಂದ ಜಾತಿ, ಧರ್ಮ, ಶ್ರೀಮಂತಿಕೆ ಮೀರಿ ಕುಟುಂಬದವರ  ಒಪ್ಪಿಗೆಯೊಂದಿಗೆ ಮದುವೆಯಾಗುತ್ತಾರೆ.  

ಇಲ್ಲಿ ಗಮನಾರ್ಹ ಅಂಶವೆಂದರೆ ಮುಕುಂದ್ ವರದರಾಜನ್ ಕಾಲೇಜು ವಿದ್ಯಾಭ್ಯಾಸದ ನಂತರ ತಾನು ಪ್ರೀತಿಸಿದ ಇಂದೂ ರೆಬಿಕಾ ವರ್ಗೀಸ್ ರನ್ನು  ಮದುವೆಯಾಗಿ ಸೇನೆಗೆ ಸೇರದೆ ಬದಲಾಗಿ ಯಾವುದಾದರೂ ಕೆಲಸ ಮಾಡಿಕೊಂಡು, ದೊಡ್ಡ ವೇತನ ಪಡೆಯುತ್ತ, ಸ್ವಂತ ಊರಿನಲ್ಲೇ ಕುಟುಂಬದವರೊಂದಿಗೆ ಖುಷಿಯಾಗಿ ಉಳಿದು ಬಿಡಬಹುದಾಗಿತ್ತು. ಆದರೆ ಅವರು ತನ್ನ ಜೀವನದ ಒಂದೇ ಒಂದು ಗುರಿ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಯನ್ನು ಪ್ರೀತಿ ಹಾಗೂ ಕುಟುಂಬದ ವ್ಯಾಮೋಹಕ್ಕಾಗಿ ಬಲಿಕೊಡುವುದು ಸುತಾರಂ ಇಷ್ಟವಿರಲಿಲ್ಲ.

ಹಾಗೆಯೇ ಇಂದೂ ರೆಬಿಕಾ ವರ್ಗೀಸ್ ಗೆ ಮುಕುಂದ್ ವರದರಾಜನ್ ಇಂದಲ್ಲಾ ನಾಳೆ ಖಂಡಿತವಾಗಿ ಭಾರತೀಯ ಸೇನೆಗೆ ಸೇರುತ್ತಾನೆ ಎಂಬುವುದು ಪ್ರೀತಿಸುವಾಗಲೇ ಅರ್ಥವಾಗಿತ್ತು. ಇವರನ್ನು ಮದುವೆಯಾದರೇ ಬೇರೆಯವರಂತೆ ಐಷಾರಾಮಿ ಮತ್ತು ಸುಖ ಜೀವನವನ್ನು ಖುಷಿಯಾಗಿ ಕಳೆಯುವುದು ಕಷ್ಟ ಎಂದು ಅರ್ಥವಾಗಿದ್ದರು, ಕೂಡ ತಾನು ಪ್ರೀತಿಸಿದ ಮುಕುಂದ್ ವರದರಾಜನ್ ಏಕೈಕ ಆಸೆ ಭಾರತೀಯ ಸೇನೆ ಸೇರುವುದು, ಆ ಸಂಕಲ್ಪಕ್ಕೆ ನಾನು ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದು ಹಾಗೂ ತಡೆಯಬಾರದು ಎಂದು ಆಕೆ ಆಲೋಚಿಸಿ ಸೇನೆಗೆ ಸೇರಲು ಪ್ರೋತ್ಸಾಹಿಸುತ್ತ, ಬೆಂಬಲವಾಗಿ ನಿಲ್ಲುತ್ತಾಳೆ.  

ಸೇನೆಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾದರೆ ಅಧ್ಯಯನ ಮಾಡಬೇಕಾದ ಪುಸ್ತಕಗಳನ್ನು ಸ್ವತಃಹ ಇಂದೂ ರೆಬಿಕಾ ವರ್ಗೀಸ್ ಖರೀದಿ ಮಾಡಿ ಮುಕುಂದ ವರದರಾಜನ್ ಗೆ ಕೊಟ್ಟ ಆಕೆಯ ಭಾವಾನಾತ್ಮಕ ಸಂಬಂಧ ಅವಸ್ಮರಣೀಯ.

ಮದುವೆ ನಂತರವೂ ಮುಕುಂದ್ ವರದರಾಜನ್ ವರ್ಷಕ್ಕೊಮ್ಮೆ ಮಾತ್ರ ಪತ್ನಿ, ಮಗಳು ಹಾಗೂ ಕುಟುಂಬದವರನ್ನು ಬಂದು ನೋಡುತ್ತಿದ್ದ. ಬೆಟಾಲಿಯನ್‌ನ ಮುಖ್ಯಸ್ಥನಾಗಿದ್ದರಿಂದ ಊರಿಗೆ ಬರಲು ಅವಕಾಶ ಕಡಿಮೆ ಸಿಗುತ್ತಿತ್ತು. ದೇಶಕ್ಕಾಗಿ ಸೇನೆಯಲ್ಲಿ ದುಡಿಯುತ್ತಿರುವ ಗಂಡ, ಪದೇ ಪದೇ ಬರಲು ಸಾಧ್ಯವಿಲ್ಲ ಎಂದು ಅರಿತಿದ್ದ ಇಂದೂ ರೆಬಿಕಾ ವರ್ಗೀಸ್ ಮುಕುಂದ್ ವರದರಾಜನ್ ಜೊತೆಗಿನ ನೆನಪುಗಳನ್ನೇ ಸದಾ ಮೆಲುಕು ಹಾಕುತ್ತ ಜೀವನ ಸಾಗಿಸುತ್ತಿದ್ದಳು. ದೈಹಿಕವಾಗಿ ಅವರು ಜಮ್ಮಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಮಾನಸಿಕವಾಗಿ ನನ್ನ ಬಳಿಯೇ ಇದ್ದಾರೆ ಎಂದು ಆಕೆ ಮನಸ್ಸಿನಲ್ಲಿ ಭಾವಿಸಿಕೊಂಡು ಜೀವನ ಸಾಗಿಸುತ್ತಿದ್ದದ್ದು, ನಿಜವಾದ ಪ್ರೇಮಿಗಳಿಗೆ ಜ್ವಲಂತ ಉದಾಹರಣೆ.

ಈ ಮಧ್ಯೆ ಸಹದ್ಯೋಗಿಯ ಗನ್ ಮಿಸ್ ಫೈರ್ ಆಗಿ ಮುಕುಂದ್ ವರದರಾಜನ್ ದೇಹಕ್ಕೆ ಬುಲೆಟ್ ತಾಗಿ, ಹಲವು ದಿನಗಳ ಕಾಲ ಆಸ್ಪತ್ರೆ ಸೇರಿ, ಪ್ರಾಣಾಪಾಯದಿಂದ ಪಾರಾಗುತ್ತಾರೆ. ಗನ್ ಮಿಸ್ ಫೈರ್ ಮಾಡಿದ ಸಹೋದ್ಯೋಗಿಗೆ ಯಾವ ಶಿಕ್ಷೆ ಬೇಕಾದರೂ ಕೊಡಿಸಬಹುದಾಗಿತ್ತು. ಆದರೆ ಆತನನ್ನು ರಕ್ಷಿಸುವ ಮೂಲಕ ಮಾನವೀಯತೆ ಸಾರುವ ಜೊತೆಗೆ, ನಾಯಕತ್ವದ ಲಕ್ಷಣ ತೋರಿಸುತ್ತಾರೆ ಮುಕುಂದ್ ವರದರಾಜನ್. 

ದುರ್ದೈವದಿಂದ 2014 ರ ಏಪ್ರಿಲ್ 25 ರಂದು ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ಜೊತೆ ನಡೆದ ಭೀಕರ ಗುಂಡಿನ ಚಕಮಕಿ, ಹೋರಾಟದಲ್ಲಿ ಮುಕುಂದ್ ವರದರಾಜನ್ ದೇಹಕ್ಕೆ ಹಲವು ಗುಂಡುಗಳು ತಾಕಿ, ಜೀವನ್ಮರಣದ ಹೋರಾಟ ನಡೆಸಿ, ಕೊನೆಗೆ ಕೇವಲ ತಮ್ಮ 31 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿ ಅಮರರಾಗುತ್ತಾರೆ.

ಇದ್ದ ಓಬ್ಬನೇ ಮಗನನ್ನು ಹೊಂದಿದ್ದ ಆ ತಂದೆ, ತಾಯಿ ಹಾಗೂ ಇಷ್ಟಪಟ್ಟು ಪ್ರೀತಿಸಿ ಮದುವೆಯಾದ ಗಂಡ, ಆತ್ಮೀಯತೆಯಿಂದ ಕಾಣುತ್ತಿದ್ದ ಅಣ್ಣ, ಮುದ್ದಾಡುತ್ತಿದ್ದ ತಂದೆ, ಇನ್ನು ಬರೀ ನೆನಪು ಮಾತ್ರ ಎಂದು ಗೊತ್ತಾದಾಗ ಆ ಕುಟುಂಬದವರ ನೋವು, ಸಂಕಟ, ಮಾನಸಿಕ ವೇದನೆಯನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಕಣ್ಣಲ್ಲಿ ರಕ್ತ ಹರಿಯುತ್ತದಷ್ಟೇ.

ಭಾರತ ಸರ್ಕಾರವು ಮುಕುಂದ್ ವರದರಾಜನ್‌ರವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ಕೂಡ ನೀಡಿ ಗೌರವಿಸಿದೆ. ತಮಿಳುನಾಡಿನ ಪೈಕಿ ಅಶೋಕ ಚಕ್ರ ಪ್ರಶಸ್ತಿ ಪಡೆದ ನಾಲ್ಕನೇ ವ್ಯಕ್ತಿ ಮುಕುಂದ್ ವರದರಾಜನ್. ತಮಿಳುನಾಡಿನ ಮಿಲಿಟರಿ ಆಫೀಸರ್ ತರಬೇತಿ ಅಕಾಡೆಮಿಯಲ್ಲಿ ಇವರ ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಲಾಗಿದೆ.

ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ಪ್ರೀತಿಯಲ್ಲಿ ನೈತಿಕತೆ ಇತ್ತು. ತಮ್ಮ ಪ್ರೀತಿಯ ಕಾರಣಕ್ಕಾಗಿ ಅವರೆಲ್ಲೂ ಶಿಕ್ಷಣಕ್ಕೆ ಅಡ್ಡಿ ಮಾಡಿಕೊಳ್ಳಲಿಲ್ಲ. ಸಮಾಜ ವಿರೋಧಿಸುವ ರೀತಿ ವರ್ತಿಸಲಿಲ್ಲ. ಬರೀ ಎಂಜಾಯ್ ಮಾಡಲು, ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಮುಖವಾಡ ಧರಿಸಲಿಲ್ಲ. ಪ್ರೀತಿ ಪ್ರೇಮ ಎಂದು ಬರೀ ಜಪಿಸುತ್ತ ಜೀವನದಲ್ಲಿ ಅಂದುಕೊಂಡ ಗುರಿ, ಸಾಧನೆಗಳನ್ನು ಮಧ್ಯದಲ್ಲಿ ಕೈ ಬಿಡಲಿಲ್ಲ. 

ಇಬ್ಬರೂ ಪರಸ್ಪರ ಗುರಿ ಸಾಧನೆಗಾಗಿ ಸಹಕಾರ ಕೊಟ್ಟು ಜೀವನ ಸಾಗಿಸಿದ ಕಾರಣದಿಂದಲೇ ಅವರ ಪ್ರೇಮ ಇನ್ನೂ ಜೀವಂತ ಹಾಗೂ ಚಿರಸ್ಥಾಯಿಯಾಗಿ ಉಳಿದಿರುವುದು. ನನ್ನ ಪ್ರಕಾರ ಇದು ನಿಜವಾದ ಲವ್ ಸ್ಟೋರಿ, ಇದರಿಂದ ಕಲಿಯುವುದು ಹಲವಿದೆ.

ಪ್ರೀತಿ, ಪ್ರೇಮ ಎಂಬುವುದರ ಒಳಾರ್ಥವು ಗೊತ್ತಿರದ, ವಯಸ್ಸು ದಾಟದ ಹಲವರು ಕೇವಲ ಅಟ್ರಾಕ್ಷನ್, ಆಕರ್ಷಣೆ ಹಾಗೂ ಕೇವಲ ಎಂಜಾಯ್ ಮೆಂಟ್ ಹಾಗೂ ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಾರೆ. ದಿನವೂ ಗಂಟೆಗಟ್ಟಲೆ ಮೊಬೈಲ್ ಗಳಲ್ಲಿ ಹರಟೆ ಹೊಡೆಯುತ್ತ, ವಾಟ್ಸಾಪ್ ಚಾಟ್ ಗಳಲ್ಲಿ ಮುಳುಗಿ ಹೋಗಿ ಶಿಕ್ಷಣ, ಜೀವನ, ಕೌಟುಂಬಿಕ ಸಂಬಂಧ, ಉದ್ಯೋಗ ಸೇರಿದಂತೆ ತಮ್ಮ ಲೈಪ್ ನ್ನೇ  ಕಳೆದುಕೊಳ್ಳುವ ಹಲವರು ಅಮರನ್ ಚಿತ್ರ ಒಮ್ಮೆ ನೋಡಬೇಕಿದೆ.

ಪ್ರೀತಿ, ಪ್ರೇಮ ಎಂದರೆ ಅದು ಬರೀ ಎರಡಕ್ಷರದ ಪದಗಳಲ್ಲ, ಕಲ್ಪನೆಗೂ ಸಿಗದ, ನಮ್ಮ ಊಹೆಗೂ ಮೀರಿದ ವಿಷಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸ್ವಾರ್ಥವಿಲ್ಲದೇ, ಹಾದಿ ತಪ್ಪದೇ, ಸಾಧನೆ, ಗುರಿ ಸಾಧಿಸುವ ದಿಕ್ಕಿನತ್ತ ಸಾಗುತ್ತ, ಪರಸ್ಪರ ಸಹಕಾರದೊಂದಿಗೆ ಪ್ರೀತಿಸುವವರಿಗೆ ಬೆಲೆ ಖಂಡಿತಾ ಇದೆ. ಆದರೆ ಇಂದು ಅಂತಹ ಪ್ರೇಮಿಗಳನ್ನು ಬ್ಯಾಟರಿ ಹಾಕಿ ಹುಡುಕಿದರು ಸಿಗುವುದೇ ಅಪರೂಪ.

ಪ್ರೀತಿ ಎಂದರೆ ಬರೀ ಫ್ಯಾಶನ್, ಶೋಕಿ ಅಲ್ಲ, ಅದು ಇಬ್ಬರೂ ವ್ಯಕ್ತಿಗಳ ಅಮೂಲ್ಯ ಜೀವನ. ಟೈಂ ಪಾಸ್ ಗಾಗಿ, ಕಾಟಚಾರಕ್ಕಾಗಿ ಓಡಾಡುವವರನ್ನು ಪ್ರೇಮಿಗಳೆಂದು ಕರೆದರೆ ಅದಕ್ಕಿರುವ ಘನತೆ, ಗಾಂಭೀರ್ಯತೆ ಮಣ್ಣಲ್ಲಿ ಸೇರುತ್ತದೆ ಅಷ್ಟೇ.

ಸೋಮವಾರ, ನವೆಂಬರ್ 18, 2024

ಇಂದು ಬದುಕಿರುವುದು ಸತ್ಯ, ನಾಳೆ ಎಂಬುವುದು ಭ್ರಮೆ..

ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ

ಮೊನ್ನೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (ಜಿ.ಕೆ.ವಿ.ಕೆ) ನಡೆದ ಕೃಷಿ ಮೇಳಕ್ಕೆ ಹೋಗಿದ್ದೆ. ಅಲ್ಲಿ ಸುಮಾರು 75 ವರ್ಷ ವಯಸ್ಸು ದಾಟಿದ ಅಜ್ಜಿಯೊಬ್ಬರು ಚೇಪೆ ಹಣ್ಣು ಮಾರಾಟ ಮಾಡುತ್ತ, ಸಿಕ್ಕರು. ನನಗೂ ಸಮಯವಿದ್ದರಿಂದ ಹಾಗೆ ಆಕೆಯನ್ನು ಮಾತನಾಡಿಸುತ್ತ ಕೂತೆ. ಆಕೆ ಮೂಲತಃ ನಮ್ಮ ಕೋಲಾರ ಜಿಲ್ಲೆಯವರಂತೆ, ಅವರಿಗೆ ಇಬ್ಬರೂ ಗಂಡು ಮಕ್ಕಳು, ಇಬ್ಬರಿಗೂ ಮದುವೆಯಾಗಿದೆ. ಆದರೆ ಅವರ ಮಕ್ಕಳಿಗಾಗಲಿ, ಸೊಸೆಯರಿಗಾಗಲಿ ಈಕೆಯನ್ನು ನೋಡಿಕೊಳ್ಳಲು ಸ್ವಲ್ಪವು ಇಷ್ಟವಿಲ್ಲವಂತೆ. ಆ ಕಾರಣದಿಂದಲೇ ಈಕೆ ಅವರಿಗೆ ಹೊರಯಾಗಬಾರದೆಂದು ಭಾವಿಸಿ, ಮನೆಯಿಂದ ಹೊರಬಂದು ಜೀವನಧಾರಕ್ಕಾಗಿ ಸಣ್ಣ ಟೀ ಅಂಗಡಿ ಮತ್ತು ಚೇಪೆ ಹಣ್ಣನ್ನು ಮಾರಾಟ ಮಾಡುವ ಅಂಗಡಿ ನಡೆಸುತ್ತ, ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. 

ಇಷ್ಟು ವಯಸ್ಸಾದರೂ ಜೀವನದ ಬಗ್ಗೆ ಸ್ವಲ್ಪವೂ ಬೇಸರಿಸಿಕೊಳ್ಳದೇ, ದೇವರನ್ನು ಶಪಿಸದೇ, ಅತ್ಯುತ್ಸಾಹದಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದಿಯಾ ಅಜ್ಜಿ, ನಿಜಕ್ಕೂ ನೀನು ಗ್ರೇಟ್. ನಿನ್ನಂತ ಸ್ವಾಭಿಮಾನಿಗಳು 100 ವರ್ಷ ಬದುಕಬೇಕು ಎಂದು ಹೇಳಿದ್ದೆ ತಡ, ಅದಕ್ಕೆ ಆಕೆ ಹೇಳಿದ ಪ್ರಸಂಗ, ಘಟನೆಯೊಂದು ಎಲ್ಲರೂ ಆತ್ಮವಲೋಕನ, ಆಲೋಚಿಸುವಂತೆ ಮಾಡಿಕೊಳ್ಳುವಂತಿತ್ತು.

ಇಬ್ಬರು ವ್ಯಕ್ತಿಗಳು ತಮ್ಮ ಆಯುಷ್ಯವನ್ನು (ಜೀವಿತಾವಧಿ) ಹೆಚ್ಚಿಸಿಕೊಳ್ಳಲು ಹಲವು ದಿನಗಳ ಕಾಲ ದೀರ್ಘಾವಧಿಯ ತಪಸ್ಸನ್ನು ಮಾಡುತ್ತಾರಂತೆ. ಅವರ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷವಾಗಿ, ನಿಮ್ಮ ಆಸೆ, ಬೇಡಿಕೆಗಳು ಏನಿದೆ ಹೇಳಿ, ಅದನ್ನು ನಾನು ಈಡೇರಿಸುತ್ತೇನೆಂದು ಭರವಸೆ ನೀಡುತ್ತಾರಂತೆ.

ಅದಕ್ಕೆ ಆ ಇಬ್ಬರೂ ದೇವರೇ ನಮಗೆ ದೊಡ್ಡ, ದೊಡ್ಡ ಆಸೆ, ಬೇಡಿಕೆಗಳೇನಿಲ್ಲ. ಆದರೆ ನಮ್ಮಿಬ್ಬರಿಗೂ ಒಂದೇ ಒಂದು ಆಸೆ ಇದೆ. ಅದೆನೆಂದರೆ ನಮಗೆ ಯಾವುದೇ ತೊಂದರೆಯಾಗದೆ, ನಾವು 100 ವರ್ಷ ಜೀವಿಸಬೇಕು, ಬದುಕಬೇಕು. ನಾವಿಬ್ಬರು 100 ವರ್ಷ ಬದುಕುವ ರೀತಿ ಆಯುಷ್ಯವನ್ನು ದಯಪಾಲಿಸು ಎಂದು ಕೇಳುತ್ತಾರೆ. ಅದಕ್ಕೆ ದೇವರು ಸ್ವಲ್ಪ ಹೊತ್ತು ಆಲೋಚಿಸಿ, ಹೆಚ್ಚು ವರ್ಷ ಬದುಕ ಬೇಕೆನ್ನುವುದನ್ನು ಬಿಟ್ಟು ಬೇರೆ ಏನೇ ಆಸೆ ಇದ್ದರೂ ಕೇಳಿ, ಅದನ್ನು ನಾನು ಈಡೇರಿಸುವೆ ಎನ್ನುತ್ತಾರಂತೆ. 

ಅದಕ್ಕೆ ಆ ಇಬ್ಬರೂ, ನಮಗೆ ಬೇರೆ ಯಾವುದೇ ಆಸೆಗಳಿಲ್ಲ, ಬದಲಾಗಿ ಹೆಚ್ಚಿನ ವರ್ಷ ಬದುಕಬೇಕೆನ್ನುವುದೇ ನಮ್ಮ ಏಕೈಕ ಆಶಯ ಎನ್ನುತ್ತಾರೆ. ಅದಕ್ಕೆ ದೇವರು ಪ್ರತಿಕ್ರಯಿಸಿ ದೊಡ್ಡ ಸತ್ಯವೊಂದನ್ನು ಹೇಳುತ್ತೇನೆ, ಧೈರ್ಯವಾಗಿ, ಕಿವಿಕೊಟ್ಟು ಕೇಳಿ. ಅದೇನೆಂದರೆ ನೀವು ಇಬ್ಬರೂ ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಬದುಕುತ್ತಿರಾ. ನಾನು ನಿಮ್ಮ ತಪಸ್ಸಿಗೆ ಮೆಚ್ಚಿ ಏನೇ ವರವನ್ನು ಬೇಕಾದರೂ ಕೊಡಬಹುದು. ಆದರೆ ನಿಮ್ಮ ಆಯುಷ್ಯವನ್ನು ಹೆಚ್ಚಿಸುವ ಶಕ್ತಿ ಮಾತ್ರ ನನಗಿಲ್ಲ. ಅದು ವಿಧಿಲಿಖಿತ ನಿಯಮ. ಒಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು, ಅದನ್ನು ತಪ್ಪಿಸಲು ನಮ್ಮ ಆಯುಷ್ಯವನ್ನು ಬರೆದ ಆ ಬ್ರಹ್ಮ ಬಂದರೂ ಸಾಧ್ಯವಿಲ್ಲ ಎನ್ನುತ್ತಾರೆ. 

ನನಗೆ ಅತ್ಯಂತ ನೋವು, ದುಖಃವೆಂದರೆ ನೀವು ಬದುಕುವುದು ಕೇವಲ ಒಂದು ದಿನ ಮಾತ್ರ ಎಂಬ ವಿಷಯ, ನಿಮ್ಮ ಆಯುಷ್ಯ ರೇಖೆ ನನಗೆ ಸ್ಪಷ್ಟವಾಗಿ ಹೇಳುತ್ತಿದೆ. ಈ ವಿಚಾರ ಕೇಳಿದ ಈ ಇಬ್ಬರೂ ನಾವು ಒಂದೇ, ಒಂದು ದಿನ ಮಾತ್ರ ಬದುಕುವುದೆಂದು ಅರ್ಥವಾಗಿ, ಮನಸ್ಸಿನಲ್ಲಿ ಏನೋ ಆಲೋಚಿಸುತ್ತ, ಕೊರಗುತ್ತ ತಮ್ಮ ಮನೆಯನ್ನು ಸೇರಿಕೊಳ್ಳುತ್ತಾರೆ. 

ಅದರಲ್ಲಿ ಒಬ್ಬ ಅಯ್ಯೋ ನಾನು 100 ವರ್ಷ ಬದುಕಬೇಕು ಎಂದು ಎಷ್ಟೋ ಆಸೆ, ಕನಸು ಕಂಡಿದ್ದೆ. ಆದರೆ ನನ್ನ ಅದೃಷ್ಟ ಸರಿಯಿಲ್ಲ, ನೆಟ್ಟಗಿಲ್ಲ ಎಂದು ಆಲೋಚಿಸುತ್ತ, ಚಿಂತಿಸುತ್ತ ಊಟ, ನೀರು ಕುಡಿಯದೆ, ಚಿಂತಕ್ರಾ0ತನಾಗಿ, ವಿಪರಿತ ಜಿಗುಪ್ಸೆ ಹೊಂದಿ, ಆ ರಾತ್ರಿಯೇ ಈತ ಹೃದಯಘಾತದಿಂದ ನಿಧನ ಹೊಂದುತ್ತಾನೆ. 

ಆದರೆ ಮತ್ತೊಬ್ಬನು ನಾನು ಒಂದು ದಿನದ ಮಟ್ಟಿಗೆ ಮಾತ್ರ ಬದುಕುವುದು ಎನ್ನುವ ವಿಷಯ ನನಗೆ ಮೊದಲೆ ತಿಳಿದಿದ್ದು ಒಳ್ಳೆಯದಾಯ್ತು, ಕನಿಷ್ಟ ಈ ಒಂದು ದಿನವನ್ನಾದರೂ ಖುಷಿಯಿಂದ ಕಳೆಯಬೇಕು ಎಂದು ತೀರ್ಮಾನಿಸಿದ. ತನಗೆ ಇಷ್ಟವಾದ ಊಟ ಮಾಡಲು ಹೋಟೆಲ್ ಹೋಗಿ ತನಗೆ ಏನೇನೂ ಇಷ್ಟವೋ ಆ ಎಲ್ಲಾ ಊಟ, ಸಿಹಿ, ತಿಂಡಿ ಸವಿಯುತ್ತಾನೆ. ತನ್ನ ಆತ್ಮೀಯ ಸ್ನೇಹಿತರನ್ನು ಖುದ್ದು ಭೇಟಿ ಮಾಡಿ, ಮಾತನಾಡಿಸಿಕೊಂಡು ಬರುತ್ತಾನೆ. ಮತ್ತೆ ಕೆಲವರನ್ನು ಪೋನ್ ಮೂಲಕ ಸಂಪರ್ಕಿಸುತ್ತಾನೆ. ಹೊಸ ಬಟ್ಟೆ ಧರಿಸಿ, ತನಗೆ ಇಷ್ಟವಾದ ಹತ್ತಿರದಲ್ಲಿರುವ ಸ್ಥಳವನ್ನು ಹೋಗಿ ವೀಕ್ಷಿಸಿಕೊಂಡು ಸ್ಥಳದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾನೆ. ಆ ಒಂದು ದಿನದ ಮಟ್ಟಿಗೆ ಏನೆಲ್ಲಾ ಅನುಭವಿಸಲು ಸಾಧ್ಯವೇ ಅವೆಲ್ಲವನ್ನು ಆಸ್ವಾಧಿಸುತ್ತಾನೆ. 

ಆತ ಒಂದು ದಿನ ಮಾತ್ರ ತಾನು ಬದುಕುವುದೆಂದು ಆಲೋಚಿಸಿ, ತನ್ನ ಜೀವನದಲ್ಲಿ ಎಂದು ಕಾಣದ ಸಂತೋಷ, ಸುಖವನ್ನು ಆ ಒಂದು ದಿನ ಮಾತ್ರ ಕಾಣಲು ಪ್ರಯತ್ನಿಸುತ್ತಾನೆ. ಎಲ್ಲವನ್ನು ನೋಡಿಕೊಂಡು ರಾತ್ರಿಗೆ ಮನೆಗೆ ಬಂದು ಸ್ವಲ್ಪಹೊತ್ತು ತನಗೆ ಇಷ್ಟವಾದ ಕಾರ್ಯಕ್ರಮವನ್ನು ಟಿ.ವಿಯಲ್ಲಿ ನೋಡಿ, ಬೇಗ ಮಲುಗುತ್ತಾನೆ. ಹೇಗಿದ್ದರೂ ನಾಳೆಯಿಂದ ನಾನು ಬದುಕಿರುವುದಿಲ್ಲ, ಇವತ್ತು ರಾತ್ರಿ ಖುಷಿಯಾಗಿ ಹೆಚ್ಚಿನ ನಿದ್ರೆ ಮಾಡಬೇಕು ಎಂದು ನಿದ್ರೆಗೆ ಜಾರುತ್ತಾನೆ.

ಆದರೆ ಬೆಳಗ್ಗೆ ಆತನಿಗೆ ನಿದ್ರೆಯಿಂದ ಎಚ್ಚರವಾಗುತ್ತದೆ. ಅರೆ ನಾನು ರಾತ್ರಿಯೇ ನಿದ್ದೆಯಲ್ಲಿ ಸಾಯಬೇಕಿತ್ತಲ್ಲವೇ, ಆದರೆ ಇನ್ನು ಬದುಕಿದೇನಲ್ಲಪ್ಪ, ಇದೇನು ವಿಚಿತ್ರ ಎಂದು ದೇವರನ್ನು ಕೇಳಿದ. ಅದಕ್ಕೆ ದೇವರು ಪ್ರತ್ಯಕ್ಷವಾಗಿ ನೋಡು ನಿನಗೆ ಮತ್ತು ನಿನ್ನ ಸ್ನೇಹಿತ ಇಬ್ಬರಿಗೂ ಹೆಚ್ಚಿನ ವರ್ಷಗಳೇ ಆಯುಷ್ಯ ಇತ್ತು. ಆದರೆ ನಾನು ನಿಮ್ಮನ್ನು ಪರೀಕ್ಷಿಸಲು, ಜೀವನದ ಮೌಲ್ಯವನ್ನು ಮನವರಿಕೆ ಮಾಡಲು, ನೀವು ಇಬ್ಬರೂ ಒಂದೇ ದಿನದ ಮಟ್ಟಿಗೆ ಮಾತ್ರ ಬದುಕುವುದು, ನಿಮ್ಮಿಬ್ಬರಿಗೂ ಕೇವಲ ಒಂದೇ ಒಂದು ದಿನ ಮಾತ್ರ ಆಯುಷ್ಯ ಇದೆ ಎಂದು ಸುಳ್ಳು ಹೇಳಿದೆ. 

ಆದರೆ ನಿನ್ನ ಸ್ನೇಹಿತ ತಾನು ಒಂದು ದಿನ ಮಾತ್ರ ಬದುಕುವುದೆಂದು ವಿಪರಿತ ತಲೆ ಕೆಡಿಸಿಕೊಂಡು, ಆಲೋಚಿಸಿ, ಆಲೋಚಿಸಿ, ಕಂಗೆಟ್ಟು ಆವತ್ತು ರಾತ್ರಿಯೇ ಹೃದಯಘಾತದಿಂದ ಕೊನೆ ಉಸಿರೆಳೆದ. 

ಆದರೆ ನೀನು ಒಂದು ಮಾತ್ರ ಬದುಕುವುದೆಂದು ಗೊತ್ತಾದರೂ, ಆ ಒಂದು ದಿನವನ್ನಾದರೂ ಖುಷಿಯಿಂದ ಕಳೆದೆ. ಇಷ್ಟವಾದ ಊಟ ಸವಿದೆ, ನಿನ್ನ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಿ, ಇಷ್ಟವಾದ ಜಾಗಕ್ಕೆ ಭೇಟಿ ಕೊಟ್ಟು ಬಂದೆ. ವಿಪರ್ಯಾಸವೆಂದರೆ ಈ ಹಿಂದೆ ನೀನು ಹತ್ತಾರು ವರ್ಷ ಬದುಕುತ್ತೆನೆಂದು ಭಾವಿಸಿ, ಪ್ರತಿದಿನವನ್ನು ದುಃಖದಿಂದ, ಆಲೋಚಿಸುತ್ತ, ಸರಿಯಾಗಿ ಬಳಸಿಕೊಳ್ಳಲು ವಿಫಲವಾದೆ. ಆದರೆ ಒಂದು ದಿನದಲ್ಲಿ ಸಾಯುತ್ತೇನೆಂದು ಗೊತ್ತಾದಾಗ ಜ್ಞಾನೋದಯವಾಗಿ ಈ ಒಂದು ದಿನವನ್ನು, ನಿನ್ನ ಇಡೀ ಜೀವನದಲ್ಲಿ ಎಂದು ಕಾಣದ ಸಂತೋಷ, ಸಂತಸದಿ0ದ ಕಳೆದೆ. 

ಇದನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡದೆ ಪ್ರತಿದಿನವನ್ನು ಖುಷಿಯಿಂದ ಬದುಕುವುದನ್ನು ಕಲಿ, ಆಗ ನಿನ್ನ ಜೀವನಕ್ಕೆ ಅರ್ಥ ಬರುತ್ತದೆ. ನಿನಗೆ 100 ವರ್ಷ ಆಯುಷ್ಯ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಬದುಕಿದ ಅಷ್ಟು ದಿನವನ್ನು ಸಂತೋಷ, ನೆಮ್ಮದಿಯಿಂದ ಕಳೆಯುವುದನ್ನು ಮೊದಲು ಪ್ರಾರಂಭಿಸು ಎಂದು ದೇವರು ಆತನಿಗೆ ಜೀವನದ ಒಳಾರ್ಥವನ್ನು ವಿವರಿಸಿ, ಕಣ್ತೆರುಸುತ್ತಾರೆ.

ಜಗತ್ತಿನ ಅತ್ಯಂತ ವಾಸ್ತವ ಸತ್ಯವೆಂದರೆ, ಈಗ ಬದುಕಿರುವವರು ಮುಂದಿನ ಸೆಕೆಂಡ್ ನಲ್ಲಿ ಬದುಕಿರುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ, ವ್ಯಾರಂಟಿ ಇಲ್ಲ. ಮನುಷ್ಯನದ್ದು ಒಂಥರಾ ಅತ್ರಂತ ಜೀವನ, ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬುವುದನ್ನು ಅರಿಯದೇ ಬದುಕುತ್ತೇವೆ.

ಆಪ್ಯಲ್ ಕಂಪನಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಒಂದು ಮಾತೇಳಿದ್ದರು, If you live each day as it was your last, someday you'll most certainly be right.

ಅಂದರೆ ಪ್ರತಿದಿನ ನಾವು ಇಂದೇ ನಮ್ಮ ಕೊನೆ ದಿನ ಎಂದು ಭಾವಿಸಿ ಬದುಕಬೇಕಂತೆ. ಆಗ ಆ ಒಂದು ದಿನವನ್ನಾದರೂ ಖುಷಿ, ಸಂತೋಷದಿ0ದ ಕಳೆಯುತ್ತೇವೆ. ಅತಿಯಾದ ದುರಾಸೆಗಳಿಗೆ ಒಳಗಾಗುವುದಿಲ್ಲ, ಗರ್ವ, ಅಹಂಕಾರಗಳು ನಮ್ಮ ಸಮೀಪ ಸುಳಿಯುವುದಿಲ್ಲ. ಆ ಒಂದು ದಿನವನ್ನು ಕಾಲಹರಣ ಮಾಡದೇ, ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಗುರಿ, ಸಾಧನೆಯ ಶಿಖರವೇರಲು ಪರಿಶ್ರಮ ಪಡುತ್ತೇವೆ. 

ಇಂದೇ ನಮ್ಮ ಕೊನೆ ದಿನವೆಂದರೆ, ನಮ್ಮಲ್ಲಿ ಅಗಾಧ ಬದಲಾವಣೆಗಳು ಸಹಜವಾಗಿಯೇ ಆಗುತ್ತವೆ ಎಂಬುವುದು ಸ್ಟೀವ್ ಜಾಬ್ಸ್ ರವರ ವಾಕ್ಯದಲ್ಲಿರುವ ಆಂತರಿಕ ಅಂಶ.

ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ಬದುಕಿದಷ್ಟು ದಿನ ಎಷ್ಟರ ಮಟ್ಟಿಗೆ ಆ ದಿನಗಳನ್ನು ಸಂತೋಷದಿ0ದ ಕಳೆದಿದ್ದೇವೆ ಎನ್ನುವುದೇ ನಮಗೆ ಅಗತ್ಯ. ಈಗಂತೂ ನಮ್ಮಲ್ಲಿ ತುಂಬಿರುವ ಸ್ವಾರ್ಥ, ದುರಾಸೆ, ಸಮಸ್ಯೆಗಳ ಬಗ್ಗೆ ಅತಿಯಾದ ಚಿಂತನೆಯಿ0ದ ಪ್ರತಿದಿನವೂ ವ್ಯರ್ಥವಾಗಿ ಕಳೆದು ಹೋಗುತ್ತ, ನಮ್ಮ ಅರಿವಿಗೆ ಬರದೇ ನಮ್ಮ ಜೀವನದ ಬಹಪಾಲು ಎಲ್ಲಾ ದಿನಗಳು ಕಣ್ಮರೆಯಾಗುತ್ತಿವೆ.

ನಮ್ಮಲ್ಲಿ ಅತಿಯಾದ ಆಸೆ, ದುರಾಸೆ, ಅಹಂಕಾರ ಸೃಷ್ಟಿಯಾಗಲು ಕಾರಣ ನಾವು ಹತ್ತಾರು ವರ್ಷ ಬದುಕುತ್ತೇವೆಂಬ ಏಕೈಕ ಉದ್ದೇಶದಿಂದ. ಆದರೆ ಈಗ ಬದುಕಿರುವವರು ಮುಂದಿನ ಸೆಕೆಂಡ್ ನಲ್ಲಿ ಈ ಭೂಮಿಯಿಂದಲೇ ಕಣ್ಮರೆಯಾಗಬಹುದು, ಯಾರು ತಾನೇ ಊಹಿಸಲು, ಹೇಳಲು ಸಾಧ್ಯ.

ನಾಳೆ ನಾನು ಬದುಕಿರುವುದಿಲ್ಲ ಎಂದು ಭಾವಿಸಿಕೊಂಡು ನೋಡಿ, ಆಗ ನಮ್ಮಲ್ಲಿ ಆಸೆಗಳ ಪ್ರಮಾಣ ಸಹಜವಾಗಿಯೇ ಗಣನೀಯವಾಗಿ ಕುಸಿಯುತ್ತವೆ. ಹಣ, ಆಸ್ತಿ, ಜಮೀನು, ಬಂಗಾರ ಎಲ್ಲವೂ ಶೂನ್ಯಕ್ಕೆ ಸಮಾನ ಎಂಬ ಭಾವನೆ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ನಾನೇ ಇರದೇ ಮೇಲೆ ಈ ಸಂಪತ್ತು, ಐಶ್ವರ್ಯಗಳಿಸಿ ಬರುವುದಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಉದ್ಬವವಾಗುತ್ತದೆ.

ಪ್ರತಿನಿತ್ಯವು ಕಚೇರಿಯ ಒತ್ತಡ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಪಿಸುತ್ತ, ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ ಸಮಸ್ಯೆಗಳ ಸಾಗರಗಳ ಬಗ್ಗೆ ಅತಿಯಾಗಿ ಆಲೋಚಿಸುವುದು ಮೂರ್ಖರ ಲಕ್ಷಣ. ಪ್ರತಿದಿನವನ್ನು ಸಪ್ಪೆಯಾಗಿ ಕಳೆದು, ಕೂರುವ ಬದಲು, ಭಗವಂತ ನಮಗೆ ನೀಡಿರುವುದರಲ್ಲೇ ಸಂತೋಷ, ಸಂತಸವನ್ನು ಕಾಣಬೇಕಿದೆ. ಸ್ನೇಹಿತರೊಂದಿಗೆ, ಕುಟುಂಬದವರೊ0ದಿಗೆ ಅನ್ಯೋನ್ಯವಾಗಿ ಬಾಳಬೇಕಿದೆ. ಇಂದಿನ ದಿನವನ್ನು ನಾವು ಸಂತೋಷದಿ0ದ ಕಳೆಯುಲು ಸಾಧ್ಯವಾಗಲಿಲ್ಲ ಎಂದರೆ, ನಾಳೆ ದಿನವನ್ನು ಅದ್ಯಾವ ರೀತಿ ಸಂತೋಷದಿ0ದ ಕಳೆಯುತ್ತೇವೆ..? 

ನಮಗೆ ಇರುವುದರಲ್ಲೇ ಸರಳವಾಗಿ ಜೀವನ ಸಾಗಿಸಿ, ಪ್ರತಿದಿನವನ್ನು ಆರ್ಥಗರ್ಭಿತವಾಗಿ ಬದುಕುವುದನ್ನು ನಾವು ಕಲಿಯುವುದು ಯಾವಾಗ..? ಇಂದು ನಾನಿದ್ದೇನೆ ಎನ್ನುವುದು ಸತ್ಯ. ನಾಳೆ ಇರುತ್ತೇನೆ ಎನ್ನುವುದು ಕೇವಲ ಭ್ರಮೆ ಮತ್ತು ಕಲ್ಪಿತ. ಆ ಕಾರಣಕ್ಕಾಗಿಯೇ ಇಂದಿನ ದಿನವನ್ನು ಖುಷಿಯಾಗಿ ಸ್ವೀಕರಿಸಿ, ಅನುಭವಿಸಿ, ನಾಳೆ ದಿನವನ್ನು ನಾಳೆ ನೋಡಿಕೊಳ್ಳೋಣ, ನಾಳೆ ಏನೋ ಆಗೋಗುತ್ತದೆ ಎಂದು, ಇಂದಿನ ದಿನವನ್ನು ಬೇಸರದಿಂದ ಕಳೆಯುವ ಮನಸ್ಥಿತಿ ಕೊನೆಗಾಣಬೇಕಿದೆ.

ಅಂದ ಹಾಗೆ ನನಗೆ ಪ್ರತಿದಿನವು, ಪ್ರತಿನಿಮಿಷವು ಬಹಳ ಇಷ್ಟ ಮತ್ತು ಇಂಪಾರ್ಟೆ0ಟ್. ಯಾಕಂದ್ರೆ ನಾಳೆ ಇದೆ ಅನ್ನೋದು ನನಗೆ ಗೊತ್ತಿಲ್ಲ. ಇಂದು ರಾತ್ರಿ ಮಲುಗುತ್ತೇವೆ, ನಾಳೆ ಬೆಳಗ್ಗೆ ನಿದ್ದೆಯಿಂದ ಎದ್ದೇಳದಿದ್ದರೇ..? ಅದೇಕ್ಕೆಳುವುದು ನಿಮ್ಮ ಪ್ರತಿದಿನವನ್ನು ಆನಂದಿಸಿ, ಆಹ್ಲಾದಿಸಿ, ಖುಷಿಯಾಗಿರಿ. So let's enjoy every moment in your life.

ಭಾನುವಾರ, ಏಪ್ರಿಲ್ 7, 2024

ವಿಧಿ ಬರಹದ ಕ್ರೂರತೆಯ ಮಧ್ಯೆ ಅರಳಿದ "ಬದುಕು"..

⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ

ಕೆಲವರ ಜೀವನವೇ ಹಾಗೆ, ಸಂತೋಷಕ್ಕಿಂತ ದುಃಖವನ್ನೇ ಸದಾ ಅನುಭವಿಸಿ, ಬರೀ ನೋವಿನ ಜೊತೆ ಬದುಕು ಸಾಗಿಸುವ ಸ್ಥಿತಿ, ಅವರದ್ದು. ಅಂತವರನ್ನು ಕಂಡರೆ ಮನಸ್ಸಿಗೆ ಆಗುವ ನೋವು, ಬೇಸರ ಅಷ್ಟಿಷ್ಟಲ್ಲ. ಅವರ ನೋವು, ಸಂಕಟ, ವೇದನೆ, ದುಃಖ, ಕಷ್ಟದ ಸನ್ನಿವೇಶಗಳನ್ನು ನೋಡಿದರೆ, ಬದುಕು ಎಷ್ಟೊಂದು ದುಸ್ಥರ, ವಿಧಿ ಬರಹ ಇಷ್ಟೊಂದು ಕ್ರೂರಿಯೇ ಎಂದು ಅನ್ನಿಸದೆ ಇರಲಾರದು. ಕೆಲವರ ಜೀವನ ಇಷ್ಟೊಂದು ಸಮಸ್ಯೆಗಳ ಆಗರದಿಂದ ಕೂಡಿರುತ್ತದೆಯೇ ಎಂದು ಊಹಿಸಲು ಕೂಡ ಅಸಾಧ್ಯ. ಆ ಮಟ್ಟಿಗೆ ಅವರ ಜೀವನ ಕಣ್ಣೀರಿನ ನೋವಿನಲ್ಲಿ ಮುಳುಗಿ ಹೋಗಿ, ಅಂಧಕಾರದಲ್ಲಿ ಸೇರಿರುತ್ತದೆ.

ಆದರೆ ಅದನ್ನು ಅವರು ಎಂದಿಗೂ, ಯಾರಿಗೂ ಹೇಳಿಕೊಳ್ಳುವುದಿಲ್ಲ. ಹಾಗೇನಾದರೂ ಹೇಳಿಕೊಳ್ಳೊಣವೆಂದರೆ ಯಾರು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಏಕೆಂದರೆ ಅವರನ್ನು ಕಷ್ಟದ ಸರಮಾಲೆ ಸುತ್ತುವರೆದಿರುವುದರಿಂದ ಯಾರು ತಾನೇ ಹತ್ತಿರಕ್ಕೆ ಹೋಗಲು ಪ್ರಯತ್ನಿಸುತ್ತಾರೆ, ಇಷ್ಟಪಡುತ್ತಾರೆ ಹೇಳಿ. ಆದರೂ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಕಳೆಗುಂದುವುದಿಲ್ಲ. ನಾವು ದುರದೃಷ್ಟವಂತರು ಎಂದು ಯಾವಾಗಲೂ ಭಾವಿಸುವುದಿಲ್ಲ, ವಿಧಿಗೆ ಸವಾಲಾಕಿ ಖುಷಿಯಿಂದ ಜೀವನ ನಡೆಸುತ್ತಾರಲ್ಲ, ಅದೇ ಅವರ ಆತ್ಮಶಕ್ತಿ, ಧೈರ್ಯ, ಛಲ, ಬಲ, ವಿಶ್ವಾಸ.

ನಿಜ ನಾವು ಪ್ರತಿನಿತ್ಯವು ದೇವರನ್ನು ಶಪಿಸುತ್ತೇವೆ, ದೇವರು ನನ್ನನ್ನು ಶ್ರೀಮಂತನನ್ನಾಗಿ ಮಾಡಲಿಲ್ಲ. ನನಗೆ ದೊಡ್ಡ ದೊಡ್ಡ ಹುದ್ದೆ ಕೊಡಿಸಲಿಲ್ಲ. ಲಕ್ಷಗಟ್ಟಲೆ ಸಂಬಳದ ನೌಕರಿ ಸಿಗುವಂತೆ ಮಾಡಲಿಲ್ಲ. ದೊಡ್ಡದಾದ ಮನೆಯ ಮಾಲೀಕನನ್ನಾಗಿಸಲಿಲ್ಲ. ಕಾರಿನ ಆಸೆ ಈಡೇರಿಸಲಿಲ್ಲ. ನನ್ನನ್ನು ಸುಂದರವಾಗಿ ಸೃಷ್ಟಿ ಮಾಡಲಿಲ್ಲ. ಹತ್ತಾರು ಎಕರೆ ಜಮೀನಿನ ಒಡೆಯನಾಗಲಿಲ್ಲ. ದೇವರು ನನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಲಿಲ್ಲ ಎಂದು ದೇವರ ಪೋಟೋ ಕಂಡಾಗಲೆಲ್ಲ ಅದೆಷ್ಟು ಬಾರಿ ಬೈಕೊಳ್ಳುತ್ತೇವೋ ಗೊತ್ತಿಲ್ಲ. 

ವಾಸ್ತವವೆಂದರೆ ನಮ್ಮಲ್ಲಿ ಎಷ್ಟೇ ಹಣವಿದ್ದರೂ ನಮಗೆ ಸಾಲದು, ಎಷ್ಟೇ ಸಂಬಳ ಬಂದರೂ ತೃಪ್ತಿಯಿಲ್ಲ. ಎಷ್ಟೇ ದೊಡ್ಡ ಮನೆಯಿದ್ದರು ಖುಷಿಯಿಲ್ಲ. ಎಷ್ಟೇ ಜಮೀನಿದ್ದರೂ ನೆಮ್ಮದಿ ಇಲ್ಲ. ಅಷ್ಟರ ಮಟ್ಟಿಗೆ ಅಪರಿಮಿತ ಬಯಕೆಗಳಿಂದ ಜೀವನದಲ್ಲಿ ಎಲ್ಲವೂ ಇದ್ದರೂ, ಏನೇನೂ ಇಲ್ಲದಂತೆ ಬದುಕುತ್ತೇವೆ, ಅದು ನಿರುತ್ಸಾಹ, ನಿರಾಶವಾದದಿಂದ ಎಂಬ ಸತ್ಯಾಂಶ ಕಣ್ಣಿಗೆ ಕಾಣುತ್ತದೆ.

ನಿಮಗೊಂದು ಘಟನೆ ಹೇಳುತ್ತೇನೆ ಕೇಳಿ, ಆಕೆಗೆ ತಿಂಗಳಿಗೆ ಬರುವುದು ಕೇವಲ 1200 ರೂ. ವಿಕಲಚೇತನ ಪಿಂಚಣಿ. ಅದರಲ್ಲಿಯೇ ತನ್ನ ಇಡೀ ಆಸೆಗಳೆಲ್ಲವನ್ನೂ ಪೂರೈಸಿಕೊಂಡು, ಉಳಿತಾಯ ಮಾಡಬೇಕು. ಆಕೆ ಹೆಸರು ಲಲಿತ, ಇತ್ತಿಚೀಗೆ ಪರಿಚಯವಾದ ಹುಡುಗಿ. ಆಕೆ ವಿಕಲಚೇತನಳು. ಮೂಲತಃ ಕೋಲಾರ ತಾಲ್ಲೂಕಿನ ಹಳ್ಳಿಯವಳು. ಎರಡು ಕಣ್ಣುಗಳ ದೃಷ್ಟಿ ಸರಿಯಾಗಿ ಕಾಣುವುದಿಲ್ಲ. ಕಣ್ಣಿಗೆ ತೀರ ಹತ್ತಿರದಿಂದ ನೋಡಿದರೆ ಮಾತ್ರ ಅಕ್ಷರಗಳನ್ನು ಓದುತ್ತಾಳೆ. ದೂರದಿಂದ ನೋಡಿದರೆ ಒಂದಕ್ಷರವು ಕಾಣುವುದಿಲ್ಲ.

ಲಲಿತ ವಯಸ್ಸು 19 ವರ್ಷವಿರಬಹುದು. ಪಿಯುಸಿ ಓದಿದ್ದಾಳೆ. ತಂದೆ, ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ತೀರ ಬಡತನ ಕುಟುಂಬ. ಚಿಕ್ಕಂದಿನಿಂದಲೇ ಆಕೆಗೆ ಎರಡು ಕಣ್ಣುಗಳ ದೃಷ್ಟಿ ಸಮಸ್ಯೆ ಇದೆ. ಆದರೂ ಆಕೆ ತನಗೆ ಎರಡು ಕಣ್ಣು ಕಾಣಿಸುವುದಿಲ್ಲ ಎಂಬ ನೋವನ್ನು ಮರೆತು ಜೀವಿಸುತ್ತಿದ್ದಾಳೆ. 

ಏನಮ್ಮಾ ಲಲಿತ ಎಂದರೆ, ಏನ್ಮಾಡುವುದು ಸಾರ್, ನನಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ಅಳುತ್ತಾ, ನೋವಿನಿಂದ ಕೂತರೆ ಜೀವನದ ಬಗ್ಗೆ ಜಿಗುಪ್ಸೆ ಬಂದು ಬೇಸರವಾಗುತ್ತದೆ. ನನಗೆ ಕಣ್ಣುಗಳು ಕಾಣದಿರಬಹದು, ಆದರೆ ಬದುಕಿನ ಬಗ್ಗೆ ನನಗೆ ಬೇಸರವಿಲ್ಲ. ಕಾರಣ ನನಗಿಂತ ಕಷ್ಟದಲ್ಲಿ ಹಲವರಿದ್ದಾರೆ, ಅವರ ಕಷ್ಟಗಳ ಮುಂದೆ ನನ್ನ ಸಮಸ್ಯೆ ತುಂಬಾ ಚಿಕ್ಕದು ಎಂಬ ಆಕೆಯ ಅರ್ಥಗರ್ಭಿತ ಮಾತಿಗೆ ಏನು ಹೇಳಲು ಸಾಧ್ಯ..?

ಕಷ್ಟದಲ್ಲಿದ್ದರು ಆಕೆಯ ನಗುವಿನ ಗುಣ, ಮುಗ್ದತೆ, ಭವಿಷ್ಯದಲ್ಲಿ ಖಂಡಿತಾ ಒಳ್ಳೆಯದ್ದಾಗುತ್ತದೆ ಎಂಬ ಆಕೆಯ ಆಶಾವಾದ, ನಮ್ಮನ್ನೇ ಆಶ್ಚರ್ಯ, ಆತ್ಮವಲೋಕನ ಪಡುವಂತೆ ಮಾಡುತ್ತದೆ.

ಇನ್ನೊಂದು ಘಟನೆ ಕೇಳಿ, ಆಕೆಯ ಹೆಸರು ರಚನಾ, ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಯವಳು. ಈಕೆಯು ವಿಕಲಚೇತನಳು. ಈಕೆಗೆ ಎರಡು ಕಾಲುಗಳು ಸ್ವಾಧೀನದಲ್ಲಿ ಇಲ್ಲ. ವಾಕರ್ ಸಹಾಯವಿಲ್ಲದೆ ನಡೆಯಲು ತುಂಬಾ ಕಷ್ಟ. ಬಿ.ಕಾಂ ಪದವೀಧರೆ. ಸರ್ಕಾರದಿಂದ ಬರುವ ಅಲ್ಪಸ್ವಲ್ಪ ಪಿಂಚಣಿಯೇ ಈಕೆಗೂ ಆಧಾರ. ಆದರೆ ಜೀವನದ ಬಗ್ಗೆೆ ಎಂದೂ ನಿರುತ್ಸಾಹ ಪಟ್ಟಿಲ್ಲ. ಪ್ರತಿದಿನವೂ 3 ಬಸ್ ಹಿಡಿದು ಕಾಲೇಜಿಗೆ ಹೋಗುತ್ತಾಳೆ. 

ಸಾಧನೆ ಮಾಡಲು ಕಾಲಿನ ಅಗತ್ಯವೇನಿದೆ ಸಾರ್, ಎಷ್ಟೋ ಜನ ಕೈ, ಕಾಲು ಸರಿಯಾಗಿರುವವರು ಕೂಡ ಜೀವನದಲ್ಲಿ ಏನು ಮಾಡದೇ ವ್ಯರ್ಥವಾಗಿ ಬದುಕು ಕಳೆದು ಬಿಡುತ್ತಾರೆ. ಆದರೆ ನಾನು ಹಾಗಲ್ಲ, ನನಗೆ ಕಾಲಿಲ್ಲ ಎಂದು ಅಳುತ್ತ ಕೂತರೆ ನೋಡವವರು ಅನುಕುಂಪ ವ್ಯಕ್ತಪಡಿಸಬಹುದೆ ಹೊರತು ನನಗೆ ಬರುವ ಲಾಭವೇನಿಲ್ಲ. ದೇವರು ನನಗೆ ಕಾಲು ನೀಡದಿರಬಹುದು, ಆದರೆ ಸಾಧನೆ ಮಾಡಬೇಕೆಂಬ ಆಲೋಚನೆ ಮಾತ್ರ ದುಪ್ಪಟ್ಟು ನೀಡಿದ್ದಾನೆ. 

ಜೀವನದಲ್ಲಿ ಒಂದಲ್ಲಾ ಒಂದು ದಿನ ನಮ್ಮ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವ ರೀತಿಯ ಸಾಧನೆ ಮಾಡೇ ಮಾಡುತ್ತೇನೆ ಎಂಬ ಆಕೆಯ ಅಚಲ ವಿಶ್ವಾಸದ ಮುಂದೆ ಮರು ಪ್ರಶ್ನೆ ಹಾಕಲು ಸಾಧ್ಯವೇ.

ಹಾಗೆಯೇ ಪ್ರಶಾಂತ್ ಎಂಬ ಹುಡುಗ ಸಿಕ್ಕಿದ್ದ. ಆತನದ್ದು ಕೋಲಾರದ ವೇಮಗಲ್ ಬಳಿಯ ಹಳ್ಳಿಯವನು. ಎಲ್ಲರಂತೆ ಚೆನ್ನಾಗಿದ್ದ, ಆದರೆ ಒಂದು ದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದು ಒಂದು ಕೈಯನ್ನು ಕಳೆದುಕೊಳ್ಳುತ್ತಾನೆ. ಇತನು ಓದಿರುವುದು ಪಿಯುಸಿ. ಪದವಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇದ್ದರೂ ಬಡತನದಿಂದ ಓದು ಮುಂದುವರೆಸಲು ಸಾಧ್ಯವಾಗಲಿಲ್ಲ. ಈತನ ತಂದೆ ನಿಧನ ಹೊಂದಿ 7 ವರ್ಷವಾಗಿದೆ. ಈಗ ಒಂದು ಸಣ್ಣ ಕಚೇರಿಯಲ್ಲಿ 6 ಸಾವಿರಕ್ಕೆ ಉದ್ಯೋಗಕ್ಕೆ ಸೇರಿದ್ದಾನೆ. ಬರುವ ಅಲ್ಪ ಸಂಬಳದಲ್ಲೇ ವಯಸ್ಸಾದ ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸಬೇಕು, ಜೊತೆಗೆ ಇವರ ತಂದೆ ಬದುಕಿದ್ದಾಗ ಮಾಡಿದ ಸಾಲಗಳನ್ನು ತೀರಿಸುವ ಹೊಣೆಗಾರಿಕೆ ಬೇರೆ ಇತನ ಮೇಲಿದೆ. ಇತನ ಕಷ್ಟಗಳನ್ನು ನೋಡಿ ಸಂಬಂಧಿಕರು ಯಾರು ಹತ್ತಿರ ಸುಳಿಯುವುದಿಲ್ಲ.

ಆದರೂ ಇತನಿಗೆ ಜೀವನದ ಬಗ್ಗೆ ಇರುವ ಆಸೆ, ಆಕಾಂಕ್ಷೆಗಳೂ ಮಾತ್ರ ಎಂದಿಗೂ ಕರಗಿಲ್ಲ. ಕಾರಣ ಜೀವನವೇ ಹಾಗೆ ಸಾರ್, ನಾವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪ್ರೀತಿಯಿಂದ ಸ್ವೀಕರಿಸುವುದನ್ನು ಬಿಟ್ಟು, ನಾವು ಬೇರೆನೂ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಭಯಬಿದ್ದು ಕೂತರೆ ಜೀವನದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ ಎಂಬ ಪ್ರಶಾಂತನ ಆಲೋಚನೆ, ಮನಸ್ಥಿತಿಗೆ ಏನು ಹೇಳಬೇಕೋ ಅರ್ಥವಾಗುವುದಿಲ್ಲ.

ಜೀವನವೇ ಹಾಗೆ, ನಾವು ಸದಾ ಸಂತೋಷವನ್ನೇ ಬಯಸುತ್ತೇವೆ, ಆನಂದದಿಂದ ಬದುಕಲು ಆಸೆ ಪಡುತ್ತೇವೆ. ಆದರೆ ಸಂತೋಷಕ್ಕಿಂತ ದುಃಖವೇ ನಮಗೆ ಲಭಿಸುತ್ತದೆ, ಕಷ್ಟಗಳು ಮನೆ ತುಂಬಾ ಮಲಗುತ್ತದೆ. ಶಿಕ್ಷಣ, ಹಣ, ಉದ್ಯೋಗ, ಕುಟುಂಬ, ಸಂಗಾತಿ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ನಾವು ಅಂದುಕೊಂಡ ರೀತಿಯಲ್ಲಿ ನಡೆದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಕಷ್ಟಗಳು ಬಂದಾಗಲೇ ಜೀವನದ ನೈಜ ದರ್ಶನವಾಗುವುದು. ನಮ್ಮಲ್ಲಿ ಆತ್ಮಸ್ಥೈರ್ಯ, ಧೈರ್ಯ, ವಿಶ್ವಾಸ ಬರಬೇಕಾದರೆ ಕಷ್ಟಗಳು ಎದುರಿಸಿದಾಗ, ಅನುಭವಿಸಿದಾಗ ಮಾತ್ರ ಸಾಧ್ಯ.

ಅಂದ ಹಾಗೆ ಜೀವನದಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ಸುಲಭವಾಗಿ ನಡೆದುಬಿಟ್ಟರೆ, ನಾವೇ ದೇವರಾಗಿ ಬಿಡುತ್ತೇವೆ, ಜೀವನಕ್ಕೆ ಬೆಲೆಯೇ ಇರುವುದಿಲ್ಲ.

ಸಾವಿರಾರು ವಿಕಲಚೇತನರು ಕಣ್ಣಿಲ್ಲದೆ, ಕೈ ಇಲ್ಲದೇ, ಕಾಲಿಲ್ಲದೆ, ಹಲವು ದೈಹಿಕ ನ್ಯೂನತೆಗಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಸರಿಯಾದ ಉದ್ಯೋಗವಿಲ್ಲದೆ, ಹಣಕಾಸಿನ ನೆರವಿಲ್ಲದೆ, ಯಾರ ಆಶ್ರಯ, ಸಹಾಯವಿಲ್ಲದೆ ಬಡತನದಲ್ಲಿಯೇ ಪ್ರತಿನಿತ್ಯವು ಜೀವನದ ಜೊತೆ ಹೋರಾಟ ನಡೆಸುತ್ತ, ವಿಧಿ ಬರಹದ ಕ್ರೂರತೆಗೆ ಸೆಡ್ಡು ಹೊಡೆದು ಬದುಕನ್ನು ಸುಂದರವಾಗಿ ಅರಳಿಸಿಕೊಳ್ಳುತ್ತಾರೆ. ಅವರಿಗೆ ಹೋಲಿಸಿಕೊಂಡರೆ ನಮ್ಮ ಕಷ್ಟಗಳು ದೊಡ್ಡದೇನಲ್ಲ, ಬಗೆಹರಿಸಲಾಗದ ಕಗ್ಗಂಟಿನ ಸಮಸ್ಯೆಗಳೇನಲ್ಲ.  

ನಮಗೆ ಇರುವುದರಲ್ಲೇ ಖುಷಿ ಕಾಣುತ್ತ, ಸರಳ ಜೀವನದೊಂದಿಗೆ ಬದುಕು ಸಾಗಿಸುತ್ತ, ಅತಿ ಆಸೆ, ಸ್ವಾರ್ಥ ಬಿಟ್ಟು ಜೀವನ ನಡೆಸಿದರೆ ಅದೇ ಸ್ವರ್ಗ. ಪ್ರತಿದಿನವು ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ, ಮಾನಸಿಕವಾಗಿ ನರಳುತ್ತ, ಪ್ರತಿದಿನವು ವಿಪರಿತವಾಗಿ ಆಲೋಚಿಸುತ್ತ, ವಿಧಿ ಬರಹವನ್ನು ಶಪಿಸುತ್ತ ಜೀವನ ಸಾಗಿಸುವುದರಲ್ಲಿ ಅರ್ಥವೇನಿದೆ ಎಂಬ ಸಣ್ಣ ಆಲೋಚನೆ ನಮ್ಮ ಮನಸ್ಸಿಗೆ ಬಂದರೆ ಸಾಕು.

ಹಿರಿಯರೊಬ್ಬರು ಹೇಳಿದ್ದಾರೆ ಸುಖ ಸಂತೋಷದಲ್ಲಿ ನಮಗಿಂತ ಕೆಳಗಿರುವವರನ್ನು ನೋಡಬೇಕು. ಸಾಧನೆ, ಗುರಿಯಲ್ಲಿ ನಮಗಿಂತ ಮೇಲ್ಮಟ್ಟದವರನ್ನು ಕಾಣಬೇಕು ಎಂದು. ಒಂದೊತ್ತು ಊಟ ಸಿಗದೆ ಪರಿತಪಿಸುವ ಸಾವಿರಾರು ಜನ ನಮ್ಮ ಮಧ್ಯೆಯೇ ಇದ್ದಾರೆ. ಅವರನ್ನು ನೋಡಿದರೆ, ನಾವೆಷ್ಟು ಅದೃಷ್ಟವಂತರೆಂದು ಅರ್ಥವಾಗುತ್ತದೆ.

ಪ್ರತಿನಿತ್ಯವೂ, ಪ್ರತಿಕ್ಷಣವೂ ಅಮೂಲ್ಯ, ಅದನ್ನು ತುಂಬಾ ಸಂತೋಷದಿಂದ ಕಳೆಯಬೇಕೆ ಹೊರತು ದುಃಖಿಸುತ್ತ ವ್ಯರ್ಥ ಮಾಡುವುದಲ್ಲ. ಏಕೆಂದರೆ ಮನುಷ್ಯನಿಗೆ ಇರುವುದು ಒಂದೇ ಜನ್ಮ. ನಾವು ಈ ಜನ್ಮದಲ್ಲೇ ನೆಮ್ಮದಿ, ಸಂತೋಷ, ಆನಂದ ಕಾಣದಿದ್ದರೆ, ಮತ್ತೆ ಕಾಣುವುದು ಯಾವಾಗ..?