➤ ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ
![]() |
ಬೇತಮಂಗಲ ಕೆರೆ ಕೋಡಿ ಬಿದ್ದಿರುವುದು
|
ನನಗಿನ್ನು ನೆನಪಿದೆ, ಅದು 2005 ನೇ ಇಸವಿ, ಆಗ ನಾನು ಫ್ರೌಡ ಶಾಲೆಯಲ್ಲಿ ಓದುತ್ತಿರಬೇಕು. ಆ ವರ್ಷ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿತ್ತು.
ಕೆರೆ, ಕುಂಟೆಗಳೆಲ್ಲಾ ತುಂಬಿ ಹರಿಯಲಾರಂಭಿಸಿದ್ದ ವರ್ಷವದು.
ಜಿಲ್ಲೆಯ ಎಲ್ಲಾ ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಭರ್ತಿಯಾದ ವರ್ಷವಾದ್ದರಿಂದ ಮರೆಯಲು ಖಂಡಿತಾ ಸಾಧ್ಯವಿಲ್ಲ. ಆ ಸಮಯದಲ್ಲಿ ಬಿದ್ದ ಮಳೆಯ ಆರ್ಭಟ, ವರ್ಷಧಾರೆ ಇಂದಿಗೂ ನಮ್ಮ ಕಣ್ಣೆದುರೆ ಹಾದು ಹೋಗುತ್ತದೆ. ಜೈಲಲ್ಲಿ ಹಲವು ವರ್ಷಗಳು ಕಾಲ ಶಿಕ್ಷೆ ಅನುಭವಿಸಿ ಹೊರಬರುವ ಖೈದಿಗೆ ಹೇಗೆ ಸ್ವಾತಂತ್ರ್ಯ ಸಿಕ್ಕ ಖುಷಿಯಾಗುತ್ತೋ, ಅದೇ ರೀತಿಯಲ್ಲಿ ಕೆರೆಗಳು ಭರ್ತಿಯಾಗಿ ತನ್ನ ಸೌಂದರ್ಯವನ್ನು ಮರಳಿ ಪಡೆದಾಗ ಜನ ಸಾಮಾನ್ಯರಿಗೆ ಆದ ಸಂತೋಷವು ಊಹೆಗೂ ಮಿಗಿಲಾದದ್ದು. ಮಳೆಯ ಆರ್ಭಟಕ್ಕೆ ಅಂದು ಶಾಲಾ-ಕಾಲೇಜುಗಳಿಗೂ ಕೆಲ ದಿನ ರಜೆ ಘೋಷಿಸಲಾಗಿತ್ತು ಎಂದರೆ ಮಳೆಯ ಪ್ರತಾಪ ಅರ್ಥವಾಗಬಹುದು ನಿಮಗೆ.
ನಾನಾಗ ಬಂಗಾರಪೇಟೆ ತಾಲೂಕಿನ ಬೇತಮಂಗಲದ ಶಾಲೆಯಲ್ಲಿ ಓದುತ್ತಿದ್ದರಿಂದ ಪ್ರತಿದಿನವೂ ಕೆರೆ ತುಂಬಿತೆ ಎಂದು ತಿಳಿಯಲು ಬೇತಮಂಗಲದ ಕೆರೆಯತ್ತ ಒಂದು ವಿಸೀಟ್ ತಪ್ಪದೇ ಇರುತ್ತಿತ್ತು. ಅಂತೂ ಕೆಲ ದಿನಗಳ ನಂತರ ಕೆರೆ ತುಂಬಿತು ಎಂಬ ಶಬ್ದ ಕಿವಿಗೆ ಬಿದ್ದಿದೆ ತಡ ಕೆರೆಯತ್ತ ದೌಡಾಯಿಸಿ, ಪ್ರತಿದಿನವೂ ವರ್ಣಿಸಲಾಗದ ಕೆರೆಯ ಸೌಂದರ್ಯವನ್ನು ಆಹ್ಲಾದಿಸುತ್ತಿದ್ದ ದಿನಗಳು ನೆನಪಿಸಿಕೊಂಡರೆ ಮೈ ಪುಳುಕಗೊಳ್ಳುತ್ತದೆ. ಕೆರೆಯಲ್ಲಿನ ನೀರು ಗಾಳಿಯ ರಭಸಕ್ಕೆ ನೃತ್ಯ ಮಾಡುತ್ತಿದ್ದರೆ ನೋಡುವುದೇ ಆಗ ಆನಂದ. ಮತ್ತೊಂದೆಡೆ ಕೆರೆಯ ಕ್ರಸ್ಟ್ ಗೇಟ್ ಗಳ ಮುಖಾಂತರ ಕೆರೆಯ ನೀರು ರಾಮಸಾಗರ ಕೆರೆಯತ್ತ ಹಾದು ಹೋಗುವ ಸನ್ನಿವೇಶ ಅದ್ಬುತವಾದ ಅನುಭವಗಳನ್ನು ಕಟ್ಟಿಕೊಟ್ಟಿತ್ತು.
ವಿಧಿಯ ನಿಯಮವೋ ಏನೋ 2005ರಲ್ಲಿ ಬಿದ್ದ ರೀತಿಯಲ್ಲಿ ಮಳೆಯ ಆಗಮನವನ್ನು ಕಾಣಲು ದಶಕಗಳೇ ಕಾಯಬೇಕಾಯಿತು. 2005 ರ ನಂತರ ಮತ್ತೆ ಅವಿಭಜಿತ ಕೋಲಾರ ಜಿಲ್ಲೆಗಳ ಕೆರೆಗಳು ತುಂಬಿದ್ದು ಈಗ (2017) ರಲ್ಲಿ ಅಂದರೆ ಬರೋಬ್ಬರಿ 12 ವರ್ಷಗಳ ವನವಾಸದ ನಂತರ..
ಈ ವರ್ಷ (2017) ಈ ಮಟ್ಟಿಗೆ ಮಳೆರಾಯನ ಆಗಮನವಾಗುತ್ತದೆ ಎಂದು ಯಾರು ಕನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಮಳೆ ಸಿಂಚನವು ದೊಡ್ಡ ಪ್ರಮಾಣದಲ್ಲಿ ಬಂದ ಕಾರಣ ಒಂದು ಹನಿಯು ನೀರಿಲ್ಲದೇ ಬರಡಾಗಿ, ಬಾಯ್ತೆರೆದಿದ್ದ ಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಕೆರೆಗಳಿಗೀಗ ಜೀವ ಕಳೆ ಬಂದಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೇ ಹರಿಯುವ ನದಿಗಳಿಲ್ಲ. ಜಲಾಶಯಗಳ ಸುಳಿವು ಇಲ್ಲ. ನೀರಿನ ಮೂಲವು ಇಲ್ಲ. ಆ ಕಾರಣದಿಂದಲೇ ಪೂರ್ವಿಕರು ಗ್ರಾಮಕ್ಕೊಂದರಂತೆ ಕೆರೆಗಳನ್ನು ನಿರ್ಮಿಸಿದ್ದರು.. ಮಳೆ ಬಂದರೆ ಕೆರೆಗಳಲ್ಲಿ ನೀರು ಸಂಗ್ರಹವಾದರೆ ಗ್ರಾಮದ ಜನರಿಗೆ ಒಂದಷ್ಟು ಸಹಾಯವಾಗುತ್ತದೆ ಎಂಬ ಆಲೋಚನೆ ಅವರದಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆ ಅವಿಭಜಿತ ಕೋಲಾರ ಜಿಲ್ಲೆಗಿದೆ.
2005 ರ ನಂತರ ಬಯಲು ಸೀಮೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಜನರಿಗೆ ನಿಜಕ್ಕೂ ವನವಾಸದ ಸ್ಥಿತಿ ಒದಗಿ ಬಂದಿತ್ತು. ಆಗಾಗ ಅಲ್ಪ ಸ್ವಲ್ಪ ಮಳೆ ಬಿದ್ದರು, ಕೆರೆಗಳಲ್ಲಿ ನೀರು ಶೇಖರಣೆಯಾಗುವ ಮಟ್ಟಿಗೆ ಮಳೆ ಬರಲಿಲ್ಲ. ಅಂತರ್ಜಲ ಮಟ್ಟವಂತು ಪಾತಾಳಕ್ಕೆ ಇಳಿದಿತ್ತು. ಕೊಳವೆ ಬಾವಿಗಳು ಮಕಾಡೆ ಮಲಗಿ, ರೈತನ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿತು.
ಜಿಲ್ಲೆಯ ಜನರಂತು ಕೃಷಿಯ ಸಹವಾಸವೇ ಸಾಕು ಎಂದು ಕೂಲಿ ಕೆಲಸಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದಿಷ್ಟು ಜನ ಬೆಂಗಳೂರು ಸೇರಿದಂತೆ ಮತ್ತಿತರರ ನಗರಗಳ ಕಾರ್ಖಾನೆಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಸೇರಿ ಜೀವನ ರೂಪಿಸಿಕೊಂಡಿದ್ದರು.
ಇನ್ನೇನು ಈ ವರ್ಷವು ಮಳೆ ಪ್ರತಿ ವರ್ಷದಂತೆ ಕೈ ಕೊಡುತ್ತದೆ ಎಂದೇ ಜನ ಭಾವಿಸಿದ್ದರು. ರಾಗಿ, ಅವರೆ, ಭತ್ತ, ಜೋಳ, ನೆಲಕಡಲೆ ಮತ್ತಿತರ ಬೆಳೆಗಳು ಮಳೆ ಇಲ್ಲದೆ ಸೋರುಗುತ್ತವೆ ಎಂಬ ಕಲ್ಪನೆ ಎಲ್ಲರದ್ದಾಗಿತ್ತು. ಆದರೆ ಮಳೆ ಅನಿರೀಕ್ಷಿತ ಆಗಮನದಿಂದ ಕೃಷಿಗೆ ಮರುಜೀವ ಬಂದಿದೆ. ರಾಗಿ ತೆನೆ ಹಚ್ಚ ಹಸಿರಿನಿಂದ ಹೊಲಗಳಲ್ಲಿ ಬೆಳೆದು ಕಂಗೊಳಿಸುತ್ತಿರುವ ಚಿತ್ರಣ ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಢ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿ ಸಾಕಷ್ಟು ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಅದರಲ್ಲೂ ಕೋಲಾರ ಜಿಲ್ಲೆಯ ಪೈಕಿ ದೊಡ್ಡ ಕೆರೆಗಳಲ್ಲಿ ಒಂದಾದ ಬಂಗಾರಪೇಟೆ ತಾಲೂಕಿನ ಬೇತಮಂಗಲದ ದೊಡ್ಡೆ ಕೆರೆ 12 ವರ್ಷಗಳ ನಂತರ ಮೈ ತುಂಬಿ ಹರಿಯುತ್ತಿದೆ. ಬೇತಮಂಗಲ, ಕೆಜಿಎಫ್, ಬೆಮಲ್ ನಗರಗಳಿಗೆ ನೀರಿನ ದಾಹ ನೀಗಿಸುತ್ತಿದ್ದ ಬೇತಮಂಗಲ ಕೆರೆ ಮತ್ತೆ ಭ ರ್ತಿಯಾಗಿರುವುದರಿಂದ ಈ ಮೂರು ನಗರಗಳ ಜನಕ್ಕೆ ಒಂದಷ್ಟು ವರ್ಷ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.
ಬಾಗೇಪಲ್ಲಿಯ ಚಿತ್ರಾವತಿ ಜಲಾಶಯವು ಭ ರ್ತಿಯಾಗಿದೆ. ಕೋಲಾರ ಭಾಗದ ಆವಣಿ, ರಾಮಾಪುರ, ಹೊಳಲಿ, ಅರಾಭಿಕೊತ್ತನೂರು ಮತ್ತಿತರರ ಕೆರೆಗಳು ತುಂಬಿ ಹರಿದಿವೆ. ಕೋಲಾರದ ಅಂತರಗಂಗೆಯಲ್ಲಿ ಮಳೆಯ ರಭಸಕ್ಕೆ ಹೊಸ ಪಾಲ್ಸ್ ಸೃಷ್ಟಿಯಾಗಿದೆ.
ಆದರೆ ನೋವಿನ ವಿಚಾರವೆಂದರೆ ಈ ವರ್ಷ ಜೋರಾಗಿಯೇ ಮಳೆಯಾಗುತ್ತಿದ್ದರು ಕೂಡ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ರಾಜಕಾಲುವೆಗಳು ಮುಚ್ಚಿ ಹೋದರೆ, ಮತ್ತೊಂದಿಷ್ಟು ರಾಜಕಾಲುವೆಗಳು ಒತ್ತುವರಿಯಾಗಿವೆ. ಆ ಕಾರಣದಿಂದಲೇ ಮಳೆಯ ಅಬ್ಬರದ ಮಧ್ಯೆಯೂ ಕೆರೆಗಳಿಗೆ ವೇಗವಾಗಿ ನೀರು ಬರುತ್ತಿಲ್ಲ. ಇದಕ್ಕೆ ಉತ್ತಮ ನಿದರ್ಶನ ಕೋಲಾರ ನಗರದ ಕೋಲಾರಮ್ಮ ಕೆರೆ. ಈ ಭಾಗದಲ್ಲಿ ಮಳೆಯಾಗುತ್ತಿದ್ದರು ಕೋಲಾರಮ್ಮ ಕೆರೆಗೆ ಮಳೆ ನೀರು ಹರಿದು ಬರುತ್ತಿರುವುದು ಬಹಳ ಕಡಿಮೆ, ಕಾರಣ ರಾಜ ಕಾಲುವೆಗಳ ಒತ್ತುವರಿಯ ಪರಿಣಾಮ.
ಬಂಗಾರಪೇಟೆ, ಮಾಲೂರು ಭಾಗದ ಕೆಲ ಗ್ರಾಮಗಳಿಗೆ ಕುಡಿಯಲು ನೀರೊದೊಗಿಸುವ ಯರಗೋಳು ಜಲಾಶಯ ಕಾಮಗಾರಿ ದಶಕಗಳಿಂದಲೂ ಕುಂಟುತ್ತಲೇ ಸಾಗಿರುವುದರಿಂದ ಈಗ ಮಳೆ ಬರುತ್ತಿದ್ದರು ಸಂಗ್ರಹ ಮಾಡಿಕೊಳ್ಳುವ ಶಕ್ತಿ ಯರಗೋಳು ಜಲಾಶಯಕ್ಕೆ ಇಲ್ಲದಾಗಿದೆ. ರಾಜಕಾರಣಿಗಳ ಬೇಜಾವಾಬ್ದಾರಿಗೆ ಯರಗೋಳು ಕಾಮಗಾರಿ ಪೂರ್ಣಗೊಳ್ಳದಿರುವುದೇ ಉತ್ತಮ ನಿದರ್ಶನ.
ನನ್ನ ಮೊಬೈಲ್ಗೆ ಪ್ರತಿದಿನವು 9ಕ್ಕೆ ಸರಿಯಾಗಿ ಹವಾಮಾನ ಇಲಾಖೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಎಷ್ಟು ಮೀ.ಮಿ ಮಳೆ ಬಿದ್ದಿದೆ ಎಂದು ಮಾಹಿತಿ ಬರುತ್ತದೆ. ಪ್ರತಿದಿನವೂ ಈ ಮಾಹಿತಿ ಗಮನಿಸುತ್ತಿದ್ದೆ. ಮಳೆ ಬೀಳದ ಪರಿಣಾಮ ಮಳೆ ಪ್ರಮಾಣ ಶೂನ್ಯ ತೋರಿಸುತ್ತಿತ್ತು, ಆಗ ನನಗೂ ಮಳೆರಾಯನ ಬಗ್ಗೆ ಕೋಪ ಬರುತ್ತಿತ್ತು.
ಆದರೆ ಇತ್ತಿಚೀನ ದಿನಗಳಲ್ಲಿ ಬರುವ ಮೆಸೇಜ್ ನಲ್ಲಿ ಕೋಲಾರದಲ್ಲಿ 95 ಮೀ.ಮಿ, ಮುಳಬಾಗಿಲುವಿನಲ್ಲಿ 80 ಮೀ.ಮಿ, ಶ್ರೀನಿವಾಸಪುರದಲ್ಲಿ 65 ಮೀ.ಮಿ ಈಗೆ ಮಳೆ ಪ್ರಮಾಣ ದಾಖಲಾಗಿದೆ ಎಂದು ಮೇಸೆಜ್ ಬರುತ್ತಿದ್ದಂತೆ ಅಬ್ಬ ಅಂತು ಈ ವರ್ಷವಾದರೂ ಮಳೆಯರಾಯ ಕೋಪ ತಣ್ಣಾಗಾಗಿದೆ ಎಂದು ಅನ್ನಿಸಿತು.
ಈ ವರ್ಷ ಕೆರೆಗಳು ತುಂಬುತ್ತಿರುವುದರಿಂದ ಗ್ರಾಮಗಳ ಜನ ಕೆರೆಗಳಿಗೆ ಖುಷಿಯಿಂದ ಬಾಗಿನ ಅಪರ್ಿಸುತ್ತಿರುವುದನ್ನು ಕಂಡರೆ ಪ್ರತಿಯೊಬ್ಬರಿಗೂ ಸಂತೋಷವಾಗುತ್ತದೆ. ಮಳೆಯು ಪ್ರತಿವರ್ಷವೂ ಸಕಾಲದಲ್ಲಿ ಬಿದ್ದು, ಕೆರೆಗಳು ಭರ್ತಿಯಾಗುತ್ತಿದ್ದರೆ ಅನ್ನದಾತನ ಜೀವನ ಸರಾಗವಾಗಿ ನಡೆಯುತ್ತದೆ. ಅಂತರ್ಜಲ ಹೆಚ್ಚಾದರೆ ಬತ್ತಿ ಹೋಗಿರುವ ಕೊಳವೆ ಬಾವಿಗಳು ಪುನಃಹ ಪ್ರಾರಂಭವಾಗುತ್ತದೆ. ಇದರಿಂದ ಕೃಷಿ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೇ ನಡೆದು ರಾಜ್ಯಕ್ಕೆ ಪೂರೈಕೆ ಮಾಡುವಷ್ಟು ಹಾಲು, ತರಕಾರಿ, ಹೂವು ಮತ್ತಿತರ ಬೆಳೆಗಳನ್ನೂ ಬೆಳೆಯುವ ಸಾಮರ್ಥ್ಯ ಅವಿಭಜಿತ ಕೋಲಾರ ಜಿಲ್ಲೆಗೆ ಇದೆ. ಆದರೆ ಮಳೆರಾಯ ಕೈ ಕೊಡಬಾರದಷ್ಟೇ.

