ಶುಕ್ರವಾರ, ಏಪ್ರಿಲ್ 24, 2020

ಬಡತನದಲ್ಲೂ ಸಿರಿತನ ಕಾಣುವ “ಶ್ರೀಮಂತರು”

⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಒಮ್ಮೆ ಪುಸ್ತಕ ಮಳಿಗೆಯೊಂದಕ್ಕೆ ಹೋಗಿದ್ದೆ, ಅಲ್ಲಿ 30 ದಿನಗಳಲ್ಲಿ ಹಣ ಸಂಪಾದಿಸುವುದು ಹೇಗೆ? ಎಂಬ ಪುಸ್ತಕವಿತ್ತು. ಅದನ್ನು ಕುತೂಹಲದಿಂದ ಕೈಗೆತ್ತಿಕೊಂಡು ಪುಟಗಳನ್ನು ತಿರುವಿ ಹಾಕಿದರೆ, ಹಣ ಸಂಪಾದಿಸುವ ಹಲವು ಮಾರ್ಗಗಳ ಬಗ್ಗೆ ಲೇಖಕರು ತಮ್ಮದೇ ಶೈಲಿಯಲ್ಲಿ ಬರೆದಿದ್ದರು. ಅಷ್ಟಕ್ಕೂ ಆ ಪುಸ್ತಕ ಓದಿದ ತಕ್ಷಣ ಹಣ ಸಂಪಾದಿಸಿ ಬಿಡುತ್ತೇವೆ ಎಂಬ ಭ್ರಮೆ ಯಾರಿಗೂ ಇರುವುದಿಲ್ಲ, ಅದರಿಂದ ಒಂದಷ್ಟು ಸಲಹೆ ಸಿಗಬಹುದಷ್ಟೆ. 
ಆ ಪುಸ್ತಕದ ಟೈಟಲ್ ನೋಡಿದಾಗ ನನಗೆ ನೆನಪಾದದ್ದು ಇವತ್ತಿನ ನಮ್ಮ ಸ್ಥಿತಿ, ನಾವು ಈ ಸಮಾಜದಲ್ಲಿ ಜೀವನ ಸಾಗಿಸಬೇಕಾದರೆ ಹಾಗೂ ನಮ್ಮ ಅವಶ್ಯಕತೆ, ಆಸೆಗಳನ್ನು ಪೂರೈಸಿಕೊಳ್ಳಬೇಕಾದರೆ ಹಣವಂತು ಬೇಕೆ ಬೇಕು, ಅದರಲ್ಲಿ ಎರಡು ಮಾತಿಲ್ಲ. ಹಣ ಸಂಪಾದಿಸುವುದು ತಪ್ಪಲ್ಲ, ಆದರೆ ಅದರ ಪ್ರಮಾಣ ಹಾಗೂ ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಸ್ಪಷ್ಟತೆ ಇರಬೇಕು.
ವಿಪರ್ಯಾಸವೆಂದರೆ ಹಣ ಒಂದೇ ಜೀವನ ಎಂಬ ಆಲೋಚನೆ ಹಾಗೂ ದುಡ್ಡಿದ್ದರೆ ಮಾತ್ರ ಬದುಕು ಎಂಬ ವಾತಾವರಣವನ್ನು ಸೃಷ್ಟಿಸಿಕೊಂಡಿರುವುದು ಮಾತ್ರ ನಮ್ಮ ಜೀವನ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.
ಆಟೋ ಒಂದರ ಹಿಂಭಾಗದಲ್ಲಿ “ಜೀವನ ನಡೆಸುವುದಕ್ಕಾಗಿ ಹಣವೇ ಹೊರತು, ಹಣವೇ ಜೀವನವಲ್ಲ ಎಂದು ಎಲ್ಲರು ಆಲೋಚಿಸಲೇಬೇಕಾದ ಬರಹವಿತ್ತು. ಬಡವನಾದರೂ ಆ ಆಟೋ ಚಾಲಕ ಜೀವನ ಹಾಗೂ ಹಣ ಈ ಎರಡು ವಿಷಯಗಳ ಬಗ್ಗೆ ತನ್ನದೇ ಆದ ನಿಲುವಿಗೆ ಬಂದಿದ್ದ. ಇಂದು ಬಹುತೇಕರು ಹಣಗಳಿಸುವುದರ ಹಿಂದೆ ಬಿದ್ದು ತಮಗೂ ಒಂದು ಅಮೂಲ್ಯವಾದ ಜೀವನವಿದೆ ಎಂಬುವುದನ್ನೇ ಮರೆತೆ ಹೋಗಿದ್ದಾರೆ. ಹಣ ಸಂಪಾದನೆಯ ಮೇಲೆ ಕಣ್ಣೆಟ್ಟಿರುವುದರಿಂದ ನೆಮ್ಮದಿ, ಸುಖ ಜೀವನ, ಆತ್ಮ ತೃಪ್ತಿ ಯಾರಿಗೂ ಇಲ್ಲದಾಗಿದೆ. ಕ್ಷಣಕ್ಷಣಕ್ಕೂ ಭಯ, ನೋವು, ಅಸಮಧಾನ, ಅವಮಾನ, ಜಿಗುಪ್ಸೆ, ಅಸೂಹೆ ಹಾಗೂ ಮನಸ್ತಾಪಗಳಲ್ಲಿಯೇ ಎಲ್ಲರ ಇಡೀ ಜೀವನ ಮುಳುಗಿ ಹೋಗುತ್ತಿದೆ. 
The india's richest billionaires ಎಂದು ಗೂಗಲ್ ನಲ್ಲಿ ಟೈಪ್ ಮಾಡಿದರೆ, ಹಲವು ಪತ್ರಿಕೆಗಳು, ಮ್ಯಾಗಜೀನ್ ಮತ್ತು ಆನ್‍ಲೈನ್ ಪೋರ್ಟಲ್ ಗಳು ನಡೆಸಿರುವ ಸಮೀಕ್ಷಾ ವರದಿಯ ಪ್ರಕಾರ ದೇಶದ ಸಾವಿರಾರು ಶ್ರೀಮಂತರ ಪಟ್ಟಿ ಸಿಗುತ್ತದೆ. ವರ್ಷದಿಂದ ವರ್ಷಕ್ಕೆ ಈ ಪಟ್ಟಿಯಲ್ಲಿ ಹಲವರು ಹೊಸದಾಗಿ ಸೇರ್ಪಡೆಯಾದರೆ, ಮತ್ತೆ ಕೆಲವರು ತಮ್ಮ ಉದ್ಯಮದ ವಹಿವಾಟು, ಶೇರು ಮಾರುಕಟ್ಟೆಯ ಏರಳಿತದ ಆಧಾರದ ಮೇಲೆ ನಷ್ಟ ಹೊಂದುತ್ತ ಪಟ್ಟಿಯಿಂದ ಹೊರ ಬೀಳುತ್ತಿರುತ್ತಾರೆ.
ಹಾಗೆಯೇ ಅದೇ ಗೂಗಲ್ ನಲ್ಲಿ Indian great personalities ಎಂದು ಹುಡುಕಿದರೆ, ಮಹಾತ್ಮ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್ ಅಂಬೇಡ್ಕರ್, ಸರ್ದಾರ್ ವಲ್ಲಾಭಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ರಾಣಿ ಲಕ್ಷ್ಮೀಬಾಯಿ, ಬಾಲಗಂಗಾಧರನಾಥ್ ತಿಲಕ್, ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇರಿದಂತೆ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾಜಿಕ ಸುಧಾರಕರ ಹೆಸರುಗಳು ಹಾಗೂ ಅವರ ಕುರಿತ ವಿಚಾರಗಳು ಸಿಗುತ್ತವೆ. 
ಗಮರ್ನಾಹ ಅಂಶವೆಂದರೆ ಕೋಟಿ, ಕೋಟಿ ಹಣಗಳಿಸಿ ಶ್ರೀಮಂತರಾದವರ ಪಟ್ಟಿಯನ್ನು ಗೂಗಲ್ ಆಗಾಗ ಬದಲಾಯಿಸುತ್ತಲೇ ಇರುತ್ತದೆ. ಈ ವರ್ಷ ಮೊದಲ ಸ್ಥಾನದಲ್ಲಿದ್ದವರು, ಮುಂದಿನ 6 ತಿಂಗಳಿಗೋ, ವರ್ಷಕ್ಕೋ ಕೆಳ ಸ್ಥಾನಕ್ಕೆ ಹೋಗುವ ಸಂದರ್ಭಗಳು ಇರುತ್ತವೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜದ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಿದವರ ಹೆಸರುಗಳನ್ನು ಮಾತ್ರ ಈ ಭೂಮಿ ಇರುವವರೆಗೂ ಬದಲಿಸಲು ಸಾಧ್ಯವಿಲ್ಲ. ವರ್ಷಗಳು ಉರುಳುತ್ತಿದ್ದಂತೆ, ಕಾಲ ಕಳೆಯುತ್ತಿದ್ದಂತೆ ಸಿರಿವಂತರನ್ನು ಸಮಾಜ ಮರೆತು ಬಿಡುತ್ತದೆ.
ಆದರೆ ಶತಮಾನಗಳು ಕಳೆದರು ಸಾಮಾಜಿಕ ಸುಧಾರಕರನ್ನು ಮರೆಯುವ
ಪ್ರಶ್ನೆಯೇ ಇಲ್ಲ. ಅದರರ್ಥ ಹಣದಿಂದ ಶಾಶ್ವತವಾಗಿ ಹೆಸರನ್ನು ಸಂಪಾದಿಸಲು ಅಸಾಧ್ಯ. ಸಮಾಜದ ಅಭಿವೃದ್ದಿ ಮತ್ತು ಐಕ್ಯತೆಗಾಗಿ ದುಡಿದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರೆಲ್ಲರೂ ಬಡತನದಲ್ಲಿ ಹುಟ್ಟಿ ಜೀವನ ನಡೆಸಿದವರು. ಆದರೂ ಅವರ ಸಾಧನೆಗೆ ಹಣ ಅಡ್ಡಿಯಾಗಲಿಲ್ಲ. ಹಣ ಸಂಪಾದನೆ ಒಂದೇ ತಮ್ಮ ಜೀವನದ ಗುರಿ ಅಂದುಕೊಂಡಿದ್ದರೆ, ಇವರ್ಯಾರು ಶತಮಾನಗಳ ಕಾಲ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹಣವಿಲ್ಲದಿದ್ದರು ಆದರ್ಶ ಜೀವನ ನಡೆಸಿದರು.
ಒಮ್ಮೆ ಮಂಡ್ಯಗೆ ಹೋಗಲೆಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಹೊರಟೆ. ನನ್ನ ಎದುರಿನ ಸೀಟಿನಲ್ಲಿ ಇಬ್ಬರು ಮಧ್ಯಮ ವಯಸ್ಸಿನವರು ಕುಳಿತಿದ್ದರು. ಅವರ ಕೈಯಲ್ಲಿ ಪತ್ರಿಕೆಯಿತ್ತು. ಆ ಪತ್ರಿಕೆಯಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಕುರಿತ ಸುಧೀರ್ಘವಾದ ಲೇಖನವಿತ್ತು. ಆ ಇಬ್ಬರಲ್ಲಿ ಒಬ್ಬ ಆ ಲೇಖನವನ್ನು ಓದಿ, ಮತ್ತೊಬ್ಬನ್ನು ಪ್ರಶ್ನೆ ಮಾಡುತ್ತೇನೆ. ಇಲ್ಲಿ ನೋಡೋ ಅರವಿಂದ ಇವರೆಲ್ಲ ವಿಶ್ವದ ಶ್ರೀಮಂತರು, ಲಕ್ಷಾಂತರ ಕೋಟಿ ಆಸ್ತಿಗೆ ಒಡೆಯರು. ನಾವು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ದುಡಿತಾನೆ ಇದ್ದೀವಿ, ಆದರೆ ಇಲ್ಲಿಯವರೆಗೂ ಒಂದು ಸ್ವಂತ ಬೈಕ್ ತೆಗೆದುಕೊಳ್ಳಲು ಕೂಡ ಸಾಧ್ಯವಾಗಲಿಲ್ಲ. ಇನ್ನು ನಾವು ಶ್ರೀಮಂತರಾಗುವುದು ಎಲ್ಲಿಂದ, ಬರುವ ಸಂಬಳ ಇರುವ ಸಮಸ್ಯೆಗಳಿಗೆ ಸಾಕಾಗುವುದಿಲ್ಲ, ಇನ್ನು ಉಳಿಸಿ ಶ್ರೀಮಂತರಾಗುವುದು ಕನಸಿನ ಮಾತೇ ಬಿಡು ಎಂದು ಬೇಸರಿಸಿಕೊಂಡ.
ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಬ್ಬ ಲೋ ಅಣ್ತಮ್ಮ ದುಡ್ಡು ಇವತ್ತು ಇರ್ತದೇ, ನಾಳೆ ಹೋಯ್ತದೆ, ನಮಗೆ ಬೇಕಾಗಿರುವುದು ನೆಮ್ಮದಿ. ಆ ದುಡ್ಡು ಇರುವವರು ನಮ್ಮ ತರ ಖುಷಿಯಾಗಿ ಇರಲಿಕ್ಕೆ ಎಲ್ಲಿ ಸಾಧ್ಯ. ಮನೆಯಿಂದ ಆಚೆ ಬರಬೇಕಾದರೂ ಸೆಕ್ಯೂರುಟಿ, ಗನ್ ಮ್ಯಾನ್ ಇರಬೇಕು. ನಾವು ನೋಡು ಆರಾಮಗಿ ಈ ರೈಲಿನಲ್ಲಿ ಕಳ್ಳೆಪುರಿ ತಿಂತ ಪಾಂಡವಪುರದವರೆಗೂ ಖುಷಿಯಾಗಿ ಹೋಗ್ತಿದ್ದೀವಿ, ರೈಲ್ವೆ ಸ್ಟೇಷ ನ್‍ಲ್ಲಿ ಇಳಿದು ಟೀ ಕುಡಿದು, ಮನೆಗೆ ಧೈರ್ಯವಾಗಿ ಹೋಗಬಹುದು. ಆ ಶ್ರೀಮಂತರು ನಮ್ಮತರ ರೈಲಿನಲ್ಲಿ ಓಡಾಡಲು ಸಾಧ್ಯವೇ? ನಮ್ಮತ್ರ ಹಣ ಇಲ್ಲದಿದ್ರು ಖುಷಿ, ನೆಮ್ಮದಿ ಇದೆ ಬಿಡೋ ಸಾಕು ಎಂದು ತನ್ನ ಸ್ನೇಹಿತನಿಗೆ ಸಂತೈಸಿದ. ಅಲ್ಪ ಹಣವಿದ್ದರು ಜೀವನ ನಡೆಸಬಹುದು, ಆದರೆ ನೆಮ್ಮದಿ, ಆತ್ಮಸಂತೋಷ ಇಲ್ಲದಿದ್ದರೆ ಸುಖಮಯ ಜೀವನ ನಡೆಸಲು ಹೇಗೆ ಸಾಧ್ಯ ? ಎಂಬುವುದಕ್ಕೆ ಇವರ ಸಂಭಾಷಣೆಯೇ ಉತ್ತರ.
ಸ್ವಾಮಿ ವಿವೇಕಾನಂದರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತ, ಮನುಷ್ಯನು  ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳಬೇಕಾದರೆ ಅದು ಸಿರಿತನದಿಂದ ಸಾಧ್ಯವಿಲ್ಲ. ಹಣವು ನಮ್ಮನ್ನು ಶ್ರೀಮಂತರನ್ನಾಗಿಸಬಹುದು. ಆದರೆ ಶ್ರೀಮಂತ ವ್ಯಕ್ತಿತ್ವವುಳ್ಳವರನ್ನಾಗಿಸಲು ಸಾಧ್ಯವಿಲ್ಲ. ಹಣವೇ ಎಲ್ಲದ್ದಕ್ಕೂ ಮೂಲ ಎಂದ ಎಷ್ಟೋ ಜನರು ಮಣ್ಣಾಗಿ ಹೋಗಿದ್ದಾರೆ. ಹಣದಿಂದ ವಸ್ತುಗಳನ್ನು ಖರೀದಿಸಬಹುದೇ ಹೊರತು ಸಾಧನೆ, ಮನಃಶಾಂತಿ, ನೆಮ್ಮದಿ, ಖುಷಿಯನ್ನಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು.
ಇನ್ಪೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿರವರು ನೂರಾರು ಕೋಟಿಯ ಆಸ್ತಿಯ ಒಡೆಯರು. ಅವರ ಪತಿ ನಾರಾಯಣಮೂರ್ತಿರವರು ಇನ್ಪೋಸಿಸ್ ಎಂಬ ತಂತ್ರಜ್ಞಾನ ಆಧಾರಿತ ಕಂಪನಿಯನ್ನು ವಿಶ್ವದೆತ್ತರಕ್ಕೆ ಕಟ್ಟಿ ಬೆಳೆಸಿದವರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ  ಉದ್ಯೋಗವಕಾಶ ನೀಡಿದವರು. ಸುಧಾ ನಾರಾಯಣಮೂರ್ತಿಯವರು ನೂರಾರು ಕೋಟಿ ಆಸ್ತಿ ಇದ್ದರು, ವ್ಯಕ್ತಿತ್ವದಲ್ಲಿ ಅದಕ್ಕಿಂತ ಹೆಚ್ಚಿನ ಶ್ರೀಮಂತರು. ಅವರ ಮುಖಪರಿಚಯ ಇಲ್ಲದವರು ಅವರ ಉಡುಗೆ, ಹಾವಭಾವಗಳಿಂದ ಗುರುತಿಸಲು ಅಸಾಧ್ಯ, ಕಾರಣ ಅಷ್ಟು ಸರಳ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಎಷ್ಟೇ ಹಣ, ಆಸ್ತಿ ಇದ್ದರೂ ಅದು ನೆಮ್ಮದಿ, ಸಂತೋಷ ನೀಡುವುದಿಲ್ಲ ಎಂಬ ಕಾರಣಕ್ಕೆ ಇನ್ಪೋಸಿಸ್ ಫೌಂಡೇಶನ್ ಸಂಸ್ಥೆ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.            
ಸರಕಾರಿ ಶಾಲೆಗಳ ಅಭಿವೃದ್ದಿ, ಶೌಚಾಲಯಗಳ ನಿರ್ಮಾಣ, ಕೆರೆಗಳ ಅಭಿವೃದ್ದಿ, ಆಸ್ಪತ್ರೆಗಳ ಸ್ಥಾಪನೆ, ದೇವಾಲಯಗಳ ಜೀರ್ಣೋದ್ದಾರ, ರಾಜ್ಯದಲ್ಲಿ ಅತಿವೃಷ್ಟಿ ಬಂದಾಗ ಮನೆಗಳ ನಿರ್ಮಾಣ, ಅನಾವೃಷ್ಟಿ ಆದಾಗ ಪರಿಹಾರ, ಈಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳ ಮೂಲಕ ತಾನು ಹಣದಲ್ಲಷ್ಟೇ ಶ್ರೀಮಂತಳಲ್ಲ ಜೊತೆಗೆ ಗುಣದಲ್ಲೂ ಶ್ರೀಮಂತಳು ಎಂದು ಸಾಬೀತು ಮಾಡಿದ್ದಾರೆ.
ಅವರ ಪ್ರಕಾರ ಹಣಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯ, ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡಬೇಕು. ಹಣವಿದ್ದರೆ ಮಾತ್ರ ಜೀವನ ಎಂಬ ಪರಿಕಲ್ಪನೆ ಪಕ್ಕಕ್ಕಿಟ್ಟು, ಮಾನಸಿಕ ನೆಮ್ಮದಿ ನೀಡುವ ವಿಷಯಗಳ ಕಡೆಗೂ ಗಮನಹರಿಸಬೇಕು. ಈ ಜೀವನ ಯಾತ್ರೆಯಲ್ಲಿ ಹಣವೇ ಸರ್ವಸ್ವವಲ್ಲ, ಹಣ ಹೊರತಾಗಿ ಅದೆಷ್ಟು ಅಂಶಗಳು ಮನುಷ್ಯನಿಗೆ ಅಗತ್ಯವಿದೆ, ಅದರತ್ತ ಕೂಡ ದೃಷ್ಟಿ ನೆಟ್ಟಬೇಕಿದೆ ಎಂದು ಕಿವಿಮಾತು ಹೇಳುತ್ತಾರೆ. 
ಇಂದು ಮನುಷ್ಯನು ಹಣ ಸಂಪಾದನೆಯತ್ತ ಹೆಚ್ಚಿನ ಒಲವು ತೋರುತ್ತಿರುವುದರಿಂದ ಸಹದ್ಯೋಗಿ, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಪ್ರತಿಯೊಬ್ಬರೊಂದಿಗೆ ಅನ್ಯೋನ್ಯತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರನ್ನೂ ದೂರ ಮಾಡಿಕೊಳ್ಳಬೇಕಾದ ಸನ್ನಿವೇಶಕ್ಕೆ ತಲುಪುತ್ತಿದ್ದೇವೆ. ಹಾಗೆಯೇ ಹಣಗಳಿಸುವ ಉದ್ದೇಶದಿಂದ ಸಮಾಜಘಾತುಕ ಕೃತ್ಯಗಳನ್ನು ಮಾಡಲು ಹಿಂಜರಿಯದ ಸ್ಥಿತಿಯಲ್ಲಿದ್ದೇವೆ.
ದಿ ಗ್ರೇಟ್ ಅಲೆಕ್ಸಾಂಡರ್ ರಾಜನು ಅದೆಷ್ಟೋ ಸಾಮ್ರಾಜ್ಯಗಳ ಮೇಲೆ ದಂಡಯಾತ್ರೆ ಮಾಡಿ ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡಿದ್ದ. ಆತ ಇನ್ನೇನು ಇಹಲೋಕ ತ್ಯಜಿಸುವ ಸಮಯ ಸಮೀಪಿಸುತ್ತಿದೆ ಎನ್ನುವಾಗ ತನ್ನ ಸೇನಾಧಿಪತಿಗಳನ್ನು ಕರೆದು ನಾನು ನಿಧನ ಹೊಂದಿದ ನಂತರ ನನ್ನ ಶವಪೆಟ್ಟಿಗೆಯನ್ನು ಖ್ಯಾತ ವೈದ್ಯರು ಹೊರಬೇಕು. ನಾನು ಸಂಪಾದಿಸಿದ ವಜ್ರ, ರತ್ನ, ವೈಡೂರ್ಯಗಳನ್ನು ಶವ ಪೆಟ್ಟಿಗೆಯ ಮೇಲೆ ದಾರಿ ಉದ್ದಕ್ಕೂ ಎಸೆಯಬೇಕು. ನನ್ನ ಎರಡು ಕೈಗಳನ್ನು ಶವ ಪೆಟ್ಟಿಗೆಯಿಂದ ಆಚೆ ಎಲ್ಲರಿಗೂ ಕಾಣಿಸುವಂತೆ ಇಡಬೇಕು ಎಂಬ ತನ್ನ ಕೊನೆಯ ಆಸೆಯನ್ನು ಸೇನಾಧಿಪತಿಗಳಿಗೆ ಹೇಳುತ್ತಾನೆ. 
ಕಾರಣ ಅಲೆಕ್ಸಾಂಡರ್‍ನನ್ನು ಎಲ್ಲರೂ ದಿ ಗ್ರೇಟ್ ಅಲೆಕ್ಸಾಂಡರ್ ಎಂದು ಕರೆಯುತ್ತಾರೆ. ಜಗತ್ತನ್ನೇ ಗೆದ್ದ ಎನ್ನುತ್ತಾರೆ, ಆದರೆ ನನ್ನ ಪ್ರಾಣವನ್ನು ಯಾವ ಪ್ರಖ್ಯಾತ ವೈದ್ಯರು ಕಾಪಾಡಲು ಸಾಧ್ಯವಾಗಲಿಲ್ಲ, ನಾನು ಗಳಿಸಿದ ವಜ್ರ, ರತ್ನ, ವೈಡೂರ್ಯಗಳು ನನ್ನ ಪ್ರಾಣ ಉಳಿಸಿಕೊಳ್ಳಲು ಆಸರೆಯಾಗಲಿಲ್ಲ, ಎಷ್ಟೋ ಸಾಮ್ರಾಜ್ಯಗಳನ್ನು ಗೆದ್ದ ನಾನು ಭೂಮಿಯಿಂದ ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬ ಸಂದೇಶ ಸಮಾಜಕ್ಕೆ ಹೋಗಲಿ ಎಂಬ ಉದ್ದೇಶ ಅಲೆಕ್ಸಾಂಡರ್ ಅವರದ್ದಾಗಿತ್ತು.  
ಸಾಮ್ರಾಜ್ಯಗಳನ್ನೇ ಗೆದ್ದ ಪ್ರಪಂಚದ ಗ್ರೇಟ್ ಅಲೆಕ್ಸಾಂಡರ್ ಇಹಲೋಕ ತ್ಯಜಿಸುವಾಗ ಬರಿಗೈಯಲ್ಲೇ ಹೋದ. ಇನ್ನು ನಮ್ಮಂತವರೆಲ್ಲಾ ಯಾವ ಲೆಕ್ಕ, ಒಂದಂತು ಸತ್ಯ ಜೀವನ ನಿರ್ವಹಣೆಗಾಗಿ ಹಣದ ಅಗತ್ಯತೆ ಇದೆ, ಹಲವು ಸಂದರ್ಭಗಳಲ್ಲಿ ಹಣ ಬೇಕು ಎಂಬುವುದು ಒಪ್ಪುವ ವಿಚಾರವೇ. ಆದರೆ ಹಣವೇ ಜೀವನವಲ್ಲ ಎಂಬ ವಾಸ್ತವವನ್ನು ಅರಿಯಬೇಕಿದೆ. ಕೇವಲ ಹಣ ಸಂಪಾದನೆಯ ಏಕೈಕ ಗುರಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ನೆಮ್ಮದಿ ಹಾಳು ಮಾಡಿಕೊಳ್ಳುವ ಜೊತೆಗೆ ಹಣದ ಮೇಲಿನ ವ್ಯಾಮೋಹದಿಂದ ತಪ್ಪು ಹಾದಿಗಳನ್ನು ಹಿಡಿದು ವ್ಯಕ್ತಿತ್ವಕ್ಕೆ ಕಳಂಕ ತಂದುಕೊಳ್ಳಬೇಕಾಗುತ್ತದೆ. 
ಗುಡಿಸಲಲ್ಲಿ ವಾಸಿಸುವ, ಹರಿದ ಬಟ್ಟೆಯಲ್ಲೇ ಇರುವ, ಒಂದು ಗುಂಟೆ ಜಾಗವು ಇರದ, ದಿನಕ್ಕೆ ಎರಡೊತ್ತು ಊಟ ಸಿಗದ ಅದೆಷ್ಟು ಜನರು ಆತ್ಮ ತೃಪ್ತಿ, ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಕಾರಣ ಅವರು ಬಡತನದಲ್ಲೇ ತಮ್ಮ ಸಿರಿತನ ಕಾಣುತ್ತಿದ್ದಾರೆ.
Money is important, but it is not everything ಹಣ ಮುಖ್ಯ ಆದರೆ ಹಣವೇ ಎಲ್ಲವೂ ಅಲ್ಲ ಎಂಬ ಸಣ್ಣ ವಿಚಾರ ನಮಗೆ ಆರ್ಥವಾಗುವುದಾದರೂ ಯಾವಾಗ..? 

ಶನಿವಾರ, ಏಪ್ರಿಲ್ 11, 2020

ಭವಿಷ್ಯ ನಿರ್ಮಿಸುವ ಗುಡ್ ಹ್ಯಾಬಿಟ್ಸ್ ಅಂಡ್ ಹಾಬಿಸ್ಸ್..

⏩ ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ
ಒಂದಷ್ಟು ಚಲನಚಿತ್ರಗಳು ಜನರಿಗೆ ಮನರಂಜನೆ ನೀಡುವುದರ ಜೊತೆಗೆ ಸಾಮಾಜಿಕ ಕಾಳಜಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಕೆಲ ಚಿತ್ರನಟರಂತು ಸಾಮಾಜಿಕ ಕಳಕಳಿಯ ಕಥೆಗಳನ್ನೇ ಆಯ್ದುಕೊಂಡು ಚಿತ್ರ ಮಾಡುತ್ತಾರೆ. ಕಾರಣ ತಮ್ಮ ಚಿತ್ರಗಳ ಮೂಲಕ ಜನರಲ್ಲಿ ತಿಳುವಳಿಕೆ ಮೂಡಲಿ ಎಂಬ ಆಶಯದಿಂದ. ಆ ಸಾಲಿಗೆ ತೆಲುಗಿನ ನಟ ಪ್ರಿನ್ಸ್ ಮಹೇಶ್ ಬಾಬು ಸೇರುತ್ತಾರೆ. ಹತ್ತಾರು ಸದಭಿರುಚಿಯ ಚಿತ್ರಗಳನ್ನು ಮಾಡಿದ್ದಾರೆ. ಪ್ರತಿ ಚಿತ್ರವು ಭಿನ್ನ, ವಿಭಿನ್ನ ಕಥೆಯಿಂದ ಕೂಡಿರುತ್ತದೆ. ಸರಿಲೇರು ನಿಕೇವ್ವರು, ಮಹರ್ಷಿ, ಭರತ್ ಅನೇ ನೇನು, ಶ್ರೀಮಂತುಡು, ಬ್ರಹ್ಮೋತ್ಸವಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೇ ಚೆಟ್ಟು, ಒಕ್ಕಡು, ನಿಜಂ, ದೂಕೂಡು, ಸೈನಿಕುಡು, ಅತಡು ಸೇರಿದಂತೆ ಮತ್ತಿತರ ಚಿತ್ರಗಳ ಮೂಲಕ ಸಮಾಜದ ಅಭಿವೃದ್ದಿಗೆ ಪೂರಕವಾದ ಸಂದೇಶ ಹಾಗೂ ಜನರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿ ಹೇಳಿದ್ದಾರೆ.
ಇತ್ತಿಚೀಗೆ ಟಿ.ವಿ ಸಂದರ್ಶನವೊಂದರಲ್ಲಿ ನಟ ಮಹೇಶ್ ಬಾಬುರನ್ನು ಸಂದರ್ಶನ ಮಾಡುತ್ತಿದ್ದ ನಿರೂಪಕಿ ಪ್ರಶ್ನೆ ಕೇಳುತ್ತ, ಸಾರ್ ಒಬ್ಬ ವ್ಯಕ್ತಿ ಸಮಾಜದಲ್ಲಿ ಬೆಳೆಯಬೇಕಾದರೆ ಹಣ, ಧರ್ಮ, ಜಾತಿ, ಅಧಿಕಾರ, ಬ್ಯಾಗ್ರೌಂಡ್ ಸಪೋರ್ಟ್ ಇದರಲ್ಲಿ ಯಾವುದು ಅತಿ ಮುಖ್ಯ ಎಂದಾಗ, ಮಹೇಶ್ ಬಾಬು ಉತ್ತರಿಸುತ್ತ, ಒಬ್ಬ ವ್ಯಕ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ಹಾಗೂ ಯಶಸ್ಸು ಪಡೆಯಬೇಕಾದರೆ ಅಧಿಕಾರ, ಜಾತಿ, ಹಣ ಅಲ್ಲ ಬೇಕಾದದ್ದು, ಬದಲಾಗಿ ನಾವು ಚಿಕ್ಕಂದಿನಿಂದ ಬೆಳೆಸಿಕೊಳ್ಳುವ ಉತ್ತಮವಾದ ಹವ್ಯಾಸ, ಅಭ್ಯಾಸಗಳು ಎಂದು ಒಂದೇ ಮಾತಿನಲ್ಲಿ ಉತ್ತರಕೊಟ್ಟರು. 
ನಾವು ಅಳವಡಿಸಿಕೊಳ್ಳುವ ಹವ್ಯಾಸ, ಅಭ್ಯಾಸಗಳೇ ನಮಗೆ ಸಾಧಿಸಬೇಕೆಂಬ ಛಲ ಹಾಗೂ ಅದಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ನಮ್ಮ ಜೀವನಕ್ಕೊಂದು ದಾರಿ ತೋರಿಸಿ, ಜೀವನವನ್ನು ಸುಂದರವಾಗಿ ರೂಪಿಸುವ ಅಪರಿಮಿತವಾದ ಶಕ್ತಿ ನಮ್ಮ ಹವ್ಯಾಸ, ಅಭ್ಯಾಸಗಳಿಗಿವೆ. ಆದ್ದರಿಂದ ನಮ್ಮ ಹವ್ಯಾಸಗಳನ್ನು ಉತ್ತಮ ಪಡಿಸಿಕೊಳ್ಳಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳುತ್ತಾರೆ.  
ಶ್ರೀಮಂತುಡು ಚಿತ್ರದಲ್ಲಿ ಮಹೇಶ್ ಬಾಬು ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸುತ್ತಾರೆ. ಅವರು ಚಿತ್ರಕ್ಕೆ ಸೀಮಿತರಾಗದೆ ತಮ್ಮ ಸ್ವಗ್ರಾಮ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಸಮೀಪದ  ಬುರ್ರೆಪಾಲೆಂ ಗ್ರಾಮ ಹಾಗೂ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಸಿದ್ದಾಪುರ ಗ್ರಾಮ. ಈ ಎರಡು ಗ್ರಾಮಗಳನ್ನು ಅವರು ದತ್ತು ತೆಗೆದುಕೊಂಡು ಆ ಗ್ರಾಮಗಳಲ್ಲಿ ಶಾಲೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮದಲ್ಲಿ ರಸ್ತೆಗಳ ನಿರ್ಮಾಣ, ಬಸ್ ತಂಗುದಾಣ ಸೇರಿದಂತೆ ಮತ್ತಿತರ ಮೂಲಭೂತ ಅಭಿವೃದ್ದಿ ಕಾಮಗಾರಿಗಳನ್ನು ತಮ್ಮ ಸ್ವಂತ ಹಣದಿಂದ ಮಾಡಿದ್ದಾರೆ. ಈ ರೀತಿಯ ಸಮಾಜ ಸೇವೆ ಮಾಡಬೇಕೆಂಬ ಆಲೋಚನೆ ನನ್ನಲ್ಲಿ ಹುಟ್ಟಿದ್ದು ನನ್ನ ಹವ್ಯಾಸಗಳಿಂದಲೇ ಎಂದು ಪುನರುಚ್ಚರಿಸುತ್ತಾರೆ.
ನಟ ಮಹೇಶ್ ಬಾಬುರವರು ಹೇಳಿದ್ದು ನೂರಕ್ಕೆ ನೂರು ಸತ್ಯ,
ನಮ್ಮ ಪರಿಪೂರ್ಣವಾದ ಹವ್ಯಾಸ, ಅಭ್ಯಾಸಗಳು ನಮ್ಮಲ್ಲಿ ಆತ್ಮಶಕ್ತಿ, ಮನೋಬಲ ಮತ್ತು ನಮ್ಮ ದೈಹಿಕ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಹವ್ಯಾಸಗಳಿದ್ದಾಗ ಮಾತ್ರ ಮನಸ್ಸು ಕಲ್ಮಶವಾಗುವುದಿಲ್ಲ ಹಾಗೂ ಮನಸ್ಸು ಸದಾ ಉಲ್ಲಾಸವಾಗಿರುತ್ತದೆ. ಮನಸ್ಸು ಹತೋಟಿಯಲ್ಲಿದ್ದಾಗ ಗುರಿಯ ಹಾದಿ ತಪ್ಪುವ ಮಾತೇ ಇಲ್ಲ. 
ಇಂಗ್ಲೀಷ್ ನಲ್ಲಿ ಸುಂದರವಾದ ಮಾತೊಂದಿದೆ, You cannot change your future, but you can change your habits and surely your habits will change your future. ಅಂದರೆ ನಮ್ಮ ಭವಿಷ್ಯವನ್ನು ತಿದ್ದಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನನ್ನ ಅಭ್ಯಾಸ, ಹವ್ಯಾಸಗಳು ಬದಲಾದರೆ ಖಂಡಿತವಾಗಿಯೂ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದು ಈ ವಾಕ್ಯ ಹೇಳುತ್ತದೆ. ನಮ್ಮ ಭವಿಷ್ಯವು ಹೇಗಿರುತ್ತದೆ ಎಂದು ನಿರ್ಧಾರವಾಗುವುದು ನಮ್ಮ ಜಾತಿ, ಹಣ, ಅಧಿಕಾರದ ಆಧಾರದಲ್ಲಿ ಅಲ್ಲವೇ ಅಲ್ಲ. ಬದಲಾಗಿ ನಮ್ಮ ಹವ್ಯಾಸ ಹಾಗೂ ಅಭ್ಯಾಸಗಳ ಮೇಲೆಯೇ ನಮ್ಮ ಭವಿಷ್ಯವು ನೆಲೆ ನಿಂತಿದೆ.
ಉತ್ತಮವಾದ ಹವ್ಯಾಸಗಳತ್ತ ಹೊರಟರೆ ಮೊದಲಿಗೆ ಸಿಗುವುದು ಆಧ್ಯಾತ್ಮೀಕತೆಯತ್ತ ಒಲವು. ನಮ್ಮ ಕಣ್ಣಿಗೆ ಕಾಣದ ಒಂದು ಅದ್ಬುತ ಶಕ್ತಿ ಎಂದರೆ ಅದು ದೇವರು. ಭಗವಂತನನ್ನು ನಂಬುವುದು ಬಿಡುವುದು ಅವರವರ ವ್ಯಕ್ತಿಗತವಾದದ್ದು. 
ನಮಗೆ ಕಷ್ಟಗಳು ಬಂದಾಗ ನಮ್ಮ ಜೊತೆಗೆ ಯಾರು ಇಲ್ಲವಲ್ಲ ಎಂದು ಅನಿಸಿದ ಎಷ್ಟೋ ಸಂದರ್ಭಗಳಲ್ಲಿ ದೇವರಿದ್ದಾನೆ ಬಿಡು ಎಂದು ಹೆಜ್ಜೆ ಮುಂದೆ ಹಾಕುತ್ತೇವೆ, ಅದು ಕಣ್ಣಿಗೆ ಕಾಣದಿದ್ದರು ದೇವರು ನೀಡುವ ಆಂತರಿಕ ಶಕ್ತಿ. ಸಮಯ ಸಿಕ್ಕಾಗ ಇಷ್ಟದ ಸನ್ನಿಧಿಗೆ ಹೋಗುವುದರಿಂದ ಮನಸ್ಸು ನಿರ್ಮಲವಾಗಿರುತ್ತದೆ. ಆಧ್ಯಾತ್ಮಿಕತೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನವು ಹಾಗೂ ದೃಶ್ಯಗಳ ವೀಕ್ಷಣೆಯು ನಮ್ಮಲ್ಲಿ ಸಕರಾತ್ಮಕ ನಿಲುವನ್ನು ಮೂಡಿಸುತ್ತದೆ. ಯಾರು ಇದ್ದರು, ಇಲ್ಲದಿದ್ದರು ದೇವರು ನಮ್ಮ ಜೊತೆಗಿದ್ದಾನೆ ಎಂಬ ಆ ಒಂದು ಭಾವನೆಯು ನಮಗೆ ಗೊತ್ತಿಲ್ಲದೆಯೇ ನಮ್ಮ ಆತ್ಮಶಕ್ತಿ ಬಲಗೊಳಿಸುತ್ತದೆ.
ಇನ್ನು ಪ್ರಾಪಂಚಿಕ ಜ್ಞಾನವನ್ನು ಪಡೆದು ಕೊಳ್ಳಬೇಕಾದರೆ ದೇಶ ಸುತ್ತ ಬೇಕು, ಇಲ್ಲವೇ ಕೋಶ ಓದಬೇಕು ಎಂದು ಗಾದೆ ಮಾತು ಹೇಳುತ್ತದೆ. ಇಂದು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಶಿಕ್ಷಣ, ಸಿನಿಮಾ ಒಳಗೊಂಡಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಹವ್ಯಾಸಗಳಲ್ಲೊಂದು ಪುಸ್ತಕ ಓದುವುದು. ಇಂದು ಯಾವುದೇ ಪುಸ್ತಕಗಳನ್ನು ಬೇಕಾದರೂ ತರಿಸಿಕೊಳ್ಳುವ ಅವಕಾಶವಿದ್ದರೂ ಖರೀದಿಸಿ ಓದುವವರ ಸಂಖ್ಯೆ ಕಡಿಮೆ. ಅನವಶ್ಯಕವಾಗಿ ಸಾವಿರಾರು ರೂ. ಹಣವನ್ನು ವ್ಯರ್ಥ ಮಾಡುತ್ತೇವೆ. ಧೂಮಪಾನ, ಮದ್ಯಪಾನ, ಪಾರ್ಟಿ, ಪಬ್ ಎಂದು ಸಾವಿರಾರು ರೂ. ವ್ಯಯಿಸುವ ಜನರು ಇದ್ದಾರೆ. ಕೇವಲ ಹತ್ತು ರೂ. ಕೊಟ್ಟರು ಜ್ಞಾನ ಬೆಳೆಸುವ ಪುಸ್ತಕ ಬರುತ್ತದೆ. ಆದರೆ ಖರೀದಿಸುವ ಮನಸ್ಸು ಬಹುತೇಕರಿಗಿಲ್ಲ. ಕನಿಷ್ಠ ತಿಂಗಳಿಗೊಂದಾದರೂ ಪುಸ್ತಕ ಖರೀದಿಸುವ ಹಾಗೂ ಅದನ್ನು ಓದುವ ಹವ್ಯಾಸ ನಮ್ಮ ಉನ್ನತಿಗೆ ಕಾರಣವಾಗುತ್ತದೆ. ಪ್ರತಿದಿನ 5 ರೂ.ಕೊಟ್ಟು ಮನೆಗೆ ದಿನಪತ್ರಿಕೆಗೆ ಹಾಕಿಸಿಕೊಳ್ಳುವುದರಿಂದ ಆಗುವ ಲಾಭ ಒಂದೇ ಎರಡೇ..
ವಾಸ್ತವವಾಗಿ ಹೇಳಬೇಕೆಂದರೆ ಕೆಲಸಕ್ಕೆ ಬಾರದ ಎಷ್ಟೋ ವಿಚಾರಗಳಿಗೆ ಸಮಯ ವ್ಯರ್ಥ ಮಾಡಿ ಬಿಡುತ್ತೇವೆ. ಅದರ ಬದಲು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಸಾಕಷ್ಟು ಗ್ರಂಥಾಲಯಗಳು ನಮ್ಮಲ್ಲಿವೆ. ಆದರೂ ಗ್ರಂಥಾಲಯಗಳಿಗೆ ಹೋಗುವ ಅಭ್ಯಾಸ ಕೆಲವರಿಗೆ ಮಾತ್ರ ಇದೆ. ಸಮಯ ಸಿಕ್ಕಾಗಲೆಲ್ಲ ನಮ್ಮ ಸುತ್ತಲಿನ ಗ್ರಂಥಾಲಯಗಳಿಗೆ ಹೋಗಿ ಕನಿಷ್ಟ ಅರ್ಧ ಗಂಟೆಯಾದರೂ ಅಲ್ಲಿ ಕಾಲ ಕಳೆಯುವ ಹವ್ಯಾಸ ಎಲ್ಲರಿಗೂ ಅಗತ್ಯ. ಮನೆಯನ್ನೇ ಸಣ್ಣ ಗ್ರಂಥಾಲಯವನ್ನಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕಿದೆ.   
ಇತ್ತಿಚೀಗೆ ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದೆ, ಅಲ್ಲಿ ಮದುವೆಗೆ ಬಂದವರಿಗೆಲ್ಲ ಒಂದು ಹೂವಿನ ಗಿಡವನ್ನು ಉಡುಗೊರೆಯಾಗಿ ನೀಡಿದರು. ಹೊಸ ಪರಂಪರೆಯಾಗಿ ಎಲ್ಲರಿಗೂ ಗಿಡ ನೀಡುತ್ತಿದ್ದೀರಾ ಎಂದು ಅಲ್ಲಿದ್ದ ಹಿರಿಯರೊಬ್ಬರನ್ನು ಪ್ರಶ್ನೆ ಕೇಳಿದೆ, ಅದಕ್ಕೆ ಅವರು ನಮಗ್ಯಾರಿಗೂ ಗಿಡಗಳನ್ನು ಖರೀದಿಸಿ ಬೆಳೆಸಿ, ಪರಿಸರ ಕಾಪಾಡಬೇಕೆಂಬ ಪರಿಜ್ಞಾನವಂತು ಇಲ್ಲ. ಕನಿಷ್ಟ ಈ ಮದುವೆಗೆ ಬಂದವರಿಗೆ ಉಚಿತವಾಗಿ ಗಿಡ ಕೊಡುತ್ತೇವೆ. ಅದನ್ನು ಅವರು ಮನೆ ಹತ್ತಿರ ಬೆಳೆಸಿದರೆ ಸಣ್ಣ ಪ್ರಮಾಣದಲ್ಲಾದರೂ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.  
ನಿಜ ಪಾರ್ಟಿ, ತಿಂಡಿ ತಿನಿಸು, ನಮ್ಮ ಮನರಂಜನೆಗಾಗಿ ಅನಗತ್ಯವಾಗಿ ಎಷ್ಟೆಷ್ಟೋ ಹಣ ವ್ಯರ್ಥ ಮಾಡುವ ನಾವು ಒಂದು ಸಣ್ಣ ಗಿಡವನ್ನಾದರೂ ಬೆಳೆಸಬೇಕೆಂದು ಆಲೋಚಿಸುವುದೇ ಇಲ್ಲ. ನಮ್ಮ ಪೂರ್ವಿಕರು ಬೆಳೆಸಿದ ಗಿಡ, ಮರಗಳಿಂದ ನಾವು ಆಶ್ರಯ ಪಡೆದಿದ್ದೇವೆ. ಅವರು ಬೆಳೆಸಿದ ಗಿಡ, ಮರಗಳನ್ನು ಕಡಿದು ಬದುಕುತ್ತಿದ್ದೇವೆ. ನಮ್ಮ ಹುಟ್ಟುಹಬ್ಬ ಹಾಗೂ ನಮಗೆ ಪ್ರಾಮುಖ್ಯವಾದ ದಿನಗಳಂದು ಒಂದೊಂದು ಗಿಡ ನೆಟ್ಟು ಸಂರಕ್ಷಿಸಿದರೆ ಮನುಷ್ಯರಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ನಾವು ಮನಸ್ಸು ಮಾಡಿದರೆ ನಮ್ಮ ಕೈಯಲ್ಲಾದ ಮಟ್ಟಿಗೆ ಗಿಡಗಳನ್ನು ಬೆಳೆಸಿ, ಪರಿಸರಕ್ಕೆ ನಮ್ಮ ಕೊಡುಗೆ ನೀಡುವುದು ದೊಡ್ಡ ವಿಚಾರವೇ ಅಲ್ಲ. ಗಿಡ ಬೆಳೆಸಬೇಕೆಂಬ ಹವ್ಯಾಸವೇ ಅತ್ಯಂತ ಶ್ರೇಷ್ಠ.   
ಇನ್ನೂ ಕೆಲವರ ಪ್ರಕಾರ ಸಿನಿಮಾ ನೋಡುವುದು ದಡ್ಡರು ಹಾಗೂ ಬೇಜಾಬ್ದಾರಿ ಗುಣ ಹೊಂದಿರುವವರು ಮಾತ್ರ ಎಂದು. ನನ್ನ ಪ್ರಕಾರ ಸಿನಿಮಾ ನೋಡುವುದು ತಪ್ಪೆಂದು ಹೇಳುವುದೇ ದೊಡ್ಡ ತಪ್ಪು. ಸಮಾಜದ ಅಭಿವೃದ್ದಿಗೆ ಪ್ರೇರಣೆ ನೀಡುವ, ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಚಲನಚಿತ್ರ ಮಂದಿರಗಳಿಗೆ ಹೋಗಿ ನೋಡುವ ಹವ್ಯಾಸ ಬೆಳೆಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ, ಜೊತೆಗೆ ಚಿತ್ರದಲ್ಲಿನ ಒಳ್ಳೆಯ ಅಂಶಗಳು ನಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ, ಮನಸ್ಸಿಗೂ ನೆಮ್ಮದಿ ಬೇಕು ತಾನೆ. 
ಇನ್ನು ನಾವು ಪ್ರತಿನಿತ್ಯ ಮಾಡುವ ಅನಗತ್ಯ ಖರ್ಚುಗಳನ್ನು ಉಳಿಸಿ, ನಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಪ್ರವಾಸ ಹೋಗುವ ಹವ್ಯಾಸ ಬೆಳೆಸಿಕೊಂಡರೆ ಸಾಧನೆಯ ದೃಷ್ಟಿಯಿಂದ ಸೂಕ್ತ. ಒಂದು ಮಾತಿದೆ ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರ ಎಂದು. ನಮಗೆ ಇತಿಹಾಸದ ಘಟನೆಗಳ ಬಗ್ಗೆ ನೈಜ ಚಿತ್ರಣ ಸಿಗಬೇಕಾದರೆ ಪ್ರವಾಸ ಹೋಗುವುದು ಬಿಟ್ಟು ಮತ್ತೊಂದು ದಾರಿ ಇಲ್ಲ. ಪ್ರವಾಸವೆಂದರೆ ಬರೀ ಮೋಜು, ಮಸ್ತಿ ತಾಣಗಳನ್ನು ಸುತ್ತುವುದಲ್ಲ. ಅದು ಬಿಟ್ಟು ಐತಿಹಾಸಿಕವಾಗಿ ಗುರ್ತಿಸಿಕೊಂಡ ಪ್ರದೇಶಗಳು, ಪುರಾತನ ದೇಗುಲ, ವಿವಿಧ ಸಾಮ್ರಾಜ್ಯಗಳು ನಿರ್ಮಿಸಿದ ಕೋಟೆಗಳು, ಕಲೆ, ಸಾಂಸ್ಕೃತಿಕ, ಧಾರ್ಮಿಕತೆಯ ಸಂಸ್ಕøತಿಯನ್ನು ಸಾರುವ ಸ್ಥಳಗಳು, ವನ್ಯಧಾಮ, ಪಕ್ಷಿಧಾಮ, ವಸ್ತು ಸಂಗ್ರಹಾಲಯ ಮುಂತಾದುವುಗಳನ್ನು ವೀಕ್ಷಿಸುವ ಹವ್ಯಾಸವಿದ್ದರೆ ಇತಿಹಾಸದಲ್ಲಿ ಅಡಗಿಕೊಂಡಿರುವ ಅದೆಷ್ಟೋ ಅಂಶಗಳು ತಿಳಿಯುವುದರ ಜೊತೆಗೆ ಜ್ಞಾನಾರ್ಜನೆಯು ಆಗುತ್ತದೆ. 
ನಮ್ಮ ಸುತ್ತಮುತ್ತಲೂ ಅದೆಷ್ಟೋ ಬಡವರು, ನಿರ್ಗತಿಕರು ಇರುತ್ತಾರೆ. ಒಂದೊತ್ತು ತಿನ್ನಲು ಕಷ್ಟ ಪಡುವವರು ಇದ್ದಾರೆ. ಒಂದು ಪುಸ್ತಕ ಖರೀದಿಸಲು ಸಾಧ್ಯವಾಗದ ಬಡ ಮಕ್ಕಳು ಇದ್ದಾರೆ. ಎಲ್ಲರಿಗೂ ಸಹಾಯ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕನಿಷ್ಟ ವರ್ಷಕ್ಕೊಮ್ಮೆ ಬರುವ ನಮ್ಮ ಹುಟ್ಟುಹಬ್ಬದಂದು ನಮ್ಮ ಸಮೀಪದ ಸರಕಾರಿ ಶಾಲೆಯ ಬಡ ಮಕ್ಕಳಿಗೆ ನಮ್ಮ ಕೈಯಲ್ಲಾಗುವ ಸಣ್ಣ ಪ್ರಮಾಣದಲ್ಲಾದರೂ ಸಹಾಯ ಮಾಡುವ ಅಭ್ಯಾಸ ನಮ್ಮದಾದರೆ, ನಾವು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಕ್ಕೂ ಸಾರ್ಥಕತೆ ಸಿಗುತ್ತದೆ. ನಮ್ಮ ಹುಟ್ಟುಹಬ್ಬದಂದು ನಾವು ಮಾತ್ರ ಸಂತೋಷವಾಗಿದ್ದರೆ ಸಾಲದು, ನಮ್ಮಿಂದ ಇಬ್ಬರಾದರೂ ಖುಷಿಯಿಂದಿರಬೇಕು. ಸಾಮಾಜಿಕ ಸೇವೆಯ ಪರಿಕಲ್ಪನೆ ಹವ್ಯಾಸಗಳಲ್ಲೇ ಅತ್ಯಂತ ಶ್ರೇಷ್ಟವಾದದ್ದು. 
ನಾವು ಯಾರಾದರೂ ಸ್ನೇಹಿತರ, ಸಂಬಂಧಿಕರ ಮದುವೆಗಳಿಗೆ ಹೋದಾಗ ಸಾಮಾನ್ಯವಾಗಿ ಯಾವುದಾದರೂ ಗಿಫ್ಟ್ ಕೊಡುತ್ತೇವೆ. ಹಲವರು ಹಣವನ್ನು ಹಾಕುತ್ತಾರೆ. ಅದರ ಬದಲಾಗಿ ಜ್ಞಾನ ತುಂಬುವ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರೆ ಶಾಶ್ವತವಾಗಿ ಅದು ಅವರ ಬಳಿಯೇ ಇರುತ್ತದೆ. ಆ ಪುಸ್ತಕವನ್ನು ಹಲವರು ಓದಿ ಮಾಹಿತಿ ಪಡೆಯುತ್ತಾರೆ. ಜೊತೆಗೆ ಪುಸ್ತಕ ಓದುವ ಅಭ್ಯಾಸ ಬೆಳೆಸುವವರ ಸಾಲಿಗೆ ನಾವು ಸೇರುತ್ತೇವೆ. 
ನಮ್ಮ ಸುತ್ತಮುತ್ತಲೂ ವಿಜ್ಞಾನ, ಸಾಹಿತ್ಯ, ಭಾಷೆ, ಧಾರ್ಮಿಕತೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಉಪನ್ಯಾಸ, ಚರ್ಚಾಗೋಷ್ಠಿ, ಸಂವಾದಗಳು ನಡೆಯುತ್ತಲೇ ಇರುತ್ತದೆ. ಇಂತಹ ವಿಶೇಷವಾದ ಕಾರ್ಯಕ್ರಮಗಳಿಗೂ ಹೋಗುವುದರಿಂದ ಪ್ರಮುಖ ವ್ಯಕ್ತಿಗಳನ್ನು ನೋಡುವುದರ ಜೊತೆಗೆ ಅವರ ಭಾಷಣವನ್ನು ಕೇಳುವ ಅದೃಷ್ಟ ನಮ್ಮದಾಗುತ್ತದೆ. ಇಂತಹ ಕಾರ್ಯಕ್ರಮಳಲ್ಲಿ ಭಾಗವಹಿಸುವ ಹವ್ಯಾಸವಿದ್ದರಂತೂ ವಿಚಾರವಂತರಾಗುತ್ತೇವೆ. 
ಒಂದಂತು ಸತ್ಯ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಾವು ಅನುಸರಿಸುವ ಹವ್ಯಾಸ, ಅಭ್ಯಾಸಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ನಮ್ಮ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸಿಕೊಳ್ಳಬೇಕಾದರೂ, ನಮ್ಮ ಗುರಿಯನ್ನು ಬೆನ್ನತಿ ಹೋಗಬೇಕಾದರೂ, ಅದಕ್ಕೆ ಪೂರಕವಾಗಿ ಸಹಕರಿಸುವುದು ನಮ್ಮ ಹವ್ಯಾಸ, ಅಭ್ಯಾಸಗಳು ಮಾತ್ರ. ಸೋ ಪಾಲೋ ಗುಡ್ ಹ್ಯಾಬಿಟ್ಸ್ ಅಂಡ್ ಹಾಬಿಸ್ಸ್..