⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರು ಕಾಲೇಜೊಂದಕ್ಕೆ ಉಪನ್ಯಾಸ ನೀಡಲು ಹೋದಾಗ, ಒಬ್ಬ ವಿದ್ಯಾರ್ಥಿ ಸಾರ್ ನಿಮ್ಮ ಸಾಧನೆಗೆ ಸ್ಪೂರ್ತಿ ಏನು ಎಂದು ಪ್ರಶ್ನೆ ಹಾಕಿದನಂತೆ. ಆಗ ಅಬ್ದುಲ್ ಕಲಾಂರವರು ಉತ್ತರಿಸುತ್ತ My Best Motivations are Insult & Failure ಎಂದು ಹೇಳಿದ್ದರು.
ನನ್ನ ಸಾಧನೆಗೆ ಪ್ರೇರಣೆ ನೀಡಿದ್ದು ನನಗಾದ ಅವಮಾನ ಹಾಗೂ ಸೋಲು. ಬೇರೆಯವರು ನಮ್ಮನ್ನು ಅವಮಾನಿಸಿದಾಗಲೇ ಸಾಧನೆ ಮಾಡಬೇಕೆಂಬ ಹಠ ನಮ್ಮಲ್ಲಿ ಹುಟ್ಟುತ್ತದೆ. ಸೋಲು ಕಂಡಾಗಲೇ ಅದರಿಂದ ಪಾಠ ಕಲಿತು ಗೆಲುವಿನ ಬೆನ್ನು ಹತ್ತುತ್ತೇವೆ. ಅವರೆಡು ಯಾರ ಜೀವನದಲ್ಲಿ ಆಗುವುದಿಲ್ಲವೋ, ಅವರು ನನ್ನ ಪ್ರಕಾರ ಸಾಧನೆಯ ಸಮೀಪಕ್ಕೂ ಸುಳಿಯಲು ಸಾಧ್ಯವಿಲ್ಲ ಎಂದು ಅತ್ಯದ್ಬುತವಾಗಿ ಹೇಳಿದ್ದರು.
ಇಂದು ನಮ್ಮ ಶತ್ರು ಯಾವುದೆಂದರೆ ಅವಮಾನ, ಟೀಕೆ, ವಿಮರ್ಶೆಗಳನ್ನು ಎದುರಿಸುವ ಮಾನಸಿಕ ಶಕ್ತಿ ಇಲ್ಲದಿರುವುದು. ಸಾಧನೆಯ ಹಾದಿಯಲ್ಲಿ ಬಹುತೇಕರನ್ನು ಪದೇ ಪದೇ ಕಾಡುವ ಸಮಸ್ಯೆ ಅವಮಾನ. ಸಣ್ಣ ತಪ್ಪಿಲ್ಲದಿದ್ದರೂ ವಿನಾ ಕಾರಣ ಬೇರೆಯವರಿಂದ ಟೀಕೆ, ವಿಮರ್ಶೆಗಳಿಗೆ ಗುರಿಯಾಗುವುದು.
ಇಂದು ಎಷ್ಟೋ ಜನ ಈ ಅವಮಾನ, ಟೀಕೆಗಳ ಸಹವಾಸವೇ ಬೇಡವೆಂದು ತಟಸ್ಥರಾಗಿ ಇದ್ದು ಬಿಡುತ್ತಾರೆ. ಅಂದುಕೊಂಡ ಗುರಿಯ ಬೆನ್ನು ಹತ್ತುವುದು ಬಿಟ್ಟು ಮತ್ತೊಂದು ದಾರಿಯತ್ತ ಸಾಗುತ್ತಾರೆ. ಏಕೆಂದರೆ ಅವಮಾನಗಳಿಂದ ಆಗುವ ಮಾನಸಿಕಯಾತನೆ ಆ ರೀತಿಯ ಮನಸ್ಥಿತಿಯನ್ನು ಸೃಷ್ಠಿಸಿ ಬಿಡುತ್ತದೆ. ಗೆದ್ದೆ ಗೆಲ್ಲುವೆವು ಎಂದು ಬಲವಾದ ನಂಬಿಕೆ ಹೊಂದಿದ ಅದೆಷ್ಟೋ ಜನರು ಅವಮಾನಗಳಿಗೆ ಒಳಗಾಗಿ ಅರ್ಧದಲ್ಲಿಯೇ ಗುರಿಯ ಓಟ ನಿಲ್ಲಿಸಿ ಬಿಡುತ್ತಾರೆ.
ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರಂತೆ, ನಮಗೆ ಅವಮಾನಗಳು ಎದುರಾದಾಗ ಧೃಡ ಮನಸ್ಸಿನಿಂದ ಅದನ್ನು ಸ್ವೀಕರಿಸಬೇಕು. ಅವಮಾನಗಳನ್ನು ಗೆಲುವಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳಬೇಕೆ ಹೊರತು ಭಯ, ನೋವು ಪಟ್ಟರೆ ಸಾಧಿಸುವುದಾದರೂ ಏನು? ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರಂತೆ.
ನಾನು ಓದಿದ್ದು ಸರಕಾರಿ ಶಾಲೆ, ನಮ್ಮ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ್ದವರು. ನಮ್ಮ ಶಾಲೆಯ ಶಿಕ್ಷಕರೊಬ್ಬರು ಪಾಠದ ಜೊತೆಗೆ ದಿನನಿತ್ಯವು ನೈತಿಕ ಮೌಲ್ಯಗಳ ಬಗ್ಗೆ ಕನಿಷ್ಠ ಅರ್ಧಗಂಟೆಯಾದರೂ ನಮಗೆ ಹೇಳುತ್ತಿದ್ದರು. ಏಕೆಂದರೆ ನಮ್ಮ ಶಿಕ್ಷಕರು ಸ್ವತಹ ಅವಮಾನ, ಟೀಕೆಗಳಿಗೆ ಒಳಗಾಗಿ ಬದುಕು ಕಟ್ಟಿಕೊಂಡವರು. ಬಡತನದಿಂದ ಎದ್ದು ಗೆದ್ದು ಬಂದವರು, ಜೀವನದ ದಾರಿ ಉದ್ದಕ್ಕೂ ಹಲವರ ಅವಮಾನಗಳಿಗೆ ಒಳಗಾಗಿ ಹಲವು ಬಾರಿ ನೋವು ಕಂಡ ನಮ್ಮ ಮೇಷ್ಟ್ರು, ಅವಮಾನಗಳಿಂದ ಆಗುವ ಮಾನಸಿಕಯಾತನೆ ತಮ್ಮ ವಿದ್ಯಾರ್ಥಿಗಳಿಗೆ ಆಗಬಾರದೆಂದು ಶಾಲೆಯ ವಿದ್ಯಾರ್ಥಿಗಳಿಗೆಲ್ಲ ಧೈರ್ಯ ತುಂಬುವ ಮಾತುಗಳನ್ನು ಹೇಳುತ್ತಿದ್ದರು.
ನೀವು ನಾನು ಮಾಡುವ ವಿಷಯದಲ್ಲಿ ಕಡಿಮೆ ಅಂಕ ತೆಗೆದುಕೊಳ್ಳಿ, ನಾನು ನಿಮ್ಮನ್ನು ಒಂದು ಮಾತು ಬೈಯುವುದಿಲ್ಲ, ಇಲ್ಲವೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಚಿಂತೆಯಿಲ್ಲ. ಬೇಕಾದರೆ ನಾನೇ ಹೆಚ್ಚುವರಿ ತರಗತಿ ತೆಗೆದುಕೊಂಡು ನಿಮಗೆ ಪಾಠ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಹಾಗೇ ಮಾಡುತ್ತೇನೆ. ಆದರೆ ನೀವು ನೈತಿಕ ಮೌಲ್ಯಗಳ ಜೊತೆಗೆ ಪ್ರಪಂಚದಲ್ಲಿ ಬದುಕುವ ಕಲೆ ರೂಡಿಸಿಕೊಳ್ಳಬೇಕು, ಅದಿಲ್ಲದಿದ್ದರೆ ಖಂಡಿತಾ ಜೀವನ ಸಾಗಿಸಲು ಸಾಧ್ಯವಿಲ್ಲ.
ನೋಡ್ರಪ್ಪ ನಿಮ್ಮ ಬಳಿ ಹಾಕಲು ಸರಿಯಾದ ಬಟ್ಟೆಯಿಲ್ಲ, ಪುಸ್ತಕ ತೆಗೆದುಕೊಳ್ಳಲು ದುಡ್ಡಿಲ್ಲ, ಇಷ್ಟವಾದ ತಿಂಡಿಗಳನ್ನು ತಿನ್ನಲು ಸಾಧ್ಯವಿಲ್ಲ, ಬೇರೆ ಮಕ್ಕಳಂತೆ ಇಷ್ಟವಾದವುಗಳನ್ನು ಪಡೆದುಕೊಳ್ಳಲು ಕಷ್ಟ. ನಿಮ್ಮ ತಂದೆ, ತಾಯಿಗಳು ಕೂಲಿ ಕೆಲಸ ಮಾಡಿ ನಿಮ್ಮನ್ನು ಓದಿಸುತ್ತಿದ್ದಾರೆ. ಅವರಿಗೆ ಬರುವ ಆದಾಯದಲ್ಲಿ ನಿಮ್ಮ ಇಷ್ಟಗಳನ್ನು ಪೂರೈಸುವುದು ಅವರಿಗೆ ಕಷ್ಟ. ಪಾಪ ನೀವು ಕೇಳಲು ಹೋಗುವುದಿಲ್ಲ.
ಆದರೂ ಕಾನ್ವೆಂಟ್ ಮಕ್ಕಳಿಗಿಂತ ನೀವೇ ಗ್ರೇಟ್ ಯಾಕೆಂದರೆ, ಅವಮಾನ, ಕಷ್ಟಗಳನ್ನು ಎದುರಿಸಿ ಬದುಕುತ್ತಿರುವ ನೀವು ಜೀವನದಲ್ಲಿ ಎಂತಹ ಸನ್ನಿವೇಶಗಳು ಬಂದರೂ ಧೈರ್ಯದಿಂದ ಎದುರಿಸುತ್ತಿರಾ ಎಂದು ನಮ್ಮ ಮೇಷ್ಟ್ರು ಪದೇ ಪದೇ ಹೇಳುತ್ತಿದ್ದರು.
ಅವಮಾನ, ಟೀಕೆಗಳಿಗೆ ಭಯಬಿದ್ದರೆ ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ.
ನಮಗೆ ಅವಮಾನವಾದರೆ ಅದನ್ನು ಸಕಾರಾತ್ಮವಾಗಿ ಸ್ವೀಕರಿಸಬೇಕು. ಏಕೆಂದರೆ ನಾವು ಸಾಧನೆಯಲ್ಲಿ ಬೆಳೆಯುತ್ತಿದ್ದೇವೆ ಎಂದಾಗ ಮಾತ್ರ ಅವಮಾನ, ಟೀಕೆಗಳು ಕೇಳಿ ಬರುತ್ತವೆ. ನಾವು ಏನು ಮಾಡದೆ ನಿರ್ಲಿಪ್ತರಾಗಿದ್ದೇವೆ ಎಂದರೆ ನಮಗೆ ಅವಮಾನಗಳೇ ಆಗುವುದಿಲ್ಲ, ಯಾರೂ ಕೂಡ ನಮ್ಮನ್ನು ವಿಮರ್ಶೆ ಮಾಡುವುದಿಲ್ಲಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು.
ಒಂದು ದಿನ ನಾನು ತರಗತಿ ತೆಗೆದುಕೊಂಡಿದ್ದೆ, ಆ ತರಗತಿಯಲ್ಲಿ ನಾನು ಮಾಡುತ್ತಿದ್ದ ವಿಷಯ ಸಮಸ್ಯೆಗಳ ಬಗೆಹರಿಯುವಿಕೆ ಮತ್ತು ಕ್ರಿಯಾಶೀಲತೆ. ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ವಿಕಲಚೇತನ ಎಷ್ಟೇ ಕಷ್ಟಗಳಿದ್ದರು, ಇತರರನ್ನು ಅವಲಂಭಿಸದೆ ಸ್ವಾವಲಂಭಿ ಜೀವನ ಸಾಗಿಸುತ್ತಿರುವ ದೃಶ್ಯದ ವಿಡಿಯೋ ಒಂದನ್ನು ತೋರಿಸಿದೆ. ಕಾರಣ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರು, ಅದೆಲ್ಲವನ್ನೂ ಮೆಟ್ಟಿ ನಿಂತು ಹೋರಾಟ ಮಾಡುತ್ತಿರುವವರ ಜೀವನದ ಬಗ್ಗೆ ತಿಳಿದರೆ ಶಿಬಿರಾರ್ಥಿಗಳು ಸ್ಪೂರ್ತಿ ಹೊಂದುತ್ತಾರೆ ಎಂದು. ತರಗತಿಯಲ್ಲಿ ಹಾಜರಿದ್ದ ಒಬ್ಬ ಮಹಿಳಾ ವಿಕಲಚೇತನ ಶಿಬಿರಾರ್ಥಿ ಈ ವಿಡಿಯೋ ನೋಡಿದ ನಂತರ ಕಣ್ಣೀರು ಹಾಕಿದಳು.
ನನಗೆ ಅವರು ಏಕೆ ಅಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ, ಯಾಕಮ್ಮ ಅಳುತ್ತಿದ್ದೀಯಾ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ನೋಡಿ ಸಾರ್ ನಾನು ವಿಕಲಚೇತನಳು ಎಂದು ಶಾಲೆಯಿಂದ ಹಿಡಿದು ಕುಟುಂಬದ ಸದಸ್ಯರವರೆಗೂ ಎಲ್ಲರೂ ಅವಮಾನಸಿದ್ದಾರೆ. ಆ ಅವಮಾನಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವೆಷ್ಟು ನೋವು ಕೊಟ್ಟಿದೆ ಎಂದರೆ ಸಾಕಷ್ಟು ಬಾರಿ ನಾನು ಯಾರಿಗೋಸ್ಕರ ಬದುಕಬೇಕು ಎಂದು ಹಲವು ಬಾರಿ ಪ್ರಶ್ನೆ ಹಾಕಿಕೊಂಡಿದ್ದೇನೆ, ಎಷ್ಟೋ ಬಾರಿ ಕಣ್ಣೀರು ಹಾಕಿದ್ದೇನೆ. ಆದರೂ ನನಗೆ ಧೈರ್ಯ ತುಂಬುವ ಮಾತುಗಳನ್ನು ಒಬ್ಬರು ಹೇಳಲಿಲ್ಲ. ನಾನು ಒಂದು ಸಣ್ಣ ಸಾಧನೆಯಾದರೂ ಮಾಡದೆ ಇದ್ದು ಬಿಟ್ಟರೆ ನನಗೆ ಅವಮಾನಗಳನ್ನು ಮಾಡಿದವರಿಗೆ ಪಾಠವಾದರೂ ಕಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಹಾಕಿದಳು.
ಆಗ ನನಗೆ ಅನಿಸಿದ್ದು ನಿಜಕ್ಕೂ ವಿಕಲಚೇತನ ಈ ಹುಡುಗಿಯಲ್ಲ. ಬದಲಾಗಿ ಅವಮಾನಗಳನ್ನು ಮಾಡಿದವರು ಹಾಗೂ ಅವಮಾನಗಳನ್ನು ಸ್ವೀಕರಿಸುವ ಶಕ್ತಿ ಇಲ್ಲದವರು.
ಒಂದು ಬಾರಿ ನನ್ನನ್ನು ಪರಿಚಿತರೊಬ್ಬರು ಕೇಳಿದ್ದರು, ಯಾವ ಕಾಲೇಜಿಗೆ ಸೇರಿದ್ದಿಯಾ ಎಂದು ಅದಕ್ಕೆ ನಾನು ಸರಕಾರಿ ಕಾಲೇಜಿಗೆ ಎಂದೆ. ಅದಕ್ಕೆ ಅವರು ಸರಕಾರಿ ಕಾಲೇಜೆಂದರೆ ಸ್ಲಮ್ ಜನ ಸೇರುವ ಕಾಲೇಜಲ್ಲವೇ ಎಂದು ಉತ್ತರಿಸಿದರು. ಅದರರ್ಥ ಸ್ಲಮ್ ಜನ ಹೋಗುವ ಕಾಲೇಜಿಗೆ ನೀನು ಹೋಗುತ್ತಿದ್ದೀಯಾ, ನಿನಗೆ ಯಾವ ಗೌರವವಿದೆ ಎಂದು ಅವರ ಒಳಾರ್ಥವಾಗಿತ್ತು. ಅವರ ಮಾತಿನಿಂದ ನನಗೆ ಬೇಸರವಾಗಲಿಲ್ಲ. ಕಾರಣ ಸರಕಾರಿ ಶಾಲೆ, ಕಾಲೇಜಿಗೆ ಸ್ಲಂ ಜನ ಹೋಗಬಹುದು. ಆದರೆ ಅವರ ಮನಸ್ಸಲ್ಲಿ ಕೊಳಚೆ ಇರುವುದಿಲ್ಲ. ಪರಿಶುದ್ದವಾದ ಪ್ರಾಮಾಣಿಕತೆ ಇರುವುದು ಸರಕಾರಿ ಶಾಲೆ, ಕಾಲೇಜಿನ ಮಕ್ಕಳಲ್ಲಿ ಎಂಬುವುದು ವಾಸ್ತವ.
ಪ್ರತಿಯೊಬ್ಬರಿಗೂ ಕೆಲವೊಮ್ಮೆ ಕುಟುಂಬದ ಸದಸ್ಯರಿಂದ, ಬಂಧುಗಳಿಂದ, ಸ್ನೇಹಿತರಿಂದ, ಸಹದ್ಯೋಗಿಗಳಿಂದ ಒಂದಲ್ಲಾ ಒಂದು ರೀತಿ ಅವಮಾನವಾಗುವ ಸನ್ನಿವೇಶಗಳು ಎದುರಾಗುತ್ತಲೇ ಇರುತ್ತವೆ. ನಮ್ಮಲ್ಲಿ ಹಣ, ಆಸ್ತಿ ಇಲ್ಲದಿದ್ದರೂ ಅವಮಾನ, ಕಡಿಮೆ ಅಂಕ ಬಂದರೆ, ಸರಿಯಾದ ಕೆಲಸ ಸಿಗದಿದ್ದರೆ ಅಥವಾ ಹೆಚ್ಚು ಸಂಬಳ ಕೊಡುವ ನೌಕರಿ ಸಿಗದಿದ್ದರೂ ಅವಮಾನ. ಕಪ್ಪಗಿದ್ದರೂ, ಕುಳ್ಳಗಿದ್ದರೂ ಅವಮಾನ, ಇತ್ತಿಚೀನ ದಿನಗಳಲ್ಲಂತೂ ಪ್ರಾಮಾಣಿಕವಾಗಿ ಸರಿಯಾಗಿ ಕೆಲ ಮಾಡಿದರೂ ಅವಮಾನ. ಇನ್ನು ನಾವು ಬೇರೆಯವರಿಗಿಂತ ಸಾಧನೆಯಲ್ಲಿ ಬೆಳೆಯುತ್ತಿದ್ದೀವಿ ಎಂದರೆ ಒಂದಲ್ಲಾ ಒಂದು ವಿಷಯಕ್ಕೆ ಅವಮಾನಕ್ಕೆ ಒಳಗಾಗುವ ಸಂದರ್ಭಗಳೇ ಸೃಷ್ಟಿಯಾಗುತ್ತವೆ. ಅವಮಾನದ ಜೊತೆ ಜೊತೆಗೆ ನಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳುವ ಜನವರ್ಗವೇ ಹುಟ್ಟಿಕೊಳ್ಳುತ್ತದೆ.
ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ, ಪ್ರಾಮಾಣಿಕರಾಗಿದ್ದೇವೆ ಎಂದರೆ ಸಹಜವಾಗಿಯೇ ನಮ್ಮ ಬಗ್ಗೆ ಟೀಕೆ, ವಿಮರ್ಶೆಗಳು ಹೆಚ್ಚಾಗುತ್ತವೆ. ಹೆಜ್ಜೆ, ಹೆಜ್ಜೆಗೂ ಅವಮಾನದ ಘಟನೆಗಳು ಎದುರಾಗುತ್ತಲೇ ಇರುತ್ತವೆ. ಅವಮಾನಗಳಿಗೆ ಕುಗ್ಗಿ ಬಿಟ್ಟರೆ ಅಂದುಕೊಂಡ ಗುರಿ ತಲುಪುವುದು ಸಾಧ್ಯವಿಲ್ಲ.
ಚಿತ್ರನಟ ಉಪೇಂದ್ರರವರು ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು, ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅವಮಾನ, ಅನುಮಾನ, ಸನ್ಮಾನ ಎಂಬ ಮೂರು ಅಂಶಗಳು ಒಳಗೊಂಡಿರುತ್ತವೆ. ನೀವು ಏನಾದರೊಂದನ್ನು ಸಾಧಿಸಲು ಹೋದಾಗ ಮೊದಲು ಎದುರಾಗುವುದು ಅವಮಾನ. ಅವಮಾನವನ್ನು ಮೆಟ್ಟಿನಿಂತು ಮುಂದಕ್ಕೆ ಹೆಜ್ಜೆ ಹಾಕಿದರೆ ಆಗ ಜನ ಅನುಮಾನಿಸುತ್ತಾರೆ. ಅವಮಾನ, ಅನುಮಾನವನ್ನು ಮೀರಿ ಬೆಳೆದು ನಿಂತರೆ ಕೊನೆಯಲ್ಲಿ ಸನ್ಮಾನ ಸಿಗುತ್ತದೆ. ಬೇರೆಯವರಿಂದ ಸನ್ಮಾನ ಸ್ವೀಕರಿಸಬೇಕಾದರೆ ಅವಮಾನ, ಅನುಮಾನಗಳಿಗೆ ಸಿದ್ದವಾಗಿರಬೇಕು ಎಂದು ಹೇಳಿದ್ದರು.
ಯಾರೋ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ, ಇಲ್ಲಸಲ್ಲದ ದೂರುಗಳನ್ನು ಹೇಳುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮಗೆ ಸದಾ ನೆನಪಿರಬೇಕಾದದ್ದು ನಮ್ಮ ಗುರಿ ಹಾಗೂ ಅದು ತಲುಪುವ ದಾರಿ ಮಾತ್ರ. ಬೇರೆಯವರ ಮಾತುಗಳಿಂದ ಅವಮಾನವಾಗುತ್ತದೆ ಎಂದು ಆಲೋಚಿಸಿ ಕುಳಿತಿಕೊಳ್ಳುವ ಸಮಯವೆಲ್ಲಿದೆ ಹೇಳಿ. ನಮಗೆ ಅವಮಾನ ಮಾಡಿ, ಟೀಕೆ ಮಾಡಿದ ಅದು ಸಂಬಂಧಿಕರಿರಲಿ, ಸ್ನೇಹಿತರಿರಲಿ, ಸಹದ್ಯೋಗಿಗಳಿರಲಿ ಅವರಿಗೆ ತಿರುಗೇಟು ಕೊಡುವ ಅಸ್ತ್ರ ನಮ್ಮ ಸಾಧನೆ ಮಾತ್ರ.
ಅವಮಾನಗಳನ್ನು ಎದುರಿಸುವ ತಾಕತ್ತು ನಿಮಗೆ ಇಲ್ಲದಿದ್ದರೆ, ಸುಮ್ಮನೆ ಇದ್ದು ಬಿಡುವುದು ಲೇಸು ಎಂದು ತತ್ವಜ್ಞಾನಿ ಒಬ್ಬರ ಮಾತು ನೆನಪಿನಲ್ಲಿರಲಿ.


