ಶುಕ್ರವಾರ, ಜೂನ್ 15, 2018

ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ "ರಾಯಲಸೀಮಾ"

                  ⇰ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ತೆಲುಗು ಭಾಷೆಯ ಅದು ಮಾಸ್, ಸೆಂಟಿಮೆಂಟ್, ಕ್ಲಾಸ್, ಕಾಮೆಡಿ ಸೇರಿದಂತೆ  ಯಾವುದೇ ವರ್ಗದ ಚಿತ್ರವಿರಲಿ, ಅದರಲ್ಲಿ ಆಂಧ್ರದ ರಾಯಲಸೀಮ ಭಾಗದ ಬಗ್ಗೆ ಪ್ರಸ್ತಾಪ ಇದ್ದೇ ಇರುತ್ತದೆ. ರಾಯಲಸೀಮದ ಯಾವುದಾದರೂ ಒಂದು ಸನ್ನಿವೇಶವಿಲ್ಲದೆ ಚಿತ್ರ ಮುಗಿಯಲ್ಲ. ಅದರಲ್ಲೂ ಮಾಸ್ ಚಿತ್ರಗಳಲ್ಲಿ ರಾಯಲಸೀಮದ ಖದರ್ ಹೆಚ್ಚಾಗಿಯೇ ತೋರಿಸುತ್ತಾರೆ.
ಚಿತ್ರದ ಹೀರೋ ಬ್ಯಾಕ್ ಗ್ರೌಂಡ್ ಪ್ರಾರಂಭವು ರಾಯಲಸೀಮಾ ಭಾಗದಿಂದಲೇ ಆರಂಭ. ರಾಯಲಸೀಮಾದ ಬಗ್ಗೆ ಲೆಕ್ಕವಿಲ್ಲದಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ರಾಯಲಸೀಮಾ ಕುರಿತ ಚಿತ್ರಗಳಲ್ಲಿ ಚಿತ್ರ  ನಿರ್ದೇಶಕರು ಲಾಂಗು, ಮಚ್ಚು, ಬಾಂಬುಗಳ ಮೂಲಕ ನಡೆಯುವ ಫೈಟ್ ಸನ್ನಿವೇಶಗಳನ್ನು ಹೆಚ್ಚಾಗಿ ತೋರಿಸುತ್ತಾರೆ. ಅದಕ್ಕೆ ಕಾರಣವೂ ಇದೆ.
ವೈಯಕ್ತಿಕವಾಗಿ ನನಗೆ ಯಾವುದೇ ರಾಜಕೀಯ ಪಕ್ಷದ ಬಗ್ಗೆ ವ್ಯಾಮೋಹ ಇಲ್ಲದಿದ್ದರು ಕೂಡ ರಾಜಕೀಯ ಚಟುವಟಿಕೆಗಳ ಬಗ್ಗೆ ತಿಳಿಯುವ ಕುತೂಹಲ, ಆಸಕ್ತಿ ನನಗೆ ಮೊದಲಿನಿಂದಲೂ ಇದೆ. ಅದರಲ್ಲೂ ತೆಲುಗು ಚಿತ್ರಗಳಲ್ಲಿ ಪ್ರಸ್ತಾಪವಾಗುತ್ತಿದ್ದ ರಾಯಲಸೀಮ ಭಾಗದ ಬಗ್ಗೆ ತಿಳಿಯುವ ಹಂಬಲ, ಆಸಕ್ತಿ ತುಸು ಹೆಚ್ಚೆ ಇತ್ತು.
ಆ ಕಾರಣದಿಂದಲೇ ರಾಯಲಸೀಮಾ ವ್ಯಾಪ್ತಿಗೆ ಬರುವ ಕಡಪ, ಚಿತ್ತೂರು, ಅನಂತಪುರ, ಕರ್ನೂಲು ಜಿಲ್ಲೆಗಳ ಹಲವು ನಗರ, ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಹಲವರ ಜೊತೆ ಮಾತನಾಡಿದ್ದೇನೆ. ಹಲವು ರಾಜಕೀಯ ನಾಯಕರ ಸ್ವ ಗ್ರಾಮಗಳತ್ತ ತೆರಳಿ ಅಲ್ಲಿನ ವಾತವರಣವನ್ನು ಗಮನಿಸಿದ್ದೇನೆ. ಅಲ್ಲಿಗೆ ಭೇಟಿ ನೀಡಿದ ಮೇಲೆ ರಾಯಲಸೀಮ ರಾಜಕೀಯದ ಬಗ್ಗೆ ನನ್ನದೇ ಆದ ಕಲ್ಪನೆಗಳು ಮೂಡಿತು.
ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿ, ತನ್ನದೇ ಆದ ಖದರ್ ತೋರುವ ಭಾಗವೆಂದರೆ ಆಂಧ್ರಪ್ರದೇಶ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರದ ರಾಜಕಾರಣದ ಸ್ಟೈಲ್ಯೇ ಭಿನ್ನ, ವಿಭಿನ್ನ.
ಆಂಧ್ರದ ರಾಜಕಾರಣಿಗಳು 24 ಘಂಟೆ ಪುಲ್ ಟೈಂ ರಾಜಕೀಯ ಚಟುವಟಿಕೆಗಳಲ್ಲೇ ಮಗ್ನ. ಅದು ಎಷ್ಟರ ಮಟ್ಟಿಗೆ ಎಂದರೆ ಉಸಿರಾಟ ನಿಂತರೆ ಮಾತ್ರ ಅವರ ರಾಜಕಾರಣ ಚಟುವಟಿಕೆ ನಿಲ್ಲುವ ಪರಿಸ್ಥಿತಿ. ಅಲ್ಲಿನ ರಾಜಕಾರಣಿಗಳಿಗೆ ರಾಜಕೀಯ ಕ್ಷೇತ್ರವು ಜೀವನದ ಒಂದು ಭಾಗವಲ್ಲ, ಬದಲಾಗಿ ರಾಜಕೀಯವೇ ಜೀವನ.
ಆಂಧ್ರಪ್ರದೇಶದಲ್ಲಿರುವ ರಾಯಲಸೀಮ ಭಾಗಕ್ಕೆ ಕಡಪ, ಕರ್ನೂಲು, ಅನಂತಪುರ, ಚಿತ್ತೂರು ಈ ನಾಲ್ಕು ಜಿಲ್ಲೆಗಳು ಒಳಪಡುತ್ತವೆ. 2011ರ ಜನಗಣತಿ ಪ್ರಕಾರ 4 ಜಿಲ್ಲೆಗಳಲ್ಲಿ 1,51,84,908 ಜನಸಂಖ್ಯೆಯನ್ನು ಹೊಂದಿತ್ತು. 26,0725 ಚದರ ಕೀ.ಮಿ ವ್ಯಾಪ್ತಿಯ ಭೂಪ್ರದೇಶವನ್ನು ಹೊಂದಿದೆ.
ಹಿಂದೆ ರಾಯಲಸೀಮ ಭಾಗದಲ್ಲಿ ರಾಜಕೀಯ ವೈಷಮ್ಯಗಳಿಗೆ ಬಲಿಯಾದ ರಾಜಕಾರಣಿ, ಕಾರ್ಯಕರ್ತರು, ಅಮಾಯಕರ ಸಂಖ್ಯೆ ಕಡಿಮೆಯೇನಲ್ಲ. ಲೆಕ್ಕ ಹಾಕಲು ಗಣಿತ ತಿಳಿದಿರುವ ಬುದ್ದಿವಂತರಿಂದಲೂ ಸಾಧ್ಯವಿಲ್ಲ. ಅದರರ್ಥ ಹಿಂದೆ ಅಲ್ಲಿ ರಾಜಕೀಯ ಪ್ರೇರಿತ ಕೊಲೆಗಳಿಗೆ ಕೊನೆಯೇ ಇಲ್ಲದಾಗಿತ್ತು. ಫ್ಯಾಕ್ಷನಿಸಂ ಈ ಭಾಗದಲ್ಲಿ ಅತಿರೇಖಕ್ಕೆ ಹೋದ ಕಾರಣ ರಕ್ತ ಸಿಕ್ತ ಅಧ್ಯಾಯಗಳು ಈ ಭಾಗದಲ್ಲಿ ಸಾಕಷ್ಟು ನಡೆದು ಹೋಗಿವೆ. ಚರಿತ್ರೆಯ ಪುಟಗಳಲ್ಲಿ ಬಲವಾಗಿ ಮುದ್ರಿತವಾಗಿವೆ.
ಹಿಂದೆ ರಾಜಕಾರಣ ಎಂದರೆ ಕೊಲೆ, ಘರ್ಷಣೆ, ದೊಂಬಿ, ರಕ್ತಪಾತ, ಭ್ರಷ್ಟಾಚಾರ ಮಾಡಲೇ ಬೇಕೆಂಬುವುದು ಹಲವು ರಾಜಕೀಯ ನಾಯಕರಲ್ಲಿ ಆಳವಾಗಿ ಬೇರೂರಿತ್ತು. ಆ ಕಾರಣದಿಂದಲೇ ಹಲವರ ಪ್ರಾಣ ಹಾರಿ ಹೋಗಿದೆ. ಹಲವರ ಬಾಳು ಕತ್ತಲೆಯಾಗಿದೆ.
ಇಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸಾಕಷ್ಟು ತೋಳ್ಬಲ, ಹಣ ಬಲದ ವಾರಸುದಾರರು. ಪ್ರತಿ ಬಾರಿಯ ಚುನಾವಣೆಯಲ್ಲೂ ಜಿದ್ದಾ ಜಿದ್ದಿನ ರಾಜಕಾರಣದಿಂದ, ಘರ್ಷಣೆಗಳಿಂದ ದೇಶದಲ್ಲಿ ರಾಯಲಸೀಮಾ ಪಾಲಿಟಿಕ್ಸ್ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು.
ಶಾಸಕ, ಮಂತ್ರಿ, ಪ್ರಭಾವಿ ರಾಜಕಾರಣಿಗಳು ಕೂಡ ಫ್ಯಾಕ್ಷನಿಸಂ ಗಲಾಟೆಗಳಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಭದ್ರತಾ ಪಡೆಯಿದ್ದರು ಕೂಡ ಹಲವು ಜನಪ್ರತಿನಿಧಿಗಳ ಕೊಲೆ ನಡೆದಿದೆ.
ಕಡಪ, ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳಲ್ಲಿ ಒಟ್ಟು 52 ವಿಧಾಸಭಾ ಕ್ಷೇತ್ರಗಳು, 8 ಲೋಕಸಭಾ ಕ್ಷೇತ್ರಗಳಿವೆ. ಕಡಪ ಜಿಲ್ಲೆಯಲ್ಲಿ ಬದ್ವೆಲ್, ರಾಜಂಪೇಟ, ಕೊಡೂರ್, ರಾಯಚೂಟಿ, ಪುಲಿವೆಂದುಲ, ಕಮಲಾಪುರಂ, ಜಮ್ಮಲಮಡುಗು, ಪ್ರೊದ್ದೂಟೂರು, ಕಡಪ, ಮೈದೂಕೂರ್ ವಿಧಾನಸಭಾ ಕ್ಷೇತ್ರಳಿದ್ದರೆ, ಕರ್ನೂಲು ಜಿಲ್ಲೆಯಲ್ಲಿ ಆಳಗಡ್ಡ, ಶ್ರೀಶೈಲಂ, ನಂದಿಕೊತ್ತೂರು, ಕರ್ನೂಲು, ಪನ್ಯಾಂ, ನಂದ್ಯಾಲ, ಬನಗನಾಪಲ್ಲೆ, ದೊನೆ, ಪತ್ತಿಕೊಂಡ, ಕೊಡುಮೂರು, ಯಮ್ಮಿಗನೂರು, ಮಂತ್ರಾಲಯಂ, ಆದೋನಿ, ಆಲೂರು ವಿಧಾನಸಭಾ ಕ್ಷೇತ್ರಗಳಿವೆ.
ಹಾಗೆಯೇ ಅನಂತಪುರ ಜಿಲ್ಲೆಯಲ್ಲಿ ರಾಯದುರ್ಗ, ಉರ್ವಕೊಂಡ, ಗುಂತಕಲ್, ತಾಡಪತ್ರಿ, ಸಿಂಗನಮಾಲ, ಅನಂತಪುರ ನಗರ, ಕಲ್ಯಾಣದುರ್ಗ, ರಾಪ್ತಾಡು, ಮಡಕಶಿರಾ, ಹಿಂದೂಪುರ, ಪೆನುಕೊಂಡ, ಪುಟ್ಟಪರ್ತಿಧರ್ಮಾವರಂ, ಕದಿರಿ ವಿಧಾನಸಭಾ ಕ್ಷೇತ್ರಗಳಿದ್ದರೆ ಚಿತ್ತೂರು ಜಿಲ್ಲಾ ವ್ಯಾಪ್ತಿಯಲ್ಲಿ ತಂಬಲಪಲ್ಲೆ, ಪಿಲೇರು, ಮದನಪಲ್ಲಿ, ಪುಂಗನೂರು, ಚಂದ್ರಗಿರಿ, ತಿರುಪತಿ, ಶ್ರೀಕಾಳಹಸ್ತಿ, ಸತ್ಯವೇಡು, ನಗರಿ, ಗಂಗಧಾರ ನೆಲ್ಲೂರು, ಚಿತ್ತೂರು, ಪೂತಲಪಟ್ಟು, ಪಲಮನೇರು, ಕುಪ್ಪಂ ವಿಧಾನಸಭಾ ಕ್ಷೇತ್ರಗಳಿವೆ.
ಈ ಭಾಗದಲ್ಲಿ ನಂದ್ಯಾಲ, ಕರ್ನೂಲು, ಅನಂತಪುರಂ, ಹಿಂದೂಪೂರ, ಕಡಪ, ರಾಜಂಪೇಟ್, ತಿರುಪತಿ, ಚಿತ್ತೂರು ಪಾರ್ಲಿಮೆಂಟ್ ಕ್ಷೇತ್ರಗಳಿವೆ.
ಒಂದು ಕಾಲದಲ್ಲಿ ಫ್ಯಾಕ್ಷನಿಸಂನಿಂದಲೇ ಅಭಿವೃದ್ದಿಯಲ್ಲಿ ತೀರ ಹಿಂದುಳಿದಿದ್ದ ರಾಯಲಸೀಮಾ ಜಿಲ್ಲೆಗಳು ಈಗ ಸಂಪೂರ್ಣ ಬದಲಾವಣೆಯಾಗಿವೆ. ಶಿಕ್ಷಣದ ಮಹತ್ವ ಅರಿತಿರುವುದರಿಂದ ಪ್ರತಿ ಕುಟುಂಬದವರು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುತ್ತಾರೆ. ನಾನು ಕಡಪದಿಂದ ಸ್ವಲ್ಪ ದೂರದ ಗ್ರಾಮಗಳಿಗೆ ಹೋದಾಗ ಹಚ್ಚಹಸಿರಿನ ಭತ್ತದ ಗದ್ದೆಗಳನ್ನು ಕಂಡವು. ರಕ್ತಸಿಕ್ತ ಗ್ರಾಮಗಳು ಈಗ ಕೃಷಿಯ ಬೀಡಾಗಿವೆ ಎಂಬುವುದೇ ಅಭಿವೃದ್ದಿಯ ಸಂಕೇತ ಎನ್ನಬಹುದು.
ರಾಜಕಾರಣಕ್ಕಾಗಿ ಜಗಳವಾಡಿದರೆ ಬರುವ ಲಾಭವಾದರೂ ಏನಿಲ್ಲ ಎಂಬ ಸತ್ಯವನ್ನು ಇಲ್ಲಿನ ಜನರು ಅರಿತಿರುವುದರಿಂದ ಮುಗ್ದತೆಯನ್ನು ಬಂಡವಾಳ ಮಾಡಿಕೊಳ್ಳುವ ನಾಯಕರು ಕಡಿಮೆಯಾಗಿದ್ದಾರೆ. ಫ್ಯಾಕ್ಷನಿಸಂ ಕಡಿಮೆಯಾಗುತ್ತ ಸಾಗುತ್ತಿರುವುರಿಂದ ನಾಲ್ಲು ಜಿಲ್ಲೆಗಳಲ್ಲೂ ಬದಲಾವಣೆಯ ಪರ್ವ ಆರಂಭವಾಗಿದೆ.                                              
ವಿಶೇಷವೆಂದರೆ ರಾಯಲಸೀಮಾ ಭಾಗವು ಅವಿಭಜಿತ ಆಂಧ್ರಪ್ರದೇಶಕ್ಕೆ ಹಲವು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಅನಂತಪುರ ಮೂಲದ ನೀಲಂ ಸಂಜೀವ್ ರೆಡ್ಡಿಯವರು ಆಂಧ್ರದ ಮೊದಲ ಸಿ.ಎಂ ಎಂಬುವುದು ಗಮನಾರ್ಹ ಅಂಶ. 1956, 1962 ರಲ್ಲಿ ನೀಲಂ ಸಂಜೀವ್ ರೆಡ್ಡಿಯವರು ಮುಖ್ಯಮಂತ್ರಿಯಾಗಿದ್ದರು. ಕಾಳಹಸ್ತಿ ಮತ್ತು ದೋನೆ ಅವರ ಸ್ವಕ್ಷೇತ್ರವಾಗಿತ್ತು. ಹಾಗೆಯೇ ಮೊರಾಜರ್ಿ ದೇಸಾಯಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ (1977-1982) ನೀಲಂ ಸಂಜೀವ್ ರೆಡ್ಡಿಯವರು ದೇಶದ 6ನೇ ರಾಷ್ಟ್ರಪತಿಯಾಗಿದ್ದರು. 4ನೇ ಲೋಕಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನೀಲಂ ಸಂಜೀವ್ ರೆಡ್ಡಿಯವರ ರಾಜಕೀಯ ಹೆಜ್ಜೆ ಗುರುತುಗಳು ಇತಿಹಾಸ.
ದಾಮೋದರನ್ ಸಂಜೀವಯ್ಯ 1960, ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ 1982, 1992ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಕೋಟ್ಲಾ ವಿಜಯ ಭಾಸ್ಕರರೆಡ್ಡಿಯವರ ಪ್ರತಿನಿಧಿಸಿದ್ದ ಕ್ಷೇತ್ರ ಕರ್ನೂಲು.
ಚಿತ್ತೂರಿನ ತಿರುಪತಿ ಮತ್ತು ಅನಂತಪುರ ಜಿಲ್ಲೆಯ ಹಿಂದುಪೂರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಚಿತ್ರನಟ ಎನ್.ಟಿ ರಾಮರಾವ್ ಅವರು 1983, 1984, 1994 ರಲ್ಲಿ ಮುಖ್ಯಮಂತ್ರಿಯಾಗಿದ್ದರು. ನಟರೊಬ್ಬರು ಮುಖ್ಯಮಂತ್ರಿಯಾಗಬಹುದೆಂದು ತೋರಿಕೊಟ್ಟವರು ಎನ್.ಟಿ.ಆರ್. 
ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಾರವಾರಪಲ್ಲಿಯ ನಾರಾ. ಚಂದ್ರಬಾಬು ನಾಯ್ಡುರವರು 1995 ರಿಂದ 2004ವರೆಗೂ ಹಾಗೂ 2014ರಿಂದ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ದೀಘರ್ಾವಧಿಗೆ ಮುಖ್ಯಮಂತ್ರಿಯಾಗಿದ್ದವರು ಚಂದ್ರಬಾಬು ನಾಯ್ಡುರವರು, ಅವರ ಸ್ವಗ್ರಾಮ ನಾರವಾರಪಲ್ಲಿಗೂ ಹೋಗಿದ್ದೆ. ತಿರುಪತಿ-ಪಿಲೇರು ರಸ್ತೆಯಲ್ಲಿ ಬರುತ್ತದೆ. ಸಣ್ಣ ಗ್ರಾಮವೊಂದು ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟಿದೆ. ಚಿತ್ತೂರಿನ ಕುಪ್ಪಂ ವಿಧಾನಸಭಾ ಕ್ಷೇತ್ರವು ಚಂದ್ರಬಾಬು ನಾಡ್ಡುರವರು ಪ್ರತಿನಿಧಿಸುವ ಅಸೆಂಬ್ಲಿ ಕ್ಷೇತ್ರ. ವಿಭಜಿತ ಆಂಧ್ರಪ್ರದೇಶದ ಮೊದಲ ಸಿ.ಎಂ ಕೂಡ ಇವರೇ.
ಕಡಪ ಜಿಲ್ಲೆಯ ಪುಲಿವೆಂದುಲ ಮೂಲದ ವೈ.ಎಸ್ ರಾಜಶೇಖರರೆಡ್ಡಿಯವರು 2004 ರಿಂದ 2009ರವರೆಗೂ ಮುಖ್ಯಮಂತ್ರಿಯಾಗಿದ್ದವರು. ನಂತರ ಎದುರಾದ ವಿಧಾನಸಭಾ ಚುನಾವಣೆಯಲ್ಲೂ ಪುನಃಹ ಮುಖ್ಯಮಂತ್ರಿಯಾದರೂ ಹೆಲಿಕಾಪ್ಟೆರ್ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಯಿತು. ಇಡೀ ಅವಿಭಜಿತ ಆಂಧ್ರಪ್ರದೇಶದ ಮೂಲೆ ಮೂಲೆಗೂ ಪಾದೆಯಾತ್ರೆ ಮಾಡಿ ಅಧಿಕಾರದ ಗದ್ದುಗೆ ಹಿಡಿದವರು.
ಪುಲಿವೆಂದುಲ ಸಮೀಪದ ವೆಂಪಲ್ಲಿಯ ಇಡುಪಲಪಾಯ ಗ್ರಾಮದ ಬಳಿ ಹತ್ತಾರು ಎಕರೆ ಪ್ರದೇಶದಲ್ಲಿ ವೈ.ಎಸ್.ರಾಜಶೇಖರ್ ರೆಡ್ಡಿಯವರ ಸಮಾಧಿ ಇದೆ.
ವೈ.ಎಸ್ ರಾಜಶೇಖರ ರೆಡ್ಡಿ ಮರಣ ನಂತರ ಅವರ ಪುತ್ರ ವೈ.ಎಸ್ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ತ್ಯಜಿಸಿ, ವೈ.ಎಸ್.ಆರ್.ಸಿ.ಪಿ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಸದ್ಯ ಆಂಧ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ. ಕಡಪ ಜಿಲ್ಲೆಯ ಪುಲಿವೆಂದಲು ವೈ.ಎಸ್.ಜಗನ್ ಮೋಹನ್ ರೆಡ್ಡಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ.
ಚಿತ್ತೂರಿನ ಪಿಲೇರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎನ್.ಕಿರಣ್ ಕುಮಾರ್ ರೆಡ್ಡಿ ಅವರು ಕೂಡ 2010ರಿಂದ 2014ವರೆಗೂ ಸಿಎಂ ಆಗಿದ್ದರು.
ಈಗೆ ರಾಯಲಸೀಮಾ ಭಾಗದಿಂದ ಆಯ್ಕೆಯಾದ ಹಲವರು ಕೇಂದ್ರ, ರಾಜ್ಯ ಸರಕಾರಗಳಲ್ಲಿ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿಗೂ ಆಂಧ್ರ ರಾಜಕಾರಣದಲ್ಲಿ ರಾಯಲಸೀಮಾ ಭಾಗದ ರಾಜಕಾರಣಿಗಳು ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಇಡೀ ರಾಜ್ಯದ ರಾಜಕಾರಣದ ದಿಕ್ಕು ದೆಸೆ ನಿರ್ಣಯಿಸುವ ಶಕ್ತಿ ರಾಯಲಸೀಮಾ ಭಾಗದ ಜನಪ್ರತಿನಿಧಿಗಳಿಗಿದೆ.
ರಾಯಲಸೀಮಾ ಜಿಲ್ಲೆಗಳು ಕೇವಲ ರಾಜಕೀಯ ಕಾರಣಕ್ಕಾಗಿಯೇ ಮಾತ್ರ ಫೇಮಸ್ ಅಲ್ಲ. ಬದಲಾಗಿ ಹಲವಾರು ಪ್ರಖ್ಯಾತ ಧಾಮರ್ಿಕ ಕ್ಷೇತ್ರಗಳು ಇವೆ. ವಿಶ್ವ ವಿಖ್ಯಾತ ಚಿತ್ತೂರು ಜಿಲ್ಲೆಯ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲ, ಕರ್ನೂಲುವಿನ ಶ್ರೀಶೈಲಂ, ಶ್ರೀಕಾಳಹಸ್ತಿ, ಕಾನಿಪಾಕಂ, ಕದರಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲ, ಮಂತ್ರಾಲಯಂ, ಪುಟ್ಟಪರ್ತಿ, ಲೇಪಾಕ್ಷಿ ಸೇರಿದಂತೆ ಹಲವು ಧಾರ್ಮಿಕ ಸನ್ನಿಧಿಗಳು ರಾಯಲಸೀಮಾದ ಖ್ಯಾತಿಯನ್ನು ಹೆಚ್ಚಿಸಿವೆ.
ಇಂದು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ಶ್ರೀ ಕೃಷ್ಣದೇವರಾಯ ವಿ.ವಿ, ಯೋಗಿ ವೇಮನ ವಿ.ವಿ, ರಾಯಲಸೀಮಾ ವಿ.ವಿ, ದ್ರಾವಿಡಿಯನ್ ವಿ.ವಿ, ಶ್ರೀ ಪದ್ಮಾವತಿ ಮಹಿಳಾ ವಿ.ವಿ, ಜವಹಾರ್ಲಾಲ್ ನೆಹರು ತಾಂತ್ರಿಕ ವಿ.ವಿ ಸೇರಿದಂತೆ ಹತ್ತು ಹಲವು ವಿ.ವಿಗಳು ಪ್ರಾರಂಭವಾಗಿರುವುದರಿಂದ ರಾಯಲಸೀಮಾ ಜಿಲ್ಲೆಗಳಲ್ಲಿ ಶೈಕ್ಷಣಿಕ ವಾತಾವರಣವು ಬೆಳವಣಿಗೆಯಾಗುತ್ತಿದೆ.
ರಾಜಕಾರಣದ ಘರ್ಷಣೆಗಳಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಸಾಧಿಸುತ್ತಿದ್ದ ರಾಯಲಸೀಮಾ ಭಾಗವು ಈಗ ಅಭಿವೃದ್ದಿಯತ್ತ ದಾಪುಗಾಲು ಇಟ್ಟು ಸಾಗುತ್ತಿರುವುದು ಆಶವಾದದ ಬೆಳವಣಿಗೆ.
ಏನೆ ಆಗಲಿ ಒಂದು ಕಾಲದಲ್ಲಿ ಫ್ಯಾಕ್ಷನಿಸಂನಿಂದ ಅಭಿವೃದ್ದಿ ಮರಿಚೀಕೆಯಾಗಿದ್ದ ರಾಯಲಸೀಮಾ ಭಾಗವು ಈಗ ಬದಲಾವಣೆಯತ್ತ ಸಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಯಾವುದೇ ರಾಜಕೀಯ ಪಕ್ಷಗಳು ಜನಸಾಮಾನ್ಯರಲ್ಲಿ ಪ್ರಜ್ಞೆ, ಅರಿವು ಮೂಡಿಸಬೇಕೆ ಹೊರತು ಅವರನ್ನು ಬಳಸಿಕೊಂಡು ರಾಜಕಾರಣ ಲಾಭ ಪಡೆಯುವ ಮನಸ್ಥಿತಿ ಬಿಡಬೇಕು.     
ಆದರೂ ರಾಯಲಸೀಮಾ ಭಾಗವು ಬರಪೀಡಿತ ಜಿಲ್ಲೆಗಳಲ್ಲಿ ಪಟ್ಟಿಯಲ್ಲಿದೆ. ಹೇಳಿ ಕೊಳ್ಳುವಂತಹ ನೀರಾವರಿ ಯೋಜನೆಗಳಿಲ್ಲ. ಕೃಷಿಗೆ ಪೂರಕವಾದ ನೀರಾವರಿ ಸೌಲಭ್ಯ ಕಡಿಮೆ ಇರುವುದರಿಂದ ರೈತರು ಸಾಕಷ್ಟು ಕಷ್ಟ ಪಡುವಂತಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆಯು ಹೆಚ್ಚಿದೆ.  
ರಾಜಕಾರಣಿಗಳ ಪೊಳ್ಳು ಭರವಸೆಗಳನ್ನು ನಂಬಿ ಅವರಿಂದೆ ಹೋಗಿ ಜೀವನ ಹಾಳು ಮಾಡಿಕೊಳ್ಳುವ ಹಿಂಬಾಲಕರು ತಮ್ಮ ಜೀವನದ ಬಗ್ಗೆ ಆತ್ಮವಿಮಶರ್ೆ ಮಾಡಿಕೊಳ್ಳಬೇಕು. ತಮ್ಮ ರಾಜಕೀಯ ಲಾಭಕ್ಕಾಗಿ ರಾಯಲಸೀಮಾ ಭಾಗದ ರಾಜಕಾರಣಿಗಳು, ಜನಪ್ರತಿನಿಧಿಗಳು ಇಡೀ ಭಾಗದ ಅಭಿವೃದ್ದಿಗೆ ಕಂಟಕವಾಗಿದ್ದರು. ಜನಸಾಮಾನ್ಯರ ಕಲ್ಯಾಣಕ್ಕಾಗಿ ದುಡಿಯುವ ಬದಲು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರವನ್ನು ಬಳಸಿಕೊಂಡರು. 
ಜನ ಈಗ ಎಚ್ಚೆತ್ತು ಬುದ್ದಿವಂತರಾಗುತ್ತಿರುವುದು ಒಳ್ಳೆಯ ಲಕ್ಷಣ. ಇಂದು ಚಲನಚಿತ್ರಗಳಲ್ಲಿ ತೋರಿಸುವಷ್ಟು ಫ್ಯಾಕ್ಷನಿಸಂ ಗಲಾಟೆಗಳು ನಡೆಯುತ್ತಿಲ್ಲ. ಆದರೂ ಅಭಿವೃದ್ದಿಯು ವೇಗವಾಗಿ ನಡೆಯುವ ಅನಿವಾರ್ಯತೆಯು ಇದೆ.