⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಗುರಿ ಇಟ್ಟುಕೊಳ್ಳುವುದು ಸುಲಭ, ಆದರೆ ಆ ಗುರಿ ತಲುಪುವುದು ಅಷ್ಟು ಸುಲಭವಲ್ಲ. ಸತತ ಪರಿಶ್ರಮ ಮಾತ್ರ ಗುರಿ ತಲುಪಲು ಇರುವ ಏಕೈಕ ಮಾರ್ಗ. ವಾಸ್ತವ ಏನೆಂದರೆ ನಮ್ಮ ಜೀವನವು ಹಾದಿ ತಪ್ಪದೇ ನಡೆಯಲು ಹಾಗೂ ನಮ್ಮ ಗುರಿ ಸಾಧಿಸಲು ಕೆಲವು ಪದಗಳ ಜೊತೆ ಆತ್ಮೀಯತೆ, ಅನುಬಂಧ ಹೊಂದುವುದು ತೀರ ಅಗತ್ಯ, ಅನಿವಾರ್ಯವು ಹೌದು.
ನಮ್ಮ ಮನಸ್ಸು ಚಂಚಲ, ಏನೇನೋ ಬೇಡವಾದವುಗಳೇ ಮನಸ್ಸಿನಲ್ಲಿ ಹೆಚ್ಚು ತುಂಬಿಕೊಳ್ಳುತ್ತಲೇ ಇರುತ್ತವೆ. ಮನಸ್ಸನ್ನು ಹತೋಟಿಯಲ್ಲಿಡುವ ಶಕ್ತಿ ನಮ್ಮಲ್ಲಿರಬೇಕು. ಮನಸ್ಸು ದಾರಿತಪ್ಪದೇ ನಿಯಂತ್ರಿಸುವ ಸಾಮರ್ಥ್ಯ ಈ ಪದಗಳಿಗೆ ಇವೆ. ಇವು ಕೇವಲ ಪದಗಳಲ್ಲ, ಬದುಕಿಗೆ ಭರವಸೆ ತುಂಬಿ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಈ ಪದಗಳಿಗೆ ಇದೆ. ಜಗತ್ತಿಗೆ ನಮ್ಮನ್ನು ಪರಿಚಯಿಸುವ ಅಪರಿಮಿತ ಶಕ್ತಿ ಈ ಅಮೂಲ್ಯವಾದ ಪದಗಳಿಗೆ ಇದೆ ಎಂಬುವುದು ಸತ್ಯ.
ಅವೆಂದರೆ ಪ್ರಾಮಾಣಿಕತೆ, ಆತ್ಮಸ್ಥೈರ್ಯ, ಭಾವನಾತ್ಮಕತೆ, ಅನುಕಂಪ, ಸರಳತೆ, ಆತ್ಮತೃಪ್ತಿ, ನಾವು ಎಂಬ ಪರಿಕಲ್ಪನೆ, ಸ್ಪೂರ್ತಿ, ತಾಳ್ಮೆ, ಸಂಸ್ಕಾರ, ಸಹನೆ, ವಿನಯ ಸೇರಿದಂತೆ ಮತ್ತಿತರ ಕೆಲವು ಪದಗಳು ವೈಶಿಷ್ಟತೆಯಿಂದ ಕೂಡಿದ್ದು, ಇಂತಹ ಪದಗಳು ನಮ್ಮ ಜೀವನದ ಒಂದು ಭಾಗವಾಗಿ, ನಮ್ಮ ಹೃದಯದ ಅಂತರಾಳ ಸೇರಬೇಕಿದೆ.
ಪ್ರಾಮಾಣಿಕತೆ ಈ ಪದ ಎಲ್ಲರಲ್ಲೂ ಇರಲೇಬೇಕಿತ್ತು, ಆದರೆ ಸಮಾಜದ ಬಹುಪಾಲು ಜನ ಈ ಪದದಿಂದ ತುಂಬಾನೇ ದೂರವಿದ್ದಾರೆ. ನಾವು ಯಾವುದೇ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಕೂಡ ಪ್ರಾಮಾಣಿಕತೆ ಎಂಬ ಅಂಶ ಮಾತ್ರ ಮರೆಯಲೇ ಬಾರದು. ಅಪ್ರಾಮಾಣಿಕ ಎಂದು ಸಮಾಜ ಗುರ್ತಿಸುತ್ತಿದೆ ಎಂದರೆ ನಾವು ನಮ್ಮ ಸೋಲಿಗೆ ತೀರ ಹತ್ತಿರದಲ್ಲಿದ್ದೇವೆ ಎಂದರರ್ಥ . ಇನ್ನು ಆತ್ಮಸ್ಥೈರ್ಯ ಅಥವಾ ಆತ್ಮವಿಶ್ವಾಸ ಈ ಅಂಶವು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಎಷ್ಟೋ ಜನ ಸಾಧನೆ ಮಾಡಬೇಕೆಂಬ ಆಸೆ ಇದ್ದರೂ ಏನು ಮಾಡದೆ ಸುಮ್ಮನೆ ಇದ್ದು ಬಿಡುತ್ತಾರೆ. ಅದಕ್ಕೆ ಮೂಲ ಕಾರಣ ಆತ್ಮವಿಶ್ವಾಸದ ಕೊರತೆ. ಪ್ರತಿನಿತ್ಯವು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಜನವರ್ಗವೇ ನಮ್ಮ ಸುತ್ತಲೂ ಇರುತ್ತದೆ. ಅದು ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು, ಸಂಬಂಧಿಕರು, ಸಹದ್ಯೋಗಿಗಳು ಸೇರಿದಂತೆ ಮತ್ತಿತರರ ರೂಪಗಳಲ್ಲಿ ನಮ್ಮ ವಿಶ್ವಾಸ ಕಳೆಗುಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ.
ಯಾರಾದರೂ ಒಬ್ಬ ಬೆಳೆಯುತ್ತಾನೆ ಎಂದರೆ ತುಳಿಯುವವರ ಸಂಖ್ಯೆ ಜಾಸ್ತಿಯಾಗುತ್ತಾರೆ ಹೊರತು ಬೆಳೆಸುವವರ ಸಂಖ್ಯೆಯಲ್ಲ, ಪ್ರಪಂಚವೇ ಆಗಿದೆ. ಇಂತಹ ಸಂದರ್ಭದಲ್ಲಿ ಆತ್ಮವಿಶ್ವಾಸ ಅಥವಾ ಆತ್ಮಸ್ಥೈರ್ಯ ನಮ್ಮಲ್ಲಿ ಕೆ.ಜಿ ಅಲ್ಲ, ಟನ್ ಗಟ್ಟಲೆ ಇರಬೇಕು.
ಮತ್ತೊಂದು ಪದ ಸರಳತೆ, ಹೌದು ಈ ಪದವೇ ಒಂದು ರೀತಿಯಲ್ಲಿ ವಿಶೇಷತೆಯಿಂದ ಕೂಡಿದೆ. ಹಲವು ಬಾರಿ, ಹಲವು ಸಂದರ್ಭಗಳಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಜೀವನದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ಎಷ್ಟೇ ಹಣ ಸಂಪಾದಿಸಿದರು, ಉನ್ನತ ಹುದ್ದೆಗೆ ಹೋದರು ಸರಳವಾಗಿ ಜೀವನ ನಡೆಸುವ ಪದ್ದತಿ ಮಾತ್ರ ಕೈ ಬಿಡಬಾರದು. ಸರಳತೆ ನಮ್ಮ ವ್ಯಕ್ತಿತ್ವಕ್ಕೆ ಬೆಳಕು ನೀಡುತ್ತದೆ. ಏನು ಇಲ್ಲದಿದ್ದರು ಕೂಡ ದೊಡ್ಡದಾಗಿ ನಮ್ಮ ಬಳಿ ಆಸ್ತಿ ಅಂತಸ್ತು ಇದೆ ಎಂದು ಹೇಳುವ ಅವಶ್ಯಕತೆ ಖಂಡಿತಾ ಬೇಡ. ದೇವರು ಕೊಟ್ಟ ಶಕ್ತಿಯಲ್ಲೇ ಜೀವನ ಸಾಗಿಸೋಣ ಹೊರತು, ಇತರರ ಮುಂದೆ ಜಂಬ ಕೊಚ್ಚಿಕೊಳ್ಳಲು ಸರಳತೆ ಬಿಟ್ಟು ಜೀವನ ಸಾಗಿಸುವುದು ಸರಿಯಲ್ಲ. ಇತಿಹಾಸ ನೆನಪಿಟ್ಟುಕೊಳ್ಳುವುದು ಸರಳತೆಯಿಂದ ಜೀವನ ಸಾಗಿಸಿದ ವ್ಯಕ್ತಿಗಳನ್ನೇ ಹೊರತು ಐಷರಾಮಿ ಜೀವನ ಸಾಗಿಸಿದವರನಲ್ಲ ಎಂಬುವುದು ವಾಸ್ತವ. ಮಹಾತ್ಮ ಗಾಂಧಿಜೀಯವರು ಕಾಲವಾಗಿ ದಶಕಗಳು ಕಳೆದರು ನಾವು ಇನ್ನು ಅವರನ್ನು ನೆನಪಲ್ಲಿ ಇಟ್ಟುಕೊಂಡಿರುವುದು ಸ್ವಾತಂತ್ರ್ಯ ಹೋರಾಟಗಾರರು ಜೊತೆಗೆ ಅತ್ಯಂತ ಸರಳತೆಯಿಂದ ಜೀವನ ಸಾಗಿಸಿ ಆದರ್ಶವಾದರೂ ಎಂಬ ಭಾವನೆಯಿಂದ.
ಆತ್ಮತೃಪ್ತಿ ಈ ಪದವನ್ನಂತು ನಾವು ಎಂದೋ ಮರೆತು ಹೋಗಿದ್ದೇವೆ, ಯಾಕೆಂದರೆ ಇರುವುದರಲ್ಲಿ ತೃಪ್ತಿ, ಆನಂದ ಪಡುವ ಮನಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಎಷ್ಟೇ ಆಸ್ತಿ ಇದ್ದರೂ ತೃಪ್ತಿ ಇಲ್ಲ. ಸೈಕಲ್ ಇಲ್ಲದಿದ್ದಾಗ ಸೈಕಲ್ ಮೇಲೆ ಆಸೆ, ಸೈಕಲ್ ಖರಿದೀಸಿದರೆ ದ್ವಿಚಕ್ರ ವಾಹನದ ಮೇಲೆ ಪ್ರೀತಿ, ದ್ವಿಚಕ್ರ ವಾಹನ ಸಿಕ್ಕರೆ ಕಾರಿನ ಮೇಲೆ ವ್ಯಾಮೋಹ ಸೃಷ್ಟಿಯಾಗುತ್ತದೆ. ಕಾರು ಖರೀದಿಸಿದ ನಂತರವಾದರೂ ತೃಪ್ತಿಯಿಂದ ಇದ್ದೇವೆ ಎಂದರೆ ಆಗಲು ಇಲ್ಲ, ಯಾಕೆಂದರೆ ಕಾರನ್ನೇನೋ ಖರೀದಿಸಿದೆ, ಆದರೆ ಇನ್ನು ಹೆಚ್ಚು ಬೆಲೆ ಬಾಳುವ ಕಾರಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಮನಸ್ಸಲ್ಲಿ ಆಸೆ ಶುರುವಾಗುತ್ತದೆ. ಈಗೆ ಮನೆ, ಆಸ್ತಿ, ಕಾರು, ಅಪಾರ್ಟ್ ಮೆಂಟ್, ತೋಟ, ಜಮೀನು ಏನೇ ಇದ್ದರೂ ತೃಪ್ತಿ ಇಲ್ಲ.
ತೃಪ್ತಿ ಎಂಬ ಅಂಶವೇ ಇಲ್ಲದೇ ಜೀವನ ಸುಂದರವಾಗಿ ಕಳೆಯಲು ಹೇಗೆ ಸಾಧ್ಯ ? ಅದಕ್ಕೆ ಹೇಳುವುದು ಇರುವುದರಲ್ಲೇ ತೃಪ್ತಿ ಕಾಣಬೇಕು, ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ಆಸೆ ಪಟ್ಟರೆ ಏನು ಪ್ರಯೋಜನ?
ಸಂಸ್ಕಾರ, ವಿನಯ ಈ ಪದಗಳು ತುಸು ಹೆಚ್ಚೆ ಗೌರವವನ್ನು ಪಡೆದಿದೆ. ಇಂದು ಜನರ ಬಳಿ ಹಣ, ಆಸ್ತಿ, ಅಧಿಕಾರ ಸೇರಿದಂತೆ ಎಲ್ಲವೂ ಇದೆ, ಒಂದನ್ನು ಬಿಟ್ಟು ಅದೇ ಸಂಸ್ಕಾರ. ಯಾವುದೇ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು ಸಂಸ್ಕಾರ, ವಿನಯ ಬಹು ಮುಖ್ಯ. ನಮ್ಮ ಸಂಸ್ಕಾರವೇ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಇಂದು ಶಿಕ್ಷಣವಂತರಾಗುತ್ತಿದ್ದೇವೆ ಆದರೆ ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದೇವೆ. ಹಿಂದಿನ ತಲೆಮಾರಿನ ಜನ ಮೂಲ ಶಿಕ್ಷಣ ಪಡೆಯುತ್ತಿರಲಿಲ್ಲ, ಆದರೆ ಸಂಸ್ಕಾರ ಶಿಕ್ಷಣ ನಮ್ಮಗಿಂತ ಹೆಚ್ಚಾಗಿ ಹೊಂದಿದ್ದರು. ಇಂದು ಪಾಠ ಮಾಡಿದ ಗುರುಗಳು ಎದುರಿಗೆ ಸಿಕ್ಕರು ನಮಸ್ಕಾರ ಮಾಡಬೇಕೆಂಬ ವಿವೇಚನೆಯೇ ವಿದ್ಯಾರ್ಥಿಗಳಿಗೆ ಇಲ್ಲ. ಹಿರಿಯರಿಗೆ ಗೌರವ ಕೊಡಬೇಕೆಂಬ ಮನಸ್ಥಿತಿ ಸತ್ತು ಹೋಗುತ್ತಿದೆ. ಬಸ್ ಅಲ್ಲಿ ಯಾರಾದರೂ ವಯಸ್ಸಾದವರೂ ನಿಂತುಕೊಂಡಿದ್ದರೆ, ಕನಿಷ್ಠ ಅವರಿಗೆ ಸೀಟು ಬಿಟ್ಟುಕೊಡುವ ಸೌಜನ್ಯವೇ ಇಂದಿನ ಜನಕ್ಕೆ ಇಲ್ಲ. ಇತರರನ್ನು ಗೌರವಯುತವಾಗಿ ಮಾತನಾಡಿಸುವ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಸಂಸ್ಕಾರ, ವಿನಯ ಇಲ್ಲದೇ ಜೀವನ ಸಾಗಿಸುವ ಜನ ಎಂದು ಕೂಡ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ.
ಕರುಣೆ, ಅನುಕಂಪ ಮತ್ತು ಉದಾರತೆ ಈ ಮೂರು ಪದಗಳು ಹತ್ತಿರ ಸಂಬಂಧ ಹೊಂದಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಈ ಅಂಶಗಳೂ ಕೂಡ ಪರಿಣಾಮ ಬೀರುತ್ತದೆ. ಅಸಹಾಯಕರು, ಕಷ್ಟದಲ್ಲಿರುವವರ ಬಗ್ಗೆ ಸಹಜವಾಗಿಯೇ ನಮಗೆ ಅನುಕಂಪ ಮತ್ತು ಉದಾರತೆ ಇರಬೇಕು. ಕೋಟಿ ಕೋಟಿ ಹಣ ಸಂಪಾದಿಸುವುದು ದೊಡ್ಡ ಸಾಧನೆ ಅಲ್ಲ. ಯಾಕೆಂದರೆ ನಮಗಿಂತಲೂ ಮುಂಚೆ ಸಾವಿರಾರು ಜನ ಹಣ ಸಂಪಾದಿಸಿರುತ್ತಾರೆ. ನಮ್ಮ ನಂತರವು ಸಾವಿರಾರು ಜನ ಹಣ ಸಂಪಾದಿಸುತ್ತಾರೆ ಅದು ದೊಡ್ಡ ವಿಚಾರವೇ ಅಲ್ಲ. ನಮ್ಮ ಕೈಯಿಂದ ಕನಿಷ್ಠ ಇಬ್ಬರಿಗಾದರೂ ಸಹಾಯ ಮಾಡಿದರೆ ಅದರಿಂದ ಸಿಗುವ ಆನಂದ ಅಷ್ಟಿಷ್ಟಲ್ಲ. ನಾವು ನಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡರೆ, ನಮಗೂ ಒಂದಲ್ಲಾ ಒಂದು ದಿನ ಕಷ್ಟದಲ್ಲಿದ್ದಾಗ ಬೇರೆಯವರಿಂದ ನಮಗೆ ಸಹಾಯ ಸಿಗುತ್ತದೆ. ಸಮಾಜದಲ್ಲಿ ಎಷ್ಟೋ ಜನ ಜೀವನ ಸಾಗಿಸಲು ಸಾಧ್ಯವಾಗದ ಅಶಕ್ತರಿದ್ದಾರೆ, ಅಂತವರ ಬಗ್ಗೆ ಸ್ವಲ್ಪವಾದರೂ ಕರುಣೆ ಇರಬೇಕು. ಕರುಣೆ, ಅನುಕಂಪ, ಉದಾರತೆ ನಮ್ಮ ವ್ಯಕ್ತಿತ್ವಕ್ಕೆ ಪ್ಲಸ್ ಪಾಯಿಂಟ್ ಇದ್ದಂತೆ.
ಇನ್ನೊಂದು ವಿಚಾರ ನಾವು ಹೊಂದಿರಲೇ ಬಾರದ ಕೆಲವು ಪದಗಳಿವೆ, ಈ ಪದಗಳು ತುಂಬಾನೇ ಡೇಂಜರ್. ಅವೆಂದರೆ ಅಸೂಹೆ, ಅಹಂಕಾರ, ಗರ್ವ, ಸ್ವಾರ್ಥ ಮುಂತಾದವುಗಳು. ಅಸೂಹೆ ಅಥವಾ ಹೊಟ್ಟೆಕಿಚ್ಚು ಈ ಪದವನ್ನು ನಾವು ಮೈಗೂಡಿಸಿಕೊಂಡಿದ್ದರೆ ನಮಗೆ ನಾವೇ ಕೊಡಲಿ ಪೆಟ್ಟು ಕೊಟ್ಟುಕೊಂಡಂಗೆ. ನಮ್ಮಲ್ಲಿ ಬಹಳಷ್ಟು ಜನ, ಬೇರೊಬ್ಬರು ಬೆಳೆಯುತ್ತಿದ್ದಾರೆ ಎಂದು ಅಸೂಹೆ ಪಡುತ್ತಾರೆ. ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹಬ್ಬಿಸುತ್ತಾರೆ. ಅಯ್ಯೋ ಈತ ಬೆಳೆದು ಬಿಟ್ಟನ್ನಲ್ಲ ಎಂದು ಹೊಟ್ಟೆಕಿಚ್ಚು ಪಡುತ್ತಾರೆ. ನಮಗೆ ಶಕ್ತಿ ಇದ್ದರೆ ಅಥವಾ ಶಕ್ತಿಯನ್ನು ಸಂಪಾದಿಸಿಕೊಂಡು ಬೆಳೆಯಲು ಪ್ರಯತ್ನಿಸಬೇಕೆ ಹೊರತು ಬೇರೆಯವರು ಅಭಿವೃದ್ದಿಯಾಗುತ್ತಿದ್ದಾರೆ ಎಂದು ಅಸೂಹೆ ಪಟ್ಟರೆ ಆಗುವ ಲಾಭವಾದರೂ ಏನು ಇಲ್ಲ ? ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅಷ್ಟೇ..
ಅಹಂಕಾರ, ಗರ್ವ ಈ ಎರಡು ಪದಗಳು ಮನುಷ್ಯನ ಪರಮ ಶತ್ರುಗಳು. ಹಿರಿಯರೊಬ್ಬರು ಹೇಳುತ್ತಾರೆ, ಒಬ್ಬ ವ್ಯಕ್ತಿಯ ಅಹಂಕಾರ ಅಳೆಯಬೇಕಾದರೆ ಬಹಳ ಹೊತ್ತು ಬೇಕಿಲ್ಲ. ಆತನ ಬಳಿ ಒಂದು ನಿಮಿಷ ಮಾತನಾಡಿದರೆ ಸಾಕು ಆತ ಅಹಂಕಾರ ಹೊಂದಿದ್ದಾನೋ, ಇಲ್ಲವೋ ಹೇಳಬಹುದು ಎಂದು. ನಾವು ಮಾತನಾಡುವ ಭಾಷೆಯೇ ನಮ್ಮ ಅಹಂಕಾರದ ಬಗ್ಗೆ ಸುಳಿವು ನೀಡುತ್ತದೆ. ಮನುಷ್ಯನಲ್ಲಿ ಅಹಂಕಾರ ಹುಟ್ಟುವುದು ತಾನು ಎಲ್ಲರಿಗಿಂತ ಶ್ರೇಷ್ಠ, ತಾನೇ ಬುದ್ದಿವಂತ, ನಾನು ಸುಂದರವಾಗಿದ್ದಾನೆ ಉಳಿದವರು ನನ್ನ ಮುಂದೆ ವೇಸ್ಟ್ ಎಂಬ ಕಲ್ಪನೆ ಮನಸ್ಸಲ್ಲಿ ಹುಟ್ಟಿದಾಗ ಸಹಜವಾಗಿಯೇ ಅಹಂಕಾರ ಧಿಡೀರ್ ಎಂದು ಹೆಚ್ಚುತ್ತದೆ.
ಅಹಂಕಾರವಿದ್ದರೆ ಗರ್ವ ತನ್ನಿಂದ ತಾನೇ ಹುಟ್ಟುತ್ತದೆ. ಈ ಎರಡು ಪದಗಳು ಜೊತೆಯಾದರೆ ನಮ್ಮ ಜೀವನವೇ ವ್ಯರ್ಥವನ್ನಾಗಿ ಮಾಡಿ ಬಿಡುತ್ತದೆ. ಇನ್ನು ಸಾಧನೆ ಮಾಡುವುದು ಎಲ್ಲಿಂದ ?
ಇನ್ನು ಸ್ವಾರ್ಥ, ಈ ಪದವು ಒಂದು ರೀತಿ ಕಾಂಪ್ಲೀಕೆಟೇಡ್ ಪದ. ಎಲ್ಲರಲ್ಲೂ ಸ್ವಾರ್ಥ ತುಂಬಿ ತುಳುಕುತ್ತಿದೆ. ನಮಗೆ ಲಾಭವಿಲ್ಲದಿದ್ದರೆ ಒಂದು ಗ್ಲಾಸ್ ಕುಡಿಯುವ ನೀರು ಕೂಡ ಯಾರಿಗೂ ಕೊಡದ ಭಯಂಕರ ಪರಿಸ್ಥಿತಿಯನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಪ್ರತಿಯೊಂದರಲ್ಲೂ ಕ್ಯಾಲುಕುಲೇಶನ್, ನಾನು ಚೆನ್ನಾಗಿದ್ದಾರೆ ಸಾಕು ಉಳಿದವರು ಹಾಳಾಗಿ ಹೋದರು ಚಿಂತೆಯಿಲ್ಲ ಎನ್ನುವುದು ಬಹು ಜನರ ಆಲೋಚನೆ. ಬಹುತೇಕ ಜನ ಪ್ರತಿಯೊಂದರಲ್ಲೂ ಲಾಭ ಬರಬೇಕು ಎಂಬ ದೃಷ್ಟಿಕೋನ ಹೊಂದಿರುತ್ತಾರೆ . ಸ್ವಾರ್ಥಕ್ಕಾಗಿಯೇ ಬದುಕುತ್ತಾರೆ, ಇಂತಹ ಜನ ಎಷ್ಟೇ ವರ್ಷ ಬದುಕಿದರು ಯಾರಿಗೂ ಒಂದು ಪೈಸೆ ಪ್ರಯೋಜನವಿಲ್ಲ. ಯಾರು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ.
ಇನ್ನು ಕೋಪ ಈ ಅಂಶವಂತು ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರ ಪ್ರಮಾಣ ಎಷ್ಟಿದೆ ಎಂಬುವುದು ಮುಖ್ಯ. ಅನಗತ್ಯವಾಗಿ ಕೋಪ ಮಾಡಿಕೊಳ್ಳುವ ಜನರು ಈಗಲೂ ಇದ್ದಾರೆ. ಯಾರ್ಯಾರೋ ಮೇಲೆ ಕೋಪ ಮಾಡಿಕೊಂಡು ಸಮಸ್ಯೆಗೆ ಒಳಗಾಗ ಬೇಕಾದ ಸಂದರ್ಭವನ್ನು ಸ್ವತಃ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಆತ್ಮೀಯರನ್ನು ನಮ್ಮಿಂದ ದೂರ ಮಾಡಿಕೊಂಡಿದ್ದರೆ, ಅದಕ್ಕೆ ಒಂದು ಕಾರಣ ಕೋಪ. ಕೋಪ ಮಿತಿ ಮೀರಿದರೆ ಆಗುವ ಅನಾಹುತಗಳಿಗೆ ನಾವೇ ಹೊಣೆಯಾಗುತ್ತೇವೆ.
ಈಗೆ ಹಲವು ಪದಗಳು ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತವೆ. ವಿಪರ್ಯಾಸವೆಂದರೆ ನಮ್ಮ ಬಳಿಯೇ ಜೋಪಾನವಾಗಿ ಇಟ್ಟುಕೊಳ್ಳಬೇಕಾದ ಪದಗಳನ್ನು ದೂರ ತಳ್ಳಿದ್ದೇವೆ. ನಮ್ಮ ಸಮೀಪಕ್ಕೂ ಸೇರಿಸಬಾರದಾಗಿದ್ದ ಪದಗಳನ್ನು ನಮ್ಮ ಬಳಿ ಇಟ್ಟುಕೊಂಡಿದ್ದೇವೆ, ಇದು ವಿಚಿತ್ರ, ಆದರೂ ಸತ್ಯ.
ಧನಾತ್ಮಕತೆಯಿಂದ ಕೂಡಿರುವ ಪದಗಳನ್ನು ನಾವು ಮೈಗೂಡಿಸಿಕೊಂಡಿದ್ದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಏಕೆಂದರೆ ಗುರಿಗೂ ಪದಗಳಿಗೂ ಅವಿನಾಭಾವ ಸಂಬಂಧವಿದೆ. ನಕಾರತ್ಮಕತೆಯನ್ನು ಸೃಷ್ಟಿಸುವ ಪದಗಳ ಬಗ್ಗೆ ನಮಗೆ ಎಚ್ಚರವಿರಬೇಕು.
ಯಾವು ಪದಗಳನ್ನು ಅನುಸರಿಸಬೇಕು, ಯಾವುದನ್ನು ಅನುಸರಿಸಬಾರದು ಎಂಬ ಜ್ಞಾನವೇ ಇಲ್ಲದೇ ಹೋದರೆ ಬದುಕಿನ ದಾರಿ ಕತ್ತಲಾಗುತ್ತದೆ. ಕತ್ತಲಾದ ದಾರಿಯಲ್ಲಿ ಪ್ರಯಾಣ ಹೇಗೆ ಮಾಡಲು ಸಾಧ್ಯ ? ಆಲೋಚಿಸಿ..


