ಶುಕ್ರವಾರ, ಆಗಸ್ಟ್ 24, 2018

ಹಾದಿ ತಪ್ಪಿದ ಸಮಾಜದಲ್ಲಿ, ಮೌಲ್ಯವಿಲ್ಲದ ಬದುಕು..?

               ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಮೊನ್ನೆ ಮುಳಬಾಗಿಲು ತಾಲೂಕಿನ ಹಳ್ಳಿಯೊಂದಕ್ಕೆ ಹೋಗಿದ್ದೆ. ಆ ಗ್ರಾಮದಲ್ಲಿ ನಮ್ಮ ತರಬೇತಿ ಸಂಸ್ಥೆಯ ಶಿಬಿರಾರ್ಥಿಯೊಬ್ಬ ಇದ್ದ, ಆತನನ್ನು ಕಚೇರಿ ಕೆಲಸದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆ. ಆಗ ಆತ ಮಾತನಾಡುತ್ತ ನೋಡಿ ಸಾರ್, ಎಂತಹ ಘಟನೆಯಾಗಿದೆ ನಮ್ಮೂರಲ್ಲಿ, ಹೈಸ್ಕೂಲ್ ಗೆ ಹೋಗುವ ವಿದ್ಯಾರ್ಥಿನಿಯನ್ನು ಪಕ್ಕದ ಊರಿನವನೊಬ್ಬ ಪ್ರೀತಿ ಮಾಡುತ್ತಿದ್ದೀನಿ ಎಂದು ಹೇಳಿ, ಪಾಪ ಆ ಹುಡುಗಿಯ ಬಾಳು ಹಾಳು ಮಾಡಲು ಹೊರಟಿದ್ದಾನೆ, ನಾವೆಷ್ಟೇ ಹೇಳಿದರೂ ಆಕೆಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ. 
ಆತನ ಮಾತು ಕೇಳಿ ನನಗನಿಸಿದ್ದು ಅರೇ ಎಂಟು, ಒಂಬತ್ತನೆ ತರಗತಿಯಲ್ಲಿ ಓದುವ ಮಕ್ಕಳು ಪ್ರೀತಿ ಪ್ರೇಮ ಎಂದು ಜೀವನವನ್ನೇ ಹಾಳು ಮಾಡಿಕೊಳ್ಳುವ ಮಟ್ಟಿಗೆ ಸಮಾಜ ಕೆಟ್ಟು ಹೋಗಿದೆಯೇ ಎಂದು ಭಾವನೆ ಬಂತು.
ಒಂದು ದಿನ ನಮ್ಮ ಹಳೆ ಶಿಬಿರಾರ್ಥಿಯೊಬ್ಬರು ಬಸ್ ನಲ್ಲಿ ಸಿಕ್ಕಿದ್ದರು, ಹಾಗೆಯೇ ಮಾತನಾಡುತ್ತ ಸಾರ್ ನೋಡಿ ನನ್ನ ಕರ್ಮ ಏಗಾಗಿದೆ. ಕಾಲೇಜಲ್ಲಿ ಓದುವಾಗ ಯಾವುದೋ ಉತ್ಸಾಹದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದೆ. ಕುಟುಂಬದವರ ವಿರೋಧ ಕಟ್ಟಿಕೊಂಡು, ಮದುವೆಯು ಆದೆವು. ಆದರೆ ಮದುವೆ ನಂತರ ಗೊತ್ತಾಗಿದ್ದು, ನಾನು ಪ್ರೀತಿಸಿದ ಹುಡುಗ ಕುಡುಕ, ಸಾಲದಕ್ಕೆ ಕೆಲಸಕ್ಕೆ ಹೋಗಿ ಸಂಪಾದಿಸುವ ಮನಸ್ಸಿಲ್ಲ. ಸೋಮಾರಿತನವೇ ಆತನ ವ್ಯಕ್ತಿತ್ವ. ಈಗ ನಾನೇ ದುಡಿದು ಆತನನ್ನು ಸಾಕಬೇಕು. ಯಾವುದೋ ಒಂದು ಕ್ಷಣದಲ್ಲಿ ಮಾಡುವ ತಪ್ಪು ನಿರ್ಧಾರಗಳು ಜೀವನವನ್ನೇ ಹಾಳು ಮಾಡುತ್ತದೆ ಎಂಬುವುದು ಈಗ ಅರಿವಾಗಿದೆ ಎಂದು ಆಕೆ ನೊಂದು ನುಡಿದಳು.
ಮೊನ್ನೆ ತಾನೇ ಫೀಲ್ಡ್ ವಿಸೀಟ್ ಗೆ ಶ್ರೀನಿವಾಸಪುರ ತಾಲೂಕಿನ ಹಳ್ಳಿಯೊಂದಕ್ಕೆ ಹೋದಾಗ ಅಲ್ಲೂ ನೋವಿನ ಕಥೆಯೇ ಕೇಳುವಂತಾಯಿತು. ಆಕೆಯದ್ದೂ ಅದೇ ನೋವು, ಪ್ರೀತಿಸಿದ ತಪ್ಪಿಗೆ ಕಣ್ಣೀರೆ ಉಳಿದಿದೆ ಸಾರ್, ಇಬ್ಬರು ಹೆಣ್ಣು ಮಕ್ಕಳು, ಖಾಸಗಿ ಶಾಲೆಗೆ ಹಾಕಿದ್ದೇನೆ, ದುಬಾರಿ ಶುಲ್ಕ, ನಾನಂತು ಓದಲಿಲ್ಲ, ಮಕ್ಕಳಾದರೂ ಓದಲಿ ಎಂದು ಶಾಲೆಯ ಫೀಜು ಹೆಚ್ಚಾದರೂ ಸೇರಿಸಿದ್ದೇನೆ. ಗಂಡ ಮಹಾ ಕುಡುಕ, ಕೂಲಿ ವೃತ್ತಿಗೆ ಹೋಗುತ್ತಾನೆ. ಕೂಲಿಯಿಂದ ಬಂದ ಹಣದಲ್ಲಿ ಹತ್ತು ರೂಪಾಯಿಯು ಮನೆಗೆ ಬರುವುದಿಲ್ಲ. ಬಾರ್ ಗೆ ಹೋಗುತ್ತದೆ. ನಾನು ಟೈಲರಿಂಗ್, ಎಂಬ್ರಾಯಿಡರಿ ವೃತ್ತಿ ಮೂಲಕ ಅಷ್ಟೋ ಇಷ್ಟೋ ಸಂಪಾದಿಸಿ, ಕುಟುಂಬ ನಿರ್ವಹಣೆ ಮಾಡುತ್ತ, ಮಕ್ಕಳನ್ನು ಓದಿಸುತ್ತಿದ್ದೇನೆ ಸಾರ್, ಪ್ರೀತಿಸಿದ ತಪ್ಪಿಗೆ ಪಶ್ಚಾತಾಪ ಪಡುವಂತಾಗಿದೆ ಎಂದು ನೋವಿನಿಂದ ಹೇಳಿದಳು.
ನಾನು ಸಾಕಷ್ಟು ಶಾಲಾ, ಕಾಲೇಜುಗಳನ್ನೂ ನೋಡಿದ್ದೇನೆ, ವಿಧ್ಯಾರ್ಥಿಗಳ ವರ್ತನೆಯನ್ನು ಗಮನಿಸಿದ್ದೇನೆ. ವಿಪರ್ಯಾಸವೆಂದರೆ ಹೈಸ್ಕೂಲ್ ಮೆಟ್ಟಿಲು ಹತ್ತಿದರೆ ಸಾಕು ಪ್ರೀತಿ ಮಾಡಬೇಕು. ಇಲ್ಲದೇ ಹೋದರೆ ಜೀವನವೇ ವ್ಯರ್ಥ ಎಂಬ ವಾತಾವರಣ ಸೃಷ್ಟಿಯಾಗುತ್ತಿರುವುದು ನಿಜಕ್ಕೂ ಎಲ್ಲರೂ ಆತಂಕ ಪಡುವಂತಹ ವಿಚಾರ. 
ಒಳ್ಳೆಯ ಶಿಕ್ಷಣವನ್ನು ಪಡೆದು, ಸೂಕ್ತವಾದ ಉದ್ಯೋಗ ಗಿಟ್ಟಿಸಿ ಸಮಾಜದಲ್ಲಿ ತಲೆ ಎತ್ತಿ ನಡೆಯಬೇಕಾದ ಯುವ ಸಮೂಹವು ಪ್ರೀತಿ, ಪ್ರೇಮ ಎಂದು ಜೀವನಕ್ಕೆ ಸ್ವತಃ ತಾವೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತದೆ.
ಪ್ರೀತಿ, ಪ್ರೇಮದ ವಿಚಾರಗಳ ಬಗ್ಗೆ ಹೆಚ್ಚು ಹೇಳುವ ಜ್ಞಾನವಂತೂ ನನಗಿಲ್ಲ. ಯಾರು ಬೇಕಾದರೂ ಯಾರನ್ನಾದರೂ ಪ್ರೀತಿಸುವ, ಮದುವೆ ಮಾಡಿಕೊಳ್ಳುವ ಅವಕಾಶವಿದೆ. ಅದು ಅವರವರ ವೈಯಕ್ತಿಕ ವಿಚಾರ, ಯಾರು ಯಾರನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. 
ಯಾರು ಪ್ರೀತಿ, ಪ್ರೇಮಕ್ಕೆ ವಿರೋಧ ಮಾಡಲು ಸಾಧ್ಯವಿಲ್ಲ. ಎಷ್ಟೋ ಜನರು ಪ್ರೀತಿಸಿ ಮದುವೆಯಾದವರೂ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಇತರರಿಗೆ ಆದರ್ಶವಾಗುವಂತೆ ಬಾಳುತ್ತಿದ್ದಾರೆ. ಆದರೆ ಪ್ರೀತಿ, ಪ್ರೇಮ ಹೆಸರುಗಳಲ್ಲಿ ನಡೆಯುತ್ತಿರುವ ಮೋಸ, ವಂಚನೆ, ಅನ್ಯಾದ ವಿರುದ್ದ ಮಾತ್ರ ನನ್ನ ಅಸಮಾಧಾನವಷ್ಟೇ..
ಬಾಳಿ ಬದುಕಬೇಕಾದ ಎಷ್ಟೋ ಹೆಣ್ಣು ಮಕ್ಕಳು ಅರ್ಧದಲ್ಲಿಯೇ ಕಮರಿ ಹೋಗುತ್ತಿರುವುದು ನೋವಿನ ವಿಚಾರ. ಚಿಕ್ಕ ವಯಸ್ಸಲ್ಲೇ ವಿದ್ಯಾಭ್ಯಾಸ ಹಾಳು ಮಾಡಿಕೊಂಡು ಯಾರನ್ನೋ ನಂಬಿ ಜೀವನದಲ್ಲಿ ನರಕಯಾತನೆ ಅನುಭವಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಅಂತವರನ್ನು ಕಂಡಾಗ ಮನಸ್ಸು ಬೇಸರವಾಗದೇ ಇರದು.
ನಿಜವಾದ ಪ್ರೇಮಿಗಳಿಗೆ ಕಾನೂನಿನ ರಕ್ಷಣೆಯೂ ಇದೆ. ಪ್ರಾಮಾಣಿಕತೆಯಿಂದ ಪ್ರೀತಿಸುವವರಿಗೆ ಸಮಾಜವು ಸಹಾಯ ಹಸ್ತ ಚಾಚುತ್ತದೆ, ಆದರೆ ಅವರ ಪ್ರೀತಿಯಲ್ಲಿ ಮೌಲ್ಯ ಹಾಗೂ ನಿಸ್ವಾರ್ಥತತೆ ಇರಬೇಕು.
ಹಾಗೇ ಯುವ ಸಮೂಹಕ್ಕೆ ಮತ್ತೊಂದು ಕಂಟಕ, ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು. 
ಹಳ್ಳಿಯೊಂದಕ್ಕೆ ಹೋದಾಗ ಅಲ್ಲಿ ಆತನ ವಯಸ್ಸು 16 ಮೀರಿರದು, ರಾಜಾರೋಷವಾಗಿ ಸಿಗರೇಟ್ ಸೇದುತ್ತಿದ್ದ, ಪಕ್ಕದಲ್ಲೇ ಇದ್ದ ನಮ್ಮ ಶಿಬಿರಾರ್ಥಿಯನ್ನು ಕೇಳಿದೆ ಏನಯ್ಯಾ ನಿಮ್ಮೂರಲ್ಲಿ ಹುಡುಗರೆಲ್ಲ ಸಿಗರೇಟು ಕುಡಿಯುತ್ತಾರೆ ಎಂದಾಗ ಆತ ಸಾರ್, ಸಿಗರೇಟ್ ಅಷ್ಟೇ ಅಲ್ಲ ಆತನು ಮದ್ಯಪಾನವನ್ನು ಮಾಡುತ್ತಾನೆ.
ನಾನು ಆತನಿಗೆ ಬುದ್ದಿವಾದ ಹೇಳಿ ಸುಮ್ಮನಾದೆ, ಕೇಳುವ ಸೌಜನ್ಯತೆ ಆತನಲ್ಲಿ ಇಲ್ಲದ ಮೇಲೆ ನಾವೇನು ಮಾಡೋಣ ಸಾರ್ ಎಂದ.
ಪುಸ್ತಕ ಇರಬೇಕಾದ ಕೈಯಲ್ಲಿ ಸಿಗರೇಟು ಪ್ಯಾಕ್ ಗಳು ಬಂದಿವೆ. ಉಜ್ವಲ ಭವಿಷ್ಯವಿರುವವರು ಅದೆಷ್ಟೋ ಜನರು ಇಂದು ಪೋಷಕರ ಕಣ್ತಪ್ಪಿಸಿ ಧೂಮಪಾನ, ಮದ್ಯಪಾನ, ಡ್ರಗ್ಸ್ ದಂತಹ ಕೆಟ್ಟ ಚಟಗಳಿಗೆ ದಾಸರಾಗುತ್ತಿರುವುದು ದೇಶದ ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯದಂತು ಅಲ್ಲ. 
ಒಂದು ಸಿಗರೇಟಿನ ಬೆಲೆ 15 ರೂ. ದಿನಕ್ಕೆ ಎರಡು ಸಿಗರೇಟು ಸೇದಿದರೆ ಕನಿಷ್ಠ ಒಂದು ತಿಂಗಳಿಗೆ 900 ರೂ.ನಿಂದ 1000 ರೂ. ಸಿಗರೇಟಿಗೆ ಖರ್ಚಾಗುತ್ತದೆ. ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಸುರಾಕ್ಷಾ ಭಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಕೇವಲ 12 ರೂ. ಅಂದರೆ ತಿಂಗಳಿಗೆ ಕೇವಲ 1 ರೂ. ಮಾತ್ರ ಪಾವತಿಸಿದರೆ ಅಪಘಾತವೇನಾದರೂ ಆದರೆ ಆ ವ್ಯಕ್ತಿಗೆ 2 ಲಕ್ಷ ರೂ.ವರೆಗೆ ಹಣ ಸಿಗುತ್ತದೆ. ಹಾಗೆಯೇ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಇದೆ, ಇದರಡಿಯಲ್ಲಿ ವರ್ಷಕ್ಕೆ ಕೇವಲ 330 ರೂ. ಪಾವತಿಸಿದರೆ , ಏನಾದರೂ ಪಾವತಿಸಿದ ವ್ಯಕ್ತಿ ಮೃತಪಟ್ಟರೆ 2 ಲಕ್ಷ ರೂ.ಗಳು ಆತನ ಕುಟುಂಬಕ್ಕೆ ಸರಕಾರದಿಂದ ಸಿಗುತ್ತದೆ.
ಸಿಗರೇಟು, ಮದ್ಯಪಾನಕ್ಕೆ ತಿಂಗಳಿಗೆ ಸಾವಿರಾರು ಖರ್ಚು ಮಾಡುವವರು, ಕಷ್ಟ ಕಾಲದಲ್ಲಿ ಕೈಯಿಡಿಯುವ ಇಂತಹ ಯೋಜನೆಗಳಿಗೆ ಹೆಸರು ನೊಂದಾಯಿಸುವುದಿಲ್ಲ ಎಂದರೆ ವಿಪರ್ಯಾಸ.
ಒಂದು ದಿನ ಬಸ್ ನಲ್ಲಿ ಸಂಚರಿಸುವಾಗ ಹಿಂಭಾಗದ ಸೀಟಲ್ಲಿ ಒಬ್ಬ ಮಹಿಳೆ ಕೂತು ಪೋನಿನಲ್ಲಿ ಮಾತನಾಡುತ್ತಿದ್ದಳು. ಆಕೆ ಹೇಳುತ್ತಿದ್ದಳು ನೋಡು ನನ್ನ ತಂಗಿಯ ಮಗಳಿಗೆ ಹುಡುಗ ಸಿಕ್ಕಿದ್ದಾನೆ. ಆಕೆ ಎಷ್ಟು ಅದೃಷ್ಟವಂತೆ ಎಂದರೆ ಹುಡುಗನ ತಂದೆ, ತಾಯಿ ತೀರಿಹೋಗಿದ್ದಾರೆ. ಅಕ್ಕ, ತಂಗಿ ಯಾರು ಇಲ್ಲ. ಇರುವುದು ಆತನೊಬ್ಬನೆ, ಕೆಲವೇ ದಿನಗಳಲ್ಲಿ ಮದುವೆ ದಿನಾಂಕ ನಿಗದಿಪಡಿಸುತ್ತೇವೆ, ನೀನು ತಪ್ಪದೇ ಬರಬೇಕು ಎಂದು ಪೋನಿನ ಮೂಲಕ ತನ್ನ ಸ್ನೇಹಿತೆಗೆ ಆಕೆ ಹೇಳುತ್ತಿದ್ದಳು.
ನಮಗೆ ಗೊತ್ತಿರುವವರೊಬ್ಬರು ತಮ್ಮ ಮಗಳಿಗೆ ಹುಡುಗನನ್ನು ಹುಡುಕಿದ್ದರು. ಕಾರಣಾಂತರಗಳಿಂದ ಅವನಿಗೆ ಹೆಣ್ಣು ಇಷ್ಟವಾಗಲಿಲ್ಲ. ಆದರೂ ಇವರು ಆತನನ್ನೇ ತಮ್ಮ ಆಳಿಯ ಮಾಡಿಕೊಳ್ಳಬೇಕು ಎಂದು ಪದೇ ಪದೇ ಅವರ ಊರಿಗೆ ಹೋಗಿ ಬರುತ್ತಿದ್ದರು. ಹುಡುಗನಿಗೆ ಹೇಳಿಕೊಳ್ಳುವಂತಹ ಆಸ್ತಿ, ವಿದ್ಯೆ ಇಲ್ಲ, ಆದರೂ ಇವರ ಒತ್ತಡವಿತ್ತು. ಕಾರಣ ಆತನಿಗೆ ಹಿಂದೆ, ಮುಂದೆ ಯಾರು ಇಲ್ಲದಿರುವುದೇ ಪ್ಲಸ್ ಫಾಯಿಂಟ್ ಆಗಿತ್ತು.
ಹುಡುಗನಿಗೆ ಹಿಂದೆ, ಮುಂದೆ ಯಾರು ಇಲ್ಲದಿದ್ದರೆ ಆತನಿಗೆ ಬೇಗ ಮದುವೆಯಾಗುತ್ತದೆ, ಆತ ಅದೃಷ್ಟವಂತ ಹಲವರ ಪಾಲಿಗೆ. ಬಹುಃಶ ಇಂದಿನ ಮಕ್ಕಳು ಹಾದಿ ತಪ್ಪಲು ಕುಟುಂಬ ವ್ಯವಸ್ಥೆಯು ಒಂದು ಮೂಲ ಕಾರಣ. ಹಿಂದಿನ ದಿನಗಳಲ್ಲಿ ಮೊಮ್ಮಕ್ಕಳಿಗೆ ಅಜ್ಜ, ಅಜ್ಜಿ ನೈತಿಕತೆಯನ್ನು ಕಥೆ, ನಾಟಕಗಳ ಮೂಲಕ ಹೇಳುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಮಾನವೀಯ ಮೌಲ್ಯ, ಸಮಾಜದಲ್ಲಿ ಬದುಕುತ್ತಿರುವುದರಿಂದ ಅನುಸರಿಸಬೇಕಾದ ನೀತಿ, ನಿಯಮಗಳ ಬಗ್ಗೆ ಹೇಳಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಪ್ರವೃತ್ತಿ ಇತ್ತು.
ಆದರೆ ಇಂದು ಅವಿಭಕ್ತ ಕುಟುಂಬಗಳನ್ನೇ ಕಾಣಲು ಸಾಧ್ಯವಿಲ್ಲ. ಗಂಡ, ಹೆಂಡತಿ, ಮಕ್ಕಳು ಇಷ್ಟೇ ಕುಟುಂಬ, ಕೆಲಸದ ಒತ್ತಡದಲ್ಲಿ ತಂದೆ, ತಾಯಿಗಳಿದ್ದರೆ ತಮ್ಮದೇ ಲೋಕದಲ್ಲಿ ಮಕ್ಕಳಿರುತ್ತಾರೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲು ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಮಾವ, ಅತ್ತೆ ಅನ್ನುವವರ ಸುಳಿವೇ ಇರುವುದಿಲ್ಲ. ಇಂದಿನ ಮಕ್ಕಳು ಬೆಳೆಯುವುದು ಮೊಬೈಲ್, ಟಿ.ವಿ, ಕಂಪ್ಯೂಟರ್, ಇಂಟರ್ ನೆಟ್ ಸಹವಾಸದೊಂದಿಗೆ ಎಂಬುವುದು ಕಟು ಸತ್ಯ.
ಹದಿಹರೆಯದ ಮಕ್ಕಳು ಪ್ರೀತಿ, ಪ್ರೇಮ ಸೇರಿದಂತೆ ಕೆಟ್ಟ ಚಟಕಗಳಿಗೆ ಬಲಿಯಾಗುವುದಕ್ಕೆ ಕುಟುಂಬ ವ್ಯವಸ್ಥೆಯು ಕೂಡ ಒಂದು ಕಾರಣ ಎಂಬುವುದು ನಿಸ್ಸಂಕೋಚವಾಗಿ ಹೇಳಬಹುದು. ನಿಜ ಇಂದು ಎಲ್ಲವೂ ಯಾಂತ್ರೀಕರಣ ಜೀವನವಾಗಿದೆ. ಮನುಷ್ಯನಿಗೆ ಪ್ರಾಣ ಇದೆ, ಯಂತ್ರಗಳಿಗೆ ಇಲ್ಲ ಅಷ್ಟೇ, ಮಾನವೀಯ ಮೌಲ್ಯಗಳ ಕಣ್ಮರೆಯು ಇಂದಿನ ಯುವ ಸಮೂಹದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.
ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಅಲ್ಲಿನ ಯುವ ಸಮೂಹ ಶೈಕ್ಷಣಿಕವಾಗಿ ಮುಂದುವರೆಯುವುದರ ಜೊತೆಗೆ ಮಾನವೀಯ ಮೌಲ್ಯ, ನೈತಿಕತೆ ಹೊಂದುವುದು ತೀರ ಅನಿವಾರ್ಯವು ಹೌದು.
ಕೈಯಲ್ಲಿ ಮೊಬೈಲ್ಲಿದ್ದರೆ ಸಾಕು ಪ್ರಪಂಚವೇ ತಮ್ಮ ಕೈಯಲ್ಲಿದೆ ಎಂದು ಭಾವಿಸುವವರೇ ಹೆಚ್ಚು. ಆದರೆ ಅದೇ ಮೊಬೈಲು ನಮ್ಮ ಜೀವನವನ್ನೇ ಹಾಳು ಮಾಡುವ ಶಕ್ತಿ ಇದೆ ಎಂಬುವುದು ನಮ್ಮ ಅರಿವಿಗೆ ಬರುವುದಿಲ್ಲ. ಅದರಲ್ಲೂ ಇಂಟರ್ ನೆಟ್ ಹಲವರ ಹಾದಿ ತಪ್ಪಿಸುತ್ತಿದೆ. ಅಮೃತವು ಅತಿಯಾದರೆ ವಿಷವಾದಂತೆ ಯಾವುದು ಎಷ್ಟೋ ಬಳಸಬೇಕೋ ಅಷ್ಟೇ ಬಳಸಬೇಕು. ಅತಿಯಾದರೆ ಸಂಚಕಾರ ಬರುತ್ತದೆ. 
ಇಂದಿನ ಮಕ್ಕಳಲ್ಲಿ ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯ, ನೈತಿಕತೆಯಂತಹ ವಿಚಾರಗಳ ಬಗ್ಗೆ ಹೆಚ್ಚು ತಿಳಿಸಿ ಸರಿ ಹಾದಿಯಲ್ಲಿ ಸಾಗುವಂತೆ ಮಾಡುವ ಹೊಣೆಗಾರಿಕೆ, ಜವಾಬ್ದಾರಿ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರ ಮೇಲು ಇದೆ. ಭವ್ಯ ಭಾರತ ನಿರ್ಮಾಣವಾಗಬೇಕಾದರೆ ನೈತಿಕತೆಯುಳ್ಳ ಯುವ ಸಮೂಹ  ಅಗತ್ಯವಿದೆ.

ಬುಧವಾರ, ಆಗಸ್ಟ್ 8, 2018

ಬದುಕಿನ ಹಾದಿ ತೋರಿಸುವ ಪಯಣ..

               ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ನನಗೆ ದೂರದ ಸ್ಥಳಗಳಿಗೆ ಪ್ರವಾಸ ಹೋಗುವುದು ಬಹಳ ಇಷ್ಟ. ಕಾಲೇಜು ದಿನಗಳಿಂದಲೂ ಸಮಯ ಸಿಕ್ಕಾಗೆಲ್ಲ ಪ್ರವಾಸಕ್ಕೆ ಹೋಗಿದ್ದೇನೆ. ಅದರಲ್ಲೂ ನನಗೆ ಒಬ್ಬಂಟಿಯಾಗಿ ಜರ್ನಿ ಮಾಡುವುದು ಇನ್ನು ಇಷ್ಟ. ನಿನೊಬ್ಬನೆ ಸಾವಿರಾರು ಕಿ.ಮೀ ದೂರ ಪಯಣಿಸುತ್ತಿಯಲ್ಲ, ಬೇಸರ, ಭಯ, ಬೇಜಾರು ಆಗುವುದಿಲ್ಲವೇ ಎಂದು ಹಲವು ಸ್ನೇಹಿತರು ಪ್ರಶ್ನೆ ಮಾಡಿದ್ದಾರೆ. 
ಕೆಲವರಂತೂ ನಿನ್ನೊಬ್ಬನೆ ಟ್ರಿಪ್ ಹೋಗುತ್ತಿಯ ಎಂದರೆ ಅಚ್ಚರಿಯಾಗುತ್ತದೆ. ಸ್ನೇಹಿತರ ಜೊತೆ ಹೋದರೆ ಸಿಗುವ ಖುಷಿಯ ಕ್ಷಣಗಳು ಒಬ್ಬಂಟಿಯಾಗಿ ಹೋದರೆ ಎಲ್ಲಿ ಸಿಗುತ್ತದೆ. ಭಾಷೆ, ಪ್ರದೇಶದ ಗಂಧ ಗಾಳಿಯೇ ಗೊತ್ತಿಲ್ಲದ ಸ್ಥಳಗಳಿಗೆ ಹೋದಾಗ ಭಯ ಕಾಡುವುದಿಲ್ಲವೇ ಎಂದು ಹಲವರು ನನ್ನನ್ನು ಕೇಳಿದ್ದಾರೆ. ಅಷ್ಟಕ್ಕೂ ನಿನ್ನೊಬ್ಬನೆ ದೂರದ ಸ್ಥಳಗಳಿಗೆ ಹೋಗುವ ಉದ್ದೇಶವಾದರೂ ಏನು..? ಎಲ್ಲರೂ ಪ್ರವಾಸಿ ಸ್ಥಳಗಳಿಗೆ ಹೋಗಲು ಇಷ್ಟಪಟ್ಟರೆ ನೀನು ಯಾವುದ್ಯಾದೋ ಹಳ್ಳಿಗಳತ್ತ ಸುತ್ತುತ್ತಿಯಾ.. ಅದರ ಮೂಲ ಉದ್ದೇಶವಾದರೂ ಏನು ಎಂದು ಕೆಲ ಆತ್ಮೀಯ ಸ್ನೇಹಿತರೆ ಆಗಾಗ ಪ್ರಶ್ನೆ ಹಾಕುತ್ತಲೇ ಇರುತ್ತಾರೆ.
ನಿಜ ಹೇಳಬೇಕೆಂದರೆ ಪ್ರವಾಸ ಹೋಗುವ ಹುಚ್ಚು, ಯಾರೋ ತಲೆಗೆ ತುಂಬಿದರೆ ಬರಲ್ಲ. ಆ ಹವ್ಯಾಸ ತನ್ನಿಂದ ತಾನೇ ಬೆಳೆಯಬೇಕು. ಕೆಲವರಿಗೆ ಪ್ರವಾಸವೆಂದರೆ ಅಚ್ಚುಮೆಚ್ಚು. ಅದರಲ್ಲೂ ಯಾವುದೋ ಕುಗ್ರಾಮ, ಐತಿಹಾಸಿಕ ಹಿನ್ನಲೆಯ ಸ್ಥಳಗಳಿಗೆ ಹೋಗಿ ಅಲ್ಲಿನ ಇತಿಹಾಸದ ಬಗ್ಗೆ ತಿಳಿಯುವ ಕುತೂಹಲ ಹಾಗೂ ಜನಸಾಮಾನ್ಯರ ಜೊತೆ ಬೆರೆಯುವ ಹಂಬಲ ಇರುವಂತಹ ವರ್ಗಕ್ಕೆ ಸೇರಿದವನು ನಾನು.. 
ಪ್ರವಾಸ ಹೋದಾಗ ನನಗಾದ ಕೆಲ ಅನುಭವಗಳೇ ನನಗೆ ಸ್ಪೂರ್ತಿ, ಕೆಲವು ಸನ್ನಿವೇಶಗಳು ಬದುಕಿನ ನೈಜತೆಯನ್ನು ಅನಾವರಣ ಮಾಡುತ್ತದೆ. ಹಲವರ ಕಷ್ಟಗಳು ಕೇಳಿದಾಗ ವಿಧಿಯ ಆಟದ ಬಗ್ಗೆ ಬೇಸರವೂ ಬರುತ್ತದೆ. ಕಷ್ಟಗಳಿಲ್ಲದ ವ್ಯಕ್ತಿಗಳೇ ಈ ಪ್ರಪಂಚದಲ್ಲಿ ಇಲ್ಲವೇನೋ ಎಂಬ ಭಾವನೆಯು ಬಂದಿದೆ. 
ನನ್ನ ಪಯಣದ ಹಾದಿಯಲ್ಲಿ ಕಂಡ ಕೆಲ ಸನ್ನಿವೇಶಗಳತ್ತ ಚಿತ್ತಹರಿಸಿದರೆ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಾರ್ಸ್ಲೆ ಇಲ್ಸ್ ಎಂಬ ಬೆಟ್ಟವೊಂದಿದೆ. ಪ್ರಕೃತಿಯ ರಮಣೀಯ ಸೌಂದರ್ಯವನ್ನು ಇಟ್ಟುಕೊಂಡಿರುವ ಬೆಟ್ಟವದು. ನಾನು ಮದನಪಲ್ಲಿಯಿಂದ ಹಾರ್ಸ್ಲೆ ಇಲ್ಸ್ ಬೆಟ್ಟದ ಕೆಳ ಭಾಗಕ್ಕೆ ಬಸ್ ನ ಮೂಲಕ ತೆರಳಿದೆ. ಅಲ್ಲಿಂದ ಬೆಟ್ಟಕ್ಕೆ ಹೋಗಬೇಕಾದರೆ ಖಾಸಗಿ ವಾಹನಗಳೇ ಆಧಾರ. ಸರಿ ಎಂದು ಅಲ್ಲಿದ್ದ ಟಾಟಾ ಸುಮೋ ಹತ್ತಿರ ಹೋದೆ, ಕಾರಿನಲ್ಲಿದ್ದ ಯುವ ಚಾಲಕ (ಎಮನ್ನ ಕೊಂಡಕ್ಕಿ ವಸ್ತಾವ, 300 ರೂಪಾಯಿಲು ಐತುಂದಿ, ಎಕ್ಕಂಡ ಪದಾಮು ಎಂದ)  ಅಣ್ಣ ಬೆಟ್ಟದ ಮೇಲೆಕ್ಕೆ ಹೋಗಲು 300 ರೂ. ಆಗುತ್ತದೆ, ಬರುತ್ತೀರ ಎಂದ. 
ಅನಿವಾರ್ಯವಾಗಿ ಬೆಟ್ಟದ ಮೇಲಕ್ಕೆ ಹೋಗಬೇಕಾದ್ದರಿಂದ ಸರಿಯೆಂದು ಹತ್ತಿದೆ. ಹಾಗೆಯೇ ಆತನನ್ನು ಮಾತಿಗೆಳೆದೆ, ಪ್ರತಿದಿನ ಎಷ್ಟು ವ್ಯಾಪಾರವಾಗುತ್ತದೆ ಎಂದಾಗ ಆತ, ಈಗ ಬಹಳ ಕಡಿಮೆ ಬಿಡಿ ಅಣ್ಣ, ಹಾರ್ಸ್ಲೆ ಇಲ್ಸ್ಗೆ ಬರುವ ಪ್ರತಿಯೊಬ್ಬರು ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಬರುವುದರಿಂದ ನಮಗೆ ವ್ಯಾಪಾರವೇ ಆಗುವುದಿಲ್ಲ. ಹೇಗೋ ಕಷ್ಟ ಬಿದ್ದು ದಿನಕ್ಕೆ 400, 500.ರೂ ಸಂಪಾದನೆ ಮಾಡಿದರೂ ನಮ್ಮ ತಂದೆ ಮಾಡಿರುವ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಸಾಲದೆಂಬಂತೆ ತಂದೆಗೆ ಕುಡಿತದ ಚಟ ಬೇರೆ ಎಂದು ಬೇಸರ ಮಾಡಿಕೊಂಡ. ಆತ ತನ್ನ ನೋವುಗಳನ್ನು ಹಂಚಿಕೊಳ್ಳುತ್ತ ಸಾಗುತ್ತಲೇ ತಲುಪಬೇಕಾದ ಸ್ಥಳ ಬಂತು. 
ಹಾರ್ಸ್ಲೆ ಇಲ್ಸ್ ಹಸಿರುಮಯ ವಾತವರಣ, ವೀವ್ ಪಾಯಿಂಟ್, ಮೃಗಾಲಯ ಗಮನ ಸೆಳೆಯುವಂತದ್ದು. ಬೆಟ್ಟದಿಂದ ವಾಪಾಸ್ ಬರಬೇಕಾದರೆ ಒಂದು ಪೋನ್ ಕರೆ ಮಾಡಿ ಬರುತ್ತೇನೆಂದು  ಹೇಳಿ ಆ ಚಾಲಕ ಹೊರಟು ಹೋದ. ನಂತರ ನಾನೇ ಸಂಜೆ ಕರೆ ಮಾಡಿದಾಗ ಬೆಟ್ಟಕ್ಕೆ ಕಾರಿನಲ್ಲಿ ಬಂದ ಆತ ಕೆಳಗೆ ಡ್ರಾಪ್ ಮಾಡಿದ, ಮಾರ್ಗ ಮಧ್ಯೆ ಮತ್ತೇ ಅದೇ ಕಷ್ಟಗಳ ಚರ್ಚೆ. (ಅಣ್ಣಾ ನಾ ಕಷ್ಟಲು ಚೆಪ್ಪುತಾ ಉಂಟೆ ದಿನಮು ಸಾಲದು ) ಅಣ್ಣಾ ನನ್ನ ಕಷ್ಟಗಳು ಹೇಳುತ್ತ ಇದ್ದರೆ ದಿನವೂ ಸಾಲದು ಎಂದು ಉದ್ಗರಿಸಿದ. ಕೊನೆಗೆ ಇಳಿಯುವ ಜಾಗ ಬಂದಿದ್ದರಿಂದ ಮಾತು ಅಲ್ಲಿಗೆ ಮುಗಿಯಿತು.
ಮುಳಬಾಗಿಲು ತಾಲೂಕಿನ ಕುರುಡಮಲೆಯ ಗಣಪತಿ ದೇಗುಲಕ್ಕೆ ಹೋಗಿದ್ದೆ. ದೇವರ ದರ್ಶನ ನಂತರ ದೇಗುಲದ ಮುಂಭಾಗದ ಮರದ ಕೆಳಗೆ ತೆಂಗಿನ ಕಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ 50 ವರ್ಷ ದಾಟಿದ ಮಹಿಳೆಯೊಬ್ಬರನ್ನು ವ್ಯಾಪಾರ ಹೇಗೆ ಆಗುತ್ತದೆ ಪರವಾಗಿಲ್ಲವೇ ಎಂದಾಗ, ಅವರು ಕಷ್ಟ ಬಿಡು ಸ್ವಾಮಿ, ದಿನಪೂರ್ತಿ ಈ ಮರದ ಕೆಳಗೆ ಕುಂತರೂ ಎರಡು ಮೂರು ತೆಂಗಿನ ಕಾಯಿ ಮಾರಾಟವಾಗುವುದಿಲ್ಲ. 
ಸಾಲದಕ್ಕೆ ಹಲವರು ಇಲ್ಲಿಯೇ ಅಂಗಡಿಗಳು ತೆರೆದಿದ್ದಾರೆ. ಈ ಇಳಿ ವಯಸ್ಸಲ್ಲಿ ಕೂಲಿಗೆ ಹೋಗಿ ದುಡಿಯಲು ಶಕ್ತಿ ಇಲ್ಲ. ಆ ಕಾರಣದಿಂದಲೇ ಪೂಜಾ ಸಾಮಾಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಮನೆಯಿಂದಲೇ ಭಕ್ತಾಧಿಗಳು ಪೂಜಾ ಸಾಮಾಗ್ರಿಗಳನ್ನು ತರುವುದರಿಂದ ನನ್ನಲ್ಲಿ ಖರೀದಿಸುವವರು ಕಡಿಮೆ. ದೇವರಿದ್ದಾನೆ ನೋಡೋಣ ಎಂದು ಅವರು ನೋವು ಪಟ್ಟುಕೊಂಡರು.   
ಅಂದಹಾಗೆ ಆಂಧ್ರದ ಕಡಪ ಜಿಲ್ಲೆಗೆ ಹೋಗಿದ್ದೆ. ಆಂಧ್ರ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದ್ದ ಪುಲಿವೆಂದುಲ ಪಟ್ಟಣ್ಣ ಹಾಗೂ ಸುತ್ತಲಿನ ಕೆಲವು ಹಳ್ಳಿಗಳಿಗೆ ಹೋದಾಗ ನನಗಾದ ಅನುಭವಗಳೇ ವಿಭಿನ್ನ. ತೆಲುಗು ಚಿತ್ರಗಳಲ್ಲಿ ಪುಲಿವೆಂದುಲ ಪ್ರದೇಶವನ್ನು ಫ್ಯಾಕ್ಷನಿಸಂ ವಲಯವೆಂದು ಚಿತ್ರಿಕರಿಸುತ್ತಿದ್ದರು. ಆ ಕಲ್ಪನೆಯೇ ನನ್ನಲ್ಲೂ ಇತ್ತು. ಪುಲಿವೆಂದುಲ ಸಮೀಪದ ಗ್ರಾಮಕ್ಕೆ ಹೋದಾಗ ಗ್ರಾಮಸ್ಥರೊಬ್ಬರನ್ನು ಮಾತನಾಡಿಸುತ್ತ, ಪುಲಿವೆಂದುಲ ಎಂದರೆ ರಕ್ತಸಿಕ್ತ ಅಧ್ಯಾಯಗಳಿಗೆ ಬುನಾದಿ ಹಾಕಿದ ಪ್ರದೇಶ. 
ಈಗಲೂ ಹಾಗೆ ಇದೆಯೇ ಎಂದಾಗ, ಆತ ನಿಜ ನೀವು ಹೇಳಿದ್ದು ಸತ್ಯ. ಆದರೆ ಈಗ ನಮ್ಮ ಜನ
ಬುದ್ದಿವಂತರಾಗುತ್ತಿದ್ದಾರೆ. ರಾಜಕೀಯ ವೈಷಮ್ಯಗಳಿಂದ ಯಾರ ಬದಕು ಹಸನಾಗುವುದಿಲ್ಲ. ರಾಜಕಾರಣಿಗಳನ್ನು ನಂಬಿದರೆ ಒಂದೊತ್ತು ಊಟ ಸಿಗುವುದಿಲ್ಲ ಎಂಬುವುದು ನಮಗೂ ಅರಿವಿಗೆ ಬಂದಿದೆ. ಮೊದಲಷ್ಟು ಫ್ಯಾಕ್ಷನಿಸಂ ಗಲಾಟೆಗಳು ನಡೆಯಲ್ಲ ಎಂದ. ಕೃಷಿ ಬಗ್ಗೆ ವಿಚಾರಿಸಿದಾಗ ಕಡಪ ಜಿಲ್ಲೆಯು ಸದಾ ಭೀಕರ ಬರಗಾಲಕ್ಕೆ ತುತ್ತಾಗುತ್ತಲೇ ಇರುತ್ತದೆ. ಪುಲಿವೆಂದುಲ ಇದಕ್ಕೆ ಹೊರತಲ್ಲ. ಕೃಷಿ ನಂಬಿದರೆ ಬದುಕು ನಡೆಯಲ್ಲ ಎಂದು ಕೂಲಿಗೆ ಹೋಗುತ್ತೇನೆ. ದಿನವೊಂದಕ್ಕೆ 300 ರಿಂದ 350 ಕೊಡುತ್ತಾರೆ. ಅದರಲಿಯ್ಲೇ ಜೀವನ, ಕಷ್ಟಗಳು ಹಲವಾರಿವೆ, ಬದುಕಿನ ದಾರಿಯು ಉದ್ದವಿದೆ. ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಹಣ ಸಾಕಾಗಲ್ಲ. ಆದರೂ ಹೇಗೋ ಜೀವನ ನಡೆಯುತ್ತಿದೆ ಎಂದು ಹೇಳಿದ.   
ಹಾಗೆಯೇ ಪುಲಿವೆಂದುಲದಿಂದ ವೆಂಪಲ್ಲಿ ಸಮೀಪದ ಇಡುಪುಲಪಾಯ ಗ್ರಾಮಕ್ಕೆ ಹೋಗಿದ್ದೆ. ಇದು ಆಂಧ್ರ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರೆಡ್ಡಿ ಅವರ ಸಮಾಧಿ ಇರುವ ಸ್ಥಳ. ದೊಡ್ಡ ವಿಸ್ತೀರ್ಣವಾದ ಜಾಗದಲ್ಲಿ ಉದ್ಯಾನವನ ನಿರ್ಮಿಸಿದ್ದು, ಮಧ್ಯದಲ್ಲಿ ವೈ.ಎಸ್.ಆರ್ ಸಮಾಧಿ ಇದೆ. ಉದ್ಯಾನವನದ ಮುಂಭಾಗದಲ್ಲಿ ಒಬ್ಬರು ಐಸ್ ಕ್ಯಾಂಡಿ ಮಾರುತ್ತಿದ್ದರು. ಬಿಸಿಲು ಭಯಂಕರವಾದ್ದರಿಂದ ನಾನು ಐಸ್ ಕ್ಯಾಂಡಿ ತೆಗೆದುಕೊಂಡು ಆತನ ಬಳಿ ಮಾತನಾಡಿದಾಗ, ವೈ.ಎಸ್.ಆರ್ ಸಮಾಧಿ ವೀಕ್ಷಿಸಲು ಜನ ಬರುತ್ತಲೇ ಇರುತ್ತಾರೆ. ಆದರೆ ಎಲ್ಲರೂ ಐಸ್ ಕ್ರೀಂ ತೆಗೆದುಕೊಳ್ಳುವುದಿಲ್ಲ. ಶನಿವಾರ, ಭಾನುವಾರ ವಾರಾಂತ್ಯಗಳಲ್ಲಿ ಜನ ಹೆಚ್ಚಾಗಿ ಬರುವುದರಿಂದ ವ್ಯಾಪಾರ ಸ್ವಲ್ಪಮಟ್ಟಿಗೆ ಪರವಾಗಿಲ್ಲ. ಇಡೀ ಕುಟುಂಬವನ್ನು ಬರುವ ಆದಾಯದಿಂದ ನಿರ್ವಹಿಸುವುದು ತುಂಬ ಕಷ್ಟ. ಓದುವ ಮಕ್ಕಳಿದ್ದಾರೆ, ಇರಲು ಸ್ವಂತ ಸೂರಿಲ್ಲ, ಈ ಬಿಸಲಿಲ್ಲ ದುಡಿಯುವ ಆರೋಗ್ಯವು ಇಲ್ಲ ಎಂದು ತನ್ನ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ.
ಒಮ್ಮೆ ಮೈಸೂರಿನಿಂದ ರೈಲಲ್ಲಿ ಬೆಂಗಳೂರಿನತ್ತ ಬರುವಾಗ ಮಧ್ಯ ವಯಸ್ಸಿನ ಯುವಕನೊಬ್ಬ ಸಿಕ್ಕ. ಆತನ ವೃತ್ತಿ ರೈಲಲ್ಲಿ ಕಾಫಿ, ಟೀ ಮಾರುವುದು. ಬಹುಃಶ ರೈಲಲ್ಲಿ ಓಡಾಡಿ ಸಾಕಾಗಿರಬೇಕು, ನನ್ನ ಪಕ್ಕದಲ್ಲಿಯೇ ಬಂದು ಕೂತ. ನಾನು ಒಂದು ಟೀ ತೆಗೆದುಕೊಂಡೆ. ಹಾಗೆಯೇ ಮಾತನಾಡುತ್ತ ಪ್ರತಿನಿತ್ಯ ಎಷ್ಟು ಟೀ ಮಾರುತ್ತಿಯ ಎಂದಾಗ, ಸಾರ್ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ರೈಲಲ್ಲಿ ಇತ್ತಿಂದ ಅತ್ತ, ಅತ್ತಿಂದಿತ್ತ ನಡೆದಾಡಿದರೂ ಬೆರಳಣಿಕೆಯಷ್ಟು ಮಂದಿ ಮಾತ್ರ ಟೀ ತೆಗೆದುಕೊಳ್ಳುತ್ತಾರೆ. ನನಗೂ ಸಾಕಾಗಿ ಹೋಗಿದೆ. ಆದರೆ ಕುಟುಂಬಕ್ಕೆ ನಾನೊಬ್ಬನೆ ದಿಕ್ಕು. ನನ್ನ ದುಡಿಮೆಯೇ ಆಧಾರ. ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ರೈಲಲ್ಲಿ ಟೀ ಮಾರುತ್ತಿದ್ದೇನೆ. ಹೇಳುತ್ತಾ ಹೋದರೆ ಎರಡು ದಿನ ಸಾಕಾಗಲ್ಲ ಸಾರ್ ಎಂದು ನೋವಿನಿಂದ ನುಡಿದ.   
ಒಮ್ಮೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಗೆ ಹೋಗಿದ್ದೆ. ಕರ್ನೂಲು ಬಸ್ ನಿಲ್ದಾಣಕ್ಕೆ ಬೆಳಗ್ಗೆ.6ಕ್ಕೆ ತಲುಪಿದೆ. ಬಸ್ ನಿಲ್ದಾಣದಲ್ಲೇ ಮುಖ ತೊಳೆದು ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಟೀ ಕುಡಿದು, ಉಳಿದುಕೊಳ್ಳಲು ಕೆಲವರನ್ನು ವಿಚಾರಿಸಿದೆ. ಕೆಲವರು ಕೆಲ ಹೋಟೆಲ್ ಗಳನ್ನು ಹೇಳಿದರು. ಬಸ್ ನಿಲ್ದಾಣದಲ್ಲೇ ಒಂದು ಬೋರ್ಡ್ ಕಾಣಿಸಿತು. ಕೇವಲ 150 ರೂ.ಗಳಿಗೆ ರೂಂ ಸಿಗುತ್ತದೆ ಎಂದು ಅದರಲ್ಲಿ ಬರೆದಿದ್ದರು. ನನಗ್ಯಾಕೋ 150 ರೂ.ಗೆ ಬೆಲೆಗೆ ಸಿಗುವ ರೂಂ ಹೇಗಿರುತ್ತದೆ ಎಂದು ಹೋಗುವುದಕ್ಕೆ ಹಿಂದೆ ಮುಂದೆ ನೋಡಿದೆ. 
ಕೊನೆಗೆ ಇರಲಿ ಎಂದು ಮೆಟ್ಟಿಲು ಹತ್ತಿ ಲಾಡ್ಜ್ ಬಳಿ ಹೋದಾಗ ಅಲ್ಲಿದ್ದ ಯುವಕನೊಬ್ಬ 12 ಗಂಟೆ ಇದ್ದರೆ 150  ರೂ. 24 ಗಂಟೆ ಉಳಿದುಕೊಂಡರೆ 250 ರೂ. ಎಂದು ಹೇಳಿದ. 250 ರೂ.ಕೊಟ್ಟು 24 ಗಂಟೆ ಎಂದು ಬರೆಸಿದೆ. ಒಳ ಹೋದರೆ ದೊಡ್ಡ ಹಾಲ್, ಆ ಹಾಲ್ ತುಂಬ ಕಬ್ಬಿಣದ ಮಂಚಗಳು, ಪ್ರತಿಯೊಬ್ಬರಿಗೂ ಒಂದೊಂದು ಮಂಚ, ಸಣ್ಣದಾದ ಒಂದು ಲಾಕರ್ ಬೇರೆ ಕೊಟ್ಟ. ನಾಲ್ಕೈದು ಜನ ಒಟ್ಟಿಗೆ ಕುಳಿತು ಟಿ.ವಿ ನೋಡುತ್ತಿದ್ದರು, ಲಾಡ್ಜ್ ತುಂಬಾ ಹಳೆಯದು.  
ದೂರದ ಸ್ಥಳಗಳಿಂದ ಬರುವ ಬಡ, ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಲಾಡ್ಜ್ ಅದು. 60 ವರ್ಷ ವಯೋಮಾನದ ಒಬ್ಬ ವ್ಯಕ್ತಿ ಲಾಡ್ಜ್ನಲ್ಲಿ ಮಾತಿಗೆ ಸಿಕ್ಕರು. ಅವರು ಆಂಧ್ರದ ಅನಂತಪುರ ಮೂಲದವರು. ಕೆಲಸದ ನಿಮಿತ್ತ ಕರ್ನೂಲಿಗೆ ಬಂದಿದ್ದರು. ತನ್ನ ಬಗ್ಗೆ ಹೇಳಿಕೊಂಡ ಆತ ತಾನು ರೈತ, ಕೃಷಿ ಕಸುಬನ್ನು ನಂಬಿಕೊಂಡವನು. ಐದು ಬಾರಿ ಕೊಳವೆ ಬಾವಿ ಕೊರೆಸಿದ್ದೇನೆ. 4 ಕೊಳವೆ ಬಾವಿಗಳಲ್ಲಿ ನೀರು ಬರಲಿಲ್ಲ. 5ನೇ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ. ಒಂದಷ್ಟು ತರಕಾರಿ ಬೆಳೆಯುತ್ತಿದ್ದೆ. ಯಾವುದಕ್ಕೂ ಬೆಲೆ ಇಲ್ಲ. ಬಿಸಿಲಲ್ಲಿ ಬೆವರು ಸುರಿಸಿ ದುಡಿದರು ಪ್ರತಿಫಲವಿಲ್ಲ. ಕೃಷಿಗೆ ಹಾಕಿದ ಬಂಡವಾಳವೇ ವಾಪಸ್ ಬರುತ್ತಿಲ್ಲ. 
ಕೊಳವೆ ಬಾವಿ ಕೊರೆಸಲು ಮಾಡಿದ್ದ ಸಾಲ ತೀರಿಸುವುದು ಹೇಗೋ ಅರ್ಥವಾಗುತ್ತಿಲ್ಲ, ಬದುಕು ದುಸ್ಥರವಾಗುತ್ತಿದೆ. ಸರಕಾರಗಳ ಯೋಜನೆಗಳ ಲಾಭ ನಮ್ಮಂತಹ ಬಡವರಿಗೆ ಸಿಗಲ್ಲ, ಬದುಕಿನ ಬಂಡಿ ಸಾಗಬೇಕಲ್ಲವೇ ಅದಕ್ಕೆ ಕಷ್ಟವಾದರೂ ಕೃಷಿ ಬಿಟ್ಟಿಲ್ಲ ಎಂದು ಕಣ್ಣೀರು ಹಾಕಿದ, ನನಗೂ ಬೇಸರವಾಯಿತು. ಸರಿಯೆಂದು ನನಗೂ ಸಮಯವಾದ್ದರಿಂದ ಅಲ್ಲಿಂದ ತೆರಳಿದೆ.
ಕರ್ನೂಲು ಬಳಿ ನೋಡುವಂತಹ ಸ್ಥಳಗಳು ಯಾವುದಿದೆ ಎಂದು ಲಾಡ್ಜ್ ನ ಇಂರ್ಚಾಜ್ ಆಗಿದ್ದವನನ್ನು ಕೇಳಿದೆ. ಆಗ ಆತ ಕರ್ನೂಲು ಸಮೀಪದಲ್ಲೇ ತೆಲಂಗಾಣ ರಾಜ್ಯಕ್ಕೆ ಒಳಪಡುವ ಜೋಗುಲಮ್ಮ ಗದ್ವಾಲ್ ಜಿಲ್ಲೆಯಲ್ಲಿ ಆಲಂಪೂರ್ ಎಂಬ ಐತಿಹಾಸಿಕ ಧಾರ್ಮಿಕ ಕ್ಷೇತ್ರವಿದೆ ಎಂದ. ಸರಿ ಕರ್ನೂಲು ನಗರದಿಂದ ತೆಲಂಗಾಣ ಬಸ್ ಹತ್ತಿ ಹೋಗುತ್ತಿದ್ದಾಗ, ಮಾರ್ಗ ಮಧ್ಯದೆಲ್ಲಿಯೂ ಕೃಷಿ ಮಾಡುವ ಪ್ರದೇಶಗಳೇ ಕಾಣಲಿಲ್ಲ. ಬರೀ ಪಾಳು ಬಿದ್ದ ಭೂಮಿ ಮಾತ್ರ ಕಣ್ಣಿಗೆ ಗೋಚರಿಸುತ್ತಿತ್ತು.     
ಆಲಂಪೂರ್ ಗ್ರಾಮವು ನಿಜಕ್ಕೂ ಐತಿಹಾಸಿಕ ಕ್ಷೇತ್ರ. ಒಂದರಪಕ್ಕ ಒಂದರಂತೆ ಹತ್ತಾರು ದೇಗುಲಗಳಿವೆ. ದೇಗುಲದ ಸಮೀಪವೇ ನದಿ ಹರಿಯುತ್ತದೆ, ದೇಗುಲದ ಪಕ್ಕದಲ್ಲಿ ದರ್ಗಾವು ಇದೆ. ಇದೊಂತರ ಧಾರ್ಮಿಕತೆಯ ನೆಲೆ ಎನ್ನಬಹುದು. ಲಾಡ್ಜ್ ನ ಇಂರ್ಚಾಜ್ ಸಲಹೆಯಿಂದ ಆಲಂಪೂರ್ ನಂತಹ ಕ್ಷೇತ್ರವನ್ನು ನೋಡಲು ಸಾಧ್ಯವಾಯಿತು. 
ಒಮ್ಮೆ ಅನಂತಪೂರ ಜಿಲ್ಲೆಯ ಕದಿರಿಗೆ ಹೋಗಿದ್ದೆ. ಬಸ್ ನಿಲ್ದಾಣದಲ್ಲಿ ಯಾರೋ ಕೊಟ್ಟ ಮಾಹಿತಿಯಂತೆ ಕದಿರಿಯ ಸಮೀಪದಲ್ಲಿಯೇ ಇರುವ ತಿಮ್ಮಮ್ಮ ಮರ್ರಿಮಾನು ಗ್ರಾಮಕ್ಕೆ ಹೋದೆ. ಆ ಗ್ರಾಮದ ವಿಶೇಷ ಹತ್ತಾರು ಏಕರೆ ಪ್ರದೇಶದಲ್ಲಿ ಬೃಹತ್ ಗಾತ್ರದ ಆಲದ ಮರ ನೆಲೆ ನಿಂತಿದೆ. ತಿಮ್ಮಮ್ಮ ಮರ್ರಿಮಾನು ಗ್ರಾಮದ ಗೇಟ್ ನಿಂದ 3 ಕೀ.ಮಿ ಕಾಲ್ನಡಿಗೆಯ ಜಾಥಾ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಜ್ಜಿ ಒಬ್ಬರು ಸಿಕ್ಕರು. ತಲೆ ಮೇಲೆ ಕಟ್ಟಿಗೆಯನ್ನು ಹೊತ್ತು ಸಾಗುತ್ತಿದ್ದರು. ದಾರಿಯುದಕ್ಕೂ ಮಾತನಾಡುತ್ತ ಸಾಗಿದಾಗ ಅಜ್ಜಿಯನ್ನು ತಮ್ಮ ಮಕ್ಕಳು ಆಶ್ರಯ ನೀಡದೆ ಹೊರಗೆ ಕಳುಹಿಸಿದ್ದು, ಸಣ್ಣ ಗುಡಿಸಲಲ್ಲಿ ವಾಸ ಮಾಡುತ್ತಿದ್ದೀನಿ ಎಂದು ಮನಸ್ಸು ಭಾರ ಮಾಡಿಕೊಂಡು ನುಡಿದಳು. ಮಕ್ಕಳನ್ನು ನಾವು ಪ್ರೀತಿಯಿಂದ ಸಾಕುತ್ತೇವೆ, ಅವರಿಗೆ ಬೇಕಾದದ್ದನ್ನು ಕೊಡಿಸುತ್ತೇವೆ. ಆದರೆ ನಮಗೆ ವಯಸ್ಸಾದಾಗ ನಮನ್ನು ನೋಡಿಕೊಳ್ಳುವ ಸೌಜನ್ಯವು ಮಕ್ಕಳಲ್ಲಿ ಇರುವುದಿಲ್ಲ ಎಂದು ಅಸಹಾಯಕತೆಯಿಂದ ಹೇಳಿದಳು. ಆಕೆಗೆ ಕಷ್ಟಗಳು ಹೆಚ್ಚಾಗಿಯೇ ಇದ್ದವು.
ಕೊನೆಗೂ ತಿಮ್ಮಮ್ಮ ಮರ್ರಿಮಾನು ಗ್ರಾಮ ತಲುಪಿದಾಗ ಅಲ್ಲಿ ಬೃಹತ್ ಎತ್ತರದ ವಿಶಾಲವಾದ ಆಲದ ಮರ ಕಾಣಿಸಿತು. ಇಷ್ಟೊಂದು ದೊಡ್ಡ ಆಲದ ಮರ ಬೇರೆಲ್ಲೂ ಕಾಣಲ್ಲ ಎನ್ನಲಾಗುತ್ತದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೂ ಈ ಮರದ ಇತಿಹಾಸ ಸೇರಿದೆ. ಹಚ್ಚ ಹಸಿರಿನ ಮರ, ಅಲ್ಲೇ ಇದ್ದ ಜಿಂಕೆಗಳ ಗುಂಪು ನೋಡಿದಾಗ ಮನಸ್ಸು ಹಗುರವಾಯಿತು. 
ಗ್ರಾಮದ ಸ್ವಲ್ಪ ದೂರ ಬಂದಾಗ ವೈ.ಎಸ್.ಆರ್.ಸಿ.ಪಿ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವೈ.ಎಸ್ ಜಗನ್ ಮೋಹನ್ ರೆಡ್ಡಿ ಪಾದಾಯಾತ್ರೆ ಅದೇ ರಸ್ತೆಯಲ್ಲಿ ಸಾಗಿತ್ತು. ಸುತ್ತಮುತ್ತಲಿನ ಜನ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೋಡಲು ಮುಗಿಬೀಳುತ್ತಿದ್ದು, ರಾಜಕಾರಣಿಗಳ ಮೇಲೆ ಆಂಧ್ರ ಜನ ಹೊಂದಿರುವ ಪ್ರೀತಿಯನ್ನು ತೋರಿಸುತ್ತಿತ್ತು.
ಕದಿರಿ ಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ದರ್ಶನಕ್ಕಾಗಿ ಬಸ್ ನಿಲ್ದಾಣದಿಂದ ಆಟೋ ಹತ್ತಿದೆ. ಆತನದೊಂದು ಸ್ಟೋರಿ, ಆಟೋ ಓಡಿಸಿದರೆ ಏನು ಗಿಟ್ಟಲ್ಲ ಸಾರ್, ಸ್ವಂತ ವಾಹನಗಳು ಹೆಚ್ಚಾಗುತ್ತಿರುವುದರಿಂದ ಆಟೋಗಳಿಗೆ ವ್ಯಾಪಾರ ಇಲ್ಲ. ಸಾಲದಕ್ಕೆ ವಾಹನ ಚಾಲನ ಪರವಾನಗಿ (ಡಿ.ಎಲ್) ಪಡೆಯಬೇಕಾದರೆ ಸರಕಾರವು ವಿದ್ಯಾರ್ಹತೆ ನಿಗದಿಪಡಿಸಿದೆ. ನಾನಂತೂ ಶಾಲೆಯೇ ನೋಡಿಲ್ಲ, ಈಗ ಡಿ.ಎಲ್ ಸಿಗದಿದ್ದರೆ ನನ್ನ ಪರಿಸ್ಥಿತಿ. ಡ್ರೈವಿಂಗ್ ಚೆನ್ನಾಗಿ ಬಂದರೆ ಡಿ.ಎಲ್ ಕೊಡಲು ಸರಕಾರಗಳಿಗೆ ಏನು ಕಷ್ಟ. ನಮ್ಮ ಹೊಟ್ಟೆ ಮೇಲೆ ಹೊಡೆಯಲು ಸರಕಾರ ಮುಂದಾಗಿದೆ ಎಂದು ಅಳಲು ತೊಡಿಕೊಂಡ. 
ಒಂದು ಸಲ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾ.ರಾ ಚಂದ್ರಬಾಬು ನಾಯ್ಡುರವರ ಸ್ವ ಗ್ರಾಮ
ನಾರಾವಾರಪಲ್ಲಿಗೆ ಹೋಗಲು ಕೋಲಾರದಿಂದ ನೇರವಾಗಿ ಚಂದ್ರಗಿರಿ ಪಟ್ಟಣಕ್ಕೆ ಹೋದೆ. ಅಲ್ಲಿಂದ ಆಟೋ ಮೂಲಕ ರಂಗಂಪೇಟೆ ಮೂಲಕ ನಾರವಾರಪಲ್ಲಿಯತ್ತ ಪಯಣ. ನಾರಾವಾರಪಲ್ಲಿ ತುಂಬ ಸಣ್ಣ ಗ್ರಾಮ, ಮನೆಯ ಮುಂಭಾಗವೊಂದರಲ್ಲಿ ಐದು ಜನ ಕೂತಿದ್ದರು. ಅವರು ಚರ್ಚಿಸುತ್ತಿದ್ದ ವಿಷಯ ಆಂಧ್ರ ರಾಜಕೀಯ. ಈ ಬಾರಿಯು ಆಂಧ್ರ ಸಿ.ಎಂ ನಮ್ಮೂರಿನ ಚಂದ್ರಬಾಬುನೇ ಆಗುತ್ತಾರೆ ಎಂಬ ಬಲವಾದ ನಂಬಿಕೆ ಅವರಲ್ಲಿತ್ತು.
ನಾರಾವಾರಪಲ್ಲಿಯಿಂದ ಪಕ್ಕದಲ್ಲಿಯೇ ಇದ್ದ ಕಲ್ಯಾಣಿ ಡ್ಯಾಂ (ತಿರುಪತಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಡ್ಯಾಂ) ವೀಕ್ಷಿಸಲು ಹೋದಾಗ ಅಲ್ಲಿಯೇ ಸರಕಾರದ ಪೊಲೀಸ್ ಟ್ರೈನಿಂಗ್ ಕಾಲೇಜು ಇತ್ತು. ಪೊಲೀಸ್ ಪೇದೆಗಳಾಗಿ ಆಯ್ಕೆಯಾಗುವವರಿಗೆ ತರಬೇತಿ ನೀಡುವ ಕಾಲೇಜು ಅದು. ಡ್ಯಾಂ ನೋಡಿಕೊಂಡು ವಾಪಸ್ ಬರುವಾಗ ಟ್ರೈನಿಂಗ್ಗೆ ಬಂದಿದ್ದ ಇಬ್ಬರು ಪೊಲೀಸ್ ಪೇದೆಗಳು ಸಿಕ್ಕಿದರು. ಓದಿರುವುದು ಪದವಿ, ಅವರನ್ನು ಕುತೂಹಲದಿಂದ ಮಾತನಾಡಿದಾಗ ಅವರೆಳಿದ್ದು, ನಮ್ಮ ಮನೆಯಲ್ಲಿ ನಾವೇ ಮೊದಲು ಪೊಲೀಸ್ ಇಲಾಖೆಗೆ ಸೇರಿರುವುದು. ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆ. ಮುಂದೆ ಪಿ.ಎಸ್.ಐ ಆಗಬೇಕೆಂಬ ಆಕಾಂಕ್ಷೆ ಇದೆ. ಕೈಯಲ್ಲಾದಷ್ಟು ಮಟ್ಟಿಗೆ ಬಡವರ ಸೇವೆಯ ಉದ್ದೇಶವಿದೆ, ಕಾರಣ ನಮ್ಮದು ಬಡ ಕುಟುಂಬ, ಬಡವರ ಕಷ್ಟ ಗೊತ್ತಿದೆ ಎಂದು ಆ ಪೇದೆಗಳಿಬ್ಬರು ಮನದಾಳದ ಮಾತುಗಳನ್ನು ಹೇಳಿದರು. 
ಹೀಗೆ ಹಲವು ಬಾರಿ ಹಲವರ ಕಷ್ಟ, ನೋವು, ನಲಿವುಗಳನ್ನು ಕೇಳಿದ್ದೇನೆ. ಹಲವರ ಕಷ್ಟಗಳನ್ನು ಕೇಳಿದಾಗ ನನಗೂ ತುಂಬಾ ನೋವಾದ ಸಂದರ್ಭಗಳು ಹಲವಾರಿವೆ.  ನಾನು ಪ್ರವಾಸ ಹೋದ ಅನೇಕ ಸ್ಥಳಗಳಲ್ಲಿ ಹಲವು ಅನುಭಗಳಾಗಿವೆ. ವಿವಿಧ ರೀತಿಯ ಭಾಷೆ, ಆಹಾರ ಪದ್ದತಿ, ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಣಲು ಸಾಧ್ಯವಾಗಿಸಿದ್ದು ಪ್ರವಾಸವೆಂಬ ಅಂಶ. ಜನರ ಕಷ್ಟಗಳು, ನೋವು, ನಲಿವುಗಳು ಅರ್ಥವಾಗುವುದೇ ನಮಗೆ ಪರಿಚಿತವಲ್ಲದ ಸ್ಥಳಗಳಿಗೆ ಹೋದಾಗ. ಪ್ರವಾಸವೆಂದರೆ ಅದು ಕೇವಲ ಮನರಂಜನೆ ಅಷ್ಟೇ ಅಲ್ಲ, ನಮಗೆ ಜೀವನ ಮೌಲ್ಯ ಹಾಗೂ ಹಲವು ಆಯಾಮಗಳಲ್ಲಿ ಮಾಹಿತಿಯನ್ನು ಕೊಡುತ್ತದೆ.  
ಹಲವರನ್ನು ಮಾತನಾಡಿದಾಗ, ಹಲವರ ಕಷ್ಟಗಳನ್ನು ಆಲಿಸಿದಾಗ ನಮ್ಮ ಬದುಕಿಗೂ ಹೊಸ ದಾರಿಯ ಅನ್ವೇಷಣೆಯಾಗುತ್ತದೆ. ಕಠಿಣ ಸನ್ನಿವೇಶಗಳಲ್ಲೂ ಧೈರ್ಯದಿಂದ ಮುನ್ನುಗುವ ಪ್ರವೃತ್ತಿ ನಮ್ಮಲ್ಲಿ ಬೆಳೆಸುವ ಶಕ್ತಿ ಪ್ರವಾಸಕ್ಕಿದೆ. ಪ್ರವಾಸದಿಂದ ಸಿಗುವ ಸಂತೋಷ, ರೋಮಾಂಚನ ಅದರ ರುಚಿ ಕಂಡವರಿಗೆ ಮಾತ್ರ ಗೊತ್ತು..