⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಒಂದು ಗಮನಾರ್ಹ ಅಂಶವೆಂದರೆ ಇಂದು ನಾವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ಬೆಳೆದಿದ್ದೇವೆ. ಅದರಲ್ಲೂ ಕಂಪ್ಯೂಟರ್ ಯುಗದಲ್ಲಿ ಇದ್ದೇವೆ. ನಮ್ಮ ಬೆರಳತುದಿಯಲ್ಲೇ ಯಾವುದೇ ಮಾಹಿತಿಯನ್ನು ಬೇಕಾದರೂ ಪಡೆದುಕೊಳ್ಳುವ ಅದ್ಬುತ ಅವಕಾಶ ಇಂಟರ್ ನೆಟ್ ಮೂಲಕ ಒದಗಿ ಬಂದಿದೆ. ಮೊಬೈಲ್ ಪೋನ್, ಕಂಪ್ಯೂಟರ್ ಗಳಂತು ಮನುಷ್ಯನ ಬದುಕನ್ನೇ ಸಂಪೂರ್ಣವಾಗಿ ಬದಲಾಯಿಸಿವೆ.
ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಇನ್ಸ್ಟ್ರಾಗ್ರಾಮ್, ಟೆಲಿಗ್ರಾಮ್ ಮುಂತಾದ ಆಪ್ ಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಬೇಕಾದ ವ್ಯಕ್ತಿಗೆ ಮೆಸೇಜ್ ಮಾಡುವ ಮೂಲಕ ಸಂವಹನ ನಡೆಸುವ ಅವಕಾಶವಿದೆ. ವಾಟ್ಸಾಪ್ ವಿಡಿಯೋ ಕಾಲಿಂಗ್, ಸ್ಕೈಪ್ ಆಪ್ ಮೂಲಕ ಬೇರೆ ದೇಶದಲ್ಲಿರುವ ವ್ಯಕ್ತಿಯೊಂದಿಗೂ ವಿಡಿಯೋ ಚಾಟ್ ಮಾಡುವ ಅನುಕೂಲವಿದೆ. ಆದರೆ ಕೆಲವೇ ದಶಕಗಳ ಹಿಂದೆ ದೂರದ ವ್ಯಕ್ತಿಗಳಿಗೆ ಏನಾದರೂ ಮಾಹಿತಿ ತಿಳಿಸಬೇಕಿದ್ದರೆ ಇದ್ದದ್ದು ಪತ್ರ ವ್ಯವಹಾರ ಮಾತ್ರ. ಇನ್ ಲ್ಯಾಂಡ್ ಅಥವಾ ಪೋಸ್ಟ್ ಕಾರ್ಡ್ ಗಳ ಮೂಲಕ ಪತ್ರ ಬರೆದು ನಮ್ಮ ಅಭಿಪ್ರಾಯ, ಅನಿಸಿಕೆಯನ್ನು ನಮ್ಮ ಆಪ್ತರಿಗೆ ತಿಳಿಸುತ್ತಿದ್ದೆವು. ಆದರೆ ಇಂದು ಸಾಮಾಜಿಕ ಮಾಧ್ಯಮಗಳು ಸಂವಹನ ಕ್ರಿಯೆಗೆ ಪರ್ಯಾಯ ಮಾರ್ಗವನ್ನು ಒದಗಿಸಿದೆ.
ಸಂವಹನ ಮಾಡುವ ಮಾರ್ಗಗಳು, ವಿಧಾನಗಳು ಸಾಕಷ್ಟು ಬದಲಾಗಿವೆ. ಕಲ್ಪನೆಗೂ ಮೀರಿದ ರೀತಿಯಲ್ಲಿ ಸಂವಹನ ಮಾಡುವ ಅವಕಾಶವಿದೆ. ಜನರ ಚಿತ್ರಣವೂ ಬದಲಾಗಿದೆ. ವಿಪರ್ಯಾಸವೆಂದರೆ ಇಂದಿಗೂ ಕೂಡ ಎಲ್ಲಿ, ಏನು, ಹೇಗೆ? ಮಾತನಾಡಬೇಕೆಂಬ ಪರಿಜ್ಞಾನವು ಇಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಒಂದು ಸರ್ವೇ ಹೇಳುತ್ತದೆ ಶೇ.60ರಷ್ಟು ಜನರಿಗೆ ಸಂವಹನ ಕೌಶಲ್ಯ (ಮಾತುಗಾರಿಕೆ)ದಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ ಎಂದು ವರದಿ ನೀಡುತ್ತದೆ. ಅದೇ ವರದಿ ಹೇಳುತ್ತದೆ ಜನ ಬಳಸುವ ಪದಗಳು ಬಹಳ ನಿಷ್ಕಿಯ ಹಾಗೂ ಅಸಂಬದ್ದ ಅಂಶಗಳಿಂದ ಕೂಡಿರುತ್ತದೆ ಎಂದು ಹೇಳಿದೆ.
ಒಂದು ಬಾರಿ ಆಂಧ್ರಪ್ರದೇಶದ ತಿರುಪತಿ ಬಳಿಯಿರುವ ಪೊಲೀಸ್ ತರಬೇತಿ ಅಕಾಡೆಮಿ ಒಂದಕ್ಕೆ ಹೋದಾಗ ಅಲ್ಲಿ ಒಂದು ನಾಮ ಫಲಕ ಹಾಕಿದ್ದರು. ಅದರಲ್ಲಿ ಈಗಿತ್ತು ಮನಿಷಿನಿ ಬದುಕಿಂಚೇದಿ ನೋಟಿತೊ ಪಿಲ್ಚೆ ಶ್ವಾಸ, ಅಯ್ತೆ ಮಂಚಿ ಮನಿಷಿಗಾ ಬದುಕಿಂಚೇದಿ ಮಾತ್ರಂ ನೋಟಿನುಂಡಿ ವಚ್ಚೆ ಮಾಟ (ಮನುಷ್ಯನನ್ನು ಬದುಕಿಸುವುದು ಉಸಿರಾಟ, ಆದರೆ ಒಳ್ಳೆ ಮನುಷ್ಯನನ್ನಾಗಿ ಬದುಕಿಸುವುದು ಮಾತ್ರ ನಮ್ಮ ಬಾಯಿಂದ ಬರುವ ಮಾತು) ಎಂದು ಬರೆದಿತ್ತು. ಎಂತಹ ಅರ್ಥಗರ್ಭಿತ ಮಾತಿದು. ಆ ತರಬೇತಿ ಶಾಲೆಗೆ ಬರುವ ಟ್ರೈನಿ ಪೊಲೀಸರು ಸಂವಹನ ಕೌಶಲ್ಯ ಬಗ್ಗೆ ತುಸು ಹೆಚ್ಚು ಮುತುವರ್ಜಿ ಕೊಡಲಿ ಎಂಬ ಉದ್ದೇಶದಿಂದ ಆ ತರಬೇತಿ ಸಂಸ್ಥೆಯ ಒಳಗೆ ಇಂತಹ ಹತ್ತಾರು ಸಂದೇಶಗಳನ್ನು ಸಾರುವ ನಾಮ ಫಲಕಗಳನ್ನು ಹಾಕಲಾಗಿತ್ತು.
ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು, ಕಾಲೇಜೊಂದರಲ್ಲಿ ಭಾಷಣ ಮಾಡುತ್ತ ಪ್ರತಿಯೊಬ್ಬರು ತಮ್ಮ ಗುರಿ ತಲುಪಬೇಕಾದರೆ ಪರಿಣಾಮಕಾರಿ ಸಂವಹನಕಾರನಾಗಿರಲೇ ಬೇಕು. ಸಾಧನೆಯ ಹಾದಿಯಲ್ಲಿ ಹಲವು ವ್ಯಕ್ತಿಗಳ ಭೇಟಿ ಇರುತ್ತದೆ. ಹಲವು ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರನ್ನು ನಮ್ಮತ್ತ ಸೆಳೆಯುವ, ಎದುರಿಸುವ ಅಸ್ತ್ರವೆಂದರೆ ಮಾತುಗಾರಿಕೆ ಮಾತ್ರ. ನಾವು ಮಾತುಗಾರಿಕೆಯಲ್ಲಿ ವಿಫಲವಾದರಂತು ಸಾಧನೆ ಹಾದಿಯ ನಮ್ಮಿಂದ ಬಲು ದೂರ ಕ್ರಮಿಸುತ್ತದೆ ಎಂದು ಬಹಳ ಸ್ಪಷ್ಟವಾಗಿ ಅಬ್ದುಲ್ ಕಲಾಂ ಅವರು ಸಂವಹನ ಕೌಶಲ್ಯದ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದರು.
ಪ್ರಮುಖ ವಿಷಯವೆಂದರೆ ನಾವು ಸಮಾಜ ಜೀವಿಗಳು. ಸಮಾಜದಲ್ಲಿಯೇ ಜೀವಿಸಬೇಕಾಗುತ್ತದೆ. ಸಮಾಜದಲ್ಲಿ ವಾಸಿಸುವುದರಿಂದ ನಮ್ಮ ಸುತ್ತ ಮುತ್ತ ನೆರೆ ಹೊರೆಯವರು, ಸ್ನೇಹಿತರು, ಬಂಧುಗಳು ಕೂಡ ವಾಸಿಸುತ್ತಾರೆ. ಅಂತವರ ಜೊತೆ ಒಳ್ಳೆಯ ಭಾಂದ್ಯವ ಬೆಳೆಸುವುದು ತೀರ ಅನಿವಾರ್ಯವು ಹೌದು. ಅವರ ಜೊತೆ ಒಳ್ಳೆಯ ಸಂಬಂಧಕ್ಕೆ ಅಡಿಪಾಯ ಹಾಕುವುದು ಸಂವಹನ. ಮಾತುಗಾರಿಕೆಯಲ್ಲಿ ಎಡವಿದರೆ ಸಂಬಂಧಗಳಲ್ಲಿ ಬಿರುಕುಬಿಟ್ಟು ವಿಶ್ವಾಸ ಕಳೆದುಕೊಳ್ಳುವುದು ಸ್ಪಷ್ಟ.
ಆತ ವ್ಯಾಪರಸ್ಥನಾಗಲಿ, ಸರಕಾರಿ ನೌಕರನಾಗಲಿ, ಖಾಸಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವನಾಗಲಿ, ಕಾರ್ಮಿಕ, ರೈತ, ಕೂಲಿ, ವಿದ್ಯಾರ್ಥಿ ಅಥವಾ ಯಾವುದೇ ವರ್ಗದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯಾದರೂ ಸಂವಹನ ಕೌಶಲ್ಯ (ಮಾತುಗಾರಿಕೆ) ವನ್ನು ಬೆಳೆಸಿಕೊಳ್ಳುವುದು ಅಗತ್ಯ. ಬಹುಃಶ ಸಂವಹನ ಕೌಶಲ್ಯ ಇಲ್ಲದೇ ಜೀವನ ಮಾಡಬಹುದು ಎಂದು ಉದಾಹರಿಸಲು ಕೂಡ ಒಂದೇ ಒಂದು ಕ್ಷೇತ್ರವು ಇಲ್ಲ, ಅಷ್ಟರ ಮಟ್ಟಿಗೆ ಮಾತಿಗೆ ಮಹತ್ವ ಇದೆ.
ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಮಾತಿನ ಮೌಲ್ಯದ ಬಗ್ಗೆ ವಿಶೇಷವಾದ ಗಮನ ಕೊಡುತ್ತಿದ್ದರು. ಸಂವಹನದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ಕೊಡುತ್ತಿದ್ದರು. ಅವರೆಷ್ಟರ ಮಟ್ಟಿಗೆ ಮಾತಿನ ಬಗ್ಗೆ ಜವಾಬ್ದಾರಿ ಹೊಂದಿದ್ದರೆಂದರೆ ಮಾತಿನ ಕುರಿತು ನೂರಾರು ಗಾದೆ, ನುಡಿಗಟ್ಟುಗಳನ್ನು ರಚನೆ ಮಾಡಿದ್ದರು.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ. ಮಾತೇ ಮುತ್ತು, ಮಾತೇ ಮೃತ್ಯು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು, ಹೀಗೆ ಒಂದೇ ಎರಡೇ ನೂರಾರು ನುಡಿಗಟ್ಟು, ಗಾದೆ ಮಾತುಗಳು ಸಮಾಜದಲ್ಲಿ ಚಾಲ್ತಿಯಲ್ಲಿವೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಸರಿಯಾಗಿ, ಸೂಕ್ತವಾಗಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಕೌಶಲ್ಯವಿದ್ದವರಿಗೆ ಜಗಳವೇ ಬರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಅರ್ಧ ಸಮಸ್ಯೆಗಳು ಬರುವುದು ಸಂವಹನದಲ್ಲಿನ ಲೋಪಗಳಿಂದ, ಮಾತಿನ ಶಕ್ತಿ ಇದ್ದವರಿಗೆ ಸಮಸ್ಯೆಗಳು ಬರುವ ಪ್ರಶ್ನೆಯೇ ಇಲ್ಲ.