ಭಾನುವಾರ, ಸೆಪ್ಟೆಂಬರ್ 20, 2020

ನಂಗೆ ನಾನೇ ಸ್ಪೂರ್ತಿ..

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ವಾಮಿ ವಿವೇಕಾನಂದರ ಜಯಂತಿ ಸಲುವಾಗಿ ಆಯೋಜಿಸಿದ್ದ ಶಿಬಿರವೊಂದರಲ್ಲಿ ಭಾಗವಹಿಸಿದ್ದೆ. 20 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಆ ಶಿಬಿರದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಪ್ರತಿ ಶಿಬಿರಾರ್ಥಿಯನ್ನು ಎಬ್ಬಿಸಿ, ನಿಮ್ಮ ಜೀವನಕ್ಕೆ ಸ್ಪೂರ್ತಿ ಯಾರೆಂದು ಪ್ರಶ್ನೆ ಹಾಕಿದರು. ಬಹಳಷ್ಟು ಶಿಬಿರಾರ್ಥಿಗಳು ನಮಗೆ ಸ್ಪೂರ್ತಿ ಮತ್ತು ರೋಲ್ ಮಾಡೆಲ್ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರು, ಸಿನಿಮಾ ನಟ, ನಟಿಯರು, ಕ್ರೀಡಾ ಆಟಗಾರರು, ಉದ್ಯಮಿಗಳು ಹಾಗೂ ತಮ್ಮ ಶಿಕ್ಷಕರ ಹೆಸರುಗಳನ್ನು  ಪ್ರಸ್ತಾಪಿಸಿದರು. 
ಆದರೆ 25 ವರ್ಷದ ಯುವಕನೊಬ್ಬ ಮಾತ್ರ ನನಗೆ ಸ್ಪೂರ್ತಿ ನಾನೇ ಎಂದು ಉತ್ತರಿಸಿದ. ಈ ಉತ್ತರವನ್ನು ಕೇಳಿದ ಸಂಪನ್ಮೂಲ ವ್ಯಕ್ತಿ ಸೇರಿದಂತೆ ಎಲ್ಲಾ ಶಿಬಿರಾರ್ಥಿಗಳು ಕ್ಷಣ ಹೊತ್ತು ಅಚ್ಚರಿಗೊಂಡರು. ಕಾರಣ ಬೇರೆ ಶಿಬಿರಾರ್ಥಿಗಳ ಉತ್ತರಕ್ಕೂ ಈತನ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಆತ ಉತ್ತರಿಸುತ್ತ ಹೌದು ಸಾರ್ ನನಗೆ ನಾನೇ ಸ್ಪೂರ್ತಿ, ನನ್ನ ಬಗ್ಗೆ ನನಗೆ ಪ್ರೀತಿ ಇದೆ, ಗೌರವವಿದೆ, ಬೇರೊಬ್ಬರನ್ನು ಸ್ಪೂರ್ತಿಯಾಗಿ ಪರಿಗಣಿಸುವುದು ತಪ್ಪಲ್ಲ. ಆದರೆ ಮೊದಲು ನನ್ನ ಬಗ್ಗೆ ನನಗೆ ಹೆಮ್ಮೆ ಇರಬೇಕು. ನಾನು ಅಂದುಕೊಂಡ ಗುರಿ ತಲುಪಬೇಕಾದರೆ ನನ್ನ ಬಗ್ಗೆ ನನಗೆ ನಂಬಿಕೆ ಇಲ್ಲದೆ ಹೋದರೆ ಏನು ಮಾಡಲು ಸಾಧ್ಯವಾಗಲ್ಲ. ಆತ್ಮ ವಿಶ್ವಾಸ, ನಂಬಿಕೆ ಬರಬೇಕಾದರೆ ನನ್ನ ಬಗ್ಗೆ ನನಗೆ ಪ್ರೀತಿ ಇರಲೇಬೇಕು. ಆ ಕಾರಣದಿಂದಲೇ ನನಗೆ ನಾನೇ ಸ್ಪೂರ್ತಿ ಎಂದು ವಿಭಿನ್ನವಾಗಿ ಉತ್ತರಿಸಿದ.
ನಾವೆಲ್ಲರೂ ಒಮ್ಮೆ ಒಬ್ಬಂಟಿಯಾಗಿ ಪ್ರಕೃತಿಯ ಮಡಿಲಲ್ಲಿ ಕೂತುಕೊಂಡ ಒಮ್ಮೆಯಾದರೂ ನಮ್ಮ ಬಗ್ಗೆ ಆಲೋಚಿಸಿಕೊಂಡರೆ ಇಲ್ಲಿಯವರೆಗೂ ನಮ್ಮ ಬಗ್ಗೆ ನಾವೇ ತಪ್ಪಾಗಿ ಗ್ರಹಿಸಿಕೊಂಡ, ನಕಾರಾತ್ಮಕವಾಗಿ ಆಲೋಚಿಸಿಕೊಂಡ ವಿಚಾರಗಳು ನೆನಪಾಗುತ್ತವೆ. ಬಹುತೇಕರು ತಮ್ಮ ಬಗ್ಗೆ ತಾವೇ ಭಾವಿಸಿಕೊಳ್ಳುವ ವ್ಯತಿರಿಕ್ತ ಅಂಶಗಳು ನೂರಾರಿರುತ್ತವೆ. ಈ ಪ್ರಪಂಚದಲ್ಲಿ ಎಲ್ಲರೂ ಶ್ರೇಷ್ಠ, ನಾನೊಬ್ಬ ಬಿಟ್ಟು. ಬಹುಃಶ ನನ್ನಷ್ಟು ದುರದೃಷ್ಟ ವ್ಯಕ್ತಿ ಎಲ್ಲಿ ಸಿಗಲಾರರು. ನಾನು ತುಂಬ ದಡ್ಡ, ನನಗಿಂತ ದಡ್ಡರು ಇರುವುದಿಲ್ಲ. ನನ್ನಷ್ಟು ಭಯ ಪಡುವವರು ಎಲ್ಲಿ ಇರುತ್ತಾರೆ, ನನ್ನಲ್ಲಿ ಧೈರ್ಯ ಯಾಕೆ ಇಲ್ಲ. ಜೀವನದಲ್ಲಿ ನನಗೆ ಬಂದಷ್ಟು ಕಷ್ಟಗಳು ಯಾರಿಗೆ ತಾನೇ ಬಂದಿರುತ್ತದೆ. ನಮ್ಮ ಕುಟುಂಬದಲ್ಲಿ ನಾನೆಂದರೆ ಯಾರಿಗೂ ಇಷ್ಟವಿಲ್ಲ, ಬೆಲೆ, ಗೌರವ ಮೊದಲೇ ಇಲ್ಲ. ಒಂದರ್ಥದಲ್ಲಿ ನಾನು ಅಪ್ರಯೋಜಕ. ನನ್ನ ಕೈಯಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ, ಕಾರಣ ನನಗೆ ಆ ಶಕ್ತಿ ಇಲ್ಲ. ನಾನು ಮಾಡುವ ಉದ್ಯೋಗ ಅತ್ಯಂತ ಕೀಳು, ನನಗೆ ಬರುವ ಅತ್ಯಂತ ಕಡಿಮೆ ಸಂಬಳ, ಬೇರೆ ಯಾರಿಗೂ ಬರುವುದಿಲ್ಲವೇನೊ. ಬೇರೆಯವರಿಗೆ ಹೋಲಿಸಿದರೆ ನಾನೇನು ಸೌಂದರ್ಯವಾಗಿಲ್ಲ. ದೇವರು ನನ್ನ ಬಗ್ಗೆ ಕರುಣೆಯೇ ತೋರುವುದಿಲ್ಲ, ನಾನು ಮನುಷ್ಯನಾಗಿ ಹುಟ್ಟದಿದ್ದರೆ ಚೆನ್ನಾಗಿರುತ್ತಿತ್ತು.
ಈಗೆ ಹಲವು ರೀತಿ, ಆಯಾಮಗಳಲ್ಲಿ ನಮ್ಮ ಬಗ್ಗೆ ನಾವೇ ನಕಾರಾತ್ಮಕತೆ ಅಂಶಗಳನ್ನು ಮನಸ್ಸಲ್ಲಿ ತುಂಬಿಸಿಕೊಂಡಿರುತ್ತೇವೆ. ಈ ರೀತಿ ಮನಸ್ಥಿತಿಯಿಂದಲೇ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದರ ಜೊತೆಗೆ ನಮ್ಮ ಜೀವನಕ್ಕೆ ನಾವೇ ಕೊಡಲಿಪೆಟ್ಟು ಹಾಕಿಕೊಂಡಿರುತ್ತೇವೆ. ಕೆಲವೊಮ್ಮೆ ಬೇರೆಯವರು ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎಂದು ಆಲೋಚಿಸುತ್ತೇವೆ, ನೊಂದುಕೊಳ್ಳುತ್ತೇವೆ. ಆದರೆ ನಾವೇ ಎಷ್ಟೋ ಬಾರಿ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುವುದಿಲ್ಲ ಎಂಬ ವಾಸ್ತವವನ್ನು ಮರೆತು ಬಿಡುತ್ತೇವೆ. ಆ ಮೂಲಕ ನಮ್ಮ ಸಾಧನೆಯ ದಾರಿಯಲ್ಲಿ ಸ್ವತಃ ನಾವೇ ಮುಳ್ಳಿನ ಹಾದಿಯನ್ನು ನಿರ್ಮಿಸಿಕೊಳ್ಳುತ್ತೇವೆ.
ಪ್ರಖ್ಯಾತ ತತ್ವಜ್ಞಾನಿಯೊಬ್ಬರು Loving yourself is the greatest revolution in your life ಎಂದು ಹೇಳುತ್ತಾರೆ. ಅಂದರೆ ನಮ್ಮನ್ನು ನಾವು ಪ್ರೀತಿಸಿದರೆ, ಗೌರವ ಕೊಟ್ಟುಕೊಂಡರೆ ನಮ್ಮ ಜೀವನದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಬಹುದು. ಆದರೆ ನಮ್ಮ ಬಗ್ಗೆ ನಾವೇ ನಿರ್ಲಕ್ಷ್ಯ ಮನೋಭಾವದಿಂದ ಕಾಣುತ್ತೇವೆ. ನಮ್ಮಲ್ಲಿ ಸಾಧಿಸಬೇಕೆಂಬ ಛಲ ಹುಟ್ಟುವುದು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ನಮ್ಮ ಮೇಲೆ ನಮಗೆ ನಂಬಿಕೆ, ಪ್ರೀತಿ ಇದ್ದಾಗ ಮಾತ್ರ. ಹಲವರು ತಮ್ಮ ಬಗ್ಗೆ ತಾವೇ ಕೀಳರಿಮೆ ಬೆಳೆಸಿಕೆಂಡು, ತಾವು ಅಪ್ರಯೋಜಕರೆಂದು ಸ್ವತಃ ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೆ. ಸ್ನೇಹಿತರು, ಸಂಬಂಧಿಕರು, ಸಹದ್ಯೋಗಿಗಳು ಸೇರಿದಂತೆ ಸಿಕ್ಕಸಿಕ್ಕವರೆಲ್ಲರ ಬಳಿ ತಮ್ಮ ಬಗ್ಗೆ ತಾವೇ ನೆಗಟಿವ್ ಆಗಿ ಹೇಳಿಕೊಳ್ಳುತ್ತಾರೆ. ಈ ಮನಸ್ಥಿತಿಯೇ ನಮ್ಮನ್ನು ಸಾಧನೆಯ ಹಾದಿಯಿಂದ ಬಹು ದೂರ ಕರೆದುಕೊಂಡು ಹೋಗಿಬಿಡುತ್ತದೆ.
ಪ್ರಸಿದ್ದ ಲೇಖಕರೊಬ್ಬರು ತಮ್ಮ ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದರು. To fall in love with yourself is the first secret to happiness & success. ಅಂದರೆ ಒಬ್ಬ ವ್ಯಕ್ತಿಯ ಸಂತೋಷಕ್ಕೆ ಮತ್ತು ಸಾಧನೆಯ ಹಿಂದಿನ ಗುಟ್ಟು ಆತನನ್ನು ಆತ ಪ್ರೀತಿಸುವುದು.  ತನ್ನ ಜೀವನದಲ್ಲಿ ಸಂತೋಷದಿಂದಿರಲು ಮತ್ತು ಸಾಧನೆ ಮಾಡುವ ಆಲೋಚನೆಯಿದ್ದರೆ ಮೊದಲು ಮಾಡಬೇಕಾದದ್ದು ತನ್ನನ್ನು ತಾನು ಪ್ರೀತಿಸುವುದು. ಹೌದು ನಾವು ನಮ್ಮ ಜೀವನದಲ್ಲಿ ಕುಟುಂಬದವರನ್ನು, ಸ್ನೇಹಿತರು, ಸಹದ್ಯೋಗಿಗಳು, ಗುರುಗಳು ಸೇರಿದಂತೆ ಮತ್ತಿತರರನ್ನು ಗೌರವಿಸುವುದರ ಜೊತೆಗೆ ನಿರ್ಮಲ ಮನಸ್ಸಿನಿಂದ ಪ್ರೀತಿಸುತ್ತೇವೆ. ಇದು ತಪ್ಪೇನು ಅಲ್ಲ, ನಮ್ಮ ಜೀವನಕ್ಕೆ ದಾರಿ ತೋರಿ, ಕಷ್ಟ ಕಾಲದಲ್ಲಿ ಆಸರೆಯಾದವರ ಬಗ್ಗೆ ತುಸು ಹೆಚ್ಚು ಅಭಿಮಾನ ಹೊಂದುವುದು ಸಮಂಜಸ. ಆದರೆ ನಮ್ಮನ್ನು ನಾವೇ ಪ್ರೀತಿಸುವುದು ಮರೆತು ಬಿಡುತ್ತೇವೆ ಎಂಬುವುದೇ ವಿಪರ್ಯಾಸ, ವಿಸ್ಮಯ.
ನಮ್ಮ ಬಗ್ಗೆ ಯಾರಾದರೂ ಅತಿ ಹೆಚ್ಚು ನಕಾರಾತ್ಮಕವಾಗಿ ಚಿಂತಿಸಿದ್ದರೆ ಅದು ಬೇರ್ಯಾರು ಅಲ್ಲ ನಾವೇ ಆಗಿರುತ್ತೇವೆ. ನಮ್ಮ ಶಿಕ್ಷಣ, ಉದ್ಯೋಗ, ಎತ್ತರ, ಮೈ ಬಣ್ಣ, ಕುಟುಂಬ ಸೇರಿದಂತೆ ಪ್ರತಿಯೊಂದು ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ನಮ್ಮ ಬಗ್ಗೆಯೇ ನಕಾರಾತ್ಮಕವಾಗಿ ನಾವೇ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಇದರಿಂದ ಬೇರೆಯವರಿರಲಿ ನಮ್ಮ ಬಗ್ಗೆ ನಾವೇ ಗೌರವ ಕೊಟ್ಟುಕೊಳ್ಳಲು ಹಿಂಜರಿಯುವಂತಹ ಪರಿಸ್ಥಿತಿಗೆ ಮನಸ್ಸು ತಲುಪಿಬಿಡುತ್ತದೆ.
ಎಷ್ಟೋ ಬಾರಿ ಬೇರೆಯವರು ನನಗೆ ಅವಮಾನ ಮಾಡಿದ್ದಾರೆ, ನನ್ನ ಬಗ್ಗೆ ದೂರುಗಳು ಹೇಳಿದ್ದಾರೆ, ನನಗೆ ಗೌರವ ಕೊಡುವುದಿಲ್ಲ ಎಂದು ಬೇಸರ ಮಾಡಿಕೊಂಡು ಕಣ್ಣೀರು ಹಾಕುತ್ತೇವೆ. ಆದರೆ ಬೇರೆಯವರೂ ಗೌರವ ಕೊಡಲಿ ಬಿಡಲಿ, ಮೊದಲು ನಮ್ಮ ಬಗ್ಗೆ ನಾವು ಗೌರವವನ್ನು ಕೊಡುವುದರ ಬಗ್ಗೆ ಆಲೋಚಿಸಬೇಕು.

ಹಿರಿಯರೊಬ್ಬರು ಹೇಳುತ್ತಾರೆ, ನಮ್ಮ ಬಗ್ಗೆ ನಮಗೆ ಗೌರವ ಬಂದಾಗ ಸಹಜವಾಗಿಯೇ ನಮ್ಮೊಳಗೆ ಅಪ್ರತಿಮ ಶಕ್ತಿ ಹುಟ್ಟುತ್ತದೆ. ಮನಸ್ಸು ಸಂತೋಷದಿಂದ ಇದ್ದು, ಸಾಧಿಸುವ ಛಲ ಹಿಮ್ಮಡಿಯಾಗುತ್ತದೆ. ಸಾಮಾನ್ಯವಾಗಿ ನಮ್ಮ ಡ್ರೆಸ್ (ಉಡುಗೆ) ಹಾಗೂ ನಾವು ಸ್ಮಾರ್ಟ್ ಆಗಿ ಕಾಣಬೇಕು ಎಂಬುವುದು ಎಲ್ಲರ ಆಸೆ. ನಾವು ಹಾಕುವ ಬಟ್ಟೆ ಹಾಗೂ ನಾವು ಸ್ಮಾರ್ಟ್ ಆಗಿ ಕಾಣದಿದ್ದರು ಚಿಂತೆಯಿಲ್ಲ ನಮ್ಮ ಗುರಿ ಮಾತ್ರ ಸ್ಮಾರ್ಟ್ SMART ಆಗಿರಬೇಕು. S- SpecificM- Measurable, A- Achievable, R-Realistic, T-Timely.
ನಾವು ಹೊಂದುವ ಗುರಿ ಯಾವಾಗಲೂ Specific ಆಗಿರಬೇಕು, ಅಂದರೆ ನಿರ್ದಿಷ್ಟವಾಗಿರಬೇಕು. ನಾವೇನು ಸಾಧನೆ ಮಾಡಬೇಕು ಎಂಬ ಬಗ್ಗೆ ಗೊಂದಲವಿರಬಾರದು. ಸ್ಪಷ್ಟವಾಗಿ, ನಿಖರವಾಗಿ ಯಾವ ದಾರಿಯಲ್ಲಿ ಸಾಗಬೇಕೆಂಬ ಕಲ್ಪನೆ ಇರಬೇಕು. ನಮ್ಮ ಗುರಿ ಯಾವತ್ತು Measurable ಆಗಿರಬೇಕು. ಅಂದರೆ ನಮ್ಮ ವೈಯಕ್ತಿಕ ಶಕ್ತಿಯಲ್ಲಿ  ಅಳೆಯುವಂತಿರಬೇಕು. ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಗುರಿ ಪೂರಕವಾಗಿರಬೇಕು. ನಮ್ಮ ಗುರಿ ಯಾವಾಗಲೂ Achievable ಆಗಿರಬೇಕು. ಅಂದರೆ ನಮ್ಮ ಶಕ್ತಿಯ ಅನುಸಾರ ನಮ್ಮ ಗುರಿಯನ್ನು ಪೂರ್ಣವಾಗಿ ತಲುಪುವಂತಿರಬೇಕು. ನಮ್ನ ಗುರಿ Realistic ಆಗಿರಬೇಕು. ಅಂದರೆ ನಮ್ಮ ಜೀವನದ ವಾಸ್ತವತೆಗೆ, ನೈಜತೆಗೆ ತಕ್ಕಂತೆ ಗುರಿ ಇರಬೇಕು. ನಮ್ಮ ಗುರಿ Timely ಆಗಿರಬೇಕು. ಅಂದರೆ ನಮಗೆ ಇರುವ ನಿರ್ದಿಷ್ಟ ಕಾಲಾವಧಿಯಲ್ಲಿ ಗುರಿ ತಲುಪುವಂತೆ ಇರಬೇಕು.  
ಈಗೆ ನಮ್ಮ ಗುರಿ SMART ಆಗಿದ್ದಾಗ ಮಾತ್ರ ಜೀವನದಲ್ಲಿ ಗುರಿ ತುಲುಪಿ, ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಮೊದಲು ನಮ್ಮನ್ನು ನಾನು ಪ್ರೀತಿಸಿಬೇಕು, ನಮ್ಮ ಬಗ್ಗೆ ನಮಗೆ ಗೌರವ, ಹೆಮ್ಮೆ ಬರಬೇಕು, ನಮಗೆ ನಾವೇ ಸ್ಪೂರ್ತಿಯಾಗಬೇಕು. ಎಂತಹ ದೊಡ್ಡ ಗುರಿ ಇಟ್ಟುಕೊಂಡರು, ನಮ್ಮ ಬಗ್ಗೆ ಒಳ್ಳೆಯ ಭಾವನೆ ನಮಗೆ ಬರದೆ ಹೋದರೆ ಗುರಿ ತಲುಪುವುದು ಅಸಾಧ್ಯ, ಗುರಿ ಇಟ್ಟುಕೊಂಡು ಪ್ರಯೋಜವಾಗುವುದಿಲ್ಲ.
ನಾನು ಹೋಗುವ ದಾರಿಯಲ್ಲಿ ಪ್ರಾಮಾಣಿಕತೆ, ಸತ್ಯವಿದ್ದಾಗ ನನಗೆ ನಾನೇ ಸ್ಪೂರ್ತಿಯೆಂದು ಭಾವಿಸಿಕೊಳ್ಳುತ್ತೇನೆ. ಅಷ್ಟಕ್ಕೂ ನಾನು ಒಳ್ಳೆಯವನೆಂದು ನಾನೇ ಭಾವಿಸದಿದ್ದರೆ, ನನ್ನನ್ನು ನಾನೇ ಪ್ರೀತಿಸದಿದ್ದರೆ ಬೇರೆಯವರೂ ಎಲ್ಲಿ ಗೌರವಿಸುತ್ತಾರೆ ಹೇಳಿ ? ಬೇರೆಯವರು ನಮ್ಮ ಬಗ್ಗೆ ಏನೆಂದು ಭಾವಿಸಿದ್ದಾರೆ ಎಂದು ಆಲೋಚಿಸಿ, ಸಮಯ ವ್ಯರ್ಥ ಮಾಡುವ ಬದಲು, ನಮ್ಮ ಬಗ್ಗೆ ನಮ್ಮ ಮನಸ್ಸಿನಲ್ಲಿ ನಾವೇನು ಅಂದುಕೊಂಡಿದ್ದೇವೆ ಎಂಬ ವಿಚಾರದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳೋಣ..