ಸೋಮವಾರ, ಜುಲೈ 30, 2018

ಬದುಕಿನ ಬಂಡಿ ಸಾಗಿಸುವ ರೈಲು....


  ⇰ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ದೇಶ ಸುತ್ತಬೇಕು ಇಲ್ಲವೇ ಕೋಶ ಓದಬೇಕು ಎಂದು ಹಿರಿಯರು ಹೇಳುತ್ತಾರೆ. ಈ ವಾಕ್ಯವು ಅಕ್ಷರಃಹ ನಿಜವೂ ಹೌದು. ಹಾಗೆಯೇ ಹೊಸ ಮಾತೊಂದಿದೆ ರೈಲಲ್ಲಿ ಸಂಚರಿಸಿದರೆ ಸಾಕು ಪ್ರಪಂಚದ ಜ್ಞಾನ ಸುಲಭವಾಗಿ ಅರ್ಥವಾಗುತ್ತದೆ. 
ರೈಲು ಕೇವಲ ಜನರನ್ನು ಕೊಂಡೊಯ್ಯುವ ವಾಹನವಲ್ಲ, ಬದಲಾಗಿ ಹಲವ ಬಡ ಜೀವಗಳ ಆಪತ್ಬಾಂಧವ, ಹಲವರ ಬಾಳಿಗೆ ಬೆಳಕು ನೀಡುತ್ತಿದೆ ಎಂದು ಅಶೋಕ್ತಿಯಲ್ಲ. 
ಎಷ್ಟೋ ಜನರಿಗೆ ರೈಲಿನ ಜೊತೆ ಅವಿನಾಭಾವ ಸಂಬಂಧವಿರುತ್ತದೆ. ತಮ್ಮ ನಿತ್ಯದ ಶಾಲಾ, ಕಾಲೇಜು ಅಥವಾ ಕಚೇರಿ ಕೆಲಸಗಳಿಗೆ ತಲುಪಲು ರೈಲೇ ಆಧಾರ.
ನಾನು ಸಾಕಷ್ಟು ಬಾರಿ ರೈಲಲ್ಲಿ ಓಡಾಡಿದ್ದೇನೆ. ರೈಲಿನಲ್ಲಿ ಕಾಣುವ ಕೆಲ ಸನ್ನಿವೇಶಗಳು ಬದುಕಿನ ಪಾಠವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಬಹುಃಶ ಅದು ನನ್ನ ಪದವಿ ಓದುವ ದಿನಗಳು. ಮೊದಲ ಬಾರಿಗೆ ರೈಲು ಹತ್ತಿದ ಸಂಭ್ರಮ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಕೋರಮಂಡಲ್ ರೈಲ್ವೆ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ (ಮೆಜೆಸ್ಟಿಕ್ ನಿಲ್ದಾಣಕ್ಕೆ)ಕ್ಕೆ ಬಂದಿದ್ದು ಇನ್ನು ನೆನಪಿದೆ.
ಕಳೆದ ಹಲವು ವರ್ಷಗಳಿಂದ ಕರ್ನಾಟಕ ,ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ರೈಲಿನಲ್ಲಿ ಸಂಚರಿಸಿದ್ದೇನೆ. ರೈಲಿನಲ್ಲಿ ಸಾಗುವಾಗ ಕಾಣುವ ರೋಮಾಂಚನಕಾರಿ ದೃಶ್ಯಗಳು ಬೇರೆಲ್ಲೂ ಕಾಣ ಸಿಗಲ್ಲ.
ಅದರಲ್ಲೂ ನಮ್ಮ ದೇಶದಲ್ಲಿ ಬಹುಪಾಲು ರೈಲುಗಳು ಬೆಟ್ಟ-ಗುಡ್ಡ, ಅರಣ್ಯ, ನದಿಗಳ ನಡುವೆ ಹಾದು ಹೋಗುವುದರಿಂದ ಪ್ರಕೃತಿ ಸೌಂದರ್ಯವನ್ನು ರೈಲುಗಳಲ್ಲಿ ಸಂಚರಿಸುವವರು ಹೆಚ್ಚಾಗಿಯೇ ಆಹ್ಲಾದಿಸುತ್ತಾರೆ. ನಿಸರ್ಗದ ಅಂದವನ್ನು ಕಣ್ತುಂಬಿಕೊಳ್ಳಬೇಕಾದರೆ ರೈಲಲ್ಲೇ ಸಾಗಬೇಕು.      
ರೈಲ್ವೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಕರೆದೊಯ್ಯುವ ವಾಹನವಷ್ಟೇ ಅಲ್ಲ, ಬದಲಾಗಿ ಲಕ್ಷಾಂತರ ಜನಸಾಮಾನ್ಯರ ಜೀವನಕ್ಕೆ ಬೆಳಕು ನೀಡುತ್ತಿದೆ.
ನಮ್ಮ ದೇಶದಲ್ಲಿ ರೈಲ್ವೆ ಇಲಾಖೆ ಸಾರಿಗೆ ವಲಯದಲ್ಲಿ ತನ್ನದೇ ಅಧಿಪತ್ಯ ಸಾಗಿಸುತ್ತಿರುವುದರ ಜೊತೆಗೆ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವಕಾಶವನ್ನು ಒದಗಿಸುತ್ತಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಅದು ಕೇವಲ ಒಂದು ದಿನದ ರೈಲ್ವೆ ಪ್ರಯಾಣವಾದರೂ, ರೈಲಿನಲ್ಲಿ ಸಂಚರಿಸುವಾಗ ಹಲವು ಮಹತ್ವದ ಅಂಶಗಳು ಕಾಣುತ್ತವೆ. ಸಹಜವಾಗಿಯೇ ರೈಲಿನ ಟಿಕೆಟ್ ದರ ಕಡಿಮೆ ಇರುವುದರಿಂದ ಹಾಗೂ ಸುರಕ್ಷಿತ ಎಂಬ ಕಾರಣಕ್ಕೆ ಹತ್ತಿರದ ಪ್ರದೇಶಗಳಿಂದ ಹಿಡಿದು ದೂರದ ಪ್ರದೇಶಗಳವರೆಗೂ ಸಾಗುವ ಪ್ರಯಾಣಿಕರು ರೈಲ್ವೆ ಸಂಚಾರವನ್ನೇ ಆಯ್ದುಕೊಳ್ಳುತ್ತಾರೆ.
ಅದರಲ್ಲೂ ಪ್ರಮುಖವಾಗಿ ಬಡ ಮಧ್ಯಮ ವರ್ಗದವರಿಗೆ ರೈಲು ಅಚ್ಚುಮೆಚ್ಚು. ದುಬಾರಿ ಹಣ ಕೊಟ್ಟು ಬಸ್ ಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದಿರುವುದರಿಂದ ರೈಲಿನ ಮೇಲೆ ಈ ಎರಡು ವರ್ಗಗಳಿಗೆ ಹೆಚ್ಚಿನ ಮಮಕಾರ.
ಇನ್ನು ಬಸ್ಗಳಲ್ಲಿ ನಿಗದಿತ ಸ್ಥಳಗಳಿಗೆ ತಲುಪುವ ಪ್ರಯಾಣಿಕರನ್ನು ಮಾತ್ರ ಕಾಣಬಹುದು. ಆದರೆ ಅಂತರರಾಜ್ಯ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ವಿವಿಧ ಭಾಷೆ, ಹಲವು ಧರ್ಮ, ಹತ್ತಾರು ಜಾತಿ, ಬಡ, ಮಧ್ಯಮ, ಶ್ರೀಮಂತ ಹೀಗೆ ಎಲ್ಲಾ ವರ್ಗಗಳಿಗೆ ಸೇರಿದ ಜನರು ಪ್ರಯಾಣಿಕರು ಒಂದೇ ರೈಲಲ್ಲಿ ಜರ್ನಿ ಮಾಡುವುದರಿಂದ ರೈಲನ್ನು ಜಾತ್ಯಾತೀತೆಯ ವಾಹನವೆಂದು ವರ್ಣಿಸಿದರು ತಪ್ಪಾಗಲಾರದು.
ಕೆಲವೊಮ್ಮೆ ಸರಿಯಾದ ಸಮಯಕ್ಕೆ ರೈಲು ಬರಲಿಲ್ಲ ಎಂದು ಅಸಮಾಧಾನವಾದರೂ, ಕಿಕ್ಕಿರಿದು ತುಂಬುವ, ಕಾಲಿಡಲು ಜಾಗವಿಲ್ಲದ ಪ್ಯಾಸೆಂಜರ್ ರೈಲಿನಲ್ಲಿ ಸಾಗುವ ಪ್ರಯಾಣವೇ ಬಲು ರೋಮಾಂಚನ. ಉಸಿರಾಡಲು ಸಾಧ್ಯವಾಗದ ಜಾಗದಲ್ಲಿ ನಿಂತು, ಅಬ್ಬಾ ಏನು ಈ ಕಷ್ಟ ಎಂದು ಗೊಣಗುತ್ತ ದಿನನಿತ್ಯ ಸಾಗುವವನಿಗೆ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಎದುರಿಸುವ ಸಾಮರ್ಥ್ಯ ತನ್ನಿಂದತಾನೇ ಬೆಳೆದಿರುತ್ತದೆ. 
ಇನ್ನು ರೈಲಿನಲ್ಲಿ ಕೆಲವರು ಮೊಬೈಲ್ ಲೋಕದಲ್ಲಿ ಮಗ್ನರಾಗಿ ಇಹಲೋಕದ ಜ್ಞಾನವೇ ಇಲ್ಲದೇ ಫೇಸ್ ಬುಕ್, ವಾಟ್ಸಾಪ್, ವಿಡಿಯೋ ಚಾಟಿಂಗ್ಳಲ್ಲಿ ತಲ್ಲೀನವಾಗುವ ಪ್ರಸಂಗಗಳು ಸಾಮಾನ್ಯ. 
ದಿಢೀರ್ ಎಂದು ಶೌಚಾಲಯಕ್ಕೆ ಹೋಗಬೇಕಾದರೆ ಆ ಜನರನ್ನು ತಳ್ಳಿಕೊಂಡು ಶೌಚಾಲಯದ ಬಾಗಿಲು ಹತ್ತಿರ ಹೋಗುವುದೇ ಪ್ಯಾಸೆಂಜರ್ ರೈಲುಗಳಲ್ಲಿ ಹರಸಾಹಸ. ಒಂತರ ಇದು ಸರ್ಕಸ್ ಆಟ.  
ಈ ಮಧ್ಯೆ ಅತ್ತಿಂದಿತ್ತ ಬಿಸಿ ಬಿಸಿ ಕಾಫಿ, ಕಾಫಿ ಟೀ, ಟೀ ಎಂದು ಜೋರು ಧ್ವನಿಯಲ್ಲಿ ಹೇಳುತ್ತ ಕಾಫಿ ಮಾರುವ ಹುಡುಗರ ರನ್ನೀಂಗ್ ರೇಸ್ ರೈಲಿನಲ್ಲಿ ಕಾಣುವ ಸಾಮಾನ್ಯ ಪ್ರಸಂಗ. ಬಿಸಿ ಬಿಸಿ ಇಡ್ಲಿ, ವಡೆ ಮಾರಾಟ ಮಾಡುವ ಮಂದಿಯು ಕಾಣ ಸಿಗುತ್ತಾರೆ. ಕಳ್ಳೆ ಬೀಜ, ಚಕ್ಕುಲಿ, ನೀರಿನ ಬಾಟೆಲ್, ಬೇಲ್ ಪೂರಿ, ಕಳ್ಳೆ ಕಾಯಿ, ದಿನಪತ್ರಿಕೆ, ಕಥೆ, ಕಾದಂಬರಿ ಪುಸ್ತಕಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ಹಲವರು ಕಣ್ಣಿಗೆ ಕಾಣುತ್ತಾರೆ.   
ಈಗಂತು ಕೆಲ ರೈತರು ರೈಲಿನಲ್ಲೇ ತಾಜ ತರಕಾರಿ ಹಾಗೂ ಹೂಗಳನ್ನು ಮಾರಾಟ ಮಾಡುವ ಸಂಪ್ರದಾಯ ಬೆಳೆಯುತ್ತಿದೆ. ಕೆಲವರು ಕೀ ಚೈನ್, ಕಿವಿ ಓಲೆ, ಬ್ರಾಸ್ ಲೈಟ್, ಹೆಣ್ಣು ಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಜನ ರೈಲುಗಳಲ್ಲಿ ತುಂಬಾನೆ ಇದ್ದಾರೆ. ವಿಧಿಯಿಲ್ಲದೇ ಭಿಕ್ಷೆ ಬೇಡುವ ಕೆಲವರಿಗೆ ರೈಲೇ ಆಧಾರ. ಎಷ್ಟೋ ಜನರಿಗೆ ರೈಲೆ ಬದುಕಿನ ಬಂಡಿ ಸಾಗಿಸಲು ನೆರವಾಗಿದೆ. ರೈಲು ಗಾಡಿಯೇ ಇವರಿಗೆ ನೆರವಿನ ಹಸ್ತ ಚಾಚುತ್ತಿದೆ.  ರೈಲಿಲ್ಲದೇ ಇವರಿಗೆ ಬದುಕೇ ಇಲ್ಲ. 
ರೈಲಿನ ಒಳಗೆ ಕೆಲವರು ವಸ್ತು, ಪದಾರ್ಥಗಳನ್ನು ಮಾರಾಟ ಮಾಡಿ ಬದುಕುತ್ತಿದ್ದರೆ, ಮತ್ತೆ ಕೆಲವರು
ರೈಲ್ವೆ ನಿಲ್ದಾಣಗಳಲ್ಲಿ ಸಣ್ಣದಾದ ಕಾಫಿ, ಟೀ, ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಅಂಗಡಿ, ದಿನ, ವಾರಪತ್ರಿಕೆ ಮಾರಾಟ ಮಾಡುವ ಅಂಗಡಿ ಸೇರಿದಂತೆ ಮತ್ತಿತರ ಮಳಿಗೆಗಳನ್ನು ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. 
ಕೇವಲ ಒಂದು ದಿನದ ಮಟ್ಟಿಗೆ ರೈಲಿನ ಸಂಚಾರ ಸ್ಥಬ್ದಗೊಂಡರೆ ಸಾಕು ಲಕ್ಷಾಂತರ ಜನರ ಬದುಕು ಅಸ್ತವ್ಯಸ್ಥವಾಗುತ್ತದೆ. ಹಲವರು ಕಂಗಲಾಗುತ್ತರೆ, ಅಷ್ಟರ ಮಟ್ಟಿಗೆ ರೈಲು ಸಮಾಜ ಹಾಗೂ ನಾಗರಿಕರ ಮೇಲೆ ಭಾರಿ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಎಷ್ಟೋ ಜನರು ರೈಲಿನ ಸಂಚಾರದಲ್ಲೇ ಆಪ್ತ ಸ್ನೇಹಿತರನ್ನು ಹುಡುಕಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಎದುರಾಗಿರುವ ಕಷ್ಟಗಳನ್ನು ಹೇಳಿಕೊಳ್ಳಲು ಆಪ್ತ ಸ್ನೇಹಿತರ ಅವಶ್ಯಕತೆ ಇರುತ್ತದೆ. ಅಂತಹ ಆಪ್ತ ಸ್ನೇಹಿತ ಸಿಕ್ಕಿದು ರೈಲಿನ ಪ್ರಯಾಣದಲ್ಲೇ ಎಂದು ಹಲವರು ಹೇಳುತ್ತಾರೆ. ಸುದೀರ್ಘವಾಗಿ ರೈಲಿನಲ್ಲಿ ಪ್ರಯಾಣಿಸಿದವರಿಗೆ ರೈಲು ತಮ್ಮ ಜೀವನದ ಒಂದು ಭಾಗವಾಗಿರುತ್ತದೆ. ಎಷ್ಟೋ ಬಾರಿ ರೈಲು ತಡವಾಗಿ ಬಂದಿದ್ದಕ್ಕೆ ಬೇಸರ, ಕೋಪ ಬಂದಿದ್ದರು ಕೂಡ ರೈಲಿನಿಂದ ಆದ ಲಾಭ ಮರೆಯಲು ಸಾಕಷ್ಟು ಜನರಿಗೆ ಸಾಧ್ಯವಾಗುವುದಿಲ್ಲ.
ಕೆಲವರಿಗಂತೂ ಸಂಬಂಧಿಕರಿಗಿಂತ ಹೆಚ್ಚಾಗಿ ರೈಲಿನಲ್ಲಿ ಪರಿಚಯವಾದವರನ್ನೇ ಆತ್ಮೀಯ ಒಡನಾಡಿಗಳಾಗಿ ಮಾಡಿಕೊಂಡಿರುತ್ತಾರೆ.ರೈಲು ಸಂಬಂಧಿಕರನ್ನು ಸೃಷ್ಟಿಸುವ ಅದ್ಬುತ ಶಕ್ತಿ ಇದೆ. ನಾನು ರೈಲಲ್ಲಿ ಸಂಚರಿಸುವಾಗ ಅಕ್ಕ, ಪಕ್ಕ ಸೀಟುಗಳಲ್ಲಿ ಕುಳಿತಿರುವವರು ತಮ್ಮ ಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ನೋಡಿದ್ದೇನೆ, ಕೇಳಿದ್ದೇನೆ. ಹಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾಗಿರುವ ಹಣಕಾಸು, ಕುಟುಂಬ ಜಂಜಾಟ, ಮಕ್ಕಳ ಶಿಕ್ಷಣ, ಮದುವೆ ಮುಂತಾದ ವಿಚಾರಗಳಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಬೇಸರದಿಂದ ಮಾತನಾಡಿಕೊಳ್ಳುವುದನ್ನು ಕೇಳಿದಾಗ, ನನಗನಿಸಿದ್ದು ಈ ಲೋಕದಲ್ಲಿ ಸಮಸ್ಯೆಗಳಿಂದ ಹೊರತಾದ ಜನರು ಯಾರು ಇಲ್ಲ ಎಂದು.
ಎಷ್ಟೋ ಜನರು ದೊಡ್ಡ ದೊಡ್ಡ ಸಮಸ್ಯೆಗಳಿಂದ ನರಳುತ್ತಿರುವುದನ್ನು ರೈಲಲ್ಲಿ ಪ್ರಯಾಣಿಸಿದಾಗ ಹಲವರ ಬಾಯಲ್ಲಿ ಕೇಳಿದ್ದೇನೆ. ಬಹುಃಶ ಇಂತಹ ಸನ್ನಿವೇಶ, ಸಂದರ್ಭಗಳನ್ನು ಕಂಡಾಗಲೇ ನಮಗೂ ತುಸು ಧೈರ್ಯ ಬರುವುದು. ರೈಲಲ್ಲಿ ಪಯಣಿಸಿದವರಿಗೆ ಇಂತಹ ಸನ್ನಿವೇಶಗಳು ಲೆಕ್ಕವಿಲ್ಲದಷ್ಟು ಆಗಿರುತ್ತದೆ. ಅಂತಹ ಘಟನೆಗಳೇ ನಮ ಬದುಕಿಗೂ ಹೊಸ ದಾರಿಯನ್ನು ತೋರುತ್ತದೆ. 
ಇಂದು ವಿಮಾನ, ಎಲಿಕಾಪ್ಟರ್, ಹವಾನಿಯಂತ್ರಿತ ಬಸ್ ಗಳು, ಐಷರಾಮಿ ಕಾರ್ ಗಳು ಸೇರಿದಂತೆ ಮತ್ತಿತರರ ವಾಹನಗಳು ಸಂಚರಿಸಲು ಆವಿಷ್ಕಾರವಾಗಿದ್ದರು, ರೈಲಿನ ಅನುಭವವನ್ನು ಕಟ್ಟಿಕೊಡಲು ಅವುಗಳಿಂದ ಖಂಡಿತ ಸಾಧ್ಯವಾಗುವುದಿಲ್ಲ. ರೈಲು ನಿಮ್ಮ ಕಲ್ಪನೆಗೂ ಮೀರಿದ ಅದ್ಬುತ ಜಗತ್ತನ್ನು ಹೊಂದಿದೆ.

ಭಾನುವಾರ, ಜುಲೈ 1, 2018

ಭಿಕ್ಷುಕ & ಖೈದಿ ಇಬ್ಬರಲ್ಲಿ ನಾ ಕಂಡಂತೆ..

             ➤ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನಾನು ತರಬೇತಿ ಸಂಸ್ಥೆಯಲ್ಲಿ ತರಬೇತುದಾರ ವೃತ್ತಿಯಲ್ಲಿ ಇರುವುದರಿಂದ ಎರಡು ವಿಶೇಷ ಸ್ಥಳಗಳಿಗೆ ಹೋಗುವ ಅವಕಾಶ ಸಿಕ್ಕಿತ್ತು. ಉದ್ಯಮಶೀಲತಾ ಅಭಿವೃದ್ದಿಯ ಬೆಳವಣಿಗೆ ಬಗ್ಗೆ ತರಬೇತಿ ನೀಡುವ ಸಲುವಾಗಿ ಜೈಲು ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಹೋಗುವ ಅಪೂರ್ವ ಅವಕಾಶ ಒದಗಿ ಬಂದಿತ್ತು.    

ಸಹಜವಾಗಿಯೇ ಬಸ್, ರೈಲ್ವೆ ನಿಲ್ದಾಣ, ದೇವಸ್ಥಾನಗಳ ಬಳಿ ಭಿಕ್ಷುಕರನ್ನು ಕಾಣುತ್ತೇವೆ. ಕಾನೂನಿನ ಪ್ರಕಾರ ಭಿಕ್ಷೆ ಬೇಡುವುದು ಶಿಕ್ಷಾರ್ಹ ಅಪರಾಧ. ಆ ಕಾರಣದಿಂದಲೇ ಸಾರ್ವಜನಿಕ ಅಥವಾ ಯಾವುದೇ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿದ್ದರೆ ಅಂತವರನ್ನು ಕರೆತಂದು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುತ್ತಾರೆ.

ನಮ್ಮ ತರಬೇತಿ ಸಂಸ್ಥೆಯ ನಿರ್ದೇಶಕರ ಮುತುವರ್ಜಿಯಿಂದ ಭಿಕ್ಷುಕರ ಕೇಂದ್ರವೊಂದರಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಭಿಕ್ಷುಕರ ಪುನರ್ವಸತಿ ಕೇಂದ್ರವದು. ಯಾರಾದರೂ ಭಿಕ್ಷೆ ಬೇಡುತ್ತಿದ್ದರೆ ಅಂತವರನ್ನು ಕರೆತಂದು ಇಲ್ಲಿ ಬಿಡುತ್ತಾರೆ.
ನಾನು ಒಂದೆರೆಡು ದಿನ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಲ್ಲಿಗೆ ಹೋದಾಗ ನನಗ್ಯಾಕೋ ಮನಸ್ಸಿಗೆ ತುಂಬಾ ಬೇಸರವಾಯಿತು. ಕಾರಣ ನಾವು 21ನೇ ಶತಮಾನದಲ್ಲಿ ಇದ್ದೇವೆ. ಆಧುನಿಕತೆ, ತಂತ್ರಜ್ಞಾನ ಬೆಳೆದಿದೆ. ಕಾಲ ಬದಲಾದಂತೆ ಭಿಕ್ಷೆ ಬೇಡುವವರ ಸಂಖ್ಯೆ ಕಡಿಮೆಯಾಗಿದೆ ಎಂದೇ ನಾನು ಭಾವಿಸಿದ್ದೆ. ಆದರೆ ಅಲ್ಲಿಗೆ ಹೋದಾಗ ಹತ್ತಾರು ಜನರನ್ನು ಕಂಡಾಗ ಅಬ್ಬಾ ಇಷ್ಟು ಜನ ಭಿಕ್ಷೆ ಬೇಡುತ್ತಾರಾ..! ಎಂಬ ಯಕ್ಷ ಪ್ರಶ್ನೆ ನನ್ನನ್ನು ಕಾಡಿತು.
ವಿಪರ್ಯಾಸವೆಂದರೆ ಅಲ್ಲಿ 20 ವರ್ಷದ ಯುವಕರಿಂದ ಹಿಡಿದು 60, 70 ವರ್ಷದ ವಯೋವೃದ್ದರು ಇದ್ದರು. ಕೆಲ ಮಹಿಳೆಯರನ್ನು ನೋಡುತ್ತಿದ್ದರೆ ಮನಸ್ಸು ಭಾರವಾಯಿತು. ಭಿಕ್ಷೆ ಭೇಡುವ ವೃತ್ತಿಗೆ ಯಾಕಾದರೂ ಇವರು ಬಂದರೋ ಎಂದುಕೊಂಡೆ. ಭಗವಂತ ಈ ಜನ್ಮದಲ್ಲಿ ಇವರಿಗೆ ಈ ಕಷ್ಟ ಯಾಕೇ ಕೊಟ್ಟ ಎಂದು ಬೇಜರಾಯಿತು.
ಹಾಗೆಯೇ ಅಲ್ಲಿದ್ದ ಒಬ್ಬ ಮಹಿಳೆಯ ಜೊತೆ ಮಾತಾಡುತ್ತಿದ್ದಾಗ ಅವರು ಹೇಳುತ್ತಾರೆ, ಸಾರ್ ನಾನು ಭಿಕ್ಷೆ ಬೇಡುವ ವೃತ್ತಿ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದಲ್ಲ. ಅನಿವಾರ್ಯತೆಯೇ ಈ ದಾರಿಯತ್ತ ತಂದಿತು. ನನ್ನವರು ಎಂದು ಯಾರು ಇಲ್ಲ. ಅನಾಥೆ, ಸಾಲದೆಂಬಂತೆ ವಯಸ್ಸಾಗಿದೆ, ಈಗ ದುಡಿದು ತಿನ್ನುವ ಶಕ್ತಿ ಇಲ್ಲ. ಆ ಕಾರಣದಿಂದಲೇ ದೇವಸ್ಥಾನದ ಬಳಿ ಇಷ್ಟವಿಲ್ಲದಿದ್ದರು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಈಗ ಭಿಕ್ಷುಕರ ಪುನರ್ವಸತಿ ಕೇಂದ್ರದವರು ಇಲ್ಲಿಗೆ ಕರೆ ತಂದಿದ್ದಾರೆ ಎಂದು ಮನಸ್ಸು ಭಾರವಾಗಿ ನುಡಿದಳು. 
ಮೊತ್ತೊಬ್ಬ ಯುವಕ ಹೇಳುತ್ತಾನೆ ಸಾರ್ ನಮ್ಮ ಕುಟುಂಬವೇ ಭಿಕ್ಷೆ ಬೇಡುವ ವೃತ್ತಿಯನ್ನು ಅನುಸರಿಸುತ್ತಾ ಬಂದಿದೆ. ಅನಿವಾರ್ಯ ಕಾರಣದಿಂದ ನಾನು ಅದೇ ವೃತ್ತಿಯನ್ನು ಹಿಡಿದೆ. ಭಿಕ್ಷೆ ಬೇಡುವುದು ತಪ್ಪಿರಬಹುದು, ಆದರೆ ನಮಗೆ ಅದು ಬಿಟ್ಟು ಬೇರೆ ಉದ್ಯೋಗ ಮಾಡುವುದು ನನಗೆ ಗೊತ್ತಿಲ್ಲ ಎನ್ನುತ್ತಾನೆ. 
ನನಗೂ ಅಚ್ಚರಿ ಉಂಟು ಮಾಡಿದ ಅಂಶವೆಂದರೆ ಭಿಕ್ಷೆ ಬೇಡುವವರು ಕೇವಲ ಅನಕ್ಷರಸ್ಥರು ಎಂದುಕೊಂಡಿದ್ದೆ. ಅದು ತಪ್ಪು ಎಂದು ಭಿಕ್ಷಕುರ ಕೇಂದ್ರಕ್ಕೆ ಹೋದ ನಂತರ ನನಗೂ ಅರಿವಾಯಿತು. ಕಾರಣ ಬಿ.ಎಸ್ಸಿ, ಡಿಪ್ಲೋಮ, ಇತರೆ ಪದವಿ ಪಡೆದವರು ಕೂಡ ಬದುಕಿನ ವಿಧಿ ಬರಹಕ್ಕೆ ಸಿಕ್ಕಿಕೊಂಡೋ ಏನೋ ಭಿಕ್ಷೆ ಬೇಡುವ ವೃತ್ತಿಗೆ ಬಂದಿದ್ದಾರೆ. ಮತ್ತೊಂದು ಅಂಶವೆಂದರೆ ಕೆಲ ಮಕ್ಕಳೇ ತಮ್ಮ ವಯಸ್ಸಾದ ತಂದೆ, ತಾಯಿಯನ್ನು ಭಿಕ್ಷಾಟನೆ ಮಾಡಲು ಕಳುಹಿಸುತ್ತಾರೆ. ಭಿಕ್ಷೆ ಮಾಡಿ ಸಂಪಾದಿಸಿದ ಹಣ ಮಕ್ಕಳು ಯಾವುದೇ ಮುಜಗರ ಪಡೆಯದೆ ತೆಗೆದುಕೊಳ್ಳುತ್ತಾರೆ ಎಂಬ ಅಂಶವನ್ನು ಅಲ್ಲಿನ ಒಬ್ಬರು ಹೇಳಿದರು. 
ಭಿಕ್ಷುಕರ ಕೇಂದ್ರದಲ್ಲಿನ ಕೆಲವರಿಗೆ ನಮ್ಮ ತರಬೇತಿ ಸಂಸ್ಥೆಯಿಂದ ಎನ್ವಲಪ್ ಕವರ್, ಪೇಪರ್ ಬ್ಯಾಗ್, ಸೋಪು ಆಯಿಲ್, ಪೇನಾಯಿಲ್ ತಯಾರಿಸುವ ವಿಧಾನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಿದೆವು.  ಅಲ್ಲಿನ ಕೆಲವರು ಅಚ್ಚುಕಟ್ಟಾಗಿ ಅವುಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ತಯಾರಿಸಿ ತಮ್ಮ ಕೌಶಲ್ಯವನ್ನು ತೋರಿಸಿದರು.
ಅಲ್ಲಿನ ಕೆಲವರು ಮಾನಸಿಕವಾಗಿ ಜರ್ಜರಿತರಾಗಿದ್ದರು. ಸಂಬಂಧಗಳ ಪ್ರೀತಿ, ವಿಶ್ವಾಸ ಸಿಗದಿದ್ದರೆ ಮಾನಸಿಕವಾಗಿ ಹೇಗೆ ತಾನೇ ಸದೃಢರಾಗಿರಲು ಸಾಧ್ಯ.
ಇನ್ನು ಚಲನಚಿತ್ರಗಳಲ್ಲಿ ಜೈಲು (ಬಂಧೀಖಾನೆ) ನ್ನು ನೋಡಿರುವುದರಿಂದ ಜೈಲೆಂದರೆ ಈಗೆ ಇರಬಹುದು ಎಂಬ ಸಣ್ಣ ಕಲ್ಪನೆ ನನ್ನಲ್ಲಿತ್ತು. ಜೈಲಿನ ಹೊರ ಭಾಗದಲ್ಲಿ ಹಾದು ಹೋಗುವ ಮುಖ್ಯದ್ವಾರವನ್ನು ನೋಡಿ , ಜೈಲೆಂದರೆ ಒಳಗೆ ಹೇಗಿರುತ್ತದೋ ಎಂಬ ಆಲೋಚನೆಯು ಮೂಡುತ್ತಿತ್ತು.
ಇನ್ನು ನಾನಾ ಅಪರಾಧಗಳ ಕಾರಣಗಳಿಗಾಗಿ ಜೈಲಿನಲ್ಲಿ ಹಲವರಿರುತ್ತಾರೆ. ಅಂತವರಿಗೆ ಸ್ವ ಉದ್ಯೋಗ ಮತ್ತು ಉದ್ಯಮಶೀಲತೆ ಬಗ್ಗೆ ತರಬೇತಿ ಕೊಟ್ಟರೆ ಉಪಯೋಗವಾಗುತ್ತದೆ ಎಂಬ ಕಾರಣದಿಂದ ಅಲ್ಲಿಗೂ ಹೋಗುವ ಅವಕಾಶ ಒದಗಿ ಬಂದಿತ್ತು. 
ಚಿತ್ರಗಳಲ್ಲಿ ಮಾತ್ರ ಜೈಲನ್ನು ನೋಡಿದ್ದ ನಾನು ಸ್ವತಃ ನೋಡುವ ಅವಕಾಶ ತರಬೇತಿ ಸಲುವಾಗಿ ಬಂದಿತ್ತು. ಜೈಲಿನ ಒಳಗೆ ಪ್ರವೇಶಿಸಿದಾಗ ಸಣ್ಣ ಸಣ್ಣ ಕೊಠಡಿಗಳಲ್ಲಿ ಹಲವು ಪ್ರಕರಣಗಳಲ್ಲಿ ಅಪರಾಧಿಗಳಾಗಿರುವವರು ಬಂಧಿಯಾಗಿದ್ದರು. ಸಹಜವಾಗಿಯೇ ಜೈಲಿನಲ್ಲಿರುವವರನ್ನು ಕಂಡರೆ ಎಂಥವರಿಗೂ ಭಯ. ಕಾರಣ ಅವರ ಹತ್ತಿರ ಹೋದರೆ ಏನು ಮಾಡುತ್ತಾರೋ ಎಂದೋ.. 
ಇಲ್ಲೂ ಒಂದಷ್ಟೋ ಕುತೂಹಲಕಾರಿ ಅಂಶಗಳು ಕಂಡವು. ಆತ ಬಿ.ಟೆಕ್ ಪದವೀಧರ, ಆದರೆ ಗಾಂಜಾ ಮಾರಾಟ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿ ಜೈಲು ಸೇರಿದ್ದ. ಇಂಗ್ಲೀಷ್ ಸ್ಪಷ್ಟವಾಗಿ ಮಾತನಾಡುತ್ತಾನೆ. ಬುದ್ದಿವಂತನೂ ಹೌದು ಆದರೆ ಗಾಂಜಾದಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು ಏಕೆ ಎಂಬುವುದಕ್ಕೆ ಉತ್ತರವಿಲ್ಲ. 
ತರಬೇತಿ ಕಾರ್ಯಕ್ರಮ ಮುಗಿಸಿ ಜೈಲಿನಿಂದ ಹೊರ ಬಂದಾಗ ಆತನನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲು ದೂರದ ಬೇರೆ ರಾಜ್ಯದ ಅವರ ಕುಟುಂಬ ಜೈಲಿನ ಮುಂಭಾಗದಲ್ಲಿದ್ದರು. ಆತನ ತಾಯಿಯ ಹೃದಯದಲ್ಲಿ ಆಗುತ್ತಿದ್ದ ನೋವು ಎಂತಹ ಕಟುಕರಿಗೂ ಅರ್ಥವಾಗುತ್ತದೆ, ಮನಸ್ಸು ಕರಗುತ್ತದೆ.
ಜೈಲಿನಲ್ಲಿದ್ದ ಒಬ್ಬನ ಪ್ರಕಾರ ಕಳ್ಳತನ ಪ್ರಕರಣಗಳಲ್ಲಿ ಹಲವರು ಜೈಲು ಸೇರಲು ಮೂಲ ಕಾರಣ ನಿರುದ್ಯೋಗ ಸಮಸ್ಯೆ. ಎಷ್ಟೋ ಜನರು ವಿದ್ಯಾವಂತರಾಗಿದ್ದಾರೆ. ಸೂಕ್ತ ಉದ್ಯೋಗ ದೊರಕದೆ ಇದ್ದಾಗ ಅನಿವಾರ್ಯವಾಗಿ ಡಕಾಯಿತಿಗೆ ಇಳಿಯುತ್ತಾರೆ ಎಂದು ಉತ್ತರಿಸಿದ.
ಇನ್ನು ಜೈಲಿನಲಿದ್ದ ಬಹುತೇಕ ಯುವಕರ ಮೇಲೆ ದಾಖಲಾಗಿದ್ದ ಪ್ರಕರಣಗಳು ಪೋಕ್ಸೋ ಕಾಯ್ದೆ ((ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂತಾದ) ಯಡಿಯಲ್ಲಿ ದಾಖಲಾಗಿದ್ದವು ಎಂಬ ವಿಷಯ ನಾನು ತಿಳಿದುಕೊಂಡೆ.
ದೇಶದ ಆಧಾರಸ್ತಂಬಗಳೆಂದು ಯುವ ಸಮೂಹವನ್ನು ಕರೆಯುತ್ತೇವೆ. ಆದರೆ ಅಂತಹ ಯುವಸಮೂಹವೇ ಲೈಂಗಿಕ ದೌರ್ಜನ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದರೆ ದೇಶದ ಗತಿ..?
ಇನ್ನು ಅಲ್ಲಿನ ಬಬ್ಬ ಯುವಕ ಹೇಳುತ್ತಾನೆ ನೋಡಿ ಸಾರ್ ನಾನು ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಒಬ್ಬ ಹುಡುಗಿಯನ್ನು ಪ್ರೀತಿಸಿದ ಕಾರಣ ಜೈಲು ಸೇರುವಂತಾಗಿದೆ. ಹುಡುಗಿಯ ಒಪ್ಪಿಗೆ ಇದ್ದರು, ಕುಟುಂಬದವರ ಒಪ್ಪಿಗೆ ಇಲ್ಲದ ಕಾರಣ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಸಹಾಯಕತೆಯಿಂದ ನುಡಿದ. ಜೈಲಿನಲ್ಲಿನ ಕೆಲವರು ಸ್ವಯಂ ಸ್ಪೂರ್ತಿಯಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಮತ್ತೆ ಕೆಲವರು ಅನಿವಾರ್ಯ ಕಾರಣಗಳಿಂದ ಅಪರಾಧ ಪ್ರಕರಣಗಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುವಂತಾಗಿದೆ.
ಬಹುಃಶ ಭಿಕ್ಷಕರನ್ನು ಮತ್ತು ಜೈಲಿನಲ್ಲಿ ಖೈದಿಗಳನ್ನು ಕಂಡಾಗ ಅವರ ಈ ಸ್ಥಿತಿಗೆ ಸಮಾಜ ಹಾಗೂ ಒಂದು ರೀತಿಯಲ್ಲಿ ನಾಗರಿಕರೆಂದು ಕರೆಸಿಕೊಂಡ ನಾವು ಕೂಡ ಕಾರಣವೇನು ಎಂಬ ಪಾಪ ಪ್ರಜ್ಞೆ ಕಾಡುತ್ತದೆ.
ಕೆಲವರು ಮೈ ಮಗ್ಗಿಸಿ, ಬೆವರು ಹರಿಸಿ ದುಡಿಯಲು ಇಷ್ಟವಿಲ್ಲದವರು ಭಿಕ್ಷಾಟಾನೆ ಮಾಡಿ ಜೀವನ ನಡೆಸುತ್ತಾರೆ. ಕಷ್ಟ ಪಟ್ಟರೆ ಯಾವುದೋ ಒಂದು ಉದ್ಯೋಗ ಸಿಗುತ್ತದೆ ಎಂಬ ವಾದ ಹಲವರದ್ದು. ಇದನ್ನು ಒಪ್ಪಲೂ ಬಹುದು. ಆದರೆ ಕುಟುಂಬದವರು ಯಾರು ಇಲ್ಲದಿದ್ದಾಗ, ಸರಕಾರದ ಯಾವುದೇ ಸೌಲಭ್ಯಗಳು ಸಿಗದಿದ್ದಾಗ, ದುಡಿಯೋಣ ಎಂದರೆ ದೈಹಿಕ ಶಕ್ತಿ ಇಲ್ಲದಿದ್ದಾಗ ಆಕೆ ಏನು ಮಾಡಬೇಕು. ಹಸಿವಿನ ತಾಳಲಾಟವನ್ನು ಸಹಿಸಿಕೊಳ್ಳುವುದು ಹೇಗೆ..? ಅಂತಹ ಸಂದರ್ಭದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡರೆ ತಪ್ಪೇನ್ನುವುದು ಹೇಗೆ.. ಮಾನವೀಯತೆನ್ನೇ ಯಾರು ತೋರಿಸದೆ ಹೋದಾಗ ಆ ಬಡಪಾಯಿ ಜೀವಗಳಿಗೆ ದಿಕ್ಕು ಯಾರು. ಸರಕಾರದಿಂದ ಸಾವಿರಾರು ಯೋಜನೆಗಳಿದ್ದರು ಇಂತವರಿಗೆ ತಲುಪುದು ದೂರದ ಮಾತು.
ಜೈಲಿನಲ್ಲಿ ಕೆಲವರ ಶಿಸ್ತು, ಸಂಸ್ಕಾರ, ಅವರು ನೀಡುವ ಗೌರವ ಗಮನಿಸಿದರೆ ಅವರನ್ನು ಖೈದಿಗಳೆಂದು ಕರೆಯಲು ಸಾಧ್ಯವಿಲ್ಲ. ನಾಗರಿಕರೆಂದು ಕರೆಸಿಕೊಳ್ಳುವರರಲ್ಲಿ ಇಲ್ಲದ ಆತ್ಮೀಯತೆ, ಮಾನವೀಯತೆ ಜೈಲಿನಲ್ಲಿನ ಕೆಲವರಲ್ಲಿದೆ.
ಸ್ವಃತಹ ನಾನು ಕೆಲಹೊತ್ತು ಖೈದಿಗಳಿಗೆ ಪಾಠ ಮಾಡಿದೆ. ಆಗ ಅವರು ಕೇಳಿಸಿಕೊಳ್ಳುವ ರೀತಿ, ಪ್ರಶ್ನೆ ಕೇಳುವ ರೀತಿ ಅದ್ಬುತ. ಜೈಲಿನಲ್ಲಿದ್ದ ಒಬ್ಬ ಹೇಳುತ್ತಾನೆ ಸಾರ್ ಜೈಲಿಗೆ ಬರಲು ನಮಗೇನಾದರೂ ಆಸೆಯೇ.. ಜೀವನದಲ್ಲಿ ನಡೆಯುವ ಕೆಲ ಘಟನೆಗಳು ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸುತ್ತವೆ. ನನ್ನ ತಪ್ಪಿಲ್ಲ ಎಂದು ನಾನು ವಾದಿಸಲ್ಲ. ಆದರೆ ನನಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇದೆ. ಆದರೆ ವಿಧಿ ನಿಯಮ ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಬೇಸರದಿಂದ ಹೇಳುತ್ತಾನೆ.
ಜೈಲಿನಲ್ಲಿನ ಮಹಿಳಾ ಖೈದಿಗಳು ಒಂದೇ ವಾರದ ತರಬೇತಿಯಲ್ಲಿ ಕಲಿತು ತಯಾರಿಸಿದ್ದ ಕೃತಕ ಆಭರಣಗಳನ್ನು ಸ್ವತಃ ನ್ಯಾಯಾಧೀಶರೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟರ ಮಟ್ಟಿಗೆ ತರಬೇತಿಯಲ್ಲಿ ಕೆಲ ಖೈದಿಗಳು ಸಂಪೂರ್ಣ ಭಾಗಿಯಾಗಿದ್ದರು.
ಇನ್ನು ಭಿಕ್ಷೆ ಬೇಡುವ ಪ್ರವೃತ್ತಿಯನ್ನು ಸರಕಾರ ನಿಷೇಧಿಸಿದೆ. ಆದರೆ ಒಂದೊತ್ತಿಗೂ ಊಟ ಸಿಗದೆ ಇರುವ ಮಂದಿ ಈಗಲೂ ಇದ್ದಾರೆ. ಅವರ ನೋವಿಗೆ ಧ್ವನಿಯಾಗುವ ಜನ ಎಲ್ಲಿದ್ದಾರೆ. ಜೈಲಿನಲ್ಲಿರುವ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ. ಸನ್ನಿವೇಶಗಳು ಆ ರೀತಿ ನಡೆಸಿರುತ್ತದೆ. ಏನೇ ಆಗಲಿ ಸಮಾಜದಲ್ಲಂತೂ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. 
ಭಿಕ್ಷುಕರ ಪುನರ್ವಸತಿ ಕೇಂದ್ರ ಹಾಗೂ ಜೈಲು ನನಗಂತೂ ಬದುಕಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಕೆಲವರಲ್ಲಿನ ಒಳ್ಳೆಯ ಅಂಶಗಳು ನಾವು ಕಲಿಯಬೇಕಿದೆ. ಹಾಗೆಯೇ ಭಿಕ್ಷಕರು ಸಂಖ್ಯೆ ಕಡಿಮೆಯಾಗಲು ಹಾಗೂ ಜೈಲಿಗೆ ಹೋಗುವವರ ಸಂಖ್ಯೆ ಇಳಿಮುಖವಾಗಲು ಸಮಾಜದ ಜವಾಬ್ದಾರಿ ಇದೆ. ಪ್ರತಿಯೊಬ್ಬರು ಮಾನವೀಯ ನೆಲಗೆಟ್ಟಿನಲ್ಲಿ ಆಲೋಚಿಸಿ ಸಂಸ್ಕಾರವನ್ನೂ ರೂಪಿಸುವಂತಹ ನಾಗರಿಕ ಸಮಾಜವನ್ನು ನಿರ್ಮಿಸುವಂತಹ ಕೆಲಸಕ್ಕೆ ಮುಂದಾಗಬೇಕಿದೆ.