⏭ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಅದು ನನ್ನ ಹೈಸ್ಕೂಲ್ ದಿನಗಳು. ದಿನ ರಾತ್ರಿ ಊಟ ಮಾಡಿದ ನಂತರ ನಾವು ವಾಸವಿದ್ದ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗುತ್ತಿದೆ. ಅಲ್ಲಿ ಹಾಕುತ್ತಿದ್ದ ರಾಜಕೀಯ ಪಕ್ಷಗಳ ನಾಯಕರ ಫ್ಲೆಕ್ಸ್, ಕಟೌಟ್ ಗಳನ್ನು ಬಹಳ ಕುತೂಹಲದಿಂದ ವೀಕ್ಷಿಸಿ, ಅದರಲ್ಲಿನ ಅಂಶಗಳನ್ನು ಓದುವ ಚಟವಿತ್ತು.
ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಕಟೌಟ್, ಬ್ಯಾನರ್, ಭಿತ್ತಿಪತ್ರಗಳ ಸದ್ದು ಹೆಚ್ಚಾಗಿಯೇ ಇರುತ್ತಿ ತ್ತು.ಅಭ್ಯರ್ಥಿಗಳು ಹಂಚು ವ ಕರಪತ್ರಗಳು ರಸ್ತೆಯಲ್ಲಿ ಎಲ್ಲಾದರೂ ಸಿಕ್ಕಿದರೆ ಅದನ್ನು ಕೈಗೆತ್ತಿಕೊಂಡು ಓದುವ ಪರಿಪಾಠವಿತ್ತು. ಎಲ್ಲಾ ಪಕ್ಷಗಳ ಕರಪತ್ರಗಳನ್ನು ಸಂಗ್ರಹಿಸಿ ಓದುವ ಹವ್ಯಾಸ ಬಹಳ ಕಾಲವಿತ್ತು.
ನಾನು ಪಿ.ಯು ಓದುವ ಕಾಲದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು ಕೋಲಾರಕ್ಕೆ ಬಂದಾಗ ಅವರ ಭಾಷಣ ಕೇಳಲು ಮನೆಯಲ್ಲೂ ಹೇಳದೆ ಹೋಗಿದ್ದೆ. ಹೈಸ್ಕೂಲ್ ಹೋದುವಾಗ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಭಾಷಣ ಕೇಳಲು ತೆರಳಿದ್ದೆ. ಇಂದಿನ ಉಪರಾಷ್ಟ್ರಪತಿ ಬಿಜೆಪಿ ಪಕ್ಷದ ಎಂ.ವೆಂಕಯ್ಯ ನಾಯ್ಡು, ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರ ಭಾಷಣ ಕೇಳುವ ಉತ್ಸಾಹ, ಹುಮ್ಮಸ್ಸು ನನಗೆ ಮೊದಲಿನಿಂದಲೂ ಇತ್ತು.
ಅದಕ್ಕೆ ಕಾರಣ ನಾಯಕರೆಂದರೆ ಸಮಾಜದ ಉದ್ದಾರಕರು. ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬೇಕಾದರೆ ಅದು ರಾಜಕೀಯ ಕ್ಷೇತ್ರದಲ್ಲಿ ನಾಯಕರಿಂದಲೇ ಸಾಧ್ಯ ಎಂಬ ಅಭಿಪ್ರಾಯ ನನ್ನದಾಗಿತ್ತು. ಹಾಗೆಯೇ ಕೆಲ ಮುಖಂಡರ ಭಾಷಣ ಶೈಲಿಯು ನನ್ನನ್ನು ಆಕರ್ಷಿಸುತ್ತಿದ್ದರಿಂ ದ ರಾಜಕಾರಣ ಎಂದರೆ ಏನು ಗೊತ್ತಿಲ್ಲದ ದಿನಗಳಿಂದಲೂ ಹಲವರ ಭಾಷಣಗಳನ್ನು ಕೇಳುವ ಹುಚ್ಚು ತಾನಾಗಿಯೇ ಹತ್ತಿತ್ತು.
ಅದರಲ್ಲೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ವಿಭಾಗದ ಮುಂದೆಯೇ ಮುಖ್ಯಮಂತ್ರಿ, ಗೃಹಸಚಿವರು ಸೇರಿದಂತೆ ಹಲವು ವಿವಿಐಪಿಗಳ ಕ್ಯಾನ್ವಾಯ್ (ಎಸ್ಕಾರ್ಟ್) ವಾಹನಗಳು ಹಾದು ಹೋಗುತ್ತಿತ್ತು. ಎಷ್ಟೇ ಕೆಲಸವಿದ್ದರು ಅವರ ಕ್ಯಾನ್ವಾಯ್ ವಾಹನ ಸೈರನ್ ಹಾಕುತ್ತ ತೆರಳುವ ದೃಶ್ಯವನ್ನು ವೀಕ್ಷಿಸುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.
ಮೊನ್ನೆ ನಾಯಕತ್ವ ಗುಣ ಮತ್ತು ಮಾನವೀಯ ಮೌಲ್ಯ ಎಂಬ ವಿಷಯದ ಬಗ್ಗೆ ನಮ್ಮ ಶಿಬಿರಾರ್ಥಿಗಳಿಗೆ ತರಗತಿ ತೆಗೆದುಕೊಂಡಿದ್ದೆ. ಆಗ ಶಿಬಿರಾರ್ಥಿಗಳ ಜೊತೆ ನಾಯಕತ್ವ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಇಂದು ರಾಜಕೀಯವು ಸೇರಿದಂತೆ ವಿವಿಧ ವಲಯಗಳ ನಾಯಕರ ಮನಸ್ಥಿತಿ, ಜೀವನ ಶೈಲಿ, ಸಿದ್ದಾಂತಗಳ ಬಗ್ಗೆ ಚರ್ಚೆ ಮಾಡಬೇಕಾದ ಸಂದರ್ಭ ಎದುರಾಯಿತು.
ತರಗತಿಯಲ್ಲಿನ ಒಬ್ಬ ಶಿಬಿರಾರ್ಥಿ ಅಯ್ಯೋ ಬಿಡಿ ಸಾರ್ ಇವತ್ತು ನಾಯಕನೆಂದರೆ ಬರೀ ತನ್ನ ಲಾಭ ನೋಡಿಕೊಳ್ಳುತ್ತಾನೆ. ಅಷ್ಟಕ್ಕೂ ಸಮಾಜದ ಬಗ್ಗೆ ಆಲೋಚಿಸುವ ನಾಯಕರು ಎಲ್ಲಿ ತಾನೇ ಸಿಗುತ್ತಾರೆ ಎಂಬ ಧಾಟಿಯಲ್ಲಿ ಹೇಳಿದ, ಅವನ ಮಾತು ಒಪ್ಪುವಂತದ್ದೆ. ಇನ್ನು ಒಬ್ಬ ಸಾರ್ ತೆಲುಗಿನ ರಾಣಾ ದಗ್ಗುಬಾಟಿ ಅಭಿನಯದ ಲೀಡರ್ ಚಿತ್ರದಲ್ಲಿ ಹೀರೋ ಮುಖ್ಯಮಂತ್ರಿಯಾಗುತ್ತಾನೆ. ಆತ ರಾಜ್ಯದ ಅಭಿವೃದ್ದಿಗಾಗಿ ತನ್ನ ಸ್ವಂತ ಹಣವನ್ನು ಕೊಡುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿಸಿ ಅಕ್ರಮ ಸಂಪತ್ತನ್ನು ಕಸಿದು ಜನರ ಕಲ್ಯಾಣಕ್ಕೆ ಬಳಸುತ್ತಾನೆ. ತೆಲುಗಿನ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಜನರ ಕಷ್ಟಗಳನ್ನು ಆಲಿಸುವ ಮನಸ್ಥಿತಿ ಈಗಿನವರಿಗೆಲ್ಲಿದೆ. ನಮ್ಮಲ್ಲಿ ಇಂತಹ ನಾಯಕರನ್ನು ಎಲ್ಲಿ ಕಾಣಲು ಸಾಧ್ಯ ಹೇಳಿ ಸಾರ್. ಮಕ್ಕಳು, ಮೊಮ್ಮಕ್ಕಳಿಗೂ ಸಾಕಾಗುವಷ್ಟು ಆಸ್ತಿ, ಹಣ ಸಂಪಾದಿಸುವುದೇ ಈಗಿನ ನಾಯಕನ ಕಾಯಕ ಎಂದ.
ನಾಯಕತ್ವ, ನಾಯಕನಾದವನು ಹೇಗಿರಬೇಕೆಂಬ ಬಗ್ಗೆ ಕೆಲವು ನಿರ್ದಿಷ್ಟವಾದ ದೃಷ್ಟಿಕೋನಗಳಿವೆ. ಮಹಾತ್ಮ ಗಾಂಧಿಜೀಯವರು ಬ್ರಿಟಷರ ವಿರುದ್ದ ಹೋರಾಡಲು ಜನರನ್ನು ಸಂಘಟಿಸಿದ್ದರು. ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳ ಮೂಲಕ ಲೇಖನಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಸತ್ಯ, ಅಹಿಂಸೆ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು. ನಾಯಕನಲ್ಲಿ ಇರಬೇಕಾದ ಬಹುತೇಕ ಗುಣಗಳು ಗಾಂಧಿಜೀಯವರಲ್ಲಿತ್ತು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಸಾವಿರಾರು ಅನುಯಾಯಿಗಳನ್ನು ಸಂಪಾದಿಸಿಕೊಟ್ಟಿತ್ತು. ದೇಶ ಸುತ್ತಿ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಆ ಕಾರಣದಿಂದಲೇ ವಿವೇಕಾನಂದರನ್ನು ಯುವ ನಾಯಕ ಎಂದು ಈಗಲೂ ಕರೆಯುತ್ತೇವೆ.
ಇಂದು ರಾಜಕೀಯ ಪಕ್ಷಗಳ ನಾಯಕ ಎಂದರೆ ಬರೀ ಕಟೌಟ್ಗಳಿಗೆ ಸೀಮಿತವಾದವರು. ಬಹುತೇಕ
ನಾಯಕರಲ್ಲಿ ಸ್ವಾರ್ಥದ ಹಿತಾಸಕ್ತಿ ತುಂಬಿ ತುಳುಕಿತ್ತಿದೆ. ದಶಕಗಳು ಕೂತು ತಿಂದರು ಕರಗದ ಸ್ಥಿರಾಸ್ತಿ ಮತ್ತು ಚರಾಸ್ಥಿಯ ಮಾಲೀಕರಾಗಿದ್ದಾರೆ ಈಗಿನ ನಾಯಕರು.
ವಿಪರ್ಯಾಸವೆಂದರೆ ಇಂದು ನಾಯಕ ಎಂಬ ಪದವನ್ನು ಬರೆಯಲು ಸಾಧ್ಯವಾಗದವರು ಕೂಡ ತಾನೊಬ್ಬ ರಾಜ್ಯ ನಾಯಕ, ರಾಷ್ಟ್ರ ನಾಯಕ ಎಂದು ಬಿಂಬಿಸಿಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ.
ಇಂದು ವಿದ್ಯಾರ್ಥಿ, ಯುವಜನ, ಕನ್ನಡ, ರೈತ, ಕಾರ್ಮಿಕ, ಸರಕಾರಿ, ಖಾಸಗಿ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಎಲ್ಲಾ ಸಂಘಟನೆಗಳಲ್ಲೂ ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ನೂರಾರು ನಾಯಕರೆಂದು ಕರೆಸಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕರಿಗೆ ನಾಯಕನಿಗೆ ಇರಬೇಕಾದ ಯಾವುದೇ ಪ್ರಾಥಮಿಕ ಜ್ಞಾನವಾಗಲಿ, ಮೌಲ್ಯವಾಗಲಿ ಇಲ್ಲದಿದ್ದರೂ ಕೂಡ ತಾನೊಬ್ಬ ನಾಯಕನೆಂದು ಹೇಳಿಕೊಳ್ಳುವ ದೊಡ್ಡ ವರ್ಗವೇ ಸೃಷ್ಟಿಯಾಗಿದೆ.
ನಾಯಕನೆಂದು ಕರೆಸಿಕೊಳ್ಳುವವನು ಮೊದಲು ಆ ಪದದ ಅರ್ಥ ತಿಳಿದುಕೊಳ್ಳಬೇಕು. ಜನ ಸಾಮಾನ್ಯರ ಕಷ್ಟಗಳನ್ನು ಅರಿಯುವ ಮನಸ್ಥಿತಿ ಇರಬೇಕು. ಯಾವುದೇ ಧರ್ಮ, ಜಾತಿ, ಲಿಂಗ ತಾರತಮ್ಯ ಮಾಡದೇ ಎಲ್ಲರನ್ನೂ ಸಮನಾಗಿ ಕಾಣುವ ಮನಸ್ಥಿತಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆ ಹಾಗೂ ನೈತಿಕತೆ ಸ್ವಲ್ಪ ಹೆಚ್ಚಾಗಿ ಇರಬೇಕು. ತಾನು ಬೆಳೆದರೆ ಸಾಕು ಎಂಬ ಧೋರಣೆ ಇರಲೇ ಬಾರದು. ತನ್ನ ಜೊತೆಗಿರುವವರನ್ನು ಬೆಳೆಸುವ ಇಚ್ಛಾಶಕ್ತಿ ಇಲ್ಲದಿದ್ದರೆ ಅವನು ನಾಯಕನಾಗಲು ಅನರ್ಹ.
ಜನಸಾಮಾನ್ಯರ ಜೊತೆ ಒಳ್ಳೆಯ ಸಂವಹನ ಕೌಶಲ್ಯವನ್ನು ಹೊಂದಬೇಕು. ಕನಿಷ್ಠ ಪಕ್ಷ ಜನರ ಕಷ್ಟಗಳನ್ನು ಕೇಳುವ ಸೌಜನ್ಯವನ್ನು ಹೊಂದಿರಬೇಕು. ಆದರೆ ನಮ್ಮ ಈಗಿನ ರಾಜಕಾರಣಿಗಳು ಒಬ್ಬ ನಾಯಕನಿಗೆ ಇರಬೇಕಾದ ಯಾವುದೇ ಅರ್ಹತೆ ಹೊಂದಿಲ್ಲದಿದ್ದರು ಹಣ ಹಂಚಿ ಅಧಿಕಾರ ಪಡೆಯುತ್ತಿರುವುದರಿಂದ ನಾಯಕತ್ವದ ಶಿಸ್ತನ್ನು ಪಾಲಿಸುತ್ತಿಲ್ಲ.
ಪ್ರಾಮಾಣಿಕತೆ ಮತ್ತು ನೈತಿಕತೆ ಈ ಎರಡು ಅಂಶಗಳು ನಾಯಕನ ಮೂಲ ಲಕ್ಷಣಗಳು. ವಿಚಿತ್ರವೆಂದರೆ ಎರಡು ಅಂಶಗಳನ್ನು ಹೊಂದಿರುವ ನಾಯಕರನ್ನು ದೇಶದಲ್ಲಿ ಯಾವುದೇ ಭಾಗದಲ್ಲಿ ಹುಡುಕಿದರೂ ಬಹುಃಶ ಸಿಗುವುದಿಲ್ಲ. ಒಂದಿಬ್ಬರಿದ್ದರೆ ಹೆಚ್ಚು.
ಇಂದು ನಾವು ಕಾಣುವ ನಾಯಕರು ಎಂಥವರೆಂದರೆ ತಮ್ಮ ಅಧಿಕಾರವಧಿ ಅಥವಾ ವಯಸ್ಸಾದ ನಂತರ ತಮ್ಮ ಮಗ, ಮಗಳೋ ಅಥವಾ ತಮ್ಮ ಸಂಬಂಧಿಕರನ್ನೇ ಅಧಿಕಾರದಲ್ಲಿ ತಂದು ಕೂರಿಸುವ ನಾಯಕ ಸಮೂಹವೇ ತುಂಬಿದೆ. ತಮ್ಮ ಕಾರ್ಯಕರ್ತರು ಅಥವಾ ಬಡವರ ಬಗ್ಗೆ ಕಾಳಜಿ ಇರುವ ಯಾವ ವ್ಯಕ್ತಿಯನ್ನು ಯಾವೊಬ್ಬ ನಾಯಕನು ಬೆಳೆಸುವುದಿಲ್ಲ. ಕುಟುಂಬ ಕೇಂದ್ರಿತ ನಾಯಕತ್ವ ಇಂದು ತುಂಬಿ ತುಳುಕುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ವಿಧಾನಸಭೆ, ಲೋಕಸಭೆಗಳು ಕುಟುಂಬ ಸದಸ್ಯರಿಂದ ತುಂಬಿಕೊಂಡರು ಅಚ್ಚರಿ ಪಡುವಂತಿಲ್ಲ.
ಇನ್ನು ಗ್ರಾಮ ಮಟ್ಟದಿಂದ ಹಿಡಿದು ನಗರ, ಪಟ್ಟಣಗಳನ್ನು ತೆಗೆದುಕೊಂಡರು ಅದು ಚುನಾವಣೆ, ಹಬ್ಬ ಹರಿದಿನ ಸೇರಿದಂತೆ ಮತ್ತಿತರ ಸಂದರ್ಭಗಳಲ್ಲಿ ಕಟೌಟ್, ಫ್ಲೆಕ್ಸ್ ಗಳು ರಾರಾಜಿಸುತ್ತವೆ. ಅದರಲ್ಲಿ ತಾವು ನಾಯಕರೆಂದು ಹಲವರು ಪ್ರಚಾರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ತಾವೊಬ್ಬ ದೀನ, ದಲಿತ, ಹಿಂದುಳಿದ ವರ್ಗದವರ ಉದ್ದಾರಕ ಎಂದು ಸ್ಲೋಗನ್ ಬರೆಸಿಕೊಳ್ಳುತ್ತಾರೆ. ಆದರೆ ಅವರೆಲ್ಲೆಲ್ಲೂ ನಾಯಕನ ವೃತ್ತಿಪರತೆ ಇರುವುದಿಲ್ಲ. ಗಾಂಧಿ ಜಯಂತಿ, ಸ್ವಾಮಿ ವಿವೇಕಾನಂದ ಜಯಂತಿ ಸೇರಿದಂತೆ ಮತ್ತಿತರ ಮಹನೀಯರ ಜಯಂತಿಗಳಂದು ಶುಭಕೋರುವ ಫ್ಲೆಕ್ಸ್ ಗಳಲ್ಲಿ ಗಾಂಧೀ, ವಿವೇಕಾನಂದರ ಸಣ್ಣ ಚಿತ್ರವಿದ್ದರೆ ಶುಭಕೋರುವವರದ್ದು ಮಾತ್ರ ಬೃಹದಾಕಾರದ ಚಿತ್ರವಿರುತ್ತದೆ.
ನಾಯಕನಾದವನು ನಾಲ್ಕು ಜನರನ್ನು ಮುನ್ನೆಡೆಸುವ ಶಕ್ತಿ ಇರಬೇಕು. ಆದರೆ ಇಂದು ನಾಯಕರೆಂದು ಕರೆಸಿಕೊಳ್ಳುವವರು ಅಧಿಕಾರ ವ್ಯಾಮೋಹದಿಂದ ಬೇರೊಬ್ಬರ ಹಿಂಬಾಲಕರಾಗಿ, ಅಡ್ಡದಾರಿಗಳನ್ನು ಹಿಡಿದು ನಾಯಕ ಎಂಬ ಪದದ ಅರ್ಥವನ್ನೇ ಕಳೆಯುತ್ತಿದ್ದಾರೆ.
ವಿದ್ಯಾರ್ಥಿ,ರೈತ, ಕಾರ್ಮಿಕ, ಕನ್ನಡ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖಂಡರು ಸ್ವ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಪದ್ದತಿ ಬೆಳೆಯುತ್ತಿದೆ. ಕೆಲ ಸಂಘಟನೆಗಳ ನಾಯಕರಂತು ಅಧಿಕಾರಿಗಳನ್ನು ಬೆದೆರಿಸಿ ಹಣ ವಸೂಲಿ ಮಾಡುವವರು ಇದ್ದಾರೆ. ನಾನೊಬ್ಬ ರೈತ ನಾಯಕ ಎಂದು ಹಸಿರು ಶಾಲು ಹಾಕುವ, ನಾನೊಬ್ಬ ಕನ್ನಡಪರ ಹೋರಾಟಗಾರ ಎಂದು ಕನ್ನಡಧ್ವಜದ ಶಾಲು ಹಾಕುವವರು ಓಡಾಡುವುದು ಇನ್ನೋವಾ, ಕ್ವಾಲಿಸ್ ಕಾರಿನಲ್ಲಿ. ಐಷಾರಾಮಿ ಕಾರುಗಳಲ್ಲಿ ಓಡಾಡುವ ಶಕ್ತಿ ಈ ನಾಯಕರಿಗೆ ವಸೂಲಿದಂಧೆಗೆ ಇಳಿಯದಿದ್ದರೆ ಎಲ್ಲಿಂದ ತಾನೇ ಬರುತ್ತಿತ್ತು. ಕೆಲ ಸಂಘಟನೆಗಳ ನಾಯಕರು ರಾಜಕಾರಣಿಗಳನ್ನು ಮೀರಿಸುವ ಆಸ್ತಿ ಸಂಪಾದಿಸಿದ್ದಾರೆ.
ಈಗಿನ ಟ್ರೆಂಡ್ ಹೇಗಿದೆ ಎಂದರೆ ವೈಟ್ ಅಂಡ್ ವೈಟ್ ಬಟ್ಟೆಗಳನ್ನು ಹಾಕಿದರೆ ಆತ ನಾಯಕ. ಯಾವುದಾದರೂ ಒಂದು ಸಂಘ ಕಟ್ಟಿಕೊಂಡು, ವಿಸೀಟಿಂಗ್ ಕಾರ್ಡ್ ಮಾಡಿಸಿ, ತಮ್ಮ ಕಾರು
ಮತ್ತು ದ್ವಿಚಕ್ರ ವಾಹನದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಎಂದು ದೊಡ್ಡ ಅಕ್ಷರಗಳಲ್ಲಿ
ಬರೆಸಿಕೊಂಡರೆ ಸಾಕು ಆತನೇ ನಾಯಕ. ಇಂತಹ ವ್ಯವಸ್ಥೆ ಇದ್ದಾಗ ಎಲ್ಲಿ ತಾನೇ ಸಮಾಜ ಮುಂದುವರೆಯಲು ಸಾದ್ಯ.
ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಆ ರಾಷ್ಟ್ರವು ಉತ್ತಮ ನಾಯಕನನ್ನು ಹೊಂದಬೇಕು. ಸಮಾಜದಲ್ಲಿ ನಾಯಕರೆಂದು ಕರೆಸಿಕೊಂಡವರು ಜನಸಾಮಾನ್ಯರ ಕಷ್ಟಗಳ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಿದಾಗ ರಾಷ್ಟ್ರ ಅಭಿವೃದ್ದಿಯಲ್ಲಿ ಮುನ್ನಡೆಯಲು ಸಾಧ್ಯ. ಅದು ಬಿಟ್ಟು ಖಾದಿ ಬಟ್ಟೆ ಹಾಕಿಕೊಂಡು ಪತ್ರಿಕೆ, ಟಿ.ವಿಗಳಿಗೆ ಪೋಸು ನೀಡುವ ನಾಯಕರಿಂದ ಏನು ನಿರೀಕ್ಷಿಸಲು ಸಾದ್ಯವಿಲ್ಲ. ಅಂತವರ ಸಂತತಿಯು ಇಳಿಮುಖವಾಗಬೇಕಿದೆ.
ಎಲ್ಲಾ ಸಂಘಟನೆಗಳ ನಾಯಕರು ಮೊದಲು ಲೀಡರ್ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳಲಿ. ಲೀಡರ್ ಎಂದರೆ ನಾಲ್ಕು ಜನರಿಗೆ ಸೂಕ್ತ ದಾರಿ ತೋರಿಸುವವನು. ಯಾವುದೇ ಪ್ರತಿಪಲಾಫೇಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುವ ಸೇವಕ. ಅದು ಬಿಟ್ಟು ಲೀಡರ್ ಎಂದರೆ ನಾನು ಬಹಳ ದೊಡ್ಡ ವ್ಯಕ್ತಿ ಎಂಬ ಅಹಂ ಇರುವವನು ನಾಯಕನಾಗಲು ಅನರ್ಹ ಮತ್ತು ಅಂತವನನ್ನು ಸಮಾಜ ಬಹಳ ಸುಲಭವಾಗಿ ಮರೆತು ಬಿಡುತ್ತದೆ.



1 ಕಾಮೆಂಟ್:
Nimma balyadalli edda rajakiya asakthi nanna balyavannu nenapisitu.. nimminda rajakiya kshetradalli badalavane ya nirakshe ede.. nimma asakathi rajakiyadalli sada erali... nimma balya onthara beleyuva siri molakeyalli antide
ಕಾಮೆಂಟ್ ಪೋಸ್ಟ್ ಮಾಡಿ