ಗುರುವಾರ, ಜುಲೈ 25, 2019

ಮೈ ಲೈಪ್, ಮೈ ಜರ್ನಿ..


⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನನ್ನ ಸ್ನೇಹಿತನೊಬ್ಬ ಪದೇ ಪದೇ ಜೀವನದ ಬಗ್ಗೆ ಬೇಸರಿಸಿಕೊಳ್ಳುತ್ತಿದ್ದ, ಎಲ್ಲಾ ಇದ್ದರೂ ಏನು ಇಲ್ಲದಂತೆ  ಭಾವಿಸಿಕೊಂಡಿದ್ದ. ಸದಾ ನಕರಾತ್ಮಕ ಚಿಂತನೆಗಳಿಂದಲೇ ಜೀವನದಲ್ಲಿ ಸೋಲು ಒಪ್ಪಿಕೊಂಡಿದ್ದ, ಮನೆ ಮತ್ತು ಕಚೇರಿ ಎರಡೇ ಜೀವನ ಎಂಬ ಸ್ಥಿತಿ. ಸಣ್ಣ ಸಣ್ಣ ಸಮಸ್ಯೆಗಳಿಗೂ ವಿಪರಿತ ತಲೆ ಕೆಡಿಸಿಕೊಳ್ಳುತ್ತಿದ್ದ,  ಲೈಪ್ ನ್ನು ಎಂಜಾಯ್ ಮಾಡದೆ ಸ್ವತಃಹ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ. ಲೈಪ್ ಎಂಬ ಜರ್ನಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದ,  ಹೇಗಾದರೂ ಮಾಡಿ ಆತನ ಮನಸ್ಸು ಬದಲಿಸಬೇಕು ಎಂದು ತೀರ್ಮಾನಿಸಿ ಇಬ್ಬರು ಒಂದು ದಿನ ಲಾಂಗ್ ಬೈಕ್ ರೈಡ್ ಹೊರೆಟವು, 300 ಕೀ.ಮಿ ಪಯಣ ಅದು.
ಒಂದು ದಿನ ಶನಿವಾರ ಬೆಳಗ್ಗೆ.7ಕ್ಕೆ ಬೈಕ್ ಹತ್ತಿ ಇಬ್ಬರು ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯಣ ಆರಂಭಿಸಿದೆವು. ಅಂದು ತುಂತುರ ಮಳೆ ಬೇರೆ ಬೀಳುತ್ತಿತ್ತು, ಮೋಡಗಳು ಕವಿದ ವಾತಾವರಣದಲ್ಲಿ ಅದು ತುಂತುರು ಮಳೆಗಳ ಸಿಂಚನವಾಗುತ್ತಿದ್ದ ಸಂದರ್ಭದಲ್ಲಿ ಬೈಕ್ ಓಡಿಸುತ್ತ ಮಳೆ ಹನಿಗಳ ನಡುವೆ ಸಾಗುವುದು ಮನಸ್ಸಿಗೆ ಆಹ್ಲಾದವೆನಿಸುತ್ತದೆ. 
ಮೊದಲು ದಾರಿ ಮಧ್ಯೆ ಒಂದು ದೊಡ್ಡ ಕೆರೆ ಸಿಕ್ಕಿತು, ಕೆರೆ ಕಟ್ಟೆಯ ಮೇಲೆ ಹತ್ತಿ ಕೊನೆಯವರೆಗೂ ಹೋಗಿ ಬಂದವು. ಕೆರೆಯ ತುಂಬಾ ನೀರಿತ್ತು, ಅದು ಬೇರೆ ಮಳೆ ಬೀಳುತ್ತಿದ್ದರಿಂದ ತಣ್ಣಗೆಯ ವಾತಾವರಣ ನಿರ್ಮಾಣವಾಗಿತ್ತುಎಲ್ಲೆಡೆ ನಿಶಬ್ದ, ಗಾಳಿಯ ರಭಸಕ್ಕೆ ಕೆರೆಯಲ್ಲಿ ಅಲೆಗಳು ಸೃಷ್ಟಿಯಾಗಿದ್ದವು.   
ಅಲ್ಲಿಂದ ಹೊರಟು ಮುಂದೆ ಸಾಗುತ್ತ ಹೋದಾಗ ದಾರಿ ಮಧ್ಯೆ ಸಣ್ಣದಾದ ಪೆಟ್ಟಿಗೆ ಅಂಗಡಿ ಇತ್ತು. ಅಲ್ಲಿ ಚಹಾ ಸೇವಿಸೋಣ ಎಂದು ಹೋದರೆ, ಅಂಗಡಿ ಮಾಲೀಕನ ಮಗ ಒಳಗೆ ಜೋರಾಗಿ ಓದುತ್ತಿದ್ದ, ಏನ್ ಸಾರ್ ಮಗ ಎಷ್ಟನೇ ತರಗತಿ ಓದುತ್ತಿದ್ದಾನೆ ಎಂದು ಪ್ರಶ್ನೆ ಹಾಕಿದರೆ, ಸಾರ್ ಆತ 3 ನೇ ತರಗತಿ, ನಮ್ಮೂರಿನ ಸರಕಾರಿ ಶಾಲೆಗೆ ಹೋಗುತ್ತಾನೆ. ನನ್ನ ಪತ್ನಿಗೂ, ನನಗೂ ದಿನವೂ ಜಗಳ, ಕಾರಣ ಊರಿನ ಎಲ್ಲರ ಮಕ್ಕಳು ಖಾಸಗಿ ಶಾಲೆಗೆ ಸ್ಕೂಲ್ ವ್ಯಾನ್ ನಲ್ಲಿ ಹೋಗಿ ಬರುತ್ತಾರೆ. ಅವರ ಯೂನಿಫಾರ್ಮ್, ಶೂ ಹಾಕುವ ಸ್ಟೈಲು, ಶಾಲೆಯ ಕಟ್ಟಡ ನೋಡಿದರೆ ನನ್ನ ಪತ್ನಿಗೆ ಖುಷಿಯಾಗುತ್ತದಂತೆ. ಆದರೆ ನಮ್ಮ ಮಕ್ಕಳು ಬೀಳುವ ಹಂತದಲ್ಲಿರುವ ಸರಕಾರಿ ಶಾಲೆಗೆ ಹೋಗುತ್ತಾರೆ. ನೀನು ನೆಟ್ಟಗೆ ಸಂಪಾದನೆ ಮಾಡಿ ಹಣ ಇಟ್ಟಿದ್ದರೆ ನಮ್ಮ ಮಕ್ಕಳು ಕೂಡ ಖಾಸಗಿ ಶಾಲೆಗೆ ಹೋಗುತ್ತಿದ್ದರು, ನಿನ್ನ ದುರದೃಷ್ಟದಿಂದ ನನ್ನ ಮಕ್ಕಳು ಸರಕಾರಿ ಶಾಲೆಗೆ ಕಳಿಸಬೇಕಾದ ದೌರ್ಭಾಗ್ಯ ಎಂದು ದಿನವೂ ನನ್ನ ಜೊತೆ ಜಗಳ ಆಡುತ್ತಾಳೆ ಎಂದು ಬೇಸರಿಸಿಕೊಂಡ.
ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೂ ದೇಶವನ್ನೇ ಆಳಿದ್ದಾರೆ. ದೇಶದ ಎಲ್ಲಾ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಶಾಲೆಗೆ ಹೋಗುತ್ತಾರೆ ಎಂದು ನೀವು ನೋವು ಪಡುವ ಅವಶ್ಯಕತೆ ಆದರೂ ಏನಿದೆ ? ಎಂದು ತಿಳಿ ಹೇಳಿದೆ.
ಅಲ್ಲಿಂದ ಮುಂದೆ ಹೋದಂಗೆ ಒಂದು ಸಣ್ಣ ಹಳ್ಳಿ, ಬಹುಃಶ ಆ ಹಳ್ಳಿಯಲ್ಲಿ 60 ಮನೆಗಳಿರಬಹುದು. ಆ ದಿನ ಆ ಗ್ರಾಮದ ಮುಖ್ಯ ದೇವರಾದ ಈಶ್ವರನಿಗೆ ವಿಶೇಷವಾದ ಪೂಜೆ ಇತ್ತು, ಹೆಚ್ಚು ಜನ ಕಂಡ ಕಾರಣ ನಾವು ಬೈಕ್ ಸೈಡ್ ಗೆ ಹಾಕಿ ಗ್ರಾಮದ ಒಳಗೆ ಪ್ರವೇಶಿಸಿದೆವು. ಗ್ರಾಮದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆ ಮುಂಭಾದಲ್ಲಿ ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿದ್ದರು. ಊರಿನ ಎಲ್ಲರು ಸೇರಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗ್ರಾಮದ ಎಲ್ಲರಲ್ಲೂ ಏನೋ ಒಂದು ಖುಷಿ. ಗ್ರಾಮದ ದೇವರಿಗೆ ವಿಶೇಷ ಪೂಜೆ ಇದ್ದರಿಂದ ದೂರದ ಊರುಗಳಲ್ಲಿ ಹೋಗಿ ಕೆಲಸ ಮಾಡುವವರು ತಮ್ಮ ಗ್ರಾಮಕ್ಕೆ ಬಂದಿದ್ದರು. ತೀವ್ರ ಬರಗಾಲದಿಂದ ಕೃಷಿ ಚಟುವಟಿಕೆಗಳು ಸರಿಯಾಗಿ ನಡೆಯದೆ ಗ್ರಾಮಸ್ಥರು ಆರ್ಥಿಕವಾಗಿ ಸಾಕಷ್ಟು ಹೊಡೆತಕ್ಕೆ ಒಳಗಾಗಿದ್ದರು. ಆದರೂ ಅವರ ಭರವಸೆ ಮಾತ್ರ ಕುಂದಿರಲಿಲ್ಲ. ದೇಗುಲದ ಒಳಗೆ ನಾವು ಹೋಗಿ ಒಂದು ನಮಸ್ಕಾರ ಹಾಕಿ ಅಲ್ಲಿಂದ ಹೊರಟು ಸೇರಿದ್ದು ಮತ್ತೊಂದು ಗ್ರಾಮ. 
ಆ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳಿದ್ದವು. ಊರಿನ ಒಳಗೆ ಹೋದರೆ ಸ್ವಚ್ಛತೆ ಇರಲಿಲ್ಲ, ರಸ್ತೆ ಅಧ್ವಾನವಾಗಿತ್ತು, ಗ್ರಾಮದ ನಲ್ಲಿಯ ಮುಂಭಾಗದಲ್ಲಿ ನೂರಾರು ಬಿಂದಿಗೆಗಳನ್ನು ಇಟ್ಟಿದ್ದರು. ಅವುಗಳ ಮೇಲೆ ಪೇಂಟ್ ನಲ್ಲಿ ಹೆಸರುಗಳು ಬೇರೆ ಬರೆದಿದ್ದರು. ವಾರಕ್ಕೆ 3 ದಿನ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ, ಅದು ಸರಿಯಾಗಿ ವಿದ್ಯುತ್ ಪೂರೈಕೆ ಇದ್ದರೆ ಮಾತ್ರ, ಆದ್ದರಿಂದಲೇ ನಮ್ಮ ಗ್ರಾಮದಲ್ಲಿ ನೀರಿಗೆ ಸಮಸ್ಯೆಯಾಗಿದೆ ಎಂದು ಗ್ರಾಮದ ಅಂಗಡಿ ಮುಂಭಾಗದಲ್ಲಿ ಕೂತಿದ್ದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಹೇಳಿದರು. ಸಿಟಿಯ ಜನ ತರ ನಾವು ಪುಣ್ಯವಂತರಲ್ಲ. ಅದು ಬೆಂಗಳೂರಿನ ನಿಮಗೆ ಮನೆಗೆ ಒಳಗೆ ಪೈಪ್ ಲೈನ್ ಮುಖಾಂತರ ಕಾವೇರಿ ನೀರು ಪೂರೈಸುತ್ತಾರೆ. ಆದರೆ ನಾವು ಕೀ.ಮಿಗಟ್ಟಲೆ ಬಿಸಿಲ್ಲೇನದೆ ನಡೆದುಕೊಂಡು ಹೋಗಿ ಒಂದೆರೆಡು ಬಿಂದಿಗೆ ನೀರು ತರುತ್ತೇವೆ ಎನ್ನುವ ಅವರ ಮಾತಿನಲ್ಲಿ ನೋವಿತ್ತು. 
ನಮ್ಮ ಪ್ರಯಾಣದ ನಡುವೆ ಅರಣ್ಯ ಪ್ರದೇಶ ಕಾಣಿಸಿತು. ಸ್ವಲ್ಪ ಒಳಗೆ ಹೋದರೆ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು, ಪಕ್ಷಿಗಳ ಹಿಂಪಾದ ಧ್ವನಿ ಕೇಳಿಸುತ್ತಿತ್ತು. ಮಳೆ ಹನಿಗಳು ಮರದ ಎಲೆಗಳ ಮೇಲೆ ಬಿದ್ದು, ಭೂಮಿಯನ್ನು ಸ್ಪರ್ಶಿಸುತ್ತಿತ್ತು. ಮಳೆ ಬಿದ್ದು ನಿಂತಿದ್ದರಿಂದ ಮಣ್ಣಿನ ವಾಸನೆ ಸುಹಾಸಭರಿತವಾಗಿತ್ತು. ಅದೆಲ್ಲೋ ದೂರದಿಂದ ವಯಸ್ಸಾದ ಅಜ್ಜಿ ಒಬ್ಬರು ತಲೆ ಮೇಲೆ ಕಟ್ಟಿಗೆಯ ಕಟ್ಟನ್ನು ಇಟ್ಟುಕೊಂಡು ಕಷ್ಟ ಬಿದ್ದು ನಡೆದುಕೊಂಡು ಬರುತ್ತಿದ್ದರು. ಏನು ಅಜ್ಜಿ ಈ ಮಳೆಯಲ್ಲಿ, ಅದು ಕಾಡಿನಲ್ಲಿ ಈ ಕಷ್ಟ ಬೀಳುತ್ತಿದ್ದಿಯಾ ಎಂದರೆ ನಮ್ಮ ಮನೆಯಲ್ಲಿ ಓಲೆ ಹುರಿಯಬೇಕಾದರೆ ಕಟ್ಟಿಗೆ ಬೇಕೆ ಬೇಕು. ನಾವು ಇರುವುದು ಇಬ್ಬರು, ನಾನು ನಮ್ಮ ಯಜಮಾನ್ರು, ನಮ್ಮನೇಲಿ ಗ್ಯಾಸ್ ಇಲ್ಲ, ಊಟ ತಯಾರಿಸಿಕೊಳ್ಳಬೇಕಾದರೆ, ನೀರು ಕಾಯಿಸಿಕೊಳ್ಳಬೇಕಾದರೆ ಕಟ್ಟಿಗೆ ಅನಿವಾರ್ಯ. ಈ ಕಾಡೇ ನಮಗೆ ಆಸರೆ ಎಂದಳು. 
ಅಲ್ಲಿಂದ ಸ್ವಲ್ಪ ದೂರ ಹೋದರೆ ರಸ್ತೆಯ
ಬದಿಯಲ್ಲಿ ಐಸ್ ಕ್ಯಾಂಡಿ ನಿಂತಿತ್ತು, ತಿನ್ನೋಣ ಎಂದು ಗಾಡಿ ನಿಲ್ಲಿಸಿದೆ5 ರೂಪಾಯಿಯ ಎರಡು ಐಸ್ ಕ್ಯಾಂಡಿ ತಿಂದು ಖುಷಿ ಪಟ್ಟೆವು. ಐಸ್ ಕ್ಯಾಂಡಿ ಮಾರುವವನ ಹೆಸರು ಹರೀಶ್, ವಿಕಲಚೇತನ. ಪಿ.ಯು ಪಾಸಾಗಿದ್ದಾನೆ. ಕಳೆದ 6 ವರ್ಷಗಳಿಂದ ಐಸ್ ಕ್ಯಾಂಡಿ ಮಾರುತ್ತ ಜೀವನ ಸಾಗಿಸುತ್ತಿದ್ದೇನೆ. ಪ್ರತಿನಿತ್ಯ ಹೆಚ್ಚೆಂದರೆ 300 ರೂ. ಸಂಪಾದಿಸುತ್ತೇನೆ ಎಂದ. ಒಂದು ಕೈ ಅಪಘಾತದಲ್ಲಿ ಕಳೆದುಕೊಂಡಿದ್ದಾನೆ. ಐಸ್ ಕ್ಯಾಂಡಿ ತ್ರಿಚಕ್ರ ಸೈಕಲ್ ನ್ನು ತುಳಿದುಕೊಂಡು ಹಳ್ಳಿ, ಹಳ್ಳಿ ಸುತ್ತಿ ವ್ಯಾಪಾರ ಮಾಡುತ್ತಾನಂತೆ. ಆದರೂ ಆತನ ಉತ್ಸಾಹಭರಿತ ಜೀವನ, ಕಷ್ಟ ಬಿದ್ದರೆ ಮಾತ್ರ ಜೀವನ ನಡೆಯುತ್ತೆ ಎಂದು ಹೇಳುವ ಆತನ ಮಾತನ್ನು ಒಪ್ಪದಿರಲು ಸಾಧ್ಯವೇ
ಮಧ್ಯಾಹ್ನದ ಊಟಕ್ಕೆ ರಸ್ತೆಯಲ್ಲಿರುವ ದೊಡ್ಡ ಹೊಟೇಲ್ ಗೆ ಹೋಗುವುದು ಬೇಡ ಎಂದು ತೀರ್ಮಾನಿಸಿ ರಸ್ತೆ ಒಂದು ಭಾಗದಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯ ಹೋಟೆಲ್ ಗೆ ಹೋದೆವು. ಇಡ್ಲಿ ಹಾಗೂ ಚಿತ್ರಾನ್ನವಿತ್ತು, ದೊಡ್ಡ ಹೋಟೆಲ್ ನಲ್ಲಿ ಕೂರಲು ಕುರ್ಚಿಗಳು ಇರುತ್ತವೆ. ಇಲ್ಲಿ ಅದು ಇಲ್ಲ ಎನ್ನುವುದು ಬಿಟ್ಟರೆ ಕ್ವಾಂಟಿಟಿ, ಕ್ವಾಲಿಟಿಯಲ್ಲಿ ಪ್ರಶ್ನೆ ಮಾಡುವಂತಿಲ್ಲ. ಹೋಟೆಲ್ ಮಾಲೀಕರ ಹೆಸರು ಸರಸ್ವತಮ್ಮ. ಗಂಡ ತೀರಿ ಹೋಗಿ 10 ವರ್ಷವಾಗಿದೆ. ಕುಟುಂಬ ನಿರ್ವಹಣೆಗಾಗಿ ಹೋಟೆಲ್ ವೃತ್ತಿ ಮಾಡುತ್ತಿದ್ದೇನೆ, ಪರವಾಗಿಲ್ಲ ಜೀವನ ಸಾಗುತ್ತಿದೆ. ಆದರೂ ದೊಡ್ಡ ಹೋಟೆಲ್ ಗಿಂತ ಹೆಚ್ಚು ಶುಚಿ, ರುಚಿಯಾಗಿ ಅಡುಗೆ ಮಾಡಿದರೂ ಕೆಲವರು ಹೋಟೆಲ್ ಚಿಕ್ಕದು, ಹಳೆಯದು ಎಂದು ಬರಲು ಹಿಂದೇಟು ಹಾಕುತ್ತಾರೆ. ಆದರೂ ಬದಕು ಮಾತ್ರ ನಿಂತಿಲ್ಲ ಎಂದು ಹೇಳುತ್ತಾರೆ.
ನಮ್ಮ ಪಯಣ ಆಂಧ್ರ ಪ್ರದೇಶದ ವಿ.ಕೋಟ ಸಮೀಪದ ಕೈಗಲ್ ಎಂಬ ಸಣ್ಣ ಗ್ರಾಮದತ್ತ ಸಾಗಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ಒಂದು ಫಾಲ್ಸ್ ಇದೆ. ಅದಕ್ಕೆ ಕೈಗಲ್ ಫಾಲ್ಸ್ ಎಂದು ಹೆಸರಿಡಲಾಗಿದೆ. ಫಾಲ್ಸ್ ನಲ್ಲಿ ನೀರು ಹರಿಯುತ್ತಿರಲಿಲ್ಲ, ಆದರೆ ಸುತ್ತಲು ದಟ್ಟವಾದ ಅರಣ್ಯವಿತ್ತು. ಕೆಲ ದಿನಗಳಿಂದ ಸಣ್ಣ ಪ್ರಮಾಣದ ಮಳೆಯಾದ್ದರಿಂದ ಹಚ್ಚಹಸಿರಿನಿಂದ ಅರಣ್ಯವು ಕಂಗೊಳಿಸುತ್ತಿತ್ತು. ಎಲ್ಲೂ ಜನರ ಸುಳಿವು ಇರಲಿಲ್ಲ. ಫಾಲ್ಸ್ ಬಳಿ ಇದ್ದ ಬಂಡೆ ಕಲ್ಲಿನ ಮೇಲೆ ಕುಳಿತುಕೊಂಡು 1 ಗಂಟೆ ಕಾಲ ಪ್ರಕೃತಿ ಸೌಂದರ್ಯವನ್ನು ಆಹ್ಲಾಸಿದೆವು.
ಯಾವ ಜಂಜಾಟವು ಇಲ್ಲದೆ ನೆಮ್ಮದಿಯಾಗಿ ಗಿಡ ಮರಗಳ ಮಧ್ಯೆ ಕಳೆದ ಕೆಲ ಸಮಯವು ಮನಸ್ಸು ಹಗುರವಾಗುವಂತೆ ಮಾಡಿತು. ಸ್ನೇಹಿತನಿಗೆ ಹೇಳಿದೆ ನೋಡು ಈ ಗಿಡ, ಮರಗಳು ಎಂದು ಸ್ವಾರ್ಥಕ್ಕಾಗಿ ಏನು ಮಾಡಿಕೊಳ್ಳುವುದಿಲ್ಲ, ಬೇರೆವರಿಗೆ ತೊಂದರೆ ಕೊಡುವುದಿಲ್ಲ. ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತವೆ, ಆಗಂತ ಇವುಗಳಿಗೆ ಕಷ್ಟವಿಲ್ಲ ಎಂತಲ್ಲ ಜೋರಾಗಿ ಮಳೆ, ಗಾಳಿ ಬಂದರೆ ರೆಂಬೆಗಳು ಮುರಿಯಬಹುದು, ಬುಡವೇ ಅಲ್ಲಾಡಬಹುದು. ಜನರು ತಮ್ಮ ಸ್ವಾರ್ಥಕ್ಕಾಗಿ ಯಾವಾಗಾದರೂ ಮರಕ್ಕೆ ಕೊಡಲಿ ಪೆಟ್ಟು ಕೊಡಬಹದು. ಮಳೆ ಸರಿಯಾಗಿ ಬೀಳದೆ ನೀರಿನ ದಾಹ ನೀಗದೆ ಮರ ಒಣಗುವ ಸ್ಥಿತಿ ಬರಬಹುದು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಮರ, ಗಿಡಗಳು ಸದಾ ನಗುತ್ತಲೇ ಇರುತ್ತವೆ. ಜನರಿಗೆ ಹಣ್ಣು, ನೆರಳನ್ನು ಪ್ರಾಣ ಇರುವವರೆಗೂ ಪಕ್ಷಪಾತ ಮಾಡದೇ ನೀಡುತ್ತವೆ. ಏನೇ ಆಗಲಿ ಪ್ರಕೃತಿಯನ್ನು ನೋಡುತ್ತ ಕುಳಿತರೆ ಸಾಧಿಸಬೇಕೆಂಬ ಛಲ ಇಮ್ಮಡಿಯಾಗುತ್ತದೆ. ಕೈಗಲ್ ನಿಂದ ವಿ.ಕೋಟ ಪಟ್ಟಣಕ್ಕೆ ಬಂದು ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಟಿದ್ದು ಬೆಂಗಳೂರಿನತ್ತ.
ನನ್ನ ಸ್ನೇಹಿತನಿಗೆ ಹೇಳಿದೆ ಇಂದು ಇಡೀ ದಿನ ನಾವು ಹಲವು ಪ್ರದೇಶಗಳಿಗೆ ಹೋದೆವು, ಹಲವರ ಜೊತೆ ಸಮಾಲೋಚನೆ ಮಾಡಿದೆವು, ಕಷ್ಟದಲ್ಲಿದವರು ಸಿಕ್ಕರು. ಖುಷಿ ಜೀವನ ಮಾಡುತ್ತಿದ್ದವರು ಕಂಡರು. ಬರಗಾಲದ ಭೀಕರತೆಯ ಮಧ್ಯೆಯು ಚಿಂತಿಸದೆ ಖುಷಿಯಿಂದ ಹಬ್ಬ ಆಚರಿಸುತ್ತಿರುವ ಹಳ್ಳಿಯ ಜನ, ಗ್ರಾಮದವರ ಒಗ್ಗಟ್ಟು ನೋಡಿದೆವು. ಹಾಗೆಯೇ ಮತ್ತೊಂದು ಹಳ್ಳಿಯಲ್ಲಿ ಅಸ್ವಚ್ಚತೆಯ ಮಧ್ಯೆಯ ಬದುಕನ್ನು ಸಾಗಿಸುತ್ತಿರುವವರು, ಕುಡಿಯಲು ನೀರು ಬೇಕಾದರೂ ಹರಸಾಹಸ ಪಡುತ್ತಿರುವ ಜನರು ಎದುರಾದರು.
ವಿಕಲ ಚೇತನನಾದರೂ ಹಳ್ಳಿ ಹಳ್ಳಿಗೂ ಹೋಗಿ ಐಸ್ ಕ್ಯಾಂಡಿ ಮಾರುತ್ತ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುತ್ತ ಸಾಗುತ್ತಿದ್ದಾನೆ. ರಸ್ತೆಯಲ್ಲೇ ತಳ್ಳುವ ಬಂಡಿಯಲ್ಲಿ ಗಂಡ ಇಲ್ಲದಿದ್ದರು ಯಾರ ಹಂಗಿಗೂ ಒಳಗಾಗದೆ ಸ್ವಾಭಿಮಾನದಿಂದ ಹೋಟೆಲ್ ನಡೆಸುತ್ತ ಬದುಕಿಗೆ ಸವಾಲೆಸೆದು ಜೀವನ ಸಾಗಿಸುತ್ತಿರುವ ಮಹಿಳೆಯ ದರ್ಶನವಾಯಿತು. ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಿಲ್ಲ ಎಂದು ತನ್ನ ಪತ್ನಿಯಿಂದ ದಿನವೂ ಬೈಯಿಸಿಕೊಳ್ಳುತ್ತಿದ್ದರು, ಪೆಟ್ಟಿಗೆ ಅಂಗಡಿಯಲ್ಲಿ ಟೀ ಮಾರುತ್ತ ತನ್ನ ಕೈಯಲ್ಲಾದ ಮಟ್ಟಿಗೆ ಕುಟುಂಬ ನಿರ್ವಹಣೆ ಮಾಡುತ್ತ, ಬದುಕಿನ ಮೇಲೆ ಭರವಸೆ ಕಳೆದುಕೊಳ್ಳದೆ ಉತ್ಸಾಹದಿಂದ ಜೀವನ ನಡೆಸುತ್ತಿರುವವರು ಸಿಕ್ಕರು. ಮಳೆಯಲ್ಲೇ ಸೌಧೆ ತರಲು ಆ ಇಳಿ ವಯಸ್ಸಿನ ಅಜ್ಜಿ ಕಾಡಿಗೆ ನಡೆದುಕೊಂಡೆ ಹೋಗಿ ಕಷ್ಟ ಬೀಳುತ್ತಿದ್ದರು, ತನ್ನ ಜೀವನ ಯಾಕೆ ಈಗಾಯಿತು ಎಂದು ಬೇಸರಿಸಿಕೊಳ್ಳದೇ ಪ್ರತಿದಿನವು ಪ್ರೀತಿಯಿಂದ ಸ್ವಾಗತಿಸುವ ಆಕೆಯ ಛಲ ಯಾರಿಗಿರುತ್ತೆ. 
ಎಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಅನುಭವಿಸಿದೆವು. ಜನ ಜಂಗುಳಿ ಇಲ್ಲದೇ ಪ್ರಶಾಂತವಾದ ವಾತಾವರಣದಲ್ಲಿ ಮರ, ಗಿಡಗಳ ಮಧ್ಯೆ ಒಂದು ಗಂಟೆ ಕೂತ ಆ ಸಂದರ್ಭ ಕೋಟಿ ಕೊಟ್ಟರು ಸಿಗದು. ಒತ್ತಡದ ಜೀವನ, ಜಂಜಾಟಗಳಿಂದ, ಟ್ರಾಫಿಕ್ ಕಿರಿಕಿರಿ ಮಧ್ಯೆ ಹೈರಾಣದ ಬದುಕಿಗೆ ಈ ಪ್ರಕೃತಿ ಎಷ್ಟೊಂದು ಉತ್ಸಾಹ ತುಂಬಿತು. ಜನಗಳಲ್ಲಿ ಅಸೂಹೆ, ಕೋಪ, ಹೊಟ್ಟೆಕಿಚ್ಚು ಇರಬಹುದು. ಆದರೆ ಗಿಡ, ಮರಗಳಲ್ಲಿ ಎಲ್ಲಿದೆ, ನಿಸ್ವಾರ್ಥ ಮನಸ್ಥಿತಿಯ ಗಿಡಮರಗಳ ಮಧ್ಯೆ ಇರುವುದೇ ಅತ್ಯದ್ಬುತ.
ಇಂದು ಸಮಾಜದಲ್ಲಿ ಎಷ್ಟೋ ಜನ ಏನು ಕಳೆದುಕೊಂಡಂಗೆ ಜೀವನ ನಡೆಸುತ್ತಿದ್ದಾರೆ. ಕಷ್ಟಗಳು ನಮಗೆ ಮಾತ್ರ ಇದೆಯೆನೋ ಎಂದು ಭ್ರಮೆಯಲ್ಲಿರುತ್ತೇವೆ. ಕೂಲಿಗೆ ಹೋಗಿ ಬಿಸಿಲಲ್ಲಿ ದುಡಿಯುವ ಜನ ಕೂಡ ಯಾವತ್ತೂ ಜೀವನದ ಬಗ್ಗೆ ಬೇಸರ ಪಡುವುದಿಲ್ಲ. ಏಕೆಂದರೆ ಯಾವ ಕ್ಷಣಕ್ಕೆ ಏನು ಆಗಬೇಕೋ ಅದು ಆಗುತ್ತೇ ಎಂದು ನಂಬುತ್ತಾರೆ. ಕೂಲಿ ಮಾಡಿದರೂ ಕೂಡ ಕಷ್ಟಗಳನ್ನು ಸವಾಲೆಸುವ ಶಕ್ತಿ ಇವರಲ್ಲಿ ಇರುತ್ತದೆ. ಆದರೆ ವಿದ್ಯಾವಂತರು, ಬುದ್ದಿವಂತರು, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಕೂಲಿ ಮಾಡುವವರಲ್ಲಿ ಇರುವ ಆತ್ಮಸ್ಥೈರ್ಯ, ನಂಬಿಕೆ ಇರುವುದಿಲ್ಲ. ಕಷ್ಟಗಳಿಂದ ಹೊರತಾದ ಜೀವನ ಯಾರಿಗೆ ತಾನೇ ಇರುತ್ತದೆ ಹೇಳಿ..?
ಜೀವನ ಎಂದರೆ ನಿಜಕ್ಕೂ ನಮಗೆ ಏನು ಇಷ್ಟವಾಗುತ್ತದೋ ಅದು ಮಾಡಬೇಕು. ಕಷ್ಟಗಳು ನಮಗೆ ಇದೆ ಎಂದು ಕೂತರೆ ಆಗುದಾದರೂ ಏನು ? ಅಥವಾ ಸಾಧಿಸುವುದಾದರೂ ಏನು ? ಜೀವನದಲ್ಲಿ ಉತ್ಸಾಹ ಪಡೆಯಬೇಕಾದರೆ, ಸಕಾರಾತ್ಮಕ ಮನಸ್ಥಿತಿ ಪಡೆಯಬೇಕಾದರೆ, ನಮ್ಮ ವ್ಯಕ್ತಿತ್ವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಬೇಕು. ಇರುವ ಅನುಕೂಲಗಳಲ್ಲೇ ಖುಷಿ ಕಾಣಬೇಕು. ಇರುವುದನ್ನು ಬಿಟ್ಟು, ಇಲ್ಲದಿರುವುದರ ಬಗ್ಗೆ ಆಲೋಚಿಸುತ್ತಿದ್ದರೆ ಸಮಯ ವ್ಯರ್ಥವಾಗುವುದರ ಜೊತೆಗೆ ಮಾನಸಿಕ ಅಸಮತೋಲನಕ್ಕೆ ಒಳಗಾಗಬೇಕಾಗುತ್ತದೆ.
ಜೀವನ ಎಂದರೆ ನಮಗಿಷ್ಟವಾಗುವ ತರ ನಾವು ಬದುಕುವುದು. ಇಂದು ಏನಾಗಿದೆ ಎಂದರೆ ಬೇರೊಬ್ಬರು ಏನು ಅಂದುಕೊಳ್ಳುತ್ತಾರೋ, ಬೇರೆಯವರೆ ನನ್ನ ಬಗ್ಗೆ ಏನು ಭಾವಿಸುತ್ತಾರೋ ಎಂದು ಭಯದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ನಮ್ಮದು.  ನಮಗೆ ಇರುವುದೇ ಒಂದು ಜನ್ಮ, ಮತ್ತೊಂದು ಜನ್ಮ ಇದಿಯೋ ಇಲ್ಲವೋ ಗೊತ್ತಿಲ್ಲ. ಈ ಜನ್ಮದಲ್ಲೇ ನಮಗಿಷ್ಟವಾಗುವ ರೀತಿ ಬದುಕದಿದ್ದರೆ, ಬದುಕುವುದಾದರೂ ಏತಕ್ಕೆ ? ನಿಜ ಸಮಾಜ, ಕುಟುಂಬ ಎಲ್ಲವೂ ಬೇಕು. ಜವಾಬ್ದಾರಿ, ಕರ್ತವ್ಯಗಳನ್ನು ನಿರ್ವಹಿಸಬೇಕು. ಜೊತೆಗೆ ನಮ್ಮ ಆಸೆಯ ರೀತಿಯಲ್ಲೂ ಜೀವನ ಸಾಗಿಸಬೇಕು. ವಿನಾ ಕಾರಣ ಆಲೋಚಿಸುವ ಅನಿವಾರ್ಯತೆ ಏಕೆ. ಜೀವನದಲ್ಲಿ ಸಾಧಿಸುವವ ಛಲ ಇರುವವರು ಅನಗತ್ಯ ಆಲೋಚನೆಗಳಿಂದ ಮುಕ್ತರಾಗಿರುತ್ತಾರೆ. ಬದುಕಿನ ಪ್ರತಿಕ್ಷಣವೂ ಇಂಪಾರ್ಟೆಂಟ್, ಯಾಕಂದ್ರೆ ಒಂದು ಸೆಕೆಂಡ್ ಕಳೆದುಕೊಂಡರೆ ಮತ್ತೆ ಸಿಗಲ್ಲ. ಭಯ, ಮಾನಸಿಕ ನೋವು, ಅಪನಂಬಿಕೆ ಎಂಬ ಸೋಲಿಸುವ ಸೂತ್ರಗಳನ್ನು ಆದಷ್ಟು ದೂರ ತಳ್ಳಿ, ನಮಗೆ ಇಷ್ಟವಾಗುವ ಜೀವನ ಸಾಗಿಸಬೇಕಿದೆ. ಸೋ ಲೆಟ್ಸ್ ಎಂಜಾಯ್ ಎವರಿಮೂಮೆಂಟ್, ಯಾಕೆಂದ್ರೆ ಇದು ನಮ್ಮ ಲೈಫ್ನಮ್ಮ ಜರ್ನಿ.

ಬುಧವಾರ, ಜುಲೈ 3, 2019

ಕನಸು ಕಾಣುವ ಜೀವನ..

  ⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನಮ್ಮದೊಂದು ರೀತಿ ಕನಸುಗಳ ಜೀವನ. ಕನಸುಗಳನ್ನು ಕಾಣದೇ ಜೀವನ      ಮಾಡುತ್ತಿರುವವರು ಬಹುಃಶ ಯಾರು ಸಿಗಲ್ಲ. ಪ್ರತಿದಿನವೂ ಒಂದೊಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಜೀವನಪರ್ಯಂತ ನಾವು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಒಮ್ಮೊಮ್ಮೆ ನಾವು ಅಂದುಕೊಂಡ ಕನಸುಗಳು ಈಡೇರದಿದ್ದಾಗ ಅಥವಾ ಅವು ಈಡೇರಲ್ಲಾ ಎಂದು ಗೊತ್ತಾದಾಗ ಮನಸ್ಸಿಗೆ ಆಗುವ ನೋವಿನ ಯಾತನೆ ಕಡಿಮೆ ಏನಲ್ಲ.
ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಬರುವ ಸಮಸ್ಯೆಗಳು ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿಬಿಡುತ್ತವೆ. ಬಹುಪಾಲು ಜನ ತಮ್ಮ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಈ ಕನಸಿಗೆ ಕೊಳ್ಳಿ ಇಡುವುದೇ ಈ ಸಮಸ್ಯೆಗಳು ಎಂಬ ಮಹಾ ಶತ್ರು. 
ಮೊನ್ನೆ ಸ್ನೇಹಿತರೊಬ್ಬರ ಮದುವೆಗಾಗಿ ದೂರದ ವಿಜಯಪುರ (ಬಿಜಾಪುರ)ಕ್ಕೆ ಹೋಗಿದ್ದೆ. ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಹೋದ ಸಂದರ್ಭವದು. ಇಂಡಿ ಪಟ್ಟಣದಿಂದ ಬಸ್ ನಲ್ಲಿ ವಿಜಯಪುರ ನಗರಕ್ಕೆ ಹೋಗುತ್ತಿದ್ದಾಗ ಎಲ್ಲೂ ಕೃಷಿ ಚಟುವಟಿಕೆಗಳೇ ಕಾಣುವುದಿಲ್ಲ. ಬಹುತೇಕ ಜಮೀನು ಮಳೆಯಾಶ್ರಿತ ಕೃಷಿ ಜಮೀನು. ಮಳೆ ಬಿದ್ದರೆ ಕೃಷಿ ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಇಲ್ಲಿನ ಜನರು ಅಷ್ಟೇ ಅತ್ಯಂತ ಸರಳವಾಗಿ ಜೀವನ ನಡೆಸುವವರು, ಅವರನ್ನು ನೋಡುವಾಗಲೇ ಅದು ಅರ್ಥವಾಗುತ್ತದೆ. ಬಿಜಾಪುರ ನಗರವಂತು ಇತಿಹಾಸದ ಪುಟಗಳನ್ನೇ ಹೊಂದಿದ ನಗರ. ಹಲವು ಸಾಮ್ರಾಜ್ಯಗಳು ಆಳಿದ ಪ್ರದೇಶವಾದ್ದರಿಂದ ನಗರದ ಯಾವುದೇ ಭಾಗಕ್ಕೆ ಹೋದರು ಪುರಾತನವಾದ ಕೋಟೆಗಳ ದರ್ಶನವಾಗುತ್ತದೆ. 
ಬಿಜಾಪುರ ನಗರದಲ್ಲಿನ ಗೋಲಗುಮ್ಮಟವು ಪ್ರಸಿದ್ದವಾದ ಸ್ಮಾರಕ. ಪುರಾತನವಾದ ಈ ಸ್ಮಾರಕವು ನೋಡಲು ಹಾಗೂ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾಗಿದೆ. ಗೋಲಗುಮ್ಮಟದ ಮುಂಭಾಗದಲ್ಲಿನ ವಸ್ತು ಸಂಗ್ರಹಾಲಯದಲ್ಲಿನ ಹಲವು ಪುರಾತನವಾದ ಶಿಲ್ಪಕಲಾಕೃತಿಗಳು ಗಮನಸೆಳೆಯುತ್ತದೆ. 
ಗೋಲಗುಮ್ಮಟ ವೀಕ್ಷಿಸಿ ಗೇಟಿನ ಮುಂಭಾಗಕ್ಕೆ ಬಂದಾಗ ಅಲ್ಲಿ ಸುಮಾರು 45 ವರ್ಷದ ಬಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ತನ್ನ ಕೈಯಲ್ಲಿ ಹಿಡಿದಿದ್ದ ಚಿತ್ರಗಳ ಆಲ್ಬಮ್ ತೋರಿಸಿದರು. ನೋಡಿ ಸಾರ್ ಈ ಚಿತ್ರಗಳಲ್ಲಿನ ಸ್ಥಳಗಳು ಬಿಜಾಪುರ ನಗರದಲ್ಲಿವೆ. ನೀವು ನಡೆದುಕೊಂಡೋ, ಆಟೋದಲ್ಲೋ ಹೋಗಿ ನೋಡಲು ಸಾಧ್ಯವಿಲ್ಲ. ನನಗೆ 350 ರೂ.ಕೊಡಿ ನನ್ನ ಟಾಂಗ (ಜಟಾಕ ಬಂಡಿ) ದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದ. 
ಆಟೋ, ಗಾಡಿ, ಬಸ್ ಗಳಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ನನಗೆ, ಟಾಂಗದಲ್ಲಿ (ಕುದುರೆಯ ಜಟಾಕ ಬಂಡಿ) ಒಮ್ಮೆಯು ಹೋಗಿರಲಿಲ್ಲ. ಟಾಂಗದಲ್ಲಿ ಹೋಗುವ ಆಸೆಯಿಂದ 250ರೂ. ಕೊಡುತ್ತೇನೆ ಎಂದು ಹೇಳಿ ಟಾಂಗ ಹತ್ತಿದೆ. ಟಾಂಗದಲ್ಲಿ ಹೋಗುವುದೇ ಒಂದು ರೋಮಾಂಚನ. ಅದರಲ್ಲಿ ಸಾಗುತ್ತಿದ್ದಾಗ ಹಾಗೆಯೇ ಸುಮ್ಮನೆ ಟಾಂಗ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಮಾತಿನತ್ತ ಸೆಳೆದೆ. ಆತ ಮಾತನಾಡುತ್ತ ಕಳೆದ 18 ವರ್ಷಗಳಿಂದ ಟಾಂಗ ಓಡಿಸುತ್ತಲೇ ಜೀವನ ಸಾಗಿಸುತ್ತಿದ್ದೇನೆ ಸಾರ್. ಇಬ್ಬರು ಮಕ್ಕಳು, ಒಬ್ಬರು 10 ನೇ ತರಗತಿ, ಮತ್ತೊಬ್ಬರು 8 ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಇಲ್ಲ, ಇರುವುದು 2 ಸಾವಿರ ರೂ.ಗಳ ಪುಟ್ಟದಾದ ಬಾಡಿಗೆ ಮನೆಯಲ್ಲಿ. ಪತ್ನಿಯು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಾಳೆ. ಇಬ್ಬರು ದುಡಿಯುವುದು ಅನಿವಾರ್ಯ. ದಿನಕ್ಕೆ ಹೆಚ್ಚೆಂದರೆ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ತೋರಿಸಿ 500 ರೂ. ಸಂಪಾದಿಸುತ್ತೇನೆ. ಖರ್ಚೆಲ್ಲಾ ಹೋಗಿ 350 ರೂ. ಉಳಿಯುತ್ತದೆ. ಅದರಲ್ಲೇ ಕುಟುಂಬ ನಿರ್ವಹಣೆ. ಬೇರೆಯವರ ರೀತಿ ಬದುಕು ನಮ್ಮದಲ್ಲ. ಬೆಳಗ್ಗೆ ಮಾಡಿದ ಊಟವನ್ನೇ ಮಧ್ಯಾಹ್ನ, ರಾತ್ರಿಯು ತಿನ್ನುತ್ತೇವೆ. ಹಬ್ಬ ಹರಿದಿನಗಳು ಬಂದರೆ ಮಾತ್ರ ವಿಶೇಷವಾದ ಅಡುಗೆ ಇರುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವ ಪದ್ದತಿ.  
ಇನ್ನು ನಾವು ಬಡವರಾಗಿರುವುದರಿಂದ ನಮ್ಮ ಸಂಬಂಧಿಕರ್ಯಾರು ನಮ್ಮನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ನಮ್ಮ ಮನೆಗೂ ಅವರು ಬರುವುದಿಲ್ಲ. ಆದರೂ ಜೀವನದಲ್ಲಿ ಸಂತೋಷದಿಂದ ಇದ್ದೇನೆ. ಅದರರ್ಥ ಕಷ್ಟಗಳು ಇಲ್ಲವೆಂದಲ್ಲಾ, ಕಷ್ಟಗಳಲ್ಲೇ ಸಂತೋಷವನ್ನು ಕಾಣುತ್ತಿದ್ದೇನೆ. ಬೇರೆಯವರನ್ನೂ ನೋಡಿದಾಗ ಕೆಲವೊಮ್ಮೆ ನನಗೂ ಬೇಸರವಾಗುತ್ತದೆ. ಆದರೆ ನನ್ನ ಸಾಮರ್ಥ್ಯ, ಶಕ್ತಿ ಅರಿವು ನನಗಿದೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎಂಬ ನಿಲುವು ನನ್ನದು ಸಾರ್ ಎಂದು ಹೇಳುವ ಆತನ ಮಾತುಗಳಲ್ಲಿ ಬದುಕಿನ ಬಗ್ಗೆ ಪ್ರೀತಿ, ಅಪಾರ ನಿರೀಕ್ಷೆ ಇತ್ತು. 
ಮೊನ್ನೆ ವಿಜಯಪುರ ಜಿಲ್ಲಾಧಿಕಾರಿಗಳು ಕಾರಿನಲ್ಲಿ ಹೋಗುತ್ತಿದ್ದರೆ ರಸ್ತೆಯಲ್ಲಿದ್ದ ಪೊಲೀಸರು ಕಾರನ್ನು ನೋಡಿದ ಕೂಡಲೇ ಸೆಲ್ಯೂಟ್ ಹೊಡೆದರು. ನನಗೆ ಆಗ ಅರ್ಥವಾಯಿತು ಅಧಿಕಾರಿಯಾದರೆ ಯಾವ ರೀತಿ ಗೌರವ ಸಿಗುತ್ತದೆ ಎಂದು. ಆ ಕಾರಣದಿಂದಲೇ ನನ್ನ ಒಬ್ಬ ಮಗನನ್ನಾದರೂ ಜಿಲ್ಲಾಧಿಕಾರಿ ಮಾಡಬೇಕೆಂಬ ಕನಸು ನನ್ನದು. ನನ್ನಂತಹ ಎಷ್ಟೋ ಬಡ ಕುಟುಂಬದವರ ಪಾಲಿಗೆ ನನ್ನ ಮಗ ನೆರಳಾಗಬೇಕು ಎನ್ನುವುದು ನನ್ನ ಆಸೆ. ಆತನನ್ನು ಓದಿಸುತ್ತಿದ್ದೇನೆ, ಮುಂದೆನಾಗುತ್ತದೋ ನೋಡೊಣ ಸಾರ್ ಎಂದು ಮಾತು ಮುಗಿಸಿದ. ತನ್ನ ಟಾಂಗದಲ್ಲೇ ಬಿಜಾಪುರ ನಗರದಲ್ಲಿನ ಬಿಜಾಪುರ ಕೋಟೆ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಜಮ್ಮಾ ಮಸೀದಿ, ಆಲಿ ಬುರ್ಜ್ ಸೇರಿದಂತೆ ಮತ್ತಿತರರ ಸ್ಥಳಗಳನ್ನು ತೋರಿಸಿದ. ಕಷ್ಟವಿದ್ದರು ಆ ಬಗ್ಗೆ ಚಿಂತಿಸದೆ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಆತನ ಚಿತ್ತವಿದ್ದದ್ದು ಮಾತ್ರ ಗಮನಾರ್ಹ. 
ಕಳೆದ ಹಲವಾರು ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಓಡಾಡುತ್ತಿದ್ದೇನೆ. ಕೆಲ ದಿನಗಳ ಹಿಂದೆ ಒಂದು ಘಟನೆ ನಡೆಯಿತು. ಬೆಂಗಳೂರಿನಿಂದ ಆಂಧ್ರಪ್ರದೇಶದ ಪುಟ್ಟಪರ್ತಿ ಹಾಗೂ ಅನಂತಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೋಗಿದ್ದೆ. ಕಂಡೆಕ್ಟರ್ ಪ್ರಯಾಣಿಕರಿಗೆಲ್ಲಾ ಟಿಕೆಟ್ ಕೊಟ್ಟು ಸಾಕಾಯಿತು ಎಂದು ತಮ್ಮ ಸೀಟ್ ನಲ್ಲಿ ಬಂದು ಕೂತರು. 
ಏನ್ ಸಾರ್ ಸಾಕಾಯಿತೇ ಎಂದೆ, ಅದಕ್ಕೆ ಅವರು ಬಿಡಿ ಸಾರ್ ನಮ್ಮ ಕಂಡೆಕ್ಟರ್ ಮತ್ತು ಡ್ರೈವರ್ ಗಳ ಕಥೆ ಹೇಳುವುದೇ ಬೇಡ. ಬರುವ ಕಡಿಮೆ ಸಂಬಳದಲ್ಲಿ ಜೀವನ ಮಾಡಬೇಕಾದ ಅನಿವಾರ್ಯತೆ ನಮ್ಮದು. ಹಲವು ಬಾರಿ ನಮ್ಮ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿದರೂ ಕನಿಷ್ಟ ವೇತನ ನಿಗದಿಪಡಿಸಿಲ್ಲ. ಬಸ್ ನಲ್ಲಿ ಓಡಾಡಿ ಓಡಾಡಿ ಸಾಕಾಗುತ್ತದೆ. ಕಾಲು ನೋವಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಸರಿಯಾಗಿ ರಜೆಯು  ನೀಡುವುದಿಲ್ಲ. ನಮ್ಮ ಸಾಂದರ್ಭಿಕ ರಜೆಗಳನ್ನು ಪಡೆಯಬೇಕಾದರೂ ಡಿಪೋ ಮ್ಯಾನೇಜರ್ ಗಳ ಕೈ ಕಾಲು ಹಿಡಿಯಬೇಕು. ಅದು ಹೋಗಲಿ 35 ವರ್ಷ ವೃತ್ತಿ ಮಾಡಿದರೂ ನಿವೃತ್ತಿ ನಂತರ ಬರುವ ಪಿಂಚಣಿ ಯಾವುದಕ್ಕೆ ಸಾಕಾಗುತ್ತದೆ. ನಿಜವಾಗಲೂ ಹೇಳುತ್ತೇನೆ ಸಾರ್ ಪ್ರತಿದಿನವೂ ಬಸ್ ನಲ್ಲಿ ಏನೋ ರಾದ್ದಾಂತ ಇದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಚಿಲ್ಲರೆ ಸಮಸ್ಯೆ. ಕೆಲ ಪ್ರಯಾಣಿಕರಂತು ಚಿಲ್ಲರೆ ಕೂಡಲೇ ಕೊಡಬೇಕು ಎನ್ನುತ್ತಾರೆ. ಆದರೆ ಹಣ ಸಂಗ್ರಹವಾಗಿರುವುದಿಲ್ಲ, ಆ ಮೇಲೆ ಕೊಡುತ್ತೇನೆ, ಟಿಕೆಟ್ ಮೇಲೆ ಬರೆದುಕೊಡುತ್ತೇವೆ ಎಂದರು ಕೇಳುವುದಿಲ್ಲ. ಇಲ್ಲ ನೀವು ಹಣ ತೆಗೆದುಕೊಳ್ಳಲು ಈ ರೀತಿ ಚಿಲ್ಲರೆ ಇದ್ದರು ಕೂಡ ಕೊಡುವುದಿಲ್ಲ ಎನ್ನುತ್ತಾರೆ. 
ನಿಜ ಹೇಳುತ್ತಾನೇ ಸಾರ್ ಇಲ್ಲಿಯವರೆಗೂ ನಾನು ಪ್ರಯಾಣಿಕರ ಹಣ ಪಡೆದಿಲ್ಲ. ನಾನೇ ಹೋಗಿ ಯಾರಿಗಾದರೂ ಚಿಲ್ಲರೆ ಕೊಡಬೇಕಾದರೆ ಕೇಳಿ ಕೊಡುತ್ತೇನೆ. ಕೆಲವರು ಟಿಕೆಟ್ ಪಡೆಯದೆ ಪ್ರಯಾಣಿಸಿ ಚೆಕಿಂಗ್ ಅವರ ಕೈಗೆ ಸಿಗುತ್ತಾರೆ. ನಮಗೂ ದಂಡ, ಸಾಲದಕ್ಕೆ ಇನ್ಕ್ರಿಮೆಂಟ್ ಕಟ್. ಎಷ್ಟೇ ಸಾರಿ ಕೂಗಿ ಕೇಳಿದರೂ ಕೆಲವರು ಟಿಕೆಟ್ ಪಡೆಯದೆ ಸಮಸ್ಯೆ ತಂದೊಡ್ಡುತ್ತಾರೆ. ಕೆಲವೊಮ್ಮೆ ಬಸ್ ನಲ್ಲಿ ಇರುವ ಪ್ರಯಾಣಿಕರನ್ನು ಸ್ವಲ್ಪ ಒಳಕ್ಕೆ ಹೋಗಿ ಬೇರೆಯವರು ಹತ್ತಬೇಕು ಎಂದರೆ ನಮ್ಮ ಮೇಲೆ ದಬಾಯಿಸುತ್ತೀಯಾ ಎಂದು ಜೋರು ಮಾಡುತ್ತಾರೆ. ನಿಲ್ದಾಣ ಇಲ್ಲದಿದ್ದರು ಬಸ್ ನಿಲ್ಲಿಸುವಂತೆ ಒತ್ತಾಯಿಸುತ್ತಾರೆ. ನಿಲ್ಲಿಸದೆ ಹೋದರೆ ಜಗಳ. ಕೆಲ ಕಂಡೆಕ್ಟರ್ ಗಳು ಕೆಟ್ಟವರಿರಬಹುದು. ಆದರೆ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ. 
8 ವರ್ಷಗಳ ನನ್ನ ಸರ್ವೀಸ್ ಲೈಪ್ ಸಾಕಾಗಿ ಹೋಗಿದೆ ಸಾರ್. ಒಂದು ದಿನ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಸಂಚಾರ ನಿಲ್ಲಿಸಿದರೆ ಸಮಾಜದಲ್ಲಿ ಏನಾಗುತ್ತದೆ, ಜನಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತದೆ ಎಂದು ಹೇಳಬೇಕಾಗಿಲ್ಲ. ಆದರೂ ಸರಕಾರಗಳು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯನ್ನು ಮನುಷ್ಯರಂತೆ ಕಾಣುವುದಿಲ್ಲ. ಸಮಾಜದಲ್ಲೂ ನಮ್ಮನ್ನು ಬೇಕಾಬಿಟ್ಟಿಯಾಗಿ ಕಾಣುತ್ತಾರೆ. ನಮ್ಮ ಸೇವೆ ಬಗ್ಗೆ ಯಾರಿಗೂ ಬೆಲೆ ಇಲ್ಲ. ಕಳೆದ 8 ವರ್ಷಗಳಿಂದ ನಿಗದಿತ ಸಮಯಕ್ಕೆ ಎಷ್ಟೋ ಜನ ಪ್ರಯಾಣಿಕರನ್ನು ಅವರ ಕಚೇರಿ, ಮನೆ, ಶಾಲಾ, ಕಾಲೇಜು ತಲುಪಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಬ್ಬರೇ ಒಬ್ಬರು ನಮಗೆ ಥ್ಯಾಂಕ್ಸ್ ಹೇಳಿಲ್ಲ. ನಮಗೆ ಪ್ರಯಾಣಿಕರಿಂದ ಬೇಕಿರುವುದು ಒಂದು ಥ್ಯಾಂಕ್ಸ್, ಅವರಿಂದ ಗೌರವ ಅಷ್ಟೇ. 
ನಾನು ಕೂಡ ಸ್ನಾತ ಕೋತ್ತರ ಪದವೀಧರ. 
ಆದರೆ ಕುಟುಂಬ ದ ಆರ್ಥಿಕ ಪರಿಸ್ಥಿತಿಯಿಂದ ಕಂಡೆಕ್ಟರ್ ಹುದ್ದೆ ಸಿಕ್ಕಿತೆಂದು ಸೇರಿದೆ. ನಿಜ ಹೇಳಬೇಕೆಂದರೆ ನಾನು ಪಿ.ಎಸ್.ಐ ಆಗಬೇಕೆಂದು ಕನಸು ಕಂಡವನು. ಎಷ್ಟೋ ಬಾರಿ ಈ ವೃತ್ತಿ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇದ್ದು ಬಿಡೋಣ ಎಂದರೆ ಊರಿನಲ್ಲಿ ಜಮೀನು ಕೂಡ ಇಲ್ಲ. ನನ್ನ ಕಟುಂಬಕ್ಕೆ ನಾನೇ ಆಧಾರ. ಮದುವೆಯಾಗಿ 3 ವರ್ಷವಾಗಿದೆ. ಈಗ ಕೆಲಸ ಬಿಡುತ್ತೇನೆ ಎಂದರೆ ಪತ್ನಿ ಒಪ್ಪುವುದಿಲ್ಲ. 
ಆದರೂ ಜೀವನದಲ್ಲಿ ಭರವಸೆಯಂತು ಕಳೆದುಕೊಂಡಿಲ್ಲ. ಏನೇ ಕಷ್ಟವಾದರೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಬೇಕು ಎಂಬ ನನ್ನ ಬಾಲ್ಯದ ಕನಸು ಈಗಲೂ ಕಾಡುತ್ತದೆ. ಇರಲಿ ಎಷ್ಟೇ ಕಷ್ಟಗಳು ಬರಲಿ, ಪಿ.ಎಸ್.ಐ ಆಗಬೇಕೆಂಬ ಆಸೆಗೆ ಅವು ಅಡ್ಡಿಬರಲಾರವು. ಅಷ್ಟಕ್ಕೂ ಪಿ.ಎಸ್.ಐ ಆಗಬೇಕು ಎನ್ನುವುದು ನನ್ನ ಕನಸಲ್ಲ, ಅದು ನನ್ನ ಪ್ರಾಣ ಎಂದರು. ಅವರಲ್ಲಿದ್ದ ಸಾಧಿಸುವ ಛಲ ಇಂದಲ್ಲಾ ನಾಳೆ ಎಸ್.ಐ ಆಗುವ ಲಕ್ಷಣವಿತ್ತು. ಅಷ್ಟರಲ್ಲಾಗಲೇ ಅನಂತಪುರ ಬಸ್ ನಿಲ್ದಾಣ ಬಂತು.  
ಒಬ್ಬರು ಹೇಳುತ್ತಾರೆ ಸಾರ್ ನಾನು 2 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಅಲ್ಲಿಂದಲೂ ಇಲ್ಲಿಯವರೆಗೂ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದೇನೆ. ವಿಧಿಯು ನನ್ನ ಜೀವನದಲ್ಲಿ ಚೆನ್ನಾಗಿ ಆಡಿದೆ ಎಂದು ಹೇಳಿದರು. ಮತ್ತೊಬ್ಬ ಮಹಿಳೆ ಹೇಳುತ್ತಾರೆ ನನ್ನ ಗಂಡ ವಿಪರಿತ ಕುಡುಕ, ಇಬ್ಬರು ಹೆಣ್ಣು ಮಕ್ಕಳು ಬೇರೆ ಇದ್ದಾರೆ. ನಾನು ಕೂಲಿ ಮಾಡಿ ಕುಟುಂಬ ಸಾಕಬೇಕು. ಮತ್ತೊಬ್ಬರು ಹೇಳುತ್ತಾರೆ ನಮ್ಮ ಅಣ್ಣ ಹಣದ ಆಸೆಗೆ ಬಿದ್ದು ಕುಡುಕನಿಗೆ ಅದರಲ್ಲೂ ಅದಾಗಲೇ ಎರಡು ಮದುವೆ ಆದವನಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ಮದುವೆ ಆದ ಕೆಲವೇ ತಿಂಗಳುಗಳಿಗೆ ಆತ ನನ್ನನ್ನು ಬಿಟ್ಟು ಹೋದ. ಒಬ್ಬ ಮಗನೊಂದಿಗೆ ಜೀವನ ಸಾಗಿಸುತ್ತಿದ್ದೇನೆ.
ಈಗೆ ಹಲವರು ತಮ್ಮದೇ ಆದ ನೋವುಗಳನ್ನು ಹೇಳಿಕೊಂಡ ಸಂದರ್ಭಗಳನ್ನು ನೋಡಿದ್ದೇನೆ. ಆದರು ಇವರ್ಯಾರು ಬದುಕಿನ ಮೇಲಿನ ಭರವಸೆ ಕಳೆದುಕೊಂಡವರಲ್ಲ. ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಕಂಡ ಕನಸನ್ನು ನನಸಾಗಿಸಲು ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ವಿನಯದಿಂದ ಸ್ವಾಗತಿಸಿ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ.  
ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಒಮ್ಮೆ ಹೀಗೆ ಹೇಳಿದ್ದರು, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳು ಬಂದಿಲ್ಲ, ಎಂದರೆ ನಾವು ಸಾಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ. ನಮಗೆ ಕಷ್ಟಗಳು ಬರುತ್ತಿವೆ ಎಂದರೆ ಅದರರ್ಥ ನೀವು ಯಾವುದೋ ಒಂದು ಸಾಧನೆ ಮಾಡಲು ಹೊರಟಿದ್ದೀರಾ ಎಂಬುವುದು ನಿಜ ಎಂದು ಬಹಳ ಅದ್ಬುತವಾಗಿ ಹೇಳಿದ್ದರು.
ಕನಸು ಕಾಣಿ, ಕನಸು ಕಾಣುವಲ್ಲೂ ಹಿಂಜರಿಕೆ ಬೇಡ. ಏಕೆಂದರೆ ಕನಸು ಕಾಣುವುದಕ್ಕೆ ಯಾವುದೇ ಸರಕಾರಗಳು ನೇರ ಅಥವಾ ಪರೋಕ್ಷ ತೆರಿಗೆಗಳು ಹಾಕುವುದಿಲ್ಲ. ನಮ್ಮ ಕನಸುಗಳು ಯಾವಾಗಲೂ ಉನ್ನತವಾಗಿರಲಿ. ಆದರೆ ಕನಸುಗಳನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯ, ಶಕ್ತಿ ನಾವೇ ಸಂಪಾದಿಸಿಕೊಳ್ಳಬೇಕು. 
ಒಂದಂತು ನಿಜ ನಮ್ಮ ಜೀವನದ ಕಷ್ಟಗಳು ಎಂದಿಗೂ ನಮ್ಮ ಕನಸಿಗೆ ಅಡ್ಡಿ ಬರಬಾರದು. ಕಷ್ಟಗಳನ್ನು ಮೀರಿ ಬದುಕು ಕಟ್ಟಿಕೊಂಡು ಕನಸುಗಳನ್ನು ನನಸಾಗಿಕೊಳ್ಳುವ ಧ್ಯೇಯ ನಮ್ಮದಾಗಿರಬೇಕು. ಕೇವಲ ಕನಸು ಕಾಣುತ್ತ ಸಾಗಿದರೆ ಏನು ಪ್ರಯೋಜನ, ಅದರ ಈಡೇರಿಕೆಗೆ ಅಪಾರ ಶ್ರಮ ಅಗತ್ಯ.
ಅಷ್ಟಕ್ಕೂ ನಿಮ್ಮ ಕನಸುಗಳು ಏನಂತಿರಾ.. ಅವುಗಳ ಬೆನ್ನತ್ತಿ ಹೊರಡಿ..