ಸೋಮವಾರ, ನವೆಂಬರ್ 26, 2018

ಸೋಷಿಯಲ್ ಮೀಡಿಯಾ "ಹೈಟೆಕ್", ಸಂಬಂಧಗಳು "ಕಟ್"

           ⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಮೊನ್ನೆ ನನ್ನ ಮೊಬೈಲ್ಗೊಂದು ವಾಟ್ಸಾಪ್ ಮೆಸೇಜ್ ಬಂತು. ಅದನ್ನು ಒಪೇನ್ ಮಾಡಿ ನೋಡಿದರೆ ನನ್ನ ಕಾಲೇಜು ಸ್ನೇಹಿತನ ಮದುವೆಯ ಆಹ್ವಾನ ಪತ್ರಿಕೆಯದು. ಆತನನ್ನು ಭೇಟಿಯಾಗಿ ಸುಮಾರು ವರ್ಷಗಳೇ ಕಳೆದಿತ್ತು. ಈಗ ಮದುವೆಗೆ ಬರುವಂತೆ ವಾಟ್ಸಾಪ್ ಮೆಸೇಜ್ ಹಾಕಿದ್ದ. ಕೂಡಲೇ ನನ್ನ ಮತ್ತಿಬ್ಬರ ಸ್ನೇಹಿತರಿಗೆ ಕರೆ ಮಾಡಿದರೆ, ಅವರು ಕೂಡ ನಮಗೂ ವಾಟ್ಸಾಪ್ ನಲ್ಲಿ ಮದುವೆಯ ಲಗ್ನ ಪತ್ರಿಕೆ ಬಂದಿದೆ ಎಂದರು.   
ಇಂದು ಯಾರಿಗೂ ಪುರುಸೊತ್ತು ಇರಲ್ಲ. ಒತ್ತಡ ಜೀವನದ ನಡುವೆ ಮನೆಗೆ ಬಂದು ಮದುವೆಯ ಆಹ್ವಾನ ಪತ್ರಿಕೆ ಕೊಡುವುದು ಕಷ್ಟ. ಕೊನೆ ಪಕ್ಷ ಮೊಬೈಲ್ ಗೊಂದು ಕರೆ ಮಾಡಿ ಹೇಳುವುದಾದರೂ ಬೇಡವೇ.. ವಾಟ್ಸಾಪ್ ನಲ್ಲಿ ಕಳುಹಿಸಿದ ಆಹ್ವಾನವನ್ನು ಸ್ವೀಕರಿಸಿ ಮದುವೆಗೆ  ಹೋಗುವುದೇ ಹೇಗೆ ಎಂಬ ತಳಮಳ.
ನಿಜ ಇಂದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಗೂಗಲ್ ಫ್ಲಸ್, ಸ್ಕೈಪ್, ಯ್ಯೂಟುಬ್, ಲಿಂಕ್ಡ್ ಇನ್, ಇನ್ಸ್ಟ್ರಾ ಗ್ರಾಮ್, ಮತ್ತಿತರವುಗಳಿಂದ ಮನುಷ್ಯನ ವರ್ತನೆ ಸಂಪೂರ್ಣವಾಗಿ ಬದಲಾಗುತ್ತಿದೆ. ಇಂದು ಸಾಮಾಜಿಕ ಮಾಧ್ಯಮಗಳಿಲ್ಲದ ಬದುಕನ್ನು ಊಹಿಸಿಕೊಳ್ಳಲು, ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. 
ಆತ ಶಿಕ್ಷಕ, ರೈತ, ವ್ಯಾಪಾರಿ, ರಾಜಕಾರಣಿ, ವಿದ್ಯಾರ್ಥಿ ಸೇರಿದಂತೆ ಯಾರೇ ಆಗಿರಲಿ, ಪ್ರತಿಯೊಬ್ಬರು ತಮಗೆ ಇಷ್ಟವಿದೆಯೋ, ಇಲ್ಲವೋ ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನ ನಿರ್ವಹಣೆ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳತ್ತ ಚಿತ್ತ ಹರಿಸುವುದು ಅನಿವಾರ್ಯತೆ ಎಂಬ ವಾತಾವರಣ ಕೆಲ ವರ್ಷಗಳಿಂದ ನಿರ್ಮಾಣವಾಗಿದೆ.  
ಒಮ್ಮೆ ನಾನು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಲು ರಸ್ತೆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಗ್ರಾಮದ ಮಾರ್ಗದ ಬಗ್ಗೆ ವಿಚಾರಿಸಲು ಕೆರೆಯ ಬಳಿಯೊಂದರಲ್ಲಿ ಕುರಿ ಮೇಯಿಸುತ್ತಿದ್ದ ಹುಡುಗನೊಬ್ಬನನ್ನು ಏನಪ್ಪ ಈ ರಸ್ತೆ ಎಲ್ಲಿಗೆ ಹೋಗುತ್ತದೆ ಎಂದಿದ್ದೆ ತಡ (ಆತ ಸ್ವಾಮಿ ನೀಬಾದ ನೀದಿ ಅರ್ಧಗಂಟನಿಂಕ ಮೊಬೈಲ್ ನೆಟ್ ವರ್ಕ್ ಲೇದು. ವಾಟ್ಸಾಪ್ ಮೆಸೇಜ್ ಚೇಸೆಕಿ ಕಾವಡಂಲೇದು ನೇನು ಎವರಕಿ ಚೆಪ್ಪಾಲಿ, ಗೂಗಲ್ ಮ್ಯಾಪ್ ಉಂದಿಕದಾ ಆನ್ ಚೇಯಿ ಎಂದ) ಆತನಿಗೆ ಕುರಿ ಮೇಯಿಸುವ ಚಿಂತೆಗಿಂತ ವಾಟ್ಸಾಪ್ ಮೆಸೇಜ್ ಮಾಡಲು ಸಾಧ್ಯವಾಗುತ್ತಿಲ್ಲವೇ ಎಂಬ ನೋವು ಹೆಚ್ಚಾಗಿತ್ತು. ಆಗ ನನಗೆ ಸಂಪೂರ್ಣವಾಗಿ ಅರ್ಥವಾಯಿತು ಈ ಸಾಮಾಜಿಕ ಮಾಧ್ಯಮಗಳ ಪ್ರಭಾವ ಮಾನವರ ಮೇರೆ ಎಷ್ಟರ ಮಟ್ಟಿಗೆ ಬೀರುತ್ತಿದೆ ಎಂದು..
ಅದು ನನ್ನ ಪಿ.ಯು ಕಾಲೇಜಿನ ದಿನಗಳು, ಆಗಿನ್ನು ಮೊಬೈಲ್ ಪೋನ್ಗಳ ಹವಾ ಇರಲಿಲ್ಲ. ಕೆಲವರ ಬಳಿ ಮಾತ್ರ ಮೊಬೈಲ್ ಇತ್ತು. ಇದ್ದವರು ಬಳಿಯು ನೋಕಿಯಾ 1100 ಪೋನ್ ಗಳೇ ಹೆಚ್ಚಿದ್ದ ಕಾಲವದು. ನನಗೆ ಪತ್ರಿಕೆ ಓದುವ ಹುಚ್ಚಿತ್ತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಕೋಲಾರ ದರ್ಶನ ಆವೃತ್ತಿಯಲ್ಲಿ ದೂರು ದುಮ್ಮಾನ ಎಂಬ ಅಂಕಣವೊಂದಿತ್ತು. ಅದರಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತಹ ಸಮಸ್ಯೆಗಳ ಬಗ್ಗೆ ಬರೆಯುವ ಅವಕಾಶವಿತ್ತು.   
ಒಂದು ದಿನ ಪೋಸ್ಟ್ ಆಫೀಸ್ಗೆ ಹೋಗಿ 2.50 ರೂ. ಕೊಟ್ಟು ಇನ್ ಲ್ಯಾಂಡ್ ಅಂಚೆ ಪತ್ರವನ್ನು ಖರೀದಿಸಿ ಶ್ರೀನಿವಾಸಪುರ ಪಟ್ಟಣದಲ್ಲಿ ಯಾವುದೇ ಉದ್ಯಾನವನಗಳು ಇರಲಿಲ್ಲ. ಉದ್ಯಾನವನವನ್ನು ಸಂಬಂಧಪಟ್ಟವರು ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಸಣ್ಣ ಲೇಖನವನ್ನು ಬರೆದು ಪೋಸ್ಟ್ ಡಬ್ಬಿಗೆ ಹಾಕಿದೆ. ಒಂದು ವಾರದ ನಂತರ ಅದೃಷ್ಟವೆಂಬಂತೆ, ದೂರುದುಮ್ಮಾನ ಅಂಕಣದಲ್ಲಿ ಲೇಖನವು ಪ್ರಕಟವೂ ಆಗಿತ್ತು. ಅದೇ ಉತ್ಸಾಹದಿಂದ ವಾರಕ್ಕೊಂದರಂತೆ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಇನ್ ಲ್ಯಾಂಡ್ ಲೇಟರ್ ನಲ್ಲಿ ಬರೆದು ಕಳುಹಿಸುತ್ತಿದ್ದೆ. ಈ ಮೊಬೈಲ್, ಇಮೇಲ್, ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ  ಲೇಟರ್ ಗಳನ್ನು ಬರೆಯುವ ಪರಿಪಾಠವೇ ನಿಂತಿದೆ.
ಆದರೆ ಯಾವುದಾದರೂ ಒಂದು ವಿಷಯದ ಬಗ್ಗೆ ಪತ್ರಿಕೆಗೆ 50 ಪೈಸೆಯ ಪೋಸ್ಟ್ ಕಾರ್ಡ್ ಅಥವಾ 2.50 ರೂ ಇನ್ ಲ್ಯಾಂಡ್ ಲೇಟರ್ ನಲ್ಲಿ ಲೇಖನ ಬರೆದು ವಾರ ಪೂರ್ತಿ ಕಾದು ನನ್ನ ಲೇಖನ ಪತ್ರಿಕೆಯಲ್ಲಿ ಪತ್ರಿಕೆಯಲ್ಲಿ ಪ್ರಕಟವಾಯಿತೋ, ಇಲ್ಲವೋ ಎಂದು ಕುತೂಹಲದಿಂದ ಪತ್ರಿಕೆಯ ಪುಟಗಳ ಮೇಲೆ ಕಣ್ಣಾಯಿಸುತ್ತಿದ್ದ ಅವಸ್ಮರಣೀಯ ದಿನಗಳನ್ನು ಈ ಸಾಮಾಜಿಕ ಮಾಧ್ಯಮಗಳು ಕಸಿದು ಬಿಟ್ಟಿವೆ. ಇಮೇಲ್ ಎಂಬ ಮೂರಕ್ಷರದ ಪದ ಲೇಟರ್ ಎಂಬ ಮೂರಕ್ಷರದ ಪದವನ್ನು ತಿಂದು ಬಿಟ್ಟಿದೆ. ಅಂಚೆ ಪತ್ರಗಳನ್ನು ಬರೆದವರಿಗೆ ಗೊತ್ತು ಅದರ ಜೊತೆಗಿನ ಅನುಬಂಧ ಎಂತಹವುದು ಅಂತಾ..
ಸಾಮಾನ್ಯವಾಗಿ ಬೆಳಗ್ಗೆ ಎದ್ದ ಕೂಡಲೇ ಎಲ್ಲರೂ ದೇವರ ಚಿತ್ರ ನೋಡಿ, ಇಂದಿನ ದಿನ ಯಾವುದೇ ಅಡ್ಡಿ, ಆತಂಕಗಳು ಬರದೆ ಇರಲಿ ಎಂದು ಪ್ರಾರ್ಥಿಸುತ್ತಾರೆ. ರಾತ್ರಿ ಮಲಗುವಾಗ ಯಾವುದಾದರೊಂದು ಇಷ್ಟವಾಗುವ ಅಂಕಣ ಬರಹ, ಕಥೆ, ಕಾದಂಬರಿ, ದಿನ, ವಾರ ಪತ್ರಿಕೆ ಓದುವ ಮೂಲಕ ನಿದ್ದೆಗೆ ಜಾರುವ ಪರಿಸ್ಥಿತಿ ಇತ್ತು. ಆದರೆ ಬಹುತೇಕರ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ಬೆಳ್ಳಂಬೆಳಗ್ಗೆ ನಿದ್ದೆಯಿಂದ ಎದ್ದೇಳುತ್ತಿದ್ದಂತೆ ವಾಟ್ಸಾಪ್ ನಲ್ಲಿ ಯಾರು ಗುಡ್ ಮಾರ್ನಿಂಗ್, ಕಾಫಿ ಆಯ್ತ, ಶುಭ ಮುಂಜಾನೆ, ಟಿಫಿನ್ ಆಯ್ತ ಎಂಬ ಸಂದೇಶಗಳನ್ನು ಯಾರು ಕಳುಹಿಸಿದ್ದಾರೆ ಎಂದು ಗಮನಹರಿಸುವ ವಾಡಿಕೆ ಬಹುತೇಕರದ್ದು. ಫೇಸ್ ಬುಕ್ ನಲ್ಲಿ ನನ್ನ ಚಿತ್ರಕ್ಕೆ ಎಷ್ಟು ಲೈಕ್, ಕಮೆಂಟ್ ಗಳು ಬಂದಿವೆ ಎಂಬ ಬಗ್ಗೆ ಫೇಸ್ ಬುಕ್ ಗೋಡೆ ತೆರೆದು ನೋಡಿದ ನಂತರವೇ ನೆನಪಿದ್ದರೆ ಮಾತ್ರ ಭಗವಂತನ ಸ್ಮರಣೆ. ಇಂದು ಬಹುತೇಕರು ದಿನದ ಹೆಚ್ಚು ಸಮಯವನ್ನು ಮೊಬೈಲ್, ಅಂತರ್ಜಾಲ, ಸೋಷಿಯಲ್ ಮೀಡಿಯಾ ಬಳಕೆಗಾಗಿಯೇ ಮೀಸಲಿಡುತ್ತಿರುವುದು ಸತ್ಯ.
ನನಗೆ ಪರಿಚಯಸ್ಥರ ಮನೆಗೆ ಒಮ್ಮೆ ಹೋಗಿದ್ದೆ. ಆ ಮನೆಯಲ್ಲಿ ಸಣ್ಣ ಮಗುವೊಂದಿತ್ತು. ಊಟ ಮಾಡಲು ಬಹಳ ಹಠ ಮಾಡುತ್ತಿತ್ತು. ಮಗುವಿನ ತಾಯಿ ಮೊಬೈಲ್ ನಲ್ಲಿ ಇಂಟರ್ ನೆಟ್ ಆನ್ ಮಾಡಿ ಯ್ಯೂಟುಬ್ ಓಪನ್ ಮಾಡಿ ಇಂಗ್ಲೀಷ್ ರೈಮಿಂಗ್ಸ್ ವಿಡಿಯೋಗಳನ್ನು ತೆರೆದು ಮಗುವಿನ ಕೈಗೆ ಕೊಟ್ಟ ಮರುಕ್ಷಣ ಆ ಮಗು ಅಳು ನಿಲ್ಲಿಸಿ, ಊಟ ತಿನ್ನಲು ಶುರು. 
ಸಾಮಾನ್ಯವಾಗಿ ಮಗು ಊಟ ಮಾಡಲು ಅಳುತ್ತಿದ್ದರೆ ತಾಯಿ ಏನೆನೋ ಕಥೆಗಳನ್ನು ಹೇಳಿ ಊಟ ಮಾಡಿಸಿದ ಸನ್ನಿವೇಶಗಳನ್ನು ನೋಡಿದ್ದೇವೆ. ಆದರೆ ಇಂದು ಜಸ್ಟ್ ಯ್ಯೂಟುಬ್ ಇದ್ದರೆ ಸಾಕು ಮಗುವಿನ ಅಳುವನ್ನು ನಿಲ್ಲಿಸಬಹುದು ಎಂದು ಪ್ರೂ ಆಗಿದೆ. ಅಬ್ಬಾ ಎಂಥಾ ಕಾಲ ಬಂತು..
ಇನ್ನು ವಾಟ್ಸಾಪ್ ಗ್ರೂಪ್ಗಳು ಬಂದ ಮೇಲೆಂತೂ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಹತ್ತು ಹಲವು ಗ್ರೂಪ್ ಗಳು. ಈ ಬಹುತೇಕ ಗ್ರೂಪ್ ಗಳಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಬಿಟ್ಟರೆ ಬೇರೆ ಸಂದೇಶಗಳು ಕಣ್ಣಿಗೆ ಕಾಣಿಸುವುದೇ ಇಲ್ಲ. ಕೆಲವು ಗ್ರೂಪ್ಗಳಂತು ಕೆಲವರ ವೈಯಕ್ತಿಕ ವಿಚಾರಗಳಿಗೆ ಮಾತ್ರ ಸೀಮಿತವಾಗಿ ಬಿಟ್ಟಿವೆ. ಇಂಟರ್ ನೆಟ್ ಆನ್ ಆಗುತ್ತಿದ್ದಂತೆ ವಾಟ್ಸಾಪ್ ಗ್ರೂಪ್ ಗಳಿಂದ ನೂರಾರು ಮೆಸೇಜ್, ಚಿತ್ರ, ವಿಡಿಯೋ ಸಂದೇಶಗಳು ಮೊಬೈಲ್ ಗ್ಯಾಲರಿಯಲ್ಲಿ ತುಂಬಿಕೊಳ್ಳುತ್ತವೆ. ಅವುಗಳನ್ನು ಓಪನ್ ಮಾಡಿ ಗಮನಿಸ ಬೇಕಾದರೂ ಸಾಕಷ್ಟು ಸಮಯ ಬೇಕಾಗುತ್ತದೆ. 
ನನಗೆ ಪರಿಚಯವಿರುವ ಅಧಿಕಾರಿಯೊಬ್ಬರು ಹೇಳುತ್ತಿದ್ದರು. ಮನೆಗೆ ಹೋಗುವುದಕ್ಕೆ ಬೇಸರ, ಯಾಕೆ ಎಂದ್ರೆ ಮಗ, ಮಗಳು, ಹೆಂಡತಿ ಮೂರು ಜನ ಮೊಬೈಲ್ ಪೋನ್ನಲ್ಲಿ ಬ್ಯೂಸಿ. ಪ್ರೀತಿಯಿಂದ ಮಾತನಾಡೋಣವೆಂದರೆ ಯಾರು ಕೈಗೆ ಸಿಗುವುದಿಲ್ಲ. ಅವರವರ ಲೋಕದಲ್ಲಿ ಮಗ್ನ. ಹಾಳಾದು ಈ ಮೊಬೈಲ್ ಪೋನ್ ನಮ್ಮ ಕುಟುಂಬ ಸಂಬಂಧಗಳನ್ನೇ ಮುರಿಯುತ್ತಿದೆ ಎಂದು ಬೇಸರ ಮಾಡಿಕೊಂಡರು. ನಿಜ ಈ ಮಾತು ಇಂದು ಬಹುತೇಕ ಕುಟುಂಬಗಳಿಗೆ ಅನ್ವಯವಾಗುತ್ತದೆ. ಕುಟುಂಬದವರು ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ, ಎಲ್ಲರೂ ಸೇರಿ ಖುಷಿಯಿಂದ ಕ್ಷಣಗಳನ್ನು ಕಳೆಯುವ ಅಪರೂಪದ ಕ್ಷಣಗಳನ್ನು ಈ ಮೊಬೈಲ್ ಪೋನ್, ಇಂಟರ್ ನೆಟ್, ಸಾಮಾಜಿಕ ಮಾಧ್ಯಮಗಳು ಕೈ ವಶ ಮಾಡಿಕೊಂಡಿವೆ. 
ಮೊದಲೇ ಇಂದು ಒತ್ತಡದ ಮಧ್ಯೆ ಎಲ್ಲರ ಜೀವನ ಸಾಗುತ್ತಿದೆ. ಅಷ್ಟೊ ಇಷ್ಟೊ ಸಮಯ ಸಿಕ್ಕರೆ ಅದನ್ನು ಸಾಮಾಜಿಕ ಮಾಧ್ಯಮಗಳು ಕಬಳಿಸುತ್ತಿವೆ. ಇನ್ನು ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಪುರುಸೊತ್ತು ಎಲ್ಲಿದೆ ಹೇಳಿ ?
ಒಂದು ಸಮೀಕ್ಷೆ ಪ್ರಕಾರ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ. ಅದರಲ್ಲೂ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮನೆ ಮತ್ತು ಕಾಲೇಜು ಎರಡು ಪರಿಸರದಲ್ಲೂ ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಬಳಸುವ ಪ್ರವೃತ್ತಿ ಬೆಳೆಯುತ್ತಿದೆ. ಊಟ ಮಾಡುವಾಗ, ಓದುವಾಗ, ಆತ್ಮೀಯರ ಜೊತೆ ಮಾತನಾಡುತ್ತಿದ್ದಾಗಲು ಫೇಸ್ ಬುಕ್, ವಾಟ್ಸಾಪ್ ನಂತಹ ಆಪ್ಯ್ ಗಳನ್ನು ಬಳಸದೆ ಇರಲು ಸಾಧ್ಯವಾಗದ ಮಟ್ಟಿಗೆ ಮನಸ್ಸು ಅತ್ತ ಸೆಳೆಯುತ್ತಿದೆ ಎಂದರೆ ಆ ಮಾಯಲೋಕಕ್ಕೆ ಯುವಸಮೂಹ ಎಷ್ಟರ ಮಟ್ಟಿಗೆ ಜೋತು ಬಿದ್ದಿದ್ದಾರೆ ಎಂದು ಅರ್ಥವಾಗುತ್ತದೆ.
ಯಾವುದೇ ಪರಿಚಯವಿಲ್ಲದಿದ್ದರು ಕೇವಲ ಸೋಷಿಯಲ್ ಮೀಡಿಯಾಗಳಲ್ಲೇ ಪರಿಚಯವಾದವರನ್ನು ಪ್ರೀತಿಸಿ, ಮೋಸ ಹೋದವರ ಸಂಖ್ಯೆ ಹೆಚ್ಚುತ್ತಿದ್ದೆ. ಫೇಸ್ ಬುಕ್, ವಾಟ್ಸಾಪ್ ನಂತಹ ಸಾಮಾಜಿಕ ಮಾಧ್ಯಮಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕ ಹೆಣ್ಣು ಮಕ್ಕಳ ಜೀವನದ ಜೊತೆ ಚೆಲ್ಲಾಟ ಹಾಡುವ ಪ್ರಕರಣಗಳು ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿರುವುದು ಗಮನಿಸಿದರೆ ಸಾಮಾಜಿಕ ಜಾಲ ತಾಣಗಳ ಸೈಡ್ ಎಫೆಕ್ಟ್ ಬಗ್ಗೆ ಕಲ್ಪಿಸಿಕೊಳ್ಳಬಹುದು.
ಹೌದು ಈ ಸೋಷಿಯಲ್ ಮೀಡಿಯಾಗಳಿಂದ ನೆಮ್ಮದಿ ಇಲ್ಲ ಎಂದು ಬೈಕೊಂಡರು ಅವುಗಳ ಅಪರಿಮಿತ ಸೇವೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲಾ ಸ್ನೇಹಿತರನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಈ ಸೋಶಿಯಲ್ ಮೀಡಿಯಾ ಮಾಡಿದೆ. ಒಮ್ಮೊಮ್ಮೆ ಅನ್ನಿಸುತ್ತದೆ ಈ ಫೇಸ್ ಬುಕ್ ನಂತಹ ಆಪ್ ಗಳು ಇಲ್ಲದಿದ್ದರೆ ಸ್ನೇಹಿತರ ಕಾರ್ಯ ಚಟುವಿಕೆಗಳು ನಮಗಾಗಲಿ, ನಮ್ಮ ಕಾರ್ಯಗಳಿಗೆ ಬಗ್ಗೆ ಗೊತ್ತಾಗುವ ಅವಕಾಶವೇ ಇರುತ್ತಿರಲಿಲ್ಲ. ನಮ್ಮ ಇಷ್ಟದ ಚಿತ್ರಗಳನ್ನು ಫೇಸ್ ಬುಕ್ ಗೋಡೆಗೆ ತಗುಲಿ ಹಾಕಿಬಿಟ್ಟರೆ ಶಾಶ್ವತವಾಗಿ ಅಲ್ಲೇ ಇರುತ್ತದೆ. ಯಾವಾಗ ಬೇಕಾದರೂ ಆ ಚಿತ್ರ, ವಿಡಿಯೋಗಳನ್ನು ಮರಳಿ ಪಡೆಯುವ ಅವಕಾಶ ಇರುತ್ತದೆ. ಕ್ಷಣಾರ್ಧದಲ್ಲಿ ಯಾರಿಗೆ ಬೇಕಾದರೂ ಮಾಹಿತಿ ತಲುಪಿಸುವ ಸುವರ್ಣಾವಕಾಶ ವಾಟ್ಸಾಪ್ ನಂತಹ ಮೆಸೆಂಜರ್ ಆಪ್ಗಳು ಅವಕಾಶ ಕೊಟ್ಟಿವೆ. 
ಇಂದು ಜನಸಾಮಾನ್ಯರಿಗೆ ಬೆರಳ ತುದಿಯಲ್ಲೇ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಸಿಕ್ಕಿದೆ. ಹಾಗೆಯೇ ಹಲವರ ವೃತ್ತಿ ಬದುಕಿನ ಬೆಳವಣಿಗೆಗೂ ಒಂದಲ್ಲಾ ಒಂದು ರೀತಿಯಲ್ಲೂ ಈ ಸೋಷಿಯಲ್ ಮೀಡಿಯಾ ಪೂರಕವಾಗಿ ನಿಂತಿದೆ. ಅವುಗಳಿಂದ ತುಂಬಾ ದೂರ ಸರಿದು ಬದುಕುವುದು ಕಷ್ಟ. ನಮ್ಮ ಸಮಸ್ಯೆಗಳ ಬಗ್ಗೆ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯಲು ಅವರ ಮೇಲೆ ಒತ್ತಡ ಹಾಕಲು ಸಾಮಾಜಿಕ ಮಾಧ್ಯಮಗಳು ತುಂಬಾ ಸಹಕಾರಿಯಾಗಿವೆ.
ಹಾಗಾಂತ ಇವುಗಳನ್ನು ತೀರ ಹತ್ತಿರಕ್ಕೆ ಸೇರಿಸಿಕೊಂಡರೆ ನೆಮ್ಮದಿ ಸಿಗಲ್ಲ. ಇರುವ ಏಕೈಕ ಮಾರ್ಗ ಎಷ್ಟೋ ಬೇಕೋ ಅಷ್ಟರ ಮಟ್ಟಿಗೆ ಮಾತ್ರ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಸೋಷಿಯಲ್ ಮೀಡಿಯಾ ನಮ್ಮ ಹವ್ಯಾಸಗಳಿಗೆ ಕೊಡಲಿ ಪೆಟ್ಟು ಕೊಡದ ಹಾಗೆ ಬದುಕು ಸಾಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ತೀರ ಸಾಮಾಜಿಕ ಮಾಧ್ಯಮಗಳಿಗೆ ಜೋತು ಬಿದ್ದರೆ ಮಾನಸಿಕವಾಗಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಮೃತವು ಅತಿಯಾದರೆ ವಿಷವಾಗುತ್ತದೆ ಎಂಬ ಮಾತಿನಂತೆ ಅಗತ್ಯ ಬಿದ್ದಾಗ ಮಾತ್ರ ಅವುಗಳನ್ನು ಬಳಕೆ ಮಾಡಿಕೊಳ್ಳುವುದು ಒಳಿತು.
ಅದೆನೇ ಇರಲಿ ಕುಟುಂಬ, ಸ್ನೇಹಿತರು, ಸಂಬಂಧಿಕರ ಜೊತೆಗಿನ ಬಾಂಧವ್ಯ, ಆತ್ಮೀಯತೆಗೆ ಅಡ್ಡಿಯಾಗದ ರೀತಿಯಲ್ಲಿ ಸಾಮಾಜಿಕ ಜಾಲ ತಾಣಗಳ ಬಳಕೆಯಿಂದ ಯಾವುದೇ ನಷ್ಟವಿಲ್ಲ. 
ಈಗೆ ಯಾರು ಹೇಳುತ್ತಿದ್ದರು ಒಬ್ಬ ಹುಡುಗಿ ತಮ್ಮ ಮನೆಯವರು ತೋರಿಸಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಳು. ಆಕೆ ಕೊಟ್ಟ ಕಾರಣ ಆತನಿಗೆ ಫೇಸ್ ಬುಕ್ ಅಕೌಂಟ್ ಇಲ್ಲವೆಂದು. ಅದೆಕ್ಕೆ ಹೇಳುವುದು ಇದು ಹೈಟೆಕ್ ಯುಗ. ಆದರೆ ಸಂಬಂಧಗಳು ಮಾತ್ರ ಈ ಹೈಟೆಕ್ ಯುಗದಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.

ಸೋಮವಾರ, ನವೆಂಬರ್ 5, 2018

ಹೃದಯವನ್ನೇ ಕರಗಿಸುವ "ಶಿಕ್ಷಕ ವೃತ್ತಿ"..

           ⏯ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
     
ಮೊನ್ನೆ ಸರಕಾರಿ ಶಾಲೆಯೊಂದಕ್ಕೆ ಹೋಗಿದ್ದೆ. ಅಲ್ಲಿನ ವಿದ್ಯಾರ್ಥಿಗಳ ಜೊತೆ ಹಾಗೆ ಮಾತನಾಡುತ್ತಿದ್ದಾಗ ಅದರಲ್ಲಿ ಒಬ್ಬ ನಾನು ದೊಡ್ಡವನಾದ ಮೇಲೆ ಶಿಕ್ಷಕನಾಗುತ್ತೇನೆ ಎಂದು ತನ್ನ ಮನದಾಳದ ಅಭಿಪ್ರಾಯವನ್ನು ಹಂಚಿಕೊಂಡ. ನನಗೂ ಆಶ್ಚರ್ಯವಾಗಿದ್ದು, ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ತಾನು ವೈದ್ಯ, ಇಂಜನಿಯರ್, ವಿಜ್ಞಾನಿ, ಐ.ಎ.ಎಸ್ ಅಧಿಕಾರಿ ಆಗಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು. ಆದರೆ ಈತ ಮಾತ್ರ ಶಿಕ್ಷಕ ವೃತ್ತಿ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದ.
ಗಮನಾರ್ಹ ಅಂಶವೆಂದರೆ ಸಾಕಷ್ಟು ಜನ ಶಿಕ್ಷಕರಾಗಲು ಇಷ್ಟಪಡುವುದಿಲ್ಲ, ಬಹಳ ಸೀಮಿತ ಜನ ಮಾತ್ರ ಶಿಕ್ಷಕ ವೃತ್ತಿಯ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ಕಾರಣ ಶಿಕ್ಷಕ ವೃತ್ತಿಯಲ್ಲಿ ಸಿಗುವ ಕಡಿಮೆ ಸಂಬಳ ಮತ್ತು ಆರ್ಥಿಕವಾಗಿ ಸದೃಡರಾಗುವುದು ಕಷ್ಟ ಹಾಗೂ ವಿದ್ಯಾರ್ಥಿಗಳನ್ನು  ನಿಭಾಯಿಸುವುದು ಸುಲಭವಲ್ಲ ಎಂಬ ಭಾವನೆಯಿಂದ ಈ ವೃತ್ತಿಯ ಬಗ್ಗೆ ಹಲವರಿಗೆ ಬೇಸರವು ಇದೆ. ಸಮಾಜದಲ್ಲಿ ಶಿಕ್ಷಕ ಎಂದರೆ ಬಡವ ಎಂಬ ಅಭಿಪ್ರಾಯ ಇಂದಿಗೂ ಇದೆ. ಯುಜಿಸಿ ವೇತನ ಪಡೆಯುವ ಉಪನ್ಯಾಸಕರನ್ನು ಹೊರತುಪಡಿಸಿ ಪ್ರಾಥಮಿಕ, ಫ್ರೌಡ ಶಾಲೆಯ ಶಿಕ್ಷಕರ ಸಂಬಳಗಳು ಇವತ್ತಿನ ಹಣದುಬ್ಬರದ ಮಧ್ಯೆ ಹೆಚ್ಚೇನಲ್ಲ.
ಶಾಲೆಯ ಆ ವಿದ್ಯಾರ್ಥಿಯು ನಾನು ಶಿಕ್ಷಕನಾಗಬೇಕು ಎಂದು ಹೇಳಿದ ಮರುಕ್ಷಣ ನನ್ನ ಮನಸ್ಸಲ್ಲಿ ಹಲವು ಅಂಶಗಳು ಹಾದು ಹೋದವು. ನನ್ನ ಜೀವನದ ಭವಿಷ್ಯವನ್ನೇ ಬದಲಿಸಿದ್ದು ಒಬ್ಬ ಶಿಕ್ಷಕಿ. ನನ್ನ ಜೀವಮಾನಡಿ ಸಾಕಷ್ಟು ಶಿಕ್ಷಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಪದವಿ ಓದುವಾಗ ನಮ್ಮ ಕಾಲೇಜಿನ ಆಂಗ್ಲ ಉಪನ್ಯಾಸಕಿಯಾಗಿದ್ದ ಚಂದ್ರ ಸೌಂದರಾಜ್ ಮೇಡಂ ಅವರು ನನ್ನ ಜೀವನದ ದಿಕ್ಕನ್ನೇ ಬದಲಿಸಿದರು. ಕಾರಣ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಪದವಿ ತರಗತಿಯ ಇಂಗ್ಲೀಷ್ ಸಾಹಿತ್ಯದ ಕೆಲ ಅಧ್ಯಾಯಗಳು ಅರ್ಥವಾಗುತ್ತಿರಲಿಲ್ಲ. 
ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಕೊನೆಗೆ ನಮ್ಮ ತರಗತಿಯ ಕೆಲ ಸ್ನೇಹಿತರು ಮೇಡಂ ಬಳಿಗೆ ಹೋಗಿ ಇಂಗ್ಲೀಷ್ ಸಾಹಿತ್ಯದ ವಿಷಯದಲ್ಲಿ ನಮಗಾಗುತ್ತಿರುವ ಸಮಸ್ಯೆಯ ಬಗ್ಗೆ ಹೇಳಿದಾಗ ಚಂದ್ರ ಮೇಡಂ ಅವರು ನಮ್ಮ ಕಷ್ಟವನ್ನು ಆಲಿಸಿ, ರಜೆ ದಿನಗಳಂದು ಹಾಗೂ ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯು ತಮ್ಮ ಮನೆಗೆ ನಮ್ಮನ್ನು ಕರೆಸಿಕೊಂಡು ಇಂಗ್ಲೀಷ್ ಸಾಹಿತ್ಯ ವಿಷಯವನ್ನು ಭೋದಿಸಿ, ಅರ್ಥ ಮಾಡಿಸುತ್ತಿದ್ದರು. 
ಅದಾಗಲೇ ಮೇಡಂ ಅವರಿಗೆ ನಿವೃತ್ತಿಯ ವಯಸ್ಸಾಗಿತ್ತು, ಆದರೂ ತಲೆಕೆಡಿಸಿಕೊಳ್ಳದೇ ನಮಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ನಮ್ಮ ಭವಿಷ್ಯಕ್ಕೆ ದಾರಿ ತೋರಿಸಿದರು. ಮನೆಗೆ ಪಾಠ ಮಾಡಿಸಿಕೊಳ್ಳಲು ಹೋದಾಗಲೆಲ್ಲ ತಪ್ಪದೇ ಮನೆಯಲ್ಲಿ ಮಾಡಿದ್ದ ಊಟ, ತಿಂಡಿಯನ್ನು ನಮಗೂ ಬಡಿಸುವ ಮೂಲಕ ಮಾತೃ ವಾತ್ಸಾಲ್ಯವನ್ನು ಮೆರೆಯುತ್ತಿದ್ದರು. ನನ್ನ ಜೀವನದಲ್ಲಿ ಎಂದು ಚಂದ್ರ ಸೌಂದರಾಜ್ ಮೇಡಂ ಅವರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಹಲವು ಶಿಕ್ಷಕರು ಎಷ್ಟೋ ವಿದ್ಯಾರ್ಥಿಗಳ ಹಣೆಬರಹವನ್ನೇ ಬದಲಿಸಿದ್ದಾರೆ. ಹಲವರ ಬಾಳಿಗೆ ಬೆಳಕಾದ ಶಿಕ್ಷಕರ ಸೇವೆ ಅವಸ್ಮರಣೀಯ.
ನನಗೆ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಪ್ರೀತಿಯಿದೆ. ಕಾರಣ ನನ್ನ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದೆ ಇದೇ ತರಬೇತುದಾರ (ಶಿಕ್ಷಕ) ವೃತ್ತಿ. ಇಂದು ನಾನು ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತುದಾರ (ಶಿಕ್ಷಕ) ನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ವೃತ್ತಿಗೆ ಬಂದು 2 ವರ್ಷಗಳಾಗಿವೆ ಅಷ್ಟೇ. ಆದರೆ ಈ ಶಿಕ್ಷಕ ವೃತ್ತಿಯ ಕಲಿಸಿದ ಪಾಠವು ಜೀವನದ ಉದ್ದಕ್ಕೂ ಕಲಿಯುವಂತದ್ದು.
ನನ್ನ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಓದಿದ್ದು ಸರಕಾರಿ ಶಾಲಾ-ಕಾಲೇಜು (ಎರಡು ವರ್ಷ ಬಿಟ್ಟು). ನಾನು ಬೆಳೆದ ಪರಿಸರ ಕಾಣವೋ ಅಥವಾ ನನ್ನ ವ್ಯಕ್ತಿತ್ವವೇ ಆಗಿತ್ತೋ ಗೊತ್ತಿಲ್ಲ. ನಾನು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾಗ ಇದ್ದದ್ದು ಮಾತ್ರ ಬೆರಳಣಿಕೆಯಷ್ಟು ಸ್ನೇಹಿತರು. ಸ್ನೇಹಿತರ ಜೊತೆಗೆ ಸೇರುತ್ತಿದ್ದದೆ ತುಂಬಾ ವಿರಳ, ಶಾಲಾ ಬಿಟ್ಟರೆ ನೇರವಾಗಿ ಮನೆಗೆ ಹೋಗಿ ಸೇರುತ್ತಿದ್ದೆ.  ಶಾಲೆಯಲ್ಲೂ ಸ್ನೇಹಿತರ ಜೊತೆ ಮಾತನಾಡುತ್ತಿದ್ದು ಕಡಿಮೆ. 
ನನಗೂ ಇನ್ನೂ ನೆನಪಿದೆ ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತನೊಬ್ಬ ನಿನ್ನ ಕಾಲಿಗೆ ಬೀಳುತ್ತೇನೆ, ದಯಮಾಡಿ ಮಾತಾಡಪ್ಪ, ಪಕ್ಕದಲ್ಲೇ ಕೂರುತ್ತಿಯಾ ಮಾತಾಡದೇ ಸುಮ್ಮನೆ ಕೂತಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದ. ಎಲ್ಲಾ ಸ್ನೇಹಿತರೂ ಕಾಲೇಜಿಗೆ ರಜೆ ಇದ್ದಾಗ ಒಟ್ಟಿಗೆ ಸೇರಿ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದರೆ ನಾನು ಮನೆಯಲ್ಲಿಯೇ ಕಾಲ ಕಳೆಯುತ್ತಿದೆ.
ಶಿಕ್ಷಕ ವೃತ್ತಿಯಲ್ಲಿರುವವರಿಗೆ ಸಾಕಷ್ಟು ಅವಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ಹೆಚ್ಚು ಜನರನ್ನು ಬೇಟಿಯಾಗುವ, ಅವರ ಆತ್ಮೀಯತೆಯನ್ನು ಸಂಪಾದಿಸಿಕೊಳ್ಳುವ ವೃತ್ತಿಯಾವುದಾದರೂ ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ. ನಾನು ತರಬೇತುದಾರನಾದ ನಂತರ ಹಲವರಿಗೆ ಪಾಠಗಳನ್ನು ಭೋದಿಸುವ ಸದಾವಕಾಶ ಸಿಕ್ಕಿದೆ. ಎಷ್ಟೋ ಜನರ ಆತ್ಮೀಯತೆ, ಪ್ರೀತಿಯನ್ನು ಗಳಿಸಿಕೊಳ್ಳಲು ಕಾರಣವಾಗಿದ್ದೇ ಇದೇ ಶಿಕ್ಷಕ ವೃತ್ತಿ. ವಿಪರ್ಯಾಸವೆಂದರೆ ನಾನೆಂದು ಶಾಲಾ-ಕಾಲೇಜುಗಳಲ್ಲಿ ನನ್ನ ಸಹಪಾಠಿ ಹುಡುಗಿಯರನ್ನು ಮಾತನಾಡಿಸುತ್ತಿರಲಿಲ್ಲ. ಹೇಳಿಕೊಳ್ಳಲು ಕೂಡ ಕಾಲೇಜಿನಲ್ಲಿ ಒಬ್ಬ ಮಹಿಳಾ ಸ್ನೇಹಿತರೂ ಇರಲಿಲ್ಲ. ಕಾರಣ ನಾನು ಮುಜುಗರದ ಮನುಷ್ಯ. 
ಆದರೆ ನಾನು ತರಬೇತುದಾರ ವೃತ್ತಿಗೆ ಸೇರಿದ ನಂತರ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇಂದು ಚಿಕ್ಕವರು, ದೊಡ್ಡವರೆಂದು ಪರಿಗಣಿಸದೆ ಎಲ್ಲರೊಂದಿಗೆ ಬೆರೆಯುವ, ಅವರ ಆತ್ಮೀಯತೆ ಸಂಪಾದಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿದ್ದು ಟೀಚರ್ ವೃತ್ತಿ.
ನಮಗೆ ಸಂಬಂಧಿಕರು ಕಡಿಮೆ. ಇದ್ದವರೊಂದಿಗೆ ಮಾತನಾಡುವುದು ಇನ್ನು ಕಡಿಮೆ. ಆದರೆ ಸಂಬಂಧಿಕರಿಗಿಂತ ಹೆಚ್ಚು ಆತ್ಮೀಯರನ್ನು ಗಳಿಸಿಕೊಟ್ಟಿದೆ. ಕಳೆದ ನಮ್ಮ ತರಬೇತಿ ಸಂಸ್ಥೆಗೆ ಬಂದ ಹಲವು  ಶಿಬಿರಾರ್ಥಿಗಳು ನನ್ನ ಆತ್ಮೀಯ ಸ್ನೇಹಿತರಾಗಿಯೂ ಆಗಿದ್ದಾರೆ. ಇನ್ನು ತರಬೇತಿ ಸಂಸ್ಥೆಗೆ ಬರುವ ಕೆಲ ಶಿಬಿರಾರ್ಥಿಗಳ ಬದ್ದತೆ, ಪ್ರಾಮಾಣಿಕತೆ, ಶ್ರಮ ವಹಿಸಿ ಕಾರ್ಯನಿರ್ವಹಿಸುವ ವಿಧಾನ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಸೇರಿದಂತೆ ಮತ್ತಿತರೆ ಅವರಲ್ಲಿನ ಕೌಶಲ್ಯವು ನನಗೂ ಆದರ್ಶವಾಗಿದೆ. 
ಹಲವು ಬಾರಿ ನಮ್ಮ ಶಿಬಿರಾರ್ಥಿಗಳು ಸ್ವ ಉದ್ಯೋಗ ಮಾಡುತ್ತಿದ್ದಾರೋ, ಇಲ್ಲವೋ ಎಂದು ವೀಕ್ಷಿಸಲು ಅವರ ಗ್ರಾಮಗಳಿಗೆ ಹೋದಾಗ ಅವರು ತೋರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ತರಬೇತಿ ಸಂಸ್ಥೆಯಲ್ಲಿ 6 ರಿಂದ 45 ದಿನಗಳ ಸೀಮಿತವಾದ ಸ್ವ ಉದ್ಯೋಗಧಾರಿತ ತರಬೇತಿಗಳು ನೀಡುತ್ತೇವೆ. ಇಷ್ಟು ಸೀಮಿತ ಅವಧಿಗೆ ಬಂದು ಹೋಗುವ  ನಾವು ಅವರ ಊರಿಗೆ ಹೋದಾಗ ತೋರುವ ಆತ್ಮೀಯತೆಗೆ ಎಷ್ಟೋ ಬಾರಿ ಕಣ್ಣು ತೇವವಾದ ಸಂದರ್ಭಗಳು ಇವೆ. ಬೇಡ ಬೇಡವೆಂದರೂ ಎಷ್ಟೋ ಜನರು ಕಾಫಿ, ಟೀ ತಂದು ಕೊಡುತ್ತಾರೆ. ಮೊನ್ನೆ ಬಂಗಾರಪೇಟೆ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದುಕೊಂಡಿರುವ ಕುಗ್ರಾಮಕ್ಕೆ ಹೋದಾಗ ಅಲ್ಲಿನ ಶಿಬಿರಾರ್ಥಿಗಳು ತೋಟಕ್ಕೆ ಹೋಗಿ ಎಳೆನೀರು ತಂದು ಕೊಟ್ಟು ತೋರಿದ ಕಾಳಜಿ ನನ್ನ ಜೀವನದಲ್ಲಿ ಹೇಗೆ ಮರೆಯಲು ಸಾಧ್ಯ. 
ಅವರು ಏನು ಕೊಡುತ್ತಾರೆ ಎನ್ನುವುದಕ್ಕಿಂತ ಕೊಡಬೇಕೆಂಬ ಮನಸ್ಸಿದೆಯಲ್ಲ ಆ ಅಂಶ ನನ್ನ ಮನಸ್ಸನ್ನು ಕರಗಿಸಿದೆ. ದೂರವಾಣಿ ಕರೆ ಹಾಗೂ ಎಲ್ಲಾದರೂ ಸಿಕ್ಕಾಗ ಹೇಗಿದ್ದೀರಾ ಸಾರ್, ತಪ್ಪದೇ ನೀವು ನಮ್ಮೂರಿಗೆ ಹಬ್ಬಕ್ಕೆ ಬರಲೇ ಬೇಕು ಎಂದು ಪ್ರೀತಿಯಿಂದ ಕರೆಯುವವರ ಅಭಿಮಾನದ ಮುಂದೆ ಎಲ್ಲವೂ ಶೂನ್ಯ. 
ಸಾರ್ ನೀವೂ ಯಾವಾಗಲೂ ನಗುತ್ತಲೇ ಇರುತ್ತೀರಾ, ನಿಮ್ಮ ಕಷ್ಟಗಳು ಇಲ್ಲವೇ ಎಂದು
ಶಿಬಿರಾರ್ಥಿಯೊಬ್ಬ ಪ್ರಶ್ನೆ ಕೇಳಿದ್ದ. ನಿಜ ಹೇಳಬೇಕೆಂದರೆ ಕಷ್ಟಗಳು ಇಲ್ಲದಿರುವ ಮನುಷ್ಯ ಸಿಗಲು ಸಾಧ್ಯವಿಲ್ಲ. ಅದೇನೋ ಜನರನ್ನು ನೋಡಿದಾಗ ಖುಷಿಯಿಂದ ಮಾತನಾಡಿಸಬೇಕೆನ್ನಿಸುತ್ತದೆ. ಮೊನ್ನೆ ಸಾರ್ ನಿಮಗೆ ತಾಳ್ಮೆ ಜಾಸ್ತಿ, ನಗುತ್ತಿದ್ದರೆ ಇನ್ನು ಚೆನ್ನಾಗಿರುತ್ತೀರಾಎಂದು  ಶಿಬಿರಾರ್ಥಿಯೊಬ್ಬ ಅನಿಸಿಕೆ ಖುಷಿ ನೀಡದಿರಲು ಸಾಧ್ಯವೇ..
ರಾಜ್ಯದ ಬೇರೆ ಜಿಲ್ಲೆಯ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನನ್ನ ಕೆಲ ಸಹೋದ್ಯೋಗಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ನಾವು ಶಿಬಿರಾರ್ಥಿಗಳನ್ನು ಹತೋಟಿಯಲ್ಲಿಡಬೇಕು. ನಾವು ಎದುರುಗಡೆ ಹೋದರೆ ಭಯ ಪಡಬೇಕು. ನಮ್ಮ ಬಗ್ಗೆ ಭಯವಿಲ್ಲದಿದ್ದರೆ ತರಗತಿಯಲ್ಲಿ ಪಾಠ ಕೇಳುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಆದರೆ ನಾನು ಶಿಬಿರಾರ್ಥಿಗಳನ್ನು ಭಯದಿಂದ ಹಿಡಿತಕ್ಕೆ ಹಿಟ್ಟುಕೊಳ್ಳಲು ಇಷ್ಟವಿಲ್ಲ. ಭಯದ ಬದಲಾಗಿ ಪ್ರೀತಿ, ವಾತ್ಸಾಲ್ಯ, ವಿಶ್ವಾಸದಿಂದ ಶಿಬಿರಾರ್ಥಿಗಳನ್ನು ಸೆಳೆಯಬೇಕೆಂಬುವುದು ನನ್ನ ನಿಲುವು. 
ನನ್ನ ಜೀವನದಲ್ಲಿ ದೇವರು ಕೊಟ್ಟ ಬಹುದೊಡ್ಡ ಕೊಡುಗೆ, ಅದೃಷ್ಟ ಎಂದರೆ ಈ ಜನ್ಮದಲ್ಲಿ ಶಿಕ್ಷಕ (ತರಬೇತುದಾರ) ವೃತ್ತಿಯಲ್ಲಿ ಅದರಲ್ಲೂ ಜನಸಾಮಾನ್ಯರ ನಡುವೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದು. ಜನರ ನಡುವೆ ಬೆರೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಕೆಲವರಿಗೆ ಮಾತ್ರ ಸಿಗುತ್ತದೆ. ಸಾವಿರಾರು ಕೋಟಿ ಕೊಟ್ಟರು ಜನರ ನಡುವೆ ಕಳೆದ ಸಂತೋಷ ಕ್ಷಣಗಳನ್ನು ಪಡೆಯಲು ಸಾಧ್ಯವಿಲ್ಲ.
ಒಂದಂತು ನಿಜ ಶಿಬಿರಾರ್ಥಿಗಳು ತರಬೇತಿ ಮುಗಿಸಿ ಹೊರಟಾಗ ನನ್ನ ಮನಸ್ಸಿಗೆ ನೋವಾಗುತ್ತದೆ. ಅವರಿದ್ದದ್ದು ಕೇವಲ ಕೆಲವೇ ದಿನಗಳಾದರೂ ಅವರ ಆತ್ಮೀಯತೆ ಅಷ್ಟೊಂದು ಸೆಳೆಯುತ್ತದೆ. ಈ ವೃತ್ತಿಗೆ ಬಂದ ನಂತರ ನನ್ನ ಹೃದಯ ಮತ್ತಷ್ಟು ಮೃದುವಾಗಿದೆ. ನಮ್ಮ ಶಿಬಿರಾರ್ಥಿಗಳಿಂದ ನನಗೆ ಜೀವನದಲ್ಲಿ ಸಂತೋಷ ಸಿಗುವುದರ ಜೊತೆಗೆ ಮತ್ತಷ್ಟು ಸಾಧಿಸುವ ಛಲ ಬಂದಿದೆ. ನನ್ನ ಶಿಬಿರಾರ್ಥಿಗಳಿಂದ ನಾನು ಬದುಕಿನ ಪಾಠವನ್ನು ಕಲಿತಿದ್ದೇನೆ. ಅವರ ಖುಣ ನನ್ನ ಮೇಲಿದೆ. ಆದ್ದರಿಂದಲೇ ಯಾರೇ ಎಲ್ಲೇ ಸಿಕ್ಕರೂ ಅವರ ಜೊತೆ ಕಾಫಿ ಕುಡಿದು ಸಾಧ್ಯವಾದರೆ ಊಟ ಮಾಡಿ ಆತ್ಮೀಯತೆಯಿಂದ ಮಾತಾಡಿ ಅವರು ಕೊಟ್ಟ ಸಂತೋಷವನ್ನು ಮರಳಿ ಕೊಡುವ ಕೆಲಸ ಮಾಡುತ್ತಿದ್ದೇನೆ.
ಅಂದರೆ ಹೃದಯವನ್ನು ಕರಗಿಸುವ ಶಕ್ತಿ ಈ ಶಿಕ್ಷಕ ವೃತ್ತಿಗಿದೆ. ಅಂತಹ ಅಪರೂಪದ ಅವಕಾಶವನ್ನು ಮಾಡಿಕೊಟ್ಟ ಆ ಭಗವಂತನಿಗೆ ಎಷ್ಟೇ ಥ್ಯಾಂಕ್ಸ್ ಹೇಳಿದರೂ ಕಡಿಮೆ.
ನಾನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಕೆಲ ಅಧ್ಯಾಪಕರು ತರಗತಿಗೆ ಸಾಕಷ್ಟು ಬಾರಿ ವಿನಾ ಕಾರಣ ಗೈರಾಗುತ್ತಿದ್ದರು. ಲಕ್ಷ ಲಕ್ಷ ಸಂಬಳ ಪಡೆದರು ತರಗತಿಯತ್ತ ಸುಳಿವೇ ಇರುತ್ತಿರಲಿಲ್ಲ. ನಾನು ಗಮನಿಸಿದಂಗೆ ಎಷ್ಟೋ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆ ಬಿಟ್ಟು ಚೀಟಿ ವ್ಯವಹಾರ, ತಾ.ಪಂ, ಜಿ.ಪಂ, ಶಿಕ್ಷಣ ಸಂಘಟನೆಗಳಲ್ಲೇ ಠಿಕಾಣಿ ಹಾಕುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಬಗ್ಗೆ ಆಲೋಚಿಸುವುದೇ ಇಲ್ಲ.
ಈ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಎಷ್ಟೋ ಜನರ ಪ್ರೀತಿಯನ್ನುಗಳಿಸಬಹುದು. ಎಷ್ಟೋ ಜನರ ಆತ್ಮೀಯತೆಯನ್ನುಗಳಿಸಿ ಕೊಳ್ಳಲು ಸಮಾಜದಲ್ಲಿ ಗೌರವ ಸಂಪಾದಿಸಿಕೊಳ್ಳಲು ಈ ವೃತ್ತಿಯು ಪೂರಕವಾಗಿದೆ. ಆದರೆ ಶಿಕ್ಷಕ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕಷ್ಟೇ. 
ದೇಶದಲ್ಲಿನ ಮಕ್ಕಳು, ಯುವಕರಿಗೆ ಮಾರ್ಗದರ್ಶಕರಾಗಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಬಹಳ ಶ್ರದ್ದೆಯಿಂದ ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಅಸಂಖ್ಯಾತ ಗುರುಗಳಿಗೆ ನನ್ನದೊಂದು ಸಲಾಂ. ದೇಶದ ಹಾದಿ ತಪ್ಪದೆ ನಡೆಯಬೇಕಾದರೆ ಶಿಕ್ಷಕನ ಪಾತ್ರ ಬಹುಮುಖ್ಯ.