ಬುಧವಾರ, ಅಕ್ಟೋಬರ್ 17, 2018

"ಲೀಡರ್" ಎಂಬ ಮೂರಕ್ಷರದ "ಶಕ್ತಿ"....

            ⏭ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಅದು ನನ್ನ ಹೈಸ್ಕೂಲ್ ದಿನಗಳು. ದಿನ ರಾತ್ರಿ ಊಟ ಮಾಡಿದ ನಂತರ ನಾವು ವಾಸವಿದ್ದ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗುತ್ತಿದೆ. ಅಲ್ಲಿ ಹಾಕುತ್ತಿದ್ದ ರಾಜಕೀಯ ಪಕ್ಷಗಳ ನಾಯಕರ ಫ್ಲೆಕ್ಸ್, ಕಟೌಟ್ ಗಳನ್ನು ಬಹಳ ಕುತೂಹಲದಿಂದ ವೀಕ್ಷಿಸಿ, ಅದರಲ್ಲಿನ ಅಂಶಗಳನ್ನು ಓದುವ ಚಟವಿತ್ತು. 
ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಕಟೌಟ್, ಬ್ಯಾನರ್, ಭಿತ್ತಿಪತ್ರಗಳ ಸದ್ದು ಹೆಚ್ಚಾಗಿಯೇ ಇರುತ್ತಿ ತ್ತು.ಅಭ್ಯರ್ಥಿಗಳು ಹಂಚು ವ ಕರಪತ್ರಗಳು ರಸ್ತೆಯಲ್ಲಿ ಎಲ್ಲಾದರೂ ಸಿಕ್ಕಿದರೆ ಅದನ್ನು ಕೈಗೆತ್ತಿಕೊಂಡು ಓದುವ ಪರಿಪಾಠವಿತ್ತು. ಎಲ್ಲಾ ಪಕ್ಷಗಳ ಕರಪತ್ರಗಳನ್ನು ಸಂಗ್ರಹಿಸಿ ಓದುವ ಹವ್ಯಾಸ ಬಹಳ ಕಾಲವಿತ್ತು.
ನಾನು ಪಿ.ಯು ಓದುವ ಕಾಲದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು ಕೋಲಾರಕ್ಕೆ ಬಂದಾಗ ಅವರ ಭಾಷಣ ಕೇಳಲು ಮನೆಯಲ್ಲೂ ಹೇಳದೆ ಹೋಗಿದ್ದೆ. ಹೈಸ್ಕೂಲ್ ಹೋದುವಾಗ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಭಾಷಣ ಕೇಳಲು ತೆರಳಿದ್ದೆ. ಇಂದಿನ ಉಪರಾಷ್ಟ್ರಪತಿ ಬಿಜೆಪಿ ಪಕ್ಷದ ಎಂ.ವೆಂಕಯ್ಯ ನಾಯ್ಡು, ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರ ಭಾಷಣ ಕೇಳುವ ಉತ್ಸಾಹ, ಹುಮ್ಮಸ್ಸು ನನಗೆ ಮೊದಲಿನಿಂದಲೂ ಇತ್ತು.
ಅದಕ್ಕೆ ಕಾರಣ ನಾಯಕರೆಂದರೆ ಸಮಾಜದ ಉದ್ದಾರಕರು. ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬೇಕಾದರೆ ಅದು ರಾಜಕೀಯ ಕ್ಷೇತ್ರದಲ್ಲಿ ನಾಯಕರಿಂದಲೇ ಸಾಧ್ಯ ಎಂಬ ಅಭಿಪ್ರಾಯ ನನ್ನದಾಗಿತ್ತು. ಹಾಗೆಯೇ ಕೆಲ ಮುಖಂಡರ ಭಾಷಣ ಶೈಲಿಯು ನನ್ನನ್ನು ಆಕರ್ಷಿಸುತ್ತಿದ್ದರಿಂ ದ ರಾಜಕಾರಣ ಎಂದರೆ ಏನು ಗೊತ್ತಿಲ್ಲದ ದಿನಗಳಿಂದಲೂ ಹಲವರ ಭಾಷಣಗಳನ್ನು ಕೇಳುವ ಹುಚ್ಚು ತಾನಾಗಿಯೇ ಹತ್ತಿತ್ತು.
ಅದರಲ್ಲೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ವಿಭಾಗದ ಮುಂದೆಯೇ ಮುಖ್ಯಮಂತ್ರಿ, ಗೃಹಸಚಿವರು ಸೇರಿದಂತೆ ಹಲವು ವಿವಿಐಪಿಗಳ ಕ್ಯಾನ್ವಾಯ್ (ಎಸ್ಕಾರ್ಟ್) ವಾಹನಗಳು ಹಾದು ಹೋಗುತ್ತಿತ್ತು. ಎಷ್ಟೇ ಕೆಲಸವಿದ್ದರು ಅವರ ಕ್ಯಾನ್ವಾಯ್ ವಾಹನ ಸೈರನ್ ಹಾಕುತ್ತ ತೆರಳುವ ದೃಶ್ಯವನ್ನು ವೀಕ್ಷಿಸುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.
ಮೊನ್ನೆ ನಾಯಕತ್ವ ಗುಣ ಮತ್ತು ಮಾನವೀಯ ಮೌಲ್ಯ ಎಂಬ ವಿಷಯದ ಬಗ್ಗೆ ನಮ್ಮ ಶಿಬಿರಾರ್ಥಿಗಳಿಗೆ ತರಗತಿ ತೆಗೆದುಕೊಂಡಿದ್ದೆ. ಆಗ ಶಿಬಿರಾರ್ಥಿಗಳ ಜೊತೆ ನಾಯಕತ್ವ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಇಂದು ರಾಜಕೀಯವು ಸೇರಿದಂತೆ ವಿವಿಧ ವಲಯಗಳ ನಾಯಕರ ಮನಸ್ಥಿತಿ, ಜೀವನ ಶೈಲಿ, ಸಿದ್ದಾಂತಗಳ ಬಗ್ಗೆ ಚರ್ಚೆ ಮಾಡಬೇಕಾದ ಸಂದರ್ಭ ಎದುರಾಯಿತು.
ತರಗತಿಯಲ್ಲಿನ ಒಬ್ಬ ಶಿಬಿರಾರ್ಥಿ ಅಯ್ಯೋ ಬಿಡಿ ಸಾರ್ ಇವತ್ತು ನಾಯಕನೆಂದರೆ  ಬರೀ ತನ್ನ ಲಾಭ ನೋಡಿಕೊಳ್ಳುತ್ತಾನೆ. ಅಷ್ಟಕ್ಕೂ ಸಮಾಜದ ಬಗ್ಗೆ ಆಲೋಚಿಸುವ ನಾಯಕರು ಎಲ್ಲಿ ತಾನೇ ಸಿಗುತ್ತಾರೆ ಎಂಬ ಧಾಟಿಯಲ್ಲಿ ಹೇಳಿದ, ಅವನ ಮಾತು ಒಪ್ಪುವಂತದ್ದೆ. ಇನ್ನು ಒಬ್ಬ ಸಾರ್ ತೆಲುಗಿನ ರಾಣಾ ದಗ್ಗುಬಾಟಿ ಅಭಿನಯದ ಲೀಡರ್ ಚಿತ್ರದಲ್ಲಿ ಹೀರೋ ಮುಖ್ಯಮಂತ್ರಿಯಾಗುತ್ತಾನೆ. ಆತ ರಾಜ್ಯದ ಅಭಿವೃದ್ದಿಗಾಗಿ ತನ್ನ ಸ್ವಂತ ಹಣವನ್ನು ಕೊಡುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿಸಿ ಅಕ್ರಮ ಸಂಪತ್ತನ್ನು ಕಸಿದು ಜನರ ಕಲ್ಯಾಣಕ್ಕೆ ಬಳಸುತ್ತಾನೆ. ತೆಲುಗಿನ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಜನರ ಕಷ್ಟಗಳನ್ನು ಆಲಿಸುವ ಮನಸ್ಥಿತಿ ಈಗಿನವರಿಗೆಲ್ಲಿದೆ. ನಮ್ಮಲ್ಲಿ ಇಂತಹ ನಾಯಕರನ್ನು ಎಲ್ಲಿ ಕಾಣಲು ಸಾಧ್ಯ ಹೇಳಿ ಸಾರ್. ಮಕ್ಕಳು, ಮೊಮ್ಮಕ್ಕಳಿಗೂ ಸಾಕಾಗುವಷ್ಟು ಆಸ್ತಿ, ಹಣ ಸಂಪಾದಿಸುವುದೇ ಈಗಿನ ನಾಯಕನ ಕಾಯಕ ಎಂದ.   
ನಾಯಕತ್ವ, ನಾಯಕನಾದವನು ಹೇಗಿರಬೇಕೆಂಬ ಬಗ್ಗೆ ಕೆಲವು ನಿರ್ದಿಷ್ಟವಾದ ದೃಷ್ಟಿಕೋನಗಳಿವೆ. ಮಹಾತ್ಮ ಗಾಂಧಿಜೀಯವರು ಬ್ರಿಟಷರ ವಿರುದ್ದ ಹೋರಾಡಲು ಜನರನ್ನು ಸಂಘಟಿಸಿದ್ದರು. ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳ ಮೂಲಕ ಲೇಖನಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಸತ್ಯ, ಅಹಿಂಸೆ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು. ನಾಯಕನಲ್ಲಿ ಇರಬೇಕಾದ ಬಹುತೇಕ ಗುಣಗಳು ಗಾಂಧಿಜೀಯವರಲ್ಲಿತ್ತು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಸಾವಿರಾರು ಅನುಯಾಯಿಗಳನ್ನು ಸಂಪಾದಿಸಿಕೊಟ್ಟಿತ್ತು. ದೇಶ ಸುತ್ತಿ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಆ ಕಾರಣದಿಂದಲೇ ವಿವೇಕಾನಂದರನ್ನು ಯುವ ನಾಯಕ ಎಂದು ಈಗಲೂ ಕರೆಯುತ್ತೇವೆ.
ಇಂದು ರಾಜಕೀಯ ಪಕ್ಷಗಳ ನಾಯಕ ಎಂದರೆ ಬರೀ ಕಟೌಟ್ಗಳಿಗೆ ಸೀಮಿತವಾದವರು. ಬಹುತೇಕ
ನಾಯಕರಲ್ಲಿ ಸ್ವಾರ್ಥದ ಹಿತಾಸಕ್ತಿ ತುಂಬಿ ತುಳುಕಿತ್ತಿದೆ. ದಶಕಗಳು ಕೂತು ತಿಂದರು ಕರಗದ ಸ್ಥಿರಾಸ್ತಿ ಮತ್ತು ಚರಾಸ್ಥಿಯ ಮಾಲೀಕರಾಗಿದ್ದಾರೆ ಈಗಿನ ನಾಯಕರು.
ವಿಪರ್ಯಾಸವೆಂದರೆ ಇಂದು ನಾಯಕ ಎಂಬ ಪದವನ್ನು ಬರೆಯಲು ಸಾಧ್ಯವಾಗದವರು ಕೂಡ ತಾನೊಬ್ಬ ರಾಜ್ಯ ನಾಯಕ, ರಾಷ್ಟ್ರ ನಾಯಕ ಎಂದು ಬಿಂಬಿಸಿಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. 
ಇಂದು ವಿದ್ಯಾರ್ಥಿ, ಯುವಜನ, ಕನ್ನಡ, ರೈತ, ಕಾರ್ಮಿಕ, ಸರಕಾರಿ, ಖಾಸಗಿ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಎಲ್ಲಾ ಸಂಘಟನೆಗಳಲ್ಲೂ ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ನೂರಾರು ನಾಯಕರೆಂದು ಕರೆಸಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕರಿಗೆ ನಾಯಕನಿಗೆ ಇರಬೇಕಾದ ಯಾವುದೇ ಪ್ರಾಥಮಿಕ ಜ್ಞಾನವಾಗಲಿ, ಮೌಲ್ಯವಾಗಲಿ ಇಲ್ಲದಿದ್ದರೂ ಕೂಡ ತಾನೊಬ್ಬ ನಾಯಕನೆಂದು ಹೇಳಿಕೊಳ್ಳುವ ದೊಡ್ಡ ವರ್ಗವೇ ಸೃಷ್ಟಿಯಾಗಿದೆ.
ನಾಯಕನೆಂದು ಕರೆಸಿಕೊಳ್ಳುವವನು ಮೊದಲು ಆ ಪದದ ಅರ್ಥ ತಿಳಿದುಕೊಳ್ಳಬೇಕು. ಜನ ಸಾಮಾನ್ಯರ ಕಷ್ಟಗಳನ್ನು ಅರಿಯುವ ಮನಸ್ಥಿತಿ ಇರಬೇಕು. ಯಾವುದೇ ಧರ್ಮ, ಜಾತಿ, ಲಿಂಗ ತಾರತಮ್ಯ ಮಾಡದೇ ಎಲ್ಲರನ್ನೂ ಸಮನಾಗಿ ಕಾಣುವ ಮನಸ್ಥಿತಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆ ಹಾಗೂ ನೈತಿಕತೆ ಸ್ವಲ್ಪ ಹೆಚ್ಚಾಗಿ ಇರಬೇಕು. ತಾನು ಬೆಳೆದರೆ ಸಾಕು ಎಂಬ ಧೋರಣೆ ಇರಲೇ ಬಾರದು. ತನ್ನ ಜೊತೆಗಿರುವವರನ್ನು ಬೆಳೆಸುವ ಇಚ್ಛಾಶಕ್ತಿ ಇಲ್ಲದಿದ್ದರೆ ಅವನು ನಾಯಕನಾಗಲು ಅನರ್ಹ.  
ಜನಸಾಮಾನ್ಯರ ಜೊತೆ ಒಳ್ಳೆಯ ಸಂವಹನ ಕೌಶಲ್ಯವನ್ನು ಹೊಂದಬೇಕು. ಕನಿಷ್ಠ ಪಕ್ಷ ಜನರ ಕಷ್ಟಗಳನ್ನು ಕೇಳುವ ಸೌಜನ್ಯವನ್ನು ಹೊಂದಿರಬೇಕು. ಆದರೆ ನಮ್ಮ ಈಗಿನ ರಾಜಕಾರಣಿಗಳು ಒಬ್ಬ ನಾಯಕನಿಗೆ ಇರಬೇಕಾದ ಯಾವುದೇ ಅರ್ಹತೆ ಹೊಂದಿಲ್ಲದಿದ್ದರು ಹಣ ಹಂಚಿ ಅಧಿಕಾರ ಪಡೆಯುತ್ತಿರುವುದರಿಂದ ನಾಯಕತ್ವದ ಶಿಸ್ತನ್ನು ಪಾಲಿಸುತ್ತಿಲ್ಲ.
ಪ್ರಾಮಾಣಿಕತೆ ಮತ್ತು ನೈತಿಕತೆ ಈ ಎರಡು ಅಂಶಗಳು ನಾಯಕನ ಮೂಲ ಲಕ್ಷಣಗಳು. ವಿಚಿತ್ರವೆಂದರೆ ಎರಡು ಅಂಶಗಳನ್ನು ಹೊಂದಿರುವ ನಾಯಕರನ್ನು ದೇಶದಲ್ಲಿ ಯಾವುದೇ ಭಾಗದಲ್ಲಿ ಹುಡುಕಿದರೂ ಬಹುಃಶ ಸಿಗುವುದಿಲ್ಲ. ಒಂದಿಬ್ಬರಿದ್ದರೆ ಹೆಚ್ಚು.  
ಇಂದು ನಾವು ಕಾಣುವ ನಾಯಕರು ಎಂಥವರೆಂದರೆ ತಮ್ಮ ಅಧಿಕಾರವಧಿ ಅಥವಾ ವಯಸ್ಸಾದ ನಂತರ ತಮ್ಮ ಮಗ, ಮಗಳೋ ಅಥವಾ ತಮ್ಮ ಸಂಬಂಧಿಕರನ್ನೇ ಅಧಿಕಾರದಲ್ಲಿ ತಂದು ಕೂರಿಸುವ ನಾಯಕ ಸಮೂಹವೇ ತುಂಬಿದೆ. ತಮ್ಮ ಕಾರ್ಯಕರ್ತರು ಅಥವಾ ಬಡವರ ಬಗ್ಗೆ ಕಾಳಜಿ ಇರುವ ಯಾವ ವ್ಯಕ್ತಿಯನ್ನು ಯಾವೊಬ್ಬ ನಾಯಕನು ಬೆಳೆಸುವುದಿಲ್ಲ. ಕುಟುಂಬ ಕೇಂದ್ರಿತ ನಾಯಕತ್ವ ಇಂದು ತುಂಬಿ ತುಳುಕುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ವಿಧಾನಸಭೆ, ಲೋಕಸಭೆಗಳು ಕುಟುಂಬ ಸದಸ್ಯರಿಂದ ತುಂಬಿಕೊಂಡರು ಅಚ್ಚರಿ ಪಡುವಂತಿಲ್ಲ. 
ಇನ್ನು ಗ್ರಾಮ ಮಟ್ಟದಿಂದ ಹಿಡಿದು ನಗರ, ಪಟ್ಟಣಗಳನ್ನು ತೆಗೆದುಕೊಂಡರು ಅದು ಚುನಾವಣೆ, ಹಬ್ಬ ಹರಿದಿನ ಸೇರಿದಂತೆ ಮತ್ತಿತರ ಸಂದರ್ಭಗಳಲ್ಲಿ ಕಟೌಟ್, ಫ್ಲೆಕ್ಸ್ ಗಳು ರಾರಾಜಿಸುತ್ತವೆ. ಅದರಲ್ಲಿ ತಾವು ನಾಯಕರೆಂದು ಹಲವರು ಪ್ರಚಾರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ತಾವೊಬ್ಬ ದೀನ, ದಲಿತ, ಹಿಂದುಳಿದ ವರ್ಗದವರ ಉದ್ದಾರಕ ಎಂದು ಸ್ಲೋಗನ್ ಬರೆಸಿಕೊಳ್ಳುತ್ತಾರೆ. ಆದರೆ ಅವರೆಲ್ಲೆಲ್ಲೂ ನಾಯಕನ ವೃತ್ತಿಪರತೆ ಇರುವುದಿಲ್ಲ. ಗಾಂಧಿ ಜಯಂತಿ, ಸ್ವಾಮಿ ವಿವೇಕಾನಂದ ಜಯಂತಿ ಸೇರಿದಂತೆ ಮತ್ತಿತರ ಮಹನೀಯರ ಜಯಂತಿಗಳಂದು ಶುಭಕೋರುವ ಫ್ಲೆಕ್ಸ್ ಗಳಲ್ಲಿ ಗಾಂಧೀ, ವಿವೇಕಾನಂದರ ಸಣ್ಣ ಚಿತ್ರವಿದ್ದರೆ ಶುಭಕೋರುವವರದ್ದು ಮಾತ್ರ ಬೃಹದಾಕಾರದ ಚಿತ್ರವಿರುತ್ತದೆ.    
ನಾಯಕನಾದವನು ನಾಲ್ಕು ಜನರನ್ನು ಮುನ್ನೆಡೆಸುವ ಶಕ್ತಿ ಇರಬೇಕು. ಆದರೆ ಇಂದು ನಾಯಕರೆಂದು ಕರೆಸಿಕೊಳ್ಳುವವರು ಅಧಿಕಾರ ವ್ಯಾಮೋಹದಿಂದ ಬೇರೊಬ್ಬರ ಹಿಂಬಾಲಕರಾಗಿ, ಅಡ್ಡದಾರಿಗಳನ್ನು ಹಿಡಿದು ನಾಯಕ ಎಂಬ ಪದದ ಅರ್ಥವನ್ನೇ ಕಳೆಯುತ್ತಿದ್ದಾರೆ. 
ವಿದ್ಯಾರ್ಥಿ,ರೈತ, ಕಾರ್ಮಿಕ, ಕನ್ನಡ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖಂಡರು ಸ್ವ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಪದ್ದತಿ ಬೆಳೆಯುತ್ತಿದೆ. ಕೆಲ ಸಂಘಟನೆಗಳ ನಾಯಕರಂತು ಅಧಿಕಾರಿಗಳನ್ನು ಬೆದೆರಿಸಿ ಹಣ ವಸೂಲಿ ಮಾಡುವವರು ಇದ್ದಾರೆ. ನಾನೊಬ್ಬ ರೈತ ನಾಯಕ ಎಂದು ಹಸಿರು ಶಾಲು ಹಾಕುವ, ನಾನೊಬ್ಬ ಕನ್ನಡಪರ ಹೋರಾಟಗಾರ ಎಂದು ಕನ್ನಡಧ್ವಜದ ಶಾಲು ಹಾಕುವವರು ಓಡಾಡುವುದು ಇನ್ನೋವಾ, ಕ್ವಾಲಿಸ್ ಕಾರಿನಲ್ಲಿ. ಐಷಾರಾಮಿ ಕಾರುಗಳಲ್ಲಿ ಓಡಾಡುವ ಶಕ್ತಿ ಈ ನಾಯಕರಿಗೆ ವಸೂಲಿದಂಧೆಗೆ ಇಳಿಯದಿದ್ದರೆ ಎಲ್ಲಿಂದ ತಾನೇ ಬರುತ್ತಿತ್ತು. ಕೆಲ ಸಂಘಟನೆಗಳ ನಾಯಕರು ರಾಜಕಾರಣಿಗಳನ್ನು ಮೀರಿಸುವ ಆಸ್ತಿ ಸಂಪಾದಿಸಿದ್ದಾರೆ. 
ಈಗಿನ ಟ್ರೆಂಡ್ ಹೇಗಿದೆ ಎಂದರೆ ವೈಟ್ ಅಂಡ್ ವೈಟ್ ಬಟ್ಟೆಗಳನ್ನು ಹಾಕಿದರೆ ಆತ ನಾಯಕ. ಯಾವುದಾದರೂ ಒಂದು ಸಂಘ ಕಟ್ಟಿಕೊಂಡು, ವಿಸೀಟಿಂಗ್ ಕಾರ್ಡ್ ಮಾಡಿಸಿ, ತಮ್ಮ ಕಾರು ಮತ್ತು ದ್ವಿಚಕ್ರ ವಾಹನದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಸಿಕೊಂಡರೆ ಸಾಕು ಆತನೇ ನಾಯಕ. ಇಂತಹ ವ್ಯವಸ್ಥೆ ಇದ್ದಾಗ ಎಲ್ಲಿ ತಾನೇ ಸಮಾಜ ಮುಂದುವರೆಯಲು ಸಾದ್ಯ.
ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಆ ರಾಷ್ಟ್ರವು ಉತ್ತಮ ನಾಯಕನನ್ನು ಹೊಂದಬೇಕು. ಸಮಾಜದಲ್ಲಿ ನಾಯಕರೆಂದು ಕರೆಸಿಕೊಂಡವರು ಜನಸಾಮಾನ್ಯರ ಕಷ್ಟಗಳ ಬಗೆಹರಿಸಲು ಪ್ರಾಮಾಣಿಕ ಯತ್ನ ನಡೆಸಿದಾಗ ರಾಷ್ಟ್ರ ಅಭಿವೃದ್ದಿಯಲ್ಲಿ ಮುನ್ನಡೆಯಲು ಸಾಧ್ಯ. ಅದು ಬಿಟ್ಟು ಖಾದಿ ಬಟ್ಟೆ ಹಾಕಿಕೊಂಡು ಪತ್ರಿಕೆ, ಟಿ.ವಿಗಳಿಗೆ ಪೋಸು ನೀಡುವ ನಾಯಕರಿಂದ ಏನು ನಿರೀಕ್ಷಿಸಲು ಸಾದ್ಯವಿಲ್ಲ. ಅಂತವರ ಸಂತತಿಯು ಇಳಿಮುಖವಾಗಬೇಕಿದೆ.
ಎಲ್ಲಾ ಸಂಘಟನೆಗಳ ನಾಯಕರು ಮೊದಲು ಲೀಡರ್ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳಲಿ. ಲೀಡರ್ ಎಂದರೆ ನಾಲ್ಕು ಜನರಿಗೆ ಸೂಕ್ತ ದಾರಿ ತೋರಿಸುವವನು. ಯಾವುದೇ ಪ್ರತಿಪಲಾಫೇಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುವ ಸೇವಕ. ಅದು ಬಿಟ್ಟು ಲೀಡರ್ ಎಂದರೆ ನಾನು ಬಹಳ ದೊಡ್ಡ ವ್ಯಕ್ತಿ ಎಂಬ ಅಹಂ ಇರುವವನು ನಾಯಕನಾಗಲು ಅನರ್ಹ ಮತ್ತು ಅಂತವನನ್ನು ಸಮಾಜ ಬಹಳ ಸುಲಭವಾಗಿ ಮರೆತು ಬಿಡುತ್ತದೆ.

ಗುರುವಾರ, ಅಕ್ಟೋಬರ್ 4, 2018

ವಿಕಲಚೇತನರ ಬದುಕೇ, ಸ್ಪೂರ್ತಿಯಗಾಥೆ..

         ⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ಅದು ವಿಕಲಚೇತನರು ಓದುವ ಶಾಲೆ. ಶಾಲೆಯ ವಾರ್ಷಿಕೋತ್ಸವದ ಕಾರಣ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿರುತ್ತದೆ. ಓಟ ದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿಕಲಚೇತನ ಮಕ್ಕಳು ಓಡುವಾಗ ಅದರಲ್ಲೊಬ್ಬ ಆಯಾತಪ್ಪಿ ಕೆಳಗೆ ಬಿದ್ದು, ನೋವಾದ ಕಾರಣ ಜೋರಾಗಿ ಕಿರಿಚಿಕೊಳ್ಳುತ್ತಾನೆ. ಇದನ್ನು ನೋಡಿ ಸ್ಪ ರ್ಧೆಯಲ್ಲಿ ಭಾಗಿಯಾಗಿದ್ದ ಉಳಿದ ಮಕ್ಕಳು ಓಡಿ ಬಂದು ಕೆಳಗೆ ಬಿದ್ದವನನ್ನು ಮೇಲೆಕ್ಕೆತ್ತಿ, ಆತನನ್ನು ಸಂತೈಸಿ ಎಲ್ಲರೂ ಒಟ್ಟುಗೂಡಿ ಹೆಜ್ಜೆ ಹಾಕಿ ಎಲ್ಲರು ಓಟದ ಸ್ಪರ್ಧೆಯಲ್ಲಿ ಸಮೂಹವಾಗಿ ಗೆಲ್ಲುತ್ತಾರೆ. ಯಾರು ಬಿದ್ದರೇನು ನಾನು ಸ್ಪರ್ಧೆಯಲ್ಲಿ ಗೆದ್ದರೆ ಸಾಕು ಎಂದು ಮುಂದೆ ಓಡುತ್ತಿದ್ದ ಮಕ್ಕಳು ಆಲೋಚಿಸುವುದಿಲ್ಲ. ಬದಲಾಗಿ ನಾನು ಗೆಲ್ಲದಿದ್ದರು ಪರವಾಗಿಲ್ಲ, ಬೇರೊಬ್ಬರ ಕಷ್ಟಕ್ಕೆ ಆಸರೆಯಾಗಬೇಕೆಂಬ ಆಲೋಚನೆಯನ್ನು ಆ ಓಟದ ಸ್ಪರ್ಧೆಯಲ್ಲಿದ್ದ ಮಕ್ಕಳು ಮಾಡುತ್ತಾರೆ.
ಈ ಅದ್ಬುತವಾದ ದೃಶ್ಯ ಕಂಡಿದ್ದು, ತೆಲುಗಿನ ಮೆಗಸ್ಟಾರ್ ಚಿರಂಜೀವಿ ಅಭಿನಯದ ಸ್ಟಾಲಿನ್ ಚಿತ್ರದಲ್ಲಿ. ಹೌದು ಈ ಚಿತ್ರದಲ್ಲಿ ಬರುವ ವಿಕಲಚೇತನ ಮಕ್ಕಳ ಸ್ಪರ್ಧೆಯ ದೃಶ್ಯವು ಎಲ್ಲರೂ ಆತ್ಮವಲೋಕನ ಮಾಡುವಂತೆ ಮಾಡುತ್ತದೆ. ತಾನು ಚೆನ್ನಾಗಿದ್ದರೆ ಸಾಕು ಉಳಿದವರು ಏನಾದರೂ ಆಗಲಿ ಎಂಬ ಮನೋಭಾವ ಹೊಂದಿರುವ ಜನಗಳೇ ಹೆಚ್ಚಿರುವ ಈ ದಿನಗಳಲ್ಲಿ ಈ ಚಿತ್ರದ ಸನ್ನಿವೇಶವು ನಮಗೆ ನೈತಿಕತೆಯ ಪಾಠವನ್ನು ಎಳೆ ಎಳೆಯಾಗಿ ಭೋದಿಸುತ್ತದೆ. 
ನಾನು ಹಲವು ಬಾರಿ ವಿಕಲಚೇತನರನ್ನು ಹತ್ತಿರದಿಂದ ಕಂಡ ನಿದರ್ಶನಗಳಿವೆ. ಒಮ್ಮೊಮ್ಮೆ ಅನಿಸುತ್ತದೆ, ದೈಹಿಕ ನ್ಯೂನತೆಗೆ ಒಳಗಾಗಿರುವ ವಿಕಲಚೇನತರು ಪಾಪ ಹೇಗೆ ಜೀವನ ನಿರ್ವಹಿಸುತ್ತಾರೆ ? ಎಂಬ ಪ್ರಶ್ನೆ ಹಲವು ಬಾರಿ ನನ್ನನ್ನು ಗಾಢವಾಗಿ ಕಾಡಿದೆ. 
ರಾತ್ರಿ ವೇಳೆ ಕೇವಲ ಹತ್ತು ನಿಮಿಷ ವಿದ್ಯುತ್ ಹೋದರೆ ಸಾಕು ಬೆಸ್ಕಾಂ ಇಲಾಖೆಯನ್ನು ಹಲವು ಬಾರಿ ಶಪಿಸುತ್ತೇವೆ. ವಿದ್ಯುತ್ ಇಲ್ಲದೇ ಈ ಕತ್ತಲಲ್ಲಿ ಕಾಲ ಕಳೆಯುವುದು ಹೇಗೆ ಎಂದು ಚಿಂತಿಸುತ್ತೇವೆ. ಆದರೆ ಇಡೀ ಜೀವನ ಪೂರ್ತಿ ಬೆಳಕನ್ನೇ ಕಾಣಲು ಸಾಧ್ಯವಾಗದ ಅಂಧರು ಎಷ್ಟೆಲ್ಲ ಕಷ್ಟ ಪಡುತ್ತಾರೆ. ನಿಜಕ್ಕೂ ಅವರ ಒಳಗಿನ ನೋವು ಅರ್ಥ ಮಾಡಿಕೊಂಡರೆ ನಮ್ಮ ಮನಸ್ಸು ಕರಗದೇ ಇರದು. ಎಲ್ಲರ ಸೃಷ್ಟಿಕರ್ತ ಆ ಭಗವಂತ ಈ ರೀತಿಯ ಕಷ್ಟ ಏಕೆ ಕೊಟ್ಟ ಎಂದು ನನಗೆ ನಾನೇ ಪ್ರಶ್ನೆಯನ್ನು ಹಲವು ಬಾರಿ ಹಾಕಿಕೊಂಡಿದ್ದೇನೆ. 
ನಾನು ಪದವಿ ಓದುವ ದಿನಗಳಲ್ಲಿ ಇಬ್ಬರು ಕಣ್ಣು ಕಾಣದ ಉಪನ್ಯಾಸಕರ ಪಾಠ ಕೇಳುವ ಅದ್ಬುತ ಅವಕಾಶ ಸಿಕ್ಕಿತ್ತು. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿನ ಸರಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಹಾಗೂ ರಾಜ್ಯಶಾಸ್ತ್ರ ಭೋದಿಸುವ ಇಬ್ಬರು ಉಪನ್ಯಾಸಕರಿಗೆ ಕಣ್ಣು ಕಾಣುತ್ತಿರಲಿಲ್ಲ. ಆದರೆ ಅವರು ಪ್ರಾಮಾಣಿಕತೆಯಲ್ಲಿ ಎಂದು ರಾಜೀಯಾದವರಲ್ಲ. ತಮಗೆ ನಿಗದಿಪಡಿಸಿದ ದಿನಗಳಂದು ತಪ್ಪದೇ ಆಯಾ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಬ್ರೈಲ್ ಲಿಪಿಯ ಸಹಾಯದಿಂದ ಇಬ್ಬರು ಉಪನ್ಯಾಸಕರು ವೇಗವಾಗಿ ಪಾಠವನ್ನು ಓದುತ್ತ, ವಿವರಣೆ ನೀಡುತ್ತಿದ್ದರು.
ನಿಜ ಹೇಳಬೇಕೆಂದರೆ ಅವರು ಓದುವ ವೇಗದಲ್ಲಿ ಅರ್ಧದಷ್ಟು ವೇಗದಲ್ಲೂ ನಾವು ಪಾಠವನ್ನು ಓದಲು ಸಾಧ್ಯವಾಗುವುದಿಲ್ಲ. ಅವರ ಬದ್ದತೆ, ಪ್ರಾಮಾಣಿಕತೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ. ದೈಹಿಕವಾಗಿ ಎಲ್ಲಾ ಅಂಗಗಳು ಸರಿಯಾಗಿದ್ದರು ಶಾಲಾ, ಕಾಲೇಜುಗಳಿಗೆ ಚಕ್ಕರ್ ಹಾಕಿ, ಪಾಠ, ಪ್ರವಚನಗಳನ್ನು ಭೋದಿಸದೆ ನಿರ್ಲಕ್ಷ್ಯ ತೋರಿಸುವ ಶಿಕ್ಷಕರು ನಾಚಿಕೆ ಪಡುವಂತಹ ರೀತಿಯಲ್ಲಿ ಈ ಇಬ್ಬರು ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರು. 
ಮೊನ್ನೆ ಒಂದು ಘಟನೆ ಎದುರಾಯಿತು, ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಕಾರ್ಯ ನಿಮಿತ್ತ ಹೊರಟಿದ್ದೆ. ಈ ವೇಳೆ ನನ್ನ ಪಕ್ಕದ ಸೀಟಿನಲ್ಲಿ ಬಂದು 35 ವರ್ಷ ವಯಸ್ಸಿನ ಯುವಕ ಬಂದು ಕುಳಿತ. ಆತ ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ. ಹಾಗೆಯೇ ಸಮಯ ಕಳೆಯಲಿ ಎಂದು ಮಾತನಾಡುತ್ತ ಸಾಗಿದಾಗ ಆತ ಹೇಳಿದ, ಓದಿದ್ದು ಎಂಎಸ್ಸಿ (ಕೃಷಿ), ನನಗೆ ಕೈ ಇಲ್ಲ ಎಂದು ಚಿಕ್ಕವಯಸ್ಸಿನಿಂದಲೂ ಶಾಲಾ, ಕಾಲೇಜಿನ ಕೆಲ ಸ್ನೇಹಿತರು ಸೇರಿದಂತೆ ಸಂಬಂಧಿಕರು ಕೂಡ ಕೀಳರಿಮೆಯಿಂದ ಕಂಡ ಉದಾಹರಣೆಗಳು ಸಾಕಷ್ಟಿವೆ. ಅವರ ಮಾತುಗಳು ನನ್ನ ಮನಸ್ಸಿಗೆ ತುಂಬಾ ಘಾಸಿಯನ್ನು ಮಾಡಿತ್ತು. ಆದರೆ ಜೀವನದಲ್ಲಿ ಏನಾದರೊಂದು ಸಾಧಿಸ ಬೇಕೆಂಬ ಛಲದಿಂದ ಎಲ್ಲರ ನೋವಿನ ಮಾತುಗಳನ್ನು ಮರೆತು ಹೊಸ ಜೀವನ ಪ್ರಾರಂಭಿಸಿದೆ. 
ನನಗಿರುವ 5 ಎಕರೆ ಕೃಷಿ ಭೂಮಿಯಲ್ಲಿ ತಂದೆಯ ಸಹಾಯದಿಂದ ಕೃಷಿ ನಡೆಸುತ್ತಿದ್ದೇನೆ. ಕೃಷಿಯಲ್ಲಿ ಎಂ.ಎಸ್ಸಿ ಪದವಿಧರನಾಗಿರುವುದರಿಂದ ವೈಜ್ಞಾನಿಕ ಕೃಷಿ ಪದ್ದತಿಗಳ ಬಗ್ಗೆ ಅರಿವು ಇರುವುದರಿಂದ ಅದರ ಆಧಾರದಲ್ಲೇ ಕೃಷಿ ಮಾಡುತ್ತಿದ್ದು, ಮಿಶ್ರ ಕೃಷಿ ಬೇಸಾಯ ಹಾಗೂ ಹೈನುಗಾರಿಕೆಯಿಂದ ವಾರ್ಷಿಕವಾಗಿ 4 ರಿಂದ 5 ಲಕ್ಷ ಸಂಪಾದನೆ ಮಾಡುತ್ತಿದ್ದು, ಯಾರ ಹಂಗಿಲ್ಲ.
ನನ್ನ ಬಗ್ಗೆ ಯಾರು ಏನು ಅಂದು ಕೊಂಡರು ನನಗೆ ಚಿಂತೆ ಇಲ್ಲ. ನನ್ನ ಸ್ವಾವಲಂಭನೆ ಜೀವನವೇ ನನಗೆ ಸ್ಪೂರ್ತಿ ನೀಡಿದೆ. ವಿಕಲಚೇತನ ನಾನಲ್ಲ, ಎಲ್ಲವೂ ಇದ್ದು ಏನು ಮಾಡದೇ ಸೋಮಾರಿತನ ತೋರಿ, ಯಾರಿಗೂ ಸಹಾಯ ಮಾಡದ ಜನ ಎಂದು ದಿಟ್ಟವಾಗಿ ಉತ್ತರಿಸಿದ. 
ನಿಜ ಆತನ ಮಾತು ಕೇಳುತ್ತಿದ್ದರೆ ನನಗೆ ಆಶ್ಚರ್ಯವಾಯಿತು, ಆತನಲ್ಲಿ ಎಲ್ಲೂ ನಕರಾತ್ಮಕ ಮನಸ್ಥಿತಿ ಇರಲಿಲ್ಲ. ನೂರು ಜನ ನೂರು ಮಾತುಗಳು ಅಂದುಕೊಂಡರು ನನ್ನ ಶಕ್ತಿ ನನಗೆ ಗೊತ್ತು ಎಂಬ ಆತನ ಬಲವಾದ ನಂಬಿಕೆಯೇ ಆತನನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದೆ ಎಂದೆನಿಸಿತು. 
ಕೆಲ ದಿನಗಳ ಹಿಂದೆ ಶ್ರೀನಿವಾಸಪುರ ತಾಲೂಕಿನ ಹಳ್ಳಿಯೊಂದಕ್ಕೆ ಕೆಲಸದ ನಿಮ್ಮಿತ್ತ ಹೋಗಿದ್ದೆ. ಆ
ಗ್ರಾಮದಲ್ಲಿನ ಒಬ್ಬಾತ ನಮ್ಮ ತರಬೇತಿ ಸಂಸ್ಥೆಯ ಶಿಬಿರಾರ್ಥಿ, ಕಾರಣಾಂತರಗಳಿಂದ ಆತನು ಒಂದು ಕೈ ಕಳೆದುಕೊಳ್ಳಬೇಕಾದ ಸ್ಥಿತಿ ಬಂದಿತ್ತು. ಆದರೂ ಸಾಧಿಸುವ ಛಲವನಲ್ಲ. 
ಆತ ಬ್ಯಾಂಕಿನಿಂದ ಸಾಲ ಮತ್ತು ಕುಟುಂಬದವರ ಸಹಕಾರ ಪಡೆದು ಪೌಲ್ಟ್ರಿಫಾರಂ ಪ್ರಾರಂಭಿಸಿದ್ದಾನೆ. ಆತನ ಭೇಟಿಯಾಗಿ ಮಾತನಾಡಬೇಕೆಂಬ ಆಸೆಯೊಂದಿಗೆ ಆತನ ಊರಿಗೆ ಹೋಗಿ, ಆತನನ್ನು ಭೇಟಿಯಾಗಿ ಆತನ ಪೌಲ್ಟ್ರಿಫಾರಂನ್ನು ನೋಡಿಕೊಂಡು ಬಂದೆ. ಅದ್ಬುತವಾಗಿ ಫಾರಂ ನಿರ್ವಹಿಸುತ್ತಿದ್ದಾನೆ. ಕೊಳಚೆ ನೀರನ್ನು ಶುದ್ದಿಕರೀಸಿ ಪೌಲ್ಟ್ರಿಫಾರಂಗೆ ಬಳಸಿಕೊಳ್ಳುತ್ತಿದ್ದಾನೆ. ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡುವ ಮೂಲಕ ಅಲ್ಲೂ ಸೈ ಎನ್ನಿಸಿಕೊಂಡಿದ್ದಾನೆ. ಯಾರ ಟೀಕೆ, ವಿಮರ್ಶೆಗಳಿಗೂ ಅಂಜದೆ, ತಲೆಕೆಡಿಸಿಕೊಳ್ಳದೆ ಮುನ್ನುಗುತ್ತ ಜೀವನ ನಿರ್ವಹಿಸಬೇಕೆಂಬ ಆತನ ಆಲೋಚನೆ ನಿಜಕ್ಕೂ ಶ್ಲಾಘನೀಯ.  
ಎರಡು ದಿನಗಳ ಹಿಂದೆ ಹೈದರಾಬಾದ್ ನ ಸಿಕಿಂದ್ರಾಬಾದಿನ ರೈಲ್ವೆ ನಿಲ್ದಾಣದ ಮುಂದೆ ಮಾತನಾಡಲು ಸಾಧ್ಯವಾಗದ ವಿಕಲಚೇತನನೊಬ್ಬ ಕಂಡ. ಆತನ ವೃತ್ತಿ ಜ್ಯೂಸ್ ಹಾಗೂ ಸೋಡಾ ಮಾರಾಟ ಮಾಡುವುದು. ನನಗೆ ಅಚ್ಚರಿ ತಂದಿದ್ದು ಆತನ ಸಂವಹನ ಕಲೆ. ಮಾತನಾಡಲು ಶಕ್ತಿ ಇಲ್ಲದಿದ್ದರು ಕೈ ಸನ್ನೆಗಳ ಮೂಲಕವೇ ಗ್ರಾಹಕರನ್ನು ಆಕರ್ಷಿಸುತ್ತ ,ಅವರ ಪ್ರೀತಿಗಳಿಸುತ್ತಿದ್ದ. ನನ್ನ ಕಣ್ಣೆದುರಿಗೆ ಅರ್ಧಗಂಟೆಯಲ್ಲೇ 500 ರೂ.ಗಿಂತ ಹೆಚ್ಚು ಸಂಪಾದಿಸಿದ. ಆ ಮಟ್ಟಿಗೆ ವ್ಯಾಪಾರ ಪರಿಜ್ಞಾನ ಆತನಲ್ಲಿ ಹೆಚ್ಚಿತ್ತು.
ಒಂದು ದಿನ ಸ್ನೇಹಿತನೊಬ್ಬ ಕರೆ ಮಾಡಿ, ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಓದುವ ಅಂಧ ವಿದ್ಯಾರ್ಥಿನಿಯೊಬ್ಬಳಿಗೆ ಪದವಿ ಪರೀಕ್ಷೆ ಬರೆಯಬೇಕು. ಸದ್ಯಕ್ಕೆ ಯಾರು ಸಿಗುತ್ತಿಲ್ಲ. ನೀನು ಫ್ರೀ ಇದ್ದರೆ ಪರೀಕ್ಷೆ ಬರೆಯಬಹುದೇ ಎಂದ. ಸ್ವಲ್ಪ ಆಲೋಚಿಸಿ ಹೇಳುತ್ತೇನೆ ಎಂದು ಸಮಯ ತೆಗೆದುಕೊಂಡೆ, ನಂತರ ನಾನೇ ಆತನಿಗೆ ಕರೆ ಮಾಡಿ ಪರೀಕ್ಷೆ ಬರೆಯುತ್ತೇನೆ ಎಂದು ಹೇಳಿದೆ. ನಂತರ ಪರೀಕ್ಷೆ ಬರೆಯಲು ಹೋದಾಗಲೇ ಗೊತ್ತಾಗಿದ್ದು ಎಷ್ಟೋ ಜನ ವಿಕಲಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೆ ಬೇರೊಬ್ಬರ ಸಹಾಯ ಬೇಡುವವರ ಸಂಖ್ಯೆ ಅಧಿಕವಿದೆ ಎಂದು. ಒಮ್ಮೆ ಯಲಹಂಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ವಿದ್ಯಾರ್ಥಿನಿಯ ಪರೀಕ್ಷೆ ಬರೆದಿದ್ದೆ. ಅದೃಷ್ಟಕ್ಕೆ ಎರಡು ಪರೀಕ್ಷೆ ಪಾಸ್ ಆಯಿತು.  
ನನಗೆ ಅಚ್ಚರಿ ತಂದಿದ್ದು ಕೆಲ ವಿಕಲಚೇತನರ ನೆನಪಿನ ಶಕ್ತಿ, ಪರೀಕ್ಷೆಗೆ ಅವರು ತಯಾರಾಗಿದ್ದ ರೀತಿ, ಪ್ರಶ್ನೆ ಓದಿದ ತಕ್ಷಣ ಉತ್ತರವನ್ನು ಹೇಳುತ್ತಿದ್ದ ಪರಿ ಕಂಡು ಅಚ್ಚರಿಯಾಯಿತು. 
ಹಲವು ಬಾರಿ ವಿಕಲಚೇತನರು ಪರೀಕ್ಷೆ ಬರೆಯಲು ಸಹಾಯಕರು ಸಿಗದೆ ಪರದಾಡುವ ಪ್ರಸಂಗಗಳು ಹೆಚ್ಚಾಗಿದೆ. ಕೆಲವೊಮ್ಮೆ ಪರೀಕ್ಷೆ ಬರೆಯುತ್ತೇವೆ ಎಂದು ಹೇಳಿದವರು ಕೈ ಕೊಡುತ್ತಾರೆ. ಪರೀಕ್ಷೆ ಬರೆಯಲು ಸಹಾಯಕರನ್ನು ಹುಡುಕುವುದು ಕೂಡ ಕಷ್ಟ ಸಾರ್ ಎಂದು ವಿಕಲಚೇತನ ವಿದ್ಯಾರ್ಥಿನಿಯು ಬೇಸರಿಸಿಕೊಂಡಳು. 
ನಾನು ವಿಕಲಚೇತನರಿಗೆ ಕೆಲ ತರಗತಿಗಳನ್ನು ತೆಗೆದುಕೊಂಡ ಅನುಭವವಿದೆ. ತರಬೇತಿಗೆ ಬಂದವರಲ್ಲಿ ದೈಹಿಕವಾಗಿ ನೂನ್ಯತೆಗಳಿದ್ದರು, ಮಾನಸಿಕವಾಗಿ ನಮಗಿಂತಲೂ ಹೆಚ್ಚು ಸದೃಢವಾಗಿದ್ದರು. ತಮ್ಮ ಇತಿ ಮಿತಿಯಲ್ಲಿ ಸಾಧಿಸುವ ಇಚ್ಚಾಶಕ್ತಿ ಹೆಚ್ಚಾಗಿಯೇ ಇತ್ತು. ಅವರ ವರ್ತನೆ, ಗೌರವ ನೀಡುವ ಪದ್ದತಿ ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. 
ಎಷ್ಟೇ ಕಷ್ಟಗಳಿದ್ದರು ಎಲ್ಲವನ್ನೂ ಮರೆತು ಪ್ರತಿದಿನವನ್ನು ಆನಂದದಿಂದ ಕಳೆಯಬೇಕು. ಅಷ್ಟಕ್ಕೂ ಈ ಭೂಮಿ ಮೇಲೆ ಯಾರು ತಾನೇ ಶಾಶ್ವತವಾಗಿ ಇರುತ್ತಾರೆ. ಜೀವನದಲ್ಲಿ ಕಳೆಯುವ ಪ್ರತಿಕ್ಷಣವನ್ನೂ ಸಂತೋಷದಿಂದ ಕಳೆಯಲು ಸಾಧ್ಯವಾಗದವರು ನಿಜವಾದ ಅಂಗವಿಕಲರು ಸಾರ್ ಎಂದು ತರಬೇತಿಗೆ ಬಂದಿದ್ದ ಒಬ್ಬ ವಿಕಲಚೇತನ ಶಿಬಿರಾರ್ಥಿ ಹೇಳಿದ ಅರ್ಥಗರ್ಭಿತ ಮಾತು ನನ್ನನ್ನು ದೀರ್ಘವಾಗಿ ಆಲೋಚಿಸುವಂತೆ ಮಾಡಿತು. ಆತನ ಮಾತು ಅಕ್ಷರಃಹ ಸತ್ಯ. ಎಲ್ಲವೂ ಇದ್ದು, ಜೀವನದಲ್ಲಿ ಮತ್ತೇನೋ ಕಳೆದುಕೊಂಡ ಹಾಗೇ ವತರ್ಿಸುತ್ತ ಜೀವನ ನಿರ್ವಹಣೆ ಮಾಡುವ ನಾವು ವಿಕಲ ಚೇತನರಿಂದ ಕಲಿಯುವ ಪಾಠ ಸಾಕಷ್ಟಿದೆ.  
ಬ್ರೈಲ್ ಲಿಪಿಯನ್ನು ಸಂಶೋಧಿಸಿದ್ದ ಲೂಯಿಸ್ ಬ್ರೈಲ್ ತಮ್ಮ ಬಾಲ್ಯದಲ್ಲೇ ಕಾರಣಾಂತರಗಳಿಂದ ತಮ್ಮ ಎರಡು ಕಣ್ಣುಗಳ ದೃಷ್ಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಅವರೆಂದು ಆ ಬಗ್ಗೆ ಚಿಂತಿಸಲಿಲ್ಲ. ಅವರ ಚಿಂತೆ ಇದ್ದದ್ದು ದೃಷ್ಟಿ ಇಲ್ಲದ ಕಾರಣ ನಾನು ಹಲವು ರೀತಿಯ ಕಷ್ಟಗಳನ್ನು ಎದುರಿಸಬೇಕಾಯಿತು. ನನ್ನ ಜೀವನದ ಧ್ಯೇಯ ಅಂಧರು ಕೂಡ ವಿದ್ಯಾಭ್ಯಾಸ ಮಾಡಲು ಸಹಾಯಕವಾಗುವ ಲಿಪಿಯೊಂದನ್ನು ಸಂಶೋಧಿಸಬೇಕು. ಆ ಮೂಲಕ ಹಲವರ ಬಾಳಿಗೆ ಬೆಳಕಾಗಬೇಕು ಎಂದು ಅಚಲವಾದ ಧ್ಯೇಯವನ್ನು ಹೊಂದಿದ್ದರು. 
ಅದರ ಫಲವೇ ಬ್ರೈಲ್ ಲಿಪಿಯನ್ನು ರಚಿಸಿ ಸಾವಿರಾರು ಅಂಧರ ಬಾಳಿನಲ್ಲಿ ಜ್ಯೋತಿ ಬೆಳಗಿಸಿದ್ದಾರೆ. ಇಂದು ಹಲವರು ಉನ್ನತ ವ್ಯಾಸಾಂಗ ಪಡೆಯಲು, ಸರಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಲು ನೆರವಾಗಿದೆ ಈ ಬ್ರೈಲ್ ಲಿಪಿ.
ನನಗೆ ಕಣ್ಣು ಕಾಣದು ನಾನೇ ಕಷ್ಟದಲ್ಲಿ ಇದ್ದೇನೆ ಬೇರೊಬ್ಬರಿಗೆ ಏನು ಸಹಾಯ ಮಾಡಲು ಸಾಧ್ಯ ಎಂದು ಒಂದೇ ಒಂದು ಕ್ಷಣ ಲೂಯಿಸ್ ಬ್ರೈಲ್ ಆಲೋಚಿಸಿದ್ದರೆ ಬಹುಃಶ ಬ್ರೈಲ್ ಲಿಪಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಲೂಯಿಸ್ ಬ್ರೈಲ್ ನ ಸಾಧಿಸುವ ಛಲದ ಮುಂದೆ ಎಲ್ಲಾ ಸಮಸ್ಯೆಗಳು ದೂರ ಸರಿದವು. 
ನಿಜ ಹೇಳಬೇಕೆಂದರೆ ವಿಕಲಚೇತನರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಅವರಲ್ಲಿರುವ ಬದ್ದತೆ ನಮ್ಮಲ್ಲಿ ಕಾಣಲು ಸಾಧ್ಯವಿಲ್ಲ. ಅವರಲ್ಲಿನ ತಾಳ್ಮೆ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಬಲವಾದ ಶಕ್ತಿ ನಮ್ಮಲ್ಲಿರುವುದಿಲ್ಲ. ಕೆಲವೊಮ್ಮೆ ನಾವೇನಾದರೂ ಸಾಧಿಸಲು ಹೊರಟಾಗ ಅದರ ಪ್ರತಿಕ್ರಿಯೆ ಎಂಬಂತೆ ಕೆಲವರಿಂದ ಬರುವ ವಿಮರ್ಶೆ, ಅಸಹಕಾರ, ಟೀಕೆಗಳಿಗೆ ಭಯ ಬಿದ್ದು ನಮ್ಮ ದಾರಿಯನ್ನೇ ಬದಲಿಸಿಕೊಳ್ಳುತ್ತೇವೆ.
ಆದರೆ ವಿಕಲಚೇತನರು ಆ ರೀತಿಯ ಮನೋಭಾವದವರಲ್ಲ. ಹಿಡಿದ ಕೆಲಸ ಪೂರ್ಣಗೊಳಿಸುವ ತನಕ ಯಾರು ಏನೇ ಟೀಕೆ ಮಾಡಿದರೂ ಅಂದುಕೊಂಡು ಗುರಿ ತಲುಪುವ ತನಕ ಪ್ರಯತ್ನವನ್ನು ನಡೆಸುತ್ತಲೇ ಇರುತ್ತಾರೆ.  
ಶಾಲೆಯೊಂದರ ಮೇಲೆ ಅದ್ಬುತ ಬರಹ ಹೊಂದಿತ್ತು. ನಿಜವಾದ ವಿಕಲಚೇತನರು ದೈಹಿಕ ನ್ಯೂನತೆ ಹೊಂದಿರುವವರಲ್ಲ, ಬದಲಾಗಿ ಯಾರು ಒಳ್ಳೆತನ, ಪ್ರಾಮಾಣಿಕತೆ ಹೊಂದದೆ ಜೀವನ ನಡೆಸುತ್ತಾರೋ ಅವರು ನಿಜವಾದ ವಿಕಲಚೇತನರು ಎಂದಿತ್ತು. ಈ ಮಾತಿನ ಬಗ್ಗೆ ಮರುಪ್ರಶ್ನೆ ಹಾಕಲು ಸಾಧ್ಯವೇ. 
ನಾವು ವಿಕಲಚೇತನರ ಮೇಲೆ ಪ್ರೀತಿ ಹೊಂದುವುದರ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಎಷ್ಟೋ ವಿಕಲಚೇತನರು ಸಮಾಜದಲ್ಲಿರುವ ಇತರರು ನಮಗೆ ಸಹಾಯ ಹಸ್ತ ಚಾಚುತ್ತಾರೆ ಎಂಬ ವಿಶ್ವಾಸದಿಂದ ಬದುಕುತ್ತಾರೆ. ನಮ್ಮ ಶಕ್ತಿಗನುಗುಣವಾಗಿ ವಿಕಲಚೇತನರ ಕಷ್ಟಗಳಿಗೆ ದನಿಯಾಗುವ ಮೂಲಕ ಅವರ ಬಾಳಲ್ಲಿ ಬೆಳಕು ಕಾಣಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಿದೆ, ಅದು ಬದ್ದತೆಯಿಂದ.