ಮಂಗಳವಾರ, ಸೆಪ್ಟೆಂಬರ್ 11, 2018

ಬಡಪಾಯಿ ಪೊಲೀಸರ ಕಥೆ-ವ್ಯಥೆ..

⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ಆ ಇಲಾಖೆಯನ್ನು ಎಲ್ಲರೂ ಬೈಯ್ದುಕೊಳ್ಳುತ್ತಾರೆ. ಆ ಇಲಾಖೆಯ ಬಗ್ಗೆ ಸಾಕಷ್ಟು ಜನರಿಗೆ ಕೋಪ, ಬೇಸರ ತುಸು ಹೆಚ್ಚೆ ಇರುತ್ತದೆ. ಅಷ್ಟಕೂ ಆ ಇಲಾಖೆ ಯಾವುದೆನ್ನುತ್ತಿರಾ.. ಅದೇ ಪೊಲೀಸ್ ಇಲಾಖೆ. ಹೌದು ರಾಜ್ಯದ ಅತ್ಯಂತ ಪ್ರಮುಖ ಇಲಾಖೆಗಳ ಪೈಕಿ ಪೊಲೀಸ್ ಇಲಾಖೆಯು ಒಂದು. ಕಾನೂನು ವ್ಯವಸ್ಥೆಯನ್ನು ಕಾಪಾಡುವ ರಕ್ಷಣೆ ಹೊತ್ತಿರುವುದರಿಂದ ಸಹಜವಾಗಿಯೇ ಈ ಇಲಾಖೆಯ ಮೇಲೆ ಹೆಚ್ಚಿನ ಜವಾಬ್ದಾರಿ, ಕರ್ತವ್ಯವವು ಇದೆ.
ಕಳೆದ ವಾರ ಬೆಂಗಳೂರು ನಗರದ ಪೊಲೀಸ್ ಠಾಣೆಯೊಂದರಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ನೇಹಿತನೊಬ್ಬ ಹಲವು ವರ್ಷಗಳ ನಂತರ ಮತ್ತೊಬ್ಬ ಸ್ನೇಹಿತನಿಂದ ನನ್ನ ಮೊ.ನಂ ಪಡೆದು ಕರೆ ಮಾಡಿದ್ದ, ರಾ.7ಕ್ಕೆ ಪ್ರಾರಂಭವಾದ ನಮ್ಮ ಮಾತುಕತೆ ರಾ.9ರವರೆಗೂ ಸಾಗಿತ್ತು. 2 ಗಂಟೆಗಳ ಕಾಲ ನಡೆದ ಸುದೀರ್ಘವಾದ ನಮ್ಮ ಮಾತುಕತೆಯಲ್ಲಿ ಆತ ತನ್ನ ವೃತ್ತಿ ಬದುಕು, ವೈಯಕ್ತಿಕ ಜೀವನ ಹಾಗೂ ಇನ್ನಿತರೆ ವಿಚಾರಗಳ ಬಗ್ಗೆ ಹಲವು ಆಯಾಮಗಳಲ್ಲಿ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡ. 
ಆತ ಸ್ನಾತಕೋತ್ತರ ಪದವಿಧರ. ಮಧ್ಯಮ ವರ್ಗ ಕುಟುಂಬಕ್ಕೆ ಸೇರಿದವನು. ಸರಕಾರಿ ಕೆಲಸ ಸಿಕ್ಕಿತೆಂದು ಪೊಲೀಸ್ ಇಲಾಖೆಗೆ ಸೇರಿದ. ತನ್ನ ಕೈಯಲ್ಲಾದ ಸೇವೆಯನ್ನು ಸಮಾಜಕ್ಕೆ ಮಾಡಬೇಕೆಂಬ ಅಭಿಲಾಷೆ ಹೆಚ್ಚಾಗಿಯೇ ಇದೆ. ಆತ ಮಾತನಾಡುತ್ತ ಹೇಳಿದ, ಪೊಲೀಸ್ ವೃತ್ತಿಗೆ ಸೇರಿದ ಮೇಲೆ ನನಗೆ ಗೊತ್ತಾಯಿತು, ಇಲ್ಲಿನ ಕಷ್ಟಗಳ ಸರಮಾಲೆಗಳ ಬಗ್ಗೆ, ಸರಿಯಾದ ಸಮಯಕ್ಕೆ ಮನೆಗೆ ಹೋಗಲು ಹಾಗೂ ಊಟ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ. 
ಅದರಲ್ಲೂ ಬೆಂಗಳೂರು ನಗರದಲ್ಲಿ ಸದಾ ವಿವಿಐಪಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇರುತ್ತದೆ. ದಿನವೂ ಯಾವುದಾದರೂ ಒಂದು ಕಾರ್ಯಕ್ರಮದ ಬಂದೋಬಸ್ತ್ ಡ್ಯೂಟಿ ಇದ್ದೇ ಇರುತ್ತದೆ. ಇಡೀ ದಿನ ಕಾರ್ಯಕ್ರಮದಲ್ಲಿ ಮುಗಿದು ಹೋಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೂ ನಿಂತುಕೊಂಡು ಸಾಕಾಗಿ ಹೋಗುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ಗಲಾಟೆ, ಘರ್ಷಣೆಗಳು ನಡೆದರಂತೂ ಮುಗಿದೆ ಹೋಯಿತು, ಡೇ ಅಂಡ್ ನೈಟ್ ಅಲ್ಲೇ ಡ್ಯೂಟಿ. ಕೆಲವೊಮ್ಮೆ ಆಸ್ಪತ್ರೆ, ಶವಗಾರಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಕೆಲವು ಅಹಿತಕರ ಘಟನೆಗಳು ನಡೆದರೆ ನಾವು ಎಷ್ಟೇ ಸಮಸ್ಯೆಯಾದರೂ ಅಲ್ಲಿ ಹಾಜರಿರ ಬೇಕಾಗುತ್ತದೆ. ನಮ್ಮ ಪ್ರಾಣದ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಇನ್ನೂ ಯಾವುದಾದರೂ ಹಬ್ಬದಲ್ಲಿ ಮನೆಯಲ್ಲಿದ್ದ ನೆನಪೇ ಇಲ್ಲ. ಹಬ್ಬದ ದಿನ ದೇವಸ್ಥಾನಕ್ಕೆ ಹೋಗೋಣ ಎಂದರು ಸಮಯ ಸಿಗಲ್ಲ. ಕೆಲವೊಮ್ಮೆ ಮೇಲಾಧಿಕಾರಿಗಳ ಕಿರುಕುಳ, ವಿನಾಕಾರಣ ನಮ್ಮನ್ನೇ ಗುರಿಯಾಗಿಸಿಕೊಂಡು ಕಷ್ಟಕರವಾದ ಸ್ಥಳಗಳಿಗೆ ಬೇಕಂತಲೇ ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಕಳೆದ ವರ್ಷ ಸಂಚಾರ ನಿಯಂತ್ರಣ ಠಾಣೆ (ಟ್ರಾಫಿಕ್ ಪೊಲೀಸ್ ಸ್ಟೇಷನ್)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಂತು ಆರೋಗ್ಯ ಕೈ ಕೊಟ್ಟಿತ್ತು. ರಸ್ತೆಯಲ್ಲಿ ನಿಂತು ಲಕ್ಷಾಂತರ ವಾಹನಗಳು ಉಗುಳುವ ಹೊಗೆಯನ್ನು ಸೇವಿಸಿದ ಕಾರಣ ಉಸಿರಾಟ ಸಮಸ್ಯೆ ಎದುರಾಗಿ ಆಸ್ಪತ್ರೆಯಲ್ಲಿ ಕೆಲ ಕಾಲ ಸೇರುವಂತಾಗಿತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವುದು ಆ ಭಗವಂತನ ಕೈಯಿಂದಲೂ ಸಾಧ್ಯವಾಗದು ಎಂದು ಅಳಲು ತೋಡಿಕೊಂಡ. 
ನಮ್ಮ ತಂದೆಯವರು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ 36 ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಾನು ಹೆಚ್ಚು ಕಡಿಮೆ 30 ವರ್ಷಗಳ ಕಾಲ ಪೊಲೀಸ್ ಕ್ವಾಟ್ರಸ್ನಲ್ಲಿ ಕಳೆದಿದ್ದೇವೆ. ಪೊಲೀಸ್ ಇಲಾಖೆಯಲ್ಲಿನ ಅತ್ಯಂತ ಕೆಳಹಂತದ ಸಿಬ್ಬಂದಿಯಾದ ಪೊಲೀಸ್ ಪೇದೆ, ಮುಖ್ಯ ಪೇದೆ, ಎಎಸ್ಐ ಹಾಗೂ ಅವರ ಕುಟುಂಬಗಳ ಪರಿಸ್ಥಿತಿ ಸಾಕಷ್ಟು ಜನರಿಗೆ ಅರಿವು ಇರುವುದಿಲ್ಲ. ನಾವು ಪೊಲೀಸ್ ಕ್ವಾಟ್ರಸ್ನಲ್ಲಿ ವಾಸವಿದ್ದ ಕಾರಣ, ಪೊಲೀಸ್ ಪೇದೆಗಳ ಕಷ್ಟಗಳ ಬಗ್ಗೆ ನನಗೂ ಕೂಡ ಸಂಪೂರ್ಣ ಅರಿವಿದೆ.  
ನಾವಿದ್ದ ಕ್ವಾಟ್ರಸ್ ನಲ್ಲಿನ ಮನೆಗಳು ಅತ್ಯಂತ ಸಣ್ಣದಾದ ಹಾಗೂ ತುಂಬಾ ಕಿರಿದಾದ ಮನೆಗಳವು, ಮನೆ ನಿರ್ಮಿಸಿ ಹಲವು ವರ್ಷಗಳೇ ಕಳೆದಿದ್ದವು. ಅದೆಷ್ಟರ ಮಟ್ಟಿಗೆ ಎಂದರೆ ಯಾರದರೂ ಮನೆಗೆ ಒಬ್ಬ ನೆಂಟರು ಬಂದರೆ ಸಾಕು ಮಲಗಲು ಸ್ಥಳವಕಾಶವೇ ಸಾಕಾಗುವುದಿಲ್ಲ. ಮನೆಗೆ ಬಂದ ಅತಿಥಿಗೆ ಹೊರಗೆ ಮಲಗಲು ಹೇಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸಾಲದಕ್ಕೆ ಇಂದೋ ನಾಳೆಯೋ ಬೀಳುವ ಹಂತ ತಲುಪಿದ ಮನೆಗಳವು. ಆದರೂ ಕಷ್ಟವೋ ನಷ್ಟವೋ ಅವುಗಳಲ್ಲೇ ವಾಸ ಮಾಡಬೇಕಾದ ಅನಿವಾರ್ಯತೆ, ಬರುವ ಕಡಿಮೆ ಸಂಬಳದಲ್ಲಿ ಬಾಡಿಗೆ ಮನೆಗೆ ಹೋಗುವ ಧೈರ್ಯ ಯಾವ ಪೊಲೀಸ್ ಪೇದೆಗಳಿಗಿರುತ್ತದೆ. 
ಇನ್ನು ಪೊಲೀಸ್ ರ ಕುಟುಂಬಗಳಲ್ಲಿ ಬಹಳ ದೊಡ್ಡ ಸಮಸ್ಯೆ ಮಕ್ಕಳನ್ನು ಓದಿಸುವುದು, ಬರುವ ಸಂಬಳದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಿದ್ದಾಗ ಮಕ್ಕಳನ್ನು ಓದಿಸುವುದು ಸುಲಭದ ಮಾತಲ್ಲ. ನಮ್ಮ ಕ್ವಾಟ್ರಸ್ ನಲ್ಲಿನ ಕೆಲ ಮಕ್ಕಳು ಸರಕಾರಿ ಶಾಲೆಗೆ ಸೇರಿದರೆ, ಮತ್ತೊಂದಿಷ್ಟು ಮಕ್ಕಳು ಖಾಸಗಿ ಶಾಲೆಗೆ (ಕಡಿಮೆ ಶುಲ್ಕದ ಶಾಲೆಗಳು) ಹೋಗುತ್ತಿದ್ದರು. ತಿಂಗಳು ಬಂದರೆ ಶಾಲೆಗೆ ಶುಲ್ಕ ಕಟ್ಟಬೇಕಾದಾಗ ನಮ್ಮ ಕ್ವಾಟ್ರಸ್ ನಲ್ಲಿರುವವರು ಹರಸಾಹಸ ಪಡುತ್ತಿದ್ದರು.
ಸಾಕಷ್ಟು ಪೊಲೀಸರು ತಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲಿ ಎಂದು ಆಶಿಸುತ್ತಾರೆ. ಆದರೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಬಗ್ಗೆ ತಿಳಿಯಲು, ಅವರನ್ನು ಸರಿದಾರಿಗೆ ತರಲು ಪುರುಸೊತ್ತೆ ಇರುವುದಿಲ್ಲ. ಸದಾ ಕರ್ತವ್ಯದಲ್ಲಿರುವುದರಿಂದ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಸಾಕಷ್ಟು ಪೊಲೀಸರ ಮಕ್ಕಳು ಅರ್ಧದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ.
ನನಗೆ ನೆನಪ್ಪಿದಂಗೆ ಅದು ದೀಪಾವಳಿ, ಗಣೇಶ ಚತುರ್ಥಿ, ದಸರಾ, ಯುಗಾದಿ ಸೇರಿದಂತೆ ಯಾವುದೇ ಹಬ್ಬವಿರಲಿ ಕುಟುಂಬವರೆಲ್ಲರೂ ಸೇರಿ ಆಚರಿಸಿದ ಕ್ಷಣಗಳು ನಾನು ಕಂಡಿಲ್ಲ.
ನಮ್ಮ ಕ್ವಾಟ್ರಸ್ ನಲ್ಲಿ ವಾಸವಿದ್ದ ಪೊಲೀಸರು ಬಂದೋಬಸ್ತ್ ನಿಮಿತ್ತ ಇತರೆ ಸ್ಥಳಗಳಿಗೆ ತೆರಳುತ್ತಿದ್ದರಿಂದ ಅವರ ಗೈರು ಹಾಜರಿಯಲ್ಲೇ ಎಲ್ಲಾ ಕುಟುಂಬಗಳು ಹಬ್ಬಗಳನ್ನು ಆಚರಿಸುತ್ತಿದ್ದರು. ಇನ್ನು ಕೆಲವೊಮ್ಮೆ ಕ್ವಾಟ್ರಸ್ ನಲ್ಲಿನ ಕೆಲ ಕುಟುಂಬಗಳು ತಮ್ಮ ಮಕ್ಕಳ ಹುಟ್ಟು ಹಬ್ಬಗಳನ್ನು ಸರಳವಾಗಿ ಆಚರಿಸುತ್ತಿದ್ದರು, ಅದು ಮಗುವಿನ ತಂದೆಯ ಅನುಪಸ್ಥಿತಿಯಲ್ಲಿ, ತಮ್ಮ ಮಗನೋ, ಮಗಳೋ ಹುಟ್ಟುಹಬ್ಬದ ಸಂಭ್ರಮದಲ್ಲೂ ಭಾಗಿಯಾಗಿಲೂ ಆ ಪೊಲೀಸ್ ಪೇದೆಗಳಿಗೆ ಸಾಧ್ಯವಾಗುತ್ತಿರಲಿಲ್ಲ. 
ಇನ್ನು ಪೊಲೀಸ್ ಕ್ವಾಟ್ರಸ್ ಳಲ್ಲಿ ಹಲವು ವಿಭಿನ್ನ ಅಂಶಗಳನ್ನು ಕಾಣಬಹುದು.
ನಮ್ಮ ಕ್ವಾಟ್ರಸ್ನಲ್ಲಿ  ವಿವಿಧ ಧರ್ಮ, ಜಾತಿಗಳಿಗೆ ಸೇರಿದವರು ಇದ್ದರು, ಬಹಳ ಅನ್ಯೋನ್ಯವಾಗಿ ಎಲ್ಲಾ ಕುಟುಂಬಗಳು ಸ್ನೇಹಮಯ ವಾತವಾರಣದಿಂದ ಜೀವನ ಸಾಗಿಸುತ್ತಿದ್ದರು. ಯಾರಾದರೂ ವಿಶೇಷ ಅಡುಗೆ ಮಾಡಿದರೆ ಅಕ್ಕಪಕ್ಕದ ಮನೆಯ ಮಕ್ಕಳನೆಲ್ಲಾ ಕರೆದು ಬಡಿಸುತ್ತಿದ್ದರು. ನಾವಿದ್ದ ಊರಲ್ಲಿ ನಡೆಯುತ್ತಿದ್ದ ಜಾತ್ರೆ, ಕರಗ ಮತ್ತಿತರ ಸಂದರ್ಭಗಳಲ್ಲಿ ಎಲ್ಲರೂ ಒಟ್ಟಿಗೆ ಹೋಗುವ ಸಂಪ್ರದಾಯವಿತ್ತು.
ನಾನು ಕಂಡಂಗೆ ಬಹುತೇಕ ಪೊಲೀಸರು ಒಂದಲ್ಲಾ ಒಂದು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಾರಣ ಬಿಡುವಿಲ್ಲದ ಕೆಲಸ, ಒತ್ತಡ ಜೀವನ ಶೈಲಿಯಿಂದ ಆರೋಗ್ಯವನ್ನು ಹದೆಗೆಡಿಸಿಕೊಳ್ಳುತ್ತಿದ್ದರು. ತೀರ ಅಗತ್ಯವಾದ ಸಂದರ್ಭಗಳಲ್ಲೂ ರಜೆ ಸಿಗದ ಪರಿಸ್ಥಿತಿ. ಬರುವ ಕಡಿಮೆ ಸಂಬಳದಲ್ಲೇ ಜೀವನ ನಿರ್ವಹಿಸಲು ಹೆಣಗಾಡುತ್ತಿದ್ದರು. 
ಕೆಲ ಅಧಿಕಾರಿ, ಸಿಬ್ಬಂದಿಗಳ ಭ್ರಷ್ಟಚಾರದಿಂದ ಇಲಾಖೆಗೆ ಕೆಟ್ಟ ಹೆಸರು ಹಾಗೂ ಇಲಾಖೆಯ ಕೆಲವರಿಂದ ಜನಸಾಮಾನ್ಯರಿಗೆ ತೊಂದರೆಯಾದ ನಿದರ್ಶನಗಳು ಹಲವಾರಿವೆ. ಆದರೆ ಎಲ್ಲಾ ಪೊಲೀಸರನ್ನು ಕೆಟ್ಟವರೆಂದು ಕರೆಯಲು ಸಾಧ್ಯವಿಲ್ಲ. ಕೆಲ ಸಾರ್ವಜನಿಕರು ಕೆಲವೊಮ್ಮೆ ಪೊಲೀಸರನ್ನು ಕೆಟ್ಟ, ಕೆಟ್ಟ ಪದಗಳಿಂದ ಬೈಯುತ್ತಾರೆ. ಅದೆಷ್ಟರ ಮಟ್ಟಿಗೆ ಎಂದರೆ ಆ ಪದಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಅಷ್ಟೊಂದು ಕೆಟ್ಟ ಪದಗಳಾಗಿರುತ್ತವೆ. ನಿಜ ಕೆಲ ಪೊಲೀಸರು ಭ್ರಷ್ಟರಾಗಿದ್ದಾರೆ. ಅನೈತಿಕ ಹಾದಿಯಲ್ಲಿ ಸಾಗುವ ಸಿಬ್ಬಂದಿಯು ಇದ್ದಾರೆ. 
ಆದರೂ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಪೊಲೀಸರು ಇದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಒಳ್ಳೆಯವರು, ಕೆಟ್ಟವರೆಂದು ಇದ್ದೇ ಇರುತ್ತಾರೆ. 365 ದಿನ 24 ಗಂಟೆ ಸಮಾಜದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಜೀವನ ಎಲ್ಲರು ಅಂದುಕೊಂಡಂಗೆ ಸುಖವಾಗಿ ಏನಿಲ್ಲ.
ಸಾಕಷ್ಟು ಪೊಲೀಸರು ಆರ್ಥಿಕವಾಗಿ, ಕೌಟುಂಬಿಕ ಸಮಸ್ಯೆ, ಆರೋಗ್ಯ ಮತ್ತಿತರ ಸಮಸ್ಯೆಗಳಿಂದ ಬಳಲಿ ಜೀವನದಲ್ಲಿ ಖುಷಿಯೇ ಇಲ್ಲದಾಗಿದೆ. ಕೆಲಸದಿಂದ ನಿವೃತ್ತಿಯಾದರೂ ಒಂದು ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ನೂರಾರು ನಿವೃತ್ತ ಪೊಲೀಸ್ ಪೇದೆಗಳನ್ನು ಕಾಣಬಹುದು. ಇತರೆ ಇಲಾಖೆಗಳಂತೆ ನಮಗೂ ವೇತನ, ಸೌಲಭ್ಯ ಕೊಡಿ ಎಂದು ಹೇಳಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಇತರೆ ಇಲಾಖೆಗಳಂತೆ ಸಂಘ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕಾರಣ ಅದು ಇಲಾಖೆಯ ಶಿಷ್ಟಚಾರ ಉಲ್ಲಂಘನೆಯಾಗುತ್ತದೆ. ಹಾಗೂ ಎಲ್ಲಿ ತಮ್ಮ ಉದ್ಯೋಗಕ್ಕೆ ಕಂಟಕವಾಗುತ್ತದೆ ಎಂಬ ಭಾವನೆಯಿಂದ ಕೆಳ ಹಂತದ ಪೊಲೀಸರು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯೇ ಎತ್ತುವುದಿಲ್ಲ. 
ಕೆಲ ಪೊಲೀಸ್ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯನ್ನು ತಮ್ಮ ವೈಯಕ್ತಿಕ ಹಾಗೂ ಕೀಳು ಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೂ ಆ ಪೇದೆಗಳು ಮಾತನಾಡುವಂತಿಲ್ಲ. ಎಷ್ಟೇ ಸಮಸ್ಯೆಗಳಿದ್ದರು ಅದು ಹೊರಗೆ ಬರುವುದೇ ಇಲ್ಲ. ಸಮಾಜದ ಎಲ್ಲರಿಗೂ ರಕ್ಷಣೆ ನೀಡುವ ಪೊಲೀಸರಿಗೆ ನಿಜ ಹೇಳಬೇಕೆಂದರೆ ರಕ್ಷಣೆಯೇ ಇಲ್ಲ. ಇನ್ನು ಮಹಿಳಾ ಪೊಲೀಸರಿಗೆ ಹತ್ತಾರು ಸಮಸ್ಯೆಗಳು, ಸಂಕಷ್ಟಗಳು.  
ಪೊಲೀಸ ಇಲಾಖೆಯ ಉನ್ನತ ಅಧಿಕಾರಿಗಳಿಗೆ ವೇತನ, ಸೌಲಭ್ಯಗಳು ಚೆನ್ನಾಗಿರುತ್ತದೆ. ಆದರೆ ಕೆಳ ಹಂತದ ಸಿಬ್ಬಂದಿಗಳಿಗೆ ಹೇಳಿಕೊಳ್ಳುವಂತಹ ಸೌಕರ್ಯಗಳು ಇಲ್ಲದಿರುವುದರಿಂದ ಪೊಲೀಸರ ಜೀವನವೇ ಅತಂತ್ರ. ಬಡಪಾಯಿ ಪೊಲೀಸರ ಕಥೆ, ವ್ಯಥೆ ಹೇಳುತ್ತ ಹೋದರೆ ದೊಡ್ಡ ಗ್ರಂಥವೇ ಬರೆಯಬಹದು.