ಒಬ್ಬಂಟಿಯಾಗಿ ಕೂತು ಸಮಸ್ಯೆಗಳ ಬಗ್ಗೆ ಚಿಂತಿಸುತ್ತ ಅದೆಷ್ಟೋ ಸಲ ಕಣ್ಣೀರಾಕಿರುತ್ತೇವೆ, ದೇವರಿಗೆ ಕರುಣೆಯೇ ಇಲ್ಲ, ಎಲ್ಲಾ ಸಮಸ್ಯೆಗಳನ್ನು ನನಗೊಬ್ಬನಿಗೆ ನೀಡಿದ್ದಾನೆ ಎಂದು ಸಾಕಷ್ಟು ಬಾರಿ ದೇವರನ್ನೇ ಬೈಯ್ದುಕೊಂಡಿರುತ್ತೇವೆ. ನನ್ನ ಹಣೆಬರಹ ಸರಿಯಿಲ್ಲ ಎಂದು ವಿಧಿ ನಿಯಮಕ್ಕೆ ಶಾಪ ಹಾಕಿರುತ್ತೇವೆ. ಸಮಸ್ಯೆಗಳ ಆಲೋಚನೆಯಲ್ಲಿ ಮುಳುಗಿ ಹೋಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡನ್ನು ಹದೆಗೆಡಿಸಿಕೊಳ್ಳುತ್ತೇವೆ. ಎಷ್ಟೋ ಬಾರಿ ಸಂತೋಷ ಪಡುವ ಕ್ಷಣಗಳು ಸಿಕ್ಕರೂ, ಅದನ್ನು ಮರೆತು ಮತ್ತೆ ಸಮಸ್ಯೆಗಳ ಬಗ್ಗೆ ಚಿಂತಿಸುತ್ತ ಕಳೆದ ದಿನಗಳು ಎಲ್ಲರ ಜೀವನದಲ್ಲೂ ಹತ್ತಾರು ಪುಟಗಳಷ್ಟಿದೆ, ಅಷ್ಟರ ಮಟ್ಟಿಗೆ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ.
ಸಮಸ್ಯೆ ಎಂಬ ಈ ಮೂರಕ್ಷರದ ಪದ ಇದೆಯಲ್ಲ, ಅದು ನಮ್ಮ ಜೀವನದ ಚಿತ್ರಣವನ್ನೇ ಅದಲು ಬದಲು ಮಾಡಿ ಬಿಡುತ್ತದೆ. ಇನ್ನೇನು ನನ್ನ ಜೀವನ ಬಹಳ ಸುಂದರ, ಖುಷಿಯಿಂದ ಸಾಗುತ್ತಿದೆ, ನನಗೆ ಯಾವುದೇ ಕೊರತೆ ಇಲ್ಲ ಎಂದು ಭಾವಿಸುತ್ತಿರುವಾಗಲೇ ಧಿಡೀರ್ ಎಂದು ಯಾವುದೋ ಒಂದು ರೂಪದಲ್ಲಿ ಬಂದರೆಗುವ ಸಮಸ್ಯೆ ನಮ್ಮ ಜೀವನಕ್ಕೆ ಪುಲ್ ಸ್ಟಾಪ್ ಇಟ್ಟು ಬಿಡುತ್ತದೆ. ಹಾಗೆ ನೋಡಿದರೆ ಪ್ರತಿಯೊಬ್ಬರು ಒಂದಲ್ಲಾ ಒಂದು ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲೇ ಬೇಕು ಎಂಬ ಕಲ್ಪನೆಯ ಗೋಪುರವನ್ನು ಸೃಷ್ಟಿಸಿಕೊಂಡಿರುತ್ತಾರೆ. ಆದರೆ ಜೀವನದಲ್ಲಿ ಬರುವ ಹಲವು ವಿಧವಾದ ಸಮಸ್ಯೆಗಳು ಗುರಿ ತಲುಪದಿರಲು ಹಾಗೂ ಬದಲಾಯಿಸಲು ಕಾರಣವಾಗುತ್ತದೆ. ಒಂದರ್ಥದಲ್ಲಿ ಗುರಿ ತಲುಪದಿರಲು ಸಮಸ್ಯೆ ಜೊತೆಗೆ ನಾವು ಕಾರಣರಾಗಿರುತ್ತೇವೆ.
ವಾಸ್ತವವೆಂದರೆ ಸಮಸ್ಯೆಗಳು ಬಂದಾಗ ಅದರ ಬಗ್ಗೆ ಆಲೋಚಿಸಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವ ಜೊತೆಗೆ ಸಮಯ ವ್ಯರ್ಥ ಮಾಡುವ ಜನರೇ ಹೆಚ್ಚು ಸಿಗುತ್ತಾರೆ ಹೊರತು ಸಮಸ್ಯೆ ಬಗೆಹರಿಸಲು ಪರಿಹಾರವನ್ನು ಯಾರು ಹುಡುಕುವುದೇ ಇಲ್ಲ. ಸಮಸ್ಯೆ ಬಗ್ಗೆ ಆಲೋಚಿಸುವ ಬದಲು ಅದಕ್ಕೆ ಪರಿಹಾರವನ್ನು ಹುಡಕಲು ಪ್ರಯತ್ನಿಸಿದರೆ ನಮ್ಮ ಜೀವನದಲ್ಲಿ ಬರುವ ಬಹುಪಾಲು ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಸಣ್ಣ ಪರಿಜ್ಞಾನವನ್ನು ಮರೆತು ಬಿಡುತ್ತೇವೆ.
ಸ್ವಾಮೀಜಿಯವರ 2 ಗಂಟೆಯ ಭಾಷಣ ಮುಕ್ತಾಯವಾದ ಮೇಲೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಲಾಯಿತು. ಆಗ ಒಬ್ಬ ವಿದ್ಯಾರ್ಥಿ ಎದ್ದುನಿಂತು ಸ್ವಾಮೀಜಿ, ನೀವು ಜೀವನದಲ್ಲಿ ಎಂದಾದರೂ ಕಷ್ಟಗಳೇ ಇಲ್ಲದಿರುವ ವ್ಯಕ್ತಿಯನ್ನು ನೋಡಿದ್ದೀರಾ, ನಾನು ಅಂತಹ ವ್ಯಕ್ತಿಯನ್ನು ನೋಡಬೇಕು ಎಂದು ಪ್ರಶ್ನೆ ಹಾಕಿದ. ಅದಕ್ಕೆ ಸ್ವಾಮೀಜಿ ಉತ್ತರಿಸುತ್ತ ಹೌದು ಎಂದರು, ಆಗ ಆ ವಿದ್ಯಾರ್ಥಿ ಯಾರು ಸ್ವಾಮೀಜಿ ಆ ವ್ಯಕ್ತಿ ಎಂದ, ಆಗ ಸ್ವಾಮೀಜಿ ಕಳೆದು ಎರಡು ಗಂಟೆಗಳಿಂದ ನಿನ್ನೆದೆರುಗೆ ಕೂತಿರುವ ನಾನೇ ಆ ವ್ಯಕ್ತಿ ಎಂದರು. ಎಲ್ಲರಿಗೂ ಆಶ್ಚರ್ಯ ಸ್ವಾಮೀಜಿಗಳಿಗೆ ಯಾವುದೇ ಕಷ್ಟಗಳಿಲ್ಲವೇ ಎಂದು ?
ಸ್ವಾಮೀಜಿ ತಮ್ಮ ಮಾತು ಮುಂದುವರೆಸುತ್ತಾ ಹೇಳಿದರು, ಕಷ್ಟಗಳಿಲ್ಲದ ವ್ಯಕ್ತಿಗಳನ್ನು ಈ ಭೂಲೋಕದಲ್ಲಿ ನೀನು ಎಲ್ಲೂ ಹುಡುಕಲು ಸಾಧ್ಯವಿಲ್ಲ. ನೀನು ಹುಡುಕ ಬೇಕಾದದ್ದು ಕಷ್ಟಗಳಿಲ್ಲದ ವ್ಯಕ್ತಿಗಳನ್ನಲ್ಲ ಬದಲಾಗಿ ಅದೆಷ್ಟೇ ಕಷ್ಟಗಳಿದ್ದರೂ ಆತ್ಮಸ್ಥೈರ್ಯ, ನಂಬಿಕೆ ಕಳೆದುಕೊಳ್ಳದೇ, ಧೈರ್ಯವಾಗಿ ಕಷ್ಟಗಳನ್ನು ಎದುರಿಸುತ್ತ ಜೀವನವನ್ನು ಸಮತೋಲನವಾಗಿ ಆಶಾವಾದದಿಂದ ಸಾಗಿಸುತ್ತಿರುವ ವ್ಯಕ್ತಿಯನ್ನು ಹುಡುಕಿ ಅವರಿಂದ ಮಾರ್ಗದರ್ಶನ ಪಡೆ ಆಗ ನಿನ್ನ ಜೀವನಕ್ಕೆ ಅರ್ಥ ಸಿಗುತ್ತದೆ ಎಂದರು.
ಎಷ್ಟೋ ಬಾರಿ ನಾವು ಪ್ರಪಂಚದಲ್ಲಿರುವ ಕಷ್ಟಗಳೆಲ್ಲಾ ನಮಗೆ ಬಂದಿದೆ ಎಂದು ಸ್ವತಃಹ ಭಾವಿಸಿಕೊಳ್ಳುತ್ತೇವೆ, ಅದೇ ನಿಜ ಎಂದು ಬಲವಾಗಿ ನಂಬುತ್ತೇವೆ. ಆದರೆ ಪ್ರಪಂಚದ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಆರ್ಥಿಕ (ಹಣಕಾಸು), ಕೌಟುಂಬಿಕ, ಶೈಕ್ಷಣಿಕ, ವೃತ್ತಿ, ಆರೋಗ್ಯ, ಸಾಮಾಜಿಕ, ವ್ಯಾಪಾರ, ಉದ್ಯೋಗ ಸೇರಿದಂತೆ ಮತ್ತಿತರ ವಿಚಾರಗಳಿಗೆ ಸಂಬಂಧಪಟ್ಟಂತೆ ಸಹಜವಾಗಿಯೇ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ, ಈ ಸಮಸ್ಯೆಗಳಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅದು ವಿಧಿ ನಿಯಮ.
ಆದರೆ ನಾವು ಮಾಡಬೇಕಾದದ್ದು ಮಾತ್ರ ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೂ ಎಲ್ಲೋ, ಯಾರಿಂದಲೋ ಪರಿಹಾರ ಇದ್ದೇ ಇರುತ್ತದೆ ಎಂಬ ನಂಬಿಕೆ ಎಂದು ಕಳೆದುಕೊಳ್ಳಬಾರದಷ್ಟೇ.
ಶ್ರೀರಾಮನು ತನ್ನ ತಂದೆ ದಶರಥ ರಾಜನ ನಂತರ ಅಯೋಧ್ಯೆಯ ರಾಜನಾಗುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ದಶರಥ ಕೈಕೆಗೆ ಕೊಟ್ಟ ಮಾತಿನ ಕಾರಣದಿಂದ ಶ್ರೀರಾಮನ ಬದಲಾಗಿ ಭರತನನ್ನು ಅಯೋಧ್ಯೆಯ ರಾಜನಾಗಿ ಮಾಡಲಾಗುತ್ತದೆ. ಶ್ರೀರಾಮನು ತನ್ನ ತಂದೆ ಕೊಟ್ಟ ಮಾತನ್ನು ಉಳಿಸಲು 14 ವರ್ಷಗಳ ಕಾಲ ವನವಾಸ ಮಾಡಬೇಕಾಗುತ್ತದೆ. ರಾವಣ ಸೀತೆಯನ್ನು ಅಪಹರಣ ಮಾಡಿಕೊಂಡು ಹೋದಾಗ ಶ್ರೀರಾಮ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ತನ್ನ ಮಕ್ಕಳಾದ ಲವ-ಕುಶರ ಜೊತೆ ಯುದ್ದ ಮಾಡಬೇಕಾದ ಪ್ರಸಂಗವು ರಾಮನಿಗೆ ಬರುತ್ತದೆ.
ರಾಮ ಹತ್ತಾರು ಕಷ್ಟಗಳನ್ನೆಲ್ಲಾ ಎದುರಿಸಿದ್ದಕ್ಕೆ ಇಂದು ಭಾರತ ದೇಶಾದ್ಯಂತ ವರ್ಷಕ್ಕೊಮ್ಮೆ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ದೇಶದ ತುಂಬಾ ಲಕ್ಷಾಂತರ ಶ್ರೀರಾಮನ ದೇಗುಲಗಳು ನಿರ್ಮಾಣವಾಗಿವೆ. ಅಲ್ಲಿ ಪ್ರತಿದಿನವು ರಾಮನಿಗೆ ಪೂಜೆ ನಡೆಯುತ್ತದೆ. ಒಮ್ಮೆ ಏನಾದರೂ ಶ್ರೀರಾಮ ಭರತನಿಗೂ ಮುನ್ನ ಅಯೋಧ್ಯೆಯ ರಾಜನಾಗಿದ್ದರೆ ಶ್ರೀ ರಾಮ 14 ವರ್ಷಗಳ ಕಾಲ ವನವಾಸ ಹೋಗುವ ಸ್ಥಿತಿ ಬರುತ್ತಿರಲಿಲ್ಲ. ವಾಲ್ಮೀಕಿ ಮಹರ್ಷಿಗಳು ರಾಮಾಯಣವು ಬರೆಯುವ ಸಂದರ್ಭವು ಸೃಷ್ಟಿಯಾಗುತ್ತಿರಲಿಲ್ಲ. ಅದರರ್ಥ ಕಷ್ಟಗಳನ್ನು ಎದುರಿಸಿ ಮುಂದೆ ಸಾಗಿದಾಗ ಮಾತ್ರ ಒಳ್ಳೆಯ ದಿನಗಳು ಸಿಗುತ್ತವೆ. ಕಷ್ಟಗಳೇ ನಮಗೆ ಬೇಡ ಎಂದು ಹೇಳುವವರು ದೊಡ್ಡ ಮಟ್ಟದ ಸಾಧನೆಯನ್ನು ಮಾಡಲು ಸಾಧ್ಯವೇ ಇಲ್ಲ ಎಂಬುವುದು ವಾಸ್ತವ.
ಶ್ರೀರಾಮ ಕಷ್ಟಗಳಲ್ಲಿ ಬೆಳೆದು ಬಂದಿದ್ದಕ್ಕೆ ಇಂದು, ಎಂದೆಂದೂ ಶಾಶ್ವತವಾಗಿರುತ್ತಾನೆ, ಶ್ರೀರಾಮನಿಗೆ ಕಷ್ಟಗಳೇ ಬರದಿದ್ದರೆ ಇತರೆ ಸಾಮಾನ್ಯ ರಾಜನಂತೆ ಅವರು ಒಬ್ಬರಾಗುತ್ತಿದ್ದರು ಅಷ್ಟೇ.
ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರಂತೆ, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳೇ ಬಂದಿಲ್ಲ ಎಂದರೆ ನಾವು ಹೋಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ ಎಂದು. ಕಷ್ಟಗಳೇ ನಮ್ಮ ಜೀವನದಲ್ಲಿ ಬಂದಿಲ್ಲ ಎಂದರೆ ಸಾಧನೆ ಮಾಡಬೇಕೆಂಬ ಗುರಿ ನಮ್ಮಲ್ಲಿ ಇಲ್ಲ ಎಂದು ಅರ್ಥ. ಸಾಧನೆ ಮಾಡಬೇಕೆಂಬ ಬಲವಾದ ಇಚ್ಛೆ ಇದ್ದವರಿಗೆ ಮಾತ್ರ ಕಷ್ಟಗಳು ಹೆಚ್ಚಾಗಿಯೇ ಬರುತ್ತದೆ. ಕಷ್ಟಗಳು ನಮಗೆ ಹೆಚ್ಚಿದ್ದರೆ ನಾವು ಏನೋ ಒಂದು ಸಾಧನೆ ಮಾಡಲು ಹೊರಟಿದ್ದೇವೆಂದು ಅರ್ಥ, ಸೋ ಕಷ್ಟಗಳು ನಮಗೆ ಹೆಚ್ಚಿದ್ದರೆ ಖುಷಿ ಪಡಬೇಕು ಹೊರತು ದುಖಃವನ್ನಲ್ಲ ಎಂದು ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದರಂತೆ.
ಮೊನ್ನೆ ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಬಂದಿತ್ತು, ಒಬ್ಬ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಅದೇ ರಸ್ತೆಯಲ್ಲಿ ಮತ್ತೊಬ್ಬ ವ್ಯಕ್ತಿ ಒಳ್ಳೆಯ ಬ್ರಾಂಡೆಡ್, ಹೆಚ್ಚು ಬೆಲೆ ಬಾಳುವ ಶೂ ಧರಿಸಿ ಹೋಗುತ್ತಿರುತ್ತಾನೆ. ಇದನ್ನು ನೋಡಿದ ಈತ ತನ್ನ ಕಾಲನ್ನು ನೋಡಿಕೊಳ್ಳುತ್ತಾನೆ. ಹಳೆಯ, ಕಿತ್ತು ಹೋದ ಚಪ್ಪಲಿ ಧರಿಸಿರುತ್ತಾನೆ. ಆಗ ಈತ ತನ್ನ ಮನಸ್ಸಲ್ಲಿ ಅಂದು ಕೊಳ್ಳುತ್ತಾನೆ, ದೇವರಿಗೆ ನನ್ನ ಮೇಲೆ ಕೋಪವೇಕೆ, ಕಿತ್ತುಹೋದ ಚಪ್ಪಲಿಯನ್ನು ಹಾಕಿಕೊಳ್ಳುವ ದುಸ್ಥಿತಿ, ನನಗೇಕೆ ಕೊಟ್ಟ ಎಂದು ಕೋಪಿಸಿಕೊಳ್ಳುತ್ತಾನೆ. ಸ್ವಲ್ಪ ಮುಂದೆ ಸಾಗಿದ ನಂತರ ಮತ್ತೊಬ್ಬ ವ್ಯಕ್ತಿಗೆ ಎರಡು ಕಾಲುಗಳು ಇರುವುದಿಲ್ಲ, ತುಂಬಾ ಕಷ್ಟ ಬಿದ್ದು ನಡೆದುಕೊಂಡು ಹೋಗುತ್ತಿರುತ್ತಾನೆ. ಆಗ ಈತ ತನ್ನ ಕಾಲನ್ನು ನೋಡಿಕೊಳ್ಳುತ್ತಾನೆ. ಆತನಿಗಿಂತ ನಾನೇ ಪರವಾಗಿಲ್ಲ, ನನಗೆ ಹಾಕಿಕೊಳ್ಳಲು ದುಬಾರಿ ಬೆಲೆಯ ಶೂಗಳು ಇಲ್ಲದಿದ್ದರು, ಕನಿಷ್ಠ ಪಕ್ಷ ಚಪ್ಪಲಿ ಹಾಕಿಕೊಳ್ಳಲಾದರೂ ಕಾಲುಗಳಿವೆ. ಆದರೆ ಆತÀ ಚಪ್ಪಲಿಗಳನ್ನು ಹಾಕಿಕೊಳ್ಳಲು ಕೂಡ ಸಾಧ್ಯವಿಲ್ಲವಲ್ಲ ಪಾಪ ಹೇಗೆ ಜೀವನ ಮಾಡುವುದು ಎಂದು ಜೀವನದ ಸತ್ಯಾಂಶವನ್ನು ಅರ್ಥ ಮಾಡಿಕೊಳ್ಳುತ್ತಾನೆ.
ಎಲ್ಲ ಕಷ್ಟಗಳು ನನಗೊಬ್ಬನಿಗೆ ಇದೆ ಎಂದು ಆಲೋಚಿಸುವುದೇ ಮಹಾನ್ ದೊಡ್ಡ ತಪ್ಪು, ಮೂರ್ಖತನ. ನಮಗಿಂತ, ನಾವು ಊಹೆ ಮಾಡಲು ಅಸಾಧ್ಯವಾದ ಅದೆಷ್ಟೋ ಕಷ್ಟಗಳನ್ನು ಲಕ್ಷಾಂತರ ಜನರು ಎದುರಿಸುತ್ತಿದ್ದಾರೆ. ಆದರೆ ಅವರೆಂದೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ, ಜೀವನದಲ್ಲಿ ಜಿಗುಪ್ಸೆ ಕಾಣುವುದಿಲ್ಲ. ಕಾರಣ ಇಂದಲ್ಲಾ ನಾಳೆ ಕಷ್ಟಗಳು ಬಗೆಹರಿಯುತ್ತದೆ, ಕಷ್ಟಗಳ ನಂತರ ಸುಂದರವಾದ ಜೀವನ ನಮಗೆ ಸಿಕ್ಕೆ ಸಿಗುತ್ತದೆ ಎಂಬ ಆಶಾವಾದದಿಂದ ಜೀವನ ಸಾಗಿಸುತ್ತಾರೆ ಹೊರತು ಕಷ್ಟಗಳ ಬಗ್ಗೆ ಆಲೋಚಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದಿಲ್ಲ. ಕಷ್ಟಗಳ ಬಗ್ಗೆ ಚಿಂತಿಸುತ್ತ ಈ ಅಲ್ಪ ಸಮಯದ ಮಾನವ ಜೀವನವನ್ನು ಏಕೆ ವ್ಯರ್ಥ ಮಾಡಿಕೊಳ್ಳಬೇಕು.
ಅಷ್ಟೇಕೆ ಭಗವಂತನನ್ನೇ ಈ ಕಷ್ಟಗಳು ಬಿಡುವುದಿಲ್ಲವೆಂದರೆ, ಇನ್ನು ಸಾಮಾನ್ಯ ಜನರು ನಾವು ಯಾವ ಲೆಕ್ಕ.. ಆತ್ಮಸ್ಥೈರ್ಯ, ಸಾಧಿಸುವ ಛಲವಿದ್ದರೆ ಸಮಸ್ಯೆಗಳು ಬಂದರೆನಂತೆ, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂಗ್ಲೀಷ್ ನಲ್ಲಿ ಒಂದು ಮಾತಿದೆ, Every problem is a gift, without problems we would not grow, ಅಂದರೆ ನಮ್ಮ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಯು ನಮಗೆ ಉಡುಗೊರೆ ಇದ್ದಂಗೆ, ಸಮಸ್ಯೆಗಳೇ ಇಲ್ಲದೇ ಹೋದರೆ ನಾವು ಸಾಧಿಸಲು, ಬೆಳೆಯಲು ಸಾಧ್ಯವೇ ಇಲ್ಲ, ಸೋ ಲೆಟ್ಸ್ ವೆಲ್‍ಕಮ್ ಪ್ರಾಬ್ಲಮ್ಸ್..


