⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಹಲವು ಕಾರಣಗಳಿಗಾಗಿ ನಾನು ಹಲವು ಬಾರಿ ಹತ್ತಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಹಲವು ಮಕ್ಕಳ ಜೊತೆ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ. ಅವುಗಳ ಪೈಕಿ ಮೂವರು ಮಕ್ಕಳ ಹೇಳಿದ ಘಟನೆಗಳು ನಿಜಕ್ಕೂ ಜೀವನದ ವಾಸ್ತವ ಸತ್ಯ ಏನೆಂಬುವುದು ಹಾಗೂ ಭವಿಷ್ಯದ ಕಲ್ಪನೆಗಳ ಬಗ್ಗೆ ಆಳವಾಗಿ ಆಲೋಚಿಸುತ್ತ ಆತ್ಮವಲೋಕನ ಮಾಡುವಂತಿತ್ತು. ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದರು ಸಿಗದ ಅದೆಷ್ಟು ವಿಚಾರಗಳು, ವಿಷಯಗಳು ಹಾಗೂ ಜ್ಞಾನವು ಕೆಲವರ ಜೀವನದ ವಿಚಾರಗಳನ್ನು ಕೇಳಿದಾಗ, ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ ಹಾಗೂ ಅರ್ಥವಾಗುತ್ತದೆ ಎಂದರೆ ಅಶೋಕ್ತಿಯಲ್ಲ.
ಒಮ್ಮೆ ಸರ್ಕಾರಿ ಪ್ರಾಥಮಿಕ ಶಾಲೆಯೊಂದಕ್ಕೆ ಹೋಗಿದ್ದೆ. ಆ ಶಾಲೆಯು ಕೋಲಾರ ಜಿಲ್ಲಾ ವ್ಯಾಪ್ತಿಯ ಆಂಧ್ರದ ಗಡಿ ಭಾಗದಲ್ಲಿ ಇದೆ. ಆ ಊರು ಕೋಲಾರ ಜಿಲ್ಲೆಯ ಕೊನೆಯ ಹಳ್ಳಿ. ಆ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಬಹುತೇಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಸೇರಿದ ಕಡುಬಡವರು.
ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸ್ಕೂಲ್ ಬ್ಯಾಗ್‌ಗಳನ್ನು ನೀಡಿದೆ. ಬ್ಯಾಗ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಸುಮ್ಮನೆ ಕುಳಿತಿದ್ದರೆ, ಅದರಲ್ಲಿ ಒಬ್ಬ ಮಾತ್ರ ತನ್ನ ಹಳೆಯ ಬ್ಯಾಗ್ ನಿಂದ ಪುಸ್ತಕಗಳನ್ನು ಹೊರ ತೆಗೆದು, ಹೊಸ ಬ್ಯಾಗ್ ನಲ್ಲಿ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತ, ಮುಗ್ದವಾಗಿ ಕೂತಿದ್ದ ಹಾಗೂ ಬಹಳ ಕ್ರಿಯಾಶೀಲತೆಯಿಂದ ಕಾಣುತ್ತಿದ್ದ, ನಾನು ಕುತೂಹಲದಿಂದ ಆತನ ಬಗ್ಗೆ ವಿಚಾರಿಸಿದೆ.
ಆತನ ಹೆಸರು ಆಕಾಶ್, 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸುಮಾರು 12 ವರ್ಷ ವಯಸ್ಸು, ಆತನಿಗೆ 7 ವರ್ಷ ವಯಸ್ಸಿದ್ದಾಗ ಆತನ ತಂದೆ, ತಾಯಿ ಇಬ್ಬರು ಕೂಡ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಆಕಾಶ್ ಮತ್ತು ಆತನ ತಂದೆ, ತಾಯಿ ಎಲ್ಲರೂ ಒಟ್ಟಿಗೆ ಸಂಬಂಧಿಕರ ಮನೆಗೆ ಹಬ್ಬವೊಂದರಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಆತನ ತಂದೆ, ತಾಯಿ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟರು. ಅಚ್ಚರಿಯೆಂದರೆ ಆಕಾಶ್ ಮಾತ್ರ ಆ ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದಿದ್ದೆ ವಿಪರ್ಯಾಸ. ಆತನ ಆಯುಷ್ಯ ರೇಖೆ ಕಟ್ಟಿ ಇದ್ದ ಕಾರಣ, ಅಂತಹ ಭೀಕರ ಅಪಘಾತದಲ್ಲೂ ಕೂಡ ಪ್ರಾಣ ಉಳಿದಿತ್ತು.
ತಂದೆ, ತಾಯಿಯ ಅಕಾಲಿಕ ಮರಣದ ನಂತರ ಆಕಾಶ್ ಈಗ ಅವರ ಅಜ್ಜಿಯ ಆಶ್ರಯದಲ್ಲಿ ಬಡತನದ ನಡುವೆಯೇ ಬೆಳೆಯುತ್ತಿದ್ದಾನೆ. ಚಿಕ್ಕವಯಸ್ಸಿನಲ್ಲೇ ತಂದೆ, ತಾಯಿಯ ಪ್ರೀತಿ, ಪ್ರೇಮ, ವಾತ್ಸಾಲ್ಯದಿಂದ ವಂಚಿತನಾದವನು.
ಆತನನ್ನು ಹತ್ತಿರಕ್ಕೆ ಕರೆದು ದೊಡ್ಡವನಾದ ಮೇಲೆ ಭವಿಷ್ಯದಲ್ಲಿ ಏನಾಗಬೇಕು ಎಂದು ಭಾವಿಸಿದ್ದೀಯ ಎಂದು ಕೇಳಿದ, ಮರುಕ್ಷಣ ಆತ ಹೇಳಿದ ಉತ್ತರ ಎಂಬಿಬಿಎಸ್ ಮುಗಿಸಿ ವೈದ್ಯನಾಗಬೇಕು ಎಂದು ಭಾವಿಸಿದ್ದೇನೆ ಸಾರ್ ಎಂದು ಹೇಳಿದ.
ವೈದ್ಯ ವೃತ್ತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರುವೆ ಎಂದರೆ, ಅದಕ್ಕೆ ಆತನ ಉತ್ತರ ತನ್ನ ತಂದೆ, ತಾಯಿಗೆ ಅಪಘಾತವಾದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬಹುಃಶ ಬದುಕಿ ಉಳಿಯುತ್ತಿದ್ದರೇನೋ. ಅವರು ಜೀವಂತವಾಗಿದ್ದಿದ್ದರೆ ನಾನು ಅನಾಥನಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ.
ಸಮಾಜದಲ್ಲಿ ಪ್ರತಿನಿತ್ಯವು ಅವರದಲ್ಲದ ತಪ್ಪಿಗೆ ಅದೆಷ್ಟೋ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಹಲವರು ದೈಹಿಕ ವಿಕಲಚೇತನರಾಗುತ್ತಾರೆ. ಹಲವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಾರೆ.
ಆದ್ದರಿಂದ ನಾನು ವೈದ್ಯನಾಗಿ ಕನಿಷ್ಠ ಕೆಲ ಬಡವರ ಹಾಗೂ ಕಷ್ಟದಲ್ಲಿರುವವರ ಪ್ರಾಣ ಉಳಿಸಲು ಪ್ರಯತ್ನಿಸುವೆ ಎಂದು ಹೇಳುವ ಆತನ ಉತ್ತರದಲ್ಲಿ ತನ್ನ ತಂದೆ, ತಾಯಿಯನ್ನು ಕಳೆದುಕೊಂಡ ಅತಿಯಾದ ನೋವು, ಸಂಕಟ ಹಾಗೂ ಆ ಅಪಘಾತದಿಂದ ಅನುಭವಿಸುತ್ತಿರುವ ಹಲವು ಸಂಕಷ್ಟಗಳು ಕಾಣುತ್ತಿತ್ತು.
ತನ್ನಂತೆ ಯಾರು ಕೂಡ ತಂದೆ, ತಾಯಿಯನ್ನು ಕಳೆದುಕೊಳ್ಳಬಾರದು. ತಂದೆ, ತಾಯಿ ಇಲ್ಲದವರ ನೋವು, ಕಷ್ಟ ನನಗೆ ಮಾತ್ರ ಗೊತ್ತು. ಸೂಕ್ತ ಚಿಕಿತ್ಸೆ ಸಿಗದೆ ಯಾರು ಕೂಡ ಪ್ರಾಣ ಬಿಡಬಾರದೆಂದು ನಾನು ವೈದ್ಯನಾಗಲು ನಿಶ್ಚಯಿಸಿದ್ದೇನೆ. ವೈದ್ಯ ಸೇವೆಯನ್ನು ಬಡವರ ಸೇವೆಗಾಗಿ ಮೀಸಲಿಟ್ಟು, ತನ್ನ ತಂದೆ, ತಾಯಿಗೆ ಮಾಡಲು ಸಾಧ್ಯವಾಗದ ಸೇವೆಯನ್ನು ಬಡವರಿಗೆ, ಅಶಕ್ತರಿಗೆ ಮಾಡಿ ಅವರಲ್ಲಿ ನನ್ನ ತಂದೆ, ತಾಯಿಯನ್ನು ಕಾಣುತ್ತೇನೆ ಎನ್ನುವ ಆತನ ವಿಶ್ವಾಸ, ಧ್ಯೇಯದಲ್ಲಿ ಆತನ ಸಂಕಲ್ಪ, ಸೇವಾ ಮನೋಭಾವ ಎದ್ದು ಕಾಣಿಸುತ್ತಿತ್ತು.
ಇನ್ನೊಂದು ಸರ್ಕಾರಿ ಶಾಲೆಗೆ ಒಮ್ಮೆ ಹೋಗಿದ್ದೆ. ಆ ಶಾಲೆ ಇರುವ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಕಾರಣ ಸುತ್ತಲೂ ಅರಣ್ಯ ಹಾಗೂ ಬೆಟ್ಟ ಗುಡ್ಡಗಳು ಇರುವುದರಿಂದ ಅಲ್ಲಿ ನೆಟ್‌ವರ್ಕ್ ಸಿಕ್ಕರೆ ಅದೇ ಅದೃಷ್ಟ. ಇಂದಿಗೂ ಆ ಊರಿಗೆ ಸರ್ಕಾರಿ ಬಸ್ ಕೂಡ ಬರುವುದಿಲ್ಲ.
ಆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಹಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆ. ಆ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಬ್ಬ ವಿದ್ಯಾರ್ಥಿನಿ ತುಂಬಾ ಚೆನ್ನಾಗಿ ಎಲ್ಲಾ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಸಂಘಟಿಸಿದ್ದಳು. ಜಾನಪದ ಹಾಗೂ ಚಲನಚಿತ್ರ ಗೀತೆಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಸಂಘಟಿಸಿದ ವಿದ್ಯಾರ್ಥಿನಿ ಹೆಸರು ಕವನ. ಆಕೆ 8 ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಕರೆದು ನೀನು ತುಂಬಾ ಚೆನ್ನಾಗಿ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಕಾರ್ಯಕ್ರಮ ಸಂಘಟಿಸಿದ್ದೀಯಮ್ಮ ಎಂದು ಆಕೆಯನ್ನು ಅಭಿನಂದಿಸಿದೆ.
ಕಾರ್ಯಕ್ರಮದ ಮುಗಿದ ನಂತರ ವಿದ್ಯಾರ್ಥಿನಿ ಕವನ ಆಹ್ವಾನದ ಮೇರೆಗೆ ಅವರ ಮನೆಗೆ ಹೋಗಿದ್ದೆ. ಅವರ ಮನೆ ಊರಿನ ಕೊನೆಯಲ್ಲಿದ್ದು, ಅದು ಮಣ್ಣಲ್ಲಿ ಕಟ್ಟಿರುವ ತೀರ ಹಳೆಯದಾದ ಮನೆ. ಆ ಮನೆಯೊಳಗೆ ಇಬ್ಬರು ಮಾತ್ರ ಮಲಗುವಷ್ಟು ಸ್ಥಳವಕಾಶವಿತ್ತು. ಆ ಮನೆ ಒಳಹೊಕ್ಕರೆ ಮೊದಲು ಕಣ್ಣಿಗೆ ಕಾಣುವುದು ಪುಸ್ತಕಗಳ ಭಂಡಾರ. ಟೊಮೊಟೊ ತುಂಬಿಸಿ ಮಾರಾಟ ಮಾಡುವ ಟೊಮೊಟೊ ಕ್ರೇಟ್ ಗಳು ಹತ್ತಾರು ಇದ್ದವು, ಅವುಗಳ ತುಂಬಾ ಬರೀ ಪುಸ್ತಕಗಳೇ ತುಂಬಿದ್ದವು. ಅವುಗಳಲ್ಲಿ ಬರೀ ಶಾಲೆಯ ಪುಸ್ತಕಗಳಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸಾಹಿತ್ಯ, ಕಥೆಗೆ ಸಂಬಂಧಿಸಿದ ಪುಸ್ತಕಗಳು ಇದ್ದದ್ದು ನನಗೆ ಅಚ್ಚರಿ ಮೂಡಿಸಿತು.
ಕವನ ತಾಯಿ ಮಾತನಾಡುತ್ತ ನಮ್ಮ ಮನೆ ಬಹಳ ಚಿಕ್ಕದು ಸಾರ್, ಅನ್ಯತಾ ಭಾವಿಸಿಕೊಳ್ಳದೇ ಕುಳಿತುಕೊಳ್ಳಿ ಸಾರ್ ಎಂದು ಹೇಳುತ್ತ ಕಾಫಿ ಮಾಡಿಕೊಂಡು ಬಂದಳು. ಹಾಗೆ ಅವರ ಜೊತೆ ಮಾತನಾಡುತ್ತ ಇದ್ದಾಗ ಗೊತ್ತಾಗಿದ್ದು, ಕವನ ತಂದೆ ರೈತರು. ಅವರ ಬಳಿ ಇದ್ದ 2 ಎಕರೆ ಜಮೀನಿನಲ್ಲೇ ಕೃಷಿ ಮಾಡುತ್ತಿದ್ದರಂತೆ. ಬಿಸಿಲಲ್ಲಿ ಹಗಲಿರುಳು ಹಲವು ವರ್ಷಗಳು ದುಡಿದರು, ಯಾವ ಬೆಳೆಗೂ ಲಾಭ ಸಿಗದೆ ವಿಪರಿತ ಸಾಲಗಳಾಗಿ, ಬಡ್ಡಿ ಹಾಗೂ ಸಾಲ ತೀರಿಸಲಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದರಂತೆ.
ಆಗ ಕವನ ಕೇವಲ 3ನೇ ತರಗತಿ ವಿದ್ಯಾರ್ಥಿನಿ. ತಂದೆಯ ಆತ್ಮಹತ್ಯೆ ಹಾಗೂ ತಾಯಿಯ ಅಸಹಾಯಕತೆ ನೋಡಿ ತನ್ನ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ಏಕೈಕ ಆಸೆ ಹುಟ್ಟಿಕೊಳ್ಳುತ್ತದೆ.
ಕೃಷಿ ಬೆಳೆಗಳಿಗೆ ಯಾವುದೇ ಲಾಭ ಸಿಗದೆ ಪರಿತಪಿಸುವ ಕೋಟ್ಯಾಂತರ ರೈತರ ನೆರವಿಗೆ ಧಾವಿಸಬೇಕೆಂಬುವುದು ಕವನ ಅಚಲ ಛಲ. ಪ್ರತಿವರ್ಷವು ಕೃಷಿ ಬೆಳೆಗಳಿಗೆ ಬೆಲೆ ಸಿಗದೆ, ಬೆಳೆಗಳನ್ನು ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶೋಚನೀಯ ಪರಿಸ್ಥಿತಿ, ಅವರ ನೋವು, ಸಂಕಷ್ಟಗಳು, ತಂದೆಯನ್ನು ಕಳೆದುಕೊಂಡ ರೈತನ ಮಗಳಾಗಿ ನನಗೆ ಮಾತ್ರ ಗೊತ್ತು.
ನನ್ನಂತೆ ಸಂಕಷ್ಟ ಅನುಭವಿಸುವ ರೈತರ ಮಕ್ಕಳ ನೆರವಿಗೆ ಧಾವಿಸಬೇಕು ಹಾಗೂ ನನ್ನಿಂದ ಸ್ವಲ್ಪ ಮಟ್ಟಿಗೆಯಾದರೂ ಪರಿಹಾರ ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದ್ದೆ ಐ.ಎ.ಎಸ್ ಹುದ್ದೆ ಹೊರತು ನಾನು ಉನ್ನತ ಹುದ್ದೆಗೆ ಹೋದರೆ ಸಿಗುವ ಸೌಲಭ್ಯಗಳಿಗಾಗಿ ಅಲ್ಲ ಎನ್ನುವುದು ಕವನ ಮನದಾಳದ ಮಾತು.
ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಒಂದೇ ಆಸೆಯಿಂದ ತಾಯಿಯು ಕೂಲಿ ಮಾಡಿ ಸಂಪಾದಿಸಿದ ಉಳಿದ ಹಣದಿಂದ ನಾನು ಪುಸ್ತಕಗಳನ್ನು ಖರೀದಿಸುತ್ತೇನೆ. ಬೇರೆಯವರಂತೆ ತಿಂಡಿ, ತಿನಿಸುಗಳಿಗೆ, ದುಂದುವೆಚ್ಚಗಳಿಗೆ ಹಣ ಖರ್ಚು ಮಾಡುವ ಬದಲು ಪುಸ್ತಕಗಳ ಮೇಲೆ ವಿನಿಯೋಗಿಸುತ್ತೇನೆ ಸಾರ್ ಎಂದು ಹೇಳುವ ಆಕೆಯ ಮಾತಿನಲ್ಲಿ ಏನೋ ಒಂದು ಜೀವನದಲ್ಲಿ ಸಾಧಿಸಬೇಕೆಂಬ ಹಠ ಮಾತ್ರ ಸ್ಪಷ್ಟವಾಗಿತ್ತು.
ಇನ್ನೊಂದು ಶಾಲೆಗೆ ಹೋಗಿದ್ದೆ, ಆ ಶಾಲೆಯಲ್ಲಿ ತೀರ ಬಡ ಕುಟುಂಬಕ್ಕೆ ಸೇರಿದ ವಿಕಲಚೇತನ ವಿದ್ಯಾರ್ಥಿಯೊಬ್ಬನಿದ್ದ. ಆತನ ಹೆಸರು ಸಾಗರ್. ಆತನಿಗೆ ಹುಟ್ಟಿನಿಂದಲೇ ದೈಹಿಕ ನ್ಯೂನತೆ ಇತ್ತು. ಎರಡು ಕಾಲುಗಳು ನಡೆಯಲು ಸಾಧ್ಯವಾಗದ ಮಟ್ಟಿಗೆ ದೈಹಿಕ ನ್ಯೂನತೆಯಿಂದ ಕೂಡಿದ್ದ. ಹಾಗೆಯೇ ಆತನ ಜೊತೆ ಮಾತನಾಡುತ್ತಿದ್ದಾಗ ಗೊತ್ತಾಗಿದ್ದು, ಆತ ತನ್ನ ಮನೆಯಲ್ಲಿ ಒಂದು ಹಣ ಸಂಗ್ರಹ ಮಾಡುವ ಹುಂಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಅದರಲ್ಲಿ ಆತ ತನ್ನ ಬಳಿ 5, 10 ರೂಪಾಯಿ ಇದ್ದಾಗ ಹಣವನ್ನು ಹುಂಡಿಯಲ್ಲಿ ಹಾಕಿ ಹಣ ಸಂಗ್ರಹಿಸಿ ಇಡುತ್ತಿದ್ದಾನೆಂದು.
ಕಾರಣ ಈತನ ತಂದೆ ವಿಪರಿತ ಮದ್ಯಪಾನ ಮಾಡಿ, ಮಾಡಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ. ತಂದೆ ಮರಣದ ನಂತರ ಇವರ ಇಡೀ ಕುಟುಂಬವೇ ಛಿದ್ರ ಛಿದ್ರವಾಗುತ್ತದೆ. ತಂದೆ ಮರಣ ನಂತರ ತಾಯಿ ಕುಟುಂಬ ನಿರ್ವಹಣೆಗಾಗಿ ಕೂಲಿ ಮಾಡುತ್ತ ಪ್ರತಿನಿತ್ಯವು ತರುವ 300 ರೂ.ಗಳ ಸಂಪಾದನೆಯಿಂದ 3 ಜನರ ಜೀವನ ಸಾಗಿಸಬೇಕು.
ಒಂದೊತ್ತು ಊಟಕ್ಕೂ ಪರದಾಡುವ ಸಂಕಷ್ಟ, ಪುಸ್ತಕಗಳನ್ನು ಖರೀದಿಸಲು ಕೂಡ ಸಾಧ್ಯವಾಗದ ದುಸ್ಥಿತಿ ನಮಗೆ ಮಾತ್ರ ಗೊತ್ತು. ತಮ್ಮ ಕುಟುಂಬ ಈ ಸ್ಥಿತಿಗೆ ಬರಲು ಕಾರಣ ತಮ್ಮ ತಂದೆಗಿದ್ದ ವಿಪರಿತ ಮದ್ಯಪಾನ ಚಟ. ಅದೆಷ್ಟೋ ಕುಟುಂಬಗಳು ಮದ್ಯಪಾನಕ್ಕೆ ಬಲಿಯಾಗಿ ಬೀದಿಗೆ ಬಂದಿದ್ದಾವೆ. ನಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟ, ನೋವುಗಳನ್ನು ಬೇರೆಯವರು ಅನುಭವಿಸದೆ ಇರಬೇಕಾದರೆ ಮದ್ಯಪಾನದಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ನನ್ನ ಆದ್ಯ ಕರ್ತವ್ಯ.
ಆ ಕಾರಣದಿಂದಲೇ ನಾನು ಉಳಿಸುವ ಹಣದಿಂದ ಮುಂದೊಂದು ದಿನ ಹಲವು ಭಾಗಗಳಲ್ಲಿ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ತೊಡಗುತ್ತೇನೆ, ಆ ಮೂಲಕ ಒಂದು ಕುಟುಂಬವನ್ನಾದರೂ ಬೀದಿಗೆ ಬರದಂತೆ ತಡೆಯುತ್ತೇನೆ ಎನ್ನುವ ಆತನ ಮಾತಿನಲ್ಲಿ ಸಾಮಾಜಿಕ ಬದ್ದತೆ ಹಾಗೂ ಸಮಾಜದ ಹಿತ ಒಳಗೊಂಡಿತ್ತು.
ಹಲವರು ತಾವು ಎದುರಿಸುವ ಸಮಸ್ಯೆಗಳಿಂದ ತಾವು ಸಾಗಬೇಕಾದ ಹಾದಿಯನ್ನು ಕಂಡುಕೊಳ್ಳುತ್ತಾರೆ. ಸಮಸ್ಯೆ ಬಂದಿದೆ ಎಂದು ಬರೀ ಅಳುತ್ತ, ಶಪಿಸುತ್ತ ಕೂರುವ ಹಲವರ ಮಧ್ಯೆ ಆಕಾಶ್, ಕವನ, ಸಾಗರ್ ಎಂಬ ವಿದ್ಯಾರ್ಥಿಗಳು ಬಹಳ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಸಮಸ್ಯೆಗಳ ಮಧ್ಯೆಯು ತಮ್ಮ ಜೀವನದ ಜೊತೆಗೆ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಅವರ ಆಸೆ, ಛಲ, ಧ್ಯೇಯ, ಹಠ ಯಾರಿಗೆ ಬರುತ್ತದೆ ಹೇಳಿ.
ಚಿಕ್ಕವಯಸ್ಸಿನಲ್ಲೇ ಹಲವು ಸಮಸ್ಯೆಗಳು ಬೆನ್ನ ಹತ್ತಿದರು, ಮನೆ ತುಂಬಾ ಸಮಸ್ಯೆಗಳೇ ತುಂಬಿದ್ದರು ಕೂಡ ಆತ್ಮವಿಶ್ವಾಸ ಕಳೆದುಕೊಳ್ಳದೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಮುಂದಿನ ಹಾದಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುವ ಇವರ ಆಲೋಚನೆಗಳು ನಿಜಕ್ಕೂ ಗ್ರೇಟ್, ವಂಡರ್‌ಪುಲ್.
ನಮ್ಮ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳ ಬಗ್ಗೆ ಆಲೋಚಿಸುತ್ತ, ಚಿಂತಿಸುತ್ತ, ಸಮಯ ವ್ಯರ್ಥ ಮಾಡುತ್ತ ಕೂರುವ ಬದಲು ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜೊತೆಗೆ ವಿಶಾಲವಾಗಿ, ವಿಭಿನ್ನವಾಗಿ ಆಲೋಚಿಸುತ್ತ, ಜೀವನ ಸಾಗಿಸುವುದರಲ್ಲಿ ಏನೋ ಒಂಥರ ತ್ರಿಲ್ ಇದೆ.


