ಭಾನುವಾರ, ಮೇ 26, 2019

ಜಗತ್ತನ್ನೇ ಗೆಲ್ಲುವ ಅಸ್ತ್ರ "ನಗು"..


 ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
 
ಮೊನ್ನೆ ಖಾಸಗಿ ಬಸ್ ನಲ್ಲಿ ಬೆಂಗಳೂರಿನಿಂದ ಆಂಧ್ರದ ಮದನಪಲ್ಲಿಗೆ ಹೋಗುತ್ತಿದ್ದೆ. ಹೆಚ್ಚು ಕಡಿಮೆ 3 ಗಂಟೆ ಪಯಣ. ಬಸ್ ನಲ್ಲಿ ಟಿ.ವಿವೊಂದಿತ್ತು, ಆದರೆ ಸ್ವಿಚ್ ಆನ್ ಮಾಡಿರಲಿಲ್ಲ. ಬಸ್ ನಲ್ಲಿದ್ದ ಒಬ್ಬ ವ್ಯಕ್ತಿ ಟಿ.ವಿ ಆನ್ ಮಾಡಿ ಚಿತ್ರ ಯಾವುದಾದರೂ ಹಾಕಿ ಬ್ರದರ್ ಎಂದು ಕಂಡೆಕ್ಟರ್ ಗೆ ಹೇಳಿದ. ಕಂಡೆಕ್ಟರ್ ಆತನ ಬಳಿಯಿದ್ದ ಚಲನಚಿತ್ರಗಳ ಸಿ.ಡಿಗಳನ್ನು ತಡಕಾಡಿ ಕೊನೆಗೆ ತೆಲುಗಿನ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ಹಾಕಿದ. 
ನನಗೂ ಬೇಸರವಾಗುತ್ತಿದ್ದರಿಂದ ಚಿತ್ರ ನೋಡುವತ್ತ ಮನಸ್ಸು ಮಾಡಿದೆ. 2013ರಲ್ಲಿ ಬಿಡುಗಡೆಯಾದ ಚಿತ್ರವಿದು. ಶ್ರೀಕಾಂತ್ ಅಡ್ಡಾಲ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖವಾಗಿ ವಿಕ್ಟರಿ ವೆಂಕಟೇಶ್, ಪ್ರಿನ್ಸ್ ಮಹೇಶ್ ಬಾಬು, ಸಮಂತಾ, ಅಂಜಲಿ, ಪ್ರಕಾಶ್ ರೈ ಸೇರಿದಂತೆ ಮತ್ತಿತರರು ನಟಿಸಿದ್ದಾರೆ. ಚಿತ್ರದ ಮುಖ್ಯ ಕಥಾ ಹಂದರವೆಂದರೆ ನಿಮ್ಮ ಎದುರಿಗೆ ಯಾರೇ ಬಂದರೂ ನಗುತ್ತ ಮಾತನಾಡಿಸಿ, ಅವರ ಕುಶಲೋಪರಿ ವಿಚಾರಿಸಿ. ಇದರಿಂದ ನಾವು ಕಳೆದು ಕೊಳ್ಳುವುದಾದರೂ ಏನು ಇಲ್ಲ. ಈ ಭೂಮಿ ಮೇಲೆ ಯಾರು ಶಾಶ್ವತ ಇಲ್ಲ, ಅಂತಹವುದರಲ್ಲಿ ಈ ಅಸೂಹೆ, ಹೊಟ್ಟೆಕಿಚ್ಚು ಪಡುವುದಾದರೂ ಏತಕ್ಕೆ. ಕೊನೆಗೆ ಉಳಿಯುವುದು ಪ್ರೀತಿ ಮಾತ್ರ. 
ಜೀವಮಾನವಿಡಿ ನಮಗೆ ಅನೇಕ ಸಂದರ್ಭಗಳಲ್ಲಿ ಎದುರಾಗುವ ವ್ಯಕ್ತಿಗಳನ್ನು ಗೌರವಿಸೋಣ, ಪ್ರೀತಿಸೋಣ ಅದು ಕೂಡ ಮುಗುಳ್ನೆಗೆಯಿಂದ ಎಂದು ಈ ಚಿತ್ರವು ನಗು ಹಾಗೂ ನಿಷ್ಕಲ್ಮಷ ಪ್ರೀತಿಯ ಬಗ್ಗೆ ತಿಳಿಸುತ್ತದೆ. 
ಬಸ್ ನಲ್ಲಿ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ವೀಕ್ಷಿಸುತ್ತ ಹೋಗುತ್ತಿದ್ದಾಗ ಘಟನೆಯೊಂದು ನೆನಪಾಯಿತು. ಆಂಧ್ರಪ್ರದೇಶದ ತಿರುಪತಿ ಬಳಿಯ ವಿಶ್ವವಿದ್ಯಾಲಯೊಂದಕ್ಕೆ ಅಧ್ಯಯನದ ದೃಷ್ಟಿಯಿಂದ ಹೋಗಿದ್ದೆ. ಅಲ್ಲಿ ಯುವಶಕ್ತಿಗೆ ಮಾರ್ಗದರ್ಶನ ಎಂಬ ವಿಷಯದ ಬಗ್ಗೆ ವಿಚಾರಸಂಕಿರಣವೊಂದು ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ  ಜಗತ್ತನ್ನು ಗೆಲ್ಲಬೇಕು ಎನ್ನುವುದು ನನ್ನ ಮುಖ್ಯ ಧ್ಯೇಯ. ಅದಕ್ಕಾಗಿ ನಾನೇನು ಮಾಡಬೇಕು ಎಂದು ಕಷ್ಟಕರವಾದ ಹಾಗೂ ಕ್ಲಿಷ್ಟ ಪ್ರಶ್ನೆ ಹಾಕಿದ. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಜಗತ್ತನ್ನು ಗೆಲ್ಲಬೇಕು ಎಂದು ನಿನ್ನ ಧ್ಯೇಯವಾದರೆ ಮೊದಲು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು, ಸಾಮರ್ಥ್ಯವನ್ನು ಬೆಳಸಿಕೊಂಡು ಹಗಲಿರುಳು ಶ್ರಮಿಸು ಪ್ರಪಂಚವನ್ನು ಗೆಲ್ಲುತ್ತಿಯಾ ಎಂದರು. 
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮಾತನಾಡಿ, ಜಗತ್ತನ್ನು ಗೆಲ್ಲಬೇಕಾದರೆ ಮೊದಲು ಇತಿಹಾಸ ತಿಳಿದುಕೊಳ್ಳಬೇಕು. ಸಾಮ್ರಾಜ್ಯಗಳಿದ್ದ ಕಾಲದಲ್ಲಿ ರಾಜರು ಆಳ್ವಿಕೆ ನಡೆಸುತ್ತಿದ್ದರು. ಆಗ ರಾಜರು ಹೊಂದಿದ್ದ ವ್ಯಕ್ತಿತ್ವ, ಧೈರ್ಯ ಬೆಳೆಸಿಕೊಂಡು ಪ್ರಯತ್ನಿಸು, ಜಗತ್ತನ್ನು ಗೆಲ್ಲದಿದ್ದರು ಒಂದಷ್ಟು ಸಾಧನೆ ಮಾಡಬಹುದು ಎಂದು ಉತ್ತರಕೊಟ್ಟರು. 
ಅದೇ ವಿಚಾರ ಸಂಕಿರಣದಲ್ಲಿದ್ದ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯು, ಆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ನನ್ನ ಗಮನ ಸೆಳೆಯಿತು. ಅವರು ಹೇಳಿದ ಉತ್ತರ ಹೀಗಿತ್ತು. ಜಗತ್ತನ್ನು ಗೆಲ್ಲಬೇಕು ಎಂದು ನೀನು ಧ್ಯೇಯ ಹೊಂದಿರುವುದೇ ಅಚ್ಚರಿ. ಸಾಮಾನ್ಯವಾಗಿ ನಿನ್ನಂತಹ ಯುವಕರು ಅಂದುಕೊಳ್ಳುವುದು ಶಿಕ್ಷಣ ಪೂರ್ಣಗೊಳಿಸಿ, ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಕೈ ತುಂಬ ಸಂಪಾದನೆ ಮಾಡಬೇಕು. ಆ ನಂತರ ಒಳ್ಳೆಯ ಹುಡುಗಿಯನ್ನು ಮದುವೆಯಾಗ ಬೇಕು ಎಂದು, ಆದರೆ ನೀನು ಮಾತ್ರ ಅದಕ್ಕೆ ತದ್ವಿರುದ್ದವಾಗಿ ಧ್ಯೇಯ ಇಟ್ಟುಕೊಂಡಿದ್ದಿಯಾ, ಸಾಲದಕ್ಕೆ ನಮಗೆ ಕಠಿಣ ಪ್ರಶ್ನೆ ಬೇರೆ ಹಾಕಿದ್ದೀಯಾ, ಆದರೂ ಪರವಾಗಿಲ್ಲ, ನಿನ್ನ ಪ್ರಶ್ನೆಗೆ ನನ್ನ ಬಳಿ ಹತ್ತಿರ ಉತ್ತರವಿದೆ. 
ಇದನ್ನು ಪ್ರಶ್ನೆ ಹಾಕಿದ ಇತನೊಬ್ಬನೆ ಅಲ್ಲ ಈ ಸಭಾಂಗಣದಲ್ಲಿನ ಎಲ್ಲರೂ ಈ ಉತ್ತರ ಕೇಳಲೇಬೇಕು ಎಂದರು. ಎಲ್ಲರಿಗೂ ಕುತೂಹಲವಾಯಿತು ಯಾಕೆಂದರೆ ಜಗತ್ತನ್ನು ಗೆಲ್ಲುವುದಕ್ಕೆ ಇವರ ಬಳಿ ಉತ್ತರವಿದೆ ಎಂದರೆ ಸಹಜವಾಗಿಯೇ ಎಲ್ಲರಿಗೂ ಅಚ್ಚರಿ. ಎಲ್ಲರೂ ಕೆಲ ಕಾಲ ಅವರ ಭಾಷಣ ಕೇಳಲು ಕಿವಿಕೊಟ್ಟರು.
ಜಗತ್ತನ್ನು ಗೆಲ್ಲಬೇಕಾದರೆ ನೀವು ಆಥರ್ಿಕವಾಗಿ ಸದೃಢರಾಗಬೇಕಾದ ಅಗತ್ಯವಿಲ್ಲ. ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಪುಟಗಳನ್ನೆಲ್ಲಾ ತಿರುವಿ ಹಾಕುವ ಅಗತ್ಯವಿಲ್ಲ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಯುದ್ದ ಮಾಡಬೇಕಿಲ್ಲ. ರಾಜಕೀಯಕ್ಕೆ ಎಂಟ್ರೀ ಕೊಟ್ಟು ಚುನಾವಣೆಗೆ ಸ್ಪರ್ಧಿಸುವ  ಅಗತ್ಯವಂತೂ ಇಲ್ಲವೇ ಇಲ್ಲ. 
ಜಸ್ಟ್ ನೀವು ಮಾಡಬೇಕಾದದ್ದು ನಿಮ್ಮ ಮುಖದಲ್ಲಿ ಸ್ಮೈಲ್ (ನಗು) ಸದಾ ಕಣ್ಮರೆಯಾಗದಂತೆ ನೋಡಿಕೊಂಡರೆ ಸಾಕು. ನಗುವಿನ ಮಹತ್ವ ಹಾಗೂ ಎಲ್ಲಿ, ಯಾವಾಗ ನಗಬೇಕೆಂಬ ಸಾಮಾನ್ಯ ಪ್ರಜ್ಞೆ ನಿನಗೆ ಗೊತ್ತಿದ್ದರೆ ಈ ಜಗತ್ತನ್ನು ಗೆಲ್ಲಬೇಕೆಂಬ ನಿನ್ನ ಛಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಜಗತ್ತು ಗೆಲ್ಲಬೇಕಾದರೆ ನಗುವಿನ ಲಕ್ಷಣ ಸಾಕು. ಮತ್ಯಾವ ಅಸ್ತ್ರಗಳು ನಿಮಗೆ ಬೇಕಾಗಿಲ್ಲ ಎಂದು ಹೇಳಿದರು. 
ಈ ಉತ್ತರ ಕೇಳಿದ ಎಲ್ಲರಿಗೂ ಶಾಕ್, ಅರೇ ಈ ವ್ಯಕ್ತಿ ಜಗತ್ತನ್ನು ಗೆಲ್ಲಬೇಕಾದರೆ ಧೀರ್ಘವಾದ ಉತ್ತರ ಹಾಗೂ ದೊಡ್ಡದಾದ ಉದಾಹರಣೆಗಳು ನೀಡುತ್ತಾರೆ ಎಂದು ಸಭಿಕರು ಭಾವಿಸಿದ್ದರು. ಆದರೆ ಅವರು ಹೇಳಿದ್ದು ಮಾತ್ರ ಎರಡಕ್ಷರದ ನಗು. ಅವರು ಮಾತು ಮುಂದುವರೆಸುತ್ತ ಹೇಳಿದರು, ನೀವು ನಂಬಿ ಅಥವಾ ಬಿಡಿ ಜಗತ್ತನ್ನು ಗೆಲ್ಲಬೇಕಾದರೆ ನಗುವಿನಿಂದ ಮಾತ್ರ ಸಾಧ್ಯ. ಸಾವಿರಾರು ಕೋಟಿಗಳು ಇರುವವರು ಕೂಡ ಜಗತ್ತನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಆದರೆ ನಗುವಿನ ಮಹತ್ವ ತಿಳಿದವರು ಜಗತ್ತನ್ನು ಗೆದ್ದು ಸಾಧಿಸಿ ತೋರುತ್ತಾರೆ ಎಂದು ಸ್ಪಷ್ಟವಾಗಿ ಪುನುರುಚ್ಚರಿಸಿದರು.
ಯಾವುದೇ ಸಂದರ್ಭ ಬಂದರೂ ಕೋಪ ಮಾಡಿಕೊಳ್ಳಬೇಡಿ. ಸುಮ್ಮನೆ ಇತರರ ಮೇಲೆ ಸಿಟ್ಟು ಮಾಡಿಕೊಳ್ಳಬೇಡಿ. ಅದು ಮನೆ, ಕಚೇರಿ ಅಥವಾ ಇನ್ಯಾವುದೇ ಸ್ಥಳವಾದರೂ ನಿಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ನಿಮ್ಮ ಜೀವಮಾನವಿಡಿ ನಿಮಗೆ ಯಾರೇ ಎದುರಾಗಲಿ, ಯಾರೇ ನಿಮ್ಮನ್ನು ಮಾತನಾಡಿಸಲಿ ಅವರೊಂದಿಗೆ ಮಾತನಾಡುವಾಗ ನಗುವಿನ ಮುಖವಿಟ್ಟುಕೊಂಡು ಸಂಭಾಷಣೆ ನಡೆಸಿ, ಮುಖದಲ್ಲಿ ತೇಜಸ್ಸು, ಹುಮ್ಮಸ್ಸು ಕಳೆದುಕೊಳ್ಳಬೇಡಿ. 
ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೆ.. ನಿಮ್ಮ ಜೀವನದಲ್ಲಿ ಭೇಟಿಯಾದ ಸಾವಿರಾರು ಜನರ ಪೈಕಿ ಶೇ.95% ಜನ ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮನ್ನು ಗೌರವಿಸುತ್ತಾರೆ, ನಿಮ್ಮ ಜೊತೆ ಮಾತನಾಡಲು ಮುಂದಾಗುತ್ತಾರೆ. ಇದಕ್ಕೆಲ್ಲ ನೀವು ಮಾಡಬೇಕಾದದ್ದು ನಗು ಸದಾ ಇರುವಂತೆ ನೋಡಿಕೊಳ್ಳುವುದು ಅಷ್ಟೇ. ಜನರನ್ನು ನಿಮ್ಮತ್ತ ಸೆಳೆಯುವುದು, ಅವರು ನಿಮ್ಮನ್ನು ಗೌರವಿಸುವುದು, ಪ್ರೀತಿಸುವಂತೆ ಮಾಡುವಂತೆ ನಿಮ್ಮ ಮುಖದ ನಗು ಮಾಡುತ್ತದೆ. ಸಾವಿರಾರು ಜನರ ಗೌರವ, ಪ್ರೀತಿಗೆ ಪಾತ್ರರಾಗುತ್ತಿರಾ ಎಂದರೆ ಜಗತ್ತು ಗೆದ್ದಂಗೆ ತಾನೇ ಎಂದು ಅವರ ಹೇಳಿದ ಉತ್ತರ ಕೇಳಿದ ನಂತರ ಎಲ್ಲರೂ ಆತ್ಮವಲೋಕ ಮಾಡಿಕೊಳ್ಳುವಂತೆ ಮಾಡಿತು.
ಕೆಲ ದಿನಗಳ ಹಿಂದೆ ಕೆಲಸ ನಿಮಿತ್ತ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್ ತಾಲೂಕಿನ ಗ್ರಾಮವೊಂದಕ್ಕೆ ಹೋಗಿದ್ದೆ. ಅಚಾನಕ್ ಆಗಿ ನಮ್ಮ ತರಬೇತಿ ಸಂಸ್ಥೆಯ ಹಳೆಯ ಶಿಬಿರಾರ್ಥಿಯೊಬ್ಬರು ಸಿಕ್ಕರು. ಆ ಗ್ರಾಮ ಅವರದೆಂದು ನನಗೆ ಗೊತ್ತಿರಲಿಲ್ಲ. ತರಬೇತಿ ಸಂಸ್ಥೆಗೆ ಬಂದು ಅವರು ಕೆಲ ವರ್ಷಗಳು ಆಗಿದ್ದರಿಂದ ಅವರನ್ನು ನೆನಪು ಹಿಡಿಯುವುದು ಕಷ್ಟವಾಯಿತು. ಆದರೂ ಅವರೇ ತಮ್ಮ ಪರಿಚಯ ಮಾಡಿಕೊಂಡು, ಸಾರ್ ಇದು ನಮ್ಮೂರು, ಇಲ್ಲಿಗೇಕೆ ಬಂದಿದ್ದೀರಾ. ಮನೆಗೆ ಬನ್ನಿ ಸಾರ್ ಎಂದು ಕರೆದರು. ಅವರ ಆತ್ಮೀಯ ಕರೆಗೆ ಓಗೊಟ್ಟು ಮನೆಗೆ ಹೋದೆ. ಜ್ಯೂಸ್ ಮಾಡಿಕೊಟ್ಟರು. ನಂತರ ಹಾಗೆಯೇ ಮಾತನಾಡುತ್ತಿದ್ದಾಗ ಎಷ್ಟು ಜನ ಮಕ್ಕಳಮ್ಮ ನಿಮಗೆ, ಏನೇನು ಓದುತ್ತಿದ್ದಾರೆ ಎಂದೇ ಅದಕ್ಕೆ ಆಕೆ ಉತ್ತರಿಸುತ್ತ ಸಾರ್ ನನಗೆ ಇಬ್ಬರು ಗಂಡು ಮಕ್ಕಳು ಒಬ್ಬ 4ನೇ ತರಗತಿ ಮತ್ತೊಬ್ಬ 2ನೇ ತರಗತಿ ಎಂದು ಉತ್ತರಿಸಿದರು. 
ಅದೇ ಸಂದರ್ಭದಲ್ಲಿ ಆಕೆ ನನಗೊಂದು ಪಶ್ನೆ ಹಾಕಿದರು ಸಾರ್ ನಿಮಗೆ ಎಷ್ಟು ಜನ ಮಕ್ಕಳು ಎಂದು.. ಈ ಪ್ರಶ್ನೆ ನಾನು ಖಂಡಿತಾ ನಿರೀಕ್ಷಿಸರಿರಲಿಲ್ಲ, ಇಲ್ಲಮ್ಮ ನಾನು ಇನ್ನು ಮದುವೆಯಾಗಿಲ್ಲಮ್ಮ ಎಂದೇ. ಯಾಕೆ ಸಾರ್ ಎಂದಳು, ಇನ್ನು ಎರಡು ವರ್ಷಗಳು ಹೋಗಲಿ ತಾಯಿ, ಇರುವ ಕಷ್ಟಗಳು ಬಗೆಹರಿದರೆ ಮುಂದೆ ನೋಡೊಣ ಎಂದೇ, ಅದಕ್ಕೆ ಆಕೆ ಸಾರ್ ನಿಮಗೆ ಕಷ್ಟಗಳು ಇದೆಯೇ ಎಂದಳು. ಹೌದಮ್ಮ ಅದೇನು ಆಗೆ ಕೇಳುತ್ತಿರಾ, ಕಷ್ಟಗಳು ಇಲ್ಲದ ವ್ಯಕ್ತಿ ಯಾರು ಇದ್ದಾರೇ ಹೇಳಿ. ಅಲ್ಲಾ ಸಾರ್ ನಿಮ್ಮನ್ನು ನೋಡಿದರೆ ಹಾಗೆ ಕಾಣಿಸಲ್ಲ. ನೀವು ಸದಾ ನಗುತ್ತಿರುತ್ತೀರಾ, ನಿಮ್ಮ ನಗು ನೋಡಿದರೆ ಹೇಳಬಹುದು ನಿಮಗೆ ಕಷ್ಟಗಳು ಇಲ್ಲ ಎಂದರು. ನಗುವವರಿಗೆ ಕಷ್ಟಗಳು ಇಲ್ಲ ಎಂದು ಹೇಳಿದವರು ಯಾರಮ್ಮ ಎಂದು ಹೇಳಿ ಕೆಲಸದ ನಿಮಿತ್ತ ಅಲ್ಲಿಂದ ಹೊರಟೆ. 
ನನ್ನ ಕೆಲ ಸ್ನೇಹಿತರು ಆಗಾಗ ಕೇಳುತ್ತಾರೆ. ನೀನು ಸದಾ ನಗುತ್ತಲೇ ಇರುತ್ತಿಯಾ ಅದ್ಯಾವ ರೀತಿ.. ಅಷ್ಟೊಂದು ಆಸ್ತಿ, ಹಣ ನಿನ್ನ ಬಳಿ ಇದೆಯೇ, ಇಲ್ಲದಿದ್ದರೆ ನಗಲು ಮನಸ್ಸು ಎಲ್ಲಿತಾನೇ ಬರುತ್ತದೆ. ನಿಜ ಬಹುಪಾಲು ಜನ ಅಂದುಕೊಳ್ಳುವುದು ಯಾರಾದರೂ ಸದಾ ಹಸನ್ಮುಕಿಯಾಗಿ ನಗುತ್ತಿದ್ದರೆ ಅವರ ಬಳಿ ಬಹಳ ಆಸ್ತಿ, ಹಣ, ಜಮೀನು ಇದೆ. ಹಾಗೆಯೇ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ಭಾವಿಸಿರುತ್ತಾರೆ. ಆದರೆ ಬೇರೆಯವರಿಗೆ ಹೋಲಿಕೆ ಮಾಡಿಕೊಂಡರೆ ಸದಾ ನಗುತ್ತ ಮಾತನಾಡುವವರಿಗೆ ಹೆಚ್ಚು ಸಮಸ್ಯೆಗಳಿರುತ್ತದೆ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. 
ನಮ್ಮ ಎದುರಿಗೆ ಬಂದು ಮಾತನಾಡುವ ವ್ಯಕ್ತಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆತನಿಗೆ ಅಗತ್ಯವಿಲ್ಲ. ಆತನಿಗೆ ಬೇಕಾಗಿರುವುದದು ಖುಷಿಯಿಂದ ನಾವು ಮಾತನಾಡಿಸುತ್ತವೆಯೇ ಇಲ್ಲವೇ ಎಂಬುವುದು ಅಷ್ಟೇ. ಸಮಸ್ಯೆಗಳು ಇದೇ ಎಂದು ಆಲೋಚಿಸುತ್ತ ಇರುವ ಸಮಯವನ್ನು ನೋವಿನಿಂದ ಕಳೆಯುವ ಬದಲು ಅದೆಲ್ಲವನ್ನು ಮರೆತು ನಗುತ್ತ ಖುಷಿಯಿಂದ ಜೀವನ ಸಾಗಿಸುವುದು ಒಳಿತು. 
ಒಬ್ಬ ಶಿಬಿರಾರ್ಥಿ ಸಾರ್ ನೀವು ಒಳ್ಳೆಯವರೋ, ಕೆಟ್ಟೊವರೋ ನನಗೆ ಗೊತ್ತಿಲ್ಲ. ಆದರೆ ಒಂದಂತು ಸತ್ಯ ನೀವು ಸದಾ ಕಾಲ ನಗುತ್ತಲೇ ಮಾತನಾಡುತ್ತಿರಾ, ಅದು ನನಗೆ ಇಷ್ಟವಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದ.
ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ಇದ್ದರು. ಅವರು ತುಂಬ ಬುದ್ದಿವಂತರು. ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿದ್ದವರು. ವಿಷಯದ ಬಗ್ಗೆ ಆಳವಾದ ಜ್ಞಾನವಿತ್ತು. ಆದರೂ ಅವರ ಪಾಠ ಮಾಡುವಾಗ ಬಹುಪಾಲು ವಿದ್ಯಾರ್ಥಿಗಳಿಗೆ ಬೇಸರವಾದರೆ, ಕೆಲವರಿಗಂತೂ ನಿದ್ದೆ ಬರುತ್ತಿತ್ತು. ಅದಕ್ಕೆ ಒಂದೇ ಕಾರಣ ಅವರು ಪಾಠ ಮಾಡುವಾಗ ಅವರ ಮುಖ ಕೋಪದಿಂದ ಕೂಡಿರುತ್ತಿತ್ತು. ಅಪ್ಪಿತಪ್ಪಿಯು ನಗುತ್ತಿರಲಿಲ್ಲ. ಅವರ ಮುಖ ನೋಡಿದರೆ ಬೇಸರ ಆಗುತ್ತಿತ್ತು. ಅವರು ಬುದ್ದಿವಂತರು, ಆದರೆ ನಗು ಎಂಬ ಅಮೂಲ್ಯವಾದ ಅಂಶ ಅಳವಡಿಸಿಕೊಳ್ಳುವುದನ್ನು ಮರೆತು ಬಿಟ್ಟಿದ್ದರು. ಅದರ ಎಫೆಕ್ಟ್ ಅವರ ಕ್ಲಾಸಿನಲ್ಲಿ ಕಾಣುತ್ತಿತ್ತು.  
ನಿಮಗೆ ಗೊತ್ತಿದೆಯೋ ಇಲ್ಲವೋ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುವ ತಾಕತ್ತು ನಗುವಿಗೆ ಇದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿ ನಗುವಿಗೆ ಇದೆ. ಹೆಚ್ಚು ನಗುವವರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುತ್ತಾರೆ.  ಅಷ್ಟೇಕೆ ನಗುತ್ತ ಜೀವನ ಸಾಗಿಸುವವರಿಗೆ ಹೆಚ್ಚು ಜನ ಸ್ನೇಹಿತರಾಗುತ್ತಾರೆ, ಗೌರವಿಸುತ್ತಾರೆ. ನಗುತ್ತ ಜೀವನ ಸಾಗಿಸುವವರು ಒಳ್ಳೆಯ ಹಾದಿಯನ್ನೇ ಹಿಡಿಯುತ್ತಾರೆ. ಬೇರೆಯವರ ಹೃದಯವನ್ನು ಗೆಲ್ಲುವ ತಾಕತ್ತು, ಸಾಮರ್ಥ್ಯ ಇರುವುದು ಏಕೈಕ ನಗುವೆಂಬ ಅಸ್ತ್ರಕ್ಕೆ ಮಾತ್ರ. 
ಇಂದು ಕೆಲ ನಗರಗಳಲ್ಲಿ ಲಾಪಿಂಗ್ ಕ್ಲಬ್ ಗಳು ನಡೆಯುತ್ತವೆ. ಅಲ್ಲಿ ಎಲ್ಲಾ ವಯೋಮಾನದವರು ಬೇಸರ ಮರೆತು ಖುಷಿಯಾಗಿ ನಕ್ಕಿ ಆರೋಗ್ಯ ವೃದ್ದಿಸಿಕೊಳ್ಳುತ್ತಾರೆ. ನಗುವಿನ ಉಪಯೋಗಗಳು ಹತ್ತು ಹಲವು.
ಆದರೆ ಬೇರೆಯವರಿಗೆ ನೋವು ಕೊಡುವ ರೀತಿಯ ನಗು ಅಗತ್ಯವಿಲ್ಲ. ಸಂದರ್ಭ, ಸನ್ನಿವೇಶದಲ್ಲಿ ಅಗತ್ಯವಿಲ್ಲದಿದ್ದರು ಸುಮ್ಮನೆ ನಗುವುದು ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುತ್ತದೆ. ಇಂಗ್ಲೀಷ್ನಲ್ಲಿ ಒಂದು ಮಾತಿದೆ. laughing is the best medicine, but if you're laughing for no reason, you need medicine. ನಗುವು ಜೀವನೋತ್ಸಾಹಕ್ಕೆ ಒಂದು ಒಳ್ಳೆಯ ಔಷಧಿ. ಆದರೆ ಕಾರಣವಿಲ್ಲದೆ ನಕ್ಕರೆ ನಮಗೆ ಔಷಧಿ ಅಗತ್ಯವಿದೆ ಎಂದರ್ಥ. ಅಂದರೆ ನಗು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಅಂದಹಾಗೆ ನಗುವಿಗೂ ಒಂದು ದಿನವಿದೆ ಗೊತ್ತಾ. ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರ ವಿಶ್ವ ನಗುವಿನ ದಿನ (ವರ್ಲ್ಡ್ ಸ್ಮೈಲ್ ಡೇ) ಎಂದು ಆಚರಿಸಲಾಗುತ್ತದೆ. 
ಏನಿವೇ ಇನ್ನಾದ್ರೂ ಬೇಸರ ಬಿಟ್ಟು ಸ್ವಲ್ಪ ನಕ್ಕಿ ಪ್ಲೀಸ್..

ಬುಧವಾರ, ಮೇ 8, 2019

ಸಕ್ಸಸ್ ನ ಸೀಕ್ರೆಟ್, ಗೂಗಲ್ ನಲ್ಲೂ ಸಿಗಲ್ಲ..!

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಒಮ್ಮೆ ಹೈದರಾಬಾದ್ ನಗರಕ್ಕೆ ಹೋಗಿದ್ದೆ. ಹೈದರಾಬಾದಿನಲ್ಲೂ ನೋಡಬಹುದಾದ ಹತ್ತಾರು ಪ್ರವಾಸಿ ಸ್ಥಳಗಳಿದ್ದು, ಅವುಗಳನ್ನು ನೋಡುವ ಸಲುವಾಗಿ ತೆರಳಿದ್ದೆ. ಮೊದಲ ಬಾರಿ ಹೈದರಾಬಾದ್ ಗೆ ಹೋಗಿದ್ದ ಕಾರಣ ನಗರದ ಪರಿಚಯ ಅಷ್ಟಕಷ್ಟೇ. ಆದರೂ ಭಾಷೆ ಗೊತ್ತಿದ್ದರಿಂದ ಸಮಸ್ಯೆಯಾಗಲಿಲ್ಲ. 
ಆಗೋ ಈಗೋ ಚಾರ್ ಮಿನಾರ್ ತಲುಪಿದೆ. ಸಿನಿಮಾಗಳಲ್ಲಿ ಹಲವು ಬಾರಿ ನೋಡಿದ್ದ ನನಗೆ ಚಾರ್ ಮಿನಾರ್ ಹತ್ತಿರದಿಂದ ನೋಡಿದಾಗ ಖುಷಿಯಾಯಿತು. ಅಲ್ಲಿಂದ ಗೋಲ್ಕಂಡ ಪೋರ್ಟ್ ನತ್ತ ಪಯಣ, ತುಂಬಾ ಪುರಾತನವಾದ ಕೋಟೆ ಅದು, ಹತ್ತಿ ಇಳಿಯುವಷ್ಟರಲ್ಲಿ ಬೆವರು ಇಳಿಯುತ್ತದೆ. ಒಂದು ದಿನ ಪೂರ್ತಿ ನೋಡಿದರೂ ಸಾಲದು. ಅಲ್ಲಿಂದ ಹುಸೇನ್ ಸಾಗರ್ ಇದು ದೊಡ್ಡದಾದ ಕೆರೆ. ಇದು ನೋಡಿದ ನಂತರ ಹೊರಟಿದ್ದು ಸಲಾರ್ ಜಂಗ್ ಮ್ಯೂಸಿಯಂ, ಅಬ್ಬಾ ಈ ವಸ್ತು ಸಂಗ್ರಹಾಲಯವಂತು ಹೈದರಾಬಾದ್ ಪ್ರಾಂತ್ಯವನ್ನು ಆಳಿದ ರಾಜರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ತಿಳಿಸುತ್ತದೆ. ಮ್ಯೂಸಿಯಂ ನಾಲ್ಕು, ಐದು ಮಹಡಿಗಳಲ್ಲಿ ಇದೆ, ತುಂಬಾ ದೊಡ್ಡದು.
ಹೈದಾರಬಾದ್ ನ ಸುತ್ತಾಟ ಮಧ್ಯೆ ರಸ್ತೆಯೊಂದರಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ ಮೇಲೆ ಸಿಕಿಂದ್ರಾಬಾದ್ ಬೋರ್ಡು ಇತ್ತು.ಚಲನ ಚಿತ್ರಗಳಲ್ಲಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ ಹೆಸರು ಕೇಳಿದ್ದ ನೆನಪು ಬಿಟ್ಟರೆ ಬೇರೆನೂ ಗೊತ್ತಿರಲಿಲ್ಲ. ಸಿಕಿಂದ್ರಾಬಾದ್ ಒಮ್ಮೆ ನೋಡಿ ಬಿಡೋಣ ಎಂದು ಬಸ್ ಹತ್ತಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣಕ್ಕೆ ಬಂದೆ. ಹಾಗೆಯೇ ನಡೆದು ಮುಂದೆ ಹೋಗುತ್ತಿದ್ದಾಗ ರಸ್ತೆಯ ಭಾಗವೊಂದರಲ್ಲಿ ಸ್ವಾಮೀಜಿಯೊಬ್ಬರ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಹಾಕಲಾಗಿತ್ತು. ಅದೇಕೊ ಉಪನ್ಯಾಸ ಕೇಳುವ ಮನಸ್ಸಾಯಿತು. ಉಪನ್ಯಾಸದ ಸ್ಥಳ ಹುಡುತ್ತ ಹೊರಟರೆ ದೊಡ್ಡ ದೇಗುಲವೊಂದು ಕಾಣಿಸಿತು. ನನಗೂ ಬೆಳಗ್ಗೆಯಿಂದ ಸುತ್ತಾಡಿ ಸಾಕಾಗಿತ್ತು, ಸರಿ ಎಂದು ಒಳಗೆ ಹೋಗಿ ದೇವರ ದರ್ಶನ ಮಾಡಿದ ನಂತರ ಅಲ್ಲಿಯೇ ಹಿರಿಯ ಸ್ವಾಮೀಜಿಯವರೊಬ್ಬರ ಧಾರ್ಮಿ ಕ ಉಪನ್ಯಾಸ ಕಾರ್ಯಕ್ರಮವನ್ನು ಕೆಲವೊತ್ತು ಕೇಳೋಣ ಎಂದು ಅಲ್ಲಿಯೇ ಕೂತೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಸಮೂಹವಿತ್ತು. 
ಸ್ವಾಮೀಜಿ ತಮ್ಮ ಉಪನ್ಯಾಸ ಪ್ರಾರಂಭಿಸುತ್ತ ಮಧ್ಯದಲ್ಲಿ ಒಂದು ಪ್ರಶ್ನೆ ಕೇಳಿದರು ಸಕ್ಸಸ್ ಎಂದರೆ ಏನು ? ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಯುವಕ ಸಕ್ಸಸ್ ಎಂದರೆ ಇಂಜಿನಿಯರ್ ಆಗಿ ತಿಂಗಳಿಗೆ 1 ಲಕ್ಷ ಸಂಬಳವನ್ನು ಪಡೆದರೆ ಅದೇ ಸಕ್ಸಸ್ ಎಂದ. ಸ್ವಾಮೀಜಿ ಮತ್ತೆ ಪ್ರಶ್ನೆ ಕೇಳಿದರೂ ಸಕ್ಸಸ್ ಎಂದರೆ ಏನು ? ಆಗ ಒಬ್ಬ ಹುಡುಗಿ ಉತ್ತರ ಕೊಟ್ಟಳು ಸಕ್ಸಸ್ ಎಂದರೆ ಐ.ಎ.ಎಸ್ ಆಗುವುದು. ಐ.ಎ.ಎಸ್ ಪಾಸ್ ಆದರೆ ಜೀವನದಲ್ಲಿ ಸಕ್ಸಸ್ ಆದಂಗೆ ಎಂದಳು. ಅದ್ಯಾಕೋ ಸ್ವಾಮೀಜಿಗೆ ಈ ಉತ್ತರ ಇಷ್ಟವಾಗಲಿಲ್ಲ ನಾನು ಮತ್ತೇ ಅದೇ ಪ್ರಶ್ನೆ ಕೇಳುತ್ತೇನೆ ಸಕ್ಸಸ್ ಎಂದರೆ ಏನು ? ಎಂದರು. ಮಧ್ಯ ವಯಸ್ಸಿನ ಒಬ್ಬ ವ್ಯಕ್ತಿ ಉತ್ತರಿಸುತ್ತ ನಾನು ಪದವಿ ಪಡೆದಿದ್ದೇನೆ. ಕೆಲಸವು ಸಿಕ್ಕಿದೆ. ಒಳ್ಳೆಯ ವೇತನವು ಬರುತ್ತದೆ. ಮುಂದೆ ಮದುವೆಯಾಗುತ್ತೇನೆ, ಆ ನಂತರ ನನ್ನ ಮಕ್ಕಳನ್ನು ಚೆನ್ನಾಗಿ ಓದಿಸುತ್ತೇನೆ. ಅವರನ್ನು ಒಳ್ಳೆಯ ಕೆಲಸ ಪಡೆಯುವಂತೆ ತಯಾರು ಮಾಡುತ್ತಾನೆ. ನನ್ನ ಕುಟುಂಬಕ್ಕೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಇವಿಷ್ಟು ನಾನು ಅಷ್ಟುಕಟ್ಟಾಗಿ ನೆರವೇರಿಸಿದರೆ ಜೀವನದಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ಆದಂಗೆ ಅರ್ಥ ಎಂದು ಪಠಪಠಣೆ ಉತ್ತರಿಸಿದ.  
ಕೆಲವರ ಅಭಿಪ್ರಾಯಗಳನ್ನು ಆಲಿಸಿದ ನಂತರ ಸ್ವಾಮಿಜೀಗಳು ತಮ್ಮ ಭಾಷಣವನ್ನು ಮುಂದುವರೆಸುತ್ತ ಸಕ್ಸಸ್ ಎಂಬ ಇಂಗ್ಲೀಷ್ ಪದದ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಷ್ಟೇಕೆ ನಿಮ್ಮ ಕೈಗಳಲ್ಲಿ ಮೊಬೈಲ್ ಪೋನ್ ಗಳು ಇವೆ. ಅದರಲ್ಲಿ ಇಂಟರ್ ನೆಟ್ ಸಂಪರ್ಕವಂತು ಇದ್ದೇ ಇರುತ್ತದೆ. ಗೂಗಲ್ ಗೆ ಹೋಗಿ ಸಕ್ಸಸ್ ಎಂದರೆ ಏನು ಎಂದು ಪ್ರಶ್ನೆ ಟೈಪಿಸಿ ಏನು ಉತ್ತರ ಬರುತ್ತದೋ ನನಗೆ ಹೇಳಿ ಎಂದರು. ಸ್ವಾಮಿಜೀಗಳು ಪಿ.ಹೆಚ್.ಡಿ ಓದಿದ್ದರಿಂದ (ಬ್ಯಾನರ್ ನಲ್ಲಿ ವಿದ್ಯಾಬ್ಯಾಸದ ಬಗ್ಗೆ ನಮೂದಿಸಿದ್ದರು) ಟೆಕ್ನಾಲಜಿಯ ಅರಿವು ಇತ್ತು.

ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಬಹುತೇಕರು ತಮ್ಮ ಕೈಯಲಿದ್ದ ಮೊಬೈಲಿನಲ್ಲಿ ಸಕ್ಸಸ್ ಎಂದರೇನು ಎಂದು ಟೈಪು ಮಾಡಿದ್ದೇ ತಡ ಸಾವಿರಾರು ಉತ್ತರಗಳು ಗೂಗಲ್ ನಲ್ಲಿ ಹರಿದಾಡಿತು. ಇವುಗಳಲ್ಲಿ ಯಾವುದನ್ನೂ ಆಯ್ದುಕೊಂಡು ಸ್ವಾಮೀಜಿಗೆ ಹೇಳಬೇಕು ಎಂದು ಸಭಿಕರಿಗೆ ಅರ್ಥವಾಗಲಿಲ್ಲ. ಒಬ್ಬರಂತೂ ಸ್ವಾಮಿಜೀ ನೀವೇಳಿದಂಗೆ ಸಕ್ಸಸ್ ಎಂದರೆ ಏನು ಎಂದು ಗೂಗಲ್ ನಲ್ಲಿ ಪ್ರಶ್ನೆ ಹಾಕಿದರೆ ಸಾವಿರಾರು ಉತ್ತರಗಳೇನು ಸಿಕ್ಕಿದೆ. ಅದರಲ್ಲಿ ಸೂಕ್ತ ಯಾವುದು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದ. 
ಮುಗುಳ್ನೆಗೆಯಿಂದ ನಕ್ಕ ಸ್ವಾಮಿಜೀ ನೀವೇಲ್ಲರು ನನ್ನನ್ನು ಕ್ಷಮಿಸಬೇಕು ಇಷ್ಟೊತ್ತು ನಿಮಗೆ ತೊಂದರೆ ಕೊಟ್ಟಿದ್ದಕ್ಕೆ, ತಲೆ ಕೆಡಿಸಿದಕ್ಕೆ. ಸಕ್ಸಸ್ ಎಂದರೆ ಏನು ? ಅದಕ್ಕೆ ಸೂಕ್ತ ಉತ್ತರ ನನ್ನಿಂದ ನೀವೆಲ್ಲರೂ ನಿರೀಕ್ಷಿಸುತ್ತಿದ್ದಿರಾ ಎಂದು ಗೊತ್ತು. ಈಗ ಆ ವಿಷಯದತ್ತ ಹೊರಳಿದರೆ ಪ್ರತಿಯೊಬ್ಬರು ತಾವು ಸಕ್ಸಸ್ ಆಗಬೇಕು ಎಂದು ಭಾವಿಸುತ್ತಾರೆ ಹಾಗೂ ಜೀವನ ಪೂರ್ತಿ ಹೋರಾಟ ನಡೆಸುತ್ತಾರೆ. ಅದರಲ್ಲಿ ಕೆಲವರು ಸಫಲರಾಗುತ್ತಾರೆ, ಕೆಲವರು ವಿಫಲರಾಗುತ್ತಾರೆ. ಸಕ್ಸಸ್ ಎಂಬ ಈ ಮೂರಕ್ಷರ ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗವೂ ಹೌದು.  
ಸಕ್ಸಸ್ ಎಂದರೆ ನೀವು ಅಂದುಕೊಂಡಂಗೆ ದೊಡ್ಡ ವ್ಯಾಖ್ಯಾನವೇನಿಲ್ಲ. ಸುಲಭವಾಗಿ ಹೇಳಬಹುದಾದರೆ ಸಕ್ಸಸ್ ಎಂದರೆ ನಾವು ಈ ಭೂಮಿಯ ಮೇಲೆ ಇಲ್ಲದಿದ್ದರು ಕೂಡ ನಮ್ಮನ್ನು ಕನಿಷ್ಟ ಕೆಲವು ಮಂದಿಯಾದರೂ ನೆನಪಿಸಿಕೊಂಡು ನಮ್ಮ ಬಗ್ಗೆ ಒಳ್ಳೆಯ ಭಾವನೆ ಹಾಗೂ ಪ್ರೀತಿ ವ್ಯಕ್ತಪಡಿಸಿದರೆ ಅದಕ್ಕಿಂದ ದೊಡ್ಡ ಸಾಧನೆ, ಸಕ್ಸಸ್ ಬೇರೆ ಯಾವುದಿದೇ ಹೇಳಿ ಎಂದು ಅರ್ಥಗರ್ಭಿತವಾಗಿ ಸ್ವಾಮಿಜೀ ಉತ್ತರಿಸಿದರು.
ಇಂದು ಸಮಾಜದಲ್ಲಿ ಏನಾಗಿದೆ ಎಂದರೆ ನಿಮ್ಮೆಲ್ಲರ ಪ್ರಕಾರ ತಿಂಗಳಿಗೆ ಲಕ್ಷ ರೂ. ಸಂಪಾದನೆ ಮಾಡಿದರೆ ಸಕ್ಸಸ್. ಐ.ಎ.ಎಸ್ ಅಧಿಕಾರಿಯಾದರೆ ಸಕ್ಸಸ್. ಡಾಕ್ಟರ್, ಇಂಜಿನಿಯರ್ ಆದರಂತೂ ಸಕ್ಸಸ್ ತಲುಪುಬಿಟ್ಟಿದ್ದೇವೆ ಎಂದು ಆಕಾಶದಲ್ಲೇ ತೇಲುತ್ತೇವೆ. ನೆನಪಿನಲ್ಲಿಟ್ಟುಕೊಳ್ಳಿ ದೇಶದಲ್ಲಿ ಎಷ್ಟೋ ಜನ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಸಾವಿರಾರು ಜನ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವಿಪರ್ಯಾಸವೆಂದರೆ ಲಕ್ಷ ರೂ ಗಳಲ್ಲಿ ಸಂಪಾದನೆ ಮಾಡುತ್ತಿರುವ ಶೇ.99 % ಜನ ಯಾರಿಗೂ ಗೊತ್ತಿಲ್ಲ. ಅಷ್ಟೇಕೆ ಸ್ವಾತಂತ್ರ್ಯ ಬಂದಾಗನಿಂದಲೂ ಆದ ಸಾವಿರಾರು ಐ.ಎ.ಎಸ್, ಐ.ಪಿ.ಎಸ್ ಸೇರಿದಂತೆ ಮತ್ತಿತರ ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳ ಪೈಕಿ ನಮ್ಮ ಎರಡು ಕೈಗಳಲ್ಲಿ ಇರುವ ಹತ್ತು ಬೆರಳುಗಳ ಸಂಖ್ಯೆಯ ಅಧಿಕಾರಿಗಳ ಹೆಸರಷ್ಟೇ ನಮಗೆ ನೆನಪಿದೆ ಎಂದರು ಸ್ವಾಮೀಜಿ.
ಕೋಟ್ಯಾಂತರ ಆಸ್ತಿ, ಅಧಿಕಾರ, ಸಂಬಳ ಪಡೆಯುವವರೆಲ್ಲಾ ಸಕ್ಸಸ್ ಆಗಿದ್ದಾರೆ ಎಂದರೆ  ಅವರು ಯಾರು ಸಮಾಜಕ್ಕೆ ಇಂದಿಗೂ ಗೊತ್ತೆ ಇಲ್ಲವಲ್ಲ. ಸಕ್ಸಸ್ ಎಂದರೆ ಅದು ನಮ್ಮ ಕಣ್ಣಿಗೆ ಕಾಣದ ಶಕ್ತಿ. ಕನಿಷ್ಟ ಅವನು ಪ್ರಾಥಮಿಕ ಶಾಲೆಗೆ ಹೋಗದಿದ್ದರು, ಲಕ್ಷಗಳಲ್ಲಿ ಸಂಪಾದಿಸದಿದ್ದರು, ಕಾರು, ಬಂಗಲೆ, ಆಳುಗಳು ಇಲ್ಲದಿದ್ದರು ಕೂಡ ಯಾರಾದರೂ ಕಷ್ಟ ಎಂದು ಬಂದಾಗ ಯಾರ ಮನಸ್ಸು ಕರಗುತ್ತದೋ, ತಮ್ಮ ಕೈಯಿಂದ ಆಗುವ ಸಹಾಯ ಕಷ್ಟದಲ್ಲಿ ಇದ್ದವರು ಕೇಳುವುದಕ್ಕಿಂದ ಮುಂಚೆಯೇ ಮಾಡಬೇಕೆಂಬ ನಿಷ್ಕಲ್ಮಷ ಮನಸ್ಸು ಇರುತ್ತದೋ, ಅಹಂಕಾರ, ಅಸೂಹೆ, ದರ್ಪ, ನಾನೇ ಹೆಚ್ಚು ಎಂಬ ಕಲ್ಪನೆ ಇಲ್ಲದೇ ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಸರಳವಾಗಿ ಜೀವನ ಸಾಗಿಸುತ್ತಾನೋ ಅವನೇ ನಿಜವಾದ ವ್ಯಕ್ತಿತ್ವವುಳ್ಳ ಮನುಷ್ಯ. 
ಆತ ನಿಜವಾಗಲೂ ಜೀವನದಲ್ಲಿ ಸಕ್ಸಸ್ ಆದ ಎಂದೇ ಅರ್ಥ. ಮಹಾತ್ಮ ಗಾಂಧಿಜೀ, ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಲಾಲ್ ಬಹುದ್ದೂರ್ ಶಾಸ್ತ್ರಿಗಳು ಸೇರಿದಂತೆ ಮತ್ತಿತರು ಲಕ್ಷಗಳಲ್ಲಿ ವೇತನ ಪಡೆಯುತ್ತಿರಲಿಲ್ಲ. ಕಾರು ಬಂಗಲೆ ಅವರ ಹತ್ತಿರ ಇರಲಿಲ್ಲ. ಆದರೂ ಸಕ್ಸಸ್ ಆದ ವ್ಯಕ್ತಿಗಳೆಂದರೆ ತಕ್ಷಣ ನಮಗೆ ನೆನಪಾಗುವುದು ಇಂತವರು ಮಾತ್ರ. ಶತಮಾನಗಳು ಕಳೆದರೂ ಇಂತಹವರು ಸಮಾಜದಿಂದ ದೂರಿಸರಿಯಲ್ಲ ಎಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಸಭಿಕರ ಕಣ್ಣನ್ನು ಸ್ವಾಮಿಜೀಗಳು ತೆರೆಸಿದರು.
ಹಾಗೇಯೇ ಸ್ವಾಮಿಜೀಯವರು ಮುಖ್ಯ ಅಂಶದತ್ತ ಪ್ರಸ್ತಾಪಿಸಿದರು, ನಮ್ಮ ಜೀವನದ ಬಹುಪಾಲು ಸಮಯವನ್ನು ಬೇರೆಯವರೂ ಬೆಳೆಯಬಾರದು ಎಂಬ ಕಾರಣಕ್ಕಾಗಿಯೇ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಬಿಡುತ್ತೇವೆ. ಬೇರೆಯವರೂ ಬೆಳೆಯಬಾರದು ಎಂದು ವಿನಿಯೋಗಿಸುವ ಸಮಯದಲ್ಲಿ ಅರ್ಧ ಭಾಗವನ್ನು ನಾವು ಬೆಳೆಯಬೇಕು ಎಂದು ಬಳಸಿಕೊಂಡರೆ ಸಕ್ಸಸ್ ಎಲ್ಲಿ ತಾನೇ ನಮ್ಮಿಂದ ದೂರ ಹೋಗುತ್ತದೆ. ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದು ನಮ್ಮ ಜನಕ್ಕೆ ಅರ್ಥವಾಗಲ್ಲ ಎಂದು ಕುಟುಕಿದರು.
ಇಷ್ಟಾಗುವ ಹೊತ್ತಿಗೆ ಮಳೆ ಮುನ್ಸೂಚನೆ ಕಾಣುತ್ತಿತ್ತು. ಆ ಕಾರಣದಿಂದ ಅಲ್ಲಿಂದ ಎದ್ದು ಬಸ್ ಹತ್ತಿ ಪಯಣ ಬೆಳೆಸಿದೆ. ಬಸ್ ನಲ್ಲಿ ಹೋಗುತ್ತಿದ್ದಾಗ ಸ್ವಾಮಿಜೀಗಳ ಆ ಉಪನ್ಯಾಸವು ನನಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು, ಆಲೋಚಿಸುವಂತೆ ಮಾಡಿತು. ಸ್ವಾಮೀಜಿಗಳ ಆ ಮಾತು ಇಂದಿನ ಸಮಾಜದ ನಡೆಯುತ್ತಿರುವ ದಾರಿಯ ಬಗ್ಗೆ ವಿಶ್ಲೇಷಿಸುತ್ತದೆ. ಯಾವುದಾದರೂ ಒಂದು ಹುದ್ದೆ, ಲಕ್ಷಗಳಲ್ಲಿ ಸಂಬಳ, ಕಾರು, ಸೈಟು, ಜಮೀನು ಸಂಪಾದಿಸಿಬಿಟ್ಟರೆ ಜೀವನದಲ್ಲಿ ನಾವೇ ಶ್ರೇಷ್ಟ ಎಂದು ಭಾವಿಸಿಕೊಳ್ಳುತ್ತೇವೆ. ಸಕ್ಸಸ್ ನ ತುತ್ತ ತುದಿಗೆ ತಲುಪಿಯೇ ಬಿಟ್ಟೆವೆಂದು ತೇಲಾಡಿ ಬಿಡುತ್ತೇವೆ. ವಿಶೇಷವೆಂದರೆ ನಾವು ತಿಳಿದುಕೊಂಡಗೆ, ಮಾಡಿದ್ದು ಸಾಧನೆಯೇ ಅಲ್ಲ, ಅದು ಸಕ್ಸಸ್ ನ ಒಂದು ಭಾಗವಷ್ಟೇ ಎಂದು ಗೊತ್ತಾಗುವಷ್ಟಿಗೇ ಜೀವನವೇ ಮುಗಿಸಿಬಿಟ್ಟಿರುತ್ತೇವೆ. ಭ್ರಮೆಯಲ್ಲೇ ಜೀವನ ಮುಳುಗಿ ಹೋಗಿರುತ್ತದೆ.
ಜೀವನದಲ್ಲಿ ಸಕ್ಸಸ್ ಪಡೆಯಬೇಕು ಎಂದು ಏನೇನೋ ಮಾಡುತ್ತೇವೆ. ಸಕ್ಸಸ್ ಎಂದರೆ ಏನು ಎಂದು ನಿರ್ದಿಷ್ಟವಾಗಿ ಗೊತ್ತಿಲ್ಲದಿದ್ದರು ಸಕ್ಸಸ್ ಅನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ಎಷ್ಟೋ ಬಾರಿ ನಾವು ಬೆಳೆಯಬೇಕು ಎಂದು ಯಾರು ಯಾರಿಗೋ ಕಷ್ಟ ಕೊಡುತ್ತೇವೆ. ಯಾರ ಯಾರ ಮೇಲೋ ಕೋಪ ಮಾಡಿಕೊಂಡು, ದೂರ ಮಾಡಿಕೊಳ್ಳುತ್ತೇವೆ. ಇನ್ನೊಬ್ಬರು ಬೆಳೆಯದಂಗೆ ನೋಡಿಕೊಳ್ಳುತ್ತೇವೆ. ಅಸೂಹೆ, ಅಹಂಕಾರ ತಲೆ ತುಂಬ ತುಂಬಿಸಿಕೊಳ್ಳುತ್ತೇವೆ. ಅಂತಿಮವಾಗಿ ಸಣ್ಣದಾಗಿ ಏನಾದರೂ ಮಾಡಿದರೆ ಅದನ್ನೇ ಸಕ್ಸಸ್ ಎಂದು ಭಾವಿಸಿ ಆತ್ಮತೃಪ್ತಿ ಪಡೆಯುತ್ತೇವೆ. 
ಒಂದಂತು ಸತ್ಯ ಸ್ವಾಮಿಜೀಯ ಮಾತಿನಂತೆ ಸಕಸ್ಸ್ ಎಂದರೆ ಹಣ, ವಸ್ತು, ಅಧಿಕಾರ ಅಲ್ಲ. ಅದು ಮನುಷ್ಯರನ್ನು ಮೀರಿದ ಕಲ್ಪನೆ. ನಮ್ಮ ಬಗ್ಗೆ ನಾಲ್ಕು ಜನ ಯಾವಾಗ ಒಳ್ಳೆದು ಮಾತನಾಡಿಕೊಳ್ಳುತ್ತಾರೋ, ನಮ್ಮ ವ್ಯಕ್ತಿತ್ವ ನೋಡಿ ಗೌರವ, ಪ್ರೀತಿ ಕೊಡಲು ಒಂದಿಬ್ಬರಾದರೂ ಜೀವನದಲ್ಲಿ ಸಿಕ್ಕರೆ ಅದೇ ಸಕ್ಸಸ್. ಡಿಕ್ಷನರಿ, ಗೂಗಲ್ ಸರ್ಚ್ ಇಂಜಿನಲ್ಲೂ ಹುಡುಕುವ ಅವಶ್ಯಕತೆ ಇಲ್ಲ. ಸಕ್ಸಸ್ ಗೆ  ಶಾರ್ಟ್ ಕಟ್ಟಂತು ಇಲ್ಲ.