⏩ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ
ಇಷ್ಟು ವಯಸ್ಸಾದರೂ ಜೀವನದ ಬಗ್ಗೆ ಸ್ವಲ್ಪವೂ ಬೇಸರಿಸಿಕೊಳ್ಳದೇ, ದೇವರನ್ನು ಶಪಿಸದೇ, ಅತ್ಯುತ್ಸಾಹದಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದಿಯಾ ಅಜ್ಜಿ, ನಿಜಕ್ಕೂ ನೀನು ಗ್ರೇಟ್. ನಿನ್ನಂತ ಸ್ವಾಭಿಮಾನಿಗಳು 100 ವರ್ಷ ಬದುಕಬೇಕು ಎಂದು ಹೇಳಿದ್ದೆ ತಡ, ಅದಕ್ಕೆ ಆಕೆ ಹೇಳಿದ ಪ್ರಸಂಗ, ಘಟನೆಯೊಂದು ಎಲ್ಲರೂ ಆತ್ಮವಲೋಕನ, ಆಲೋಚಿಸುವಂತೆ ಮಾಡಿಕೊಳ್ಳುವಂತಿತ್ತು.
ಇಬ್ಬರು ವ್ಯಕ್ತಿಗಳು ತಮ್ಮ ಆಯುಷ್ಯವನ್ನು (ಜೀವಿತಾವಧಿ) ಹೆಚ್ಚಿಸಿಕೊಳ್ಳಲು ಹಲವು ದಿನಗಳ ಕಾಲ ದೀರ್ಘಾವಧಿಯ ತಪಸ್ಸನ್ನು ಮಾಡುತ್ತಾರಂತೆ. ಅವರ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷವಾಗಿ, ನಿಮ್ಮ ಆಸೆ, ಬೇಡಿಕೆಗಳು ಏನಿದೆ ಹೇಳಿ, ಅದನ್ನು ನಾನು ಈಡೇರಿಸುತ್ತೇನೆಂದು ಭರವಸೆ ನೀಡುತ್ತಾರಂತೆ.
ಅದಕ್ಕೆ ಆ ಇಬ್ಬರೂ ದೇವರೇ ನಮಗೆ ದೊಡ್ಡ, ದೊಡ್ಡ ಆಸೆ, ಬೇಡಿಕೆಗಳೇನಿಲ್ಲ. ಆದರೆ ನಮ್ಮಿಬ್ಬರಿಗೂ ಒಂದೇ ಒಂದು ಆಸೆ ಇದೆ. ಅದೆನೆಂದರೆ ನಮಗೆ ಯಾವುದೇ ತೊಂದರೆಯಾಗದೆ, ನಾವು 100 ವರ್ಷ ಜೀವಿಸಬೇಕು, ಬದುಕಬೇಕು. ನಾವಿಬ್ಬರು 100 ವರ್ಷ ಬದುಕುವ ರೀತಿ ಆಯುಷ್ಯವನ್ನು ದಯಪಾಲಿಸು ಎಂದು ಕೇಳುತ್ತಾರೆ. ಅದಕ್ಕೆ ದೇವರು ಸ್ವಲ್ಪ ಹೊತ್ತು ಆಲೋಚಿಸಿ, ಹೆಚ್ಚು ವರ್ಷ ಬದುಕ ಬೇಕೆನ್ನುವುದನ್ನು ಬಿಟ್ಟು ಬೇರೆ ಏನೇ ಆಸೆ ಇದ್ದರೂ ಕೇಳಿ, ಅದನ್ನು ನಾನು ಈಡೇರಿಸುವೆ ಎನ್ನುತ್ತಾರಂತೆ.
ಅದಕ್ಕೆ ಆ ಇಬ್ಬರೂ, ನಮಗೆ ಬೇರೆ ಯಾವುದೇ ಆಸೆಗಳಿಲ್ಲ, ಬದಲಾಗಿ ಹೆಚ್ಚಿನ ವರ್ಷ ಬದುಕಬೇಕೆನ್ನುವುದೇ ನಮ್ಮ ಏಕೈಕ ಆಶಯ ಎನ್ನುತ್ತಾರೆ. ಅದಕ್ಕೆ ದೇವರು ಪ್ರತಿಕ್ರಯಿಸಿ ದೊಡ್ಡ ಸತ್ಯವೊಂದನ್ನು ಹೇಳುತ್ತೇನೆ, ಧೈರ್ಯವಾಗಿ, ಕಿವಿಕೊಟ್ಟು ಕೇಳಿ. ಅದೇನೆಂದರೆ ನೀವು ಇಬ್ಬರೂ ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಬದುಕುತ್ತಿರಾ. ನಾನು ನಿಮ್ಮ ತಪಸ್ಸಿಗೆ ಮೆಚ್ಚಿ ಏನೇ ವರವನ್ನು ಬೇಕಾದರೂ ಕೊಡಬಹುದು. ಆದರೆ ನಿಮ್ಮ ಆಯುಷ್ಯವನ್ನು ಹೆಚ್ಚಿಸುವ ಶಕ್ತಿ ಮಾತ್ರ ನನಗಿಲ್ಲ. ಅದು ವಿಧಿಲಿಖಿತ ನಿಯಮ. ಒಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು, ಅದನ್ನು ತಪ್ಪಿಸಲು ನಮ್ಮ ಆಯುಷ್ಯವನ್ನು ಬರೆದ ಆ ಬ್ರಹ್ಮ ಬಂದರೂ ಸಾಧ್ಯವಿಲ್ಲ ಎನ್ನುತ್ತಾರೆ.
ನನಗೆ ಅತ್ಯಂತ ನೋವು, ದುಖಃವೆಂದರೆ ನೀವು ಬದುಕುವುದು ಕೇವಲ ಒಂದು ದಿನ ಮಾತ್ರ ಎಂಬ ವಿಷಯ, ನಿಮ್ಮ ಆಯುಷ್ಯ ರೇಖೆ ನನಗೆ ಸ್ಪಷ್ಟವಾಗಿ ಹೇಳುತ್ತಿದೆ. ಈ ವಿಚಾರ ಕೇಳಿದ ಈ ಇಬ್ಬರೂ ನಾವು ಒಂದೇ, ಒಂದು ದಿನ ಮಾತ್ರ ಬದುಕುವುದೆಂದು ಅರ್ಥವಾಗಿ, ಮನಸ್ಸಿನಲ್ಲಿ ಏನೋ ಆಲೋಚಿಸುತ್ತ, ಕೊರಗುತ್ತ ತಮ್ಮ ಮನೆಯನ್ನು ಸೇರಿಕೊಳ್ಳುತ್ತಾರೆ.
ಅದರಲ್ಲಿ ಒಬ್ಬ ಅಯ್ಯೋ ನಾನು 100 ವರ್ಷ ಬದುಕಬೇಕು ಎಂದು ಎಷ್ಟೋ ಆಸೆ, ಕನಸು ಕಂಡಿದ್ದೆ. ಆದರೆ ನನ್ನ ಅದೃಷ್ಟ ಸರಿಯಿಲ್ಲ, ನೆಟ್ಟಗಿಲ್ಲ ಎಂದು ಆಲೋಚಿಸುತ್ತ, ಚಿಂತಿಸುತ್ತ ಊಟ, ನೀರು ಕುಡಿಯದೆ, ಚಿಂತಕ್ರಾ0ತನಾಗಿ, ವಿಪರಿತ ಜಿಗುಪ್ಸೆ ಹೊಂದಿ, ಆ ರಾತ್ರಿಯೇ ಈತ ಹೃದಯಘಾತದಿಂದ ನಿಧನ ಹೊಂದುತ್ತಾನೆ.
ಆದರೆ ಮತ್ತೊಬ್ಬನು ನಾನು ಒಂದು ದಿನದ ಮಟ್ಟಿಗೆ ಮಾತ್ರ ಬದುಕುವುದು ಎನ್ನುವ ವಿಷಯ ನನಗೆ ಮೊದಲೆ ತಿಳಿದಿದ್ದು ಒಳ್ಳೆಯದಾಯ್ತು, ಕನಿಷ್ಟ ಈ ಒಂದು ದಿನವನ್ನಾದರೂ ಖುಷಿಯಿಂದ ಕಳೆಯಬೇಕು ಎಂದು ತೀರ್ಮಾನಿಸಿದ. ತನಗೆ ಇಷ್ಟವಾದ ಊಟ ಮಾಡಲು ಹೋಟೆಲ್ ಹೋಗಿ ತನಗೆ ಏನೇನೂ ಇಷ್ಟವೋ ಆ ಎಲ್ಲಾ ಊಟ, ಸಿಹಿ, ತಿಂಡಿ ಸವಿಯುತ್ತಾನೆ. ತನ್ನ ಆತ್ಮೀಯ ಸ್ನೇಹಿತರನ್ನು ಖುದ್ದು ಭೇಟಿ ಮಾಡಿ, ಮಾತನಾಡಿಸಿಕೊಂಡು ಬರುತ್ತಾನೆ. ಮತ್ತೆ ಕೆಲವರನ್ನು ಪೋನ್ ಮೂಲಕ ಸಂಪರ್ಕಿಸುತ್ತಾನೆ. ಹೊಸ ಬಟ್ಟೆ ಧರಿಸಿ, ತನಗೆ ಇಷ್ಟವಾದ ಹತ್ತಿರದಲ್ಲಿರುವ ಸ್ಥಳವನ್ನು ಹೋಗಿ ವೀಕ್ಷಿಸಿಕೊಂಡು ಸ್ಥಳದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾನೆ. ಆ ಒಂದು ದಿನದ ಮಟ್ಟಿಗೆ ಏನೆಲ್ಲಾ ಅನುಭವಿಸಲು ಸಾಧ್ಯವೇ ಅವೆಲ್ಲವನ್ನು ಆಸ್ವಾಧಿಸುತ್ತಾನೆ.
ಆತ ಒಂದು ದಿನ ಮಾತ್ರ ತಾನು ಬದುಕುವುದೆಂದು ಆಲೋಚಿಸಿ, ತನ್ನ ಜೀವನದಲ್ಲಿ ಎಂದು ಕಾಣದ ಸಂತೋಷ, ಸುಖವನ್ನು ಆ ಒಂದು ದಿನ ಮಾತ್ರ ಕಾಣಲು ಪ್ರಯತ್ನಿಸುತ್ತಾನೆ. ಎಲ್ಲವನ್ನು ನೋಡಿಕೊಂಡು ರಾತ್ರಿಗೆ ಮನೆಗೆ ಬಂದು ಸ್ವಲ್ಪಹೊತ್ತು ತನಗೆ ಇಷ್ಟವಾದ ಕಾರ್ಯಕ್ರಮವನ್ನು ಟಿ.ವಿಯಲ್ಲಿ ನೋಡಿ, ಬೇಗ ಮಲುಗುತ್ತಾನೆ. ಹೇಗಿದ್ದರೂ ನಾಳೆಯಿಂದ ನಾನು ಬದುಕಿರುವುದಿಲ್ಲ, ಇವತ್ತು ರಾತ್ರಿ ಖುಷಿಯಾಗಿ ಹೆಚ್ಚಿನ ನಿದ್ರೆ ಮಾಡಬೇಕು ಎಂದು ನಿದ್ರೆಗೆ ಜಾರುತ್ತಾನೆ.
ಆದರೆ ಬೆಳಗ್ಗೆ ಆತನಿಗೆ ನಿದ್ರೆಯಿಂದ ಎಚ್ಚರವಾಗುತ್ತದೆ. ಅರೆ ನಾನು ರಾತ್ರಿಯೇ ನಿದ್ದೆಯಲ್ಲಿ ಸಾಯಬೇಕಿತ್ತಲ್ಲವೇ, ಆದರೆ ಇನ್ನು ಬದುಕಿದೇನಲ್ಲಪ್ಪ, ಇದೇನು ವಿಚಿತ್ರ ಎಂದು ದೇವರನ್ನು ಕೇಳಿದ. ಅದಕ್ಕೆ ದೇವರು ಪ್ರತ್ಯಕ್ಷವಾಗಿ ನೋಡು ನಿನಗೆ ಮತ್ತು ನಿನ್ನ ಸ್ನೇಹಿತ ಇಬ್ಬರಿಗೂ ಹೆಚ್ಚಿನ ವರ್ಷಗಳೇ ಆಯುಷ್ಯ ಇತ್ತು. ಆದರೆ ನಾನು ನಿಮ್ಮನ್ನು ಪರೀಕ್ಷಿಸಲು, ಜೀವನದ ಮೌಲ್ಯವನ್ನು ಮನವರಿಕೆ ಮಾಡಲು, ನೀವು ಇಬ್ಬರೂ ಒಂದೇ ದಿನದ ಮಟ್ಟಿಗೆ ಮಾತ್ರ ಬದುಕುವುದು, ನಿಮ್ಮಿಬ್ಬರಿಗೂ ಕೇವಲ ಒಂದೇ ಒಂದು ದಿನ ಮಾತ್ರ ಆಯುಷ್ಯ ಇದೆ ಎಂದು ಸುಳ್ಳು ಹೇಳಿದೆ.
ಆದರೆ ನಿನ್ನ ಸ್ನೇಹಿತ ತಾನು ಒಂದು ದಿನ ಮಾತ್ರ ಬದುಕುವುದೆಂದು ವಿಪರಿತ ತಲೆ ಕೆಡಿಸಿಕೊಂಡು, ಆಲೋಚಿಸಿ, ಆಲೋಚಿಸಿ, ಕಂಗೆಟ್ಟು ಆವತ್ತು ರಾತ್ರಿಯೇ ಹೃದಯಘಾತದಿಂದ ಕೊನೆ ಉಸಿರೆಳೆದ.
ಆದರೆ ನೀನು ಒಂದು ಮಾತ್ರ ಬದುಕುವುದೆಂದು ಗೊತ್ತಾದರೂ, ಆ ಒಂದು ದಿನವನ್ನಾದರೂ ಖುಷಿಯಿಂದ ಕಳೆದೆ. ಇಷ್ಟವಾದ ಊಟ ಸವಿದೆ, ನಿನ್ನ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಿ, ಇಷ್ಟವಾದ ಜಾಗಕ್ಕೆ ಭೇಟಿ ಕೊಟ್ಟು ಬಂದೆ. ವಿಪರ್ಯಾಸವೆಂದರೆ ಈ ಹಿಂದೆ ನೀನು ಹತ್ತಾರು ವರ್ಷ ಬದುಕುತ್ತೆನೆಂದು ಭಾವಿಸಿ, ಪ್ರತಿದಿನವನ್ನು ದುಃಖದಿಂದ, ಆಲೋಚಿಸುತ್ತ, ಸರಿಯಾಗಿ ಬಳಸಿಕೊಳ್ಳಲು ವಿಫಲವಾದೆ. ಆದರೆ ಒಂದು ದಿನದಲ್ಲಿ ಸಾಯುತ್ತೇನೆಂದು ಗೊತ್ತಾದಾಗ ಜ್ಞಾನೋದಯವಾಗಿ ಈ ಒಂದು ದಿನವನ್ನು, ನಿನ್ನ ಇಡೀ ಜೀವನದಲ್ಲಿ ಎಂದು ಕಾಣದ ಸಂತೋಷ, ಸಂತಸದಿ0ದ ಕಳೆದೆ.
ಇದನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡದೆ ಪ್ರತಿದಿನವನ್ನು ಖುಷಿಯಿಂದ ಬದುಕುವುದನ್ನು ಕಲಿ, ಆಗ ನಿನ್ನ ಜೀವನಕ್ಕೆ ಅರ್ಥ ಬರುತ್ತದೆ. ನಿನಗೆ 100 ವರ್ಷ ಆಯುಷ್ಯ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಬದುಕಿದ ಅಷ್ಟು ದಿನವನ್ನು ಸಂತೋಷ, ನೆಮ್ಮದಿಯಿಂದ ಕಳೆಯುವುದನ್ನು ಮೊದಲು ಪ್ರಾರಂಭಿಸು ಎಂದು ದೇವರು ಆತನಿಗೆ ಜೀವನದ ಒಳಾರ್ಥವನ್ನು ವಿವರಿಸಿ, ಕಣ್ತೆರುಸುತ್ತಾರೆ.
ಜಗತ್ತಿನ ಅತ್ಯಂತ ವಾಸ್ತವ ಸತ್ಯವೆಂದರೆ, ಈಗ ಬದುಕಿರುವವರು ಮುಂದಿನ ಸೆಕೆಂಡ್ ನಲ್ಲಿ ಬದುಕಿರುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ, ವ್ಯಾರಂಟಿ ಇಲ್ಲ. ಮನುಷ್ಯನದ್ದು ಒಂಥರಾ ಅತ್ರಂತ ಜೀವನ, ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬುವುದನ್ನು ಅರಿಯದೇ ಬದುಕುತ್ತೇವೆ.
ಆಪ್ಯಲ್ ಕಂಪನಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಒಂದು ಮಾತೇಳಿದ್ದರು, If you live each day as it was your last, someday you'll most certainly be right.
ಅಂದರೆ ಪ್ರತಿದಿನ ನಾವು ಇಂದೇ ನಮ್ಮ ಕೊನೆ ದಿನ ಎಂದು ಭಾವಿಸಿ ಬದುಕಬೇಕಂತೆ. ಆಗ ಆ ಒಂದು ದಿನವನ್ನಾದರೂ ಖುಷಿ, ಸಂತೋಷದಿ0ದ ಕಳೆಯುತ್ತೇವೆ. ಅತಿಯಾದ ದುರಾಸೆಗಳಿಗೆ ಒಳಗಾಗುವುದಿಲ್ಲ, ಗರ್ವ, ಅಹಂಕಾರಗಳು ನಮ್ಮ ಸಮೀಪ ಸುಳಿಯುವುದಿಲ್ಲ. ಆ ಒಂದು ದಿನವನ್ನು ಕಾಲಹರಣ ಮಾಡದೇ, ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಗುರಿ, ಸಾಧನೆಯ ಶಿಖರವೇರಲು ಪರಿಶ್ರಮ ಪಡುತ್ತೇವೆ.
ಇಂದೇ ನಮ್ಮ ಕೊನೆ ದಿನವೆಂದರೆ, ನಮ್ಮಲ್ಲಿ ಅಗಾಧ ಬದಲಾವಣೆಗಳು ಸಹಜವಾಗಿಯೇ ಆಗುತ್ತವೆ ಎಂಬುವುದು ಸ್ಟೀವ್ ಜಾಬ್ಸ್ ರವರ ವಾಕ್ಯದಲ್ಲಿರುವ ಆಂತರಿಕ ಅಂಶ.
ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ಬದುಕಿದಷ್ಟು ದಿನ ಎಷ್ಟರ ಮಟ್ಟಿಗೆ ಆ ದಿನಗಳನ್ನು ಸಂತೋಷದಿ0ದ ಕಳೆದಿದ್ದೇವೆ ಎನ್ನುವುದೇ ನಮಗೆ ಅಗತ್ಯ. ಈಗಂತೂ ನಮ್ಮಲ್ಲಿ ತುಂಬಿರುವ ಸ್ವಾರ್ಥ, ದುರಾಸೆ, ಸಮಸ್ಯೆಗಳ ಬಗ್ಗೆ ಅತಿಯಾದ ಚಿಂತನೆಯಿ0ದ ಪ್ರತಿದಿನವೂ ವ್ಯರ್ಥವಾಗಿ ಕಳೆದು ಹೋಗುತ್ತ, ನಮ್ಮ ಅರಿವಿಗೆ ಬರದೇ ನಮ್ಮ ಜೀವನದ ಬಹಪಾಲು ಎಲ್ಲಾ ದಿನಗಳು ಕಣ್ಮರೆಯಾಗುತ್ತಿವೆ.
ನಾಳೆ ನಾನು ಬದುಕಿರುವುದಿಲ್ಲ ಎಂದು ಭಾವಿಸಿಕೊಂಡು ನೋಡಿ, ಆಗ ನಮ್ಮಲ್ಲಿ ಆಸೆಗಳ ಪ್ರಮಾಣ ಸಹಜವಾಗಿಯೇ ಗಣನೀಯವಾಗಿ ಕುಸಿಯುತ್ತವೆ. ಹಣ, ಆಸ್ತಿ, ಜಮೀನು, ಬಂಗಾರ ಎಲ್ಲವೂ ಶೂನ್ಯಕ್ಕೆ ಸಮಾನ ಎಂಬ ಭಾವನೆ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ನಾನೇ ಇರದೇ ಮೇಲೆ ಈ ಸಂಪತ್ತು, ಐಶ್ವರ್ಯಗಳಿಸಿ ಬರುವುದಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಉದ್ಬವವಾಗುತ್ತದೆ.
ಪ್ರತಿನಿತ್ಯವು ಕಚೇರಿಯ ಒತ್ತಡ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಪಿಸುತ್ತ, ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ ಸಮಸ್ಯೆಗಳ ಸಾಗರಗಳ ಬಗ್ಗೆ ಅತಿಯಾಗಿ ಆಲೋಚಿಸುವುದು ಮೂರ್ಖರ ಲಕ್ಷಣ. ಪ್ರತಿದಿನವನ್ನು ಸಪ್ಪೆಯಾಗಿ ಕಳೆದು, ಕೂರುವ ಬದಲು, ಭಗವಂತ ನಮಗೆ ನೀಡಿರುವುದರಲ್ಲೇ ಸಂತೋಷ, ಸಂತಸವನ್ನು ಕಾಣಬೇಕಿದೆ. ಸ್ನೇಹಿತರೊಂದಿಗೆ, ಕುಟುಂಬದವರೊ0ದಿಗೆ ಅನ್ಯೋನ್ಯವಾಗಿ ಬಾಳಬೇಕಿದೆ. ಇಂದಿನ ದಿನವನ್ನು ನಾವು ಸಂತೋಷದಿ0ದ ಕಳೆಯುಲು ಸಾಧ್ಯವಾಗಲಿಲ್ಲ ಎಂದರೆ, ನಾಳೆ ದಿನವನ್ನು ಅದ್ಯಾವ ರೀತಿ ಸಂತೋಷದಿ0ದ ಕಳೆಯುತ್ತೇವೆ..?
ನಮಗೆ ಇರುವುದರಲ್ಲೇ ಸರಳವಾಗಿ ಜೀವನ ಸಾಗಿಸಿ, ಪ್ರತಿದಿನವನ್ನು ಆರ್ಥಗರ್ಭಿತವಾಗಿ ಬದುಕುವುದನ್ನು ನಾವು ಕಲಿಯುವುದು ಯಾವಾಗ..? ಇಂದು ನಾನಿದ್ದೇನೆ ಎನ್ನುವುದು ಸತ್ಯ. ನಾಳೆ ಇರುತ್ತೇನೆ ಎನ್ನುವುದು ಕೇವಲ ಭ್ರಮೆ ಮತ್ತು ಕಲ್ಪಿತ. ಆ ಕಾರಣಕ್ಕಾಗಿಯೇ ಇಂದಿನ ದಿನವನ್ನು ಖುಷಿಯಾಗಿ ಸ್ವೀಕರಿಸಿ, ಅನುಭವಿಸಿ, ನಾಳೆ ದಿನವನ್ನು ನಾಳೆ ನೋಡಿಕೊಳ್ಳೋಣ, ನಾಳೆ ಏನೋ ಆಗೋಗುತ್ತದೆ ಎಂದು, ಇಂದಿನ ದಿನವನ್ನು ಬೇಸರದಿಂದ ಕಳೆಯುವ ಮನಸ್ಥಿತಿ ಕೊನೆಗಾಣಬೇಕಿದೆ.
ಅಂದ ಹಾಗೆ ನನಗೆ ಪ್ರತಿದಿನವು, ಪ್ರತಿನಿಮಿಷವು ಬಹಳ ಇಷ್ಟ ಮತ್ತು ಇಂಪಾರ್ಟೆ0ಟ್. ಯಾಕಂದ್ರೆ ನಾಳೆ ಇದೆ ಅನ್ನೋದು ನನಗೆ ಗೊತ್ತಿಲ್ಲ. ಇಂದು ರಾತ್ರಿ ಮಲುಗುತ್ತೇವೆ, ನಾಳೆ ಬೆಳಗ್ಗೆ ನಿದ್ದೆಯಿಂದ ಎದ್ದೇಳದಿದ್ದರೇ..? ಅದೇಕ್ಕೆಳುವುದು ನಿಮ್ಮ ಪ್ರತಿದಿನವನ್ನು ಆನಂದಿಸಿ, ಆಹ್ಲಾದಿಸಿ, ಖುಷಿಯಾಗಿರಿ. So let's enjoy every moment in your life.


