ಶನಿವಾರ, ಮೇ 26, 2018

ತೇರಹಳ್ಳಿ, ಅಂತರಗಂಗೆ ಬೆಟ್ಟ-ವೈವಿಧ್ಯತೆಯ ತಾಣ..


➤ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ನಿಸರ್ಗವೇ ಹಾಗೆ ಅದರ ಅದ್ಬುತ ಶಕ್ತಿಯನ್ನು ವರ್ಣಿಸಲು ಅಸಾಧ್ಯ. ಅದರ ಸೌಂದರ್ಯವನ್ನು ಹೊಗಳಲು ಪದಗಳೇ ಸಿಗುವುದಿಲ್ಲ, ಅಷ್ಟರ ಮಟ್ಟಿಗೆ ಅದು ನಮ್ಮ ಊಹೆಗೂ ಮಿಗಿಲಾದ ಶಕ್ತಿಯನ್ನು ಪಡೆದಿದೆ. ಮನುಷ್ಯನ ನೋವನ್ನು ಮರೆಸುವ ಶಕ್ತಿ ಯಾವುದಕ್ಕಾದರೂ ಇದೆ ಎಂದರೆ ಅದು ಪ್ರಕೃತಿಗೆ ಮಾತ್ರ. 
ಮನುಷ್ಯನ ರಕ್ತದ ಕಣಕಣದಲ್ಲೂ ಸ್ವಾರ್ಥ, ದುರಾಸೆ ತುಂಬಿ ತುಳುಕುತ್ತಿದ್ದರೆ ಇತ್ತ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವನಿಗೆ ನಿರಂತರವಾಗಿ ಹಲವು ರೀತಿಯಲ್ಲಿ ಸೇವೆ ಮಾಡುವ ಮೂಲಕ ತಾನು ಮಾತೃ ಹೃದಯಿ ಎಂಬುವುದನ್ನು ಪರಿಸರ ಸದಾ ತೋರಿಸಿಕೊಟ್ಟಿದೆ.
ಪರಿಸರದ ರಮಣೀಯ ಸೌಂದರ್ಯವನ್ನು ತನ್ನ ಮಡಲಲ್ಲಿ ಇಟ್ಟುಕೊಂಡು, ಮುಗುಳ್ನಗೆಯಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಅಪರೂಪದ ಬೆಟ್ಟಗಳೆರೆಡು ಕೋಲಾರ ನಗರದ ಸಮೀಪವಿದೆ.
ಅದ್ಯಾವುದು ಎನ್ನುತ್ತಿರಾ, ಅದೇ ಕೋಲಾರ ನಗರದಿಂದ  ಕೂಗಳತೆಯ ದೂರದಲ್ಲಿರುವುದೇ ತೇರಹಳ್ಳಿ ಬೆಟ್ಟ. ವಿಶೇಷವೆಂದರೆ ಈ ಬೆಟ್ಟವು ಕೇವಲ ಕಲ್ಲು, ಬಂಡೆ, ಮಣ್ಣಿನಿಂದ ಕೂಡಿದ ಸಹಜ ಬೆಟ್ಟವಲ್ಲ. ಇದಕ್ಕೆ ತನ್ನದೇ ಆದ ಐತಿಹಾಸಿಕ ಇತಿಹಾಸವಿದೆ. 
ಸಮುದ್ರಮಟ್ಟದಿಂದ ಮೇಲ್ಬಾಗದಲ್ಲಿರುವ ತೇರಹಳ್ಳಿ ಬೆಟ್ಟದ ಮೇಲೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಒಟ್ಟು 7 ಗ್ರಾಮಗಳಿವೆ. ತೇರಹಳ್ಳಿ, ಕುಪ್ಪಹಳ್ಳಿ, ಶಿವಗಂಗೆ, ಪಾಪರಾಜನಹಳ್ಳಿ, ಕೆಂಚೇಗೌಡನಹಳ್ಳಿ, ಹೊಸಹಳ್ಳಿ, ಬೆಟ್ಟದ ಹೊಸಹಳ್ಳಿ ಎಂಬ ಹಳ್ಳಿಗಳು ಬೆಟ್ಟದ ಮೇಲಿದ್ದು, ಈ ಹಳ್ಳಿಗಳಲ್ಲಿ ಜನರು ವಾಸವಿದ್ದಾರೆ.
ತೇರಹಳ್ಳಿ ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುವುದೇ ಆನಂದ, ಬೆಟ್ಟದ ಮೇಲೆ ನಿಂತರೆ ಇಡೀ ಕೋಲಾರ ನಗರವು ಪುಟ್ಟ, ಚೊಕ್ಕದಾಗಿ ಕಾಣುತ್ತದೆ.
ಕೋಲಾರ ಜಿಲ್ಲೆಯ ಎಷ್ಟೋ ಜನರಿಗೆ ತೇರಹಳ್ಳಿ ಬೆಟ್ಟವು ತಮ್ಮ ನೋವನ್ನು ಮರೆಸುವ ಸ್ಥಳ. ಕುಟುಂಬ, ಕಚೇರಿ, ವ್ಯವಹಾರದ ಜಂಜಾಟಗಳಿಂದ ಹೈರಾಣಾಗಿರುವ ಹಲವರಿಗೆ ಮನಸ್ಸಿಗೆ ತುಸು, ನೆಮ್ಮದಿ ನೀಡಿ ಜೀವನೋತ್ಸಾಹ ತುಂಬವ ಪ್ರದೇಶ.
ಇನ್ನು ತೇರಹಳ್ಳಿ ಗ್ರಾಮದಲ್ಲಿ ಅತ್ಯಂತ ಪುರಾತನವಾದ ಶಿವ (ಗವಿಗಂಗಧಾರೇಶ್ವರ) ದೇಗುಲವಿದೆ. ದೇಗುಲ ಮುಂಭಾಗದ ಸ್ವಾಗತ ಗೋಪುರ (ದ್ವಾರ)ದ ಶೈಲಿ ಅದ್ಬುತವಾಗಿದೆ. ದೇಗುಲದ ಆವರಣದಲ್ಲಿ ಇರುವ ಕಂಬಗಳ ಮಂಟಪದಲ್ಲಿರುವ ಕಲಾಕೃತಿಗಳು ವಿಶಿಷ್ಠವಾಗಿದೆ.
ಹಳೆಯದಾದ ಹಿಂದೆ ನಿರ್ಮಾಣವಾಗಿದ್ದ ಶ್ರೀ ಗೌರಿ ಗಂಗಾಧರೇಶ್ವರ ಕಲ್ಯಾಣ ಮಂಟಪವು ಇದೆ. ವಿಶೇಷವೆಂದರೆ ದೇವಾಲಯ ನಿಮಾರ್ಣದ ವಾಸ್ತುಶಿಲ್ಪ ಸುಂದರವಾಗಿದೆ. ಆದರೆ ದೇಗುಲ ತುಂಬಾ ಹಳೆಯದಾದ ಕಾರಣ ಶಿಥಲ ವ್ಯವಸ್ಥೆಗೆ ತಲುಪಿದೆ.
ದೇವಾಲಯ ಸುತ್ತಲು ನಿರ್ಮಾಣವಾಗಿದ್ದ ರಕ್ಷಣಾ ಗೋಡೆ ಕೂಡ ಮುರಿದು ಬಿದ್ದಿದೆ. ದೇವಾಲಯಗಳ ಮೇಲಿನ ಗೋಪುರಗಳು ಹಾಳಾಗಿವೆ, ವಿರೂಪಗೊಂಡು ಕಲಾಕೃತಿಗಳು ಅಲ್ಲಲ್ಲಿ ಕಾಣಸಿಗುತ್ತದೆ. ಈ ದೇಗುಲವನ್ನು ಜೀಣರ್ೋದ್ದಾರಗೊಂಡು ಸಂರಕ್ಷಿಸಿದರೆ ಖಂಡಿತ ಜಿಲ್ಲೆಯ ಮತ್ತೊಂದು ಪ್ರಮುಖ ಪ್ರವಾಸಿ ಸ್ಥಳವಾಗುವುದರಲ್ಲಿ ಅಚ್ಚರಿಯಿಲ್ಲ.
ಇದೇ ತೇರಹಳ್ಳಿ ಗ್ರಾಮದಿಂದ ಸ್ವಲ್ಪ ದೂರ ಸಾಗಿದರೆ ಶಿವಗಂಗೆ ಸಿಗುತ್ತದೆ. ಇದೇ ಸ್ಥಳದಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರವಿದೆ. ಬೆಟ್ಟದ ಮೇಲಿನ ಪ್ರಕೃತಿಯ ಮಡಿಲಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಹುಣ್ಣಿಮೆ ಹಾಡು ಹೆಸರಲ್ಲಿ ನಾಟಕ, ಕವಿಗೋಷ್ಠಿ, ಗಾಯನ, ತಮಟೆ ವಾದನ ಸೇರಿದಂತೆ ಅನೇಕ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಅದಿಮದಲ್ಲಿ ನಿರ್ಮಿಸಿರುವ ಹುಲ್ಲು ಮತ್ತು ಹೆಂಚಿನ ಮನೆಗಳು ಹಳ್ಳಿ ಸೊಗಡನ್ನು ನೆನಪಿಸುವಂತಿದೆ. ಅಲ್ಲಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಲಾಕೃತಿಗಳು ಜಾನಪದ ಶ್ರೀಮಂತಿಕೆಯ ಬಗ್ಗೆ ಮೆಲುಕು ಹಾಕುವಂತಿದೆ. ಅದಿಮ ಸಾಂಸ್ಕೃತಿಕ ಕೇಂದ್ರವು ಸಾಂಸ್ಕೃತಿಕ ಲೋಕದ ಉಳಿವು, ಬೆಳವಣಿಗೆ ಶ್ರಮಿಸುತ್ತಿದೆ.
ತೇರಹಳ್ಳಿ ಕೇವಲ ಬೆಟ್ಟವಲ್ಲ, ಧರ್ಮಗಳ ಭಾವೈಕ್ಯತೆಯ ತಾಣವು ಹೌದು. ಕಾರಣ ಈ ಬೆಟ್ಟದ ಮೇಲೆ ಹಿಂದೂ, ಮುಸ್ಲಿಂ ಎರಡು ಸಮುದಾಯಕ್ಕೆ ಸೇರಿದ ಜನ ವಾಸಿಸುತ್ತಿದ್ದಾರೆ. ಎರಡು ಧರ್ಮಗಳಿಗೆ ಸೇರಿದ ಧಾರ್ಮಿಕ ಕೇಂದ್ರಗಳು ಇಲ್ಲಿ ಕಾಣ ಸಿಗುತ್ತದೆ.
ಮೊನ್ನೆ ತೇರಹಳ್ಳಿಯ ಬೆಟ್ಟಕ್ಕೆ ಹೋಗಿ 7 ಗ್ರಾಮಗಳನ್ನೂ ದ್ವಿಚಕ್ರ ವಾಹನದಲ್ಲಿ ಸುತ್ತಿ ವಾಪಸ್ ಬರುತ್ತಿದ್ದಾಗ ಕುಪ್ಪಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಲಿಪ್ಟ್ ಕೇಳಿದರು. ಸರಿ ಎಂದು ಗಾಡಿ ನಿಲ್ಲಿಸಿ ವಾಹನ ಹತ್ತಿಸಿಕೊಂಡೆ 15 ನಿಮಿಷದಲ್ಲಿ ಆತ ತನ್ನ ಗ್ರಾಮದ ಬಗ್ಗೆ ನೀಡಿದ ವಿವರಣೆ ಅಚ್ಚರಿ ಮೂಡಿಸಿತು.
ಏನ್ ಸ್ವಾಮಿ ನಮ್ಮೂರಿನ ಬೆಟ್ಟ ನೋಡಕ್ಕೆ ಬಂದಿದ್ದಿರಾ.. ಬಹುಃಶ ನಿಮಗೆ ಬೇರೆಲ್ಲೂ ಈ ರೀತಿಯ ಬೆಟ್ಟ ಸಿಗಲಿಕ್ಕಿಲ್ಲ ಬಿಡಿ, ಗ್ರಾಮದಲ್ಲಿ ಅನ್ಯ ಧರ್ಮಗಳ ಜನ ವಾಸಿವಿದ್ದರು ಎಂದು ಭೇದ ಭಾವ ಬಂದಿಲ್ಲ. ಅಷ್ಟಕ್ಕೂ ದೇವರ ಒಬ್ಬನೇ ನಾಮ ಹಲವು ಎಂಬ ಮಾತು ಸತ್ಯ ಬಿಡಿ ಎಂದ. 
ವಿಶೇಷವೆಂದರೆ 7 ಗ್ರಾಮಗಳ ಜನ ಬೆಟ್ಟದಲ್ಲಿರುವ ವಿಸ್ತಾರವಾದ ಭೂ ಪ್ರದೇಶದಲ್ಲೇ ಕೃಷಿಯೂ ಮಾಡುತ್ತೇವೆ. ಹೊಟ್ಟೆ ಪಾಡಿಗಾಗಿ ಒಂದಷ್ಟು ಜನ ಕೂಲಿಗೂ ಹೋಗುತ್ತಾರೆ. ಅಂದ ಹಾಗೆ ನನಗೆ 5 ಜನ ಮಕ್ಕಳು, ನಮ್ಮ ಮನೆ ದೇವ್ರು ತಿರುಪತಿ ವೆಂಕಟರಮಣ ಸ್ವಾಮಿ. ಆದ್ದರಿಂದ 5 ಜನರಿಗೂ ಶ್ರೀನಿವಾಸ, ಹರಿ ಸೇರಿದಂತೆ ವೆಂಕಟೇಶ್ವರನ ಹೆಸರುಗಳನ್ನೇ ಇಟ್ಟಿದ್ದೇನೆ. 
ಆದ್ರೂ ನಗರಗಳಲ್ಲಿ ಇರುವಷ್ಟು ಧಾರ್ಮಿಕ ವೈಷಮ್ಯ ನಮ್ಮಲ್ಲಿ ಇಲ್ಲ ಬಿಡಿ ಎಂದು ಉಚ್ಚರಿಸಿದ. ಅವರ ಮಾತು ಕೇಳುತ್ತಿದ್ದರೆ ವಿಶ್ವವಿದ್ಯಾಲಯವೊಂದರ ಹಿರಿಯ ಪ್ರಾದ್ಯಾಪಕರಿಗಿಂತ ಹೆಚ್ಚು ಅರ್ಥಪೂರ್ಣವಾದ ಭಾಷಣ ಕೇಳುವಂತಿತ್ತು.
ತೇರಹಳ್ಳಿ ಬೆಟ್ಟದಲ್ಲಿ ಕೃಷಿಗೆ ಮೂಲ ಆಧಾರ ಮಳೆ. ಕೆಲ ಬಾವಿ, ಕೆರೆ, ಕುಂಟೆಗಳು ಇವೆ. ಮಳೆ ಬಿದ್ದು ಬಾವಿ, ಕುಂಟೆ ತುಂಬಿದರೆ ಕೃಷಿ ಚಟುವಟಿಕೆಗಳು ಗರಿಗೆದೆರುತ್ತವೆ. ಬೆಟ್ಟದ ಪ್ರದೇಶವಾದ್ದರಿಂದ ಬಾವಿಗಳ ಸುತ್ತಮುತ್ತ ತೇವಾಂಶ ಸಹಜವಾಗಿಯೇ ಹೆಚ್ಚಿರುವುದರಿಂದ ನೀರು ಬೇಗನೆ ಖಾಲಿಯಾಗಲ್ಲ ಹಾಗೂ ಇಂಗುವುದಿಲ್ಲ. 
ತೇರಹಳ್ಳಿ ಬೆಟ್ಟಕ್ಕೆ ಡಾಂಬರು ರಸ್ತೆ ಇದ್ದು, ಪ್ರತಿನಿತ್ಯವೂ ನಿಗದಿತ ಸಮಯಕ್ಕೆ ಸರಕಾರಿ ಬಸ್ ಸೌಕರ್ಯ ಇರುವುದರಿಂದ ಬೆಟ್ಟದಲ್ಲಿ ವಾಸಿಸುವ ಜನಕ್ಕೆ ನಗರದ ಜೊತೆ ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ. ಕೆಲ ಪುಂಡ ಪೋಕರಿಗಳು ತೇರಹಳ್ಳಿ ಬೆಟ್ಟಕ್ಕೆ ಬಂದು ಬೆಟ್ಟದ ಅಂದ ಕೆಡಿಸಲು ಕೆಲವರು ಮುಂದಾಗುತ್ತಲೇ ಇರುತ್ತಾರೆ. ಅಂತವರ ಆಟಕ್ಕೆ ಕಡಿವಾಣ ಬಿದ್ದರೆ ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಬರುವುದಿಲ್ಲ.
ತೇರಹಳ್ಳಿ ಬೆಟ್ಟವು ವಿಸ್ಮಯಗಳ ತಾಣವು ಹೌದು. ಆ ವಿಸ್ಮಯ ನಮ್ಮ ಊಹೆಗೂ ಮಿಗಿಲಾದದ್ದು ಎಂಬುವುದು ಸತ್ಯ.
ಹಾಗೆಯೇ ಕೋಲಾರದಿಂದ ತೀರ ಹತ್ತಿರದಲ್ಲಿರುವ ಅಂತರಗಂಗೆಯ ಬೆಟ್ಟವು ದಶಕಗಳ ಇತಿಹಾಸವನ್ನು ಹೊಂದಿದೆ. ಇದು ವಿಚಿತ್ರವೋ, ನಿಸರ್ಗದ ಅದ್ಬುತವೋ ಒಟ್ಟಿನಲ್ಲಿ ಈ ಸ್ಥಳ ಒಂದು ರೀತಿಯಲ್ಲಿ ಪವಾಡವನ್ನು ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲವೆನೋ ಏಕೆ ಅಂತಿರಾ.. 
ಕೋಲಾರ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಚಿನ್ನ, ಈಗ ಚಿನ್ನ ಹೋಗಿ ಬರಗಾಲ ಆವರಿಸಿದೆ. ಕೋಲಾರ ಎಂದರೆ ಬರದ ನಾಡು ಎಂದು ಪ್ರಸ್ತುತ ದಿನಗಳಲ್ಲಿ ಕರೆಸಿ ಕೊಳ್ಳುತ್ತಿದೆ. ಆದರೆ ಅಂತರಗಂಗೆ ಇದಕ್ಕೆ ಅಪವಾದ. ಕೋಲಾರ ನಗರದಿಂದ 4 ಕೀ.ಮಿ ದೂರವಿರುವ ಈ ಸ್ಥಳದಲ್ಲಿ ಸದಾ ಜಲ ಮಾತೆ ಹರಿಯುತ್ತಲೆ ಇರುತ್ತಾಳೆ. ಅದು ಸಿಹಿ ನೀರು, ಈ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಆಸ್ತಿಕರದ್ದು.
ಅಂತರಗಂಗೆ ಬೆಟ್ಟವನ್ನು ಶತಶೃಂಗ ಪರ್ವತ ಎಂತಲು ಕರೆಯುತ್ತಾರೆ ಇಲ್ಲಿ ಮುಖ್ಯವಾಗಿ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯವಿದೆ. ಸುಂದರವಾದ ಕಲ್ಯಾಣಿಯು ಇದೆ, ಹಿಂದೂಗಳ ಪಾಲಿಗೆ ಅಂತರಗಂಗೆ ದಕ್ಷಿಣದ ಕಾಶಿ ಎಂದೆ ಪ್ರಖ್ಯಾತಿ ಪಡೆದಿದೆ. 
ಹಾಗೆಯೇ ಇಲ್ಲಿ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇಗುಲ, ಬೆಟ್ಟದ ಕೆಳ ಭಾಗದಲ್ಲಿ ಜಲಕಂಠೇಶ್ವರ ಸ್ವಾಮಿ, ವಿಶಾಲಕ್ಷಮ್ಮ, ಮಹಾಗಣಪತಿ, ನವಗ್ರಹ ದೇವಸ್ಥಾನ ಹಾಗೂ ಉದ್ಯಾನವನವು ಇದೆ.  
ಬೆಟ್ಟದ ಮೇಲೆ ಹತ್ತುವಾಗ ಮೆಟ್ಟುಲುಗಳ ಬಳಿ ಕೋಲಾರ ಭಾಗದಲ್ಲಿ ಕಂಡು ಬರುವ ವಿವಿಧ ಜಾತಿಯ ಚಿಟ್ಟೆಗಳಾದ ಕಾಮನ್ ಇಂಡಿಯನ್ ಕ್ರೌನ್, ಗ್ರೇಟ್ ಎಗ್ಪ್ಲೈಯ್, ಕಾಮನ್ ವಂಡರರ್, ಯಲ್ಲೋ ಫ್ಯಾನ್ಸಿ ಮುಂತಾದ ಚಿಟ್ಟೆಗಳು ಹಾಗೂ ವಿವಿಧ ವನ್ಯ ಪ್ರಾಣಿಗಳ ಚಿತ್ರಗಳನ್ನು ಪ್ರದಶರ್ಿಸಲಾಗಿದೆ. 
ಬೆಟ್ಟದ ಮಧ್ಯಭಾಗದಲ್ಲಿ ಪ್ರವಾಸಿಗರು ಅಂತರಗಂಗೆ ಬೆಟ್ಟದ ಸೌಂದರ್ಯವನ್ನು ನೋಡಲು ಸಣ್ಣದಾದ ವೀಕ್ಷಣಾ ಗೋಪುರವನ್ನು ಕೂಡ ನಿರ್ಮಿಸಲಾಗಿದೆ.
ದೇಶದಲ್ಲಿನ ಕೆಲವೇ ಪ್ರದೇಶಗಳಲ್ಲಿ ಈ ರೀತಿ ಬಸವಣ್ಣ ಬಾಯಿಂದ ಸದಾ ನೀರು ಹರಿಯುತ್ತಿರುವ ದೃಶ್ಯಗಳನ್ನು ಕಾಣಬಹದು, ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಕೊರತೆಯಿಂದ ಅಂತರಗಂಗೆ ಹೇಳಿಕೊಳ್ಳುವಂತಹ ಅಭಿವೃದ್ದಿಯಾಗಿಲ್ಲ.
ಹಿಂದೆ ಅಂತರಗಂಗೆಯಲ್ಲಿ ಜಿಂಕೆಗಳ ವನ್ಯಧಾಮವಿತ್ತು, ಪ್ರವಾಸಿಗರ ಅಟ್ರಾಕ್ಷನ್ ಕೂಡ ಆಗಿತ್ತು. ಅದೇಕೊ ಆನಂತರ ಜಿಂಕೆಗಳು ಇಲ್ಲಿಂದ ಕಣ್ಮರೆಯಾಗಿ ಹೋಗಿತು.
ಅಂತರಗಂಗೆ ನೀರಿನ ರುಚಿ ನೋಡದ ಮಂದಿ ಕೋಲಾರ ಜಿಲ್ಲೆಯಲ್ಲಿ ಕಾಣಲ್ಲ. ಅಷ್ಟೇಕೆ ಇವತ್ತಿಗೂ ಸೈಕಲ್, ದ್ವಿಚಕ್ರ, ತಳ್ಳುವ ಗಾಡಿಗಳಲ್ಲಿ ದೊಡ್ಡ ವಾಟರ್ ಕ್ಯಾನ್ಗಳನ್ನು ತಂದು ನೀರು ತುಂಬಿಸಿಕೊಂಡು ಹೋಗುತ್ತಾರೆ. ಕಾರ್ತಿಕ
ಸೋಮವಾರಗಳಲ್ಲಿ ನಡೆಯುವ ಲಕ್ಷದಿಪೋತ್ಸವು ಎಲ್ಲರ ಗಮನ ಸೆಳೆಯುತ್ತದೆ.
ನೀವೇನೆ ಹೇಳಿ.. ಬೆಟ್ಟ, ಗುಡ್ಡಗಳಲ್ಲಿ ಅಲೆದಾಡುವವರಿಗೆ ಸಿಗುವ ಆನಂದ, ಸಂತೋಷ ಬೇರೆಯವರಿಗೆ ಅರ್ಥವಾಗಲ್ಲ. ಪರಿಸರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವವರು ಅನುಭವಿಸುವ ಖುಷಿ ಇತರರಿಗೆ ಸಿಗಲ್ಲ. ತೇರಹಳ್ಳಿ ಬೆಟ್ಟದಲ್ಲಿ ಸಿಕ್ಕ ಒಬ್ಬ ವ್ಯಕ್ತಿ ಹೇಳುತ್ತಾರೆ ಕನಿಷ್ಟ ವಾರಕ್ಕೊಮ್ಮೆದ್ದಾರೂ ಬೆಟ್ಟ, ಗುಡ್ಡ, ಅರಣ್ಯಗಳತ್ತ ಹೊರಟು ಹೋದರೆ ನೆಮ್ಮದಿಯ ಜೀವನದ ಜೊತೆಗೆ ತಲೆಯಲ್ಲಿ ತುಂಬಿರುವ ಬೇಡವಾದ ವಿಚಾರಗಳು ಮರೆಯುತ್ತೇವೆ ಎನ್ನುತ್ತಾರೆ.
ಕೋಲಾರ ಜಿಲ್ಲೆಗೆ ಅಂತರಗಂಗೆ ಮತ್ತು ತೇರಹಳ್ಳಿ ಬೆಟ್ಟ ಎರಡು ಮುಕುಟ ಮಣಿಗಳು ಎಂದರೆ ಅಶೋಕ್ತಿಯಲ್ಲ.  

ಶನಿವಾರ, ಏಪ್ರಿಲ್ 21, 2018

ಜನರ ಬದುಕು ಬದಲಿಸುವ ಚುನಾವಣೆ..

       ➤ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಒಂದು ರಾಷ್ಟ್ರದ ಅಭಿವೃದ್ದಿಯ ಮೇಲೆ ಪರಿಣಾಮ ಬೀರುತ್ತದೆ. ದೇಶದ ಅಭಿವೃದ್ದಿಯು ಚುನಾವಣೆಯಲ್ಲಿ ನಾವು ಎಂಥಹ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುವುದರ ಮೇಲೆ ನಿಂತಿದೆ ಎಂಬುವುದನ್ನು ಒಪ್ಪಲೇ ಬೇಕು.
ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ರ ಣಕಹಳೆ ಮೊಳಗಿದೆ. ಚುನಾವಣೆ ಸಮೀಪದಲ್ಲಿ ರುವುದರಿಂದ ಜನಸಾಮಾನ್ಯರಿಗೆ ಎಲ್ಲಿಲ್ಲದ ರಾಜಮರ್ಯಾದೆ. ಆತ ಎಂತಹ ದೊಡ್ಡ ಜನಪ್ರತಿ ನಿಧಿಯಾದರೂ ಜಾತಿ, ಧರ್ಮ , ಬಡತನ, ಸಿರಿತನ ನೋಡದೆ ಎದುರಿಗೆ ಬರುವ ಪ್ರತಿಯೊಬ್ಬರಿಗೂ ಕೈ ಮುಗಿತ್ತಾರೆ. ಪ್ರತಿಯೊಬ್ಬರನ್ನು ಅಣ್ಣ, ತಮ್ಮ, ಅಕ್ಕ, ತಂಗಿ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಮೇ 12 ನಂತರ ಈ ಪರಿಸ್ಥಿತಿಯನ್ನು ಕಾಣಲು ಖಂಡಿತಾ ಸಾಧ್ಯವಿಲ್ಲ. ಕಳೆದ ಐದು ವರ್ಷಗಳಿಂದ ಮತದಾರರ ಕಷ್ಟ ಸುಖಗಳ ಬಗ್ಗೆ ಕ್ಯಾರೆ ಎನ್ನದ ಶಾಸಕರು, ಮಾಜಿ ಶಾಸಕರು, ರಾಜಕಾರಣಿಗಳು ಈಗ ಬಿಸಿಲ್ಲೆನ್ನದೆ ಮನೆ ಮನೆ ಸುತ್ತುತ್ತಾ ಜನರ ಮತ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇದೊಂಥರ ಚುನಾವಣೆಯ ಮಹಿಮೆ.
ಅದೆಷ್ಟೋ ಬಾರಿ ಜನರು ನಮ್ಮೂರ ರಸ್ತೆ ಸರಿಯಿಲ್ಲ. ಊರಲ್ಲಿ ಕುಡಿಯಲು ನೀರು ಬರಲ್ಲ, ಸರಿಯಾಗಿ ವೃದ್ದಾಪ್ಯ, ವಿಧವಾ , ವಿಶೇಷಚೇತನಾ ವೇತನ ಸಿಗುತ್ತಿಲ್ಲ, ಬೆಳೆದ ಬೆಳೆ ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟವಾಗಿದೆ. ನಮ್ಮೂರ ಶಾಲೆಯಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಜನರು ಕಣ್ಣೀರು ಹಾಕಿ ಗೋಗೆರೆದರೂ ಜನಪ್ರತಿನಿಧಿಗಳಿಗೆ ಕರುಣೆ ಬರಲಿಲ್ಲ. ಯಾವುದಕ್ಕೂ ಮನಸ್ಸು ಕರಗಲಿಲ್ಲ.
1947 ರಿಂದ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲೇ ಇವೆ. ಹಲವಾರು ಪಕ್ಷಗಳಿಂದ ಆಯ್ಕೆಗೊಂಡವರು ಮುಖ್ಯಮಂತ್ರಿಗಳಾಗಿ ಅಧಿಕಾರ ಚಲಾಯಿಸಿದ್ದಾರೆ. ಒಂದಷ್ಟು ಸಮಸ್ಯೆಗಳು ಬಗೆಹರಿದಿವೆಯಾದರೂ ಸಾವಿರಾರು ಜ್ವಲಂತ ಸಮಸ್ಯೆಗಳು ದಶಕಗಳಿಂದಲೂ ಹಾಗೆ ಉಳಿದಿರುವುದು ಕಣ್ಣಿಗೆ ಇನ್ನು ಕಾಣುತ್ತದೆ.
ಚುನಾವಣೆಗಳಲ್ಲಿ ಆಯ್ಕೆಯಾಗಿ ಬರುತ್ತಿರುವ ಜನಪ್ರತಿನಿಧಿಗಳು ತಮ್ಮನ್ನು ತಾವು ಸರ್ವಾಧಿಕಾರಿಗ ಳಂತೆ ಭಾವಿಸಿದ್ದಾರೆ. ತಾವು ಸಮಾಜ ಸೇವಕರು, ಮಾಲೀಕರಲ್ಲ ಎಂಬ ಅಂ ಶವನ್ನೇ ಅವರು ಮರೆತು ಬಿಟ್ಟಿದ್ದಾರೆ.
ದಶಕಗಳಿಂದಲೂ ಅಧಿಕಾರ ಚಲಾಯಿಸಿದ ಅದೆಷ್ಟೋ ಸರಕಾರಗಳು ಗುಡಿಸಲು ಮುಕ್ತ ರಾಜ್ಯವನ್ನು ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ಎಷ್ಟೋ ಹಳ್ಳಿಗಳಲ್ಲಿ ಗುಡಿಸಲಲ್ಲಿ ವಾಸಿಸುತ್ತಿರುವ ಜನರನ್ನು ಈಗಲೂ ಕಾಣಬಹುದು. ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ಹೇಳುವುದೇ ಬೇಡ. ಚುನಾವಣೆಗಳು ಬಂದರೆ ತೇಪೆ ಹಾಕಿ ರಸ್ತೆಗಳ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡುವ ರಾಜಕಾರಣಿಗಳಿಂದ ಏನು ನಿರೀಕ್ಷಿಸಲು ಸಾಧ್ಯ. ರಸ್ತೆಗಳಲ್ಲಿನ ಗುಂಡಿಗಳಿಂದ ಅಪಘಾತಗಳಾಗಿ ಸಾವಿರಾರು ಜನ ಶಿವನ ಪಾದ ಸೇರಿದರು ಸಮಸ್ಯೆ ಬಗೆಹರಿಸ ಬೇಕಾದವರಿಗೆ ಬುದ್ದಿ ಬರಲಿಲ್ಲ. ಅಮಾಯಕರ ಪ್ರಾಣ ಹಾರಿ ಹೋಗುತ್ತಿದ್ದರು, ಇದೊಂದು ಗಂಭೀರ ಸಮಸ್ಯೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.
ಕೃಷಿ ರಂಗದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚುಡುತ್ತ ಹೋದರೆ ಪುಟಗಟ್ಟಲೇ ಲೇಖನ ಬರೆಯಬಹುದು. ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲದಿದ್ದರೆ ರೈತರು ಕಣ್ಣಲ್ಲಿ ಬರುವ ರಕ್ತವನ್ನು ಒರೆಸಲು ಸಾಧ್ಯವಿಲ್ಲ ಎಂದು ಪ್ರತಿಭಟನೆಗಳು, ವಾದಗಳು ಕೇಳಿ ಬರುತ್ತಿದ್ದರು ಕಿವಿ ಹಾಕಿಕೊಳ್ಳುವ ನಾಯಕರಿಲ್ಲ.
ಮಾರುಕಟ್ಟೆಗಳಲ್ಲಿ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ ಎಂದು ರೈತರು ತಾವು ಬೆಳೆದ ಬೆಳೆಗಳನ್ನು ರಸ್ತೆಗಳಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುವುದು ಎಲ್ಲೆಡೆಯ ಸಾಮಾನ್ಯ ಚಿತ್ರಣ. ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ರೈತರು ವಿಧಿಯಿಲ್ಲದೆ ಆತ್ಮಹತ್ಯೆ ಹಾದಿ ಹಿಡಿದಿರುವುದರಿಂದ, ಸಾವುಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ.
ರೈತರು ಕಣ್ಣೀರನ್ನು ಹೊರೆಸುವ ರೈತ ಪರ ನಾಯಕ ಇಂದಿಗೂ ಹುಟ್ಟದಿರುವುದು ದುರ್ದೈವ. ಎಲ್ಲಾ ಪಕ್ಷಗಳು ರೈತ ಸಮುದಾಯದ ಮತಗಳನ್ನು ಪಡೆಯಲು ರೈತರಿಗೆ ಸುಳ್ಳು ಭರವಸೆಗಳನ್ನು ನೀಡುವ ಕಾಯಕವನ್ನು ಮಾತ್ರ ರೂಡಿ ಮಾಡಿಕೊಂಡಿವೆ. 
ಯುವ ಸಮೂಹವಂತು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿ ಹೋಗುತ್ತಿದೆ. ಪ್ರತಿ ವರ್ಷವು ಶಿಕ್ಷಣ ಪಡೆದು ಹೊರ ಬರುತ್ತಿರುವ ಲಕ್ಷಾಂತರ ಯುವ ಜನರು ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೆ ಅನಿವಾರ್ಯವಾಗಿ ತಮ್ಮ ಅರ್ಹತೆಗಲ್ಲದ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ನಿರುದ್ಯೋಗಿಗಳನ್ನು ಕೆಲ ಸಮಾಜಘಾತುಕ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಿದರ್ಶನಗಳು ಹಲವಾರಿವೆ. ಬಹುಃಶ ಎಂದು ಕೂಡ ಅಧಿವೇಶನಗಳಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ವಿಸ್ತೃತವಾಗಿ ಚರ್ಚೆ ಮಾಡಿದ ಸಂದರ್ಭಗಳು ಬಹಳ ವಿರಳ.
ಇಂದು ಯಾವುದೇ ಪಕ್ಷದವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಉಳಿಸಿಕೊಂಡಿಲ್ಲ. ಪ್ರತಿ ರಾಜಕೀಯ ಪಕ್ಷದವರು ಕುಟುಂಬ ವ್ಯಾಮೋಹಕ್ಕೆ ಜೊತು ಬಿದ್ದಿವೆ. ಇದರಿಂದಲೇ ನಿಜವಾದ ಜನಸಾಮಾನ್ಯರ ಪರ ನಾಯಕ ಕಾಣುತ್ತಿಲ್ಲ. ವಿಧಾನಸಭೆಯನ್ನು ಕುಟುಂಬ ಕೇಂದ್ರಿತ ಶಾಸನಸಭೆ ಎಂದು ಕರೆದರೂ ಅಶೋಕ್ತಿಯೇನಲ್ಲ.
ಮೊದಲೇ ವಿಧಾನಸಭೆ ಮತ್ತು ವಿಧಾನಪರಿಷತ್ತು ಅಧಿವೇಶನಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಚರ್ಚೆಯಾಗಿ ಪರಿಹಾರ ಕಂಡು ಹಿಡಿಯಬೇಕಾಗಿದ್ದ ಅಧಿವೇಶನಗಳು ದುಂದು ವೆಚ್ಚದ ಸಭೆಗಳಾಗಿ ಯಾರಿಗೂ ಎಳ್ಳೆಷ್ಟು ಪ್ರಯೋಜನಕ್ಕೆ ಬರದ ಸಭೆಗಳಾಗಿ ಮಾರ್ಪಡಾಗಿವೆ. ಅಂತಹವುದರಲ್ಲಿ ರಾಜಕೀಯ ಕುಟುಂಬದ ಹಿನ್ನಲೆಯವರೆ ಅಲ್ಲಿ ತುಂಬಿಕೊಂಡರೆ ಪರಿಸ್ಥಿತಿ ಏನಾಗಲಿದೆ ಊಹಿಸುವುದು ಕಷ್ಟ.
ಯಾವ ಜನಪ್ರತಿನಿಧಿಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆಸುವ ಪುರಸೊತ್ತು, ಕಾಳಜಿ ಇಲ್ಲದಾಗಿದೆ. ಆದರೆ ಅಧಿವೇಶನಗಳಲ್ಲಿ ಭಾಗವಹಿಸಿದರೆ ಸಿಗುವ ವೇತನ, ಭತ್ಯೆಗಳನ್ನು ಚಾಚು ತಪ್ಪದೇ ಪಡೆದು ಜೇಬಿಗಿಳಿಸುತ್ತಾರೆ.
ರಾಜ್ಯದ ಮತದಾರರು ತುಂಬಾ ಗಂಭೀರವಾಗಿ ಆಲೋಚಿಸಬೇಕಾದ ಸಂದರ್ಭವಿದು. ಸ್ವಲ್ಪ ಎಡವಿದದೂ ಮತ್ತೆ ಐದು ವರ್ಷ ಅಸಹಾಯಕರಾಗಿ ಕಷ್ಟಗಳ ಸರಮಾಲೆಯಲ್ಲಿ ಮುಳುಗಬೇಕಾದ ಅನಿವಾರ್ಯತೆಗೆ ಸಿಲುಕು ಬೇಕಾಗುತ್ತದೆ.
ಚುನಾವಣೆ ಸಮಯದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳು ಕೊಡುವ ಕುಕ್ಕರ್, ಸೀರೆ, ಹಣ, ಹೆಂಡ, ಬಾಡೂಟ ಎಷ್ಟು ದಿನ ಬರುತ್ತೇ ಎಂಬುವುದು ಆಲೋಚಿಸಬೇಕು. ಅವರು ನೀಡುವ ಹಣ ಒಂದಕ್ಕೆ ದಿನಕ್ಕೆ ಖಾಲಿಯಾಗುತ್ತದೆ. ಆಸೆ, ಆಮಿಷಗಳಿಗೆ ಬಲಿಯಾಗಿ ಮತ ಮಾರಾಟ ಮಾಡಿಕೊಂಡರೆ ನಮ್ಮ ಸ್ವಾಭಿಮಾನವನ್ನೇ ಹರಾಜಿಗಿಟ್ಟಂತೆ.
ಜಾತಿ, ಧರ್ಮ ಆಧಾರದಲ್ಲೂ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರಿಪಾಠಕ್ಕೆ ತಿಲಾಂಜಲಿ ಬೀಳದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬಿರುಕು ಬೀಳುತ್ತದೆ. ಸ್ವ ಜಾತಿ, ಸ್ವ ಸ್ವಧರ್ಮೀಯ ಎಂಬ ಒಂದೇ ಕಾರಣಕ್ಕೆ ಮತ ಚಲಾಯಿಸಿದರೆ ಅದು ನಮಗೆ ನಾವೇ ಮೋಸ ಮಾಡಿಕೊಂಡಂಗೆ ಆಗುತ್ತದೆ.
ಕೇಂದ್ರ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಸುಧಾರಣೆಗಾಗಿ ಎಷ್ಟೇ ಬದಲಾವಣೆಗಳು ಮಾಡಿದರೂ, ರಾಜಕೀಯ ಪಕ್ಷಗಳು ಅವುಗಳನ್ನು ಉಲ್ಲಂಘಿಸುವ ಪ್ರಕರಣಗಳು ಜಾಸ್ತಿ. ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಲಕ್ಷ ರೂ.ಗಳಲ್ಲಿ ಮಾತ್ರ ಖರ್ಚು ಮಾಡ ಬೇಕೆಂಬ ನಿಯಮವಿದ್ದರೂ, ಕೋಟಿ ರೂ. ಗಳಲ್ಲಿ ಖರ್ಚು ಮಾಡುವ ಅಭ್ಯರ್ಥಿಗಳಿಗೇನು ನಮ್ಮಲ್ಲಿ ಕೊರತೆ ಇಲ್ಲ.
ಚುನಾವಣಾ ಆಕ್ರಮಗಳಲ್ಲಿ ಭಾಗಿಯಾದರೂ ಕಠಿಣ ಶಿಕ್ಷೆ ಕೊಡುವ ಸೂಕ್ತ ಕಾನೂನು ವ್ಯವಸ್ಥೆ ನಮ್ಮಲ್ಲಿ ಇಲ್ಲ. ದಶಕಗಳ ಹಿಂದೆ ದಾಖಲಾಗಿರುವ ಚುನಾವಣಾ ಅಕ್ರಮ ಪ್ರಕರಣಗಳು ನ್ಯಾಯಾಲಯಗಳಲ್ಲಿ ಧೂಳು ಹಿಡಿಯುತ್ತಿವೆ. 
ಇನ್ನು ಮತದಾನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಳವಾಗುತ್ತಿಲ್ಲ ಎಂಬುವುದು ಮತದಾರರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. ಚುನಾವಣೆ ದಿನ ರಜೆ ಬಂತೆಂದು ಹಲವರು ಜಾಲಿ ಟ್ರಿಪ್ ಹೋಗುವ ನಿದರ್ಶನಗಳು ಕೂಡ ನಡೆಯುತ್ತವೆ. ಇದು ಮತದಾರರು ಮಾಡುವ ಅಕ್ಷಮ್ಯ ಅಪರಾಧ. ಸಂವಿಧಾನದತ್ತವಾಗಿ ಸಿಕ್ಕ ಪವಿತ್ರವಾದ ಮತದಾನವನ್ನೇ ಚಲಾಯಿಸದೇ ಹೋದರೆ ಏನೇನ್ನ ಬೇಕೋ ಗೊತ್ತಿಲ್ಲ.? ನಾಳೆ ಜನಪ್ರತಿನಿಧಿಗಳು ತಪ್ಪು ಮಾಡಿದರೆ ಪ್ರಶ್ನಿಸುವ ನೈತಿಕ ಹಕ್ಕು ಮತದಾನದಿಂದ ದೂರವಿದ್ದವರಿಗೆ ಖಂಡಿತಾ ಇರುವುದಿಲ್ಲ.
ನಾವು ಎಂದು ಪ್ರಾಮಾಣಿಕವಾಗಿ ಮತದಾನ ಮಾಡಿ ಅಭಿವೃದ್ದಿಪರ ಚಿಂತಿಸುವ ಅಭ್ಯಥರ್ಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹಣೆ ಬರಹ ಬದಲಾಗುವುದಿಲ್ಲ. ನಮ್ಮ ಹಣೆ ಬರಹವನ್ನು ಬದಲಿಸುವ ಶಕ್ತಿ, ಸಾಮಥ್ರ್ಯ ಚುನಾವಣೆ ಎಂಬ ಅಸ್ತ್ರಕ್ಕಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಅಷ್ಟೇ. ಚುನಾವಣೆಯ ಹೊಸ್ತಿಲಲ್ಲಿ ಇರುವ ನಾವು ಎಡುವುದು ಬೇಡ. ಪ್ರಲೋಬಗಳಿಗೆ ಬಲಿಯಾಗಿ ಮತ ಹಾಕಿದರೆ ಮುಂದಿನ 5 ವರ್ಷ ದೇವರೇ ಗತಿ, ಚುನಾವಣೆಗೆ ಜನರ ಬದುಕು ಬದಲಿಸುವ ಶಕ್ತಿ ಇದೆ ನೆನಪಿರಲಿ.

ಗುರುವಾರ, ಫೆಬ್ರವರಿ 8, 2018

ಶಿಕ್ಷಣ ವ್ಯವಸ್ಥೆಯೇ ಗೊಂದಲಮಯ ? ವಿದ್ಯಾರ್ಥಿಗಳ ಭವಿಷ್ಯ ಅಯೋಮಯ..

ನಾನು ಸರಕಾರಿ ಕನ್ನಡ ಶಾಲೆಯಲ್ಲಿ ಓದಿರುವುದಕ್ಕೆ ಹೆಗ್ಗಳಿಕೆ ಇದೆ. ರಾಜ್ಯದ ಸರಕಾರಿ ವಿಶ್ವವಿದ್ಯಾಲಯವೊಂದರ ವಿದ್ಯಾ ರ್ಥಿಯಾಗಿದ್ದೇ ಎಂಬುವುದನ್ನು ಗೌರವದಿಂದ ಹೇಳುವೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡಿದ ಅದೆಷ್ಟೋ ಜನರು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸೇರಿದಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಐಎಎಸ್, ಐಪಿಎಸ್, ವಿಜ್ಞಾನಿ, ಇಂಜಿನಿಯರ್, ವೈದ್ಯ ಸೇರಿದಂತೆ ಹತ್ತು ಹಲವು ಹುದ್ದೆಗಳನ್ನು ಅಲಂಕರಿಸಿ, ಆಳ್ವಿಕೆ ನಡೆಸಿದ್ದಾರೆ. 
ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಜ್ಞಾನಪೀಠ, ಸರಸ್ವತಿ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಓದಿದ ಮಹನೀಯರು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಕೆಲವರಿಗೆ ಸರಕಾರಿ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳೆಂದರೆ ಕೀಳರಿಮೆ ಇರಬಹದು. ಆದರೆ ಅಲ್ಲಿ ಓದಿದ ಅದೇಷ್ಟೋ ಜನರು ವಿಶ್ವಕ್ಕೇನೆ ದಾರಿ ತೋರಿಸಿದ್ದಾರೆ.
ಇಷ್ಟೇಲ್ಲ ಪೀಠಿಕೆ ಹೇಳಲು ಕಾರಣವಿದೆ. ಒಂದು ದೇಶದ ಅಭಿವೃದ್ದಿಯು ಅಲ್ಲಿನ ಶಿಕ್ಷಣ ವ್ಯವಸ್ಥೆಯು ಮೇಲೆ ನಿಂತಿದೆ ಎಂಬ ಮಾತು ಅಕ್ಷರಹ ಸತ್ಯ. ಶೈಕ್ಷಣಿಕವಾಗಿ ಅಭಿವೃದ್ದಿಯಾಗದೆ ಹೋದರೆ ಯಾವುದೇ ರಾಷ್ಟ್ರ ಮುಂಚೂಣಿಗೆ ಬರಲು ಸಾಧ್ಯವಿಲ್ಲ. ಇಂದು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಒಂದು ಕಾಲದಲ್ಲಿ ಕೊಠಡಿಗಳಲ್ಲಿ ಕುಳಿತುಕೊಳ್ಳುವಷ್ಟು ಸಾಧ್ಯವಾಗದ ಮಟ್ಟಿಗೆ ವಿದ್ಯಾರ್ಥಿಗಳ ಸಂಖ್ಯೆ ಗಗನಮುಖಿಯಾಗಿತ್ತು. 
ಎಷ್ಟೋ ಸರಕಾರಿ ಶಾಲಾ- ಕಾಲೇಜುಗಳಿಗೆ ಪ್ರವೇಶ ಪಡೆಯಲು ಶಾಸಕ, ಸಂಸದ ಹಾಗೂ ಉನ್ನತ ಅಧಿಕಾರಿಗಳಿಂದ ಶಿಫಾರಸ್ಸು ಪತ್ರ ತರುವ ಕಾಲವು ಇತ್ತು. ಶಾಲಾ ಕೊಠಡಿಗಳು ನೀರು ತುಂಬಿ ಭತರ್ಿಯಾದ ಕೊಳದಂತೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.                        
ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ, ಈಗಾಗಲೇ ರಾಜ್ಯದಲ್ಲೇ ಹತ್ತಾರು ಶಾಲಾ, ಕಾಲೇಜುಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಜೊತೆಗೆ ಒಂದಷ್ಟು ಶಾಲೆಗಳು ವಿಲೀನಗೊಂಡಿವೆ. ಅದಕ್ಕೆ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಎಂಬುವುದು ಸರಕಾರಗಳ ಉತ್ತರ.
ಈ ಮಧ್ಯೆ ನವೋದಯ, ಏಕಲವ್ಯ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಮತ್ತಿತರರ ಹೆಸರಲ್ಲಿ ಸರಕಾರವೇ ಹೊಸ ಶಾಲೆಗಳನ್ನು ಪ್ರಾರಂಭಿಸಿವೆ. ಗ್ರಾಮಾಂತರ ಪ್ರದೇಶದಲ್ಲಿದ್ದ ಶಾಲೆಗಳ ಉಳಿವಿಗಾಗಿ ಪ್ರಯತ್ನಪಡದೆ ಹೊಸ ಹೆಸರಲ್ಲಿ ಹೊಸ ಶಾಲೆಗಳನ್ನು ಪ್ರಾರಂಭಿಸಿವೆ. ಮುಂದೊಂದು ದಿನ ಈ ಶಾಲೆಗಳಿಗೂ ಕೂಡ ಖಾಸಗಿ ಶಾಲೆಗಳ ಪೈಪೊಟಿಯಿಂದ ಸಂಚಕಾರ ಬರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ..?
ಸರಕಾರಿ ಶಾಲೆಗಳ ಅಭಿವೃದ್ದಿಗಾಗಿ ಕಿಂಚತ್ತೂ ಕ್ರಮ ವಹಿಸಿದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಧಿಕಾರವಧಿಯಲ್ಲಿ ಖಾಸಗಿ ಶಾಲೆಗಳ ಆರಂಭಕ್ಕೆ ಮುಕ್ತವಾಗಿ ಅವಕಾಶ ನೀಡಿದವು. ಆ ಕಾರಣದಿಂದಲೇ ಇಂದು ಗಲ್ಲಿಗೊಂದರಂತೆ ಖಾಸಗಿ ಶಾಲೆಗಳಿವೆ ಹಾಗೂ ಡೊನೇಷನ್ ಹೆಸರಲ್ಲಿ ಪೋಷಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. 
ಅಷ್ಟೇಕೆ ಯಾವುದೇ ಪಕ್ಷದ ಸರಕಾರ ಬರಲಿ ಅಲ್ಲಿ ಪ್ರಮುಖ ಖಾತೆಗಳ ಸಚಿವ ಸ್ಥಾನವನ್ನು ಅಲಂಕರಿಸುವುದು ಖಾಸಗಿ ಶಾಲೆಗಳ ಮಾಲೀಕರು. ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟಂತೆ ನಿಧರ್ಾರ ತೆಗೆದುಕೊಳ್ಳುವ ಅಧಿಕಾರ ಪರೋಕ್ಷವಾಗಿ ಖಾಸಗಿ ಶಾಲೆಗಳ ಮಾಲೀಕರಿಗೆ ಹೋಗುತ್ತದೆ.
ಅಂತವರು ಯಾವ ದೃಷ್ಟಿಕೋನದಲ್ಲಿ ಸರಕಾರಿ ಶಾಲಾ-ಕಾಲೇಜುಗಳ ಅಭಿವೃದ್ದಿಗೆ ಮುಂದಾಗುತ್ತಾರೇ ಎಂಬುವುದು ಯಕ್ಷ ಪ್ರಶ್ನೆ..?
ಸರಕಾರಿ ಶಾಲಾ-ಕಾಲೇಜುಗಳ ಉಳಿವಿಗಾಗಿ ಮೊದಲು ಮಾಡಬೇಕಾದದ್ದು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಹಾಗೂ ಒಂದು ಭಾಷೆಯನ್ನಾಗಿಯಾದರೂ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಭಾಷೆಯನ್ನು ವ್ಯವಸ್ಥಿತವಾಗಿ ಕಲಿಸಬೇಕು. ಹಾಗೆಯೇ ರಾಜ್ಯದ ಅಧಿಕೃತ ಆಡಳಿತ ಭಾಷೆ (ಕನ್ನಡ, ತೆಲುಗು, ಮರಾಠಿ, ಗುಜರಾತಿ ಇನ್ನಿತರೆ) ಯನ್ನು ಖಾಸಗಿ, ಅನುದಾನಿತ, ಕೇಂದ್ರಿಯ, ಸಿಬಿಎಸ್ಸಿ, ಐಸಿಎಸ್ಸಿ ಸೇರಿದಂತೆ ಪ್ರತಿ ಶಾಲೆಗಳಲ್ಲೂ ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ಕಲಿಸುವ ಕಾನೂನು ಬರಬೇಕು. ಇಲ್ಲದೇ ಹೋದರೆ ಮಕ್ಕಳಿಗೆ ಪ್ರಾದೇಶಿಕ ಭಾಷೆಯ ಅರಿವು ಇರುವುದಿಲ್ಲ.
ಶಾಲಾ- ಕಾಲೇಜಿಗೆ ಚಕ್ಕರ್ ಹಾಕಿ ಶಿಕ್ಷಣ ಸಂಘಟನೆ, ಕಾರ್ಯಕ್ರಮ, ಸಭೆ, ಚೀಟಿ ವ್ಯವಹಾರ, ರಾಜಕೀಯ ಮಾಡುವ ಶಿಕ್ಷಕರಿಗೆ ನೇರವಾಗಿ ಮನೆ ದಾರಿ ತೋರಿಸಬೇಕು. ಪಾಠ ಮಾಡುವುದು ಬಿಟ್ಟು ಅನ್ಯ ಕಾರ್ಯಗಳಲ್ಲಿ ತೊಡುಗುವ ಶಿಕ್ಷಕರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಮೂಲಕ ಬೇರು ಮಟ್ಟದಲ್ಲಿ ನಡೆಯುವ ಅಶಿಸ್ತಿಗೆ ಕಡಿವಾಣ ಹಾಕಬೇಕು. 
ಇನ್ನು ನಮ್ಮ ಉನ್ನತ ಶಿಕ್ಷಣದ ಬಗ್ಗೆ ಮಾತನಾಡದಿರುವುದೇ ಲೇಸು. ಅರ್ಥವಾಗದ ಪ್ರಶ್ನೆ ಎಂದರೆ ಇಂದು ಕೃಷಿ, ವೈದ್ಯಕೀಯ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಇಂಜಿನಿಯರಿಂಗ್, ಸಂಸ್ಕೃತ, ಗ್ರಾಮೀಣಾಭಿವೃದ್ದಿ, ಕಾನೂನು, ಜಾನಪದ, ಮಹಿಳಾ, ಕನ್ನಡ ಭಾಷೆ ಸೇರಿದಂತೆ ಒಂದೊಂದು ವಿಷಯಕ್ಕೂ ಒಂದೊಂದು ವಿಶ್ವ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ. 
ಅದರ ಅಡಿಯಲ್ಲಿ ಸಾವಿರಾರು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮುಕ್ತ ವಿಶ್ವವಿದ್ಯಾಲಗಳಿಗೂ ಕೊರತೆ ಏನಿಲ್ಲ. ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ವಿಜಯಪುರ, ಬೆಳಗಾವಿ, ಗದಗ, ತುಮಕೂರು, ದಾವಣಗೆರೆ, ಕಲ್ಬುಗರ್ಿ, ಬೀದರ್, ಬಳ್ಳಾರಿ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ವಿಶ್ವವಿದ್ಯಾಲಯಗಳ ನೆರಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿ.ವಿಗಳು ಮಾಡುವ ಎಡವಟ್ಟುಗಳು ಒಂದೇ, ಎರಡೇ....ಅದಕ್ಕೆ ಉತ್ತಮ ಉದಾಹರಣೆ ಮೈಸೂರಿನ ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ. ಅನುಮತಿ ಇಲ್ಲದೆಯೇ ತನ್ನ ಕಾರ್ಯ ವ್ಯಾಪ್ತಿ ಮೀರಿ ತಾಂತ್ರಿಕ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಕೋಸರ್್ಗಳನ್ನು ಪ್ರಾರಂಭಿಸಿ ಯು.ಜಿ.ಸಿಯಿಂದ ಅನುಮತಿ ರದ್ದಾಗುವಂತೆ ಮಾಡಿಕೊಂಡಿತು. 
ಪದವಿ ಪಡೆಯುವ ಆಸೆಯಿಂದ ಕೆ.ಎಸ್.ಓ.ಯು ಗೆ ದಾಖಲಾಗಿದ್ದ ಹಲವರ ಬಾಳು ಅಂಧಕಾರದಲ್ಲಿ ಮುಳುಗಿದೆ. ಸರಕಾರಿ ಕೆಲಸಗಳಿಗೆ ಅಜರ್ಿ ಹಾಕಲು ಕೂಡ ಸಾಧ್ಯವಾಗದ ಪರಿಸ್ಥಿತಿಗೆ ವಿ.ವಿ ವಿದ್ಯಾರ್ಥಿಗಳನ್ನು ತಳ್ಳಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ತರ ಆಗಿದೆ ಕೆ.ಎಸ್.ಓ.ಯು ವಿದ್ಯಾರ್ಥಿಗಳ ಸ್ಥಿತಿಗತಿ.
ಇಂದಿಗೂ ಹಲವು ವಿ.ವಿಗಳಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಮೌಲ್ಯಮಾಪನಗಳಲ್ಲಿ ಆಗುವ ಲೋಪ ದೋಷಗಳು ಹತ್ತು ಹಲವು. ಹಣ ಕೊಟ್ಟರೆ ನಪಾಸು ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಅಂಕಪಟ್ಟಿ ನೀಡುವ ಕೆಲ ವಿ.ವಿಗಳ ಕರಾಳ ಮುಖ ಮಾಧ್ಯಮಗಳಲ್ಲಿ ಬೆತ್ತಲಾಗಿತ್ತು. ವಿ.ವಿಗಳಲ್ಲಿ ಅನುದಾನ ದೂರುಪಯೋಗ, ಸಿಬ್ಬಂದಿ ನೇಮಿಸಿಕೊಳ್ಳುವಾಗ ಆಗುವ ಭ್ರಷ್ಟಚಾರ ಸೇರಿದಂತೆ ಹಲವು ಶೈಕ್ಷಣಿಕ ಸಮಸ್ಯೆಗಳು ವಿ.ವಿಗಳಲ್ಲಿ ನಿದ್ರಿಸುತ್ತಿವೆ. 
ಅದು ಬಿಡಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ವಿ.ವಿಗಳಿಗೆ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲಿಂಗ್ ಸದಸ್ಯರನ್ನು ತಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪುವವರನ್ನು ಆಯ್ಕೆ ಮಾಡುವ ಪರಿಪಾಠ ಇಂದು ನೆನ್ನೆಯದಲ್ಲ. ಇನ್ನು ವಿ.ವಿಗಳ ಉಪಕುಲಪತಿ, ಕುಲಸಚಿವರಾಗಬೇಕೆಂದರೆ ಆಡಳಿತ ನಡೆಸುವವರ ಕೃಪಾಕಟಾಕ್ಷ ಇರಲೇ ಬೇಕು.  
ಒಂದರ್ಥದಲ್ಲಿ ವಿ.ವಿಗಳಲ್ಲಿ ಶೈಕ್ಷಣಿಕ ವಾತಾವರಣ ರೂಪಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಸುಹಾಸನೇ ಅಧಿಕವಾಗಿ ಪರಿಮಳಿಸುತ್ತಿದೆ. ಇನ್ನು ಇಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿ ಮುಳಗದೆ ಬೇರೆನಾಗಲು ಸಾಧ್ಯ. ವಿಶ್ವವಿದ್ಯಾಲಯಗಳ ಮೇಲೆ ಬಿಗಿ ಹಿಡಿತ ಇಲ್ಲದಿರುವುದು ಹಾಗೂ ಕೆಲ ಪ್ರಾಧ್ಯಾಪಕರು ಪ್ರಭಾವಿಗಳಾಗಿರುವುದರಿಂದ ಪಾಠ ಮಾಡುವ ಪರಿಪಾಠವನ್ನೇ ಕೆಲವರು ಬಿಟ್ಟಿದ್ದಾರೆ. ವಿ.ವಿಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇದರ ಅನುಭವ ಚೆನ್ನಾಗಿ ಗೊತ್ತಿರುತ್ತದೆ.
ಹಾಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಜಾರಿಯಿಂದ ಬಡ, ಮಧ್ಯಮ ವರ್ಗದ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂಬುವುದು ಒಪ್ಪುವ ವಿಚಾರವೇ. ಆದರೂ ಇದರಿಂದ ಸರಕಾರಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದೆ. 
ಮೊದಲು ಸರಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ ವಹಿಸುವುದನ್ನು ಬಿಟ್ಟು ಖಾಸಗಿ ಶಾಲೆಗಳ ಬೆಳವಣಿಗೆಗೆ ಈ ಕಾಯ್ದೆ ಪರೋಕ್ಷವಾಗಿ ಬೆಂಬಲ ನೀಡುವಂತಿದೆ. ಸರಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ದಾಖಲಾಗುವಂತೆ ಸರಕಾರವೇ ಪ್ರೋತ್ಸಾಹಿಸುವಂತಿದೆ. 
ಸರಕಾರಗಳು ಶಿಕ್ಷಣ ವ್ಯವಸ್ಥೆಯನ್ನೂ ಬಲಗೊಳಿಸಲು ಸುಧಾರಣೆಗಳನ್ನು ತರದಿದ್ದರೆ ಯಾವುದೇ ಕಾರಣಕ್ಕೂ ಶೈಕ್ಷಣಿಕ ವಲಯ ಸಮಸ್ಯೆಗಳ ಕೂಪದಿಂದ ಹೊರ ಬರುವುದಿಲ್ಲ ಹಾಗೂ ರಾಷ್ಟ್ರ ಅಭಿವೃದ್ದಿಯಾಗುವುದಿಲ್ಲ. ಇದರ ಪರಿಣಾಮ ಎಂಬಂತೆ ಯುವ ಸಮೂಹಕ್ಕೆ ಭಾರಿ ಹೊಡೆತ ಬೀಳುತ್ತದೆ. ದೇಶದಲ್ಲಿನ ಪ್ರಾದೇಶಿಕ ಭಾಷೆಯ ಸರಕಾರಿ ಶಾಲಾ- ಕಾಲೇಜುಗಳ ಉಳಿವಿಗಾಗಿ ಆಯಾ ರಾಜ್ಯ ಸರಕಾರಗಳ ಜೊತೆಗೆ ಕೇಂದ್ರ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. 

                                                                                             ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ


ಸೋಮವಾರ, ಡಿಸೆಂಬರ್ 11, 2017

ನಿರುದ್ಯೋಗಿಗಳ ಬಾಳಲ್ಲಿ ಬೆಳಕು ಮೂಡಿಸುವವರಾರು..?

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

2011ರ ಜನಗಣತಿಯಂತೆ ದೇಶದ ಒಟ್ಟು ಜನಸಂಖ್ಯೆ 121 ಕೋಟಿ ಇತ್ತು. ರಾಜ್ಯದ ಜನಸಂಖ್ಯೆ 6.1 ಕೋಟಿ ಎಂದು ಸರಕಾರದ ಅಧಿಕೃತ ದಾಖಲೆಗಳು ಹೇಳುತ್ತವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಯುವ ಸಮೂಹದವರು ಎಂಬುದು ಒಂದು ಬಗೆಯಲ್ಲಿ ಹೆಮ್ಮೆಯ ವಿಚಾರ. ನನ್ನ ಶಾಲಾ- ಕಾಲೇಜು ದಿನಗಳಲ್ಲಿ ದೇಶದಲ್ಲಿನ ಪ್ರಮುಖ ಸಮಸ್ಯೆ ಎಂದರೆ ಬಡತನ, ಜಾತೀಯತೆ, ಅಪೌಷ್ಠಿಕತೆ, ಅಸಮಾನತೆ ಮುಂತಾದವುಗಳೆಂದು ನಮ್ಮ ಶಿಕ್ಷಕರು ಹೇಳುತ್ತಿದ್ದರು. ಆದರೆ ಇಂದು ದೇಶಕ್ಕೆ ಭಾರಿ ಸಮಸ್ಯೆಯನ್ನು ತಂದೊಡ್ಡುತ್ತಿರುವ ವಿಷಯ ನಿರುದ್ಯೋಗ.
ದೇಶದ ಜನಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಅಂಕಿ-ಅಂಶಗಳ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಜನ ಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಮ್ಮೆಟ್ಟಿಸುವ ಹಾದಿಯತ್ತ ಭಾರತ ಸಾಗಿದೆ. ಇತ್ತ ಜನಸಂಖ್ಯೆ ಏರುತ್ತಿದ್ದರೆ, ಅದಕ್ಕೆ ತಕ್ಕಂತೆ ಉದ್ಯೋಗವಕಾಶಗಳು ಸೃಷ್ಟಿಯಾಗದಿರುವುದರಿಂದ ಯುವ ಸಮೂಹ ಆತಂಕಕ್ಕೆ ಒಳಗಾಗುವಂತಾಗಿದೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದ್ದ ಕೃಷಿಯು ಮಳೆ ಕೊರತೆ, ಬೆಳೆ ನಷ್ಟ, ಬೆಲೆ ಇಳಿಕೆ ಮತ್ತಿತರ ಕಾರಣಗಳಿಗಾಗಿ ಸಮಸ್ಯೆಗೆ ಒಳಗಾಗಿರುವುದರಿಂದ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಇತ್ತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲೂ ಕೂಡ ಬಂಡವಾಳದ ಕೊರತೆ, ಮಾರುಕಟ್ಟೆ ವಿಸ್ತರಣೆ ಸಮಸ್ಯೆ, ಕೌಶಲ್ಯಯುತ ಕಾರ್ಮಿಕರ ಕೊರತೆ, ವಿದ್ಯುತ್‌ ಕಣ್ಣಾಮುಚ್ಚಾಲೆ, ಹದಗೆಟ್ಟ ರಸ್ತೆ, ಸಾರಿಗೆ ವ್ಯವಸ್ಥೆ, ದುಬಾರಿ ನಿವೇಶನ, ಮಳಿಗೆಯ ಬಾಡಿಗೆಯಂತಹ ಸಮಸ್ಯೆಗಳಿಂದ ಹೈರಾಣಾಗಿದ್ದು, ಅಲ್ಲೂ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗವಕಾಶ ಹುಟ್ಟುತ್ತಿಲ್ಲ.
ಈ ಮಧ್ಯೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಕ್ಷಗಳಲ್ಲಿ ವೇತನ ನೀಡುವ ಮೂಲಕ ಸಾಫ್ಟ್‌ವೇರ್‌ ನೌಕರರ ಸ್ವರ್ಗವಾಗಿತ್ತು. ಕಾಲ ಬದಲಾದಂತೆ ಐಟಿ ಬಿಟಿ ವಲಯದ ಕಂಪನಿಗಳು ಕೂಡ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ಮೂಲಕ ಅಲ್ಲಿನ ಉದ್ಯೋಗಿಗಳಿಗೆ ಶಾಕ್‌ ನೀಡುತ್ತಿವೆ. ಲಕ್ಷಗಳಲ್ಲಿ ವೇತನ ಪಡೆಯುತ್ತಿದ್ದ ಹಲವರು ಸಾವಿರ ರೂ.ಗಳಲ್ಲಿ ವೇತನ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಎಲ್ಲರ ಕಣ್ಣಿಗೂ ಕಾಣುವ ಸತ್ಯ. ಐಟಿ, ಬಿಟಿ ವಲಯದ ಕಂಪನಿಗಳು ಕೂಡ ಉದ್ಯೋಗಿಗಳಿಗೆ ಕತ್ತರಿ ಹಾಕಿ ಕಡಿಮೆ ಸಿಬ್ಬಂದಿಯಿಂದಲೇ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ಪಾಲಿಸುತ್ತಿರುವುದರಿಂದ ಯುವ ಸಮೂಹಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಹುತೇಕ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ಹೆಚ್ಚಿನವರು ಉದ್ಯೋಗದಿಂದ ವಂಚಿತರಾಗಲು ಮೂಲ ಕಾರಣ ಅವರಲ್ಲಿನ ಕೌಶಲ್ಯದ ಕೊರತೆ ಎನ್ನುವುದನ್ನು ಪ್ರತಿಪಾದಿಸುತ್ತಾರೆ. ಅದು ಸಂವಹನ, ಭಾಷೆಯಲ್ಲಿ ಹಿಡಿತ, ಸಮಯ ಪಾಲನೆ, ಸಮಸ್ಯೆ ಬಗೆಹರಿಸುವಿಕೆ, ನಾಯಕತ್ವದ ಕೊರತೆ, ವೃತ್ತಿಗೆ ಸಂಬಂಧಪಟ್ಟಂತೆ ಜ್ಞಾನದ ಕೊರತೆ ಮುಂತಾದ ವಿಷಯಗಳಲ್ಲಿ ಕೌಶಲ್ಯ ಇಲ್ಲದಿರುವುದೇ ಉದ್ಯೋಗದಿಂದ ವಂಚಿತರಾಗಲು ಕಾರಣ ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ.
ಕೇಂದ್ರ ಹಾಗೂ ಬಹುತೇಕ ರಾಜ್ಯ ಸರಕಾರಗಳು ಯುವ ಜನಾಂಗಕ್ಕೆ ನಾನಾ ರೀತಿಯ ಕೌಶಲ್ಯ ನೀಡಿ, ಉದ್ಯೋಗವಕಾಶಗಳನ್ನು ಒದಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ವರ್ಷವೂ ಮುಂಗಡ ಪತ್ರದಲ್ಲಿ ಈ ಯೋಜನೆಗಳಿಗೆ ಕೋಟ್ಯಂತರ ಹಣವನ್ನು ಮೀಸಲಿಡುತ್ತವೆ. ಕೌಶಲ್ಯಾಧಾರಿತ ತರಬೇತಿ ನೀಡುವ ಜವಾಬ್ದಾರಿಯನ್ನು ಸರಕಾರೇತರ ಸಂಸ್ಥೆ (ಎನ್‌ಜಿಓ)ಗಳಿಗೆ ಸರಕಾರಗಳು ವಹಿಸುತ್ತಿರುವುದರಿಂದ, ಗುಣಮಟ್ಟದ ತರಬೇತಿಗಳನ್ನು ಅವು ನೀಡುತ್ತಿವೆ ಎಂದು ಹೇಳಲು ಅಸಾಧ್ಯ. ಕೆಲ ಸಂಸ್ಥೆಗಳಂತೂ ಯುವಕ- ಯುವತಿಯರಿಗೆ ಕೌಶಲ್ಯ ನೀಡುವುದಕ್ಕಿಂತ ಸರಕಾರದಿಂದ ಬರುವ ಅನುದಾನದ ಮೇಲೆ ಕಣ್ಣು ನೆಟ್ಟಿರುವುದರಿಂದ ತರಬೇತಿಗಳು ಕಾಟಾಚಾರದ ಕೇಂದ್ರಗಳಾಗಿ ಬದಲಾಗಿವೆ ಎಂದರೆ ತಪ್ಪಿಲ್ಲ.
ಪ್ರತಿ ರಾಜಕೀಯ ಪಕ್ಷವೂ ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಯಾವುದೇ ಚುನಾವಣೆ ಬಂದರೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವುದು ನಿರುದ್ಯೋಗ ನಿವಾರಣೆ ಹಾಗೂ ಸ್ವ ಉದ್ಯೋಗ ಆಸಕ್ತರಿಗೆ ಪೋ›ತ್ಸಾಹ. ಈ ಎರಡು ಅಂಶಗಳ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಎನ್ನುವುದು ಬಿಡಿಸಿ ಹೇಳಬೇಕಾಗಿಲ್ಲ.
ಸಿಎಂಇಜಿಪಿ, ಪಿಎಂಇಜಿಪಿ ಯೋಜನೆ, ಕೈಗಾರಿಕಾ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಾ.ಬಿ.ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಇಲಾಖೆಗಳು ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವ ನಿರುದ್ಯೋಗಿಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.
ಗಮನಿಸಬೇಕಾದ ಅಂಶವೆಂದರೆ ಇಂತಹ ಯೋಜನೆಗಳ ಪಲಾನುಭವಿಯಾಗಬೇಕಾದರೆ ಇಲ್ಲಾ ಜನಪ್ರತಿನಿಧಿಯ ಆಶೀರ್ವಾದ ಇರಬೇಕು. ಇಲ್ಲದೆ ಹೋದರೆ ಇಲಾಖೆಯ ಅಧಿಕಾರಿಯ ಸ್ನೇಹವಿರಬೇಕು. ಎರಡೂ ಇಲ್ಲದಿದ್ದರೆ ಅರ್ಜಿ ಹಾಕಿ ಸುಮ್ಮನಿರಬೇಕು ಅಷ್ಟೇ.
ನಿರುದ್ಯೋಗ ನಿವಾರಣೆ ಹಾಗೂ ಸ್ವ ಉದ್ಯೋಗಿಗಳಿಗೆ ಪೋ›ತ್ಸಾಹ ನೀಡಲೆಂದು ಸರಕಾರಗಳು ನೀಡುತ್ತಿರುವ ಸಬ್ಸಿಡಿ ಸಹಿತ ಸಾಲಗಳು ಪ್ರಬಲರ ಪಾಲಾಗುತ್ತಿರುವುದರಿಂದ ನಿಜವಾದ ಹಾಗು ತನ್ನ ಜೀವನವನ್ನು ಸ್ವ ಉದ್ಯೋಗದ ಮೂಲಕ ರೂಪಿಸಿಕೊಳ್ಳಬೇಕೆಂಬ ಇಚ್ಛೆ ಇರುವ ಯುವಕ-ಯುವತಿಯರಿಗೆ ಕನಸು ಕಾಣುವುದು ಬಿಟ್ಟರೆ ಬೇರೇನೂ ಮಾರ್ಗ ಉಳಿದಿಲ್ಲ.  
ಇನ್ನು ಗ್ರಾಮೀಣ ಭಾಗದಲ್ಲಿ ಉದ್ಯೋಗಗಳು ಕ್ಷೀಣಿಸುತ್ತಿರುವುದರಿಂದ ಜನರು ನಗರಗಳತ್ತ ವಲಸೆ ಹೋಗುತ್ತಿರುವುದು ಸಾಮಾನ್ಯ ವಿಚಾರ. ಇದೇ ರೀತಿ ವಲಸೆ ಮುಂದುವರಿದರೆ ಆಗಬಹುದಾದ ಭಾರಿ ಅನಾಹುತಗಳ ಬಗ್ಗೆ ಚರ್ಚೆಯಾಗಬೇಕಿದೆ. ನಗರಗಳು ತಮ್ಮ ಶಕ್ತಿ ಮೀರಿ ಜನರನ್ನು ಹಿಡಿದಿವೆ. ನೀರಿನ ಸಮಸ್ಯೆ, ಸಂಚಾರ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಸದ ಸಮಸ್ಯೆ, ದುಬಾರಿ ಬಾಡಿಗೆ ಮತ್ತಿತರ ಸಮಸ್ಯೆಗಳು ಉಲ್ಬಣಗೊಂಡಿವೆ.
ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗದ ಮೂಲಕ ದುಡಿದು ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಆಸೆಯ ಕಣ್ಣುಗಳಿಂದ ಕಾಯುವ ಯುವ ಸಮೂಹಕ್ಕೆ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ಹೊಣೆಗಾರಿಕೆ ಆಳುವ ಸರಕಾರಗಳದ್ದು. ಸರಕಾರಿ ವಲಯದಲ್ಲಿ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಅರ್ಹರನ್ನು ಇಲಾಖೆಗಳಿಗೆ ನೇಮಿಸಿಕೊಳ್ಳಬೇಕು. ಕೃಷಿ, ಕೈಗಾರಿಕೆ ವಲಯಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು.  
ಸ್ವ ಉದ್ಯೋಗದಲ್ಲಿ ನಿಜವಾದ ಆಸಕ್ತಿ ಇರುವ ಯುವಕ-ಯುವತಿಯರಿಗೆ ಯೋಜನೆಗಳ ಲಾಭ ಸಿಗುವಂತೆ ಮಾಡುವ ಮೂಲಕ ಅರ್ಹರ ಕೈ ಹಿಡಿಯಬೇಕು. ಗೊತ್ತು ಗುರಿಯಿಲ್ಲದ ಎನ್‌ಜಿಓಗಳಿಗೆ ತರಬೇತಿಯ ಹೊಣೆ ನೀಡಿ ಹಣ ವ್ಯರ್ಥ ಮಾಡುವ ಬದಲು ಗುಣಮಟ್ಟಕ್ಕೆ ಆದ್ಯತೆ ನೀಡುವ ಸಂಸ್ಥೆಗೆ ಕೌಶಲ್ಯಯುತ ತರಬೇತಿ ಜವಾಬ್ದಾರಿ ವಹಿಸಬೇಕು.
ದೇಶದ ನಾಳಿನ ಪ್ರಜೆಗಳಾದ ಮಕ್ಕಳ, ವಿದ್ಯಾರ್ಥಿಗಳ, ಯುವ ಜನಾಂಗದ ಭವಿಷ್ಯ ಜೀವನದ ಬಗ್ಗೆ ಸರಕಾರಗಳು ಲಘುವಾಗಿ ಪರಿಗಣಿಸಬಾರದು. ಯುವ ಸಮೂಹವೇ ಈ ದೇಶದ ಆಸ್ತಿ. ಅವರ ಭವಿಷ್ಯ ಸೂರ್ಯನ ಥರ ಸದಾ ಬೆಳಕು ನೀಡುತ್ತಾ ಪ್ರಜ್ವಲಿಸುವಂತಾಗಲಿ. ಆಗ ದೇಶವು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಕಾಣುತ್ತದೆ. ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ನಿಧಾನಗತಿಯನ್ನು ಸರಕಾರಗಳು ಪ್ರದರ್ಶಿಸಿದರೆ ಅದರಿಂದಾಗುವ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆಗೆ ಸಿಲುಕುವುದು ಖಚಿತ.
(ನನ್ನ ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)