ನಾನು ಸರಕಾರಿ ಕನ್ನಡ ಶಾಲೆಯಲ್ಲಿ ಓದಿರುವುದಕ್ಕೆ ಹೆಗ್ಗಳಿಕೆ ಇದೆ. ರಾಜ್ಯದ ಸರಕಾರಿ ವಿಶ್ವವಿದ್ಯಾಲಯವೊಂದರ ವಿದ್ಯಾ ರ್ಥಿಯಾಗಿದ್ದೇ ಎಂಬುವುದನ್ನು ಗೌರವದಿಂದ ಹೇಳುವೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡಿದ ಅದೆಷ್ಟೋ ಜನರು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸೇರಿದಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಐಎಎಸ್, ಐಪಿಎಸ್, ವಿಜ್ಞಾನಿ, ಇಂಜಿನಿಯರ್, ವೈದ್ಯ ಸೇರಿದಂತೆ ಹತ್ತು ಹಲವು ಹುದ್ದೆಗಳನ್ನು ಅಲಂಕರಿಸಿ, ಆಳ್ವಿಕೆ ನಡೆಸಿದ್ದಾರೆ.
ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ಜ್ಞಾನಪೀಠ, ಸರಸ್ವತಿ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸರಕಾರಿ ಕನ್ನಡ ಶಾಲೆಗಳಲ್ಲಿ ಓದಿದ ಮಹನೀಯರು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಕೆಲವರಿಗೆ ಸರಕಾರಿ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳೆಂದರೆ ಕೀಳರಿಮೆ ಇರಬಹದು. ಆದರೆ ಅಲ್ಲಿ ಓದಿದ ಅದೇಷ್ಟೋ ಜನರು ವಿಶ್ವಕ್ಕೇನೆ ದಾರಿ ತೋರಿಸಿದ್ದಾರೆ.
ಇಷ್ಟೇಲ್ಲ ಪೀಠಿಕೆ ಹೇಳಲು ಕಾರಣವಿದೆ. ಒಂದು ದೇಶದ ಅಭಿವೃದ್ದಿಯು ಅಲ್ಲಿನ ಶಿಕ್ಷಣ ವ್ಯವಸ್ಥೆಯು ಮೇಲೆ ನಿಂತಿದೆ ಎಂಬ ಮಾತು ಅಕ್ಷರಹ ಸತ್ಯ. ಶೈಕ್ಷಣಿಕವಾಗಿ ಅಭಿವೃದ್ದಿಯಾಗದೆ ಹೋದರೆ ಯಾವುದೇ ರಾಷ್ಟ್ರ ಮುಂಚೂಣಿಗೆ ಬರಲು ಸಾಧ್ಯವಿಲ್ಲ. ಇಂದು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಒಂದು ಕಾಲದಲ್ಲಿ ಕೊಠಡಿಗಳಲ್ಲಿ ಕುಳಿತುಕೊಳ್ಳುವಷ್ಟು ಸಾಧ್ಯವಾಗದ ಮಟ್ಟಿಗೆ ವಿದ್ಯಾರ್ಥಿಗಳ ಸಂಖ್ಯೆ ಗಗನಮುಖಿಯಾಗಿತ್ತು.
ಎಷ್ಟೋ ಸರಕಾರಿ ಶಾಲಾ- ಕಾಲೇಜುಗಳಿಗೆ ಪ್ರವೇಶ ಪಡೆಯಲು ಶಾಸಕ, ಸಂಸದ ಹಾಗೂ ಉನ್ನತ ಅಧಿಕಾರಿಗಳಿಂದ ಶಿಫಾರಸ್ಸು ಪತ್ರ ತರುವ ಕಾಲವು ಇತ್ತು. ಶಾಲಾ ಕೊಠಡಿಗಳು ನೀರು ತುಂಬಿ ಭತರ್ಿಯಾದ ಕೊಳದಂತೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.
ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ, ಈಗಾಗಲೇ ರಾಜ್ಯದಲ್ಲೇ ಹತ್ತಾರು ಶಾಲಾ, ಕಾಲೇಜುಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಜೊತೆಗೆ ಒಂದಷ್ಟು ಶಾಲೆಗಳು ವಿಲೀನಗೊಂಡಿವೆ. ಅದಕ್ಕೆ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಎಂಬುವುದು ಸರಕಾರಗಳ ಉತ್ತರ.
ಈ ಮಧ್ಯೆ ನವೋದಯ, ಏಕಲವ್ಯ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಮತ್ತಿತರರ ಹೆಸರಲ್ಲಿ ಸರಕಾರವೇ ಹೊಸ ಶಾಲೆಗಳನ್ನು ಪ್ರಾರಂಭಿಸಿವೆ. ಗ್ರಾಮಾಂತರ ಪ್ರದೇಶದಲ್ಲಿದ್ದ ಶಾಲೆಗಳ ಉಳಿವಿಗಾಗಿ ಪ್ರಯತ್ನಪಡದೆ ಹೊಸ ಹೆಸರಲ್ಲಿ ಹೊಸ ಶಾಲೆಗಳನ್ನು ಪ್ರಾರಂಭಿಸಿವೆ. ಮುಂದೊಂದು ದಿನ ಈ ಶಾಲೆಗಳಿಗೂ ಕೂಡ ಖಾಸಗಿ ಶಾಲೆಗಳ ಪೈಪೊಟಿಯಿಂದ ಸಂಚಕಾರ ಬರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ..?
ಸರಕಾರಿ ಶಾಲೆಗಳ ಅಭಿವೃದ್ದಿಗಾಗಿ ಕಿಂಚತ್ತೂ ಕ್ರಮ ವಹಿಸಿದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಧಿಕಾರವಧಿಯಲ್ಲಿ ಖಾಸಗಿ ಶಾಲೆಗಳ ಆರಂಭಕ್ಕೆ ಮುಕ್ತವಾಗಿ ಅವಕಾಶ ನೀಡಿದವು. ಆ ಕಾರಣದಿಂದಲೇ ಇಂದು ಗಲ್ಲಿಗೊಂದರಂತೆ ಖಾಸಗಿ ಶಾಲೆಗಳಿವೆ ಹಾಗೂ ಡೊನೇಷನ್ ಹೆಸರಲ್ಲಿ ಪೋಷಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ.
ಅಷ್ಟೇಕೆ ಯಾವುದೇ ಪಕ್ಷದ ಸರಕಾರ ಬರಲಿ ಅಲ್ಲಿ ಪ್ರಮುಖ ಖಾತೆಗಳ ಸಚಿವ ಸ್ಥಾನವನ್ನು ಅಲಂಕರಿಸುವುದು ಖಾಸಗಿ ಶಾಲೆಗಳ ಮಾಲೀಕರು. ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟಂತೆ ನಿಧರ್ಾರ ತೆಗೆದುಕೊಳ್ಳುವ ಅಧಿಕಾರ ಪರೋಕ್ಷವಾಗಿ ಖಾಸಗಿ ಶಾಲೆಗಳ ಮಾಲೀಕರಿಗೆ ಹೋಗುತ್ತದೆ.
ಅಂತವರು ಯಾವ ದೃಷ್ಟಿಕೋನದಲ್ಲಿ ಸರಕಾರಿ ಶಾಲಾ-ಕಾಲೇಜುಗಳ ಅಭಿವೃದ್ದಿಗೆ ಮುಂದಾಗುತ್ತಾರೇ ಎಂಬುವುದು ಯಕ್ಷ ಪ್ರಶ್ನೆ..?
ಸರಕಾರಿ ಶಾಲಾ-ಕಾಲೇಜುಗಳ ಉಳಿವಿಗಾಗಿ ಮೊದಲು ಮಾಡಬೇಕಾದದ್ದು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಹಾಗೂ ಒಂದು ಭಾಷೆಯನ್ನಾಗಿಯಾದರೂ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಭಾಷೆಯನ್ನು ವ್ಯವಸ್ಥಿತವಾಗಿ ಕಲಿಸಬೇಕು. ಹಾಗೆಯೇ ರಾಜ್ಯದ ಅಧಿಕೃತ ಆಡಳಿತ ಭಾಷೆ (ಕನ್ನಡ, ತೆಲುಗು, ಮರಾಠಿ, ಗುಜರಾತಿ ಇನ್ನಿತರೆ) ಯನ್ನು ಖಾಸಗಿ, ಅನುದಾನಿತ, ಕೇಂದ್ರಿಯ, ಸಿಬಿಎಸ್ಸಿ, ಐಸಿಎಸ್ಸಿ ಸೇರಿದಂತೆ ಪ್ರತಿ ಶಾಲೆಗಳಲ್ಲೂ ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ಕಲಿಸುವ ಕಾನೂನು ಬರಬೇಕು. ಇಲ್ಲದೇ ಹೋದರೆ ಮಕ್ಕಳಿಗೆ ಪ್ರಾದೇಶಿಕ ಭಾಷೆಯ ಅರಿವು ಇರುವುದಿಲ್ಲ.
ಶಾಲಾ- ಕಾಲೇಜಿಗೆ ಚಕ್ಕರ್ ಹಾಕಿ ಶಿಕ್ಷಣ ಸಂಘಟನೆ, ಕಾರ್ಯಕ್ರಮ, ಸಭೆ, ಚೀಟಿ ವ್ಯವಹಾರ, ರಾಜಕೀಯ ಮಾಡುವ ಶಿಕ್ಷಕರಿಗೆ ನೇರವಾಗಿ ಮನೆ ದಾರಿ ತೋರಿಸಬೇಕು. ಪಾಠ ಮಾಡುವುದು ಬಿಟ್ಟು ಅನ್ಯ ಕಾರ್ಯಗಳಲ್ಲಿ ತೊಡುಗುವ ಶಿಕ್ಷಕರಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಮೂಲಕ ಬೇರು ಮಟ್ಟದಲ್ಲಿ ನಡೆಯುವ ಅಶಿಸ್ತಿಗೆ ಕಡಿವಾಣ ಹಾಕಬೇಕು.
ಇನ್ನು ನಮ್ಮ ಉನ್ನತ ಶಿಕ್ಷಣದ ಬಗ್ಗೆ ಮಾತನಾಡದಿರುವುದೇ ಲೇಸು. ಅರ್ಥವಾಗದ ಪ್ರಶ್ನೆ ಎಂದರೆ ಇಂದು ಕೃಷಿ, ವೈದ್ಯಕೀಯ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಇಂಜಿನಿಯರಿಂಗ್, ಸಂಸ್ಕೃತ, ಗ್ರಾಮೀಣಾಭಿವೃದ್ದಿ, ಕಾನೂನು, ಜಾನಪದ, ಮಹಿಳಾ, ಕನ್ನಡ ಭಾಷೆ ಸೇರಿದಂತೆ ಒಂದೊಂದು ವಿಷಯಕ್ಕೂ ಒಂದೊಂದು ವಿಶ್ವ ವಿದ್ಯಾಲಯಗಳನ್ನು ಪ್ರಾರಂಭಿಸಲಾಗಿದೆ.
ಅದರ ಅಡಿಯಲ್ಲಿ ಸಾವಿರಾರು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮುಕ್ತ ವಿಶ್ವವಿದ್ಯಾಲಗಳಿಗೂ ಕೊರತೆ ಏನಿಲ್ಲ. ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ವಿಜಯಪುರ, ಬೆಳಗಾವಿ, ಗದಗ, ತುಮಕೂರು, ದಾವಣಗೆರೆ, ಕಲ್ಬುಗರ್ಿ, ಬೀದರ್, ಬಳ್ಳಾರಿ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ವಿಶ್ವವಿದ್ಯಾಲಯಗಳ ನೆರಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿ.ವಿಗಳು ಮಾಡುವ ಎಡವಟ್ಟುಗಳು ಒಂದೇ, ಎರಡೇ....ಅದಕ್ಕೆ ಉತ್ತಮ ಉದಾಹರಣೆ ಮೈಸೂರಿನ ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ. ಅನುಮತಿ ಇಲ್ಲದೆಯೇ ತನ್ನ ಕಾರ್ಯ ವ್ಯಾಪ್ತಿ ಮೀರಿ ತಾಂತ್ರಿಕ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಕೋಸರ್್ಗಳನ್ನು ಪ್ರಾರಂಭಿಸಿ ಯು.ಜಿ.ಸಿಯಿಂದ ಅನುಮತಿ ರದ್ದಾಗುವಂತೆ ಮಾಡಿಕೊಂಡಿತು.
ಪದವಿ ಪಡೆಯುವ ಆಸೆಯಿಂದ ಕೆ.ಎಸ್.ಓ.ಯು ಗೆ ದಾಖಲಾಗಿದ್ದ ಹಲವರ ಬಾಳು ಅಂಧಕಾರದಲ್ಲಿ ಮುಳುಗಿದೆ. ಸರಕಾರಿ ಕೆಲಸಗಳಿಗೆ ಅಜರ್ಿ ಹಾಕಲು ಕೂಡ ಸಾಧ್ಯವಾಗದ ಪರಿಸ್ಥಿತಿಗೆ ವಿ.ವಿ ವಿದ್ಯಾರ್ಥಿಗಳನ್ನು ತಳ್ಳಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ತರ ಆಗಿದೆ ಕೆ.ಎಸ್.ಓ.ಯು ವಿದ್ಯಾರ್ಥಿಗಳ ಸ್ಥಿತಿಗತಿ.
ಇಂದಿಗೂ ಹಲವು ವಿ.ವಿಗಳಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಮೌಲ್ಯಮಾಪನಗಳಲ್ಲಿ ಆಗುವ ಲೋಪ ದೋಷಗಳು ಹತ್ತು ಹಲವು. ಹಣ ಕೊಟ್ಟರೆ ನಪಾಸು ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಅಂಕಪಟ್ಟಿ ನೀಡುವ ಕೆಲ ವಿ.ವಿಗಳ ಕರಾಳ ಮುಖ ಮಾಧ್ಯಮಗಳಲ್ಲಿ ಬೆತ್ತಲಾಗಿತ್ತು. ವಿ.ವಿಗಳಲ್ಲಿ ಅನುದಾನ ದೂರುಪಯೋಗ, ಸಿಬ್ಬಂದಿ ನೇಮಿಸಿಕೊಳ್ಳುವಾಗ ಆಗುವ ಭ್ರಷ್ಟಚಾರ ಸೇರಿದಂತೆ ಹಲವು ಶೈಕ್ಷಣಿಕ ಸಮಸ್ಯೆಗಳು ವಿ.ವಿಗಳಲ್ಲಿ ನಿದ್ರಿಸುತ್ತಿವೆ.
ಅದು ಬಿಡಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ವಿ.ವಿಗಳಿಗೆ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲಿಂಗ್ ಸದಸ್ಯರನ್ನು ತಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪುವವರನ್ನು ಆಯ್ಕೆ ಮಾಡುವ ಪರಿಪಾಠ ಇಂದು ನೆನ್ನೆಯದಲ್ಲ. ಇನ್ನು ವಿ.ವಿಗಳ ಉಪಕುಲಪತಿ, ಕುಲಸಚಿವರಾಗಬೇಕೆಂದರೆ ಆಡಳಿತ ನಡೆಸುವವರ ಕೃಪಾಕಟಾಕ್ಷ ಇರಲೇ ಬೇಕು.
ಒಂದರ್ಥದಲ್ಲಿ ವಿ.ವಿಗಳಲ್ಲಿ ಶೈಕ್ಷಣಿಕ ವಾತಾವರಣ ರೂಪಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಸುಹಾಸನೇ ಅಧಿಕವಾಗಿ ಪರಿಮಳಿಸುತ್ತಿದೆ. ಇನ್ನು ಇಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿ ಮುಳಗದೆ ಬೇರೆನಾಗಲು ಸಾಧ್ಯ. ವಿಶ್ವವಿದ್ಯಾಲಯಗಳ ಮೇಲೆ ಬಿಗಿ ಹಿಡಿತ ಇಲ್ಲದಿರುವುದು ಹಾಗೂ ಕೆಲ ಪ್ರಾಧ್ಯಾಪಕರು ಪ್ರಭಾವಿಗಳಾಗಿರುವುದರಿಂದ ಪಾಠ ಮಾಡುವ ಪರಿಪಾಠವನ್ನೇ ಕೆಲವರು ಬಿಟ್ಟಿದ್ದಾರೆ. ವಿ.ವಿಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇದರ ಅನುಭವ ಚೆನ್ನಾಗಿ ಗೊತ್ತಿರುತ್ತದೆ.
ಹಾಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಜಾರಿಯಿಂದ ಬಡ, ಮಧ್ಯಮ ವರ್ಗದ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂಬುವುದು ಒಪ್ಪುವ ವಿಚಾರವೇ. ಆದರೂ ಇದರಿಂದ ಸರಕಾರಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದೆ.
ಮೊದಲು ಸರಕಾರಿ ಶಾಲೆಗಳ ಅಭಿವೃದ್ದಿಗೆ ಕ್ರಮ ವಹಿಸುವುದನ್ನು ಬಿಟ್ಟು ಖಾಸಗಿ ಶಾಲೆಗಳ ಬೆಳವಣಿಗೆಗೆ ಈ ಕಾಯ್ದೆ ಪರೋಕ್ಷವಾಗಿ ಬೆಂಬಲ ನೀಡುವಂತಿದೆ. ಸರಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ದಾಖಲಾಗುವಂತೆ ಸರಕಾರವೇ ಪ್ರೋತ್ಸಾಹಿಸುವಂತಿದೆ.
ಸರಕಾರಗಳು ಶಿಕ್ಷಣ ವ್ಯವಸ್ಥೆಯನ್ನೂ ಬಲಗೊಳಿಸಲು ಸುಧಾರಣೆಗಳನ್ನು ತರದಿದ್ದರೆ ಯಾವುದೇ ಕಾರಣಕ್ಕೂ ಶೈಕ್ಷಣಿಕ ವಲಯ ಸಮಸ್ಯೆಗಳ ಕೂಪದಿಂದ ಹೊರ ಬರುವುದಿಲ್ಲ ಹಾಗೂ ರಾಷ್ಟ್ರ ಅಭಿವೃದ್ದಿಯಾಗುವುದಿಲ್ಲ. ಇದರ ಪರಿಣಾಮ ಎಂಬಂತೆ ಯುವ ಸಮೂಹಕ್ಕೆ ಭಾರಿ ಹೊಡೆತ ಬೀಳುತ್ತದೆ. ದೇಶದಲ್ಲಿನ ಪ್ರಾದೇಶಿಕ ಭಾಷೆಯ ಸರಕಾರಿ ಶಾಲಾ- ಕಾಲೇಜುಗಳ ಉಳಿವಿಗಾಗಿ ಆಯಾ ರಾಜ್ಯ ಸರಕಾರಗಳ ಜೊತೆಗೆ ಕೇಂದ್ರ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ