ಬುಧವಾರ, ಅಕ್ಟೋಬರ್ 11, 2017

ಮಳೆಯಲ್ಲಿ ಮಿಂದೆದ್ದ ಕೋಲಾರ, ರೈತರಲ್ಲಿ ಹರ್ಷ..

 ➤ ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ

           ಬೇತಮಂಗಲ ಕೆರೆ ಕೋಡಿ ಬಿದ್ದಿರುವುದು
ನನಗಿನ್ನು ನೆನಪಿದೆ, ಅದು 2005 ನೇ ಇಸವಿ, ಆಗ ನಾನು ಫ್ರೌಡ ಶಾಲೆಯಲ್ಲಿ ಓದುತ್ತಿರಬೇಕು. ಆ ವರ್ಷ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿತ್ತು. 
ಕೆರೆ, ಕುಂಟೆಗಳೆಲ್ಲಾ ತುಂಬಿ  ಹರಿಯಲಾರಂಭಿಸಿದ್ದ ವರ್ಷವದು. 
ಜಿಲ್ಲೆಯ ಎಲ್ಲಾ ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಭರ್ತಿಯಾದ ವರ್ಷವಾದ್ದರಿಂದ ಮರೆಯಲು ಖಂಡಿತಾ ಸಾಧ್ಯವಿಲ್ಲ. ಆ ಸಮಯದಲ್ಲಿ ಬಿದ್ದ ಮಳೆಯ ಆರ್ಭಟ, ವರ್ಷಧಾರೆ ಇಂದಿಗೂ ನಮ್ಮ ಕಣ್ಣೆದುರೆ ಹಾದು ಹೋಗುತ್ತದೆ. ಜೈಲಲ್ಲಿ ಹಲವು ವರ್ಷಗಳು ಕಾಲ ಶಿಕ್ಷೆ ಅನುಭವಿಸಿ ಹೊರಬರುವ ಖೈದಿಗೆ ಹೇಗೆ ಸ್ವಾತಂತ್ರ್ಯ ಸಿಕ್ಕ ಖುಷಿಯಾಗುತ್ತೋ, ಅದೇ ರೀತಿಯಲ್ಲಿ ಕೆರೆಗಳು ಭರ್ತಿಯಾಗಿ ತನ್ನ ಸೌಂದರ್ಯವನ್ನು ಮರಳಿ ಪಡೆದಾಗ ಜನ ಸಾಮಾನ್ಯರಿಗೆ ಆದ ಸಂತೋಷವು ಊಹೆಗೂ ಮಿಗಿಲಾದದ್ದು. ಮಳೆಯ ಆರ್ಭಟಕ್ಕೆ ಅಂದು ಶಾಲಾ-ಕಾಲೇಜುಗಳಿಗೂ ಕೆಲ ದಿನ ರಜೆ ಘೋಷಿಸಲಾಗಿತ್ತು ಎಂದರೆ ಮಳೆಯ ಪ್ರತಾಪ ಅರ್ಥವಾಗಬಹುದು ನಿಮಗೆ.
ನಾನಾಗ ಬಂಗಾರಪೇಟೆ ತಾಲೂಕಿನ ಬೇತಮಂಗಲದ ಶಾಲೆಯಲ್ಲಿ ಓದುತ್ತಿದ್ದರಿಂದ ಪ್ರತಿದಿನವೂ ಕೆರೆ ತುಂಬಿತೆ ಎಂದು ತಿಳಿಯಲು ಬೇತಮಂಗಲದ ಕೆರೆಯತ್ತ ಒಂದು ವಿಸೀಟ್ ತಪ್ಪದೇ ಇರುತ್ತಿತ್ತು. ಅಂತೂ ಕೆಲ ದಿನಗಳ ನಂತರ ಕೆರೆ ತುಂಬಿತು ಎಂಬ ಶಬ್ದ ಕಿವಿಗೆ ಬಿದ್ದಿದೆ ತಡ ಕೆರೆಯತ್ತ ದೌಡಾಯಿಸಿ, ಪ್ರತಿದಿನವೂ ವರ್ಣಿಸಲಾಗದ ಕೆರೆಯ ಸೌಂದರ್ಯವನ್ನು ಆಹ್ಲಾದಿಸುತ್ತಿದ್ದ ದಿನಗಳು ನೆನಪಿಸಿಕೊಂಡರೆ ಮೈ ಪುಳುಕಗೊಳ್ಳುತ್ತದೆ. ಕೆರೆಯಲ್ಲಿನ ನೀರು ಗಾಳಿಯ ರಭಸಕ್ಕೆ ನೃತ್ಯ ಮಾಡುತ್ತಿದ್ದರೆ ನೋಡುವುದೇ ಆಗ ಆನಂದ. ಮತ್ತೊಂದೆಡೆ ಕೆರೆಯ ಕ್ರಸ್ಟ್ ಗೇಟ್ ಗಳ ಮುಖಾಂತರ ಕೆರೆಯ ನೀರು ರಾಮಸಾಗರ ಕೆರೆಯತ್ತ ಹಾದು ಹೋಗುವ ಸನ್ನಿವೇಶ ಅದ್ಬುತವಾದ ಅನುಭವಗಳನ್ನು ಕಟ್ಟಿಕೊಟ್ಟಿತ್ತು.
ವಿಧಿಯ ನಿಯಮವೋ ಏನೋ 2005ರಲ್ಲಿ ಬಿದ್ದ ರೀತಿಯಲ್ಲಿ ಮಳೆಯ ಆಗಮನವನ್ನು ಕಾಣಲು ದಶಕಗಳೇ ಕಾಯಬೇಕಾಯಿತು. 2005 ರ ನಂತರ ಮತ್ತೆ ಅವಿಭಜಿತ ಕೋಲಾರ ಜಿಲ್ಲೆಗಳ ಕೆರೆಗಳು ತುಂಬಿದ್ದು ಈಗ (2017) ರಲ್ಲಿ ಅಂದರೆ ಬರೋಬ್ಬರಿ 12 ವರ್ಷಗಳ ವನವಾಸದ ನಂತರ..
ಈ ವರ್ಷ (2017) ಈ ಮಟ್ಟಿಗೆ ಮಳೆರಾಯನ ಆಗಮನವಾಗುತ್ತದೆ ಎಂದು ಯಾರು ಕನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಮಳೆ ಸಿಂಚನವು ದೊಡ್ಡ ಪ್ರಮಾಣದಲ್ಲಿ ಬಂದ ಕಾರಣ ಒಂದು ಹನಿಯು ನೀರಿಲ್ಲದೇ ಬರಡಾಗಿ, ಬಾಯ್ತೆರೆದಿದ್ದ ಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಕೆರೆಗಳಿಗೀಗ ಜೀವ ಕಳೆ ಬಂದಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೇ ಹರಿಯುವ ನದಿಗಳಿಲ್ಲ. ಜಲಾಶಯಗಳ ಸುಳಿವು ಇಲ್ಲ. ನೀರಿನ ಮೂಲವು ಇಲ್ಲ. ಆ ಕಾರಣದಿಂದಲೇ ಪೂರ್ವಿಕರು ಗ್ರಾಮಕ್ಕೊಂದರಂತೆ ಕೆರೆಗಳನ್ನು ನಿರ್ಮಿಸಿದ್ದರು.. ಮಳೆ ಬಂದರೆ ಕೆರೆಗಳಲ್ಲಿ ನೀರು ಸಂಗ್ರಹವಾದರೆ ಗ್ರಾಮದ ಜನರಿಗೆ ಒಂದಷ್ಟು ಸಹಾಯವಾಗುತ್ತದೆ ಎಂಬ ಆಲೋಚನೆ ಅವರದಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆ ಅವಿಭಜಿತ ಕೋಲಾರ ಜಿಲ್ಲೆಗಿದೆ.
2005 ರ ನಂತರ ಬಯಲು ಸೀಮೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಜನರಿಗೆ ನಿಜಕ್ಕೂ ವನವಾಸದ ಸ್ಥಿತಿ ಒದಗಿ ಬಂದಿತ್ತು. ಆಗಾಗ ಅಲ್ಪ ಸ್ವಲ್ಪ ಮಳೆ ಬಿದ್ದರು, ಕೆರೆಗಳಲ್ಲಿ ನೀರು ಶೇಖರಣೆಯಾಗುವ ಮಟ್ಟಿಗೆ ಮಳೆ ಬರಲಿಲ್ಲ. ಅಂತರ್ಜಲ ಮಟ್ಟವಂತು ಪಾತಾಳಕ್ಕೆ ಇಳಿದಿತ್ತು. ಕೊಳವೆ ಬಾವಿಗಳು ಮಕಾಡೆ ಮಲಗಿ, ರೈತನ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿತು.
ಜಿಲ್ಲೆಯ ಜನರಂತು ಕೃಷಿಯ ಸಹವಾಸವೇ ಸಾಕು ಎಂದು ಕೂಲಿ ಕೆಲಸಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದಿಷ್ಟು ಜನ ಬೆಂಗಳೂರು ಸೇರಿದಂತೆ ಮತ್ತಿತರರ ನಗರಗಳ ಕಾರ್ಖಾನೆಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಸೇರಿ ಜೀವನ ರೂಪಿಸಿಕೊಂಡಿದ್ದರು.
ಇನ್ನೇನು ಈ ವರ್ಷವು ಮಳೆ ಪ್ರತಿ ವರ್ಷದಂತೆ ಕೈ ಕೊಡುತ್ತದೆ ಎಂದೇ ಜನ ಭಾವಿಸಿದ್ದರು. ರಾಗಿ, ಅವರೆ, ಭತ್ತ, ಜೋಳ, ನೆಲಕಡಲೆ ಮತ್ತಿತರ ಬೆಳೆಗಳು ಮಳೆ ಇಲ್ಲದೆ ಸೋರುಗುತ್ತವೆ ಎಂಬ ಕಲ್ಪನೆ ಎಲ್ಲರದ್ದಾಗಿತ್ತು. ಆದರೆ ಮಳೆ ಅನಿರೀಕ್ಷಿತ ಆಗಮನದಿಂದ ಕೃಷಿಗೆ ಮರುಜೀವ ಬಂದಿದೆ. ರಾಗಿ ತೆನೆ ಹಚ್ಚ ಹಸಿರಿನಿಂದ ಹೊಲಗಳಲ್ಲಿ ಬೆಳೆದು ಕಂಗೊಳಿಸುತ್ತಿರುವ ಚಿತ್ರಣ ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಢ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿ ಸಾಕಷ್ಟು ಕೆರೆಗಳು ತುಂಬಿ ಕೋಡಿ ಬಿದ್ದಿವೆ. 
ಅದರಲ್ಲೂ ಕೋಲಾರ ಜಿಲ್ಲೆಯ ಪೈಕಿ ದೊಡ್ಡ ಕೆರೆಗಳಲ್ಲಿ ಒಂದಾದ ಬಂಗಾರಪೇಟೆ ತಾಲೂಕಿನ  ಬೇತಮಂಗಲದ ದೊಡ್ಡೆ ಕೆರೆ 12 ವರ್ಷಗಳ ನಂತರ ಮೈ ತುಂಬಿ ಹರಿಯುತ್ತಿದೆ. ಬೇತಮಂಗಲ, ಕೆಜಿಎಫ್, ಬೆಮಲ್ ನಗರಗಳಿಗೆ ನೀರಿನ ದಾಹ ನೀಗಿಸುತ್ತಿದ್ದ ಬೇತಮಂಗಲ ಕೆರೆ ಮತ್ತೆ ಭ ರ್ತಿಯಾಗಿರುವುದರಿಂದ ಈ ಮೂರು ನಗರಗಳ ಜನಕ್ಕೆ ಒಂದಷ್ಟು ವರ್ಷ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.
ಬಾಗೇಪಲ್ಲಿಯ ಚಿತ್ರಾವತಿ ಜಲಾಶಯವು ಭ ರ್ತಿಯಾಗಿದೆ. ಕೋಲಾರ ಭಾಗದ ಆವಣಿ, ರಾಮಾಪುರ, ಹೊಳಲಿ, ಅರಾಭಿಕೊತ್ತನೂರು ಮತ್ತಿತರರ ಕೆರೆಗಳು ತುಂಬಿ ಹರಿದಿವೆ. ಕೋಲಾರದ ಅಂತರಗಂಗೆಯಲ್ಲಿ ಮಳೆಯ ರಭಸಕ್ಕೆ ಹೊಸ ಪಾಲ್ಸ್ ಸೃಷ್ಟಿಯಾಗಿದೆ.
ಆದರೆ ನೋವಿನ ವಿಚಾರವೆಂದರೆ ಈ ವರ್ಷ ಜೋರಾಗಿಯೇ ಮಳೆಯಾಗುತ್ತಿದ್ದರು ಕೂಡ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ರಾಜಕಾಲುವೆಗಳು ಮುಚ್ಚಿ ಹೋದರೆ, ಮತ್ತೊಂದಿಷ್ಟು ರಾಜಕಾಲುವೆಗಳು ಒತ್ತುವರಿಯಾಗಿವೆ. ಆ ಕಾರಣದಿಂದಲೇ ಮಳೆಯ ಅಬ್ಬರದ ಮಧ್ಯೆಯೂ ಕೆರೆಗಳಿಗೆ ವೇಗವಾಗಿ ನೀರು ಬರುತ್ತಿಲ್ಲ. ಇದಕ್ಕೆ ಉತ್ತಮ ನಿದರ್ಶನ ಕೋಲಾರ ನಗರದ ಕೋಲಾರಮ್ಮ ಕೆರೆ. ಈ ಭಾಗದಲ್ಲಿ ಮಳೆಯಾಗುತ್ತಿದ್ದರು ಕೋಲಾರಮ್ಮ ಕೆರೆಗೆ ಮಳೆ ನೀರು ಹರಿದು ಬರುತ್ತಿರುವುದು ಬಹಳ ಕಡಿಮೆ, ಕಾರಣ ರಾಜ ಕಾಲುವೆಗಳ ಒತ್ತುವರಿಯ ಪರಿಣಾಮ.
ಬಂಗಾರಪೇಟೆ, ಮಾಲೂರು ಭಾಗದ ಕೆಲ ಗ್ರಾಮಗಳಿಗೆ ಕುಡಿಯಲು ನೀರೊದೊಗಿಸುವ ಯರಗೋಳು ಜಲಾಶಯ ಕಾಮಗಾರಿ ದಶಕಗಳಿಂದಲೂ ಕುಂಟುತ್ತಲೇ ಸಾಗಿರುವುದರಿಂದ ಈಗ ಮಳೆ ಬರುತ್ತಿದ್ದರು ಸಂಗ್ರಹ ಮಾಡಿಕೊಳ್ಳುವ ಶಕ್ತಿ ಯರಗೋಳು ಜಲಾಶಯಕ್ಕೆ ಇಲ್ಲದಾಗಿದೆ. ರಾಜಕಾರಣಿಗಳ ಬೇಜಾವಾಬ್ದಾರಿಗೆ ಯರಗೋಳು ಕಾಮಗಾರಿ ಪೂರ್ಣಗೊಳ್ಳದಿರುವುದೇ ಉತ್ತಮ ನಿದರ್ಶನ. 
ನನ್ನ ಮೊಬೈಲ್ಗೆ ಪ್ರತಿದಿನವು 9ಕ್ಕೆ ಸರಿಯಾಗಿ ಹವಾಮಾನ ಇಲಾಖೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಎಷ್ಟು ಮೀ.ಮಿ ಮಳೆ ಬಿದ್ದಿದೆ ಎಂದು ಮಾಹಿತಿ ಬರುತ್ತದೆ. ಪ್ರತಿದಿನವೂ ಈ ಮಾಹಿತಿ ಗಮನಿಸುತ್ತಿದ್ದೆ. ಮಳೆ ಬೀಳದ ಪರಿಣಾಮ ಮಳೆ ಪ್ರಮಾಣ ಶೂನ್ಯ ತೋರಿಸುತ್ತಿತ್ತು, ಆಗ ನನಗೂ ಮಳೆರಾಯನ ಬಗ್ಗೆ ಕೋಪ ಬರುತ್ತಿತ್ತು. 
ಆದರೆ ಇತ್ತಿಚೀನ ದಿನಗಳಲ್ಲಿ ಬರುವ ಮೆಸೇಜ್ ನಲ್ಲಿ ಕೋಲಾರದಲ್ಲಿ 95 ಮೀ.ಮಿ, ಮುಳಬಾಗಿಲುವಿನಲ್ಲಿ 80 ಮೀ.ಮಿ, ಶ್ರೀನಿವಾಸಪುರದಲ್ಲಿ 65 ಮೀ.ಮಿ ಈಗೆ ಮಳೆ ಪ್ರಮಾಣ ದಾಖಲಾಗಿದೆ ಎಂದು ಮೇಸೆಜ್ ಬರುತ್ತಿದ್ದಂತೆ ಅಬ್ಬ ಅಂತು ಈ ವರ್ಷವಾದರೂ ಮಳೆಯರಾಯ ಕೋಪ ತಣ್ಣಾಗಾಗಿದೆ ಎಂದು ಅನ್ನಿಸಿತು.
ಈ ವರ್ಷ ಕೆರೆಗಳು ತುಂಬುತ್ತಿರುವುದರಿಂದ ಗ್ರಾಮಗಳ ಜನ ಕೆರೆಗಳಿಗೆ ಖುಷಿಯಿಂದ ಬಾಗಿನ ಅಪರ್ಿಸುತ್ತಿರುವುದನ್ನು ಕಂಡರೆ ಪ್ರತಿಯೊಬ್ಬರಿಗೂ ಸಂತೋಷವಾಗುತ್ತದೆ. ಮಳೆಯು ಪ್ರತಿವರ್ಷವೂ ಸಕಾಲದಲ್ಲಿ ಬಿದ್ದು, ಕೆರೆಗಳು ಭರ್ತಿಯಾಗುತ್ತಿದ್ದರೆ ಅನ್ನದಾತನ ಜೀವನ ಸರಾಗವಾಗಿ ನಡೆಯುತ್ತದೆ. ಅಂತರ್ಜಲ ಹೆಚ್ಚಾದರೆ ಬತ್ತಿ ಹೋಗಿರುವ ಕೊಳವೆ ಬಾವಿಗಳು ಪುನಃಹ ಪ್ರಾರಂಭವಾಗುತ್ತದೆ. ಇದರಿಂದ  ಕೃಷಿ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೇ ನಡೆದು ರಾಜ್ಯಕ್ಕೆ ಪೂರೈಕೆ ಮಾಡುವಷ್ಟು ಹಾಲು, ತರಕಾರಿ, ಹೂವು ಮತ್ತಿತರ ಬೆಳೆಗಳನ್ನೂ ಬೆಳೆಯುವ ಸಾಮರ್ಥ್ಯ ಅವಿಭಜಿತ ಕೋಲಾರ ಜಿಲ್ಲೆಗೆ ಇದೆ. ಆದರೆ ಮಳೆರಾಯ ಕೈ ಕೊಡಬಾರದಷ್ಟೇ.  
                                                                                                  

ಶುಕ್ರವಾರ, ಆಗಸ್ಟ್ 18, 2017

ಅನ್ನದಾತನ ಆಕ್ರಂದನ, ಅಳಲು....?

➤ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಮೊನ್ನೆ ನಮ್ಮ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹಳ್ಳಿಯೊಂದರ ಯುವಕ ಕರೆ ಮಾಡಿದ್ದ, ನಾನು ಕಾರ್ಯ ನಿರ್ವಹಿಸುವ ಸಂಸ್ಥೆಯು ಜಿಲ್ಲೆಯ ಗ್ರಾಮೀಣ ಯುವಕ-ಯುವತಿಯರಿಗೆ ವಿವಿಧ ರೀತಿಯ ಕೌಶಲ್ಯಯುತ ಹಾಗೂ ಸ್ವ ಉದ್ಯೋಗ ಕಲ್ಪಿಸುವ ತರಬೇತಿಗಳನ್ನು ನೀಡುವ ಕರ್ತವ್ಯ ನಿರ್ವಹಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ನಮ್ಮ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ಮತ್ತು ಸರ್ವೀಸ್ ಕುರಿತ ತರಬೇತಿ ಸಿಗುತ್ತದೆ ಎಂಬ ಸುದ್ದಿ ಪ್ರಕಟವಾಗಿತ್ತು. ಅದರ ಬಗ್ಗೆ ಮಾತನಾಡಲು ಆತ ಕರೆ ಮಾಡಿದ್ದ. ಸಾರ್ ನಾನು ಮಾಲೂರಿನ ಹಳ್ಳಿಯಿಂದ ಕರೆ ಮಾಡುತ್ತಿದ್ದೇನೆ, ಪದವಿ ಮುಗಿದಿದೆ, ತಮ್ಮ ಸಂಸ್ಥೆಯವರು ಮೊಬೈಲ್ ರಿಪೇರಿ ಕುರಿತ ತರಬೇತಿ ನೀಡುವ ಬಗ್ಗೆ ಮಾಹಿತಿ ಗೊತ್ತಾಯಿತು. ನನಗೂ ಮೊಬೈಲ್ ರಿಪೇರಿ ತರಬೇತಿ ಕೊಟ್ಟರೆ ಸಹಾಯವಾಗುತ್ತದೆ ಎಂದ. ನನಗೆ ಆಶ್ವರ್ಯ ಅರೆ ಪದವಿ ಮುಗಿದಿದೆ. ಮಾಲೂರು ಭಾಗದಲ್ಲೂ ಕೆಲ ಕೈಗಾರಿಕೆಗಳು ಇವೆ, ಜೊತೆಗೆ ಬೆಂಗಳೂರಿಗೂ ಹತ್ತಿರವಿರುವ ಪ್ರದೇಶ, ಒಂದಷ್ಟು ಪ್ರಯತ್ನ ಪಟ್ಟರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. 
ಪದವಿ ಮುಗಿದಿದೆ ನಿನಗ್ಯಾಕೆ ಮೊಬೈಲ್ ರಿಪೇರಿ ಎಂದು ಪ್ರಶ್ನೆ ಹಾಕಿದಾಗ ಆತ ಹೇಳಿದ ಉತ್ತರ ಕೇಳಿ ನನಗೆ ಮತ್ತಷ್ಟು ಬೇಸರ, ನೋವು ಆಯಿತು. ಕಾರಣ ಇಷ್ಟೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳೆಂದರೆ ಬರ ಪೀಡಿತ ಜಿಲ್ಲೆಗಳೆಂದು ಗೊತ್ತೆ ಇದೆ. ದಿನದಿಂದ ದಿನಕ್ಕೆ ಯಾವ ರೀತಿ ಬಯಲು ಸೀಮೆ ಭಾಗಗಳಲ್ಲಿ ಉದ್ಯೋಗಗಳು ಅದರಲ್ಲೂ ಕೃಷಿಯಲ್ಲಿ ಇಳಿಮುಖವಾಗುತ್ತಿದೆ ಎನ್ನುವುದಕ್ಕೆ ಆತ ಉದಾಹರಣೆಗಳ ಸಮೇತ ಉತ್ತರ ಕೊಟ್ಟ ನೋಡಿ ಸಾರ್ ನಮ್ಮೂರಲ್ಲಿ ನಮ್ಮದು ಸ್ವಲ್ಪ ಜಮೀನಿತ್ತು, ಅದರಲ್ಲಿ ಕೊಳವೆ ಬಾವಿ ಇದೆ, ಕೆಲ ತಿಂಗಳಿನವರೆಗೂ ಕೃಷಿ ಮಾಡುತ್ತಿದ್ದೇವು. ವಿವಿಧ ರೀತಿಯ ತರಕಾರಿ, ಹಣ್ಣು, ಹೂವು ಬೆಳೆದು ಜೀವನ ಬಂಡಿ ಸಾಗಿಸುತ್ತಿದ್ದೆವು. ಯಾರ ಹಂಗು ಇಲ್ಲದೆ ಬದುಕುತ್ತಿದ್ದೇವು. ಲಕ್ಷಾಂತರ ಹಣ ಅಲ್ಲದಿದ್ದರು ಕೃಷಿಯಿಂದ ಒಂದಷ್ಟು ಹಣ ಸಂಪಾದನೆಯಾಗುತ್ತಿತ್ತು. ಜೀವನ ನಿರ್ವಹಣೆಗಂತೂ ಯಾವುದೇ ತೊಂದರೆ ಇರಲಿಲ್ಲ.
ಆದರೆ ಈಗ ಕೊಳವೆ ಬಾವಿ ಬತ್ತಿ ಹೋಗಿದೆ. ಹನಿ ನೀರು ಬರುತ್ತಿಲ್ಲ, ಏನು ಮಾಡುವುದೆಂದು ಅರ್ಥವಾಗುತ್ತಿಲ್ಲ. ಆದ್ದರಿಂದ ಮೊಬೈಲ್ ರಿಪೇರಿ ತರಬೇತಿ ಪಡೆದರೆ ನಗರದಲ್ಲಿ ಮೊಬೈಲ್ ಅಂಗಡಿ ಹಾಕಿಕೊಂಡು ಸ್ವ ಉದ್ಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇಲ್ಲ. ಸ್ವಂತ ಉದ್ಯೋಗದತ್ತ ಒಲವಿರುವುದರಿಂದ ತರಬೇತಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ.
ಆ ಕ್ಷಣ ನನಗನ್ನಿಸಿದ್ದುಇಡೀ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಕೃಷಿಗೆ ಮಾತ್ರ. ಕೈಗಾರಿಕೆ, ಸೇವಾ ವಲಯ, ಸರಕಾರಿ ರಂಗ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಉದ್ಯೋಗ ಸೃಷ್ಟಿಸುತ್ತದೆ. ಎಷ್ಟೇ ಕೈಗಾರಿಕಾ ಪ್ರದೇಶಗಳನ್ನು ರಚಿಸಿದರು ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಉದ್ಯೋಗ ಒದಗಿಸಲು ಸಾಧ್ಯ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತದೆ.
ವಿಪರ್ಯಾಸವೆಂದರೆ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವ ಕೃಷಿ  ಕ್ಷೇತ್ರದ ಉಳಿವಿಗಾಗಿ ಯಾರೊಬ್ಬರು ಪ್ರಯತ್ನ ಮಾಡದಿರುವುದು ದುರಂತ. ಅದರಲ್ಲೂ ದೇಶದ ಬರ ಪೀಡಿತ ಜಿಲ್ಲೆಯಗಳಲ್ಲಿ ಅನಿವಾರ್ಯವಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ನಿರುದ್ಯೋಗಿಗಳ ಪ್ರಮಾಣ ಗಣನೀಯವಾಗಿ ಏರಿಕೆಯಯಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಉದಾಹರಣೆಗೆ ಅವಿಭಜಿತ ಕೋಲಾರ ಜಿಲ್ಲೆಯ ಸಾವಿರಾರು ಜನರು ಇಂದು ಉದ್ಯೋಗ ಹರಿಸಿ ನಗರಗಳತ್ತ ವಲಸೆ ಹೋಗುತ್ತಿರುವುದು ಪ್ರತಿನಿತ್ಯವು ಕಾಣುತ್ತಿದ್ದೇವೆ.
ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿದ್ದಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೃಷಿಯತ್ತ ಚಿತ್ತ ಹರಿಸಿ, ಶ್ರಮ ವಹಿಸಿ ದುಡಿದು, ಜೀವನ ಸಾಗಿಸುತ್ತಿದ್ದರು. ಆದರೆ ಇಂದು ದುಡಿಯಲು ದೈಹಿಕವಾಗಿ ಶಕ್ತಿ ಇದ್ದರೂ ಕೆಲಸವಿಲ್ಲದಾಗಿದೆ.
ನಮ್ಮ ತರಬೇತಿ ಸಂಸ್ಥೆಗೆ ಬರುವ ವಿವಿಧ ತರಬೇತಿಗಳ ಶಿಬಿರಾರ್ಥಿ ಗಳನ್ನು ಅವಿಭಜಿತ ಕೋಲಾರ ಜಿಲ್ಲೆಯ ಇತಿಹಾಸದ ಬಗ್ಗೆ ಒಂದೆರೆಡು ಮಾತು ಹೇಳಿ ಎಂದಾಗ ಪ್ರಪಂಚದಲ್ಲೇ ಆಳವಾದ ಚಿನ್ನದ ಗಣಿ ಪ್ರದೇಶ ನಮ್ಮ ಕೆ.ಜಿ.ಎಫ್ ನಲ್ಲೇ ಇತ್ತು. ರಾಜ್ಯದಲ್ಲಿಯೇ ಅತಿ ಹೆಚ್ಚು ಟಮೋಟ ಹಣ್ಣನ್ನು ಬೆಳೆಯುವ ಹೆಗ್ಗಳಿಕೆ ನಮ್ಮದು. ಮಾವು, ಹಾಲು ಉತ್ಪಾದನೆಯಲ್ಲೂ ಗಣನೀಯ ಸಾಧನೆ ಮಾಡಿದ್ದವು. ವಿವಿಧ ಜಾತಿಯ ಹೂ ಬೆಳೆಯುವಲ್ಲೂ ಫೇಮಸ್ ಎನ್ನುತ್ತಾರೆ. ಹಾಗೆಯೇ ಪ್ರಸ್ತುತ ಸನ್ನಿವೇಶದ ಬಗ್ಗೆ ವಿವರಿಸುತ್ತ ಜಿಲ್ಲೆಯ ಸ್ಥಿತಿಗತಿ ಹೇಳ ಬೇಕೆಂದರೆ ಬರ ಪೀಡಿತ ಜಿಲ್ಲೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳಿದ್ದರು, ಅವುಗಳಲ್ಲಿ ನೀರು ಮಾತ್ರ ಇಲ್ಲ. ಮಳೆಯ ಕೊರತೆ ಜಿಲ್ಲೆ. ಕೃಷಿಯತ್ತ ನೋಡಲು ಹಿಂಜರಿಯುತ್ತಿರುವ ರೈತರು ಸಮೂಹದ ಚಿತ್ರಣ, ಉದ್ಯೋಗ ಹುಡುಕುತ್ತ ನಗರಗಳಿಗೆ ತೆರಳುತ್ತಿರುವ ಜನ, ಈಗೆ ಇಂದು ಜಿಲ್ಲೆಯು ಗೋಚರಿಸುತ್ತದೆ ಎಂದು ಬಹಳ ನೋವಿನಿಂದಲೇ ತರಬೇತಿಗೆ ಬಂದವರು ವ್ಯಾಖ್ಯಾನಿಸುತ್ತಾರೆ.
ಹಾಗೆ ನೋಡಿದರೆ ಇದು ಕೇವಲ ಕೋಲಾರ ಜಿಲ್ಲೆಯ ಒಂದರ ಕಥೆ ಮಾತ್ರವಲ್ಲ, ದೇಶದ ಹಲವು ಭಾಗಗಳಲ್ಲಿ ಮಳೆಯು ತೀವ್ರವಾಗಿ ಕೊರತೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನೀರಾವರಿ ಪ್ರದೇಶ ಬಹಳ ಇಳಿಮುಖವಾಗುತ್ತಿದೆ. ಕೃಷಿ ಮಾಡುವವರ ಸಂಖ್ಯೆಯು ನಿಧಾನವವಾಗಿ ಇಳಿಕೆಯಾಗುತ್ತಿದೆ. ಇದರ ನೇರ ಪರಿಣಾಮ ಈಗಾಗಲೇ ಎದುರಿಸುವಂತಹ ಪರಿಸ್ಥಿತಿ  ನಿರ್ಮಾಣವಾಗಿದೆ
ಸರಕಾರಗಳು ಕೃಷಿ, ನೀರಾವರಿ ಸೌಲಭ್ಯಗಳಿಗೆ ಅನುದಾನ ಮೀಸಲಿಟ್ಟರು, ನಿರ್ದಿಷ್ಟ ಸಮಯದಲ್ಲಿ ಯಾವುದೇ ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಕೋಲಾರ, ಮಾಲೂರು, ಬಂಗಾರಪೇಟೆ ಭಾಗಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಾರಿಯಾಗಿದ್ದ ಯರಗೋಳ್ ಯೋಜನೆ. ಯೋಜನೆ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಪೂರ್ಣ ಮಾತ್ರ ಆಗಿಲ್ಲ. ಇದಕ್ಕೆ ಶಾಸಕಾಂಗ ಮತ್ತು ಆಡಳಿತ ವರ್ಗದ ವೈಪಲ್ಯ ಅನ್ನದೇ ಮತ್ತೇನು ಹೇಳಲು ಸಾಧ್ಯ.
ಇನ್ನು ಜಿಲ್ಲೆಯ ಜನ ಆಕ್ರೋಶವನ್ನು ಕಡಿಮೆ ಮಾಡಲು ಕೆ.ಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ಮಹಾನಗರ ಜನರು ಬಳಸಿ, ಉಪಯೋಗಿಸಿದ ಕೊಳಚೆ ನೀರನ್ನು, ಶುದ್ದಿಕರೀಸುವ ಮೂಲಕ ಜಿಲ್ಲೆಗೆ ಹರಿಸಲು ಸರಕಾರ ಸಿದ್ದವಾಗಿದೆ. ಬಾಯ್ತೆರೆದಿರುವ ಕೆರೆಗಳಿಗೆ ಈ ನೀರು ಹರಿದರೆ ಅಂತರ್ಜಲ ಮಟ್ಟ ಏರಿಕೆಯಾಗಿ ನಿಂತು ಹೋಗಿರುವ ಕೊಳವೆ ಬಾವಿಗಳು ಪುನರ್ಜನಮ ಪಡೆದುಕೊಳ್ಳುತ್ತದೆ ಎಂಬುವುದು ಸರಕಾರದ ವಾದ. ಇದೆಷ್ಟರ ಮಟ್ಟಿಕೆ ಸಫಲವಾಗುತ್ತದೆ ಎಂದು ಕಾದು ನೋಡ ಬೇಕು.
ಇಸ್ರೇಲ್ ದೇಶದಲ್ಲಿ ನೀರಿನ ಪುನರ್ ಬಳಕೆ ಬಹಳ ಅಚ್ಚುಕಟ್ಟೆಯಾಗಿ ನಡೆಯುತ್ತದೆ. ಕೃಷಿಗೂ ಬಳಸಿದ ನೀರನ್ನೇ ಉಪಯೋಗಿಸುವ ಮೂಲಕ ಹೊಸ ಅನ್ವೇಷಣೆಯನ್ನು ಇಸ್ರೇಲ್ ದೇಶ ಮಾಡುತ್ತಿದೆ ಎಂದು ಆಗಾಗ ಪತ್ರಿಕೆಗಳಲ್ಲಿ ವರದಿಗಳು ಬರುತ್ತಲೇ ಇರುತ್ತವೆ. ಇಸ್ರೇಲ್ ನಲ್ಲಿ ಆಗುವ    ಹೊಸ ಪ್ರಯತ್ನಗಳು ನಮ್ಮಲ್ಲೇಕೆ ಆಗುತ್ತಿಲ್ಲ ಎಂಬುವುದೇ ಯಕ್ಷ ಪ್ರಶ್ನೆ.. ಒಂದು ಸಣ್ಣ ಬೆಂಕಿ ಪೊಟ್ಟಣಕ್ಕೂ ಅದನ್ನು ತಯಾರಿಸಿದ ಕಂಪನಿಗಳು ಬೆಲೆ ನಿಗದಿಪಡಿಸಿ, ಮಾರಾಟ ಮಾಡಿ ಲಾಭಗಳಿಸುತ್ತದೆ. ಆದರೆ ಬಿಸಿಲು, ಮಳೆ ಎನ್ನದೇ ಹೊಲ, ಗದ್ದೆಗಳಲ್ಲಿ ದುಡಿದು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿದರು, ಅದರ ಬೆಲೆ ನಿಗದಿಪಡಿಸುವ ಹಕ್ಕು ರೈತರಿಗಿಲ್ಲ. ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ದರಕ್ಕೆ ಅದು ಲಾಭವೋ, ನಷ್ಟವೋ ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತನಿಗಿದೆ.
ನಮ್ಮ ಬಳಿ ಎಷ್ಟೇ ಹಣವಿದ್ದರೂ ಅದನ್ನು ಊಟವೆಂದು ಭಾವಿಸಿ ತಿನ್ನಲು ಸಾಧ್ಯವಿಲ್ಲ. ಆತ ಬಡವ, ಶ್ರೀಮಂತನಾಗಿರಲಿ ಹಸಿದಾಗ ಊಟ ಮಾಡಲೇ ಬೇಕು. ರೈತರು ದುಡಿಯಿದ್ದಿದರೆ ಆಹಾರ  ಪದಾರ್ಥಗಳು ಎಲ್ಲಿಂದ ಬರುತ್ತವೆ.. ಆದರೂ ರೈತರ ಬೆವರ ಹನಿಗೆ ಬೆಲೆ ಇಲ್ಲ.
ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿ ಕ್ಷೇತ್ರದ ಅಭಿವೃದ್ದಿಗಾಗಿ ನಿರ್ದಿಷ್ಟವಾದ ಯೋಜನೆ ಹಾಗೂ ನೀತಿಯನ್ನು ಜಾರಿಗೊಳಿಸಿದಿದದ್ದರೆ ಅನ್ನದಾನತನ ಸ್ಥಿತಿ ಮತ್ತಷ್ಟು ದುಸ್ಥರವಾಗುತ್ತದೆ.
ಅನ್ನದಾತನ ಅಳಲು, ಆಕ್ರಂದನ ಆಳುವ ವರ್ಗಕ್ಕೆ ಯಾವಾಗ ಕೇಳುತ್ತೋ..?