ಗುರುವಾರ, ಜುಲೈ 25, 2019

ಮೈ ಲೈಪ್, ಮೈ ಜರ್ನಿ..


⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನನ್ನ ಸ್ನೇಹಿತನೊಬ್ಬ ಪದೇ ಪದೇ ಜೀವನದ ಬಗ್ಗೆ ಬೇಸರಿಸಿಕೊಳ್ಳುತ್ತಿದ್ದ, ಎಲ್ಲಾ ಇದ್ದರೂ ಏನು ಇಲ್ಲದಂತೆ  ಭಾವಿಸಿಕೊಂಡಿದ್ದ. ಸದಾ ನಕರಾತ್ಮಕ ಚಿಂತನೆಗಳಿಂದಲೇ ಜೀವನದಲ್ಲಿ ಸೋಲು ಒಪ್ಪಿಕೊಂಡಿದ್ದ, ಮನೆ ಮತ್ತು ಕಚೇರಿ ಎರಡೇ ಜೀವನ ಎಂಬ ಸ್ಥಿತಿ. ಸಣ್ಣ ಸಣ್ಣ ಸಮಸ್ಯೆಗಳಿಗೂ ವಿಪರಿತ ತಲೆ ಕೆಡಿಸಿಕೊಳ್ಳುತ್ತಿದ್ದ,  ಲೈಪ್ ನ್ನು ಎಂಜಾಯ್ ಮಾಡದೆ ಸ್ವತಃಹ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ. ಲೈಪ್ ಎಂಬ ಜರ್ನಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದ,  ಹೇಗಾದರೂ ಮಾಡಿ ಆತನ ಮನಸ್ಸು ಬದಲಿಸಬೇಕು ಎಂದು ತೀರ್ಮಾನಿಸಿ ಇಬ್ಬರು ಒಂದು ದಿನ ಲಾಂಗ್ ಬೈಕ್ ರೈಡ್ ಹೊರೆಟವು, 300 ಕೀ.ಮಿ ಪಯಣ ಅದು.
ಒಂದು ದಿನ ಶನಿವಾರ ಬೆಳಗ್ಗೆ.7ಕ್ಕೆ ಬೈಕ್ ಹತ್ತಿ ಇಬ್ಬರು ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯಣ ಆರಂಭಿಸಿದೆವು. ಅಂದು ತುಂತುರ ಮಳೆ ಬೇರೆ ಬೀಳುತ್ತಿತ್ತು, ಮೋಡಗಳು ಕವಿದ ವಾತಾವರಣದಲ್ಲಿ ಅದು ತುಂತುರು ಮಳೆಗಳ ಸಿಂಚನವಾಗುತ್ತಿದ್ದ ಸಂದರ್ಭದಲ್ಲಿ ಬೈಕ್ ಓಡಿಸುತ್ತ ಮಳೆ ಹನಿಗಳ ನಡುವೆ ಸಾಗುವುದು ಮನಸ್ಸಿಗೆ ಆಹ್ಲಾದವೆನಿಸುತ್ತದೆ. 
ಮೊದಲು ದಾರಿ ಮಧ್ಯೆ ಒಂದು ದೊಡ್ಡ ಕೆರೆ ಸಿಕ್ಕಿತು, ಕೆರೆ ಕಟ್ಟೆಯ ಮೇಲೆ ಹತ್ತಿ ಕೊನೆಯವರೆಗೂ ಹೋಗಿ ಬಂದವು. ಕೆರೆಯ ತುಂಬಾ ನೀರಿತ್ತು, ಅದು ಬೇರೆ ಮಳೆ ಬೀಳುತ್ತಿದ್ದರಿಂದ ತಣ್ಣಗೆಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ ನಿಶಬ್ದ, ಗಾಳಿಯ ರಭಸಕ್ಕೆ ಕೆರೆಯಲ್ಲಿ ಅಲೆಗಳು ಸೃಷ್ಟಿಯಾಗಿದ್ದವು.   
ಅಲ್ಲಿಂದ ಹೊರಟು ಮುಂದೆ ಸಾಗುತ್ತ ಹೋದಾಗ ದಾರಿ ಮಧ್ಯೆ ಸಣ್ಣದಾದ ಪೆಟ್ಟಿಗೆ ಅಂಗಡಿ ಇತ್ತು. ಅಲ್ಲಿ ಚಹಾ ಸೇವಿಸೋಣ ಎಂದು ಹೋದರೆ, ಅಂಗಡಿ ಮಾಲೀಕನ ಮಗ ಒಳಗೆ ಜೋರಾಗಿ ಓದುತ್ತಿದ್ದ, ಏನ್ ಸಾರ್ ಮಗ ಎಷ್ಟನೇ ತರಗತಿ ಓದುತ್ತಿದ್ದಾನೆ ಎಂದು ಪ್ರಶ್ನೆ ಹಾಕಿದರೆ, ಸಾರ್ ಆತ 3 ನೇ ತರಗತಿ, ನಮ್ಮೂರಿನ ಸರಕಾರಿ ಶಾಲೆಗೆ ಹೋಗುತ್ತಾನೆ. ನನ್ನ ಪತ್ನಿಗೂ, ನನಗೂ ದಿನವೂ ಜಗಳ, ಕಾರಣ ಊರಿನ ಎಲ್ಲರ ಮಕ್ಕಳು ಖಾಸಗಿ ಶಾಲೆಗೆ ಸ್ಕೂಲ್ ವ್ಯಾನ್ ನಲ್ಲಿ ಹೋಗಿ ಬರುತ್ತಾರೆ. ಅವರ ಯೂನಿಫಾರ್ಮ್, ಶೂ ಹಾಕುವ ಸ್ಟೈಲು, ಶಾಲೆಯ ಕಟ್ಟಡ ನೋಡಿದರೆ ನನ್ನ ಪತ್ನಿಗೆ ಖುಷಿಯಾಗುತ್ತದಂತೆ. ಆದರೆ ನಮ್ಮ ಮಕ್ಕಳು ಬೀಳುವ ಹಂತದಲ್ಲಿರುವ ಸರಕಾರಿ ಶಾಲೆಗೆ ಹೋಗುತ್ತಾರೆ. ನೀನು ನೆಟ್ಟಗೆ ಸಂಪಾದನೆ ಮಾಡಿ ಹಣ ಇಟ್ಟಿದ್ದರೆ ನಮ್ಮ ಮಕ್ಕಳು ಕೂಡ ಖಾಸಗಿ ಶಾಲೆಗೆ ಹೋಗುತ್ತಿದ್ದರು, ನಿನ್ನ ದುರದೃಷ್ಟದಿಂದ ನನ್ನ ಮಕ್ಕಳು ಸರಕಾರಿ ಶಾಲೆಗೆ ಕಳಿಸಬೇಕಾದ ದೌರ್ಭಾಗ್ಯ ಎಂದು ದಿನವೂ ನನ್ನ ಜೊತೆ ಜಗಳ ಆಡುತ್ತಾಳೆ ಎಂದು ಬೇಸರಿಸಿಕೊಂಡ.
ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೂ ದೇಶವನ್ನೇ ಆಳಿದ್ದಾರೆ. ದೇಶದ ಎಲ್ಲಾ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಶಾಲೆಗೆ ಹೋಗುತ್ತಾರೆ ಎಂದು ನೀವು ನೋವು ಪಡುವ ಅವಶ್ಯಕತೆ ಆದರೂ ಏನಿದೆ ? ಎಂದು ತಿಳಿ ಹೇಳಿದೆ.
ಅಲ್ಲಿಂದ ಮುಂದೆ ಹೋದಂಗೆ ಒಂದು ಸಣ್ಣ ಹಳ್ಳಿ, ಬಹುಃಶ ಆ ಹಳ್ಳಿಯಲ್ಲಿ 60 ಮನೆಗಳಿರಬಹುದು. ಆ ದಿನ ಆ ಗ್ರಾಮದ ಮುಖ್ಯ ದೇವರಾದ ಈಶ್ವರನಿಗೆ ವಿಶೇಷವಾದ ಪೂಜೆ ಇತ್ತು, ಹೆಚ್ಚು ಜನ ಕಂಡ ಕಾರಣ ನಾವು ಬೈಕ್ ಸೈಡ್ ಗೆ ಹಾಕಿ ಗ್ರಾಮದ ಒಳಗೆ ಪ್ರವೇಶಿಸಿದೆವು. ಗ್ರಾಮದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆ ಮುಂಭಾದಲ್ಲಿ ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿದ್ದರು. ಊರಿನ ಎಲ್ಲರು ಸೇರಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗ್ರಾಮದ ಎಲ್ಲರಲ್ಲೂ ಏನೋ ಒಂದು ಖುಷಿ. ಗ್ರಾಮದ ದೇವರಿಗೆ ವಿಶೇಷ ಪೂಜೆ ಇದ್ದರಿಂದ ದೂರದ ಊರುಗಳಲ್ಲಿ ಹೋಗಿ ಕೆಲಸ ಮಾಡುವವರು ತಮ್ಮ ಗ್ರಾಮಕ್ಕೆ ಬಂದಿದ್ದರು. ತೀವ್ರ ಬರಗಾಲದಿಂದ ಕೃಷಿ ಚಟುವಟಿಕೆಗಳು ಸರಿಯಾಗಿ ನಡೆಯದೆ ಗ್ರಾಮಸ್ಥರು ಆರ್ಥಿಕವಾಗಿ ಸಾಕಷ್ಟು ಹೊಡೆತಕ್ಕೆ ಒಳಗಾಗಿದ್ದರು. ಆದರೂ ಅವರ ಭರವಸೆ ಮಾತ್ರ ಕುಂದಿರಲಿಲ್ಲ. ದೇಗುಲದ ಒಳಗೆ ನಾವು ಹೋಗಿ ಒಂದು ನಮಸ್ಕಾರ ಹಾಕಿ ಅಲ್ಲಿಂದ ಹೊರಟು ಸೇರಿದ್ದು ಮತ್ತೊಂದು ಗ್ರಾಮ. 
ಆ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳಿದ್ದವು. ಊರಿನ ಒಳಗೆ ಹೋದರೆ ಸ್ವಚ್ಛತೆ ಇರಲಿಲ್ಲ, ರಸ್ತೆ ಅಧ್ವಾನವಾಗಿತ್ತು, ಗ್ರಾಮದ ನಲ್ಲಿಯ ಮುಂಭಾಗದಲ್ಲಿ ನೂರಾರು ಬಿಂದಿಗೆಗಳನ್ನು ಇಟ್ಟಿದ್ದರು. ಅವುಗಳ ಮೇಲೆ ಪೇಂಟ್ ನಲ್ಲಿ ಹೆಸರುಗಳು ಬೇರೆ ಬರೆದಿದ್ದರು. ವಾರಕ್ಕೆ 3 ದಿನ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ, ಅದು ಸರಿಯಾಗಿ ವಿದ್ಯುತ್ ಪೂರೈಕೆ ಇದ್ದರೆ ಮಾತ್ರ, ಆದ್ದರಿಂದಲೇ ನಮ್ಮ ಗ್ರಾಮದಲ್ಲಿ ನೀರಿಗೆ ಸಮಸ್ಯೆಯಾಗಿದೆ ಎಂದು ಗ್ರಾಮದ ಅಂಗಡಿ ಮುಂಭಾಗದಲ್ಲಿ ಕೂತಿದ್ದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಹೇಳಿದರು. ಸಿಟಿಯ ಜನ ತರ ನಾವು ಪುಣ್ಯವಂತರಲ್ಲ. ಅದು ಬೆಂಗಳೂರಿನ ನಿಮಗೆ ಮನೆಗೆ ಒಳಗೆ ಪೈಪ್ ಲೈನ್ ಮುಖಾಂತರ ಕಾವೇರಿ ನೀರು ಪೂರೈಸುತ್ತಾರೆ. ಆದರೆ ನಾವು ಕೀ.ಮಿಗಟ್ಟಲೆ ಬಿಸಿಲ್ಲೇನದೆ ನಡೆದುಕೊಂಡು ಹೋಗಿ ಒಂದೆರೆಡು ಬಿಂದಿಗೆ ನೀರು ತರುತ್ತೇವೆ ಎನ್ನುವ ಅವರ ಮಾತಿನಲ್ಲಿ ನೋವಿತ್ತು. 
ನಮ್ಮ ಪ್ರಯಾಣದ ನಡುವೆ ಅರಣ್ಯ ಪ್ರದೇಶ ಕಾಣಿಸಿತು. ಸ್ವಲ್ಪ ಒಳಗೆ ಹೋದರೆ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು, ಪಕ್ಷಿಗಳ ಹಿಂಪಾದ ಧ್ವನಿ ಕೇಳಿಸುತ್ತಿತ್ತು. ಮಳೆ ಹನಿಗಳು ಮರದ ಎಲೆಗಳ ಮೇಲೆ ಬಿದ್ದು, ಭೂಮಿಯನ್ನು ಸ್ಪರ್ಶಿಸುತ್ತಿತ್ತು. ಮಳೆ ಬಿದ್ದು ನಿಂತಿದ್ದರಿಂದ ಮಣ್ಣಿನ ವಾಸನೆ ಸುಹಾಸಭರಿತವಾಗಿತ್ತು. ಅದೆಲ್ಲೋ ದೂರದಿಂದ ವಯಸ್ಸಾದ ಅಜ್ಜಿ ಒಬ್ಬರು ತಲೆ ಮೇಲೆ ಕಟ್ಟಿಗೆಯ ಕಟ್ಟನ್ನು ಇಟ್ಟುಕೊಂಡು ಕಷ್ಟ ಬಿದ್ದು ನಡೆದುಕೊಂಡು ಬರುತ್ತಿದ್ದರು. ಏನು ಅಜ್ಜಿ ಈ ಮಳೆಯಲ್ಲಿ, ಅದು ಕಾಡಿನಲ್ಲಿ ಈ ಕಷ್ಟ ಬೀಳುತ್ತಿದ್ದಿಯಾ ಎಂದರೆ ನಮ್ಮ ಮನೆಯಲ್ಲಿ ಓಲೆ ಹುರಿಯಬೇಕಾದರೆ ಕಟ್ಟಿಗೆ ಬೇಕೆ ಬೇಕು. ನಾವು ಇರುವುದು ಇಬ್ಬರು, ನಾನು ನಮ್ಮ ಯಜಮಾನ್ರು, ನಮ್ಮನೇಲಿ ಗ್ಯಾಸ್ ಇಲ್ಲ, ಊಟ ತಯಾರಿಸಿಕೊಳ್ಳಬೇಕಾದರೆ, ನೀರು ಕಾಯಿಸಿಕೊಳ್ಳಬೇಕಾದರೆ ಕಟ್ಟಿಗೆ ಅನಿವಾರ್ಯ. ಈ ಕಾಡೇ ನಮಗೆ ಆಸರೆ ಎಂದಳು. 
ಅಲ್ಲಿಂದ ಸ್ವಲ್ಪ ದೂರ ಹೋದರೆ ರಸ್ತೆಯ
ಬದಿಯಲ್ಲಿ ಐಸ್ ಕ್ಯಾಂಡಿ ನಿಂತಿತ್ತು, ತಿನ್ನೋಣ ಎಂದು ಗಾಡಿ ನಿಲ್ಲಿಸಿದೆ. 5 ರೂಪಾಯಿಯ ಎರಡು ಐಸ್ ಕ್ಯಾಂಡಿ ತಿಂದು ಖುಷಿ ಪಟ್ಟೆವು. ಐಸ್ ಕ್ಯಾಂಡಿ ಮಾರುವವನ ಹೆಸರು ಹರೀಶ್, ವಿಕಲಚೇತನ. ಪಿ.ಯು ಪಾಸಾಗಿದ್ದಾನೆ. ಕಳೆದ 6 ವರ್ಷಗಳಿಂದ ಐಸ್ ಕ್ಯಾಂಡಿ ಮಾರುತ್ತ ಜೀವನ ಸಾಗಿಸುತ್ತಿದ್ದೇನೆ. ಪ್ರತಿನಿತ್ಯ ಹೆಚ್ಚೆಂದರೆ 300 ರೂ. ಸಂಪಾದಿಸುತ್ತೇನೆ ಎಂದ. ಒಂದು ಕೈ ಅಪಘಾತದಲ್ಲಿ ಕಳೆದುಕೊಂಡಿದ್ದಾನೆ. ಐಸ್ ಕ್ಯಾಂಡಿ ತ್ರಿಚಕ್ರ ಸೈಕಲ್ ನ್ನು ತುಳಿದುಕೊಂಡು ಹಳ್ಳಿ, ಹಳ್ಳಿ ಸುತ್ತಿ ವ್ಯಾಪಾರ ಮಾಡುತ್ತಾನಂತೆ. ಆದರೂ ಆತನ ಉತ್ಸಾಹಭರಿತ ಜೀವನ, ಕಷ್ಟ ಬಿದ್ದರೆ ಮಾತ್ರ ಜೀವನ ನಡೆಯುತ್ತೆ ಎಂದು ಹೇಳುವ ಆತನ ಮಾತನ್ನು ಒಪ್ಪದಿರಲು ಸಾಧ್ಯವೇ. 
ಮಧ್ಯಾಹ್ನದ ಊಟಕ್ಕೆ ರಸ್ತೆಯಲ್ಲಿರುವ ದೊಡ್ಡ ಹೊಟೇಲ್ ಗೆ ಹೋಗುವುದು ಬೇಡ ಎಂದು ತೀರ್ಮಾನಿಸಿ ರಸ್ತೆ ಒಂದು ಭಾಗದಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯ ಹೋಟೆಲ್ ಗೆ ಹೋದೆವು. ಇಡ್ಲಿ ಹಾಗೂ ಚಿತ್ರಾನ್ನವಿತ್ತು, ದೊಡ್ಡ ಹೋಟೆಲ್ ನಲ್ಲಿ ಕೂರಲು ಕುರ್ಚಿಗಳು ಇರುತ್ತವೆ. ಇಲ್ಲಿ ಅದು ಇಲ್ಲ ಎನ್ನುವುದು ಬಿಟ್ಟರೆ ಕ್ವಾಂಟಿಟಿ, ಕ್ವಾಲಿಟಿಯಲ್ಲಿ ಪ್ರಶ್ನೆ ಮಾಡುವಂತಿಲ್ಲ. ಹೋಟೆಲ್ ಮಾಲೀಕರ ಹೆಸರು ಸರಸ್ವತಮ್ಮ. ಗಂಡ ತೀರಿ ಹೋಗಿ 10 ವರ್ಷವಾಗಿದೆ. ಕುಟುಂಬ ನಿರ್ವಹಣೆಗಾಗಿ ಹೋಟೆಲ್ ವೃತ್ತಿ ಮಾಡುತ್ತಿದ್ದೇನೆ, ಪರವಾಗಿಲ್ಲ ಜೀವನ ಸಾಗುತ್ತಿದೆ. ಆದರೂ ದೊಡ್ಡ ಹೋಟೆಲ್ ಗಿಂತ ಹೆಚ್ಚು ಶುಚಿ, ರುಚಿಯಾಗಿ ಅಡುಗೆ ಮಾಡಿದರೂ ಕೆಲವರು ಹೋಟೆಲ್ ಚಿಕ್ಕದು, ಹಳೆಯದು ಎಂದು ಬರಲು ಹಿಂದೇಟು ಹಾಕುತ್ತಾರೆ. ಆದರೂ ಬದಕು ಮಾತ್ರ ನಿಂತಿಲ್ಲ ಎಂದು ಹೇಳುತ್ತಾರೆ.
ನಮ್ಮ ಪಯಣ ಆಂಧ್ರ ಪ್ರದೇಶದ ವಿ.ಕೋಟ ಸಮೀಪದ ಕೈಗಲ್ ಎಂಬ ಸಣ್ಣ ಗ್ರಾಮದತ್ತ ಸಾಗಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ಒಂದು ಫಾಲ್ಸ್ ಇದೆ. ಅದಕ್ಕೆ ಕೈಗಲ್ ಫಾಲ್ಸ್ ಎಂದು ಹೆಸರಿಡಲಾಗಿದೆ. ಫಾಲ್ಸ್ ನಲ್ಲಿ ನೀರು ಹರಿಯುತ್ತಿರಲಿಲ್ಲ, ಆದರೆ ಸುತ್ತಲು ದಟ್ಟವಾದ ಅರಣ್ಯವಿತ್ತು. ಕೆಲ ದಿನಗಳಿಂದ ಸಣ್ಣ ಪ್ರಮಾಣದ ಮಳೆಯಾದ್ದರಿಂದ ಹಚ್ಚಹಸಿರಿನಿಂದ ಅರಣ್ಯವು ಕಂಗೊಳಿಸುತ್ತಿತ್ತು. ಎಲ್ಲೂ ಜನರ ಸುಳಿವು ಇರಲಿಲ್ಲ. ಫಾಲ್ಸ್ ಬಳಿ ಇದ್ದ ಬಂಡೆ ಕಲ್ಲಿನ ಮೇಲೆ ಕುಳಿತುಕೊಂಡು 1 ಗಂಟೆ ಕಾಲ ಪ್ರಕೃತಿ ಸೌಂದರ್ಯವನ್ನು ಆಹ್ಲಾಸಿದೆವು.
ಯಾವ ಜಂಜಾಟವು ಇಲ್ಲದೆ ನೆಮ್ಮದಿಯಾಗಿ ಗಿಡ ಮರಗಳ ಮಧ್ಯೆ ಕಳೆದ ಕೆಲ ಸಮಯವು ಮನಸ್ಸು ಹಗುರವಾಗುವಂತೆ ಮಾಡಿತು. ಸ್ನೇಹಿತನಿಗೆ ಹೇಳಿದೆ ನೋಡು ಈ ಗಿಡ, ಮರಗಳು ಎಂದು ಸ್ವಾರ್ಥಕ್ಕಾಗಿ ಏನು ಮಾಡಿಕೊಳ್ಳುವುದಿಲ್ಲ, ಬೇರೆವರಿಗೆ ತೊಂದರೆ ಕೊಡುವುದಿಲ್ಲ. ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತವೆ, ಆಗಂತ ಇವುಗಳಿಗೆ ಕಷ್ಟವಿಲ್ಲ ಎಂತಲ್ಲ ಜೋರಾಗಿ ಮಳೆ, ಗಾಳಿ ಬಂದರೆ ರೆಂಬೆಗಳು ಮುರಿಯಬಹುದು, ಬುಡವೇ ಅಲ್ಲಾಡಬಹುದು. ಜನರು ತಮ್ಮ ಸ್ವಾರ್ಥಕ್ಕಾಗಿ ಯಾವಾಗಾದರೂ ಮರಕ್ಕೆ ಕೊಡಲಿ ಪೆಟ್ಟು ಕೊಡಬಹದು. ಮಳೆ ಸರಿಯಾಗಿ ಬೀಳದೆ ನೀರಿನ ದಾಹ ನೀಗದೆ ಮರ ಒಣಗುವ ಸ್ಥಿತಿ ಬರಬಹುದು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಮರ, ಗಿಡಗಳು ಸದಾ ನಗುತ್ತಲೇ ಇರುತ್ತವೆ. ಜನರಿಗೆ ಹಣ್ಣು, ನೆರಳನ್ನು ಪ್ರಾಣ ಇರುವವರೆಗೂ ಪಕ್ಷಪಾತ ಮಾಡದೇ ನೀಡುತ್ತವೆ. ಏನೇ ಆಗಲಿ ಪ್ರಕೃತಿಯನ್ನು ನೋಡುತ್ತ ಕುಳಿತರೆ ಸಾಧಿಸಬೇಕೆಂಬ ಛಲ ಇಮ್ಮಡಿಯಾಗುತ್ತದೆ. ಕೈಗಲ್ ನಿಂದ ವಿ.ಕೋಟ ಪಟ್ಟಣಕ್ಕೆ ಬಂದು ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಟಿದ್ದು ಬೆಂಗಳೂರಿನತ್ತ.
ನನ್ನ ಸ್ನೇಹಿತನಿಗೆ ಹೇಳಿದೆ ಇಂದು ಇಡೀ ದಿನ ನಾವು ಹಲವು ಪ್ರದೇಶಗಳಿಗೆ ಹೋದೆವು, ಹಲವರ ಜೊತೆ ಸಮಾಲೋಚನೆ ಮಾಡಿದೆವು, ಕಷ್ಟದಲ್ಲಿದವರು ಸಿಕ್ಕರು. ಖುಷಿ ಜೀವನ ಮಾಡುತ್ತಿದ್ದವರು ಕಂಡರು. ಬರಗಾಲದ ಭೀಕರತೆಯ ಮಧ್ಯೆಯು ಚಿಂತಿಸದೆ ಖುಷಿಯಿಂದ ಹಬ್ಬ ಆಚರಿಸುತ್ತಿರುವ ಹಳ್ಳಿಯ ಜನ, ಗ್ರಾಮದವರ ಒಗ್ಗಟ್ಟು ನೋಡಿದೆವು. ಹಾಗೆಯೇ ಮತ್ತೊಂದು ಹಳ್ಳಿಯಲ್ಲಿ ಅಸ್ವಚ್ಚತೆಯ ಮಧ್ಯೆಯ ಬದುಕನ್ನು ಸಾಗಿಸುತ್ತಿರುವವರು, ಕುಡಿಯಲು ನೀರು ಬೇಕಾದರೂ ಹರಸಾಹಸ ಪಡುತ್ತಿರುವ ಜನರು ಎದುರಾದರು.
ವಿಕಲ ಚೇತನನಾದರೂ ಹಳ್ಳಿ ಹಳ್ಳಿಗೂ ಹೋಗಿ ಐಸ್ ಕ್ಯಾಂಡಿ ಮಾರುತ್ತ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುತ್ತ ಸಾಗುತ್ತಿದ್ದಾನೆ. ರಸ್ತೆಯಲ್ಲೇ ತಳ್ಳುವ ಬಂಡಿಯಲ್ಲಿ ಗಂಡ ಇಲ್ಲದಿದ್ದರು ಯಾರ ಹಂಗಿಗೂ ಒಳಗಾಗದೆ ಸ್ವಾಭಿಮಾನದಿಂದ ಹೋಟೆಲ್ ನಡೆಸುತ್ತ ಬದುಕಿಗೆ ಸವಾಲೆಸೆದು ಜೀವನ ಸಾಗಿಸುತ್ತಿರುವ ಮಹಿಳೆಯ ದರ್ಶನವಾಯಿತು. ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಿಲ್ಲ ಎಂದು ತನ್ನ ಪತ್ನಿಯಿಂದ ದಿನವೂ ಬೈಯಿಸಿಕೊಳ್ಳುತ್ತಿದ್ದರು, ಪೆಟ್ಟಿಗೆ ಅಂಗಡಿಯಲ್ಲಿ ಟೀ ಮಾರುತ್ತ ತನ್ನ ಕೈಯಲ್ಲಾದ ಮಟ್ಟಿಗೆ ಕುಟುಂಬ ನಿರ್ವಹಣೆ ಮಾಡುತ್ತ, ಬದುಕಿನ ಮೇಲೆ ಭರವಸೆ ಕಳೆದುಕೊಳ್ಳದೆ ಉತ್ಸಾಹದಿಂದ ಜೀವನ ನಡೆಸುತ್ತಿರುವವರು ಸಿಕ್ಕರು. ಮಳೆಯಲ್ಲೇ ಸೌಧೆ ತರಲು ಆ ಇಳಿ ವಯಸ್ಸಿನ ಅಜ್ಜಿ ಕಾಡಿಗೆ ನಡೆದುಕೊಂಡೆ ಹೋಗಿ ಕಷ್ಟ ಬೀಳುತ್ತಿದ್ದರು, ತನ್ನ ಜೀವನ ಯಾಕೆ ಈಗಾಯಿತು ಎಂದು ಬೇಸರಿಸಿಕೊಳ್ಳದೇ ಪ್ರತಿದಿನವು ಪ್ರೀತಿಯಿಂದ ಸ್ವಾಗತಿಸುವ ಆಕೆಯ ಛಲ ಯಾರಿಗಿರುತ್ತೆ. 
ಎಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಅನುಭವಿಸಿದೆವು. ಜನ ಜಂಗುಳಿ ಇಲ್ಲದೇ ಪ್ರಶಾಂತವಾದ ವಾತಾವರಣದಲ್ಲಿ ಮರ, ಗಿಡಗಳ ಮಧ್ಯೆ ಒಂದು ಗಂಟೆ ಕೂತ ಆ ಸಂದರ್ಭ ಕೋಟಿ ಕೊಟ್ಟರು ಸಿಗದು. ಒತ್ತಡದ ಜೀವನ, ಜಂಜಾಟಗಳಿಂದ, ಟ್ರಾಫಿಕ್ ಕಿರಿಕಿರಿ ಮಧ್ಯೆ ಹೈರಾಣದ ಬದುಕಿಗೆ ಈ ಪ್ರಕೃತಿ ಎಷ್ಟೊಂದು ಉತ್ಸಾಹ ತುಂಬಿತು. ಜನಗಳಲ್ಲಿ ಅಸೂಹೆ, ಕೋಪ, ಹೊಟ್ಟೆಕಿಚ್ಚು ಇರಬಹುದು. ಆದರೆ ಗಿಡ, ಮರಗಳಲ್ಲಿ ಎಲ್ಲಿದೆ, ನಿಸ್ವಾರ್ಥ ಮನಸ್ಥಿತಿಯ ಗಿಡಮರಗಳ ಮಧ್ಯೆ ಇರುವುದೇ ಅತ್ಯದ್ಬುತ.
ಇಂದು ಸಮಾಜದಲ್ಲಿ ಎಷ್ಟೋ ಜನ ಏನು ಕಳೆದುಕೊಂಡಂಗೆ ಜೀವನ ನಡೆಸುತ್ತಿದ್ದಾರೆ. ಕಷ್ಟಗಳು ನಮಗೆ ಮಾತ್ರ ಇದೆಯೆನೋ ಎಂದು ಭ್ರಮೆಯಲ್ಲಿರುತ್ತೇವೆ. ಕೂಲಿಗೆ ಹೋಗಿ ಬಿಸಿಲಲ್ಲಿ ದುಡಿಯುವ ಜನ ಕೂಡ ಯಾವತ್ತೂ ಜೀವನದ ಬಗ್ಗೆ ಬೇಸರ ಪಡುವುದಿಲ್ಲ. ಏಕೆಂದರೆ ಯಾವ ಕ್ಷಣಕ್ಕೆ ಏನು ಆಗಬೇಕೋ ಅದು ಆಗುತ್ತೇ ಎಂದು ನಂಬುತ್ತಾರೆ. ಕೂಲಿ ಮಾಡಿದರೂ ಕೂಡ ಕಷ್ಟಗಳನ್ನು ಸವಾಲೆಸುವ ಶಕ್ತಿ ಇವರಲ್ಲಿ ಇರುತ್ತದೆ. ಆದರೆ ವಿದ್ಯಾವಂತರು, ಬುದ್ದಿವಂತರು, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಕೂಲಿ ಮಾಡುವವರಲ್ಲಿ ಇರುವ ಆತ್ಮಸ್ಥೈರ್ಯ, ನಂಬಿಕೆ ಇರುವುದಿಲ್ಲ. ಕಷ್ಟಗಳಿಂದ ಹೊರತಾದ ಜೀವನ ಯಾರಿಗೆ ತಾನೇ ಇರುತ್ತದೆ ಹೇಳಿ..?
ಜೀವನ ಎಂದರೆ ನಿಜಕ್ಕೂ ನಮಗೆ ಏನು ಇಷ್ಟವಾಗುತ್ತದೋ ಅದು ಮಾಡಬೇಕು. ಕಷ್ಟಗಳು ನಮಗೆ ಇದೆ ಎಂದು ಕೂತರೆ ಆಗುದಾದರೂ ಏನು ? ಅಥವಾ ಸಾಧಿಸುವುದಾದರೂ ಏನು ? ಜೀವನದಲ್ಲಿ ಉತ್ಸಾಹ ಪಡೆಯಬೇಕಾದರೆ, ಸಕಾರಾತ್ಮಕ ಮನಸ್ಥಿತಿ ಪಡೆಯಬೇಕಾದರೆ, ನಮ್ಮ ವ್ಯಕ್ತಿತ್ವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಬೇಕು. ಇರುವ ಅನುಕೂಲಗಳಲ್ಲೇ ಖುಷಿ ಕಾಣಬೇಕು. ಇರುವುದನ್ನು ಬಿಟ್ಟು, ಇಲ್ಲದಿರುವುದರ ಬಗ್ಗೆ ಆಲೋಚಿಸುತ್ತಿದ್ದರೆ ಸಮಯ ವ್ಯರ್ಥವಾಗುವುದರ ಜೊತೆಗೆ ಮಾನಸಿಕ ಅಸಮತೋಲನಕ್ಕೆ ಒಳಗಾಗಬೇಕಾಗುತ್ತದೆ.
ಜೀವನ ಎಂದರೆ ನಮಗಿಷ್ಟವಾಗುವ ತರ ನಾವು ಬದುಕುವುದು. ಇಂದು ಏನಾಗಿದೆ ಎಂದರೆ ಬೇರೊಬ್ಬರು ಏನು ಅಂದುಕೊಳ್ಳುತ್ತಾರೋ, ಬೇರೆಯವರೆ ನನ್ನ ಬಗ್ಗೆ ಏನು ಭಾವಿಸುತ್ತಾರೋ ಎಂದು ಭಯದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ನಮ್ಮದು.  ನಮಗೆ ಇರುವುದೇ ಒಂದು ಜನ್ಮ, ಮತ್ತೊಂದು ಜನ್ಮ ಇದಿಯೋ ಇಲ್ಲವೋ ಗೊತ್ತಿಲ್ಲ. ಈ ಜನ್ಮದಲ್ಲೇ ನಮಗಿಷ್ಟವಾಗುವ ರೀತಿ ಬದುಕದಿದ್ದರೆ, ಬದುಕುವುದಾದರೂ ಏತಕ್ಕೆ ? ನಿಜ ಸಮಾಜ, ಕುಟುಂಬ ಎಲ್ಲವೂ ಬೇಕು. ಜವಾಬ್ದಾರಿ, ಕರ್ತವ್ಯಗಳನ್ನು ನಿರ್ವಹಿಸಬೇಕು. ಜೊತೆಗೆ ನಮ್ಮ ಆಸೆಯ ರೀತಿಯಲ್ಲೂ ಜೀವನ ಸಾಗಿಸಬೇಕು. ವಿನಾ ಕಾರಣ ಆಲೋಚಿಸುವ ಅನಿವಾರ್ಯತೆ ಏಕೆ. ಜೀವನದಲ್ಲಿ ಸಾಧಿಸುವವ ಛಲ ಇರುವವರು ಅನಗತ್ಯ ಆಲೋಚನೆಗಳಿಂದ ಮುಕ್ತರಾಗಿರುತ್ತಾರೆ. ಬದುಕಿನ ಪ್ರತಿಕ್ಷಣವೂ ಇಂಪಾರ್ಟೆಂಟ್, ಯಾಕಂದ್ರೆ ಒಂದು ಸೆಕೆಂಡ್ ಕಳೆದುಕೊಂಡರೆ ಮತ್ತೆ ಸಿಗಲ್ಲ. ಭಯ, ಮಾನಸಿಕ ನೋವು, ಅಪನಂಬಿಕೆ ಎಂಬ ಸೋಲಿಸುವ ಸೂತ್ರಗಳನ್ನು ಆದಷ್ಟು ದೂರ ತಳ್ಳಿ, ನಮಗೆ ಇಷ್ಟವಾಗುವ ಜೀವನ ಸಾಗಿಸಬೇಕಿದೆ. ಸೋ ಲೆಟ್ಸ್ ಎಂಜಾಯ್ ಎವರಿಮೂಮೆಂಟ್, ಯಾಕೆಂದ್ರೆ ಇದು ನಮ್ಮ ಲೈಫ್, ನಮ್ಮ ಜರ್ನಿ.

ಬುಧವಾರ, ಜುಲೈ 3, 2019

ಕನಸು ಕಾಣುವ ಜೀವನ..

  ⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನಮ್ಮದೊಂದು ರೀತಿ ಕನಸುಗಳ ಜೀವನ. ಕನಸುಗಳನ್ನು ಕಾಣದೇ ಜೀವನ      ಮಾಡುತ್ತಿರುವವರು ಬಹುಃಶ ಯಾರು ಸಿಗಲ್ಲ. ಪ್ರತಿದಿನವೂ ಒಂದೊಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಜೀವನಪರ್ಯಂತ ನಾವು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಒಮ್ಮೊಮ್ಮೆ ನಾವು ಅಂದುಕೊಂಡ ಕನಸುಗಳು ಈಡೇರದಿದ್ದಾಗ ಅಥವಾ ಅವು ಈಡೇರಲ್ಲಾ ಎಂದು ಗೊತ್ತಾದಾಗ ಮನಸ್ಸಿಗೆ ಆಗುವ ನೋವಿನ ಯಾತನೆ ಕಡಿಮೆ ಏನಲ್ಲ.
ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಬರುವ ಸಮಸ್ಯೆಗಳು ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿಬಿಡುತ್ತವೆ. ಬಹುಪಾಲು ಜನ ತಮ್ಮ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಈ ಕನಸಿಗೆ ಕೊಳ್ಳಿ ಇಡುವುದೇ ಈ ಸಮಸ್ಯೆಗಳು ಎಂಬ ಮಹಾ ಶತ್ರು. 
ಮೊನ್ನೆ ಸ್ನೇಹಿತರೊಬ್ಬರ ಮದುವೆಗಾಗಿ ದೂರದ ವಿಜಯಪುರ (ಬಿಜಾಪುರ)ಕ್ಕೆ ಹೋಗಿದ್ದೆ. ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಹೋದ ಸಂದರ್ಭವದು. ಇಂಡಿ ಪಟ್ಟಣದಿಂದ ಬಸ್ ನಲ್ಲಿ ವಿಜಯಪುರ ನಗರಕ್ಕೆ ಹೋಗುತ್ತಿದ್ದಾಗ ಎಲ್ಲೂ ಕೃಷಿ ಚಟುವಟಿಕೆಗಳೇ ಕಾಣುವುದಿಲ್ಲ. ಬಹುತೇಕ ಜಮೀನು ಮಳೆಯಾಶ್ರಿತ ಕೃಷಿ ಜಮೀನು. ಮಳೆ ಬಿದ್ದರೆ ಕೃಷಿ ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಇಲ್ಲಿನ ಜನರು ಅಷ್ಟೇ ಅತ್ಯಂತ ಸರಳವಾಗಿ ಜೀವನ ನಡೆಸುವವರು, ಅವರನ್ನು ನೋಡುವಾಗಲೇ ಅದು ಅರ್ಥವಾಗುತ್ತದೆ. ಬಿಜಾಪುರ ನಗರವಂತು ಇತಿಹಾಸದ ಪುಟಗಳನ್ನೇ ಹೊಂದಿದ ನಗರ. ಹಲವು ಸಾಮ್ರಾಜ್ಯಗಳು ಆಳಿದ ಪ್ರದೇಶವಾದ್ದರಿಂದ ನಗರದ ಯಾವುದೇ ಭಾಗಕ್ಕೆ ಹೋದರು ಪುರಾತನವಾದ ಕೋಟೆಗಳ ದರ್ಶನವಾಗುತ್ತದೆ. 
ಬಿಜಾಪುರ ನಗರದಲ್ಲಿನ ಗೋಲಗುಮ್ಮಟವು ಪ್ರಸಿದ್ದವಾದ ಸ್ಮಾರಕ. ಪುರಾತನವಾದ ಈ ಸ್ಮಾರಕವು ನೋಡಲು ಹಾಗೂ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾಗಿದೆ. ಗೋಲಗುಮ್ಮಟದ ಮುಂಭಾಗದಲ್ಲಿನ ವಸ್ತು ಸಂಗ್ರಹಾಲಯದಲ್ಲಿನ ಹಲವು ಪುರಾತನವಾದ ಶಿಲ್ಪಕಲಾಕೃತಿಗಳು ಗಮನಸೆಳೆಯುತ್ತದೆ. 
ಗೋಲಗುಮ್ಮಟ ವೀಕ್ಷಿಸಿ ಗೇಟಿನ ಮುಂಭಾಗಕ್ಕೆ ಬಂದಾಗ ಅಲ್ಲಿ ಸುಮಾರು 45 ವರ್ಷದ ಬಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ತನ್ನ ಕೈಯಲ್ಲಿ ಹಿಡಿದಿದ್ದ ಚಿತ್ರಗಳ ಆಲ್ಬಮ್ ತೋರಿಸಿದರು. ನೋಡಿ ಸಾರ್ ಈ ಚಿತ್ರಗಳಲ್ಲಿನ ಸ್ಥಳಗಳು ಬಿಜಾಪುರ ನಗರದಲ್ಲಿವೆ. ನೀವು ನಡೆದುಕೊಂಡೋ, ಆಟೋದಲ್ಲೋ ಹೋಗಿ ನೋಡಲು ಸಾಧ್ಯವಿಲ್ಲ. ನನಗೆ 350 ರೂ.ಕೊಡಿ ನನ್ನ ಟಾಂಗ (ಜಟಾಕ ಬಂಡಿ) ದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದ. 
ಆಟೋ, ಗಾಡಿ, ಬಸ್ ಗಳಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ನನಗೆ, ಟಾಂಗದಲ್ಲಿ (ಕುದುರೆಯ ಜಟಾಕ ಬಂಡಿ) ಒಮ್ಮೆಯು ಹೋಗಿರಲಿಲ್ಲ. ಟಾಂಗದಲ್ಲಿ ಹೋಗುವ ಆಸೆಯಿಂದ 250ರೂ. ಕೊಡುತ್ತೇನೆ ಎಂದು ಹೇಳಿ ಟಾಂಗ ಹತ್ತಿದೆ. ಟಾಂಗದಲ್ಲಿ ಹೋಗುವುದೇ ಒಂದು ರೋಮಾಂಚನ. ಅದರಲ್ಲಿ ಸಾಗುತ್ತಿದ್ದಾಗ ಹಾಗೆಯೇ ಸುಮ್ಮನೆ ಟಾಂಗ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಮಾತಿನತ್ತ ಸೆಳೆದೆ. ಆತ ಮಾತನಾಡುತ್ತ ಕಳೆದ 18 ವರ್ಷಗಳಿಂದ ಟಾಂಗ ಓಡಿಸುತ್ತಲೇ ಜೀವನ ಸಾಗಿಸುತ್ತಿದ್ದೇನೆ ಸಾರ್. ಇಬ್ಬರು ಮಕ್ಕಳು, ಒಬ್ಬರು 10 ನೇ ತರಗತಿ, ಮತ್ತೊಬ್ಬರು 8 ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಇಲ್ಲ, ಇರುವುದು 2 ಸಾವಿರ ರೂ.ಗಳ ಪುಟ್ಟದಾದ ಬಾಡಿಗೆ ಮನೆಯಲ್ಲಿ. ಪತ್ನಿಯು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಾಳೆ. ಇಬ್ಬರು ದುಡಿಯುವುದು ಅನಿವಾರ್ಯ. ದಿನಕ್ಕೆ ಹೆಚ್ಚೆಂದರೆ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ತೋರಿಸಿ 500 ರೂ. ಸಂಪಾದಿಸುತ್ತೇನೆ. ಖರ್ಚೆಲ್ಲಾ ಹೋಗಿ 350 ರೂ. ಉಳಿಯುತ್ತದೆ. ಅದರಲ್ಲೇ ಕುಟುಂಬ ನಿರ್ವಹಣೆ. ಬೇರೆಯವರ ರೀತಿ ಬದುಕು ನಮ್ಮದಲ್ಲ. ಬೆಳಗ್ಗೆ ಮಾಡಿದ ಊಟವನ್ನೇ ಮಧ್ಯಾಹ್ನ, ರಾತ್ರಿಯು ತಿನ್ನುತ್ತೇವೆ. ಹಬ್ಬ ಹರಿದಿನಗಳು ಬಂದರೆ ಮಾತ್ರ ವಿಶೇಷವಾದ ಅಡುಗೆ ಇರುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವ ಪದ್ದತಿ.  
ಇನ್ನು ನಾವು ಬಡವರಾಗಿರುವುದರಿಂದ ನಮ್ಮ ಸಂಬಂಧಿಕರ್ಯಾರು ನಮ್ಮನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ನಮ್ಮ ಮನೆಗೂ ಅವರು ಬರುವುದಿಲ್ಲ. ಆದರೂ ಜೀವನದಲ್ಲಿ ಸಂತೋಷದಿಂದ ಇದ್ದೇನೆ. ಅದರರ್ಥ ಕಷ್ಟಗಳು ಇಲ್ಲವೆಂದಲ್ಲಾ, ಕಷ್ಟಗಳಲ್ಲೇ ಸಂತೋಷವನ್ನು ಕಾಣುತ್ತಿದ್ದೇನೆ. ಬೇರೆಯವರನ್ನೂ ನೋಡಿದಾಗ ಕೆಲವೊಮ್ಮೆ ನನಗೂ ಬೇಸರವಾಗುತ್ತದೆ. ಆದರೆ ನನ್ನ ಸಾಮರ್ಥ್ಯ, ಶಕ್ತಿ ಅರಿವು ನನಗಿದೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎಂಬ ನಿಲುವು ನನ್ನದು ಸಾರ್ ಎಂದು ಹೇಳುವ ಆತನ ಮಾತುಗಳಲ್ಲಿ ಬದುಕಿನ ಬಗ್ಗೆ ಪ್ರೀತಿ, ಅಪಾರ ನಿರೀಕ್ಷೆ ಇತ್ತು. 
ಮೊನ್ನೆ ವಿಜಯಪುರ ಜಿಲ್ಲಾಧಿಕಾರಿಗಳು ಕಾರಿನಲ್ಲಿ ಹೋಗುತ್ತಿದ್ದರೆ ರಸ್ತೆಯಲ್ಲಿದ್ದ ಪೊಲೀಸರು ಕಾರನ್ನು ನೋಡಿದ ಕೂಡಲೇ ಸೆಲ್ಯೂಟ್ ಹೊಡೆದರು. ನನಗೆ ಆಗ ಅರ್ಥವಾಯಿತು ಅಧಿಕಾರಿಯಾದರೆ ಯಾವ ರೀತಿ ಗೌರವ ಸಿಗುತ್ತದೆ ಎಂದು. ಆ ಕಾರಣದಿಂದಲೇ ನನ್ನ ಒಬ್ಬ ಮಗನನ್ನಾದರೂ ಜಿಲ್ಲಾಧಿಕಾರಿ ಮಾಡಬೇಕೆಂಬ ಕನಸು ನನ್ನದು. ನನ್ನಂತಹ ಎಷ್ಟೋ ಬಡ ಕುಟುಂಬದವರ ಪಾಲಿಗೆ ನನ್ನ ಮಗ ನೆರಳಾಗಬೇಕು ಎನ್ನುವುದು ನನ್ನ ಆಸೆ. ಆತನನ್ನು ಓದಿಸುತ್ತಿದ್ದೇನೆ, ಮುಂದೆನಾಗುತ್ತದೋ ನೋಡೊಣ ಸಾರ್ ಎಂದು ಮಾತು ಮುಗಿಸಿದ. ತನ್ನ ಟಾಂಗದಲ್ಲೇ ಬಿಜಾಪುರ ನಗರದಲ್ಲಿನ ಬಿಜಾಪುರ ಕೋಟೆ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಜಮ್ಮಾ ಮಸೀದಿ, ಆಲಿ ಬುರ್ಜ್ ಸೇರಿದಂತೆ ಮತ್ತಿತರರ ಸ್ಥಳಗಳನ್ನು ತೋರಿಸಿದ. ಕಷ್ಟವಿದ್ದರು ಆ ಬಗ್ಗೆ ಚಿಂತಿಸದೆ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಆತನ ಚಿತ್ತವಿದ್ದದ್ದು ಮಾತ್ರ ಗಮನಾರ್ಹ. 
ಕಳೆದ ಹಲವಾರು ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಓಡಾಡುತ್ತಿದ್ದೇನೆ. ಕೆಲ ದಿನಗಳ ಹಿಂದೆ ಒಂದು ಘಟನೆ ನಡೆಯಿತು. ಬೆಂಗಳೂರಿನಿಂದ ಆಂಧ್ರಪ್ರದೇಶದ ಪುಟ್ಟಪರ್ತಿ ಹಾಗೂ ಅನಂತಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೋಗಿದ್ದೆ. ಕಂಡೆಕ್ಟರ್ ಪ್ರಯಾಣಿಕರಿಗೆಲ್ಲಾ ಟಿಕೆಟ್ ಕೊಟ್ಟು ಸಾಕಾಯಿತು ಎಂದು ತಮ್ಮ ಸೀಟ್ ನಲ್ಲಿ ಬಂದು ಕೂತರು. 
ಏನ್ ಸಾರ್ ಸಾಕಾಯಿತೇ ಎಂದೆ, ಅದಕ್ಕೆ ಅವರು ಬಿಡಿ ಸಾರ್ ನಮ್ಮ ಕಂಡೆಕ್ಟರ್ ಮತ್ತು ಡ್ರೈವರ್ ಗಳ ಕಥೆ ಹೇಳುವುದೇ ಬೇಡ. ಬರುವ ಕಡಿಮೆ ಸಂಬಳದಲ್ಲಿ ಜೀವನ ಮಾಡಬೇಕಾದ ಅನಿವಾರ್ಯತೆ ನಮ್ಮದು. ಹಲವು ಬಾರಿ ನಮ್ಮ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿದರೂ ಕನಿಷ್ಟ ವೇತನ ನಿಗದಿಪಡಿಸಿಲ್ಲ. ಬಸ್ ನಲ್ಲಿ ಓಡಾಡಿ ಓಡಾಡಿ ಸಾಕಾಗುತ್ತದೆ. ಕಾಲು ನೋವಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಸರಿಯಾಗಿ ರಜೆಯು  ನೀಡುವುದಿಲ್ಲ. ನಮ್ಮ ಸಾಂದರ್ಭಿಕ ರಜೆಗಳನ್ನು ಪಡೆಯಬೇಕಾದರೂ ಡಿಪೋ ಮ್ಯಾನೇಜರ್ ಗಳ ಕೈ ಕಾಲು ಹಿಡಿಯಬೇಕು. ಅದು ಹೋಗಲಿ 35 ವರ್ಷ ವೃತ್ತಿ ಮಾಡಿದರೂ ನಿವೃತ್ತಿ ನಂತರ ಬರುವ ಪಿಂಚಣಿ ಯಾವುದಕ್ಕೆ ಸಾಕಾಗುತ್ತದೆ. ನಿಜವಾಗಲೂ ಹೇಳುತ್ತೇನೆ ಸಾರ್ ಪ್ರತಿದಿನವೂ ಬಸ್ ನಲ್ಲಿ ಏನೋ ರಾದ್ದಾಂತ ಇದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಚಿಲ್ಲರೆ ಸಮಸ್ಯೆ. ಕೆಲ ಪ್ರಯಾಣಿಕರಂತು ಚಿಲ್ಲರೆ ಕೂಡಲೇ ಕೊಡಬೇಕು ಎನ್ನುತ್ತಾರೆ. ಆದರೆ ಹಣ ಸಂಗ್ರಹವಾಗಿರುವುದಿಲ್ಲ, ಆ ಮೇಲೆ ಕೊಡುತ್ತೇನೆ, ಟಿಕೆಟ್ ಮೇಲೆ ಬರೆದುಕೊಡುತ್ತೇವೆ ಎಂದರು ಕೇಳುವುದಿಲ್ಲ. ಇಲ್ಲ ನೀವು ಹಣ ತೆಗೆದುಕೊಳ್ಳಲು ಈ ರೀತಿ ಚಿಲ್ಲರೆ ಇದ್ದರು ಕೂಡ ಕೊಡುವುದಿಲ್ಲ ಎನ್ನುತ್ತಾರೆ. 
ನಿಜ ಹೇಳುತ್ತಾನೇ ಸಾರ್ ಇಲ್ಲಿಯವರೆಗೂ ನಾನು ಪ್ರಯಾಣಿಕರ ಹಣ ಪಡೆದಿಲ್ಲ. ನಾನೇ ಹೋಗಿ ಯಾರಿಗಾದರೂ ಚಿಲ್ಲರೆ ಕೊಡಬೇಕಾದರೆ ಕೇಳಿ ಕೊಡುತ್ತೇನೆ. ಕೆಲವರು ಟಿಕೆಟ್ ಪಡೆಯದೆ ಪ್ರಯಾಣಿಸಿ ಚೆಕಿಂಗ್ ಅವರ ಕೈಗೆ ಸಿಗುತ್ತಾರೆ. ನಮಗೂ ದಂಡ, ಸಾಲದಕ್ಕೆ ಇನ್ಕ್ರಿಮೆಂಟ್ ಕಟ್. ಎಷ್ಟೇ ಸಾರಿ ಕೂಗಿ ಕೇಳಿದರೂ ಕೆಲವರು ಟಿಕೆಟ್ ಪಡೆಯದೆ ಸಮಸ್ಯೆ ತಂದೊಡ್ಡುತ್ತಾರೆ. ಕೆಲವೊಮ್ಮೆ ಬಸ್ ನಲ್ಲಿ ಇರುವ ಪ್ರಯಾಣಿಕರನ್ನು ಸ್ವಲ್ಪ ಒಳಕ್ಕೆ ಹೋಗಿ ಬೇರೆಯವರು ಹತ್ತಬೇಕು ಎಂದರೆ ನಮ್ಮ ಮೇಲೆ ದಬಾಯಿಸುತ್ತೀಯಾ ಎಂದು ಜೋರು ಮಾಡುತ್ತಾರೆ. ನಿಲ್ದಾಣ ಇಲ್ಲದಿದ್ದರು ಬಸ್ ನಿಲ್ಲಿಸುವಂತೆ ಒತ್ತಾಯಿಸುತ್ತಾರೆ. ನಿಲ್ಲಿಸದೆ ಹೋದರೆ ಜಗಳ. ಕೆಲ ಕಂಡೆಕ್ಟರ್ ಗಳು ಕೆಟ್ಟವರಿರಬಹುದು. ಆದರೆ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ. 
8 ವರ್ಷಗಳ ನನ್ನ ಸರ್ವೀಸ್ ಲೈಪ್ ಸಾಕಾಗಿ ಹೋಗಿದೆ ಸಾರ್. ಒಂದು ದಿನ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಸಂಚಾರ ನಿಲ್ಲಿಸಿದರೆ ಸಮಾಜದಲ್ಲಿ ಏನಾಗುತ್ತದೆ, ಜನಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತದೆ ಎಂದು ಹೇಳಬೇಕಾಗಿಲ್ಲ. ಆದರೂ ಸರಕಾರಗಳು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯನ್ನು ಮನುಷ್ಯರಂತೆ ಕಾಣುವುದಿಲ್ಲ. ಸಮಾಜದಲ್ಲೂ ನಮ್ಮನ್ನು ಬೇಕಾಬಿಟ್ಟಿಯಾಗಿ ಕಾಣುತ್ತಾರೆ. ನಮ್ಮ ಸೇವೆ ಬಗ್ಗೆ ಯಾರಿಗೂ ಬೆಲೆ ಇಲ್ಲ. ಕಳೆದ 8 ವರ್ಷಗಳಿಂದ ನಿಗದಿತ ಸಮಯಕ್ಕೆ ಎಷ್ಟೋ ಜನ ಪ್ರಯಾಣಿಕರನ್ನು ಅವರ ಕಚೇರಿ, ಮನೆ, ಶಾಲಾ, ಕಾಲೇಜು ತಲುಪಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಬ್ಬರೇ ಒಬ್ಬರು ನಮಗೆ ಥ್ಯಾಂಕ್ಸ್ ಹೇಳಿಲ್ಲ. ನಮಗೆ ಪ್ರಯಾಣಿಕರಿಂದ ಬೇಕಿರುವುದು ಒಂದು ಥ್ಯಾಂಕ್ಸ್, ಅವರಿಂದ ಗೌರವ ಅಷ್ಟೇ. 
ನಾನು ಕೂಡ ಸ್ನಾತ ಕೋತ್ತರ ಪದವೀಧರ. 
ಆದರೆ ಕುಟುಂಬ ದ ಆರ್ಥಿಕ ಪರಿಸ್ಥಿತಿಯಿಂದ ಕಂಡೆಕ್ಟರ್ ಹುದ್ದೆ ಸಿಕ್ಕಿತೆಂದು ಸೇರಿದೆ. ನಿಜ ಹೇಳಬೇಕೆಂದರೆ ನಾನು ಪಿ.ಎಸ್.ಐ ಆಗಬೇಕೆಂದು ಕನಸು ಕಂಡವನು. ಎಷ್ಟೋ ಬಾರಿ ಈ ವೃತ್ತಿ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇದ್ದು ಬಿಡೋಣ ಎಂದರೆ ಊರಿನಲ್ಲಿ ಜಮೀನು ಕೂಡ ಇಲ್ಲ. ನನ್ನ ಕಟುಂಬಕ್ಕೆ ನಾನೇ ಆಧಾರ. ಮದುವೆಯಾಗಿ 3 ವರ್ಷವಾಗಿದೆ. ಈಗ ಕೆಲಸ ಬಿಡುತ್ತೇನೆ ಎಂದರೆ ಪತ್ನಿ ಒಪ್ಪುವುದಿಲ್ಲ. 
ಆದರೂ ಜೀವನದಲ್ಲಿ ಭರವಸೆಯಂತು ಕಳೆದುಕೊಂಡಿಲ್ಲ. ಏನೇ ಕಷ್ಟವಾದರೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಬೇಕು ಎಂಬ ನನ್ನ ಬಾಲ್ಯದ ಕನಸು ಈಗಲೂ ಕಾಡುತ್ತದೆ. ಇರಲಿ ಎಷ್ಟೇ ಕಷ್ಟಗಳು ಬರಲಿ, ಪಿ.ಎಸ್.ಐ ಆಗಬೇಕೆಂಬ ಆಸೆಗೆ ಅವು ಅಡ್ಡಿಬರಲಾರವು. ಅಷ್ಟಕ್ಕೂ ಪಿ.ಎಸ್.ಐ ಆಗಬೇಕು ಎನ್ನುವುದು ನನ್ನ ಕನಸಲ್ಲ, ಅದು ನನ್ನ ಪ್ರಾಣ ಎಂದರು. ಅವರಲ್ಲಿದ್ದ ಸಾಧಿಸುವ ಛಲ ಇಂದಲ್ಲಾ ನಾಳೆ ಎಸ್.ಐ ಆಗುವ ಲಕ್ಷಣವಿತ್ತು. ಅಷ್ಟರಲ್ಲಾಗಲೇ ಅನಂತಪುರ ಬಸ್ ನಿಲ್ದಾಣ ಬಂತು.  
ಒಬ್ಬರು ಹೇಳುತ್ತಾರೆ ಸಾರ್ ನಾನು 2 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಅಲ್ಲಿಂದಲೂ ಇಲ್ಲಿಯವರೆಗೂ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದೇನೆ. ವಿಧಿಯು ನನ್ನ ಜೀವನದಲ್ಲಿ ಚೆನ್ನಾಗಿ ಆಡಿದೆ ಎಂದು ಹೇಳಿದರು. ಮತ್ತೊಬ್ಬ ಮಹಿಳೆ ಹೇಳುತ್ತಾರೆ ನನ್ನ ಗಂಡ ವಿಪರಿತ ಕುಡುಕ, ಇಬ್ಬರು ಹೆಣ್ಣು ಮಕ್ಕಳು ಬೇರೆ ಇದ್ದಾರೆ. ನಾನು ಕೂಲಿ ಮಾಡಿ ಕುಟುಂಬ ಸಾಕಬೇಕು. ಮತ್ತೊಬ್ಬರು ಹೇಳುತ್ತಾರೆ ನಮ್ಮ ಅಣ್ಣ ಹಣದ ಆಸೆಗೆ ಬಿದ್ದು ಕುಡುಕನಿಗೆ ಅದರಲ್ಲೂ ಅದಾಗಲೇ ಎರಡು ಮದುವೆ ಆದವನಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ಮದುವೆ ಆದ ಕೆಲವೇ ತಿಂಗಳುಗಳಿಗೆ ಆತ ನನ್ನನ್ನು ಬಿಟ್ಟು ಹೋದ. ಒಬ್ಬ ಮಗನೊಂದಿಗೆ ಜೀವನ ಸಾಗಿಸುತ್ತಿದ್ದೇನೆ.
ಈಗೆ ಹಲವರು ತಮ್ಮದೇ ಆದ ನೋವುಗಳನ್ನು ಹೇಳಿಕೊಂಡ ಸಂದರ್ಭಗಳನ್ನು ನೋಡಿದ್ದೇನೆ. ಆದರು ಇವರ್ಯಾರು ಬದುಕಿನ ಮೇಲಿನ ಭರವಸೆ ಕಳೆದುಕೊಂಡವರಲ್ಲ. ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಕಂಡ ಕನಸನ್ನು ನನಸಾಗಿಸಲು ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ವಿನಯದಿಂದ ಸ್ವಾಗತಿಸಿ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ.  
ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಒಮ್ಮೆ ಹೀಗೆ ಹೇಳಿದ್ದರು, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳು ಬಂದಿಲ್ಲ, ಎಂದರೆ ನಾವು ಸಾಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ. ನಮಗೆ ಕಷ್ಟಗಳು ಬರುತ್ತಿವೆ ಎಂದರೆ ಅದರರ್ಥ ನೀವು ಯಾವುದೋ ಒಂದು ಸಾಧನೆ ಮಾಡಲು ಹೊರಟಿದ್ದೀರಾ ಎಂಬುವುದು ನಿಜ ಎಂದು ಬಹಳ ಅದ್ಬುತವಾಗಿ ಹೇಳಿದ್ದರು.
ಕನಸು ಕಾಣಿ, ಕನಸು ಕಾಣುವಲ್ಲೂ ಹಿಂಜರಿಕೆ ಬೇಡ. ಏಕೆಂದರೆ ಕನಸು ಕಾಣುವುದಕ್ಕೆ ಯಾವುದೇ ಸರಕಾರಗಳು ನೇರ ಅಥವಾ ಪರೋಕ್ಷ ತೆರಿಗೆಗಳು ಹಾಕುವುದಿಲ್ಲ. ನಮ್ಮ ಕನಸುಗಳು ಯಾವಾಗಲೂ ಉನ್ನತವಾಗಿರಲಿ. ಆದರೆ ಕನಸುಗಳನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯ, ಶಕ್ತಿ ನಾವೇ ಸಂಪಾದಿಸಿಕೊಳ್ಳಬೇಕು. 
ಒಂದಂತು ನಿಜ ನಮ್ಮ ಜೀವನದ ಕಷ್ಟಗಳು ಎಂದಿಗೂ ನಮ್ಮ ಕನಸಿಗೆ ಅಡ್ಡಿ ಬರಬಾರದು. ಕಷ್ಟಗಳನ್ನು ಮೀರಿ ಬದುಕು ಕಟ್ಟಿಕೊಂಡು ಕನಸುಗಳನ್ನು ನನಸಾಗಿಕೊಳ್ಳುವ ಧ್ಯೇಯ ನಮ್ಮದಾಗಿರಬೇಕು. ಕೇವಲ ಕನಸು ಕಾಣುತ್ತ ಸಾಗಿದರೆ ಏನು ಪ್ರಯೋಜನ, ಅದರ ಈಡೇರಿಕೆಗೆ ಅಪಾರ ಶ್ರಮ ಅಗತ್ಯ.
ಅಷ್ಟಕ್ಕೂ ನಿಮ್ಮ ಕನಸುಗಳು ಏನಂತಿರಾ.. ಅವುಗಳ ಬೆನ್ನತ್ತಿ ಹೊರಡಿ..    

ಭಾನುವಾರ, ಮೇ 26, 2019

ಜಗತ್ತನ್ನೇ ಗೆಲ್ಲುವ ಅಸ್ತ್ರ "ನಗು"..


 ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
 
ಮೊನ್ನೆ ಖಾಸಗಿ ಬಸ್ ನಲ್ಲಿ ಬೆಂಗಳೂರಿನಿಂದ ಆಂಧ್ರದ ಮದನಪಲ್ಲಿಗೆ ಹೋಗುತ್ತಿದ್ದೆ. ಹೆಚ್ಚು ಕಡಿಮೆ 3 ಗಂಟೆ ಪಯಣ. ಬಸ್ ನಲ್ಲಿ ಟಿ.ವಿವೊಂದಿತ್ತು, ಆದರೆ ಸ್ವಿಚ್ ಆನ್ ಮಾಡಿರಲಿಲ್ಲ. ಬಸ್ ನಲ್ಲಿದ್ದ ಒಬ್ಬ ವ್ಯಕ್ತಿ ಟಿ.ವಿ ಆನ್ ಮಾಡಿ ಚಿತ್ರ ಯಾವುದಾದರೂ ಹಾಕಿ ಬ್ರದರ್ ಎಂದು ಕಂಡೆಕ್ಟರ್ ಗೆ ಹೇಳಿದ. ಕಂಡೆಕ್ಟರ್ ಆತನ ಬಳಿಯಿದ್ದ ಚಲನಚಿತ್ರಗಳ ಸಿ.ಡಿಗಳನ್ನು ತಡಕಾಡಿ ಕೊನೆಗೆ ತೆಲುಗಿನ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ಹಾಕಿದ. 
ನನಗೂ ಬೇಸರವಾಗುತ್ತಿದ್ದರಿಂದ ಚಿತ್ರ ನೋಡುವತ್ತ ಮನಸ್ಸು ಮಾಡಿದೆ. 2013ರಲ್ಲಿ ಬಿಡುಗಡೆಯಾದ ಚಿತ್ರವಿದು. ಶ್ರೀಕಾಂತ್ ಅಡ್ಡಾಲ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖವಾಗಿ ವಿಕ್ಟರಿ ವೆಂಕಟೇಶ್, ಪ್ರಿನ್ಸ್ ಮಹೇಶ್ ಬಾಬು, ಸಮಂತಾ, ಅಂಜಲಿ, ಪ್ರಕಾಶ್ ರೈ ಸೇರಿದಂತೆ ಮತ್ತಿತರರು ನಟಿಸಿದ್ದಾರೆ. ಚಿತ್ರದ ಮುಖ್ಯ ಕಥಾ ಹಂದರವೆಂದರೆ ನಿಮ್ಮ ಎದುರಿಗೆ ಯಾರೇ ಬಂದರೂ ನಗುತ್ತ ಮಾತನಾಡಿಸಿ, ಅವರ ಕುಶಲೋಪರಿ ವಿಚಾರಿಸಿ. ಇದರಿಂದ ನಾವು ಕಳೆದು ಕೊಳ್ಳುವುದಾದರೂ ಏನು ಇಲ್ಲ. ಈ ಭೂಮಿ ಮೇಲೆ ಯಾರು ಶಾಶ್ವತ ಇಲ್ಲ, ಅಂತಹವುದರಲ್ಲಿ ಈ ಅಸೂಹೆ, ಹೊಟ್ಟೆಕಿಚ್ಚು ಪಡುವುದಾದರೂ ಏತಕ್ಕೆ. ಕೊನೆಗೆ ಉಳಿಯುವುದು ಪ್ರೀತಿ ಮಾತ್ರ. 
ಜೀವಮಾನವಿಡಿ ನಮಗೆ ಅನೇಕ ಸಂದರ್ಭಗಳಲ್ಲಿ ಎದುರಾಗುವ ವ್ಯಕ್ತಿಗಳನ್ನು ಗೌರವಿಸೋಣ, ಪ್ರೀತಿಸೋಣ ಅದು ಕೂಡ ಮುಗುಳ್ನೆಗೆಯಿಂದ ಎಂದು ಈ ಚಿತ್ರವು ನಗು ಹಾಗೂ ನಿಷ್ಕಲ್ಮಷ ಪ್ರೀತಿಯ ಬಗ್ಗೆ ತಿಳಿಸುತ್ತದೆ. 
ಬಸ್ ನಲ್ಲಿ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ವೀಕ್ಷಿಸುತ್ತ ಹೋಗುತ್ತಿದ್ದಾಗ ಘಟನೆಯೊಂದು ನೆನಪಾಯಿತು. ಆಂಧ್ರಪ್ರದೇಶದ ತಿರುಪತಿ ಬಳಿಯ ವಿಶ್ವವಿದ್ಯಾಲಯೊಂದಕ್ಕೆ ಅಧ್ಯಯನದ ದೃಷ್ಟಿಯಿಂದ ಹೋಗಿದ್ದೆ. ಅಲ್ಲಿ ಯುವಶಕ್ತಿಗೆ ಮಾರ್ಗದರ್ಶನ ಎಂಬ ವಿಷಯದ ಬಗ್ಗೆ ವಿಚಾರಸಂಕಿರಣವೊಂದು ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ  ಜಗತ್ತನ್ನು ಗೆಲ್ಲಬೇಕು ಎನ್ನುವುದು ನನ್ನ ಮುಖ್ಯ ಧ್ಯೇಯ. ಅದಕ್ಕಾಗಿ ನಾನೇನು ಮಾಡಬೇಕು ಎಂದು ಕಷ್ಟಕರವಾದ ಹಾಗೂ ಕ್ಲಿಷ್ಟ ಪ್ರಶ್ನೆ ಹಾಕಿದ. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಜಗತ್ತನ್ನು ಗೆಲ್ಲಬೇಕು ಎಂದು ನಿನ್ನ ಧ್ಯೇಯವಾದರೆ ಮೊದಲು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು, ಸಾಮರ್ಥ್ಯವನ್ನು ಬೆಳಸಿಕೊಂಡು ಹಗಲಿರುಳು ಶ್ರಮಿಸು ಪ್ರಪಂಚವನ್ನು ಗೆಲ್ಲುತ್ತಿಯಾ ಎಂದರು. 
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮಾತನಾಡಿ, ಜಗತ್ತನ್ನು ಗೆಲ್ಲಬೇಕಾದರೆ ಮೊದಲು ಇತಿಹಾಸ ತಿಳಿದುಕೊಳ್ಳಬೇಕು. ಸಾಮ್ರಾಜ್ಯಗಳಿದ್ದ ಕಾಲದಲ್ಲಿ ರಾಜರು ಆಳ್ವಿಕೆ ನಡೆಸುತ್ತಿದ್ದರು. ಆಗ ರಾಜರು ಹೊಂದಿದ್ದ ವ್ಯಕ್ತಿತ್ವ, ಧೈರ್ಯ ಬೆಳೆಸಿಕೊಂಡು ಪ್ರಯತ್ನಿಸು, ಜಗತ್ತನ್ನು ಗೆಲ್ಲದಿದ್ದರು ಒಂದಷ್ಟು ಸಾಧನೆ ಮಾಡಬಹುದು ಎಂದು ಉತ್ತರಕೊಟ್ಟರು. 
ಅದೇ ವಿಚಾರ ಸಂಕಿರಣದಲ್ಲಿದ್ದ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯು, ಆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ನನ್ನ ಗಮನ ಸೆಳೆಯಿತು. ಅವರು ಹೇಳಿದ ಉತ್ತರ ಹೀಗಿತ್ತು. ಜಗತ್ತನ್ನು ಗೆಲ್ಲಬೇಕು ಎಂದು ನೀನು ಧ್ಯೇಯ ಹೊಂದಿರುವುದೇ ಅಚ್ಚರಿ. ಸಾಮಾನ್ಯವಾಗಿ ನಿನ್ನಂತಹ ಯುವಕರು ಅಂದುಕೊಳ್ಳುವುದು ಶಿಕ್ಷಣ ಪೂರ್ಣಗೊಳಿಸಿ, ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಕೈ ತುಂಬ ಸಂಪಾದನೆ ಮಾಡಬೇಕು. ಆ ನಂತರ ಒಳ್ಳೆಯ ಹುಡುಗಿಯನ್ನು ಮದುವೆಯಾಗ ಬೇಕು ಎಂದು, ಆದರೆ ನೀನು ಮಾತ್ರ ಅದಕ್ಕೆ ತದ್ವಿರುದ್ದವಾಗಿ ಧ್ಯೇಯ ಇಟ್ಟುಕೊಂಡಿದ್ದಿಯಾ, ಸಾಲದಕ್ಕೆ ನಮಗೆ ಕಠಿಣ ಪ್ರಶ್ನೆ ಬೇರೆ ಹಾಕಿದ್ದೀಯಾ, ಆದರೂ ಪರವಾಗಿಲ್ಲ, ನಿನ್ನ ಪ್ರಶ್ನೆಗೆ ನನ್ನ ಬಳಿ ಹತ್ತಿರ ಉತ್ತರವಿದೆ. 
ಇದನ್ನು ಪ್ರಶ್ನೆ ಹಾಕಿದ ಇತನೊಬ್ಬನೆ ಅಲ್ಲ ಈ ಸಭಾಂಗಣದಲ್ಲಿನ ಎಲ್ಲರೂ ಈ ಉತ್ತರ ಕೇಳಲೇಬೇಕು ಎಂದರು. ಎಲ್ಲರಿಗೂ ಕುತೂಹಲವಾಯಿತು ಯಾಕೆಂದರೆ ಜಗತ್ತನ್ನು ಗೆಲ್ಲುವುದಕ್ಕೆ ಇವರ ಬಳಿ ಉತ್ತರವಿದೆ ಎಂದರೆ ಸಹಜವಾಗಿಯೇ ಎಲ್ಲರಿಗೂ ಅಚ್ಚರಿ. ಎಲ್ಲರೂ ಕೆಲ ಕಾಲ ಅವರ ಭಾಷಣ ಕೇಳಲು ಕಿವಿಕೊಟ್ಟರು.
ಜಗತ್ತನ್ನು ಗೆಲ್ಲಬೇಕಾದರೆ ನೀವು ಆಥರ್ಿಕವಾಗಿ ಸದೃಢರಾಗಬೇಕಾದ ಅಗತ್ಯವಿಲ್ಲ. ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಪುಟಗಳನ್ನೆಲ್ಲಾ ತಿರುವಿ ಹಾಕುವ ಅಗತ್ಯವಿಲ್ಲ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಯುದ್ದ ಮಾಡಬೇಕಿಲ್ಲ. ರಾಜಕೀಯಕ್ಕೆ ಎಂಟ್ರೀ ಕೊಟ್ಟು ಚುನಾವಣೆಗೆ ಸ್ಪರ್ಧಿಸುವ  ಅಗತ್ಯವಂತೂ ಇಲ್ಲವೇ ಇಲ್ಲ. 
ಜಸ್ಟ್ ನೀವು ಮಾಡಬೇಕಾದದ್ದು ನಿಮ್ಮ ಮುಖದಲ್ಲಿ ಸ್ಮೈಲ್ (ನಗು) ಸದಾ ಕಣ್ಮರೆಯಾಗದಂತೆ ನೋಡಿಕೊಂಡರೆ ಸಾಕು. ನಗುವಿನ ಮಹತ್ವ ಹಾಗೂ ಎಲ್ಲಿ, ಯಾವಾಗ ನಗಬೇಕೆಂಬ ಸಾಮಾನ್ಯ ಪ್ರಜ್ಞೆ ನಿನಗೆ ಗೊತ್ತಿದ್ದರೆ ಈ ಜಗತ್ತನ್ನು ಗೆಲ್ಲಬೇಕೆಂಬ ನಿನ್ನ ಛಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಜಗತ್ತು ಗೆಲ್ಲಬೇಕಾದರೆ ನಗುವಿನ ಲಕ್ಷಣ ಸಾಕು. ಮತ್ಯಾವ ಅಸ್ತ್ರಗಳು ನಿಮಗೆ ಬೇಕಾಗಿಲ್ಲ ಎಂದು ಹೇಳಿದರು. 
ಈ ಉತ್ತರ ಕೇಳಿದ ಎಲ್ಲರಿಗೂ ಶಾಕ್, ಅರೇ ಈ ವ್ಯಕ್ತಿ ಜಗತ್ತನ್ನು ಗೆಲ್ಲಬೇಕಾದರೆ ಧೀರ್ಘವಾದ ಉತ್ತರ ಹಾಗೂ ದೊಡ್ಡದಾದ ಉದಾಹರಣೆಗಳು ನೀಡುತ್ತಾರೆ ಎಂದು ಸಭಿಕರು ಭಾವಿಸಿದ್ದರು. ಆದರೆ ಅವರು ಹೇಳಿದ್ದು ಮಾತ್ರ ಎರಡಕ್ಷರದ ನಗು. ಅವರು ಮಾತು ಮುಂದುವರೆಸುತ್ತ ಹೇಳಿದರು, ನೀವು ನಂಬಿ ಅಥವಾ ಬಿಡಿ ಜಗತ್ತನ್ನು ಗೆಲ್ಲಬೇಕಾದರೆ ನಗುವಿನಿಂದ ಮಾತ್ರ ಸಾಧ್ಯ. ಸಾವಿರಾರು ಕೋಟಿಗಳು ಇರುವವರು ಕೂಡ ಜಗತ್ತನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಆದರೆ ನಗುವಿನ ಮಹತ್ವ ತಿಳಿದವರು ಜಗತ್ತನ್ನು ಗೆದ್ದು ಸಾಧಿಸಿ ತೋರುತ್ತಾರೆ ಎಂದು ಸ್ಪಷ್ಟವಾಗಿ ಪುನುರುಚ್ಚರಿಸಿದರು.
ಯಾವುದೇ ಸಂದರ್ಭ ಬಂದರೂ ಕೋಪ ಮಾಡಿಕೊಳ್ಳಬೇಡಿ. ಸುಮ್ಮನೆ ಇತರರ ಮೇಲೆ ಸಿಟ್ಟು ಮಾಡಿಕೊಳ್ಳಬೇಡಿ. ಅದು ಮನೆ, ಕಚೇರಿ ಅಥವಾ ಇನ್ಯಾವುದೇ ಸ್ಥಳವಾದರೂ ನಿಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ನಿಮ್ಮ ಜೀವಮಾನವಿಡಿ ನಿಮಗೆ ಯಾರೇ ಎದುರಾಗಲಿ, ಯಾರೇ ನಿಮ್ಮನ್ನು ಮಾತನಾಡಿಸಲಿ ಅವರೊಂದಿಗೆ ಮಾತನಾಡುವಾಗ ನಗುವಿನ ಮುಖವಿಟ್ಟುಕೊಂಡು ಸಂಭಾಷಣೆ ನಡೆಸಿ, ಮುಖದಲ್ಲಿ ತೇಜಸ್ಸು, ಹುಮ್ಮಸ್ಸು ಕಳೆದುಕೊಳ್ಳಬೇಡಿ. 
ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೆ.. ನಿಮ್ಮ ಜೀವನದಲ್ಲಿ ಭೇಟಿಯಾದ ಸಾವಿರಾರು ಜನರ ಪೈಕಿ ಶೇ.95% ಜನ ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮನ್ನು ಗೌರವಿಸುತ್ತಾರೆ, ನಿಮ್ಮ ಜೊತೆ ಮಾತನಾಡಲು ಮುಂದಾಗುತ್ತಾರೆ. ಇದಕ್ಕೆಲ್ಲ ನೀವು ಮಾಡಬೇಕಾದದ್ದು ನಗು ಸದಾ ಇರುವಂತೆ ನೋಡಿಕೊಳ್ಳುವುದು ಅಷ್ಟೇ. ಜನರನ್ನು ನಿಮ್ಮತ್ತ ಸೆಳೆಯುವುದು, ಅವರು ನಿಮ್ಮನ್ನು ಗೌರವಿಸುವುದು, ಪ್ರೀತಿಸುವಂತೆ ಮಾಡುವಂತೆ ನಿಮ್ಮ ಮುಖದ ನಗು ಮಾಡುತ್ತದೆ. ಸಾವಿರಾರು ಜನರ ಗೌರವ, ಪ್ರೀತಿಗೆ ಪಾತ್ರರಾಗುತ್ತಿರಾ ಎಂದರೆ ಜಗತ್ತು ಗೆದ್ದಂಗೆ ತಾನೇ ಎಂದು ಅವರ ಹೇಳಿದ ಉತ್ತರ ಕೇಳಿದ ನಂತರ ಎಲ್ಲರೂ ಆತ್ಮವಲೋಕ ಮಾಡಿಕೊಳ್ಳುವಂತೆ ಮಾಡಿತು.
ಕೆಲ ದಿನಗಳ ಹಿಂದೆ ಕೆಲಸ ನಿಮಿತ್ತ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್ ತಾಲೂಕಿನ ಗ್ರಾಮವೊಂದಕ್ಕೆ ಹೋಗಿದ್ದೆ. ಅಚಾನಕ್ ಆಗಿ ನಮ್ಮ ತರಬೇತಿ ಸಂಸ್ಥೆಯ ಹಳೆಯ ಶಿಬಿರಾರ್ಥಿಯೊಬ್ಬರು ಸಿಕ್ಕರು. ಆ ಗ್ರಾಮ ಅವರದೆಂದು ನನಗೆ ಗೊತ್ತಿರಲಿಲ್ಲ. ತರಬೇತಿ ಸಂಸ್ಥೆಗೆ ಬಂದು ಅವರು ಕೆಲ ವರ್ಷಗಳು ಆಗಿದ್ದರಿಂದ ಅವರನ್ನು ನೆನಪು ಹಿಡಿಯುವುದು ಕಷ್ಟವಾಯಿತು. ಆದರೂ ಅವರೇ ತಮ್ಮ ಪರಿಚಯ ಮಾಡಿಕೊಂಡು, ಸಾರ್ ಇದು ನಮ್ಮೂರು, ಇಲ್ಲಿಗೇಕೆ ಬಂದಿದ್ದೀರಾ. ಮನೆಗೆ ಬನ್ನಿ ಸಾರ್ ಎಂದು ಕರೆದರು. ಅವರ ಆತ್ಮೀಯ ಕರೆಗೆ ಓಗೊಟ್ಟು ಮನೆಗೆ ಹೋದೆ. ಜ್ಯೂಸ್ ಮಾಡಿಕೊಟ್ಟರು. ನಂತರ ಹಾಗೆಯೇ ಮಾತನಾಡುತ್ತಿದ್ದಾಗ ಎಷ್ಟು ಜನ ಮಕ್ಕಳಮ್ಮ ನಿಮಗೆ, ಏನೇನು ಓದುತ್ತಿದ್ದಾರೆ ಎಂದೇ ಅದಕ್ಕೆ ಆಕೆ ಉತ್ತರಿಸುತ್ತ ಸಾರ್ ನನಗೆ ಇಬ್ಬರು ಗಂಡು ಮಕ್ಕಳು ಒಬ್ಬ 4ನೇ ತರಗತಿ ಮತ್ತೊಬ್ಬ 2ನೇ ತರಗತಿ ಎಂದು ಉತ್ತರಿಸಿದರು. 
ಅದೇ ಸಂದರ್ಭದಲ್ಲಿ ಆಕೆ ನನಗೊಂದು ಪಶ್ನೆ ಹಾಕಿದರು ಸಾರ್ ನಿಮಗೆ ಎಷ್ಟು ಜನ ಮಕ್ಕಳು ಎಂದು.. ಈ ಪ್ರಶ್ನೆ ನಾನು ಖಂಡಿತಾ ನಿರೀಕ್ಷಿಸರಿರಲಿಲ್ಲ, ಇಲ್ಲಮ್ಮ ನಾನು ಇನ್ನು ಮದುವೆಯಾಗಿಲ್ಲಮ್ಮ ಎಂದೇ. ಯಾಕೆ ಸಾರ್ ಎಂದಳು, ಇನ್ನು ಎರಡು ವರ್ಷಗಳು ಹೋಗಲಿ ತಾಯಿ, ಇರುವ ಕಷ್ಟಗಳು ಬಗೆಹರಿದರೆ ಮುಂದೆ ನೋಡೊಣ ಎಂದೇ, ಅದಕ್ಕೆ ಆಕೆ ಸಾರ್ ನಿಮಗೆ ಕಷ್ಟಗಳು ಇದೆಯೇ ಎಂದಳು. ಹೌದಮ್ಮ ಅದೇನು ಆಗೆ ಕೇಳುತ್ತಿರಾ, ಕಷ್ಟಗಳು ಇಲ್ಲದ ವ್ಯಕ್ತಿ ಯಾರು ಇದ್ದಾರೇ ಹೇಳಿ. ಅಲ್ಲಾ ಸಾರ್ ನಿಮ್ಮನ್ನು ನೋಡಿದರೆ ಹಾಗೆ ಕಾಣಿಸಲ್ಲ. ನೀವು ಸದಾ ನಗುತ್ತಿರುತ್ತೀರಾ, ನಿಮ್ಮ ನಗು ನೋಡಿದರೆ ಹೇಳಬಹುದು ನಿಮಗೆ ಕಷ್ಟಗಳು ಇಲ್ಲ ಎಂದರು. ನಗುವವರಿಗೆ ಕಷ್ಟಗಳು ಇಲ್ಲ ಎಂದು ಹೇಳಿದವರು ಯಾರಮ್ಮ ಎಂದು ಹೇಳಿ ಕೆಲಸದ ನಿಮಿತ್ತ ಅಲ್ಲಿಂದ ಹೊರಟೆ. 
ನನ್ನ ಕೆಲ ಸ್ನೇಹಿತರು ಆಗಾಗ ಕೇಳುತ್ತಾರೆ. ನೀನು ಸದಾ ನಗುತ್ತಲೇ ಇರುತ್ತಿಯಾ ಅದ್ಯಾವ ರೀತಿ.. ಅಷ್ಟೊಂದು ಆಸ್ತಿ, ಹಣ ನಿನ್ನ ಬಳಿ ಇದೆಯೇ, ಇಲ್ಲದಿದ್ದರೆ ನಗಲು ಮನಸ್ಸು ಎಲ್ಲಿತಾನೇ ಬರುತ್ತದೆ. ನಿಜ ಬಹುಪಾಲು ಜನ ಅಂದುಕೊಳ್ಳುವುದು ಯಾರಾದರೂ ಸದಾ ಹಸನ್ಮುಕಿಯಾಗಿ ನಗುತ್ತಿದ್ದರೆ ಅವರ ಬಳಿ ಬಹಳ ಆಸ್ತಿ, ಹಣ, ಜಮೀನು ಇದೆ. ಹಾಗೆಯೇ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ಭಾವಿಸಿರುತ್ತಾರೆ. ಆದರೆ ಬೇರೆಯವರಿಗೆ ಹೋಲಿಕೆ ಮಾಡಿಕೊಂಡರೆ ಸದಾ ನಗುತ್ತ ಮಾತನಾಡುವವರಿಗೆ ಹೆಚ್ಚು ಸಮಸ್ಯೆಗಳಿರುತ್ತದೆ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. 
ನಮ್ಮ ಎದುರಿಗೆ ಬಂದು ಮಾತನಾಡುವ ವ್ಯಕ್ತಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆತನಿಗೆ ಅಗತ್ಯವಿಲ್ಲ. ಆತನಿಗೆ ಬೇಕಾಗಿರುವುದದು ಖುಷಿಯಿಂದ ನಾವು ಮಾತನಾಡಿಸುತ್ತವೆಯೇ ಇಲ್ಲವೇ ಎಂಬುವುದು ಅಷ್ಟೇ. ಸಮಸ್ಯೆಗಳು ಇದೇ ಎಂದು ಆಲೋಚಿಸುತ್ತ ಇರುವ ಸಮಯವನ್ನು ನೋವಿನಿಂದ ಕಳೆಯುವ ಬದಲು ಅದೆಲ್ಲವನ್ನು ಮರೆತು ನಗುತ್ತ ಖುಷಿಯಿಂದ ಜೀವನ ಸಾಗಿಸುವುದು ಒಳಿತು. 
ಒಬ್ಬ ಶಿಬಿರಾರ್ಥಿ ಸಾರ್ ನೀವು ಒಳ್ಳೆಯವರೋ, ಕೆಟ್ಟೊವರೋ ನನಗೆ ಗೊತ್ತಿಲ್ಲ. ಆದರೆ ಒಂದಂತು ಸತ್ಯ ನೀವು ಸದಾ ಕಾಲ ನಗುತ್ತಲೇ ಮಾತನಾಡುತ್ತಿರಾ, ಅದು ನನಗೆ ಇಷ್ಟವಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದ.
ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ಇದ್ದರು. ಅವರು ತುಂಬ ಬುದ್ದಿವಂತರು. ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿದ್ದವರು. ವಿಷಯದ ಬಗ್ಗೆ ಆಳವಾದ ಜ್ಞಾನವಿತ್ತು. ಆದರೂ ಅವರ ಪಾಠ ಮಾಡುವಾಗ ಬಹುಪಾಲು ವಿದ್ಯಾರ್ಥಿಗಳಿಗೆ ಬೇಸರವಾದರೆ, ಕೆಲವರಿಗಂತೂ ನಿದ್ದೆ ಬರುತ್ತಿತ್ತು. ಅದಕ್ಕೆ ಒಂದೇ ಕಾರಣ ಅವರು ಪಾಠ ಮಾಡುವಾಗ ಅವರ ಮುಖ ಕೋಪದಿಂದ ಕೂಡಿರುತ್ತಿತ್ತು. ಅಪ್ಪಿತಪ್ಪಿಯು ನಗುತ್ತಿರಲಿಲ್ಲ. ಅವರ ಮುಖ ನೋಡಿದರೆ ಬೇಸರ ಆಗುತ್ತಿತ್ತು. ಅವರು ಬುದ್ದಿವಂತರು, ಆದರೆ ನಗು ಎಂಬ ಅಮೂಲ್ಯವಾದ ಅಂಶ ಅಳವಡಿಸಿಕೊಳ್ಳುವುದನ್ನು ಮರೆತು ಬಿಟ್ಟಿದ್ದರು. ಅದರ ಎಫೆಕ್ಟ್ ಅವರ ಕ್ಲಾಸಿನಲ್ಲಿ ಕಾಣುತ್ತಿತ್ತು.  
ನಿಮಗೆ ಗೊತ್ತಿದೆಯೋ ಇಲ್ಲವೋ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುವ ತಾಕತ್ತು ನಗುವಿಗೆ ಇದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿ ನಗುವಿಗೆ ಇದೆ. ಹೆಚ್ಚು ನಗುವವರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುತ್ತಾರೆ.  ಅಷ್ಟೇಕೆ ನಗುತ್ತ ಜೀವನ ಸಾಗಿಸುವವರಿಗೆ ಹೆಚ್ಚು ಜನ ಸ್ನೇಹಿತರಾಗುತ್ತಾರೆ, ಗೌರವಿಸುತ್ತಾರೆ. ನಗುತ್ತ ಜೀವನ ಸಾಗಿಸುವವರು ಒಳ್ಳೆಯ ಹಾದಿಯನ್ನೇ ಹಿಡಿಯುತ್ತಾರೆ. ಬೇರೆಯವರ ಹೃದಯವನ್ನು ಗೆಲ್ಲುವ ತಾಕತ್ತು, ಸಾಮರ್ಥ್ಯ ಇರುವುದು ಏಕೈಕ ನಗುವೆಂಬ ಅಸ್ತ್ರಕ್ಕೆ ಮಾತ್ರ. 
ಇಂದು ಕೆಲ ನಗರಗಳಲ್ಲಿ ಲಾಪಿಂಗ್ ಕ್ಲಬ್ ಗಳು ನಡೆಯುತ್ತವೆ. ಅಲ್ಲಿ ಎಲ್ಲಾ ವಯೋಮಾನದವರು ಬೇಸರ ಮರೆತು ಖುಷಿಯಾಗಿ ನಕ್ಕಿ ಆರೋಗ್ಯ ವೃದ್ದಿಸಿಕೊಳ್ಳುತ್ತಾರೆ. ನಗುವಿನ ಉಪಯೋಗಗಳು ಹತ್ತು ಹಲವು.
ಆದರೆ ಬೇರೆಯವರಿಗೆ ನೋವು ಕೊಡುವ ರೀತಿಯ ನಗು ಅಗತ್ಯವಿಲ್ಲ. ಸಂದರ್ಭ, ಸನ್ನಿವೇಶದಲ್ಲಿ ಅಗತ್ಯವಿಲ್ಲದಿದ್ದರು ಸುಮ್ಮನೆ ನಗುವುದು ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುತ್ತದೆ. ಇಂಗ್ಲೀಷ್ನಲ್ಲಿ ಒಂದು ಮಾತಿದೆ. laughing is the best medicine, but if you're laughing for no reason, you need medicine. ನಗುವು ಜೀವನೋತ್ಸಾಹಕ್ಕೆ ಒಂದು ಒಳ್ಳೆಯ ಔಷಧಿ. ಆದರೆ ಕಾರಣವಿಲ್ಲದೆ ನಕ್ಕರೆ ನಮಗೆ ಔಷಧಿ ಅಗತ್ಯವಿದೆ ಎಂದರ್ಥ. ಅಂದರೆ ನಗು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಅಂದಹಾಗೆ ನಗುವಿಗೂ ಒಂದು ದಿನವಿದೆ ಗೊತ್ತಾ. ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರ ವಿಶ್ವ ನಗುವಿನ ದಿನ (ವರ್ಲ್ಡ್ ಸ್ಮೈಲ್ ಡೇ) ಎಂದು ಆಚರಿಸಲಾಗುತ್ತದೆ. 
ಏನಿವೇ ಇನ್ನಾದ್ರೂ ಬೇಸರ ಬಿಟ್ಟು ಸ್ವಲ್ಪ ನಕ್ಕಿ ಪ್ಲೀಸ್..

ಬುಧವಾರ, ಮೇ 8, 2019

ಸಕ್ಸಸ್ ನ ಸೀಕ್ರೆಟ್, ಗೂಗಲ್ ನಲ್ಲೂ ಸಿಗಲ್ಲ..!

⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಒಮ್ಮೆ ಹೈದರಾಬಾದ್ ನಗರಕ್ಕೆ ಹೋಗಿದ್ದೆ. ಹೈದರಾಬಾದಿನಲ್ಲೂ ನೋಡಬಹುದಾದ ಹತ್ತಾರು ಪ್ರವಾಸಿ ಸ್ಥಳಗಳಿದ್ದು, ಅವುಗಳನ್ನು ನೋಡುವ ಸಲುವಾಗಿ ತೆರಳಿದ್ದೆ. ಮೊದಲ ಬಾರಿ ಹೈದರಾಬಾದ್ ಗೆ ಹೋಗಿದ್ದ ಕಾರಣ ನಗರದ ಪರಿಚಯ ಅಷ್ಟಕಷ್ಟೇ. ಆದರೂ ಭಾಷೆ ಗೊತ್ತಿದ್ದರಿಂದ ಸಮಸ್ಯೆಯಾಗಲಿಲ್ಲ. 
ಆಗೋ ಈಗೋ ಚಾರ್ ಮಿನಾರ್ ತಲುಪಿದೆ. ಸಿನಿಮಾಗಳಲ್ಲಿ ಹಲವು ಬಾರಿ ನೋಡಿದ್ದ ನನಗೆ ಚಾರ್ ಮಿನಾರ್ ಹತ್ತಿರದಿಂದ ನೋಡಿದಾಗ ಖುಷಿಯಾಯಿತು. ಅಲ್ಲಿಂದ ಗೋಲ್ಕಂಡ ಪೋರ್ಟ್ ನತ್ತ ಪಯಣ, ತುಂಬಾ ಪುರಾತನವಾದ ಕೋಟೆ ಅದು, ಹತ್ತಿ ಇಳಿಯುವಷ್ಟರಲ್ಲಿ ಬೆವರು ಇಳಿಯುತ್ತದೆ. ಒಂದು ದಿನ ಪೂರ್ತಿ ನೋಡಿದರೂ ಸಾಲದು. ಅಲ್ಲಿಂದ ಹುಸೇನ್ ಸಾಗರ್ ಇದು ದೊಡ್ಡದಾದ ಕೆರೆ. ಇದು ನೋಡಿದ ನಂತರ ಹೊರಟಿದ್ದು ಸಲಾರ್ ಜಂಗ್ ಮ್ಯೂಸಿಯಂ, ಅಬ್ಬಾ ಈ ವಸ್ತು ಸಂಗ್ರಹಾಲಯವಂತು ಹೈದರಾಬಾದ್ ಪ್ರಾಂತ್ಯವನ್ನು ಆಳಿದ ರಾಜರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ತಿಳಿಸುತ್ತದೆ. ಮ್ಯೂಸಿಯಂ ನಾಲ್ಕು, ಐದು ಮಹಡಿಗಳಲ್ಲಿ ಇದೆ, ತುಂಬಾ ದೊಡ್ಡದು.
ಹೈದಾರಬಾದ್ ನ ಸುತ್ತಾಟ ಮಧ್ಯೆ ರಸ್ತೆಯೊಂದರಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ ಮೇಲೆ ಸಿಕಿಂದ್ರಾಬಾದ್ ಬೋರ್ಡು ಇತ್ತು.ಚಲನ ಚಿತ್ರಗಳಲ್ಲಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ ಹೆಸರು ಕೇಳಿದ್ದ ನೆನಪು ಬಿಟ್ಟರೆ ಬೇರೆನೂ ಗೊತ್ತಿರಲಿಲ್ಲ. ಸಿಕಿಂದ್ರಾಬಾದ್ ಒಮ್ಮೆ ನೋಡಿ ಬಿಡೋಣ ಎಂದು ಬಸ್ ಹತ್ತಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣಕ್ಕೆ ಬಂದೆ. ಹಾಗೆಯೇ ನಡೆದು ಮುಂದೆ ಹೋಗುತ್ತಿದ್ದಾಗ ರಸ್ತೆಯ ಭಾಗವೊಂದರಲ್ಲಿ ಸ್ವಾಮೀಜಿಯೊಬ್ಬರ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಹಾಕಲಾಗಿತ್ತು. ಅದೇಕೊ ಉಪನ್ಯಾಸ ಕೇಳುವ ಮನಸ್ಸಾಯಿತು. ಉಪನ್ಯಾಸದ ಸ್ಥಳ ಹುಡುತ್ತ ಹೊರಟರೆ ದೊಡ್ಡ ದೇಗುಲವೊಂದು ಕಾಣಿಸಿತು. ನನಗೂ ಬೆಳಗ್ಗೆಯಿಂದ ಸುತ್ತಾಡಿ ಸಾಕಾಗಿತ್ತು, ಸರಿ ಎಂದು ಒಳಗೆ ಹೋಗಿ ದೇವರ ದರ್ಶನ ಮಾಡಿದ ನಂತರ ಅಲ್ಲಿಯೇ ಹಿರಿಯ ಸ್ವಾಮೀಜಿಯವರೊಬ್ಬರ ಧಾರ್ಮಿ ಕ ಉಪನ್ಯಾಸ ಕಾರ್ಯಕ್ರಮವನ್ನು ಕೆಲವೊತ್ತು ಕೇಳೋಣ ಎಂದು ಅಲ್ಲಿಯೇ ಕೂತೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಸಮೂಹವಿತ್ತು. 
ಸ್ವಾಮೀಜಿ ತಮ್ಮ ಉಪನ್ಯಾಸ ಪ್ರಾರಂಭಿಸುತ್ತ ಮಧ್ಯದಲ್ಲಿ ಒಂದು ಪ್ರಶ್ನೆ ಕೇಳಿದರು ಸಕ್ಸಸ್ ಎಂದರೆ ಏನು ? ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಯುವಕ ಸಕ್ಸಸ್ ಎಂದರೆ ಇಂಜಿನಿಯರ್ ಆಗಿ ತಿಂಗಳಿಗೆ 1 ಲಕ್ಷ ಸಂಬಳವನ್ನು ಪಡೆದರೆ ಅದೇ ಸಕ್ಸಸ್ ಎಂದ. ಸ್ವಾಮೀಜಿ ಮತ್ತೆ ಪ್ರಶ್ನೆ ಕೇಳಿದರೂ ಸಕ್ಸಸ್ ಎಂದರೆ ಏನು ? ಆಗ ಒಬ್ಬ ಹುಡುಗಿ ಉತ್ತರ ಕೊಟ್ಟಳು ಸಕ್ಸಸ್ ಎಂದರೆ ಐ.ಎ.ಎಸ್ ಆಗುವುದು. ಐ.ಎ.ಎಸ್ ಪಾಸ್ ಆದರೆ ಜೀವನದಲ್ಲಿ ಸಕ್ಸಸ್ ಆದಂಗೆ ಎಂದಳು. ಅದ್ಯಾಕೋ ಸ್ವಾಮೀಜಿಗೆ ಈ ಉತ್ತರ ಇಷ್ಟವಾಗಲಿಲ್ಲ ನಾನು ಮತ್ತೇ ಅದೇ ಪ್ರಶ್ನೆ ಕೇಳುತ್ತೇನೆ ಸಕ್ಸಸ್ ಎಂದರೆ ಏನು ? ಎಂದರು. ಮಧ್ಯ ವಯಸ್ಸಿನ ಒಬ್ಬ ವ್ಯಕ್ತಿ ಉತ್ತರಿಸುತ್ತ ನಾನು ಪದವಿ ಪಡೆದಿದ್ದೇನೆ. ಕೆಲಸವು ಸಿಕ್ಕಿದೆ. ಒಳ್ಳೆಯ ವೇತನವು ಬರುತ್ತದೆ. ಮುಂದೆ ಮದುವೆಯಾಗುತ್ತೇನೆ, ಆ ನಂತರ ನನ್ನ ಮಕ್ಕಳನ್ನು ಚೆನ್ನಾಗಿ ಓದಿಸುತ್ತೇನೆ. ಅವರನ್ನು ಒಳ್ಳೆಯ ಕೆಲಸ ಪಡೆಯುವಂತೆ ತಯಾರು ಮಾಡುತ್ತಾನೆ. ನನ್ನ ಕುಟುಂಬಕ್ಕೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಇವಿಷ್ಟು ನಾನು ಅಷ್ಟುಕಟ್ಟಾಗಿ ನೆರವೇರಿಸಿದರೆ ಜೀವನದಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ಆದಂಗೆ ಅರ್ಥ ಎಂದು ಪಠಪಠಣೆ ಉತ್ತರಿಸಿದ.  
ಕೆಲವರ ಅಭಿಪ್ರಾಯಗಳನ್ನು ಆಲಿಸಿದ ನಂತರ ಸ್ವಾಮಿಜೀಗಳು ತಮ್ಮ ಭಾಷಣವನ್ನು ಮುಂದುವರೆಸುತ್ತ ಸಕ್ಸಸ್ ಎಂಬ ಇಂಗ್ಲೀಷ್ ಪದದ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಷ್ಟೇಕೆ ನಿಮ್ಮ ಕೈಗಳಲ್ಲಿ ಮೊಬೈಲ್ ಪೋನ್ ಗಳು ಇವೆ. ಅದರಲ್ಲಿ ಇಂಟರ್ ನೆಟ್ ಸಂಪರ್ಕವಂತು ಇದ್ದೇ ಇರುತ್ತದೆ. ಗೂಗಲ್ ಗೆ ಹೋಗಿ ಸಕ್ಸಸ್ ಎಂದರೆ ಏನು ಎಂದು ಪ್ರಶ್ನೆ ಟೈಪಿಸಿ ಏನು ಉತ್ತರ ಬರುತ್ತದೋ ನನಗೆ ಹೇಳಿ ಎಂದರು. ಸ್ವಾಮಿಜೀಗಳು ಪಿ.ಹೆಚ್.ಡಿ ಓದಿದ್ದರಿಂದ (ಬ್ಯಾನರ್ ನಲ್ಲಿ ವಿದ್ಯಾಬ್ಯಾಸದ ಬಗ್ಗೆ ನಮೂದಿಸಿದ್ದರು) ಟೆಕ್ನಾಲಜಿಯ ಅರಿವು ಇತ್ತು.

ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಬಹುತೇಕರು ತಮ್ಮ ಕೈಯಲಿದ್ದ ಮೊಬೈಲಿನಲ್ಲಿ ಸಕ್ಸಸ್ ಎಂದರೇನು ಎಂದು ಟೈಪು ಮಾಡಿದ್ದೇ ತಡ ಸಾವಿರಾರು ಉತ್ತರಗಳು ಗೂಗಲ್ ನಲ್ಲಿ ಹರಿದಾಡಿತು. ಇವುಗಳಲ್ಲಿ ಯಾವುದನ್ನೂ ಆಯ್ದುಕೊಂಡು ಸ್ವಾಮೀಜಿಗೆ ಹೇಳಬೇಕು ಎಂದು ಸಭಿಕರಿಗೆ ಅರ್ಥವಾಗಲಿಲ್ಲ. ಒಬ್ಬರಂತೂ ಸ್ವಾಮಿಜೀ ನೀವೇಳಿದಂಗೆ ಸಕ್ಸಸ್ ಎಂದರೆ ಏನು ಎಂದು ಗೂಗಲ್ ನಲ್ಲಿ ಪ್ರಶ್ನೆ ಹಾಕಿದರೆ ಸಾವಿರಾರು ಉತ್ತರಗಳೇನು ಸಿಕ್ಕಿದೆ. ಅದರಲ್ಲಿ ಸೂಕ್ತ ಯಾವುದು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದ. 
ಮುಗುಳ್ನೆಗೆಯಿಂದ ನಕ್ಕ ಸ್ವಾಮಿಜೀ ನೀವೇಲ್ಲರು ನನ್ನನ್ನು ಕ್ಷಮಿಸಬೇಕು ಇಷ್ಟೊತ್ತು ನಿಮಗೆ ತೊಂದರೆ ಕೊಟ್ಟಿದ್ದಕ್ಕೆ, ತಲೆ ಕೆಡಿಸಿದಕ್ಕೆ. ಸಕ್ಸಸ್ ಎಂದರೆ ಏನು ? ಅದಕ್ಕೆ ಸೂಕ್ತ ಉತ್ತರ ನನ್ನಿಂದ ನೀವೆಲ್ಲರೂ ನಿರೀಕ್ಷಿಸುತ್ತಿದ್ದಿರಾ ಎಂದು ಗೊತ್ತು. ಈಗ ಆ ವಿಷಯದತ್ತ ಹೊರಳಿದರೆ ಪ್ರತಿಯೊಬ್ಬರು ತಾವು ಸಕ್ಸಸ್ ಆಗಬೇಕು ಎಂದು ಭಾವಿಸುತ್ತಾರೆ ಹಾಗೂ ಜೀವನ ಪೂರ್ತಿ ಹೋರಾಟ ನಡೆಸುತ್ತಾರೆ. ಅದರಲ್ಲಿ ಕೆಲವರು ಸಫಲರಾಗುತ್ತಾರೆ, ಕೆಲವರು ವಿಫಲರಾಗುತ್ತಾರೆ. ಸಕ್ಸಸ್ ಎಂಬ ಈ ಮೂರಕ್ಷರ ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗವೂ ಹೌದು.  
ಸಕ್ಸಸ್ ಎಂದರೆ ನೀವು ಅಂದುಕೊಂಡಂಗೆ ದೊಡ್ಡ ವ್ಯಾಖ್ಯಾನವೇನಿಲ್ಲ. ಸುಲಭವಾಗಿ ಹೇಳಬಹುದಾದರೆ ಸಕ್ಸಸ್ ಎಂದರೆ ನಾವು ಈ ಭೂಮಿಯ ಮೇಲೆ ಇಲ್ಲದಿದ್ದರು ಕೂಡ ನಮ್ಮನ್ನು ಕನಿಷ್ಟ ಕೆಲವು ಮಂದಿಯಾದರೂ ನೆನಪಿಸಿಕೊಂಡು ನಮ್ಮ ಬಗ್ಗೆ ಒಳ್ಳೆಯ ಭಾವನೆ ಹಾಗೂ ಪ್ರೀತಿ ವ್ಯಕ್ತಪಡಿಸಿದರೆ ಅದಕ್ಕಿಂದ ದೊಡ್ಡ ಸಾಧನೆ, ಸಕ್ಸಸ್ ಬೇರೆ ಯಾವುದಿದೇ ಹೇಳಿ ಎಂದು ಅರ್ಥಗರ್ಭಿತವಾಗಿ ಸ್ವಾಮಿಜೀ ಉತ್ತರಿಸಿದರು.
ಇಂದು ಸಮಾಜದಲ್ಲಿ ಏನಾಗಿದೆ ಎಂದರೆ ನಿಮ್ಮೆಲ್ಲರ ಪ್ರಕಾರ ತಿಂಗಳಿಗೆ ಲಕ್ಷ ರೂ. ಸಂಪಾದನೆ ಮಾಡಿದರೆ ಸಕ್ಸಸ್. ಐ.ಎ.ಎಸ್ ಅಧಿಕಾರಿಯಾದರೆ ಸಕ್ಸಸ್. ಡಾಕ್ಟರ್, ಇಂಜಿನಿಯರ್ ಆದರಂತೂ ಸಕ್ಸಸ್ ತಲುಪುಬಿಟ್ಟಿದ್ದೇವೆ ಎಂದು ಆಕಾಶದಲ್ಲೇ ತೇಲುತ್ತೇವೆ. ನೆನಪಿನಲ್ಲಿಟ್ಟುಕೊಳ್ಳಿ ದೇಶದಲ್ಲಿ ಎಷ್ಟೋ ಜನ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಸಾವಿರಾರು ಜನ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವಿಪರ್ಯಾಸವೆಂದರೆ ಲಕ್ಷ ರೂ ಗಳಲ್ಲಿ ಸಂಪಾದನೆ ಮಾಡುತ್ತಿರುವ ಶೇ.99 % ಜನ ಯಾರಿಗೂ ಗೊತ್ತಿಲ್ಲ. ಅಷ್ಟೇಕೆ ಸ್ವಾತಂತ್ರ್ಯ ಬಂದಾಗನಿಂದಲೂ ಆದ ಸಾವಿರಾರು ಐ.ಎ.ಎಸ್, ಐ.ಪಿ.ಎಸ್ ಸೇರಿದಂತೆ ಮತ್ತಿತರ ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳ ಪೈಕಿ ನಮ್ಮ ಎರಡು ಕೈಗಳಲ್ಲಿ ಇರುವ ಹತ್ತು ಬೆರಳುಗಳ ಸಂಖ್ಯೆಯ ಅಧಿಕಾರಿಗಳ ಹೆಸರಷ್ಟೇ ನಮಗೆ ನೆನಪಿದೆ ಎಂದರು ಸ್ವಾಮೀಜಿ.
ಕೋಟ್ಯಾಂತರ ಆಸ್ತಿ, ಅಧಿಕಾರ, ಸಂಬಳ ಪಡೆಯುವವರೆಲ್ಲಾ ಸಕ್ಸಸ್ ಆಗಿದ್ದಾರೆ ಎಂದರೆ  ಅವರು ಯಾರು ಸಮಾಜಕ್ಕೆ ಇಂದಿಗೂ ಗೊತ್ತೆ ಇಲ್ಲವಲ್ಲ. ಸಕ್ಸಸ್ ಎಂದರೆ ಅದು ನಮ್ಮ ಕಣ್ಣಿಗೆ ಕಾಣದ ಶಕ್ತಿ. ಕನಿಷ್ಟ ಅವನು ಪ್ರಾಥಮಿಕ ಶಾಲೆಗೆ ಹೋಗದಿದ್ದರು, ಲಕ್ಷಗಳಲ್ಲಿ ಸಂಪಾದಿಸದಿದ್ದರು, ಕಾರು, ಬಂಗಲೆ, ಆಳುಗಳು ಇಲ್ಲದಿದ್ದರು ಕೂಡ ಯಾರಾದರೂ ಕಷ್ಟ ಎಂದು ಬಂದಾಗ ಯಾರ ಮನಸ್ಸು ಕರಗುತ್ತದೋ, ತಮ್ಮ ಕೈಯಿಂದ ಆಗುವ ಸಹಾಯ ಕಷ್ಟದಲ್ಲಿ ಇದ್ದವರು ಕೇಳುವುದಕ್ಕಿಂದ ಮುಂಚೆಯೇ ಮಾಡಬೇಕೆಂಬ ನಿಷ್ಕಲ್ಮಷ ಮನಸ್ಸು ಇರುತ್ತದೋ, ಅಹಂಕಾರ, ಅಸೂಹೆ, ದರ್ಪ, ನಾನೇ ಹೆಚ್ಚು ಎಂಬ ಕಲ್ಪನೆ ಇಲ್ಲದೇ ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಸರಳವಾಗಿ ಜೀವನ ಸಾಗಿಸುತ್ತಾನೋ ಅವನೇ ನಿಜವಾದ ವ್ಯಕ್ತಿತ್ವವುಳ್ಳ ಮನುಷ್ಯ. 
ಆತ ನಿಜವಾಗಲೂ ಜೀವನದಲ್ಲಿ ಸಕ್ಸಸ್ ಆದ ಎಂದೇ ಅರ್ಥ. ಮಹಾತ್ಮ ಗಾಂಧಿಜೀ, ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಲಾಲ್ ಬಹುದ್ದೂರ್ ಶಾಸ್ತ್ರಿಗಳು ಸೇರಿದಂತೆ ಮತ್ತಿತರರು ಲಕ್ಷಗಳಲ್ಲಿ ವೇತನ ಪಡೆಯುತ್ತಿರಲಿಲ್ಲ. ಕಾರು ಬಂಗಲೆ ಅವರ ಹತ್ತಿರ ಇರಲಿಲ್ಲ. ಆದರೂ ಸಕ್ಸಸ್ ಆದ ವ್ಯಕ್ತಿಗಳೆಂದರೆ ತಕ್ಷಣ ನಮಗೆ ನೆನಪಾಗುವುದು ಇಂತವರು ಮಾತ್ರ. ಶತಮಾನಗಳು ಕಳೆದರೂ ಇಂತಹವರು ಸಮಾಜದಿಂದ ದೂರಿಸರಿಯಲ್ಲ ಎಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಸಭಿಕರ ಕಣ್ಣನ್ನು ಸ್ವಾಮಿಜೀಗಳು ತೆರೆಸಿದರು.
ಹಾಗೇಯೇ ಸ್ವಾಮಿಜೀಯವರು ಮುಖ್ಯ ಅಂಶದತ್ತ ಪ್ರಸ್ತಾಪಿಸಿದರು, ನಮ್ಮ ಜೀವನದ ಬಹುಪಾಲು ಸಮಯವನ್ನು ಬೇರೆಯವರೂ ಬೆಳೆಯಬಾರದು ಎಂಬ ಕಾರಣಕ್ಕಾಗಿಯೇ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಬಿಡುತ್ತೇವೆ. ಬೇರೆಯವರೂ ಬೆಳೆಯಬಾರದು ಎಂದು ವಿನಿಯೋಗಿಸುವ ಸಮಯದಲ್ಲಿ ಅರ್ಧ ಭಾಗವನ್ನು ನಾವು ಬೆಳೆಯಬೇಕು ಎಂದು ಬಳಸಿಕೊಂಡರೆ ಸಕ್ಸಸ್ ಎಲ್ಲಿ ತಾನೇ ನಮ್ಮಿಂದ ದೂರ ಹೋಗುತ್ತದೆ. ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದು ನಮ್ಮ ಜನಕ್ಕೆ ಅರ್ಥವಾಗಲ್ಲ ಎಂದು ಕುಟುಕಿದರು.
ಇಷ್ಟಾಗುವ ಹೊತ್ತಿಗೆ ಮಳೆ ಮುನ್ಸೂಚನೆ ಕಾಣುತ್ತಿತ್ತು. ಆ ಕಾರಣದಿಂದ ಅಲ್ಲಿಂದ ಎದ್ದು ಬಸ್ ಹತ್ತಿ ಪಯಣ ಬೆಳೆಸಿದೆ. ಬಸ್ ನಲ್ಲಿ ಹೋಗುತ್ತಿದ್ದಾಗ ಸ್ವಾಮಿಜೀಗಳ ಆ ಉಪನ್ಯಾಸವು ನನಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು, ಆಲೋಚಿಸುವಂತೆ ಮಾಡಿತು. ಸ್ವಾಮೀಜಿಗಳ ಆ ಮಾತು ಇಂದಿನ ಸಮಾಜದ ನಡೆಯುತ್ತಿರುವ ದಾರಿಯ ಬಗ್ಗೆ ವಿಶ್ಲೇಷಿಸುತ್ತದೆ. ಯಾವುದಾದರೂ ಒಂದು ಹುದ್ದೆ, ಲಕ್ಷಗಳಲ್ಲಿ ಸಂಬಳ, ಕಾರು, ಸೈಟು, ಜಮೀನು ಸಂಪಾದಿಸಿಬಿಟ್ಟರೆ ಜೀವನದಲ್ಲಿ ನಾವೇ ಶ್ರೇಷ್ಟ ಎಂದು ಭಾವಿಸಿಕೊಳ್ಳುತ್ತೇವೆ. ಸಕ್ಸಸ್ ನ ತುತ್ತ ತುದಿಗೆ ತಲುಪಿಯೇ ಬಿಟ್ಟೆವೆಂದು ತೇಲಾಡಿ ಬಿಡುತ್ತೇವೆ. ವಿಶೇಷವೆಂದರೆ ನಾವು ತಿಳಿದುಕೊಂಡಗೆ, ಮಾಡಿದ್ದು ಸಾಧನೆಯೇ ಅಲ್ಲ, ಅದು ಸಕ್ಸಸ್ ನ ಒಂದು ಭಾಗವಷ್ಟೇ ಎಂದು ಗೊತ್ತಾಗುವಷ್ಟಿಗೇ ಜೀವನವೇ ಮುಗಿಸಿಬಿಟ್ಟಿರುತ್ತೇವೆ. ಭ್ರಮೆಯಲ್ಲೇ ಜೀವನ ಮುಳುಗಿ ಹೋಗಿರುತ್ತದೆ.
ಜೀವನದಲ್ಲಿ ಸಕ್ಸಸ್ ಪಡೆಯಬೇಕು ಎಂದು ಏನೇನೋ ಮಾಡುತ್ತೇವೆ. ಸಕ್ಸಸ್ ಎಂದರೆ ಏನು ಎಂದು ನಿರ್ದಿಷ್ಟವಾಗಿ ಗೊತ್ತಿಲ್ಲದಿದ್ದರು ಸಕ್ಸಸ್ ಅನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ಎಷ್ಟೋ ಬಾರಿ ನಾವು ಬೆಳೆಯಬೇಕು ಎಂದು ಯಾರು ಯಾರಿಗೋ ಕಷ್ಟ ಕೊಡುತ್ತೇವೆ. ಯಾರ ಯಾರ ಮೇಲೋ ಕೋಪ ಮಾಡಿಕೊಂಡು, ದೂರ ಮಾಡಿಕೊಳ್ಳುತ್ತೇವೆ. ಇನ್ನೊಬ್ಬರು ಬೆಳೆಯದಂಗೆ ನೋಡಿಕೊಳ್ಳುತ್ತೇವೆ. ಅಸೂಹೆ, ಅಹಂಕಾರ ತಲೆ ತುಂಬ ತುಂಬಿಸಿಕೊಳ್ಳುತ್ತೇವೆ. ಅಂತಿಮವಾಗಿ ಸಣ್ಣದಾಗಿ ಏನಾದರೂ ಮಾಡಿದರೆ ಅದನ್ನೇ ಸಕ್ಸಸ್ ಎಂದು ಭಾವಿಸಿ ಆತ್ಮತೃಪ್ತಿ ಪಡೆಯುತ್ತೇವೆ. 
ಒಂದಂತು ಸತ್ಯ ಸ್ವಾಮಿಜೀಯ ಮಾತಿನಂತೆ ಸಕಸ್ಸ್ ಎಂದರೆ ಹಣ, ವಸ್ತು, ಅಧಿಕಾರ ಅಲ್ಲ. ಅದು ಮನುಷ್ಯರನ್ನು ಮೀರಿದ ಕಲ್ಪನೆ. ನಮ್ಮ ಬಗ್ಗೆ ನಾಲ್ಕು ಜನ ಯಾವಾಗ ಒಳ್ಳೆದು ಮಾತನಾಡಿಕೊಳ್ಳುತ್ತಾರೋ, ನಮ್ಮ ವ್ಯಕ್ತಿತ್ವ ನೋಡಿ ಗೌರವ, ಪ್ರೀತಿ ಕೊಡಲು ಒಂದಿಬ್ಬರಾದರೂ ಜೀವನದಲ್ಲಿ ಸಿಕ್ಕರೆ ಅದೇ ಸಕ್ಸಸ್. ಡಿಕ್ಷನರಿ, ಗೂಗಲ್ ಸರ್ಚ್ ಇಂಜಿನಲ್ಲೂ ಹುಡುಕುವ ಅವಶ್ಯಕತೆ ಇಲ್ಲ. ಸಕ್ಸಸ್ ಗೆ  ಶಾರ್ಟ್ ಕಟ್ಟಂತು ಇಲ್ಲ.

ಭಾನುವಾರ, ಏಪ್ರಿಲ್ 7, 2019

ಮಾತಿನ ಮೌಲ್ಯ - ಅಮೂಲ್ಯ..



  ⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ಒಂದು ಗಮನಾರ್ಹ ಅಂಶವೆಂದರೆ ಇಂದು ನಾವು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ಬೆಳೆದಿದ್ದೇವೆ. ಅದರಲ್ಲೂ ಕಂಪ್ಯೂಟರ್ ಯುಗದಲ್ಲಿ ಇದ್ದೇವೆ. ನಮ್ಮ ಬೆರಳತುದಿಯಲ್ಲೇ ಯಾವುದೇ ಮಾಹಿತಿಯನ್ನು ಬೇಕಾದರೂ ಪಡೆದುಕೊಳ್ಳುವ ಅದ್ಬುತ ಅವಕಾಶ ಇಂಟರ್ ನೆಟ್ ಮೂಲಕ ಒದಗಿ ಬಂದಿದೆ. ಮೊಬೈಲ್ ಪೋನ್, ಕಂಪ್ಯೂಟರ್ ಗಳಂತು ಮನುಷ್ಯನ ಬದುಕನ್ನೇ ಸಂಪೂರ್ಣವಾಗಿ ಬದಲಾಯಿಸಿವೆ.
ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಇನ್ಸ್ಟ್ರಾಗ್ರಾಮ್, ಟೆಲಿಗ್ರಾಮ್ ಮುಂತಾದ ಆಪ್ ಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಬೇಕಾದ ವ್ಯಕ್ತಿಗೆ ಮೆಸೇಜ್ ಮಾಡುವ ಮೂಲಕ ಸಂವಹನ ನಡೆಸುವ ಅವಕಾಶವಿದೆ. ವಾಟ್ಸಾಪ್ ವಿಡಿಯೋ ಕಾಲಿಂಗ್, ಸ್ಕೈಪ್ ಆಪ್ ಮೂಲಕ ಬೇರೆ ದೇಶದಲ್ಲಿರುವ ವ್ಯಕ್ತಿಯೊಂದಿಗೂ ವಿಡಿಯೋ ಚಾಟ್ ಮಾಡುವ ಅನುಕೂಲವಿದೆ. ಆದರೆ ಕೆಲವೇ ದಶಕಗಳ ಹಿಂದೆ ದೂರದ ವ್ಯಕ್ತಿಗಳಿಗೆ ಏನಾದರೂ ಮಾಹಿತಿ ತಿಳಿಸಬೇಕಿದ್ದರೆ ಇದ್ದದ್ದು ಪತ್ರ ವ್ಯವಹಾರ ಮಾತ್ರ. ಇನ್ ಲ್ಯಾಂಡ್ ಅಥವಾ ಪೋಸ್ಟ್ ಕಾರ್ಡ್ ಗಳ ಮೂಲಕ ಪತ್ರ ಬರೆದು ನಮ್ಮ ಅಭಿಪ್ರಾಯ, ಅನಿಸಿಕೆಯನ್ನು ನಮ್ಮ ಆಪ್ತರಿಗೆ ತಿಳಿಸುತ್ತಿದ್ದೆವು. ಆದರೆ ಇಂದು ಸಾಮಾಜಿಕ ಮಾಧ್ಯಮಗಳು ಸಂವಹನ ಕ್ರಿಯೆಗೆ ಪರ್ಯಾಯ ಮಾರ್ಗವನ್ನು ಒದಗಿಸಿದೆ. 
ಸಂವಹನ ಮಾಡುವ ಮಾರ್ಗಗಳು, ವಿಧಾನಗಳು ಸಾಕಷ್ಟು ಬದಲಾಗಿವೆ. ಕಲ್ಪನೆಗೂ ಮೀರಿದ ರೀತಿಯಲ್ಲಿ ಸಂವಹನ ಮಾಡುವ ಅವಕಾಶವಿದೆ. ಜನರ ಚಿತ್ರಣವೂ ಬದಲಾಗಿದೆ. ವಿಪರ್ಯಾಸವೆಂದರೆ ಇಂದಿಗೂ ಕೂಡ ಎಲ್ಲಿ, ಏನು, ಹೇಗೆ? ಮಾತನಾಡಬೇಕೆಂಬ ಪರಿಜ್ಞಾನವು ಇಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಒಂದು ಸರ್ವೇ ಹೇಳುತ್ತದೆ ಶೇ.60ರಷ್ಟು ಜನರಿಗೆ ಸಂವಹನ ಕೌಶಲ್ಯ (ಮಾತುಗಾರಿಕೆ)ದಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ ಎಂದು ವರದಿ ನೀಡುತ್ತದೆ. ಅದೇ ವರದಿ ಹೇಳುತ್ತದೆ ಜನ ಬಳಸುವ ಪದಗಳು ಬಹಳ ನಿಷ್ಕಿಯ ಹಾಗೂ ಅಸಂಬದ್ದ ಅಂಶಗಳಿಂದ ಕೂಡಿರುತ್ತದೆ ಎಂದು ಹೇಳಿದೆ.
ಒಂದು ಬಾರಿ ಆಂಧ್ರಪ್ರದೇಶದ ತಿರುಪತಿ ಬಳಿಯಿರುವ ಪೊಲೀಸ್ ತರಬೇತಿ ಅಕಾಡೆಮಿ ಒಂದಕ್ಕೆ ಹೋದಾಗ ಅಲ್ಲಿ ಒಂದು ನಾಮ ಫಲಕ ಹಾಕಿದ್ದರು. ಅದರಲ್ಲಿ ಈಗಿತ್ತು ಮನಿಷಿನಿ ಬದುಕಿಂಚೇದಿ ನೋಟಿತೊ ಪಿಲ್ಚೆ ಶ್ವಾಸ, ಅಯ್ತೆ ಮಂಚಿ ಮನಿಷಿಗಾ ಬದುಕಿಂಚೇದಿ ಮಾತ್ರಂ ನೋಟಿನುಂಡಿ ವಚ್ಚೆ ಮಾಟ (ಮನುಷ್ಯನನ್ನು ಬದುಕಿಸುವುದು ಉಸಿರಾಟ, ಆದರೆ ಒಳ್ಳೆ ಮನುಷ್ಯನನ್ನಾಗಿ ಬದುಕಿಸುವುದು ಮಾತ್ರ ನಮ್ಮ ಬಾಯಿಂದ ಬರುವ ಮಾತು) ಎಂದು ಬರೆದಿತ್ತು. ಎಂತಹ  ಅರ್ಥಗರ್ಭಿತ ಮಾತಿದು. ಆ ತರಬೇತಿ ಶಾಲೆಗೆ ಬರುವ ಟ್ರೈನಿ ಪೊಲೀಸರು ಸಂವಹನ ಕೌಶಲ್ಯ ಬಗ್ಗೆ ತುಸು ಹೆಚ್ಚು ಮುತುವರ್ಜಿ ಕೊಡಲಿ ಎಂಬ ಉದ್ದೇಶದಿಂದ ಆ ತರಬೇತಿ ಸಂಸ್ಥೆಯ ಒಳಗೆ ಇಂತಹ ಹತ್ತಾರು ಸಂದೇಶಗಳನ್ನು ಸಾರುವ ನಾಮ ಫಲಕಗಳನ್ನು ಹಾಕಲಾಗಿತ್ತು. 
ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು, ಕಾಲೇಜೊಂದರಲ್ಲಿ ಭಾಷಣ ಮಾಡುತ್ತ ಪ್ರತಿಯೊಬ್ಬರು ತಮ್ಮ ಗುರಿ ತಲುಪಬೇಕಾದರೆ ಪರಿಣಾಮಕಾರಿ ಸಂವಹನಕಾರನಾಗಿರಲೇ ಬೇಕು. ಸಾಧನೆಯ ಹಾದಿಯಲ್ಲಿ ಹಲವು ವ್ಯಕ್ತಿಗಳ ಭೇಟಿ ಇರುತ್ತದೆ. ಹಲವು ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರನ್ನು ನಮ್ಮತ್ತ ಸೆಳೆಯುವ, ಎದುರಿಸುವ ಅಸ್ತ್ರವೆಂದರೆ ಮಾತುಗಾರಿಕೆ ಮಾತ್ರ. ನಾವು ಮಾತುಗಾರಿಕೆಯಲ್ಲಿ ವಿಫಲವಾದರಂತು ಸಾಧನೆ ಹಾದಿಯ ನಮ್ಮಿಂದ ಬಲು ದೂರ ಕ್ರಮಿಸುತ್ತದೆ ಎಂದು ಬಹಳ ಸ್ಪಷ್ಟವಾಗಿ ಅಬ್ದುಲ್ ಕಲಾಂ ಅವರು ಸಂವಹನ ಕೌಶಲ್ಯದ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದರು. 
ಪ್ರಮುಖ ವಿಷಯವೆಂದರೆ ನಾವು ಸಮಾಜ ಜೀವಿಗಳು. ಸಮಾಜದಲ್ಲಿಯೇ ಜೀವಿಸಬೇಕಾಗುತ್ತದೆ. ಸಮಾಜದಲ್ಲಿ ವಾಸಿಸುವುದರಿಂದ ನಮ್ಮ ಸುತ್ತ ಮುತ್ತ ನೆರೆ ಹೊರೆಯವರು, ಸ್ನೇಹಿತರು, ಬಂಧುಗಳು ಕೂಡ ವಾಸಿಸುತ್ತಾರೆ. ಅಂತವರ ಜೊತೆ ಒಳ್ಳೆಯ ಭಾಂದ್ಯವ ಬೆಳೆಸುವುದು ತೀರ ಅನಿವಾರ್ಯವು ಹೌದು. ಅವರ ಜೊತೆ ಒಳ್ಳೆಯ ಸಂಬಂಧಕ್ಕೆ ಅಡಿಪಾಯ ಹಾಕುವುದು ಸಂವಹನ. ಮಾತುಗಾರಿಕೆಯಲ್ಲಿ ಎಡವಿದರೆ ಸಂಬಂಧಗಳಲ್ಲಿ ಬಿರುಕುಬಿಟ್ಟು ವಿಶ್ವಾಸ ಕಳೆದುಕೊಳ್ಳುವುದು ಸ್ಪಷ್ಟ. 
ಆತ ವ್ಯಾಪರಸ್ಥನಾಗಲಿ, ಸರಕಾರಿ ನೌಕರನಾಗಲಿ, ಖಾಸಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವನಾಗಲಿ, ಕಾರ್ಮಿಕ, ರೈತ, ಕೂಲಿ, ವಿದ್ಯಾರ್ಥಿ ಅಥವಾ ಯಾವುದೇ ವರ್ಗದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯಾದರೂ ಸಂವಹನ ಕೌಶಲ್ಯ (ಮಾತುಗಾರಿಕೆ) ವನ್ನು ಬೆಳೆಸಿಕೊಳ್ಳುವುದು ಅಗತ್ಯ. ಬಹುಃಶ ಸಂವಹನ ಕೌಶಲ್ಯ ಇಲ್ಲದೇ ಜೀವನ ಮಾಡಬಹುದು ಎಂದು ಉದಾಹರಿಸಲು ಕೂಡ ಒಂದೇ ಒಂದು ಕ್ಷೇತ್ರವು ಇಲ್ಲ, ಅಷ್ಟರ ಮಟ್ಟಿಗೆ ಮಾತಿಗೆ ಮಹತ್ವ ಇದೆ. 
ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಮಾತಿನ ಮೌಲ್ಯದ ಬಗ್ಗೆ ವಿಶೇಷವಾದ ಗಮನ ಕೊಡುತ್ತಿದ್ದರು. ಸಂವಹನದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ಕೊಡುತ್ತಿದ್ದರು. ಅವರೆಷ್ಟರ ಮಟ್ಟಿಗೆ ಮಾತಿನ ಬಗ್ಗೆ ಜವಾಬ್ದಾರಿ ಹೊಂದಿದ್ದರೆಂದರೆ ಮಾತಿನ ಕುರಿತು ನೂರಾರು ಗಾದೆ, ನುಡಿಗಟ್ಟುಗಳನ್ನು ರಚನೆ ಮಾಡಿದ್ದರು. 
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ. ಮಾತೇ ಮುತ್ತು, ಮಾತೇ ಮೃತ್ಯು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು, ಹೀಗೆ ಒಂದೇ ಎರಡೇ  ನೂರಾರು ನುಡಿಗಟ್ಟು, ಗಾದೆ ಮಾತುಗಳು ಸಮಾಜದಲ್ಲಿ ಚಾಲ್ತಿಯಲ್ಲಿವೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ  ಸರಿಯಾಗಿ, ಸೂಕ್ತವಾಗಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಕೌಶಲ್ಯವಿದ್ದವರಿಗೆ ಜಗಳವೇ ಬರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಅರ್ಧ ಸಮಸ್ಯೆಗಳು ಬರುವುದು ಸಂವಹನದಲ್ಲಿನ ಲೋಪಗಳಿಂದ, ಮಾತಿನ ಶಕ್ತಿ ಇದ್ದವರಿಗೆ ಸಮಸ್ಯೆಗಳು ಬರುವ ಪ್ರಶ್ನೆಯೇ ಇಲ್ಲ.  

ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಎಂಬಂತೆ ಒಮ್ಮೆ ನಮ್ಮ ಬಾಯಿಂದ ಹೊರ  ಹೋದ ಪದ ಯಾರನ್ನು ತಲುಪಬೇಕು ಅವರನ್ನು ತಲುಪಿದ ನಂತರ ನಮ್ಮ ಮೇಲೆ ಯಾವ ಪರಿಣಾಮವಾದರೂ ಬೀರಬಹುದು. ಒಂದು ಬಾರಿ ಬಾಯಿಂದ ಹೊರಟ ಪದ ವಾಪಸ್ ಪಡೆಯಲು ಖಂಡಿತಾ ಸಾಧ್ಯವಿಲ್ಲ. ಅದು ಸಕಾರಾತ್ಮಕ ಅಥವಾ ನಕಾರಾತ್ಮಕ ಯಾವ ಪರಿಣಾಮವಾದರೂ ಬೀರಬಹುದು. 
ಬಹುಃಶ ಇಂತಹ ಮಾತುಗಳನ್ನು ನಮ್ಮ ಪೂರ್ವಜರು ಮಾತಿನ ಬಗ್ಗೆ ರಚಿಸಿದ್ದ ಮೂಲ ಉದ್ದೇಶ ಮುಂದಿನ ಪೀಳಿಗೆಯು ಮಾತಿನ ಮಹತ್ವ ಅರಿತು ಜೀವನ ಸಾಗಿಸಲಿ. ಸಂವಹನ ಕೌಶಲ್ಯ ವೃದ್ದಿಸಿಕೊಂಡು ಅರ್ಥಪೂರ್ಣ ಜೀವನ ನಡೆಸಲಿ ಎಂಬ ಕಲ್ಪನೆಯಿಂದ, ಆದರೆ ಆ ನುಡಿಗಟ್ಟುಗಳನ್ನು ಪಾಲಿಸುವವರು ಇಂದು ಬಹಳ ವಿರಳ ಎಂಬುವುದು ವಾಸ್ತವ. 
ಈ ಮಾತಿಗೆ ಎಂತಹ ಅದ್ಬುತ ಶಕ್ತಿ ಇದೆ ಎಂದರೆ, ಇದು ಸಂಬಂಧಗಳನ್ನು ಹತ್ತಿರ ಸೇರಿಸುವ ಮತ್ತು ಹಾಗೆಯೇ ಸ್ವಲ್ಪ ಯಾಮಾರಿದರೂ ನಮ್ಮಿಂದ ಅದೇ ಸಂಬಂಧಗಳನ್ನು ತುಂಬ ದೂರಕ್ಕೆ ಸರಿಸಿಬಿಡುವ ಶಕ್ತಿ ಇದೆ. ಎಷ್ಟೋ ಜನ ತಮ್ಮ ಹತ್ತಿರದ ಸಂಬಂಧಿಕರನ್ನು, ಆಪ್ತ ಸ್ನೇಹಿತರನ್ನು, ತಮ್ಮ ಸಹದ್ಯೋಗಿ, ಸಹಪಾಠಿಗಳನ್ನು ತಮಗೆ ಅರಿವಿಲ್ಲದೆಯೇ ದೂರಿ ಸರಿಸಿಕೊಂಡಿದ್ದಾರೆ. ಕಾರಣ ಸಂವಹನದಲ್ಲಿ ಅನುಸರಿಸಿದ ನೂನ್ಯತೆ ಹಾಗೂ ಮಾತಿನ ಮೇಲೆ ಹಿಡಿತ ಇಲ್ಲದಿರುವುದು. ನಮ್ಮಿಂದ ತಪ್ಪಾಗಿದೆ ಎಂದು ಗೊತ್ತಾಗುವಷ್ಟರಲ್ಲೇ ಸಂಬಂಧಗಳು ಮುರಿದು ಬಿದ್ದಿರುತ್ತವೆ. ಅವನ್ನು ಮತ್ತೆಂದು ಜೋಡಿಸಲು ಸಾಧ್ಯವಾಗದ ಮಟ್ಟಿಗೆ ಡ್ಯಾಮೇಜ್ ಆಗಿ ಹೋಗಿರುತ್ತವೆ.
ಖ್ಯಾತ ತತ್ವಜ್ಞಾನಿ ಪೀಟರ್ ಡ್ರುಕ್ಕರ್ ಹೇಳುತ್ತಾರೆ, ನಿಮಗೆ ಎಷ್ಟು ಗೊತ್ತಿದೆ ಎನ್ನುವುದು ಎಷ್ಟು ಮುಖ್ಯವೋ ಹಾಗೆಯೇ ಅದನ್ನು ನೀವು ಹೇಗೆ ಇತರರಿಗೆ ತಿಳಿಸುತ್ತೀರಿ ಎನ್ನುವುದು ಕೂಡ ಅಷ್ಟೇ ಮುಖ್ಯ. ಅವರ ಮಾತಿನ ಒಳಾರ್ಥವೆಂದರೆ ನೀವು ತುಂಬ ಬುದ್ದಿವಂತರು, ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ಅರಗಿಸಿ ಕುಡಿದಿದ್ದೀರಿ. ಆದರೆ ನಾಲ್ಕು ಜನರ ಮುಂದೆ ನಿಂತು ಮಾತನಾಡುವ ಕೌಶಲ್ಯ ಇಲ್ಲದಿದ್ದರೆ ನೀವು ಬುದ್ದಿವಂತರೆಂದು ಹೇಗೆ ಇತರರಿಗೆ ಗೊತ್ತಾಗುತ್ತದೆ ? ಮತ್ತು ನಿಮ್ಮ ವಿಚಾರ ಬೇರೆಯವರಿಗೆ ಹೇಗೆ ತಲುಪಿಸಲು ಸಾಧ್ಯ ಎಂದು ಪೀಟರ್ ಡ್ರುಕ್ಕರ್ ಹೇಳುತ್ತಾರೆ.
ಒಮ್ಮೆ ಕೆಲಸದ ನಿಮ್ಮಿತ್ತ ಮುಳಬಾಗಿಲುವಿನತ್ತ ಹೋಗುತ್ತಿದ್ದೆ. ಮಾರ್ಗ ಮಧ್ಯೆ ವಿರುಪಾಕ್ಷಿ ಎಂಬ ಸಣ್ಣ ಹಳ್ಳಿ ಇದೆ. ಆ ಹಳ್ಳಿಯಲ್ಲಿ ಸುಂದರವಾದ ದೇಗುಲವೊಂದಿದೆ. ಹಾಗೆ ದೇವರ ದರ್ಶನ ಮಾಡೋಣ ಎಂದು ಒಳಗೆ ಹೋದೆ. ದೇವಾಲಯದ ಮುಂದೆ ಒಂದು ಸರಕಾರಿ ಶಾಲೆಯಿದೆ, ಆ ಶಾಲೆಯ ಮುಂದೆ ಆಟವಾಡುತ್ತಿದ್ದ ವಿದ್ಯಾಥರ್ಿ ಬಹುಃಶ 4ನೇ ತರಗತಿ ಇರಬಹುದು. ಆತ ನನ್ನ ಹಿಂದೆಯೇ ದೇಗುಲದ ಒಳಗೆ ಬಂದ. ಬನ್ನಿ ಸಾರ್ ದೇಗುಲ ಪರಿಚಯ ಮಾಡಿಸುತ್ತೇನೆ ಎಂದು ಹೇಳುತ್ತ, ನೋಡಿ ಸಾರ್ ಇದು ಮುಖ್ಯ ದೇಗುಲ, ಇದು ಕಲ್ಯಾಣಿ ಎಂದು ಮತ್ತಿತರ ವಿಷಯಗಳ ಬಗ್ಗೆ ತಿಳಿಸಿದ. ನಂತರ ನಾನು ಅಲ್ಲಿಂದ ಹೊರಡಲು ಹೋದಾಗ ಆ ಹುಡುಗ ಬಂದು ಹಣ ಕೊಡಿ ಎಂದ. ನಾನು ಏಕೆ ಎಂದೇ? ಸಾರ್ ಇಲ್ಲಿಯವರೆಗೂ ದೇವಾಲಯದ ಬಗ್ಗೆ ತಿಳಿಸಲಿಲ್ಲವೇ ಎಂದ ನನಗೆ ಆಶ್ವರ್ಯ ಆಯಿತು. ಆ ಸಣ್ಣ ವಯಸ್ಸಿನಲ್ಲಿಯೇ ಆತ ಕಲಿತಿದ್ದ ಮಾತಿನ ಚಾಕಚಕ್ಯತೆ ಮೆಚ್ಚುವಂತದ್ದು. ಮಾತಿನ ಮೂಲಕ ಹಣ ಸಂಪಾದನೆ ಮಾಡಬಹುದೆಂದು ಆ ಸಣ್ಣ ವಯಸ್ಸಿನಲ್ಲಿಯೇ ಆತ ಗ್ರಹಿಸಿದ್ದ ಪರಿ ವಿಶೇಷವಾದದ್ದು.
ನಮ್ಮಲ್ಲಿ ಮಾತಿನ ಕೌಶಲ್ಯ ಬೆಳೆಯದಿರಲು ಮೂಲ ಕಾರಣ ನಮ್ಮ ಕುಟುಂಬ ವ್ಯವಸ್ಥೆ ಹಾಗೂ ನಾವು ಬೆಳೆದ ಪರಿಸರ. ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೂಡ ಸಂವಹನದಲ್ಲಿ ತುಂಬಾ ಹಿಂದಿರುತ್ತಾರೆ. ತಮ್ಮ ಸ್ನೇಹಿತರು, ಸಹದ್ಯೋಗಿಗಳು, ಸಂಬಂಧಿಕರನ್ನು ಮಾತನಾಡಿಸಲು ಕೂಡ ಮುಜುಗರ, ಭಯ ಸಾಕಷ್ಟು ಜನರಿಗೆ ಆಗುತ್ತದೆ. ಅದರಲ್ಲಿ ನಾನು ಒಬ್ಬ, ಹೊಸಬರನ್ನು ಮಾತನಾಡಿಸಬೇಕಾದರೆ ಎಲ್ಲೋ ಒಂದು ಕಡೆ ಮುಜುಗರದ ಸನ್ನಿವೇಶ ಆಗುತ್ತಿತ್ತು. ಯಾವುದಾದರೂ ಕಚೇರಿಯ ಒಳಗೆ ಹೊಕ್ಕಬೇಕಾದರೂ ಅಲ್ಲಿದ್ದವರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂಬ ಜಿಜ್ಞಾಸೆ ನನ್ನನ್ನು ಕೂಡ ಕಾಡುತ್ತಿತ್ತು. ಕಾಲ ಕ್ರಮೇಣ ಸಂವಹನದಲ್ಲಿ ಹಿಂದಿದ್ದರೆ ಜೀವನದಲ್ಲೂ ಹಿಂದೇ ಬೀಳ ಬೇಕಾಗುತ್ತದೆ ಎಂಬ ಆಲೋಚನೆಯಿಂದ ಇಂದು ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡುವ ಮನಸ್ಥಿತಿ ರೂಡಿಸಿಕೊಂಡಿದ್ದೇನೆ.

ಚಿಕ್ಕ ವಯಸ್ಸಿನಿಂದಲೇ ಬೆಳೆದು ಬರುವ ಈ ಭಯ, ಮುಜುಗರ ಎಂಬ ಅಂಶಗಳು ನಮ್ಮನ್ನು ಸಂವಹನದಲ್ಲಿ ತೀರ ಹಿಂದುಳಿಯುಂತೆ ಮಾಡಿ ಬಿಡುತ್ತದೆ. ಆ ಕಾರಣದಿಂದಲೇ ಎಷ್ಟೋ ಸಂದರ್ಭದಳಲ್ಲಿ ಬರುವ ಅಮೂಲ್ಯವಾದ ಅವಕಾಶಗಳನ್ನು ಕೈಚೆಲ್ಲಿಬಿಡುತ್ತೇವೆ. ಮಾತುಗಾರಿಕೆ ಇಲ್ಲದ ಕಾರಣ ಉನ್ನತ ಸ್ಥಾನಕ್ಕೆ ಹೋಗಬೇಕಾದವರು ಕೆಳಹಂತದಲ್ಲಿಯೇ ಇದ್ದು ಜೀವನವೇ ಮುಗಿಸಿ ಬಿಡುತ್ತಾರೆ.
ನನಗನಿಸಿದ್ದಂಗೆ ನಮ್ಮಲ್ಲಿ ವಿಶ್ವಾಸಾತ್ಮಕತೆ ಸಂವಹನ ಕೌಶಲ್ಯವಿರಬೇಕು. ಅಂದರೆ ನಮ್ಮ ಎದುರಿಗೆ ಯಾವ ವ್ಯಕ್ತಿ ಬಂದರು ಆತನ ಜಾತಿ, ಧರ್ಮ, ಬಡವ, ಶ್ರೀಮಂತ ಎಂದು ನೋಡದೆ ಅತ್ಯಂತ ವಿಶ್ವಾಸದಿಂದ ಮಾತನಾಡಿಸಬೇಕು. ನಮ್ಮ ಮಾತನ್ನು ಕೇಳಿಸಿಕೊಳ್ಳುವವರಿಗೆ ಅರೇ ಈ ವ್ಯಕ್ತಿ ಏನಪ್ಪ ನಾನು ಪರಿಚಯವಾಗಿದ್ದೇ ಈಗ ಆದರೂ ಇಷ್ಟೊಂದು ಪ್ರೀತಿ, ವಿಶ್ವಾಸದಿಂದ ಮಾತನಾಡಿಸುತ್ತಿದ್ದಾರೆ. ನಾನೆಂದು ಇಂತಹ ಆತ್ಮೀಯತೆಯಿಂದ ಮಾತನಾಡಿಸಿದ ವ್ಯಕ್ತಿಯನ್ನು ಕಂಡಿಲ್ಲ, ನೋಡಿಲ್ಲ ಎಂಬ ಅಭಿಪ್ರಾಯ ನಾವು ಮಾತನಾಡುವ ವ್ಯಕ್ತಿಗೆ ಬಂದರೆ ಅದರ ಅರ್ಥ ನಾವು ವಿಶ್ವಾಸಾತ್ಮಕ ಸಂವಹನಕಾರಾಗಿದ್ದೇವೆ ಎಂದೇ ಅರ್ಥ. ಇದರ ಪ್ರತಿಫಲವೆಂಬಂತೆ ನಮ್ಮ ಎದುರಿರುವ ವ್ಯಕ್ತಿಯೂ ಕೂಡ ಸಹಜವಾಗಿಯೇ ನಮಗೆ ಅಗತ್ಯಕ್ಕಿಂತ ಹೆಚ್ಚಿನ ಗೌರವ, ಪ್ರೀತಿ ನೀಡುತ್ತಾನೆ.
ಯಾರನ್ನು ಕೀಳಾಗಿ ಕಾಣದೆ, ಅವಮಾನಿಸದೆ, ಅಹಂಕಾರವಿಲ್ಲದೆ ಮಾತನಾಡುವ ವ್ಯಕ್ತಿಗಳು ಸಹಜವಾಗಿಯೇ ಹೆಚ್ಚು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಮಾಜ ನಮ್ಮ ವ್ಯಕ್ತಿತ್ವವನ್ನು ತಾಳೇ ಹಾಕುವುದು ನಮ್ಮ ಸಂವಹನ ಶೈಲಿಯ ಆಧಾರದ ಮೇಲೆ, ನಮ್ಮ ಬಾಯಿಂದ ಬರುವ ಮಾತು ನಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎನ್ನುತ್ತಾರೆ ಹಿರಿಯರು.
ನಿಸರ್ಗವು ನಮಗೆ ಎರಡೂ ಕಿವಿ ಹಾಗೂ ಒಂದು ಬಾಯಿ ನೀಡಿರುವುದು ಎರಡು ಕಿವಿಯಲ್ಲಿ ಹೆಚ್ಚಾಗಿ ನಮಗೆ ಗೊತ್ತಿರದ ವಿಷಯಗಳನ್ನು ಕೇಳಿ ತಿಳಿದು, ಒಂದು ಬಾಯಲ್ಲಿ ಕಡಿಮೆ ಮಾತನಾಡಬೇಕು ಎಂಬ ಉದ್ದೇಶದಿಂದ ಎಂದು ಖ್ಯಾತ ವಿದ್ವಾಂಸರೊಬ್ಬರು ತಿಳಿಸಿದ್ದಾರೆ. ಅದರರ್ಥ ಅನಗತ್ಯವಾಗಿ ಮಾತಾಡಬಾರದು. ನಮ್ಮ ಅಗತ್ಯವಿಲ್ಲದ ಸ್ಥಳಗಳಲ್ಲಿ ಮಾತನಾಡಿ ನಮ್ಮ ಗೌರವಕ್ಕೆ ನಾವೇ ಧಕ್ಕೆ ಉಂಟು ಮಾಡಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಲೇಸು.
ಯಾರಿಗೂ, ಎಂದಿಗೂ ಅವಮಾನ, ಅಪಹಾಸ್ಯ ಮಾಡುವ ರೀತಿಯಲ್ಲಿ ಮಾತನಾಡುವ ಪರಿಪಾಠ ಇರಲೇ ಬಾರದು. ಇದ್ದರಂತು ಅನಗತ್ಯವಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಪ್ರೋಪೆಷನಲ್ ಲೈಪ್ ಮತ್ತು ಪರ್ಸನಲ್ ಲೈಪ್ ಎರಡಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹತ್ತಿರದವರನ್ನು ದೂರ ಮಾಡಿಕೊಂಡು ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಕುತ್ತದೆ.
ಆದ್ದರಿಂದ ನಮ್ಮ ಬಾಯಿಂದ ಒಂದು ಪದ ಆಚೆ ಬರುವ ಮುಂಚೆ ಹತ್ತು ಬಾರಿ ಆಲೋಚಿಸಬೇಕಿದೆ. ಸಂದರ್ಭ, ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮಾತಿನ ಶೈಲಿ ನಿರ್ಧಾರವಾಗಬೇಕು. ಆಗ ಸಹಜವಾಗಿಯೇ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಮಾತಿನ ಮೌಲ್ಯ ಅಮೂಲ್ಯ ಎಂದು ಮನಗಾಣಬೇಕಿದೆ.     

ಭಾನುವಾರ, ಡಿಸೆಂಬರ್ 30, 2018

ಕೆ.ಜಿ.ಎಫ್ ನಗರದ ಮನ ಕರಗಿಸುವ ಕಥೆ..

  ⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇತ್ತಿಚೀಗೆ ತಾನೇ ಚಿತ್ರನಟ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರ ಕನ್ನಡ, ತೆಲುಗು,  ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದ ಬಹುಬೇಡಿಕೆಯ ಮತ್ತು ಜನಪ್ರಿಯ ನಟರಾಗಿರುವುದರಿಂದ ಯಶ್ ಅಭಿನಯದ ಕೆಜಿಎಫ್ ಚಿತ್ರ ವೀಕ್ಷಿಸಲು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಕೊನೆಗೂ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ ಎಂಬ ಚಿತ್ರದ ಟೈಟಲ್ ನಮ್ಮ ಕೋಲಾರ ಜಿಲ್ಲೆಯ ಭಾಗವಾಗಿರುವುದರಿಂದ ಹಾಗೂ ಕೆಜಿಎಫ್ ನ ಹಲವು ದೃಶ್ಯಗಳು ಕೆಜಿಎಫ್ ನಗರದಲ್ಲಿ ಚಿತ್ರೀಕರಿಸಿದ್ದರಿಂದ ನನಗೂ ಚಿತ್ರ ವೀಕ್ಷಿಸುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. 
ಮೊನ್ನೆ ಕೆಜಿಎಫ್ ಚಿತ್ರ ನೋಡಿದ ನಂತರ ಹಲವು ಸಂಗತಿಗಳು ನೆನಪಾದವು. ಚಿತ್ರದ ಎರಡನೇ ಭಾಗದಲ್ಲಿ ಚಿನ್ನದ ಗಣಿಗಾರಿಕೆಯ ಭೀಕರತೆಯ ದೃಶ್ಯಗಳು ಮನಕಲುಕುವಂತಿತ್ತು. ಅಮಾಯಕರನ್ನು ಕರೆತಂದು ಚಿನ್ನದ ಗಣಿಗಾರಿಕೆಯ ವೃತ್ತಿಗೆ ತಳ್ಳಿ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಚಿತ್ರಹಿಂಸೆ ನೀಡುವ ಸನ್ನಿವೇಶಗಳು ಎಲ್ಲರ ಮನಸ್ಸು ಕರಗುವಂತೆ ಮಾಡುತ್ತದೆ. ಕೊನೆಗೂ ಚಿತ್ರದ ಹಿರೋ ಯಶ್ , ಗರುಡ ಎಂಬ ವಿಲನ್ ನನ್ನು ಕೊಂದು ಅಮಾಯಕರನ್ನು ಗಣಿಗಾರಿಕೆ ಎಂಬ ಕೂಪದಿಂದ ಬಿಡುಗಡೆಗೊಳಿಸುತ್ತಾನೆ. 
ನನಗನಿಸಿದ್ದು ಕೆಜಿಎಫ್ ಚಿತ್ರದಲ್ಲೆನೋ ನಟ ಯಶ್ ಗಣಿಗಾರಿಕೆಯ ವೃತ್ತಿಗೆ ತಳ್ಳಲ್ಪಟ್ಟ ಅಮಾಯಕರನ್ನು ರಕ್ಷಿಸಿ, ಹೊಸ ಜೀವನ ಕೊಡುತ್ತಾನೆ. ಕೆಜಿಎಫ್ ಚಿತ್ರ ತೆರೆಮೆಲೆ ಬಿಡುಗಡೆಯಾಗಿರುವುದರಿಂದ ಸಹಜವಾಗಿಯೇ ಕೆಜಿಎಫ್ ಎಂಬ ಪ್ರದೇಶದ ಬಗ್ಗೆ ದೇಶಾದ್ಯಂತ ಚರ್ಚಿತವಾಗತೊಡಗಿದೆ. ಆದರೆ ನಿಜವಾಗಿಯು ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದು ಬೆವರು ಹರಿಸಿದ ಮತ್ತು ನಗರದಲ್ಲಿ ವಾಸಿಸುತ್ತಿರುವ ಜನ ಮಾತ್ರ ಇಂದಿಗೂ ಸಮಸ್ಯೆಗಳ ಸರಮಾಲೆಯನ್ನು ಹೊತ್ತು ಜೀವನ ನಡೆಸುತ್ತಿದ್ದಾರೆ. ಸಮಸ್ಯೆಗಳ ನರಕಯಾತನೆಯಿಂದ ಮಾತ್ರ ಇಂದಿಗೂ ಈ ಭಾಗದ ಜನ ಬಿಡುಗಡೆಯಾಗಿಲ್ಲ ಎಂಬುವುದು ವಾಸ್ತವ.
ಒಂದು ಬಾರಿ ನಮ್ಮ ತರಬೇತಿ ಸಂಸ್ಥೆಗೆ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಯೋಜನೆಯೊಂದರ ಪಲಾನುಭವಿಯಾಗಿ ಆಯ್ಕೆಯಾಗಿ ನಮ್ಮ ಸಂಸ್ಥೆಗೆ ತರಬೇತಿಗೆ ಬಂದಿದ್ದ ಕೆಜಿಎಫ್ ಮೂಲದ ಶಿಬಿರಾರ್ಥಿಯೊಬ್ಬರನ್ನು ತಮಾಷೆಗೆ ಕೇಳಿದ್ದೆ. ಏನಪ್ಪಾ ಚಿನ್ನದ ನಾಡು ಕೆಜಿಎಫ್ ಭಾಗದಿಂದ ಬರುತ್ತಿದ್ದೀಯಾ.. ಬರುವಾಗ ಜೊತೆಗೆ ಒಂದಷ್ಟು ಚಿನ್ನವನ್ನು ತಂದಿದ್ದರೆ ನಾನು ಆರ್ಥಿಕವಾಗಿ ಶಕ್ತಿವಂತನಾಗುತ್ತಿದ್ದೆ ಎಂದು ಹೇಳಿದಾಗ, ಆತ ಅಯ್ಯೋ ಸುಮ್ಮನಿರಿ ಸಾರ್ ಹೆಸರಿಗೆ ಮಾತ್ರ ಚಿನ್ನದ ನಾಡು ಕೆಜಿಎಫ್ ನಲ್ಲಿದ್ದೇವೆ. ಆದರೆ ಬದುಕು ಮಾತ್ರ ಚಿನ್ನದ ತರ ಹೊಳೆಯುತ್ತಿಲ್ಲ ಎಂದು ಬೇಸರಿಸಿಕೊಂಡ. ಇದು ಆತನೊಬ್ಬನ ಕಥೆಯಲ್ಲ , ಆ ಸಮಯದಲ್ಲಿ ತರಬೇತಿಗೆ ಬಂದಿದ್ದ ಬಹುತೇಕರ ಕಥೆ ಅದೆಯಾಗಿತ್ತು. ಬಹುತೇಕರು ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದರು.
ಜಿಲ್ಲಾ ಕೇಂದ್ರ ಕೋಲಾರದಿಂದ 30 ಕಿ.ಮೀ ದೂರವಿರುವ ಕೆಜಿಎಫ್ ಪ್ರದೇಶವು ಹಲವು ಐತಿಹಾಸಿಕ ಸನ್ನಿವೇಶ, ಘಟನೆಗಳನ್ನು ಅಡಗಿಸಿಟ್ಟುಕೊಂಡಿರುವ ಸ್ಥಳ. ಹೊಸದಾಗಿ ಕೆಜಿಎಫ್ ತಾಲೂಕು ಕೇಂದ್ರವಾಗಿ ರಚನೆಗೊಂಡಿದೆ. ಈ ಹಿಂದೆ ಬಂಗಾರಪೇಟೆ ತಾಲೂಕಿಗೆ ಒಳಪಟ್ಟಿತ್ತು. ಆಂಧ್ರ ಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಗಡಿಗೆ ಹೊಂದುಕೊಂಡಿದೆ. ಅಧಿಕೃತ ಕನ್ನಡ ಭಾಷೆಯ ಜೊತೆಗೆ ಹೆಚ್ಚಾಗಿ ಇಲ್ಲಿ ತಮಿಳು ಹಾಗೂ ತೆಲುಗು ಮಾತನಾಡುವವರ ಸಂಖ್ಯೆಯು ಅಧಿಕವಿದೆ. ಕೆಜಿಎಫ್ ಭಾಗದಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯನಿರ್ವಹಿಸುತ್ತಿದ್ದ ಕಾರಣ ಈ ಭಾಗಕ್ಕೆ ಪ್ರತ್ಯೇಕ ಎಸ್.ಪಿ (ಪೊಲೀಸ್ ವರಿಷ್ಠಾಧಿಕಾರಿ) ನೇಮಕ ಮಾಡಲಾಗಿತ್ತು. ಕೋಲಾರಕ್ಕೆ ಒಬ್ಬ ಎಸ್ಪಿ ಇದ್ದರೆ, ಕೆಜಿಎಫ್ಗೆ ಒಬ್ಬ ಎಸ್ಪಿ ಇದ್ದರು. ಕೆಜಿಎಫ್ ನಗರ ಒಂದರಲ್ಲೇ ಹಲವು ಪೊಲೀಸ್ ಠಾಣೆಗಳು ಆರಂಭಿಸಲಾಗಿತ್ತು.  
ಪ್ರಪಂಚದ ಅತ್ಯಂತ ಆಳದ ಚಿನ್ನದ ಗಣಿಗಳ ಪೈಕಿ ಕೆಜಿಎಫ್ ಕೂಡ ಒಂದು. ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ 1880ರ ಪೂರ್ವದಲ್ಲೇ ಚಿನ್ನದ ಗಣಿ ಕಾರ್ಯದಲ್ಲಿ ತಜ್ಞನಾಗಿದ ಲಂಡನ್ ಮೂಲದ ಜಾನ್ ಟೇಲರ್ ಕೆಜಿಎಫ್ ಪ್ರದೇಶದಲ್ಲಿ ಚಿನ್ನದ ಅದಿರು ಇರುವುದನ್ನು ಶೋಧಿಸಿ ಗಣಿ ಕಾರ್ಯದಲ್ಲಿ ಭಾಗಿಯಾಗಿದ್ದ. ಜಾನ್ ಟೇಲರ್ ಕೆಜಿಎಫ್ ಗಣಿಗಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ. 
ಗಣಿಗಾರಿಕೆ ಪ್ರಾರಂಭವಾದ 1880ರಲ್ಲೇ ಕೆಜಿಎಫ್ ಚಿನ್ನದ ಗಣಿ ಪ್ರದೇಶದಿಂದ 3.37 ಲಕ್ಷ ಟನ್ ಅದಿರನ್ನು ಹೊರೆತೆಗೆದು ಪ್ರತಿ ಟನ್ನಿಗೆ 18.5 ಗ್ರಾಂ ಚಿನ್ನವನ್ನು ಹೊರೆ ತೆಗೆಯಲಾಯಿತು. ಒಟ್ಟು 620 ಕಿಲೋ ಗ್ರಾಂ ಚಿನ್ನ ಉತ್ಪತ್ತಿ ಮಾಡಲಾಗಿತ್ತು. ಮೈಸೂರು ಸರಕಾರದ ಮನವಿಯಂತೆ ಕೆಜಿಎಫ್ ಗಣಿ ಪ್ರದೇಶವನ್ನು 1956ರಲ್ಲಿ
ರಾಷ್ಟ್ರೀಕರಣಗೊಳಿಸಲಾಯಿತು. 
ಆ ಸಂದರ್ಭದಲ್ಲಿ ಮುಖ್ಯ ಮಂತ್ರಿಯಾಗಿದ್ದವರು ಎಸ್.ನಿಜಲಿಂಗಪ್ಪನವರು. ರಾಷ್ಟ್ರೀಕರಣಗೊಂಡ ನಂತರ ಕೇಂದ್ರ ಸರಕಾರವು ಬಿ.ಜಿ.ಎಂ.ಎಲ್ (ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್) ಎಂದು ಕೆಜಿಎಫ್ ಗಣಿ ಪ್ರದೇಶಕ್ಕೆ ಹೆಸರು ಕೊಟ್ಟಿತ್ತು. ಕೆಜಿಎಫ್ ಗಣಿ ಪ್ರದೇಶ ರಾಷ್ಟ್ರೀಕರಣಗೊಂಡಾಗ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಕೆಜಿಎಫ್ ಚಿನ್ನದ ಗಣಿಗಾರಿಕೆಯಿಂದ ಅಂದಿನ ಮೈಸೂರು ಸರಕಾರಕ್ಕೆ ರಾಷ್ಟ್ರೀಕರಣಗೊಳ್ಳುವವರೆಗೂ ಸಾಕಷ್ಟು ಪ್ರಮಾಣದಲ್ಲಿ ವರಮಾನ ಬರುತ್ತಿತ್ತು. ಸರಕಾರದ ದಾಖಲೆಗಳ ಪ್ರಕಾರ ಆ ಕಾಲಕ್ಕೆ 25 ಕೋಟಿ ರಾಜಧನ (ರಾಯಲ್ಟಿ) ಸೇರಿದಂತೆ ನೇರ ಹಾಗೂ ಪರೋಕ್ಷ ತೆರಿಗೆಗಳ ಮೂಲಕ ಕೆಜಿಎಫ್ ಗಣಿಗಾರಿಕೆಯು ಸಾಕಷ್ಟು ಲಾಭ ತಂದುಕೊಟ್ಟಿತ್ತು.
ಕೆಜಿಎಫ್ ಚಿನ್ನದ ಗಣಿಗಾರಿಕೆಯಿಂದ ನಷ್ಟವಾಗುತ್ತಿದೆ. ಸಂಸ್ಕರಣಾ ವೆಚ್ಚವೇ ಜಾಸ್ತಿಯಾಗುತ್ತಿದೆ ಎಂದು ಕೇಂದ್ರ ಸರಕಾರವು ಚಿನ್ನದ ಗಣಿಯಲ್ಲಿ ಏಪ್ರಿಲ್ 2000ನೇ ಇಸವಿಯಿಂದ ಎಲ್ಲಾ ರೀತಿಯ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. 1980ನೇ ಇಸವಿಗೆ ಕೆಜಿಎಫ್ ಚಿನ್ನದ ಗಣಿ ಪ್ರದೇಶ ಪ್ರಾರಂಭವಾಗಿ 100 ವರ್ಷಗಳಾಗಿತ್ತು.
ಕೆಜಿಎಫ್ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಕಾರಣ 1902 ಜೂನ್ ತಿಂಗಳಲ್ಲಿಯೇ ಮಂಡ್ಯ ಜಿಲ್ಲೆಯ ಶಿವನಸಮುದ್ರದ ವಿದ್ಯುತ್ ಉತ್ಪಾದನಾ ಘಟಕದಿಂದ ಕೆಜಿಎಫ್ ನಗರಕ್ಕೆ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಹಾಗೆಯೇ ರೈಲ್ವೆ ಸಂಪರ್ಕವು ಕಲ್ಪಿಸಲಾಗಿತ್ತು. ಈಗಲೂ  ಕೆಜಿಎಫ್ ನಗರದ ಸುತ್ತ ಗಣಿಕಾರಿಕೆಯಿಂದ ಹೊರೆತೆಗೆದ ಸೈನೆಡ್ ದಿಬ್ಬ ಹಾಗೂ ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಕಾಣಬಹುದು.
ಕೆಜಿಎಫ್ ನಗರದ ಗಣಿಗಾರಿಕೆಯಲ್ಲಿ ಇಂಗ್ಲೆಂಡ್ ಅಧಿಕಾರಿಗಳ ಪಾತ್ರವಿದ್ದರಿಂದ ರಾಬರ್ಟ್ ಸನ್ ಪೇಟ್, ಆಂಡ್ಯರ್ ಸನ್ ಪೇಟ್, ಚಾಂಪಿಯನ್ ರೀಫ್, ಕೋರಮಂಡಲ್ ಸೇರಿದಂತೆ ಮುಂತಾದ ಇಂಗ್ಲೀಷ್ ಮೂಲದ ಹೆಸರುಗಳನ್ನು ಹೊಂದಿರುವ ನಗರಗಳು ಕಾಣುತ್ತವೆ.
ಕೆಜಿಎಫ್ ಅನ್ನು ಮಿನಿ ಇಂಗ್ಲೆಂಡ್ ಎಂದು ಕೂಡ ಕರೆಯುತ್ತಾರೆ. ಕಾರಣ ಕೆಜಿಎಫ್ ನಲ್ಲಿ ಇರುವಷ್ಟು ಚರ್ಚ್ ಗಳು ದೇಶದ ಬೇರ್ಯಾವುದೇ ಭಾಗದಲ್ಲೂ ಇಲ್ಲ. ಕ್ರೈಸ್ತ ಧರ್ಮದಲ್ಲಿರುವ ರೋಮನ್ ಕ್ಯಾಥೋಲಿಕ್, ಪ್ರೊಟೊಸ್ಟಂಟ್, ಲೋಥರಿಸ್, ಬಿಂದಗೋಸ್ತ್ ಸೇರಿದಂತೆ ಮುಂತಾದ ಪಂಗಡಗಳಿಗೆ ಸೇರಿದವರಿದ್ದು, ಕನ್ನಡ, ತೆಲುಗು, ತಮಿಳು ಸೇರಿಂದತೆ ಹಲವು ಭಾಷೆಗಳ ಚರ್ಚ್ ಪ್ರಾರ್ಥನಾ ಮಂದಿರಗಳು ಇಲ್ಲಿವೆ.
ಕೆಜಿಎಫ್ ಪ್ರದೇಶವು ದೇಶದ ಖಜಾನೆಗೆ ಕೋಟ್ಯಾಂತರ ಹಣವನ್ನು ಚಿನ್ನದ ನಿಕ್ಷೇಪಗಳ ಮೂಲಕ ನೀಡಿದೆ. ಪ್ರಪಂಚದಲ್ಲೇ ಕೆಜಿಎಫ್ ಚಿನ್ನದ ಗಣಿ ಹೆಸರುಗಳಿಸುವ ಮೂಲಕ ರಾಷ್ಟ್ರಕ್ಕೆ ಹೆಸರು ತಂದುಕೊಡುವುದರ ಜೊತೆಗೆ ಹಲವು ರೀತಿಯಲ್ಲಿ ದೇಶದ ಅಭಿವೃದ್ದಿಯಲ್ಲಿ ಭಾಗಿಯಾಗಿದೆ. 
ವಿಪರ್ಯಾಸ ಹಾಗೂ ಅತಿ ಮುಖ್ಯ ಅಂಶವೆಂದರೆ ಕೆಜಿಎಫ್ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದ ಸಾವಿರಾರು ಕಾಮರ್ಿಕರ ಬದುಕು ಇಂದಿಗೂ ಕೂಡ ಹಸನಾಗಿಲ್ಲ. ಕಾರ್ಮಿಕರಾಗಿ ಕೆಲಸ ಮಾಡಿದ ಬಹುತೇಕರು ತಮಿಳುನಾಡು ಮತ್ತು ಆಂಧ್ರಪ್ರದೇಶ ಮೂಲದ ಶೋಷಿತ (ದಲಿತ) ವರ್ಗಗಳಿಗೆ ಸೇರಿದವರು.  
ನಷ್ಟದ ನೆಪವೊಡ್ಡಿ ಕೇಂದ್ರ ಸರಕಾರವು ಕೆಜಿಎಫ್ ಚಿನ್ನದ ಗಣಿಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ ಪರಿಣಾಮ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುವಂತಾಯಿತು. ಕಾರ್ಮಿಕರಾಗಿ ನಿವೃತ್ತಿ ನಂತರ ಬರಬೇಕಾಗಿದ್ದ ಸವಲತ್ತುಗಳು ಸರಕಾರದಿಂದ ಸಿಕ್ಕಿಲ್ಲ ಎಂದು ಸಾಕಷ್ಟು ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿದರು ಹಲವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ದೇಶಕ್ಕೆ ಚಿನ್ನ ಕೊಟ್ಟ ಕಾರ್ಮಿಕರು ಮಾತ್ರ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಎಷ್ಟೋ ಕಾರ್ಮಿಕರು
ತಮ್ಮ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಕೂಡ ಸಾಧ್ಯವಾಗಿಲ್ಲ. ಸ್ವಂತ ಮನೆಯ ಕನಸನ್ನು ಕೂಡ ಕಾಣಲು ಸಾಧ್ಯವಾಗದ ಸ್ಥಿತಿ. ಎಷ್ಟೋ ಕಾರ್ಮಿಕರು ಆಳವಾದ ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದ ಪರಿಣಾಮ ಅನಾರೋಗ್ಯ ಪೀಡಿತರಾದರು. ಆದರೂ ಯಾವ ಸರಕಾರಗಳು ತಲೆಕೆಡಿಸಿಕೊಳ್ಳಲಿಲ್ಲ.
ಕೆಜಿಎಫ್ ನಗರದಲ್ಲಿ ಸಾಕಷ್ಟು ಕಡೆ ಕೊಳಚೆ ಪ್ರದೇಶ ಕಾಣಬಹುದು. ಅದರಲ್ಲಿಯೇ ಸಾಕಷ್ಟು ಜನ ಸಣ್ಣ, ಪುಟ್ಟ ಮನೆ ಕಟ್ಟಿಕೊಂಡು ವಿಧಿಯಿಲ್ಲದೇ ಜೀವನ ಸಾಗಿಸುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿದ ಕಾರ್ಮಿಕರ ಮಕ್ಕಳು ಸೇರಿದಂತೆ ಕೆಜಿಎಫ್ ನ ಬಹುಪಾಲು ಜನ ಉದ್ಯೋಗಹರಿಸಿ ಪ್ರತಿನಿತ್ಯವು ರೈಲಿನ ಮೂಲಕ ಬೆಂಗಳೂರು ಬಂದು ಹೋಗುವ ಸ್ಥಿತಿ ಇದೆ. ಸಣ್ಣಪುಟ್ಟ ಕಾರ್ಖಾನೆ, ಗಾರ್ಮೆಂಟ್ಸ್, ಅಪಾರ್ಟ್ ಮೆಂಟ್ ಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕೆಜಿಎಫ್ ಪ್ರದೇಶದ ಸುತ್ತಮುತ್ತ ನೀರಾವರಿ ಮೂಲ ಕಡಿಮೆ ಇರುವುದರಿಂದ ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದಿಲ್ಲ. ಯಾವುದೇ ಮಧ್ಯಮ, ಬೃಹತ್ ಕೈಗಾರಿಕೆಗಳು ಈ ಭಾಗದಲ್ಲಿ ಇಲ್ಲದ ಕಾರಣ ನಿರುದ್ಯೋಗ ಸಮಸ್ಯೆ ಈ ಭಾಗದಲ್ಲಿ ಸಾಕಷ್ಟಿದೆ. ಕುಡಿಯುವ ನೀರಿಗೂ ತತ್ವಾರ ಇಲ್ಲಿ ಜಾಸ್ತಿ. ನಗರದಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗೆ ಇರುವವರು. ನಗರವು ವಾಣಿಜ್ಯ ವಹಿವಾಟಿನಿಂದ ಒಂದಷ್ಟು ಬೆಳೆದಿದ್ದರು ಮೂಲಭೂತ ಸೌಲಭ್ಯಗಳಿಂದ ಮಾತ್ರ ಸಾಕಷ್ಟು ಹಿಂದುಳಿದಿದೆ.
ಪ್ರತಿ ಸರಕಾರವು, ಈ ಭಾಗದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಕೆಜಿಎಫ್ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ದಶಕಗಳಿಂದಲೂ ಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಇಲ್ಲಿಯವೆರಗೂ ಹೇಳಿಕೊಳ್ಳುವಂತಹ ಲಾಭ ಕೆಜಿಎಫ್ ಭಾಗದವರಿಗೆ ಆಗಿಲ್ಲ. ಬರೀ ಆಶ್ವಾಸನೆಗಳಲ್ಲೇ ಕೆಜಿಎಫ್ ಜನ ತೃಪ್ತಿಪಟ್ಟುಕೊಳ್ಳುವಂತದ್ದಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಜಿಎಫ್ ಜನರ ಸಮಸ್ಯೆ ನೆನಪಾಗುತ್ತದೆ.
ಕೆಜಿಎಫ್ ಚಿತ್ರದಲ್ಲೆನೋ ಅಲ್ಲಿನ ಗಣಿ ಕಾರ್ಮಿಕರನ್ನು ನಟ ಯಶ್ ರಕ್ಷಿಸುತ್ತಾನೆ. ಆದರೆ ನಿಜವಾಗಿ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದು ಬದುಕನ್ನೇ ಅರ್ಪಿಸಿದ ಕಾರ್ಮಿಕರು, ಅವರ ಮಕ್ಕಳನ್ನು ರಕ್ಷಿಸಲು ಯಾರು ಬರುತ್ತಾರೋ..?