⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಇತ್ತಿಚೀಗೆ ತಾನೇ ಚಿತ್ರನಟ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದ ಬಹುಬೇಡಿಕೆಯ ಮತ್ತು ಜನಪ್ರಿಯ ನಟರಾಗಿರುವುದರಿಂದ ಯಶ್ ಅಭಿನಯದ ಕೆಜಿಎಫ್ ಚಿತ್ರ ವೀಕ್ಷಿಸಲು ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಕೊನೆಗೂ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ ಎಂಬ ಚಿತ್ರದ ಟೈಟಲ್ ನಮ್ಮ ಕೋಲಾರ ಜಿಲ್ಲೆಯ ಭಾಗವಾಗಿರುವುದರಿಂದ ಹಾಗೂ ಕೆಜಿಎಫ್ ನ ಹಲವು ದೃಶ್ಯಗಳು ಕೆಜಿಎಫ್ ನಗರದಲ್ಲಿ ಚಿತ್ರೀಕರಿಸಿದ್ದರಿಂದ ನನಗೂ ಚಿತ್ರ ವೀಕ್ಷಿಸುವ ಬಗ್ಗೆ ಸಾಕಷ್ಟು ಕುತೂಹಲವಿತ್ತು.
ಮೊನ್ನೆ ಕೆಜಿಎಫ್ ಚಿತ್ರ ನೋಡಿದ ನಂತರ ಹಲವು ಸಂಗತಿಗಳು ನೆನಪಾದವು. ಚಿತ್ರದ ಎರಡನೇ ಭಾಗದಲ್ಲಿ ಚಿನ್ನದ ಗಣಿಗಾರಿಕೆಯ ಭೀಕರತೆಯ ದೃಶ್ಯಗಳು ಮನಕಲುಕುವಂತಿತ್ತು. ಅಮಾಯಕರನ್ನು ಕರೆತಂದು ಚಿನ್ನದ ಗಣಿಗಾರಿಕೆಯ ವೃತ್ತಿಗೆ ತಳ್ಳಿ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಚಿತ್ರಹಿಂಸೆ ನೀಡುವ ಸನ್ನಿವೇಶಗಳು ಎಲ್ಲರ ಮನಸ್ಸು ಕರಗುವಂತೆ ಮಾಡುತ್ತದೆ. ಕೊನೆಗೂ ಚಿತ್ರದ ಹಿರೋ ಯಶ್ , ಗರುಡ ಎಂಬ ವಿಲನ್ ನನ್ನು ಕೊಂದು ಅಮಾಯಕರನ್ನು ಗಣಿಗಾರಿಕೆ ಎಂಬ ಕೂಪದಿಂದ ಬಿಡುಗಡೆಗೊಳಿಸುತ್ತಾನೆ.
ನನಗನಿಸಿದ್ದು ಕೆಜಿಎಫ್ ಚಿತ್ರದಲ್ಲೆನೋ ನಟ ಯಶ್ ಗಣಿಗಾರಿಕೆಯ ವೃತ್ತಿಗೆ ತಳ್ಳಲ್ಪಟ್ಟ ಅಮಾಯಕರನ್ನು ರಕ್ಷಿಸಿ, ಹೊಸ ಜೀವನ ಕೊಡುತ್ತಾನೆ. ಕೆಜಿಎಫ್ ಚಿತ್ರ ತೆರೆಮೆಲೆ ಬಿಡುಗಡೆಯಾಗಿರುವುದರಿಂದ ಸಹಜವಾಗಿಯೇ ಕೆಜಿಎಫ್
ಎಂಬ ಪ್ರದೇಶದ ಬಗ್ಗೆ ದೇಶಾದ್ಯಂತ ಚರ್ಚಿತವಾಗತೊಡಗಿದೆ. ಆದರೆ ನಿಜವಾಗಿಯು ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದು ಬೆವರು ಹರಿಸಿದ ಮತ್ತು ನಗರದಲ್ಲಿ ವಾಸಿಸುತ್ತಿರುವ ಜನ ಮಾತ್ರ ಇಂದಿಗೂ ಸಮಸ್ಯೆಗಳ ಸರಮಾಲೆಯನ್ನು ಹೊತ್ತು ಜೀವನ ನಡೆಸುತ್ತಿದ್ದಾರೆ. ಸಮಸ್ಯೆಗಳ ನರಕಯಾತನೆಯಿಂದ ಮಾತ್ರ ಇಂದಿಗೂ ಈ ಭಾಗದ ಜನ ಬಿಡುಗಡೆಯಾಗಿಲ್ಲ ಎಂಬುವುದು ವಾಸ್ತವ.
ಒಂದು ಬಾರಿ ನಮ್ಮ ತರಬೇತಿ ಸಂಸ್ಥೆಗೆ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಯೋಜನೆಯೊಂದರ ಪಲಾನುಭವಿಯಾಗಿ ಆಯ್ಕೆಯಾಗಿ ನಮ್ಮ ಸಂಸ್ಥೆಗೆ ತರಬೇತಿಗೆ ಬಂದಿದ್ದ ಕೆಜಿಎಫ್ ಮೂಲದ ಶಿಬಿರಾರ್ಥಿಯೊಬ್ಬರನ್ನು ತಮಾಷೆಗೆ ಕೇಳಿದ್ದೆ. ಏನಪ್ಪಾ ಚಿನ್ನದ ನಾಡು ಕೆಜಿಎಫ್ ಭಾಗದಿಂದ ಬರುತ್ತಿದ್ದೀಯಾ.. ಬರುವಾಗ ಜೊತೆಗೆ ಒಂದಷ್ಟು ಚಿನ್ನವನ್ನು ತಂದಿದ್ದರೆ ನಾನು ಆರ್ಥಿಕವಾಗಿ ಶಕ್ತಿವಂತನಾಗುತ್ತಿದ್ದೆ ಎಂದು ಹೇಳಿದಾಗ, ಆತ ಅಯ್ಯೋ ಸುಮ್ಮನಿರಿ ಸಾರ್ ಹೆಸರಿಗೆ ಮಾತ್ರ ಚಿನ್ನದ ನಾಡು ಕೆಜಿಎಫ್ ನಲ್ಲಿದ್ದೇವೆ. ಆದರೆ ಬದುಕು ಮಾತ್ರ ಚಿನ್ನದ ತರ ಹೊಳೆಯುತ್ತಿಲ್ಲ ಎಂದು ಬೇಸರಿಸಿಕೊಂಡ. ಇದು ಆತನೊಬ್ಬನ ಕಥೆಯಲ್ಲ , ಆ ಸಮಯದಲ್ಲಿ ತರಬೇತಿಗೆ ಬಂದಿದ್ದ ಬಹುತೇಕರ ಕಥೆ ಅದೆಯಾಗಿತ್ತು. ಬಹುತೇಕರು ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದರು.
ಜಿಲ್ಲಾ ಕೇಂದ್ರ ಕೋಲಾರದಿಂದ 30 ಕಿ.ಮೀ ದೂರವಿರುವ ಕೆಜಿಎಫ್ ಪ್ರದೇಶವು ಹಲವು ಐತಿಹಾಸಿಕ ಸನ್ನಿವೇಶ, ಘಟನೆಗಳನ್ನು ಅಡಗಿಸಿಟ್ಟುಕೊಂಡಿರುವ ಸ್ಥಳ. ಹೊಸದಾಗಿ ಕೆಜಿಎಫ್ ತಾಲೂಕು ಕೇಂದ್ರವಾಗಿ ರಚನೆಗೊಂಡಿದೆ. ಈ ಹಿಂದೆ ಬಂಗಾರಪೇಟೆ ತಾಲೂಕಿಗೆ ಒಳಪಟ್ಟಿತ್ತು. ಆಂಧ್ರ ಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಗಡಿಗೆ ಹೊಂದುಕೊಂಡಿದೆ. ಅಧಿಕೃತ ಕನ್ನಡ ಭಾಷೆಯ ಜೊತೆಗೆ ಹೆಚ್ಚಾಗಿ ಇಲ್ಲಿ ತಮಿಳು ಹಾಗೂ ತೆಲುಗು ಮಾತನಾಡುವವರ ಸಂಖ್ಯೆಯು ಅಧಿಕವಿದೆ. ಕೆಜಿಎಫ್ ಭಾಗದಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯನಿರ್ವಹಿಸುತ್ತಿದ್ದ ಕಾರಣ ಈ ಭಾಗಕ್ಕೆ ಪ್ರತ್ಯೇಕ ಎಸ್.ಪಿ (ಪೊಲೀಸ್ ವರಿಷ್ಠಾಧಿಕಾರಿ) ನೇಮಕ ಮಾಡಲಾಗಿತ್ತು. ಕೋಲಾರಕ್ಕೆ ಒಬ್ಬ ಎಸ್ಪಿ ಇದ್ದರೆ, ಕೆಜಿಎಫ್ಗೆ ಒಬ್ಬ ಎಸ್ಪಿ ಇದ್ದರು. ಕೆಜಿಎಫ್ ನಗರ ಒಂದರಲ್ಲೇ ಹಲವು ಪೊಲೀಸ್ ಠಾಣೆಗಳು ಆರಂಭಿಸಲಾಗಿತ್ತು.
ಪ್ರಪಂಚದ ಅತ್ಯಂತ ಆಳದ ಚಿನ್ನದ ಗಣಿಗಳ ಪೈಕಿ ಕೆಜಿಎಫ್ ಕೂಡ ಒಂದು. ಸರಕಾರದ ಅಧಿಕೃತ ದಾಖಲೆಗಳ ಪ್ರಕಾರ 1880ರ ಪೂರ್ವದಲ್ಲೇ ಚಿನ್ನದ ಗಣಿ ಕಾರ್ಯದಲ್ಲಿ ತಜ್ಞನಾಗಿದ ಲಂಡನ್ ಮೂಲದ ಜಾನ್ ಟೇಲರ್ ಕೆಜಿಎಫ್ ಪ್ರದೇಶದಲ್ಲಿ ಚಿನ್ನದ ಅದಿರು ಇರುವುದನ್ನು ಶೋಧಿಸಿ ಗಣಿ ಕಾರ್ಯದಲ್ಲಿ ಭಾಗಿಯಾಗಿದ್ದ. ಜಾನ್ ಟೇಲರ್ ಕೆಜಿಎಫ್ ಗಣಿಗಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ.
ಗಣಿಗಾರಿಕೆ ಪ್ರಾರಂಭವಾದ 1880ರಲ್ಲೇ ಕೆಜಿಎಫ್ ಚಿನ್ನದ ಗಣಿ ಪ್ರದೇಶದಿಂದ 3.37 ಲಕ್ಷ ಟನ್ ಅದಿರನ್ನು ಹೊರೆತೆಗೆದು ಪ್ರತಿ ಟನ್ನಿಗೆ 18.5 ಗ್ರಾಂ ಚಿನ್ನವನ್ನು ಹೊರೆ ತೆಗೆಯಲಾಯಿತು. ಒಟ್ಟು 620 ಕಿಲೋ ಗ್ರಾಂ ಚಿನ್ನ ಉತ್ಪತ್ತಿ ಮಾಡಲಾಗಿತ್ತು. ಮೈಸೂರು ಸರಕಾರದ ಮನವಿಯಂತೆ ಕೆಜಿಎಫ್ ಗಣಿ ಪ್ರದೇಶವನ್ನು 1956ರಲ್ಲಿ
ರಾಷ್ಟ್ರೀಕರಣಗೊಳಿಸಲಾಯಿತು.
ಆ ಸಂದರ್ಭದಲ್ಲಿ ಮುಖ್ಯ ಮಂತ್ರಿಯಾಗಿದ್ದವರು ಎಸ್.ನಿಜಲಿಂಗಪ್ಪನವರು. ರಾಷ್ಟ್ರೀಕರಣಗೊಂಡ ನಂತರ ಕೇಂದ್ರ ಸರಕಾರವು ಬಿ.ಜಿ.ಎಂ.ಎಲ್ (ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್) ಎಂದು ಕೆಜಿಎಫ್ ಗಣಿ ಪ್ರದೇಶಕ್ಕೆ ಹೆಸರು ಕೊಟ್ಟಿತ್ತು. ಕೆಜಿಎಫ್ ಗಣಿ ಪ್ರದೇಶ ರಾಷ್ಟ್ರೀಕರಣಗೊಂಡಾಗ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಕೆಜಿಎಫ್ ಚಿನ್ನದ ಗಣಿಗಾರಿಕೆಯಿಂದ ಅಂದಿನ ಮೈಸೂರು ಸರಕಾರಕ್ಕೆ ರಾಷ್ಟ್ರೀಕರಣಗೊಳ್ಳುವವರೆಗೂ ಸಾಕಷ್ಟು ಪ್ರಮಾಣದಲ್ಲಿ ವರಮಾನ ಬರುತ್ತಿತ್ತು. ಸರಕಾರದ ದಾಖಲೆಗಳ ಪ್ರಕಾರ ಆ ಕಾಲಕ್ಕೆ 25 ಕೋಟಿ ರಾಜಧನ (ರಾಯಲ್ಟಿ) ಸೇರಿದಂತೆ ನೇರ ಹಾಗೂ ಪರೋಕ್ಷ ತೆರಿಗೆಗಳ ಮೂಲಕ ಕೆಜಿಎಫ್ ಗಣಿಗಾರಿಕೆಯು ಸಾಕಷ್ಟು ಲಾಭ ತಂದುಕೊಟ್ಟಿತ್ತು.
ಕೆಜಿಎಫ್ ಚಿನ್ನದ ಗಣಿಗಾರಿಕೆಯಿಂದ ನಷ್ಟವಾಗುತ್ತಿದೆ. ಸಂಸ್ಕರಣಾ ವೆಚ್ಚವೇ ಜಾಸ್ತಿಯಾಗುತ್ತಿದೆ ಎಂದು ಕೇಂದ್ರ ಸರಕಾರವು ಚಿನ್ನದ ಗಣಿಯಲ್ಲಿ ಏಪ್ರಿಲ್ 2000ನೇ ಇಸವಿಯಿಂದ ಎಲ್ಲಾ ರೀತಿಯ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. 1980ನೇ ಇಸವಿಗೆ ಕೆಜಿಎಫ್ ಚಿನ್ನದ ಗಣಿ ಪ್ರದೇಶ ಪ್ರಾರಂಭವಾಗಿ 100 ವರ್ಷಗಳಾಗಿತ್ತು.
ಕೆಜಿಎಫ್ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಕಾರಣ 1902 ಜೂನ್ ತಿಂಗಳಲ್ಲಿಯೇ ಮಂಡ್ಯ ಜಿಲ್ಲೆಯ ಶಿವನಸಮುದ್ರದ ವಿದ್ಯುತ್ ಉತ್ಪಾದನಾ ಘಟಕದಿಂದ ಕೆಜಿಎಫ್ ನಗರಕ್ಕೆ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಹಾಗೆಯೇ ರೈಲ್ವೆ ಸಂಪರ್ಕವು ಕಲ್ಪಿಸಲಾಗಿತ್ತು. ಈಗಲೂ ಕೆಜಿಎಫ್ ನಗರದ ಸುತ್ತ ಗಣಿಕಾರಿಕೆಯಿಂದ ಹೊರೆತೆಗೆದ ಸೈನೆಡ್ ದಿಬ್ಬ ಹಾಗೂ ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಕಾಣಬಹುದು.
ಕೆಜಿಎಫ್ ನಗರದ ಗಣಿಗಾರಿಕೆಯಲ್ಲಿ ಇಂಗ್ಲೆಂಡ್ ಅಧಿಕಾರಿಗಳ ಪಾತ್ರವಿದ್ದರಿಂದ ರಾಬರ್ಟ್ ಸನ್ ಪೇಟ್, ಆಂಡ್ಯರ್ ಸನ್ ಪೇಟ್, ಚಾಂಪಿಯನ್ ರೀಫ್, ಕೋರಮಂಡಲ್ ಸೇರಿದಂತೆ ಮುಂತಾದ ಇಂಗ್ಲೀಷ್ ಮೂಲದ ಹೆಸರುಗಳನ್ನು ಹೊಂದಿರುವ ನಗರಗಳು ಕಾಣುತ್ತವೆ.
ಕೆಜಿಎಫ್ ಅನ್ನು ಮಿನಿ ಇಂಗ್ಲೆಂಡ್ ಎಂದು ಕೂಡ ಕರೆಯುತ್ತಾರೆ. ಕಾರಣ ಕೆಜಿಎಫ್ ನಲ್ಲಿ ಇರುವಷ್ಟು ಚರ್ಚ್ ಗಳು ದೇಶದ ಬೇರ್ಯಾವುದೇ ಭಾಗದಲ್ಲೂ ಇಲ್ಲ. ಕ್ರೈಸ್ತ ಧರ್ಮದಲ್ಲಿರುವ ರೋಮನ್ ಕ್ಯಾಥೋಲಿಕ್, ಪ್ರೊಟೊಸ್ಟಂಟ್, ಲೋಥರಿಸ್, ಬಿಂದಗೋಸ್ತ್ ಸೇರಿದಂತೆ ಮುಂತಾದ ಪಂಗಡಗಳಿಗೆ ಸೇರಿದವರಿದ್ದು, ಕನ್ನಡ, ತೆಲುಗು, ತಮಿಳು ಸೇರಿಂದತೆ ಹಲವು ಭಾಷೆಗಳ ಚರ್ಚ್ ಪ್ರಾರ್ಥನಾ ಮಂದಿರಗಳು ಇಲ್ಲಿವೆ.
ಕೆಜಿಎಫ್ ಪ್ರದೇಶವು ದೇಶದ ಖಜಾನೆಗೆ ಕೋಟ್ಯಾಂತರ ಹಣವನ್ನು ಚಿನ್ನದ ನಿಕ್ಷೇಪಗಳ ಮೂಲಕ ನೀಡಿದೆ. ಪ್ರಪಂಚದಲ್ಲೇ ಕೆಜಿಎಫ್ ಚಿನ್ನದ ಗಣಿ ಹೆಸರುಗಳಿಸುವ ಮೂಲಕ ರಾಷ್ಟ್ರಕ್ಕೆ ಹೆಸರು ತಂದುಕೊಡುವುದರ ಜೊತೆಗೆ ಹಲವು ರೀತಿಯಲ್ಲಿ ದೇಶದ ಅಭಿವೃದ್ದಿಯಲ್ಲಿ ಭಾಗಿಯಾಗಿದೆ.
ವಿಪರ್ಯಾಸ ಹಾಗೂ ಅತಿ ಮುಖ್ಯ ಅಂಶವೆಂದರೆ ಕೆಜಿಎಫ್ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದ ಸಾವಿರಾರು ಕಾಮರ್ಿಕರ ಬದುಕು ಇಂದಿಗೂ ಕೂಡ ಹಸನಾಗಿಲ್ಲ. ಕಾರ್ಮಿಕರಾಗಿ ಕೆಲಸ ಮಾಡಿದ ಬಹುತೇಕರು ತಮಿಳುನಾಡು ಮತ್ತು ಆಂಧ್ರಪ್ರದೇಶ ಮೂಲದ ಶೋಷಿತ (ದಲಿತ) ವರ್ಗಗಳಿಗೆ ಸೇರಿದವರು.
ನಷ್ಟದ ನೆಪವೊಡ್ಡಿ ಕೇಂದ್ರ ಸರಕಾರವು ಕೆಜಿಎಫ್ ಚಿನ್ನದ ಗಣಿಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ ಪರಿಣಾಮ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುವಂತಾಯಿತು. ಕಾರ್ಮಿಕರಾಗಿ ನಿವೃತ್ತಿ ನಂತರ ಬರಬೇಕಾಗಿದ್ದ ಸವಲತ್ತುಗಳು ಸರಕಾರದಿಂದ ಸಿಕ್ಕಿಲ್ಲ ಎಂದು ಸಾಕಷ್ಟು ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲು ಹತ್ತಿದರು ಹಲವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ದೇಶಕ್ಕೆ ಚಿನ್ನ ಕೊಟ್ಟ ಕಾರ್ಮಿಕರು ಮಾತ್ರ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಎಷ್ಟೋ ಕಾರ್ಮಿಕರು
ತಮ್ಮ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಕೂಡ ಸಾಧ್ಯವಾಗಿಲ್ಲ. ಸ್ವಂತ ಮನೆಯ ಕನಸನ್ನು ಕೂಡ ಕಾಣಲು ಸಾಧ್ಯವಾಗದ ಸ್ಥಿತಿ. ಎಷ್ಟೋ ಕಾರ್ಮಿಕರು ಆಳವಾದ ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದ ಪರಿಣಾಮ ಅನಾರೋಗ್ಯ ಪೀಡಿತರಾದರು. ಆದರೂ ಯಾವ ಸರಕಾರಗಳು ತಲೆಕೆಡಿಸಿಕೊಳ್ಳಲಿಲ್ಲ.
ಕೆಜಿಎಫ್ ನಗರದಲ್ಲಿ ಸಾಕಷ್ಟು ಕಡೆ ಕೊಳಚೆ ಪ್ರದೇಶ ಕಾಣಬಹುದು. ಅದರಲ್ಲಿಯೇ ಸಾಕಷ್ಟು ಜನ ಸಣ್ಣ, ಪುಟ್ಟ ಮನೆ ಕಟ್ಟಿಕೊಂಡು ವಿಧಿಯಿಲ್ಲದೇ ಜೀವನ ಸಾಗಿಸುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿದ ಕಾರ್ಮಿಕರ ಮಕ್ಕಳು ಸೇರಿದಂತೆ ಕೆಜಿಎಫ್ ನ ಬಹುಪಾಲು ಜನ ಉದ್ಯೋಗಹರಿಸಿ ಪ್ರತಿನಿತ್ಯವು ರೈಲಿನ ಮೂಲಕ ಬೆಂಗಳೂರು ಬಂದು ಹೋಗುವ ಸ್ಥಿತಿ ಇದೆ. ಸಣ್ಣಪುಟ್ಟ ಕಾರ್ಖಾನೆ, ಗಾರ್ಮೆಂಟ್ಸ್, ಅಪಾರ್ಟ್ ಮೆಂಟ್ ಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕೆಜಿಎಫ್ ಪ್ರದೇಶದ ಸುತ್ತಮುತ್ತ ನೀರಾವರಿ ಮೂಲ ಕಡಿಮೆ ಇರುವುದರಿಂದ ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯುವುದಿಲ್ಲ. ಯಾವುದೇ ಮಧ್ಯಮ, ಬೃಹತ್ ಕೈಗಾರಿಕೆಗಳು ಈ ಭಾಗದಲ್ಲಿ ಇಲ್ಲದ ಕಾರಣ ನಿರುದ್ಯೋಗ ಸಮಸ್ಯೆ ಈ ಭಾಗದಲ್ಲಿ ಸಾಕಷ್ಟಿದೆ. ಕುಡಿಯುವ ನೀರಿಗೂ ತತ್ವಾರ ಇಲ್ಲಿ ಜಾಸ್ತಿ. ನಗರದಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗೆ ಇರುವವರು. ನಗರವು ವಾಣಿಜ್ಯ ವಹಿವಾಟಿನಿಂದ ಒಂದಷ್ಟು ಬೆಳೆದಿದ್ದರು ಮೂಲಭೂತ ಸೌಲಭ್ಯಗಳಿಂದ ಮಾತ್ರ ಸಾಕಷ್ಟು ಹಿಂದುಳಿದಿದೆ.
ಪ್ರತಿ ಸರಕಾರವು, ಈ ಭಾಗದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಕೆಜಿಎಫ್ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ದಶಕಗಳಿಂದಲೂ ಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಇಲ್ಲಿಯವೆರಗೂ ಹೇಳಿಕೊಳ್ಳುವಂತಹ ಲಾಭ ಕೆಜಿಎಫ್ ಭಾಗದವರಿಗೆ ಆಗಿಲ್ಲ. ಬರೀ ಆಶ್ವಾಸನೆಗಳಲ್ಲೇ ಕೆಜಿಎಫ್ ಜನ ತೃಪ್ತಿಪಟ್ಟುಕೊಳ್ಳುವಂತದ್ದಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಜಿಎಫ್ ಜನರ ಸಮಸ್ಯೆ ನೆನಪಾಗುತ್ತದೆ.
ಕೆಜಿಎಫ್ ಚಿತ್ರದಲ್ಲೆನೋ ಅಲ್ಲಿನ ಗಣಿ ಕಾರ್ಮಿಕರನ್ನು ನಟ ಯಶ್ ರಕ್ಷಿಸುತ್ತಾನೆ. ಆದರೆ ನಿಜವಾಗಿ ಚಿನ್ನದ ಗಣಿಯಲ್ಲಿ ಕಾರ್ಮಿಕರಾಗಿ ದುಡಿದು ಬದುಕನ್ನೇ ಅರ್ಪಿಸಿದ ಕಾರ್ಮಿಕರು, ಅವರ ಮಕ್ಕಳನ್ನು ರಕ್ಷಿಸಲು ಯಾರು ಬರುತ್ತಾರೋ..?



1 ಕಾಮೆಂಟ್:
👍🏻👌🏻
ಕಾಮೆಂಟ್ ಪೋಸ್ಟ್ ಮಾಡಿ