ಸೋಮವಾರ, ಏಪ್ರಿಲ್ 20, 2026

ಭರವಸೆಯೇ ಇಲ್ಲದಿದ್ದರೆ, ಬದುಕಿಗೆ ನೆಮ್ಮದಿ ಎಲ್ಲಿದೆ..?

 ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ    

ನೀವು ಗೂಗಲ್‌ನಲ್ಲಿ How many Years I will live ಎಂದು ಟೈಪಿಸಿದರೆ ಕ್ಷಣಮಾತ್ರದಲ್ಲಿ ಬರುವ ಉತ್ತರ While it is impossible to predict exactly how many years you will live ಎಂದು ಉತ್ತರ ಬರುತ್ತದೆ. ಬಹುಃಶ ಯಾವುದಾದರೂ ಒಂದು ಪ್ರಶ್ನೆಗೆ ಗೂಗಲ್ ಅಥವಾ ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಎರಡರಿಂದಲೂ ಉತ್ತರ ಸಿಗುವುದಿಲ್ಲ ಎಂದರೆ, ಅದು ಈ ಪ್ರಶ್ನೆಯೇ ಇರಬಹುದೆನೋ. 

ಗಮನಾರ್ಹ ಅಂಶವೆಂದರೆ ಭಾರತದಲ್ಲಿ ಇಂದು ಮನುಷ್ಯನ ಜೀವತಾವಧಿ 70 ರಿಂದ 72 ವರ್ಷಗಳಿಗೆ ಕುಸಿದು ಹೋಗಿದೆ. ಹಲವು ವರ್ಷಗಳ ಹಿಂದೆ ಹಲವು ಕುಟುಂಬಗಳಲ್ಲಿ 80 ವರ್ಷ, 90 ವರ್ಷ, 100 ವರ್ಷ, 110 ವರ್ಷ ಬದುಕಿದ್ದವರನ್ನು ಸ್ವತಃ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇತ್ತಿಚೀನ ವರ್ಷಗಳಲ್ಲಂತೂ 60 ವರ್ಷ ಬದುಕುವುದೇ ದೊಡ್ಡ ಸಾಧನೆಯಾಗಿ ಪರಿಣಮಿಸಿದೆ.

ಅಷ್ಟರ ಮಟ್ಟಿಗೆ ನಮ್ಮ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ ಅತಂತ್ರವಾಗಿದೆ. ಮಾನಸಿಕ ಹಾಗೂ ದೈಹಿಕ ಅನಾರೋಗ್ಯಗಳ ಮಧ್ಯೆ ವಿಲವಿಲ ಒದ್ದಾಡುತ್ತ, ನಮ್ಮ ಜೀವನ ಯಾವ ಕ್ಷಣದಲ್ಲಿ ಕೊನೆಯಾಗುತ್ತದೆಂದು ಕಲ್ಪಿಸಿಕೊಳ್ಳಲು ಸಾಧ್ಯವಾಗದೆ ಮಟ್ಟಿಗೆ ಬದುಕು ದುಸ್ಥರವಾಗಿದೆ.

ಈ ಮಧ್ಯೆ ನಮ್ಮ ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ಹಲವರಿಂದ ಎದುರಾಗುವ ಕೆಲ ನಕಾರಾತ್ಮಕ (ನೆಗಟಿವ್) ಪ್ರಶ್ನೆಗಳು, ನಮ್ಮ ಮಾನಸಿಕ, ದೈಹಿಕ ನೆಮ್ಮದಿಯನ್ನೇ ಸಂಪೂರ್ಣ ಕಸಿದು, ಸುಂದರ ಜೀವನಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ ಎಂಬುವುದೇ ವಿಪರ್ಯಾಸ.

ಇತ್ತಿಚೀಗೆ ಪರಿಚಿತರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಂದು ಹಳ್ಳಿಗೆ ಹೋಗಿದ್ದೆ. ಮದುವೆ ನಂತರ ಆ ಪುಟ್ಟ ಹಳ್ಳಿಯಲ್ಲಿ ಸಂತೋಷ್ ಎಂಬ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದೆ. ಅವರ ವಯಸ್ಸು 35 ವರ್ಷ ಇರಬಹುದು. ಎಂ.ಕಾಂ ಪದವೀಧರ. ಇವರ ತಂದೆ, ತಾಯಿ ಕೂಲಿ ಮಾಡಿ ಇತನನ್ನು ಎಂ.ಕಾಂ ಪದವಿಯವರೆಗೂ ಕಷ್ಟ ಪಟ್ಟು ವಿದ್ಯಾಭ್ಯಾಸ ಕೊಡಿಸಿದ್ದರು. ಇವರಿಗೆ ಇರುವುದು ಕೇವಲ 1 ಎಕರೆ ಜಮೀನು ಮಾತ್ರ. ಆರ್ಥಿಕವಾಗಿ ಬಹಳ ಹಿಂದುಳಿದ ಕುಟುಂಬ. ಇಂದಿಗೂ ಸಣ್ಣ ಮನೆಯಲ್ಲೇ ವಾಸ.

ಸಂತೋಷ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತ ಜೀವನ ಸಾಗಿಸುತ್ತಿದ್ದ, ಈತ ಹಣ ಸಂಪಾದಿಸಲು ಪ್ರಾರಂಭಿಸಿದ ಮೇಲೆಯೆ ಇವರ ಕುಟುಂಬ ನಿಧಾನವಾಗಿ ಆರ್ಥಿಕವಾಗಿ ಸದೃಢರಾಗಲು ಪ್ರಾರಂಭಿಸಿತು. ಮಗ ಸಂಪಾದಿಸುತ್ತಿದ್ದಾನೆ, ಇನ್ನು ನಮ್ಮ ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೇ ಅವರ ಪೋಷಕರು ಭಾವಿಸಿದ್ದರು.

ಆದರೆ ಯಾರು ಊಹೆ ಮಾಡದ ರೀತಿಯಲ್ಲಿ ಕಳೆದ 2 ವರ್ಷಗಳ ಹಿಂದೆ ಸಂತೋಷ್ ಪಾರ್ಶ್ವವಾಯುವಿಗೆ ತುತ್ತಾಗಿ ಕೈ ಮತ್ತು ಕಾಲು ಸ್ವಾಧೀನವಿಲ್ಲದೆ ದೈಹಿಕ ನ್ಯೂನ್ಯತೆಯೊಂದಿಗೆ ಹಾಸಿಗೆ ಹಿಡಿದಿದ್ದಾನೆ. ಈತ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಲು ಮೂಲ ಕಾರಣ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು. ಈತನ ಸ್ನೇಹಿತರು, ಪರಿಚಿತರು, ಸಂಬಂಧಿಕರು ಪದೇ ಪದೇ ಕೇಳುತ್ತಿದ್ದ ಮದುವೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಹಾಗೂ ಮದುವೆ ತಡವಾಗುತ್ತಿರುವುದರ ಬಗ್ಗೆ ಅತಿಯಾಗಿ ಆಲೋಚನೆ ಮಾಡಿದ್ದ ಪರಿಣಾಮ, ಈತ ಈ ದಯನೀಯ ಸ್ಥಿತಿ ತಲುಪಲು ಮೂಲ ಕಾರಣ.

ಸಂತೋಷ್‌ನ ಬಹುತೇಕ ಗೆಳೆಯರಿಗೆಲ್ಲಾ ವಿವಾಹವಾಗಿದೆ. ಈತ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಪ್ರಯತ್ನಪಟ್ಟರು, ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ವಯಸ್ಸು 35 ವರ್ಷ ದಾಟಿದೆ, ಇನ್ನೂ ಕೂಡ ಮದುವೆ ಮಾಡಿಕೊಳ್ಳದೆ ಈಗೆ ಇದ್ದು ಬಿಡುತ್ತಿಯಾ? ಅಷ್ಟಕ್ಕೂ ನಿನಗೆ ಹುಡುಗಿ ಯಾರು ತಾನೇ ಕೊಡುತ್ತಾರೆ ಹೇಳು? ತಡವಾಗಿ ಮದುವೆ ಮಾಡಿಕೊಳ್ಳುವ ಬದಲು ಸುಮ್ಮನೆ ಇರುವುದೇ ಉತ್ತಮ ಎಂಬ ಕೆಲವರ ಹೀಯಾಳಿಸುವ ಮಾತುಗಳು, ಪ್ರಶ್ನೆಗಳು ಈತನನ್ನು ಅತಿಯಾಗಿ ಆಲೋಚಿಸುವಂತೆ ಪ್ರೇರೆಪಿಸಿತು. 

ಇನ್ನೂ ಈತನ ಸ್ನೇಹಿತರಂತೂ ನಿನಗೆ ಮದುವೆ ಯೋಗ ಇಲ್ಲ ಬಿಡೋ, ನಿನ್ನ ಜೀವನವೇ ವ್ಯರ್ಥ ಎಂದು ವ್ಯಂಗ್ಯವಾಗಿ ಹೇಳಿದ್ದ ಸಂದರ್ಭಗಳು ಹತ್ತಾರಿವೆ. ಈಗೆ ಪ್ರತಿದಿನವು ಸಹದ್ಯೋಗಿಗಳು, ಸ್ನೇಹಿತರು, ಸಂಬಂಧಿಕರು ಮದುವೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಕೇಳಿ ಈತ ಅದರ ಬಗ್ಗೆ ವಿಪರಿತವಾಗಿ ಆಲೋಚಿಸಿ, ಮಾನಸಿಕ ನೆಮ್ಮದಿ ಕಳೆದಕೊಂಡು ಪಾರ್ಶ್ವವಾಯುಗೆ ತುತ್ತಾಗಿ ದೈಹಿಕ ನ್ಯೂನ್ಯತೆಯೊಂದಿಗೆ ಶಾಶ್ವತವಾಗಿ ಹಾಸಿಗೆಯಲ್ಲೇ ಮಲಗುವಂತಾಗಿದೆ.

ದುರ್ದೈವವೆಂದರೆ ಸಂತೋಷ್‌ನ ತಂದೆ, ತಾಯಿಗೆ ಈತ ಒಬ್ಬನೇ ಮಗ. ಈತ ದುಡಿದು ತಂದೆ, ತಾಯಿಯನ್ನು ಪೋಷಿಸಬೇಕಾಗಿತ್ತು. ಆದರೆ ಈಗ ವಯಸ್ಸಾದ ತಂದೆ, ತಾಯಿಯೇ ಕೂಲಿ ಕೆಲಸ ಮಾಡಿ, ಬರುವ ಅಲ್ಪ ಆದಾಯದಲ್ಲೇ ಮಗನನ್ನು ಬದುಕಿಸಿಕೊಳ್ಳ ಬೇಕಾದ ಸಂದರ್ಭ ಬಂತಲ್ಲಾ, ಇಂತಹ ಕರುಳು ಹಿಂಡುವ ಸ್ಥಿತಿ, ನಮ್ಮ ಶತ್ರುವಿಗೂ ಬರಬಾರದು.

ಇನ್ನೊಂದು ಘಟನೆ ಹೇಳುತ್ತೇನೆ, ಕೆಲ ದಿನಗಳ ಹಿಂದೆ ಆಕಾಶ್ ಎಂಬ 28 ವರ್ಷದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಈತ ಇಂಜಿನಿಯರಿಂಗ್ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಣ್ಣ ಕೆಲಸ ಮಾಡುತ್ತಿದ್ದ. 

ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪರಿಣಾಮ, ಇಂಗ್ಲೀಷ್‌ನಲ್ಲಿ ಮಾತನಾಡುವುದು, ಬರವಣಿಗೆ ಸೇರಿದಂತೆ ಹಲವು ಕೌಶಲ್ಯದ ಕೊರತೆಯಿಂದ ಇಂಜಿನಿಯರಿಂಗ್‌ನ್ನು 4 ವರ್ಷಗಳಲ್ಲಿ ಮುಗಿಸಲು ಸಾಧ್ಯವಾಗಲಿಲ್ಲ. ಕೆಲ ಸಬ್ಜೆಟ್‌ಗಳು ಬ್ಯಾಕ್ ಇದ್ದ ಕಾರಣ ಇಂಜಿನಿಯರಿಂಗ್ ಪದವಿ ಮುಗಿಯಲು 2 ವರ್ಷ ತಡವಾಯಿತು.

ಇಂಜಿನಿಯರಿಂಗ್‌ನಲ್ಲಿ ಹೆಚ್ಚು ಅಂಕ ಇಲ್ಲದಿರುವುದು, ವಿವಿಧ ಕೌಶಲ್ಯಗಳ ಕೊರತೆಯಿಂದ ಒಳ್ಳೆಯ ಕಂಪನಿಯಲ್ಲಿ ಕೆಲಸ ದೊರಕದೆ, ಕೊನೆಗೆ ಕಾಲ್ ಸೆಂಟರ್‌ವೊಂದರಲ್ಲಿ ಸಣ್ಣ ಕೆಲಸಕ್ಕೆ ಸೇರಿದ್ದ. ಅದು ತೀರ ಕಡಿಮೆ ವೇತನಕ್ಕೆ. ಬರುವ ಅಲ್ಪ ವೇತನದಿಂದ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗದೆ, ಅನಾರೋಗ್ಯಪೀಡಿತ ತಂದೆಯನ್ನು ಆಸ್ಪತ್ರೆಯಲ್ಲಿ ತೋರಿಸಲು ಮಾಡಿದ್ದ ವಿಪರಿತ ಸಾಲದ ಬಡ್ಡಿ ಕಟ್ಟಲಾಗದೆ, ತಂಗಿಯ ಮದುವೆ ಮಾಡಬೇಕಾದ ಒತ್ತಡ ಸೇರಿದಂತೆ ಎಲ್ಲವೂ ಈತನ ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳುಗೆಡವಿತ್ತು.

ಇತನಿಗೆ ಬರುವ ಅಲ್ಪ ಆದಾಯದಲ್ಲಿ ಈತ ಹೊಸ ಮನೆ ಕಟ್ಟುವುದು ಯಾವಾಗ? ಈತನ ತಂಗಿಗೆ ಮದುವೆ ಮಾಡುವುದೆಂದು? ಇತನ ತಂದೆಗೆ ಒಳ್ಳೆ ಆಸ್ಪತ್ರೆಯಲ್ಲಿ ತೋರಿಸುವುದು ಸಾಧ್ಯವೇ? ಎಂಬ ವಿಪರಿತವಾದ ಪ್ರಶ್ನೆಗಳು ಈತನ ಸ್ನೇಹಿತರು, ಸಂಬಂಧಿಕರ ಕಡೆಯಿಂದ ನಿಲ್ಲದೆ ಸದಾ ಹರಿದು ಬರುತ್ತಿತ್ತು. ಅವುಗಳಿಗೆ ಉತ್ತರಿಸಲಾಗದೆ ತೀರ ಅಸಹಾಯಕನಾಗಿದ್ದ. 

ವೈಯಕ್ತಿಕ ಹಾಗೂ ಕುಟುಂಬದ ಸಮಸ್ಯೆಗಳ ನೋವಿನಿಂದ ಮತ್ತು ಸಮಾಜದಲ್ಲಿ ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜೀವನದಲ್ಲಿ ತತ್ತರಿಸಿ ಹೋಗಿದ್ದ. ಈತ ಅತಿಯಾಗಿ ಆಲೋಚಿಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದರ ಜೊತೆಗೆ ಒಂದರ್ಥದಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದ. 

ಮಾನಸಿಕ ನೆಮ್ಮದಿ ಇಲ್ಲದೆ, ದಿನವೆಲ್ಲವೂ ಅತಿಯಾಗಿ ಜೀವನದ ಸಮಸ್ಯೆಗಳ ಬಗ್ಗೆ ಆಲೋಚಿಸುತ್ತ, ಆ ಮಾನಸಿಕ ಒತ್ತಡದಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಈತ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಡುತ್ತಾನೆ. ದ್ವಿಚಕ್ರ ವಾಹನ ಚಲಾಯಿಸುವಾಗಲು ವಿಪರಿತವಾದ ಆಲೋಚನೆಗಳು ಆತನ ಬದುಕನ್ನೇ ಸಂಪೂರ್ಣ ಕತ್ತಲನ್ನಾಗಿಸಿತು. ಆ ಮೂಲಕ ಇವರ ಇಡೀ ಕುಟುಂಬ ಪೂರ್ಣವಾಗಿ ಬೀದಿಗೆ ಬರುವಂತಹ ಹಂತಕ್ಕೆ ಬಂದು ತಲುಪಿತು.

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಹೇಳುತ್ತೇನೆ, ಸಾಮಾನ್ಯವಾಗಿ ಚಿತ್ರ ನಟ, ನಟಿಯರನ್ನು ನೋಡಿದರೆ ಅವರಿಗೆ ಯಾವುದೇ ರೀತಿಯ ನೋವು, ಸಮಸ್ಯೆ ಇರುವುದಿಲ್ಲ ಬಹಳ ಐಷಾರಾಮಿಯಾಗಿ ಜೀವನ ಸಾಗಿಸುತ್ತಾರೆ ಎಂದೇ ಭಾವಿಸಿಕೊಳ್ಳುತ್ತೇವೆ. ಆದರೆ ಇದಕ್ಕೆ ಅಪವಾದವೆಂಬಂತೆ ದಕ್ಷಿಣ ಭಾರತದ ಖ್ಯಾತ ನಟಿ ಅಭಿನಯ ಎಂಬುವವರ ಜೀವನವಿದೆ. 

ಬಾಲ್ಯದಿಂದಲೇ ಇವರಿಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಮಾತು ಬರುವುದಿಲ್ಲ. ಸನ್ನೆಗಳ ಮೂಲಕವೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸ್ವತಃ ಇವರು ಕೂಡ ಹಲವು ಸಂಬಂಧಿಕರು ಮತ್ತು ಸ್ನೇಹಿತರ ಅವಮಾನ, ಟೀಕೆಗಳ ನಡುವೆಯೇ ಬೆಳೆದವರು. ಹಲವರ ನೆಗೆಟಿವ್ ಮಾತುಗಳನ್ನು ಸದಾ ಎದುರಿಸಿದವರು. ಆದರೂ ಅಭಿನಯರವರು ನನಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಮಾತು ಬರುವುದಿಲ್ಲ ಎಂದು ಅತಿಯಾಗಿ ಆಲೋಚಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಳ್ಳಲಿಲ್ಲ.

ಸ್ನೇಹಿತರ, ಸಂಬಂಧಿಕರ ನೆಗೆಟಿವ್, ಚಚ್ಚು ಮಾತುಗಳಿಗೆ ಬೇಸರ ಪಟ್ಟುಕೊಂಡವರಲ್ಲ. ಆತ್ಮಸ್ಥೈರ್ಯದಿಂದ ಜೀವನ ಸಾಗಿಸುತ್ತ, ಛಲ ಬಿಡದೆ, ಅವಕಾಶಗಳನ್ನು ಸೃಷ್ಟಿಸಿಕೊಂಡು ಇಂದು ಉತ್ತಮ ಸಿನಿಮಾ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. 

ತಮಿಳು, ತೆಲುಗು, ಕನ್ನಡ, ಹಿಂದಿ, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಿತ್ರ ನಟಿಯಾಗಿ, ಸಹ ನಟಿಯಾಗಿ ಅಭಿನಯಿಸಿದ್ದಾರೆ. ತಮಿಳಿನ ನಾಡೋಡಿಗಲ್, ಈಸನ್, ವೀರಂ, ಕುಟ್ರಂ, ಓರುವನ್, ತೆಲುಗಿನ ನೆನಿಂತೆ, ಶಂಭೋ ಶಿವ ಶಂಭೋ, ಡಮರುಕಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಕನ್ನಡದ ಹುಡುಗರು, ಕಿಚ್ಚು, ಕ್ರಶ್ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅದ್ಬುತವಾಗಿ ನಟಿಸಿದ್ದಾರೆ. 

ಇವರನ್ನು ನೋಡಿದರೆ ಇವರಿಗೆ ಮಾತನಾಡಲು ಬರುವುದಿಲ್ಲ ಹಾಗೂ ಕಿವಿ ಕೇಳಿಸುವುದಿಲ್ಲ ಎಂಬ ಭಾವನೆ ನಮಗ್ಯಾರಿಗೂ ಬರುವುದಿಲ್ಲ. ಅಷ್ಟರ ಮಟ್ಟಿಗೆ ಸದಾ ಆತ್ಮವಿಶ್ವಾಸ ಹಾಗೂ ಕ್ರಿಯಾಶೀಲತೆಯಿಂದ ಜೀವನ ನಿರ್ವಹಿಸುತ್ತಾರೆ.

ಹಾಗೆ ನೋಡಿದರೆ ಪ್ರತಿಯೊಬ್ಬರು ಬಾಲ್ಯದಲ್ಲೇ ಹಲವು ಕನಸು ಕಟ್ಟಿಕೊಂಡಿರುತ್ತಾರೆ. ನಾನು ಉತ್ತಮ ಶಿಕ್ಷಣ ಪಡೆಯಬೇಕು. ಹೆಚ್ಚು ಅಂಕ ಪಡೆದು ಒಳ್ಳೆಯ ವೇತನವಿರುವ ಉದ್ಯೋಗಕ್ಕೆ ಸೇರಬೇಕು. ಬೇಗ ಮದುವೆಯಾಗಿ ಹೆಂಡತಿ, ಮಕ್ಕಳೊಂದಿಗೆ ಖುಷಿ, ಸಂತೋಷದಿಂದ ಜೀವನ ಸಾಗಿಸಬೇಕು. ಮನೆ, ಆಸ್ತಿ, ಜಮೀನು, ಒಡವೆ ಸಂಪಾದಿಸಿ ಜೀವನವನ್ನು ಎಂಜಾಯ್ ಮಾಡಬೇಕು ಎಂದು ಬಣ್ಣದ ಬಣ್ಣದ ಕನಸಿನ ಗೋಪುರ ಕಟ್ಟಿಕೊಂಡಿರುತ್ತಾರೆ.

ಆದರೆ ನಮ್ಮ ಜೀವನದಲ್ಲಿ ನಡೆಯುವುದೇ ವಿಭಿನ್ನ, ವಿದ್ಯಾಭ್ಯಾಸ ಮಾಡುವಾಗ ಹಲವು ಸಮಸ್ಯೆಗಳಿಂದ ಸರಿಯಾಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ವಿದ್ಯಾಬ್ಯಾಸ ಮುಗಿದ ನಂತರ ಹಲವು ವರ್ಷ ಹುಡುಕಿದರೂ ಸೂಕ್ತ ಉದ್ಯೋಗ ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕರು ನಮ್ಮ ನಿರೀಕ್ಷೆಯಷ್ಟು ವೇತನ ಬರುವುದಿಲ್ಲ. ಬರುವ ಅಲ್ಪ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಲು ಹೆಣಗಾಡಬೇಕಾಗುತ್ತದೆ. ಇನ್ನೂ ಮದುವೆ ಸರಿಯಾದ ವಯಸ್ಸಿನಲ್ಲಿ ಆಗಲು ಸಾಧ್ಯವಾಗುವುದೇ ಇಲ್ಲ, ಅದಕ್ಕೆ ನೂರೊಂದು ಕಾರಣ. ಜೀವನದಲ್ಲಿ ಸಂತೋಷಕ್ಕಿಂತ ದುಃಖವೇ ಅತಿಯಾಗಿ ಕಾಡುತ್ತದೆ.

ನಾವು ದೊಡ್ಡ ದೊಡ್ಡ ಕೋರ್ಸ್ಗಳನ್ನು ಓದಲು ಸಾಧ್ಯವಾಗಲಿಲ್ಲ ಎಂದು ದುಃಖಿಸುವುದರಲ್ಲಿ ಅರ್ಥವೇನಿದೆ ಹೇಳಿ. ಪ್ರಪಂಚದಲ್ಲಿ ಅದೆಷ್ಟೋ ಜನ ಕಡಿಮೆ ಓದಿರುವವರು ಕೂಡ ಹಲವು ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಇನ್ನು ಉದ್ಯೋಗದಿಂದ ಬರುತ್ತಿರುವ ಸಂಬಳ ತುಂಬಾ ಕಡಿಮೆ ಎಂದು ಆಲೋಚಿಸುತ್ತ ಕೂರುವುದು ಎಷ್ಟರ ಮಟ್ಟಿಗೆ ತಾನೇ ಸರಿ. ಕಡಿಮೆ ಸಂಬಳ ಪಡೆಯುತ್ತಿರುವ ಅದೆಷ್ಟು ಜನ ನಮ್ಮಂತೆಯೇ ಅಳುತ್ತ ಕೂತರೆ ಆ ಕಣ್ಣೀರಿನಿಂದ ಮಳೆ ಇಲ್ಲದೆ ಒಣಗಿರುವ ಅದೆಷ್ಟೋ ಕೆರೆಗಳೇ ತುಂಬುತ್ತವೆ. ಅಷ್ಟರ ಮಟ್ಟಿಗೆ ಕಡಿಮೆ ಸಂಬಳದಿಂದ ಜೀವನ ಸಾಗಿಸುತ್ತಿರುವವರ ಸಂಖ್ಯೆ ದ್ವಿಗುಣವಿದೆ. 

ಮದುವೆ ತಡವಾಯಿತು ಎಂದು ಬೇಸರ ಪಡುವ ಅಗತ್ಯವೇ ಇಲ್ಲ. ಅದೆಷ್ಟು ಜನ ಬೇಗ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ ಡೈವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದವರು ಸಾವಿರಾರು ಜನ. ಮದುವೆಯಾದ ಹಲವರು ಅನ್ಯೋನ್ಯತೆ ಇಲ್ಲದೆ, ಪ್ರೀತಿ, ವಿಶ್ವಾಸವಿಲ್ಲದೆ ವಿಧಿಯಿಲ್ಲದೆ ಜೀವನ ನಡೆಸುತ್ತಿದ್ದಾರೆ, ಇಂತವರ ಸಂಖ್ಯೆ ಲೆಕ್ಕವಿಲ್ಲದಷ್ಟು.

ಪ್ರತಿನಿತ್ಯವೂ ಯಾರೋ ಒಬ್ಬರು ನಮ್ಮನ್ನು ಉದ್ಯೋಗ, ಸಂಬಳ, ಮದುವೆ, ಮಕ್ಕಳು, ಕುಟುಂಬ ಸೇರಿದಂತೆ ನಮ್ಮಲ್ಲಿ ಇರಬಹುದಾದ ಕೆಲ ಸಮಸ್ಯೆಗಳ ಬಗ್ಗೆ ಬೇಕಂತಲೇ ಪ್ರಶ್ನೆ ಕೇಳುತ್ತಾರೆ. ಹೃದಯಕ್ಕೆ ನೋವಾಗುವಂತೆ ವರ್ತಿಸುತ್ತ, ಅವರ ಮಾತುಗಳ ಮೂಲಕ ಚುಚ್ಚುತ್ತಾರೆ. ಆಗಂತ ನಾವು ಅವರು ಕೇಳುವ ಪ್ರಶ್ನೆಗಳ ಬಗ್ಗೆ ಆಲೋಚಿಸುತ್ತ, ಚಿಂತಿಸುತ್ತ, ದುಃಖಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಂಡು, ದೈಹಿಕವಾಗಿ ಆರೋಗ್ಯ ಕೆಡಿಸಿಕೊಳ್ಳುವುದು ಮೂರ್ಖರ ಲಕ್ಷಣವಲ್ಲದೇ ಮತ್ತೇನು.

ನಾವು ಬದುಕುವುದೇ 60 ಅಥವಾ 65 ವರ್ಷ ಇರಬಹುದು, ಒಂದರ್ಥದಲ್ಲಿ ಇದು ಕೂಡ ಗ್ಯಾರಂಟಿ ಇಲ್ಲ. ಯಾವ ಕ್ಷಣ ಏನು ಬೇಕಾದರೂ ಆಗಬಹುದು. ಅಂತಹವುದರಲ್ಲಿ ನೆಗೆಟಿವ್ ವಿಷಯಗಳ ಬಗ್ಗೆ ಆಲೋಚಿಸುತ್ತ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡುವುದು ಸರಿಯೇ. 

ಶಿಕ್ಷಣ, ಉದ್ಯೋಗ, ಮದುವೆ, ವೇತನ, ಮಕ್ಕಳು, ಕುಟುಂಬ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಏನಾಗಬೇಕೋ ಅದೇ ಆಗುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಮುಂದೆ ಹೆಜ್ಜೆಯಾಕುತ್ತ ಜೀವನ ಸಾಗಿಸಬೇಕಷ್ಟೇ.

ಆತ್ಮವಿಶ್ವಾಸ, ಛಲದೊಂದಿಗೆ ಇರುವ ಈ ಅಲ್ಪ ವರ್ಷಗಳನ್ನು ಖುಷಿಯಿಂದ ಕಳೆಯೋಣ. ಯಾಕಂದ್ರೆ Life is too short, make the most of it. You don't know when your last day is. Live the way you want to live. ಇರುವಷ್ಟು ದಿನ ಖುಷಿ, ಸಂತೋಷ, ನೆಮ್ಮದಿಯಿಂದ ಇರೋಣ. ಭವಿಷ್ಯದ ಬದುಕಿನ ಬಗ್ಗೆ ಭರವಸೆ ಇಟ್ಟುಕೊಳ್ಳೊಣ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nice

ಅನಾಮಧೇಯ ಹೇಳಿದರು...

ಮಾನಸಿಕ ನೆಮ್ಮದಿ
ಪ್ರತಿಯೊಬ್ಬರು ಬಾಲ್ಯದಲ್ಲೇ ಹಲವು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅವರ ಆಸೆ ಆಕಾಂಕ್ಷಿಗಳು ನೂರಾರು ಇರುತ್ತಾರೆ ನಮಗೆ ಗೊತ್ತಿಲ್ಲದೆ ಹಾಗೆ ಆಗುವ ಈ ಒಂದು ಅಪಘಾತಗಳಿಂದ ಎಷ್ಟೋ ಜನರ ಕನಸುಗಳು ಮಾತನಾಡುವ ಸಣ್ಣ ಸಣ್ಣ ಮಾತುಗಳಿಂದ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ ಅದನ್ನು ಮೀಟ್ಟಿ ನಿಂತರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವ ನಿಮ್ಮ ಒಂದು ಹೀಗೆ ಸಲಹೆ ತುಂಬಾ ಚೆನ್ನಾಗಿದೆ ಎಲ್ಲರಲ್ಲಿ ಇದೇ ರೀತಿ ಛಲ ಇದ್ದು ಮುಂದೆ ಏನಾದರೂ ಸಾಧನೆ ಮಾಡಬೇಕೆಂಬ ಆಸೆಗಳಿದ್ದರೆ ಅವರವರ ಛಲಕ್ಕೆ ಅವರವರ ಆಸೆಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಯಾರೋ ಏನೋ ಮಾತಾಡಿದರೂ ಎಂದು ನಾವು ಮನಸ್ಸಿನಲ್ಲಿ ನೋವು ತಗೊಂಡು ಸುಮ್ಮನೆ ಇದ್ದರೆ ಅದು ಕೆಲಸಕ್ಕೆ ಬಾರದ ಜೀವನ ನಾವು ಹುಟ್ಟುವಾಗ ಏನನ್ನು ಕೊಂಡುಕೊಂಡು ಬರುವುದಿಲ್ಲ

muddukrishna nm ಹೇಳಿದರು...

ತುಂಬಾ ಉತ್ತಮವಾದ ಮಾಹಿತಿಯನ್ನ ನೀಡಿ ದೀರಿ
ಸರ್ ಧನ್ಯವಾದಗಳು

ಅನಾಮಧೇಯ ಹೇಳಿದರು...

Good message sir

ಅನಾಮಧೇಯ ಹೇಳಿದರು...

ಜೀವನಕ್ಕೆ ತುಂಬಾ ಅರ್ಥ ಪೂರ್ಣ ವಾಗಿದೆ ಸರ್, Tq🌹🍫

ಅನಾಮಧೇಯ ಹೇಳಿದರು...

ಒಳ್ಳೆಯ ಲೇಖನ

ಅನಾಮಧೇಯ ಹೇಳಿದರು...

ಅತ್ಯುತ್ತಮ ಮಾಹಿತಿ, ಮಾನಸಿಕ ಒತ್ತಡದಿಂದ ಮಾನಸಿಕ ಅಶ್ವಸ್ತತೆಯೊದಗಿ ಅನಾರೋಗ್ಯ ಪೀಡಿತರಾಗಬಹುದು ಅಥವಾ ಅಪಘಾತಗಳಂತ ವಿಷಾದಗಳಾಗಬಹುದು,
ಅಮ್ಮ ಕೊಟ್ಟ ಜನ್ಮ, ಅಪ್ಪ ಕೊಟ್ಟ ಹಣ ಸಾರ್ಥಕ ಮಾಡಿಕೊಳ್ಳಿ.
ಸಾಧನೆಯೊಂದಿಗೆ ಸಾಧಕರಾಗಿ ನೆಮ್ಮದಿ ಜೀವನ ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾಗಿ,
@ಕುಂಬಾರಪೇಟೆ ಮಂಜುನಾಥ್

ಅನಾಮಧೇಯ ಹೇಳಿದರು...

🙂👍👍🙏🙏🙏🙏

ಅನಾಮಧೇಯ ಹೇಳಿದರು...

🙂👍👍🙏🙏🙏🙏

ಅನಾಮಧೇಯ ಹೇಳಿದರು...

ನನ್ನ ಒಂದು ಸಲಹೆ ಇದೆ ಏನಂದ್ರೆ ಇದು ಜೀವನಕ್ಕೆ ತುಂಬಾ ಅರ್ಥಪೂರ್ಣವಾದಂತ ಮಾತು ಎಂದು ನಾನು ಭಾವಿಸುತ್ತೇನೆ ನಿಮ್ಮ ಈ ಒಂದು ಮಾತುಗಳು ತುಂಬಾ ಚೆನ್ನಾಗಿದೆ ಅದೇ ರೀತಿ ಜೀವನ ಎಂದರೆ ಏನು ಎಂಬುದು ಈ ಲೇಖನದಲ್ಲಿ ನಮಗೆ ಅರ್ಥವಾಗುತ್ತದೆ. ನಾನು ನಿಮ್ಮಲ್ಲಿ ಒಂದು ಸಲಹೆ ಕೊಡುವುದೇನೆಂದರೆ ಈ ಲೇಖನವನ್ನು ಓದಿದ ಮೇಲೆ ನನಗೆ ಅನಿಸಿದ್ದೇನೆಂದರೆ ಮೇಲೆ ಉದಾಹರಣೆಯಾಗಿ ಕೊಟ್ಟಿರುವಂತಹ ಇವರೆಲ್ಲರೂ ಒಂದು ಇನ್ಸೂರೆನ್ಸ್ ಏನಾದರೂ ತೆಗೆದುಕೊಂಡಿದ್ದೆ ಆದರೆ ಅವರ ತಂದೆ ತಾಯಿಗೂ ಇಲ್ಲ ಊರನ್ನು ನಂಬಿಕೊಂಡಿರುವಂಥವರಿಗೆ ಕನಿಷ್ಠ ಅವರ ಮುಂದೆ ಜೀವನವನ್ನು ಸಾಗಿಸಲಿಕ್ಕೆ ಬೇಕಾದಂತಹ ಮೊತ್ತವನ್ನು ಅವರು ಪಡೆಯುತ್ತಿದ್ದರು ಎಂಬುದು ನನ್ನ ಸಲಹೆ ಯಾಕೆಂದರೆ ಯಾರು ಯಾವಾಗ ಬೇಕಾದರೂ ಸಾಯಬಹುದು ಆದ್ದರಿಂದ ಒಂದು ಟರ್ಮ್ ಪ್ಲಾನ್ ತೆಗೆದುಕೊಳ್ಳುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು

ಅನಾಮಧೇಯ ಹೇಳಿದರು...

ಗೂಗಲ್ ನಲ್ಲಿ ಟೈಪ್ ಮಾಡಿದರೆ ಎಲ್ಲವೂ ಸಿಗುವ ಮಾಹಿತಿ. ನಮ್ಮ ಬದುಕಿನ ಬಗ್ಗೆ ಹಾಗೂ ಎಷ್ಟು ದಿನ ಬದುಕುತ್ತೇವೆ ಅಂತ ಕೇಳಿದರೆ ಅದಕ್ಕೆ ಮಾಹಿತಿ ಇರುವುದಿಲ್ಲ ಹಾಗೆ ರೈತರು ಬೆಳೆದ ಬೆಳೆಗೆ ಪರಿಹಾರ ಸಿಗುವ ಗೂಗಲ್ ರಾಗಿ ಬೆಳೆಯಲು ಆಗುವುದಿಲ್ಲ.ನಿಮ್ಮ ವಿಷಯದಲ್ಲಿ ಅನೇಕ ಜ್ಞಾನ ವಿಷಗಳು ನಮ್ಮನ್ನು ಅರಿವಿಗೆ ಜೊತೆಯಾಗಿಸಿ ನಡೆಸುತ್ತವೆ ಸರ್ ಉದಾಹರಣೆಗೆ..M com ಪದವೀಧರ ಸಂತೋಷ ಇಂಜಿನಿಯರ್ ಪದವೀಧರ ಆಕಾಶ್ ಹಾಗೂ ಅಭಿನಯ ಇವರ ನೈಜ ಜೀವನ ಎಲ್ಲಾರ ಮೇಲೆ ಪರಿಣಾಮ ಬೀರುತ್ತದೆ

ಸುಮ್ಮನೆ ಇದ್ದರೂ ಟೀಕಿಸುವ ಜನ. ಏನೇ ಮಾಡಿದರೂ ಅಲ್ಲೊಂದು ನ್ಯೂನ್ಯತೆ ಹುಡುಕುತ್ತಾರೆ ಮತ್ತು ಅಣಕಿಸುತ್ತಾರೆ ಅದನ್ನು ಅಭಿನಯ ಅವರ ರೀತಿ ತೆಗೆದುಕೊಂಡು ಇರುವಷ್ಟು ದಿನ ಸಂತೋಷವಾಗಿ ಬದುಕಬೇಕು ಅನ್ನೋದು ಸತ್ಯ... ನಿಮ್ಮ ಬರಹಗಳೇ ನಮಗೆ ಪ್ರೇರಣೆ ಸರ್.. ಮತ್ತಷ್ಟು ಲೇಖನಗಳು ಬರಲಿ ಅನ್ನೋ ನಿರೀಕ್ಷೆಯಲ್ಲಿ ಈ ಓದುಗನ ಆಶಯ.

ಸುನೀಲ್. ಎಂ .ಬಂಗಾರಪೇಟೆ

ಅನಾಮಧೇಯ ಹೇಳಿದರು...

Good one's

Prashanthakumara V R ಹೇಳಿದರು...

ಒಬ್ಬರು ಚೆನ್ನಾಗಿ ಬರೆಯುತ್ತಿದ್ದರೆ ಅವರನ್ನು ಒಳ್ಳೆಯ ಬರಹಗಾರ ಎನ್ನಬಹುದು, ಬೇಸಾಯ ಮಾಡುತ್ತಿದ್ದರೆ ಕ್ರುಶಿಕ, ಚಿತ್ರ ಬಿಡಿಸುತ್ತಿದ್ದರೆ ಚಿತ್ರಕಾರ, ಚಿಂತನೆಗಳನ್ನು ನಡೆಸುತ್ತಿದ್ದರೆ ಚಿಂತಕ. ಹೀಗೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಎತ್ತಿದ ಕೈ ಆಗಿದ್ದರೆ ಆತನನ್ನು ಬಹುಮುಕ ಪ್ರತಿಬೆ ಎಂದು ಕೂಡ ಕರೆಯಬಹುದು. ಆದರೆ, ಒಬ್ಬನೇ ವ್ಯಕ್ತಿ ಒಳ್ಳೆಯ ಬರಹಗಾರ, ಚಿತ್ರಕಾರ, ಚಿಂತಕ, ಅರಿಗ, ಸಾಹಸಿ, ಪರಿಸರ ಪ್ರೇಮಿ, ಹೋರಾಟಗಾರ ಮತ್ತು ನೇಸರನ ಅಡಿಯಲ್ಲಿ ಬರುವ ಯಾವ ವಿಶಯದ ಮೇಲೆ ಬೇಕಾದರು ತೂಕವಾದ ಮಾತುಗಳನ್ನಾಡಬಲ್ಲ ಅಳವನ್ನು ಹೊಂದಿರುವವರಿಗೆ ಏನೆಂದು ಕರೆಯಬಹುದು? ಹೌದು, ಅವರನ್ನು ‘ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ’ ಎಂದೇ ಕರೆಯಬೇಕು. ಸಿರಿಗನ್ನಡದಲ್ಲಾಗಲಿ, ಇನ್ನಾವುದೇ ನುಡಿಯಲ್ಲಾಗಲಿ ಈ ವ್ಯಕ್ತಿಯನ್ನು ಬಣ್ಣಿಸಲು ಬೇಕಾಗುವ ಒಂದೇ ಪದ ಸಿಗುವುದಿಲ್ಲ ಎಂಬುದು ನನ್ನ ಅನಿಸಿಕೆ.

ಅನಾಮಧೇಯ ಹೇಳಿದರು...

అన్నిటికి కాలమే ఉత్తరం చెబుతుంది అనే లాస్ట్ లైన్ సూపర్ సార్ ఐ లైక్ యు సార్