ಭಾನುವಾರ, ಫೆಬ್ರವರಿ 16, 2025

"ಅಮ್ಮನ ಹೃದಯದೊಳಗಿನ ಅಂತರಾಳ"..

⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ
ಇಂಗ್ಲೀಷ್ನಲ್ಲಿ ಒಂದು ಸುಂದರವಾದ ವಾಕ್ಯವಿದೆ, God could not be every where and therefore he created mothers. ಇದರರ್ಥ ದೇವರು ಎಲ್ಲಾ ಜಾಗದಲ್ಲಿರಲು ಸಾಧ್ಯವಾಗದೆ ಇರುವುದರಿಂದ, ಪ್ರತಿ ಮನೆಯಲ್ಲೂ ತಾಯಿಯನ್ನು ದೇವರು ಸೃಷ್ಟಿಸಿದ್ದಾನೆ. ಆ ತಾಯಿಯೇ ದೇವರಿಗಿಂತ ಹೆಚ್ಚಾಗಿ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಾಳೆ ಎಂಬ ಭಾವನಾತ್ಮಕ ಸಂದೇಶವನ್ನು ಈ ವಾಕ್ಯವು ಸಾರುತ್ತದೆ.

ಹಾಗೇ ನೋಡಿದರೆ ತಾಯಿ ಪ್ರೀತಿಯ ಮುಂದೆ, ಉಳಿದ ಎಲ್ಲಾ ಪ್ರೀತಿ, ಪ್ರೇಮ, ಇತರೆ ವಿಷಯಗಳು ನಗಣ್ಯ. ಈ ಪ್ರಪಂಚದಲ್ಲಿ ಯಾವುದೇ ಸ್ವಾರ್ಥ, ಆಸೆ, ಲಾಭಗಳಿಲ್ಲದೇ ತನ್ನ ಇಡೀ ಜೀವನವನ್ನು ತನ್ನ ಮಕ್ಕಳ ಅಭಿವೃದ್ದಿಗಾಗಿ ಮುಡಿಪಾಗಿಯಿಡುವ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.

ನನ್ನ ಪರಿಚಿತ ಹಿರಿಯ ಸ್ನೇಹಿತ ಕಾರ್ತಿಕ್ ಎಂಬುವವರು ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರೂ ಒಂದೇ ಕಾಲೇಜಿನಲ್ಲಿ 3 ವರ್ಷ ವಿದ್ಯಾಭ್ಯಾಸ ಮಾಡಿದವರು. ಅವರ ಸ್ನೇಹವು ಕಾಲಾನಂತರ ಪ್ರೀತಿಯಾಗಿ ಮಾರ್ಪಾಡಾಗಿ ಮದುವೆಯಾಗಲು ನಿರ್ಧರಿಸುತ್ತಾರೆ. ಪ್ರಾರಂಭದಲ್ಲಿ ಹುಡುಗಿ ಕುಟುಂಬದವರ ವಿರೋಧವಿದ್ದರು, ನಂತರ ಮಕ್ಕಳ ಆಸೆಗೆ ಬೆಲೆ ಕೊಟ್ಟು ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿಸುತ್ತಾರೆ. ವಿಶೇಷವೆಂದರೆ ತಮ್ಮ ಪ್ರೀತಿ ಸದಾ ನೆನಪಿನಲ್ಲಿ ಇರಲಿ ಎಂದು ಫೆ.14 ರ ವ್ಯಾಲೆಂಟೆನ್ಸ್ ಡೇ ದಿನವೇ ಮದುವೆಯಾಗುತ್ತಾರೆ.

ನನ್ನ ಸ್ನೇಹಿತನಿಗೆ ತಂದೆ ಇಲ್ಲ. ತಾಯಿ ಗಾರ್ಮೆಂಟ್ಸ್ ಒಂದರಲ್ಲಿ ಸಹಾಯಕಿಯಾಗಿ ಸಣ್ಣ ಕೆಲಸ ಮಾಡುತ್ತ, ಕಷ್ಟಪಟ್ಟು ಮಗನನ್ನು ಪದವಿಯವರೆಗೂ ಓದಿಸುತ್ತಾಳೆ. ತನ್ನ ಮಗನಿಗೆ ಯಾವುದೇ ಕೊರತೆಯಾಗದಂತೆ ಪ್ರೀತಿಯಿಂದ ಸಾಕುತ್ತಾಳೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಆತ ಇಷ್ಟ ಪಟ್ಟ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಲು ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಒಪ್ಪಿಕೊಳ್ಳುತ್ತಾಳೆ. ಮಗ ಜೀವನದಲ್ಲಿ ನೆಮ್ಮದಿ, ಖುಷಿಯಾಗಿದ್ದಾರೆ ಸಾಕು ಎಂಬ ಆಸೆ ತಾಯಿಯದ್ದು.

ವಿವಾಹವಾದ ಒಂದೇ ವರ್ಷಕ್ಕೆ ನನ್ನ ಸ್ನೇಹಿತನ ಹೆಂಡತಿ ಒಂದಾಗಿದ್ದ ಮನೆಯನ್ನು ಎರಡು ಮನೆ ಮಾಡಿಸುತ್ತಾಳೆ. ವಯಸ್ಸಾದ ನಿಮ್ಮ ತಾಯಿಯ ಸೇವೆ ಮಾಡಲು ನನಗೇನು ಕರ್ಮ..? ಅವರ ಆರೋಗ್ಯ ಸರಿ ಇಲ್ಲವೆಂದರೆ ನಾನು ನಿದ್ದೆಗೆಟ್ಟು ಹಾರೈಕೆ ಮಾಡಬೇಕೆ. ನನ್ನನ್ನು ಪ್ರೀತಿಸಿ, ಮದುವೆಯಾಗಿದ್ದು ಯಾವ ಪುರುಷಾರ್ಥಕ್ಕೆ, ವಯಸ್ಸಾದವರನ್ನು ನೋಡಿಕೊಳ್ಳಲು ನನ್ನ ಇಡೀ ಜೀವನ ವ್ಯರ್ಥ ಮಾಡಬೇಕೆ, ಜೀವನದಲ್ಲಿ ಯಾವುದೇ ಸಂತೋಷವಿಲ್ಲ, ಯಾವುದೇ ಜಾಲಿ ಟ್ರಿಪ್ ಹೋಗಲು ಸಾಧ್ಯವಿಲ್ಲ. ಈ ಮನೆಯೇ ನನಗೆ ನರಕಕ್ಕೆ ಸಮಾನ ಎಂದು ಪದೇ ಪದೇ ಗಂಡನ ಮುಂದೆ ಗಲಾಟೆ ಮಾಡುತ್ತಾಳೆ. 

ನಾವು ಬೇರೆ ಮನೆ ಮಾಡಿ, ಇಲ್ಲಿಂದ ಹೊರಟು ಖುಷಿಯಾಗಿ ಜೀವನ ಕಳೆಯ ಬೇಕೆಂಬ ಹೆಂಡತಿಯ ಒತ್ತಾಯಕ್ಕೆ ಮಣಿದು, ನನ್ನ ಸ್ನೇಹಿತ ಹೆತ್ತು, ಹೊತ್ತು ಸಾಕಿ, ಕಷ್ಟ ಎಂದರೆ ಏನು ತಿಳಿಯದಂತೆ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೆಂಡತಿ ಜೊತೆಗೆ ಹೊಸ ಮನೆಯನ್ನು ಸೇರುತ್ತಾನೆ.

ಆದರೂ ಆ ತಾಯಿಯು ಮಗನ ಬಗ್ಗೆಯಾಗಲಿ, ಸೊಸೆಯ ಬಗ್ಗೆಯಾಗಲಿ ಒಂದೇ ಒಂದು ದಿನವೂ ಕೂಡ ಕೆಟ್ಟದಾಗಿ ಹೇಳುವುದಿಲ್ಲ, ಬೇಸರ ಮಾಡಿ ಕೊಳ್ಳುವುದಿಲ್ಲ. ನನ್ನ ಮಗ ನನ್ನಿಂದ ದೂರವಾಗಿ, ಬೇರೆ ಮನೆಯಲ್ಲಿದ್ದರೂ ಚಿಂತೆಯಿಲ್ಲ. ಆತ, ಆತನ ಹೆಂಡತಿ ಸಂತೋಷವಾಗಿದ್ದರೆ, ನನಗೆ ಅಷ್ಟೇ ಸಾಕು ಎಂದು ಮನದಲ್ಲೇ ಭಾವಿಸುತ್ತಿದ್ದಳು.

ಇತ್ತ ಹೊಸ ಮನೆ ಮಾಡಿದರು, ತನ್ನ ಐಷಾರಾಮಿ ಜೀವನ, ಅತಿಯಾದ ಆಸೆಗಳ ಈಡೇರಿಕೆ ಪೂರಕವಾಗಿ ಗಂಡ ಸ್ಪಂದಿಸುತ್ತಿಲ್ಲ ಎಂದು ಪ್ರತಿನಿತ್ಯವು ಜಗಳವಾಡುತ್ತ, ಕೊನೆಗೆ ಆತನ ಹೆಂಡತಿ ವಿವಾಹ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರುತ್ತಾಳೆ. ಅಂತೂ ಇಬ್ಬರಿಗೂ ನ್ಯಾಯಾಲಯ ವಿಚ್ಛೇದನ ನೀಡಿತು. ಆ ಮೂಲಕ ವ್ಯಾಲೆಂಟೆನ್ಸ್ ಡೇ ದಿನ ಮದುವೆಯಾಗಿದ್ದಕ್ಕೆ, ಈ ಇಬ್ಬರ ಜೀವನವು ಸಾರ್ಥಕವಾಯಿತು. 

ಗಮನಾರ್ಹ ಅಂಶವೆಂದರೆ ನನ್ನ ಸ್ನೇಹಿತ ವಿಚ್ಛೇದನ ನಂತರ ಜೀವನದಲ್ಲಿ ಜಿಗುಪ್ಸೆ, ನೋವು ಹೊಂದಿ, ಕೊನೆಗೆ ತನ್ನ ತಾಯಿಯ ಮನೆ ಸೇರಿಕೊಳ್ಳುತ್ತಾನೆ. ಆದರೂ ಆ ತಾಯಿ ನಿನ್ನ ಹೆಂಡತಿ ಮಾತು ಕೇಳಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆ. ಈಗ ನೀನು ಯಾವ ಮುಖವಿಟ್ಟು ಕೊಂಡು ಮತ್ತೆ ವಾಪಸ್ ಬಂದೇ ಎಂದು ಒಂದೇ ಒಂದು ಮಾತನ್ನು ಸಹ ಆ ತಾಯಿ ಕೇಳಲಿಲ್ಲ. ಸದ್ಯ ಮಗ ಬಂದಿದ್ದಾನೆ ಅಷ್ಟೇ ಸಾಕು ಎಂದು ಭಾವಿಸುತ್ತಾಳೆ. 

ಮಗ ಬೇಸರದಲ್ಲಿರುವುದನ್ನು ಕಂಡು ಆತನನ್ನು ಸಂತೈಸಿ, ಕಷ್ಟವೆನೆಂದು ಕೇಳುತ್ತಾಳೆ. ಮಗ, ಸೊಸೆಯ ಡೈರ್ವೋಸ್ ವಿಷಯ ತಿಳಿದ ತಾಯಿ ಸಾಕಷ್ಟು ನೊಂದು, ತನ್ನ ಒಬ್ಬನೇ ಮಗನಿಗೆ ಈ ರೀತಿಯಲ್ಲಿ ಆಯಿತ್ತಲ್ಲವೇ ಎಂದು ಚಿಂತಿಸಿ, ಆಲೋಚಿಸಿ ನನ್ನ ಹೆಸರಲ್ಲಿರುವ 1 ಎಕರೆ ಜಮೀನು, ಈ ಸಣ್ಣ ಮನೆಯನ್ನು ಬೇಕಾದರೆ ನಿನ್ನ ಹೆಂಡತಿ ಹೆಸರಿಗೆ ನಾನು ಮಾಡಿಕೊಡುತ್ತೇನೆ. ಉಳಿಸಿರುವ ಸ್ವಲ್ಪ ಹಣವಿದ್ದು, ಅದನ್ನು ಆಕೆಗೆ ಕೋಡೋಣ. ನೀವಿಬ್ಬರೂ ಜೊತೆಗಿದ್ದು, ಖುಷಿಯಾಗಿದ್ದರೆ ಸಾಕು. ಸೊಸೆ ನನ್ನನ್ನು ನೋಡಿಕೊಳ್ಳದಿದ್ದರು ನನಗೇನು ಕೋಪವಿಲ್ಲ. 

ಆದರೆ ನೀವಿಬ್ಬರು ಅನ್ಯೋನ್ಯವಾಗಿ ಜೀವನ ನಡೆಸಿದರೆ ನನಗೆ ಅಷ್ಟೇ ಸಾಕು, ಅದೇ ನನಗೆ 100 ವರ್ಷ ಬದುಕಿದ ಹಾಗೇ ಎಂದು ಆ ತಾಯಿಯ ಮಾತೃ ಹೃದಯದ ಅನಿಸಿಕೆಗಳು ಕೇಳಿದರೆ ಎಂತವರ ಹೃದಯವು ಕರಗುತ್ತದೆ. 

ಕಷ್ಟ ಪಟ್ಟು ಬೆಳೆಸಿದ ಮಗ ನೀನು ನನಗೆ ಬೇಡ ಎಂದು ನೇರವಾಗಿ ತಿರಸ್ಕರಿಸಿ ಹೇಳಿದರು, ಸ್ವಲ್ಪವು ಬೇಸರಿಸಿಕೊಳ್ಳದೇ ಮಗನ ಯೋಗಕ್ಷೇಮದ ಬಗ್ಗೆ ಆಲೋಚಿಸುವ ಆ ತಾಯಿಯ ವ್ಯಕ್ತಿತ್ವ ಬೇರೆಲ್ಲಿ ಕಾಣಲು ಸಾಧ್ಯ..?

ಮೊನ್ನೆ ಕಾರ್ಯ ನಿಮ್ಮಿತ್ತ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಆ ಮಹಿಳೆಯು ತನ್ನ ಮಗನಿಗೆ ಊಟ ಮಾಡಿಸಿ, ನಂತರ ಕೈ ಎಲ್ಲಿ ಎತ್ತಿಕೊಂಡು ರೂಂ ಒಳಗೆ ಹೋಗಿ ಮಲಗಿಸಿ ಬಂದಳು. ಆತನ ಹೆಸರು ಪ್ರವೀಣ್, ವಯಸ್ಸು 21 ವರ್ಷವಿರಬಹುದು. ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶಾಲೆ ಮುಗಿಸಿ ಮನೆಗೆ ಬರಲು ರಸ್ತೆ ದಾಟುವಾಗ ದುರ್ದೈವದಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿ ತನ್ನ ಎರಡು ಕೈ ಮತ್ತು ಎರಡು ಕಾಲುಗಳ ಪೂರ್ತಿ ಸ್ವಾಧೀನ ಕಳೆದು ಕೊಂಡಿದ್ದಾನೆ. 

ಪೂರ್ಣ ವಿಕಲಚೇತನಕ್ಕೆ ತುತ್ತಾದ ಕಾರಣ, ಕಳೆದ 5 ವರ್ಷಗಳಿಂದ ಮಲಗಿದ ಜಾಗದಲ್ಲೇ ಉಳಿಯುವಂತಹ ಧಾರುಣ ಸ್ಥಿತಿ ಈ ಹುಡುಗನದ್ದು. ದುರದೃಷ್ಟವೆಂದರೆ ಈ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡು 3 ವರ್ಷಗಳಾಗಿದೆ. ಇದ್ದ ಒಬ್ಬ ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ, ತನ್ನನ್ನು ಖುಷಿಯಿಂದ ನೋಡಿಕೊಳ್ಳುತ್ತಾನೆ ಎಂದು ಭಾವಿಸಿದ್ದಳು, ಆದರೆ ವಿಧಿ ನಿರ್ಣಯಕ್ಕೆ ತಲೆ ಭಾಗಿ ಈಗ ಭುಜದ ಎತ್ತರಕ್ಕೆ ಬೆಳೆದ ಮಗನನ್ನು ಶಾಶ್ವತವಾಗಿ ಹಾಸಿಗೆಯಲ್ಲೇ ನೋಡುವ ಆಕೆಯ ಸ್ಥಿತಿ ಶತ್ರುವಿಗೂ ಬರಬಾರದು.

ಕಳೆದ 5 ವರ್ಷಗಳಿಂದ ಈಕೆ ತನ್ನ ಮಗನಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮಾಡುತ್ತ, ಆ ನಂತರ ಕೂಲಿ ಕೆಲಸ ಮಾಡಿ, ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಮಗನನ್ನು ಸಾಕುತ್ತಿದ್ದಾಳೆ. ತನ್ನ ಮಗನನ್ನು ಚಿಕ್ಕ ಮಗುವಿನಂತೆ, ಹಾರೈಕೆ ಮಾಡುತ್ತಾಳೆ. ಆ ತಾಯಿಯ ಹೃದಯದ ನಿಷ್ಕಲ್ಮಷ ಪ್ರೀತಿಯನ್ನು ವರ್ಣಿಸಲು ಹುಡುಕಿದರು ಪದಗಳು ಸಿಗುವುದಿಲ್ಲ. 

ನನ್ನ ಮಗನ ಈ ಸ್ಥಿತಿ ನೋಡಿ, ನಾನೆಂದೋ ಪ್ರಾಣ ಬಿಡಬೇಕು ಎಂದುಕೊಂಡಿದ್ದೆ. ಆದರೆ ಆತನಿಗೆ ಇರುವುದು ನಾನೊಬ್ಬಳೇ ದಿಕ್ಕು. ನಾನೇನಾದರೂ ಪ್ರಾಣ ಕಳೆದುಕೊಂಡರೆ, ನನ್ನ ಮಗನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ. ಮೊದಲೇ ಆತ ಅಪಘಾತವಾಗಿ ಜೀವನದಲ್ಲಿ ತತ್ತರಿಸಿ ಹೋಗಿದ್ದಾನೆ. ನಾನು ಇಲ್ಲದೇ ಹೋದರೆ ಆತ ಅನಾಥನಾಗುತ್ತಾನೆ, ನನ್ನ ಮಗನಿಗೆ ಆ ಸ್ಥಿತಿ ಬರಬಾರದೆಂಬ ಏಕೈಕ ಉದ್ದೇಶವೇ ನಾನಿಂದು ಜೀವಿಸಿರುವುದಕ್ಕೆ ಮೂಲ ಕಾರಣ ಎಂದು ಆಕೆ ತನ್ನ ಮನಸ್ಸಿನ ಅಂತರಾಳವನ್ನು ಹೇಳುವ ಮೂಲಕ ಮಗನ ಮೇಲಿನ ಮಮಕಾರವನ್ನು ವ್ಯಕ್ತಪಡಿಸುತ್ತಾಳೆ. 

ಸ್ವಯಂ ಸೇವಾ ಸಂಸ್ಥೆಯೊಂದು ಹಳ್ಳಿಯೊಂದರಲ್ಲಿ ಮಹಿಳೆಯರ ಸಬಲೀಕರಣ ಸಂಬಂಧ ಕಾರ್ಯಕ್ರಮವೊಂದು ಹಮ್ಮಿಕೊಂಡಿತ್ತು. ನನ್ನನ್ನು ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಪೈಕಿ ಒಬ್ಬ ಮಹಿಳೆ ಕಾರ್ಯಕ್ರಮ ಮುಗಿದ ನಂತರ, ನನ್ನ ಬಳಿಗೆ ಬಂದು ಸಾರ್ ಐಎಎಸ್ ಅಧಿಕಾರಿ ಆಗಬೇಕಾದರೆ ಏನು ವಿದ್ಯಾಭ್ಯಾಸ ಮಾಡಬೇಕು ಎಂದು ಪ್ರಶ್ನೆ ಕೇಳಿದಳು. ನಾನು ಯಾರನ್ನು ಓದಿಸಲು ಕೇಳುತ್ತಿದ್ದೀಯಮ್ಮ ಎಂದಾಗ ನನ್ನ ಮಗಳನ್ನು ಸಾರ್ ಎಂದು ಉತ್ತರಿಸಿದಳು.

ಹಾಗೆಯೇ ಆಕೆ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತ, ಅವರ ತಂದೆ ತಾಯಿ ತುಂಬಾ ಕಡು ಬಡವರಾದ್ದರಿಂದ ಈಕೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, 16 ನೇ ವಯಸ್ಸಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಗಂಡನ ಮನೆಯವರು ಕೂಡ ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲ. ಅದರಲ್ಲೂ ಆಕೆಯ ಗಂಡ ಪ್ರತಿದಿನವೂ ಕುಡಿದು ಬಂದು ಗಲಾಟೆ ಮಾಡುತ್ತ, ಜೀವನ ನಿರ್ವಹಣೆಗೆ ಒಂದು ರೂಪಾಯಿಯನ್ನು ಕೊಡದೇ ನರಕ ತೋರಿಸುತ್ತಿದ್ದ. ದಿನವೂ ಕುಡಿದು, ಕುಡಿದು ಆರೋಗ್ಯ ಹಾಳಾಗಿ ಹಲವು ವರ್ಷಗಳ ಹಿಂದೆಯೇ ಆತ ನಿಧನ ಹೊಂದಿದ್ದನಂತೆ. 

ನನಗೆ ಇಬ್ಬರೂ ಹೆಣ್ಣು ಮಕ್ಕಳು ಸಾರ್, ದೊಡ್ಡ ಮಗಳು 7 ನೇ ತರಗತಿ, 2 ನೇ ಮಗಳು 4 ನೇ ತರಗತಿಯನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

ಜೀವನದ ನಿರ್ವಹಣೆಗಾಗಿ, ಮಕ್ಕಳ ಶಿಕ್ಷಣ, ಅವರ ಮದುವೆಗಾಗಿ ಅನಿವಾರ್ಯವಾಗಿ ಸರಿಯೋ, ತಪ್ಪೋ ವೇಶ್ಯೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ ಸಾರ್. ನಮ್ಮ ತವರು ಮನೆಯವರು ಅವರ ಬಡತನ ಕಾರಣದಿಂದ ನನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಬಾಲ್ಯ ವಿವಾಹ ಮಾಡಿದರು. ಇನ್ನು ಮದುವೆಯಾದ ನಂತರ ಗಂಡ ಮದ್ಯಪಾನ ದಾಸನಾಗಿ ಕುಡಿದು ನಮ್ಮನ್ನು ಹೊಡೆಯುವುದು ಬಿಟ್ಟರೆ ಆತ ನಮಗಾಗಿ ಒಂದು ರೂಪಾಯಿಯನ್ನು ಸಂಪಾದಿಸಿ ಕೊಡಲಿಲ್ಲ, ಬದಲಾಗಿ ನಮ್ಮ ಮೂರು ಜನರನ್ನು ಬೀದಿಪಾಲು ಮಾಡಿ ಹೋದ. ನಮ್ಮ ಕಷ್ಟಗಳನ್ನು ನೋಡಿ ಸಂಬಂಧಿರ‍್ಯಾರು ಹತ್ತಿರವು ಸುಳಿಯಲಿಲ್ಲ. 

ಬಡತನ, ಅಸಹಾಯಕತೆ, ನೋವು ಹಾಗೂ ನನ್ನ ಇಬ್ಬರ ಮಕ್ಕಳ ಜೀವನಕ್ಕಾಗಿ ನನಗೆ ಇಷ್ಟವಿಲ್ಲದಿದ್ದರು ವೇಶ್ಯೆ ವೃತ್ತಿಗೆ ತಳ್ಳಲ್ಪಟ್ಟೆ. ಈ ವೃತ್ತಿಯಲ್ಲಿ ಪ್ರತಿದಿನವೂ ಅನುಭವಿಸುವ ನರಕಯಾತನೆ, ಸಂಕಟ, ಕಣ್ಣೀರಿನ ನೋವು ನನಗೆ ಮಾತ್ರ ಗೊತ್ತು, ಹೊರಗಿನ ಪ್ರಪಂಚದವರಿಗೆ ನಾನು ಮಾಡುವ ಕೆಲಸದ ಬಗ್ಗೆ ಕೀಳರಿಮೆ ಇರಬಹುದು. ಆದರೆ ಇದು ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲ, ಬದಲಾಗಿ ನನ್ನ ಹಣೆಬರಹವೇ ಈ ಕೂಪಕ್ಕೆ ನನ್ನನ್ನು ತಳ್ಳಿತು. 

ಈಗ ಇಲ್ಲಿಂದ ಹೊರ ಬರಬೇಕಾದರೂ ಅಸಾಧ್ಯವಾದ ಮಟ್ಟಿಗೆ ನನ್ನ ಬದುಕು ನಿಂತಿದೆ ಎಂದು ಹೇಳಿದಾಗ ಆಕೆಯ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬಂತು. ನೆಮ್ಮದಿ, ಸಂತೋಷವಿಲ್ಲದ ಜೀವನ ಯಾರಿಗೆ ತಾನೇ ಬೇಕು ಸಾರ್. ಆದರೂ ವಿಧಿಯ ಆಟಕ್ಕೆ ನಾನು ಬಲಿಯಾಗಿದ್ದೇನೆ ಅಷ್ಟೇ ಎನ್ನುತ್ತಾಳೆ.

ಕೆಲವರು ನನ್ನನ್ನು ತಾತ್ಸಾರವಾಗಿ ಕಾಣಬಹುದು, ಆದರೂ ನನ್ನ ವೇದನೆ, ನೋವು, ಕಷ್ಟ ಯಾರಿಗೇ ಹೇಳುವುದು. ಯಾರು ತಾನೇ ನಮ್ಮ ಕಷ್ಟಗಳಿಗೆ ಆಸರೆಯಾಗುತ್ತಾರೆ ಹೇಳಿ. ನನ್ನ ದೊಡ್ಡ ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕು. ಚಿಕ್ಕ ಮಗಳನ್ನು ವೈದ್ಯಳಾಗಿ ಮಾಡಬೇಕು. ಪ್ರತಿದಿನವೂ ಕಣ್ಣಿರಾಕಿ ಸಂಪಾದಿಸುವ ಅಷ್ಟು ಹಣ ನನ್ನ ಮಕ್ಕಳ ಶಿಕ್ಷಣ, ಅವರ ಸಂತೋಷಕ್ಕಾಗಿ ಮಾತ್ರ ವಿನಿಯೋಗಿಸುತ್ತೇನೆ. ನನಗಂತೂ ಬೇರೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ನನ್ನ ಜೀವನವಂತೂ ಹೇಗೋ ಅತಂತ್ರವಾಯಿತು. ನನ್ನ ಇಂತಹ ಸ್ಥಿತಿ ಯಾವುದೇ ಕಾರಣಕ್ಕೂ ನನ್ನ ಮಕ್ಕಳಿಗೆ ಬರಬಾರದು. 

ನನ್ನ ಮಕ್ಕಳು ಚೆನ್ನಾಗಿ ಓದಿ, ದೊಡ್ಡ ಅಧಿಕಾರಿಗಳಾಗಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಹೇಳುವ ಆಕೆಯು ತನ್ನ ಮಕ್ಕಳ ಮೇಲಿಟ್ಟಿರುವ ಅತೀವ ಪ್ರೀತಿಗೆ ಬೆಲೆ ಕಟ್ಟಲು ಹೇಗೆ ಸಾಧ್ಯ..? 

ಹಾಗೇ ನೋಡಿದರೆ ಈ ಪ್ರಪಂಚದಲ್ಲಿ ನಮ್ಮನ್ನು ಅತಿಯಾಗಿ ಪ್ರೀತಿಸುವ, ನಮ್ಮ ನೋವಿಗಳಿಗೆ ಸ್ಪಂದಿಸುವ ಏಕೈಕ ಹೃದಯ ಅದು ತಾಯಿ ಮಾತ್ರ. ತಾನು ಊಟ ಮಾಡಲಿ ಬಿಡಲಿ, ಮಕ್ಕಳ ಊಟ ಮಾಡುವುದರ ಬಗ್ಗೆ ಆಲೋಚಿಸುತ್ತಾಳೆ. ತನಗೆ ಆರೋಗ್ಯ ಇಲ್ಲದಿದ್ದರು, ಕಷ್ಟವಾದರೂ ಮಕ್ಕಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತಾಳೆ. 

ವಿಪರ್ಯಾಸವೆಂದರೆ ಇತ್ತಿಚೀನ ದಿನಗಳಲ್ಲಂತೂ ವಯಸ್ಸಾದ ತಂದೆ ತಾಯಿಯನ್ನು ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸುವ ಪದ್ದತಿಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಮನುಷ್ಯತ್ವವು ವಿನಾಶದ ಅಂಚಿಗೆ ತಲುಪಿದೆಯೇ ಎಂಬ ಸಂದೇಹ ಬರದೇ ಇರಲಾರದು. 

ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿ, ಸ್ವಂತ ತಂದೆ, ತಾಯಿಯನ್ನೇ ಬೀದಿ ಪಾಲು ಮಾಡುವವರ ಮನಸ್ಥಿತಿ ಅತ್ಯಂತ ಹೀನಾಯ ಹಾಗು ಘೋರ. ಆರೋಗ್ಯ ಹದೆಗೆಟ್ಟಿದೆ, ವಯಸ್ಸಾಗಿದೆ, ಇವರಿಗೆ ಸೇವೆ ಮಾಡಬೇಕು ಎಂದು ತಂದೆ, ತಾಯಿಗಳನ್ನೇ ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸಿ ಕೈ ತೊಳೆದುಕೊಳ್ಳುವ ಕೆಲ ಮಕ್ಕಳ ಮಾನಸಿಕತೆ ಯಾರಿಗೂ ಅರ್ಥವಾಗುವುದಿಲ್ಲ.

ಪ್ರತಿ ತಂದೆ, ತಾಯಿಯು ಮಕ್ಕಳಿಂದ ಅಪೇಕ್ಷಿಸುವುದು ದುಡ್ಡು, ಐಷಾರಾಮಿ ಜೀವನವಲ್ಲ. ಬದಲಾಗಿ ಪ್ರೀತಿ, ಪ್ರೇಮ, ಗೌರವ. ಅದನ್ನಾದರೂ ನಾವು ಅವರಿಗೆ ಕೊಡದೆ ಹೋದರೆ, ನಾವು ಮನುಷ್ಯರಾಗಿ ಜನ್ಮಿಸಿದಕ್ಕೆ ಅರ್ಥವಿರುವುದಿಲ್ಲ. ತಂದೆ, ತಾಯಿ ಇದ್ದಾಗ ಅವರ ಬೆಲೆ ನಮಗೆ ಖಂಡಿತವಾಗಿ ಗೊತ್ತಾಗುವುದಿಲ್ಲ, ಅವರು ಕಣ್ಮರೆಯಾದಾಗ ಮಾತ್ರ ಅವರ ಮಹತ್ವ ಆಳವಾಗಿ ಅರ್ಥವಾಗುತ್ತದೆ. 

ಬೀದಿಗೊಂದರಂತೆ ಅನಾಥಶ್ರಮಗಳು, ವೃದ್ದಾಶ್ರಮಗಳು ತಲೆ ಎತ್ತುತ್ತಿರುವುದು ನಮ್ಮಲ್ಲಿನ ಹೃದಯಹೀನತೆಗೆ ನಿದರ್ಶನವಲ್ಲದೇ ಮತ್ತೇನು ಅಲ್ಲ. Mother means sacrifice. She sacrifices everything for her child ಎಂಬ ಈ ಅಭೂತ ಪೂರ್ವ ವಾಕ್ಯ ನಮ್ಮ ಹೃದಯನ್ನು ಸ್ಪರ್ಶಿಸುವುದು ಯಾವಾಗ..?

18 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೇ ರೀತಿ ಹೆಂಡತಿ ಆಗಿ ಬಂದವರು ಮುಂದೆ ನಾನು ಇದೇ ರೀತಿ ತಾಯಿ ಆಗುತ್ತೇನೆ ನನ್ನಾ ಮಕ್ಕಳು ನನ್ನಿಂದ ದೂರ ಅದ್ರೆ ಹೇಗೆ ನೋವು ಆಗುತ್ತೋ ಅದೇ ರೀತಿ ಯೋಚಿಸಿದರೆ ವೃದ್ಧಾಶ್ರಮ ಕಡಿಮೆ ಆಗಬವುದು ಸಾರ್

ಅನಾಮಧೇಯ ಹೇಳಿದರು...

ತಾಯಿ ಏನೇ ಕೆಲಸ ಮಾಡಿದರು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಮಾಡುತ್ತಾರೆ i love u ಅಮ್ಮ ❤️

ಅನಾಮಧೇಯ ಹೇಳಿದರು...

👌🏽👌🏽👌🏽

ANANTHAKUMAR H S ಹೇಳಿದರು...

Super ....sir

ಅನಾಮಧೇಯ ಹೇಳಿದರು...

ಸರ್ ತಾಯಿ ಬಗೆಗಿನ ನಿಮ್ಮ ಲೇಖನ ತುಂಬಾ ಅದ್ಭುತವಾಗಿದೆ ಸರ್😊🙏

ಅನಾಮಧೇಯ ಹೇಳಿದರು...

ಸರ್ ಈ ಲೇಕೆನಾ ಓದಿ ಮನ್ಸಿಗೆ ತುಂಬಾ ನೋವು ಆಯ್ತು ಸರ್

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ ಸಾರ್. ಆಧುನಿಕ ಕಂಪ್ಯೂಟರ್ ಯುಗದಲ್ಲಿ ಸ್ವತಂತ್ರವಾಗಿ, ತಂದೆ ತಾಯಿ ಭಾರ ಎಂದು ಭಾವಿಸುವವರಿಗೆ ಈ ಲೇಖನ ಸ್ವಲ್ಪ ಸಮಯ ಕೊಟ್ಟು ಓದಿದರೆ ತಾಯಿ ಮತ್ತು ತಂದೆಯ ಬೆಲೆ ಸ್ವಲ್ಪವಾದರೂ ಅರ್ಥವಾಗಬಹುದು. ಆದರೆ ತಂದೆ ತಾಯಿ ಬೆಲೆ ಗೊತ್ತಾಗುವುದು ಮಾತ್ರ ಅವರು ತಂದೆ ಮತ್ತು ತಾಯಿ ಸ್ಥಾನಕ್ಕೆ ಬಂದಾಗ ಮಾತ್ರ ಇಲ್ಲಾ ಅವರನ್ನು ಕಳೆದುಕೊಂಡಾಗ ಮಾತ್ರ. ಏನೇ ಇರಲಿ ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ.

TEJASWINI JB ಹೇಳಿದರು...

No language can express the power, beauty, and heroism of a mother’s love.

ಅನಾಮಧೇಯ ಹೇಳಿದರು...

ತುಂಬಾ ಅದ್ಭುತವಾಗಿ ಮೂಡಿ ಬಂದಿದೆ

ಅನಾಮಧೇಯ ಹೇಳಿದರು...

ಅಮ್ಮ.ಈ ಪದದಲ್ಲಿಯೇ ಅದ್ಭುತ ಶಕ್ತಿಯಡಗಿದೆ... ಈ ಪ್ರೀತಿಯಲ್ಲಿ ಜೇನಿನ ಸಿಹಿ ಇದೆ... ಮಮತೆಯ ಸವಿ ಇದೆ. ಅಮ್ಮನೇ ಪ್ರತಿಯೊಬ್ಬರ ಬದುಕಿಗೂ ಆಧಾರ. ಅಮ್ಮನೇ ಪ್ರತ್ಯಕ್ಷ ದೇವರು ಎಂಬ ಮಾತು ಬರೀ ಮಾತಲ್ಲ ಅಕ್ಷರಶಃ ನಿಜ. ತನ್ನ ಮಕ್ಕಳು, ತನ್ನ ಕುಟುಂಬ ಎಂದು ಸದಾ ಕಾಲ ಮನೆ, ಮಕ್ಕಳ ಬಗ್ಗೆಯೇ ಚಿಂತಿಸುವ ಅಮ್ಮ ರಜೆ, ಸಂಬಳ ಪಡೆಯದ ಶ್ರಮಜೀವಿ ಎಂದರೂ ತಪ್ಪಲ್ಲ. ಯಾವತ್ತೂ ಅವರು ತನಗಾಗಿ ಯೋಚಿಸುವವರೇ ಅಲ್ಲ. ಅನುಕ್ಷಣವೂ ಮಕ್ಕಳು, ಕುಟುಂಬ ಎಂದೇ ಯೋಚಿಸುತ್ತಿರುವ ತ್ಯಾಗಮಯಿ ಅಮ್ಮ.🙏🙏🙏🙏

ಅನಾಮಧೇಯ ಹೇಳಿದರು...

ತುಂಬಾ ಅದ್ಭುತವಾಗಿದೆ ಸರ್ ಎಲ್ಲರೂ ಅರ್ಥ ಮಾಡಿಕೊಂಡರೆ ಸಾಕು

ಅನಾಮಧೇಯ ಹೇಳಿದರು...

ನನ್ನಮ್ಮ ನೆನಪಾಗಿ ಕಣ್ಣಲ್ಲಿ ನೀರು ಬಂತು, ಧನ್ಯವಾದಗಳು ಸರ್ ಅಮ್ಮನ ಬಗ್ಗೆ ಲೇಖನ ನೀಡಿದ್ದಕ್ಕಾಗಿ.

ಅನಾಮಧೇಯ ಹೇಳಿದರು...

ತಾಯಿನೇ ಪ್ರತ್ಯಕ್ಷ ದೇವರು, ತಾಯಿನೇ ಮೂದಲ ಗುರು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು, ಮನೆಗೆ ಬಂದ ಸೂಸೆ ಅತ್ತೆಯನ್ನು ತನ್ನ ತಾಯಿ ಎಂದು ಭಾವಿಸಿದಾಗ ಅಲ್ಲಿ ಸಮಸ್ಯೆ ಇರುವುದಿಲ್ಲ .

ಅನಾಮಧೇಯ ಹೇಳಿದರು...

Super sir information about mother love

ಅನಾಮಧೇಯ ಹೇಳಿದರು...

Good message sir 👍

ಅನಾಮಧೇಯ ಹೇಳಿದರು...

ಅದ್ಭುತವಾಗಿ ಮೂಡಿಬಂದಿದೆ sir 👌👌

ಅನಾಮಧೇಯ ಹೇಳಿದರು...

👌👍

ಅನಾಮಧೇಯ ಹೇಳಿದರು...

ಸೂಪರ್ ಸರ್ 🙏🙏🙏