ಭಾನುವಾರ, ಡಿಸೆಂಬರ್ 22, 2024

ಲವ್ ಸ್ಟೋರಿಯಲ್ಲಿನ, ಜೀವನದ ಲೈಪ್ ಪಾಠ..

⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 
ನನ್ನ ಸ್ನೇಹಿತ ಒಬ್ಬ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ತನ್ನ ವ್ಯಾಪ್ತಿಯಲ್ಲಿನ ಅರಣ್ಯಕ್ಕೆ ಒಮ್ಮೆಯಾದರೂ ಭೇಟಿ ನೀಡು, ಅರಣ್ಯ ಪ್ರಕೃತಿಯು ಅತ್ಯಂತ ಸುಂದರವಾಗಿ ಕಾಣುತ್ತದೆ. ನಗರಗಳ ಜಂಜಾಟದಿಂದ ದೂರ ಬಂದು ಈ ಅರಣ್ಯ ನೋಡಿದರೆ ಮನಸ್ಸಿಗೆ ಆಹ್ಲಾದಕರ ಸಿಗುತ್ತದೆ ಎಂದು ಪದೇ ಪದೇ ಬರಲು ಹೇಳುತ್ತಿದ್ದ.

ಅವನ ಅಪೇಕ್ಷೆಯಂತೆ ಒಮ್ಮೆ ಆ ಅರಣ್ಯಕ್ಕೆ ಹೋಗಿದ್ದೆ, ಅಲ್ಲಿ ಗಿಡ ಮರಗಳಿಗಿಂತ ಕಾಲೇಜಿನ ಹುಡುಗ, ಹುಡುಗಿಯರ ಸಂಖ್ಯೆಯೇ ಅಧಿಕವಾಗಿತ್ತು. ಅದಕ್ಕೆ ನಮ್ಮ ಸ್ನೇಹಿತನನ್ನು ಕೇಳಿದೆ, ಇವರಿಗೆಲ್ಲ ಕಾಲೇಜಿಲ್ಲವೇ ಅಂತಾ..? ಅದಕ್ಕೆ ಆತ ಅವರೆಲ್ಲರೂ ಪ್ರೇಮಿಗಳು ಹಾಗೂ ಪಿ.ಯು ವಿದ್ಯಾರ್ಥಿಗಳು, ಕಾಲೇಜು ಮುಗಿದು 2 ಗಂಟೆ ಆಗಿದೆ. ಸ್ಪೆಷಲ್ ಕ್ಲಾಸ್ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿ, ಇಲ್ಲೇ ಸಂಜೆವರೆಗೂ ಕಾಲ ಕಳೆಯುತ್ತಾರೆ. ನಾವು ಅವರಿಗೆ ಬುದ್ದಿವಾದ ಹೇಳಿ ಸಾಕಾಗಿದೆ. ಮನೆಯವರ ಮಾತೇ ಅವರು ಕೇಳುವುದಿಲ್ಲ, ಇನ್ನು ನಮ್ಮ ಮಾತು ಅವರೆಲ್ಲಿ ಕೇಳುತ್ತಾರೆ ಎಂದು ಉತ್ತರಿಸಿದ.

ವಿಪರ್ಯಾಸವೆಂದರೆ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಆ ವಿದ್ಯಾರ್ಥಿಗಳ ವರ್ತನೆ ಪ್ರತಿಯೊಬ್ಬರು ನಾಚಿಕೆ ಪಡುವಂತಿತ್ತು. ಪ್ರೀತಿಸುವುದು ತಪ್ಪಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಆದರೆ ಅವರ ವಯಸ್ಸು, ಅವರ ನಡವಳಿಕೆ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಿತ್ತು. 

ಇಂದಿನ ಪ್ರೇಮಿಗಳು ಪಾರ್ಕು, ಪಬ್, ರೆಸಾರ್ಟ್, ಟ್ರಿಪ್, ಪಾರ್ಟಿ ಅಂತಾ ಓಡಾಡುತ್ತ, ಜಾಲಿಯಾಗಿ ಲೈಪ್ ನ್ನು ಎಂಜಾಯ್ ಮಾಡಬಹುದು ಎಂದು ಕನಸಿನ ಬೆಟ್ಟ ನಿರ್ಮಿಸಿಕೊಂಡಿರುತ್ತಾರೆ,  ಆ ಜೀವನಕ್ಕಾಗಿ ಹಲವರು ಹಂಬಲಿಸುತ್ತಾರೆ, ತುದಿಗಾಲಲ್ಲಿ ನಿಲ್ಲುತ್ತಾರೆ.

ಸಾಮಾನ್ಯವಾಗಿ ಸಮಯ ಸಿಕ್ಕಾಗಲೆಲ್ಲ ಹೊಸದಾಗಿ ಬಿಡುಗಡೆಯಾದ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಹವ್ಯಾಸ ನನಗೆ ಮೊದಲಿನಿಂದಲೂ ಇದೆ. ಆದರೆ ನೋಡಿದ ಎಲ್ಲಾ ಚಿತ್ರಗಳು ನಮ್ಮ ಮನಸ್ಸಿನ ಅಂತರಾಳಕ್ಕೆ ಹೋಗುವುದಿಲ್ಲ ಹಾಗೂ ನಮ್ಮ ಹೃದಯವನ್ನೇ ಕರಗಿಸುವಂತೆ ಮಾಡುವುದಿಲ್ಲ. ವೀಕ್ಷಿಸಿದ ಸಾವಿರಾರು ಚಿತ್ರಗಳ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಸದಾ ನಮ್ಮ ನೆನಪಿನ ಪುಟಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದು ಬಿಡುತ್ತೇವೆ.

ಇತ್ತಿಚೀಗೆ ನನ್ನನ್ನು ತುಂಬಾ ಆಕರ್ಷಿಸಿ, ಆಲೋಚಿಸುವಂತೆ ಮಾಡಿ, ಹೃದಯ ಸ್ಪರ್ಶಿಸುವಂತೆ ಮಾಡಿದ ಚಿತ್ರ “ಅಮರನ್”. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಲವ್ ಸ್ಟೋರಿ ಮತ್ತು ದೇಶಭಕ್ತಿ ಸಂದೇಶವನ್ನು ಹೊಂದಿರುವ ಚಿತ್ರವಿದು. ಈ ಚಿತ್ರದ ಹೇ ರಂಗುಲೇ, ಹೇ ರಂಗುಲೇ, ನೀ ರಾಕತೋ ಲೋಕಮೇ ರಂಗುಲೇ ಪೊಂಗೇನೆ ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.

ನೈಜ ಘಟನೆಗಳನ್ನು ಆಧರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಬರೆದ “ಇಂಡಿಯಾಸ್ ಮೋಸ್ಟ್ ಫೀಯರ್ ಲೆಸ್, ಟ್ರೂ ಸ್ಟೋರಿಸ್ ಆಫ್ ಮಾಡ್ರನ್ ಮಿಲಿಟರಿ ಹಿರೋಸ್” (India's Most Fearless: True Stories of Modern Military Heroes) ಎಂಬ ಪುಸ್ತಕದ ಕಥೆಯನ್ನಾಧಾರಿಸಿ ನಿರ್ಮಾಣವಾದ ಚಿತ್ರವೇ “ಅಮರನ್”. 

ಅಮರನ್ ಚಿತ್ರವನ್ನು ತಮಿಳಿನ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಿದ್ದು, ನಟ ಶಿವ ಕಾರ್ತಿಕೇಯನ್, ನಟಿ ಸಾಯಿಪಲ್ಲವಿ ಚಿತ್ರದಲ್ಲಿ ನಟಿಸಿದ್ದಾರೆ. ಅಮರನ್ ಮೇಲ್ನೋಟಕ್ಕೆ ಲವ್ ಸ್ಟೋರಿ ಚಿತ್ರ ಎಂದು ಭಾವಿಸಿಕೊಂಡರು, ಪೂರ್ಣ ಚಿತ್ರ ನೋಡಿದ ಮೇಲೆಯೇ ಅರ್ಥವಾಗುವುದು, ಅದರಲ್ಲಿನ ದೇಶಭಕ್ತಿಯ ವಿವಿಧ ಆಯಾಮಗಳು ಹಾಗೂ ಪ್ರೇಮಿಗಳೆಂದರೇ ಈಗೂ ಇರುತ್ತಾರೆಯೇ ಎಂದು.

ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ತಮಿಳುನಾಡಿನ ಮುಕುಂದ್ ವರದರಾಜನ್ ಹಾಗೂ ಆತನ ಪತ್ನಿ ಕೇರಳದ ಇಂದು ರೆಬಿಕಾ ವರ್ಗಿಸ್ ಜೀವನದಲ್ಲಿ ನಡೆದ ನಿಜ ಘಟನೆಗಳನ್ನು ಆಧಾರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಪುಸ್ತಕ ಬರೆದರೆ, ಆ ಪುಸ್ತಕವನ್ನು ಆಧಾರ ಮಾಡಿಕೊಂಡು ರಾಜಕುಮಾರ್ ಪೆರಿಸ್ವಾಮಿ ಅಮರನ್ ಚಿತ್ರ ನಿರ್ದೇಶಿಸಿದ್ದಾರೆ.

ತಮಿಳುನಾಡಿನ ತಾಂಬರಂ ಮೂಲದ ಮುಕುಂದ್ ವರದರಾಜನ್ ಸಾಧಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ಬಿ.ಕಾಂ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಪದವೀಧರರು. ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಿ, ದೇಶಕ್ಕಾಗಿ ಸೇವೆ ಸಲ್ಲಿಸಿ, ಪರಿಪೂರ್ಣ ಜೀವನ ಸಾಗಿಸಬೇಕೆಂಬ ಹಠ ಮುಕುಂದ್ ವರದರಾಜನ್‌ರದ್ದು.

ಮುಕುಂದ್ ವರದರಾಜನ್ ತಾಂಬರಂನಲ್ಲಿರುವ ಮದ್ರಾಸ್ ಕ್ರಿಸ್ಟಿಯನ್ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಮಾಡುವಾಗ ಪರಿಚಯವಾದರೇ ಕೇರಳ ಮೂಲದ ಇಂದು ರೆಬಿಕಾ ವರ್ಗೀಸ್. 

ಮುಕುಂದ್ ವರದರಾಜನ್ ಕಾಲೇಜಿನ ಸ್ನೇಹಿತೆ ಇಂದು ರೆಬಿಕಾ ವರ್ಗೀಸ್ ನ್ನು ಪ್ರೀತಿಸಿ, ಮದುವೆಯಾಗುತ್ತಾರೆ. ಚಿಕ್ಕವಯಸ್ಸಿನಿಂದಲೂ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಗೆ ಕುಟುಂಬದ ಕೆಲವರ ವಿರೋಧದ ನಡುವೆಯು ಮುಕುಂದ್ ವರದರಾಜನ್ ತನ್ನ ಸಂಕಲ್ಪದಂತೆ ಎಲ್ಲಾ ಅಡೆತಡೆ ಮೀರಿ ಭಾರತೀಯ ಸೇನೆಗೆ ಸೇರುತ್ತಾರೆ. ಒಬ್ಬನೇ ಮಗನಾದ್ದರಿಂದ ತಾಯಿಗೆ ಅವರು ಸೇನೆಗೆ ಸೇರುವುದು ಇಷ್ಟವಿರಲಿಲ್ಲ. ತನ್ನ ಮಗ ತನ್ನ ಮಧ್ಯದಲ್ಲೇ ಸಂತೋಷದಿಂದ ಜೀವನ ಸಾಗಿಸಲಿ ಎಂದು ತಾಯಿಯ ಆಕಾಂಕ್ಷೆಯಾಗಿತ್ತು.

ತಾನು ಪ್ರೀತಿಸಿದ ಇಂದು ರೆಬಿಕಾ ವರ್ಗೀಸ್ ಕುಟುಂಬದವರು ಪ್ರಾರಂಭದಲ್ಲಿ ಮುಕುಂದ್ ವರದರಾಜನ್ ಜೊತೆ ಮದುವೆಗೆ ವಿರೋಧಿಸುತ್ತಾರೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಯಾವ ಕ್ಷಣದಲ್ಲಾದರೂ ಪ್ರಾಣಕ್ಕೆ ಸಂಚಕಾರ ಎಂಬ ಭಯದಿಂದ. ಅದರಲ್ಲೂ ಇಂದು ರೆಬಿಕಾ ವರ್ಗೀಸ್ ತಂದೆ ಸೇನೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರಿಂದ ಸೈನಿಕರ ಸಾವು, ನೋವುಗಳ ಬಗ್ಗೆ ಅರಿತಿದ್ದರಿಂದ, ತಮ್ಮ ಮಗಳನ್ನು ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊಡಲು ಅವರಿಗೆ ಸ್ವಲ್ಪವು ಇಷ್ಟವಿರಲಿಲ್ಲ.

ಕೊನೆಗೂ ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ರವರ ಪ್ರೀತಿಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ, ನಿಸ್ವಾರ್ಥವಿದ್ದರಿಂದ ಜಾತಿ, ಧರ್ಮ, ಶ್ರೀಮಂತಿಕೆ ಮೀರಿ ಕುಟುಂಬದವರ  ಒಪ್ಪಿಗೆಯೊಂದಿಗೆ ಮದುವೆಯಾಗುತ್ತಾರೆ.  

ಇಲ್ಲಿ ಗಮನಾರ್ಹ ಅಂಶವೆಂದರೆ ಮುಕುಂದ್ ವರದರಾಜನ್ ಕಾಲೇಜು ವಿದ್ಯಾಭ್ಯಾಸದ ನಂತರ ತಾನು ಪ್ರೀತಿಸಿದ ಇಂದೂ ರೆಬಿಕಾ ವರ್ಗೀಸ್ ರನ್ನು  ಮದುವೆಯಾಗಿ ಸೇನೆಗೆ ಸೇರದೆ ಬದಲಾಗಿ ಯಾವುದಾದರೂ ಕೆಲಸ ಮಾಡಿಕೊಂಡು, ದೊಡ್ಡ ವೇತನ ಪಡೆಯುತ್ತ, ಸ್ವಂತ ಊರಿನಲ್ಲೇ ಕುಟುಂಬದವರೊಂದಿಗೆ ಖುಷಿಯಾಗಿ ಉಳಿದು ಬಿಡಬಹುದಾಗಿತ್ತು. ಆದರೆ ಅವರು ತನ್ನ ಜೀವನದ ಒಂದೇ ಒಂದು ಗುರಿ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಯನ್ನು ಪ್ರೀತಿ ಹಾಗೂ ಕುಟುಂಬದ ವ್ಯಾಮೋಹಕ್ಕಾಗಿ ಬಲಿಕೊಡುವುದು ಸುತಾರಂ ಇಷ್ಟವಿರಲಿಲ್ಲ.

ಹಾಗೆಯೇ ಇಂದೂ ರೆಬಿಕಾ ವರ್ಗೀಸ್ ಗೆ ಮುಕುಂದ್ ವರದರಾಜನ್ ಇಂದಲ್ಲಾ ನಾಳೆ ಖಂಡಿತವಾಗಿ ಭಾರತೀಯ ಸೇನೆಗೆ ಸೇರುತ್ತಾನೆ ಎಂಬುವುದು ಪ್ರೀತಿಸುವಾಗಲೇ ಅರ್ಥವಾಗಿತ್ತು. ಇವರನ್ನು ಮದುವೆಯಾದರೇ ಬೇರೆಯವರಂತೆ ಐಷಾರಾಮಿ ಮತ್ತು ಸುಖ ಜೀವನವನ್ನು ಖುಷಿಯಾಗಿ ಕಳೆಯುವುದು ಕಷ್ಟ ಎಂದು ಅರ್ಥವಾಗಿದ್ದರು, ಕೂಡ ತಾನು ಪ್ರೀತಿಸಿದ ಮುಕುಂದ್ ವರದರಾಜನ್ ಏಕೈಕ ಆಸೆ ಭಾರತೀಯ ಸೇನೆ ಸೇರುವುದು, ಆ ಸಂಕಲ್ಪಕ್ಕೆ ನಾನು ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದು ಹಾಗೂ ತಡೆಯಬಾರದು ಎಂದು ಆಕೆ ಆಲೋಚಿಸಿ ಸೇನೆಗೆ ಸೇರಲು ಪ್ರೋತ್ಸಾಹಿಸುತ್ತ, ಬೆಂಬಲವಾಗಿ ನಿಲ್ಲುತ್ತಾಳೆ.  

ಸೇನೆಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾದರೆ ಅಧ್ಯಯನ ಮಾಡಬೇಕಾದ ಪುಸ್ತಕಗಳನ್ನು ಸ್ವತಃಹ ಇಂದೂ ರೆಬಿಕಾ ವರ್ಗೀಸ್ ಖರೀದಿ ಮಾಡಿ ಮುಕುಂದ ವರದರಾಜನ್ ಗೆ ಕೊಟ್ಟ ಆಕೆಯ ಭಾವಾನಾತ್ಮಕ ಸಂಬಂಧ ಅವಸ್ಮರಣೀಯ.

ಮದುವೆ ನಂತರವೂ ಮುಕುಂದ್ ವರದರಾಜನ್ ವರ್ಷಕ್ಕೊಮ್ಮೆ ಮಾತ್ರ ಪತ್ನಿ, ಮಗಳು ಹಾಗೂ ಕುಟುಂಬದವರನ್ನು ಬಂದು ನೋಡುತ್ತಿದ್ದ. ಬೆಟಾಲಿಯನ್‌ನ ಮುಖ್ಯಸ್ಥನಾಗಿದ್ದರಿಂದ ಊರಿಗೆ ಬರಲು ಅವಕಾಶ ಕಡಿಮೆ ಸಿಗುತ್ತಿತ್ತು. ದೇಶಕ್ಕಾಗಿ ಸೇನೆಯಲ್ಲಿ ದುಡಿಯುತ್ತಿರುವ ಗಂಡ, ಪದೇ ಪದೇ ಬರಲು ಸಾಧ್ಯವಿಲ್ಲ ಎಂದು ಅರಿತಿದ್ದ ಇಂದೂ ರೆಬಿಕಾ ವರ್ಗೀಸ್ ಮುಕುಂದ್ ವರದರಾಜನ್ ಜೊತೆಗಿನ ನೆನಪುಗಳನ್ನೇ ಸದಾ ಮೆಲುಕು ಹಾಕುತ್ತ ಜೀವನ ಸಾಗಿಸುತ್ತಿದ್ದಳು. ದೈಹಿಕವಾಗಿ ಅವರು ಜಮ್ಮಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಮಾನಸಿಕವಾಗಿ ನನ್ನ ಬಳಿಯೇ ಇದ್ದಾರೆ ಎಂದು ಆಕೆ ಮನಸ್ಸಿನಲ್ಲಿ ಭಾವಿಸಿಕೊಂಡು ಜೀವನ ಸಾಗಿಸುತ್ತಿದ್ದದ್ದು, ನಿಜವಾದ ಪ್ರೇಮಿಗಳಿಗೆ ಜ್ವಲಂತ ಉದಾಹರಣೆ.

ಈ ಮಧ್ಯೆ ಸಹದ್ಯೋಗಿಯ ಗನ್ ಮಿಸ್ ಫೈರ್ ಆಗಿ ಮುಕುಂದ್ ವರದರಾಜನ್ ದೇಹಕ್ಕೆ ಬುಲೆಟ್ ತಾಗಿ, ಹಲವು ದಿನಗಳ ಕಾಲ ಆಸ್ಪತ್ರೆ ಸೇರಿ, ಪ್ರಾಣಾಪಾಯದಿಂದ ಪಾರಾಗುತ್ತಾರೆ. ಗನ್ ಮಿಸ್ ಫೈರ್ ಮಾಡಿದ ಸಹೋದ್ಯೋಗಿಗೆ ಯಾವ ಶಿಕ್ಷೆ ಬೇಕಾದರೂ ಕೊಡಿಸಬಹುದಾಗಿತ್ತು. ಆದರೆ ಆತನನ್ನು ರಕ್ಷಿಸುವ ಮೂಲಕ ಮಾನವೀಯತೆ ಸಾರುವ ಜೊತೆಗೆ, ನಾಯಕತ್ವದ ಲಕ್ಷಣ ತೋರಿಸುತ್ತಾರೆ ಮುಕುಂದ್ ವರದರಾಜನ್. 

ದುರ್ದೈವದಿಂದ 2014 ರ ಏಪ್ರಿಲ್ 25 ರಂದು ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ಜೊತೆ ನಡೆದ ಭೀಕರ ಗುಂಡಿನ ಚಕಮಕಿ, ಹೋರಾಟದಲ್ಲಿ ಮುಕುಂದ್ ವರದರಾಜನ್ ದೇಹಕ್ಕೆ ಹಲವು ಗುಂಡುಗಳು ತಾಕಿ, ಜೀವನ್ಮರಣದ ಹೋರಾಟ ನಡೆಸಿ, ಕೊನೆಗೆ ಕೇವಲ ತಮ್ಮ 31 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿ ಅಮರರಾಗುತ್ತಾರೆ.

ಇದ್ದ ಓಬ್ಬನೇ ಮಗನನ್ನು ಹೊಂದಿದ್ದ ಆ ತಂದೆ, ತಾಯಿ ಹಾಗೂ ಇಷ್ಟಪಟ್ಟು ಪ್ರೀತಿಸಿ ಮದುವೆಯಾದ ಗಂಡ, ಆತ್ಮೀಯತೆಯಿಂದ ಕಾಣುತ್ತಿದ್ದ ಅಣ್ಣ, ಮುದ್ದಾಡುತ್ತಿದ್ದ ತಂದೆ, ಇನ್ನು ಬರೀ ನೆನಪು ಮಾತ್ರ ಎಂದು ಗೊತ್ತಾದಾಗ ಆ ಕುಟುಂಬದವರ ನೋವು, ಸಂಕಟ, ಮಾನಸಿಕ ವೇದನೆಯನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಕಣ್ಣಲ್ಲಿ ರಕ್ತ ಹರಿಯುತ್ತದಷ್ಟೇ.

ಭಾರತ ಸರ್ಕಾರವು ಮುಕುಂದ್ ವರದರಾಜನ್‌ರವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ಕೂಡ ನೀಡಿ ಗೌರವಿಸಿದೆ. ತಮಿಳುನಾಡಿನ ಪೈಕಿ ಅಶೋಕ ಚಕ್ರ ಪ್ರಶಸ್ತಿ ಪಡೆದ ನಾಲ್ಕನೇ ವ್ಯಕ್ತಿ ಮುಕುಂದ್ ವರದರಾಜನ್. ತಮಿಳುನಾಡಿನ ಮಿಲಿಟರಿ ಆಫೀಸರ್ ತರಬೇತಿ ಅಕಾಡೆಮಿಯಲ್ಲಿ ಇವರ ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಲಾಗಿದೆ.

ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ಪ್ರೀತಿಯಲ್ಲಿ ನೈತಿಕತೆ ಇತ್ತು. ತಮ್ಮ ಪ್ರೀತಿಯ ಕಾರಣಕ್ಕಾಗಿ ಅವರೆಲ್ಲೂ ಶಿಕ್ಷಣಕ್ಕೆ ಅಡ್ಡಿ ಮಾಡಿಕೊಳ್ಳಲಿಲ್ಲ. ಸಮಾಜ ವಿರೋಧಿಸುವ ರೀತಿ ವರ್ತಿಸಲಿಲ್ಲ. ಬರೀ ಎಂಜಾಯ್ ಮಾಡಲು, ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಮುಖವಾಡ ಧರಿಸಲಿಲ್ಲ. ಪ್ರೀತಿ ಪ್ರೇಮ ಎಂದು ಬರೀ ಜಪಿಸುತ್ತ ಜೀವನದಲ್ಲಿ ಅಂದುಕೊಂಡ ಗುರಿ, ಸಾಧನೆಗಳನ್ನು ಮಧ್ಯದಲ್ಲಿ ಕೈ ಬಿಡಲಿಲ್ಲ. 

ಇಬ್ಬರೂ ಪರಸ್ಪರ ಗುರಿ ಸಾಧನೆಗಾಗಿ ಸಹಕಾರ ಕೊಟ್ಟು ಜೀವನ ಸಾಗಿಸಿದ ಕಾರಣದಿಂದಲೇ ಅವರ ಪ್ರೇಮ ಇನ್ನೂ ಜೀವಂತ ಹಾಗೂ ಚಿರಸ್ಥಾಯಿಯಾಗಿ ಉಳಿದಿರುವುದು. ನನ್ನ ಪ್ರಕಾರ ಇದು ನಿಜವಾದ ಲವ್ ಸ್ಟೋರಿ, ಇದರಿಂದ ಕಲಿಯುವುದು ಹಲವಿದೆ.

ಪ್ರೀತಿ, ಪ್ರೇಮ ಎಂಬುವುದರ ಒಳಾರ್ಥವು ಗೊತ್ತಿರದ, ವಯಸ್ಸು ದಾಟದ ಹಲವರು ಕೇವಲ ಅಟ್ರಾಕ್ಷನ್, ಆಕರ್ಷಣೆ ಹಾಗೂ ಕೇವಲ ಎಂಜಾಯ್ ಮೆಂಟ್ ಹಾಗೂ ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಾರೆ. ದಿನವೂ ಗಂಟೆಗಟ್ಟಲೆ ಮೊಬೈಲ್ ಗಳಲ್ಲಿ ಹರಟೆ ಹೊಡೆಯುತ್ತ, ವಾಟ್ಸಾಪ್ ಚಾಟ್ ಗಳಲ್ಲಿ ಮುಳುಗಿ ಹೋಗಿ ಶಿಕ್ಷಣ, ಜೀವನ, ಕೌಟುಂಬಿಕ ಸಂಬಂಧ, ಉದ್ಯೋಗ ಸೇರಿದಂತೆ ತಮ್ಮ ಲೈಪ್ ನ್ನೇ  ಕಳೆದುಕೊಳ್ಳುವ ಹಲವರು ಅಮರನ್ ಚಿತ್ರ ಒಮ್ಮೆ ನೋಡಬೇಕಿದೆ.

ಪ್ರೀತಿ, ಪ್ರೇಮ ಎಂದರೆ ಅದು ಬರೀ ಎರಡಕ್ಷರದ ಪದಗಳಲ್ಲ, ಕಲ್ಪನೆಗೂ ಸಿಗದ, ನಮ್ಮ ಊಹೆಗೂ ಮೀರಿದ ವಿಷಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸ್ವಾರ್ಥವಿಲ್ಲದೇ, ಹಾದಿ ತಪ್ಪದೇ, ಸಾಧನೆ, ಗುರಿ ಸಾಧಿಸುವ ದಿಕ್ಕಿನತ್ತ ಸಾಗುತ್ತ, ಪರಸ್ಪರ ಸಹಕಾರದೊಂದಿಗೆ ಪ್ರೀತಿಸುವವರಿಗೆ ಬೆಲೆ ಖಂಡಿತಾ ಇದೆ. ಆದರೆ ಇಂದು ಅಂತಹ ಪ್ರೇಮಿಗಳನ್ನು ಬ್ಯಾಟರಿ ಹಾಕಿ ಹುಡುಕಿದರು ಸಿಗುವುದೇ ಅಪರೂಪ.

ಪ್ರೀತಿ ಎಂದರೆ ಬರೀ ಫ್ಯಾಶನ್, ಶೋಕಿ ಅಲ್ಲ, ಅದು ಇಬ್ಬರೂ ವ್ಯಕ್ತಿಗಳ ಅಮೂಲ್ಯ ಜೀವನ. ಟೈಂ ಪಾಸ್ ಗಾಗಿ, ಕಾಟಚಾರಕ್ಕಾಗಿ ಓಡಾಡುವವರನ್ನು ಪ್ರೇಮಿಗಳೆಂದು ಕರೆದರೆ ಅದಕ್ಕಿರುವ ಘನತೆ, ಗಾಂಭೀರ್ಯತೆ ಮಣ್ಣಲ್ಲಿ ಸೇರುತ್ತದೆ ಅಷ್ಟೇ.

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Super anna 💐

Nandhini M.C ಹೇಳಿದರು...

It's ha real fact sir super 💯

ಅನಾಮಧೇಯ ಹೇಳಿದರು...

Super story

ಅನಾಮಧೇಯ ಹೇಳಿದರು...

ನಿಜವಾದ ಪ್ರೀತಿ ಪ್ರೇಮ ಏನು ಎಂಬುದನ್ನು ನಿಮ್ಮ ಲೇಖನದಲ್ಲಿ ಅದ್ಭುತವಾಗಿ ಅಡಗಿದೆ ಸರ್ ಧನ್ಯವಾದಗಳು 😊

ಅನಾಮಧೇಯ ಹೇಳಿದರು...

ನಮ್ಮ ಯುವ ಜನತೆಗೆ ನೀವು ಐಕಾನ್ ಎಂದರೆ ತಪ್ಪಾಗಲಾರದು ಸರ್. ಮುಕುಂದ್ ವರದರಾಜನ್ ಹಾಗೂ ರೇಬಿಕಾ ವರ್ಗೀಸ್ ಆವರ ಪ್ರೀತಿಯಲ್ಲಿನ ಸಾಧನೆ ನೋಡಿ ನಾವು ಕಲಿಯುವುದು ತುಂಬಾ ಇದೆ ಸರ್. ಒಬ್ಬರನ್ನು ಪ್ರೇರಣೆ ಮಾಡುವಂತಹ ಬರಹ ಇದು ಆಗಿದೆ ಸರ್ ಅಂತ ಮುಕ್ತವಾಗಿ ಹೇಳಲು ಇಸ್ಟ ಪಡುತ್ತೇನೆ.ಅಭಿನಂದನೆಗಳು ಸರ್.

ಅನಾಮಧೇಯ ಹೇಳಿದರು...

ಹೌದು ಸರ್ ಇದು ಒಂದು ಜೀವನದ ನಿಜವಾದ ಪಾಠ 🙏

ಅನಾಮಧೇಯ ಹೇಳಿದರು...

ಹೌದು ಸರ್. ನಿಮ್ಮಈ ಲೇಖನ ನಿಜವಾದ ಜೀವನದ ಉದ್ದೇಶ ತಿಳಿಸುತ್ತೆ ಚಿಕ್ಕ ವಯಸ್ಸಿನ ಬದುಕಿನ ಮಾರ್ಗದರ್ಶನ ವಿಲ್ಲದ ಮಕ್ಕಳಿಗೆ. ಹೀಗೆ ನಿಮ್ಮ ಲೇಖನಗಳು ಇನ್ನಷ್ಟು ಬರಲಿ ಧನ್ಯವಾದಗಳು ಸರ್

ಅನಾಮಧೇಯ ಹೇಳಿದರು...

ಓದೋ ಟೈಮ್ ಅಲ್ಲಿ ಎಂಜಾಯ್ ಮಾಡೋಕೆ ಹೋದ್ರೆ ಮುಂದಿನ ದಿನಗಳಲ್ಲಿ ಅವರ ಜೀವನ ಫುಲ್ ಖಾಲಿ ಖಾಲಿ

ಅನಾಮಧೇಯ ಹೇಳಿದರು...

ಅದ್ಭುತ ವರ್ಣನೆ ಮತ್ತು ವಿಮರ್ಶೆ

ಅನಾಮಧೇಯ ಹೇಳಿದರು...

👌👍

ಅನಾಮಧೇಯ ಹೇಳಿದರು...

Nice one and All the best

ಅನಾಮಧೇಯ ಹೇಳಿದರು...

ಈಗಿನ ದಿನಗಳಲ್ಲಿ ಟೈಂಪಾಸ್ ಲವ್' ಮೋಜು ಮಸ್ತಿ 'ರಿವೊರ್ಸ್ಗಳು'ಹೆಚ್ಚಾಗಿ ನಾವು ಸಮಾಜದಲ್ಲಿ ಕಾಣುವಂತಹದು. "ಪ್ರೀತಿಯನ್ನು ತೋರಿಸಿಕೊಳ್ಳಬೇಕಾಗಿಲ್ಲ ನಂಬಿಕೆ' ವಿಶ್ವಾಸ 'ಕಾಳಜಿ 'ಇರಬೇಕು ಅಷ್ಟೇ". ಒಟ್ಟಾರೆಯಾಗಿ "ಎರಡು ಜೀವ ಒಂದು ಹೃದಯ "ಎಂದರೆ ತಪ್ಪಾಗಲಾರದು ಇದು ನನ್ನ ವೈಯಕ್ತಿಕ ಅನಿಸಿಕೆ. ಈ ನಿಮ್ಮ ಲೇಖನ ಈಗಿನ ಜನರೇಷನ್ ತಿಳಿದುಕೊಳ್ಳಬೇಕಾದ ಮುಖ್ಯವಾದ ವಿಷಯ. ಧನ್ಯವಾದಗಳು ಸರ್

ಅನಾಮಧೇಯ ಹೇಳಿದರು...

It's a real fact sir

ಅನಾಮಧೇಯ ಹೇಳಿದರು...

ಹೌದು ಸರ್ ಇದು ಒಂದು ಜೀವನದ ನಿಜವಾದ ಪಾಠ ಈಗಿನ ಮಕ್ಕಳಿಗೆ ನಿಮ್ಮ ಲೇಖನ ಒಂದು ಒಳ್ಳೆ ಮಾಹಿತಿ.