ಭಾನುವಾರ, ಏಪ್ರಿಲ್ 7, 2024

ವಿಧಿ ಬರಹದ ಕ್ರೂರತೆಯ ಮಧ್ಯೆ ಅರಳಿದ "ಬದುಕು"..

⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ

ಕೆಲವರ ಜೀವನವೇ ಹಾಗೆ, ಸಂತೋಷಕ್ಕಿಂತ ದುಃಖವನ್ನೇ ಸದಾ ಅನುಭವಿಸಿ, ಬರೀ ನೋವಿನ ಜೊತೆ ಬದುಕು ಸಾಗಿಸುವ ಸ್ಥಿತಿ, ಅವರದ್ದು. ಅಂತವರನ್ನು ಕಂಡರೆ ಮನಸ್ಸಿಗೆ ಆಗುವ ನೋವು, ಬೇಸರ ಅಷ್ಟಿಷ್ಟಲ್ಲ. ಅವರ ನೋವು, ಸಂಕಟ, ವೇದನೆ, ದುಃಖ, ಕಷ್ಟದ ಸನ್ನಿವೇಶಗಳನ್ನು ನೋಡಿದರೆ, ಬದುಕು ಎಷ್ಟೊಂದು ದುಸ್ಥರ, ವಿಧಿ ಬರಹ ಇಷ್ಟೊಂದು ಕ್ರೂರಿಯೇ ಎಂದು ಅನ್ನಿಸದೆ ಇರಲಾರದು. ಕೆಲವರ ಜೀವನ ಇಷ್ಟೊಂದು ಸಮಸ್ಯೆಗಳ ಆಗರದಿಂದ ಕೂಡಿರುತ್ತದೆಯೇ ಎಂದು ಊಹಿಸಲು ಕೂಡ ಅಸಾಧ್ಯ. ಆ ಮಟ್ಟಿಗೆ ಅವರ ಜೀವನ ಕಣ್ಣೀರಿನ ನೋವಿನಲ್ಲಿ ಮುಳುಗಿ ಹೋಗಿ, ಅಂಧಕಾರದಲ್ಲಿ ಸೇರಿರುತ್ತದೆ.

ಆದರೆ ಅದನ್ನು ಅವರು ಎಂದಿಗೂ, ಯಾರಿಗೂ ಹೇಳಿಕೊಳ್ಳುವುದಿಲ್ಲ. ಹಾಗೇನಾದರೂ ಹೇಳಿಕೊಳ್ಳೊಣವೆಂದರೆ ಯಾರು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಏಕೆಂದರೆ ಅವರನ್ನು ಕಷ್ಟದ ಸರಮಾಲೆ ಸುತ್ತುವರೆದಿರುವುದರಿಂದ ಯಾರು ತಾನೇ ಹತ್ತಿರಕ್ಕೆ ಹೋಗಲು ಪ್ರಯತ್ನಿಸುತ್ತಾರೆ, ಇಷ್ಟಪಡುತ್ತಾರೆ ಹೇಳಿ. ಆದರೂ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಕಳೆಗುಂದುವುದಿಲ್ಲ. ನಾವು ದುರದೃಷ್ಟವಂತರು ಎಂದು ಯಾವಾಗಲೂ ಭಾವಿಸುವುದಿಲ್ಲ, ವಿಧಿಗೆ ಸವಾಲಾಕಿ ಖುಷಿಯಿಂದ ಜೀವನ ನಡೆಸುತ್ತಾರಲ್ಲ, ಅದೇ ಅವರ ಆತ್ಮಶಕ್ತಿ, ಧೈರ್ಯ, ಛಲ, ಬಲ, ವಿಶ್ವಾಸ.

ನಿಜ ನಾವು ಪ್ರತಿನಿತ್ಯವು ದೇವರನ್ನು ಶಪಿಸುತ್ತೇವೆ, ದೇವರು ನನ್ನನ್ನು ಶ್ರೀಮಂತನನ್ನಾಗಿ ಮಾಡಲಿಲ್ಲ. ನನಗೆ ದೊಡ್ಡ ದೊಡ್ಡ ಹುದ್ದೆ ಕೊಡಿಸಲಿಲ್ಲ. ಲಕ್ಷಗಟ್ಟಲೆ ಸಂಬಳದ ನೌಕರಿ ಸಿಗುವಂತೆ ಮಾಡಲಿಲ್ಲ. ದೊಡ್ಡದಾದ ಮನೆಯ ಮಾಲೀಕನನ್ನಾಗಿಸಲಿಲ್ಲ. ಕಾರಿನ ಆಸೆ ಈಡೇರಿಸಲಿಲ್ಲ. ನನ್ನನ್ನು ಸುಂದರವಾಗಿ ಸೃಷ್ಟಿ ಮಾಡಲಿಲ್ಲ. ಹತ್ತಾರು ಎಕರೆ ಜಮೀನಿನ ಒಡೆಯನಾಗಲಿಲ್ಲ. ದೇವರು ನನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಲಿಲ್ಲ ಎಂದು ದೇವರ ಪೋಟೋ ಕಂಡಾಗಲೆಲ್ಲ ಅದೆಷ್ಟು ಬಾರಿ ಬೈಕೊಳ್ಳುತ್ತೇವೋ ಗೊತ್ತಿಲ್ಲ. 

ವಾಸ್ತವವೆಂದರೆ ನಮ್ಮಲ್ಲಿ ಎಷ್ಟೇ ಹಣವಿದ್ದರೂ ನಮಗೆ ಸಾಲದು, ಎಷ್ಟೇ ಸಂಬಳ ಬಂದರೂ ತೃಪ್ತಿಯಿಲ್ಲ. ಎಷ್ಟೇ ದೊಡ್ಡ ಮನೆಯಿದ್ದರು ಖುಷಿಯಿಲ್ಲ. ಎಷ್ಟೇ ಜಮೀನಿದ್ದರೂ ನೆಮ್ಮದಿ ಇಲ್ಲ. ಅಷ್ಟರ ಮಟ್ಟಿಗೆ ಅಪರಿಮಿತ ಬಯಕೆಗಳಿಂದ ಜೀವನದಲ್ಲಿ ಎಲ್ಲವೂ ಇದ್ದರೂ, ಏನೇನೂ ಇಲ್ಲದಂತೆ ಬದುಕುತ್ತೇವೆ, ಅದು ನಿರುತ್ಸಾಹ, ನಿರಾಶವಾದದಿಂದ ಎಂಬ ಸತ್ಯಾಂಶ ಕಣ್ಣಿಗೆ ಕಾಣುತ್ತದೆ.

ನಿಮಗೊಂದು ಘಟನೆ ಹೇಳುತ್ತೇನೆ ಕೇಳಿ, ಆಕೆಗೆ ತಿಂಗಳಿಗೆ ಬರುವುದು ಕೇವಲ 1200 ರೂ. ವಿಕಲಚೇತನ ಪಿಂಚಣಿ. ಅದರಲ್ಲಿಯೇ ತನ್ನ ಇಡೀ ಆಸೆಗಳೆಲ್ಲವನ್ನೂ ಪೂರೈಸಿಕೊಂಡು, ಉಳಿತಾಯ ಮಾಡಬೇಕು. ಆಕೆ ಹೆಸರು ಲಲಿತ, ಇತ್ತಿಚೀಗೆ ಪರಿಚಯವಾದ ಹುಡುಗಿ. ಆಕೆ ವಿಕಲಚೇತನಳು. ಮೂಲತಃ ಕೋಲಾರ ತಾಲ್ಲೂಕಿನ ಹಳ್ಳಿಯವಳು. ಎರಡು ಕಣ್ಣುಗಳ ದೃಷ್ಟಿ ಸರಿಯಾಗಿ ಕಾಣುವುದಿಲ್ಲ. ಕಣ್ಣಿಗೆ ತೀರ ಹತ್ತಿರದಿಂದ ನೋಡಿದರೆ ಮಾತ್ರ ಅಕ್ಷರಗಳನ್ನು ಓದುತ್ತಾಳೆ. ದೂರದಿಂದ ನೋಡಿದರೆ ಒಂದಕ್ಷರವು ಕಾಣುವುದಿಲ್ಲ.

ಲಲಿತ ವಯಸ್ಸು 19 ವರ್ಷವಿರಬಹುದು. ಪಿಯುಸಿ ಓದಿದ್ದಾಳೆ. ತಂದೆ, ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ತೀರ ಬಡತನ ಕುಟುಂಬ. ಚಿಕ್ಕಂದಿನಿಂದಲೇ ಆಕೆಗೆ ಎರಡು ಕಣ್ಣುಗಳ ದೃಷ್ಟಿ ಸಮಸ್ಯೆ ಇದೆ. ಆದರೂ ಆಕೆ ತನಗೆ ಎರಡು ಕಣ್ಣು ಕಾಣಿಸುವುದಿಲ್ಲ ಎಂಬ ನೋವನ್ನು ಮರೆತು ಜೀವಿಸುತ್ತಿದ್ದಾಳೆ. 

ಏನಮ್ಮಾ ಲಲಿತ ಎಂದರೆ, ಏನ್ಮಾಡುವುದು ಸಾರ್, ನನಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ಅಳುತ್ತಾ, ನೋವಿನಿಂದ ಕೂತರೆ ಜೀವನದ ಬಗ್ಗೆ ಜಿಗುಪ್ಸೆ ಬಂದು ಬೇಸರವಾಗುತ್ತದೆ. ನನಗೆ ಕಣ್ಣುಗಳು ಕಾಣದಿರಬಹದು, ಆದರೆ ಬದುಕಿನ ಬಗ್ಗೆ ನನಗೆ ಬೇಸರವಿಲ್ಲ. ಕಾರಣ ನನಗಿಂತ ಕಷ್ಟದಲ್ಲಿ ಹಲವರಿದ್ದಾರೆ, ಅವರ ಕಷ್ಟಗಳ ಮುಂದೆ ನನ್ನ ಸಮಸ್ಯೆ ತುಂಬಾ ಚಿಕ್ಕದು ಎಂಬ ಆಕೆಯ ಅರ್ಥಗರ್ಭಿತ ಮಾತಿಗೆ ಏನು ಹೇಳಲು ಸಾಧ್ಯ..?

ಕಷ್ಟದಲ್ಲಿದ್ದರು ಆಕೆಯ ನಗುವಿನ ಗುಣ, ಮುಗ್ದತೆ, ಭವಿಷ್ಯದಲ್ಲಿ ಖಂಡಿತಾ ಒಳ್ಳೆಯದ್ದಾಗುತ್ತದೆ ಎಂಬ ಆಕೆಯ ಆಶಾವಾದ, ನಮ್ಮನ್ನೇ ಆಶ್ಚರ್ಯ, ಆತ್ಮವಲೋಕನ ಪಡುವಂತೆ ಮಾಡುತ್ತದೆ.

ಇನ್ನೊಂದು ಘಟನೆ ಕೇಳಿ, ಆಕೆಯ ಹೆಸರು ರಚನಾ, ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಯವಳು. ಈಕೆಯು ವಿಕಲಚೇತನಳು. ಈಕೆಗೆ ಎರಡು ಕಾಲುಗಳು ಸ್ವಾಧೀನದಲ್ಲಿ ಇಲ್ಲ. ವಾಕರ್ ಸಹಾಯವಿಲ್ಲದೆ ನಡೆಯಲು ತುಂಬಾ ಕಷ್ಟ. ಬಿ.ಕಾಂ ಪದವೀಧರೆ. ಸರ್ಕಾರದಿಂದ ಬರುವ ಅಲ್ಪಸ್ವಲ್ಪ ಪಿಂಚಣಿಯೇ ಈಕೆಗೂ ಆಧಾರ. ಆದರೆ ಜೀವನದ ಬಗ್ಗೆೆ ಎಂದೂ ನಿರುತ್ಸಾಹ ಪಟ್ಟಿಲ್ಲ. ಪ್ರತಿದಿನವೂ 3 ಬಸ್ ಹಿಡಿದು ಕಾಲೇಜಿಗೆ ಹೋಗುತ್ತಾಳೆ. 

ಸಾಧನೆ ಮಾಡಲು ಕಾಲಿನ ಅಗತ್ಯವೇನಿದೆ ಸಾರ್, ಎಷ್ಟೋ ಜನ ಕೈ, ಕಾಲು ಸರಿಯಾಗಿರುವವರು ಕೂಡ ಜೀವನದಲ್ಲಿ ಏನು ಮಾಡದೇ ವ್ಯರ್ಥವಾಗಿ ಬದುಕು ಕಳೆದು ಬಿಡುತ್ತಾರೆ. ಆದರೆ ನಾನು ಹಾಗಲ್ಲ, ನನಗೆ ಕಾಲಿಲ್ಲ ಎಂದು ಅಳುತ್ತ ಕೂತರೆ ನೋಡವವರು ಅನುಕುಂಪ ವ್ಯಕ್ತಪಡಿಸಬಹುದೆ ಹೊರತು ನನಗೆ ಬರುವ ಲಾಭವೇನಿಲ್ಲ. ದೇವರು ನನಗೆ ಕಾಲು ನೀಡದಿರಬಹುದು, ಆದರೆ ಸಾಧನೆ ಮಾಡಬೇಕೆಂಬ ಆಲೋಚನೆ ಮಾತ್ರ ದುಪ್ಪಟ್ಟು ನೀಡಿದ್ದಾನೆ. 

ಜೀವನದಲ್ಲಿ ಒಂದಲ್ಲಾ ಒಂದು ದಿನ ನಮ್ಮ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವ ರೀತಿಯ ಸಾಧನೆ ಮಾಡೇ ಮಾಡುತ್ತೇನೆ ಎಂಬ ಆಕೆಯ ಅಚಲ ವಿಶ್ವಾಸದ ಮುಂದೆ ಮರು ಪ್ರಶ್ನೆ ಹಾಕಲು ಸಾಧ್ಯವೇ.

ಹಾಗೆಯೇ ಪ್ರಶಾಂತ್ ಎಂಬ ಹುಡುಗ ಸಿಕ್ಕಿದ್ದ. ಆತನದ್ದು ಕೋಲಾರದ ವೇಮಗಲ್ ಬಳಿಯ ಹಳ್ಳಿಯವನು. ಎಲ್ಲರಂತೆ ಚೆನ್ನಾಗಿದ್ದ, ಆದರೆ ಒಂದು ದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದು ಒಂದು ಕೈಯನ್ನು ಕಳೆದುಕೊಳ್ಳುತ್ತಾನೆ. ಇತನು ಓದಿರುವುದು ಪಿಯುಸಿ. ಪದವಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇದ್ದರೂ ಬಡತನದಿಂದ ಓದು ಮುಂದುವರೆಸಲು ಸಾಧ್ಯವಾಗಲಿಲ್ಲ. ಈತನ ತಂದೆ ನಿಧನ ಹೊಂದಿ 7 ವರ್ಷವಾಗಿದೆ. ಈಗ ಒಂದು ಸಣ್ಣ ಕಚೇರಿಯಲ್ಲಿ 6 ಸಾವಿರಕ್ಕೆ ಉದ್ಯೋಗಕ್ಕೆ ಸೇರಿದ್ದಾನೆ. ಬರುವ ಅಲ್ಪ ಸಂಬಳದಲ್ಲೇ ವಯಸ್ಸಾದ ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸಬೇಕು, ಜೊತೆಗೆ ಇವರ ತಂದೆ ಬದುಕಿದ್ದಾಗ ಮಾಡಿದ ಸಾಲಗಳನ್ನು ತೀರಿಸುವ ಹೊಣೆಗಾರಿಕೆ ಬೇರೆ ಇತನ ಮೇಲಿದೆ. ಇತನ ಕಷ್ಟಗಳನ್ನು ನೋಡಿ ಸಂಬಂಧಿಕರು ಯಾರು ಹತ್ತಿರ ಸುಳಿಯುವುದಿಲ್ಲ.

ಆದರೂ ಇತನಿಗೆ ಜೀವನದ ಬಗ್ಗೆ ಇರುವ ಆಸೆ, ಆಕಾಂಕ್ಷೆಗಳೂ ಮಾತ್ರ ಎಂದಿಗೂ ಕರಗಿಲ್ಲ. ಕಾರಣ ಜೀವನವೇ ಹಾಗೆ ಸಾರ್, ನಾವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪ್ರೀತಿಯಿಂದ ಸ್ವೀಕರಿಸುವುದನ್ನು ಬಿಟ್ಟು, ನಾವು ಬೇರೆನೂ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಭಯಬಿದ್ದು ಕೂತರೆ ಜೀವನದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ ಎಂಬ ಪ್ರಶಾಂತನ ಆಲೋಚನೆ, ಮನಸ್ಥಿತಿಗೆ ಏನು ಹೇಳಬೇಕೋ ಅರ್ಥವಾಗುವುದಿಲ್ಲ.

ಜೀವನವೇ ಹಾಗೆ, ನಾವು ಸದಾ ಸಂತೋಷವನ್ನೇ ಬಯಸುತ್ತೇವೆ, ಆನಂದದಿಂದ ಬದುಕಲು ಆಸೆ ಪಡುತ್ತೇವೆ. ಆದರೆ ಸಂತೋಷಕ್ಕಿಂತ ದುಃಖವೇ ನಮಗೆ ಲಭಿಸುತ್ತದೆ, ಕಷ್ಟಗಳು ಮನೆ ತುಂಬಾ ಮಲಗುತ್ತದೆ. ಶಿಕ್ಷಣ, ಹಣ, ಉದ್ಯೋಗ, ಕುಟುಂಬ, ಸಂಗಾತಿ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ನಾವು ಅಂದುಕೊಂಡ ರೀತಿಯಲ್ಲಿ ನಡೆದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಕಷ್ಟಗಳು ಬಂದಾಗಲೇ ಜೀವನದ ನೈಜ ದರ್ಶನವಾಗುವುದು. ನಮ್ಮಲ್ಲಿ ಆತ್ಮಸ್ಥೈರ್ಯ, ಧೈರ್ಯ, ವಿಶ್ವಾಸ ಬರಬೇಕಾದರೆ ಕಷ್ಟಗಳು ಎದುರಿಸಿದಾಗ, ಅನುಭವಿಸಿದಾಗ ಮಾತ್ರ ಸಾಧ್ಯ.

ಅಂದ ಹಾಗೆ ಜೀವನದಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ಸುಲಭವಾಗಿ ನಡೆದುಬಿಟ್ಟರೆ, ನಾವೇ ದೇವರಾಗಿ ಬಿಡುತ್ತೇವೆ, ಜೀವನಕ್ಕೆ ಬೆಲೆಯೇ ಇರುವುದಿಲ್ಲ.

ಸಾವಿರಾರು ವಿಕಲಚೇತನರು ಕಣ್ಣಿಲ್ಲದೆ, ಕೈ ಇಲ್ಲದೇ, ಕಾಲಿಲ್ಲದೆ, ಹಲವು ದೈಹಿಕ ನ್ಯೂನತೆಗಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಸರಿಯಾದ ಉದ್ಯೋಗವಿಲ್ಲದೆ, ಹಣಕಾಸಿನ ನೆರವಿಲ್ಲದೆ, ಯಾರ ಆಶ್ರಯ, ಸಹಾಯವಿಲ್ಲದೆ ಬಡತನದಲ್ಲಿಯೇ ಪ್ರತಿನಿತ್ಯವು ಜೀವನದ ಜೊತೆ ಹೋರಾಟ ನಡೆಸುತ್ತ, ವಿಧಿ ಬರಹದ ಕ್ರೂರತೆಗೆ ಸೆಡ್ಡು ಹೊಡೆದು ಬದುಕನ್ನು ಸುಂದರವಾಗಿ ಅರಳಿಸಿಕೊಳ್ಳುತ್ತಾರೆ. ಅವರಿಗೆ ಹೋಲಿಸಿಕೊಂಡರೆ ನಮ್ಮ ಕಷ್ಟಗಳು ದೊಡ್ಡದೇನಲ್ಲ, ಬಗೆಹರಿಸಲಾಗದ ಕಗ್ಗಂಟಿನ ಸಮಸ್ಯೆಗಳೇನಲ್ಲ.  

ನಮಗೆ ಇರುವುದರಲ್ಲೇ ಖುಷಿ ಕಾಣುತ್ತ, ಸರಳ ಜೀವನದೊಂದಿಗೆ ಬದುಕು ಸಾಗಿಸುತ್ತ, ಅತಿ ಆಸೆ, ಸ್ವಾರ್ಥ ಬಿಟ್ಟು ಜೀವನ ನಡೆಸಿದರೆ ಅದೇ ಸ್ವರ್ಗ. ಪ್ರತಿದಿನವು ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ, ಮಾನಸಿಕವಾಗಿ ನರಳುತ್ತ, ಪ್ರತಿದಿನವು ವಿಪರಿತವಾಗಿ ಆಲೋಚಿಸುತ್ತ, ವಿಧಿ ಬರಹವನ್ನು ಶಪಿಸುತ್ತ ಜೀವನ ಸಾಗಿಸುವುದರಲ್ಲಿ ಅರ್ಥವೇನಿದೆ ಎಂಬ ಸಣ್ಣ ಆಲೋಚನೆ ನಮ್ಮ ಮನಸ್ಸಿಗೆ ಬಂದರೆ ಸಾಕು.

ಹಿರಿಯರೊಬ್ಬರು ಹೇಳಿದ್ದಾರೆ ಸುಖ ಸಂತೋಷದಲ್ಲಿ ನಮಗಿಂತ ಕೆಳಗಿರುವವರನ್ನು ನೋಡಬೇಕು. ಸಾಧನೆ, ಗುರಿಯಲ್ಲಿ ನಮಗಿಂತ ಮೇಲ್ಮಟ್ಟದವರನ್ನು ಕಾಣಬೇಕು ಎಂದು. ಒಂದೊತ್ತು ಊಟ ಸಿಗದೆ ಪರಿತಪಿಸುವ ಸಾವಿರಾರು ಜನ ನಮ್ಮ ಮಧ್ಯೆಯೇ ಇದ್ದಾರೆ. ಅವರನ್ನು ನೋಡಿದರೆ, ನಾವೆಷ್ಟು ಅದೃಷ್ಟವಂತರೆಂದು ಅರ್ಥವಾಗುತ್ತದೆ.

ಪ್ರತಿನಿತ್ಯವೂ, ಪ್ರತಿಕ್ಷಣವೂ ಅಮೂಲ್ಯ, ಅದನ್ನು ತುಂಬಾ ಸಂತೋಷದಿಂದ ಕಳೆಯಬೇಕೆ ಹೊರತು ದುಃಖಿಸುತ್ತ ವ್ಯರ್ಥ ಮಾಡುವುದಲ್ಲ. ಏಕೆಂದರೆ ಮನುಷ್ಯನಿಗೆ ಇರುವುದು ಒಂದೇ ಜನ್ಮ. ನಾವು ಈ ಜನ್ಮದಲ್ಲೇ ನೆಮ್ಮದಿ, ಸಂತೋಷ, ಆನಂದ ಕಾಣದಿದ್ದರೆ, ಮತ್ತೆ ಕಾಣುವುದು ಯಾವಾಗ..?  

18 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Very inspiring stories girish

Chandrashekarkolar ಹೇಳಿದರು...

Chandra shekar Kolar. Very inspiring story girish

ಅನಾಮಧೇಯ ಹೇಳಿದರು...

Fabulous blog and content, Thank you for words sir.

Radhika k ಹೇಳಿದರು...

TQ u for sharing valueable examples

ಅನಾಮಧೇಯ ಹೇಳಿದರು...

Very nice and inspirational story

ಅನಾಮಧೇಯ ಹೇಳಿದರು...

ಒಳ್ಳೆ ಬರಹ ನಿಮಗೆ ಹೃದಯದಿಂದ ನೋಡುವ ಗುಣ ಇದೆ.

ಅನಾಮಧೇಯ ಹೇಳಿದರು...

Nice

ಅನಾಮಧೇಯ ಹೇಳಿದರು...

ನಿಮ್ಮ ಹೃದಯವಂತಿಕೆಗೆ ಧನ್ಯವಾದಗಳು ಸರ್ ಈಗಿನ ಪ್ರಪಂಚದಲ್ಲಿ ಅವರವರ ಬಗ್ಗೆನೇ ತಿಳ್ಕೊಳ್ಳೋದಿಕ್ಕೆ ಸಮಯ ಇಲ್ಲ,6 ನೀವು ಇಷ್ಟೊಂದು ಸಹನೆಯಿಂದ ತಾಳ್ಮೆಯಿಂದ ಇವರಿಗೆಲ್ಲ ಪ್ರೋತ್ಸಾಹ ಕೊಡುತ್ತಿರುವುದಕ್ಕೆ ಹೆಮ್ಮೆ ಅನ್ಸುತ್ತೆ 🙏🙏🙏🙏

ಅನಾಮಧೇಯ ಹೇಳಿದರು...

ನೋವನ್ನು ಅರ್ಥ ಮಾಡಿಕೊಂಡವರು ಕಡಿಮೆ,ಅನುಭವಿಸಿದವರು ಹೆಚ್ಚು, ಆದರೆ ಅರ್ಥಮಾಡಿಕೊಂಡವರು +ಅನುಭವಿಸಿದವರು ನಿಮ್ಮಂಥ ಲೇಖಕ ರು

ಸುದರ್ಶನ್ ರೆಡ್ಡಿ ಕೆ.ಎಸ್ ಹೇಳಿದರು...

ವಾಸ್ತವತೆಯ ಬಗ್ಗೆ ಜನತೆಗೆ ಅರಿವು ಮೂಡಿಸಬೇಕಾಗಿದ್ದು, ನಿಮ್ಮ ಲೇಖನ ಆ ಪ್ರಯತ್ನ ಮಾಡುತ್ತಿದೆ

Joy Coorg ಹೇಳಿದರು...

Really Heart Touching Sir

ಅನಾಮಧೇಯ ಹೇಳಿದರು...

Nice sir....

ಅನಾಮಧೇಯ ಹೇಳಿದರು...

Nice sir....

ಅನಾಮಧೇಯ ಹೇಳಿದರು...

Very nice story sir

Lakshmichandramohan.utr ಹೇಳಿದರು...

Nimma baraha nammellarigu maargadarshaka .... 🙏

ಅನಾಮಧೇಯ ಹೇಳಿದರು...

ವಿಕಲ ಚೇತನರ ಬಗ್ಗೆ ಪ್ರಕಟ ಗೊಂಡ ನಿಮ್ಮ ಲೇಖನ ತುಂಬಾ ಅದ್ಭುತವಾಗಿದೆ.ಹಾಗೂ ಸ್ಪೂರ್ತಿ ದಾಯಕವಾಗಿದೆ ಸರ್.

ಅನಾಮಧೇಯ ಹೇಳಿದರು...

Santhosh rao S

ಅನಾಮಧೇಯ ಹೇಳಿದರು...

Thank u sir ನಿಮ್ಮ ಉಪಯುಕ್ತ ಮಾಹಿತಿ ನನ್ನ ಮನಸಿನಲ್ಲಿದ್ದ ನೋವನ್ನು ದೂರ ಮಾಡಿದೆ