ಭಾನುವಾರ, ಜನವರಿ 2, 2022

ಅನ್ಯೋನ್ಯತೆಯಲ್ಲಿ ಕಾಣುವ "ಆನಂದ"..

      ⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ಸಂಬಂಧಿಕರು, ಸ್ನೇಹಿತರಾಗುವುದು ಬೇಡ. ಬದಲಾಗಿ ನನ್ನ ಸಂಬಂಧಿಕರು, ಸ್ನೇಹಿತರೆಲ್ಲರೂ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂಬ ಒಳ್ಳೆಯ ಮಾತೊಂದಿದೆ. ಅಷ್ಟಕ್ಕೂ ಈ ವಾಕ್ಯದಂತೆ ಅದೆಷ್ಟು ಜನ ಜೀವಿಸುತ್ತಾರೆ, ಅದೆಷ್ಟು ಜನ ಪಾಲಿಸುತ್ತಾರೆ ಎಂಬುವುದನ್ನು ಇವತ್ತಿನ ಕಾಲಘಟ್ಟದಲ್ಲಿ ನಿಂತು ಆಲೋಚಿಸಿದರೆ ನಮಗೆ ನೈಜತೆ ಏನೆಂಬುವುದು ಆರ್ಥವಾಗುತ್ತದೆ.

ಇಂದಿನ ಜನ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಸಂಪಾದಿಸುತ್ತಿದ್ದಾರೆ. ಕೆಲವರದ್ದು ಸಾವಿರಗಳಲ್ಲಿ ಸಂಪಾದನೆ ಆದರೆ, ಮತ್ತೆ ಕೆಲವರದ್ದು ಲಕ್ಷ, ಕೋಟಿಗಳಲ್ಲೂ ಇದೆ. ದುಬಾರಿ ಬೆಲೆಯ ದ್ವಿಚಕ್ರ ವಾಹನ, ಕಾರುಗಳನ್ನು ಬಳಸುವ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಲೇ ಇದೆ. ದೊಡ್ಡ ದೊಡ್ಡ ವಿಸ್ತೀರ್ಣವುಳ್ಳ ಮನೆ, ಡೂಪ್ಲೆಕ್ಸ್ ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಕರೆಗಟ್ಟಲೆ ಜಮೀನು, ಫಾರ್ಮ್ ಹೌಸ್ ಗಳ ಮಾಲೀಕರಾಗುತ್ತಿದ್ದಾರೆ. ಸಾವಿರಾರು ರೂ. ಬೆಲೆ ಬಾಳುವ ಮೊಬೈಲ್ ಪೋನ್ ಗಳು, ಟ್ಯಾಬ್ ಗಳು, ಅವುಗಳಿಗೆ ಡ್ಯುಯಲ್ ಸಿಮ್ ಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಬಹುತೇಕರು ಬಳಸುತ್ತಾರೆ. ಹಾಗೆಯೇ ಧರಿಸುವ ಬಟ್ಟೆಯು ತುಂಬಾ ಕಲರ್ ಪುಲ್ ಡಿಸೈನ್ ಗಳ ಜೊತೆಗೆ ಕಾಸ್ಟ್ಲಿಯಾಗಿದೆ

ಇನ್ನೂ ಟೆಕ್ನಾಲಜಿ ಯುಗದೊಂದಿಗೆ ಬೆರೆತು ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯ್ಯೂಟೂಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ತೇಲುತ್ತಿದ್ದಾರೆ. ಒಂದು ರೀತಿಯ ಮನುಷ್ಯನ ಜೀವನವೇ ತುಂಬಾ ಫ್ಯಾಷನ್ ಹಾಗೂ ಅಟ್ರಾಕ್ಷನ್ ಆಗಿ ಮಾರ್ಪಾಡಾಗಿದೆ.

ದಶಕಗಳು ಉರುಳುತ್ತಿದ್ದಂತೆ ಸಮಾಜದಲ್ಲಿ ಹಲವು ಬದಲಾವಣೆಗಳು ಆಗುತ್ತಿರುವುದು ಸೂಕ್ಷ್ಮವಾಗಿ ಗಮನಿಸಬಹುದು. ವಾಸ್ತವಾಂಶವೆಂದರೆ ಜನರ ಆರ್ಥಿಕ ಸ್ಥಿತಿ, ಜೀವನ ಶೈಲಿ, ನಡವಳಿಕೆ ಮಾತ್ರ ಬದಲಾಗಿಲ್ಲ. ಜೊತೆ ಜೊತೆಗೆ ವ್ಯಕ್ತಿತ್ವವೇ ಸಂಪೂರ್ಣವಾಗಿ ಚೇಂಜ್ ಆಗಿದೆ, ಹಾದಿಯು ತಪ್ಪಿದೆ.

ಇಂದು ಪ್ರೀತಿ, ವಾತ್ಸಾಲ್ಯ, ಅನ್ಯೋನ್ಯತೆ, ಅನುಕಂಪ, ಉದಾರತೆ, ಸಹೋದರತೆ, ಸ್ನೇಹಪರತೆ, ನಂಬಿಕೆ, ವಿಶ್ವಾಸ ಎಂಬ ಅಂಶಗಳನ್ನು ಜನ ಕೈ ಬಿಟ್ಟು ಜೀವನ ಸಾಗಿಸುತ್ತಿದ್ದಾರೆ ಎಂಬ ವಿಚಾರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ಮನುಷ್ಯರಲ್ಲಿ ಕಾಣಬಾರದಾಗಿದ್ದ, ನೋಡಬಾರದಾಗಿದ್ದ ಕೆಲ ಋಣಾತ್ಮಕ ಗುಣಗಳು ದೇಹದ ತುಂಬಾ ಆವರಿಸಿಕೊಂಡು, ವಿಸ್ತಾರಗೊಂಡಿದೆ. ವಿಶೇಷವೆಂದರೆ ಈ ಗುಣಗಳನ್ನು ಪಾಲಿಸುವ ಜನಸಂಖ್ಯೆ ಮಿತಿ ಮೀರಿ ದುಪ್ಪಾಟ್ಟಾಗುತ್ತಿರುವುದೇ ನಮ್ಮಲ್ಲಿನ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿ ಎಂಬಂತಿದೆ ಹಾಗೂ ಸಮಾಜ ಸಾಗುತ್ತಿರುವ ದಾರಿಯ ಬಗ್ಗೆ ಕಳವಳ ಪಡುವಂತಾಗಿದೆ.

ಹಾಗೆಯೇ ಅಸೂಹೆ, ಹೊಟ್ಟೆಕಿಚ್ಚು, ಅಹಂಕಾರ, ಸ್ವಾರ್ಥ, ದುರಾಸೆ, ಗರ್ವ, ಕೋಪ ಎಂಬ ಅಂಶಗಳು ಕೂಡ ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತಲೇ ಇದೆ. ಮನುಷ್ಯನಲ್ಲಿ ಇಂದು ಅಹಂ ಎಂಬ ಗುಣವು ಹೆಚ್ಚಾಗಿ ಕಾಣಿಸತೊಡಗಿದೆ. ಈ ಗುಣವು ನಮ್ಮಲ್ಲಿನ ಮಾನವೀಯತೆಯನ್ನು ಮೂಲೆ ಗುಂಪು ಮಾಡುವ ಮಟ್ಟಿಗೆ ಕೊಂಡ್ಯೂಯುತ್ತಿದೆ. 

ನಾವು ಇಂದು ಬಹುಪಾಲು ಸಮಯವನ್ನು ಬೇರೊಬ್ಬರ ಬೆಳವಣಿಗೆಗೆ ತೊಡರುಗಾಲು ಹಾಕುವ ಬಗ್ಗೆ ಆಲೋಚಿಸುತ್ತ ಚಿಂತಿಸುವುದರಲ್ಲೇ ವ್ಯರ್ಥ ಮಾಡುತ್ತಿದ್ದೇವೆ ಎಂಬುವುದರಲ್ಲಿ ಸಂದೇಹವಿಲ್ಲ. ನಮ್ಮ ವರ್ತನಗಳಲ್ಲೇ ಲೋಪ ದೋಷಗಳು ಎದ್ದು ಕಾಣುತ್ತಿದ್ದೆ.

ಇತ್ತೀಚಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಆತ್ಮೀಯತೆ, ಮಾನವೀಯತೆ ಸಾರುವ ವಿಡಿಯೋ ಒಂದು ನೋಡಿದೆ. ಮೂರು ಪಕ್ಷಿಗಳು ಒಂದು ಮರದ ಕೊಂಬೆಯ ಮೇಲೆ ಕೂತಿರುತ್ತವೆ. ಸ್ವಲ್ಪ ಸಮಯದ ನಂತರ ಆಹಾರ ಹುಡುಕುತ್ತ ಮೂರು ಪಕ್ಷಿಗಳು ಮರದ ಮೇಲಿಂದ ಹಾರಿ ಒಂದೊಂದು ದಿಕ್ಕಿಗೆ ಹೋಗುತ್ತವೆ. ಸ್ವಲ್ಪ ಸಮಯದ ನಂತರ ಮೂರು ಪಕ್ಷಿಗಳು ಮೊದಲು ಕೂತಿದ್ದ ಮರದ ಕೊಂಬೆಯ ಮೇಲೆ ಬಂದು ಕೂರುತ್ತವೆ. ಮೂರು ಪಕ್ಷಿಗಳಲ್ಲಿ ಒಂದು ಪಕ್ಷಿಗೆ ಮಾತ್ರ ಆಹಾರ ಸಿಕ್ಕಿರುತ್ತದೆ. ಉಳಿದ ಎರಡು ಪಕ್ಷಿಗಳು ಆಹಾರ ಹುಡುಕುತ್ತ ಹೋಗಿದ್ದರು ಕೂಡ ಅವುಗಳಿಗೆ ಸಿಕ್ಕಿರುವುದಿಲ್ಲ. ಆಗಂತ ಆಹಾರ ಸಿಕ್ಕ ಪಕ್ಷಿಯೊಂದೆ ಎಲ್ಲವನ್ನೂ ಸೇವಿಸುವುದಿಲ್ಲ, ಬದಲಾಗಿ ಉಳಿದ ಎರಡು ಪಕ್ಷಿಗಳಿಗೂ ಹಂಚಿ ತಾನು ಸೇವಿಸುತ್ತದೆ.

ಆ ಪಕ್ಷಿಯು ಈ ಆಹಾರವನ್ನು ನಾನು ಹುಡುಕಿಕೊಂಡು ಬಂದದ್ದು, ನಿಮಗೆ ಹೇಗೆ ನೀಡಲು ಸಾಧ್ಯ ಎಂದು ಹೇಳದೆ, ಹಂಚಿ ತಿನ್ನುವ ಮೂಲಕ ಆತ್ಮತೃಪ್ತಿಯ ಜೊತೆಗೆ ಮನುಷ್ಯರಲ್ಲಿ ಕಾಣದ ಮೌಲ್ಯಯುತ ಗುಣವನ್ನು ತೋರಿಸುತ್ತದೆ.

ಒಮ್ಮೆ ನಾನು ಬೆಟ್ಟವೊಂದಕ್ಕೆ ಹೋಗಿದ್ದೆ. ಆ ಬೆಟ್ಟದಲ್ಲಿ ಕೋತಿಗಳ ಸಂಖ್ಯೆ ಗಣನೀಯವಾಗಿತ್ತು. ಕೋತಿಗಳು ಆಹಾರವಿಲ್ಲದೇ ಪರಿತಪಿಸುವ ವಿಚಾರಗೊತ್ತಿದ್ದ ಒರ್ವ ವ್ಯಕ್ತಿ ಒಂದಷ್ಟು ಬನ್, ಬ್ರೆಡ್, ಬಿಸ್ಕತ್ ಗಳನ್ನು ತಂದು ಕೋತಿಗಳಿಗೆ ನೀಡಿದ. ವಿರ್ಪಯಾಸವೆಂದರೆ ಅಲ್ಲಿದ್ದ ಕೆಲ ಕೋತಿಗಳು ಕಿತ್ತಾಡದೆ ಪರಸ್ಪರ ಹಂಚಿಕೊಂಡು ಹೊಟ್ಟೆ ತುಂಬಿಸಿಕೊಂಡವು. ಕೋತಿಗಳು ಮನುಷ್ಯನ ರೀತಿ ಶಾಲಾ, ಕಾಲೇಜುಗಳಿಗೆ ಹೋಗಿ ಶಿಕ್ಷಣ ಪಡೆಯದಿರಬಹದು. ಆದರೆ ಅದಕ್ಕಿಂತ ಹೆಚ್ಚಿನ ಜೀವನ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದವು ಎಂಬುವುದೇ ಗ್ರೇಟ್.

ಹಾಗೇ ನೋಡಿದರೆ ಮನುಷ್ಯನಲ್ಲಿರುವಷ್ಟು ಅಸೂಹೆ, ಹೊಟ್ಟೆ ಕಿಚ್ಚು, ಸ್ವಾರ್ಥ, ದುರಾಸೆ, ಕೋಪ, ಪ್ರಾಣಿ ಪಕ್ಷಿ, ಮರ, ಗಿಡಗಳಲ್ಲಿ ಕಾಣಲು ಅಸಾಧ್ಯ. ಅವುಗಳಲ್ಲಿ ಕಾಣುವ ಅನ್ಯೋನ್ಯತೆ ಮನುಷ್ಯನಲ್ಲಿ ಕಾಣಲು ಹೇಗೆ ಸಾಧ್ಯ. ಇಂದು ಒಬ್ಬ ವ್ಯಕ್ತಿ ಜೀವನದಲ್ಲಿ ಬೆಳೆಯುತ್ತಿದ್ದಾನೆ, ಅಭಿವೃದ್ದಿ ಕಾಣುತ್ತಿದ್ದಾನೆ ಎಂದರೆ ಹೇಗಾದರೂ ಮಾಡಿ ಆತನ ಕಾಲೇಳೆದು ಆತನ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಡಲು ತುದಿಗಾಲಲ್ಲಿ ನಿಲ್ಲುವ ಜನ ವರ್ಗವೇ ಹುಟ್ಟಿಕೊಳ್ಳುತ್ತದೆ. ತಾನು ಬೆಳೆಯದಿದ್ದರೂ ಚಿಂತೆಯಿಲ್ಲ, ಮತ್ತೊಬ್ಬ ಬೆಳೆಯಬಾರದೆಂಬ ಧೋರಣೆ ಹಲವರು ಮೈಗೂಡಿಸಿಕೊಂಡಿದ್ದಾರೆ. ನನ್ನದು ಒಂದು ಕಣ್ಣೋದರು ಚಿಂತೆಯಿಲ್ಲ, ಆತನದು ಎರಡು ಕಣ್ಣು ಹೋಗಬೇಕು ಎಂಬ ಆಲೋಚನೆ ತುಂಬಾ ಜನರಲ್ಲಿ ಆಳವಾಗಿ ಬೇರೂರಿದೆ. 

ಅದೆಷ್ಟರ ಮಟ್ಟಿಗೆ ಅಂದರೆ ಅಣ್ಣ ಬೆಳೆಯುತ್ತಿದ್ದಾನೆ ಎಂದರೆ ತಮ್ಮ ಸಹಿಸುವುದಿಲ್ಲ. ತಮ್ಮ ಅಭಿವೃದ್ದಿಯಾಗುತ್ತಿದ್ದಾನೆ ಎಂದರೆ ಅಣ್ಣನಿಗೆ ನಿದ್ದೆಯೇ ಬರುವುದಿಲ್ಲ. ಅಕ್ಕ ಒಳ್ಳೆಯ ಹಂತಕ್ಕೆ ಹೋಗುತ್ತಾರೆ ಎಂದರೆ ನನಗೇನು ಲಾಭ ಎಂದು ತಂಗಿ ಆಲೋಚಿಸುತ್ತಾಳೆ. ಇನ್ನು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು, ಅತ್ತೆ, ಮಾವ, ಅಣ್ಣ, ತಮ್ಮನ ಮಕ್ಕಳು, ಅಕ್ಕ, ತಂಗಿಯ ಮಕ್ಕಳು ಶಿಕ್ಷಣದಲ್ಲೋ, ಉದ್ಯೋಗದಲ್ಲೋ, ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ ಅಭಿವೃದ್ದಿಯಾಗುತ್ತಿದ್ದಾರೆ ಎಂದರೆ ಖುಷಿ ಪಡುವ ಬದಲಾಗಿ ಅಸೂಹೆ ಉಂಟಾಗಿ, ಅವರ ಏಳಿಗೆಗೆ ಅಡ್ಡ ಬರಲು ನೋಡುತ್ತೇವೆ. ಅದು ಸಾಧ್ಯವಾಗದಿದ್ದಾಗ ಅಪಪ್ರಚಾರ ಮಾಡಿ, ಅವರ ಗೌರವಕ್ಕೆ ಚ್ಯುತಿ ತರುತ್ತೇವೆ. ಆ ಮೂಲಕ ವಿಕೃತ ಆನಂದ ಪಡುತ್ತೇವೆ. ಅಷ್ಟರ ಮಟ್ಟಿಗೆ ರಕ್ತ ಸಂಬಂಧಗಳಲ್ಲೇ ದೊಡ್ಡ ದೊಡ್ಡ ಬಿರುಕು ಮೂಡಿರುತ್ತದೆ. ಕುಟುಂಬದವರು ಬೆಳೆದರೆ, ಅಭಿವೃದ್ದಿಯಾದರೆ ಜೀರ್ಣಿಸಿಕೊಳ್ಳುವ ಮನಸ್ಥಿತಿ ಇಲ್ಲದ ಜನ, ಇನ್ನೂ ಸ್ನೇಹಿತರು, ಸಂಬಂಧಿಕರು ಎತ್ತರಕ್ಕೆ ಏರುತ್ತಾರೆ ಎಂದರೆ ನೋಡಿಕೊಂಡು ಸುಮ್ಮನೆ ಕುರುತ್ತಾರೆಯೇ, ನೋ ಚಾನ್ಸ್.

ನಾವು ಯಾವುದಾದರೂ ಒಂದು ಮರದ ಕೆಳಗೆ ಹೋದರೆ, ಅದು ನಮ್ಮನ್ನು ಇದು ನೀನು ಬೆಳೆಸಿದ ಮರ ನಾನಲ್ಲ, ಇಲ್ಲಿಗೇಕೆ ನೀನು ಬಂದೇ ಎಂದು ಕೇಳುವುದಿಲ್ಲ. ನಿನ್ನ ಜಾತಿ, ಧರ್ಮ ಯಾವುದೆಂದು ಪ್ರಶ್ನಿಸುವುದಿಲ್ಲ. ನೀನು ಬಡವ, ಶ್ರೀಮಂತನೇ ಎಂದು ಅಪ್ಪಿತಪ್ಪಿಯು ಕೇಳುವುದಿಲ್ಲ. ಮರದ ಬಳಿ ಯಾರೇ ಬಂದರು ಅವರಿಗೆ ನೆರಳು ನೀಡಿ ಆಶ್ರಯ ನೀಡುತ್ತದೆ, ಆಮ್ಲಜನಕ ಪೂರೈಸಿ, ಆರೋಗ್ಯ ಕಾಪಾಡುತ್ತದೆ. ಹಣ್ಣು, ಹಂಪಲು ನೀಡಿ ಹೊಟ್ಟೆ ತುಂಬಿಸುತ್ತದೆ. ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ನೂರಾರು ವರ್ಷ ಜನರ ಜೀವಕ್ಕೆ ಉಸಿರು ನೀಡುತ್ತದೆ. ವಿಪರ್ಯಾಸವೆಂದರೆ ಒಂದು ಮರಕ್ಕೆ ಇರುವ ಆಲೋಚನೆ, ಮನಸ್ಥಿತಿ, ಉದಾರತೆ ಮನೋಭಾವ ಮನುಷ್ಯನಿಗೆ ಇಲ್ಲದಾಯಿತೇ ಎಂಬುವುದೇ ದುರ್ದೈವ. 

ಯಾರಾದರೂ ಒಬ್ಬ ವ್ಯಕ್ತಿ ಅಭಿವೃದ್ದಿಯಾಗುತ್ತಾರೆ ಎಂದರೆ ನಮ್ಮ ಕೈಯಲ್ಲಾದರೆ ಸಹಾಯ ಮಾಡಬೇಕೆ ಹೊರತು ತೊಂದರೆ ನೀಡುವ ಗುಣವಿರಬಾರದು. ಅವರವರ ಸಾಮರ್ಥ್ಯ, ಆಸಕ್ತಿ, ಶ್ರಮದ ಆಧಾರದ ಮೇಲೆ ಪ್ರತಿಯೊಬ್ಬರ ಅಭಿವೃದ್ದಿ ನಿರ್ಧಾರವಾಗುತ್ತದೆ. ನಾವು ಬೆಳವಣಿಗೆಯಾಗ ಬೇಕು ಎಂದು ಭಾವಿಸುವುದು ಖಂಡಿತಾ ತಪ್ಪಲ್ಲ, ಆದರೆ ಬೇರೆಯವರು ಬೆಳೆಯಲೇಬಾರದು, ನಾನೊಬ್ಬನೆ ಅಭಿವೃದ್ದಿಯಾಗಬೇಕು ಎಂಬ ದೂರಲೋಚನೆಯು ಮಾತ್ರ ಮಹಾಪರಾಧ. 

ನಮ್ಮ ಮನಸ್ಸು ಹೇಗೆಂದರೆ ಬೇರೆಯವರ ವಿಚಾರಗಳು, ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅವರಿವರ ವೈಯಕ್ತಿಕ ವಿಷಯಗಳನ್ನು ತೆಗೆದುಕೊಂಡು, ಅವುಗಳ ಬಗ್ಗೆ ಚರ್ಚಿಸುತ್ತ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇವೆ. ಇದರಿಂದ ಬರುವ ಲಾಭವಾದರೂ ಏನು ಎಂದು ಎಂದಿಗೂ ಲೆಕ್ಕಚಾರ ಮಾಡುವುದಿಲ್ಲ.  

ನಾವು ನೆಮ್ಮದಿ ಜೀವನ ಸಾಗಿಸಬೇಕಾದರೆ ಮೊದಲು ಮಾಡಬೇಕಾದ ಕೆಲಸ ಅಹಂಕಾರ, ಅಸೂಹೆ, ಹೊಟ್ಟೆಕಿಚ್ಚು, ದುರಾಸೆ ಗುಣಗಳನ್ನು ಆದಷ್ಟು ದೂರ ತಳ್ಳಬೇಕು, ಹತ್ತಿರ ಸೇರಿಸಲೇಬಾರದು. ಎಲ್ಲರೂ ನಮ್ಮವರು ಎಂದು ಭಾವಿಸಿ ನೋಡಿ, ಅದರಲ್ಲಿ ಸಿಗುವ ಆತ್ಮತೃಪ್ತಿ ಅಪರಿಮಿತ. ಎಲ್ಲರೊಂದಿಗೂ ಸಣ್ಣ ಸಣ್ಣ ವಿಷಯಗಳಿಗೂ ದ್ವೇಷ ಸಾಧಿಸಿ, ಹಠ ಮಾರಿ ಧೋರಣೆಯಿಂದ ಬರುವ ಲಾಭವಾದರೂ ಏನು ? ಬೇರೊಬ್ಬರ ಗೆಲುವಿನಲ್ಲಿ ನಮ್ಮ ಸಂತೋಷ ಕಾಣಬೇಕು. ಅದು ಬಿಟ್ಟು ಗೆದ್ದನಲ್ಲ ಎಂದು ಕೊರಗಿದರೆ ನಮ್ಮ ಮಾನಸಿಕ ನೆಮ್ಮದಿಗೆ ನಾವೇ ಭಂಗ ಉಂಟು ಮಾಡಿಕೊಂಡಂಗೆ. 

ಅದು ಕುಟುಂಬದವರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ, ಸಹದ್ಯೋಗಿಗಳಾಗಲಿ ಅಥವಾ ಯಾರೇ ಆಗಲಿ ಅವರೊಂದಿಗೆ ಅನ್ಯೋನ್ಯತೆಯನ್ನು ಸಾಧಿಸಿ, ಪ್ರೀತಿ, ವಾತ್ಸಾಲ್ಯ ಹಂಚುವುದರಿಂದ ನಾವು ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಬದುಕುವ ಮೂರು ದಿನಕ್ಕೆ ಎಲ್ಲರೊಂದಿಗೆ ಆತ್ಮೀಯತೆ ಸಾಧಿಸಬೇಕೆ ಹೊರತು ಅಹಂಕಾರದಿಂದ ದ್ವೇಷ ಸಾಧಿಸುತ್ತ ಎಲ್ಲರನ್ನೂ ದೂರ ಮಾಡಿಕೊಳ್ಳುವ ವಿಧಾನವು ಮನುಷ್ಯನಿಗೆ ಒಪ್ಪುವ ಲಕ್ಷಣವಲ್ಲ. 

ಇತ್ತಿಚೀಗೆ ನಿಧನರಾದ ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ದೊಡ್ಡ ಸ್ಟಾರ್ ಆದರೂ ಎಂದು ಅಹಂಕಾರ, ಗರ್ವದಿಂದ ವರ್ತಿಸಿದವರಲ್ಲ. ಸದಾ ಮುಗುಳ್ನೆಗೆಯೊಂದಿಗೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತ ಜೀವಿಸಿದವರು. ಎಲ್ಲದಕ್ಕೂ ಹೆಚ್ಚಾಗಿ ತಮ್ಮ ಸೇವಾ ಕಾರ್ಯಗಳ ಮೂಲಕ ಆತ್ಮ ತೃಪ್ತಿಯನ್ನು ಪಡೆದುಕೊಂಡರು. ಅದೆಷ್ಟೋ ಅಶಕ್ತರ ಪಾಲಿಗೆ ಧ್ವನಿಯಾಗಿದ್ದರು. ಇಂದು ಅವರು ನಮ್ಮ ಮಧ್ಯದಲ್ಲಿ ಇಲ್ಲದಿದ್ದರು, ಎಲ್ಲರ ಮನಸ್ಸುಗಳಲ್ಲಿ ಸದಾ ಉಳಿದಿದ್ದಾರೆ, ಉಳಿಯುತ್ತಾರೆ ಕೂಡ.

ಎಲ್ಲರೂ ನಮ್ಮವರು, ನನ್ನ ಜೊತೆಗೆ ಬೇರೆಯವರೂ ಅಭಿವೃದ್ದಿಯಾಗಲಿ ಎಂದು ಭಾವಿಸುವ ಗುಣವಿದೇಯಲ್ಲ ಅದು ಎಲ್ಲರಿಗೂ ಬರುವುದಿಲ್ಲ. ಆ ಗುಣ ಇರುವವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಸತ್ತ ನಂತರ ಜನರ ಮನಸ್ಸಗಳಲ್ಲಿ ಸದಾ ಉಳಿಯುತ್ತಾರೆ. ಅದೆಕ್ಕೆ ಹೇಳುವುದು ಕೆಲವರು ಬದುಕಿದ್ದು ಸತ್ತಂಗೆ, ಮತ್ತೆ ಕೆಲವರು ಸತ್ತರು ಬದುಕ್ಕಿದಂಗೆ. ಸೋ ನಾವು ಬದುಕಿ ಸಾಯಬೇಕೋ, ಸತ್ತ ನಂತರವು ಬದುಕಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲೇ ಇದೆ. ನಮ್ಮ ಆಲೋಚನೆ, ವರ್ತನೆ, ಗುಣಗಳೇ ಅದನ್ನು ತೀರ್ಮಾನಿಸುತ್ತದೆ. ಅನ್ಯೋನ್ಯತೆಯಲ್ಲಿ ಕಾಣುವ ಆನಂದ, ಸಾವಿರ ಕೋಟಿ ಕೊಟ್ಟರು ಸಿಗಲ್ಲ ಏನಂತಿರಾ..

21 ಕಾಮೆಂಟ್‌ಗಳು:

Unknown ಹೇಳಿದರು...

ಸೂಪರ್ sir ನಾನು ಕೂಡಾ ಇಂತಹ ಸಮಸ್ಯೆಗಳನ್ನು ಅನುಭವಿಸಿದ್ದೀನಿ 👍

Mallikarjun GT ಹೇಳಿದರು...

ತುಂಬಾ ಚೆನ್ನಾಗಿದೆ ಸರ್...

Unknown ಹೇಳಿದರು...

It's very meaningfull and it's good to follow this.👌👌

Unknown ಹೇಳಿದರು...

ತುಂಬಾ ಇಷ್ಟ ಆಯಿತು ಸಾರ್

Unknown ಹೇಳಿದರು...

It's very nice 😊

Narayanaswamy R ಹೇಳಿದರು...

It's real fact even I experienced really true words sir...

Unknown ಹೇಳಿದರು...

It's very nice sir

Unknown ಹೇಳಿದರು...

ಬಹಳ ಚೆನ್ನಾಗಿದೆ ಧನ್ಯವಾದಗಳು ಸರ್

ಅನಾಮಧೇಯ ಹೇಳಿದರು...

Excellent truly impressive

Unknown ಹೇಳಿದರು...

Super sir

Unknown ಹೇಳಿದರು...

Very broad thinking sir, good article

Doddamane chandra chittaganahalli. ಹೇಳಿದರು...

Nice Giri

Unknown ಹೇಳಿದರು...

👌👌👌👌.... Sir

Unknown ಹೇಳಿದರು...

Super sir 👌👌👌👌👌

Unknown ಹೇಳಿದರು...

Very very nice 👍 sir

Unknown ಹೇಳಿದರು...

Super nice

Unknown ಹೇಳಿದರು...

Super Sir

Unknown ಹೇಳಿದರು...

ತುಂಬಾ ಚೆನ್ನಾಗಿದೆ ಸರ್ ಅರ್ಥಪೂರ್ಣವಾಗಿ ಒಳ್ಳೆ ಸಂದೇಶನ ಕೊಟ್ಟಿದಿರಾ ಮತ್ತೆ ನನಗೆ ತುಂಬ ಇಷ್ಟ ಆಯ್ತು ಹೀಗೆ ಇನ್ನೂ ಹೆಚ್ಚೆಚ್ಚು ನಂಗೆ 1ಒಳ್ಳೊಳ್ಳೆ ಸಂದೇಶ ಸಿಕ್ಕಿದೆ

Suresh Reddy hn ಹೇಳಿದರು...

Good writing

ಅನಾಮಧೇಯ ಹೇಳಿದರು...

ಸ್ವಾರ್ಥ, ಮನುಷನ ಸಾವಿಗೆ ಗೊತ್ತೇ ಇಲ್ಲದ ವಿಷ. ಎಂಬುದನ್ನ e ಲೇಖನ ತಿಳಿಸುತ್ತದೆ.

ಅನಾಮಧೇಯ ಹೇಳಿದರು...

Wow super giri sir , incredible words, it's really good information for youth, about how current anthropogeny moving, how best youth should sustain our nation , nature, and ecosystem, I like your reality words sir. God bless you to describe nature and naturalistic thoughts sir.