ಶುಕ್ರವಾರ, ಅಕ್ಟೋಬರ್ 15, 2021

“ಸೇವೆಯಿಂದಲೇ, ನಮ್ಮ ಜೀವನ ಪಾವನ”..

 👉 ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇಂಗ್ಲೀಷ್ ನಲ್ಲಿ ಒಳ್ಳೆಯ ಮಾತೊಂದಿದೆ, We Can’t help everyone, but everyone can help some one. ಅಂದರೆ ನಾವು ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲರೂ ಒಂದಾದರೆ ಕೆಲವರಿಗಾದರೂ ಸಹಾಯ ಮಾಡಲು ಸಾಧ್ಯವಿದೆ ಎಂಬ ಅರ್ಥವನ್ನು ನೀಡುತ್ತದೆ. ಸಹಾಯ ಎಂಬುವುದು ಮಾನವರಲ್ಲಿ ಇರಬೇಕಾದ ಮೊದಲ ಬಹುಮುಖ್ಯ ಗುಣ. ಹಾಗೆ ನೋಡಿದರೆ ನಮಗೆ ಅಷ್ಟೋ ಇಷ್ಟೋ ಸಮಾಜದಲ್ಲಿ ಗೌರವ, ಜೀವನದಲ್ಲಿ ಪುಣ್ಯ, ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರೆ ಇತರರಿಗೆ ಸಹಾಯ ಮಾಡುವುದರಿಂದ ಮಾತ್ರ ಎಂಬುವುದರಲ್ಲಿ ಎರಡನೇ ಮಾತಿಲ್ಲ. 

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಕಾಲೇಜಿನ ಕೆಲ ಸ್ನೇಹಿತರು ಒಟ್ಟಿಗೆ ಸೇರಿ ಆಗಾಗ ಕಾಲೇಜಿನ ಕ್ಯಾಂಟೀನ್ ನಲ್ಲಿ ಕುಳಿತುಕೊಳ್ಳುವುದು ವಾಡಿಕೆಯಾಗಿತ್ತು. ಆಗ ಚರ್ಚೆಯಾಗುತ್ತಿದ್ದ ವಿಷಯ ನಾವು ಏನಾದರೊಂದು ಸಣ್ಣ ಸಹಾಯವನ್ನಾದರೂ ಸಮಾಜಕ್ಕೆ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೇವು. ಆದರೆ ನಮ್ಮ ಯಾರ ಬಳಿಯು ಹಣವಿರಲಿಲ್ಲ, ಎಲ್ಲರೂ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರೆ ಆಗಿದ್ದರಿಂದ ಆರ್ಥಿಕವಾಗಿ ಎಲ್ಲರೂ ಅಶಕ್ತರಾಗಿದ್ದರು.

ಯಾರಿಗಾದರೂ ಸಹಾಯ ಮಾಡಬೇಕಾದರೆ ಹಣವೇ ಮುಖ್ಯ, ನಮ್ಮ ಯಾರ ಬಳಿಯು ಹಣವಿಲ್ಲ, ಆದ್ದರಿಂದ ನಮ್ಮಂತವರು ಏನು ಮಾಡಲು ಸಾಧ್ಯ ಎಂದು ನಾವೇ ಭಾವಿಸಿಕೊಂಡು ಸುಮ್ಮನಾಗುತ್ತಿದ್ದೆವು.

ಒಮ್ಮೆ ದಿನಪತ್ರಿಕೆಯೊಂದರಲ್ಲಿ ಕಣ್ಣು ಕಾಣದವರ (ಕುರುಡರು) ಪರೀಕ್ಷೆಯನ್ನು ಬರೆಯಲು ಸ್ಕ್ರೈಬ್ಗಳು ಸಿಗುತ್ತಿಲ್ಲ. ಇದರಿಂದ ಅಂದರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ಇದನ್ನು ಗಮನಿಸಿದ ನನ್ನ ಸ್ನೇಹಿತನೊಬ್ಬ ಕಣ್ಣು ಕಾಣದವರಿಗೆ ಸ್ಕ್ರೈಬ್ ಆಗಿ ಅನೇಕ ಪರೀಕ್ಷೆಗಳನ್ನು ಬರೆದುಕೊಟ್ಟ. ಯಾರೇ ಅಂದರು ಕರೆ ಮಾಡಿದರು ಹಿಂದೆ ಮುಂದೆ ನೋಡದೆ ಅವರ ಪರೀಕ್ಷೆಗಳನ್ನು ಬರೆದುಕೊಡುವ ಮೂಲಕ ಅವರ ಜೀವನಕ್ಕೆ ಆಸರೆಯಾದ. ಹಣವಿಲ್ಲದಿದ್ದರು ಸಹಾಯ ಮಾಡಬಹುದೆಂಬುವುದಕ್ಕೆ ನಿದರ್ಶನವಾದ. ಬಡ ಕುಟುಂಬದಿಂದ ಬಂದರೂ ಹಲವು ಅಂದರಿಗೆ ದಾರಿ ದೀಪವಾದ.

ಒಮ್ಮೆ ಬೆಂಗಳೂರಿನ ಹೆಸರಾಂತ ಮಠವೊಂದಕ್ಕೆ ಹೋಗಿದ್ದೆ. ಅಲ್ಲಿನ ಹಿರಿಯ ಸ್ವಾಮೀಜಿಯೊಬ್ಬರ ಪ್ರವಚನ ಕಾರ್ಯಕ್ರಮವಿತ್ತು. ಅವರ ಉಪನ್ಯಾಸದ ವಿಷಯವೆಂದರೆ ದಾನಗಳು ಮತ್ತು ಸೇವಾ ಕಾರ್ಯಗಳ ಕುರಿತಾಗಿತ್ತು. ಸ್ವಾಮೀಜಿ ಮಾತನಾಡುತ್ತ ಪ್ರಾಚೀನ ಕಾಲದಿಂದಲೂ ದಾನಗಳಿಗೆ ತುಂಬಾ ಮಹತ್ವ ಇದೆ. ಅದರಲ್ಲೂ ಸನಾತನ ಧರ್ಮದಲ್ಲಿ ದಾನವು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ದಾನಗಳಲ್ಲಿ ಪ್ರಮುಖವಾಗಿ ಶಿಕ್ಷಣ (ವಿದ್ಯೆ), ಭೂಮಿ, ಹಸು, ಕನ್ಯಾ, ಅನ್ನ (ಆಹಾರ) ಮುಂತಾದವುಗಳನ್ನು ಕಾಣಬಹುದು. ಈ ದಾನಗಳನ್ನು ಹಾಗೂ ಇತರೆ ಸೇವಾ ಕಾರ್ಯಗಳು ಮಾಡುವುದು ಅತ್ಯಂತ ಶ್ರೇಷ್ಠಕರ ಹಾಗೂ ಪುಣ್ಯ ಸಂಪಾದಿಸಲು ಮತ್ತು ಮಾನಸಿಕ ಸಂತೋಷಕ್ಕೆ ಮೂಲ ಕಾರಣವಾಗುತ್ತದೆ. ನಾವು ಜೀವನದಲ್ಲಿ ಮೋಕ್ಷವನ್ನು ಪಡೆಯಬೇಕಾದರೆ ದಾನ ಹಾಗೂ ಸೇವಾ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಮತ್ತೊಂದು ದಾರಿ ಇಲ್ಲ ಎಂದು ಭಕ್ತಾಧಿಗಳಿಗೆ ಹಿತವಚನ ನುಡಿದರು. 

ನಾವು ಸತ್ತ ನಂತರವೂ ಪುನಃಹ ಬದುಕುತ್ತೇವೆ ಯಾವಾಗ ಎಂದರೆ ಒಂದಷ್ಟು ಸೇವಾ ಕೆಲಸಗಳನ್ನು ಮಾಡಿದಾಗ ಮಾತ್ರ. ಹಾಗಂತ ಹಣ, ಐಶ್ವರ್ಯವಿದ್ದವರು ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬಹುದು, ಉಳಿದವರು ಏನು ಮಾಡಲು ತಾನೇ ಸಾಧ್ಯ ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿದ್ದರೆ ಈ ಕ್ಷಣವೇ ಅದನ್ನು ತೆಗೆದು ಹಾಕಿ. ಏಕೆಂದರೆ ಅದು ಶುದ್ದ ಸುಳ್ಳು, ಹಣವಿದ್ದವರಲ್ಲಿ ಕೆಲವೇ ಜನ ಮಾತ್ರ ಸಹಾಯ ಮಾಡುವ ಮನಸ್ಸು ಇರುತ್ತದೆ. ಹಣ ಇಲ್ಲದ ಹಲವರು ಬೇರೆ ಬೇರೆ ರೂಪಗಳಲ್ಲಿ ಹತ್ತಾರು ಜನರಿಗೆ ಸಹಾಯಹಸ್ತ ಚಾಚುತ್ತಲೇ ಇರುತ್ತಾರೆ ಎಂದರು.

ಸ್ವಾಮೀಜಿ ತಮ್ಮ ಮಾತನ್ನು ಮುಂದುವರೆಸುತ್ತಾ ನನ್ನ ಬಳಿ ಹಣ ಇಲ್ಲ, ನಾನು ಇಲ್ಲಿಯವರೆಗೂ ಯಾರಿಗೂ ಹಣ ಸಹಾಯ ಮಾಡಿಲ್ಲ, ನಾನು ಸನ್ಯಾಸ ಧೀಕ್ಷೆಯನ್ನು ಪಡೆದು ಸ್ವಾಮೀಜಿಯಾಗಿ ರೂಪಾಂತರಗೊಂಡು ಹಲವು ವರ್ಷಗಳಾಗಿದೆ. ನಾನು ಮಾಡುವ ಮುಖ್ಯ ಸಾಮಾಜಿಕ ಸೇವೆಯೆಂದರೆ ಮಠಕ್ಕೆ ಬರುವ ಭಕ್ತಾಧಿಗಳಿಗೆ ಜೀವನದ ಬಗ್ಗೆ ಪ್ರೀತಿ ಮೂಡಿಸಿ, ಸರಿದಾರಿಯಲ್ಲಿ ಸಾಗುವಂತೆ ಹಿತೋಪದೇಶ ಮಾಡುವುದು. ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿ ಹೇಳುತ್ತೇನೆ ಅಷ್ಟೇ. ನನ್ನ ಬಳಿ ಅಧಿಕಾರ, ಹಣ, ಐಶ್ವರ್ಯ ಇಲ್ಲದಿದ್ದರು ಜನ ಗೌರವಿಸುತ್ತಾರೆ, ನನಗೆ ನಮಸ್ಕರಿಸುತ್ತಾರೆ, ಪೂಜ್ಯ ಭಾವನೆಯಿಂದ ಕಾಣುತ್ತಾರೆ ಎಂದರೆ ಅದು ನಾನು ಮಾಡುವ ಸಣ್ಣ ಹಿತೋಪದೇಶ ಕಾರಣದಿಂದಾಗಿಯೇ ತಾನೇ, ಇದಕ್ಕೆ ನಾನು ಯಾವುದೇ ಹಣ ಖರ್ಚು ಮಾಡುವುದಿಲ್ಲ. ನನಗೆ ಗೊತ್ತಿರುವುದನ್ನು ಇತರರಿಗೆ ಹೇಳುತ್ತೇನೆ ಅಷ್ಟೇ ಎಂದು ಸಭಿಕರಿಗೆ ಕಿವಿಮಾತು ಹೇಳಿದರು.

ನಾವು ಅನೇಕ ಸಲ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕೆಂದು ಅಂದುಕೊಂಡರು ಆರ್ಥಿಕವಾಗಿ ಸದೃಢರಾಗಿಲ್ಲ, ಅಧಿಕಾರ ಇಲ್ಲ ಎಂದು ತಟಸ್ಥವಾಗಿ ಇದ್ದು ಬಿಡುತ್ತೇವೆ. ಗಮನಾರ್ಹ ಅಂಶವೆಂದರೆ ಮಾಡುವ ಮನಸ್ಸು, ಧ್ಯೇಯವಿದ್ದರೆ ಹಣವಿಲ್ಲದಿದ್ದರು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಅವಕಾಶ ಖಂಡಿತಾ ಇದ್ದೇ ಇರುತ್ತದೆ.

ಅದೆಷ್ಟೋ ಬಾರಿ ದುರಾಭ್ಯಾಸಗಳ ಕಾರಣಕ್ಕಾಗಿ ದುಂದುವೆಚ್ಚ ಮಾಡುತ್ತೇವೆ. ಕೆಲವರಂತೂ  ದುರಾಭ್ಯಾಸಗಳು (ಧೂಮಪಾನ, ಮದ್ಯಪಾನ, ಗುಟ್ಕಾ ಪದಾರ್ಥಗಳ ಸೇವನೆ ಸೇರಿದಂತೆ ಮತ್ತಿತರ)  ಅಭ್ಯಾಸದಿಂದ ಹಣವನ್ನು ವ್ಯರ್ಥ ಮಾಡುತ್ತಾರೆ. ಆದರೆ ಆ ಬಗ್ಗೆ ಎಂದೂ ಆಲೋಚಿಸುವುದಿಲ್ಲ. ನಾವು ಸಂಪಾದಿಸುವ ಹಣದಲ್ಲಿ ದುರಾಭ್ಯಾಸಗಳಿಗೆ ಖರ್ಚು ಮಾಡದೆ ಸ್ವಲ್ಪ ಪ್ರಮಾಣದಲ್ಲಿ ಹಣ ಉಳಿಸಿದರು, ಹಲವರ ಬದುಕಿಗೆ ಬೆಳಕಿನ ಜ್ಯೋತಿಯಾಗಬಹುದು ಎಂಬುವುದನ್ನು ಮರೆತು ಬಿಡುತ್ತೇವೆ.

ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭವಾಗಲಿ ನಂತರ ಆಗಲಿ ಅನೇಕ ಪುಸ್ತಕಗಳನ್ನು ಖರೀದಿಸುತ್ತೇವೆ. ಒಂದಷ್ಟು ವರ್ಷಗಳ ಕಳೆದ ನಂತರ ಅವುಗಳನ್ನು ಹಳೆ ಪೇಪರ್ ಗಳನ್ನು ಖರೀದಿಸುವವರಿಗೆ ಮಾರುತ್ತೇವೆ. ಇಲ್ಲಂದ್ರೆ ಎಲ್ಲಾದರೂ ಎಸೆದು ಬಿಡುತ್ತೇವೆ. ಅದರ ಬದಲು ಅದರ ಅಗತ್ಯ ಇರುವವರಿಗೆ ಕೊಟ್ಟರೆ ಅವರಿಗೆ ಆಗುವ ಅನುಕೂಲ ಅಷ್ಟಿಷ್ಟಲ್ಲ. ಇದರಿಂದ ನಮಗೆ ಆಗುವ ಹೊರೆಯಂತು ಏನು ಇಲ್ಲ.

ನಮಗೆ ಯಾವುದೇ ಒಂದು ವಿಷಯ ಅದು ಕನ್ನಡ, ಇಂಗ್ಲೀಷ್, ಇತಿಹಾಸ, ಹಿಂದಿ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅಷ್ಟೋ ಇಷ್ಟೋ ವಿಷಯಗಳಿಸಿ ಕೊಂಡಿರುತ್ತೇವೆ. ನಾವು ಪಡೆದ ಆ ಜ್ಞಾನವನ್ನು ನಮ್ಮಲ್ಲಿಯೇ ಉಳಿಸಿಕೊಂಡು ಮರೆಯುವುದಕ್ಕಿಂತ, ಆ ವಿಷಯದ ಜ್ಞಾನವನ್ನು ಅಗತ್ಯ ಇರುವವರಿಗೆ ನೀಡಿದರೆ ನಮ್ಮಿಂದ ನಾಲ್ಕು ಜನ ವಿಷಯದ ಜ್ಞಾನ ಪಡೆದುಕೊಂಡು ಜೀವನದಲ್ಲಿ ಅಭಿವೃದ್ದಿಯಾಗುತ್ತಾರೆ. ಜ್ಞಾನವನ್ನು ನೀಡುವುದಕ್ಕಿಂತ ಮತ್ತೊಂದು ಸೇವೆ ಏನಿದೆ. 

ಅದು ಬಿಡಿ ಪ್ರತಿ ವರ್ಷ ಜೂನ್.5 ರಂದು ಪರಿಸರ ದಿನಚಾರಣೆಯನ್ನು ಆಚರಿಸುತ್ತೇವೆ. ಅಂದು ಕಾಟಾಚಾರಕ್ಕೆಂಬಂತೆ ಆಚರಿಸುವುದೇ ಹೆಚ್ಚು. ನೆಡುವುದು ಒಂದು ಗಿಡವಾದರೂ ಪಬ್ಲಿಸಿಟಿ ಮಾತ್ರ ವಿಪರಿತವಾಗಿರುತ್ತದೆ. ನಮ್ಮ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಪ್ರತಿಯೊಬ್ಬರು ವಾರಕ್ಕೊಮ್ಮೆ ಗಿಡ ನೆಡುವುದು ದೊಡ್ಡ ವಿಚಾರವೇನಲ್ಲ. 10 ರೂ ಕೊಟ್ಟರು ವಿವಿಧ ತಳಿಗಳ ಸಸಿಗಳು, ಗಿಡಗಳು ಸಿಗುತ್ತವೆ. ಇಲ್ಲವೇ ಅರಣ್ಯ ಇಲಾಖೆಯ ನರ್ಸರಿಗಳಿಂದ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಗಿಡಗಳು ಸಿಗುತ್ತವೆ. ಅವುಗಳನ್ನು ದೇವಸ್ಥಾನ, ಶಾಲಾ, ಕಾಲೇಜು, ರಸ್ತೆಯ ಅಕ್ಕಪಕ್ಕಗಳಲ್ಲಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಬೆಳೆಸಿದರೆ ಮುಂದೊಂದು ದಿನ ಅವು ಮರವಾಗಿ, ಸಾವಿರಾರು ಜನರಿಗೆ ನೆರಳು ನೀಡುತ್ತದೆ. ಹಲವು ಪಕ್ಷಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಗಿಡದಲ್ಲಿ ಹಣ್ಣು, ಹಂಪಲು ಬಿಟ್ಟರೆ ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕರವರು ತಮ್ಮ ಬಳಿ ಹಣವಿಲ್ಲದಿದ್ದರು ನೂರಾರು ಗಿಡಗಳನ್ನು ರಾಮನಗರದ ಮಾಗಡಿ ತಾಲ್ಲೂಕಿನ ತಮ್ಮ ಗ್ರಾಮ ಹುಲಿಕಲ್ ನಲ್ಲಿ ನೆಟ್ಟು, ಅವುಗಳನ್ನು ಹೆಮ್ಮರವಾಗಿ ಬೆಳೆಸಿದ ಪರಿಣಾಮ ತಿಮ್ಮಕ್ಕರ ಪರಿಸರ ಸೇವೆ ಎಲ್ಲರಿಗೂ ಇಂದು ಪರಿಚಿತ. ಪರಿಸರದ ಸೇವೆಗಿಂತ ಮಿಗಿಲಾದ ಸೇವೆ ಮತ್ಯಾವುದು ಇದೆ ಹೇಳಿ ನೋಡೋಣ. 

ಇಂದು ಪ್ರತಿಯೊಂದು ನಗರ, ಪಟ್ಟಣಗಳಲ್ಲೂ ವೃದ್ದಾಶ್ರಮ, ಅನಾಥಶ್ರಮಗಳು ಎದ್ದು ಕಾಣುತ್ತವೆ. ಅಲ್ಲಿ ವಾಸಿಸುವ ಹಲವರು ತಮ್ಮ ಬಂಧು ಬಳಗದವರ ಆತ್ಮೀಯತೆ, ಹಾರೈಕೆ ಇಲ್ಲದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. ಸಂಬಂಧಗಳ ಅನುಬಂಧವಿಲ್ಲದೆ, ಒಬ್ಬಂಟಿಯಾಗಿ ಜೀವನ ಸಾಗಿಸಿರುತ್ತಾರೆ. ಕನಿಷ್ಟ ಇಂತವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವುದರಿಂದ ಕಳೆದುಕೊಳ್ಳುವುದಾದರೂ ಏನು ಇಲ್ಲ. ಆರು ತಿಂಗಳಿಗೋ, ವರ್ಷಕ್ಕೊಮ್ಮೆಯೋ ಅನಾಥಶ್ರಮ, ವೃದ್ದಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಅನ್ನದಾನ ಹಾಗೂ ಅಗತ್ಯ ಇರುವ ಸಣ್ಣಪುಟ್ಟ ಸಹಾಯ ಮಾಡಿದರೆ ನಮ್ಮ ಆಸ್ತಿಯಂತು ಕರಗುವುದಿಲ್ಲ.

ಅದೆಷ್ಟೋ ಸರ್ಕಾರಿ, ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪುಸ್ತಕಗಳನ್ನು ತೆಗೆದುಕೊಳ್ಳಲು ಕೂಡ ಹಣವಿಲ್ಲದೆ ಪರದಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಅಂತಹ ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬರಿಗಾದರೂ ಪುಸ್ತಕಗಳನ್ನು ಖರೀದಿಸಿ ಕೊಟ್ಟರೆ ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ತರಬಹದು. ಇದಕ್ಕೇನು ಹೆಚ್ಚಿನ ಹಣದ ಅವಶ್ಯಕತೆ ಇಲ್ಲ. 

ಇಂದು ಪ್ರತಿಯೊಬ್ಬರು ಹೆಚ್ಚು ಬೆಲೆ ಬಾಳುವ ಮೊಬೈಲ್ ಪೋನ್ ಗಳನ್ನು ಬಳಸುತ್ತೇವೆ. ಈ ಪೋನ್ ಗಳ ಮೂಲಕವೇ ಸುಲಭವಾಗಿ ಸೇವೆ ಮಾಡಬಹುದು. ಸರ್ಕಾರದ ಸಾಲ, ಸಬ್ಸಿಡಿ ಯೋಜನೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಆಹ್ವಾನಿಸುವ ಖಾಲಿ ಹುದ್ದೆಗಳ ನೋಟಿಫಿಕೇಶನ್ ಸುದ್ದಿ ಹಾಗೂ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅರಿವು ಮೂಡಿಸುವ ವಿಚಾರಗಳು ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯವಾದ ಮಾಹಿತಿಯನ್ನು ಸೋಷಿಯಲ್ ಮೀಡಿಯಾ (ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಮತ್ತಿತರ) ಮೂಲಕ ಪ್ರಚಾರ ಮಾಡಿದರೆ ನಮ್ಮ ಹಲವು ಸ್ನೇಹಿತರಿಗೆ ವಿಷಯ ಗೊತ್ತಾಗಿ, ಅದರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. 

ವಾಸ್ತವ ಏನೆಂದರೆ ಎಷ್ಟೋ ಜನ ಮಾಹಿತಿಯ ಕೊರತೆಯಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೇ ಜೀವನದಲ್ಲಿ ಇನ್ನು ಹಿಂದುಳಿಯುವಂತಾಗಿದೆ. ಅಂತವರಿಗೆ ವಿಷಯ ಮುಟ್ಟಿಸುವ ಅವಕಾಶ ನಮ್ಮ ಕೈಯಲ್ಲಿರುವ ಮೊಬೈಲ್ ಪೋನ್ ಮೂಲಕ ಮಾಡಬಹುದು ಎಂಬುವುದೇ ವಿಶೇಷ. ಆದರೂ ಆ ಮೊಬೈಲ್ ಪೋನ್ ನ್ನು ಜನ ಗುಡ್ ಮಾರ್ನಿಂಗ್, ಗುಡ್ ನೈಟ್ ಸೇರಿದಂತೆ ಕೆಲಸಕ್ಕೆ ಬಾರದ ವಿಚಾರಗಳಿಗೆ ಬಳಸುತ್ತಿರುವುದು ಜಗತ್ತಿಗೆ ಗೊತ್ತು.

ಇಂದು ಸಮಾಜ ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಮಾಲ್ಯಗಳ ಕೊರತೆ. ಮಾನವೀಯ ಮೌಲ್ಯಗಳ ಕಣ್ಮರೆಯಿಂದ ಸಮಾಜದಲ್ಲಿ ಯುವ ಸಮೂಹ ಹಾದಿ ತಪ್ಪಿ ನಡೆಯುವಂತಾಗಿದೆ. ಹಲವರು ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಶಿಕ್ಷಣ, ಜೀವನ ಎರಡನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ನಮ್ಮ ಮನೆ ಹಾಗೂ ಪರಿಚಿತ ಸ್ನೇಹಿತರು, ಸಹದ್ಯೋಗಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವವಲ್ಲಿ ನಾವು ಪ್ರಧಾನ ಪಾತ್ರ ವಹಿಸಿದರೆ ನವ ಸಮಾಜ ನಿರ್ಮಾಣದಲ್ಲಿ ನಮ್ಮದು ಒಂದು ಪಾತ್ರವಿರುತ್ತದೆ. ನಮ್ಮ ಒಳ್ಳೆಯ ಮಾತಿನಿಂದ ಹಲವರ ಬದುಕು ಹಸನಾಗಬಹುದು.

ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಒಟ್ಟಿಗೆ ಸೇರಿಕೊಂಡು ಫೌಂಡೇಶನ್ ಅಥವಾ ಚಾರಿಟಬಲ್ ಟ್ರಸ್ಟ್ ಗಳನ್ನು ಸ್ಥಾಪಿಸಿ ಆ ಮೂಲಕ ನಿಯಮಿತವಾಗಿ ಒಂದಷ್ಟು ಸೇವಾ ಕಾರ್ಯಗಳನ್ನು ಮಾಡುವ ಅವಕಾಶವಂತು ಇದ್ದೇ ಇದೆ. 

ಪಾರ್ಟಿ, ಬಾರ್, ರೆಸ್ಟೋರೆಂಟ್, ರೆಸಾರ್ಟ್, ಜಾಲಿ ಟ್ರಿಪ್, ಮೋಜು ಮಸ್ತಿ ಎಂದು ಹಲವರು ಹಣವನ್ನು ನೀರಿನಂತೆ ಪೋಲು ಮಾಡುತ್ತಾರೆ. ಹಾಗಂತ ಜೀವನದಲ್ಲಿ ಮನರಂಜನೆ ಬೇಡ ಎಂದರ್ಥವಲ್ಲ. ಎಲ್ಲವೂ ಹಿತಿಮಿತಿಯಲ್ಲಿ ಇರಬೇಕಷ್ಟೇ. ಸಮಾಜದಲ್ಲಿ ಬದುಕುವ ನಾವು, ಈ ಸಮಾಜದಿಂದ ಅದೆಷ್ಟೋ ಅಪರಿಮಿತ ಸೌಲಭ್ಯಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆದುಕೊಂಡಿರುತ್ತೇವೆ. ಆದ್ದರಿಂದ ಸಮಾಜದಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಅಶಕ್ತರು, ಅಬಲರ ಕಷ್ಟಗಳಿಗೆ ಧ್ವನಿಯಾಗುವ ಮೂಲಕ ಒಂದಷ್ಟು ಪುಣ್ಯ, ಮಾನಸಿಕ ನೆಮ್ಮದಿ ಸಂಪಾದಿಸುವ ಕಡೆ ನಮ್ಮ ನಡೆ ಇದ್ದರೆ, ಅದಕ್ಕಿಂತ ಸೇವೆ ಮತ್ತೇನಿದೆ.

ನಿಜ ಎಂದರೆ ಸೇವಾ ಕಾರ್ಯಗಳಿಗೆ ಲಕ್ಷ ಲಕ್ಷ ಹಣ ಬೇಕು ಎಂಬುವುದು ಒಪ್ಪುವ ವಿಚಾರವಲ್ಲ. ಹಣ ಇಲ್ಲದೆಯೇ ಹಲವು ರೀತಿಯ ಸೇವೆಗಳನ್ನು ಮಾಡುವ ಅವಕಾಶ ಇದೆ. ಆದರೆ ಮಾಡುವ ಮನಸ್ಸಿದ್ದಾಗ ಮಾತ್ರ ಅದು ಸಾಧ್ಯ. ನಿಮಗೆ ಆ ಮನಸ್ಸು ಇದೆಯೇ.. ನನಗೆ ಗೊತ್ತಿಲ್ಲ, ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಿ..  

15 ಕಾಮೆಂಟ್‌ಗಳು:

Unknown ಹೇಳಿದರು...

Nice post

ಮೋಹನ್ ರೆಡ್ಡಿ ಜೆ ಹೇಳಿದರು...

ಸಮಾಜಮುಖಿ ಚಿಂತಕರಾಗಿ, ನಾವಿರುವ ಸಮಾಜದ ಏಳ್ಗೆ ಬಗೆಗೆ ಯೋಚಿಸುವ ಕೆಲವೇ ವ್ಯಕ್ತಿಗಳ ಪಟ್ಟಿಗೆ ನೀವೂ ಸೇರಿಕೊಳ್ಳುತ್ತೀರಿ...
ನಿಮ್ಮ ಯೋಚನಾ ನೈಜತೆಯೂ ವಿಭಿನ್ನವಾಗಿದ್ದು, ಉತ್ತಮವಾದ ಕಟುಸತ್ಯದ ಲೇಖನ...
''ಬದಲಾವಣೆ'' ಎಂಬುದು.... ಎಲ್ಲಿ, ಯಾರಿಂದ, ಯಾವಾಗ ಎಂಬಿತ್ಯಾದಿಗಳನ್ನು ಆಯಾ ಸನ್ನಿವೇಶ-ಪರಿಸ್ಥಿತಿಗಳು ನಿರ್ಧರಿಸುತ್ತವೆ..!

ದೇಶ ಭಕ್ತಿಯನ್ನು ಮೈಗೂಡಿಸಿಕೊಂಡಿರುವ ಯಾವುದೇ ರಾಷ್ಟದ ಯಾವುದೇ ಪ್ರಜೆಯು ನಿಮ್ಮ ಇಂದಿನ ಬರಹವನ್ನು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾನೆ....

Unknown ಹೇಳಿದರು...

ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಹ,ತಮ್ಮ ಲೇಖನ ದಿಂದ ಸ್ಪೂರ್ತಿ ಹೊಂದಿ,ನಮ್ಮ ಕೈಲಾದ ಸಹಾಯ ಮಾಡಲು ಸ್ಪೂರ್ತಿ ಹೊಂದುವಂತ ಅರ್ಥಪೂರ್ಣ ಲೇಖನ.ನಿಮ್ಮ ಲೇಖನವನ್ನು ಒಳ ಹೊಕ್ಕು ನೋಡಿದರೆ ,ನಿಮಗೆ ಸಮಾಜದ ಬಗ್ಗೆ ಇರುವ ಕಳಕಳಿ,ಮತ್ತು ನಮ್ಮ ಯುವ ಸಮೂಹಕ್ಕೆ ನಮ್ಮ ಕೈಯಲ್ಲಿ ಆಗುವ ಸಹಾಯವನ್ನು ಯಾವ ರೀತಿಯಲ್ಲಾದರೂ ಮಾಡಬೇಕೆಂದು ಪ್ರೇರೇಪಿಸುವ ಅಂಶಗಳನ್ನು ತಿಳಿಸಿದ್ದಕ್ಕೆ,ಹಾಗೂ ತಮ್ಮ ಈ ಲೇಖನದಿಂದ ತಮಗಿರುವ ಸಾಮಾಜಿಕ ಬದ್ಧತೆಯ ಎಸ್ಟಿದೆ ಎಂಬುದು ವಿಶೇಷವಾಗಿ ನಮಗೆ ಸ್ಪೂರ್ತಿ ತುಂಬುವಂತಹದು.ಆದ್ದರಿಂದ ವೈಯಕ್ತಿಕವಾಗಿ ತಮಗೆ ಅನಂತ ಅನಂತ ಧ್ಯವಾದಗಳು ಸರ್.
ನಿಮ್ಮ ಸ್ಫೂರ್ತಿಯ ಲೇಖನಗಳು ಹೀಗೆ ಮುಂದುವರೆದು,ಸಮಾಜದ ಏಳ್ಗೆಗಾಗಿ ಈಗಿನ ಯುವಸಮೂಹಕ್ಕೆ ಇನ್ನೂ ಹೆಚ್ಚಿನ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.
🙏
ಚಂದ್ರಶೇಖರ್.ವಿ ನಾಗಾನಾಳ

Unknown ಹೇಳಿದರು...

ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಹ,ತಮ್ಮ ಲೇಖನ ದಿಂದ ಸ್ಪೂರ್ತಿ ಹೊಂದಿ,ನಮ್ಮ ಕೈಲಾದ ಸಹಾಯ ಮಾಡಲು ಸ್ಪೂರ್ತಿ ಹೊಂದುವಂತ ಅರ್ಥಪೂರ್ಣ ಲೇಖನ.ನಿಮ್ಮ ಲೇಖನವನ್ನು ಒಳ ಹೊಕ್ಕು ನೋಡಿದರೆ ,ನಿಮಗೆ ಸಮಾಜದ ಬಗ್ಗೆ ಇರುವ ಕಳಕಳಿ,ಮತ್ತು ನಮ್ಮ ಯುವ ಸಮೂಹಕ್ಕೆ ನಮ್ಮ ಕೈಯಲ್ಲಿ ಆಗುವ ಸಹಾಯವನ್ನು ಯಾವ ರೀತಿಯಲ್ಲಾದರೂ ಮಾಡಬೇಕೆಂದು ಪ್ರೇರೇಪಿಸುವ ಅಂಶಗಳನ್ನು ತಿಳಿಸಿದ್ದಕ್ಕೆ,ಹಾಗೂ ತಮ್ಮ ಈ ಲೇಖನದಿಂದ ತಮಗಿರುವ ಸಾಮಾಜಿಕ ಬದ್ಧತೆಯ ಎಸ್ಟಿದೆ ಎಂಬುದು ವಿಶೇಷವಾಗಿ ನಮಗೆ ಸ್ಪೂರ್ತಿ ತುಂಬುವಂತಹದು.ಆದ್ದರಿಂದ ವೈಯಕ್ತಿಕವಾಗಿ ತಮಗೆ ಅನಂತ ಅನಂತ ಧ್ಯವಾದಗಳು ಸರ್.
ನಿಮ್ಮ ಸ್ಫೂರ್ತಿಯ ಲೇಖನಗಳು ಹೀಗೆ ಮುಂದುವರೆದು,ಸಮಾಜದ ಏಳ್ಗೆಗಾಗಿ ಈಗಿನ ಯುವಸಮೂಹಕ್ಕೆ ಇನ್ನೂ ಹೆಚ್ಚಿನ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.
🙏
ಚಂದ್ರಶೇಖರ್.ವಿ ನಾಗಾನಾಳ

Unknown ಹೇಳಿದರು...

ವೆರಿ ನೈಸ್ ಸರ್

Unknown ಹೇಳಿದರು...

ನಿಮಗೆ ಸಮಾಜದ ಬಗ್ಗೆ ಇರುವ ಕಳಕಳಿ,ಮತ್ತು ನಮ್ಮ ಯುವ ಸಮೂಹಕ್ಕೆ ನಮ್ಮ ಕೈಯಲ್ಲಿ ಆಗುವ ಸಹಾಯವನ್ನು ಯಾವ ರೀತಿಯಲ್ಲಾದರೂ ಮಾಡಬೇಕೆಂದು ಪ್ರೇರೇಪಿಸುವ ಅಂಶಗಳನ್ನು ತಿಳಿಸಿದ್ದಕ್ಕೆ,ಹಾಗೂ ತಮ್ಮ ಈ ಲೇಖನದಿಂದ ತಮಗಿರುವ ಸಾಮಾಜಿಕ ಬದ್ಧತೆಯ ಎಸ್ಟಿದೆ ಎಂಬುದು ವಿಶೇಷವಾಗಿ ನಮಗೆ ಸ್ಪೂರ್ತಿ ತುಂಬುವಂತಹದು.ಆದ್ದರಿಂದ ವೈಯಕ್ತಿಕವಾಗಿ ತಮಗೆ ಅನಂತ ಅನಂತ ಧ್ಯವಾದಗಳು ಸರ್.
ನಿಮ್ಮ ಸ್ಫೂರ್ತಿಯ ಲೇಖನಗಳು ಹೀಗೆ ಮುಂದುವರೆದು,ಸಮಾಜದ ಏಳ್ಗೆಗಾಗಿ ಈಗಿನ ಯುವಸಮೂಹಕ್ಕೆ ಇನ್ನೂ ಹೆಚ್ಚಿನ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.
🙏✨👌👌

Unknown ಹೇಳಿದರು...

Paripoorna Vada rissaya sar

Unknown ಹೇಳಿದರು...

Super bede sir nohuuu

ಮುರಳೀಧರ. ಎಸ್ ಹೇಳಿದರು...

ಉತ್ತಮವಾದ ಮಾಹಿತಿ.... ಸದೃಢವಾಗಿದೆ.

Chinmaya A C ಹೇಳಿದರು...

Inspiring post. Keep up the good work Girish.

Unknown ಹೇಳಿದರು...

Super

Unknown ಹೇಳಿದರು...

ಈ ನಿಮ್ಮ ಲೇಖನಗಳನ್ನು ಓದಿ ನನಗೆ ಬಹಳ ಸಂತೋಷವಾಯಿತು. ನಿಮ್ಮ ಈ ಲೇಖನವನ್ನು ಓದುವ ಪ್ರತಿಯೊಬ್ಬರ ಕಣ್ಣು ತೆರೆಯುವಂತೆ ಮಾಡುತ್ತದೆ ಶುಭವಾಗಲಿ 🙏

Unknown ಹೇಳಿದರು...

ಅತ್ಯುತ್ತಮವಾದ ಲೇಖನ ಇದು ನಮ್ಮ ನವ ಯುವ ಪೀಳಿಗೆಗೆ ಬಹಳ ಅತ್ಯಾವಶ್ಯಕವಾದ ಲೇಖನ ಇದು
ಈ ಲೇಖನವನ್ನು ಬರೆದಿರುವ ಗಿರೀಶ್ ರೆಡ್ಡಿ ಯವರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸೋಣ

ಅನಾಮಧೇಯ ಹೇಳಿದರು...

ಪ್ರಬಂಧಕರು

ಅನಾಮಧೇಯ ಹೇಳಿದರು...

Super sir