ಈ ಪ್ರಪಂಚದಲ್ಲಿ ಅದೆಷ್ಟೋ ಜನ ಬುದ್ದಿವಂತರು, ಹಣವಂತರು, ವಿದ್ಯಾವಂತರು ಸೇರಿದಂತೆ ಎಲ್ಲಾ ರೀತಿಯ ಬಲವನ್ನು ಹೊಂದಿರುವ ಅನೇಕರು ಅಂತಿಮವಾಗಿ ತಮ್ಮ ಜೀವನದಲ್ಲಿ ಸೋಲನ್ನು ಒಪ್ಪಿಕೊಂಡು ಮುಗ್ಗರಿಸಿ ಎಡವಿ ಬೀಳುತ್ತಾರೆ. ಅದಕ್ಕೆ ಮೂಲ ಕಾರಣ ತಮಗೆ ಗೊತ್ತಿಲ್ಲದೆ ಬೆಳೆಸಿಕೊಳ್ಳುವ ದುರಾಭ್ಯಾಸಗಳ ಪ್ರಭಾವದಿಂದ ಎಂಬುವುದು ಕಟು ಸತ್ಯ. ದುರಾಭ್ಯಾಸಗಳ ಹೊರತಾದ ಜೀವನ ಸಾಗಿಸುವವನು ಮಾತ್ರ ದೋಣಿ ಎಂಬ ಗುರಿಯನ್ನು ಸರಿಯಾಗಿ ಚಲಾಯಿಸಿ ಅಂತಿಮವಾಗಿ ದಡ ಸೇರಿಸುತ್ತಾನೆ, ಗುರಿ ತಲುಪಿ ಒಳ್ಳೆಯ ನಾವಿಕನಾಗುತ್ತಾನೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ತೆಲುಗಿನ ವಕೀಲ್ ಸಾಬ್ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಚಿತ್ರದ ನಾಯಕ ನಟರಾಗಿದ್ದರಿಂದ, ಅದರಲ್ಲೂ ಅವರ ಹೊಸ ಚಿತ್ರ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದಿದ್ದರಿಂದ, ಸಹಜವಾಗಿಯೇ ಹೆಚ್ಚಿನ ಜನ ಅವರ ಅಭಿಮಾನಿಗಳು ಚಿತ್ರ ನೋಡಲು ಮುಗಿಬಿದ್ದಿದ್ದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ದ ಧ್ವನಿ ಎತ್ತುವ ಹಾಗೂ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣವೊಂದರ ವಾದ-ವಿವಾದಗಳ ಕುರಿತ ಕಥೆ ಆಧಾರಿತ ಚಿತ್ರವಿದು ಹಾಗೂ ಹಲವು ವಿಚಾರಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಅಂದು ಅದೇ ಚಿತ್ರ ಮಂದಿರದಲ್ಲಿ ಚಿತ್ರ ಪ್ರಾರಂಭಕ್ಕೂ ಮುನ್ನ ಪರದೆಯ ಮೇಲೆ ಧೂಮಪಾನ ಹಾಗೂ ಮದ್ಯಪಾನ, ಪಾನ್ ಮಸಾಲ ಆರೋಗ್ಯಕ್ಕೆ ಹಾನಿಕರ, ಇವುಗಳಿಂದ ಆದಷ್ಟೂ ದೂರವಿರಿ ಎಂದು ಸಂದೇಶ ಬರುತ್ತದೆ. ಜೊತೆಗೆ ಅವುಗಳಿಗೆ ಬಲಿಯಾದವರ ವಿಡಿಯೋವನ್ನು ತೋರಿಸಿ, ಪ್ರೇಕ್ಷಕರಿಗೆ ಕಿವಿಮಾತು ಹೇಳುತ್ತಾರೆ. ಆದರೂ ಅದೇ ಚಿತ್ರ ಮಂದಿರದಲ್ಲಿ ಚಿತ್ರ ವಿರಾಮದ ಮಧ್ಯೆ ಜನ ಗುಂಪಾಗಿ ಸೇರಿ ಧೂಮಪಾನ, ಪಾನ್ ಮಸಾಲಗಳನ್ನು ಬಳಸುತ್ತ, ಅವರ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಪಕ್ಕದವರ ಆರೋಗ್ಯವನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದರು. ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ತೋರಿಸಿ ಅರ್ಧಗಂಟೆಯು ಆಗಲಿಲ್ಲ, ಅದಾಗಲೇ ಆ ವಿಷಯವನ್ನು ಸುಲಭವಾಗಿ ಮರೆತು ಬಿಟ್ಟಿದ್ದರು.
ಮೊನ್ನೆ ದಿನಪತ್ರಿಕೆಯೊಂದರಲ್ಲಿ 18 ರಿಂದ 35 ವರ್ಷದೊಳಗಿನ ಯುವಕ-ಯುವತಿಯರ ಕುರಿತ ಸಮೀಕ್ಷಾ (ಸರ್ವೆ) ವರದಿಯೊಂದು ಪ್ರಕಟವಾಗಿತ್ತು. ಅದರಲ್ಲಿ ಬಹುಮುಖ್ಯವಾಗಿ ಯುವ ಸಮೂಹ ಎಷ್ಟರ ಮಟ್ಟಿಗೆ ದುರಾಭ್ಯಾಸಗಳಿಗೆ (ಸಿಗರೇಟ್, ಮದ್ಯಪಾನ, ಡ್ರಗ್ಸ್, ಪಾನ್ ಮಸಾಲಾ, ಗುಟ್ಕಾ ಸೇವನೆ ಮತ್ತಿತರೆ) ಬಲಿಯಾಗುತ್ತಿದ್ದಾರೆ ಎಂಬ ಕುರಿತ ಬೆಳಕು ಚೆಲ್ಲುವ ವರದಿ ಅದಾಗಿತ್ತು. ಅದರ ಪ್ರಕಾರ ಕಾಲೇಜು ಮೆಟ್ಟಿಲು ಕೂಡ ಹತ್ತದ ಅದೆಷ್ಟೋ ಯುವ ಸಮೂಹ ದುರಾಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಸತ್ಯವನ್ನು ಪತ್ರಿಕೆ ಸರ್ವೆ ರಿಪೋರ್ಟ್ ಆಧಾರದಲ್ಲಿ ಮೇಲೆ ಪ್ರಕಟಿಸಿತ್ತು.
ನಾವು ಮನುಷ್ಯರೇ ಹಾಗೆ ಒಳ್ಳೆಯ ಕೆಲಸ, ಕಾರ್ಯಗಳನ್ನು ತಡವಾಗಿ ಕಲಿಯುತ್ತೇವೆ, ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ದುರಾಭ್ಯಾಸ ಮತ್ತು ಕೆಟ್ಟ ಚಟಗಳನ್ನು ಯಾರು ಕಲಿಸದಿದ್ದರು ಬೇಗ ಕಲಿಯುತ್ತೇವೆ, ಅತ್ಯುತ್ಸಾಹದಿಂದ ತಿಳಿದುಕೊಳ್ಳುತ್ತೇವೆ. ಚಾಚು ತಪ್ಪದೇ ಪಾಲಿಸುತ್ತೇವೆ.
ವಿಪರ್ಯಾಸವೆಂದರೆ ಸಿಗರೇಟ್ ಪ್ಯಾಕ್ ಮೇಲೆ ಆರೋಗ್ಯಕ್ಕೆ ಹಾನಿಕರ, ಧೂಮಪಾನ ಮಾಡಬೇಡಿ ಎಂದು ಮುದ್ರಿಸಿರುತ್ತಾರೆ, ಆದರೂ ಜನ ಹಣಕೊಟ್ಟು ಖರೀದಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಎಳೆ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಯಾರು ಹೇಳುವ ಅವಶ್ಯಕತೆ ಇಲ್ಲ, ಎಲ್ಲರಿಗೂ ಗೊತ್ತು. ಆದರೂ ಬಹುಪಾಲು ಜನ ಕುಡಿಯುವುದೇ ಇಲ್ಲ, ಬದಲಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗಲು ಕಾರಣವಾದ ಮದ್ಯಪಾನದತ್ತ ಮೊರೆ ಹೋಗುತ್ತಾರೆ ಎಂಬುವುದನ್ನು ಅಲ್ಲೆಗೆಳಯಲು ಸಾಧ್ಯವೇ.
ಹಾಗೆ ನೋಡಿದರೆ ದುರಾಭ್ಯಾಸಗಳೆಂದರೆ ಕೇವಲ ಧೂಮಪಾನ, ಮದ್ಯಪಾನ ಸೇವಿಸುವುದು, ಡ್ರಗ್ಸ್ ಗೆ ದಾಸರಾಗುವುದು, ಪಾನ್ ಮಸಾಲ ಜರಿಯುವುದು ಅಷ್ಟೇ ಅಲ್ಲ, ಅದರ ಹೊರತಾಗಿ ಹತ್ತಾರು ದುರಾಭ್ಯಾಸಗಳ ದೊಡ್ಡ ಪಟ್ಟಿಯೇ ಇದೆ. ಧೂಮಪಾನ, ಮದ್ಯಪಾನ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಿದರೆ, ಉಳಿದ ದುರಾಭ್ಯಾಸಗಳು ನಮ್ಮ ವ್ಯಕ್ತಿತ್ವಕ್ಕೆ ಕಳಂಕ ತಂದು ಸ್ವತಃ ಬೀದಿಯಲ್ಲಿ ತಂದು ನಿಲ್ಲಿಸಿ ಬಿಡುತ್ತದೆ.
ಅನ್ಯರೊಬ್ಬರು ಬೆಳೆಯುತ್ತಿದ್ದಾರೆ, ಅಭಿವೃದ್ದಿಯಾಗುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ದ್ವೇಷಿಸುವುದು, ಹೊಟ್ಟೆಕಿಚ್ಚು ಪಡುವುದು, ವಿನಾ ಕಾರಣ ಇತರರ ಬಗ್ಗೆ ಸುಳ್ಳು ಹೇಳಿ ಅವರನ್ನು ತೇಜೋವಧೆ ಮಾಡುವುದು, ನಮಗಾಗದವರ ಬಗ್ಗೆ ಇತರರಿಗೆ ದೂರು ಹೇಳಿ, ಅವರ ಗೌರವಕ್ಕೆ ಧಕ್ಕೆ ತರುವುದು, ಸುಳ್ಳಗಳನ್ನೇ ಪದೇ ಪದೇ ಹೇಳಿ ಸತ್ಯವೆಂದು ನಂಬಿಸುವುದು, ಇತರರನ್ನು ವಿನಾ ಕಾರಣ ಟೀಕಿಸುವುದು, ಅವಮಾನ ಮಾಡುವುದು, ಅಪಹಾಸ್ಯಕ್ಕೆ ಗುರಿ ಮಾಡುವುದು, ಕೀಳಾಗಿ ಕಾಣುವುದು, ತಪ್ಪೆಂದು ಗೊತ್ತಿದ್ದರು ಅನ್ಯಾಯದ ಮಾರ್ಗದಲ್ಲಿ ಸಾಗುವುದು, ಹಣ ಮಾಡುವ ಸಲುವಾಗಿ ಇತರರಿಗೆ ಮೋಸ ಮಾಡುವಂತಹ ಲಕ್ಷಣಗಳೆಲ್ಲವೂ ದುರಾಭ್ಯಾಸಗಳ ಪಟ್ಟಿಗೆ ಒಳಪಡುತ್ತದೆ. ಇಂತಹ ದುರಾಭ್ಯಾಸ ಚಟಗಳು ನಮ್ಮ ವ್ಯಕ್ತಿತ್ವವನ್ನೇ ಅಲ್ಲಾಡಿಸಿ ಬೇರು ಸಮೇತ ಕಿತ್ತು ಎಸೆದು ಬಿಡುತ್ತದೆ.
ಹಾಗೆ ನೋಡಿದರೆ ಜೀವನದಲ್ಲಿ ಯಾರಾದರೊಬ್ಬರು ಸಫಲತೆ ಕಾಣುತ್ತಿದ್ದಾರೆ, ಸಾಧನೆಯಲ್ಲಿ ಎತ್ತರಕ್ಕೆ ಏರುತ್ತಿದ್ದಾರೆ ಎಂದರೆ ಸಾಧ್ಯವಾದರೆ ಅವರ ಗುರಿ ತಲುಪಲು ಸಹಾಯ ಮಾಡಬೇಕೆ ಹೊರತು ಅನಗತ್ಯವಾಗಿ ಅವರಿಗೆ ತೊಂದರೆ ಕೊಟ್ಟು ಕಾಲೆಳೆಯುವ ಕೃತ್ಯಗಳಲ್ಲಿ ಭಾಗಿಯಾಗಲೇ ಬಾರದು. ಸಾಮಾನ್ಯವಾಗಿ ನಾವು ಯಾರನ್ನು ಶತ್ರುಗಳನ್ನಾಗಿ ಪರಿಗಣಿಸಬಾರದು. ಶತ್ರುಗಳನ್ನು ಸಂಪಾದಿಸಬೇಕೆಂಬ ಆಲೋಚನೆಯು ಇರಬಾರದು, ಅಜಾತಶತ್ರುವಿನ ಜೀವನ ನಮ್ಮದಾಗಿರಬೇಕು. ಆಕಸ್ಮಾತ್ ಒಂದು ವೇಳೆ ನಮಗೆ ಶತ್ರುಗಳಿದ್ದರು, ಅವರ ವಿರುದ್ದ ಇಲ್ಲಸಲ್ಲದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವ, ಅವರನ್ನು ದ್ವೇಷಿಸಿ, ಹಠ ಸಾಧಿಸುವ ಕೆಲಸಕ್ಕೆ ಕೈಹಾಕಲೇ ಬಾರದು. ನಮ್ಮ ಮಧ್ಯೆ ಸದಾ ಸುಳ್ಳುಗಳನ್ನೇ ಹೇಳುತ್ತ ಜೀವನ ಸಾಗಿಸುವ ಜನ ವರ್ಗ ಕಡಿಮೆ ಏನಿಲ್ಲ. ನಾವು ಸುಳ್ಳುಗಳನ್ನು ಹೇಳುತ್ತ ಸಾಗಿದರೆ, ಅದೇ ಸುಳ್ಳುಗಳು ನಮ್ಮ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತದೆ. ಸುಳ್ಳುಗಳನ್ನು ಹೇಳುವ ಅಭ್ಯಾಸ ನಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ ಎಂಬ ಅರಿವು ಇರಬೇಕು.
ಇತರರನ್ನು ವಿನಾ ಕಾರಣ ಟೀಕೆ, ವಿಮರ್ಶೆಗಳಿಂದ ನೋಯಿಸುವುದು, ಕೀಳಾಗಿ ಕಂಡು ಅವರ ಮನಸ್ಸಿಗೆ ಘಾಸಿಯಾಗುವ ರೀತಿಯ ವರ್ತನೆಗಳು ಶೋಭೆ ತರುವಂತದ್ದಲ್ಲ. ಕೇವಲ ಹಣ ಮಾಡುವ ಸಲುವಾಗಿಯೇ ಅಡ್ಡದಾರಿಗಳನ್ನು ಆಯ್ಕೆ ಮಾಡಿಕೊಂಡು, ಅನ್ಯಾಯದ ಮಾರ್ಗದಲ್ಲಿ ಸಾಗುತ್ತ, ಅನ್ಯರಿಗೆ ಮೋಸ ಮಾಡುವ ಕಾಯಕ ನಮ್ಮ ಜೀವನವನ್ನೇ ಒಂದಲ್ಲಾ ಒಂದು ದಿನ ಪಾತಾಳಕ್ಕೆ ತಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ನಮ್ಮ ಸ್ವಾರ್ಥ ಸಾಧನೆಯ ಹಿತಕ್ಕಾಗಿ ಸ್ನೇಹಿತರ, ಕುಟುಂಬದವರಿಗೆ ಅನ್ಯಾಯ ಮಾಡಿ, ನಂಬಿಕೆ ದ್ರೋಹ ಮಾಡುವಂತಹ ಪಾಪದ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ, ಅದು ನಮ್ಮ ಜೀವನದ ಬಹಳ ದೊಡ್ಡ ತಪ್ಪಾಗಿ ಪರಿಣಮಿಸಿ, ಎಂದೋ ಒಂದು ದಿನ ನಮ್ಮ ಅಧಃಪತನಕ್ಕೆ ದಾರಿ ಮಾಡಿಕೊಡುತ್ತದೆ.
ಈಗೆ ಹೇಳುತ್ತ ಹೋದರೆ ಈ ರೀತಿಯ ಹಲವು ದುರಾಭ್ಯಾಸಗಳು ನಮ್ಮ ಸುತ್ತಲೂ ಸುತ್ತುತ್ತ ಗಿರಕಿ ಹೊಡೆಯುತ್ತಲೇ ಇರುತ್ತದೆ. ಇವು ನಮ್ಮಿಂದ ಬಹು ದೂರವಿದ್ದಷ್ಟು ನಮಗೆ ಆತ್ಮತೃಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಮತ್ತು ಇತರರಿಂದ ಗೌರವ ಪಡೆಯುತ್ತೇವೆ. ಅಪ್ಪಿತಪ್ಪಿ ಈ ದುರಾಭ್ಯಾಸಗಳು ಹತ್ತಿರ ಬಂದರಂತು, ನಾವು ಸಂಪೂರ್ಣ ಹಾಳಾಗುವುದರ ಜೊತೆಗೆ ನಮ್ಮ ಗುರಿ ತಲುಪಲು ಹೆಣಗಾಡಬೇಕಾಗುತ್ತದೆ.
ನಮಗೆ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿದ್ದರು, ಅವರು ಪಾಠದ ಜೊತೆಗೆ ಹೆಚ್ಚಾಗಿ ಮಾನವೀಯ ಗುಣಗಳು ಹಾಗೂ ನಮ್ಮಲ್ಲಿ ಧನಾತ್ಮಕ ಭಾವನೆ ಸೃಷ್ಟಿಯಾಗುವ ಕುರಿತು ವಿಷಯ ಪ್ರಸ್ತಾಪ ಮಾಡುತ್ತಿದ್ದರು. ಅವರೆಳಿದ ಮಾತು ನನಗಿನ್ನು ನೆನಪಿದೆ, ವಿದ್ಯಾರ್ಥಿಗಳೇ ನಿಮ್ಮ ಬಳಿ ಹಣವಿಲ್ಲ, ನೀವು ಬಡವರು ಎಂದು ಭಾವಿಸುತ್ತಿದ್ದಿರಾ ಚಿಂತೆ ಪಡಬೇಡಿ. ನಾನು ಎತ್ತರದಲ್ಲಿ ಕುಳ್ಳಗಿದ್ದೇನೆ, ಬಣ್ಣದಲ್ಲಿ ಕಪ್ಪಗಿದ್ದೇನೆ, ದೇಹದ ಆಕಾರ ದಪ್ಪಗಿದೆ ಎಂದು ಬೇಸರವಿದೆಯೇ ಪರವಾಗಿಲ್ಲ. ನನಗೆ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ, ನಾನು ವಿದ್ಯಾಭ್ಯಾಸದಲ್ಲಿ ತೀರ ಹಿಂದುಳಿದಿದ್ದೇನೆ ಎಂದು ಕೊರಗಿದೆಯೇ ತೊಂದರೆ ಇಲ್ಲ. ನೀವು ಬಡವರಾಗಿರಬಹುದು, ನೋಡಲು ಆಕರ್ಷಕರಾಗಿ ಕಾಣದಿರಬಹುದು, ವಿದ್ಯಾಭ್ಯಾಸದಲ್ಲಿ ಹಿಂದುಳಿದಿರಬಹುದು, ಇವೆಲ್ಲವೂ ನಿಮ್ಮ ನೂನ್ಯತೆಗಳಲ್ಲ, ಸಾಧನೆ ಮಾಡಲು ಖಂಡಿತಾ ಅಡ್ಡಿಯಾಗಲ್ಲ.
ಆದರೆ ಒಮ್ಮೆ ಆಲೋಚಿಸಿ ನಿಮ್ಮಲ್ಲಿ ಏನಾದರೂ ದುರಾಭ್ಯಾಸಗಳಿದ್ದರೆ, ಎಲ್ಲವೂ ಇದ್ದು ಏನು ಇಲ್ಲದ್ದಂತೆ ಜೀವನ ಕತ್ತಲಾಗುತ್ತದೆ. ನಮ್ಮಲ್ಲಿ ಹಣ ಇಲ್ಲದಿದ್ದರು, ವಿದ್ಯೆ ಇಲ್ಲದಿದ್ದರು, ಬ್ಯಾಕ್ಗ್ರೌಂಡ್ ಸಪೋರ್ಟ್ ಇರದೆ ಇದ್ದರು, ಸಾಧನೆ ಮಾಡಲು ಸಮಸ್ಯೆಯಾಗಲ್ಲ. ಆದರೆ ದುರಾಭ್ಯಾಸಗಳಿಗೆ ಬಲಿಯಾಗಿದ್ದರೆ ಮಾತ್ರ ಜೀವನವೇ ಮುಗಿದೇ ಹೋಯಿತು ಎಂದು ಸದಾ ಎಚ್ಚರಿಸುತ್ತಿದ್ದರು.
ಅದೆಷ್ಟೋ ಜನ ದುರಾಭ್ಯಾಸದ ಚಟಗಳಿಗೆ ದಾಸರಾಗಿ ಕುಟುಂಬ, ವೃತ್ತಿ, ಭವಿಷ್ಯವನ್ನೇ ಹಾಳು ಮಾಡಿಕೊಂಡಿದ್ದಾರೆ. ಮಾನವೀಯ ಗುಣಗಳು ಬೆಳೆಯದಿರಲು ದುರಾಭ್ಯಾಸ ಚಟಗಳೇ ಅಡ್ಡಗಾಲಾಗಿ ಪರಿಣಮಿಸುತ್ತದೆ. ಯುವ ಸಮೂಹವಂತು ತಮ್ಮ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯವನ್ನೇ ಕತ್ತಲುಮಯ ಮಾಡಿಕೊಂಡಿದ್ದಾರೆ. ಈಗಿನ ಟ್ರೆಂಡ್ ಎಂದರೆ ಕಾಲೇಜು ಮೆಟ್ಟಿಲು ಹತ್ತಿದೆ ಕೂಡಲೇ ಮದ್ಯಪಾನ ಮಾಡಬೇಕು, ಧೂಮಪಾನಕ್ಕೆ ದಾಸರಾಗಬೇಕು, ಅಡ್ಡದಾರಿಗಳನ್ನು ಹಿಡಿದು ಬೆಳೆಯಬೇಕು. ಕೆಲವರು ಈ ಗುಣಗಳು ಇಲ್ಲದೇ ಹೋದರೆ ಕಾಲೇಜಿಗೆ ಸೇರಿದ್ದೆ ವ್ಯರ್ಥ ಎಂಬ ಧೋರಣೆಯನ್ನು ನಿರ್ಮಿಸಿದ್ದಾರೆ.
ನಿಜ ಹೇಳಬೇಕೆಂದರೆ ದುರಾಭ್ಯಾಸಗಳು ನಮ್ಮಲ್ಲಿನ ಪ್ರೀತಿ, ವಾತ್ಸಾಲ್ಯ, ತಾಳ್ಮೆ, ಛಲ, ಸಹಾನಶಕ್ತಿಯನ್ನು ಸಂಪೂರ್ಣವಾಗಿ ಕಬಳಿಸುತ್ತದೆ. ಧನಾತ್ಮಕ ಚಿಂತನೆಯನ್ನು ಪೂರ್ಣವಾಗಿ ಮರೆಸುತ್ತದೆ. ಸ್ವಾರ್ಥದ ಹಾದಿ ತುಳಿಯುವಂತೆ ಸದಾ ಪ್ರೇರೆಪಿಸುತ್ತದೆ. ಬೆಳೆಯಬೇಕೆಂಬ ಒಂದೇ ಕಾರಣಕ್ಕಾಗಿ ಕಾನೂನು ವಿರೋಧಿ ಕೃತ್ಯಗಳನ್ನೂ ಮಾಡಿಸುತ್ತದೆ. ಮಾನವೀಯ ಗುಣಗಳು ಕಣ್ಮರೆಯಾಗುವಂತೆ ಮಾಡುತ್ತದೆ. ಅಂತಿಮವಾಗಿ ನಮ್ಮ ಜೀವನಕ್ಕೆ ದೊಡ್ಡ ಪುಲ್ಸ್ ಸ್ಟಾಪ್ ಇಟ್ಟು, ಅತಂತ್ರ ಬದುಕನ್ನು ನಿರ್ಮಾಣ ಮಾಡಿಸುತ್ತದೆ, ಆದ್ದರಿಂದ ನಮ್ಮಲ್ಲಿನ ದುರಾಭ್ಯಾಸಗಳಿಗೆ ಬ್ರೇಕ್ ಹಾಕೋಣ, ಇಲ್ಲದೇ ಹೋದರೆ ಅಪಘಾತವಾಗುವ ಸಾಧ್ಯತೆ ದಟ್ಟವಾಗಿದೆ.



13 ಕಾಮೆಂಟ್ಗಳು:
Nice sir
Nice sir
ಒಂದು ವಳಿಯ ಸಂದೇಶ ಸರ್
Really super article
Very impressive
👌 sir
Arthapurnavada lekana. Baravanige chennagide.
Article is selfrealizable and awakenable,
Article is selfrealizable and awakenable,
Good one
Overall childhood moralscience revision to correct oneself at the moment
Overall childhood moralscience revision to correct oneself at the moment
ವರ್ಣಿಸಲು ಪಡಗ್ಲಿ ಸಾಕಾಗುವುದಿಲ್ಲ ಸಾರ್
ಖಂಡಿತಾ ಸತ್ಯ ಸರ್. ಧನ್ಯವಾದಗಳು🙏🙏
ಕಾಮೆಂಟ್ ಪೋಸ್ಟ್ ಮಾಡಿ