ಭಾನುವಾರ, ನವೆಂಬರ್ 15, 2020

ನಮ್ದು ನೆಮ್ಮದಿ ಇಲ್ಲದ ಜೀವನ..

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇತ್ತಿಚೀಗೆ ಬೆಂಗಳೂರು ನಗರದಲ್ಲಿರುವ ವೃದ್ದಾಶ್ರಮವೊಂದಕ್ಕೆ ಹೋಗಿದ್ದೆ, ಕಾರಣ ನನ್ನ ಸ್ನೇಹಿತನೊಬ್ಬ ಅಲ್ಲಿ ವ್ಯವಸ್ಥಾಪಕನಾಗಿದ್ದ. ಆತನನ್ನು ಮಾತನಾಡಿಸಿಕೊಂಡು, ಆ ವೃದ್ದಾಶ್ರಮ ನೋಡಿಕೊಂಡು ಬರಲು ಹೋಗಿದ್ದೆ. ಅಲ್ಲಿ 50ಕ್ಕೂ ಹೆಚ್ಚು ಜನ ವಯಸ್ಸಾದವರಿದ್ದರು. ಗಮನಿಸಬೇಕಾದ ಅಂಶವೆಂದರೆ ಆ ವೃದ್ದಾಶ್ರಮದಲ್ಲಿದ್ದ ಎಲ್ಲರಿಗೂ ಮಕ್ಕಳಿದ್ದರು, ಆದರೂ ಆ ಮಕ್ಕಳು ಇವರನ್ನು ಪೋಷಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳದ ಕಾರಣ ವೃದ್ದಾಶ್ರಮ ಸೇರಿದ್ದರು. 

ಇವರ ಕೆಲ ಮಕ್ಕಳಂತು ಉನ್ನತ ವ್ಯಾಸಾಂಗ ಮಾಡಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಒಳ್ಳೆಯ ವೇತನವು ಸಿಗುತ್ತಿದೆ. ಕುಟುಂಬದವರೆಲ್ಲರೂ ಇದ್ದರೂ ಯಾರು ಇಲ್ಲದಂತೆ ಅನಾಥರಾಗಿ ಜೀವನ ಸಾಗಿಸಬೇಕಾದ ದುಸ್ಥಿತಿ ವೃದ್ದಾಶ್ರಮದಲ್ಲಿದ್ದ ಬಹುತೇಕರದ್ದಾಗಿತ್ತು.

ಅಲ್ಲಿದ್ದ ಮೈಸೂರು ಮೂಲದ ರಾಮಣ್ಣ ಎಂಬ ಹಿರಿಯರೊಬ್ಬರನ್ನು ಮಾತನಾಡಿಸಿದರೆ, ಅವರು ಹೇಳುತ್ತಾರೆ, ನಾನು ಸುಮಾರು 32 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ, ನಿವೃತ್ತನಾಗಿದ್ದೆ. ನನ್ನ ಒಬ್ಬನೇ ಮಗನನ್ನು ಕಷ್ಟ ಬಿದ್ದು ಇಂಜಿನಿಯರಿಂಗ್ ಪದವಿ ಓದಿಸಿ, ಸ್ವಂತ ಮನೆ ಕಟ್ಟಿಕೊಂಡಿದ್ದೆ. ಮಗನಿಗೆ ಮದುವೆಯಾಗಿ 5 ವರ್ಷಗಳವರೆಗೂ ಅವರ ಜೊತೆಯಲ್ಲೇ ಇದ್ದೆ. ಆ ನಂತರ ಅವರು ನನಗೆ ವಯಸ್ಸಾಗಿದೆ, ಹಾರೈಕೆ ಮಾಡುವುದು ಕಷ್ಟ ಹಾಗೂ ಅವರಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ನನ್ನ ಮಗ ಈ ವೃದ್ದಾಶ್ರಮಕ್ಕೆ ತಂದು ಸೇರಿಸಿದ್ದಾನೆ. 6 ತಿಂಗಳಿಗೋ, ವರ್ಷಕ್ಕೊಮ್ಮೆಯೋ ಮಾತ್ರ ಬರುತ್ತಾನೆ ಎಂದು ತಮ್ಮ ನೋವು ತೊಡಿಕೊಂಡು, ಕಣ್ಣಿರಾಕಿದರು.

ಯಾರಾದರೂ ನಮ್ಮ ಬಳಿಗೆ ಬಂದು ನೀವು ಎಷ್ಟು ವರ್ಷ ಬದುಕುತ್ತೀರಾ ಎಂದು ಪ್ರಶ್ನೆ ಹಾಕಿದರೆ, ನಾವು ಕೊಡುವ ಉತ್ತರ ಎಲ್ಲಿಯವರೆಗೂ ಭಗವಂತನ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ಎಂಬ ಮರು ಉತ್ತರ ನೀಡುತ್ತೇವೆ. ಕಾರಣ ಎಲ್ಲರಿಗೂ ಅವರವರ ಜನ್ಮದಿನಾಂಕ ಗೊತ್ತಿದಿಯೇ ಹೊರತು ನಿಧನದ ದಿನಾಂಕ ಯಾರಿಗೂ ಗೊತ್ತಿರುವುದಿಲ್ಲ.

ಇಂದು ಬದುಕಿರುವವರು ನಾಳೆಗೆ ಏನೂ ಬೇಕಾದರೂ ಆಗಬಹುದು, ಯಾರಿಗೆ ಗೊತ್ತು. ನಾವು ಯಾವುದಾದರೂ ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಲು ಹೋದರೆ ಮೊದಲು ನೋಡುವುದು ಅದರ ಬೆಲೆ ಮತ್ತು ಎಷ್ಟು ವರ್ಷ ಗ್ಯಾರಂಟಿ ಇದೆ ಎಂದು,  ವಿಪರ್ಯಾಸವೆಂದರೆ ನಮಗೇನೆ ಯಾವುದೇ ಗ್ಯಾರಂಟಿ ಇಲ್ಲ ಹಾಗೂ ಅತ್ರಂತ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅಷ್ಟರ ಮಟ್ಟಿಗೆ ಗ್ಯಾರಂಟಿ ಮತ್ತು ವ್ಯಾರಂಟಿ ಎರಡು ಇಲ್ಲದ ಜೀವನ ಮನುಷ್ಯನ್ನದ್ದು ಮಾತ್ರ.

ಹಲವು ವರ್ಷಗಳ ಹಿಂದೆ ಕೆಲ ಗ್ರಾಮೀಣ ಭಾಗಗಳಲ್ಲಿ 100 ವರ್ಷ ದಾಟಿದ ಅಜ್ಜ, ಅಜ್ಜಿಯರನ್ನು ಕಾಣುತ್ತಿದ್ದೇವು. ಕೆಲವರಂತು ನಮ್ಮ ಅಜ್ಜನಿಗೆ, ಅಜ್ಜಿಗೆ 105 ವರ್ಷ, 110 ವರ್ಷ ಎಂದು ಖುಷಿಯಿಂದ ಹೇಳುತ್ತಿದ್ದನ್ನು ಕೇಳಿದ್ದೇವೆ. ಪತ್ರಿಕೆಗಳಲ್ಲೂ ವರದಿಗಳು ಬರುತ್ತಿದ್ದವು. ಹಾಗೆಯೇ ತುಂಬಾ ಜನ ಶತಕದ ಸಮೀಪದವರೆಗೂ ಬದುಕಿ ಔಟ್ ಹಾಕುತ್ತಿದ್ದರು. ಆದರೂ 80, 90 ವರ್ಷವಾದರೂ ಸುಖಿ ಜೀವನ ಸಾಗಿಸುತ್ತಿದ್ದರು.  

ಆದರೆ ಈಗ 60 ರಿಂದ 65 ವರ್ಷ ಬದುಕುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಇಂದಿನ ಬಹುತೇಕರ ಗುರಿ 60 ವರ್ಷ ಯಾವುದೇ ಸಮಸ್ಯೆ ಇರದೇ ಬದುಕುವುದು.  ಅಷ್ಟರ ಮಟ್ಟಿಗೆ ನಮ್ಮ ಜೀವನಗಳು ಅಭದ್ರತೆಯಿಂದ ಕೂಡಿದೆ ಹಾಗೂ ತುಂಬಾ ಶಾರ್ಟ್ ಆಗಿದೆ. ಆದರೂ ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ನಾವು ಇನ್ನು ಹೋಗಿಲ್ಲ. 

ನಾವು ಬದುಕುವುದೇ ಕೆಲವೇ ವರ್ಷಗಳಾದರೂ, ನೆಮ್ಮದಿ, ಆತ್ಮ ತೃಪ್ತಿ, ಸಂತೋಷ ಬಹುತೇಕರಿಗೆ ಇಲ್ಲ. ಅಂತಹ ಸಂತೋಷದ ದಿನಗಳನ್ನು ಪಡೆಯಲು ಸಂದರ್ಭ, ಸನ್ನಿವೇಶಗಳನ್ನೇ ಸೃಷ್ಟಿಸಿಕೊಳ್ಳುತ್ತಿಲ್ಲ. ಪ್ರತಿದಿನವೂ ಮನಸ್ತಾಪ, ಕೋಪಗಳಲ್ಲೇ ದಿನಗಳು ಕಳೆಯುತ್ತಿದ್ದೇವೆ. ಕುಟುಂಬದ ಸಂಬಂಧಗಳ ಅನ್ಯೋನ್ಯತೆಗಳ ಬಗ್ಗೆ, ಅದರ ಮಹತ್ವದ ಬಗ್ಗೆ ಅರಿತುಕೊಳ್ಳುವ ಮನಸ್ಸೇ ಮಾಡುತ್ತಿಲ್ಲ ಎಂಬುವುದೇ ದುರ್ದೈವ.

ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯಲ್ಲಿ ತೆಲುಗಿನ ಶತಮಾನಂ ಭವತಿ ಎಂಬ ಚಿತ್ರ ಹಾಕಿದ್ದರು. ಈ ಚಿತ್ರದ ನಟ, ನಟಿಯರು ಶರ್ವಾನಂದ್ ಹಾಗೂ ಅನುಪಮ, ಈ ಚಿತ್ರಕ್ಕೆ  ಸತೀಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಬಹುಪಾಲು ಕುಟುಂಬ ವ್ಯವಸ್ಥೆ ಆಧಾರಿತ ಕಥೆಯನ್ನು ಹೊಂದಿದೆ. ಕುಟುಂಬದ ಸದಸ್ಯರಲ್ಲಿ ಬರುವ ವೈಮನಸ್ಯಗಳು, ಅದರಿಂದಾಗುವ ತೊಂದರೆಗಳು, ಕುಟುಂಬದ ಮಹತ್ವ, ಸಂಬಂಧಿಕರೊಂದಿಗೆ ಹೇಗೆ ಅನ್ಯೋನ್ಯತೆಯಿಂದ ಕೂಡಿರಬೇಕು ಎಂಬುವುದರ ಬಗ್ಗೆ ಸೇರಿದಂತೆ ಒಂದು ಆದರ್ಶ ಕುಟುಂಬದ ಚಿತ್ರಣದ  ಬಗ್ಗೆನೇ ಬೆಳಕು ಚೆಲ್ಲಿದೆ.

2 ಗಂಟೆಗೂ ಹೆಚ್ಚಿನ ಕಾಲದ ಶತಮಾನಂ ಭವತಿ ಚಿತ್ರವು ಕೌಟುಂಬಿಕ ಮಹತ್ವದ ಬಗ್ಗೆ ಹೇಳುತ್ತದೆ. ಇತ್ತಿಚೀಗೆ ಬಿಡುಗಡೆಯಾಗುವ ಲಾಂಗು, ಮಚ್ಚುಗಳ ಚಿತ್ರಗಳಿಗಿಂತ ವಿಭಿನ್ನವಾಗಿ ಕೂಡಿದೆ ಹಾಗೂ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಸಾರುತ್ತದೆ. ಸಣ್ಣ ಸಣ್ಣ ವೈಮನಸ್ಯಗಳಿಂದ ದೂರವಾಗುವ ಸಂಬಂಧಿಕರು ಕೊನೆಗೆ ಜೀವನದ ಒಳಾರ್ಥವನ್ನು ತಿಳಿದುಕೊಂಡು ಕುಟುಂಬದ ಹಿರಿಯರಿಗೆ ಗೌರವ ಕೊಡುತ್ತ, ಪುನಃ ಮತ್ತೆ ಎಲ್ಲರೂ ಒಂದಾಗಿ ಸೇರಿ ಅರ್ಥಪೂರ್ಣ ಜೀವನ ಸಾಗಿಸಬೇಕು ಎಂಬ ಸಂದೇಶವನ್ನು ಈ ಚಿತ್ರ ಸಾರುತ್ತದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.

ಈ ಹಿಂದೆ ಅವಿಭಕ್ತ ಕುಟುಂಬಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವು, ತಾತ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ,  ಮಾವ, ಅಣ್ಣ, ತಮ್ಮ, ತಂಗಿ, ಅಕ್ಕ ಹೀಗೆ ಹಲವು ವಿಧಗಳಿಂದ ಕೂಡಿದ ಸಂಬಂಧಗಳ ಸಂಬಂಧಿಕರ ದೊಡ್ಡ ಸಮಾಗಮ ಅವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯವಾಗಿ ಇರುತ್ತಿತ್ತು. 

ಅವಿಭಕ್ತ ಕುಟುಂಬಗಳಲ್ಲಿ ಸಂಬಂಧಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು. ಏನೇ ಸಮಸ್ಯೆ ಬಂದರೂ, ಒಬ್ಬರಿಗೊಬ್ಬರು ಆಸರೆಯಾಗುತ್ತಿದ್ದರು. ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಅದು ಮನೆ ಕೆಲಸವಾಗಲಿ, ಕೃಷಿ, ಕಚೇರಿ ಏನೇ ಕೆಲಸವಾದರೂ ಎಲ್ಲರೂ ಹಂಚಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಕಷ್ಟಗಳಲ್ಲೂ ಸುಖವನ್ನು ಕಾಣುವ ಮನಸ್ಥಿತಿ ಇತ್ತು.

ಯುಗಾದಿ, ದೀಪಾವಳಿ, ದಸರಾ, ಸಂಕ್ರಾಂತಿ, ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಹಬ್ಬ ಬಂದರೂ ದೊಡ್ಡವರು, ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದರು. ಅಂದು ಮನೆಗಳು ಮಾತ್ರ ದೊಡ್ಡದಿರುತ್ತಿರಲಿಲ್ಲ ಜೊತೆಗೆ ಮನಸ್ಸು ಕೂಡ ವಿಶಾಲವಾಗಿರುತ್ತಿತ್ತು ಅವಿಭಕ್ತ ಕುಟುಂಬಗಳಲ್ಲಿ. ಮಕ್ಕಳನ್ನು ಕೂಡ ಬಹಳ ಶಿಸ್ತಾಗಿ ಬೆಳೆಸುತ್ತಿದ್ದರು. ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವ ಜನ ವರ್ಗವಿರುತ್ತಿತ್ತು.

ಆದರೆ ಇಂದು ಅವಿಭಕ್ತ ಕುಟುಂಬಗಳನ್ನು ಕಾಣುವುದೇ ಅಪರೂಪ, ಅಲ್ಲೋ, ಇಲ್ಲೋ ಒಂದೆರಡನ್ನು ಕಾಣಬಹುದಷ್ಟೇ. ಇಂದು ಬಹುತೇಕ ವಿಭಕ್ತ ಕುಟುಂಬಗಳೇ, ಗಂಡ, ಹೆಂಡತಿ, ಒಂದಿಬ್ಬರು ಮಕ್ಕಳನ್ನು ಕಾಣಬಹುದಷ್ಟೇ. ಅವಿಭಕ್ತ ಕುಟುಂಬಗಳಲ್ಲಿ ಕಾಣುತ್ತಿದ್ದ ಸಂತೋಷ, ಸಡಗರಗಳನ್ನು ವಿಭಕ್ತ ಕುಟುಂಬಗಳಲ್ಲಿ ಎಲ್ಲಿ ಕಾಣಲು ಸಾಧ್ಯ. 

ಇಂದಿನ ವ್ಯವಸ್ಥೆ ಏಗಿದೆಯೆಂದರೆ ಪ್ರತಿಯೊಬ್ಬರಲ್ಲೂ ಸ್ವಾರ್ಥ, ಅಸೂಹೆ, ದುರಾಸೆ, ಅಹಂಕಾರ ಈ ನಾಲ್ಕು ಗುಣಗಳು ತುಂಬಿ ತುಳುಕುತ್ತಿವೆ. ಎಲ್ಲವೂ ನನಗೆ ಬೇಕು ಎಂಬ ಧೋರಣೆ, ಎಷ್ಟಿದ್ದರು ಸಾಲದು ಎಂಬ ದುರಾಸೆಯಿಂದ ಸ್ವತಃ ಅಣ್ಣ, ತಮ್ಮ, ದೊಡ್ಡಪ್ಪ, ಚಿಕ್ಕಪ್ಪ ಸೇರಿದಂತೆ ಸಂಬಂಧಿಕರನ್ನೇ ದೂರ ಮಾಡಿಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದೇವೆ. 

ಅಣ್ಣನೋ, ತಮ್ಮನೋ ಅಥವಾ ಮತ್ಯಾರೋ ಹತ್ತಿರದವರೆ ಜೀವನದಲ್ಲಿ ಸಾಧನೆ ಮಾಡುತ್ತಿದ್ದಾರೆ, ಬೆಳೆಯುತ್ತಿದ್ದಾರೆ ಎಂದರೆ ಸಹಿಸಲಾರದ ಸ್ಥಿತಿಗೆ ನಮ್ಮ ಮನಸ್ಸು ಬಂದು ನಿಂತಿದೆ. ಅವರು ಬೆಳೆದು ಬಿಟ್ಟರಲ್ಲಾ ಎಂದು ಅಸೂಹೆ ಪಡುವ ಮಟ್ಟಿಗೆ ನಮ್ಮ ಮನಸ್ಸು ಹೋಗುತ್ತದೆ ಎಂದರೆ ನಾವು ಎಂತಹ ಜೀವನ ಮಾಡುತ್ತಿದ್ದೇವೆ ಎಂದು ಅರ್ಥೈಸ ಬೇಕಾಗಿಲ್ಲ.

ಅದರಲ್ಲೂ ಪ್ರತಿಯೊಂದು ಕುಟುಂಬಗಳಲ್ಲೂ ಬರುವ ಆಸ್ತಿ, ಜಮೀನು, ಹಣ ಹಂಚಿಕೆ ವಿಚಾರದ ವೈಮನಸ್ಯಗಳು ಕುಟುಂಬದ ಸಂಬಂಧಿಕರನ್ನು ಶಾಶ್ವತವಾಗಿ ದೂರ ಮಾಡಿ ಬಿಡುತ್ತದೆ. ಎಷ್ಟೋ ಕುಟುಂಬಗಳಲ್ಲಿ ಸ್ವಂತ ಅಣ್ಣ ನಿಧನರಾದರೂ ಸ್ವಂತ ತಮ್ಮ ಶವ ಸಂಸ್ಕಾರಕ್ಕೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಸಂಬಂಧಗಳಲ್ಲಿ ಬಿರುಕು ಮೂಡಿರುತ್ತದೆ. ದೊಡ್ಡಪ್ಪನ ಮಕ್ಕಳನ್ನು ಚಿಕ್ಕಪ್ಪನ ಮಕ್ಕಳು ಮಾತನಾಡುವುದಿಲ್ಲ, ಚಿಕ್ಕಪ್ಪನ ಮಕ್ಕಳನ್ನು ದೊಡ್ಡಪ್ಪನ ಮಕ್ಕಳು ಮಾತನಾಡುವುದಿಲ್ಲ, ಸಂಬಂಧದಲ್ಲಿ ಅಣ್ಣ ತಮ್ಮಂದಿರಾದರೂ ಕನಿಷ್ಟ ಮಾತನಾಡುವ ಅವಕಾಶವನ್ನು ಕಳೆದುಕೊಂಡಿರುತ್ತಾರೆ. ಮದುವೆ ಸೇರಿದಂತೆ ಯಾವುದೇ ಶುಭ ಸಮಾರಂಭಗಳಾದರೂ ಪರಸ್ಪರ ಆಹ್ವಾನಿಸಿಕೊಳ್ಳುವ ಪದ್ದತಿಗಳನ್ನೇ ಕೈ ಬಿಟ್ಟಿರುತ್ತಾರೆ. ನಮ್ಮ ದುರಾಸೆಗಳಿಂದ ರಕ್ತ ಸಂಬಂಧಗಳಿಗೆ ಬೆಲೆ ಕೊಡದ ಪರಿಸ್ಥಿತಿ ನಿರ್ಮಿಸಿಕೊಂಡು ನಮ್ಮ ಸುತ್ತಲೂ ಒಂದು ದೊಡ್ಡ ಗೋಡೆಯನ್ನು ಕಟ್ಟಿಕೊಂಡಿದ್ದೇವೆ.

ಅಷ್ಟೇಕೆ ಆಸ್ತಿ, ಜಮೀನುಗಳ ಹಂಚಿಕೆಯಿಂದ ಶುರುವಾಗುವ ಕಲಹಗಳು ಕೊನೆಗೆ ಕೊಲೆ ಮಾಡುವ ಹಂತಕ್ಕೂ ಹೋದ ನಿದರ್ಶನಗಳು ಸಾವಿರಾರಿವೆ. ಕುಟುಂಬಗಳ ನಡುವೆ ನಡೆಯುವ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ನ್ಯಾಯಾಲಯಗಳಲ್ಲಿ ದಶಕಗಳಿಂದಲೂ ಕೊಳೆಯುತ್ತಿರುವ ಪ್ರಕರಣಗಳು ಹಾಗೂ ಪೊಲೀಸ್ ಠಾಣೆಗಳಲ್ಲಿನ ಎಫ್.ಐ.ಆರ್ ಕಾಫಿಗಳೇ ಸಾಕ್ಷಿ.

ನಮ್ಮಲ್ಲಿಂದು ಸಾಕಷ್ಟು ಅನಾಥಶ್ರಮಗಳು, ವೃದ್ದಾಶ್ರಮಗಳು ತಲೆ ಎತ್ತುತ್ತಿವೆ. ಕಾರಣ ಸ್ವತಃ ತಂದೆ, ತಾಯಿಗಳನ್ನೇ ಬೀದಿ ಪಾಲುವ ಮಾಡುವ ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ. ಜನ್ಮಕೊಟ್ಟು, ವಿದ್ಯಾಬ್ಯಾಸ ಕೊಡಿಸಿ, ಒಳ್ಳೆಯ ವೃತ್ತಿಗೆ ಸೇರಲು ನೆರವಾದ ತಂದೆ, ತಾಯಿಗಳನ್ನೇ ದೂರ ತಳ್ಳುವ ಮಕ್ಕಳು ನಮ್ಮಲ್ಲಿದ್ದಾರೆ. 

ಹೆಂಡತಿ ಮಾತನ್ನು ಕೇಳಿ ಗಂಡನೋ, ಅಥವಾ ಸ್ವಯಂ ನಿರ್ಧಾರದಿಂದ ಆತನೇ ವಯಸ್ಸಾದ ತನ್ನ ತಂದೆ, ತಾಯಿಗಳನ್ನು ವೃದ್ದಾಶ್ರಮಗಳಿಗೆ ಸೇರಿಸಿ ವರ್ಷಕ್ಕೊಮ್ಮೆ ಹೋಗಿ ಅವರ ಕೈಗೆ 500 ರೂ. ಕೊಟ್ಟು ಬಂದರೆ ಜವಾಬ್ದಾರಿ ಮುಗಿದೇ ಹೋಯಿತು ಎಂದುಕೊಳ್ಳುತ್ತೇವೆ. ಆ ಹಿಳಿ ವಯಸ್ಸಿನಲ್ಲಿ ಆ ಹಿರಿ ಜೀವಗಳು ತಮ್ಮ ಮಕ್ಕಳ ಆಸರೆ ಇಲ್ಲದೆ ಎಷ್ಟು ನೊಂದು ಕೊಳ್ಳುತ್ತಾರೋ, ಮಕ್ಕಳಿಗೆ ಹೇಗೆ ಗೊತ್ತಾಗಲು ಸಾಧ್ಯ. ಅವರಿಗೂ ನಾಳೇ ವಯಸ್ಸಾದ ನಂತರ ಅವರ ಮಕ್ಕಳು ಅವರನ್ನು ವೃದ್ದಾಶ್ರಮಗಳಿಗೆ ಸೇರಿಸುವ ಸಂದರ್ಭ ಬಂದಾಗ ಅವರಿಗೆ ತಾವು ಮಾಡಿದ ಮಹಾನ್ ತಪ್ಪಿನ ಬಗ್ಗೆ ಅರಿವಾಗಬಹುದು. 

ನಿಜವೆಂದರೆ ಈ ಜನ್ಮದಲ್ಲಿ ಮಾತ್ರ ಮನುಷ್ಯರಾಗಿ ಹುಟ್ಟಿದ್ದೇವೆ, ಮುಂದಿನ ಜನ್ಮದಲ್ಲಿ ಏನಾಗುತ್ತೇವೋ ಯಾರಿಗೂ ಗೊತ್ತಿಲ್ಲ. ನಮ್ಮ ಕುಟುಂಬದ ಸದಸ್ಯರೊಂದಿಗೆ, ಸಂಬಂಧಿಕರೊಂದಿಗೆ, ಸ್ನೇಹಿತರೊಂದಿಗೆ ವೈಮನಸ್ಯ, ಮನಸ್ತಾಪಗಳನ್ನು ಸೃಷ್ಟಿಸಿಕೊಂಡು ಸಣ್ಣ ಸಣ್ಣ ವಿಚಾರಗಳಿಗೂ ಜಗಳ ಮಾಡಿಕೊಂಡು ಅಮೂಲ್ಯವಾದ ಈ ಜೀವನವನ್ನು ನೆಮ್ಮದಿ ಇಲ್ಲದೇ ಬದುಕುವುದಾದರೂ ಯಾರಿಗೋಸ್ಕರವೆಂದು ಅರ್ಥವಾಗುವುದಿಲ್ಲ ? 

ಸ್ವಾರ್ಥ, ಅಸೂಹೆ, ಅಹಂಕಾರಗಳನ್ನು ಪಕ್ಕಕ್ಕಿಟ್ಟು ಎಲ್ಲರೊಂದಿಗೂ ಅನ್ಯೋನತೆಯಿಂದ ಇದ್ದು, ಸುಖಿ ಜೀವನ ಸಾಗಿಸುವುದು ಲೇಸು. ವಸುದೈವ ಕುಟುಂಬಕಂ ಎಂಬ ಮಾತಿನಂತೆ ನಾವೆಲ್ಲರು ಒಂದು ಎಂಬ ಭಾವನೆ ಬರಬೇಕು. ಕುಟುಂಬದ ಹಿರಿಯರೋ, ಕಿರಿಯರೋ ತಪ್ಪುಗಳು ಮಾಡಿದರೆ ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಬೆಳೆಸಿಕೊಂಡು ಜೀವನ ಸಾಗಿಸದಾಗ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯ.

ಅಷ್ಟಕ್ಕೂ ನೆಮ್ಮದಿ, ಸಂತೋಷ ಇಲ್ಲದೇ ನೂರು ವರ್ಷ ಬದುಕಿದರು  ಪ್ರಯೋಜನವೇನು? ಕೊನೆ ಪಕ್ಷ ಹೇಳಿಕೊಳ್ಳಲು ಒಂದೆರೆಡು ಖುಷಿಯ ನೆನಪುಗಳಾದರೂ ಉಳಿಯಬೇಕಲ್ಲವೇ..

11 ಕಾಮೆಂಟ್‌ಗಳು:

Mahesh R ಹೇಳಿದರು...

ತುಂಬಾ ಚೆನ್ನಾಗಿದೆ

Ananthakumarhs ಹೇಳಿದರು...

Good message

Ananthakumarhs ಹೇಳಿದರು...

Ananthkumar.. .. .super article

Ramesh ಹೇಳಿದರು...

Awesome sir...ಒಳ್ಳೆಯ ಸಂದೇಶ ಜೀವನ ಹಾಗೂ ಸಂಬಂಧಗಳ ಬಗ್ಗೆ....👍

Unknown ಹೇಳಿದರು...

A truth about life

Unknown ಹೇಳಿದರು...

ತುಂಬಾ ಚೆನ್ನಾಗಿದೆ ಸರ್ ಲೇಖನ

Unknown ಹೇಳಿದರು...

ಈಗಿನ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸರ್

ನಚಿಕೇತ ಹೇಳಿದರು...

ಎಲ್ಲಾ ಇದ್ದು ಇಲ್ಲದಂಥ ಸಮಾಜ

Gangadhara N ಹೇಳಿದರು...

Superb sir

Chinmaya A C ಹೇಳಿದರು...

Nice message to lead life peacefully.

Unknown ಹೇಳಿದರು...

Super