ಭಾನುವಾರ, ಜುಲೈ 19, 2020

ಹುಟ್ಟು - ಸಾವು ನಡುವೆ ಇರುವುದೇ ಜೀವನ ?


⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಪ್ರತಿಯೊಬ್ಬರಿಗೂ ವರ್ಷಕ್ಕೊಮ್ಮೆ ಮಾತ್ರ ಬರುವ ಹಬ್ಬವೆಂದರೆ ಅದು ಹುಟ್ಟುಹಬ್ಬ ಅಥವಾ ಬರ್ತ್ ಡೇ. ಆದರೆ ಕೆಲವರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ಇರುವುದಿಲ್ಲ, ನಾವು ಜೀವನದಲ್ಲಿ ಇಲ್ಲಿಯವರೆಗೂ ಏನು ಸಾಧನೆಯೇ ಮಾಡಿಲ್ಲವಲ್ಲ, ಆದ್ದರಿಂದ ಆಚರಿಸಿಕೊಳ್ಳುವ ಅಗತ್ಯವು ಇಲ್ಲ ಎಂದು ಸುಮ್ಮನೆಯಿದ್ದು ಬಿಡುತ್ತಾರೆ. ಮತ್ತೆ ಕೆಲವರು ಹುಟ್ಟುಹಬ್ಬವನ್ನು ವೈಭವ, ವರ್ಣರಂಜಿತವಾಗಿ ಆಚರಿಸಿಕೊಳ್ಳುವವರು ಇದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬರುವ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧನೆ, ಗೆಲುವುಗಳು ಅಗತ್ಯವೇಕೆ, ಆಚರಿಸಬೇಕೆಂಬ ಮನಸ್ಸಿದ್ದರೆ ಸಾಕು ಎಂಬ ಭಾವನೆ ಇವರದ್ದು.
ಆ ದಿನಗಳು ನನಗಿನ್ನು ನೆನಪಿದೆ, 30 ವರ್ಷಗಳ ಕಾಲ ನಾವು ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದಾಗ, ಅಲ್ಲಿ ವಾಸವಿದ್ದ ಕುಟುಂಬಗಳಲ್ಲಿನ ಯಾವ ಮಕ್ಕಳಿಗಾದರೂ ಹುಟ್ಟು ಹಬ್ಬ ಬಂದರೆ ಅವರಿಗೆ ಏನೋ ಒಂದು ರೀತಿ ಸಂತೋಷ, ಖುಷಿ. ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳು ಹೊಸ ಬಟ್ಟೆ ಧರಿಸಿ, 50 ಪೈಸೆನೋ, 1 ರೂಪಾಯಿದೋ ಚಾಕೋಲೆಟ್‍ಗಳನ್ನು ಖರೀದಿಸಿ, ಡಬ್ಬಿ ತುಂಬ ಹಾಕಿಕೊಂಡು, ಶಾಲೆಗೆ ಹೋಗಿ ತಮ್ಮ ಶಿಕ್ಷಕರಿಗೆ, ಸಹಪಾಠಿಗಳಿಗೆ ಕೊಟ್ಟು ಸಂಜೆ ವಾಪಸ್ ಮನೆಗೆ ಬಂದ ನಂತರ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಮನೆಗಳಿಗೆ ಹೋಗಿ, ಚಾಕೋಲೆಟ್ ಕೊಟ್ಟು ಅವರಿಂದ ಆಶೀರ್ವಾದ ಪಡೆಯುತ್ತಿದ್ದರು. ಆಶೀರ್ವಾದ ನೀಡುವವರು 10, 20 ರೂ.ಗಳನ್ನು ಹುಟ್ಟುಹಬ್ಬ ಆಚರಿಸಿಕೊಳ್ಳುವವರ ಕೈಗೆ ಕೊಡುತ್ತಿದ್ದರು. ಮತ್ತೆ ಕೆಲವರು ಚಿಕ್ಕ ಕೇಕ್ ಒಂದನ್ನು ತಂದು, ಅಕ್ಕಪಕ್ಕದ ಎಲ್ಲ ಮನೆಯವರನ್ನು ಕರೆದು, ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚಿ ಹುಟ್ಟು ಹಬ್ಬ ಆಚರಿಸುವ ಪದ್ದತಿಯು ಇತ್ತು.  
ಆದರೆ ಕಾಲ ಉರುಳಿತ್ತಿದ್ದಂತೆ, ವರ್ಷಗಳು ಕಳೆಯುತ್ತಿದ್ದಂತೆ ಹುಟ್ಟುಹಬ್ಬ ಆಚರಿಸುವ ವೈಖರಿಯು ಸಂಪೂರ್ಣವಾಗಿ ಬದಲಾಗಿದೆ. ಈಗಂತು ಹುಟ್ಟು ಹಬ್ಬ ಎಂದರೆ ಕೆಲವರಿಗೆ ಅದೊಂದು ದೊಡ್ಡ ಸೆಲ್‍ಬ್ರೆಷನ್, ತಮ್ಮ ಶಕ್ತಿ ತೋರಿಸುವ ಪ್ರದರ್ಶನವು ಹೌದು. ದೊಡ್ಡ ದೊಡ್ಡ ಗಾತ್ರದ, ಕೆ.ಜಿಗಟ್ಟಲೆಯ ಕೇಕ್ ತಂದು ಕಟ್ ಮಾಡುವುದು, ದೊಡ್ಡ ದೊಡ್ಡ ರೆಸಾರ್ಟ್, ಹೊಟೇಲ್ ಗಳಲ್ಲಿ ಸ್ನೇಹಿತರಿಗೆ, ಸಂಬಂಧಿಕರಿಗಾಗಿ ಪಾರ್ಟಿ ಆಯೋಜನೆ, ಕೆಲವರಂತೂ ತಾವು ವಾಸಿಸುವ ಪ್ರದೇಶದ ಸುತಮುತ್ತ್ತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಗಳನ್ನು ಹಾಕಿಸುತ್ತಾರೆ. ಅದರಲ್ಲೂ ಕೆಲವರು ಫ್ಲೆಕ್ಸ್ ಗಳಲ್ಲಿ ಹಾಕುವ ಬಡವರ ಬಂಧು, ಯುವಕರ ಕಣ್ಮಣಿ, ಆರಾಧ್ಯ ಧೈವ, ಬಡವರ ಉದ್ದಾರಕ, ರಾಜ್ಯ ಮುಖಂಡ ಹೀಗೆ ಹತ್ತಾರು ವಾಕ್ಯಗಳನ್ನು ಹಾಕಿಸಿಕೊಳ್ಳುತ್ತಾರೆ. ಇನ್ನು ದುಡ್ಡಿರುವ ಹಣವಂತರಂತೂ ಟಿ.ವಿ ವಾಹಿನಿ ಮತ್ತು ಪತ್ರಿಕೆಗಳಲ್ಲಿ ಪುಟದ ತುಂಬ ಹುಟ್ಟು ಹಬ್ಬದ ಜಾಹೀರಾತು ಮತ್ತು ಪೇಯ್ಡ್ ನ್ಯೂಸ್ ಬರೆಸಿಕೊಳ್ಳುತ್ತಾರೆ. ಕೆಲವರಂತೂ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಕಲರ್ ಕಲರ್ ಡಿಸೈನ್ ಪೋಸ್ಟರ್ ಮಾಡಿಸಿ ಶೇರ್ ಮಾಡುವ ಪದ್ದತಿಯು ಇದೆ. ಹುಟ್ಟು ಹಬ್ಬದ ಆಚರಣೆಗೆ ಲಕ್ಷಾಂತರ ರೂ. ಖರ್ಚು ಮಾಡುವ ಜನರು ಇದ್ದಾರೆ. 
ಒಮ್ಮೆ ನಮಗೆ ಪರಿಚಯವಿದ್ದ ವಿಶ್ವವಿದ್ಯಾಲಯದ ಪ್ರೊಪೆಸರ್‍ರೊಬ್ಬರ ಹುಟ್ಟುಹಬ್ಬವಿತ್ತು. ಅವರಿಗೆ ಹುಟ್ಟು ಹಬ್ಬದ ಶುಭಾಶಗಳನ್ನು ತಿಳಿಸಲು, ಅವರ ವಿಭಾಗಕ್ಕೆ ಹೋಗಿದ್ದೆವು. ಹಾಗೆ ಹೋಗುವಾ ಹೂವಿನ ಬೊಕ್ಕೆ ಮತ್ತು ಹಣ್ಣು, ಶಾಲು, ಹಾರ ತೆಗೆದುಕೊಂಡು ಹೋಗಿದ್ದೆವು. ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ನಂತರ, ಶಾಲು ಹಾಗೂ ಹಾರ ಹಾಕಲು ಹೋದಾಗ, ಅವರು ಒಂದೇ ಮಾತಿನಲ್ಲಿ ಹೇಳಿದರು, ನೋಡಿ ನೀವೆಲ್ಲಾ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಬಂದಿದ್ದೀರಾ ತುಂಬಾ ಸಂತೋಷ. ಆದರೆ ಈ ಹಾರ, ಶಾಲು ನಾನು ಹಾಕಿಸಿಕೊಳ್ಳುವುದಿಲ್ಲ ಎಂದು ಅಲ್ಲೇ ಇದ್ದ ಅವರ ವಿಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡುವವರನ್ನು ಕರೆದು ಅವರಿಗೆ ಹಾಕಿದರು. ಬಹಳ ವರ್ಷಗಳಿಂದ ನಮ್ಮ ವಿಭಾಗದಲ್ಲಿ ಈತ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾನೆ. ಈ ಗೌರವ ಇವನಿಗೆ ಸಲ್ಲಬೇಕು ಎಂದು ಹಾರ ಹಾಕಿ ಶಾಲು ಹೊದಿಸಿದರು. ಹಣ್ಣುಗಳನ್ನು ವಿಭಾದ ವಿದ್ಯಾರ್ಥಿಗಳನ್ನು ಕರೆದು ಎಲ್ಲರೂ ಹಂಚಿಕೊಳ್ಳಿ ಎಂದು ಕಳುಹಿಸಿಕೊಟ್ಟರು. 
ಆ ನಂತರ ಅವರು ಹೇಳಿದ ಮಾತುಗಳು, ನನಗೆ ವಯಸ್ಸು 45 ವರ್ಷವಾಗಿದೆ, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ದ್ದಾನೆ. ಎಷ್ಟೋ ಜನ ನನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿದ್ದಾರೆ. ಆದರೂ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಾದರೆ ವೈಯಕ್ತಿಕವಾಗಿ ಸಮಾಜಕ್ಕೆ ಏನಾದರೂ ಒಂದಷ್ಟು ಕೊಡುಗೆ ಕೊಟ್ಟಿದ್ದೇವೆ ಎಂಬ ತೃಪ್ತಿಯಾದಾಗ ಮಾತ್ರ ಆಚರಿಸಲು ಮನಸ್ಸು ಬರುತ್ತದೆ.  ಆಡಂಬರದ ಹುಟ್ಟುಹಬ್ಬಗಳು ಆಚರಿಸಿಕೊಳ್ಳುವ ಯೋಗ್ಯತೆ ನನಗಿದೆ ಎಂದು ನಾನು ಭಾವಿಸಿಲ್ಲ, ಆದ್ದರಿಂದ ಇಲ್ಲಿಯವರೆಗೂ ಹುಟ್ಟು ಹಬ್ಬ ಆಚರಿಸಿಲ್ಲ, ಮುಂದೆ ಯಾವಾಗಾದರೂ ಜೀವನದಲ್ಲಿ ಸಾರ್ಥಕತೆ ಕಂಡಾಗ ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಗಮನಾರ್ಹ ಅಂಶವೆಂದರೆ ಕೆಲವರು ಹುಟ್ಟಿದ ದಿನ ಮತ್ತು ನಿಧನ ಹೊಂದಿದ ದಿನಗಳು ಇತಿಹಾಸದ ಪುಟಗಳಲ್ಲಿ ಭದ್ರವಾಗಿ ದಾಖಲಾಗುತ್ತವೆ. ಅಪ್ರತಿಮ ಸಾಧನೆ, ತ್ಯಾಗ, ಸಾಮಾಜಿಕ
ಕಾರ್ಯಗಳ ಕಾರಣದಿಂದ ಕೆಲವರ ಹುಟ್ಟಿದ ದಿನಗಳನ್ನು ಇಡೀ ರಾಷ್ಟ್ರವೇ ನೆನಪಿನಲ್ಲಿಟ್ಟುಕೊಂಡು,ಆಚರಿಸುವಂತಾಗುತ್ತದೆ.ಇಂತವರ್ಯಾರು ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿಕೊಂಡು ಹುಟ್ಟುಹಬ್ಬ ಪ್ರಚಾರ ಮಾಡಿದವರಂತು ಅಲ್ಲ, ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟವರು ಅಲ್ಲ.ಯುವಕರ ಶಕ್ತಿ, ಸ್ಪೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಪಶ್ಚಿಮ ಬಂಗಾಳದ ಕಲ್ಕತ್ತೆಯಲ್ಲಿ ಜನವರಿ 12, 1863 ರಲ್ಲಿ ಜನಿಸಿದ್ದರು. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರು ಹುಟ್ಟಿದ ದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತೇವೆ. ಯುವಕರಿಗೆ ಸ್ಪೂರ್ತಿ ತುಂಬುವ ಕಾರ್ಯಕ್ರಮಗಳು ಸಾಕಷ್ಟು ಆಯೋಜನೆಗೊಳ್ಳುತ್ತದೆ. ಅಂದು ದೇಶದ ಎಷ್ಟೋ ಸ್ಥಳಗಳಲ್ಲಿ ವಿವೇಕಾನಂದರಿಗೆ ಗೌರವ ಸೂಚಿಸುವ ಕೆಲಸವಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ಗುಜರಾತಿನ ಪೋರ್‍ಬಂದರಿನಲ್ಲಿ ಅಕ್ಟೋಬರ್ 2, 1869 ರಲ್ಲಿ ಜನಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಹಾಗೂ ಅವರು ಬದುಕಿನ ಕೊನೆಯವರೆಗೂ ದೇಶಕ್ಕಾಗಿ ಜೀವನ ಅರ್ಪಿಸಿದ ತ್ಯಾಗದ ಫಲವಾಗಿ ದೇಶವ್ಯಾಪಿ ಅಕ್ಟೋಬರ್ 2ರಂದು ಅವರ ಜನ್ಮ ದಿನ ಆಚರಿಸುತ್ತೇವೆ. ಹಾಗೆಯೇ ಆ ದಿನದಂದೆ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ದೇಶದ ಎರಡನೇ ರಾಷ್ಟ್ರಪತಿ, ಮೊದಲ ಉಪರಾಷ್ಟ್ರಪತಿ, ತತ್ವಜ್ಞಾನಿ, ಪ್ರೊಪೆಸರ್, ಉಪಕುಲಪತಿಯಾಗಿದ್ದ ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರು ತಮಿಳುನಾಡಿನ ತಿರುತ್ತನಿಯಲ್ಲಿ ಸೆಪ್ಟೆಂಬರ್ 5, 1888ರಲ್ಲಿ ಜನ್ಮ ತಾಳಿದ್ದರು. ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರು ಶಿಕ್ಷಕ ವೃತ್ತಿಯ ಮೂಲಕ ಎಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸಿದವರು. ಅವರ ಸ್ಮರಣಾರ್ಥ ಅವರು ಹುಟ್ಟಿದ ಸೆಪ್ಟೆಂಬರ್ 5 ರಂದು ದೇಶಾವ್ಯಾಪಿ ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಹಾಗೆ ಸರ್ವೆಪಲ್ಲಿ ರಾಧಕೃಷ್ಣರವರಿಗೆ ದೇಶದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯು ಬಂದಿತ್ತು. 
ಶೋಷಿತರ ಪರವಾಗಿ ಬಲವಾದ ಧ್ವನಿಯೆತ್ತಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರು ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ಏಪ್ರಿಲ್ 14, 1891 ರಂದು. ಕಷ್ಟಗಳಲ್ಲಿ ಹುಟ್ಟಿದರೂ ಉನ್ನತ ವ್ಯಾಸಾಂಗ ಪಡೆದು ಎಷ್ಟೋ ಜನರ ಬಾಳು ಬೆಳಗಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ರಾಷ್ಟ್ರಾದ್ಯಂತ ಎಲ್ಲಾ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲೂ ಆಚರಿಸಲಾಗುತ್ತದೆ.
ದೇಶದ ಶ್ವೇತ ಕ್ರಾಂತಿ ಪಿತಾಮಹ ಡಾ.ವರ್ಗೀಸ್ ಕುರಿಯನ್, ಅವರು ಕೇರಳದ ಕೊಜಿಕೊಡ್ ನಲ್ಲಿ ನವೆಂಬರ್ 26, 1921 ರಂದು ಜನನ. ಇಂದು ದೇಶದಲ್ಲಿ ಹೈನುಗಾರಿಕೆ ಅಭಿವೃದ್ದಿಯಾಗಲು ಮೂಲ ಕಾರಣ ವರ್ಗೀಸ್ ಕುರಿಯನ್. ರೈತರು ಇಂದು ಹೈನುಗಾರಿಕೆಯ ಮೂಲಕ ಆರ್ಥಿಕ ಸದೃಢರಾಗಿದ್ದಾರೆಂದರೆ ಅದರ ಹಿಂದಿನ ಶ್ರಮ ವರ್ಗೀಸ್ ಕುರಿಯನ್ ಅವರದ್ದು. ಅವರ ಸೇವೆಯ ನೆನಪಿಗಾಗಿ ದೇಶದ್ಯಾಂತ ಅವರ ಜನ್ಮದಿನದಂದು ರಾಷ್ಟ್ರೀಯ ಹಾಲಿನ ದಿನವನ್ನಾಗಿ ಆಚರಿಸಲಾಗುತ್ತದೆ. 
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಪ್ರೊಪೆಸರ್ ಆಗಿದ್ದ ಎಸ್.ಆರ್ ರಂಗನಾಥನ್ ಅವರು ಹುಟ್ಟಿದ್ದು ತಮಿಳುನಾಡಿನ ಶಿಯಾಲಿಯಲ್ಲಿ ಆಗಸ್ಟ್, 1892ರಲ್ಲಿ. ಅವರು ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಮಾಡಿದ ಬಹುದೊಡ್ಡ ಸಾಧನೆಗಾಗಿ ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರ ನೆನಪಿಗಾಗಿ ಆಗಸ್ಟ್ 12 ರಂದು ರಾಷ್ಟ್ರೀಯ ಗ್ರಂಥಾಲಯ ದಿನವನ್ನಾಗಿಯೂ ಆಚರಿಸಲಾಗುತ್ತದೆ. 
ದೇಶದ ಖ್ಯಾತ ಹಾಕಿ ಆಟಗಾರರಾಗಿದ್ದ ಧ್ಯಾನ್ ಚಂದ್ ರವರು ಹುಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಗಸ್ಟ್ 29, 1905ರಲ್ಲಿ. ಹಾಕಿ ಆಟ ಹಾಗೂ ಭಾರತೀಯ ಕ್ರೀಡಾ ವಲಯಕ್ಕೆ ಧ್ಯಾನ್ ಚಂದ್ ಮಾಡಿದ ಸೇವೆಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ಶಾಸ್ತ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರಣ ಅಂದು ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ರವರು ಹುಟ್ಟಿದ ದಿನ. ಅವರು ತಮಿಳುನಾಡಿನ ಇರೋಡ್ ನಲ್ಲಿ ಡಿಸೆಂಬರ್ 22, 1887ರಲ್ಲಿ ಜನ್ಮ ತಾಳಿದ್ದರು.
ಎಂ.ಹೆಚ್ ಮರಿಗೌಡರನ್ನು ತೋಟಗಾರಿಕೆ ಕ್ಷೇತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಆಗಸ್ಟ್ 8, 1916 ರಂದು. ಇವರು ತೋಟಗಾರಿಕೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಆಗಸ್ಟ್ 8 ರಂದು ರಾಷ್ಟ್ರೀಯ ತೋಟಗಾರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.
ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಎಷ್ಟೋ ಜನ ಸಾಧಕರು ತಮ್ಮ ಜೀವನದಲ್ಲಿ ಒಮ್ಮೆಯು ಹುಟ್ಟು ಹಬ್ಬ ಆಚರಿಸಿಕೊಂಡಿರುವುದಿಲ್ಲ. ಆದರೆ ಅವರು ಮಾಡಿದ ಸಾಧನೆಗಳು, ದೇಶಕ್ಕಾಗಿ ದುಡಿದ ಕಾರಣದಿಂದ ಅವರ ಹುಟ್ಟು ಹಬ್ಬವನ್ನು ಸ್ವತಹ ಭಾರತ ದೇಶವೇ ಶಾಶ್ವತವಾಗಿ ಆಚರಿಸುತ್ತದೆ, ಸ್ಮರಿಸುತ್ತದೆ. ಇಂತಹ ಸಾಧಕರು ತಮ್ಮ ಹುಟ್ಟಿದ ದಿನಗಳನ್ನು ಇತಿಹಾಸ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ ಕೀರ್ತಿ ಇವರದ್ದು.  
ವಾಸ್ತವವೆಂದರೆ ನಮ್ಮ ಗುರಿ, ಸಾಧನೆ ಮಾಡಲು ಇರುವ ಸಮಯವೆಷ್ಟೆಂದರೆ ನಮ್ಮ ಹುಟ್ಟಿದ ದಿನ ಮತ್ತು ಸಾವಿನ ದಿನದ ಮಧ್ಯೆ ಸಿಗುವ ಅಲ್ಪ ಸಮಯ ಮಾತ್ರ. ನಮಗೆ ಸಿಗಬಹುದಾದ ಆ ಕಡಿಮೆ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಗುರಿ ತಲುಪುದರ ಜೊತೆಗೆ ಸೇವಾ ಮನೋಭಾವ ಹೊಂದಿದಾಗ ಮಾತ್ರ ನಮ್ಮ ಬರ್ತಡೇಟ್ ಶಾಶ್ವತವಾಗಿ ನೆಲೆಯೂರುತ್ತದೆ. 
ಒಬ್ಬ ಯುವಕ ತನ್ನ ಬೈಕ್ ಮೇಲೆ ಈಗೆ ಬರೆದುಕೊಂಡಿದ್ದ, ನಮ್ಮ ಹುಟ್ಟು, ಸಾವು ಎರಡು ಇತಿಹಾಸವಾಗಬೇಕು. ಅದರರ್ಥ ನಾವು ಜೀವನದಲ್ಲಿ ಏನಾದರೊಂದು ಸಾಧನೆ ಮಾಡಿ, ಸಮಾಜಕ್ಕೆ ಅರ್ಪಿಸಿದಾಗ ಮಾತ್ರ ನಮ್ಮ ಹುಟ್ಟು ಮತ್ತು ಸಾವು ದೇಶಕ್ಕೆ ನೆನಪಿರುತ್ತದೆ. ಇಲ್ಲದೇ ಹೋದರೆ ನಾವು ಸತ್ತ ನಂತರ ನಮ್ಮ ಮನೆಗಳಲ್ಲಿ ಹಾಕುವ ಪೋಟೋದಲ್ಲಿ ಮಾತ್ರ ನಮ್ಮ ಹುಟ್ಟು ಮತ್ತು ಸಾವಿನ ದಿನಾಂಕ ಕಾಣುತ್ತದೆ ಅಷ್ಟೇ ಎಂದು. 
ಹುಟ್ಟು ಹಬ್ಬ ಆಚರಿಸಿಕೊಳ್ಳುವುದೇ ತಪ್ಪೆಂದು ಹೇಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ವಿಚಾರವು ಹೌದು. ಆ ದಿನ ಪ್ರತಿಯೊಬ್ಬ ವ್ಯಕ್ತಿಗೂ ಖುಷಿಯಿಂದ ಇರಲು ಸಿಗುವ ಒಂದು ದಿನ. ಆದರೆ ಹುಟ್ಟು ಹಬ್ಬ ಯಾವತ್ತೂ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿದ್ದಾಗ ಮಾತ್ರ ನಮಗೆ ವೈಯಕ್ತಿಕವಾಗಿ ಬೆಲೆ ಬರುತ್ತದೆ, ಸಾಮಾಜಿಕವಾಗಿ ಗೌರವ ಸಿಗುತ್ತದೆ. ಆಡಂಬರದ ಹಾಗೂ ಪ್ರಪಂಚದಲ್ಲಿ ಯಾರಿಗೂ ಹುಟ್ಟ ಹಬ್ಬ ಬರುವುದೇ ಇಲ್ಲ ಎಂಬ ಧೋರಣೆಯಿಂದ ಆಚರಿಸುವುದು ಮಾತ್ರ ತಪ್ಪು. ಹುಟ್ಟುಹಬ್ಬದ ದಿನದಂದು ಬಬ್ಬರಿಗಾದರೂ ಸಹಾಯವಾಗುವ ರೀತಿಯಲ್ಲಿ ಸರಳವಾಗಿ ಆಚರಿಸಿಕೊಂಡರೆ ಸಿಗುವ ಗೌರವ ಹೆಚ್ಚು.

7 ಕಾಮೆಂಟ್‌ಗಳು:

Unknown ಹೇಳಿದರು...

Well side br

Chinmaya A C ಹೇಳಿದರು...

Very nice written 👍🏻

Unknown ಹೇಳಿದರು...

ಹೌದು ಸರ್ ಸತ್ಯ ಸತ್ಯತೆ

Unknown ಹೇಳಿದರು...

ಹೌದು ಸರ್ ಸತ್ಯ ಸತ್ಯತೆ

Prajval ಹೇಳಿದರು...

👌 very nice

Mohan Kumar S Naik ಹೇಳಿದರು...

ತುಂಬಾ ಅಧ್ಬುತವಾದ ಮಾಹಿತಿ ಸರ್...
ನಿಮ್ಮ ಲೇಖನದಿಂದ ಇನ್ನಷ್ಟು ಖುಷಿಯಾಗಿದೆ..

Malur shyam ಹೇಳಿದರು...

ತುಂಬಾ ಚೆನ್ನಾಗಿದೆ ಸರ್... 👌👌👌

👉 ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು
ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ
'ಜನ್ಮದಿನ'. ✍️ ಬೀchi..