⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಇಡೀ ವಿಶ್ವದಲ್ಲಿನ ಬಹುತೇಕರು ತಮ್ಮ ಜೀವನದಲ್ಲಿ ಗೆಲುವುಗಿಂತ ಹೆಚ್ಚಾಗಿ ಸೋಲುಗಳ ಸಹವಾಸವನ್ನೇ ಮಾಡಿರುತ್ತಾರೆ. ಶಿಕ್ಷಣ, ಉದ್ಯೋಗ, ಕುಟುಂಬ ವ್ಯವಸ್ಥೆ ಹಾಗೂ ಜೀವನದ ಮತ್ತಿತರ ಸಂದರ್ಭಗಳಲ್ಲಿ ಧಿಡೀರ್ ಎಂದು ಪ್ರತ್ಯಕ್ಷವಾಗುವ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮಸ್ಥೈರ್ಯ ಕುಗ್ಗಿ ಸೋಲನ್ನು ಅನಿವಾರ್ಯವಾಗಿ ಒಪ್ಪಿಕೊಂಡಿರುತ್ತಾರೆ.
ಹಾಗೆ ನೋಡಿದರೆ ಸೋಲನ್ನು ಯಾರು ಇಷ್ಟಪಡುವುದಿಲ್ಲ, ಅದರ ಸಮೀಪಕ್ಕೂ ಹೋಗಲು ಮನಸ್ಸು ಮಾಡಲ್ಲ. ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಗೆಲುವೇ ಬೇಕು. ಏಕೆಂದರೆ ಸೋತಾಗ ಆಗುವ ನೋವು, ನಷ್ಟವನ್ನು ಸರಿದೂಗಿಸುವ ಶಕ್ತಿ ಬಹುತೇಕರಿಗೆ ಇರುವುದಿಲ್ಲ. ತನ್ನ ಇಡೀ ಜೀವನದಲ್ಲಿ ಸೋಲುಗಿಂತ ಗೆಲುವೇ ಬರಲಿ ಎಂದು ಎಲ್ಲರೂ ಪ್ರತಿದಿನವೂ ದೇವರ ಬಳಿ ಬೇಡಿಕೊಳ್ಳುವುದು ಸಹಜ. ಆದರೆ ಎಲ್ಲಾ ವಿಷಯಗಳಲ್ಲೂ ಗೆಲುವು ಪಡೆಯುತ್ತೇವೆ ಎಂದು ಹೇಳಲು ಅಸಾಧ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಸೋಲು-ಗೆಲುವು ನಿರ್ಧಾರವಾಗುತ್ತದೆ.
ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರಾದ ಬಿಲ್ ಗೇಟ್ಸ್ ರನ್ನು ಮ್ಯಾಗಜೀನ್ನ ಪತ್ರಕರ್ತರೊಬ್ಬರು ಸಂದರ್ಶಿಸುವಾಗ, ನಿಮ್ಮ ಅತ್ಯಂತ ಆತ್ಮೀಯರು ಯಾರು ಎಂದು ಪ್ರಶ್ನೆ ಕೇಳಿದಾಗ, ಬಿಲ್ ಗೇಟ್ಸ್ ಒಂದು ಸೆಕೆಂಡ್ ಕೂಡ ತಡಮಾಡದೇ My dearest friend is my Failure ಎಂದರಂತೆ. ಏಕೆಂದರೆ ನಾನು ಮೈಕ್ರೋಸಾಫ್ಟ್ ಕಂಪನಿ ಪ್ರಾರಂಭಕ್ಕೂ ಮುನ್ನ ಹಾಗೂ ನಂತರ ಹಲವು ಸೋಲುಗಳನ್ನು ಎದುರಿಸಬೇಕಾಯಿತು. ಸೋಲುಗಳಿಂದಲೇ ನಾನು ಜೀವನ ಪಾಠ ಕಲಿತು, ನನ್ನ ಭವಿಷ್ಯವನ್ನು ರೂಪಿಸಿಕೊಂಡೆ. ಬಹುಃಶ ನನಗೆ ಸೋಲುಗಳು ಬರದಿದ್ದರೆ, ಮೈಕ್ರೋಸಾಫ್ಟ್ ಕಂಪನಿಯನ್ನು ಕಟ್ಟುತ್ತಿರಲಿಲ್ಲ, ಶ್ರೀಮಂತನು ಆಗುತ್ತಿರಲಿಲ್ಲ, ನೀವು ನನ್ನನ್ನು ಸಂದರ್ಶಿಸುವ ಅಗತ್ಯವು ಬರುತ್ತಿರಲಿಲ್ಲ. ಆದ್ದರಿಂದ ನನ್ನ ಸೋಲುಗಳೇ ನನಗೆ ಆತ್ಮೀಯ ಸ್ನೇಹಿತರು ಎಂದು ಉತ್ತರಿಸಿದ್ದರಂತೆ.
ಒಮ್ಮೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಘಟನೆಯೊಂದು ಆಧ್ಯಾತ್ಮಿಕತೆಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಹಿರಿಯ ಸ್ವಾಮೀಜಿಯೊಬ್ಬರು ಬಂದಿದ್ದರು. ಅವರು ತಮ್ಮ ಭಾಷಣದಲ್ಲಿ ಗೆಲುವು ಮತ್ತು ಸೋಲು ಈ ಎರಡರ ನಡುವಿನ ವ್ಯತ್ಯಾಸ ಮತ್ತು ಅವುಗಳ ಮಹತ್ವದ ಬಗ್ಗೆ ಸಾಕಷ್ಟು ಉದಾಹರಣೆಗಳ ಸಮೇತ ವಿಸ್ತøತವಾಗಿ ವಿವರಿಸಿದರು.
ಅವರು ಮಾತು ಆರಂಭಿಸಿ, ಮುಖ್ಯವಾಗಿ ಎಸೆಸ್ಸೆಲ್ಸಿ, ಪಿ.ಯು.ಸಿ ತರಗತಿಗಳ ಫಲಿತಾಂಶ ಬಂದಾಗ ಟಿ.ವಿ ಹಾಗೂ ದಿನಪತ್ರಿಕೆ ಓದಲು ನನಗೆ ಬೇಸರ ಮತ್ತು ಭಯವಾಗುತ್ತದೆ. ಕಾರಣ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವು ಅಥವಾ ಕಡಿಮೆ ಅಂಕಗಳು ಬಂತೆಂದು ಒಂದೇ ಕಾರಣಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಅಲ್ಲಿಲ್ಲಿ ನಡೆಯುತ್ತಲೇ ಇರುತ್ತದೆ. ಅಂತಹ ಸುದ್ದಿಗಳನ್ನು ನೋಡಲು ಮತ್ತು ಓದಲು ನನಗೆ ನೋವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಮಕ್ಕಳಿಗೆ ಅವರು ಕೇಳುವ ಮುನ್ನ ವಸ್ತು, ತಿಂಡಿ, ಬಟ್ಟೆ, ಹಣ ಸೇರಿದಂತೆ ಅವರು ಇಷ್ಟಪಡುವ ಎಲ್ಲವನ್ನು ಕೊಡುತ್ತಿದ್ದೇವೆ, ಆದರೆ ಸೋಲನ್ನು ಸ್ವೀಕರಿಸುವ ಮಾನಸಿಕ ಶಕ್ತಿ ಮಾತ್ರ ಮೂಡಿಸಲು ಇಂದಿನ ಶಿಕ್ಷಣ ವ್ಯವಸ್ಥೆ, ಕುಟುಂಬ, ಸಮಾಜ ಸೇರಿದಂತೆ ಎಲ್ಲರೂ ವಿಫಲರಾಗಿದ್ದೇವೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಬರಬೇಕು ಎನ್ನುವುದು ತಪ್ಪಲ್ಲ, ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಬೇಕಾದರೆ ಅಂಕಗಳ ಪಾತ್ರ ಮಹತ್ವವಿದೆ. ಆದರೆ ಅಂಕಗಳು ಮಾತ್ರ ಬದುಕು ರೂಪಿಸುತ್ತವೆ, ಸಾಧನೆ ಹಾದಿ ಹಿಡಿಯಲು ಸಹಕಾರಿಯಾಗುತ್ತದೆ ಎನ್ನುವ ಕಲ್ಪನೆಯೇ ತಪ್ಪು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ಅನಾಹುತ ಮಾಡಿಕೊಳ್ಳ ಬೇಕೆಂಬ ಮನಸ್ಥಿತಿ ನಿರ್ಮಾಣದ ಹಿಂದೆ ಎಲ್ಲರ ಪಾತ್ರವು ಇದೆ ಎಂದು ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ಇಂದಿನ ವ್ಯವಸ್ಥೆ ಹೇಗಿದೆಯೆಂದರೆ ಸೋಲನ್ನು ಸ್ವೀಕರಿಸುವ ಮನೋಧೈರ್ಯ ಯಾರಿಗೂ ಇಲ್ಲದಾಗಿದೆ. ಸೋಲನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದಿದ್ದರೆ, ಗೆಲುವು ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಹಾಕಿದರು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ, ಸೋಲೆಂದು ಪರಿಗಣಿಸದೆ, ತಾಳ್ಮೆ ವಹಿಸಿ, ಶ್ರದ್ದೆಯಿಂದ ಮತ್ತೊಮ್ಮೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಇಂದು ಹಲವರು ಐ.ಎ.ಎಸ್, ಐ.ಪಿ.ಎಸ್, ವೈದ್ಯರು, ಇಂಜಿನಿಯರ್, ಅಧ್ಯಾಪಕ, ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಕೂಡ ಸೋಲು, ಗೆಲುವು ಎರಡನ್ನು ಸಮಾನವಾಗಿ ಬರಮಾಡಿಕೊಳ್ಳುವ ವ್ಯಕ್ತಿತ್ವ ಉಳ್ಳವರು. ಗೆದ್ದಾಗ ಅಹಂಕಾರ, ಗರ್ವ ತೋರಿಸದೆ ಸೋತಾಗ ಕುಗ್ಗದೆ, ಧೃತಿಗೆಡದೆ ಜೀವನ ಸಾಗಿಸಿದವರು. ಆ ಕಾರಣದಿಂದಲೇ ಪರೀಕ್ಷೆಯಲ್ಲಿ ಒಮ್ಮೆ ಅನುತ್ತೀರ್ಣರಾದರೂ, ಜೀವನದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಬಣ್ಣಿಸಿದರು.
ಕೆಲ ತಿಂಗಳ ಹಿಂದೆ ವಿದೇಶಿ ಮೂಲದ ವೆಬ್ಸೈಟ್ ನಲ್ಲಿ ಸುದ್ದಿಯೊಂದು ಪ್ರಕಟವಾಗಿ ತ್ತು. ಅದೆನೆಂದರೆ ಒಬ್ಬ ವ್ಯಕ್ತಿ ತನ್ನ ಸೆಲ್ಪಿ ಚಿತ್ರವೊಂದನ್ನು ತೆಗೆದು ಫೇಸ್ ಬುಕ್ ನಲ್ಲಿ ಹಂಚುತ್ತಾನೆ. ಆ ಚಿತ್ರಕ್ಕೆ ತನ್ನ ಫೇಸ್ ಬುಕ್ನಲ್ಲಿದ್ದ 4500 ಗೆಳೆಯರ ಪೈಕಿ ಹೆಚ್ಚಿನ ಗೆಳೆಯರು ಲೈಕ್ ಮತ್ತು ಕಮೆಂಟ್ ಮಾಡುತ್ತಾರೆ ಎಂದು ಆತ ಭಾವಿಸಿದ್ದ. ಆದರೆ ಆತನ ಚಿತ್ರಕ್ಕೆ 15 ಲೈಕ್ 2 ಕಮೆಂಟ್ ಗಳು ಮಾತ್ರ ದಾಖಲಾಗಿತ್ತು. ಇದರಿಂದ ಆತನಿಗೆ ತೀವ್ರ ಬೇಸರವಾಗಿ ಆತ್ಮಹತ್ಯೆಗೆ ಶರಣಾಗಿದ್ದ. ಕಾರಣ ಫೇಸ್ ಬುಕ್ ನಲ್ಲಿ ತನ್ನ ಚಿತ್ರಕ್ಕೆ ಹೆಚ್ಚಿನ ಲೈಕ್, ಕಮೆಂಟ್ ಗಳು ಬರದಿರುವುದರಿಂದ ನನ್ನ ಸ್ನೇಹಿತರ ಮುಂದೆ ನನಗೆ ಅವಮಾನವಾಗಿದೆ. ಇದು ನನ್ನ ಸೋಲು ಎಂದು ಆತ ಅಂದುಕೊಂಡಿದ್ದ. ಇವತ್ತಿನ ಯಂಗ್ ಜನರೇಶನ್ ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಮ್ ಮತ್ತಿತರಗಳಲ್ಲಿ ಲೈಕ್ ಮತ್ತು ಕಮೆಂಟ್ ಗಳು ಬರದೇ ಹೋದರೆ ಅದು ಅವಮಾನ, ಸೋಲು ಎನ್ನುವ ಮಟ್ಟಿಗೆ ತಲುಪಿರುವುದು ಮಾತ್ರ ವಿಪರ್ಯಾಸ.
ಖ್ಯಾತ ಬಾಲಿವುಡ್ ಚಿತ್ರ ನಟ ಅಮಿತಾ ಬಚ್ಚನ್ ಹಲವು ಸೋಲುಗಳನ್ನು ಕಂಡ ಮೇಲೆ ಗೆಲುವಿನ ರುಚಿ ಕಂಡವರು. ಅತಿ ಉದ್ದ ಹಾಗೂ ನೋಡಲು ಆಕರ್ಷಕವಾಗಿಲ್ಲ ಎಂಬ ಕಾರಣಕ್ಕೆ ಚಲನಚಿತ್ರಗಳಲ್ಲಿ ಅವಕಾಶ ನೀಡಲು ನಿರ್ದೇಶಕರು ಹಿಂದೇಟು ಹಾಕಿದ್ದರು. ರೇಡಿಯೋ ಜಾಕಿಯಾಗೋಣ (ಆರ್.ಜೆ) ಎಂದು ಪ್ರಯತ್ನ ಪಟ್ಟರು ಧ್ವನಿ ಚೆನ್ನಾಗಿಲ್ಲ ಎಂದು ತಿರಸ್ಕರಿಸಲ್ಪಟಿದ್ದರು. ಹಲವು ವರ್ಷಗಳ ಸತತ ಪರಿಶ್ರಮದ ನಂತರ ಸಾಥ್ ಹಿಂದುಸ್ತಾನಿ ಎಂಬ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಆ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ. ಅಮಿತಾ ಬಚ್ಚನ್ರ ಕೆಲ ಚಿತ್ರಗಳು ಪ್ಲಾಪ್ ಆಯಿತು. ಇದು ಅವರ ಕೆರಿಯರ್ ಬದುಕಿಗೆ ಸ್ವಲ್ಪ ಹಿನ್ನಡೆ ತಂದುಕೊಟ್ಟರು, ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಹಲವು ವರ್ಷಗಳ ತಪಸ್ಸು ಮಾಡಬೇಕಾಯಿತು. ಸೋಲುಗಳನ್ನು ಸ್ವಾಗತಿಸುವ ಗುಣ ಅಮಿತಾ ಬಚ್ಚನ್ ಹೊಂದಿರದಿದ್ದರೆ ಬ್ಲಾಕ್, ಡಾನ್, ಫಾ, ಪೀಕು, ಸರ್ಕಾರ್, ಶೋಲೆ, ಜಂಜೀರ್, ಖಾಕಿ, ತ್ರಿಶೂಲ್, ದೇವ್, ದೋಸ್ತಾನ, ಬಾಂಬೆ ಟು ಗೋವಾ, ಶಾನ್ ಸೇರಿದಂತೆ ಮತ್ತಿತರ ಹಿಟ್ ಚಿತ್ರಗಳು ತೆರಕಾಣಲು ಸಾಧ್ಯವಾಗುತ್ತಿರಲಿಲ್ಲ. ಅಮಿತಾ ಬಚ್ಚನ್ ಸೋಲುಗಳಿಗೆ ತಲೆಬಗ್ಗಿಸಿದ್ದರೆ ಬಾಲಿವುಡ್ ನ ಸ್ಟಾರ್ ನಟ ಹಾಗೂ ಶಹೆನ್ ಷಾ ಎಂದು ಗುರ್ತಿಸಿಕೊಳ್ಳಲು ಎಲ್ಲಿ ಸಾಧ್ಯವಾಗುತ್ತಿತ್ತು.
ಕೆ.ಎಫ್.ಸಿ ರೆಸ್ಟೋರೆಂಟ್ ಗಳ ಸಂಸ್ಥಾಪಕ ಕರ್ನಲ್ ಸ್ಯಾಂಡರ್ಸ್ ರ ಕಥೆ ಎಲ್ಲರಿಗೂ ಆತ್ಮಸ್ಥೈರ್ಯ ತುಂಬುತ್ತದೆ. ಸೋಲುಗಳು ಅವರ ಬೆನ್ನ ಹಿಂದೆ ಸದಾ ಬಿದ್ದರು, ಬಗ್ಗಲಿಲ್ಲ. ಅಮೆರಿಕಾದ ಹೆನ್ರಿವೈಲ್ ನಲ್ಲಿ 1890ರಲ್ಲಿ ಹುಟ್ಟಿದ ಸ್ಯಾಂಡರ್ಸ್ ತನ್ನ 6 ವರ್ಷ ವಯಸ್ಸಿದಾಗಲೇ ತಂದೆಯನ್ನು ಕಳೆದುಕೊಂಡರು. 16 ವರ್ಷ ವಯಸ್ಸಿನಲ್ಲಿ ಅಮೆರಿಕಾ ಸೇನೆಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡರು, ಅನಿವಾರ್ಯ ಕಾರಣಗಳಿಂದ ಒಂದೇ ವರ್ಷಕ್ಕೆ ಕೆಲಸ ಕಳೆದು ಕೊಳ್ಳಬೇಕಾಯಿತು. 18ನೇ ವರ್ಷಕ್ಕೆ ಮದುವೆಯಾಗಿದ್ದರಿಂದ ಕುಟುಂಬದ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲ ಕಾಲ ರೈಲ್ವೆಯಲ್ಲಿ ಕೂಲಿಯಾಗಿ ಕೆಲಸ, ಆನಂತರ ಜೀವೆ ವಿಮೆಯಲ್ಲಿ ಕೆಲಸ ಈಗೆ ಹತ್ತು ಹಲವು ಕಡೆ ಕೆಲಸ ನಿರ್ವಹಿಸುವಲ್ಲೇ ಜೀವನ ಕಳೆಯುತ್ತದೆ.
60 ವರ್ಷ ವಯಸ್ಸಾದ ನಂತರ ಎಲ್ಲವೂ ಮುಗಿದೇ ಹೋಯಿತು, ಇನ್ನೇನು ಮಾಡಲು ಸಾಧ್ಯ ಎಂದೇ ಭಾವಿಸುತ್ತೇವೆ. ಆದರೆ ಸ್ಯಾಂಡರ್ಸ್ ತನ್ನ 65ನೇ ವಯಸ್ಸಿನಲ್ಲಿ ಸಾಧಿಸಬೇಕೆಂಬ ಛಲ ಹುಟ್ಟುತ್ತದೆ. ಸೋಲುಗಳಿಗೆ ಬ್ರೇಕ್ ಹಾಕಿ, ಇಳಿ ವಯಸ್ಸಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಆಲೋಚಿಸಿ ಫ್ರೈಡ್ ಚಿಕನ್ (ಖಾದ್ಯ-ಅಡುಗೆ) ತಯಾರಿಸಿ ವಿವಿಧ ರೆಸ್ಟೋರೆಂಟ್ ಗಳಿಗೆ ಹೋಗಿ ಕೊಟ್ಟರು. ಅವರ ಉದ್ದೇಶ ತನ್ನ ಅಡುಗೆ ರೆಸ್ಟೋರೆಂಟ್ ಮಾಲೀಕರಿಗೆ ಇಷ್ಟವಾಗಿ ಆರ್ಡರ್ ಕೊಟ್ಟರೆ, ಒಂದಷ್ಟು ಹೆಸರು ಹಾಗೂ ಹಣ ಸಂಪಾದನೆ ಮಾಡಬಹುದೆಂಬ ಆಲೋಚನೆ. ದುರದೃಷ್ಟಕ್ಕೆ 1009 ಬಾರಿ ಪ್ರೈಡ್ ಚಿಕನ್ ತಯಾರಿಸಿ ತಾವು ವಾಸಿಸುವ ಸುತ್ತಮುತ್ತಲಿನ ಎಲ್ಲಾ ರೆಸ್ಟೋರೆಂಟ್ ಗಳ ಮಾಲೀಕರಿಗೆ ಕೊಟ್ಟರು, ಅವರ್ಯಾರಿಗೂ ಸ್ಯಾಂಡರ್ಸ್ ತಯಾರಿಸಿ ಕೊಟ್ಟ ಫ್ರೈಡ್ ಚಿಕನ್ ಇಷ್ಟವಾಗುವುದಿಲ್ಲ.
ಆದರೂ ಧೃತಿಗೆಡದೆ ಮುನ್ನುಗ್ಗಿದ ಮೇಲೆ ಸ್ಯಾಂಡರ್ಸ್ ತಯಾರಿಸಿದ ಅಡುಗೆ ರೆಸ್ಟೋರೆಂಟ್ ಮಾಲೀಕರೊಬ್ಬರಿಗೆ ಇಷ್ಟವಾಗಿ ಆರ್ಡರ್ ಕೊಡುತ್ತಾರೆ. ಅಲ್ಲಿಂದ ಇವರ ಜೀವನ ಚಿತ್ರಣವೇ ಬದಲಾಗುತ್ತದೆ. ಆ ನಂತರ ಸ್ವಂತದಾಗಿ ಕೆ.ಎಫ್.ಸಿ ಫ್ರೈಡ್ ಚಿಕನ್ ರೆಸ್ಟೋರೆಂಟ್ ನ್ನು ಪ್ರಾರಂಭಿಸುತ್ತಾರೆ. ಕೆ.ಎಫ್.ಸಿ ಇಂದು 118 ದೇಶಗಳಲ್ಲಿ, 18,875 ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಿದೆ.
ಕನ್ನಡ ಮೂಲದ ತಮಿಳು ನಟ ರಜನಿಕಾಂತ್ ಇಂದು ಬಹು ಬೇಡಿಕೆ ಹಾಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಒಂದು ಕಾಲದಲ್ಲಿ ಕಾರ್ಪೆಂಟರ್, ಕೂಲಿ ವೃತಿಯನ್ನು ರಜನಿಕಾಂತ್ ಮಾಡಿದ್ದರು. ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ನಟನಾಗಬೇಕೆಂಬ ಏಕೈಕ ಆಸೆಯಿಂದ ಜೀವನದಲ್ಲಿ ಎಷ್ಟೇ ಸೋಲುಗಳು ಬಂದರು ಎಲ್ಲವನ್ನು ಎದುರಿಸಿ ಜೀವನ ಸಾಗಿಸಿದರು. ಇಂದು ದಕ್ಷಿಣ ಭಾರತ ಸ್ಟಾರ್ ನಟ ಎಂಬ ಹೆಗ್ಗಳಿಕೆ ರಜನಿಕಾಂತರದ್ದು.
ಆಂಧ್ರಪ್ರದೇಶದ ತಿರುಪತಿ ಬೆಟ್ಟವನ್ನು ಹತ್ತಲು ಹೊಸದಾಗಿ ಹೋಗುವ ಎಲ್ಲರೂ ಎತ್ತರದ ಈ ಬೆಟ್ಟ ಹೇಗೆ ಹತ್ತಲು ಸಾಧ್ಯ ಎಂದು ಭಾವಿಸುತ್ತಾರೆ. ಹೇಗೋ ಕಷ್ಟ ಬಿದ್ದು ಸುಮಾರು 3550 ಮೆಟ್ಟಿಲುಗಳ ಬೆಟ್ಟ ಹತ್ತಿ ಶ್ರೀವೆಂಕಟಶ್ವರ ಸ್ವಾಮಿಯ ದರ್ಶನ ಪಡೆದ ನಂತರ ಎತ್ತರದ ಬೆಟ್ಟ ಹತ್ತಿದ ಖುಷಿಯ ಜೊತೆಗೆ ಗೆಲುವು ಸಿಕ್ಕ ಸಂಭ್ರಮವಾಗುತ್ತದೆ.
ಆದರೆ ಪ್ರಾರಂಭದಲ್ಲೇ ಬೆಟ್ಟ ಹತ್ತಲು ಸಾಧ್ಯವಿಲ್ಲ, ಸೋಲು ಕಾಣುತ್ತೇವೆ ಎಂಬ ಆಲೋಚನೆಗೆ ಬಂದು ಬಿಡುತ್ತೇವೆ. ಹತ್ತುವ ಶಕ್ತಿ ಇದ್ದರು, ಸೋಲಿನ ಬಗ್ಗೆ ಆಲೋಚಿಸಿ, ನಮ್ಮಲ್ಲಿ ಅಡಗಿರುವ ಆಂತರಿಕ ಶಕ್ತಿಯನ್ನು ಮರೆಯುತ್ತೇವೆ. ಎಷ್ಟೋ ಜನ ತಿರುಪತಿ ಬೆಟ್ಟ ಹತ್ತಲು ಸಾಧ್ಯವಾಗಲ್ಲ ಎಂದು ವಾಹನದ ಮೂಲಕ ಬೆಟ್ಟ ತಲುಪುತ್ತಾರೆ. ಇವರಲ್ಲಿ ಅರ್ಧ ಜನಕ್ಕೆ ಹತ್ತುವ ಸಾಮಥ್ರ್ಯವಿದ್ದರೂ ಸೋಲುತ್ತೆವೆಂಬ ಭಯ ಬೆಟ್ಟ ಹತ್ತದಿರಲು ಪ್ರೇರೆಪಿಸುತ್ತದೆ.
ಜೀವನವೇ ಹಾಗೆ ಗೆಲುವಿಗಿಂತ ಹೆಚ್ಚು ಸೋಲುಗಳನ್ನು ಕಾಣಬೇಕಾಗುತ್ತದೆ. ಸೋಲನ್ನು ಸ್ವೀಕರಿಸುವ ಇಚ್ಛಾಶಕ್ತಿ ಇದ್ದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ಸೋತಾಗಲೇ ಗೆಲುವಿನ ದಾರಿ ಹುಡುಕುತ್ತೇವೆ, ಅದರಿಂದ ಜೀವನದಲ್ಲೊಂದು ಪಾಠ ಕಲಿಯುತ್ತೇವೆ. ಸೋತೆವು ಎಂದು ಹತಾಶರಾದರೆ, ಯಾರು ತಾನೇ ಏನು ಮಾಡಲು ಸಾಧ್ಯ ? ಅದೆಷ್ಟೋ ಸಾಧಕರು ಸೋಲನ್ನು ಸ್ಪೂರ್ತಿಯಿಂದ ಸ್ವೀಕರಿಸಿದ ಕಾರಣದಿಂದಲೇ ಇಂದು ಸಾಧಕರ ಪಟ್ಟಿಗೆ ಸೇರ್ಪಡೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಸೋಲಿಲ್ಲದ ಜೀವನ ಯಾರದು ತಾನೇ ಇದೆ ? ಎಲ್ಲರೂ ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ಸನ್ನಿವೇಶದಲ್ಲಿ ಸೋಲಲೇ ಬೇಕು. ಸೋಲು ನಮ್ಮ ಗೆಲುವಿಗೆ ಮೊದಲ ಮೆಟ್ಟಿಲು ಎನ್ನುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸೋಲಿಗೆ ಭಯ ಪಡುವ ಅಗತ್ಯವೇನಿದೆ.
ಯುಗಾದಿ ಹಬ್ಬದ ದಿನ ಯಾರ ಮನೆಗೆ ಹೋದರು ಸಂಪ್ರದಾಯದಂತೆ ಬೇವು - ಬೆಲ್ಲ ನೀಡುತ್ತಾರೆ. ಕಾರಣ ಜೀವನದಲ್ಲಿ ಸಿಹಿ, ಕಹಿ, ಸುಖ, ದುಃಖ ಬರುವುದು ಸಾಮಾನ್ಯ. ಎಲ್ಲವನ್ನೂ ಸಮಾಧಾನದಿಂದ ಬರಮಾಡಿಕೊಳ್ಳಬೇಕು ಎಂಬ ಸಂಕೇತವನ್ನು ಯುಗಾದಿ ಹಬ್ಬ ನೀಡುತ್ತದೆ. If you want to win, let's welcome failure’s, ನಾವು ಗೆಲ್ಲಬೇಕಾದರೆ, ಸೋಲುಗಳನ್ನು ಸ್ವಾಗತಿಸಲೇಬೇಕು.



4 ಕಾಮೆಂಟ್ಗಳು:
Supper sir
Supper sir
ನಮಸ್ತೆ ಗುರುಗಳೇ... ಗೆಲುವಿಗೆ ಸೋಲೇ ಮೆಟ್ಟಿಲು, ಈ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.ಇಂದಿನ ಯುವ ಸಮುದಾಯ ಗೆಲುವಿನ ಜೊತೆ ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ರೂಡಿಸಿಕೊಳ್ಳಬೇಕು. ಎಂದು ಅರ್ಥಪೂರ್ಣವಾಗಿ ತಿಳಿಸಿದ್ದೀರಿ. ಗುರುಗಳೇ ನನ್ನದೊಂದು ಅನಿಸಿಕೆ, ನಿಮ್ಮ ಈ ಎಲ್ಲ ಲೇಖನಗಳನ್ನ ಪುಸ್ತಕದ ರೂಪದಲ್ಲಿ ಅಥವಾ ಪ್ರತಿಲಿಪಿ, reading applicationಗಳಲ್ಲಿ ಪ್ರಕಾಶನ ಮಾಡಬಹುದಲ್ಲ.ಇದರಿಂದ ನಿಮ್ಮ ಎಲ್ಲ ಬರಹಗಳು ಹೆಚ್ಚಿನ ಓದುಗರನ್ನ ತಲುಪಲಿ.ಗುರುಗಳೇ..🙏
100%right sir
ಕಾಮೆಂಟ್ ಪೋಸ್ಟ್ ಮಾಡಿ