⏩ ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ
ಒಂದಷ್ಟು ಚಲನಚಿತ್ರಗಳು ಜನರಿಗೆ ಮನರಂಜನೆ ನೀಡುವುದರ ಜೊತೆಗೆ ಸಾಮಾಜಿಕ ಕಾಳಜಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಕೆಲ ಚಿತ್ರನಟರಂತು ಸಾಮಾಜಿಕ ಕಳಕಳಿಯ ಕಥೆಗಳನ್ನೇ ಆಯ್ದುಕೊಂಡು ಚಿತ್ರ ಮಾಡುತ್ತಾರೆ. ಕಾರಣ ತಮ್ಮ ಚಿತ್ರಗಳ ಮೂಲಕ ಜನರಲ್ಲಿ ತಿಳುವಳಿಕೆ ಮೂಡಲಿ ಎಂಬ ಆಶಯದಿಂದ. ಆ ಸಾಲಿಗೆ ತೆಲುಗಿನ ನಟ ಪ್ರಿನ್ಸ್ ಮಹೇಶ್ ಬಾಬು ಸೇರುತ್ತಾರೆ. ಹತ್ತಾರು ಸದಭಿರುಚಿಯ ಚಿತ್ರಗಳನ್ನು ಮಾಡಿದ್ದಾರೆ. ಪ್ರತಿ ಚಿತ್ರವು ಭಿನ್ನ, ವಿಭಿನ್ನ ಕಥೆಯಿಂದ ಕೂಡಿರುತ್ತದೆ. ಸರಿಲೇರು ನಿಕೇವ್ವರು, ಮಹರ್ಷಿ, ಭರತ್ ಅನೇ ನೇನು, ಶ್ರೀಮಂತುಡು, ಬ್ರಹ್ಮೋತ್ಸವಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೇ ಚೆಟ್ಟು, ಒಕ್ಕಡು, ನಿಜಂ, ದೂಕೂಡು, ಸೈನಿಕುಡು, ಅತಡು ಸೇರಿದಂತೆ ಮತ್ತಿತರ ಚಿತ್ರಗಳ ಮೂಲಕ ಸಮಾಜದ ಅಭಿವೃದ್ದಿಗೆ ಪೂರಕವಾದ ಸಂದೇಶ ಹಾಗೂ ಜನರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿ ಹೇಳಿದ್ದಾರೆ.
ಇತ್ತಿಚೀಗೆ ಟಿ.ವಿ ಸಂದರ್ಶನವೊಂದರಲ್ಲಿ ನಟ ಮಹೇಶ್ ಬಾಬುರನ್ನು ಸಂದರ್ಶನ ಮಾಡುತ್ತಿದ್ದ ನಿರೂಪಕಿ ಪ್ರಶ್ನೆ ಕೇಳುತ್ತ, ಸಾರ್ ಒಬ್ಬ ವ್ಯಕ್ತಿ ಸಮಾಜದಲ್ಲಿ ಬೆಳೆಯಬೇಕಾದರೆ ಹಣ, ಧರ್ಮ, ಜಾತಿ, ಅಧಿಕಾರ, ಬ್ಯಾಗ್ರೌಂಡ್ ಸಪೋರ್ಟ್ ಇದರಲ್ಲಿ ಯಾವುದು ಅತಿ ಮುಖ್ಯ ಎಂದಾಗ, ಮಹೇಶ್ ಬಾಬು ಉತ್ತರಿಸುತ್ತ, ಒಬ್ಬ ವ್ಯಕ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ಹಾಗೂ ಯಶಸ್ಸು ಪಡೆಯಬೇಕಾದರೆ ಅಧಿಕಾರ, ಜಾತಿ, ಹಣ ಅಲ್ಲ ಬೇಕಾದದ್ದು, ಬದಲಾಗಿ ನಾವು ಚಿಕ್ಕಂದಿನಿಂದ ಬೆಳೆಸಿಕೊಳ್ಳುವ ಉತ್ತಮವಾದ ಹವ್ಯಾಸ, ಅಭ್ಯಾಸಗಳು ಎಂದು ಒಂದೇ ಮಾತಿನಲ್ಲಿ ಉತ್ತರಕೊಟ್ಟರು.
ನಾವು ಅಳವಡಿಸಿಕೊಳ್ಳುವ ಹವ್ಯಾಸ, ಅಭ್ಯಾಸಗಳೇ ನಮಗೆ ಸಾಧಿಸಬೇಕೆಂಬ ಛಲ ಹಾಗೂ ಅದಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ನಮ್ಮ ಜೀವನಕ್ಕೊಂದು ದಾರಿ ತೋರಿಸಿ, ಜೀವನವನ್ನು ಸುಂದರವಾಗಿ ರೂಪಿಸುವ ಅಪರಿಮಿತವಾದ ಶಕ್ತಿ ನಮ್ಮ ಹವ್ಯಾಸ, ಅಭ್ಯಾಸಗಳಿಗಿವೆ. ಆದ್ದರಿಂದ ನಮ್ಮ ಹವ್ಯಾಸಗಳನ್ನು ಉತ್ತಮ ಪಡಿಸಿಕೊಳ್ಳಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳುತ್ತಾರೆ.
ಶ್ರೀಮಂತುಡು ಚಿತ್ರದಲ್ಲಿ ಮಹೇಶ್ ಬಾಬು ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸುತ್ತಾರೆ. ಅವರು ಚಿತ್ರಕ್ಕೆ ಸೀಮಿತರಾಗದೆ ತಮ್ಮ ಸ್ವಗ್ರಾಮ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಸಮೀಪದ ಬುರ್ರೆಪಾಲೆಂ ಗ್ರಾಮ ಹಾಗೂ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಸಿದ್ದಾಪುರ ಗ್ರಾಮ. ಈ ಎರಡು ಗ್ರಾಮಗಳನ್ನು ಅವರು ದತ್ತು ತೆಗೆದುಕೊಂಡು ಆ ಗ್ರಾಮಗಳಲ್ಲಿ ಶಾಲೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮದಲ್ಲಿ ರಸ್ತೆಗಳ ನಿರ್ಮಾಣ, ಬಸ್ ತಂಗುದಾಣ ಸೇರಿದಂತೆ ಮತ್ತಿತರ ಮೂಲಭೂತ ಅಭಿವೃದ್ದಿ ಕಾಮಗಾರಿಗಳನ್ನು ತಮ್ಮ ಸ್ವಂತ ಹಣದಿಂದ ಮಾಡಿದ್ದಾರೆ. ಈ ರೀತಿಯ ಸಮಾಜ ಸೇವೆ ಮಾಡಬೇಕೆಂಬ ಆಲೋಚನೆ ನನ್ನಲ್ಲಿ ಹುಟ್ಟಿದ್ದು ನನ್ನ ಹವ್ಯಾಸಗಳಿಂದಲೇ ಎಂದು ಪುನರುಚ್ಚರಿಸುತ್ತಾರೆ.
ನಟ ಮಹೇಶ್ ಬಾಬುರವರು ಹೇಳಿದ್ದು ನೂರಕ್ಕೆ ನೂರು ಸತ್ಯ,
ನಮ್ಮ ಪರಿಪೂರ್ಣವಾದ ಹವ್ಯಾಸ, ಅಭ್ಯಾಸಗಳು ನಮ್ಮಲ್ಲಿ ಆತ್ಮಶಕ್ತಿ, ಮನೋಬಲ ಮತ್ತು ನಮ್ಮ ದೈಹಿಕ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಹವ್ಯಾಸಗಳಿದ್ದಾಗ ಮಾತ್ರ ಮನಸ್ಸು ಕಲ್ಮಶವಾಗುವುದಿಲ್ಲ ಹಾಗೂ ಮನಸ್ಸು ಸದಾ ಉಲ್ಲಾಸವಾಗಿರುತ್ತದೆ. ಮನಸ್ಸು ಹತೋಟಿಯಲ್ಲಿದ್ದಾಗ ಗುರಿಯ ಹಾದಿ ತಪ್ಪುವ ಮಾತೇ ಇಲ್ಲ.
ನಮ್ಮ ಪರಿಪೂರ್ಣವಾದ ಹವ್ಯಾಸ, ಅಭ್ಯಾಸಗಳು ನಮ್ಮಲ್ಲಿ ಆತ್ಮಶಕ್ತಿ, ಮನೋಬಲ ಮತ್ತು ನಮ್ಮ ದೈಹಿಕ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಹವ್ಯಾಸಗಳಿದ್ದಾಗ ಮಾತ್ರ ಮನಸ್ಸು ಕಲ್ಮಶವಾಗುವುದಿಲ್ಲ ಹಾಗೂ ಮನಸ್ಸು ಸದಾ ಉಲ್ಲಾಸವಾಗಿರುತ್ತದೆ. ಮನಸ್ಸು ಹತೋಟಿಯಲ್ಲಿದ್ದಾಗ ಗುರಿಯ ಹಾದಿ ತಪ್ಪುವ ಮಾತೇ ಇಲ್ಲ.
ಇಂಗ್ಲೀಷ್ ನಲ್ಲಿ ಸುಂದರವಾದ ಮಾತೊಂದಿದೆ, You cannot change your future, but you can
change your habits and surely your habits will change your future. ಅಂದರೆ ನಮ್ಮ ಭವಿಷ್ಯವನ್ನು ತಿದ್ದಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನನ್ನ ಅಭ್ಯಾಸ, ಹವ್ಯಾಸಗಳು ಬದಲಾದರೆ ಖಂಡಿತವಾಗಿಯೂ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದು ಈ ವಾಕ್ಯ ಹೇಳುತ್ತದೆ. ನಮ್ಮ ಭವಿಷ್ಯವು ಹೇಗಿರುತ್ತದೆ ಎಂದು ನಿರ್ಧಾರವಾಗುವುದು ನಮ್ಮ ಜಾತಿ, ಹಣ, ಅಧಿಕಾರದ ಆಧಾರದಲ್ಲಿ ಅಲ್ಲವೇ ಅಲ್ಲ. ಬದಲಾಗಿ ನಮ್ಮ ಹವ್ಯಾಸ ಹಾಗೂ ಅಭ್ಯಾಸಗಳ ಮೇಲೆಯೇ ನಮ್ಮ ಭವಿಷ್ಯವು ನೆಲೆ ನಿಂತಿದೆ.
ಉತ್ತಮವಾದ ಹವ್ಯಾಸಗಳತ್ತ ಹೊರಟರೆ ಮೊದಲಿಗೆ ಸಿಗುವುದು ಆಧ್ಯಾತ್ಮೀಕತೆಯತ್ತ ಒಲವು. ನಮ್ಮ ಕಣ್ಣಿಗೆ ಕಾಣದ ಒಂದು ಅದ್ಬುತ ಶಕ್ತಿ ಎಂದರೆ ಅದು ದೇವರು. ಭಗವಂತನನ್ನು ನಂಬುವುದು ಬಿಡುವುದು ಅವರವರ ವ್ಯಕ್ತಿಗತವಾದದ್ದು.
ನಮಗೆ ಕಷ್ಟಗಳು ಬಂದಾಗ ನಮ್ಮ ಜೊತೆಗೆ ಯಾರು ಇಲ್ಲವಲ್ಲ ಎಂದು ಅನಿಸಿದ ಎಷ್ಟೋ ಸಂದರ್ಭಗಳಲ್ಲಿ ದೇವರಿದ್ದಾನೆ ಬಿಡು ಎಂದು ಹೆಜ್ಜೆ ಮುಂದೆ ಹಾಕುತ್ತೇವೆ, ಅದು ಕಣ್ಣಿಗೆ ಕಾಣದಿದ್ದರು ದೇವರು ನೀಡುವ ಆಂತರಿಕ ಶಕ್ತಿ. ಸಮಯ ಸಿಕ್ಕಾಗ ಇಷ್ಟದ ಸನ್ನಿಧಿಗೆ ಹೋಗುವುದರಿಂದ ಮನಸ್ಸು ನಿರ್ಮಲವಾಗಿರುತ್ತದೆ. ಆಧ್ಯಾತ್ಮಿಕತೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನವು ಹಾಗೂ ದೃಶ್ಯಗಳ ವೀಕ್ಷಣೆಯು ನಮ್ಮಲ್ಲಿ ಸಕರಾತ್ಮಕ ನಿಲುವನ್ನು ಮೂಡಿಸುತ್ತದೆ. ಯಾರು ಇದ್ದರು, ಇಲ್ಲದಿದ್ದರು ದೇವರು ನಮ್ಮ ಜೊತೆಗಿದ್ದಾನೆ ಎಂಬ ಆ ಒಂದು ಭಾವನೆಯು ನಮಗೆ ಗೊತ್ತಿಲ್ಲದೆಯೇ ನಮ್ಮ ಆತ್ಮಶಕ್ತಿ ಬಲಗೊಳಿಸುತ್ತದೆ.
ಇನ್ನು ಪ್ರಾಪಂಚಿಕ ಜ್ಞಾನವನ್ನು ಪಡೆದು ಕೊಳ್ಳಬೇಕಾದರೆ ದೇಶ ಸುತ್ತ ಬೇಕು, ಇಲ್ಲವೇ ಕೋಶ ಓದಬೇಕು ಎಂದು ಗಾದೆ ಮಾತು ಹೇಳುತ್ತದೆ. ಇಂದು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಶಿಕ್ಷಣ, ಸಿನಿಮಾ ಒಳಗೊಂಡಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಹವ್ಯಾಸಗಳಲ್ಲೊಂದು ಪುಸ್ತಕ ಓದುವುದು. ಇಂದು ಯಾವುದೇ ಪುಸ್ತಕಗಳನ್ನು ಬೇಕಾದರೂ ತರಿಸಿಕೊಳ್ಳುವ ಅವಕಾಶವಿದ್ದರೂ ಖರೀದಿಸಿ ಓದುವವರ ಸಂಖ್ಯೆ ಕಡಿಮೆ. ಅನವಶ್ಯಕವಾಗಿ ಸಾವಿರಾರು ರೂ. ಹಣವನ್ನು ವ್ಯರ್ಥ ಮಾಡುತ್ತೇವೆ. ಧೂಮಪಾನ, ಮದ್ಯಪಾನ, ಪಾರ್ಟಿ, ಪಬ್ ಎಂದು ಸಾವಿರಾರು ರೂ. ವ್ಯಯಿಸುವ ಜನರು ಇದ್ದಾರೆ. ಕೇವಲ ಹತ್ತು ರೂ. ಕೊಟ್ಟರು ಜ್ಞಾನ ಬೆಳೆಸುವ ಪುಸ್ತಕ ಬರುತ್ತದೆ. ಆದರೆ ಖರೀದಿಸುವ ಮನಸ್ಸು ಬಹುತೇಕರಿಗಿಲ್ಲ. ಕನಿಷ್ಠ ತಿಂಗಳಿಗೊಂದಾದರೂ ಪುಸ್ತಕ ಖರೀದಿಸುವ ಹಾಗೂ ಅದನ್ನು ಓದುವ ಹವ್ಯಾಸ ನಮ್ಮ ಉನ್ನತಿಗೆ ಕಾರಣವಾಗುತ್ತದೆ. ಪ್ರತಿದಿನ 5 ರೂ.ಕೊಟ್ಟು ಮನೆಗೆ ದಿನಪತ್ರಿಕೆಗೆ ಹಾಕಿಸಿಕೊಳ್ಳುವುದರಿಂದ ಆಗುವ ಲಾಭ ಒಂದೇ ಎರಡೇ..
ವಾಸ್ತವವಾಗಿ ಹೇಳಬೇಕೆಂದರೆ ಕೆಲಸಕ್ಕೆ ಬಾರದ ಎಷ್ಟೋ ವಿಚಾರಗಳಿಗೆ ಸಮಯ ವ್ಯರ್ಥ ಮಾಡಿ ಬಿಡುತ್ತೇವೆ. ಅದರ ಬದಲು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಸಾಕಷ್ಟು ಗ್ರಂಥಾಲಯಗಳು ನಮ್ಮಲ್ಲಿವೆ. ಆದರೂ ಗ್ರಂಥಾಲಯಗಳಿಗೆ ಹೋಗುವ ಅಭ್ಯಾಸ ಕೆಲವರಿಗೆ ಮಾತ್ರ ಇದೆ. ಸಮಯ ಸಿಕ್ಕಾಗಲೆಲ್ಲ ನಮ್ಮ ಸುತ್ತಲಿನ ಗ್ರಂಥಾಲಯಗಳಿಗೆ ಹೋಗಿ ಕನಿಷ್ಟ ಅರ್ಧ ಗಂಟೆಯಾದರೂ ಅಲ್ಲಿ ಕಾಲ ಕಳೆಯುವ ಹವ್ಯಾಸ ಎಲ್ಲರಿಗೂ ಅಗತ್ಯ. ಮನೆಯನ್ನೇ ಸಣ್ಣ ಗ್ರಂಥಾಲಯವನ್ನಾಗಿ ಪರಿವರ್ತಿಸಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕಿದೆ.
ಇತ್ತಿಚೀಗೆ ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದೆ, ಅಲ್ಲಿ ಮದುವೆಗೆ ಬಂದವರಿಗೆಲ್ಲ ಒಂದು ಹೂವಿನ ಗಿಡವನ್ನು ಉಡುಗೊರೆಯಾಗಿ ನೀಡಿದರು. ಹೊಸ ಪರಂಪರೆಯಾಗಿ ಎಲ್ಲರಿಗೂ ಗಿಡ ನೀಡುತ್ತಿದ್ದೀರಾ ಎಂದು ಅಲ್ಲಿದ್ದ ಹಿರಿಯರೊಬ್ಬರನ್ನು ಪ್ರಶ್ನೆ ಕೇಳಿದೆ, ಅದಕ್ಕೆ ಅವರು ನಮಗ್ಯಾರಿಗೂ ಗಿಡಗಳನ್ನು ಖರೀದಿಸಿ ಬೆಳೆಸಿ, ಪರಿಸರ ಕಾಪಾಡಬೇಕೆಂಬ ಪರಿಜ್ಞಾನವಂತು ಇಲ್ಲ. ಕನಿಷ್ಟ ಈ ಮದುವೆಗೆ ಬಂದವರಿಗೆ ಉಚಿತವಾಗಿ ಗಿಡ ಕೊಡುತ್ತೇವೆ. ಅದನ್ನು ಅವರು ಮನೆ ಹತ್ತಿರ ಬೆಳೆಸಿದರೆ ಸಣ್ಣ ಪ್ರಮಾಣದಲ್ಲಾದರೂ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ನಿಜ ಪಾರ್ಟಿ, ತಿಂಡಿ ತಿನಿಸು, ನಮ್ಮ ಮನರಂಜನೆಗಾಗಿ ಅನಗತ್ಯವಾಗಿ ಎಷ್ಟೆಷ್ಟೋ ಹಣ ವ್ಯರ್ಥ ಮಾಡುವ ನಾವು ಒಂದು ಸಣ್ಣ ಗಿಡವನ್ನಾದರೂ ಬೆಳೆಸಬೇಕೆಂದು ಆಲೋಚಿಸುವುದೇ ಇಲ್ಲ. ನಮ್ಮ ಪೂರ್ವಿಕರು ಬೆಳೆಸಿದ ಗಿಡ, ಮರಗಳಿಂದ ನಾವು ಆಶ್ರಯ ಪಡೆದಿದ್ದೇವೆ. ಅವರು ಬೆಳೆಸಿದ ಗಿಡ, ಮರಗಳನ್ನು ಕಡಿದು ಬದುಕುತ್ತಿದ್ದೇವೆ. ನಮ್ಮ ಹುಟ್ಟುಹಬ್ಬ ಹಾಗೂ ನಮಗೆ ಪ್ರಾಮುಖ್ಯವಾದ ದಿನಗಳಂದು ಒಂದೊಂದು ಗಿಡ ನೆಟ್ಟು ಸಂರಕ್ಷಿಸಿದರೆ ಮನುಷ್ಯರಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ನಾವು ಮನಸ್ಸು ಮಾಡಿದರೆ ನಮ್ಮ ಕೈಯಲ್ಲಾದ ಮಟ್ಟಿಗೆ ಗಿಡಗಳನ್ನು ಬೆಳೆಸಿ, ಪರಿಸರಕ್ಕೆ ನಮ್ಮ ಕೊಡುಗೆ ನೀಡುವುದು ದೊಡ್ಡ ವಿಚಾರವೇ ಅಲ್ಲ. ಗಿಡ ಬೆಳೆಸಬೇಕೆಂಬ ಹವ್ಯಾಸವೇ ಅತ್ಯಂತ ಶ್ರೇಷ್ಠ.
ಇನ್ನೂ ಕೆಲವರ ಪ್ರಕಾರ ಸಿನಿಮಾ ನೋಡುವುದು ದಡ್ಡರು ಹಾಗೂ ಬೇಜಾಬ್ದಾರಿ ಗುಣ ಹೊಂದಿರುವವರು ಮಾತ್ರ ಎಂದು. ನನ್ನ ಪ್ರಕಾರ ಸಿನಿಮಾ ನೋಡುವುದು ತಪ್ಪೆಂದು ಹೇಳುವುದೇ ದೊಡ್ಡ ತಪ್ಪು. ಸಮಾಜದ ಅಭಿವೃದ್ದಿಗೆ ಪ್ರೇರಣೆ ನೀಡುವ, ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಚಲನಚಿತ್ರ ಮಂದಿರಗಳಿಗೆ ಹೋಗಿ ನೋಡುವ ಹವ್ಯಾಸ ಬೆಳೆಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ, ಜೊತೆಗೆ ಚಿತ್ರದಲ್ಲಿನ ಒಳ್ಳೆಯ ಅಂಶಗಳು ನಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ, ಮನಸ್ಸಿಗೂ ನೆಮ್ಮದಿ ಬೇಕು ತಾನೆ.
ಇನ್ನು ನಾವು ಪ್ರತಿನಿತ್ಯ ಮಾಡುವ ಅನಗತ್ಯ ಖರ್ಚುಗಳನ್ನು ಉಳಿಸಿ, ನಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಪ್ರವಾಸ ಹೋಗುವ ಹವ್ಯಾಸ ಬೆಳೆಸಿಕೊಂಡರೆ ಸಾಧನೆಯ ದೃಷ್ಟಿಯಿಂದ ಸೂಕ್ತ. ಒಂದು ಮಾತಿದೆ ಇತಿಹಾಸ ತಿಳಿಯದವನು, ಇತಿಹಾಸ ಸೃಷ್ಟಿಸಲಾರ ಎಂದು. ನಮಗೆ ಇತಿಹಾಸದ ಘಟನೆಗಳ ಬಗ್ಗೆ ನೈಜ ಚಿತ್ರಣ ಸಿಗಬೇಕಾದರೆ ಪ್ರವಾಸ ಹೋಗುವುದು ಬಿಟ್ಟು ಮತ್ತೊಂದು ದಾರಿ ಇಲ್ಲ. ಪ್ರವಾಸವೆಂದರೆ ಬರೀ ಮೋಜು, ಮಸ್ತಿ ತಾಣಗಳನ್ನು ಸುತ್ತುವುದಲ್ಲ. ಅದು ಬಿಟ್ಟು ಐತಿಹಾಸಿಕವಾಗಿ ಗುರ್ತಿಸಿಕೊಂಡ ಪ್ರದೇಶಗಳು, ಪುರಾತನ ದೇಗುಲ, ವಿವಿಧ ಸಾಮ್ರಾಜ್ಯಗಳು ನಿರ್ಮಿಸಿದ ಕೋಟೆಗಳು, ಕಲೆ, ಸಾಂಸ್ಕೃತಿಕ, ಧಾರ್ಮಿಕತೆಯ ಸಂಸ್ಕøತಿಯನ್ನು ಸಾರುವ ಸ್ಥಳಗಳು, ವನ್ಯಧಾಮ, ಪಕ್ಷಿಧಾಮ, ವಸ್ತು ಸಂಗ್ರಹಾಲಯ ಮುಂತಾದುವುಗಳನ್ನು ವೀಕ್ಷಿಸುವ ಹವ್ಯಾಸವಿದ್ದರೆ ಇತಿಹಾಸದಲ್ಲಿ ಅಡಗಿಕೊಂಡಿರುವ ಅದೆಷ್ಟೋ ಅಂಶಗಳು ತಿಳಿಯುವುದರ ಜೊತೆಗೆ ಜ್ಞಾನಾರ್ಜನೆಯು ಆಗುತ್ತದೆ.
ನಮ್ಮ ಸುತ್ತಮುತ್ತಲೂ ಅದೆಷ್ಟೋ ಬಡವರು, ನಿರ್ಗತಿಕರು ಇರುತ್ತಾರೆ. ಒಂದೊತ್ತು ತಿನ್ನಲು ಕಷ್ಟ ಪಡುವವರು ಇದ್ದಾರೆ. ಒಂದು ಪುಸ್ತಕ ಖರೀದಿಸಲು ಸಾಧ್ಯವಾಗದ ಬಡ ಮಕ್ಕಳು ಇದ್ದಾರೆ. ಎಲ್ಲರಿಗೂ ಸಹಾಯ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕನಿಷ್ಟ ವರ್ಷಕ್ಕೊಮ್ಮೆ ಬರುವ ನಮ್ಮ ಹುಟ್ಟುಹಬ್ಬದಂದು ನಮ್ಮ ಸಮೀಪದ ಸರಕಾರಿ ಶಾಲೆಯ ಬಡ ಮಕ್ಕಳಿಗೆ ನಮ್ಮ ಕೈಯಲ್ಲಾಗುವ ಸಣ್ಣ ಪ್ರಮಾಣದಲ್ಲಾದರೂ ಸಹಾಯ ಮಾಡುವ ಅಭ್ಯಾಸ ನಮ್ಮದಾದರೆ, ನಾವು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಕ್ಕೂ ಸಾರ್ಥಕತೆ ಸಿಗುತ್ತದೆ. ನಮ್ಮ ಹುಟ್ಟುಹಬ್ಬದಂದು ನಾವು ಮಾತ್ರ ಸಂತೋಷವಾಗಿದ್ದರೆ ಸಾಲದು, ನಮ್ಮಿಂದ ಇಬ್ಬರಾದರೂ ಖುಷಿಯಿಂದಿರಬೇಕು. ಸಾಮಾಜಿಕ ಸೇವೆಯ ಪರಿಕಲ್ಪನೆ ಹವ್ಯಾಸಗಳಲ್ಲೇ ಅತ್ಯಂತ ಶ್ರೇಷ್ಟವಾದದ್ದು.
ನಾವು ಯಾರಾದರೂ ಸ್ನೇಹಿತರ, ಸಂಬಂಧಿಕರ ಮದುವೆಗಳಿಗೆ ಹೋದಾಗ ಸಾಮಾನ್ಯವಾಗಿ ಯಾವುದಾದರೂ ಗಿಫ್ಟ್ ಕೊಡುತ್ತೇವೆ. ಹಲವರು ಹಣವನ್ನು ಹಾಕುತ್ತಾರೆ. ಅದರ ಬದಲಾಗಿ ಜ್ಞಾನ ತುಂಬುವ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರೆ ಶಾಶ್ವತವಾಗಿ ಅದು ಅವರ ಬಳಿಯೇ ಇರುತ್ತದೆ. ಆ ಪುಸ್ತಕವನ್ನು ಹಲವರು ಓದಿ ಮಾಹಿತಿ ಪಡೆಯುತ್ತಾರೆ. ಜೊತೆಗೆ ಪುಸ್ತಕ ಓದುವ ಅಭ್ಯಾಸ ಬೆಳೆಸುವವರ ಸಾಲಿಗೆ ನಾವು ಸೇರುತ್ತೇವೆ.
ನಮ್ಮ ಸುತ್ತಮುತ್ತಲೂ ವಿಜ್ಞಾನ, ಸಾಹಿತ್ಯ, ಭಾಷೆ, ಧಾರ್ಮಿಕತೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಉಪನ್ಯಾಸ, ಚರ್ಚಾಗೋಷ್ಠಿ, ಸಂವಾದಗಳು ನಡೆಯುತ್ತಲೇ ಇರುತ್ತದೆ. ಇಂತಹ ವಿಶೇಷವಾದ ಕಾರ್ಯಕ್ರಮಗಳಿಗೂ ಹೋಗುವುದರಿಂದ ಪ್ರಮುಖ ವ್ಯಕ್ತಿಗಳನ್ನು ನೋಡುವುದರ ಜೊತೆಗೆ ಅವರ ಭಾಷಣವನ್ನು ಕೇಳುವ ಅದೃಷ್ಟ ನಮ್ಮದಾಗುತ್ತದೆ. ಇಂತಹ ಕಾರ್ಯಕ್ರಮಳಲ್ಲಿ ಭಾಗವಹಿಸುವ ಹವ್ಯಾಸವಿದ್ದರಂತೂ ವಿಚಾರವಂತರಾಗುತ್ತೇವೆ.
ಒಂದಂತು ಸತ್ಯ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಾವು ಅನುಸರಿಸುವ ಹವ್ಯಾಸ, ಅಭ್ಯಾಸಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ನಮ್ಮ ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸಿಕೊಳ್ಳಬೇಕಾದರೂ, ನಮ್ಮ ಗುರಿಯನ್ನು ಬೆನ್ನತಿ ಹೋಗಬೇಕಾದರೂ, ಅದಕ್ಕೆ ಪೂರಕವಾಗಿ ಸಹಕರಿಸುವುದು ನಮ್ಮ ಹವ್ಯಾಸ, ಅಭ್ಯಾಸಗಳು ಮಾತ್ರ. ಸೋ ಪಾಲೋ ಗುಡ್ ಹ್ಯಾಬಿಟ್ಸ್ ಅಂಡ್ ಹಾಬಿಸ್ಸ್..



6 ಕಾಮೆಂಟ್ಗಳು:
neevu ide thara janarige anukula vaguva visayagalannu rachisi sir neevu post maduthiruva mattu nimma sahayatha manobavanege namma koti namskaragalu sir
Girish is always best ����
Really 👍👌 sir🙏
Nice sir
Edhu namma jivanadha artha holler sandhesha good.
It's very informative and motivational story especially for our youngsters and which reflects your life style in all the way I am proud to be your friend and I learnt many things which you mentioned by you and I m practicing still.
ಕಾಮೆಂಟ್ ಪೋಸ್ಟ್ ಮಾಡಿ