ಸೋಮವಾರ, ಮಾರ್ಚ್ 30, 2020

“ಗುರುಗಳ ಲೈಪ್ ಟೀಚಿಂಗ್ ಪಾಠ”..

 ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಯಾರು ಇರ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಆ ಸಾಧನೆಯಲ್ಲಿ ಒಬ್ಬ ಶಿಕ್ಷಕನ ಮಹತ್ವವಾದ ಪಾತ್ರ ಇದ್ದೇ ಇರುತ್ತದೆ. ಇಂಗ್ಲೀಷ್ ನಲ್ಲಿ ಒಂದು ಮಾತಿದೆ, "Better than a thousand days of diligent study is one day with a great teacher".
ಅಂದರೆ ಸಾವಿರ ದಿನ ಪರಿಶ್ರಮ ಓದಿಗಿಂತ, ಒಂದು ದಿನ ಉತ್ತಮ ಶಿಕ್ಷಕರ ಜೊತೆ ಕಾಲ ಕಳೆಯುವುದು ಎಷ್ಟೋ ಮೇಲು ಎಂದು. ಒಳ್ಳೆಯ ಶಿಕ್ಷಕರ ಜೊತೆ ಒಂದು ದಿನ ಕಾಲ ಕಳೆಯುವುದರಿಂದ ಜೀವನಕ್ಕೆ ಬೇಕಾದ ಅದೆಷ್ಟೋ ಅಂಶಗಳು ಸಿಗುತ್ತವೆ.
ಕೆಲ ಶಿಕ್ಷಕರ ವರ್ತನೆ, ಅವರ ಗುಣ, ನಡವಳಿಕೆಯು ಸಾಕಷ್ಟು ವಿದ್ಯಾರ್ಥಿಗಳ ಮೇಲೆ ಅಗಾಧವಾದ ಪ್ರಭಾವ ಬೀರಿರುತ್ತದೆ. ಶಿಕ್ಷಕರು ಹೇಳುವ ನೀತಿ ಪಾಠಗಳಲ್ಲಿ ಅರ್ಧ ಪಾಲಿಸಿದರು, ನಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು.
ನಮ್ಮ ಪ್ರಾಥಮಿಕ ಹಂತದ ಶಾಲೆಯಿಂದ ಹಿಡಿದು ಕಾಲೇಜು, ವಿಶ್ವವಿದ್ಯಾಲಯದವರೆಗೂ ಎಷ್ಟೋ ಶಿಕ್ಷಕ, ಉಪನ್ಯಾಸಕರನ್ನು ನೋಡಿರುತ್ತೇವೆ. ಅವರ ಪಾಠ ಮಾಡುವ ಶೈಲಿ, ವಿದ್ಯಾರ್ಥಿಗಳ ಜೊತೆಗಿನ ಅನ್ಯೋನ್ಯತೆ, ಪ್ರಾಮಾಣಿಕತೆ, ಶಿಸ್ತು, ಕಷ್ಟಕಾಲದಲ್ಲಿ ನೆರವಾಗಿದ್ದು ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ನಮಗೆ ತಿಳಿಯದೆ ಅವರ ಬಗ್ಗೆ ಪೂಜ್ಯ ಭಾವನೆಯನ್ನು ಬೆಳೆಸಿಕೊಂಡಿರುತ್ತೇವೆ.
ಎಲ್ಲಾ ಶಾಲೆಗಳಲ್ಲೂ ತರಗತಿ ಒಳಗೆ ಶಿಕ್ಷಕರು ಬಂದಾಗ ಗುರುವಿನ ಶ್ರೇಷ್ಠದ ಬಗ್ಗೆ ವರ್ಣಿಸುವ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:, ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ಎಂಬ ಶ್ಲೋಕವನ್ನು ವಿದ್ಯಾರ್ಥಿಗಳು ಹೇಳುತ್ತಾರೆ. ಗುರು ಎಂದರೆ ಬ್ರಹ್ಮ, ಗುರು ಎಂದರೆ ವಿಷ್ಣು, ಗುರುವೇ ಮಹೇಶ್ವರ, ಈ ಲೋಕದ ಸೃಷ್ಟಿಕರ್ತನೇ ಗುರು, ಆ ಮಹಾನ್ ಗುರುವಿಗೆ ನಮನ.
ಶಿಕ್ಷಣ ಎಂಬುವುದು ಒಬ್ಬ ಮನುಷ್ಯನಿಗೆ ಗುರಿ, ಜ್ಞಾನವನ್ನು ನೀಡುತ್ತದೆ. ಗುರು' ಎಂಬ ಪದದಲ್ಲಿ 'ಗು' ಎಂದರೆ ನೆರಳು 'ರು' ಎಂದರೆ ಚದುರಿಸುವುದು ಎಂದರ್ಥ. ಯಾರು ಅಜ್ಞ್ನಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ, ಅವರೇ ನಿಜವಾದ ಗುರು. ಅಂತಹ ಗುರು ಜಗತ್ತನ್ನು ಬೆಳಗಲು ನೆರವಾಗುತ್ತಾನೆ.
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಮಾಜಿ ರಾಷ್ಟಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ನಮ್ಮ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಲು ಗ್ರಂಥಗಳ ಅಧ್ಯಯನಕ್ಕಿಂತ, ನಾವು ಗೌರವಿಸುವ ಶಿಕ್ಷಕರು ತರಗತಿಗಳಲ್ಲಿ ಹೇಳಿದ ಮಾತುಗಳು ಹಾಗೂ ಅವರ ಅನುಸರಿಸಿದ ವ್ಯಕ್ತಿತ್ವವನ್ನು ಆಗಾಗ ನೆನಪಿಸಿಕೊಂಡರೆ ಸಾಕು ನಮ್ಮ ಜೀವನದ ಭವಿಷ್ಯವನ್ನು ನಾವೇ ಉತ್ತಮವಾಗಿ ರೂಪಿಸಿಕೊಳ್ಳಬಹುದು.
ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ ಸುರೇಶ್ ಸಾರ್ ಎಂಬ ಶಿಕ್ಷಕರೊಬ್ಬರಿದ್ದರು. ಅವರು ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಸರಿಯಾಗಿಯೇ ಬೆತ್ತದ ರುಚಿ ತೋರಿಸುತ್ತಿದ್ದರು. ನನಗಿನ್ನು ನೆನಪಿದೆ ಅವರು ತಮ್ಮ ತರಗತಿಗಳಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿದ್ದರು. ಚಿಕ್ಕ ವಯಸಿನಲ್ಲೇ ಮಾನವೀಯತೆ ಬಗ್ಗೆ ಪರಿಜ್ಞಾನ ಬಂದರೆ ತಮ್ಮ ವಿದ್ಯಾರ್ಥಿಗಳು ಜೀವನವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ ಎಂಬ ಆಲೋಚನೆ ಅವರದ್ದಾಗಿತ್ತು.
ಅವರು ಇತಿಹಾಸದ ಬಗ್ಗೆ ಪಾಠ ಮಾಡುವ ಅನೇಕ ಸಂದರ್ಭದಲ್ಲಿ ಈ ವಿಷಯನ್ನು ಪ್ರಸ್ತಾಪಿಸುತ್ತಿದ್ದರು, ಒಬ್ಬ ಮನುಷ್ಯನ ಜೀವನವನ್ನು ಹಾಳು ಮಾಡುವ 3 ಅತ್ಯಂತ ಪ್ರಮುಖ ಅಂಶಗಳೆಂದರೆ ಹೆಣ್ಣು, ಹೊನ್ನು, ಮಣ್ಣು. ಯಾರು ಈ ಮೂರು ವಿಷಯಗಳಲ್ಲಿ ತಟಸ್ಥವಾಗಿ ಇದ್ದು  ಜೀವನ ಸಾಗಿಸುತ್ತಾರೋ, ಅವರು ತಾವು ಅಂದುಕೊಂಡ ಗುರಿಯನ್ನು ಬಹಳ ಸುಲಭವಾಗಿ ಹಾಗೂ ವೇಗವಾಗಿ ತಲುಪುತ್ತಾರೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು.
ಇತಿಹಾಸ ಪುಟಗಳನ್ನು ತಿರುವಿ ನೋಡಿದರೆ ಒಬ್ಬ ರಾಜ ಮತ್ತೊಂದು ರಾಜನ ಮೇಲೆ ಯುದ್ದ ಸಾರಿದ್ದಾನೆ ಎಂದರೆ ಅದಕ್ಕೆ ಕಾರಣ ಹೆಣ್ಣು, ಹೊನ್ನು, ಮಣ್ಣು ಈ ಮೂರರಲ್ಲಿ ಯಾವುದೋ ಒಂದರ ಮೇಲೆ ಆಸೆ ಬಿದ್ದು ಎಂಬುವುದು ಸತ್ಯ. ಅಷ್ಟೇಕೆ ಇಂದು ಸ್ನೇಹಿತರ ನಡುವಿನ ಜಗಳ, ಸಂಬಂಧಿಕರು, ಸಹದ್ಯೋಗಿಗಳ ನಡುವೆ ಮನಸ್ತಾಪ ಬರುತ್ತಿವೆ ಎಂದರೆ ಈ ಮೂರು ಅಂಶಗಳಲ್ಲಿ ಯಾವುದೋ ಒಂದು ಅಂಶ ಎಂಬುವುದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೆಲವರು ಸಾಕಷ್ಟು ಕಷ್ಟ ಬಿದ್ದು ಶಿಕ್ಷಣ ಪಡೆದು, ಉನ್ನತ ಸ್ಥಾನ ತಲುಪುತ್ತಾರೆ. ಆ ಸ್ಥಾನ ತಲುಪಬೇಕಾದರೆ ಎಷ್ಟೋ ದಿನ ನಿದ್ದೆ, ಊಟವಿಲ್ಲದೆ ಜೀವನ ಕಳೆದಿರುತ್ತಾರೆ.
ಆದರೆ ತಗೆ ಗೊತ್ತಿಲ್ಲದೆಯೇ ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಷಯಗಳಲ್ಲಿ ಯಾವುದೇ ಒಂದರಲ್ಲಿ ಸಿಕ್ಕಿ ಹಾಕಿಕೊಂಡು ತಮ್ಮ ಜೀವನವಿಡಿ ಸಂಪಾದಿಸಿದ ಗೌರವವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದಕ್ಕೆ ಕೆಲ ರಾಜಕಾರಣಿ, ಚಿತ್ರನಟರು, ಉದ್ಯಮಿಗಳು ಸೇರಿದಂತೆ ಮತ್ತಿತರರ ಉದಾಹರಣೆಗಳು ಇವೆ ಎನ್ನುತ್ತಿದ್ದರು.
ನಮ್ಮ ಪ್ರಾಥಮಿಕ ಶಾಲೆಯಲ್ಲಿ ಶ್ರೀಧರ್ ಶರ್ಮ ಎಂಬ ಗಣಿತ ಶಿಕ್ಷಕರಿದ್ದರು. ಅವರು ಪ್ರತಿನಿತ್ಯ ತರಗತಿ ತೆಗೆದುಕೊಳ್ಳುವುದಕ್ಕಿಂತ ಮುಂಚೆ ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಆರ್ಥಿಕ, ರಾಜಕೀಯ, ಸಾಂಸ್ಕøತಿಕ, ಕ್ರೀಡಾ ವಿಷಯಗಳ ಬಗ್ಗೆ ಕನಿಷ್ಠ 15 ನಿಮಿಷವಾದರೂ ನಮಗೆ ಹೇಳುತ್ತಿದ್ದರು. ಹಾಗೆಯೇ ಪ್ರಮುಖ ವಿಷಯಗಳ ಬಗ್ಗೆ ಆಳವಾಗಿ ತಿಳಿಸುತ್ತಿದ್ದರು. ಅವರ ಉದ್ದೇಶ ತರಗತಿಯಲ್ಲಿ ಎಷ್ಟೇ ಅಂಕಗಳನ್ನು ಗಳಿಸಿದರು ಪ್ರಾಪಂಚಿಕ ಜ್ಞಾನ ಇಲ್ಲದಿದ್ದರೆ ಜೀವನ ಸಾಗಿಸುವುದು ಕಷ್ಟ, ನನ್ನ ವಿದ್ಯಾರ್ಥಿಗಳು ಪಾಠದ ಜೊತೆಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿಯಲಿ ಎಂಬ ಸದುದ್ದೇಶದಿಂದ.
ನಮಗೆ ಕಾಲೇಜಿನಲ್ಲಿ ಇಂಗ್ಲೀಷ್ ಗೆ ಹರಿಕೃಷ್ಣ ಹಾಗೂ ರಾಜ್ಯಶಾಸ್ತ್ರಕ್ಕೆ ಪೊನ್ನುಸ್ವಾಮಿ ಎಂಬ ಉಪನ್ಯಾಸಕರಿದ್ದರು. ಗಮನಿಸಬೇಕಾದ ಅಂಶವೆಂದರೆ ಈ ಇಬ್ಬರಿಗೂ ಎರಡು ಕಣ್ಣು ಕಾಣಿಸುವುದಿಲ್ಲ. ಆದರೂ ಎಂದೂ ತರಗತಿ ತಪ್ಪಿಸಿದವರಲ್ಲ. ಪ್ರತಿನಿತ್ಯವೂ ಕಾಲೇಜಿಗೆ ಬರುತ್ತಿದ್ದರು. ಸಮಯಕ್ಕೆ ಸರಿಯಾಗಿ ಆಯಾ ವಿಭಾಗಗಳಿಗೆ ಹೋಗಿ ತರಗತಿ ತೆಗೆದುಕೊಳ್ಳುತ್ತಿದ್ದರು. ಎಷ್ಟೋ ಸಂದರ್ಭಗಳಲ್ಲಿ ವಿದ್ಯಾರ್ಥಿಗಳೇ ತಡವಾಗಿ ಬರುತ್ತಿದ್ದರು, ಕೆಲವರೂ ವಿನಾ ಕಾರಣ ಗೈರಾಗುತ್ತಿದ್ದರು. ಆದರೆ ಈ ಇಬ್ಬರೂ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುತ್ತಿದ್ದರು. ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು. ಪಾಠ ಮಾಡುವಾಗ ನೈತಿಕತೆ ಬಗ್ಗೆ ಪ್ರಸ್ತಾಪಿಸುತ್ತ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಬಲಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದರು. ಈ ಇಬ್ಬರ ಪ್ರಾಮಾಣಿಕತೆ, ಸಮಯ ಪ್ರಜ್ಞೆ ಎಲ್ಲಾ ವಿದ್ಯಾರ್ಥಿಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಿತ್ತು. 
ನನಗೆ ಯಾವುದೇ ಜಾತಿ, ಧರ್ಮವಿಲ್ಲ, ನಾನು ಜಾತ್ಯಾತೀತ ಮನೋಭಾವದವರು ಎಂದು ಎಷ್ಟೋ ಜನ ಹೇಳಿಕೊಳ್ಳುತ್ತಾರೆ. ಆದರೆ ಹೇಳಿಕೊಂಡವರಲ್ಲಿ ಪಾಲಿಸುವವರು ಅರ್ಧಕ್ಕಿಂತಲೂ ಕಡಿಮೆ. ಕಾಲೇಜಿನಲ್ಲಿ ನನಗೆ ಚಂದ್ರಸೌಂದರಾಜ್ ಮೇಡಂ ಎಂಬ ಆಂಗ್ಲ ಉಪನ್ಯಾಸಕರೊಬ್ಬರಿದ್ದರು. ಅವರ ತಮ್ಮ ವಿದ್ಯಾರ್ಥಿಗಳು ಜಾತೀಯತೆ ಮೀರಿ ಬದುಕು ರೂಪಿಸಿಕೊಳ್ಳ ಬೇಕು ಎಂಬ ಕಲ್ಪನೆಯಿಂದ ತರಗತಿಯಲ್ಲಿ ಸಮಯ ಸಿಕ್ಕಾಗಲೆಲ್ಲ, ಜಾತ್ಯಾತೀತತೆ ಬಗ್ಗೆ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ನಾವು ಕೆಲ ಸ್ನೇಹಿತರು ಇಂಗ್ಲೀಷ್ ಪಾಠ ಹೇಳಿಸಿಕೊಳ್ಳಲು ಅವರ ಮನೆಗೆ ಹೋದಾಗ ಮೇಡಂ ತರಗತಿಯಲ್ಲಿ ಏನು ಹೇಳಿದ್ದರೋ ಮನೆಯಲ್ಲಿಯೂ ಅದನ್ನೇ ಪಾಲಿಸುತ್ತಿದ್ದರು ಎಂಬುವುದು ಅರಿವಾಯಿತು. ತಮ್ಮ ಮನೆ ಮಕ್ಕಳಿಗಿಂತ ಹೆಚ್ಚಿನ ರೀತಿಯಲ್ಲಿ ನಮಗೆ ಹಾರೈಕೆ ಮಾಡಿದರು. ನಮ್ಮನ್ನು ಅವರು ಯಾವ ಜಾತಿ, ಧರ್ಮ ಎಂದು ಕೇಳದೆ ಮನೆಗೆ ಒಳಗೆ ಪ್ರವೇಶ ಕೊಟ್ಟು, ಪಾಠ ಮಾಡಿ ಜಾತ್ಯಾತೀತತೆಯ ಕಲ್ಪನೆಯನ್ನು ಬಲಗೊಳಿಸಿದರು.
ಕಾಲೇಜಿನಲ್ಲಿದ್ದಾಗ ನಾನು ಎರಡು ಬಾರಿ ಎನ್.ಎಸ್.ಎಸ್ ಶಿಬಿರಕ್ಕೆ ಹೋಗಿದ್ದೆ. ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಸಂಯೋಜನಾಧಿಕಾರಿಯಾಗಿದ್ದ ಪ್ರಸನ್ನ ಕುಮಾರ್ ಸಾರ್ ಅವರು ಶಿಬಿರದಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮೂಡಿಸುವ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದರು. ಪ್ರತಿದಿನವೂ ವಿದ್ಯಾರ್ಥಿಗಳಲ್ಲಿ ನಾಲ್ಕು ಜನರನ್ನು ಆಯ್ಕೆ ಮಾಡಿ ಅವರನ್ನೇ ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಮಾಡುತ್ತಿದ್ದರು. ಆ ವಿದ್ಯಾರ್ಥಿಗಳು ಯಾವ ವಿಷಯದ ಮೇಲೆ ಭಾಷಣ ಮಾಡಬೇಕು ಎಂದು ಮೊದಲೆ ಹೇಳುತ್ತಿದ್ದರು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷಣ ಕಲೆ ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿತ್ತು. ಈ ಶಿಬಿರವು ಸೇವಾ ಮನೋಭಾವ ಜೊತೆಗೆ ನಾಯಕತ್ವ, ಭಾಷಣ ಕಲೆ, ಜನರ ಜೊತೆ ಬೆರೆಯುವುದು, ನೈತಿಕ ಮೌಲ್ಯಗಳ ಬಗ್ಗೆ ತಲೆಗೆ ತುಂಬಿತು.
ಪ್ರತಿಯೊಬ್ಬರದ್ದು ಒಂದೊಂದು ಕನಸು, ಆಲೋಚನೆ, ಗುರಿಗಳಿರುತ್ತವೆ. ಅವು ತಲುಪಬೇಕಾದರೆ ಒಂದಷ್ಟು ನೈತಿಕ ಮಾಲ್ಯಗಳು, ಆತ್ಮಸ್ಥೈರ್ಯ, ವಿಶ್ವಾಸ, ಧೈರ್ಯ ಬೇಕು. ಈ ಮೂರು ಅಂಶಗಳು ನಮಗೆ ಸಿಗುವುದು ಎಲ್ಲೆಂದರೆ, ನಮ್ಮ ಪ್ರಾಥಮಿಕ ಶಾಲಾ ಹಂತದಿಂದ ಹಿಡಿದು ಕಾಲೇಜು ಮಟ್ಟದವರೆಗೂ ಬಂದು ಹೋದ ನಾವು ಮೆಚ್ಚಿದ ಶಿಕ್ಷಕರು ಹೇಳಿದ ಕಿವಿಮಾತು, ಸಲಹೆಗಳಲ್ಲಿ ಹಾಗೂ ಅವರ ವ್ಯಕ್ತಿತ್ವದಲ್ಲಿ.                 
ನಮ್ಮ ಶಿಕ್ಷಕರು ತರಗತಿಗಳಲ್ಲಿ ಹಲವು ಮೌಲ್ಯಧಾರಿತ ವಿಷಯಗಳ ಬಗ್ಗೆ ತಿಳಿಸುತ್ತಿದ್ದಾಗ, ಅದರ ಬಗ್ಗೆ ಗಂಭೀರವಾಗಿ ಕೇಳಿಸಿಕೊಳ್ಳಬೇಕು ಎಂಬ ಭಾವನೆ ನಮಗೆ ಆಗ ಬಂದಿರುವುದಿಲ್ಲ. ಆದರೆ ಇವತ್ತು ಆ ವಿಷಯಗಳ ಬಗ್ಗೆ ಆಲೋಚಿಸಿದರೆ ಅವುಗಳ ಅಗತ್ಯದ ಬಗ್ಗೆ ಅರಿವಾಗುತ್ತದೆ.
ಮನುಷ್ಯನಿಗೆ ಇಂದಿನ ಯಾಂತ್ರಿಕ ಜೀವನದಲ್ಲಿ ಯಾವುದರ ಬಗ್ಗೆಯೂ ಆಲೋಚಿಸುವ ಪುರುಸೊತ್ತಿಲ್ಲ, ಕನಿಷ್ಠ ನಾವು ಗೌರವಿಸುವ ಗುರುಗಳು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತ, ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳೊಣ. ಅದಕ್ಕೆ ಹೇಳುವುದು ಒಬ್ಬ ವ್ಯಕ್ತಿಯ ಬೆನ್ನ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ವಿಪರ್ಯಾಸವೆಂದರೆ ಇಂದು ಬಹುತೇಕರಿಗೆ ಇವೆರಡೂ ಇಲ್ಲ. ಏನಿವೇ ನಿಮಗೆ ನಿಮ್ಮ ಗುರುಗಳು ಹೇಳಿದ ಲೈಪ್ ಟೀಚಿಂಗ್ ಪಾಠ ನೆನಪಿದ್ಯಾ.. 

18 ಕಾಮೆಂಟ್‌ಗಳು:

Doddamane chandra chittaganahalli. ಹೇಳಿದರು...

Nice kano

Unknown ಹೇಳಿದರು...

Nice sir

Prakash ಹೇಳಿದರು...

ಸೂಪರ್ sir

ಆನಂದ್ ಎಚ್ ಹೇಳಿದರು...

ಅದ್ಭುತವಾದ ಸರ್

Prajval ಹೇಳಿದರು...

I think I just recalled everything about life morals, which I learnt from my teachers while reading. Very Nice

Unknown ಹೇಳಿದರು...

Super sir

Unknown ಹೇಳಿದರು...

Nice message to all 👍

Unknown ಹೇಳಿದರು...

Super sir

Unknown ಹೇಳಿದರು...

super Sir

ನಚಿಕೇತ ಹೇಳಿದರು...

ತುಂಬಾ ಚೆನ್ನಾಗಿದೆ.

Ananthakumarhs ಹೇಳಿದರು...

Super sir

Unknown ಹೇಳಿದರು...

Nice message sir yalargu

Unknown ಹೇಳಿದರು...

ಧನ್ಯವಾದಗಳು ಸರ್

Unknown ಹೇಳಿದರು...

Really great sir namma school life hella nenpaythu sir

Unknown ಹೇಳಿದರು...

Super sir🙏🙏🙏🙏🙏

Unknown ಹೇಳಿದರು...

Super sir

sarvejanahsukhinobhavantu ಹೇಳಿದರು...

ನಿಮ್ಮ ಸದಭಿಪ್ರಾಯ ಸರ್ವಾದರಣೀಯ. ಅಭಿನಂದನೆಗಳು🎉🎊 ಮತ್ತು ಧನ್ಯವಾದಗಳು. ಗುರುವನ್ನು ಮೀರಿದ ಶಿಷ್ಯ ನೀವಾಗಿರುವಿರಿ. ಶುಭಾಶಯಗಳು 🤝

Unknown ಹೇಳಿದರು...

Good message sir