⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಇದು ಕಣ್ಣಿಗೆ ಕಾಣುವುದಿಲ್ಲ, ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ. ಅದರ ರೂಪ, ಆಕಾರ, ಗಾತ್ರವು ನಮ್ಮ ಊಹೆಗೂ ಸಿಗುವುದಿಲ್ಲ. ಯಾರಿಗಾಗಿಯೂ ಎಂದೂ ಕಾಯುವುದಿಲ್ಲ. ಅದನ್ನು ನಿಯಂತ್ರಿಸಲು ಮನುಷ್ಯನ ಕೈಯಲ್ಲಿ ಸಾಧ್ಯವಿಲ್ಲ. ಆದರೂ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾ ಒಂದು ಸಂದರ್ಭ, ಸನ್ನಿವೇಶದಲ್ಲಿ ಅಗಾಧವಾದ ಪರಿಣಾಮ ಬೀರುತ್ತದೆ. ಆದರೂ ಕೂಡ ನಾವು ಅದರ ಬಗ್ಗೆ ಇನ್ನೂ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಅದೇ ಸರಳವಾಗಿ ಕನ್ನಡದಲ್ಲಿ ಮೂರಕ್ಷರ ಹಾಗೂ ಇಂಗ್ಲೀಷ್ ನಲ್ಲಿ ನಾಲ್ಕು ಅಕ್ಷರ ಪದವನ್ನು ಹೊಂದಿರುವ ಸಮಯ ಅಥವಾ Time.
ಒಂದು ಸುಂದರವಾದ ಮಾತಿದೆ “Life & Time are the best teachers. Life teaches us the use of time
& the time teaches us the value of the life”.
ಅಂದರೆ ಜೀವನ ಮತ್ತು ಸಮಯ ಎರಡು ಉತ್ತಮವಾದ ಶಿಕ್ಷಕರಿದ್ದಂತೆ. ಜೀವನವು ನಮಗೆ ಸಮಯದ ಮಹತ್ವದ ಬಗ್ಗೆ ತಿಳಿಸಿದರೆ, ಸಮಯವು ನಮಗೆ ಜೀವನದ ಮಹತ್ವದ ಬಗ್ಗೆ ತಿಳಿಸುತ್ತದೆ. ಅಂದರೆ ಯಾರಾದರೂ ಜೀವನದಲ್ಲಿ ಮಹತ್ವವಾದ ಸಾಧನೆ ಮಾಡಬೇಕು ಎಂದರೆ ಸಮಯ ಸದುಪಯೋಗದ ಬಗ್ಗೆ ಸ್ಪಷ್ಟವಾದ ಗುರಿ ಇರಬೇಕು. ಜೀವನ ಮತ್ತು ಸಮಯ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಆದರೂ ಅದ್ಯಾಕೋ ಈ ಟೈಂ ವಿಷಯದ ಬಗ್ಗೆ ಬಹುತೇಕರಿಗೆ ಅಸಡ್ಡೆ, ನಿರ್ಲಕ್ಷ್ಯ ಮನಸ್ಥಿತಿ ಇರುತ್ತದೆ. ಈ ವಿಷಯದ ಬಗ್ಗೆ ಶಿಸ್ತು, ಕಾಳಜಿ ಹೆಚ್ಚಿನ ಜನ ವಹಿಸುತ್ತಿಲ್ಲ ಎಂಬುವುದು ವಾಸ್ತವ. ಒಬ್ಬ ವ್ಯಕ್ತಿಯ ಜೀವನದ ಗುರಿ ಮತ್ತು ಅಭಿವೃದ್ದಿಯ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುವ ಮಹತ್ವವಾದ ಶಕ್ತಿ ಯಾವುದಕ್ಕಾದರೂ ಇದೇ ಎಂದರೆ ಅದು ಸಮಯಕ್ಕೆ ಮಾತ್ರ. ಆದರೂ ಇಂದಿಗೂ ಕೂಡ ಸಾಕಷ್ಟು ಜನ ಸಮಯದ ಮೌಲ್ಯದ ಬಗ್ಗೆ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವುದಕ್ಕಿಂದ ಸಮಯದ ಬೆಲೆ ಗೊತ್ತಿದ್ದರು ಕಾಲ ಹರಣ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲ್ಲ.
ಒಂದು ದಿನ ಬೆಂಗಳೂರಿನ ನಮ್ಮ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಚಾರಗೋಷ್ಠಿಯೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ಅತಿಥಿಗಳ ಭಾಷಣವಿತ್ತು. ಮಧ್ಯಾಹ್ನ 3 ಘಂಟೆಗೆ ಊಟಕ್ಕೆ ಬಿಟ್ಟರು. ಬಿಟ್ಟಿದ್ದೇ ತಡ ಕಾರ್ಯಕ್ರಮದಲ್ಲಿ ಇದ್ದ ಸಭಿಕರೆಲ್ಲರೂ ಊಟ ಬಡಿಸುತ್ತಿದ್ದ ಕ್ಯೂನಲ್ಲಿ ನಿಂತರು. ನಾವು ಕೆಲ ಸ್ನೇಹಿತರು ಸುಮ್ಮನೆ ಮಾತನಾಡುತ್ತ ನಿಂತುಕೊಂಡು 15 ನಿಮಿಷದ ನಂತರ ಕ್ಯೂಗೆ ಹೋದೆವು. ನಮ್ಮೆಲ್ಲರಿಗೂ ತುಂಬ ಹಸಿವಾಗುತ್ತಿತ್ತು. ಇನ್ನೇನು ನಮ್ಮ ತಟ್ಟೆಗೆ ಊಟ ಬಡಿಸುತ್ತಾರೆ ಎನ್ನುವಾಗ, ನಮ್ಮ ದುರದೃಷ್ಟಕ್ಕೆ ಊಟ ಸಂಪೂರ್ಣವಾಗಿ ಖಾಲಿಯಾಗಿತ್ತು. ಅರ್ಧ ಗಂಟೆಯಿಂದ ಕ್ಯೂನಲ್ಲಿ ನಿಂತು ಇನ್ನೇನು ಊಟ ಸಿಗುತ್ತದೆ ಎನ್ನುವಾಗ ಊಟ ಖಾಲಿಯಾಗಿದೆ ಎಂದು ಊಟ ಬಡಿಸುವವರಿಂದ ಉತ್ತರ ಕೇಳಿದಾಗ ನಮ ಪರಿಸ್ಥಿತಿ ಏನಾಗಿರಬೇಡ. ಕಾರ್ಯಕ್ರಮ ಮುಗಿದ ಮೇಲೆ 15 ನಿಮಿಷ ಮಾತನಾಡಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಊಟ ಬಡಿಸುವ ಸರದಿ ಸಾಲಿಗೆ ಹೋಗಿದ್ದರೆ ಖಂಡಿತವಾಗಿಯೂ ನಮಗೆ ಊಟ ಸಿಗುತ್ತಿತ್ತು. 15 ನಿಮಿಷ ವ್ಯರ್ಥ ಮಾಡಿದ ಪರಿಣಾಮ ಊಟ ಇಲ್ಲದೆ ಸಮಸ್ಯೆ ಎದುರಿಸುವಂತಾಯಿತು.
ಬೆಂಗಳೂರಿನ ಪಾರ್ಕೊಂದರಲ್ಲಿ ಬರಹದ ಬೋರ್ಡುವೊಂದಿತ್ತು. ಅದರಲ್ಲಿ ನಿನಗೆ ಸಾಧಿಸುವ ಛಲ, ವಿಶ್ವಾಸವಿದ್ದರೆ ಮಾತ್ರ ಸಾಲದು. ಸಮಯದ ಅರಿವು ನಿನಗಿದ್ದಾಗಲೇ ಗುರಿಯ ಬೆನ್ನತ್ತಿ, ದಡ ಸೇರುತ್ತಿಯಾ ಎಂದು ಬರೆದಿತ್ತು. ನಿಜ ಇಂದು ನಾವು ಬಹುತೇಕರು ಸಮಯದ ಮೌಲ್ಯದ ಬಗ್ಗೆಯೇ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದೇವೆ ಎಂದು ಅನ್ನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ಸಮಯ ವಹಿಸುತ್ತದೆ. ಆದರೂ ಸಮಯದ ಬೆಲೆ ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುತ್ತಿಲ್ಲ ಎಂಬುವುದೇ ವಿಪರ್ಯಾಸ. ಗುರಿ ಇಟ್ಟುಕೊಳ್ಳುತ್ತೇವೆ ಆದರೆ ಆ ಗುರಿ ತಲುಪಬೇಕಾದರೆ ಸಮಯ ಪಾಲಿಸಬೇಕೆಂಬ ನಿಯಮ ಮರೆತು ಬಿಡುತ್ತೇವೆ.
ಐ.ಎ.ಎಸ್ ಅಧಿಕಾರಿಯಾದ ಜಿ.ಜಗದೀಶ್ ಸಾರ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿದೆ. ಯಾರಿಗೆ ಆಗಲಿ ಜೀವನದಲ್ಲಿ ಯಶಸ್ಸುಗಳಿಸ ಬೇಕಾದರೆ ಅಡ್ಡದಾರಿಗಳಂತು ಇಲ್ಲ. ಶ್ರಮವಹಿಸಿ ಕಷ್ಟ ಬಿದ್ದಾಗಲೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಎಚ್ಚರವಿರಬೇಕು. ನಾನೊಬ್ಬ ಐ.ಎ.ಎಸ್ ಅಧಿಕಾರಿ, ನನ್ನ ಕಚೇರಿಗೆ ತಡವಾಗಿ ಹೋದರು ನನ್ನನ್ನು ಯಾರು ಕೇಳುವುದಿಲ್ಲ. ಆದರೂ ಬೆಳಗ್ಗೆ.10 ಗಂಟೆಯಾಗುತ್ತಿದ್ದರೆ ನನಗೆ ಬೆವರು ಬರುತ್ತದೆ. ಯಾಕೆಂದರೆ ನಾನೇ ಕಚೇರಿಗೆ ತಡವಾಗಿ ಹೋದರೆ ನನ್ನನ್ನು ನೋಡಿ ನಮ್ಮ ಇತರ ಸಿಬ್ಬಂದಿ ಕೂಡ ಕಚೇರಿಗೆ ತಡವಾಗಿ ಬರುವುದನ್ನು ಕಲಿಯುತ್ತಾರೆ. ನನಗೆ ಸಮಯದ ಅರಿವು ಇಲ್ಲದಿದ್ದರೆ, ನನ್ನ ಕೆಳಹಂತದ ಸಿಬ್ಬಂದಿ ಹೇಗೆ ತಾನೇ ಸಮಯಕ್ಕೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನೆ ಹಾಕಿದರು. ಅವರ ಮಾತಿನಲ್ಲಿ ಸಮಯದ ಮಹತ್ವದ ಬಗ್ಗೆ ಉಲ್ಲೇಖವಿತ್ತು.
ಒಮ್ಮೆ ಉದ್ಯಮಶೀಲತೆ ಮತ್ತು ಸ್ವ ಉದ್ಯೋಗಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಸೆಮಿನಾರ್ ಒಂದರಲ್ಲ್ಲಿ ಭಾಗವಹಿಸಿದ್ದೆ. ಸಂಪನ್ಮೂಲ ವ್ಯಕ್ತಿಯೊಬ್ಬರು ಸೆಮಿನಾರ್ ನಲ್ಲಿ ಭಾಗವಹಿಸಿದ್ದ ಸಭಿಕರಿಗೆ ಒಂದು ಪ್ರಶ್ನೆ ಹಾಕಿದರು. ನಿಮ್ಮ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಉಳಿತಾಯ ಮಾಡಿದ್ದೀರಾ ಎಂದರು. ಅದಕ್ಕೆ ಕೆಲವರು ಎಷ್ಟಿರುತ್ತೇ ಸಾರ್ 5 ಸಾವಿರ, ಮತ್ತೆ ಕೆಲವರು 10 ಸಾವಿರ ಎಂದರು, ಇನ್ನು ಕೆಲವರು ಬರುವ ಆದಾಯ ಸಂಪೂರ್ಣವಾಗಿ ಖರ್ಚಾಗುತ್ತದೆ. ಇನ್ನು ಉಳಿಸುವುದು ಎಲ್ಲಿಂದ ಎಂದು ಉತ್ತರಿಸಿದರು.
ಅದಕ್ಕೆ ಆ ಸಂಪನ್ಮೂಲ ವ್ಯಕ್ತಿ ಸರಿ ನೀವೆಲ್ಲರು ನಿಮ್ಮ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಿರೀ.. ಅದಕೋಸ್ಕರ ನಿಮ್ಮ ಅಕೌಂಟ್ ಗಳಿಗೆ ನಾವೇ ಪ್ರತಿದಿನ ಬೆಳಗ್ಗೆ 86,400 ರೂ. ಹಣ ಹಾಕುತ್ತೇವೆ. ಒಂದು ಕಂಡೀಷನ್ ಎಂದರೆ ಪ್ರತಿದಿನ ರಾತ್ರಿ 7 ರ ಒಳಗೆ ಆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ನಿಮ್ಮಿಷ್ಟ ಏನು ಬೇಕಾದರೂ ಖರೀದಿಸಬಹುದು, ಆದರೆ ಹಣ ಉಳಿದರೆ ವಾಪಸ್ ಪಡೆಯುತ್ತೇವೆ. ಪ್ರತಿದಿನವು ಅಂದರೆ ನೀವು ಬದುಕಿರುವವರೆಗೂ ಪ್ರತಿನಿತ್ಯವು 86,400 ರೂ. ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಲೇ ಇರುತ್ತೇವೆ. ಎಷ್ಟು ಜನ ಆ ಹಣ ಪ್ರತಿನಿತ್ಯ ಖರ್ಚು ಮಾಡುವ ಸಾಮರ್ಥ್ಯವಿದೆ, ಕೈ ಎತ್ತಿ ಎಂದಾಗ ಸೆಮಿನಾರ್ ಹಾಲ್ ನಲ್ಲಿದ್ದ ಎಲ್ಲರು ಕೈ ಎತ್ತಿದರು.
ಅರೇ ಸಾರ್ ನೀವು ಉಚಿತವಾಗಿ ಹಣ ಹಾಕಿದರೆ ಖರ್ಚು ಮಾಡಲು ನಮಗೇನು ಕಷ್ಟ. ಹಣ ಸಂಪಾದಿಸುವುದು ಕಷ್ಟ, ಆದರೆ ಖರ್ಚು ಮಾಡುವುದು ಕಷ್ಟವೇ. ನೀವು ನಮ್ಮ ಬ್ಯಾಂಕ್ ಅಕೌಂಟ್ ಗಳಿಗೆ ಹಣ ಹಾಕಿ ನೋಡಿ ಉಳಿಸಿದರೆ ನಮ್ಮ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇವೆ ಎಂದು ಸವಾಲಾಕಿದರು. ಅದಕ್ಕೆ ಸಂಪನ್ಮೂಲ ವ್ಯಕ್ತಿಗಳು 86,400 ರೂ. ಹಣವನ್ನು ಪ್ರತಿದಿನವೂ ಖರ್ಚು ಮಾಡುವ ಶಕ್ತಿ ಇದೆ ಎಂದು ನೀವು ಹೇಳುತ್ತಿದ್ದೀರಾ ಸಂತೋಷ. ಒಂದು ಗಮನಿಸಿ ಪ್ರತಿದಿನವೂ ನಿಮಗೆ 24 ಗಂಟೆ ಸಮಯ ಸಿಗುತ್ತದೆ. 24 ಗಂಟೆಯು 86,400 ಸೆಕೆಂಡ್ ಗಳನ್ನು ಒಳಗೊಂಡಿದೆ. ಪ್ರತಿದಿನವೂ ನೀವು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಜೀವನದ ಅಕೌಂಟ್ ಗೆ 24 ಗಂಟೆ ಅಂದರೆ 86,400 ಸೆಕೆಂಡ್ ಸಮಯದ ರೂಪದಲ್ಲಿ ಬರುತ್ತಿದೆ. ಆ ದಿನ ನೀವು ಸರಿಯಾಗಿ ಸಮಯ ಬಳಸದಿದ್ದರೆ ವಾಪಸ್ ಹೋಗುತ್ತಿದ್ದೆ. ನೀವು ಬದುಕಿರುವವರೆಗೂ ಪ್ರತಿದಿನವೂ 86,400 ಸೆಕೆಂಡ್ ಸಿಗುತ್ತದೆ. ಹಣವಾದರೆ ಸುಲಭವಾಗಿ ಖರ್ಚು ಮಾಡುತ್ತೇವೆ ಎಂದು ಹೇಳುತ್ತಿರಾ, ಆದರೆ ಸಮಯವನ್ನು ಸರಿಯಾಗಿ ಖರ್ಚು ಮಾಡಲು ಮಾತ್ರ ನಮಗೆ ಮನಸ್ಸೇ ಇಲ್ಲ. ಸಮಯಕ್ಕಿಂತ ನಮಗೆ ಹಣವೇ ಹೆಚ್ಚಾಯಿತು. ಇಲ್ಲಿಯವರೆಗೂ ಕೋಟ್ಯಾಂತರ ಸೆಕೆಂಡ್ ಗಳನ್ನು ವ್ಯರ್ಥ ಮಾಡಿದ್ದೇವೆ. ನೀವು ಒಂದು ನೆನಪಿನಲ್ಲಿ ಇಟ್ಟುಕ್ಕೊಳ್ಳಿ ಸಮಯವು ಹಣವನ್ನು ಮೀರಿದ್ದು, ಈ ವಿಷಯ ನಿಮಗೆ ಅರ್ಥವಾಗದೆ ಹೋದರೆ ಅದು ನಿಮ್ಮ ಕರ್ಮ ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ಈ ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಬಂದ ಮೇಲಂತೂ ಸಮಯವನ್ನು ಹೆಚ್ಚಾಗಿ ಕೊಲ್ಲುತ್ತಿದ್ದೇವೆ. ಅದರಲ್ಲೂ ಬಹುತೇಕ ಸಮಯವು ಸೋಷಿಯಲ್ ಮೀಡಿಯಾ (ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಫ್, ಯ್ಯೂಟುಬ್, ಇನ್ಸ್ ಟ್ರಾಗ್ರಾಮ್) ಮತ್ತಿತರಗಳ ವೀಕ್ಷಣೆಯಲ್ಲೇ ಕಳೆದು ಹೋಗುತ್ತಿದೆ. ಸಂವಹನ ದೃಷ್ಟಿಯಿಂದ ಸೋಷಿಯಲ್ ಮೀಡಿಯಾ ಬಳಕೆ ಅನಿವಾರ್ಯವಾದರೂ ಅಗತ್ಯಕ್ಕಿಂತ ಹೆಚ್ಚಾಗಿ ಅದಕ್ಕೆ ಸಮಯವನ್ನು ಮೀಸಲಿರಿಸುತ್ತಿದ್ದೇವೆ ಎಂದು ಅನ್ನಿಸುತ್ತದೆ. ಪತ್ರಿಕೆ ಓದಲು ಕೂಡ ಸಮಯ ಸಿಗದೆ ಪರಿಸ್ಥಿತಿಯನ್ನು ಸ್ವತಹ ನಾವೇ ನಿರ್ಮಾಣ ಮಾಡಿಕೊಂಡಿದ್ದೇವೆ. ಹಿಂದೆ ರಾತ್ರಿ ಊಟ ಮಾಡಿದ ನಂತರ ನಿದ್ದೆ ಬರುವವರೆಗೂ ಯಾವುದಾದರೂ ಕಥೆ, ಕಾದಂಬರಿ ಪುಸ್ತಕಗಳನ್ನು ಓದುತ್ತಿದ್ದೆವು. ಆದರೆ ಇಂದು ಆ ಪುಸ್ತಕಗಳ ಜಾಗಕ್ಕೆ ಮೊಬೈಲ್ ಪೋನ್ ಬಂದಿದೆ.
ಹಣವನ್ನು ಬಿಕ್ಷುಕ, ರೌಡಿ, ಮೋಸ ಮಾಡುವವನು, ವ್ಯಾಪಾರ, ಕೆಲಸ ಮಾಡುವವರು ಸೇರಿದಂತೆ ಎಲ್ಲರೂ ಸಂಪಾದಿಸಲು ಅವಕಾಶವಿದೆ. ಆದರೆ ಪ್ರಪಂಚದ ಯಾರಿಂದಲೂ ಕೂಡ ಕಳೆದು ಹೋದ ಒಂದೇ ಒಂದು ಮಿಲಿ ಸೆಕೆಂಡನ್ನು ಕೂಡ ಮತ್ತೆ ವಾಪಸ್ ತರಲು ಸಾಧ್ಯವಿಲ್ಲ. ಏಕೆಂದರೆ ಸಮಯ ಕ್ಷಣಿಕ. ಅದಕ್ಕೆ ಹೇಳುವುದು ಸಮಯದ ಶಕ್ತಿ ಅಪರಿಮಿತ. ಕಣ್ಣಿಗೆ ಕಾಣದ ಈ ಸಮಯ ಹಲವರ ಜೀವನವನ್ನು ಎತ್ತರಕ್ಕೆ ತೆಗೆದುಕೊಂಡು ಹೋದರೆ, ಅದೇ ಸಮಯ ಮತ್ತೆ ಕೆಲವರ ಜೀವನವನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ.
ಸಮಯದ ಗುಣ ಲಕ್ಷಣಗಳೇ ವಿಚಿತ್ರ ಮತ್ತು ವಿಶೇಷವಾದದು. ಸಮಯವನ್ನು ಯಾರು ತರಕಾರಿ, ಹೂಗಳಂತೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹೋಗಲಿ ಹಣ ಕೊಟ್ಟು ಖರೀದಿಸೋಣ ಎಂದರೆ ಯಾವುದೇ ಅಂಗಡಿಗಳಲ್ಲೂ ಸಿಗುವುದಿಲ್ಲ. ಹೋಗಲಿ ಮನೆ ಅಥವಾ ವಾಹನವನ್ನು ಬಾಡಿಗೆ ಪಡೆದ ರೀತಿಯಲ್ಲಿ ಯಾರಿಂದಲಾದರೂ ಬಾಡಿಗೆಗೆ ಪಡೆಯೋಣವೆಂದರೆ ಸಾಧ್ಯವೇ ? ಸಮಯವು ಸಮುದ್ರದ ಅಲೆಗಳ ಹಾಗೆ, ಏಕೆಂದರೆ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಅಲೆಗಳು ಅದರ ಪಾಡಿಗೆ ಬಂದು ನದಿ ದಡಕ್ಕೆ ಅಪ್ಪಳಿಸಿ ಹೋಗುತ್ತವೆ. ಆತ ರಾಷ್ಟ್ರಪತಿಯಾಗಲಿ, ಪ್ರಧಾನಮಂತ್ರಿಯಾಗಲಿ ಅಥವಾ ಎಷ್ಟೇ ಪ್ರಭಾವಿ, ಅಧಿಕಾರ ಹೊಂದಿರುವ ವ್ಯಕ್ತಿಯಾದರೂ ಆತನಿಗೂ ಕಾಯುವುದಿಲ್ಲ. ಅಷ್ಟರ ಮಟ್ಟಿಗೆ ಸಮಯವು ವಿಶೇಷತೆಯನ್ನು ಹೊಂದಿದೆ.
ಸಮಯದ ಗುಣ ಲಕ್ಷಣಗಳೇ ವಿಚಿತ್ರ ಮತ್ತು ವಿಶೇಷವಾದದು. ಸಮಯವನ್ನು ಯಾರು ತರಕಾರಿ, ಹೂಗಳಂತೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹೋಗಲಿ ಹಣ ಕೊಟ್ಟು ಖರೀದಿಸೋಣ ಎಂದರೆ ಯಾವುದೇ ಅಂಗಡಿಗಳಲ್ಲೂ ಸಿಗುವುದಿಲ್ಲ. ಹೋಗಲಿ ಮನೆ ಅಥವಾ ವಾಹನವನ್ನು ಬಾಡಿಗೆ ಪಡೆದ ರೀತಿಯಲ್ಲಿ ಯಾರಿಂದಲಾದರೂ ಬಾಡಿಗೆಗೆ ಪಡೆಯೋಣವೆಂದರೆ ಸಾಧ್ಯವೇ ? ಸಮಯವು ಸಮುದ್ರದ ಅಲೆಗಳ ಹಾಗೆ, ಏಕೆಂದರೆ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಅಲೆಗಳು ಅದರ ಪಾಡಿಗೆ ಬಂದು ನದಿ ದಡಕ್ಕೆ ಅಪ್ಪಳಿಸಿ ಹೋಗುತ್ತವೆ. ಆತ ರಾಷ್ಟ್ರಪತಿಯಾಗಲಿ, ಪ್ರಧಾನಮಂತ್ರಿಯಾಗಲಿ ಅಥವಾ ಎಷ್ಟೇ ಪ್ರಭಾವಿ, ಅಧಿಕಾರ ಹೊಂದಿರುವ ವ್ಯಕ್ತಿಯಾದರೂ ಆತನಿಗೂ ಕಾಯುವುದಿಲ್ಲ. ಅಷ್ಟರ ಮಟ್ಟಿಗೆ ಸಮಯವು ವಿಶೇಷತೆಯನ್ನು ಹೊಂದಿದೆ.
ಒಂದು ಕ್ಷಣದ ಬೆಲೆ ಗೊತ್ತಾದಬೇಕಾದರೆ ಕ್ರೀಡಾ ಸ್ಪರ್ಧೆಯಲ್ಲಿ ಸೋತ ವ್ಯಕ್ತಿಯನ್ನು ಕೇಳಬೇಕಂತೆ. ಉದಾಹರಣೆಗೆ ಎ ಎಂಬ ವ್ಯಕ್ತಿ 15 ನಿಮಿಷಕ್ಕೆ ರನ್ನಿಂಗ್ ರೇಸ್ ಮುಗಿಸಿರುತ್ತಾನೆ. ಆದರೆ 14 ನಿಮಿಷಕ್ಕೆ ರನ್ನಿಂಗ್ ರೇಸ್ ಮುಗಿಸಿದ ಬಿ ಎಂಬ ಮತ್ತೊಬ್ಬ ವ್ಯಕ್ತಿಗೆ ಚಿನ್ನದ ಪದಕ, ಪ್ರಶಸ್ತಿ ಹಣ, ಮಾಧ್ಯಮದಲ್ಲಿ ಪ್ರಚಾರ ಸಿಕ್ಕಿರುತ್ತದೆ. ಕೇವಲ 1 ನಿಮಿಷ ತಡವಾಗಿದಕ್ಕೆ ಎ ಎಂಬ ವ್ಯಕ್ತಿ ಚಿನ್ನದ ಪದಕ ಸೇರಿದಂತೆ ಎಲ್ಲವನ್ನು ಕಳೆದುಕೊಳ್ಳುತ್ತಾನೆ. 1 ನಿಮಿಷ ಈತನ ಬದುಕನ್ನೇ ಬುಡುಮೇಲು ಮಾಡಿ ಬಿಟ್ಟಿರುತ್ತದೆ.
ಯಾರೋ ಹೇಳುತ್ತಿದ್ದರು ಈ ಸಮಯಕ್ಕೆ ಮನುಷ್ಯನ ತರ ಸ್ವಾರ್ಥ, ಭೇದಭಾವವಿಲ್ಲ. ಯಾಕೆಂದರೆ ಆತ ಗುಡಿಸಲಲ್ಲಿ ವಾಸಿಸುತ್ತಿರುವ ಬಡವನಾದರೂ ಅಥವಾ ಐಷರಾಮಿ ಬಂಗಲೆಯಲ್ಲಿ ಜೀವನ ನಡೆಸುತ್ತಿರುವ ವ್ಯಕ್ತಿಯಾದರೂ ಇಬ್ಬರಿಗೂ ಈ ಸಮಯವು ದಿನನಿತ್ಯ 24 ಗಂಟೆಗಳನ್ನೇ ದಯಪಾಲಿಸುತ್ತದೆ. ಬಡವ ಎಂದು ಕಡಿಮೆ ಸಮಯ, ಶ್ರೀಮಂತ ಎಂದು ಹೆಚ್ಚು ಸಮಯ ಈ ನಿಸರ್ಗದಲ್ಲಿ ಸಿಗುವುದಿಲ್ಲ.
ಎಷ್ಟೋ ಬಾರಿ ಒಂದೆರೆಡು ನಿಮಿಷ ತಡವಾಗಿದಕ್ಕೆ ವಿಮಾನ, ರೈಲು, ಬಸ್ ಪ್ರಯಾಣದಲ್ಲಿ ಸಮಸ್ಯೆ ಎದುರಿಸಿರುತ್ತೇವೆ. ಎಷ್ಟೋ ಬಾರಿ ಶಾಲಾ, ಕಾಲೇಜಿನ ತಡವಾಗಿ ಶಿಕ್ಷಕರಿಂದ ಹೊಡೆಸಿಕೊಂಡಿದ್ದು, ಕಚೇರಿಗೆ ತಡವಾಗಿ ಹೋಗಿ ಹಿರಿಯ ಅಧಿಕಾರಿಗಳಿಂದ ಬೈಯಿಸಿಕೊಂಡ ಉದಾಹರಣೆಗಳು ಎಲ್ಲರ ಜೀವನದಲ್ಲೂ ಇರುತ್ತವೆ. ನಿಮಿಷಗಳು ತಡವಾಗಿದ್ದಕ್ಕೆ ನಮ್ಮ ವ್ಯಕ್ತಿತ್ವಕ್ಕೆ ನಾವೇ ಮಸಿ ಬಳಸಿಕೊಳ್ಳುವಂತಾಗುತ್ತದೆ.
ಜೀವನದಲ್ಲಿ ಗುರಿ ಇಟ್ಟುಕೊಳ್ಳುವುದು ಬಹಳ ಸುಲಭ. ಆದರೆ ಆ ಗುರಿ ತಲುಪಬೇಕಾದರೆ ಅಷ್ಟು ಸುಲಭವಲ್ಲ. ಅದನ್ನು ತಲುಪಲು ನಮಗೆ ಸೇತುವೆಯಾಗುವುದು ಸಮಯ ಮಾತ್ರ. ಸಮಯವನ್ನು ಸಮರ್ಕವಾಗಿ ಬಳಸಿಕೊಳ್ಳುವ ಮನಸ್ಥಿತಿ ಇಲ್ಲದೇ ಹೋದರೆ ನಮ್ಮ ಗುರಿ ಮುಟ್ಟುವುದು ಅಸಾಧ್ಯವಾದ ಮಾತು. ಒಂದು ಪೂರ್ವ ಯೋಜನೆ ಹಾಕಿಕೊಂಡು, ನಮಗೆ ಸಿಗುವ ಸಮಯನ್ನು ಅಗತ್ಯವಿರುವ ವಿಷಯಗಳಿಗೆ ಹೆಚ್ಚು ಸಮಯದ ಆದ್ಯತೆ ಕೊಟ್ಟು, ಉಳಿದ ವಿಷಯಗಳಿಗೆ ಕಡಿಮೆ ಸಮಯ ಕೊಡುತ್ತ ಸಾಗಿದರೆ ಸಮಯದ ಸಮರ್ಪಕ ಬಳಕೆಯಾಗುತ್ತದೆ. ಆ ಮೂಲಕ ನಮ್ಮ ಗುರಿ ತಲುಪುವ ದಾರಿಯು ಸುಗಮವಾಗುತ್ತದೆ.
ನಾವು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳದಿರಲು ಮೂಲ ಕಾರಣವೆಂದರೆ ಬಹುಶ ಅದು ನಮಗೆ ಉಚಿತವಾಗಿ ಬರುತ್ತಿರುವುದರಿಂದ. ಸಮಯಕ್ಕೆ ನಾವು ಯಾವುದೇ ಹಣ ಕೊಡುತ್ತಿಲ್ಲ. ಅಂಗಡಿಯಲ್ಲಿ 10 ನಿಮಿಷಕ್ಕೆ 50 ರೂ. ಹಣ ಕೊಟ್ಟು ಸಮಯ ಖರಿದೀಸುವ ವ್ಯವಸ್ಥೆಯು ಈ ಪ್ರಕೃತಿಯಲ್ಲಿ ಇದಿದ್ದರೆ ಆಗ ನಾವೆಲ್ಲರೂ ಸಮಯಕ್ಕೆ ಬೆಲೆ ಕೊಡುತ್ತಿದ್ದೇವೆನೋ, ಅದು ಉಚಿತವಾಗಿ ಬರುತ್ತಿರುವುದರಿಂದ ನಮಗೆ ಅದರ ಮೌಲ್ಯ ಗೊತ್ತಾಗುತ್ತಿಲ್ಲ.
“You kill time until time kills you”, ನೀನು ಇಂದು ಸಮಯವನ್ನು ಕೊಂದರೆ, ಸಮಯವು ಇಂದಲ್ಲಾ, ನಾಳೆ ನಿನ್ನನ್ನು ಕೊಲ್ಲುತ್ತದೆ. ಈ ವಾಕ್ಯ ಸದಾ ನಮ್ಮ ಮನಸ್ಸಲ್ಲಿ ಇರಲಿ.



3 ಕಾಮೆಂಟ್ಗಳು:
ಚಂದ ಅರ್ಥಪೂರ್ಣ ಸರ್.ಹೌದು ನಿಜವಾಗಿ ನಾವು ಹಣದಂತೆ ಬರುವ ಸಮಯವನ್ನು ಕೊಲ್ಲುತ್ತಿದ್ದೇವೆ.ಈ ಮೊಬೈಲ್ಗಳ ಮೂಲಕ.
ನಿಮ್ಮ ಬರಹಗಳ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.ಧನ್ಯವಾದಗಳು ಸರ್
ಚಂದ ಅರ್ಥಪೂರ್ಣ ಸರ್.ಹೌದು ನಿಜವಾಗಿ ನಾವು ಹಣದಂತೆ ಬರುವ ಸಮಯವನ್ನು ಕೊಲ್ಲುತ್ತಿದ್ದೇವೆ.ಈ ಮೊಬೈಲ್ಗಳ ಮೂಲಕ.
ಕಾಮೆಂಟ್ ಪೋಸ್ಟ್ ಮಾಡಿ