⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ನಮ್ಮದೊಂದು ರೀತಿ ಕನಸುಗಳ ಜೀವನ. ಕನಸುಗಳನ್ನು ಕಾಣದೇ ಜೀವನ ಮಾಡುತ್ತಿರುವವರು ಬಹುಃಶ ಯಾರು ಸಿಗಲ್ಲ. ಪ್ರತಿದಿನವೂ ಒಂದೊಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಜೀವನಪರ್ಯಂತ ನಾವು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಒಮ್ಮೊಮ್ಮೆ ನಾವು ಅಂದುಕೊಂಡ ಕನಸುಗಳು ಈಡೇರದಿದ್ದಾಗ ಅಥವಾ ಅವು ಈಡೇರಲ್ಲಾ ಎಂದು ಗೊತ್ತಾದಾಗ ಮನಸ್ಸಿಗೆ ಆಗುವ ನೋವಿನ ಯಾತನೆ ಕಡಿಮೆ ಏನಲ್ಲ.
ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಬರುವ ಸಮಸ್ಯೆಗಳು ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿಬಿಡುತ್ತವೆ. ಬಹುಪಾಲು ಜನ ತಮ್ಮ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಈ ಕನಸಿಗೆ ಕೊಳ್ಳಿ ಇಡುವುದೇ ಈ ಸಮಸ್ಯೆಗಳು ಎಂಬ ಮಹಾ ಶತ್ರು.
ಮೊನ್ನೆ ಸ್ನೇಹಿತರೊಬ್ಬರ ಮದುವೆಗಾಗಿ ದೂರದ ವಿಜಯಪುರ (ಬಿಜಾಪುರ)ಕ್ಕೆ ಹೋಗಿದ್ದೆ. ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಹೋದ ಸಂದರ್ಭವದು. ಇಂಡಿ ಪಟ್ಟಣದಿಂದ ಬಸ್ ನಲ್ಲಿ ವಿಜಯಪುರ ನಗರಕ್ಕೆ ಹೋಗುತ್ತಿದ್ದಾಗ ಎಲ್ಲೂ ಕೃಷಿ ಚಟುವಟಿಕೆಗಳೇ ಕಾಣುವುದಿಲ್ಲ. ಬಹುತೇಕ ಜಮೀನು ಮಳೆಯಾಶ್ರಿತ ಕೃಷಿ ಜಮೀನು. ಮಳೆ ಬಿದ್ದರೆ ಕೃಷಿ ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಇಲ್ಲಿನ ಜನರು ಅಷ್ಟೇ ಅತ್ಯಂತ ಸರಳವಾಗಿ ಜೀವನ ನಡೆಸುವವರು, ಅವರನ್ನು ನೋಡುವಾಗಲೇ ಅದು ಅರ್ಥವಾಗುತ್ತದೆ. ಬಿಜಾಪುರ ನಗರವಂತು ಇತಿಹಾಸದ ಪುಟಗಳನ್ನೇ ಹೊಂದಿದ ನಗರ. ಹಲವು ಸಾಮ್ರಾಜ್ಯಗಳು ಆಳಿದ ಪ್ರದೇಶವಾದ್ದರಿಂದ ನಗರದ ಯಾವುದೇ ಭಾಗಕ್ಕೆ ಹೋದರು ಪುರಾತನವಾದ ಕೋಟೆಗಳ ದರ್ಶನವಾಗುತ್ತದೆ.
ಬಿಜಾಪುರ ನಗರದಲ್ಲಿನ ಗೋಲಗುಮ್ಮಟವು ಪ್ರಸಿದ್ದವಾದ ಸ್ಮಾರಕ. ಪುರಾತನವಾದ ಈ ಸ್ಮಾರಕವು ನೋಡಲು ಹಾಗೂ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾಗಿದೆ. ಗೋಲಗುಮ್ಮಟದ ಮುಂಭಾಗದಲ್ಲಿನ ವಸ್ತು ಸಂಗ್ರಹಾಲಯದಲ್ಲಿನ ಹಲವು ಪುರಾತನವಾದ ಶಿಲ್ಪಕಲಾಕೃತಿಗಳು ಗಮನಸೆಳೆಯುತ್ತದೆ.
ಗೋಲಗುಮ್ಮಟ ವೀಕ್ಷಿಸಿ ಗೇಟಿನ ಮುಂಭಾಗಕ್ಕೆ ಬಂದಾಗ ಅಲ್ಲಿ ಸುಮಾರು 45 ವರ್ಷದ ಬಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ತನ್ನ ಕೈಯಲ್ಲಿ ಹಿಡಿದಿದ್ದ ಚಿತ್ರಗಳ ಆಲ್ಬಮ್ ತೋರಿಸಿದರು. ನೋಡಿ ಸಾರ್ ಈ ಚಿತ್ರಗಳಲ್ಲಿನ ಸ್ಥಳಗಳು ಬಿಜಾಪುರ ನಗರದಲ್ಲಿವೆ. ನೀವು ನಡೆದುಕೊಂಡೋ, ಆಟೋದಲ್ಲೋ ಹೋಗಿ ನೋಡಲು ಸಾಧ್ಯವಿಲ್ಲ. ನನಗೆ 350 ರೂ.ಕೊಡಿ ನನ್ನ ಟಾಂಗ (ಜಟಾಕ ಬಂಡಿ) ದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದ.
ಆಟೋ, ಗಾಡಿ, ಬಸ್ ಗಳಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ನನಗೆ, ಟಾಂಗದಲ್ಲಿ (ಕುದುರೆಯ ಜಟಾಕ ಬಂಡಿ) ಒಮ್ಮೆಯು ಹೋಗಿರಲಿಲ್ಲ. ಟಾಂಗದಲ್ಲಿ ಹೋಗುವ ಆಸೆಯಿಂದ 250ರೂ. ಕೊಡುತ್ತೇನೆ ಎಂದು ಹೇಳಿ ಟಾಂಗ ಹತ್ತಿದೆ. ಟಾಂಗದಲ್ಲಿ ಹೋಗುವುದೇ ಒಂದು ರೋಮಾಂಚನ. ಅದರಲ್ಲಿ ಸಾಗುತ್ತಿದ್ದಾಗ ಹಾಗೆಯೇ ಸುಮ್ಮನೆ ಟಾಂಗ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಮಾತಿನತ್ತ ಸೆಳೆದೆ. ಆತ ಮಾತನಾಡುತ್ತ ಕಳೆದ 18 ವರ್ಷಗಳಿಂದ ಟಾಂಗ ಓಡಿಸುತ್ತಲೇ ಜೀವನ ಸಾಗಿಸುತ್ತಿದ್ದೇನೆ ಸಾರ್. ಇಬ್ಬರು ಮಕ್ಕಳು, ಒಬ್ಬರು 10 ನೇ ತರಗತಿ, ಮತ್ತೊಬ್ಬರು 8 ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಇಲ್ಲ, ಇರುವುದು 2 ಸಾವಿರ ರೂ.ಗಳ ಪುಟ್ಟದಾದ ಬಾಡಿಗೆ ಮನೆಯಲ್ಲಿ. ಪತ್ನಿಯು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಾಳೆ. ಇಬ್ಬರು ದುಡಿಯುವುದು ಅನಿವಾರ್ಯ. ದಿನಕ್ಕೆ ಹೆಚ್ಚೆಂದರೆ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ತೋರಿಸಿ 500 ರೂ. ಸಂಪಾದಿಸುತ್ತೇನೆ. ಖರ್ಚೆಲ್ಲಾ ಹೋಗಿ 350 ರೂ. ಉಳಿಯುತ್ತದೆ. ಅದರಲ್ಲೇ ಕುಟುಂಬ ನಿರ್ವಹಣೆ. ಬೇರೆಯವರ ರೀತಿ ಬದುಕು ನಮ್ಮದಲ್ಲ. ಬೆಳಗ್ಗೆ ಮಾಡಿದ ಊಟವನ್ನೇ ಮಧ್ಯಾಹ್ನ, ರಾತ್ರಿಯು ತಿನ್ನುತ್ತೇವೆ. ಹಬ್ಬ ಹರಿದಿನಗಳು ಬಂದರೆ ಮಾತ್ರ ವಿಶೇಷವಾದ ಅಡುಗೆ ಇರುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವ ಪದ್ದತಿ.
ಇನ್ನು ನಾವು ಬಡವರಾಗಿರುವುದರಿಂದ ನಮ್ಮ ಸಂಬಂಧಿಕರ್ಯಾರು ನಮ್ಮನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ನಮ್ಮ ಮನೆಗೂ ಅವರು ಬರುವುದಿಲ್ಲ. ಆದರೂ ಜೀವನದಲ್ಲಿ ಸಂತೋಷದಿಂದ ಇದ್ದೇನೆ. ಅದರರ್ಥ ಕಷ್ಟಗಳು ಇಲ್ಲವೆಂದಲ್ಲಾ, ಕಷ್ಟಗಳಲ್ಲೇ ಸಂತೋಷವನ್ನು ಕಾಣುತ್ತಿದ್ದೇನೆ. ಬೇರೆಯವರನ್ನೂ ನೋಡಿದಾಗ ಕೆಲವೊಮ್ಮೆ ನನಗೂ ಬೇಸರವಾಗುತ್ತದೆ. ಆದರೆ ನನ್ನ ಸಾಮರ್ಥ್ಯ, ಶಕ್ತಿ ಅರಿವು ನನಗಿದೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎಂಬ ನಿಲುವು ನನ್ನದು ಸಾರ್ ಎಂದು ಹೇಳುವ ಆತನ ಮಾತುಗಳಲ್ಲಿ ಬದುಕಿನ ಬಗ್ಗೆ ಪ್ರೀತಿ, ಅಪಾರ ನಿರೀಕ್ಷೆ ಇತ್ತು.
ಮೊನ್ನೆ ವಿಜಯಪುರ ಜಿಲ್ಲಾಧಿಕಾರಿಗಳು ಕಾರಿನಲ್ಲಿ ಹೋಗುತ್ತಿದ್ದರೆ ರಸ್ತೆಯಲ್ಲಿದ್ದ ಪೊಲೀಸರು ಕಾರನ್ನು ನೋಡಿದ ಕೂಡಲೇ ಸೆಲ್ಯೂಟ್ ಹೊಡೆದರು. ನನಗೆ ಆಗ ಅರ್ಥವಾಯಿತು ಅಧಿಕಾರಿಯಾದರೆ ಯಾವ ರೀತಿ ಗೌರವ ಸಿಗುತ್ತದೆ ಎಂದು. ಆ ಕಾರಣದಿಂದಲೇ ನನ್ನ ಒಬ್ಬ ಮಗನನ್ನಾದರೂ ಜಿಲ್ಲಾಧಿಕಾರಿ ಮಾಡಬೇಕೆಂಬ ಕನಸು ನನ್ನದು. ನನ್ನಂತಹ ಎಷ್ಟೋ ಬಡ ಕುಟುಂಬದವರ ಪಾಲಿಗೆ ನನ್ನ ಮಗ ನೆರಳಾಗಬೇಕು ಎನ್ನುವುದು ನನ್ನ ಆಸೆ. ಆತನನ್ನು ಓದಿಸುತ್ತಿದ್ದೇನೆ, ಮುಂದೆನಾಗುತ್ತದೋ ನೋಡೊಣ ಸಾರ್ ಎಂದು ಮಾತು ಮುಗಿಸಿದ. ತನ್ನ ಟಾಂಗದಲ್ಲೇ ಬಿಜಾಪುರ ನಗರದಲ್ಲಿನ ಬಿಜಾಪುರ ಕೋಟೆ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಜಮ್ಮಾ ಮಸೀದಿ, ಆಲಿ ಬುರ್ಜ್ ಸೇರಿದಂತೆ ಮತ್ತಿತರರ ಸ್ಥಳಗಳನ್ನು ತೋರಿಸಿದ. ಕಷ್ಟವಿದ್ದರು ಆ ಬಗ್ಗೆ ಚಿಂತಿಸದೆ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಆತನ ಚಿತ್ತವಿದ್ದದ್ದು ಮಾತ್ರ ಗಮನಾರ್ಹ.
ಕಳೆದ ಹಲವಾರು ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಓಡಾಡುತ್ತಿದ್ದೇನೆ. ಕೆಲ ದಿನಗಳ ಹಿಂದೆ ಒಂದು ಘಟನೆ ನಡೆಯಿತು. ಬೆಂಗಳೂರಿನಿಂದ ಆಂಧ್ರಪ್ರದೇಶದ ಪುಟ್ಟಪರ್ತಿ ಹಾಗೂ ಅನಂತಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೋಗಿದ್ದೆ. ಕಂಡೆಕ್ಟರ್ ಪ್ರಯಾಣಿಕರಿಗೆಲ್ಲಾ ಟಿಕೆಟ್ ಕೊಟ್ಟು ಸಾಕಾಯಿತು ಎಂದು ತಮ್ಮ ಸೀಟ್ ನಲ್ಲಿ ಬಂದು ಕೂತರು.
ಏನ್ ಸಾರ್ ಸಾಕಾಯಿತೇ ಎಂದೆ, ಅದಕ್ಕೆ ಅವರು ಬಿಡಿ ಸಾರ್ ನಮ್ಮ ಕಂಡೆಕ್ಟರ್ ಮತ್ತು ಡ್ರೈವರ್ ಗಳ ಕಥೆ ಹೇಳುವುದೇ ಬೇಡ. ಬರುವ ಕಡಿಮೆ ಸಂಬಳದಲ್ಲಿ ಜೀವನ ಮಾಡಬೇಕಾದ ಅನಿವಾರ್ಯತೆ ನಮ್ಮದು. ಹಲವು ಬಾರಿ ನಮ್ಮ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿದರೂ ಕನಿಷ್ಟ ವೇತನ ನಿಗದಿಪಡಿಸಿಲ್ಲ. ಬಸ್ ನಲ್ಲಿ ಓಡಾಡಿ ಓಡಾಡಿ ಸಾಕಾಗುತ್ತದೆ. ಕಾಲು ನೋವಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಸರಿಯಾಗಿ ರಜೆಯು ನೀಡುವುದಿಲ್ಲ. ನಮ್ಮ ಸಾಂದರ್ಭಿಕ ರಜೆಗಳನ್ನು ಪಡೆಯಬೇಕಾದರೂ ಡಿಪೋ ಮ್ಯಾನೇಜರ್ ಗಳ ಕೈ ಕಾಲು ಹಿಡಿಯಬೇಕು. ಅದು ಹೋಗಲಿ 35 ವರ್ಷ ವೃತ್ತಿ ಮಾಡಿದರೂ ನಿವೃತ್ತಿ ನಂತರ ಬರುವ ಪಿಂಚಣಿ ಯಾವುದಕ್ಕೆ ಸಾಕಾಗುತ್ತದೆ. ನಿಜವಾಗಲೂ ಹೇಳುತ್ತೇನೆ ಸಾರ್ ಪ್ರತಿದಿನವೂ ಬಸ್ ನಲ್ಲಿ ಏನೋ ರಾದ್ದಾಂತ ಇದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಚಿಲ್ಲರೆ ಸಮಸ್ಯೆ. ಕೆಲ ಪ್ರಯಾಣಿಕರಂತು ಚಿಲ್ಲರೆ ಕೂಡಲೇ ಕೊಡಬೇಕು ಎನ್ನುತ್ತಾರೆ. ಆದರೆ ಹಣ ಸಂಗ್ರಹವಾಗಿರುವುದಿಲ್ಲ, ಆ ಮೇಲೆ ಕೊಡುತ್ತೇನೆ, ಟಿಕೆಟ್ ಮೇಲೆ ಬರೆದುಕೊಡುತ್ತೇವೆ ಎಂದರು ಕೇಳುವುದಿಲ್ಲ. ಇಲ್ಲ ನೀವು ಹಣ ತೆಗೆದುಕೊಳ್ಳಲು ಈ ರೀತಿ ಚಿಲ್ಲರೆ ಇದ್ದರು ಕೂಡ ಕೊಡುವುದಿಲ್ಲ ಎನ್ನುತ್ತಾರೆ.
ನಿಜ ಹೇಳುತ್ತಾನೇ ಸಾರ್ ಇಲ್ಲಿಯವರೆಗೂ ನಾನು ಪ್ರಯಾಣಿಕರ ಹಣ ಪಡೆದಿಲ್ಲ. ನಾನೇ ಹೋಗಿ ಯಾರಿಗಾದರೂ ಚಿಲ್ಲರೆ ಕೊಡಬೇಕಾದರೆ ಕೇಳಿ ಕೊಡುತ್ತೇನೆ. ಕೆಲವರು ಟಿಕೆಟ್ ಪಡೆಯದೆ ಪ್ರಯಾಣಿಸಿ ಚೆಕಿಂಗ್ ಅವರ ಕೈಗೆ ಸಿಗುತ್ತಾರೆ. ನಮಗೂ ದಂಡ, ಸಾಲದಕ್ಕೆ ಇನ್ಕ್ರಿಮೆಂಟ್ ಕಟ್. ಎಷ್ಟೇ ಸಾರಿ ಕೂಗಿ ಕೇಳಿದರೂ ಕೆಲವರು ಟಿಕೆಟ್ ಪಡೆಯದೆ ಸಮಸ್ಯೆ ತಂದೊಡ್ಡುತ್ತಾರೆ. ಕೆಲವೊಮ್ಮೆ ಬಸ್ ನಲ್ಲಿ ಇರುವ ಪ್ರಯಾಣಿಕರನ್ನು ಸ್ವಲ್ಪ ಒಳಕ್ಕೆ ಹೋಗಿ ಬೇರೆಯವರು ಹತ್ತಬೇಕು ಎಂದರೆ ನಮ್ಮ ಮೇಲೆ ದಬಾಯಿಸುತ್ತೀಯಾ ಎಂದು ಜೋರು ಮಾಡುತ್ತಾರೆ. ನಿಲ್ದಾಣ ಇಲ್ಲದಿದ್ದರು ಬಸ್ ನಿಲ್ಲಿಸುವಂತೆ ಒತ್ತಾಯಿಸುತ್ತಾರೆ. ನಿಲ್ಲಿಸದೆ ಹೋದರೆ ಜಗಳ. ಕೆಲ ಕಂಡೆಕ್ಟರ್ ಗಳು ಕೆಟ್ಟವರಿರಬಹುದು. ಆದರೆ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ.
8 ವರ್ಷಗಳ ನನ್ನ ಸರ್ವೀಸ್ ಲೈಪ್ ಸಾಕಾಗಿ ಹೋಗಿದೆ ಸಾರ್. ಒಂದು ದಿನ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಸಂಚಾರ ನಿಲ್ಲಿಸಿದರೆ ಸಮಾಜದಲ್ಲಿ ಏನಾಗುತ್ತದೆ, ಜನಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತದೆ ಎಂದು ಹೇಳಬೇಕಾಗಿಲ್ಲ. ಆದರೂ ಸರಕಾರಗಳು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯನ್ನು ಮನುಷ್ಯರಂತೆ ಕಾಣುವುದಿಲ್ಲ. ಸಮಾಜದಲ್ಲೂ ನಮ್ಮನ್ನು ಬೇಕಾಬಿಟ್ಟಿಯಾಗಿ ಕಾಣುತ್ತಾರೆ. ನಮ್ಮ ಸೇವೆ ಬಗ್ಗೆ ಯಾರಿಗೂ ಬೆಲೆ ಇಲ್ಲ. ಕಳೆದ 8 ವರ್ಷಗಳಿಂದ ನಿಗದಿತ ಸಮಯಕ್ಕೆ ಎಷ್ಟೋ ಜನ ಪ್ರಯಾಣಿಕರನ್ನು ಅವರ ಕಚೇರಿ, ಮನೆ, ಶಾಲಾ, ಕಾಲೇಜು ತಲುಪಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಬ್ಬರೇ ಒಬ್ಬರು ನಮಗೆ ಥ್ಯಾಂಕ್ಸ್ ಹೇಳಿಲ್ಲ. ನಮಗೆ ಪ್ರಯಾಣಿಕರಿಂದ ಬೇಕಿರುವುದು ಒಂದು ಥ್ಯಾಂಕ್ಸ್, ಅವರಿಂದ ಗೌರವ ಅಷ್ಟೇ.
ನಾನು ಕೂಡ ಸ್ನಾತ ಕೋತ್ತರ ಪದವೀಧರ.
ಆದರೆ ಕುಟುಂಬ ದ ಆರ್ಥಿಕ ಪರಿಸ್ಥಿತಿಯಿಂದ ಕಂಡೆಕ್ಟರ್ ಹುದ್ದೆ ಸಿಕ್ಕಿತೆಂದು ಸೇರಿದೆ. ನಿಜ ಹೇಳಬೇಕೆಂದರೆ ನಾನು ಪಿ.ಎಸ್.ಐ ಆಗಬೇಕೆಂದು ಕನಸು ಕಂಡವನು. ಎಷ್ಟೋ ಬಾರಿ ಈ ವೃತ್ತಿ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇದ್ದು ಬಿಡೋಣ ಎಂದರೆ ಊರಿನಲ್ಲಿ ಜಮೀನು ಕೂಡ ಇಲ್ಲ. ನನ್ನ ಕಟುಂಬಕ್ಕೆ ನಾನೇ ಆಧಾರ. ಮದುವೆಯಾಗಿ 3 ವರ್ಷವಾಗಿದೆ. ಈಗ ಕೆಲಸ ಬಿಡುತ್ತೇನೆ ಎಂದರೆ ಪತ್ನಿ ಒಪ್ಪುವುದಿಲ್ಲ.
ಆದರೂ ಜೀವನದಲ್ಲಿ ಭರವಸೆಯಂತು ಕಳೆದುಕೊಂಡಿಲ್ಲ. ಏನೇ ಕಷ್ಟವಾದರೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಬೇಕು ಎಂಬ ನನ್ನ ಬಾಲ್ಯದ ಕನಸು ಈಗಲೂ ಕಾಡುತ್ತದೆ. ಇರಲಿ ಎಷ್ಟೇ ಕಷ್ಟಗಳು ಬರಲಿ, ಪಿ.ಎಸ್.ಐ ಆಗಬೇಕೆಂಬ ಆಸೆಗೆ ಅವು ಅಡ್ಡಿಬರಲಾರವು. ಅಷ್ಟಕ್ಕೂ ಪಿ.ಎಸ್.ಐ ಆಗಬೇಕು ಎನ್ನುವುದು ನನ್ನ ಕನಸಲ್ಲ, ಅದು ನನ್ನ ಪ್ರಾಣ ಎಂದರು. ಅವರಲ್ಲಿದ್ದ ಸಾಧಿಸುವ ಛಲ ಇಂದಲ್ಲಾ ನಾಳೆ ಎಸ್.ಐ ಆಗುವ ಲಕ್ಷಣವಿತ್ತು. ಅಷ್ಟರಲ್ಲಾಗಲೇ ಅನಂತಪುರ ಬಸ್ ನಿಲ್ದಾಣ ಬಂತು.
ಒಬ್ಬರು ಹೇಳುತ್ತಾರೆ ಸಾರ್ ನಾನು 2 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಅಲ್ಲಿಂದಲೂ ಇಲ್ಲಿಯವರೆಗೂ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದೇನೆ. ವಿಧಿಯು ನನ್ನ ಜೀವನದಲ್ಲಿ ಚೆನ್ನಾಗಿ ಆಡಿದೆ ಎಂದು ಹೇಳಿದರು. ಮತ್ತೊಬ್ಬ ಮಹಿಳೆ ಹೇಳುತ್ತಾರೆ ನನ್ನ ಗಂಡ ವಿಪರಿತ ಕುಡುಕ, ಇಬ್ಬರು ಹೆಣ್ಣು ಮಕ್ಕಳು ಬೇರೆ ಇದ್ದಾರೆ. ನಾನು ಕೂಲಿ ಮಾಡಿ ಕುಟುಂಬ ಸಾಕಬೇಕು. ಮತ್ತೊಬ್ಬರು ಹೇಳುತ್ತಾರೆ ನಮ್ಮ ಅಣ್ಣ ಹಣದ ಆಸೆಗೆ ಬಿದ್ದು ಕುಡುಕನಿಗೆ ಅದರಲ್ಲೂ ಅದಾಗಲೇ ಎರಡು ಮದುವೆ ಆದವನಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ಮದುವೆ ಆದ ಕೆಲವೇ ತಿಂಗಳುಗಳಿಗೆ ಆತ ನನ್ನನ್ನು ಬಿಟ್ಟು ಹೋದ. ಒಬ್ಬ ಮಗನೊಂದಿಗೆ ಜೀವನ ಸಾಗಿಸುತ್ತಿದ್ದೇನೆ.
ಈಗೆ ಹಲವರು ತಮ್ಮದೇ ಆದ ನೋವುಗಳನ್ನು ಹೇಳಿಕೊಂಡ ಸಂದರ್ಭಗಳನ್ನು ನೋಡಿದ್ದೇನೆ. ಆದರು ಇವರ್ಯಾರು ಬದುಕಿನ ಮೇಲಿನ ಭರವಸೆ ಕಳೆದುಕೊಂಡವರಲ್ಲ. ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಕಂಡ ಕನಸನ್ನು ನನಸಾಗಿಸಲು ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ವಿನಯದಿಂದ ಸ್ವಾಗತಿಸಿ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ.
ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಒಮ್ಮೆ ಹೀಗೆ ಹೇಳಿದ್ದರು, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳು ಬಂದಿಲ್ಲ, ಎಂದರೆ ನಾವು ಸಾಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ. ನಮಗೆ ಕಷ್ಟಗಳು ಬರುತ್ತಿವೆ ಎಂದರೆ ಅದರರ್ಥ ನೀವು ಯಾವುದೋ ಒಂದು ಸಾಧನೆ ಮಾಡಲು ಹೊರಟಿದ್ದೀರಾ ಎಂಬುವುದು ನಿಜ ಎಂದು ಬಹಳ ಅದ್ಬುತವಾಗಿ ಹೇಳಿದ್ದರು.
ಕನಸು ಕಾಣಿ, ಕನಸು ಕಾಣುವಲ್ಲೂ ಹಿಂಜರಿಕೆ ಬೇಡ. ಏಕೆಂದರೆ ಕನಸು ಕಾಣುವುದಕ್ಕೆ ಯಾವುದೇ ಸರಕಾರಗಳು ನೇರ ಅಥವಾ ಪರೋಕ್ಷ ತೆರಿಗೆಗಳು ಹಾಕುವುದಿಲ್ಲ. ನಮ್ಮ ಕನಸುಗಳು ಯಾವಾಗಲೂ ಉನ್ನತವಾಗಿರಲಿ. ಆದರೆ ಕನಸುಗಳನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯ, ಶಕ್ತಿ ನಾವೇ ಸಂಪಾದಿಸಿಕೊಳ್ಳಬೇಕು.
ಒಂದಂತು ನಿಜ ನಮ್ಮ ಜೀವನದ ಕಷ್ಟಗಳು ಎಂದಿಗೂ ನಮ್ಮ ಕನಸಿಗೆ ಅಡ್ಡಿ ಬರಬಾರದು. ಕಷ್ಟಗಳನ್ನು ಮೀರಿ ಬದುಕು ಕಟ್ಟಿಕೊಂಡು ಕನಸುಗಳನ್ನು ನನಸಾಗಿಕೊಳ್ಳುವ ಧ್ಯೇಯ ನಮ್ಮದಾಗಿರಬೇಕು. ಕೇವಲ ಕನಸು ಕಾಣುತ್ತ ಸಾಗಿದರೆ ಏನು ಪ್ರಯೋಜನ, ಅದರ ಈಡೇರಿಕೆಗೆ ಅಪಾರ ಶ್ರಮ ಅಗತ್ಯ.
ಅಷ್ಟಕ್ಕೂ ನಿಮ್ಮ ಕನಸುಗಳು ಏನಂತಿರಾ.. ಅವುಗಳ ಬೆನ್ನತ್ತಿ ಹೊರಡಿ..



3 ಕಾಮೆಂಟ್ಗಳು:
Life is a circle of happiness sadness hard time and good times if you"re going through a hard time know that good times are on the way
Life os a spirit of god
Motivational writing.due to difficult ies v lose sportive spirit . Again and again motivation is needed.modi motivated million hearts to do something good .u r also one of the motivators around us.good habit keep it up.
ಕಾಮೆಂಟ್ ಪೋಸ್ಟ್ ಮಾಡಿ