⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಒಮ್ಮೆ ಹೈದರಾಬಾದ್ ನಗರಕ್ಕೆ ಹೋಗಿದ್ದೆ. ಹೈದರಾಬಾದಿನಲ್ಲೂ ನೋಡಬಹುದಾದ ಹತ್ತಾರು ಪ್ರವಾಸಿ ಸ್ಥಳಗಳಿದ್ದು, ಅವುಗಳನ್ನು ನೋಡುವ ಸಲುವಾಗಿ ತೆರಳಿದ್ದೆ. ಮೊದಲ ಬಾರಿ ಹೈದರಾಬಾದ್ ಗೆ ಹೋಗಿದ್ದ ಕಾರಣ ನಗರದ ಪರಿಚಯ ಅಷ್ಟಕಷ್ಟೇ. ಆದರೂ ಭಾಷೆ ಗೊತ್ತಿದ್ದರಿಂದ ಸಮಸ್ಯೆಯಾಗಲಿಲ್ಲ.
ಆಗೋ ಈಗೋ ಚಾರ್ ಮಿನಾರ್ ತಲುಪಿದೆ. ಸಿನಿಮಾಗಳಲ್ಲಿ ಹಲವು ಬಾರಿ ನೋಡಿದ್ದ ನನಗೆ ಚಾರ್ ಮಿನಾರ್ ಹತ್ತಿರದಿಂದ ನೋಡಿದಾಗ ಖುಷಿಯಾಯಿತು. ಅಲ್ಲಿಂದ ಗೋಲ್ಕಂಡ ಪೋರ್ಟ್ ನತ್ತ ಪಯಣ, ತುಂಬಾ ಪುರಾತನವಾದ ಕೋಟೆ ಅದು, ಹತ್ತಿ ಇಳಿಯುವಷ್ಟರಲ್ಲಿ ಬೆವರು ಇಳಿಯುತ್ತದೆ. ಒಂದು ದಿನ ಪೂರ್ತಿ ನೋಡಿದರೂ ಸಾಲದು. ಅಲ್ಲಿಂದ ಹುಸೇನ್ ಸಾಗರ್ ಇದು ದೊಡ್ಡದಾದ ಕೆರೆ. ಇದು ನೋಡಿದ ನಂತರ ಹೊರಟಿದ್ದು ಸಲಾರ್ ಜಂಗ್ ಮ್ಯೂಸಿಯಂ, ಅಬ್ಬಾ ಈ ವಸ್ತು ಸಂಗ್ರಹಾಲಯವಂತು ಹೈದರಾಬಾದ್ ಪ್ರಾಂತ್ಯವನ್ನು ಆಳಿದ ರಾಜರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ತಿಳಿಸುತ್ತದೆ. ಮ್ಯೂಸಿಯಂ ನಾಲ್ಕು, ಐದು ಮಹಡಿಗಳಲ್ಲಿ ಇದೆ, ತುಂಬಾ ದೊಡ್ಡದು.
ಹೈದಾರಬಾದ್ ನ ಸುತ್ತಾಟ ಮಧ್ಯೆ ರಸ್ತೆಯೊಂದರಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್ ಮೇಲೆ ಸಿಕಿಂದ್ರಾಬಾದ್ ಬೋರ್ಡು ಇತ್ತು.ಚಲನ ಚಿತ್ರಗಳಲ್ಲಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ ಹೆಸರು ಕೇಳಿದ್ದ ನೆನಪು ಬಿಟ್ಟರೆ ಬೇರೆನೂ ಗೊತ್ತಿರಲಿಲ್ಲ. ಸಿಕಿಂದ್ರಾಬಾದ್ ಒಮ್ಮೆ ನೋಡಿ ಬಿಡೋಣ ಎಂದು ಬಸ್ ಹತ್ತಿ ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣಕ್ಕೆ ಬಂದೆ. ಹಾಗೆಯೇ ನಡೆದು ಮುಂದೆ ಹೋಗುತ್ತಿದ್ದಾಗ ರಸ್ತೆಯ ಭಾಗವೊಂದರಲ್ಲಿ ಸ್ವಾಮೀಜಿಯೊಬ್ಬರ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಹಾಕಲಾಗಿತ್ತು. ಅದೇಕೊ ಉಪನ್ಯಾಸ ಕೇಳುವ ಮನಸ್ಸಾಯಿತು. ಉಪನ್ಯಾಸದ ಸ್ಥಳ ಹುಡುತ್ತ ಹೊರಟರೆ ದೊಡ್ಡ ದೇಗುಲವೊಂದು ಕಾಣಿಸಿತು. ನನಗೂ ಬೆಳಗ್ಗೆಯಿಂದ ಸುತ್ತಾಡಿ ಸಾಕಾಗಿತ್ತು, ಸರಿ ಎಂದು ಒಳಗೆ ಹೋಗಿ ದೇವರ ದರ್ಶನ ಮಾಡಿದ ನಂತರ ಅಲ್ಲಿಯೇ ಹಿರಿಯ ಸ್ವಾಮೀಜಿಯವರೊಬ್ಬರ ಧಾರ್ಮಿ ಕ ಉಪನ್ಯಾಸ ಕಾರ್ಯಕ್ರಮವನ್ನು ಕೆಲವೊತ್ತು ಕೇಳೋಣ ಎಂದು ಅಲ್ಲಿಯೇ ಕೂತೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಸಮೂಹವಿತ್ತು.
ಸ್ವಾಮೀಜಿ ತಮ್ಮ ಉಪನ್ಯಾಸ ಪ್ರಾರಂಭಿಸುತ್ತ ಮಧ್ಯದಲ್ಲಿ ಒಂದು ಪ್ರಶ್ನೆ ಕೇಳಿದರು ಸಕ್ಸಸ್ ಎಂದರೆ ಏನು ? ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಯುವಕ ಸಕ್ಸಸ್ ಎಂದರೆ ಇಂಜಿನಿಯರ್ ಆಗಿ ತಿಂಗಳಿಗೆ 1 ಲಕ್ಷ ಸಂಬಳವನ್ನು ಪಡೆದರೆ ಅದೇ ಸಕ್ಸಸ್ ಎಂದ. ಸ್ವಾಮೀಜಿ ಮತ್ತೆ ಪ್ರಶ್ನೆ ಕೇಳಿದರೂ ಸಕ್ಸಸ್ ಎಂದರೆ ಏನು ? ಆಗ ಒಬ್ಬ ಹುಡುಗಿ ಉತ್ತರ ಕೊಟ್ಟಳು ಸಕ್ಸಸ್ ಎಂದರೆ ಐ.ಎ.ಎಸ್ ಆಗುವುದು. ಐ.ಎ.ಎಸ್ ಪಾಸ್ ಆದರೆ ಜೀವನದಲ್ಲಿ ಸಕ್ಸಸ್ ಆದಂಗೆ ಎಂದಳು. ಅದ್ಯಾಕೋ ಸ್ವಾಮೀಜಿಗೆ ಈ ಉತ್ತರ ಇಷ್ಟವಾಗಲಿಲ್ಲ ನಾನು ಮತ್ತೇ ಅದೇ ಪ್ರಶ್ನೆ ಕೇಳುತ್ತೇನೆ ಸಕ್ಸಸ್ ಎಂದರೆ ಏನು ? ಎಂದರು. ಮಧ್ಯ ವಯಸ್ಸಿನ ಒಬ್ಬ ವ್ಯಕ್ತಿ ಉತ್ತರಿಸುತ್ತ ನಾನು ಪದವಿ ಪಡೆದಿದ್ದೇನೆ. ಕೆಲಸವು ಸಿಕ್ಕಿದೆ. ಒಳ್ಳೆಯ ವೇತನವು ಬರುತ್ತದೆ. ಮುಂದೆ ಮದುವೆಯಾಗುತ್ತೇನೆ, ಆ ನಂತರ ನನ್ನ ಮಕ್ಕಳನ್ನು ಚೆನ್ನಾಗಿ ಓದಿಸುತ್ತೇನೆ. ಅವರನ್ನು ಒಳ್ಳೆಯ ಕೆಲಸ ಪಡೆಯುವಂತೆ ತಯಾರು ಮಾಡುತ್ತಾನೆ. ನನ್ನ ಕುಟುಂಬಕ್ಕೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಇವಿಷ್ಟು ನಾನು ಅಷ್ಟುಕಟ್ಟಾಗಿ ನೆರವೇರಿಸಿದರೆ ಜೀವನದಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ಆದಂಗೆ ಅರ್ಥ ಎಂದು ಪಠಪಠಣೆ ಉತ್ತರಿಸಿದ.
ಕೆಲವರ ಅಭಿಪ್ರಾಯಗಳನ್ನು ಆಲಿಸಿದ ನಂತರ ಸ್ವಾಮಿಜೀಗಳು ತಮ್ಮ ಭಾಷಣವನ್ನು ಮುಂದುವರೆಸುತ್ತ ಸಕ್ಸಸ್ ಎಂಬ ಇಂಗ್ಲೀಷ್ ಪದದ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಷ್ಟೇಕೆ ನಿಮ್ಮ ಕೈಗಳಲ್ಲಿ ಮೊಬೈಲ್ ಪೋನ್ ಗಳು ಇವೆ. ಅದರಲ್ಲಿ ಇಂಟರ್ ನೆಟ್ ಸಂಪರ್ಕವಂತು ಇದ್ದೇ ಇರುತ್ತದೆ. ಗೂಗಲ್ ಗೆ ಹೋಗಿ ಸಕ್ಸಸ್ ಎಂದರೆ ಏನು ಎಂದು ಪ್ರಶ್ನೆ ಟೈಪಿಸಿ ಏನು ಉತ್ತರ ಬರುತ್ತದೋ ನನಗೆ ಹೇಳಿ ಎಂದರು. ಸ್ವಾಮಿಜೀಗಳು ಪಿ.ಹೆಚ್.ಡಿ ಓದಿದ್ದರಿಂದ (ಬ್ಯಾನರ್ ನಲ್ಲಿ ವಿದ್ಯಾಬ್ಯಾಸದ ಬಗ್ಗೆ ನಮೂದಿಸಿದ್ದರು) ಟೆಕ್ನಾಲಜಿಯ ಅರಿವು ಇತ್ತು.
ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಬಹುತೇಕರು ತಮ್ಮ ಕೈಯಲಿದ್ದ ಮೊಬೈಲಿನಲ್ಲಿ ಸಕ್ಸಸ್ ಎಂದರೇನು ಎಂದು ಟೈಪು ಮಾಡಿದ್ದೇ ತಡ ಸಾವಿರಾರು ಉತ್ತರಗಳು ಗೂಗಲ್ ನಲ್ಲಿ ಹರಿದಾಡಿತು. ಇವುಗಳಲ್ಲಿ ಯಾವುದನ್ನೂ ಆಯ್ದುಕೊಂಡು ಸ್ವಾಮೀಜಿಗೆ ಹೇಳಬೇಕು ಎಂದು ಸಭಿಕರಿಗೆ ಅರ್ಥವಾಗಲಿಲ್ಲ. ಒಬ್ಬರಂತೂ ಸ್ವಾಮಿಜೀ ನೀವೇಳಿದಂಗೆ ಸಕ್ಸಸ್ ಎಂದರೆ ಏನು ಎಂದು ಗೂಗಲ್ ನಲ್ಲಿ ಪ್ರಶ್ನೆ ಹಾಕಿದರೆ ಸಾವಿರಾರು ಉತ್ತರಗಳೇನು ಸಿಕ್ಕಿದೆ. ಅದರಲ್ಲಿ ಸೂಕ್ತ ಯಾವುದು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದ.
ಮುಗುಳ್ನೆಗೆಯಿಂದ ನಕ್ಕ ಸ್ವಾಮಿಜೀ ನೀವೇಲ್ಲರು ನನ್ನನ್ನು ಕ್ಷಮಿಸಬೇಕು ಇಷ್ಟೊತ್ತು ನಿಮಗೆ ತೊಂದರೆ ಕೊಟ್ಟಿದ್ದಕ್ಕೆ, ತಲೆ ಕೆಡಿಸಿದಕ್ಕೆ. ಸಕ್ಸಸ್ ಎಂದರೆ ಏನು ? ಅದಕ್ಕೆ ಸೂಕ್ತ ಉತ್ತರ ನನ್ನಿಂದ ನೀವೆಲ್ಲರೂ ನಿರೀಕ್ಷಿಸುತ್ತಿದ್ದಿರಾ ಎಂದು ಗೊತ್ತು. ಈಗ ಆ ವಿಷಯದತ್ತ ಹೊರಳಿದರೆ ಪ್ರತಿಯೊಬ್ಬರು ತಾವು ಸಕ್ಸಸ್ ಆಗಬೇಕು ಎಂದು ಭಾವಿಸುತ್ತಾರೆ ಹಾಗೂ ಜೀವನ ಪೂರ್ತಿ ಹೋರಾಟ ನಡೆಸುತ್ತಾರೆ. ಅದರಲ್ಲಿ ಕೆಲವರು ಸಫಲರಾಗುತ್ತಾರೆ, ಕೆಲವರು ವಿಫಲರಾಗುತ್ತಾರೆ. ಸಕ್ಸಸ್ ಎಂಬ ಈ ಮೂರಕ್ಷರ ಮನುಷ್ಯನ ಜೀವನದ ಒಂದು ಅವಿಭಾಜ್ಯ ಅಂಗವೂ ಹೌದು.
ಸಕ್ಸಸ್ ಎಂದರೆ ನೀವು ಅಂದುಕೊಂಡಂಗೆ ದೊಡ್ಡ ವ್ಯಾಖ್ಯಾನವೇನಿಲ್ಲ. ಸುಲಭವಾಗಿ ಹೇಳಬಹುದಾದರೆ ಸಕ್ಸಸ್ ಎಂದರೆ ನಾವು ಈ ಭೂಮಿಯ ಮೇಲೆ ಇಲ್ಲದಿದ್ದರು ಕೂಡ ನಮ್ಮನ್ನು ಕನಿಷ್ಟ ಕೆಲವು ಮಂದಿಯಾದರೂ ನೆನಪಿಸಿಕೊಂಡು ನಮ್ಮ ಬಗ್ಗೆ ಒಳ್ಳೆಯ ಭಾವನೆ ಹಾಗೂ ಪ್ರೀತಿ ವ್ಯಕ್ತಪಡಿಸಿದರೆ ಅದಕ್ಕಿಂದ ದೊಡ್ಡ ಸಾಧನೆ, ಸಕ್ಸಸ್ ಬೇರೆ ಯಾವುದಿದೇ ಹೇಳಿ ಎಂದು ಅರ್ಥಗರ್ಭಿತವಾಗಿ ಸ್ವಾಮಿಜೀ ಉತ್ತರಿಸಿದರು.
ಇಂದು ಸಮಾಜದಲ್ಲಿ ಏನಾಗಿದೆ ಎಂದರೆ ನಿಮ್ಮೆಲ್ಲರ ಪ್ರಕಾರ ತಿಂಗಳಿಗೆ ಲಕ್ಷ ರೂ. ಸಂಪಾದನೆ ಮಾಡಿದರೆ ಸಕ್ಸಸ್. ಐ.ಎ.ಎಸ್ ಅಧಿಕಾರಿಯಾದರೆ ಸಕ್ಸಸ್. ಡಾಕ್ಟರ್, ಇಂಜಿನಿಯರ್ ಆದರಂತೂ ಸಕ್ಸಸ್ ತಲುಪುಬಿಟ್ಟಿದ್ದೇವೆ ಎಂದು ಆಕಾಶದಲ್ಲೇ ತೇಲುತ್ತೇವೆ. ನೆನಪಿನಲ್ಲಿಟ್ಟುಕೊಳ್ಳಿ ದೇಶದಲ್ಲಿ ಎಷ್ಟೋ ಜನ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಸಾವಿರಾರು ಜನ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವಿಪರ್ಯಾಸವೆಂದರೆ ಲಕ್ಷ ರೂ ಗಳಲ್ಲಿ ಸಂಪಾದನೆ ಮಾಡುತ್ತಿರುವ ಶೇ.99 % ಜನ ಯಾರಿಗೂ ಗೊತ್ತಿಲ್ಲ. ಅಷ್ಟೇಕೆ ಸ್ವಾತಂತ್ರ್ಯ ಬಂದಾಗನಿಂದಲೂ ಆದ ಸಾವಿರಾರು ಐ.ಎ.ಎಸ್, ಐ.ಪಿ.ಎಸ್ ಸೇರಿದಂತೆ ಮತ್ತಿತರ ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿಗಳ ಪೈಕಿ ನಮ್ಮ ಎರಡು ಕೈಗಳಲ್ಲಿ ಇರುವ ಹತ್ತು ಬೆರಳುಗಳ ಸಂಖ್ಯೆಯ ಅಧಿಕಾರಿಗಳ ಹೆಸರಷ್ಟೇ ನಮಗೆ ನೆನಪಿದೆ ಎಂದರು ಸ್ವಾಮೀಜಿ.
ಕೋಟ್ಯಾಂತರ ಆಸ್ತಿ, ಅಧಿಕಾರ, ಸಂಬಳ ಪಡೆಯುವವರೆಲ್ಲಾ ಸಕ್ಸಸ್ ಆಗಿದ್ದಾರೆ ಎಂದರೆ ಅವರು ಯಾರು ಸಮಾಜಕ್ಕೆ ಇಂದಿಗೂ ಗೊತ್ತೆ ಇಲ್ಲವಲ್ಲ. ಸಕ್ಸಸ್ ಎಂದರೆ ಅದು ನಮ್ಮ ಕಣ್ಣಿಗೆ ಕಾಣದ ಶಕ್ತಿ. ಕನಿಷ್ಟ ಅವನು ಪ್ರಾಥಮಿಕ ಶಾಲೆಗೆ ಹೋಗದಿದ್ದರು, ಲಕ್ಷಗಳಲ್ಲಿ ಸಂಪಾದಿಸದಿದ್ದರು, ಕಾರು, ಬಂಗಲೆ, ಆಳುಗಳು ಇಲ್ಲದಿದ್ದರು ಕೂಡ ಯಾರಾದರೂ ಕಷ್ಟ ಎಂದು ಬಂದಾಗ ಯಾರ ಮನಸ್ಸು ಕರಗುತ್ತದೋ, ತಮ್ಮ ಕೈಯಿಂದ ಆಗುವ ಸಹಾಯ ಕಷ್ಟದಲ್ಲಿ ಇದ್ದವರು ಕೇಳುವುದಕ್ಕಿಂದ ಮುಂಚೆಯೇ ಮಾಡಬೇಕೆಂಬ ನಿಷ್ಕಲ್ಮಷ ಮನಸ್ಸು ಇರುತ್ತದೋ, ಅಹಂಕಾರ, ಅಸೂಹೆ, ದರ್ಪ, ನಾನೇ ಹೆಚ್ಚು ಎಂಬ ಕಲ್ಪನೆ ಇಲ್ಲದೇ ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಸರಳವಾಗಿ ಜೀವನ ಸಾಗಿಸುತ್ತಾನೋ ಅವನೇ ನಿಜವಾದ ವ್ಯಕ್ತಿತ್ವವುಳ್ಳ ಮನುಷ್ಯ.
ಆತ ನಿಜವಾಗಲೂ ಜೀವನದಲ್ಲಿ ಸಕ್ಸಸ್ ಆದ ಎಂದೇ ಅರ್ಥ. ಮಹಾತ್ಮ ಗಾಂಧಿಜೀ, ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಲಾಲ್ ಬಹುದ್ದೂರ್ ಶಾಸ್ತ್ರಿಗಳು ಸೇರಿದಂತೆ ಮತ್ತಿತರರು ಲಕ್ಷಗಳಲ್ಲಿ ವೇತನ ಪಡೆಯುತ್ತಿರಲಿಲ್ಲ. ಕಾರು ಬಂಗಲೆ ಅವರ ಹತ್ತಿರ ಇರಲಿಲ್ಲ. ಆದರೂ ಸಕ್ಸಸ್ ಆದ ವ್ಯಕ್ತಿಗಳೆಂದರೆ ತಕ್ಷಣ ನಮಗೆ ನೆನಪಾಗುವುದು ಇಂತವರು ಮಾತ್ರ. ಶತಮಾನಗಳು ಕಳೆದರೂ ಇಂತಹವರು ಸಮಾಜದಿಂದ ದೂರಿಸರಿಯಲ್ಲ ಎಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದ ಸಭಿಕರ ಕಣ್ಣನ್ನು ಸ್ವಾಮಿಜೀಗಳು ತೆರೆಸಿದರು.
ಹಾಗೇಯೇ ಸ್ವಾಮಿಜೀಯವರು ಮುಖ್ಯ ಅಂಶದತ್ತ ಪ್ರಸ್ತಾಪಿಸಿದರು, ನಮ್ಮ ಜೀವನದ ಬಹುಪಾಲು ಸಮಯವನ್ನು ಬೇರೆಯವರೂ ಬೆಳೆಯಬಾರದು ಎಂಬ ಕಾರಣಕ್ಕಾಗಿಯೇ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಬಿಡುತ್ತೇವೆ. ಬೇರೆಯವರೂ ಬೆಳೆಯಬಾರದು ಎಂದು ವಿನಿಯೋಗಿಸುವ ಸಮಯದಲ್ಲಿ ಅರ್ಧ ಭಾಗವನ್ನು ನಾವು ಬೆಳೆಯಬೇಕು ಎಂದು ಬಳಸಿಕೊಂಡರೆ ಸಕ್ಸಸ್ ಎಲ್ಲಿ ತಾನೇ ನಮ್ಮಿಂದ ದೂರ ಹೋಗುತ್ತದೆ. ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದು ನಮ್ಮ ಜನಕ್ಕೆ ಅರ್ಥವಾಗಲ್ಲ ಎಂದು ಕುಟುಕಿದರು.
ಇಷ್ಟಾಗುವ ಹೊತ್ತಿಗೆ ಮಳೆ ಮುನ್ಸೂಚನೆ ಕಾಣುತ್ತಿತ್ತು. ಆ ಕಾರಣದಿಂದ ಅಲ್ಲಿಂದ ಎದ್ದು ಬಸ್ ಹತ್ತಿ ಪಯಣ ಬೆಳೆಸಿದೆ. ಬಸ್ ನಲ್ಲಿ ಹೋಗುತ್ತಿದ್ದಾಗ ಸ್ವಾಮಿಜೀಗಳ ಆ ಉಪನ್ಯಾಸವು ನನಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು, ಆಲೋಚಿಸುವಂತೆ ಮಾಡಿತು. ಸ್ವಾಮೀಜಿಗಳ ಆ ಮಾತು ಇಂದಿನ ಸಮಾಜದ ನಡೆಯುತ್ತಿರುವ ದಾರಿಯ ಬಗ್ಗೆ ವಿಶ್ಲೇಷಿಸುತ್ತದೆ. ಯಾವುದಾದರೂ ಒಂದು ಹುದ್ದೆ, ಲಕ್ಷಗಳಲ್ಲಿ ಸಂಬಳ, ಕಾರು, ಸೈಟು, ಜಮೀನು ಸಂಪಾದಿಸಿಬಿಟ್ಟರೆ ಜೀವನದಲ್ಲಿ ನಾವೇ ಶ್ರೇಷ್ಟ ಎಂದು ಭಾವಿಸಿಕೊಳ್ಳುತ್ತೇವೆ. ಸಕ್ಸಸ್ ನ ತುತ್ತ ತುದಿಗೆ ತಲುಪಿಯೇ ಬಿಟ್ಟೆವೆಂದು ತೇಲಾಡಿ ಬಿಡುತ್ತೇವೆ. ವಿಶೇಷವೆಂದರೆ ನಾವು ತಿಳಿದುಕೊಂಡಗೆ, ಮಾಡಿದ್ದು ಸಾಧನೆಯೇ ಅಲ್ಲ, ಅದು ಸಕ್ಸಸ್ ನ ಒಂದು ಭಾಗವಷ್ಟೇ ಎಂದು ಗೊತ್ತಾಗುವಷ್ಟಿಗೇ ಜೀವನವೇ ಮುಗಿಸಿಬಿಟ್ಟಿರುತ್ತೇವೆ. ಭ್ರಮೆಯಲ್ಲೇ ಜೀವನ ಮುಳುಗಿ ಹೋಗಿರುತ್ತದೆ.
ಜೀವನದಲ್ಲಿ ಸಕ್ಸಸ್ ಪಡೆಯಬೇಕು ಎಂದು ಏನೇನೋ ಮಾಡುತ್ತೇವೆ. ಸಕ್ಸಸ್ ಎಂದರೆ ಏನು ಎಂದು ನಿರ್ದಿಷ್ಟವಾಗಿ ಗೊತ್ತಿಲ್ಲದಿದ್ದರು ಸಕ್ಸಸ್ ಅನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ಎಷ್ಟೋ ಬಾರಿ ನಾವು ಬೆಳೆಯಬೇಕು ಎಂದು ಯಾರು ಯಾರಿಗೋ ಕಷ್ಟ ಕೊಡುತ್ತೇವೆ. ಯಾರ ಯಾರ ಮೇಲೋ ಕೋಪ ಮಾಡಿಕೊಂಡು, ದೂರ ಮಾಡಿಕೊಳ್ಳುತ್ತೇವೆ. ಇನ್ನೊಬ್ಬರು ಬೆಳೆಯದಂಗೆ ನೋಡಿಕೊಳ್ಳುತ್ತೇವೆ. ಅಸೂಹೆ, ಅಹಂಕಾರ ತಲೆ ತುಂಬ ತುಂಬಿಸಿಕೊಳ್ಳುತ್ತೇವೆ. ಅಂತಿಮವಾಗಿ ಸಣ್ಣದಾಗಿ ಏನಾದರೂ ಮಾಡಿದರೆ ಅದನ್ನೇ ಸಕ್ಸಸ್ ಎಂದು ಭಾವಿಸಿ ಆತ್ಮತೃಪ್ತಿ ಪಡೆಯುತ್ತೇವೆ.
ಒಂದಂತು ಸತ್ಯ ಸ್ವಾಮಿಜೀಯ ಮಾತಿನಂತೆ ಸಕಸ್ಸ್ ಎಂದರೆ ಹಣ, ವಸ್ತು, ಅಧಿಕಾರ ಅಲ್ಲ. ಅದು ಮನುಷ್ಯರನ್ನು ಮೀರಿದ ಕಲ್ಪನೆ. ನಮ್ಮ ಬಗ್ಗೆ ನಾಲ್ಕು ಜನ ಯಾವಾಗ ಒಳ್ಳೆದು ಮಾತನಾಡಿಕೊಳ್ಳುತ್ತಾರೋ, ನಮ್ಮ ವ್ಯಕ್ತಿತ್ವ ನೋಡಿ ಗೌರವ, ಪ್ರೀತಿ ಕೊಡಲು ಒಂದಿಬ್ಬರಾದರೂ ಜೀವನದಲ್ಲಿ ಸಿಕ್ಕರೆ ಅದೇ ಸಕ್ಸಸ್. ಡಿಕ್ಷನರಿ, ಗೂಗಲ್ ಸರ್ಚ್ ಇಂಜಿನಲ್ಲೂ ಹುಡುಕುವ ಅವಶ್ಯಕತೆ ಇಲ್ಲ. ಸಕ್ಸಸ್ ಗೆ ಶಾರ್ಟ್
ಕಟ್ಟಂತು ಇಲ್ಲ.



7 ಕಾಮೆಂಟ್ಗಳು:
nice
ಅದ್ಬುತ ಲೇಖನ ಗಿರೀಶ್ 👌🏻
Nice sir
Super sir
ಅದ್ಬುತವಾದ ಲೇಖನ,ಈಗಿನ ಹಾಗೂ ಮುಂದಿನ ಯುವ ಪೀಳಿಗೆಗೆ ಸ್ವಾಮಿಜಿ ಹಾಗೂ ತಾವು ಹೇಳಿದ ವಿಷಯವನ್ನು ಒಳ್ಳೆಯ ಸಂದೇಶ ಅನ್ನುವುದಕ್ಕಿಂತ ಮಾನವನ ಬದುಕಿಗೆ ಬೇಕಾಗುವ ಹಿತವಚನಗಳು ಎಂಬ ಮಾತೇ ಸರಿ....
Nice sir
ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ವಿಚಾರ
ಕಾಮೆಂಟ್ ಪೋಸ್ಟ್ ಮಾಡಿ