⏯ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಮೊನ್ನೆ ಸರಕಾರಿ ಶಾಲೆಯೊಂದಕ್ಕೆ ಹೋಗಿದ್ದೆ. ಅಲ್ಲಿನ ವಿದ್ಯಾರ್ಥಿಗಳ ಜೊತೆ ಹಾಗೆ ಮಾತನಾಡುತ್ತಿದ್ದಾಗ ಅದರಲ್ಲಿ ಒಬ್ಬ ನಾನು ದೊಡ್ಡವನಾದ ಮೇಲೆ ಶಿಕ್ಷಕನಾಗುತ್ತೇನೆ ಎಂದು ತನ್ನ ಮನದಾಳದ ಅಭಿಪ್ರಾಯವನ್ನು ಹಂಚಿಕೊಂಡ. ನನಗೂ ಆಶ್ಚರ್ಯವಾಗಿದ್ದು, ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ತಾನು ವೈದ್ಯ, ಇಂಜನಿಯರ್, ವಿಜ್ಞಾನಿ, ಐ.ಎ.ಎಸ್ ಅಧಿಕಾರಿ ಆಗಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು. ಆದರೆ ಈತ ಮಾತ್ರ ಶಿಕ್ಷಕ ವೃತ್ತಿ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದ.
ಗಮನಾರ್ಹ ಅಂಶವೆಂದರೆ ಸಾಕಷ್ಟು ಜನ ಶಿಕ್ಷಕರಾಗಲು ಇಷ್ಟಪಡುವುದಿಲ್ಲ, ಬಹಳ ಸೀಮಿತ ಜನ ಮಾತ್ರ ಶಿಕ್ಷಕ ವೃತ್ತಿಯ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ಕಾರಣ ಶಿಕ್ಷಕ ವೃತ್ತಿಯಲ್ಲಿ ಸಿಗುವ ಕಡಿಮೆ ಸಂಬಳ ಮತ್ತು ಆರ್ಥಿಕವಾಗಿ ಸದೃಡರಾಗುವುದು ಕಷ್ಟ ಹಾಗೂ ವಿದ್ಯಾರ್ಥಿಗಳನ್ನು ನಿಭಾಯಿಸುವುದು ಸುಲಭವಲ್ಲ ಎಂಬ ಭಾವನೆಯಿಂದ ಈ ವೃತ್ತಿಯ ಬಗ್ಗೆ ಹಲವರಿಗೆ ಬೇಸರವು ಇದೆ. ಸಮಾಜದಲ್ಲಿ ಶಿಕ್ಷಕ ಎಂದರೆ ಬಡವ ಎಂಬ ಅಭಿಪ್ರಾಯ ಇಂದಿಗೂ ಇದೆ. ಯುಜಿಸಿ ವೇತನ ಪಡೆಯುವ ಉಪನ್ಯಾಸಕರನ್ನು ಹೊರತುಪಡಿಸಿ ಪ್ರಾಥಮಿಕ, ಫ್ರೌಡ ಶಾಲೆಯ ಶಿಕ್ಷಕರ ಸಂಬಳಗಳು ಇವತ್ತಿನ ಹಣದುಬ್ಬರದ ಮಧ್ಯೆ ಹೆಚ್ಚೇನಲ್ಲ.
ಶಾಲೆಯ ಆ ವಿದ್ಯಾರ್ಥಿಯು ನಾನು ಶಿಕ್ಷಕನಾಗಬೇಕು ಎಂದು ಹೇಳಿದ ಮರುಕ್ಷಣ ನನ್ನ ಮನಸ್ಸಲ್ಲಿ ಹಲವು ಅಂಶಗಳು ಹಾದು ಹೋದವು. ನನ್ನ ಜೀವನದ ಭವಿಷ್ಯವನ್ನೇ ಬದಲಿಸಿದ್ದು ಒಬ್ಬ ಶಿಕ್ಷಕಿ. ನನ್ನ ಜೀವಮಾನಡಿ ಸಾಕಷ್ಟು ಶಿಕ್ಷಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಪದವಿ ಓದುವಾಗ ನಮ್ಮ ಕಾಲೇಜಿನ ಆಂಗ್ಲ ಉಪನ್ಯಾಸಕಿಯಾಗಿದ್ದ ಚಂದ್ರ ಸೌಂದರಾಜ್ ಮೇಡಂ ಅವರು ನನ್ನ ಜೀವನದ ದಿಕ್ಕನ್ನೇ ಬದಲಿಸಿದರು. ಕಾರಣ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಪದವಿ ತರಗತಿಯ ಇಂಗ್ಲೀಷ್ ಸಾಹಿತ್ಯದ ಕೆಲ ಅಧ್ಯಾಯಗಳು ಅರ್ಥವಾಗುತ್ತಿರಲಿಲ್ಲ.
ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಕೊನೆಗೆ ನಮ್ಮ ತರಗತಿಯ ಕೆಲ ಸ್ನೇಹಿತರು ಮೇಡಂ ಬಳಿಗೆ ಹೋಗಿ ಇಂಗ್ಲೀಷ್ ಸಾಹಿತ್ಯದ ವಿಷಯದಲ್ಲಿ ನಮಗಾಗುತ್ತಿರುವ ಸಮಸ್ಯೆಯ ಬಗ್ಗೆ ಹೇಳಿದಾಗ ಚಂದ್ರ ಮೇಡಂ ಅವರು ನಮ್ಮ ಕಷ್ಟವನ್ನು ಆಲಿಸಿ, ರಜೆ ದಿನಗಳಂದು ಹಾಗೂ ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯು ತಮ್ಮ ಮನೆಗೆ ನಮ್ಮನ್ನು ಕರೆಸಿಕೊಂಡು ಇಂಗ್ಲೀಷ್ ಸಾಹಿತ್ಯ ವಿಷಯವನ್ನು ಭೋದಿಸಿ, ಅರ್ಥ ಮಾಡಿಸುತ್ತಿದ್ದರು.
ಅದಾಗಲೇ ಮೇಡಂ ಅವರಿಗೆ ನಿವೃತ್ತಿಯ ವಯಸ್ಸಾಗಿತ್ತು, ಆದರೂ ತಲೆಕೆಡಿಸಿಕೊಳ್ಳದೇ ನಮಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ನಮ್ಮ ಭವಿಷ್ಯಕ್ಕೆ ದಾರಿ ತೋರಿಸಿದರು. ಮನೆಗೆ ಪಾಠ ಮಾಡಿಸಿಕೊಳ್ಳಲು ಹೋದಾಗಲೆಲ್ಲ ತಪ್ಪದೇ ಮನೆಯಲ್ಲಿ ಮಾಡಿದ್ದ ಊಟ, ತಿಂಡಿಯನ್ನು ನಮಗೂ ಬಡಿಸುವ ಮೂಲಕ ಮಾತೃ ವಾತ್ಸಾಲ್ಯವನ್ನು ಮೆರೆಯುತ್ತಿದ್ದರು. ನನ್ನ ಜೀವನದಲ್ಲಿ ಎಂದು ಚಂದ್ರ ಸೌಂದರಾಜ್ ಮೇಡಂ ಅವರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ಹಲವು ಶಿಕ್ಷಕರು ಎಷ್ಟೋ ವಿದ್ಯಾರ್ಥಿಗಳ ಹಣೆಬರಹವನ್ನೇ ಬದಲಿಸಿದ್ದಾರೆ. ಹಲವರ ಬಾಳಿಗೆ ಬೆಳಕಾದ ಶಿಕ್ಷಕರ ಸೇವೆ ಅವಸ್ಮರಣೀಯ.
ನನಗೆ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಪ್ರೀತಿಯಿದೆ. ಕಾರಣ ನನ್ನ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದೆ ಇದೇ ತರಬೇತುದಾರ (ಶಿಕ್ಷಕ) ವೃತ್ತಿ. ಇಂದು ನಾನು ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತುದಾರ (ಶಿಕ್ಷಕ) ನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ವೃತ್ತಿಗೆ ಬಂದು 2 ವರ್ಷಗಳಾಗಿವೆ ಅಷ್ಟೇ. ಆದರೆ ಈ ಶಿಕ್ಷಕ ವೃತ್ತಿಯ ಕಲಿಸಿದ ಪಾಠವು ಜೀವನದ ಉದ್ದಕ್ಕೂ ಕಲಿಯುವಂತದ್ದು.
ನನ್ನ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಓದಿದ್ದು ಸರಕಾರಿ ಶಾಲಾ-ಕಾಲೇಜು (ಎರಡು ವರ್ಷ ಬಿಟ್ಟು). ನಾನು ಬೆಳೆದ ಪರಿಸರ ಕಾಣವೋ ಅಥವಾ ನನ್ನ ವ್ಯಕ್ತಿತ್ವವೇ ಆಗಿತ್ತೋ ಗೊತ್ತಿಲ್ಲ. ನಾನು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾಗ ಇದ್ದದ್ದು ಮಾತ್ರ ಬೆರಳಣಿಕೆಯಷ್ಟು ಸ್ನೇಹಿತರು. ಸ್ನೇಹಿತರ ಜೊತೆಗೆ ಸೇರುತ್ತಿದ್ದದೆ ತುಂಬಾ ವಿರಳ, ಶಾಲಾ ಬಿಟ್ಟರೆ ನೇರವಾಗಿ ಮನೆಗೆ ಹೋಗಿ ಸೇರುತ್ತಿದ್ದೆ. ಶಾಲೆಯಲ್ಲೂ ಸ್ನೇಹಿತರ ಜೊತೆ ಮಾತನಾಡುತ್ತಿದ್ದು ಕಡಿಮೆ.
ನನಗೂ ಇನ್ನೂ ನೆನಪಿದೆ ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತನೊಬ್ಬ ನಿನ್ನ ಕಾಲಿಗೆ ಬೀಳುತ್ತೇನೆ, ದಯಮಾಡಿ ಮಾತಾಡಪ್ಪ, ಪಕ್ಕದಲ್ಲೇ ಕೂರುತ್ತಿಯಾ ಮಾತಾಡದೇ ಸುಮ್ಮನೆ ಕೂತಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದ. ಎಲ್ಲಾ ಸ್ನೇಹಿತರೂ ಕಾಲೇಜಿಗೆ ರಜೆ ಇದ್ದಾಗ ಒಟ್ಟಿಗೆ ಸೇರಿ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದರೆ ನಾನು ಮನೆಯಲ್ಲಿಯೇ ಕಾಲ ಕಳೆಯುತ್ತಿದೆ.
ಶಿಕ್ಷಕ ವೃತ್ತಿಯಲ್ಲಿರುವವರಿಗೆ ಸಾಕಷ್ಟು ಅವಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ಹೆಚ್ಚು ಜನರನ್ನು ಬೇಟಿಯಾಗುವ, ಅವರ ಆತ್ಮೀಯತೆಯನ್ನು ಸಂಪಾದಿಸಿಕೊಳ್ಳುವ ವೃತ್ತಿಯಾವುದಾದರೂ ಇದ್ದರೆ ಅದು ಶಿಕ್ಷಕ ವೃತ್ತಿ ಮಾತ್ರ. ನಾನು ತರಬೇತುದಾರನಾದ ನಂತರ ಹಲವರಿಗೆ ಪಾಠಗಳನ್ನು ಭೋದಿಸುವ ಸದಾವಕಾಶ ಸಿಕ್ಕಿದೆ. ಎಷ್ಟೋ ಜನರ ಆತ್ಮೀಯತೆ, ಪ್ರೀತಿಯನ್ನು ಗಳಿಸಿಕೊಳ್ಳಲು ಕಾರಣವಾಗಿದ್ದೇ ಇದೇ ಶಿಕ್ಷಕ ವೃತ್ತಿ. ವಿಪರ್ಯಾಸವೆಂದರೆ ನಾನೆಂದು ಶಾಲಾ-ಕಾಲೇಜುಗಳಲ್ಲಿ ನನ್ನ ಸಹಪಾಠಿ ಹುಡುಗಿಯರನ್ನು ಮಾತನಾಡಿಸುತ್ತಿರಲಿಲ್ಲ. ಹೇಳಿಕೊಳ್ಳಲು ಕೂಡ ಕಾಲೇಜಿನಲ್ಲಿ ಒಬ್ಬ ಮಹಿಳಾ ಸ್ನೇಹಿತರೂ ಇರಲಿಲ್ಲ. ಕಾರಣ ನಾನು ಮುಜುಗರದ ಮನುಷ್ಯ.
ಆದರೆ ನಾನು ತರಬೇತುದಾರ ವೃತ್ತಿಗೆ ಸೇರಿದ ನಂತರ ನನ್ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಇಂದು ಚಿಕ್ಕವರು, ದೊಡ್ಡವರೆಂದು ಪರಿಗಣಿಸದೆ ಎಲ್ಲರೊಂದಿಗೆ ಬೆರೆಯುವ, ಅವರ ಆತ್ಮೀಯತೆ ಸಂಪಾದಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿದ್ದು ಟೀಚರ್ ವೃತ್ತಿ.
ನಮಗೆ ಸಂಬಂಧಿಕರು ಕಡಿಮೆ. ಇದ್ದವರೊಂದಿಗೆ ಮಾತನಾಡುವುದು ಇನ್ನು ಕಡಿಮೆ. ಆದರೆ ಸಂಬಂಧಿಕರಿಗಿಂತ ಹೆಚ್ಚು ಆತ್ಮೀಯರನ್ನು ಗಳಿಸಿಕೊಟ್ಟಿದೆ. ಕಳೆದ ನಮ್ಮ ತರಬೇತಿ ಸಂಸ್ಥೆಗೆ ಬಂದ ಹಲವು ಶಿಬಿರಾರ್ಥಿಗಳು ನನ್ನ ಆತ್ಮೀಯ ಸ್ನೇಹಿತರಾಗಿಯೂ ಆಗಿದ್ದಾರೆ. ಇನ್ನು ತರಬೇತಿ ಸಂಸ್ಥೆಗೆ ಬರುವ ಕೆಲ ಶಿಬಿರಾರ್ಥಿಗಳ ಬದ್ದತೆ, ಪ್ರಾಮಾಣಿಕತೆ, ಶ್ರಮ ವಹಿಸಿ ಕಾರ್ಯನಿರ್ವಹಿಸುವ ವಿಧಾನ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಸೇರಿದಂತೆ ಮತ್ತಿತರೆ ಅವರಲ್ಲಿನ ಕೌಶಲ್ಯವು ನನಗೂ ಆದರ್ಶವಾಗಿದೆ.
ಹಲವು ಬಾರಿ ನಮ್ಮ ಶಿಬಿರಾರ್ಥಿಗಳು ಸ್ವ ಉದ್ಯೋಗ ಮಾಡುತ್ತಿದ್ದಾರೋ, ಇಲ್ಲವೋ ಎಂದು ವೀಕ್ಷಿಸಲು ಅವರ ಗ್ರಾಮಗಳಿಗೆ ಹೋದಾಗ ಅವರು ತೋರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ತರಬೇತಿ ಸಂಸ್ಥೆಯಲ್ಲಿ 6 ರಿಂದ 45 ದಿನಗಳ ಸೀಮಿತವಾದ ಸ್ವ ಉದ್ಯೋಗಧಾರಿತ ತರಬೇತಿಗಳು ನೀಡುತ್ತೇವೆ. ಇಷ್ಟು ಸೀಮಿತ ಅವಧಿಗೆ ಬಂದು ಹೋಗುವ ನಾವು ಅವರ ಊರಿಗೆ ಹೋದಾಗ ತೋರುವ ಆತ್ಮೀಯತೆಗೆ ಎಷ್ಟೋ ಬಾರಿ ಕಣ್ಣು ತೇವವಾದ ಸಂದರ್ಭಗಳು ಇವೆ. ಬೇಡ ಬೇಡವೆಂದರೂ ಎಷ್ಟೋ ಜನರು ಕಾಫಿ, ಟೀ ತಂದು ಕೊಡುತ್ತಾರೆ. ಮೊನ್ನೆ ಬಂಗಾರಪೇಟೆ ತಾಲೂಕಿನ ತಮಿಳುನಾಡಿನ ಗಡಿಗೆ ಹೊಂದುಕೊಂಡಿರುವ ಕುಗ್ರಾಮಕ್ಕೆ ಹೋದಾಗ ಅಲ್ಲಿನ ಶಿಬಿರಾರ್ಥಿಗಳು ತೋಟಕ್ಕೆ ಹೋಗಿ ಎಳೆನೀರು ತಂದು ಕೊಟ್ಟು ತೋರಿದ ಕಾಳಜಿ ನನ್ನ ಜೀವನದಲ್ಲಿ ಹೇಗೆ ಮರೆಯಲು ಸಾಧ್ಯ.
ಅವರು ಏನು ಕೊಡುತ್ತಾರೆ ಎನ್ನುವುದಕ್ಕಿಂತ ಕೊಡಬೇಕೆಂಬ ಮನಸ್ಸಿದೆಯಲ್ಲ ಆ ಅಂಶ ನನ್ನ ಮನಸ್ಸನ್ನು ಕರಗಿಸಿದೆ. ದೂರವಾಣಿ ಕರೆ ಹಾಗೂ ಎಲ್ಲಾದರೂ ಸಿಕ್ಕಾಗ ಹೇಗಿದ್ದೀರಾ ಸಾರ್, ತಪ್ಪದೇ ನೀವು ನಮ್ಮೂರಿಗೆ ಹಬ್ಬಕ್ಕೆ ಬರಲೇ ಬೇಕು ಎಂದು ಪ್ರೀತಿಯಿಂದ ಕರೆಯುವವರ ಅಭಿಮಾನದ ಮುಂದೆ ಎಲ್ಲವೂ ಶೂನ್ಯ.
ಸಾರ್ ನೀವೂ ಯಾವಾಗಲೂ ನಗುತ್ತಲೇ ಇರುತ್ತೀರಾ, ನಿಮ್ಮ ಕಷ್ಟಗಳು ಇಲ್ಲವೇ ಎಂದು
ಶಿಬಿರಾರ್ಥಿಯೊಬ್ಬ ಪ್ರಶ್ನೆ ಕೇಳಿದ್ದ. ನಿಜ ಹೇಳಬೇಕೆಂದರೆ ಕಷ್ಟಗಳು ಇಲ್ಲದಿರುವ ಮನುಷ್ಯ ಸಿಗಲು ಸಾಧ್ಯವಿಲ್ಲ. ಅದೇನೋ ಜನರನ್ನು ನೋಡಿದಾಗ ಖುಷಿಯಿಂದ ಮಾತನಾಡಿಸಬೇಕೆನ್ನಿಸುತ್ತದೆ. ಮೊನ್ನೆ ಸಾರ್ ನಿಮಗೆ ತಾಳ್ಮೆ ಜಾಸ್ತಿ, ನಗುತ್ತಿದ್ದರೆ ಇನ್ನು ಚೆನ್ನಾಗಿರುತ್ತೀರಾಎಂದು ಶಿಬಿರಾರ್ಥಿಯೊಬ್ಬ ಅನಿಸಿಕೆ ಖುಷಿ ನೀಡದಿರಲು ಸಾಧ್ಯವೇ..
ರಾಜ್ಯದ ಬೇರೆ ಜಿಲ್ಲೆಯ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನನ್ನ ಕೆಲ ಸಹೋದ್ಯೋಗಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ನಾವು ಶಿಬಿರಾರ್ಥಿಗಳನ್ನು ಹತೋಟಿಯಲ್ಲಿಡಬೇಕು. ನಾವು ಎದುರುಗಡೆ ಹೋದರೆ ಭಯ ಪಡಬೇಕು. ನಮ್ಮ ಬಗ್ಗೆ ಭಯವಿಲ್ಲದಿದ್ದರೆ ತರಗತಿಯಲ್ಲಿ ಪಾಠ ಕೇಳುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಆದರೆ ನಾನು ಶಿಬಿರಾರ್ಥಿಗಳನ್ನು ಭಯದಿಂದ ಹಿಡಿತಕ್ಕೆ ಹಿಟ್ಟುಕೊಳ್ಳಲು ಇಷ್ಟವಿಲ್ಲ. ಭಯದ ಬದಲಾಗಿ ಪ್ರೀತಿ, ವಾತ್ಸಾಲ್ಯ, ವಿಶ್ವಾಸದಿಂದ ಶಿಬಿರಾರ್ಥಿಗಳನ್ನು ಸೆಳೆಯಬೇಕೆಂಬುವುದು ನನ್ನ ನಿಲುವು.
ನನ್ನ ಜೀವನದಲ್ಲಿ ದೇವರು ಕೊಟ್ಟ ಬಹುದೊಡ್ಡ ಕೊಡುಗೆ, ಅದೃಷ್ಟ ಎಂದರೆ ಈ ಜನ್ಮದಲ್ಲಿ ಶಿಕ್ಷಕ (ತರಬೇತುದಾರ) ವೃತ್ತಿಯಲ್ಲಿ ಅದರಲ್ಲೂ ಜನಸಾಮಾನ್ಯರ ನಡುವೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದು. ಜನರ ನಡುವೆ ಬೆರೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಕೆಲವರಿಗೆ ಮಾತ್ರ ಸಿಗುತ್ತದೆ. ಸಾವಿರಾರು ಕೋಟಿ ಕೊಟ್ಟರು ಜನರ ನಡುವೆ ಕಳೆದ ಸಂತೋಷ ಕ್ಷಣಗಳನ್ನು ಪಡೆಯಲು ಸಾಧ್ಯವಿಲ್ಲ.
ಒಂದಂತು ನಿಜ ಶಿಬಿರಾರ್ಥಿಗಳು ತರಬೇತಿ ಮುಗಿಸಿ ಹೊರಟಾಗ ನನ್ನ ಮನಸ್ಸಿಗೆ ನೋವಾಗುತ್ತದೆ. ಅವರಿದ್ದದ್ದು ಕೇವಲ ಕೆಲವೇ ದಿನಗಳಾದರೂ ಅವರ ಆತ್ಮೀಯತೆ ಅಷ್ಟೊಂದು ಸೆಳೆಯುತ್ತದೆ. ಈ ವೃತ್ತಿಗೆ ಬಂದ ನಂತರ ನನ್ನ ಹೃದಯ ಮತ್ತಷ್ಟು ಮೃದುವಾಗಿದೆ. ನಮ್ಮ ಶಿಬಿರಾರ್ಥಿಗಳಿಂದ ನನಗೆ ಜೀವನದಲ್ಲಿ ಸಂತೋಷ ಸಿಗುವುದರ ಜೊತೆಗೆ ಮತ್ತಷ್ಟು
ಸಾಧಿಸುವ ಛಲ ಬಂದಿದೆ. ನನ್ನ ಶಿಬಿರಾರ್ಥಿಗಳಿಂದ ನಾನು ಬದುಕಿನ ಪಾಠವನ್ನು ಕಲಿತಿದ್ದೇನೆ. ಅವರ ಖುಣ
ನನ್ನ ಮೇಲಿದೆ. ಆದ್ದರಿಂದಲೇ ಯಾರೇ ಎಲ್ಲೇ ಸಿಕ್ಕರೂ ಅವರ ಜೊತೆ ಕಾಫಿ ಕುಡಿದು ಸಾಧ್ಯವಾದರೆ ಊಟ ಮಾಡಿ
ಆತ್ಮೀಯತೆಯಿಂದ ಮಾತಾಡಿ ಅವರು ಕೊಟ್ಟ ಸಂತೋಷವನ್ನು ಮರಳಿ ಕೊಡುವ ಕೆಲಸ ಮಾಡುತ್ತಿದ್ದೇನೆ.
ಅಂದರೆ ಹೃದಯವನ್ನು ಕರಗಿಸುವ ಶಕ್ತಿ ಈ ಶಿಕ್ಷಕ ವೃತ್ತಿಗಿದೆ. ಅಂತಹ ಅಪರೂಪದ ಅವಕಾಶವನ್ನು ಮಾಡಿಕೊಟ್ಟ ಆ ಭಗವಂತನಿಗೆ ಎಷ್ಟೇ ಥ್ಯಾಂಕ್ಸ್ ಹೇಳಿದರೂ ಕಡಿಮೆ.
ನಾನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಕೆಲ ಅಧ್ಯಾಪಕರು ತರಗತಿಗೆ ಸಾಕಷ್ಟು ಬಾರಿ ವಿನಾ ಕಾರಣ ಗೈರಾಗುತ್ತಿದ್ದರು. ಲಕ್ಷ ಲಕ್ಷ ಸಂಬಳ ಪಡೆದರು ತರಗತಿಯತ್ತ ಸುಳಿವೇ ಇರುತ್ತಿರಲಿಲ್ಲ. ನಾನು ಗಮನಿಸಿದಂಗೆ ಎಷ್ಟೋ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆ ಬಿಟ್ಟು ಚೀಟಿ ವ್ಯವಹಾರ, ತಾ.ಪಂ, ಜಿ.ಪಂ, ಶಿಕ್ಷಣ ಸಂಘಟನೆಗಳಲ್ಲೇ ಠಿಕಾಣಿ ಹಾಕುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಬಗ್ಗೆ ಆಲೋಚಿಸುವುದೇ ಇಲ್ಲ.
ಈ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಎಷ್ಟೋ ಜನರ ಪ್ರೀತಿಯನ್ನುಗಳಿಸಬಹುದು. ಎಷ್ಟೋ ಜನರ ಆತ್ಮೀಯತೆಯನ್ನುಗಳಿಸಿ ಕೊಳ್ಳಲು ಸಮಾಜದಲ್ಲಿ ಗೌರವ ಸಂಪಾದಿಸಿಕೊಳ್ಳಲು ಈ ವೃತ್ತಿಯು ಪೂರಕವಾಗಿದೆ. ಆದರೆ ಶಿಕ್ಷಕ ವೃತ್ತಿಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕಷ್ಟೇ.
ದೇಶದಲ್ಲಿನ ಮಕ್ಕಳು, ಯುವಕರಿಗೆ ಮಾರ್ಗದರ್ಶಕರಾಗಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಬಹಳ ಶ್ರದ್ದೆಯಿಂದ ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಅಸಂಖ್ಯಾತ ಗುರುಗಳಿಗೆ ನನ್ನದೊಂದು ಸಲಾಂ. ದೇಶದ ಹಾದಿ ತಪ್ಪದೆ ನಡೆಯಬೇಕಾದರೆ ಶಿಕ್ಷಕನ ಪಾತ್ರ ಬಹುಮುಖ್ಯ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ