ಗುರುವಾರ, ಸೆಪ್ಟೆಂಬರ್ 25, 2025
ಭಾನುವಾರ, ಆಗಸ್ಟ್ 17, 2025
"ಬದುಕು ಕಲಿಸುವ ಜೀವನದ ಪಾಠ"..
⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಹಲವು ಕಾರಣಗಳಿಗಾಗಿ ನಾನು ಹಲವು ಬಾರಿ ಹತ್ತಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಹಲವು ಮಕ್ಕಳ ಜೊತೆ ಮಾತನಾಡಿದ್ದೇನೆ, ಚರ್ಚಿಸಿದ್ದೇನೆ. ಅವುಗಳ ಪೈಕಿ ಮೂವರು ಮಕ್ಕಳ ಹೇಳಿದ ಘಟನೆಗಳು ನಿಜಕ್ಕೂ ಜೀವನದ ವಾಸ್ತವ ಸತ್ಯ ಏನೆಂಬುವುದು ಹಾಗೂ ಭವಿಷ್ಯದ ಕಲ್ಪನೆಗಳ ಬಗ್ಗೆ ಆಳವಾಗಿ ಆಲೋಚಿಸುತ್ತ ಆತ್ಮವಲೋಕನ ಮಾಡುವಂತಿತ್ತು. ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದರು ಸಿಗದ ಅದೆಷ್ಟು ವಿಚಾರಗಳು, ವಿಷಯಗಳು ಹಾಗೂ ಜ್ಞಾನವು ಕೆಲವರ ಜೀವನದ ವಿಚಾರಗಳನ್ನು ಕೇಳಿದಾಗ, ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ ಹಾಗೂ ಅರ್ಥವಾಗುತ್ತದೆ ಎಂದರೆ ಅಶೋಕ್ತಿಯಲ್ಲ.
ಒಮ್ಮೆ ಸರ್ಕಾರಿ ಪ್ರಾಥಮಿಕ ಶಾಲೆಯೊಂದಕ್ಕೆ ಹೋಗಿದ್ದೆ. ಆ ಶಾಲೆಯು ಕೋಲಾರ ಜಿಲ್ಲಾ ವ್ಯಾಪ್ತಿಯ ಆಂಧ್ರದ ಗಡಿ ಭಾಗದಲ್ಲಿ ಇದೆ. ಆ ಊರು ಕೋಲಾರ ಜಿಲ್ಲೆಯ ಕೊನೆಯ ಹಳ್ಳಿ. ಆ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಬಹುತೇಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಸೇರಿದ ಕಡುಬಡವರು.
ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸ್ಕೂಲ್ ಬ್ಯಾಗ್ಗಳನ್ನು ನೀಡಿದೆ. ಬ್ಯಾಗ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಸುಮ್ಮನೆ ಕುಳಿತಿದ್ದರೆ, ಅದರಲ್ಲಿ ಒಬ್ಬ ಮಾತ್ರ ತನ್ನ ಹಳೆಯ ಬ್ಯಾಗ್ ನಿಂದ ಪುಸ್ತಕಗಳನ್ನು ಹೊರ ತೆಗೆದು, ಹೊಸ ಬ್ಯಾಗ್ ನಲ್ಲಿ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತ, ಮುಗ್ದವಾಗಿ ಕೂತಿದ್ದ ಹಾಗೂ ಬಹಳ ಕ್ರಿಯಾಶೀಲತೆಯಿಂದ ಕಾಣುತ್ತಿದ್ದ, ನಾನು ಕುತೂಹಲದಿಂದ ಆತನ ಬಗ್ಗೆ ವಿಚಾರಿಸಿದೆ.
ಆತನ ಹೆಸರು ಆಕಾಶ್, 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸುಮಾರು 12 ವರ್ಷ ವಯಸ್ಸು, ಆತನಿಗೆ 7 ವರ್ಷ ವಯಸ್ಸಿದ್ದಾಗ ಆತನ ತಂದೆ, ತಾಯಿ ಇಬ್ಬರು ಕೂಡ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಆಕಾಶ್ ಮತ್ತು ಆತನ ತಂದೆ, ತಾಯಿ ಎಲ್ಲರೂ ಒಟ್ಟಿಗೆ ಸಂಬಂಧಿಕರ ಮನೆಗೆ ಹಬ್ಬವೊಂದರಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಆತನ ತಂದೆ, ತಾಯಿ ತೀವ್ರ ರಕ್ತಸ್ತ್ರಾವದಿಂದ ಮೃತಪಟ್ಟರು. ಅಚ್ಚರಿಯೆಂದರೆ ಆಕಾಶ್ ಮಾತ್ರ ಆ ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದಿದ್ದೆ ವಿಪರ್ಯಾಸ. ಆತನ ಆಯುಷ್ಯ ರೇಖೆ ಕಟ್ಟಿ ಇದ್ದ ಕಾರಣ, ಅಂತಹ ಭೀಕರ ಅಪಘಾತದಲ್ಲೂ ಕೂಡ ಪ್ರಾಣ ಉಳಿದಿತ್ತು.
ತಂದೆ, ತಾಯಿಯ ಅಕಾಲಿಕ ಮರಣದ ನಂತರ ಆಕಾಶ್ ಈಗ ಅವರ ಅಜ್ಜಿಯ ಆಶ್ರಯದಲ್ಲಿ ಬಡತನದ ನಡುವೆಯೇ ಬೆಳೆಯುತ್ತಿದ್ದಾನೆ. ಚಿಕ್ಕವಯಸ್ಸಿನಲ್ಲೇ ತಂದೆ, ತಾಯಿಯ ಪ್ರೀತಿ, ಪ್ರೇಮ, ವಾತ್ಸಾಲ್ಯದಿಂದ ವಂಚಿತನಾದವನು.
ಆತನನ್ನು ಹತ್ತಿರಕ್ಕೆ ಕರೆದು ದೊಡ್ಡವನಾದ ಮೇಲೆ ಭವಿಷ್ಯದಲ್ಲಿ ಏನಾಗಬೇಕು ಎಂದು ಭಾವಿಸಿದ್ದೀಯ ಎಂದು ಕೇಳಿದ, ಮರುಕ್ಷಣ ಆತ ಹೇಳಿದ ಉತ್ತರ ಎಂಬಿಬಿಎಸ್ ಮುಗಿಸಿ ವೈದ್ಯನಾಗಬೇಕು ಎಂದು ಭಾವಿಸಿದ್ದೇನೆ ಸಾರ್ ಎಂದು ಹೇಳಿದ.
ವೈದ್ಯ ವೃತ್ತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರುವೆ ಎಂದರೆ, ಅದಕ್ಕೆ ಆತನ ಉತ್ತರ ತನ್ನ ತಂದೆ, ತಾಯಿಗೆ ಅಪಘಾತವಾದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬಹುಃಶ ಬದುಕಿ ಉಳಿಯುತ್ತಿದ್ದರೇನೋ. ಅವರು ಜೀವಂತವಾಗಿದ್ದಿದ್ದರೆ ನಾನು ಅನಾಥನಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ.
ಸಮಾಜದಲ್ಲಿ ಪ್ರತಿನಿತ್ಯವು ಅವರದಲ್ಲದ ತಪ್ಪಿಗೆ ಅದೆಷ್ಟೋ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಹಲವರು ದೈಹಿಕ ವಿಕಲಚೇತನರಾಗುತ್ತಾರೆ. ಹಲವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಾರೆ.
ಆದ್ದರಿಂದ ನಾನು ವೈದ್ಯನಾಗಿ ಕನಿಷ್ಠ ಕೆಲ ಬಡವರ ಹಾಗೂ ಕಷ್ಟದಲ್ಲಿರುವವರ ಪ್ರಾಣ ಉಳಿಸಲು ಪ್ರಯತ್ನಿಸುವೆ ಎಂದು ಹೇಳುವ ಆತನ ಉತ್ತರದಲ್ಲಿ ತನ್ನ ತಂದೆ, ತಾಯಿಯನ್ನು ಕಳೆದುಕೊಂಡ ಅತಿಯಾದ ನೋವು, ಸಂಕಟ ಹಾಗೂ ಆ ಅಪಘಾತದಿಂದ ಅನುಭವಿಸುತ್ತಿರುವ ಹಲವು ಸಂಕಷ್ಟಗಳು ಕಾಣುತ್ತಿತ್ತು.
ತನ್ನಂತೆ ಯಾರು ಕೂಡ ತಂದೆ, ತಾಯಿಯನ್ನು ಕಳೆದುಕೊಳ್ಳಬಾರದು. ತಂದೆ, ತಾಯಿ ಇಲ್ಲದವರ ನೋವು, ಕಷ್ಟ ನನಗೆ ಮಾತ್ರ ಗೊತ್ತು. ಸೂಕ್ತ ಚಿಕಿತ್ಸೆ ಸಿಗದೆ ಯಾರು ಕೂಡ ಪ್ರಾಣ ಬಿಡಬಾರದೆಂದು ನಾನು ವೈದ್ಯನಾಗಲು ನಿಶ್ಚಯಿಸಿದ್ದೇನೆ. ವೈದ್ಯ ಸೇವೆಯನ್ನು ಬಡವರ ಸೇವೆಗಾಗಿ ಮೀಸಲಿಟ್ಟು, ತನ್ನ ತಂದೆ, ತಾಯಿಗೆ ಮಾಡಲು ಸಾಧ್ಯವಾಗದ ಸೇವೆಯನ್ನು ಬಡವರಿಗೆ, ಅಶಕ್ತರಿಗೆ ಮಾಡಿ ಅವರಲ್ಲಿ ನನ್ನ ತಂದೆ, ತಾಯಿಯನ್ನು ಕಾಣುತ್ತೇನೆ ಎನ್ನುವ ಆತನ ವಿಶ್ವಾಸ, ಧ್ಯೇಯದಲ್ಲಿ ಆತನ ಸಂಕಲ್ಪ, ಸೇವಾ ಮನೋಭಾವ ಎದ್ದು ಕಾಣಿಸುತ್ತಿತ್ತು.
ಇನ್ನೊಂದು ಸರ್ಕಾರಿ ಶಾಲೆಗೆ ಒಮ್ಮೆ ಹೋಗಿದ್ದೆ. ಆ ಶಾಲೆ ಇರುವ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಸಿಗುವುದಿಲ್ಲ. ಕಾರಣ ಸುತ್ತಲೂ ಅರಣ್ಯ ಹಾಗೂ ಬೆಟ್ಟ ಗುಡ್ಡಗಳು ಇರುವುದರಿಂದ ಅಲ್ಲಿ ನೆಟ್ವರ್ಕ್ ಸಿಕ್ಕರೆ ಅದೇ ಅದೃಷ್ಟ. ಇಂದಿಗೂ ಆ ಊರಿಗೆ ಸರ್ಕಾರಿ ಬಸ್ ಕೂಡ ಬರುವುದಿಲ್ಲ.
ಆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಹಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆ. ಆ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಬ್ಬ ವಿದ್ಯಾರ್ಥಿನಿ ತುಂಬಾ ಚೆನ್ನಾಗಿ ಎಲ್ಲಾ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಸಂಘಟಿಸಿದ್ದಳು. ಜಾನಪದ ಹಾಗೂ ಚಲನಚಿತ್ರ ಗೀತೆಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.
ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಸಂಘಟಿಸಿದ ವಿದ್ಯಾರ್ಥಿನಿ ಹೆಸರು ಕವನ. ಆಕೆ 8 ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಕರೆದು ನೀನು ತುಂಬಾ ಚೆನ್ನಾಗಿ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಕಾರ್ಯಕ್ರಮ ಸಂಘಟಿಸಿದ್ದೀಯಮ್ಮ ಎಂದು ಆಕೆಯನ್ನು ಅಭಿನಂದಿಸಿದೆ.
ಕಾರ್ಯಕ್ರಮದ ಮುಗಿದ ನಂತರ ವಿದ್ಯಾರ್ಥಿನಿ ಕವನ ಆಹ್ವಾನದ ಮೇರೆಗೆ ಅವರ ಮನೆಗೆ ಹೋಗಿದ್ದೆ. ಅವರ ಮನೆ ಊರಿನ ಕೊನೆಯಲ್ಲಿದ್ದು, ಅದು ಮಣ್ಣಲ್ಲಿ ಕಟ್ಟಿರುವ ತೀರ ಹಳೆಯದಾದ ಮನೆ. ಆ ಮನೆಯೊಳಗೆ ಇಬ್ಬರು ಮಾತ್ರ ಮಲಗುವಷ್ಟು ಸ್ಥಳವಕಾಶವಿತ್ತು. ಆ ಮನೆ ಒಳಹೊಕ್ಕರೆ ಮೊದಲು ಕಣ್ಣಿಗೆ ಕಾಣುವುದು ಪುಸ್ತಕಗಳ ಭಂಡಾರ. ಟೊಮೊಟೊ ತುಂಬಿಸಿ ಮಾರಾಟ ಮಾಡುವ ಟೊಮೊಟೊ ಕ್ರೇಟ್ ಗಳು ಹತ್ತಾರು ಇದ್ದವು, ಅವುಗಳ ತುಂಬಾ ಬರೀ ಪುಸ್ತಕಗಳೇ ತುಂಬಿದ್ದವು. ಅವುಗಳಲ್ಲಿ ಬರೀ ಶಾಲೆಯ ಪುಸ್ತಕಗಳಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸಾಹಿತ್ಯ, ಕಥೆಗೆ ಸಂಬಂಧಿಸಿದ ಪುಸ್ತಕಗಳು ಇದ್ದದ್ದು ನನಗೆ ಅಚ್ಚರಿ ಮೂಡಿಸಿತು.
ಕವನ ತಾಯಿ ಮಾತನಾಡುತ್ತ ನಮ್ಮ ಮನೆ ಬಹಳ ಚಿಕ್ಕದು ಸಾರ್, ಅನ್ಯತಾ ಭಾವಿಸಿಕೊಳ್ಳದೇ ಕುಳಿತುಕೊಳ್ಳಿ ಸಾರ್ ಎಂದು ಹೇಳುತ್ತ ಕಾಫಿ ಮಾಡಿಕೊಂಡು ಬಂದಳು. ಹಾಗೆ ಅವರ ಜೊತೆ ಮಾತನಾಡುತ್ತ ಇದ್ದಾಗ ಗೊತ್ತಾಗಿದ್ದು, ಕವನ ತಂದೆ ರೈತರು. ಅವರ ಬಳಿ ಇದ್ದ 2 ಎಕರೆ ಜಮೀನಿನಲ್ಲೇ ಕೃಷಿ ಮಾಡುತ್ತಿದ್ದರಂತೆ. ಬಿಸಿಲಲ್ಲಿ ಹಗಲಿರುಳು ಹಲವು ವರ್ಷಗಳು ದುಡಿದರು, ಯಾವ ಬೆಳೆಗೂ ಲಾಭ ಸಿಗದೆ ವಿಪರಿತ ಸಾಲಗಳಾಗಿ, ಬಡ್ಡಿ ಹಾಗೂ ಸಾಲ ತೀರಿಸಲಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದರಂತೆ.
ಆಗ ಕವನ ಕೇವಲ 3ನೇ ತರಗತಿ ವಿದ್ಯಾರ್ಥಿನಿ. ತಂದೆಯ ಆತ್ಮಹತ್ಯೆ ಹಾಗೂ ತಾಯಿಯ ಅಸಹಾಯಕತೆ ನೋಡಿ ತನ್ನ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ಏಕೈಕ ಆಸೆ ಹುಟ್ಟಿಕೊಳ್ಳುತ್ತದೆ.
ಕೃಷಿ ಬೆಳೆಗಳಿಗೆ ಯಾವುದೇ ಲಾಭ ಸಿಗದೆ ಪರಿತಪಿಸುವ ಕೋಟ್ಯಾಂತರ ರೈತರ ನೆರವಿಗೆ ಧಾವಿಸಬೇಕೆಂಬುವುದು ಕವನ ಅಚಲ ಛಲ. ಪ್ರತಿವರ್ಷವು ಕೃಷಿ ಬೆಳೆಗಳಿಗೆ ಬೆಲೆ ಸಿಗದೆ, ಬೆಳೆಗಳನ್ನು ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶೋಚನೀಯ ಪರಿಸ್ಥಿತಿ, ಅವರ ನೋವು, ಸಂಕಷ್ಟಗಳು, ತಂದೆಯನ್ನು ಕಳೆದುಕೊಂಡ ರೈತನ ಮಗಳಾಗಿ ನನಗೆ ಮಾತ್ರ ಗೊತ್ತು.
ನನ್ನಂತೆ ಸಂಕಷ್ಟ ಅನುಭವಿಸುವ ರೈತರ ಮಕ್ಕಳ ನೆರವಿಗೆ ಧಾವಿಸಬೇಕು ಹಾಗೂ ನನ್ನಿಂದ ಸ್ವಲ್ಪ ಮಟ್ಟಿಗೆಯಾದರೂ ಪರಿಹಾರ ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದ್ದೆ ಐ.ಎ.ಎಸ್ ಹುದ್ದೆ ಹೊರತು ನಾನು ಉನ್ನತ ಹುದ್ದೆಗೆ ಹೋದರೆ ಸಿಗುವ ಸೌಲಭ್ಯಗಳಿಗಾಗಿ ಅಲ್ಲ ಎನ್ನುವುದು ಕವನ ಮನದಾಳದ ಮಾತು.
ನಾನು ಐಎಎಸ್ ಅಧಿಕಾರಿಯಾಗಬೇಕೆಂಬ ಒಂದೇ ಆಸೆಯಿಂದ ತಾಯಿಯು ಕೂಲಿ ಮಾಡಿ ಸಂಪಾದಿಸಿದ ಉಳಿದ ಹಣದಿಂದ ನಾನು ಪುಸ್ತಕಗಳನ್ನು ಖರೀದಿಸುತ್ತೇನೆ. ಬೇರೆಯವರಂತೆ ತಿಂಡಿ, ತಿನಿಸುಗಳಿಗೆ, ದುಂದುವೆಚ್ಚಗಳಿಗೆ ಹಣ ಖರ್ಚು ಮಾಡುವ ಬದಲು ಪುಸ್ತಕಗಳ ಮೇಲೆ ವಿನಿಯೋಗಿಸುತ್ತೇನೆ ಸಾರ್ ಎಂದು ಹೇಳುವ ಆಕೆಯ ಮಾತಿನಲ್ಲಿ ಏನೋ ಒಂದು ಜೀವನದಲ್ಲಿ ಸಾಧಿಸಬೇಕೆಂಬ ಹಠ ಮಾತ್ರ ಸ್ಪಷ್ಟವಾಗಿತ್ತು.
ಇನ್ನೊಂದು ಶಾಲೆಗೆ ಹೋಗಿದ್ದೆ, ಆ ಶಾಲೆಯಲ್ಲಿ ತೀರ ಬಡ ಕುಟುಂಬಕ್ಕೆ ಸೇರಿದ ವಿಕಲಚೇತನ ವಿದ್ಯಾರ್ಥಿಯೊಬ್ಬನಿದ್ದ. ಆತನ ಹೆಸರು ಸಾಗರ್. ಆತನಿಗೆ ಹುಟ್ಟಿನಿಂದಲೇ ದೈಹಿಕ ನ್ಯೂನತೆ ಇತ್ತು. ಎರಡು ಕಾಲುಗಳು ನಡೆಯಲು ಸಾಧ್ಯವಾಗದ ಮಟ್ಟಿಗೆ ದೈಹಿಕ ನ್ಯೂನತೆಯಿಂದ ಕೂಡಿದ್ದ. ಹಾಗೆಯೇ ಆತನ ಜೊತೆ ಮಾತನಾಡುತ್ತಿದ್ದಾಗ ಗೊತ್ತಾಗಿದ್ದು, ಆತ ತನ್ನ ಮನೆಯಲ್ಲಿ ಒಂದು ಹಣ ಸಂಗ್ರಹ ಮಾಡುವ ಹುಂಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಅದರಲ್ಲಿ ಆತ ತನ್ನ ಬಳಿ 5, 10 ರೂಪಾಯಿ ಇದ್ದಾಗ ಹಣವನ್ನು ಹುಂಡಿಯಲ್ಲಿ ಹಾಕಿ ಹಣ ಸಂಗ್ರಹಿಸಿ ಇಡುತ್ತಿದ್ದಾನೆಂದು.
ಕಾರಣ ಈತನ ತಂದೆ ವಿಪರಿತ ಮದ್ಯಪಾನ ಮಾಡಿ, ಮಾಡಿ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ. ತಂದೆ ಮರಣದ ನಂತರ ಇವರ ಇಡೀ ಕುಟುಂಬವೇ ಛಿದ್ರ ಛಿದ್ರವಾಗುತ್ತದೆ. ತಂದೆ ಮರಣ ನಂತರ ತಾಯಿ ಕುಟುಂಬ ನಿರ್ವಹಣೆಗಾಗಿ ಕೂಲಿ ಮಾಡುತ್ತ ಪ್ರತಿನಿತ್ಯವು ತರುವ 300 ರೂ.ಗಳ ಸಂಪಾದನೆಯಿಂದ 3 ಜನರ ಜೀವನ ಸಾಗಿಸಬೇಕು.
ಒಂದೊತ್ತು ಊಟಕ್ಕೂ ಪರದಾಡುವ ಸಂಕಷ್ಟ, ಪುಸ್ತಕಗಳನ್ನು ಖರೀದಿಸಲು ಕೂಡ ಸಾಧ್ಯವಾಗದ ದುಸ್ಥಿತಿ ನಮಗೆ ಮಾತ್ರ ಗೊತ್ತು. ತಮ್ಮ ಕುಟುಂಬ ಈ ಸ್ಥಿತಿಗೆ ಬರಲು ಕಾರಣ ತಮ್ಮ ತಂದೆಗಿದ್ದ ವಿಪರಿತ ಮದ್ಯಪಾನ ಚಟ. ಅದೆಷ್ಟೋ ಕುಟುಂಬಗಳು ಮದ್ಯಪಾನಕ್ಕೆ ಬಲಿಯಾಗಿ ಬೀದಿಗೆ ಬಂದಿದ್ದಾವೆ. ನಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಷ್ಟ, ನೋವುಗಳನ್ನು ಬೇರೆಯವರು ಅನುಭವಿಸದೆ ಇರಬೇಕಾದರೆ ಮದ್ಯಪಾನದಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ನನ್ನ ಆದ್ಯ ಕರ್ತವ್ಯ.
ಆ ಕಾರಣದಿಂದಲೇ ನಾನು ಉಳಿಸುವ ಹಣದಿಂದ ಮುಂದೊಂದು ದಿನ ಹಲವು ಭಾಗಗಳಲ್ಲಿ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ತೊಡಗುತ್ತೇನೆ, ಆ ಮೂಲಕ ಒಂದು ಕುಟುಂಬವನ್ನಾದರೂ ಬೀದಿಗೆ ಬರದಂತೆ ತಡೆಯುತ್ತೇನೆ ಎನ್ನುವ ಆತನ ಮಾತಿನಲ್ಲಿ ಸಾಮಾಜಿಕ ಬದ್ದತೆ ಹಾಗೂ ಸಮಾಜದ ಹಿತ ಒಳಗೊಂಡಿತ್ತು.
ಹಲವರು ತಾವು ಎದುರಿಸುವ ಸಮಸ್ಯೆಗಳಿಂದ ತಾವು ಸಾಗಬೇಕಾದ ಹಾದಿಯನ್ನು ಕಂಡುಕೊಳ್ಳುತ್ತಾರೆ. ಸಮಸ್ಯೆ ಬಂದಿದೆ ಎಂದು ಬರೀ ಅಳುತ್ತ, ಶಪಿಸುತ್ತ ಕೂರುವ ಹಲವರ ಮಧ್ಯೆ ಆಕಾಶ್, ಕವನ, ಸಾಗರ್ ಎಂಬ ವಿದ್ಯಾರ್ಥಿಗಳು ಬಹಳ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಸಮಸ್ಯೆಗಳ ಮಧ್ಯೆಯು ತಮ್ಮ ಜೀವನದ ಜೊತೆಗೆ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಅವರ ಆಸೆ, ಛಲ, ಧ್ಯೇಯ, ಹಠ ಯಾರಿಗೆ ಬರುತ್ತದೆ ಹೇಳಿ.
ಚಿಕ್ಕವಯಸ್ಸಿನಲ್ಲೇ ಹಲವು ಸಮಸ್ಯೆಗಳು ಬೆನ್ನ ಹತ್ತಿದರು, ಮನೆ ತುಂಬಾ ಸಮಸ್ಯೆಗಳೇ ತುಂಬಿದ್ದರು ಕೂಡ ಆತ್ಮವಿಶ್ವಾಸ ಕಳೆದುಕೊಳ್ಳದೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಮುಂದಿನ ಹಾದಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡುವ ಇವರ ಆಲೋಚನೆಗಳು ನಿಜಕ್ಕೂ ಗ್ರೇಟ್, ವಂಡರ್ಪುಲ್.
ನಮ್ಮ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳ ಬಗ್ಗೆ ಆಲೋಚಿಸುತ್ತ, ಚಿಂತಿಸುತ್ತ, ಸಮಯ ವ್ಯರ್ಥ ಮಾಡುತ್ತ ಕೂರುವ ಬದಲು ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರ ಜೊತೆಗೆ ವಿಶಾಲವಾಗಿ, ವಿಭಿನ್ನವಾಗಿ ಆಲೋಚಿಸುತ್ತ, ಜೀವನ ಸಾಗಿಸುವುದರಲ್ಲಿ ಏನೋ ಒಂಥರ ತ್ರಿಲ್ ಇದೆ.
ಭಾನುವಾರ, ಏಪ್ರಿಲ್ 13, 2025
ಲವ್ ಇಸ್ ಬ್ಲೈಂಡ್, Is it True..?
⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಗಮನಾರ್ಹ ಅಂಶವೆಂದರೆ ಹಲವರು ಕೇವಲ ಫ್ಯಾಶನ್ ಗಾಗಿ ಪ್ರೀತಿಸುವುದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ಕಪಟ ನಾಟಕ ಮಾಡುವುದು ಪ್ರಪಂಚಕ್ಕೆ ತಿಳಿದ ಸತ್ಯ. ಹಾಗೆಯೇ ಮನಸ್ಸಿನಲ್ಲಿ ಕಾಮದ ದುರುದ್ದೇಶವಿಟ್ಟುಕೊಂಡು ಪ್ರೀತಿ ಎಂದು ಸುತ್ತಾಡುವವರ ಸಂಖ್ಯೆಯು ಹೇರಳವಾಗಿದೆ. ಇನ್ನೂ ಪ್ರೀತಿ, ಪ್ರೇಮದಲ್ಲಿ ಫೇಲ್ ಆದವರು, ಜೀವನದಲ್ಲೇ ಸೋತೆವೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಕಡಿಮೆಯೇನಿಲ್ಲ. ಇಂತಹ ವರದಿಗಳು ಪ್ರತಿನಿತ್ಯವು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.
ಹಾಗೆ ನೋಡಿದರೆ ಬಹುತೇಕರಿಗೆ ಅದು ಕಾಲೇಜೋ, ಆಫೀಸೋ ಅಥವಾ ಎಲ್ಲೋ ಒಂದು ಜಾಗದಲ್ಲಿ ಹುಡುಗನಿಗೆ ಹುಡುಗಿಯ ಮೇಲೆ ಹಾಗೂ ಹುಡುಗಿಗೇ ಹುಡುಗನ ಮೇಲೆ ಕ್ರಷ್ ಹಾಗೂ ಪ್ರೀತಿ, ಪ್ರೇಮ ಎಂಬ ಭಾವನೆ ಬಂದು ಹೋಗಿರುತ್ತದೆ. ಅದು ಕೆಲವರು ಹೇಳಬಹುದು, ಕೆಲವರು ಪ್ರಸ್ತಾಪಿಸದೆ ಇರಬಹುದು. ಅದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ, ಅದು ತಪ್ಪೆಂದು ಹೇಳಲು ಸಾಧ್ಯವಿಲ್ಲ.
ಆದರೆ ಕೆಲವರ ಪ್ರೀತಿ ಹಲವು ಕಾರಣಗಳಿಗಾಗಿ ಅರ್ಧಕ್ಕೆ ನಿಂತು ಹೋಗಿರುತ್ತದೆ, ಮತ್ತೆ ಕೆಲವರದ್ದು ಕೊನೆಯವರೆಗೂ ಸಾಗಿ ಪರಿಪೂರ್ಣ ಜೀವನದತ್ತ ಸಾಗಿರುತ್ತದೆ. ಮತ್ತೆ ಕೆಲವರಂತೂ ಈ ಪ್ರೀತಿ, ಪ್ರೇಮಕ್ಕಾಗಿ ಅಮೂಲ್ಯವಾದ ಶಿಕ್ಷಣ, ಉದ್ಯೋಗ, ಕುಟುಂಬ, ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ ಎಂಬುವುದು ಕೂಡ ಅಷ್ಟೇ ನಿಜ.
ಮೊನ್ನೆ ನಮ್ಮ ಸ್ನೇಹಿತ ಅರವಿಂದ್ ಎಂಬುವವರು ತಮ್ಮ ಊರಿನ ಜಾತ್ರಾ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಗೌರವ ಕೊಟ್ಟು ಅವರ ಊರಿಗೆ ಹೋಗಿದ್ದೆ. ಅವರ ಗ್ರಾಮದಲ್ಲಿ ಹಲವು ವರ್ಷಗಳ ಇತಿಹಾಸವಿರುವ ಪುರಾತನ ಕಾಲದ ಈಶ್ವರ ದೇಗುಲವಿದೆ. ಪ್ರತಿವರ್ಷವು ವಿಜೃಂಭಣೆಯಿಂದ ಜಾತ್ರೆ ಹಾಗೂ ದೇವರ ರಥೋತ್ಸವ ನಡೆಯುತ್ತದೆ.
ಜಾತ್ರೆಯ ದಿನದಂದು ಗ್ರಾಮದಲ್ಲಿ ಓಡಾಡುವುದೇ ಏನೋ ಒಂಥರ ಸಂತೋಷ. ನಾನು, ನನ್ನ ಸ್ನೇಹಿತ ದೇವರ ದರ್ಶನದ ನಂತರ ದೇಗುಲದ ಆವರಣದಲ್ಲಿದ್ದ ವಿಶಾಲವಾದ ಜಾಗದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡೆವು. ಆಗ ನನ್ನ ಸ್ನೇಹಿತ ತನ್ನ ಕುಟುಂಬದ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತ ಬಂದ.
ಆತನ ಕಿರಿಯ ಸಹೋದರ ಕಳೆದ 6 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದನಂತೆ. ಅಂತಿಮ ವರ್ಷದ ಬಿ.ಕಾಂ ಪದವಿ ಓದುತ್ತಿದ್ದ ಆತ, ತನ್ನ ಕಾಲೇಜಿನ ಸಹಪಾಠಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಆದರೆ ಮದುವೆಗೆ ಪೋಷಕರ ವಿರೋಧವಿತ್ತು. ಇದರಿಂದ ಆತ ಬೇಸರ ಮಾಡಿಕೊಂಡು ಆತ್ಮಹತ್ಯೆಯಂತಹ ಗಂಭೀರ ನಿರ್ಧಾರ ಕೈಗೊಂಡು, ನಮ್ಮ ಕುಟುಂಬಕ್ಕೆ ದುಃಖ ಬಿಟ್ಟು ಹೋಗಿದ್ದಾನೆ ಎಂದು ಹೇಳುವಾಗ ಸ್ನೇಹಿತ ಅರವಿಂದನ ಕಣ್ಣುಗಳಲ್ಲಿ ಕಣ್ಣೀರು ತಾನಾಗಿಯೇ ಬಂತು.
ನನ್ನ ಸಹೋದರ ಪದವಿ ಮುಗಿಸಿ, ಕೆಲಸಕ್ಕೆ ಸೇರಿಕೊಂಡು ಜೀವನ ನಿರ್ವಹಣೆ ಮಾಡುವ ಶಕ್ತಿ ಸಂಪಾದಿಸಲಿ ಎಂದು ಎರಡು ಕುಟುಂಬದವರು ಮದುವೆಗೆ ನಿರಾಕರಿಸಿದ್ದು ಹೊರತು ಬೇರೆ ಯಾವುದೇ ಉದ್ದೇಶವಿರಲಿಲ್ಲ. ಕನಿಷ್ಠ ಪದವಿ ಮುಗಿಸು, ನಂತರ ನಾನೇ ಎರಡು ಕುಟುಂಬದವರನ್ನು ಒಪ್ಪಿಸಿ ಮುಂದೆ ನಿಂತು, ಮದುವೆ ಮಾಡಿಸುತ್ತೇನೆ. ಆ ನಂತರ ಬೇಕಾದರೆ ನಾನು ಮದುವೆ ಮಾಡಿಕೊಳ್ಳುತ್ತೇನೆ, ಇದರಿಂದ ನನಗಾಗುವ ನಷ್ಟವೇನಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರು, ಆತ ಅರ್ಥ ಮಾಡಿಕೊಳ್ಳದೇ ಆತ್ಮಹತ್ಯೆ ಮಾಡಿಕೊಂಡು ನಮ್ಮನ್ನೆಲ್ಲ ಅನಾಥವಾಗಿ ಬಿಟ್ಟು ಹೋದ ಎಂದು ತನ್ನ ನೋವನ್ನು ತೋಡಿಕೊಂಡ.
ಆತ ನಮ್ಮ ಕುಟುಂಬದ ಕಿರಿಯ ಮಗನಾಗಿದ್ದರಿಂದ ನಮ್ಮ ತಂದೆ, ತಾಯಿಗೆ ಆತನ ಬಗ್ಗೆ ಎಲ್ಲಿಲ್ಲದ ಅಪಾರ ಪ್ರೀತಿ. ನಮ್ಮ ತಾಯಿಗಂತು ಆತ ಎಂದರೆ ಪಂಚ ಪ್ರಾಣ. ಅವನು ನಮ್ಮನ್ನು ಬಿಟ್ಟು ಹೋದ ದಿನದಿಂದ ತಾಯಿಯ ಆರೋಗ್ಯ ಸಂಪೂರ್ಣ ಹದೆಗೆಟ್ಟಿದ್ದು, ಇಲ್ಲಿಯವರೆಗೂ ಸುಧಾರಿಸಿಲ್ಲ ಎಂದು ತನ್ನ ಅಳಲನ್ನು ವ್ಯಕ್ತಪಡಿಸಿದ.
ಇನ್ನೊಂದು ಘಟನೆ ಹೇಳುತ್ತೇನೆ, ನನಗೆ ಪರಮೇಶ್ ಎಂಬ ಹಿರಿಯ ಸ್ನೇಹಿತರೊಬ್ಬರಿದ್ದರು. ವೃತ್ತಿಯಲ್ಲಿ ವ್ಯಾಪಾರಸ್ಥರು ಜೊತೆಗೆ ಸಭ್ಯರು ಹಾಗೂ ಆರ್ಥಿಕ ಶಕ್ತಿವಂತರು. ಅವರಿಗೆ ಒಬ್ಬಳೇ ಮಗಳು. ಆಕೆಯ ವಯಸ್ಸು 20 ವರ್ಷವಿರಬಹುದು. ಕಾಲೇಜಿನಲ್ಲಿ ಓದುವಾಗ ಪರಿಚಯವಾದ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಇವರ ಪ್ರೀತಿಗೆ ಪ್ರಾರಂಭದಲ್ಲಿ ಹುಡುಗಿ ತಂದೆ ಒಪ್ಪಿರುವುದಿಲ್ಲ.
ಕಾರಣ ಮಗಳು ಪ್ರೀತಿಸಿದ ಹುಡುಗ ಕಾಲೇಜನ್ನು ಅರ್ಧಕ್ಕೆ ಬಿಟ್ಟು, ಸ್ನೇಹಿತರ ಸಹವಾಸ ಮಾಡಿಕೊಂಡು ದುರಾಭ್ಯಾಸಗಳಿಗೆ ದಾಸನಾಗಿದ್ದ. ಈ ವಿಷಯ ತಿಳಿದ ಪರಮೇಶ್ ಅವರು ತಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಆ ಹುಡುಗನಿಗೆ ಮದುವೆ ಮಾಡಿಕೊಡಲು ಸುತಾರಂ ಇಷ್ಟವಿರಲಿಲ್ಲ. ಆದರೆ ಮಗಳ ಹಠದ ಮುಂದೆ ತಂದೆ ತಲೆ ತಗ್ಗಿಸಿ, ವಿಧಿಯಿಲ್ಲದೇ ಇದ್ದ ಒಬ್ಬಳೇ ಮಗಳನ್ನು ಆಕೆ ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡಿಕೊಡುತ್ತಾರೆ. ಒಬ್ಬಳೇ ಮಗಳಾದ್ದರಿಂದ ಅವರಿಗೆ ಇಷ್ಟವಿಲ್ಲದಿದ್ದರು, ಮದುವೆಯ ಸಂಪೂರ್ಣ ಖರ್ಚನ್ನು ಇವರೇ ಭರಿಸಿ, ವಿಜೃಂಭಣೆಯಿಂದ ಮದುವೆ ಮಾಡಿ, ಹುಡುಗನಿಗೆ ವರದಕ್ಷಿಣೆಯಾಗಿ ಬಂಗಾರ ಸೇರಿದಂತೆ ಮತ್ತಿತರ ವಸ್ತುಗಳನ್ನು ಕೂಡ ನೀಡುತ್ತಾರೆ.
ವಿಪರ್ಯಾಸವೆಂದರೆ ಮದುವೆಯಾದ 6 ತಿಂಗಳಿಗೆ ಆ ಹುಡುಗಿ ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡು ಬಲಿಯಾಗುತ್ತಾಳೆ. ಮೊದಲೇ ದುರಾಭ್ಯಾಸಗಳಿಗೆ ದಾಸನಾಗಿದ್ದ ಆತ, ಸರಿಯಾಗಿ ಕೆಲಸಕ್ಕೆ ಹೋಗದೆ ಪ್ರತಿದಿನವು ಕುಡಿದು, ಕುಡಿದು ಆ ಹುಡುಗಿಗೇ ಚಿತ್ರ ಹಿಂಸೆ ಕೊಟ್ಟು, ವರದಕ್ಷಿಣೆ ದಾಹಕ್ಕೆ ಆಕೆಯನ್ನೇ ಬಲಿ ತೆಗೆದುಕೊಳ್ಳುತ್ತಾನೆ.
ಇದರಿಂದ ಕಷ್ಟ ಬಿದ್ದು 20 ವರ್ಷ ಬೆಳೆಸಿದ ಮಗಳನ್ನು ಕಣ್ಣೆದುರೆ ಕಳೆದುಕೊಂಡ ಪರಮೇಶ್ ಅವರ ನೋವು, ಕಷ್ಟ ವಿವರಿಸಲು ಅಸಾಧ್ಯ. ಅವರು ಜೀವಂತವಾಗಿ ಬದುಕಿದ್ದರು, ಪ್ರತಿಕ್ಷಣವೂ ಮಗಳ ನೆನಪಿನಲ್ಲೇ ಕಣ್ಣೀರು ಹಾಕುತ್ತ ಬದುಕಲು ಇಷ್ಟವಿಲ್ಲದಿದ್ದರೂ ಜೀವನ ಸಾಗಿಸುತ್ತಿದ್ದಾರೆ ಅಷ್ಟೇ.
ಇನ್ನೊಂದು ಘಟನೆ ಹೇಳುತ್ತೇನೆ, ಸಾಗರ್ ಎಂಬ ಯುವ ಸಹಾಯಕ ಪ್ರಾಧ್ಯಾಪಕರೊಬ್ಬರು ನನಗೆ ತುಂಬಾ ಪರಿಚಿತರು. ಗಣಿತ ವಿಷಯಲ್ಲಿ ಎಂ.ಎಸ್ಸಿ, ಬಿ.ಎಡ್ ಮಾಡಿ ಈಗ ಸರ್ಕಾರಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಗರ್ ಅವರದ್ದು ತುಂಬಾ ಬಡತನ ಕುಟುಂಬ. ಅದೆಷ್ಟರ ಮಟ್ಟಿಗೆ ಎಂದರೆ ತಿನ್ನಲು ಊಟ ಕೂಡ ಸಿಗದ ಪರಿಸ್ಥಿತಿ. ಇವರಿಗೆ 4 ವರ್ಷವಿರುವಾಗಲೇ ಅನಾರೋಗ್ಯದಿಂದ ತಂದೆ ವಿಧಿವಶರಾಗುತ್ತಾರೆ. ತಾಯಿಯೇ ಕೂಲಿ ಮಾಡಿ ಅವರನ್ನು ಬೆಳೆಸಿದ್ದು, ಓದಿಸಿದ್ದು. ಅವರಿಗೆ ಈ ಪ್ರೀತಿ, ಪ್ರೇಮ ಎಂಬ ವಿಷಯಗಳ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಜೀವನ ನಡೆಸುವುದಕ್ಕೆ ಕಷ್ಟವಿದ್ದರಿಂದ ಪ್ರೀತಿ ಪ್ರೇಮ ಸಮೀಪವು ಹೋಗಿರುವುದಿಲ್ಲ. ಆದರೆ ಎಂ.ಎಸ್ಸಿ ಓದುವಾಗ ಕಾಲೇಜಿನಲ್ಲಿ ಮಹಿಳಾ ಸ್ನೇಹಿತರೊಬ್ಬರು ಪರಿಚಯವಾಗುತ್ತದೆ. ಇಬ್ಬರು ಓದುವುದರಲ್ಲಿ ಬ್ರಿಲಿಯೆಂಟ್, ಇಬ್ಬರ ವ್ಯಕ್ತಿತ್ವಗಳು ಪರಸ್ಪರ ಹೋಲಿಕೆಯಾಗುತ್ತಿದ್ದರಿಂದ ಅವರಿಗೆ ಗೊತ್ತಿಲ್ಲದೆಯೇ ಸ್ನೇಹವು ಬರುತ್ತಾ ಪ್ರೀತಿಯಾಗಿ ಪರಿರ್ವತನೆಯಾಗುತ್ತದೆ. 4 ವರ್ಷಗಳು ಇಬ್ಬರೂ ಪ್ರೀತಿಯಲ್ಲಿ ಸಾಗುತ್ತಾರೆ.
ಆದರೆ ಅವರು ಪ್ರೀತಿಸುತ್ತಿದ್ದವರ ತಂದೆ ತಾಲ್ಲೂಕಿನ ಪ್ರಭಾವಿ ರಾಜಕಾರಣಿಗಳು ಹಾಗೂ ಆರ್ಥಿಕವಾಗಿ ತುಂಬಾ ಬಲಾಢ್ಯರು. ತುಂಬಾ ಕಡು ಬಡವರಾಗಿರುವ ಸಾಗರ್ ಅವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಲು ಇಷ್ಟವಿಲ್ಲದೇ, ಸಾಗರ್ ಅವರಿಗೆ ಬೆದರಿಕೆ ಹಾಕಿ, ಕಿರುಕುಳ ನೀಡಿ ದೂರ ಮಾಡುತ್ತಾರೆ.
ಈ ಮಧ್ಯೆ ಸಾಗರ್ ರವರಿಗೆ ತಮ್ಮ ನಾಲ್ಕು ವರ್ಷಗಳ ಪ್ರೀತಿ ಮರೆಯಲು ಅಷ್ಟು ಸುಲಭವಾಗಿರಲಿಲ್ಲ. ಹಲವು ವರ್ಷಗಳ ಕಾಲ ನೋವು, ವೇದನೆ ಪಟ್ಟುಕೊಳ್ಳುತ್ತಾರೆ. ಆದರೆ ಅವರಿಗೆ ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಈ ಮಧ್ಯೆ ಸಾಗರ್ ಅವರು ತಮ್ಮ ಪ್ರೇಮಿಯನ್ನು ಮರೆಯಲು ಸಾಧ್ಯವಾಗದೇ ಆತ್ಮಹತ್ಯೆ ಹಾದಿಯನ್ನು ಹಿಡಿಯಲು ಹೋದಾಗ ಅವರ ಕಣ್ಣೆದುರಿಗೆ ಬಂದಿದ್ದು, ಅವರ ತಾಯಿ. ಇರುವ ಒಬ್ಬನೇ ಮಗ ಎಂದು ನನ್ನನ್ನು ಬಿಸಿಲಲ್ಲಿ ದುಡಿದು, ಕೂಲಿ ಮಾಡಿ ಸಾಕಿದ ತಾಯಿಯನ್ನು ಬಿಟ್ಟು ಹೋಗುವುದು ನ್ಯಾಯವೇ ಎಂಬ ಆಲೋಚನೆ ಮನಸ್ಸಲ್ಲಿ ಬರುತ್ತದೆ. ಕೂಲಿ ಮಾಡಿ ಇಷ್ಟು ವರ್ಷ ಓದಿಸಿ, ಜೋಪಾನವಾಗಿ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಮಾಡಿ ಹೋಗುವುದು ಸರಿಯಲ್ಲ ಎಂದು ಭಾವಿಸಿ ಆತ್ಮಹತ್ಯೆ ಹಾದಿ ಬಿಟ್ಟು ವಿಶಾಲವಾಗಿ ಆಲೋಚಿಸಲು ಪ್ರಾರಂಭಿಸುತ್ತಾರೆ. ಹುಡುಗಿ ಪ್ರೀತಿ ಹೋದರು ಚಿಂತೆಯಿಲ್ಲ, ಕನಿಷ್ಠ ತಾಯಿ ಪ್ರೀತಿಯಾದರೂ ಸಿಕ್ಕಿದೆ ಅಷ್ಟೇ ನನಗೆ ಸಾಕು ಎಂದು ಭಾವಿಸಿ ತಮ್ಮ ಮನಸ್ಥಿತಿಯನ್ನೇ ಬದಲಿಸಿಕೊಳ್ಳುತ್ತಾರೆ.
ಇವತ್ತಿನ ಯುವ ಸಮೂಹದ ವ್ಯಕ್ತಿತ್ವ ಹೇಗಿದೆಯೆಂದರೆ ಪ್ರೀತಿ ಪ್ರೇಮ ಎಂಬುವುದು ಒಂದು ಫ್ಯಾಶನ್ ಆಗಿದೆ. ಕಾಲೇಜು ಮೆಟ್ಟಿಲು ಹತ್ತುತ್ತಿದ್ದೇವೆ ಎಂದರೆ ಪ್ರೀತಿ, ಪ್ರೇಮ ಎಂಬುವುದಕ್ಕೆ ಜೋತು ಬೀಳಲೇ ಬೇಕೆಂಬ ಅಲಿಖಿತ ನಿಯಮವನ್ನು ಹಲವು ಹುಡುಗ, ಹುಡುಗಿಯರು ಪಾಲಿಸಲು ಹೊರಟಿರುವುದು ಕಣ್ಣಿಗೆ ಕಾಣುವ ವಾಸ್ತವ ಹಾಗೂ ದುರ್ದೈವ.
ಸ್ನೇಹಿತರ ಬಳಿ ಹೇಳಿಕೊಳ್ಳಲು, ವ್ಯಾಲು ಬರುತ್ತದೆ ಎಂದು ಹಾಗೂ ಟೈಂ ಪಾಸ್ ಗಾಗಿ ಪ್ರೀತಿ ಎಂಬ ನಾಟಕವನ್ನು ಮಾಡುವ ಮೈಂಡ್ ಸೆಟ್ ಇರಬಾರದು. ಪ್ರೀತಿ, ಪ್ರೇಮ ಮಾಡುವುದೇ ತಪ್ಪೆಂದು ಅರ್ಥವಲ್ಲ, ಅದು ಅವರವರ ವೈಯಕ್ತಿಕ ನಿರ್ಧಾರಗಳು. ಯಾರೊಬ್ಬರನ್ನು ಯಾರು ಪ್ರಶ್ನಿಸಲು ಸಾಧ್ಯವಿಲ್ಲ.
ಆದರೆ ನಮ್ಮ ಹಣೆಬರಹದಲ್ಲಿ ಪ್ರೀತಿ, ಪ್ರೇಮ ಎಂಬುವುದು ಬರೆದಿದ್ದರೆ ಅದಾಗಲೇ ಆಗಲಿ. ಅದು ಬಿಟ್ಟು ಶಿಕ್ಷಣ, ಜೀವನ ಎಲ್ಲವನ್ನೂ ಮಧ್ಯೆದಲ್ಲೇ ಕೈ ಬಿಟ್ಟು ಯಾರೋ ಒಬ್ಬರನ್ನು ಪ್ರೀತಿ, ಪ್ರೇಮ ಮಾಡಲೇ ಬೇಕೆಂದು ಹಠ ಹಿಡಿದು ನಿರ್ಧರಿಸಿ, ಹಾದಿ ತಪ್ಪುವುದು ಮಾತ್ರ, ನಮ್ಮ ಜೀವನಕ್ಕೆ ನಾವೇ ಬೆಂಕಿ ಇಟ್ಟುಕೊಂಡಂಗೆ.
ನಮ್ಮ ಪ್ರೀತಿಯಲ್ಲಿ ನಿಷ್ಕಲ್ಮಶತೆ, ನೈತಿಕತೆ, ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಹಾಗೂ ಮೌಲ್ಯಗಳು ಉದಾರವಾಗಿ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬದವರು ನಮ್ಮ ಪ್ರೀತಿಯನ್ನು ಒಪ್ಪುವ ಮಟ್ಟಿಗೆ ಅರ್ಥಪೂರ್ಣವಾಗಿ ಇರಬೇಕು ಹಾಗೂ ಯಾರ ಸಹಕಾರವಿಲ್ಲದೇ ಬದುಕಿ ತೋರಿಸುತ್ತೇವೆ ಎಂಬ ನಂಬಿಕೆ ಕುಟುಂಬದವರಿಗೆ ಬರುವ ರೀತಿಯಲ್ಲಿ ಜವಾಬ್ದಾರಿ, ಕರ್ತವ್ಯ ನಿರ್ವಹಿಸಬೇಕು.
ಹಲವು ವರ್ಷ ಪ್ರೀತಿಸಿ ಮದುವೆಯಾದ ಹಲವರು 6 ತಿಂಗಳಿಗೆ ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ ಎಂದರೆ ಏನರ್ಥ..? ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಹಾದಿ ತಪ್ಪದೇ ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು.
ಇನ್ನು ಪ್ರೀತಿ, ಪ್ರೇಮ ಎಂದು ಶಿಕ್ಷಣ, ಜೀವನ, ಕುಟುಂಬವನ್ನು ಬಲಿಪಶು ಮಾಡಿ ಪಡೆದುಕೊಳ್ಳುವುದರಲ್ಲಿ ಏನರ್ಥವಿರುತ್ತದೆ..? ಪ್ರೀತಿ ಪ್ರೇಮದ ಜೊತೆಗೆ ಶಿಕ್ಷಣ, ಉದ್ಯೋಗ, ಕುಟುಂಬ, ಮಾನ, ಮಾರ್ಯಾದೆಯನ್ನು ಕೂಡ ಅತ್ಯಂತ ಅಗತ್ಯ ಎಂಬ ಪರಿಜ್ಞಾನ ಪ್ರತಿಯೊಬ್ಬರಿಗೂ ಇರಬೇಕು. ಎಲ್ಲವನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ, ಶಕ್ತಿ ಪ್ರೀತಿಸುವವರಲ್ಲಿ ಇರಲೇ ಬೇಕು.
ಈ ಮಧ್ಯೆ ಪ್ರೀತಿಯಲ್ಲಿ ಸೋತೆ, ಪ್ರೀತಿಸಿದವರನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆತ್ಮಹತ್ಯೆ ದಾರಿ ಹಿಡಿಯುವ ನಿರ್ಧಾರವೇ ಅತ್ಯಂತ ಘೋರ ಹಾಗೂ ಆಘಾತ. ಯಾವುದೋ ಒಂದು ವಿಚಾರಕ್ಕೆ ನಮ್ಮ ಲೈಪ್ ನ್ನೇ ಕೊನೆ ಮಾಡಿಕೊಳ್ಳುತ್ತೇವೆ ಎಂದರೆ ಅದು ಮೂರ್ಖತನದ ಪರಮಾವಧಿಯಲ್ಲದೇ ಮತ್ತೇನು ಅಲ್ಲ. ಪ್ರತಿಯೊಬ್ಬರಿಗೂ ಪ್ರೀತಿಸಿದವರೇ ಸಿಗಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಒಬ್ಬೊಬ್ಬರ ಹಣೆ ಬರಹ ಒಂದೊಂದು ರೀತಿಯಲ್ಲಿ ಇರುತ್ತದೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಹುಡುಗ ಅಥವಾ ಹುಡುಗಿ ಪ್ರೀತಿ ಸಿಗದೇ ಇದ್ದರೂ, ತಂದೆ, ತಾಯಿ, ಕುಟುಂಬದವರ ಹಾಗೂ ಸ್ನೇಹಿತರ ಪ್ರೀತಿ ಸಿಕ್ಕಿರುವುದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಲೇಬೇಕು.
ಜೀವನದಲ್ಲಿ ಯಾವುದೇ ಸಂದರ್ಭಗಳು ಬಂದರೂ, ಅದನ್ನು ಸವಾಲಾಗಿ ಸ್ವೀಕರಿಸುವ ಮಾನಸಿಕತೆ ನಮ್ಮದಾಗಿರಬೇಕು, ಮನಸ್ಸನ್ನು ಗಟ್ಟಿ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ..? ಕೊನೆಯಾಗಿ ಒಂದು ವಿಚಾರ ಹೇಳುತ್ತೇನೆ, ಪ್ರೀತಿ ಯಾವತ್ತೂ ಕುರುಡಾಗಿಲ್ಲ. ಪ್ರೀತಿಸುವವರು ಮಾತ್ರ ಕುರುಡಾಗಿ ಜೀವಿಸಬಾರದಷ್ಟೆ.
ಭಾನುವಾರ, ಫೆಬ್ರವರಿ 16, 2025
"ಅಮ್ಮನ ಹೃದಯದೊಳಗಿನ ಅಂತರಾಳ"..
ಹಾಗೇ ನೋಡಿದರೆ ತಾಯಿ ಪ್ರೀತಿಯ ಮುಂದೆ, ಉಳಿದ ಎಲ್ಲಾ ಪ್ರೀತಿ, ಪ್ರೇಮ, ಇತರೆ ವಿಷಯಗಳು ನಗಣ್ಯ. ಈ ಪ್ರಪಂಚದಲ್ಲಿ ಯಾವುದೇ ಸ್ವಾರ್ಥ, ಆಸೆ, ಲಾಭಗಳಿಲ್ಲದೇ ತನ್ನ ಇಡೀ ಜೀವನವನ್ನು ತನ್ನ ಮಕ್ಕಳ ಅಭಿವೃದ್ದಿಗಾಗಿ ಮುಡಿಪಾಗಿಯಿಡುವ ಏಕೈಕ ಜೀವವೆಂದರೆ ಅದು ತಾಯಿ ಮಾತ್ರ.
ನನ್ನ ಪರಿಚಿತ ಹಿರಿಯ ಸ್ನೇಹಿತ ಕಾರ್ತಿಕ್ ಎಂಬುವವರು ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರೂ ಒಂದೇ ಕಾಲೇಜಿನಲ್ಲಿ 3 ವರ್ಷ ವಿದ್ಯಾಭ್ಯಾಸ ಮಾಡಿದವರು. ಅವರ ಸ್ನೇಹವು ಕಾಲಾನಂತರ ಪ್ರೀತಿಯಾಗಿ ಮಾರ್ಪಾಡಾಗಿ ಮದುವೆಯಾಗಲು ನಿರ್ಧರಿಸುತ್ತಾರೆ. ಪ್ರಾರಂಭದಲ್ಲಿ ಹುಡುಗಿ ಕುಟುಂಬದವರ ವಿರೋಧವಿದ್ದರು, ನಂತರ ಮಕ್ಕಳ ಆಸೆಗೆ ಬೆಲೆ ಕೊಟ್ಟು ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿಸುತ್ತಾರೆ. ವಿಶೇಷವೆಂದರೆ ತಮ್ಮ ಪ್ರೀತಿ ಸದಾ ನೆನಪಿನಲ್ಲಿ ಇರಲಿ ಎಂದು ಫೆ.14 ರ ವ್ಯಾಲೆಂಟೆನ್ಸ್ ಡೇ ದಿನವೇ ಮದುವೆಯಾಗುತ್ತಾರೆ.
ನನ್ನ ಸ್ನೇಹಿತನಿಗೆ ತಂದೆ ಇಲ್ಲ. ತಾಯಿ ಗಾರ್ಮೆಂಟ್ಸ್ ಒಂದರಲ್ಲಿ ಸಹಾಯಕಿಯಾಗಿ ಸಣ್ಣ ಕೆಲಸ ಮಾಡುತ್ತ, ಕಷ್ಟಪಟ್ಟು ಮಗನನ್ನು ಪದವಿಯವರೆಗೂ ಓದಿಸುತ್ತಾಳೆ. ತನ್ನ ಮಗನಿಗೆ ಯಾವುದೇ ಕೊರತೆಯಾಗದಂತೆ ಪ್ರೀತಿಯಿಂದ ಸಾಕುತ್ತಾಳೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಆತ ಇಷ್ಟ ಪಟ್ಟ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಲು ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಒಪ್ಪಿಕೊಳ್ಳುತ್ತಾಳೆ. ಮಗ ಜೀವನದಲ್ಲಿ ನೆಮ್ಮದಿ, ಖುಷಿಯಾಗಿದ್ದಾರೆ ಸಾಕು ಎಂಬ ಆಸೆ ತಾಯಿಯದ್ದು.
ವಿವಾಹವಾದ ಒಂದೇ ವರ್ಷಕ್ಕೆ ನನ್ನ ಸ್ನೇಹಿತನ ಹೆಂಡತಿ ಒಂದಾಗಿದ್ದ ಮನೆಯನ್ನು ಎರಡು ಮನೆ ಮಾಡಿಸುತ್ತಾಳೆ. ವಯಸ್ಸಾದ ನಿಮ್ಮ ತಾಯಿಯ ಸೇವೆ ಮಾಡಲು ನನಗೇನು ಕರ್ಮ..? ಅವರ ಆರೋಗ್ಯ ಸರಿ ಇಲ್ಲವೆಂದರೆ ನಾನು ನಿದ್ದೆಗೆಟ್ಟು ಹಾರೈಕೆ ಮಾಡಬೇಕೆ. ನನ್ನನ್ನು ಪ್ರೀತಿಸಿ, ಮದುವೆಯಾಗಿದ್ದು ಯಾವ ಪುರುಷಾರ್ಥಕ್ಕೆ, ವಯಸ್ಸಾದವರನ್ನು ನೋಡಿಕೊಳ್ಳಲು ನನ್ನ ಇಡೀ ಜೀವನ ವ್ಯರ್ಥ ಮಾಡಬೇಕೆ, ಜೀವನದಲ್ಲಿ ಯಾವುದೇ ಸಂತೋಷವಿಲ್ಲ, ಯಾವುದೇ ಜಾಲಿ ಟ್ರಿಪ್ ಹೋಗಲು ಸಾಧ್ಯವಿಲ್ಲ. ಈ ಮನೆಯೇ ನನಗೆ ನರಕಕ್ಕೆ ಸಮಾನ ಎಂದು ಪದೇ ಪದೇ ಗಂಡನ ಮುಂದೆ ಗಲಾಟೆ ಮಾಡುತ್ತಾಳೆ.
ನಾವು ಬೇರೆ ಮನೆ ಮಾಡಿ, ಇಲ್ಲಿಂದ ಹೊರಟು ಖುಷಿಯಾಗಿ ಜೀವನ ಕಳೆಯ ಬೇಕೆಂಬ ಹೆಂಡತಿಯ ಒತ್ತಾಯಕ್ಕೆ ಮಣಿದು, ನನ್ನ ಸ್ನೇಹಿತ ಹೆತ್ತು, ಹೊತ್ತು ಸಾಕಿ, ಕಷ್ಟ ಎಂದರೆ ಏನು ತಿಳಿಯದಂತೆ ಬೆಳೆಸಿದ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು ಹೆಂಡತಿ ಜೊತೆಗೆ ಹೊಸ ಮನೆಯನ್ನು ಸೇರುತ್ತಾನೆ.
ಆದರೂ ಆ ತಾಯಿಯು ಮಗನ ಬಗ್ಗೆಯಾಗಲಿ, ಸೊಸೆಯ ಬಗ್ಗೆಯಾಗಲಿ ಒಂದೇ ಒಂದು ದಿನವೂ ಕೂಡ ಕೆಟ್ಟದಾಗಿ ಹೇಳುವುದಿಲ್ಲ, ಬೇಸರ ಮಾಡಿ ಕೊಳ್ಳುವುದಿಲ್ಲ. ನನ್ನ ಮಗ ನನ್ನಿಂದ ದೂರವಾಗಿ, ಬೇರೆ ಮನೆಯಲ್ಲಿದ್ದರೂ ಚಿಂತೆಯಿಲ್ಲ. ಆತ, ಆತನ ಹೆಂಡತಿ ಸಂತೋಷವಾಗಿದ್ದರೆ, ನನಗೆ ಅಷ್ಟೇ ಸಾಕು ಎಂದು ಮನದಲ್ಲೇ ಭಾವಿಸುತ್ತಿದ್ದಳು.
ಇತ್ತ ಹೊಸ ಮನೆ ಮಾಡಿದರು, ತನ್ನ ಐಷಾರಾಮಿ ಜೀವನ, ಅತಿಯಾದ ಆಸೆಗಳ ಈಡೇರಿಕೆ ಪೂರಕವಾಗಿ ಗಂಡ ಸ್ಪಂದಿಸುತ್ತಿಲ್ಲ ಎಂದು ಪ್ರತಿನಿತ್ಯವು ಜಗಳವಾಡುತ್ತ, ಕೊನೆಗೆ ಆತನ ಹೆಂಡತಿ ವಿವಾಹ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರುತ್ತಾಳೆ. ಅಂತೂ ಇಬ್ಬರಿಗೂ ನ್ಯಾಯಾಲಯ ವಿಚ್ಛೇದನ ನೀಡಿತು. ಆ ಮೂಲಕ ವ್ಯಾಲೆಂಟೆನ್ಸ್ ಡೇ ದಿನ ಮದುವೆಯಾಗಿದ್ದಕ್ಕೆ, ಈ ಇಬ್ಬರ ಜೀವನವು ಸಾರ್ಥಕವಾಯಿತು.
ಗಮನಾರ್ಹ ಅಂಶವೆಂದರೆ ನನ್ನ ಸ್ನೇಹಿತ ವಿಚ್ಛೇದನ ನಂತರ ಜೀವನದಲ್ಲಿ ಜಿಗುಪ್ಸೆ, ನೋವು ಹೊಂದಿ, ಕೊನೆಗೆ ತನ್ನ ತಾಯಿಯ ಮನೆ ಸೇರಿಕೊಳ್ಳುತ್ತಾನೆ. ಆದರೂ ಆ ತಾಯಿ ನಿನ್ನ ಹೆಂಡತಿ ಮಾತು ಕೇಳಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆ. ಈಗ ನೀನು ಯಾವ ಮುಖವಿಟ್ಟು ಕೊಂಡು ಮತ್ತೆ ವಾಪಸ್ ಬಂದೇ ಎಂದು ಒಂದೇ ಒಂದು ಮಾತನ್ನು ಸಹ ಆ ತಾಯಿ ಕೇಳಲಿಲ್ಲ. ಸದ್ಯ ಮಗ ಬಂದಿದ್ದಾನೆ ಅಷ್ಟೇ ಸಾಕು ಎಂದು ಭಾವಿಸುತ್ತಾಳೆ.
ಮಗ ಬೇಸರದಲ್ಲಿರುವುದನ್ನು ಕಂಡು ಆತನನ್ನು ಸಂತೈಸಿ, ಕಷ್ಟವೆನೆಂದು ಕೇಳುತ್ತಾಳೆ. ಮಗ, ಸೊಸೆಯ ಡೈರ್ವೋಸ್ ವಿಷಯ ತಿಳಿದ ತಾಯಿ ಸಾಕಷ್ಟು ನೊಂದು, ತನ್ನ ಒಬ್ಬನೇ ಮಗನಿಗೆ ಈ ರೀತಿಯಲ್ಲಿ ಆಯಿತ್ತಲ್ಲವೇ ಎಂದು ಚಿಂತಿಸಿ, ಆಲೋಚಿಸಿ ನನ್ನ ಹೆಸರಲ್ಲಿರುವ 1 ಎಕರೆ ಜಮೀನು, ಈ ಸಣ್ಣ ಮನೆಯನ್ನು ಬೇಕಾದರೆ ನಿನ್ನ ಹೆಂಡತಿ ಹೆಸರಿಗೆ ನಾನು ಮಾಡಿಕೊಡುತ್ತೇನೆ. ಉಳಿಸಿರುವ ಸ್ವಲ್ಪ ಹಣವಿದ್ದು, ಅದನ್ನು ಆಕೆಗೆ ಕೋಡೋಣ. ನೀವಿಬ್ಬರೂ ಜೊತೆಗಿದ್ದು, ಖುಷಿಯಾಗಿದ್ದರೆ ಸಾಕು. ಸೊಸೆ ನನ್ನನ್ನು ನೋಡಿಕೊಳ್ಳದಿದ್ದರು ನನಗೇನು ಕೋಪವಿಲ್ಲ.
ಆದರೆ ನೀವಿಬ್ಬರು ಅನ್ಯೋನ್ಯವಾಗಿ ಜೀವನ ನಡೆಸಿದರೆ ನನಗೆ ಅಷ್ಟೇ ಸಾಕು, ಅದೇ ನನಗೆ 100 ವರ್ಷ ಬದುಕಿದ ಹಾಗೇ ಎಂದು ಆ ತಾಯಿಯ ಮಾತೃ ಹೃದಯದ ಅನಿಸಿಕೆಗಳು ಕೇಳಿದರೆ ಎಂತವರ ಹೃದಯವು ಕರಗುತ್ತದೆ.
ಕಷ್ಟ ಪಟ್ಟು ಬೆಳೆಸಿದ ಮಗ ನೀನು ನನಗೆ ಬೇಡ ಎಂದು ನೇರವಾಗಿ ತಿರಸ್ಕರಿಸಿ ಹೇಳಿದರು, ಸ್ವಲ್ಪವು ಬೇಸರಿಸಿಕೊಳ್ಳದೇ ಮಗನ ಯೋಗಕ್ಷೇಮದ ಬಗ್ಗೆ ಆಲೋಚಿಸುವ ಆ ತಾಯಿಯ ವ್ಯಕ್ತಿತ್ವ ಬೇರೆಲ್ಲಿ ಕಾಣಲು ಸಾಧ್ಯ..?
ಮೊನ್ನೆ ಕಾರ್ಯ ನಿಮ್ಮಿತ್ತ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಆ ಮಹಿಳೆಯು ತನ್ನ ಮಗನಿಗೆ ಊಟ ಮಾಡಿಸಿ, ನಂತರ ಕೈ ಎಲ್ಲಿ ಎತ್ತಿಕೊಂಡು ರೂಂ ಒಳಗೆ ಹೋಗಿ ಮಲಗಿಸಿ ಬಂದಳು. ಆತನ ಹೆಸರು ಪ್ರವೀಣ್, ವಯಸ್ಸು 21 ವರ್ಷವಿರಬಹುದು. ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶಾಲೆ ಮುಗಿಸಿ ಮನೆಗೆ ಬರಲು ರಸ್ತೆ ದಾಟುವಾಗ ದುರ್ದೈವದಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಅಪಘಾತವಾಗಿ ತನ್ನ ಎರಡು ಕೈ ಮತ್ತು ಎರಡು ಕಾಲುಗಳ ಪೂರ್ತಿ ಸ್ವಾಧೀನ ಕಳೆದು ಕೊಂಡಿದ್ದಾನೆ.
ಪೂರ್ಣ ವಿಕಲಚೇತನಕ್ಕೆ ತುತ್ತಾದ ಕಾರಣ, ಕಳೆದ 5 ವರ್ಷಗಳಿಂದ ಮಲಗಿದ ಜಾಗದಲ್ಲೇ ಉಳಿಯುವಂತಹ ಧಾರುಣ ಸ್ಥಿತಿ ಈ ಹುಡುಗನದ್ದು. ದುರದೃಷ್ಟವೆಂದರೆ ಈ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡು 3 ವರ್ಷಗಳಾಗಿದೆ. ಇದ್ದ ಒಬ್ಬ ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ, ತನ್ನನ್ನು ಖುಷಿಯಿಂದ ನೋಡಿಕೊಳ್ಳುತ್ತಾನೆ ಎಂದು ಭಾವಿಸಿದ್ದಳು, ಆದರೆ ವಿಧಿ ನಿರ್ಣಯಕ್ಕೆ ತಲೆ ಭಾಗಿ ಈಗ ಭುಜದ ಎತ್ತರಕ್ಕೆ ಬೆಳೆದ ಮಗನನ್ನು ಶಾಶ್ವತವಾಗಿ ಹಾಸಿಗೆಯಲ್ಲೇ ನೋಡುವ ಆಕೆಯ ಸ್ಥಿತಿ ಶತ್ರುವಿಗೂ ಬರಬಾರದು.
ಕಳೆದ 5 ವರ್ಷಗಳಿಂದ ಈಕೆ ತನ್ನ ಮಗನಿಗೆ ಸ್ನಾನ ಮಾಡಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಮಾಡುತ್ತ, ಆ ನಂತರ ಕೂಲಿ ಕೆಲಸ ಮಾಡಿ, ಬರುವ ಅಲ್ಪಸ್ವಲ್ಪ ಆದಾಯದಲ್ಲೇ ಮಗನನ್ನು ಸಾಕುತ್ತಿದ್ದಾಳೆ. ತನ್ನ ಮಗನನ್ನು ಚಿಕ್ಕ ಮಗುವಿನಂತೆ, ಹಾರೈಕೆ ಮಾಡುತ್ತಾಳೆ. ಆ ತಾಯಿಯ ಹೃದಯದ ನಿಷ್ಕಲ್ಮಷ ಪ್ರೀತಿಯನ್ನು ವರ್ಣಿಸಲು ಹುಡುಕಿದರು ಪದಗಳು ಸಿಗುವುದಿಲ್ಲ.
ನನ್ನ ಮಗನ ಈ ಸ್ಥಿತಿ ನೋಡಿ, ನಾನೆಂದೋ ಪ್ರಾಣ ಬಿಡಬೇಕು ಎಂದುಕೊಂಡಿದ್ದೆ. ಆದರೆ ಆತನಿಗೆ ಇರುವುದು ನಾನೊಬ್ಬಳೇ ದಿಕ್ಕು. ನಾನೇನಾದರೂ ಪ್ರಾಣ ಕಳೆದುಕೊಂಡರೆ, ನನ್ನ ಮಗನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ. ಮೊದಲೇ ಆತ ಅಪಘಾತವಾಗಿ ಜೀವನದಲ್ಲಿ ತತ್ತರಿಸಿ ಹೋಗಿದ್ದಾನೆ. ನಾನು ಇಲ್ಲದೇ ಹೋದರೆ ಆತ ಅನಾಥನಾಗುತ್ತಾನೆ, ನನ್ನ ಮಗನಿಗೆ ಆ ಸ್ಥಿತಿ ಬರಬಾರದೆಂಬ ಏಕೈಕ ಉದ್ದೇಶವೇ ನಾನಿಂದು ಜೀವಿಸಿರುವುದಕ್ಕೆ ಮೂಲ ಕಾರಣ ಎಂದು ಆಕೆ ತನ್ನ ಮನಸ್ಸಿನ ಅಂತರಾಳವನ್ನು ಹೇಳುವ ಮೂಲಕ ಮಗನ ಮೇಲಿನ ಮಮಕಾರವನ್ನು ವ್ಯಕ್ತಪಡಿಸುತ್ತಾಳೆ.
ಸ್ವಯಂ ಸೇವಾ ಸಂಸ್ಥೆಯೊಂದು ಹಳ್ಳಿಯೊಂದರಲ್ಲಿ ಮಹಿಳೆಯರ ಸಬಲೀಕರಣ ಸಂಬಂಧ ಕಾರ್ಯಕ್ರಮವೊಂದು ಹಮ್ಮಿಕೊಂಡಿತ್ತು. ನನ್ನನ್ನು ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆದಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಪೈಕಿ ಒಬ್ಬ ಮಹಿಳೆ ಕಾರ್ಯಕ್ರಮ ಮುಗಿದ ನಂತರ, ನನ್ನ ಬಳಿಗೆ ಬಂದು ಸಾರ್ ಐಎಎಸ್ ಅಧಿಕಾರಿ ಆಗಬೇಕಾದರೆ ಏನು ವಿದ್ಯಾಭ್ಯಾಸ ಮಾಡಬೇಕು ಎಂದು ಪ್ರಶ್ನೆ ಕೇಳಿದಳು. ನಾನು ಯಾರನ್ನು ಓದಿಸಲು ಕೇಳುತ್ತಿದ್ದೀಯಮ್ಮ ಎಂದಾಗ ನನ್ನ ಮಗಳನ್ನು ಸಾರ್ ಎಂದು ಉತ್ತರಿಸಿದಳು.
ಹಾಗೆಯೇ ಆಕೆ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತ, ಅವರ ತಂದೆ ತಾಯಿ ತುಂಬಾ ಕಡು ಬಡವರಾದ್ದರಿಂದ ಈಕೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, 16 ನೇ ವಯಸ್ಸಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಗಂಡನ ಮನೆಯವರು ಕೂಡ ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲ. ಅದರಲ್ಲೂ ಆಕೆಯ ಗಂಡ ಪ್ರತಿದಿನವೂ ಕುಡಿದು ಬಂದು ಗಲಾಟೆ ಮಾಡುತ್ತ, ಜೀವನ ನಿರ್ವಹಣೆಗೆ ಒಂದು ರೂಪಾಯಿಯನ್ನು ಕೊಡದೇ ನರಕ ತೋರಿಸುತ್ತಿದ್ದ. ದಿನವೂ ಕುಡಿದು, ಕುಡಿದು ಆರೋಗ್ಯ ಹಾಳಾಗಿ ಹಲವು ವರ್ಷಗಳ ಹಿಂದೆಯೇ ಆತ ನಿಧನ ಹೊಂದಿದ್ದನಂತೆ.
ನನಗೆ ಇಬ್ಬರೂ ಹೆಣ್ಣು ಮಕ್ಕಳು ಸಾರ್, ದೊಡ್ಡ ಮಗಳು 7 ನೇ ತರಗತಿ, 2 ನೇ ಮಗಳು 4 ನೇ ತರಗತಿಯನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಜೀವನದ ನಿರ್ವಹಣೆಗಾಗಿ, ಮಕ್ಕಳ ಶಿಕ್ಷಣ, ಅವರ ಮದುವೆಗಾಗಿ ಅನಿವಾರ್ಯವಾಗಿ ಸರಿಯೋ, ತಪ್ಪೋ ವೇಶ್ಯೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ ಸಾರ್. ನಮ್ಮ ತವರು ಮನೆಯವರು ಅವರ ಬಡತನ ಕಾರಣದಿಂದ ನನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಬಾಲ್ಯ ವಿವಾಹ ಮಾಡಿದರು. ಇನ್ನು ಮದುವೆಯಾದ ನಂತರ ಗಂಡ ಮದ್ಯಪಾನ ದಾಸನಾಗಿ ಕುಡಿದು ನಮ್ಮನ್ನು ಹೊಡೆಯುವುದು ಬಿಟ್ಟರೆ ಆತ ನಮಗಾಗಿ ಒಂದು ರೂಪಾಯಿಯನ್ನು ಸಂಪಾದಿಸಿ ಕೊಡಲಿಲ್ಲ, ಬದಲಾಗಿ ನಮ್ಮ ಮೂರು ಜನರನ್ನು ಬೀದಿಪಾಲು ಮಾಡಿ ಹೋದ. ನಮ್ಮ ಕಷ್ಟಗಳನ್ನು ನೋಡಿ ಸಂಬಂಧಿರ್ಯಾರು ಹತ್ತಿರವು ಸುಳಿಯಲಿಲ್ಲ.
ಬಡತನ, ಅಸಹಾಯಕತೆ, ನೋವು ಹಾಗೂ ನನ್ನ ಇಬ್ಬರ ಮಕ್ಕಳ ಜೀವನಕ್ಕಾಗಿ ನನಗೆ ಇಷ್ಟವಿಲ್ಲದಿದ್ದರು ವೇಶ್ಯೆ ವೃತ್ತಿಗೆ ತಳ್ಳಲ್ಪಟ್ಟೆ. ಈ ವೃತ್ತಿಯಲ್ಲಿ ಪ್ರತಿದಿನವೂ ಅನುಭವಿಸುವ ನರಕಯಾತನೆ, ಸಂಕಟ, ಕಣ್ಣೀರಿನ ನೋವು ನನಗೆ ಮಾತ್ರ ಗೊತ್ತು, ಹೊರಗಿನ ಪ್ರಪಂಚದವರಿಗೆ ನಾನು ಮಾಡುವ ಕೆಲಸದ ಬಗ್ಗೆ ಕೀಳರಿಮೆ ಇರಬಹುದು. ಆದರೆ ಇದು ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲ, ಬದಲಾಗಿ ನನ್ನ ಹಣೆಬರಹವೇ ಈ ಕೂಪಕ್ಕೆ ನನ್ನನ್ನು ತಳ್ಳಿತು.
ಈಗ ಇಲ್ಲಿಂದ ಹೊರ ಬರಬೇಕಾದರೂ ಅಸಾಧ್ಯವಾದ ಮಟ್ಟಿಗೆ ನನ್ನ ಬದುಕು ನಿಂತಿದೆ ಎಂದು ಹೇಳಿದಾಗ ಆಕೆಯ ಕಣ್ಣಲ್ಲಿ ನೀರು ತಾನಾಗಿಯೇ ಹರಿದು ಬಂತು. ನೆಮ್ಮದಿ, ಸಂತೋಷವಿಲ್ಲದ ಜೀವನ ಯಾರಿಗೆ ತಾನೇ ಬೇಕು ಸಾರ್. ಆದರೂ ವಿಧಿಯ ಆಟಕ್ಕೆ ನಾನು ಬಲಿಯಾಗಿದ್ದೇನೆ ಅಷ್ಟೇ ಎನ್ನುತ್ತಾಳೆ.
ಕೆಲವರು ನನ್ನನ್ನು ತಾತ್ಸಾರವಾಗಿ ಕಾಣಬಹುದು, ಆದರೂ ನನ್ನ ವೇದನೆ, ನೋವು, ಕಷ್ಟ ಯಾರಿಗೇ ಹೇಳುವುದು. ಯಾರು ತಾನೇ ನಮ್ಮ ಕಷ್ಟಗಳಿಗೆ ಆಸರೆಯಾಗುತ್ತಾರೆ ಹೇಳಿ. ನನ್ನ ದೊಡ್ಡ ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕು. ಚಿಕ್ಕ ಮಗಳನ್ನು ವೈದ್ಯಳಾಗಿ ಮಾಡಬೇಕು. ಪ್ರತಿದಿನವೂ ಕಣ್ಣಿರಾಕಿ ಸಂಪಾದಿಸುವ ಅಷ್ಟು ಹಣ ನನ್ನ ಮಕ್ಕಳ ಶಿಕ್ಷಣ, ಅವರ ಸಂತೋಷಕ್ಕಾಗಿ ಮಾತ್ರ ವಿನಿಯೋಗಿಸುತ್ತೇನೆ. ನನಗಂತೂ ಬೇರೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ನನ್ನ ಜೀವನವಂತೂ ಹೇಗೋ ಅತಂತ್ರವಾಯಿತು. ನನ್ನ ಇಂತಹ ಸ್ಥಿತಿ ಯಾವುದೇ ಕಾರಣಕ್ಕೂ ನನ್ನ ಮಕ್ಕಳಿಗೆ ಬರಬಾರದು.
ನನ್ನ ಮಕ್ಕಳು ಚೆನ್ನಾಗಿ ಓದಿ, ದೊಡ್ಡ ಅಧಿಕಾರಿಗಳಾಗಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಹೇಳುವ ಆಕೆಯು ತನ್ನ ಮಕ್ಕಳ ಮೇಲಿಟ್ಟಿರುವ ಅತೀವ ಪ್ರೀತಿಗೆ ಬೆಲೆ ಕಟ್ಟಲು ಹೇಗೆ ಸಾಧ್ಯ..?
ಹಾಗೇ ನೋಡಿದರೆ ಈ ಪ್ರಪಂಚದಲ್ಲಿ ನಮ್ಮನ್ನು ಅತಿಯಾಗಿ ಪ್ರೀತಿಸುವ, ನಮ್ಮ ನೋವಿಗಳಿಗೆ ಸ್ಪಂದಿಸುವ ಏಕೈಕ ಹೃದಯ ಅದು ತಾಯಿ ಮಾತ್ರ. ತಾನು ಊಟ ಮಾಡಲಿ ಬಿಡಲಿ, ಮಕ್ಕಳ ಊಟ ಮಾಡುವುದರ ಬಗ್ಗೆ ಆಲೋಚಿಸುತ್ತಾಳೆ. ತನಗೆ ಆರೋಗ್ಯ ಇಲ್ಲದಿದ್ದರು, ಕಷ್ಟವಾದರೂ ಮಕ್ಕಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತಾಳೆ.
ವಿಪರ್ಯಾಸವೆಂದರೆ ಇತ್ತಿಚೀನ ದಿನಗಳಲ್ಲಂತೂ ವಯಸ್ಸಾದ ತಂದೆ ತಾಯಿಯನ್ನು ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸುವ ಪದ್ದತಿಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಮನುಷ್ಯತ್ವವು ವಿನಾಶದ ಅಂಚಿಗೆ ತಲುಪಿದೆಯೇ ಎಂಬ ಸಂದೇಹ ಬರದೇ ಇರಲಾರದು.
ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿ, ಸ್ವಂತ ತಂದೆ, ತಾಯಿಯನ್ನೇ ಬೀದಿ ಪಾಲು ಮಾಡುವವರ ಮನಸ್ಥಿತಿ ಅತ್ಯಂತ ಹೀನಾಯ ಹಾಗು ಘೋರ. ಆರೋಗ್ಯ ಹದೆಗೆಟ್ಟಿದೆ, ವಯಸ್ಸಾಗಿದೆ, ಇವರಿಗೆ ಸೇವೆ ಮಾಡಬೇಕು ಎಂದು ತಂದೆ, ತಾಯಿಗಳನ್ನೇ ಅನಾಥಶ್ರಮ, ವೃದ್ದಾಶ್ರಮಗಳಿಗೆ ಸೇರಿಸಿ ಕೈ ತೊಳೆದುಕೊಳ್ಳುವ ಕೆಲ ಮಕ್ಕಳ ಮಾನಸಿಕತೆ ಯಾರಿಗೂ ಅರ್ಥವಾಗುವುದಿಲ್ಲ.
ಪ್ರತಿ ತಂದೆ, ತಾಯಿಯು ಮಕ್ಕಳಿಂದ ಅಪೇಕ್ಷಿಸುವುದು ದುಡ್ಡು, ಐಷಾರಾಮಿ ಜೀವನವಲ್ಲ. ಬದಲಾಗಿ ಪ್ರೀತಿ, ಪ್ರೇಮ, ಗೌರವ. ಅದನ್ನಾದರೂ ನಾವು ಅವರಿಗೆ ಕೊಡದೆ ಹೋದರೆ, ನಾವು ಮನುಷ್ಯರಾಗಿ ಜನ್ಮಿಸಿದಕ್ಕೆ ಅರ್ಥವಿರುವುದಿಲ್ಲ. ತಂದೆ, ತಾಯಿ ಇದ್ದಾಗ ಅವರ ಬೆಲೆ ನಮಗೆ ಖಂಡಿತವಾಗಿ ಗೊತ್ತಾಗುವುದಿಲ್ಲ, ಅವರು ಕಣ್ಮರೆಯಾದಾಗ ಮಾತ್ರ ಅವರ ಮಹತ್ವ ಆಳವಾಗಿ ಅರ್ಥವಾಗುತ್ತದೆ.
ಬೀದಿಗೊಂದರಂತೆ ಅನಾಥಶ್ರಮಗಳು, ವೃದ್ದಾಶ್ರಮಗಳು ತಲೆ ಎತ್ತುತ್ತಿರುವುದು ನಮ್ಮಲ್ಲಿನ ಹೃದಯಹೀನತೆಗೆ ನಿದರ್ಶನವಲ್ಲದೇ ಮತ್ತೇನು ಅಲ್ಲ. Mother means sacrifice. She sacrifices everything for her child ಎಂಬ ಈ ಅಭೂತ ಪೂರ್ವ ವಾಕ್ಯ ನಮ್ಮ ಹೃದಯನ್ನು ಸ್ಪರ್ಶಿಸುವುದು ಯಾವಾಗ..?
ಭಾನುವಾರ, ಡಿಸೆಂಬರ್ 22, 2024
ಲವ್ ಸ್ಟೋರಿಯಲ್ಲಿನ, ಜೀವನದ ಲೈಪ್ ಪಾಠ..
ಅವನ ಅಪೇಕ್ಷೆಯಂತೆ ಒಮ್ಮೆ ಆ ಅರಣ್ಯಕ್ಕೆ ಹೋಗಿದ್ದೆ, ಅಲ್ಲಿ ಗಿಡ ಮರಗಳಿಗಿಂತ ಕಾಲೇಜಿನ ಹುಡುಗ, ಹುಡುಗಿಯರ ಸಂಖ್ಯೆಯೇ ಅಧಿಕವಾಗಿತ್ತು. ಅದಕ್ಕೆ ನಮ್ಮ ಸ್ನೇಹಿತನನ್ನು ಕೇಳಿದೆ, ಇವರಿಗೆಲ್ಲ ಕಾಲೇಜಿಲ್ಲವೇ ಅಂತಾ..? ಅದಕ್ಕೆ ಆತ ಅವರೆಲ್ಲರೂ ಪ್ರೇಮಿಗಳು ಹಾಗೂ ಪಿ.ಯು ವಿದ್ಯಾರ್ಥಿಗಳು, ಕಾಲೇಜು ಮುಗಿದು 2 ಗಂಟೆ ಆಗಿದೆ. ಸ್ಪೆಷಲ್ ಕ್ಲಾಸ್ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿ, ಇಲ್ಲೇ ಸಂಜೆವರೆಗೂ ಕಾಲ ಕಳೆಯುತ್ತಾರೆ. ನಾವು ಅವರಿಗೆ ಬುದ್ದಿವಾದ ಹೇಳಿ ಸಾಕಾಗಿದೆ. ಮನೆಯವರ ಮಾತೇ ಅವರು ಕೇಳುವುದಿಲ್ಲ, ಇನ್ನು ನಮ್ಮ ಮಾತು ಅವರೆಲ್ಲಿ ಕೇಳುತ್ತಾರೆ ಎಂದು ಉತ್ತರಿಸಿದ.
ವಿಪರ್ಯಾಸವೆಂದರೆ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಆ ವಿದ್ಯಾರ್ಥಿಗಳ ವರ್ತನೆ ಪ್ರತಿಯೊಬ್ಬರು ನಾಚಿಕೆ ಪಡುವಂತಿತ್ತು. ಪ್ರೀತಿಸುವುದು ತಪ್ಪಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಆದರೆ ಅವರ ವಯಸ್ಸು, ಅವರ ನಡವಳಿಕೆ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತಿತ್ತು.
ಇಂದಿನ ಪ್ರೇಮಿಗಳು ಪಾರ್ಕು, ಪಬ್, ರೆಸಾರ್ಟ್, ಟ್ರಿಪ್, ಪಾರ್ಟಿ ಅಂತಾ ಓಡಾಡುತ್ತ, ಜಾಲಿಯಾಗಿ ಲೈಪ್ ನ್ನು ಎಂಜಾಯ್ ಮಾಡಬಹುದು ಎಂದು ಕನಸಿನ ಬೆಟ್ಟ ನಿರ್ಮಿಸಿಕೊಂಡಿರುತ್ತಾರೆ, ಆ ಜೀವನಕ್ಕಾಗಿ ಹಲವರು ಹಂಬಲಿಸುತ್ತಾರೆ, ತುದಿಗಾಲಲ್ಲಿ ನಿಲ್ಲುತ್ತಾರೆ.
ಸಾಮಾನ್ಯವಾಗಿ ಸಮಯ ಸಿಕ್ಕಾಗಲೆಲ್ಲ ಹೊಸದಾಗಿ ಬಿಡುಗಡೆಯಾದ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಹವ್ಯಾಸ ನನಗೆ ಮೊದಲಿನಿಂದಲೂ ಇದೆ. ಆದರೆ ನೋಡಿದ ಎಲ್ಲಾ ಚಿತ್ರಗಳು ನಮ್ಮ ಮನಸ್ಸಿನ ಅಂತರಾಳಕ್ಕೆ ಹೋಗುವುದಿಲ್ಲ ಹಾಗೂ ನಮ್ಮ ಹೃದಯವನ್ನೇ ಕರಗಿಸುವಂತೆ ಮಾಡುವುದಿಲ್ಲ. ವೀಕ್ಷಿಸಿದ ಸಾವಿರಾರು ಚಿತ್ರಗಳ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಸದಾ ನಮ್ಮ ನೆನಪಿನ ಪುಟಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದು ಬಿಡುತ್ತೇವೆ.
ಇತ್ತಿಚೀಗೆ ನನ್ನನ್ನು ತುಂಬಾ ಆಕರ್ಷಿಸಿ, ಆಲೋಚಿಸುವಂತೆ ಮಾಡಿ, ಹೃದಯ ಸ್ಪರ್ಶಿಸುವಂತೆ ಮಾಡಿದ ಚಿತ್ರ “ಅಮರನ್”. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಲವ್ ಸ್ಟೋರಿ ಮತ್ತು ದೇಶಭಕ್ತಿ ಸಂದೇಶವನ್ನು ಹೊಂದಿರುವ ಚಿತ್ರವಿದು. ಈ ಚಿತ್ರದ ಹೇ ರಂಗುಲೇ, ಹೇ ರಂಗುಲೇ, ನೀ ರಾಕತೋ ಲೋಕಮೇ ರಂಗುಲೇ ಪೊಂಗೇನೆ ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.
ನೈಜ ಘಟನೆಗಳನ್ನು ಆಧರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಬರೆದ “ಇಂಡಿಯಾಸ್ ಮೋಸ್ಟ್ ಫೀಯರ್ ಲೆಸ್, ಟ್ರೂ ಸ್ಟೋರಿಸ್ ಆಫ್ ಮಾಡ್ರನ್ ಮಿಲಿಟರಿ ಹಿರೋಸ್” (India's Most Fearless: True Stories of Modern Military Heroes) ಎಂಬ ಪುಸ್ತಕದ ಕಥೆಯನ್ನಾಧಾರಿಸಿ ನಿರ್ಮಾಣವಾದ ಚಿತ್ರವೇ “ಅಮರನ್”.
ಅಮರನ್ ಚಿತ್ರವನ್ನು ತಮಿಳಿನ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಿದ್ದು, ನಟ ಶಿವ ಕಾರ್ತಿಕೇಯನ್, ನಟಿ ಸಾಯಿಪಲ್ಲವಿ ಚಿತ್ರದಲ್ಲಿ ನಟಿಸಿದ್ದಾರೆ. ಅಮರನ್ ಮೇಲ್ನೋಟಕ್ಕೆ ಲವ್ ಸ್ಟೋರಿ ಚಿತ್ರ ಎಂದು ಭಾವಿಸಿಕೊಂಡರು, ಪೂರ್ಣ ಚಿತ್ರ ನೋಡಿದ ಮೇಲೆಯೇ ಅರ್ಥವಾಗುವುದು, ಅದರಲ್ಲಿನ ದೇಶಭಕ್ತಿಯ ವಿವಿಧ ಆಯಾಮಗಳು ಹಾಗೂ ಪ್ರೇಮಿಗಳೆಂದರೇ ಈಗೂ ಇರುತ್ತಾರೆಯೇ ಎಂದು.
ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ತಮಿಳುನಾಡಿನ ಮುಕುಂದ್ ವರದರಾಜನ್ ಹಾಗೂ ಆತನ ಪತ್ನಿ ಕೇರಳದ ಇಂದು ರೆಬಿಕಾ ವರ್ಗಿಸ್ ಜೀವನದಲ್ಲಿ ನಡೆದ ನಿಜ ಘಟನೆಗಳನ್ನು ಆಧಾರಿಸಿ ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಪುಸ್ತಕ ಬರೆದರೆ, ಆ ಪುಸ್ತಕವನ್ನು ಆಧಾರ ಮಾಡಿಕೊಂಡು ರಾಜಕುಮಾರ್ ಪೆರಿಸ್ವಾಮಿ ಅಮರನ್ ಚಿತ್ರ ನಿರ್ದೇಶಿಸಿದ್ದಾರೆ.
ತಮಿಳುನಾಡಿನ ತಾಂಬರಂ ಮೂಲದ ಮುಕುಂದ್ ವರದರಾಜನ್ ಸಾಧಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ಬಿ.ಕಾಂ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಪದವೀಧರರು. ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಿ, ದೇಶಕ್ಕಾಗಿ ಸೇವೆ ಸಲ್ಲಿಸಿ, ಪರಿಪೂರ್ಣ ಜೀವನ ಸಾಗಿಸಬೇಕೆಂಬ ಹಠ ಮುಕುಂದ್ ವರದರಾಜನ್ರದ್ದು.
ಮುಕುಂದ್ ವರದರಾಜನ್ ತಾಂಬರಂನಲ್ಲಿರುವ ಮದ್ರಾಸ್ ಕ್ರಿಸ್ಟಿಯನ್ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಮಾಡುವಾಗ ಪರಿಚಯವಾದರೇ ಕೇರಳ ಮೂಲದ ಇಂದು ರೆಬಿಕಾ ವರ್ಗೀಸ್.
ಮುಕುಂದ್ ವರದರಾಜನ್ ಕಾಲೇಜಿನ ಸ್ನೇಹಿತೆ ಇಂದು ರೆಬಿಕಾ ವರ್ಗೀಸ್ ನ್ನು ಪ್ರೀತಿಸಿ, ಮದುವೆಯಾಗುತ್ತಾರೆ. ಚಿಕ್ಕವಯಸ್ಸಿನಿಂದಲೂ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಗೆ ಕುಟುಂಬದ ಕೆಲವರ ವಿರೋಧದ ನಡುವೆಯು ಮುಕುಂದ್ ವರದರಾಜನ್ ತನ್ನ ಸಂಕಲ್ಪದಂತೆ ಎಲ್ಲಾ ಅಡೆತಡೆ ಮೀರಿ ಭಾರತೀಯ ಸೇನೆಗೆ ಸೇರುತ್ತಾರೆ. ಒಬ್ಬನೇ ಮಗನಾದ್ದರಿಂದ ತಾಯಿಗೆ ಅವರು ಸೇನೆಗೆ ಸೇರುವುದು ಇಷ್ಟವಿರಲಿಲ್ಲ. ತನ್ನ ಮಗ ತನ್ನ ಮಧ್ಯದಲ್ಲೇ ಸಂತೋಷದಿಂದ ಜೀವನ ಸಾಗಿಸಲಿ ಎಂದು ತಾಯಿಯ ಆಕಾಂಕ್ಷೆಯಾಗಿತ್ತು.
ತಾನು ಪ್ರೀತಿಸಿದ ಇಂದು ರೆಬಿಕಾ ವರ್ಗೀಸ್ ಕುಟುಂಬದವರು ಪ್ರಾರಂಭದಲ್ಲಿ ಮುಕುಂದ್ ವರದರಾಜನ್ ಜೊತೆ ಮದುವೆಗೆ ವಿರೋಧಿಸುತ್ತಾರೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಯಾವ ಕ್ಷಣದಲ್ಲಾದರೂ ಪ್ರಾಣಕ್ಕೆ ಸಂಚಕಾರ ಎಂಬ ಭಯದಿಂದ. ಅದರಲ್ಲೂ ಇಂದು ರೆಬಿಕಾ ವರ್ಗೀಸ್ ತಂದೆ ಸೇನೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರಿಂದ ಸೈನಿಕರ ಸಾವು, ನೋವುಗಳ ಬಗ್ಗೆ ಅರಿತಿದ್ದರಿಂದ, ತಮ್ಮ ಮಗಳನ್ನು ಸೇನೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊಡಲು ಅವರಿಗೆ ಸ್ವಲ್ಪವು ಇಷ್ಟವಿರಲಿಲ್ಲ.
ಕೊನೆಗೂ ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ರವರ ಪ್ರೀತಿಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ, ನಿಸ್ವಾರ್ಥವಿದ್ದರಿಂದ ಜಾತಿ, ಧರ್ಮ, ಶ್ರೀಮಂತಿಕೆ ಮೀರಿ ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಯಾಗುತ್ತಾರೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಮುಕುಂದ್ ವರದರಾಜನ್ ಕಾಲೇಜು ವಿದ್ಯಾಭ್ಯಾಸದ ನಂತರ ತಾನು ಪ್ರೀತಿಸಿದ ಇಂದೂ ರೆಬಿಕಾ ವರ್ಗೀಸ್ ರನ್ನು ಮದುವೆಯಾಗಿ ಸೇನೆಗೆ ಸೇರದೆ ಬದಲಾಗಿ ಯಾವುದಾದರೂ ಕೆಲಸ ಮಾಡಿಕೊಂಡು, ದೊಡ್ಡ ವೇತನ ಪಡೆಯುತ್ತ, ಸ್ವಂತ ಊರಿನಲ್ಲೇ ಕುಟುಂಬದವರೊಂದಿಗೆ ಖುಷಿಯಾಗಿ ಉಳಿದು ಬಿಡಬಹುದಾಗಿತ್ತು. ಆದರೆ ಅವರು ತನ್ನ ಜೀವನದ ಒಂದೇ ಒಂದು ಗುರಿ ಭಾರತೀಯ ಸೇನೆಗೆ ಸೇರಬೇಕೆಂಬ ಆಸೆಯನ್ನು ಪ್ರೀತಿ ಹಾಗೂ ಕುಟುಂಬದ ವ್ಯಾಮೋಹಕ್ಕಾಗಿ ಬಲಿಕೊಡುವುದು ಸುತಾರಂ ಇಷ್ಟವಿರಲಿಲ್ಲ.
ಹಾಗೆಯೇ ಇಂದೂ ರೆಬಿಕಾ ವರ್ಗೀಸ್ ಗೆ ಮುಕುಂದ್ ವರದರಾಜನ್ ಇಂದಲ್ಲಾ ನಾಳೆ ಖಂಡಿತವಾಗಿ ಭಾರತೀಯ ಸೇನೆಗೆ ಸೇರುತ್ತಾನೆ ಎಂಬುವುದು ಪ್ರೀತಿಸುವಾಗಲೇ ಅರ್ಥವಾಗಿತ್ತು. ಇವರನ್ನು ಮದುವೆಯಾದರೇ ಬೇರೆಯವರಂತೆ ಐಷಾರಾಮಿ ಮತ್ತು ಸುಖ ಜೀವನವನ್ನು ಖುಷಿಯಾಗಿ ಕಳೆಯುವುದು ಕಷ್ಟ ಎಂದು ಅರ್ಥವಾಗಿದ್ದರು, ಕೂಡ ತಾನು ಪ್ರೀತಿಸಿದ ಮುಕುಂದ್ ವರದರಾಜನ್ ಏಕೈಕ ಆಸೆ ಭಾರತೀಯ ಸೇನೆ ಸೇರುವುದು, ಆ ಸಂಕಲ್ಪಕ್ಕೆ ನಾನು ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದು ಹಾಗೂ ತಡೆಯಬಾರದು ಎಂದು ಆಕೆ ಆಲೋಚಿಸಿ ಸೇನೆಗೆ ಸೇರಲು ಪ್ರೋತ್ಸಾಹಿಸುತ್ತ, ಬೆಂಬಲವಾಗಿ ನಿಲ್ಲುತ್ತಾಳೆ.
ಸೇನೆಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾದರೆ ಅಧ್ಯಯನ ಮಾಡಬೇಕಾದ ಪುಸ್ತಕಗಳನ್ನು ಸ್ವತಃಹ ಇಂದೂ ರೆಬಿಕಾ ವರ್ಗೀಸ್ ಖರೀದಿ ಮಾಡಿ ಮುಕುಂದ ವರದರಾಜನ್ ಗೆ ಕೊಟ್ಟ ಆಕೆಯ ಭಾವಾನಾತ್ಮಕ ಸಂಬಂಧ ಅವಸ್ಮರಣೀಯ.
ಮದುವೆ ನಂತರವೂ ಮುಕುಂದ್ ವರದರಾಜನ್ ವರ್ಷಕ್ಕೊಮ್ಮೆ ಮಾತ್ರ ಪತ್ನಿ, ಮಗಳು ಹಾಗೂ ಕುಟುಂಬದವರನ್ನು ಬಂದು ನೋಡುತ್ತಿದ್ದ. ಬೆಟಾಲಿಯನ್ನ ಮುಖ್ಯಸ್ಥನಾಗಿದ್ದರಿಂದ ಊರಿಗೆ ಬರಲು ಅವಕಾಶ ಕಡಿಮೆ ಸಿಗುತ್ತಿತ್ತು. ದೇಶಕ್ಕಾಗಿ ಸೇನೆಯಲ್ಲಿ ದುಡಿಯುತ್ತಿರುವ ಗಂಡ, ಪದೇ ಪದೇ ಬರಲು ಸಾಧ್ಯವಿಲ್ಲ ಎಂದು ಅರಿತಿದ್ದ ಇಂದೂ ರೆಬಿಕಾ ವರ್ಗೀಸ್ ಮುಕುಂದ್ ವರದರಾಜನ್ ಜೊತೆಗಿನ ನೆನಪುಗಳನ್ನೇ ಸದಾ ಮೆಲುಕು ಹಾಕುತ್ತ ಜೀವನ ಸಾಗಿಸುತ್ತಿದ್ದಳು. ದೈಹಿಕವಾಗಿ ಅವರು ಜಮ್ಮಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಮಾನಸಿಕವಾಗಿ ನನ್ನ ಬಳಿಯೇ ಇದ್ದಾರೆ ಎಂದು ಆಕೆ ಮನಸ್ಸಿನಲ್ಲಿ ಭಾವಿಸಿಕೊಂಡು ಜೀವನ ಸಾಗಿಸುತ್ತಿದ್ದದ್ದು, ನಿಜವಾದ ಪ್ರೇಮಿಗಳಿಗೆ ಜ್ವಲಂತ ಉದಾಹರಣೆ.
ದುರ್ದೈವದಿಂದ 2014 ರ ಏಪ್ರಿಲ್ 25 ರಂದು ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ಜೊತೆ ನಡೆದ ಭೀಕರ ಗುಂಡಿನ ಚಕಮಕಿ, ಹೋರಾಟದಲ್ಲಿ ಮುಕುಂದ್ ವರದರಾಜನ್ ದೇಹಕ್ಕೆ ಹಲವು ಗುಂಡುಗಳು ತಾಕಿ, ಜೀವನ್ಮರಣದ ಹೋರಾಟ ನಡೆಸಿ, ಕೊನೆಗೆ ಕೇವಲ ತಮ್ಮ 31 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿ ಅಮರರಾಗುತ್ತಾರೆ.
ಇದ್ದ ಓಬ್ಬನೇ ಮಗನನ್ನು ಹೊಂದಿದ್ದ ಆ ತಂದೆ, ತಾಯಿ ಹಾಗೂ ಇಷ್ಟಪಟ್ಟು ಪ್ರೀತಿಸಿ ಮದುವೆಯಾದ ಗಂಡ, ಆತ್ಮೀಯತೆಯಿಂದ ಕಾಣುತ್ತಿದ್ದ ಅಣ್ಣ, ಮುದ್ದಾಡುತ್ತಿದ್ದ ತಂದೆ, ಇನ್ನು ಬರೀ ನೆನಪು ಮಾತ್ರ ಎಂದು ಗೊತ್ತಾದಾಗ ಆ ಕುಟುಂಬದವರ ನೋವು, ಸಂಕಟ, ಮಾನಸಿಕ ವೇದನೆಯನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಕಣ್ಣಲ್ಲಿ ರಕ್ತ ಹರಿಯುತ್ತದಷ್ಟೇ.
ಭಾರತ ಸರ್ಕಾರವು ಮುಕುಂದ್ ವರದರಾಜನ್ರವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ಕೂಡ ನೀಡಿ ಗೌರವಿಸಿದೆ. ತಮಿಳುನಾಡಿನ ಪೈಕಿ ಅಶೋಕ ಚಕ್ರ ಪ್ರಶಸ್ತಿ ಪಡೆದ ನಾಲ್ಕನೇ ವ್ಯಕ್ತಿ ಮುಕುಂದ್ ವರದರಾಜನ್. ತಮಿಳುನಾಡಿನ ಮಿಲಿಟರಿ ಆಫೀಸರ್ ತರಬೇತಿ ಅಕಾಡೆಮಿಯಲ್ಲಿ ಇವರ ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಲಾಗಿದೆ.
ಮುಕುಂದ್ ವರದರಾಜನ್ ಮತ್ತು ಇಂದೂ ರೆಬಿಕಾ ವರ್ಗೀಸ್ ಪ್ರೀತಿಯಲ್ಲಿ ನೈತಿಕತೆ ಇತ್ತು. ತಮ್ಮ ಪ್ರೀತಿಯ ಕಾರಣಕ್ಕಾಗಿ ಅವರೆಲ್ಲೂ ಶಿಕ್ಷಣಕ್ಕೆ ಅಡ್ಡಿ ಮಾಡಿಕೊಳ್ಳಲಿಲ್ಲ. ಸಮಾಜ ವಿರೋಧಿಸುವ ರೀತಿ ವರ್ತಿಸಲಿಲ್ಲ. ಬರೀ ಎಂಜಾಯ್ ಮಾಡಲು, ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಮುಖವಾಡ ಧರಿಸಲಿಲ್ಲ. ಪ್ರೀತಿ ಪ್ರೇಮ ಎಂದು ಬರೀ ಜಪಿಸುತ್ತ ಜೀವನದಲ್ಲಿ ಅಂದುಕೊಂಡ ಗುರಿ, ಸಾಧನೆಗಳನ್ನು ಮಧ್ಯದಲ್ಲಿ ಕೈ ಬಿಡಲಿಲ್ಲ.
ಇಬ್ಬರೂ ಪರಸ್ಪರ ಗುರಿ ಸಾಧನೆಗಾಗಿ ಸಹಕಾರ ಕೊಟ್ಟು ಜೀವನ ಸಾಗಿಸಿದ ಕಾರಣದಿಂದಲೇ ಅವರ ಪ್ರೇಮ ಇನ್ನೂ ಜೀವಂತ ಹಾಗೂ ಚಿರಸ್ಥಾಯಿಯಾಗಿ ಉಳಿದಿರುವುದು. ನನ್ನ ಪ್ರಕಾರ ಇದು ನಿಜವಾದ ಲವ್ ಸ್ಟೋರಿ, ಇದರಿಂದ ಕಲಿಯುವುದು ಹಲವಿದೆ.
ಪ್ರೀತಿ, ಪ್ರೇಮ ಎಂಬುವುದರ ಒಳಾರ್ಥವು ಗೊತ್ತಿರದ, ವಯಸ್ಸು ದಾಟದ ಹಲವರು ಕೇವಲ ಅಟ್ರಾಕ್ಷನ್, ಆಕರ್ಷಣೆ ಹಾಗೂ ಕೇವಲ ಎಂಜಾಯ್ ಮೆಂಟ್ ಹಾಗೂ ದೈಹಿಕ ಸಂತೋಷಕ್ಕಾಗಿ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಾರೆ. ದಿನವೂ ಗಂಟೆಗಟ್ಟಲೆ ಮೊಬೈಲ್ ಗಳಲ್ಲಿ ಹರಟೆ ಹೊಡೆಯುತ್ತ, ವಾಟ್ಸಾಪ್ ಚಾಟ್ ಗಳಲ್ಲಿ ಮುಳುಗಿ ಹೋಗಿ ಶಿಕ್ಷಣ, ಜೀವನ, ಕೌಟುಂಬಿಕ ಸಂಬಂಧ, ಉದ್ಯೋಗ ಸೇರಿದಂತೆ ತಮ್ಮ ಲೈಪ್ ನ್ನೇ ಕಳೆದುಕೊಳ್ಳುವ ಹಲವರು ಅಮರನ್ ಚಿತ್ರ ಒಮ್ಮೆ ನೋಡಬೇಕಿದೆ.
ಪ್ರೀತಿ, ಪ್ರೇಮ ಎಂದರೆ ಅದು ಬರೀ ಎರಡಕ್ಷರದ ಪದಗಳಲ್ಲ, ಕಲ್ಪನೆಗೂ ಸಿಗದ, ನಮ್ಮ ಊಹೆಗೂ ಮೀರಿದ ವಿಷಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಸ್ವಾರ್ಥವಿಲ್ಲದೇ, ಹಾದಿ ತಪ್ಪದೇ, ಸಾಧನೆ, ಗುರಿ ಸಾಧಿಸುವ ದಿಕ್ಕಿನತ್ತ ಸಾಗುತ್ತ, ಪರಸ್ಪರ ಸಹಕಾರದೊಂದಿಗೆ ಪ್ರೀತಿಸುವವರಿಗೆ ಬೆಲೆ ಖಂಡಿತಾ ಇದೆ. ಆದರೆ ಇಂದು ಅಂತಹ ಪ್ರೇಮಿಗಳನ್ನು ಬ್ಯಾಟರಿ ಹಾಕಿ ಹುಡುಕಿದರು ಸಿಗುವುದೇ ಅಪರೂಪ.
ಪ್ರೀತಿ ಎಂದರೆ ಬರೀ ಫ್ಯಾಶನ್, ಶೋಕಿ ಅಲ್ಲ, ಅದು ಇಬ್ಬರೂ ವ್ಯಕ್ತಿಗಳ ಅಮೂಲ್ಯ ಜೀವನ. ಟೈಂ ಪಾಸ್ ಗಾಗಿ, ಕಾಟಚಾರಕ್ಕಾಗಿ ಓಡಾಡುವವರನ್ನು ಪ್ರೇಮಿಗಳೆಂದು ಕರೆದರೆ ಅದಕ್ಕಿರುವ ಘನತೆ, ಗಾಂಭೀರ್ಯತೆ ಮಣ್ಣಲ್ಲಿ ಸೇರುತ್ತದೆ ಅಷ್ಟೇ.
ಸೋಮವಾರ, ನವೆಂಬರ್ 18, 2024
ಇಂದು ಬದುಕಿರುವುದು ಸತ್ಯ, ನಾಳೆ ಎಂಬುವುದು ಭ್ರಮೆ..
⏩ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ
ಇಷ್ಟು ವಯಸ್ಸಾದರೂ ಜೀವನದ ಬಗ್ಗೆ ಸ್ವಲ್ಪವೂ ಬೇಸರಿಸಿಕೊಳ್ಳದೇ, ದೇವರನ್ನು ಶಪಿಸದೇ, ಅತ್ಯುತ್ಸಾಹದಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದಿಯಾ ಅಜ್ಜಿ, ನಿಜಕ್ಕೂ ನೀನು ಗ್ರೇಟ್. ನಿನ್ನಂತ ಸ್ವಾಭಿಮಾನಿಗಳು 100 ವರ್ಷ ಬದುಕಬೇಕು ಎಂದು ಹೇಳಿದ್ದೆ ತಡ, ಅದಕ್ಕೆ ಆಕೆ ಹೇಳಿದ ಪ್ರಸಂಗ, ಘಟನೆಯೊಂದು ಎಲ್ಲರೂ ಆತ್ಮವಲೋಕನ, ಆಲೋಚಿಸುವಂತೆ ಮಾಡಿಕೊಳ್ಳುವಂತಿತ್ತು.
ಇಬ್ಬರು ವ್ಯಕ್ತಿಗಳು ತಮ್ಮ ಆಯುಷ್ಯವನ್ನು (ಜೀವಿತಾವಧಿ) ಹೆಚ್ಚಿಸಿಕೊಳ್ಳಲು ಹಲವು ದಿನಗಳ ಕಾಲ ದೀರ್ಘಾವಧಿಯ ತಪಸ್ಸನ್ನು ಮಾಡುತ್ತಾರಂತೆ. ಅವರ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷವಾಗಿ, ನಿಮ್ಮ ಆಸೆ, ಬೇಡಿಕೆಗಳು ಏನಿದೆ ಹೇಳಿ, ಅದನ್ನು ನಾನು ಈಡೇರಿಸುತ್ತೇನೆಂದು ಭರವಸೆ ನೀಡುತ್ತಾರಂತೆ.
ಅದಕ್ಕೆ ಆ ಇಬ್ಬರೂ ದೇವರೇ ನಮಗೆ ದೊಡ್ಡ, ದೊಡ್ಡ ಆಸೆ, ಬೇಡಿಕೆಗಳೇನಿಲ್ಲ. ಆದರೆ ನಮ್ಮಿಬ್ಬರಿಗೂ ಒಂದೇ ಒಂದು ಆಸೆ ಇದೆ. ಅದೆನೆಂದರೆ ನಮಗೆ ಯಾವುದೇ ತೊಂದರೆಯಾಗದೆ, ನಾವು 100 ವರ್ಷ ಜೀವಿಸಬೇಕು, ಬದುಕಬೇಕು. ನಾವಿಬ್ಬರು 100 ವರ್ಷ ಬದುಕುವ ರೀತಿ ಆಯುಷ್ಯವನ್ನು ದಯಪಾಲಿಸು ಎಂದು ಕೇಳುತ್ತಾರೆ. ಅದಕ್ಕೆ ದೇವರು ಸ್ವಲ್ಪ ಹೊತ್ತು ಆಲೋಚಿಸಿ, ಹೆಚ್ಚು ವರ್ಷ ಬದುಕ ಬೇಕೆನ್ನುವುದನ್ನು ಬಿಟ್ಟು ಬೇರೆ ಏನೇ ಆಸೆ ಇದ್ದರೂ ಕೇಳಿ, ಅದನ್ನು ನಾನು ಈಡೇರಿಸುವೆ ಎನ್ನುತ್ತಾರಂತೆ.
ಅದಕ್ಕೆ ಆ ಇಬ್ಬರೂ, ನಮಗೆ ಬೇರೆ ಯಾವುದೇ ಆಸೆಗಳಿಲ್ಲ, ಬದಲಾಗಿ ಹೆಚ್ಚಿನ ವರ್ಷ ಬದುಕಬೇಕೆನ್ನುವುದೇ ನಮ್ಮ ಏಕೈಕ ಆಶಯ ಎನ್ನುತ್ತಾರೆ. ಅದಕ್ಕೆ ದೇವರು ಪ್ರತಿಕ್ರಯಿಸಿ ದೊಡ್ಡ ಸತ್ಯವೊಂದನ್ನು ಹೇಳುತ್ತೇನೆ, ಧೈರ್ಯವಾಗಿ, ಕಿವಿಕೊಟ್ಟು ಕೇಳಿ. ಅದೇನೆಂದರೆ ನೀವು ಇಬ್ಬರೂ ಕೇವಲ ಒಂದು ದಿನದ ಮಟ್ಟಿಗೆ ಮಾತ್ರ ಬದುಕುತ್ತಿರಾ. ನಾನು ನಿಮ್ಮ ತಪಸ್ಸಿಗೆ ಮೆಚ್ಚಿ ಏನೇ ವರವನ್ನು ಬೇಕಾದರೂ ಕೊಡಬಹುದು. ಆದರೆ ನಿಮ್ಮ ಆಯುಷ್ಯವನ್ನು ಹೆಚ್ಚಿಸುವ ಶಕ್ತಿ ಮಾತ್ರ ನನಗಿಲ್ಲ. ಅದು ವಿಧಿಲಿಖಿತ ನಿಯಮ. ಒಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು, ಅದನ್ನು ತಪ್ಪಿಸಲು ನಮ್ಮ ಆಯುಷ್ಯವನ್ನು ಬರೆದ ಆ ಬ್ರಹ್ಮ ಬಂದರೂ ಸಾಧ್ಯವಿಲ್ಲ ಎನ್ನುತ್ತಾರೆ.
ನನಗೆ ಅತ್ಯಂತ ನೋವು, ದುಖಃವೆಂದರೆ ನೀವು ಬದುಕುವುದು ಕೇವಲ ಒಂದು ದಿನ ಮಾತ್ರ ಎಂಬ ವಿಷಯ, ನಿಮ್ಮ ಆಯುಷ್ಯ ರೇಖೆ ನನಗೆ ಸ್ಪಷ್ಟವಾಗಿ ಹೇಳುತ್ತಿದೆ. ಈ ವಿಚಾರ ಕೇಳಿದ ಈ ಇಬ್ಬರೂ ನಾವು ಒಂದೇ, ಒಂದು ದಿನ ಮಾತ್ರ ಬದುಕುವುದೆಂದು ಅರ್ಥವಾಗಿ, ಮನಸ್ಸಿನಲ್ಲಿ ಏನೋ ಆಲೋಚಿಸುತ್ತ, ಕೊರಗುತ್ತ ತಮ್ಮ ಮನೆಯನ್ನು ಸೇರಿಕೊಳ್ಳುತ್ತಾರೆ.
ಅದರಲ್ಲಿ ಒಬ್ಬ ಅಯ್ಯೋ ನಾನು 100 ವರ್ಷ ಬದುಕಬೇಕು ಎಂದು ಎಷ್ಟೋ ಆಸೆ, ಕನಸು ಕಂಡಿದ್ದೆ. ಆದರೆ ನನ್ನ ಅದೃಷ್ಟ ಸರಿಯಿಲ್ಲ, ನೆಟ್ಟಗಿಲ್ಲ ಎಂದು ಆಲೋಚಿಸುತ್ತ, ಚಿಂತಿಸುತ್ತ ಊಟ, ನೀರು ಕುಡಿಯದೆ, ಚಿಂತಕ್ರಾ0ತನಾಗಿ, ವಿಪರಿತ ಜಿಗುಪ್ಸೆ ಹೊಂದಿ, ಆ ರಾತ್ರಿಯೇ ಈತ ಹೃದಯಘಾತದಿಂದ ನಿಧನ ಹೊಂದುತ್ತಾನೆ.
ಆದರೆ ಮತ್ತೊಬ್ಬನು ನಾನು ಒಂದು ದಿನದ ಮಟ್ಟಿಗೆ ಮಾತ್ರ ಬದುಕುವುದು ಎನ್ನುವ ವಿಷಯ ನನಗೆ ಮೊದಲೆ ತಿಳಿದಿದ್ದು ಒಳ್ಳೆಯದಾಯ್ತು, ಕನಿಷ್ಟ ಈ ಒಂದು ದಿನವನ್ನಾದರೂ ಖುಷಿಯಿಂದ ಕಳೆಯಬೇಕು ಎಂದು ತೀರ್ಮಾನಿಸಿದ. ತನಗೆ ಇಷ್ಟವಾದ ಊಟ ಮಾಡಲು ಹೋಟೆಲ್ ಹೋಗಿ ತನಗೆ ಏನೇನೂ ಇಷ್ಟವೋ ಆ ಎಲ್ಲಾ ಊಟ, ಸಿಹಿ, ತಿಂಡಿ ಸವಿಯುತ್ತಾನೆ. ತನ್ನ ಆತ್ಮೀಯ ಸ್ನೇಹಿತರನ್ನು ಖುದ್ದು ಭೇಟಿ ಮಾಡಿ, ಮಾತನಾಡಿಸಿಕೊಂಡು ಬರುತ್ತಾನೆ. ಮತ್ತೆ ಕೆಲವರನ್ನು ಪೋನ್ ಮೂಲಕ ಸಂಪರ್ಕಿಸುತ್ತಾನೆ. ಹೊಸ ಬಟ್ಟೆ ಧರಿಸಿ, ತನಗೆ ಇಷ್ಟವಾದ ಹತ್ತಿರದಲ್ಲಿರುವ ಸ್ಥಳವನ್ನು ಹೋಗಿ ವೀಕ್ಷಿಸಿಕೊಂಡು ಸ್ಥಳದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾನೆ. ಆ ಒಂದು ದಿನದ ಮಟ್ಟಿಗೆ ಏನೆಲ್ಲಾ ಅನುಭವಿಸಲು ಸಾಧ್ಯವೇ ಅವೆಲ್ಲವನ್ನು ಆಸ್ವಾಧಿಸುತ್ತಾನೆ.
ಆತ ಒಂದು ದಿನ ಮಾತ್ರ ತಾನು ಬದುಕುವುದೆಂದು ಆಲೋಚಿಸಿ, ತನ್ನ ಜೀವನದಲ್ಲಿ ಎಂದು ಕಾಣದ ಸಂತೋಷ, ಸುಖವನ್ನು ಆ ಒಂದು ದಿನ ಮಾತ್ರ ಕಾಣಲು ಪ್ರಯತ್ನಿಸುತ್ತಾನೆ. ಎಲ್ಲವನ್ನು ನೋಡಿಕೊಂಡು ರಾತ್ರಿಗೆ ಮನೆಗೆ ಬಂದು ಸ್ವಲ್ಪಹೊತ್ತು ತನಗೆ ಇಷ್ಟವಾದ ಕಾರ್ಯಕ್ರಮವನ್ನು ಟಿ.ವಿಯಲ್ಲಿ ನೋಡಿ, ಬೇಗ ಮಲುಗುತ್ತಾನೆ. ಹೇಗಿದ್ದರೂ ನಾಳೆಯಿಂದ ನಾನು ಬದುಕಿರುವುದಿಲ್ಲ, ಇವತ್ತು ರಾತ್ರಿ ಖುಷಿಯಾಗಿ ಹೆಚ್ಚಿನ ನಿದ್ರೆ ಮಾಡಬೇಕು ಎಂದು ನಿದ್ರೆಗೆ ಜಾರುತ್ತಾನೆ.
ಆದರೆ ಬೆಳಗ್ಗೆ ಆತನಿಗೆ ನಿದ್ರೆಯಿಂದ ಎಚ್ಚರವಾಗುತ್ತದೆ. ಅರೆ ನಾನು ರಾತ್ರಿಯೇ ನಿದ್ದೆಯಲ್ಲಿ ಸಾಯಬೇಕಿತ್ತಲ್ಲವೇ, ಆದರೆ ಇನ್ನು ಬದುಕಿದೇನಲ್ಲಪ್ಪ, ಇದೇನು ವಿಚಿತ್ರ ಎಂದು ದೇವರನ್ನು ಕೇಳಿದ. ಅದಕ್ಕೆ ದೇವರು ಪ್ರತ್ಯಕ್ಷವಾಗಿ ನೋಡು ನಿನಗೆ ಮತ್ತು ನಿನ್ನ ಸ್ನೇಹಿತ ಇಬ್ಬರಿಗೂ ಹೆಚ್ಚಿನ ವರ್ಷಗಳೇ ಆಯುಷ್ಯ ಇತ್ತು. ಆದರೆ ನಾನು ನಿಮ್ಮನ್ನು ಪರೀಕ್ಷಿಸಲು, ಜೀವನದ ಮೌಲ್ಯವನ್ನು ಮನವರಿಕೆ ಮಾಡಲು, ನೀವು ಇಬ್ಬರೂ ಒಂದೇ ದಿನದ ಮಟ್ಟಿಗೆ ಮಾತ್ರ ಬದುಕುವುದು, ನಿಮ್ಮಿಬ್ಬರಿಗೂ ಕೇವಲ ಒಂದೇ ಒಂದು ದಿನ ಮಾತ್ರ ಆಯುಷ್ಯ ಇದೆ ಎಂದು ಸುಳ್ಳು ಹೇಳಿದೆ.
ಆದರೆ ನಿನ್ನ ಸ್ನೇಹಿತ ತಾನು ಒಂದು ದಿನ ಮಾತ್ರ ಬದುಕುವುದೆಂದು ವಿಪರಿತ ತಲೆ ಕೆಡಿಸಿಕೊಂಡು, ಆಲೋಚಿಸಿ, ಆಲೋಚಿಸಿ, ಕಂಗೆಟ್ಟು ಆವತ್ತು ರಾತ್ರಿಯೇ ಹೃದಯಘಾತದಿಂದ ಕೊನೆ ಉಸಿರೆಳೆದ.
ಆದರೆ ನೀನು ಒಂದು ಮಾತ್ರ ಬದುಕುವುದೆಂದು ಗೊತ್ತಾದರೂ, ಆ ಒಂದು ದಿನವನ್ನಾದರೂ ಖುಷಿಯಿಂದ ಕಳೆದೆ. ಇಷ್ಟವಾದ ಊಟ ಸವಿದೆ, ನಿನ್ನ ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಿ, ಇಷ್ಟವಾದ ಜಾಗಕ್ಕೆ ಭೇಟಿ ಕೊಟ್ಟು ಬಂದೆ. ವಿಪರ್ಯಾಸವೆಂದರೆ ಈ ಹಿಂದೆ ನೀನು ಹತ್ತಾರು ವರ್ಷ ಬದುಕುತ್ತೆನೆಂದು ಭಾವಿಸಿ, ಪ್ರತಿದಿನವನ್ನು ದುಃಖದಿಂದ, ಆಲೋಚಿಸುತ್ತ, ಸರಿಯಾಗಿ ಬಳಸಿಕೊಳ್ಳಲು ವಿಫಲವಾದೆ. ಆದರೆ ಒಂದು ದಿನದಲ್ಲಿ ಸಾಯುತ್ತೇನೆಂದು ಗೊತ್ತಾದಾಗ ಜ್ಞಾನೋದಯವಾಗಿ ಈ ಒಂದು ದಿನವನ್ನು, ನಿನ್ನ ಇಡೀ ಜೀವನದಲ್ಲಿ ಎಂದು ಕಾಣದ ಸಂತೋಷ, ಸಂತಸದಿ0ದ ಕಳೆದೆ.
ಇದನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡದೆ ಪ್ರತಿದಿನವನ್ನು ಖುಷಿಯಿಂದ ಬದುಕುವುದನ್ನು ಕಲಿ, ಆಗ ನಿನ್ನ ಜೀವನಕ್ಕೆ ಅರ್ಥ ಬರುತ್ತದೆ. ನಿನಗೆ 100 ವರ್ಷ ಆಯುಷ್ಯ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಬದುಕಿದ ಅಷ್ಟು ದಿನವನ್ನು ಸಂತೋಷ, ನೆಮ್ಮದಿಯಿಂದ ಕಳೆಯುವುದನ್ನು ಮೊದಲು ಪ್ರಾರಂಭಿಸು ಎಂದು ದೇವರು ಆತನಿಗೆ ಜೀವನದ ಒಳಾರ್ಥವನ್ನು ವಿವರಿಸಿ, ಕಣ್ತೆರುಸುತ್ತಾರೆ.
ಜಗತ್ತಿನ ಅತ್ಯಂತ ವಾಸ್ತವ ಸತ್ಯವೆಂದರೆ, ಈಗ ಬದುಕಿರುವವರು ಮುಂದಿನ ಸೆಕೆಂಡ್ ನಲ್ಲಿ ಬದುಕಿರುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ, ವ್ಯಾರಂಟಿ ಇಲ್ಲ. ಮನುಷ್ಯನದ್ದು ಒಂಥರಾ ಅತ್ರಂತ ಜೀವನ, ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬುವುದನ್ನು ಅರಿಯದೇ ಬದುಕುತ್ತೇವೆ.
ಆಪ್ಯಲ್ ಕಂಪನಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಒಂದು ಮಾತೇಳಿದ್ದರು, If you live each day as it was your last, someday you'll most certainly be right.
ಅಂದರೆ ಪ್ರತಿದಿನ ನಾವು ಇಂದೇ ನಮ್ಮ ಕೊನೆ ದಿನ ಎಂದು ಭಾವಿಸಿ ಬದುಕಬೇಕಂತೆ. ಆಗ ಆ ಒಂದು ದಿನವನ್ನಾದರೂ ಖುಷಿ, ಸಂತೋಷದಿ0ದ ಕಳೆಯುತ್ತೇವೆ. ಅತಿಯಾದ ದುರಾಸೆಗಳಿಗೆ ಒಳಗಾಗುವುದಿಲ್ಲ, ಗರ್ವ, ಅಹಂಕಾರಗಳು ನಮ್ಮ ಸಮೀಪ ಸುಳಿಯುವುದಿಲ್ಲ. ಆ ಒಂದು ದಿನವನ್ನು ಕಾಲಹರಣ ಮಾಡದೇ, ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಗುರಿ, ಸಾಧನೆಯ ಶಿಖರವೇರಲು ಪರಿಶ್ರಮ ಪಡುತ್ತೇವೆ.
ಇಂದೇ ನಮ್ಮ ಕೊನೆ ದಿನವೆಂದರೆ, ನಮ್ಮಲ್ಲಿ ಅಗಾಧ ಬದಲಾವಣೆಗಳು ಸಹಜವಾಗಿಯೇ ಆಗುತ್ತವೆ ಎಂಬುವುದು ಸ್ಟೀವ್ ಜಾಬ್ಸ್ ರವರ ವಾಕ್ಯದಲ್ಲಿರುವ ಆಂತರಿಕ ಅಂಶ.
ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ, ಬದುಕಿದಷ್ಟು ದಿನ ಎಷ್ಟರ ಮಟ್ಟಿಗೆ ಆ ದಿನಗಳನ್ನು ಸಂತೋಷದಿ0ದ ಕಳೆದಿದ್ದೇವೆ ಎನ್ನುವುದೇ ನಮಗೆ ಅಗತ್ಯ. ಈಗಂತೂ ನಮ್ಮಲ್ಲಿ ತುಂಬಿರುವ ಸ್ವಾರ್ಥ, ದುರಾಸೆ, ಸಮಸ್ಯೆಗಳ ಬಗ್ಗೆ ಅತಿಯಾದ ಚಿಂತನೆಯಿ0ದ ಪ್ರತಿದಿನವೂ ವ್ಯರ್ಥವಾಗಿ ಕಳೆದು ಹೋಗುತ್ತ, ನಮ್ಮ ಅರಿವಿಗೆ ಬರದೇ ನಮ್ಮ ಜೀವನದ ಬಹಪಾಲು ಎಲ್ಲಾ ದಿನಗಳು ಕಣ್ಮರೆಯಾಗುತ್ತಿವೆ.
ನಾಳೆ ನಾನು ಬದುಕಿರುವುದಿಲ್ಲ ಎಂದು ಭಾವಿಸಿಕೊಂಡು ನೋಡಿ, ಆಗ ನಮ್ಮಲ್ಲಿ ಆಸೆಗಳ ಪ್ರಮಾಣ ಸಹಜವಾಗಿಯೇ ಗಣನೀಯವಾಗಿ ಕುಸಿಯುತ್ತವೆ. ಹಣ, ಆಸ್ತಿ, ಜಮೀನು, ಬಂಗಾರ ಎಲ್ಲವೂ ಶೂನ್ಯಕ್ಕೆ ಸಮಾನ ಎಂಬ ಭಾವನೆ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ನಾನೇ ಇರದೇ ಮೇಲೆ ಈ ಸಂಪತ್ತು, ಐಶ್ವರ್ಯಗಳಿಸಿ ಬರುವುದಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಉದ್ಬವವಾಗುತ್ತದೆ.
ಪ್ರತಿನಿತ್ಯವು ಕಚೇರಿಯ ಒತ್ತಡ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಪಿಸುತ್ತ, ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ ಸಮಸ್ಯೆಗಳ ಸಾಗರಗಳ ಬಗ್ಗೆ ಅತಿಯಾಗಿ ಆಲೋಚಿಸುವುದು ಮೂರ್ಖರ ಲಕ್ಷಣ. ಪ್ರತಿದಿನವನ್ನು ಸಪ್ಪೆಯಾಗಿ ಕಳೆದು, ಕೂರುವ ಬದಲು, ಭಗವಂತ ನಮಗೆ ನೀಡಿರುವುದರಲ್ಲೇ ಸಂತೋಷ, ಸಂತಸವನ್ನು ಕಾಣಬೇಕಿದೆ. ಸ್ನೇಹಿತರೊಂದಿಗೆ, ಕುಟುಂಬದವರೊ0ದಿಗೆ ಅನ್ಯೋನ್ಯವಾಗಿ ಬಾಳಬೇಕಿದೆ. ಇಂದಿನ ದಿನವನ್ನು ನಾವು ಸಂತೋಷದಿ0ದ ಕಳೆಯುಲು ಸಾಧ್ಯವಾಗಲಿಲ್ಲ ಎಂದರೆ, ನಾಳೆ ದಿನವನ್ನು ಅದ್ಯಾವ ರೀತಿ ಸಂತೋಷದಿ0ದ ಕಳೆಯುತ್ತೇವೆ..?
ನಮಗೆ ಇರುವುದರಲ್ಲೇ ಸರಳವಾಗಿ ಜೀವನ ಸಾಗಿಸಿ, ಪ್ರತಿದಿನವನ್ನು ಆರ್ಥಗರ್ಭಿತವಾಗಿ ಬದುಕುವುದನ್ನು ನಾವು ಕಲಿಯುವುದು ಯಾವಾಗ..? ಇಂದು ನಾನಿದ್ದೇನೆ ಎನ್ನುವುದು ಸತ್ಯ. ನಾಳೆ ಇರುತ್ತೇನೆ ಎನ್ನುವುದು ಕೇವಲ ಭ್ರಮೆ ಮತ್ತು ಕಲ್ಪಿತ. ಆ ಕಾರಣಕ್ಕಾಗಿಯೇ ಇಂದಿನ ದಿನವನ್ನು ಖುಷಿಯಾಗಿ ಸ್ವೀಕರಿಸಿ, ಅನುಭವಿಸಿ, ನಾಳೆ ದಿನವನ್ನು ನಾಳೆ ನೋಡಿಕೊಳ್ಳೋಣ, ನಾಳೆ ಏನೋ ಆಗೋಗುತ್ತದೆ ಎಂದು, ಇಂದಿನ ದಿನವನ್ನು ಬೇಸರದಿಂದ ಕಳೆಯುವ ಮನಸ್ಥಿತಿ ಕೊನೆಗಾಣಬೇಕಿದೆ.
ಅಂದ ಹಾಗೆ ನನಗೆ ಪ್ರತಿದಿನವು, ಪ್ರತಿನಿಮಿಷವು ಬಹಳ ಇಷ್ಟ ಮತ್ತು ಇಂಪಾರ್ಟೆ0ಟ್. ಯಾಕಂದ್ರೆ ನಾಳೆ ಇದೆ ಅನ್ನೋದು ನನಗೆ ಗೊತ್ತಿಲ್ಲ. ಇಂದು ರಾತ್ರಿ ಮಲುಗುತ್ತೇವೆ, ನಾಳೆ ಬೆಳಗ್ಗೆ ನಿದ್ದೆಯಿಂದ ಎದ್ದೇಳದಿದ್ದರೇ..? ಅದೇಕ್ಕೆಳುವುದು ನಿಮ್ಮ ಪ್ರತಿದಿನವನ್ನು ಆನಂದಿಸಿ, ಆಹ್ಲಾದಿಸಿ, ಖುಷಿಯಾಗಿರಿ. So let's enjoy every moment in your life.
ಭಾನುವಾರ, ಏಪ್ರಿಲ್ 7, 2024
ವಿಧಿ ಬರಹದ ಕ್ರೂರತೆಯ ಮಧ್ಯೆ ಅರಳಿದ "ಬದುಕು"..
⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ
ಕೆಲವರ ಜೀವನವೇ ಹಾಗೆ, ಸಂತೋಷಕ್ಕಿಂತ ದುಃಖವನ್ನೇ ಸದಾ ಅನುಭವಿಸಿ, ಬರೀ ನೋವಿನ ಜೊತೆ ಬದುಕು ಸಾಗಿಸುವ ಸ್ಥಿತಿ, ಅವರದ್ದು. ಅಂತವರನ್ನು ಕಂಡರೆ ಮನಸ್ಸಿಗೆ ಆಗುವ ನೋವು, ಬೇಸರ ಅಷ್ಟಿಷ್ಟಲ್ಲ. ಅವರ ನೋವು, ಸಂಕಟ, ವೇದನೆ, ದುಃಖ, ಕಷ್ಟದ ಸನ್ನಿವೇಶಗಳನ್ನು ನೋಡಿದರೆ, ಬದುಕು ಎಷ್ಟೊಂದು ದುಸ್ಥರ, ವಿಧಿ ಬರಹ ಇಷ್ಟೊಂದು ಕ್ರೂರಿಯೇ ಎಂದು ಅನ್ನಿಸದೆ ಇರಲಾರದು. ಕೆಲವರ ಜೀವನ ಇಷ್ಟೊಂದು ಸಮಸ್ಯೆಗಳ ಆಗರದಿಂದ ಕೂಡಿರುತ್ತದೆಯೇ ಎಂದು ಊಹಿಸಲು ಕೂಡ ಅಸಾಧ್ಯ. ಆ ಮಟ್ಟಿಗೆ ಅವರ ಜೀವನ ಕಣ್ಣೀರಿನ ನೋವಿನಲ್ಲಿ ಮುಳುಗಿ ಹೋಗಿ, ಅಂಧಕಾರದಲ್ಲಿ ಸೇರಿರುತ್ತದೆ.
ಆದರೆ ಅದನ್ನು ಅವರು ಎಂದಿಗೂ, ಯಾರಿಗೂ ಹೇಳಿಕೊಳ್ಳುವುದಿಲ್ಲ. ಹಾಗೇನಾದರೂ ಹೇಳಿಕೊಳ್ಳೊಣವೆಂದರೆ ಯಾರು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಏಕೆಂದರೆ ಅವರನ್ನು ಕಷ್ಟದ ಸರಮಾಲೆ ಸುತ್ತುವರೆದಿರುವುದರಿಂದ ಯಾರು ತಾನೇ ಹತ್ತಿರಕ್ಕೆ ಹೋಗಲು ಪ್ರಯತ್ನಿಸುತ್ತಾರೆ, ಇಷ್ಟಪಡುತ್ತಾರೆ ಹೇಳಿ. ಆದರೂ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಕಳೆಗುಂದುವುದಿಲ್ಲ. ನಾವು ದುರದೃಷ್ಟವಂತರು ಎಂದು ಯಾವಾಗಲೂ ಭಾವಿಸುವುದಿಲ್ಲ, ವಿಧಿಗೆ ಸವಾಲಾಕಿ ಖುಷಿಯಿಂದ ಜೀವನ ನಡೆಸುತ್ತಾರಲ್ಲ, ಅದೇ ಅವರ ಆತ್ಮಶಕ್ತಿ, ಧೈರ್ಯ, ಛಲ, ಬಲ, ವಿಶ್ವಾಸ.
ನಿಜ ನಾವು ಪ್ರತಿನಿತ್ಯವು ದೇವರನ್ನು ಶಪಿಸುತ್ತೇವೆ, ದೇವರು ನನ್ನನ್ನು ಶ್ರೀಮಂತನನ್ನಾಗಿ ಮಾಡಲಿಲ್ಲ. ನನಗೆ ದೊಡ್ಡ ದೊಡ್ಡ ಹುದ್ದೆ ಕೊಡಿಸಲಿಲ್ಲ. ಲಕ್ಷಗಟ್ಟಲೆ ಸಂಬಳದ ನೌಕರಿ ಸಿಗುವಂತೆ ಮಾಡಲಿಲ್ಲ. ದೊಡ್ಡದಾದ ಮನೆಯ ಮಾಲೀಕನನ್ನಾಗಿಸಲಿಲ್ಲ. ಕಾರಿನ ಆಸೆ ಈಡೇರಿಸಲಿಲ್ಲ. ನನ್ನನ್ನು ಸುಂದರವಾಗಿ ಸೃಷ್ಟಿ ಮಾಡಲಿಲ್ಲ. ಹತ್ತಾರು ಎಕರೆ ಜಮೀನಿನ ಒಡೆಯನಾಗಲಿಲ್ಲ. ದೇವರು ನನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಲಿಲ್ಲ ಎಂದು ದೇವರ ಪೋಟೋ ಕಂಡಾಗಲೆಲ್ಲ ಅದೆಷ್ಟು ಬಾರಿ ಬೈಕೊಳ್ಳುತ್ತೇವೋ ಗೊತ್ತಿಲ್ಲ.
ವಾಸ್ತವವೆಂದರೆ ನಮ್ಮಲ್ಲಿ ಎಷ್ಟೇ ಹಣವಿದ್ದರೂ ನಮಗೆ ಸಾಲದು, ಎಷ್ಟೇ ಸಂಬಳ ಬಂದರೂ ತೃಪ್ತಿಯಿಲ್ಲ. ಎಷ್ಟೇ ದೊಡ್ಡ ಮನೆಯಿದ್ದರು ಖುಷಿಯಿಲ್ಲ. ಎಷ್ಟೇ ಜಮೀನಿದ್ದರೂ ನೆಮ್ಮದಿ ಇಲ್ಲ. ಅಷ್ಟರ ಮಟ್ಟಿಗೆ ಅಪರಿಮಿತ ಬಯಕೆಗಳಿಂದ ಜೀವನದಲ್ಲಿ ಎಲ್ಲವೂ ಇದ್ದರೂ, ಏನೇನೂ ಇಲ್ಲದಂತೆ ಬದುಕುತ್ತೇವೆ, ಅದು ನಿರುತ್ಸಾಹ, ನಿರಾಶವಾದದಿಂದ ಎಂಬ ಸತ್ಯಾಂಶ ಕಣ್ಣಿಗೆ ಕಾಣುತ್ತದೆ.
ನಿಮಗೊಂದು ಘಟನೆ ಹೇಳುತ್ತೇನೆ ಕೇಳಿ, ಆಕೆಗೆ ತಿಂಗಳಿಗೆ ಬರುವುದು ಕೇವಲ 1200 ರೂ. ವಿಕಲಚೇತನ ಪಿಂಚಣಿ. ಅದರಲ್ಲಿಯೇ ತನ್ನ ಇಡೀ ಆಸೆಗಳೆಲ್ಲವನ್ನೂ ಪೂರೈಸಿಕೊಂಡು, ಉಳಿತಾಯ ಮಾಡಬೇಕು. ಆಕೆ ಹೆಸರು ಲಲಿತ, ಇತ್ತಿಚೀಗೆ ಪರಿಚಯವಾದ ಹುಡುಗಿ. ಆಕೆ ವಿಕಲಚೇತನಳು. ಮೂಲತಃ ಕೋಲಾರ ತಾಲ್ಲೂಕಿನ ಹಳ್ಳಿಯವಳು. ಎರಡು ಕಣ್ಣುಗಳ ದೃಷ್ಟಿ ಸರಿಯಾಗಿ ಕಾಣುವುದಿಲ್ಲ. ಕಣ್ಣಿಗೆ ತೀರ ಹತ್ತಿರದಿಂದ ನೋಡಿದರೆ ಮಾತ್ರ ಅಕ್ಷರಗಳನ್ನು ಓದುತ್ತಾಳೆ. ದೂರದಿಂದ ನೋಡಿದರೆ ಒಂದಕ್ಷರವು ಕಾಣುವುದಿಲ್ಲ.
ಲಲಿತ ವಯಸ್ಸು 19 ವರ್ಷವಿರಬಹುದು. ಪಿಯುಸಿ ಓದಿದ್ದಾಳೆ. ತಂದೆ, ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ತೀರ ಬಡತನ ಕುಟುಂಬ. ಚಿಕ್ಕಂದಿನಿಂದಲೇ ಆಕೆಗೆ ಎರಡು ಕಣ್ಣುಗಳ ದೃಷ್ಟಿ ಸಮಸ್ಯೆ ಇದೆ. ಆದರೂ ಆಕೆ ತನಗೆ ಎರಡು ಕಣ್ಣು ಕಾಣಿಸುವುದಿಲ್ಲ ಎಂಬ ನೋವನ್ನು ಮರೆತು ಜೀವಿಸುತ್ತಿದ್ದಾಳೆ.
ಏನಮ್ಮಾ ಲಲಿತ ಎಂದರೆ, ಏನ್ಮಾಡುವುದು ಸಾರ್, ನನಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ಅಳುತ್ತಾ, ನೋವಿನಿಂದ ಕೂತರೆ ಜೀವನದ ಬಗ್ಗೆ ಜಿಗುಪ್ಸೆ ಬಂದು ಬೇಸರವಾಗುತ್ತದೆ. ನನಗೆ ಕಣ್ಣುಗಳು ಕಾಣದಿರಬಹದು, ಆದರೆ ಬದುಕಿನ ಬಗ್ಗೆ ನನಗೆ ಬೇಸರವಿಲ್ಲ. ಕಾರಣ ನನಗಿಂತ ಕಷ್ಟದಲ್ಲಿ ಹಲವರಿದ್ದಾರೆ, ಅವರ ಕಷ್ಟಗಳ ಮುಂದೆ ನನ್ನ ಸಮಸ್ಯೆ ತುಂಬಾ ಚಿಕ್ಕದು ಎಂಬ ಆಕೆಯ ಅರ್ಥಗರ್ಭಿತ ಮಾತಿಗೆ ಏನು ಹೇಳಲು ಸಾಧ್ಯ..?
ಕಷ್ಟದಲ್ಲಿದ್ದರು ಆಕೆಯ ನಗುವಿನ ಗುಣ, ಮುಗ್ದತೆ, ಭವಿಷ್ಯದಲ್ಲಿ ಖಂಡಿತಾ ಒಳ್ಳೆಯದ್ದಾಗುತ್ತದೆ ಎಂಬ ಆಕೆಯ ಆಶಾವಾದ, ನಮ್ಮನ್ನೇ ಆಶ್ಚರ್ಯ, ಆತ್ಮವಲೋಕನ ಪಡುವಂತೆ ಮಾಡುತ್ತದೆ.
ಇನ್ನೊಂದು ಘಟನೆ ಕೇಳಿ, ಆಕೆಯ ಹೆಸರು ರಚನಾ, ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಯವಳು. ಈಕೆಯು ವಿಕಲಚೇತನಳು. ಈಕೆಗೆ ಎರಡು ಕಾಲುಗಳು ಸ್ವಾಧೀನದಲ್ಲಿ ಇಲ್ಲ. ವಾಕರ್ ಸಹಾಯವಿಲ್ಲದೆ ನಡೆಯಲು ತುಂಬಾ ಕಷ್ಟ. ಬಿ.ಕಾಂ ಪದವೀಧರೆ. ಸರ್ಕಾರದಿಂದ ಬರುವ ಅಲ್ಪಸ್ವಲ್ಪ ಪಿಂಚಣಿಯೇ ಈಕೆಗೂ ಆಧಾರ. ಆದರೆ ಜೀವನದ ಬಗ್ಗೆೆ ಎಂದೂ ನಿರುತ್ಸಾಹ ಪಟ್ಟಿಲ್ಲ. ಪ್ರತಿದಿನವೂ 3 ಬಸ್ ಹಿಡಿದು ಕಾಲೇಜಿಗೆ ಹೋಗುತ್ತಾಳೆ.
ಸಾಧನೆ ಮಾಡಲು ಕಾಲಿನ ಅಗತ್ಯವೇನಿದೆ ಸಾರ್, ಎಷ್ಟೋ ಜನ ಕೈ, ಕಾಲು ಸರಿಯಾಗಿರುವವರು ಕೂಡ ಜೀವನದಲ್ಲಿ ಏನು ಮಾಡದೇ ವ್ಯರ್ಥವಾಗಿ ಬದುಕು ಕಳೆದು ಬಿಡುತ್ತಾರೆ. ಆದರೆ ನಾನು ಹಾಗಲ್ಲ, ನನಗೆ ಕಾಲಿಲ್ಲ ಎಂದು ಅಳುತ್ತ ಕೂತರೆ ನೋಡವವರು ಅನುಕುಂಪ ವ್ಯಕ್ತಪಡಿಸಬಹುದೆ ಹೊರತು ನನಗೆ ಬರುವ ಲಾಭವೇನಿಲ್ಲ. ದೇವರು ನನಗೆ ಕಾಲು ನೀಡದಿರಬಹುದು, ಆದರೆ ಸಾಧನೆ ಮಾಡಬೇಕೆಂಬ ಆಲೋಚನೆ ಮಾತ್ರ ದುಪ್ಪಟ್ಟು ನೀಡಿದ್ದಾನೆ.
ಜೀವನದಲ್ಲಿ ಒಂದಲ್ಲಾ ಒಂದು ದಿನ ನಮ್ಮ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವ ರೀತಿಯ ಸಾಧನೆ ಮಾಡೇ ಮಾಡುತ್ತೇನೆ ಎಂಬ ಆಕೆಯ ಅಚಲ ವಿಶ್ವಾಸದ ಮುಂದೆ ಮರು ಪ್ರಶ್ನೆ ಹಾಕಲು ಸಾಧ್ಯವೇ.
ಹಾಗೆಯೇ ಪ್ರಶಾಂತ್ ಎಂಬ ಹುಡುಗ ಸಿಕ್ಕಿದ್ದ. ಆತನದ್ದು ಕೋಲಾರದ ವೇಮಗಲ್ ಬಳಿಯ ಹಳ್ಳಿಯವನು. ಎಲ್ಲರಂತೆ ಚೆನ್ನಾಗಿದ್ದ, ಆದರೆ ಒಂದು ದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದು ಒಂದು ಕೈಯನ್ನು ಕಳೆದುಕೊಳ್ಳುತ್ತಾನೆ. ಇತನು ಓದಿರುವುದು ಪಿಯುಸಿ. ಪದವಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇದ್ದರೂ ಬಡತನದಿಂದ ಓದು ಮುಂದುವರೆಸಲು ಸಾಧ್ಯವಾಗಲಿಲ್ಲ. ಈತನ ತಂದೆ ನಿಧನ ಹೊಂದಿ 7 ವರ್ಷವಾಗಿದೆ. ಈಗ ಒಂದು ಸಣ್ಣ ಕಚೇರಿಯಲ್ಲಿ 6 ಸಾವಿರಕ್ಕೆ ಉದ್ಯೋಗಕ್ಕೆ ಸೇರಿದ್ದಾನೆ. ಬರುವ ಅಲ್ಪ ಸಂಬಳದಲ್ಲೇ ವಯಸ್ಸಾದ ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸಬೇಕು, ಜೊತೆಗೆ ಇವರ ತಂದೆ ಬದುಕಿದ್ದಾಗ ಮಾಡಿದ ಸಾಲಗಳನ್ನು ತೀರಿಸುವ ಹೊಣೆಗಾರಿಕೆ ಬೇರೆ ಇತನ ಮೇಲಿದೆ. ಇತನ ಕಷ್ಟಗಳನ್ನು ನೋಡಿ ಸಂಬಂಧಿಕರು ಯಾರು ಹತ್ತಿರ ಸುಳಿಯುವುದಿಲ್ಲ.
ಆದರೂ ಇತನಿಗೆ ಜೀವನದ ಬಗ್ಗೆ ಇರುವ ಆಸೆ, ಆಕಾಂಕ್ಷೆಗಳೂ ಮಾತ್ರ ಎಂದಿಗೂ ಕರಗಿಲ್ಲ. ಕಾರಣ ಜೀವನವೇ ಹಾಗೆ ಸಾರ್, ನಾವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪ್ರೀತಿಯಿಂದ ಸ್ವೀಕರಿಸುವುದನ್ನು ಬಿಟ್ಟು, ನಾವು ಬೇರೆನೂ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಭಯಬಿದ್ದು ಕೂತರೆ ಜೀವನದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ ಎಂಬ ಪ್ರಶಾಂತನ ಆಲೋಚನೆ, ಮನಸ್ಥಿತಿಗೆ ಏನು ಹೇಳಬೇಕೋ ಅರ್ಥವಾಗುವುದಿಲ್ಲ.
ಜೀವನವೇ ಹಾಗೆ, ನಾವು ಸದಾ ಸಂತೋಷವನ್ನೇ ಬಯಸುತ್ತೇವೆ, ಆನಂದದಿಂದ ಬದುಕಲು ಆಸೆ ಪಡುತ್ತೇವೆ. ಆದರೆ ಸಂತೋಷಕ್ಕಿಂತ ದುಃಖವೇ ನಮಗೆ ಲಭಿಸುತ್ತದೆ, ಕಷ್ಟಗಳು ಮನೆ ತುಂಬಾ ಮಲಗುತ್ತದೆ. ಶಿಕ್ಷಣ, ಹಣ, ಉದ್ಯೋಗ, ಕುಟುಂಬ, ಸಂಗಾತಿ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ನಾವು ಅಂದುಕೊಂಡ ರೀತಿಯಲ್ಲಿ ನಡೆದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಕಷ್ಟಗಳು ಬಂದಾಗಲೇ ಜೀವನದ ನೈಜ ದರ್ಶನವಾಗುವುದು. ನಮ್ಮಲ್ಲಿ ಆತ್ಮಸ್ಥೈರ್ಯ, ಧೈರ್ಯ, ವಿಶ್ವಾಸ ಬರಬೇಕಾದರೆ ಕಷ್ಟಗಳು ಎದುರಿಸಿದಾಗ, ಅನುಭವಿಸಿದಾಗ ಮಾತ್ರ ಸಾಧ್ಯ.
ಅಂದ ಹಾಗೆ ಜೀವನದಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ಸುಲಭವಾಗಿ ನಡೆದುಬಿಟ್ಟರೆ, ನಾವೇ ದೇವರಾಗಿ ಬಿಡುತ್ತೇವೆ, ಜೀವನಕ್ಕೆ ಬೆಲೆಯೇ ಇರುವುದಿಲ್ಲ.
ನಮಗೆ ಇರುವುದರಲ್ಲೇ ಖುಷಿ ಕಾಣುತ್ತ, ಸರಳ ಜೀವನದೊಂದಿಗೆ ಬದುಕು ಸಾಗಿಸುತ್ತ, ಅತಿ ಆಸೆ, ಸ್ವಾರ್ಥ ಬಿಟ್ಟು ಜೀವನ ನಡೆಸಿದರೆ ಅದೇ ಸ್ವರ್ಗ. ಪ್ರತಿದಿನವು ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ, ಮಾನಸಿಕವಾಗಿ ನರಳುತ್ತ, ಪ್ರತಿದಿನವು ವಿಪರಿತವಾಗಿ ಆಲೋಚಿಸುತ್ತ, ವಿಧಿ ಬರಹವನ್ನು ಶಪಿಸುತ್ತ ಜೀವನ ಸಾಗಿಸುವುದರಲ್ಲಿ ಅರ್ಥವೇನಿದೆ ಎಂಬ ಸಣ್ಣ ಆಲೋಚನೆ ನಮ್ಮ ಮನಸ್ಸಿಗೆ ಬಂದರೆ ಸಾಕು.
ಹಿರಿಯರೊಬ್ಬರು ಹೇಳಿದ್ದಾರೆ ಸುಖ ಸಂತೋಷದಲ್ಲಿ ನಮಗಿಂತ ಕೆಳಗಿರುವವರನ್ನು ನೋಡಬೇಕು. ಸಾಧನೆ, ಗುರಿಯಲ್ಲಿ ನಮಗಿಂತ ಮೇಲ್ಮಟ್ಟದವರನ್ನು ಕಾಣಬೇಕು ಎಂದು. ಒಂದೊತ್ತು ಊಟ ಸಿಗದೆ ಪರಿತಪಿಸುವ ಸಾವಿರಾರು ಜನ ನಮ್ಮ ಮಧ್ಯೆಯೇ ಇದ್ದಾರೆ. ಅವರನ್ನು ನೋಡಿದರೆ, ನಾವೆಷ್ಟು ಅದೃಷ್ಟವಂತರೆಂದು ಅರ್ಥವಾಗುತ್ತದೆ.
ಪ್ರತಿನಿತ್ಯವೂ, ಪ್ರತಿಕ್ಷಣವೂ ಅಮೂಲ್ಯ, ಅದನ್ನು ತುಂಬಾ ಸಂತೋಷದಿಂದ ಕಳೆಯಬೇಕೆ ಹೊರತು ದುಃಖಿಸುತ್ತ ವ್ಯರ್ಥ ಮಾಡುವುದಲ್ಲ. ಏಕೆಂದರೆ ಮನುಷ್ಯನಿಗೆ ಇರುವುದು ಒಂದೇ ಜನ್ಮ. ನಾವು ಈ ಜನ್ಮದಲ್ಲೇ ನೆಮ್ಮದಿ, ಸಂತೋಷ, ಆನಂದ ಕಾಣದಿದ್ದರೆ, ಮತ್ತೆ ಕಾಣುವುದು ಯಾವಾಗ..?
ಭಾನುವಾರ, ಜನವರಿ 2, 2022
ಅನ್ಯೋನ್ಯತೆಯಲ್ಲಿ ಕಾಣುವ "ಆನಂದ"..
⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಇಂದಿನ ಜನ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಸಂಪಾದಿಸುತ್ತಿದ್ದಾರೆ. ಕೆಲವರದ್ದು ಸಾವಿರಗಳಲ್ಲಿ ಸಂಪಾದನೆ ಆದರೆ, ಮತ್ತೆ ಕೆಲವರದ್ದು ಲಕ್ಷ, ಕೋಟಿಗಳಲ್ಲೂ ಇದೆ. ದುಬಾರಿ ಬೆಲೆಯ ದ್ವಿಚಕ್ರ ವಾಹನ, ಕಾರುಗಳನ್ನು ಬಳಸುವ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಲೇ ಇದೆ. ದೊಡ್ಡ ದೊಡ್ಡ ವಿಸ್ತೀರ್ಣವುಳ್ಳ ಮನೆ, ಡೂಪ್ಲೆಕ್ಸ್ ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಕರೆಗಟ್ಟಲೆ ಜಮೀನು, ಫಾರ್ಮ್ ಹೌಸ್ ಗಳ ಮಾಲೀಕರಾಗುತ್ತಿದ್ದಾರೆ. ಸಾವಿರಾರು ರೂ. ಬೆಲೆ ಬಾಳುವ ಮೊಬೈಲ್ ಪೋನ್ ಗಳು, ಟ್ಯಾಬ್ ಗಳು, ಅವುಗಳಿಗೆ ಡ್ಯುಯಲ್ ಸಿಮ್ ಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಬಹುತೇಕರು ಬಳಸುತ್ತಾರೆ. ಹಾಗೆಯೇ ಧರಿಸುವ ಬಟ್ಟೆಯು ತುಂಬಾ ಕಲರ್ ಪುಲ್ ಡಿಸೈನ್ ಗಳ ಜೊತೆಗೆ ಕಾಸ್ಟ್ಲಿಯಾಗಿದೆ.
ಇನ್ನೂ ಟೆಕ್ನಾಲಜಿ ಯುಗದೊಂದಿಗೆ ಬೆರೆತು ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯ್ಯೂಟೂಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ತೇಲುತ್ತಿದ್ದಾರೆ. ಒಂದು ರೀತಿಯ ಮನುಷ್ಯನ ಜೀವನವೇ ತುಂಬಾ ಫ್ಯಾಷನ್ ಹಾಗೂ ಅಟ್ರಾಕ್ಷನ್ ಆಗಿ ಮಾರ್ಪಾಡಾಗಿದೆ.
ದಶಕಗಳು ಉರುಳುತ್ತಿದ್ದಂತೆ ಸಮಾಜದಲ್ಲಿ ಹಲವು ಬದಲಾವಣೆಗಳು ಆಗುತ್ತಿರುವುದು ಸೂಕ್ಷ್ಮವಾಗಿ ಗಮನಿಸಬಹುದು. ವಾಸ್ತವಾಂಶವೆಂದರೆ ಜನರ ಆರ್ಥಿಕ ಸ್ಥಿತಿ, ಜೀವನ ಶೈಲಿ, ನಡವಳಿಕೆ ಮಾತ್ರ ಬದಲಾಗಿಲ್ಲ. ಜೊತೆ ಜೊತೆಗೆ ವ್ಯಕ್ತಿತ್ವವೇ ಸಂಪೂರ್ಣವಾಗಿ ಚೇಂಜ್ ಆಗಿದೆ, ಹಾದಿಯು ತಪ್ಪಿದೆ.
ಇಂದು ಪ್ರೀತಿ, ವಾತ್ಸಾಲ್ಯ, ಅನ್ಯೋನ್ಯತೆ, ಅನುಕಂಪ, ಉದಾರತೆ, ಸಹೋದರತೆ, ಸ್ನೇಹಪರತೆ, ನಂಬಿಕೆ, ವಿಶ್ವಾಸ ಎಂಬ ಅಂಶಗಳನ್ನು ಜನ ಕೈ ಬಿಟ್ಟು ಜೀವನ ಸಾಗಿಸುತ್ತಿದ್ದಾರೆ ಎಂಬ ವಿಚಾರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ಮನುಷ್ಯರಲ್ಲಿ ಕಾಣಬಾರದಾಗಿದ್ದ, ನೋಡಬಾರದಾಗಿದ್ದ ಕೆಲ ಋಣಾತ್ಮಕ ಗುಣಗಳು ದೇಹದ ತುಂಬಾ ಆವರಿಸಿಕೊಂಡು, ವಿಸ್ತಾರಗೊಂಡಿದೆ. ವಿಶೇಷವೆಂದರೆ ಈ ಗುಣಗಳನ್ನು ಪಾಲಿಸುವ ಜನಸಂಖ್ಯೆ ಮಿತಿ ಮೀರಿ ದುಪ್ಪಾಟ್ಟಾಗುತ್ತಿರುವುದೇ ನಮ್ಮಲ್ಲಿನ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿ ಎಂಬಂತಿದೆ ಹಾಗೂ ಸಮಾಜ ಸಾಗುತ್ತಿರುವ ದಾರಿಯ ಬಗ್ಗೆ ಕಳವಳ ಪಡುವಂತಾಗಿದೆ.
ಹಾಗೆಯೇ ಅಸೂಹೆ, ಹೊಟ್ಟೆಕಿಚ್ಚು, ಅಹಂಕಾರ, ಸ್ವಾರ್ಥ, ದುರಾಸೆ, ಗರ್ವ, ಕೋಪ ಎಂಬ ಅಂಶಗಳು ಕೂಡ ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತಲೇ ಇದೆ. ಮನುಷ್ಯನಲ್ಲಿ ಇಂದು ಅಹಂ ಎಂಬ ಗುಣವು ಹೆಚ್ಚಾಗಿ ಕಾಣಿಸತೊಡಗಿದೆ. ಈ ಗುಣವು ನಮ್ಮಲ್ಲಿನ ಮಾನವೀಯತೆಯನ್ನು ಮೂಲೆ ಗುಂಪು ಮಾಡುವ ಮಟ್ಟಿಗೆ ಕೊಂಡ್ಯೂಯುತ್ತಿದೆ.
ನಾವು ಇಂದು ಬಹುಪಾಲು ಸಮಯವನ್ನು ಬೇರೊಬ್ಬರ ಬೆಳವಣಿಗೆಗೆ ತೊಡರುಗಾಲು ಹಾಕುವ ಬಗ್ಗೆ ಆಲೋಚಿಸುತ್ತ ಚಿಂತಿಸುವುದರಲ್ಲೇ ವ್ಯರ್ಥ ಮಾಡುತ್ತಿದ್ದೇವೆ ಎಂಬುವುದರಲ್ಲಿ ಸಂದೇಹವಿಲ್ಲ. ನಮ್ಮ ವರ್ತನಗಳಲ್ಲೇ ಲೋಪ ದೋಷಗಳು ಎದ್ದು ಕಾಣುತ್ತಿದ್ದೆ.
ಇತ್ತೀಚಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಆತ್ಮೀಯತೆ, ಮಾನವೀಯತೆ ಸಾರುವ ವಿಡಿಯೋ ಒಂದು ನೋಡಿದೆ. ಮೂರು ಪಕ್ಷಿಗಳು ಒಂದು ಮರದ ಕೊಂಬೆಯ ಮೇಲೆ ಕೂತಿರುತ್ತವೆ. ಸ್ವಲ್ಪ ಸಮಯದ ನಂತರ ಆಹಾರ ಹುಡುಕುತ್ತ ಮೂರು ಪಕ್ಷಿಗಳು ಮರದ ಮೇಲಿಂದ ಹಾರಿ ಒಂದೊಂದು ದಿಕ್ಕಿಗೆ ಹೋಗುತ್ತವೆ. ಸ್ವಲ್ಪ ಸಮಯದ ನಂತರ ಮೂರು ಪಕ್ಷಿಗಳು ಮೊದಲು ಕೂತಿದ್ದ ಮರದ ಕೊಂಬೆಯ ಮೇಲೆ ಬಂದು ಕೂರುತ್ತವೆ. ಮೂರು ಪಕ್ಷಿಗಳಲ್ಲಿ ಒಂದು ಪಕ್ಷಿಗೆ ಮಾತ್ರ ಆಹಾರ ಸಿಕ್ಕಿರುತ್ತದೆ. ಉಳಿದ ಎರಡು ಪಕ್ಷಿಗಳು ಆಹಾರ ಹುಡುಕುತ್ತ ಹೋಗಿದ್ದರು ಕೂಡ ಅವುಗಳಿಗೆ ಸಿಕ್ಕಿರುವುದಿಲ್ಲ. ಆಗಂತ ಆಹಾರ ಸಿಕ್ಕ ಪಕ್ಷಿಯೊಂದೆ ಎಲ್ಲವನ್ನೂ ಸೇವಿಸುವುದಿಲ್ಲ, ಬದಲಾಗಿ ಉಳಿದ ಎರಡು ಪಕ್ಷಿಗಳಿಗೂ ಹಂಚಿ ತಾನು ಸೇವಿಸುತ್ತದೆ.
ಆ ಪಕ್ಷಿಯು ಈ ಆಹಾರವನ್ನು ನಾನು ಹುಡುಕಿಕೊಂಡು ಬಂದದ್ದು, ನಿಮಗೆ ಹೇಗೆ ನೀಡಲು ಸಾಧ್ಯ ಎಂದು ಹೇಳದೆ, ಹಂಚಿ ತಿನ್ನುವ ಮೂಲಕ ಆತ್ಮತೃಪ್ತಿಯ ಜೊತೆಗೆ ಮನುಷ್ಯರಲ್ಲಿ ಕಾಣದ ಮೌಲ್ಯಯುತ ಗುಣವನ್ನು ತೋರಿಸುತ್ತದೆ.
ಒಮ್ಮೆ ನಾನು ಬೆಟ್ಟವೊಂದಕ್ಕೆ ಹೋಗಿದ್ದೆ. ಆ ಬೆಟ್ಟದಲ್ಲಿ ಕೋತಿಗಳ ಸಂಖ್ಯೆ ಗಣನೀಯವಾಗಿತ್ತು. ಕೋತಿಗಳು ಆಹಾರವಿಲ್ಲದೇ ಪರಿತಪಿಸುವ ವಿಚಾರಗೊತ್ತಿದ್ದ ಒರ್ವ ವ್ಯಕ್ತಿ ಒಂದಷ್ಟು ಬನ್, ಬ್ರೆಡ್, ಬಿಸ್ಕತ್ ಗಳನ್ನು ತಂದು ಕೋತಿಗಳಿಗೆ ನೀಡಿದ. ವಿರ್ಪಯಾಸವೆಂದರೆ ಅಲ್ಲಿದ್ದ ಕೆಲ ಕೋತಿಗಳು ಕಿತ್ತಾಡದೆ ಪರಸ್ಪರ ಹಂಚಿಕೊಂಡು ಹೊಟ್ಟೆ ತುಂಬಿಸಿಕೊಂಡವು. ಕೋತಿಗಳು ಮನುಷ್ಯನ ರೀತಿ ಶಾಲಾ, ಕಾಲೇಜುಗಳಿಗೆ ಹೋಗಿ ಶಿಕ್ಷಣ ಪಡೆಯದಿರಬಹದು. ಆದರೆ ಅದಕ್ಕಿಂತ ಹೆಚ್ಚಿನ ಜೀವನ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದವು ಎಂಬುವುದೇ ಗ್ರೇಟ್.
ಹಾಗೇ ನೋಡಿದರೆ ಮನುಷ್ಯನಲ್ಲಿರುವಷ್ಟು ಅಸೂಹೆ, ಹೊಟ್ಟೆ ಕಿಚ್ಚು, ಸ್ವಾರ್ಥ, ದುರಾಸೆ, ಕೋಪ, ಪ್ರಾಣಿ ಪಕ್ಷಿ, ಮರ, ಗಿಡಗಳಲ್ಲಿ ಕಾಣಲು ಅಸಾಧ್ಯ. ಅವುಗಳಲ್ಲಿ ಕಾಣುವ ಅನ್ಯೋನ್ಯತೆ ಮನುಷ್ಯನಲ್ಲಿ ಕಾಣಲು ಹೇಗೆ ಸಾಧ್ಯ. ಇಂದು ಒಬ್ಬ ವ್ಯಕ್ತಿ ಜೀವನದಲ್ಲಿ ಬೆಳೆಯುತ್ತಿದ್ದಾನೆ, ಅಭಿವೃದ್ದಿ ಕಾಣುತ್ತಿದ್ದಾನೆ ಎಂದರೆ ಹೇಗಾದರೂ ಮಾಡಿ ಆತನ ಕಾಲೇಳೆದು ಆತನ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಡಲು ತುದಿಗಾಲಲ್ಲಿ ನಿಲ್ಲುವ ಜನ ವರ್ಗವೇ ಹುಟ್ಟಿಕೊಳ್ಳುತ್ತದೆ. ತಾನು ಬೆಳೆಯದಿದ್ದರೂ ಚಿಂತೆಯಿಲ್ಲ, ಮತ್ತೊಬ್ಬ ಬೆಳೆಯಬಾರದೆಂಬ ಧೋರಣೆ ಹಲವರು ಮೈಗೂಡಿಸಿಕೊಂಡಿದ್ದಾರೆ. ನನ್ನದು ಒಂದು ಕಣ್ಣೋದರು ಚಿಂತೆಯಿಲ್ಲ, ಆತನದು ಎರಡು ಕಣ್ಣು ಹೋಗಬೇಕು ಎಂಬ ಆಲೋಚನೆ ತುಂಬಾ ಜನರಲ್ಲಿ ಆಳವಾಗಿ ಬೇರೂರಿದೆ.
ಅದೆಷ್ಟರ ಮಟ್ಟಿಗೆ ಅಂದರೆ ಅಣ್ಣ ಬೆಳೆಯುತ್ತಿದ್ದಾನೆ ಎಂದರೆ ತಮ್ಮ ಸಹಿಸುವುದಿಲ್ಲ. ತಮ್ಮ ಅಭಿವೃದ್ದಿಯಾಗುತ್ತಿದ್ದಾನೆ ಎಂದರೆ ಅಣ್ಣನಿಗೆ ನಿದ್ದೆಯೇ ಬರುವುದಿಲ್ಲ. ಅಕ್ಕ ಒಳ್ಳೆಯ ಹಂತಕ್ಕೆ ಹೋಗುತ್ತಾರೆ ಎಂದರೆ ನನಗೇನು ಲಾಭ ಎಂದು ತಂಗಿ ಆಲೋಚಿಸುತ್ತಾಳೆ. ಇನ್ನು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು, ಅತ್ತೆ, ಮಾವ, ಅಣ್ಣ, ತಮ್ಮನ ಮಕ್ಕಳು, ಅಕ್ಕ, ತಂಗಿಯ ಮಕ್ಕಳು ಶಿಕ್ಷಣದಲ್ಲೋ, ಉದ್ಯೋಗದಲ್ಲೋ, ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ ಅಭಿವೃದ್ದಿಯಾಗುತ್ತಿದ್ದಾರೆ ಎಂದರೆ ಖುಷಿ ಪಡುವ ಬದಲಾಗಿ ಅಸೂಹೆ ಉಂಟಾಗಿ, ಅವರ ಏಳಿಗೆಗೆ ಅಡ್ಡ ಬರಲು ನೋಡುತ್ತೇವೆ. ಅದು ಸಾಧ್ಯವಾಗದಿದ್ದಾಗ ಅಪಪ್ರಚಾರ ಮಾಡಿ, ಅವರ ಗೌರವಕ್ಕೆ ಚ್ಯುತಿ ತರುತ್ತೇವೆ. ಆ ಮೂಲಕ ವಿಕೃತ ಆನಂದ ಪಡುತ್ತೇವೆ. ಅಷ್ಟರ ಮಟ್ಟಿಗೆ ರಕ್ತ ಸಂಬಂಧಗಳಲ್ಲೇ ದೊಡ್ಡ ದೊಡ್ಡ ಬಿರುಕು ಮೂಡಿರುತ್ತದೆ. ಕುಟುಂಬದವರು ಬೆಳೆದರೆ, ಅಭಿವೃದ್ದಿಯಾದರೆ ಜೀರ್ಣಿಸಿಕೊಳ್ಳುವ ಮನಸ್ಥಿತಿ ಇಲ್ಲದ ಜನ, ಇನ್ನೂ ಸ್ನೇಹಿತರು, ಸಂಬಂಧಿಕರು ಎತ್ತರಕ್ಕೆ ಏರುತ್ತಾರೆ ಎಂದರೆ ನೋಡಿಕೊಂಡು ಸುಮ್ಮನೆ ಕುರುತ್ತಾರೆಯೇ, ನೋ ಚಾನ್ಸ್.
ನಾವು ಯಾವುದಾದರೂ ಒಂದು ಮರದ ಕೆಳಗೆ ಹೋದರೆ, ಅದು ನಮ್ಮನ್ನು ಇದು ನೀನು ಬೆಳೆಸಿದ ಮರ ನಾನಲ್ಲ, ಇಲ್ಲಿಗೇಕೆ ನೀನು ಬಂದೇ ಎಂದು ಕೇಳುವುದಿಲ್ಲ. ನಿನ್ನ ಜಾತಿ, ಧರ್ಮ ಯಾವುದೆಂದು ಪ್ರಶ್ನಿಸುವುದಿಲ್ಲ. ನೀನು ಬಡವ, ಶ್ರೀಮಂತನೇ ಎಂದು ಅಪ್ಪಿತಪ್ಪಿಯು ಕೇಳುವುದಿಲ್ಲ. ಮರದ ಬಳಿ ಯಾರೇ ಬಂದರು ಅವರಿಗೆ ನೆರಳು ನೀಡಿ ಆಶ್ರಯ ನೀಡುತ್ತದೆ, ಆಮ್ಲಜನಕ ಪೂರೈಸಿ, ಆರೋಗ್ಯ ಕಾಪಾಡುತ್ತದೆ. ಹಣ್ಣು, ಹಂಪಲು ನೀಡಿ ಹೊಟ್ಟೆ ತುಂಬಿಸುತ್ತದೆ. ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ನೂರಾರು ವರ್ಷ ಜನರ ಜೀವಕ್ಕೆ ಉಸಿರು ನೀಡುತ್ತದೆ. ವಿಪರ್ಯಾಸವೆಂದರೆ ಒಂದು ಮರಕ್ಕೆ ಇರುವ ಆಲೋಚನೆ, ಮನಸ್ಥಿತಿ, ಉದಾರತೆ ಮನೋಭಾವ ಮನುಷ್ಯನಿಗೆ ಇಲ್ಲದಾಯಿತೇ ಎಂಬುವುದೇ ದುರ್ದೈವ.
ಯಾರಾದರೂ ಒಬ್ಬ ವ್ಯಕ್ತಿ ಅಭಿವೃದ್ದಿಯಾಗುತ್ತಾರೆ ಎಂದರೆ ನಮ್ಮ ಕೈಯಲ್ಲಾದರೆ ಸಹಾಯ ಮಾಡಬೇಕೆ ಹೊರತು ತೊಂದರೆ ನೀಡುವ ಗುಣವಿರಬಾರದು. ಅವರವರ ಸಾಮರ್ಥ್ಯ, ಆಸಕ್ತಿ, ಶ್ರಮದ ಆಧಾರದ ಮೇಲೆ ಪ್ರತಿಯೊಬ್ಬರ ಅಭಿವೃದ್ದಿ ನಿರ್ಧಾರವಾಗುತ್ತದೆ. ನಾವು ಬೆಳವಣಿಗೆಯಾಗ ಬೇಕು ಎಂದು ಭಾವಿಸುವುದು ಖಂಡಿತಾ ತಪ್ಪಲ್ಲ, ಆದರೆ ಬೇರೆಯವರು ಬೆಳೆಯಲೇಬಾರದು, ನಾನೊಬ್ಬನೆ ಅಭಿವೃದ್ದಿಯಾಗಬೇಕು ಎಂಬ ದೂರಲೋಚನೆಯು ಮಾತ್ರ ಮಹಾಪರಾಧ.
ನಮ್ಮ ಮನಸ್ಸು ಹೇಗೆಂದರೆ ಬೇರೆಯವರ ವಿಚಾರಗಳು, ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅವರಿವರ ವೈಯಕ್ತಿಕ ವಿಷಯಗಳನ್ನು ತೆಗೆದುಕೊಂಡು, ಅವುಗಳ ಬಗ್ಗೆ ಚರ್ಚಿಸುತ್ತ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇವೆ. ಇದರಿಂದ ಬರುವ ಲಾಭವಾದರೂ ಏನು ಎಂದು ಎಂದಿಗೂ ಲೆಕ್ಕಚಾರ ಮಾಡುವುದಿಲ್ಲ.
ನಾವು ನೆಮ್ಮದಿ ಜೀವನ ಸಾಗಿಸಬೇಕಾದರೆ ಮೊದಲು ಮಾಡಬೇಕಾದ ಕೆಲಸ ಅಹಂಕಾರ, ಅಸೂಹೆ, ಹೊಟ್ಟೆಕಿಚ್ಚು, ದುರಾಸೆ ಗುಣಗಳನ್ನು ಆದಷ್ಟು ದೂರ ತಳ್ಳಬೇಕು, ಹತ್ತಿರ ಸೇರಿಸಲೇಬಾರದು. ಎಲ್ಲರೂ ನಮ್ಮವರು ಎಂದು ಭಾವಿಸಿ ನೋಡಿ, ಅದರಲ್ಲಿ ಸಿಗುವ ಆತ್ಮತೃಪ್ತಿ ಅಪರಿಮಿತ. ಎಲ್ಲರೊಂದಿಗೂ ಸಣ್ಣ ಸಣ್ಣ ವಿಷಯಗಳಿಗೂ ದ್ವೇಷ ಸಾಧಿಸಿ, ಹಠ ಮಾರಿ ಧೋರಣೆಯಿಂದ ಬರುವ ಲಾಭವಾದರೂ ಏನು ? ಬೇರೊಬ್ಬರ ಗೆಲುವಿನಲ್ಲಿ ನಮ್ಮ ಸಂತೋಷ ಕಾಣಬೇಕು. ಅದು ಬಿಟ್ಟು ಗೆದ್ದನಲ್ಲ ಎಂದು ಕೊರಗಿದರೆ ನಮ್ಮ ಮಾನಸಿಕ ನೆಮ್ಮದಿಗೆ ನಾವೇ ಭಂಗ ಉಂಟು ಮಾಡಿಕೊಂಡಂಗೆ.
ಅದು ಕುಟುಂಬದವರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ, ಸಹದ್ಯೋಗಿಗಳಾಗಲಿ ಅಥವಾ ಯಾರೇ ಆಗಲಿ ಅವರೊಂದಿಗೆ ಅನ್ಯೋನ್ಯತೆಯನ್ನು ಸಾಧಿಸಿ, ಪ್ರೀತಿ, ವಾತ್ಸಾಲ್ಯ ಹಂಚುವುದರಿಂದ ನಾವು ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಬದುಕುವ ಮೂರು ದಿನಕ್ಕೆ ಎಲ್ಲರೊಂದಿಗೆ ಆತ್ಮೀಯತೆ ಸಾಧಿಸಬೇಕೆ ಹೊರತು ಅಹಂಕಾರದಿಂದ ದ್ವೇಷ ಸಾಧಿಸುತ್ತ ಎಲ್ಲರನ್ನೂ ದೂರ ಮಾಡಿಕೊಳ್ಳುವ ವಿಧಾನವು ಮನುಷ್ಯನಿಗೆ ಒಪ್ಪುವ ಲಕ್ಷಣವಲ್ಲ.
ಇತ್ತಿಚೀಗೆ ನಿಧನರಾದ ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ದೊಡ್ಡ ಸ್ಟಾರ್ ಆದರೂ ಎಂದು ಅಹಂಕಾರ, ಗರ್ವದಿಂದ ವರ್ತಿಸಿದವರಲ್ಲ. ಸದಾ ಮುಗುಳ್ನೆಗೆಯೊಂದಿಗೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತ ಜೀವಿಸಿದವರು. ಎಲ್ಲದಕ್ಕೂ ಹೆಚ್ಚಾಗಿ ತಮ್ಮ ಸೇವಾ ಕಾರ್ಯಗಳ ಮೂಲಕ ಆತ್ಮ ತೃಪ್ತಿಯನ್ನು ಪಡೆದುಕೊಂಡರು. ಅದೆಷ್ಟೋ ಅಶಕ್ತರ ಪಾಲಿಗೆ ಧ್ವನಿಯಾಗಿದ್ದರು. ಇಂದು ಅವರು ನಮ್ಮ ಮಧ್ಯದಲ್ಲಿ ಇಲ್ಲದಿದ್ದರು, ಎಲ್ಲರ ಮನಸ್ಸುಗಳಲ್ಲಿ ಸದಾ ಉಳಿದಿದ್ದಾರೆ, ಉಳಿಯುತ್ತಾರೆ ಕೂಡ.
ಎಲ್ಲರೂ ನಮ್ಮವರು, ನನ್ನ ಜೊತೆಗೆ ಬೇರೆಯವರೂ ಅಭಿವೃದ್ದಿಯಾಗಲಿ ಎಂದು ಭಾವಿಸುವ ಗುಣವಿದೇಯಲ್ಲ ಅದು ಎಲ್ಲರಿಗೂ ಬರುವುದಿಲ್ಲ. ಆ ಗುಣ ಇರುವವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಸತ್ತ ನಂತರ ಜನರ ಮನಸ್ಸಗಳಲ್ಲಿ ಸದಾ ಉಳಿಯುತ್ತಾರೆ. ಅದೆಕ್ಕೆ ಹೇಳುವುದು ಕೆಲವರು ಬದುಕಿದ್ದು ಸತ್ತಂಗೆ, ಮತ್ತೆ ಕೆಲವರು ಸತ್ತರು ಬದುಕ್ಕಿದಂಗೆ. ಸೋ ನಾವು ಬದುಕಿ ಸಾಯಬೇಕೋ, ಸತ್ತ ನಂತರವು ಬದುಕಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲೇ ಇದೆ. ನಮ್ಮ ಆಲೋಚನೆ, ವರ್ತನೆ, ಗುಣಗಳೇ ಅದನ್ನು ತೀರ್ಮಾನಿಸುತ್ತದೆ. ಅನ್ಯೋನ್ಯತೆಯಲ್ಲಿ ಕಾಣುವ ಆನಂದ, ಸಾವಿರ ಕೋಟಿ ಕೊಟ್ಟರು ಸಿಗಲ್ಲ ಏನಂತಿರಾ..
ಶುಕ್ರವಾರ, ಅಕ್ಟೋಬರ್ 15, 2021
“ಸೇವೆಯಿಂದಲೇ, ನಮ್ಮ ಜೀವನ ಪಾವನ”..
👉 ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಕಾಲೇಜಿನ ಕೆಲ ಸ್ನೇಹಿತರು ಒಟ್ಟಿಗೆ ಸೇರಿ ಆಗಾಗ ಕಾಲೇಜಿನ ಕ್ಯಾಂಟೀನ್ ನಲ್ಲಿ ಕುಳಿತುಕೊಳ್ಳುವುದು ವಾಡಿಕೆಯಾಗಿತ್ತು. ಆಗ ಚರ್ಚೆಯಾಗುತ್ತಿದ್ದ ವಿಷಯ ನಾವು ಏನಾದರೊಂದು ಸಣ್ಣ ಸಹಾಯವನ್ನಾದರೂ ಸಮಾಜಕ್ಕೆ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೇವು. ಆದರೆ ನಮ್ಮ ಯಾರ ಬಳಿಯು ಹಣವಿರಲಿಲ್ಲ, ಎಲ್ಲರೂ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರೆ ಆಗಿದ್ದರಿಂದ ಆರ್ಥಿಕವಾಗಿ ಎಲ್ಲರೂ ಅಶಕ್ತರಾಗಿದ್ದರು.
ಯಾರಿಗಾದರೂ ಸಹಾಯ ಮಾಡಬೇಕಾದರೆ ಹಣವೇ ಮುಖ್ಯ, ನಮ್ಮ ಯಾರ ಬಳಿಯು ಹಣವಿಲ್ಲ, ಆದ್ದರಿಂದ ನಮ್ಮಂತವರು ಏನು ಮಾಡಲು ಸಾಧ್ಯ ಎಂದು ನಾವೇ ಭಾವಿಸಿಕೊಂಡು ಸುಮ್ಮನಾಗುತ್ತಿದ್ದೆವು.
ಒಮ್ಮೆ ದಿನಪತ್ರಿಕೆಯೊಂದರಲ್ಲಿ ಕಣ್ಣು ಕಾಣದವರ (ಕುರುಡರು) ಪರೀಕ್ಷೆಯನ್ನು ಬರೆಯಲು ಸ್ಕ್ರೈಬ್ಗಳು ಸಿಗುತ್ತಿಲ್ಲ. ಇದರಿಂದ ಅಂದರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ಇದನ್ನು ಗಮನಿಸಿದ ನನ್ನ ಸ್ನೇಹಿತನೊಬ್ಬ ಕಣ್ಣು ಕಾಣದವರಿಗೆ ಸ್ಕ್ರೈಬ್ ಆಗಿ ಅನೇಕ ಪರೀಕ್ಷೆಗಳನ್ನು ಬರೆದುಕೊಟ್ಟ. ಯಾರೇ ಅಂದರು ಕರೆ ಮಾಡಿದರು ಹಿಂದೆ ಮುಂದೆ ನೋಡದೆ ಅವರ ಪರೀಕ್ಷೆಗಳನ್ನು ಬರೆದುಕೊಡುವ ಮೂಲಕ ಅವರ ಜೀವನಕ್ಕೆ ಆಸರೆಯಾದ. ಹಣವಿಲ್ಲದಿದ್ದರು ಸಹಾಯ ಮಾಡಬಹುದೆಂಬುವುದಕ್ಕೆ ನಿದರ್ಶನವಾದ. ಬಡ ಕುಟುಂಬದಿಂದ ಬಂದರೂ ಹಲವು ಅಂದರಿಗೆ ದಾರಿ ದೀಪವಾದ.
ಒಮ್ಮೆ ಬೆಂಗಳೂರಿನ ಹೆಸರಾಂತ ಮಠವೊಂದಕ್ಕೆ ಹೋಗಿದ್ದೆ. ಅಲ್ಲಿನ ಹಿರಿಯ ಸ್ವಾಮೀಜಿಯೊಬ್ಬರ ಪ್ರವಚನ ಕಾರ್ಯಕ್ರಮವಿತ್ತು. ಅವರ ಉಪನ್ಯಾಸದ ವಿಷಯವೆಂದರೆ ದಾನಗಳು ಮತ್ತು ಸೇವಾ ಕಾರ್ಯಗಳ ಕುರಿತಾಗಿತ್ತು. ಸ್ವಾಮೀಜಿ ಮಾತನಾಡುತ್ತ ಪ್ರಾಚೀನ ಕಾಲದಿಂದಲೂ ದಾನಗಳಿಗೆ ತುಂಬಾ ಮಹತ್ವ ಇದೆ. ಅದರಲ್ಲೂ ಸನಾತನ ಧರ್ಮದಲ್ಲಿ ದಾನವು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ದಾನಗಳಲ್ಲಿ ಪ್ರಮುಖವಾಗಿ ಶಿಕ್ಷಣ (ವಿದ್ಯೆ), ಭೂಮಿ, ಹಸು, ಕನ್ಯಾ, ಅನ್ನ (ಆಹಾರ) ಮುಂತಾದವುಗಳನ್ನು ಕಾಣಬಹುದು. ಈ ದಾನಗಳನ್ನು ಹಾಗೂ ಇತರೆ ಸೇವಾ ಕಾರ್ಯಗಳು ಮಾಡುವುದು ಅತ್ಯಂತ ಶ್ರೇಷ್ಠಕರ ಹಾಗೂ ಪುಣ್ಯ ಸಂಪಾದಿಸಲು ಮತ್ತು ಮಾನಸಿಕ ಸಂತೋಷಕ್ಕೆ ಮೂಲ ಕಾರಣವಾಗುತ್ತದೆ. ನಾವು ಜೀವನದಲ್ಲಿ ಮೋಕ್ಷವನ್ನು ಪಡೆಯಬೇಕಾದರೆ ದಾನ ಹಾಗೂ ಸೇವಾ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಮತ್ತೊಂದು ದಾರಿ ಇಲ್ಲ ಎಂದು ಭಕ್ತಾಧಿಗಳಿಗೆ ಹಿತವಚನ ನುಡಿದರು.
ನಾವು ಸತ್ತ ನಂತರವೂ ಪುನಃಹ ಬದುಕುತ್ತೇವೆ ಯಾವಾಗ ಎಂದರೆ ಒಂದಷ್ಟು ಸೇವಾ ಕೆಲಸಗಳನ್ನು ಮಾಡಿದಾಗ ಮಾತ್ರ. ಹಾಗಂತ ಹಣ, ಐಶ್ವರ್ಯವಿದ್ದವರು ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬಹುದು, ಉಳಿದವರು ಏನು ಮಾಡಲು ತಾನೇ ಸಾಧ್ಯ ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿದ್ದರೆ ಈ ಕ್ಷಣವೇ ಅದನ್ನು ತೆಗೆದು ಹಾಕಿ. ಏಕೆಂದರೆ ಅದು ಶುದ್ದ ಸುಳ್ಳು, ಹಣವಿದ್ದವರಲ್ಲಿ ಕೆಲವೇ ಜನ ಮಾತ್ರ ಸಹಾಯ ಮಾಡುವ ಮನಸ್ಸು ಇರುತ್ತದೆ. ಹಣ ಇಲ್ಲದ ಹಲವರು ಬೇರೆ ಬೇರೆ ರೂಪಗಳಲ್ಲಿ ಹತ್ತಾರು ಜನರಿಗೆ ಸಹಾಯಹಸ್ತ ಚಾಚುತ್ತಲೇ ಇರುತ್ತಾರೆ ಎಂದರು.
ಸ್ವಾಮೀಜಿ ತಮ್ಮ ಮಾತನ್ನು ಮುಂದುವರೆಸುತ್ತಾ ನನ್ನ ಬಳಿ ಹಣ ಇಲ್ಲ, ನಾನು ಇಲ್ಲಿಯವರೆಗೂ ಯಾರಿಗೂ ಹಣ ಸಹಾಯ ಮಾಡಿಲ್ಲ, ನಾನು ಸನ್ಯಾಸ ಧೀಕ್ಷೆಯನ್ನು ಪಡೆದು ಸ್ವಾಮೀಜಿಯಾಗಿ ರೂಪಾಂತರಗೊಂಡು ಹಲವು ವರ್ಷಗಳಾಗಿದೆ. ನಾನು ಮಾಡುವ ಮುಖ್ಯ ಸಾಮಾಜಿಕ ಸೇವೆಯೆಂದರೆ ಮಠಕ್ಕೆ ಬರುವ ಭಕ್ತಾಧಿಗಳಿಗೆ ಜೀವನದ ಬಗ್ಗೆ ಪ್ರೀತಿ ಮೂಡಿಸಿ, ಸರಿದಾರಿಯಲ್ಲಿ ಸಾಗುವಂತೆ ಹಿತೋಪದೇಶ ಮಾಡುವುದು. ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿ ಹೇಳುತ್ತೇನೆ ಅಷ್ಟೇ. ನನ್ನ ಬಳಿ ಅಧಿಕಾರ, ಹಣ, ಐಶ್ವರ್ಯ ಇಲ್ಲದಿದ್ದರು ಜನ ಗೌರವಿಸುತ್ತಾರೆ, ನನಗೆ ನಮಸ್ಕರಿಸುತ್ತಾರೆ, ಪೂಜ್ಯ ಭಾವನೆಯಿಂದ ಕಾಣುತ್ತಾರೆ ಎಂದರೆ ಅದು ನಾನು ಮಾಡುವ ಸಣ್ಣ ಹಿತೋಪದೇಶ ಕಾರಣದಿಂದಾಗಿಯೇ ತಾನೇ, ಇದಕ್ಕೆ ನಾನು ಯಾವುದೇ ಹಣ ಖರ್ಚು ಮಾಡುವುದಿಲ್ಲ. ನನಗೆ ಗೊತ್ತಿರುವುದನ್ನು ಇತರರಿಗೆ ಹೇಳುತ್ತೇನೆ ಅಷ್ಟೇ ಎಂದು ಸಭಿಕರಿಗೆ ಕಿವಿಮಾತು ಹೇಳಿದರು.
ನಾವು ಅನೇಕ ಸಲ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕೆಂದು ಅಂದುಕೊಂಡರು ಆರ್ಥಿಕವಾಗಿ ಸದೃಢರಾಗಿಲ್ಲ, ಅಧಿಕಾರ ಇಲ್ಲ ಎಂದು ತಟಸ್ಥವಾಗಿ ಇದ್ದು ಬಿಡುತ್ತೇವೆ. ಗಮನಾರ್ಹ ಅಂಶವೆಂದರೆ ಮಾಡುವ ಮನಸ್ಸು, ಧ್ಯೇಯವಿದ್ದರೆ ಹಣವಿಲ್ಲದಿದ್ದರು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಅವಕಾಶ ಖಂಡಿತಾ ಇದ್ದೇ ಇರುತ್ತದೆ.
ಅದೆಷ್ಟೋ ಬಾರಿ ದುರಾಭ್ಯಾಸಗಳ ಕಾರಣಕ್ಕಾಗಿ ದುಂದುವೆಚ್ಚ ಮಾಡುತ್ತೇವೆ. ಕೆಲವರಂತೂ ದುರಾಭ್ಯಾಸಗಳು (ಧೂಮಪಾನ, ಮದ್ಯಪಾನ, ಗುಟ್ಕಾ ಪದಾರ್ಥಗಳ ಸೇವನೆ ಸೇರಿದಂತೆ ಮತ್ತಿತರ) ಅಭ್ಯಾಸದಿಂದ ಹಣವನ್ನು ವ್ಯರ್ಥ ಮಾಡುತ್ತಾರೆ. ಆದರೆ ಆ ಬಗ್ಗೆ ಎಂದೂ ಆಲೋಚಿಸುವುದಿಲ್ಲ. ನಾವು ಸಂಪಾದಿಸುವ ಹಣದಲ್ಲಿ ದುರಾಭ್ಯಾಸಗಳಿಗೆ ಖರ್ಚು ಮಾಡದೆ ಸ್ವಲ್ಪ ಪ್ರಮಾಣದಲ್ಲಿ ಹಣ ಉಳಿಸಿದರು, ಹಲವರ ಬದುಕಿಗೆ ಬೆಳಕಿನ ಜ್ಯೋತಿಯಾಗಬಹುದು ಎಂಬುವುದನ್ನು ಮರೆತು ಬಿಡುತ್ತೇವೆ.
ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭವಾಗಲಿ ನಂತರ ಆಗಲಿ ಅನೇಕ ಪುಸ್ತಕಗಳನ್ನು ಖರೀದಿಸುತ್ತೇವೆ. ಒಂದಷ್ಟು ವರ್ಷಗಳ ಕಳೆದ ನಂತರ ಅವುಗಳನ್ನು ಹಳೆ ಪೇಪರ್ ಗಳನ್ನು ಖರೀದಿಸುವವರಿಗೆ ಮಾರುತ್ತೇವೆ. ಇಲ್ಲಂದ್ರೆ ಎಲ್ಲಾದರೂ ಎಸೆದು ಬಿಡುತ್ತೇವೆ. ಅದರ ಬದಲು ಅದರ ಅಗತ್ಯ ಇರುವವರಿಗೆ ಕೊಟ್ಟರೆ ಅವರಿಗೆ ಆಗುವ ಅನುಕೂಲ ಅಷ್ಟಿಷ್ಟಲ್ಲ. ಇದರಿಂದ ನಮಗೆ ಆಗುವ ಹೊರೆಯಂತು ಏನು ಇಲ್ಲ.
ನಮಗೆ ಯಾವುದೇ ಒಂದು ವಿಷಯ ಅದು ಕನ್ನಡ, ಇಂಗ್ಲೀಷ್, ಇತಿಹಾಸ, ಹಿಂದಿ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅಷ್ಟೋ ಇಷ್ಟೋ ವಿಷಯಗಳಿಸಿ ಕೊಂಡಿರುತ್ತೇವೆ. ನಾವು ಪಡೆದ ಆ ಜ್ಞಾನವನ್ನು ನಮ್ಮಲ್ಲಿಯೇ ಉಳಿಸಿಕೊಂಡು ಮರೆಯುವುದಕ್ಕಿಂತ, ಆ ವಿಷಯದ ಜ್ಞಾನವನ್ನು ಅಗತ್ಯ ಇರುವವರಿಗೆ ನೀಡಿದರೆ ನಮ್ಮಿಂದ ನಾಲ್ಕು ಜನ ವಿಷಯದ ಜ್ಞಾನ ಪಡೆದುಕೊಂಡು ಜೀವನದಲ್ಲಿ ಅಭಿವೃದ್ದಿಯಾಗುತ್ತಾರೆ. ಜ್ಞಾನವನ್ನು ನೀಡುವುದಕ್ಕಿಂತ ಮತ್ತೊಂದು ಸೇವೆ ಏನಿದೆ.
ಅದು ಬಿಡಿ ಪ್ರತಿ ವರ್ಷ ಜೂನ್.5 ರಂದು ಪರಿಸರ ದಿನಚಾರಣೆಯನ್ನು ಆಚರಿಸುತ್ತೇವೆ. ಅಂದು ಕಾಟಾಚಾರಕ್ಕೆಂಬಂತೆ ಆಚರಿಸುವುದೇ ಹೆಚ್ಚು. ನೆಡುವುದು ಒಂದು ಗಿಡವಾದರೂ ಪಬ್ಲಿಸಿಟಿ ಮಾತ್ರ ವಿಪರಿತವಾಗಿರುತ್ತದೆ. ನಮ್ಮ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಪ್ರತಿಯೊಬ್ಬರು ವಾರಕ್ಕೊಮ್ಮೆ ಗಿಡ ನೆಡುವುದು ದೊಡ್ಡ ವಿಚಾರವೇನಲ್ಲ. 10 ರೂ ಕೊಟ್ಟರು ವಿವಿಧ ತಳಿಗಳ ಸಸಿಗಳು, ಗಿಡಗಳು ಸಿಗುತ್ತವೆ. ಇಲ್ಲವೇ ಅರಣ್ಯ ಇಲಾಖೆಯ ನರ್ಸರಿಗಳಿಂದ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಗಿಡಗಳು ಸಿಗುತ್ತವೆ. ಅವುಗಳನ್ನು ದೇವಸ್ಥಾನ, ಶಾಲಾ, ಕಾಲೇಜು, ರಸ್ತೆಯ ಅಕ್ಕಪಕ್ಕಗಳಲ್ಲಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಬೆಳೆಸಿದರೆ ಮುಂದೊಂದು ದಿನ ಅವು ಮರವಾಗಿ, ಸಾವಿರಾರು ಜನರಿಗೆ ನೆರಳು ನೀಡುತ್ತದೆ. ಹಲವು ಪಕ್ಷಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಗಿಡದಲ್ಲಿ ಹಣ್ಣು, ಹಂಪಲು ಬಿಟ್ಟರೆ ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕರವರು ತಮ್ಮ ಬಳಿ ಹಣವಿಲ್ಲದಿದ್ದರು ನೂರಾರು ಗಿಡಗಳನ್ನು ರಾಮನಗರದ ಮಾಗಡಿ ತಾಲ್ಲೂಕಿನ ತಮ್ಮ ಗ್ರಾಮ ಹುಲಿಕಲ್ ನಲ್ಲಿ ನೆಟ್ಟು, ಅವುಗಳನ್ನು ಹೆಮ್ಮರವಾಗಿ ಬೆಳೆಸಿದ ಪರಿಣಾಮ ತಿಮ್ಮಕ್ಕರ ಪರಿಸರ ಸೇವೆ ಎಲ್ಲರಿಗೂ ಇಂದು ಪರಿಚಿತ. ಪರಿಸರದ ಸೇವೆಗಿಂತ ಮಿಗಿಲಾದ ಸೇವೆ ಮತ್ಯಾವುದು ಇದೆ ಹೇಳಿ ನೋಡೋಣ.
ಇಂದು ಪ್ರತಿಯೊಂದು ನಗರ, ಪಟ್ಟಣಗಳಲ್ಲೂ ವೃದ್ದಾಶ್ರಮ, ಅನಾಥಶ್ರಮಗಳು ಎದ್ದು ಕಾಣುತ್ತವೆ. ಅಲ್ಲಿ ವಾಸಿಸುವ ಹಲವರು ತಮ್ಮ ಬಂಧು ಬಳಗದವರ ಆತ್ಮೀಯತೆ, ಹಾರೈಕೆ ಇಲ್ಲದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. ಸಂಬಂಧಗಳ ಅನುಬಂಧವಿಲ್ಲದೆ, ಒಬ್ಬಂಟಿಯಾಗಿ ಜೀವನ ಸಾಗಿಸಿರುತ್ತಾರೆ. ಕನಿಷ್ಟ ಇಂತವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವುದರಿಂದ ಕಳೆದುಕೊಳ್ಳುವುದಾದರೂ ಏನು ಇಲ್ಲ. ಆರು ತಿಂಗಳಿಗೋ, ವರ್ಷಕ್ಕೊಮ್ಮೆಯೋ ಅನಾಥಶ್ರಮ, ವೃದ್ದಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಅನ್ನದಾನ ಹಾಗೂ ಅಗತ್ಯ ಇರುವ ಸಣ್ಣಪುಟ್ಟ ಸಹಾಯ ಮಾಡಿದರೆ ನಮ್ಮ ಆಸ್ತಿಯಂತು ಕರಗುವುದಿಲ್ಲ.
ಅದೆಷ್ಟೋ ಸರ್ಕಾರಿ, ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪುಸ್ತಕಗಳನ್ನು ತೆಗೆದುಕೊಳ್ಳಲು ಕೂಡ ಹಣವಿಲ್ಲದೆ ಪರದಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಅಂತಹ ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬರಿಗಾದರೂ ಪುಸ್ತಕಗಳನ್ನು ಖರೀದಿಸಿ ಕೊಟ್ಟರೆ ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ತರಬಹದು. ಇದಕ್ಕೇನು ಹೆಚ್ಚಿನ ಹಣದ ಅವಶ್ಯಕತೆ ಇಲ್ಲ.
ವಾಸ್ತವ ಏನೆಂದರೆ ಎಷ್ಟೋ ಜನ ಮಾಹಿತಿಯ ಕೊರತೆಯಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೇ ಜೀವನದಲ್ಲಿ ಇನ್ನು ಹಿಂದುಳಿಯುವಂತಾಗಿದೆ. ಅಂತವರಿಗೆ ವಿಷಯ ಮುಟ್ಟಿಸುವ ಅವಕಾಶ ನಮ್ಮ ಕೈಯಲ್ಲಿರುವ ಮೊಬೈಲ್ ಪೋನ್ ಮೂಲಕ ಮಾಡಬಹುದು ಎಂಬುವುದೇ ವಿಶೇಷ. ಆದರೂ ಆ ಮೊಬೈಲ್ ಪೋನ್ ನ್ನು ಜನ ಗುಡ್ ಮಾರ್ನಿಂಗ್, ಗುಡ್ ನೈಟ್ ಸೇರಿದಂತೆ ಕೆಲಸಕ್ಕೆ ಬಾರದ ವಿಚಾರಗಳಿಗೆ ಬಳಸುತ್ತಿರುವುದು ಜಗತ್ತಿಗೆ ಗೊತ್ತು.
ಇಂದು ಸಮಾಜ ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಮಾಲ್ಯಗಳ ಕೊರತೆ. ಮಾನವೀಯ ಮೌಲ್ಯಗಳ ಕಣ್ಮರೆಯಿಂದ ಸಮಾಜದಲ್ಲಿ ಯುವ ಸಮೂಹ ಹಾದಿ ತಪ್ಪಿ ನಡೆಯುವಂತಾಗಿದೆ. ಹಲವರು ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಶಿಕ್ಷಣ, ಜೀವನ ಎರಡನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ನಮ್ಮ ಮನೆ ಹಾಗೂ ಪರಿಚಿತ ಸ್ನೇಹಿತರು, ಸಹದ್ಯೋಗಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವವಲ್ಲಿ ನಾವು ಪ್ರಧಾನ ಪಾತ್ರ ವಹಿಸಿದರೆ ನವ ಸಮಾಜ ನಿರ್ಮಾಣದಲ್ಲಿ ನಮ್ಮದು ಒಂದು ಪಾತ್ರವಿರುತ್ತದೆ. ನಮ್ಮ ಒಳ್ಳೆಯ ಮಾತಿನಿಂದ ಹಲವರ ಬದುಕು ಹಸನಾಗಬಹುದು.
ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಒಟ್ಟಿಗೆ ಸೇರಿಕೊಂಡು ಫೌಂಡೇಶನ್ ಅಥವಾ ಚಾರಿಟಬಲ್ ಟ್ರಸ್ಟ್ ಗಳನ್ನು ಸ್ಥಾಪಿಸಿ ಆ ಮೂಲಕ ನಿಯಮಿತವಾಗಿ ಒಂದಷ್ಟು ಸೇವಾ ಕಾರ್ಯಗಳನ್ನು ಮಾಡುವ ಅವಕಾಶವಂತು ಇದ್ದೇ ಇದೆ.
ಪಾರ್ಟಿ, ಬಾರ್, ರೆಸ್ಟೋರೆಂಟ್, ರೆಸಾರ್ಟ್, ಜಾಲಿ ಟ್ರಿಪ್, ಮೋಜು ಮಸ್ತಿ ಎಂದು ಹಲವರು ಹಣವನ್ನು ನೀರಿನಂತೆ ಪೋಲು ಮಾಡುತ್ತಾರೆ. ಹಾಗಂತ ಜೀವನದಲ್ಲಿ ಮನರಂಜನೆ ಬೇಡ ಎಂದರ್ಥವಲ್ಲ. ಎಲ್ಲವೂ ಹಿತಿಮಿತಿಯಲ್ಲಿ ಇರಬೇಕಷ್ಟೇ. ಸಮಾಜದಲ್ಲಿ ಬದುಕುವ ನಾವು, ಈ ಸಮಾಜದಿಂದ ಅದೆಷ್ಟೋ ಅಪರಿಮಿತ ಸೌಲಭ್ಯಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆದುಕೊಂಡಿರುತ್ತೇವೆ. ಆದ್ದರಿಂದ ಸಮಾಜದಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಅಶಕ್ತರು, ಅಬಲರ ಕಷ್ಟಗಳಿಗೆ ಧ್ವನಿಯಾಗುವ ಮೂಲಕ ಒಂದಷ್ಟು ಪುಣ್ಯ, ಮಾನಸಿಕ ನೆಮ್ಮದಿ ಸಂಪಾದಿಸುವ ಕಡೆ ನಮ್ಮ ನಡೆ ಇದ್ದರೆ, ಅದಕ್ಕಿಂತ ಸೇವೆ ಮತ್ತೇನಿದೆ.
ನಿಜ ಎಂದರೆ ಸೇವಾ ಕಾರ್ಯಗಳಿಗೆ ಲಕ್ಷ ಲಕ್ಷ ಹಣ ಬೇಕು ಎಂಬುವುದು ಒಪ್ಪುವ ವಿಚಾರವಲ್ಲ. ಹಣ ಇಲ್ಲದೆಯೇ ಹಲವು ರೀತಿಯ ಸೇವೆಗಳನ್ನು ಮಾಡುವ ಅವಕಾಶ ಇದೆ. ಆದರೆ ಮಾಡುವ ಮನಸ್ಸಿದ್ದಾಗ ಮಾತ್ರ ಅದು ಸಾಧ್ಯ. ನಿಮಗೆ ಆ ಮನಸ್ಸು ಇದೆಯೇ.. ನನಗೆ ಗೊತ್ತಿಲ್ಲ, ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಿ..



















