ಭಾನುವಾರ, ಏಪ್ರಿಲ್ 7, 2024

ವಿಧಿ ಬರಹದ ಕ್ರೂರತೆಯ ಮಧ್ಯೆ ಅರಳಿದ "ಬದುಕು"..

⏩ ದೇವಲಪಲ್ಲಿ .ಎನ್.ಗಿರೀಶ್ ರೆಡ್ಡಿ

ಕೆಲವರ ಜೀವನವೇ ಹಾಗೆ, ಸಂತೋಷಕ್ಕಿಂತ ದುಃಖವನ್ನೇ ಸದಾ ಅನುಭವಿಸಿ, ಬರೀ ನೋವಿನ ಜೊತೆ ಬದುಕು ಸಾಗಿಸುವ ಸ್ಥಿತಿ, ಅವರದ್ದು. ಅಂತವರನ್ನು ಕಂಡರೆ ಮನಸ್ಸಿಗೆ ಆಗುವ ನೋವು, ಬೇಸರ ಅಷ್ಟಿಷ್ಟಲ್ಲ. ಅವರ ನೋವು, ಸಂಕಟ, ವೇದನೆ, ದುಃಖ, ಕಷ್ಟದ ಸನ್ನಿವೇಶಗಳನ್ನು ನೋಡಿದರೆ, ಬದುಕು ಎಷ್ಟೊಂದು ದುಸ್ಥರ, ವಿಧಿ ಬರಹ ಇಷ್ಟೊಂದು ಕ್ರೂರಿಯೇ ಎಂದು ಅನ್ನಿಸದೆ ಇರಲಾರದು. ಕೆಲವರ ಜೀವನ ಇಷ್ಟೊಂದು ಸಮಸ್ಯೆಗಳ ಆಗರದಿಂದ ಕೂಡಿರುತ್ತದೆಯೇ ಎಂದು ಊಹಿಸಲು ಕೂಡ ಅಸಾಧ್ಯ. ಆ ಮಟ್ಟಿಗೆ ಅವರ ಜೀವನ ಕಣ್ಣೀರಿನ ನೋವಿನಲ್ಲಿ ಮುಳುಗಿ ಹೋಗಿ, ಅಂಧಕಾರದಲ್ಲಿ ಸೇರಿರುತ್ತದೆ.

ಆದರೆ ಅದನ್ನು ಅವರು ಎಂದಿಗೂ, ಯಾರಿಗೂ ಹೇಳಿಕೊಳ್ಳುವುದಿಲ್ಲ. ಹಾಗೇನಾದರೂ ಹೇಳಿಕೊಳ್ಳೊಣವೆಂದರೆ ಯಾರು ಅವರ ಹತ್ತಿರಕ್ಕೆ ಸುಳಿಯುವುದಿಲ್ಲ. ಏಕೆಂದರೆ ಅವರನ್ನು ಕಷ್ಟದ ಸರಮಾಲೆ ಸುತ್ತುವರೆದಿರುವುದರಿಂದ ಯಾರು ತಾನೇ ಹತ್ತಿರಕ್ಕೆ ಹೋಗಲು ಪ್ರಯತ್ನಿಸುತ್ತಾರೆ, ಇಷ್ಟಪಡುತ್ತಾರೆ ಹೇಳಿ. ಆದರೂ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಕಳೆಗುಂದುವುದಿಲ್ಲ. ನಾವು ದುರದೃಷ್ಟವಂತರು ಎಂದು ಯಾವಾಗಲೂ ಭಾವಿಸುವುದಿಲ್ಲ, ವಿಧಿಗೆ ಸವಾಲಾಕಿ ಖುಷಿಯಿಂದ ಜೀವನ ನಡೆಸುತ್ತಾರಲ್ಲ, ಅದೇ ಅವರ ಆತ್ಮಶಕ್ತಿ, ಧೈರ್ಯ, ಛಲ, ಬಲ, ವಿಶ್ವಾಸ.

ನಿಜ ನಾವು ಪ್ರತಿನಿತ್ಯವು ದೇವರನ್ನು ಶಪಿಸುತ್ತೇವೆ, ದೇವರು ನನ್ನನ್ನು ಶ್ರೀಮಂತನನ್ನಾಗಿ ಮಾಡಲಿಲ್ಲ. ನನಗೆ ದೊಡ್ಡ ದೊಡ್ಡ ಹುದ್ದೆ ಕೊಡಿಸಲಿಲ್ಲ. ಲಕ್ಷಗಟ್ಟಲೆ ಸಂಬಳದ ನೌಕರಿ ಸಿಗುವಂತೆ ಮಾಡಲಿಲ್ಲ. ದೊಡ್ಡದಾದ ಮನೆಯ ಮಾಲೀಕನನ್ನಾಗಿಸಲಿಲ್ಲ. ಕಾರಿನ ಆಸೆ ಈಡೇರಿಸಲಿಲ್ಲ. ನನ್ನನ್ನು ಸುಂದರವಾಗಿ ಸೃಷ್ಟಿ ಮಾಡಲಿಲ್ಲ. ಹತ್ತಾರು ಎಕರೆ ಜಮೀನಿನ ಒಡೆಯನಾಗಲಿಲ್ಲ. ದೇವರು ನನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಲಿಲ್ಲ ಎಂದು ದೇವರ ಪೋಟೋ ಕಂಡಾಗಲೆಲ್ಲ ಅದೆಷ್ಟು ಬಾರಿ ಬೈಕೊಳ್ಳುತ್ತೇವೋ ಗೊತ್ತಿಲ್ಲ. 

ವಾಸ್ತವವೆಂದರೆ ನಮ್ಮಲ್ಲಿ ಎಷ್ಟೇ ಹಣವಿದ್ದರೂ ನಮಗೆ ಸಾಲದು, ಎಷ್ಟೇ ಸಂಬಳ ಬಂದರೂ ತೃಪ್ತಿಯಿಲ್ಲ. ಎಷ್ಟೇ ದೊಡ್ಡ ಮನೆಯಿದ್ದರು ಖುಷಿಯಿಲ್ಲ. ಎಷ್ಟೇ ಜಮೀನಿದ್ದರೂ ನೆಮ್ಮದಿ ಇಲ್ಲ. ಅಷ್ಟರ ಮಟ್ಟಿಗೆ ಅಪರಿಮಿತ ಬಯಕೆಗಳಿಂದ ಜೀವನದಲ್ಲಿ ಎಲ್ಲವೂ ಇದ್ದರೂ, ಏನೇನೂ ಇಲ್ಲದಂತೆ ಬದುಕುತ್ತೇವೆ, ಅದು ನಿರುತ್ಸಾಹ, ನಿರಾಶವಾದದಿಂದ ಎಂಬ ಸತ್ಯಾಂಶ ಕಣ್ಣಿಗೆ ಕಾಣುತ್ತದೆ.

ನಿಮಗೊಂದು ಘಟನೆ ಹೇಳುತ್ತೇನೆ ಕೇಳಿ, ಆಕೆಗೆ ತಿಂಗಳಿಗೆ ಬರುವುದು ಕೇವಲ 1200 ರೂ. ವಿಕಲಚೇತನ ಪಿಂಚಣಿ. ಅದರಲ್ಲಿಯೇ ತನ್ನ ಇಡೀ ಆಸೆಗಳೆಲ್ಲವನ್ನೂ ಪೂರೈಸಿಕೊಂಡು, ಉಳಿತಾಯ ಮಾಡಬೇಕು. ಆಕೆ ಹೆಸರು ಲಲಿತ, ಇತ್ತಿಚೀಗೆ ಪರಿಚಯವಾದ ಹುಡುಗಿ. ಆಕೆ ವಿಕಲಚೇತನಳು. ಮೂಲತಃ ಕೋಲಾರ ತಾಲ್ಲೂಕಿನ ಹಳ್ಳಿಯವಳು. ಎರಡು ಕಣ್ಣುಗಳ ದೃಷ್ಟಿ ಸರಿಯಾಗಿ ಕಾಣುವುದಿಲ್ಲ. ಕಣ್ಣಿಗೆ ತೀರ ಹತ್ತಿರದಿಂದ ನೋಡಿದರೆ ಮಾತ್ರ ಅಕ್ಷರಗಳನ್ನು ಓದುತ್ತಾಳೆ. ದೂರದಿಂದ ನೋಡಿದರೆ ಒಂದಕ್ಷರವು ಕಾಣುವುದಿಲ್ಲ.

ಲಲಿತ ವಯಸ್ಸು 19 ವರ್ಷವಿರಬಹುದು. ಪಿಯುಸಿ ಓದಿದ್ದಾಳೆ. ತಂದೆ, ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ತೀರ ಬಡತನ ಕುಟುಂಬ. ಚಿಕ್ಕಂದಿನಿಂದಲೇ ಆಕೆಗೆ ಎರಡು ಕಣ್ಣುಗಳ ದೃಷ್ಟಿ ಸಮಸ್ಯೆ ಇದೆ. ಆದರೂ ಆಕೆ ತನಗೆ ಎರಡು ಕಣ್ಣು ಕಾಣಿಸುವುದಿಲ್ಲ ಎಂಬ ನೋವನ್ನು ಮರೆತು ಜೀವಿಸುತ್ತಿದ್ದಾಳೆ. 

ಏನಮ್ಮಾ ಲಲಿತ ಎಂದರೆ, ಏನ್ಮಾಡುವುದು ಸಾರ್, ನನಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ಅಳುತ್ತಾ, ನೋವಿನಿಂದ ಕೂತರೆ ಜೀವನದ ಬಗ್ಗೆ ಜಿಗುಪ್ಸೆ ಬಂದು ಬೇಸರವಾಗುತ್ತದೆ. ನನಗೆ ಕಣ್ಣುಗಳು ಕಾಣದಿರಬಹದು, ಆದರೆ ಬದುಕಿನ ಬಗ್ಗೆ ನನಗೆ ಬೇಸರವಿಲ್ಲ. ಕಾರಣ ನನಗಿಂತ ಕಷ್ಟದಲ್ಲಿ ಹಲವರಿದ್ದಾರೆ, ಅವರ ಕಷ್ಟಗಳ ಮುಂದೆ ನನ್ನ ಸಮಸ್ಯೆ ತುಂಬಾ ಚಿಕ್ಕದು ಎಂಬ ಆಕೆಯ ಅರ್ಥಗರ್ಭಿತ ಮಾತಿಗೆ ಏನು ಹೇಳಲು ಸಾಧ್ಯ..?

ಕಷ್ಟದಲ್ಲಿದ್ದರು ಆಕೆಯ ನಗುವಿನ ಗುಣ, ಮುಗ್ದತೆ, ಭವಿಷ್ಯದಲ್ಲಿ ಖಂಡಿತಾ ಒಳ್ಳೆಯದ್ದಾಗುತ್ತದೆ ಎಂಬ ಆಕೆಯ ಆಶಾವಾದ, ನಮ್ಮನ್ನೇ ಆಶ್ಚರ್ಯ, ಆತ್ಮವಲೋಕನ ಪಡುವಂತೆ ಮಾಡುತ್ತದೆ.

ಇನ್ನೊಂದು ಘಟನೆ ಕೇಳಿ, ಆಕೆಯ ಹೆಸರು ರಚನಾ, ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಯವಳು. ಈಕೆಯು ವಿಕಲಚೇತನಳು. ಈಕೆಗೆ ಎರಡು ಕಾಲುಗಳು ಸ್ವಾಧೀನದಲ್ಲಿ ಇಲ್ಲ. ವಾಕರ್ ಸಹಾಯವಿಲ್ಲದೆ ನಡೆಯಲು ತುಂಬಾ ಕಷ್ಟ. ಬಿ.ಕಾಂ ಪದವೀಧರೆ. ಸರ್ಕಾರದಿಂದ ಬರುವ ಅಲ್ಪಸ್ವಲ್ಪ ಪಿಂಚಣಿಯೇ ಈಕೆಗೂ ಆಧಾರ. ಆದರೆ ಜೀವನದ ಬಗ್ಗೆೆ ಎಂದೂ ನಿರುತ್ಸಾಹ ಪಟ್ಟಿಲ್ಲ. ಪ್ರತಿದಿನವೂ 3 ಬಸ್ ಹಿಡಿದು ಕಾಲೇಜಿಗೆ ಹೋಗುತ್ತಾಳೆ. 

ಸಾಧನೆ ಮಾಡಲು ಕಾಲಿನ ಅಗತ್ಯವೇನಿದೆ ಸಾರ್, ಎಷ್ಟೋ ಜನ ಕೈ, ಕಾಲು ಸರಿಯಾಗಿರುವವರು ಕೂಡ ಜೀವನದಲ್ಲಿ ಏನು ಮಾಡದೇ ವ್ಯರ್ಥವಾಗಿ ಬದುಕು ಕಳೆದು ಬಿಡುತ್ತಾರೆ. ಆದರೆ ನಾನು ಹಾಗಲ್ಲ, ನನಗೆ ಕಾಲಿಲ್ಲ ಎಂದು ಅಳುತ್ತ ಕೂತರೆ ನೋಡವವರು ಅನುಕುಂಪ ವ್ಯಕ್ತಪಡಿಸಬಹುದೆ ಹೊರತು ನನಗೆ ಬರುವ ಲಾಭವೇನಿಲ್ಲ. ದೇವರು ನನಗೆ ಕಾಲು ನೀಡದಿರಬಹುದು, ಆದರೆ ಸಾಧನೆ ಮಾಡಬೇಕೆಂಬ ಆಲೋಚನೆ ಮಾತ್ರ ದುಪ್ಪಟ್ಟು ನೀಡಿದ್ದಾನೆ. 

ಜೀವನದಲ್ಲಿ ಒಂದಲ್ಲಾ ಒಂದು ದಿನ ನಮ್ಮ ತಂದೆ ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವ ರೀತಿಯ ಸಾಧನೆ ಮಾಡೇ ಮಾಡುತ್ತೇನೆ ಎಂಬ ಆಕೆಯ ಅಚಲ ವಿಶ್ವಾಸದ ಮುಂದೆ ಮರು ಪ್ರಶ್ನೆ ಹಾಕಲು ಸಾಧ್ಯವೇ.

ಹಾಗೆಯೇ ಪ್ರಶಾಂತ್ ಎಂಬ ಹುಡುಗ ಸಿಕ್ಕಿದ್ದ. ಆತನದ್ದು ಕೋಲಾರದ ವೇಮಗಲ್ ಬಳಿಯ ಹಳ್ಳಿಯವನು. ಎಲ್ಲರಂತೆ ಚೆನ್ನಾಗಿದ್ದ, ಆದರೆ ಒಂದು ದಿನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಟೆಂಪೋ ಡಿಕ್ಕಿ ಹೊಡೆದು ಒಂದು ಕೈಯನ್ನು ಕಳೆದುಕೊಳ್ಳುತ್ತಾನೆ. ಇತನು ಓದಿರುವುದು ಪಿಯುಸಿ. ಪದವಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇದ್ದರೂ ಬಡತನದಿಂದ ಓದು ಮುಂದುವರೆಸಲು ಸಾಧ್ಯವಾಗಲಿಲ್ಲ. ಈತನ ತಂದೆ ನಿಧನ ಹೊಂದಿ 7 ವರ್ಷವಾಗಿದೆ. ಈಗ ಒಂದು ಸಣ್ಣ ಕಚೇರಿಯಲ್ಲಿ 6 ಸಾವಿರಕ್ಕೆ ಉದ್ಯೋಗಕ್ಕೆ ಸೇರಿದ್ದಾನೆ. ಬರುವ ಅಲ್ಪ ಸಂಬಳದಲ್ಲೇ ವಯಸ್ಸಾದ ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸಬೇಕು, ಜೊತೆಗೆ ಇವರ ತಂದೆ ಬದುಕಿದ್ದಾಗ ಮಾಡಿದ ಸಾಲಗಳನ್ನು ತೀರಿಸುವ ಹೊಣೆಗಾರಿಕೆ ಬೇರೆ ಇತನ ಮೇಲಿದೆ. ಇತನ ಕಷ್ಟಗಳನ್ನು ನೋಡಿ ಸಂಬಂಧಿಕರು ಯಾರು ಹತ್ತಿರ ಸುಳಿಯುವುದಿಲ್ಲ.

ಆದರೂ ಇತನಿಗೆ ಜೀವನದ ಬಗ್ಗೆ ಇರುವ ಆಸೆ, ಆಕಾಂಕ್ಷೆಗಳೂ ಮಾತ್ರ ಎಂದಿಗೂ ಕರಗಿಲ್ಲ. ಕಾರಣ ಜೀವನವೇ ಹಾಗೆ ಸಾರ್, ನಾವು ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುವುದಿಲ್ಲ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪ್ರೀತಿಯಿಂದ ಸ್ವೀಕರಿಸುವುದನ್ನು ಬಿಟ್ಟು, ನಾವು ಬೇರೆನೂ ಮಾಡಲು ಸಾಧ್ಯವಿಲ್ಲ. ಸಮಸ್ಯೆಗಳಿಗೆ ಭಯಬಿದ್ದು ಕೂತರೆ ಜೀವನದಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ ಎಂಬ ಪ್ರಶಾಂತನ ಆಲೋಚನೆ, ಮನಸ್ಥಿತಿಗೆ ಏನು ಹೇಳಬೇಕೋ ಅರ್ಥವಾಗುವುದಿಲ್ಲ.

ಜೀವನವೇ ಹಾಗೆ, ನಾವು ಸದಾ ಸಂತೋಷವನ್ನೇ ಬಯಸುತ್ತೇವೆ, ಆನಂದದಿಂದ ಬದುಕಲು ಆಸೆ ಪಡುತ್ತೇವೆ. ಆದರೆ ಸಂತೋಷಕ್ಕಿಂತ ದುಃಖವೇ ನಮಗೆ ಲಭಿಸುತ್ತದೆ, ಕಷ್ಟಗಳು ಮನೆ ತುಂಬಾ ಮಲಗುತ್ತದೆ. ಶಿಕ್ಷಣ, ಹಣ, ಉದ್ಯೋಗ, ಕುಟುಂಬ, ಸಂಗಾತಿ, ಆರೋಗ್ಯ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ನಾವು ಅಂದುಕೊಂಡ ರೀತಿಯಲ್ಲಿ ನಡೆದರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಕಷ್ಟಗಳು ಬಂದಾಗಲೇ ಜೀವನದ ನೈಜ ದರ್ಶನವಾಗುವುದು. ನಮ್ಮಲ್ಲಿ ಆತ್ಮಸ್ಥೈರ್ಯ, ಧೈರ್ಯ, ವಿಶ್ವಾಸ ಬರಬೇಕಾದರೆ ಕಷ್ಟಗಳು ಎದುರಿಸಿದಾಗ, ಅನುಭವಿಸಿದಾಗ ಮಾತ್ರ ಸಾಧ್ಯ.

ಅಂದ ಹಾಗೆ ಜೀವನದಲ್ಲಿ ನಾವು ಅಂದುಕೊಂಡ ಹಾಗೆ ಎಲ್ಲವೂ ಸುಲಭವಾಗಿ ನಡೆದುಬಿಟ್ಟರೆ, ನಾವೇ ದೇವರಾಗಿ ಬಿಡುತ್ತೇವೆ, ಜೀವನಕ್ಕೆ ಬೆಲೆಯೇ ಇರುವುದಿಲ್ಲ.

ಸಾವಿರಾರು ವಿಕಲಚೇತನರು ಕಣ್ಣಿಲ್ಲದೆ, ಕೈ ಇಲ್ಲದೇ, ಕಾಲಿಲ್ಲದೆ, ಹಲವು ದೈಹಿಕ ನ್ಯೂನತೆಗಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಸರಿಯಾದ ಉದ್ಯೋಗವಿಲ್ಲದೆ, ಹಣಕಾಸಿನ ನೆರವಿಲ್ಲದೆ, ಯಾರ ಆಶ್ರಯ, ಸಹಾಯವಿಲ್ಲದೆ ಬಡತನದಲ್ಲಿಯೇ ಪ್ರತಿನಿತ್ಯವು ಜೀವನದ ಜೊತೆ ಹೋರಾಟ ನಡೆಸುತ್ತ, ವಿಧಿ ಬರಹದ ಕ್ರೂರತೆಗೆ ಸೆಡ್ಡು ಹೊಡೆದು ಬದುಕನ್ನು ಸುಂದರವಾಗಿ ಅರಳಿಸಿಕೊಳ್ಳುತ್ತಾರೆ. ಅವರಿಗೆ ಹೋಲಿಸಿಕೊಂಡರೆ ನಮ್ಮ ಕಷ್ಟಗಳು ದೊಡ್ಡದೇನಲ್ಲ, ಬಗೆಹರಿಸಲಾಗದ ಕಗ್ಗಂಟಿನ ಸಮಸ್ಯೆಗಳೇನಲ್ಲ.  

ನಮಗೆ ಇರುವುದರಲ್ಲೇ ಖುಷಿ ಕಾಣುತ್ತ, ಸರಳ ಜೀವನದೊಂದಿಗೆ ಬದುಕು ಸಾಗಿಸುತ್ತ, ಅತಿ ಆಸೆ, ಸ್ವಾರ್ಥ ಬಿಟ್ಟು ಜೀವನ ನಡೆಸಿದರೆ ಅದೇ ಸ್ವರ್ಗ. ಪ್ರತಿದಿನವು ನನಗೆ ಅದಿಲ್ಲ, ಇದಿಲ್ಲ ಎಂದು ಕೊರಗುತ್ತ, ಮಾನಸಿಕವಾಗಿ ನರಳುತ್ತ, ಪ್ರತಿದಿನವು ವಿಪರಿತವಾಗಿ ಆಲೋಚಿಸುತ್ತ, ವಿಧಿ ಬರಹವನ್ನು ಶಪಿಸುತ್ತ ಜೀವನ ಸಾಗಿಸುವುದರಲ್ಲಿ ಅರ್ಥವೇನಿದೆ ಎಂಬ ಸಣ್ಣ ಆಲೋಚನೆ ನಮ್ಮ ಮನಸ್ಸಿಗೆ ಬಂದರೆ ಸಾಕು.

ಹಿರಿಯರೊಬ್ಬರು ಹೇಳಿದ್ದಾರೆ ಸುಖ ಸಂತೋಷದಲ್ಲಿ ನಮಗಿಂತ ಕೆಳಗಿರುವವರನ್ನು ನೋಡಬೇಕು. ಸಾಧನೆ, ಗುರಿಯಲ್ಲಿ ನಮಗಿಂತ ಮೇಲ್ಮಟ್ಟದವರನ್ನು ಕಾಣಬೇಕು ಎಂದು. ಒಂದೊತ್ತು ಊಟ ಸಿಗದೆ ಪರಿತಪಿಸುವ ಸಾವಿರಾರು ಜನ ನಮ್ಮ ಮಧ್ಯೆಯೇ ಇದ್ದಾರೆ. ಅವರನ್ನು ನೋಡಿದರೆ, ನಾವೆಷ್ಟು ಅದೃಷ್ಟವಂತರೆಂದು ಅರ್ಥವಾಗುತ್ತದೆ.

ಪ್ರತಿನಿತ್ಯವೂ, ಪ್ರತಿಕ್ಷಣವೂ ಅಮೂಲ್ಯ, ಅದನ್ನು ತುಂಬಾ ಸಂತೋಷದಿಂದ ಕಳೆಯಬೇಕೆ ಹೊರತು ದುಃಖಿಸುತ್ತ ವ್ಯರ್ಥ ಮಾಡುವುದಲ್ಲ. ಏಕೆಂದರೆ ಮನುಷ್ಯನಿಗೆ ಇರುವುದು ಒಂದೇ ಜನ್ಮ. ನಾವು ಈ ಜನ್ಮದಲ್ಲೇ ನೆಮ್ಮದಿ, ಸಂತೋಷ, ಆನಂದ ಕಾಣದಿದ್ದರೆ, ಮತ್ತೆ ಕಾಣುವುದು ಯಾವಾಗ..?  

ಭಾನುವಾರ, ಜನವರಿ 2, 2022

ಅನ್ಯೋನ್ಯತೆಯಲ್ಲಿ ಕಾಣುವ "ಆನಂದ"..

      ⏭ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ದೊಡ್ಡ ದೊಡ್ಡ ವ್ಯಕ್ತಿಗಳು ನನ್ನ ಸಂಬಂಧಿಕರು, ಸ್ನೇಹಿತರಾಗುವುದು ಬೇಡ. ಬದಲಾಗಿ ನನ್ನ ಸಂಬಂಧಿಕರು, ಸ್ನೇಹಿತರೆಲ್ಲರೂ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂಬ ಒಳ್ಳೆಯ ಮಾತೊಂದಿದೆ. ಅಷ್ಟಕ್ಕೂ ಈ ವಾಕ್ಯದಂತೆ ಅದೆಷ್ಟು ಜನ ಜೀವಿಸುತ್ತಾರೆ, ಅದೆಷ್ಟು ಜನ ಪಾಲಿಸುತ್ತಾರೆ ಎಂಬುವುದನ್ನು ಇವತ್ತಿನ ಕಾಲಘಟ್ಟದಲ್ಲಿ ನಿಂತು ಆಲೋಚಿಸಿದರೆ ನಮಗೆ ನೈಜತೆ ಏನೆಂಬುವುದು ಆರ್ಥವಾಗುತ್ತದೆ.

ಇಂದಿನ ಜನ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಸಂಪಾದಿಸುತ್ತಿದ್ದಾರೆ. ಕೆಲವರದ್ದು ಸಾವಿರಗಳಲ್ಲಿ ಸಂಪಾದನೆ ಆದರೆ, ಮತ್ತೆ ಕೆಲವರದ್ದು ಲಕ್ಷ, ಕೋಟಿಗಳಲ್ಲೂ ಇದೆ. ದುಬಾರಿ ಬೆಲೆಯ ದ್ವಿಚಕ್ರ ವಾಹನ, ಕಾರುಗಳನ್ನು ಬಳಸುವ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಲೇ ಇದೆ. ದೊಡ್ಡ ದೊಡ್ಡ ವಿಸ್ತೀರ್ಣವುಳ್ಳ ಮನೆ, ಡೂಪ್ಲೆಕ್ಸ್ ಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಕರೆಗಟ್ಟಲೆ ಜಮೀನು, ಫಾರ್ಮ್ ಹೌಸ್ ಗಳ ಮಾಲೀಕರಾಗುತ್ತಿದ್ದಾರೆ. ಸಾವಿರಾರು ರೂ. ಬೆಲೆ ಬಾಳುವ ಮೊಬೈಲ್ ಪೋನ್ ಗಳು, ಟ್ಯಾಬ್ ಗಳು, ಅವುಗಳಿಗೆ ಡ್ಯುಯಲ್ ಸಿಮ್ ಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಬಹುತೇಕರು ಬಳಸುತ್ತಾರೆ. ಹಾಗೆಯೇ ಧರಿಸುವ ಬಟ್ಟೆಯು ತುಂಬಾ ಕಲರ್ ಪುಲ್ ಡಿಸೈನ್ ಗಳ ಜೊತೆಗೆ ಕಾಸ್ಟ್ಲಿಯಾಗಿದೆ. 

ಇನ್ನೂ ಟೆಕ್ನಾಲಜಿ ಯುಗದೊಂದಿಗೆ ಬೆರೆತು ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯ್ಯೂಟೂಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ತೇಲುತ್ತಿದ್ದಾರೆ. ಒಂದು ರೀತಿಯ ಮನುಷ್ಯನ ಜೀವನವೇ ತುಂಬಾ ಫ್ಯಾಷನ್ ಹಾಗೂ ಅಟ್ರಾಕ್ಷನ್ ಆಗಿ ಮಾರ್ಪಾಡಾಗಿದೆ.

ದಶಕಗಳು ಉರುಳುತ್ತಿದ್ದಂತೆ ಸಮಾಜದಲ್ಲಿ ಹಲವು ಬದಲಾವಣೆಗಳು ಆಗುತ್ತಿರುವುದು ಸೂಕ್ಷ್ಮವಾಗಿ ಗಮನಿಸಬಹುದು. ವಾಸ್ತವಾಂಶವೆಂದರೆ ಜನರ ಆರ್ಥಿಕ ಸ್ಥಿತಿ, ಜೀವನ ಶೈಲಿ, ನಡವಳಿಕೆ ಮಾತ್ರ ಬದಲಾಗಿಲ್ಲ. ಜೊತೆ ಜೊತೆಗೆ ವ್ಯಕ್ತಿತ್ವವೇ ಸಂಪೂರ್ಣವಾಗಿ ಚೇಂಜ್ ಆಗಿದೆ, ಹಾದಿಯು ತಪ್ಪಿದೆ.

ಇಂದು ಪ್ರೀತಿ, ವಾತ್ಸಾಲ್ಯ, ಅನ್ಯೋನ್ಯತೆ, ಅನುಕಂಪ, ಉದಾರತೆ, ಸಹೋದರತೆ, ಸ್ನೇಹಪರತೆ, ನಂಬಿಕೆ, ವಿಶ್ವಾಸ ಎಂಬ ಅಂಶಗಳನ್ನು ಜನ ಕೈ ಬಿಟ್ಟು ಜೀವನ ಸಾಗಿಸುತ್ತಿದ್ದಾರೆ ಎಂಬ ವಿಚಾರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ಮನುಷ್ಯರಲ್ಲಿ ಕಾಣಬಾರದಾಗಿದ್ದ, ನೋಡಬಾರದಾಗಿದ್ದ ಕೆಲ ಋಣಾತ್ಮಕ ಗುಣಗಳು ದೇಹದ ತುಂಬಾ ಆವರಿಸಿಕೊಂಡು, ವಿಸ್ತಾರಗೊಂಡಿದೆ. ವಿಶೇಷವೆಂದರೆ ಈ ಗುಣಗಳನ್ನು ಪಾಲಿಸುವ ಜನಸಂಖ್ಯೆ ಮಿತಿ ಮೀರಿ ದುಪ್ಪಾಟ್ಟಾಗುತ್ತಿರುವುದೇ ನಮ್ಮಲ್ಲಿನ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿ ಎಂಬಂತಿದೆ ಹಾಗೂ ಸಮಾಜ ಸಾಗುತ್ತಿರುವ ದಾರಿಯ ಬಗ್ಗೆ ಕಳವಳ ಪಡುವಂತಾಗಿದೆ.

ಹಾಗೆಯೇ ಅಸೂಹೆ, ಹೊಟ್ಟೆಕಿಚ್ಚು, ಅಹಂಕಾರ, ಸ್ವಾರ್ಥ, ದುರಾಸೆ, ಗರ್ವ, ಕೋಪ ಎಂಬ ಅಂಶಗಳು ಕೂಡ ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತಲೇ ಇದೆ. ಮನುಷ್ಯನಲ್ಲಿ ಇಂದು ಅಹಂ ಎಂಬ ಗುಣವು ಹೆಚ್ಚಾಗಿ ಕಾಣಿಸತೊಡಗಿದೆ. ಈ ಗುಣವು ನಮ್ಮಲ್ಲಿನ ಮಾನವೀಯತೆಯನ್ನು ಮೂಲೆ ಗುಂಪು ಮಾಡುವ ಮಟ್ಟಿಗೆ ಕೊಂಡ್ಯೂಯುತ್ತಿದೆ. 

ನಾವು ಇಂದು ಬಹುಪಾಲು ಸಮಯವನ್ನು ಬೇರೊಬ್ಬರ ಬೆಳವಣಿಗೆಗೆ ತೊಡರುಗಾಲು ಹಾಕುವ ಬಗ್ಗೆ ಆಲೋಚಿಸುತ್ತ ಚಿಂತಿಸುವುದರಲ್ಲೇ ವ್ಯರ್ಥ ಮಾಡುತ್ತಿದ್ದೇವೆ ಎಂಬುವುದರಲ್ಲಿ ಸಂದೇಹವಿಲ್ಲ. ನಮ್ಮ ವರ್ತನಗಳಲ್ಲೇ ಲೋಪ ದೋಷಗಳು ಎದ್ದು ಕಾಣುತ್ತಿದ್ದೆ.

ಇತ್ತೀಚಿಗೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಆತ್ಮೀಯತೆ, ಮಾನವೀಯತೆ ಸಾರುವ ವಿಡಿಯೋ ಒಂದು ನೋಡಿದೆ. ಮೂರು ಪಕ್ಷಿಗಳು ಒಂದು ಮರದ ಕೊಂಬೆಯ ಮೇಲೆ ಕೂತಿರುತ್ತವೆ. ಸ್ವಲ್ಪ ಸಮಯದ ನಂತರ ಆಹಾರ ಹುಡುಕುತ್ತ ಮೂರು ಪಕ್ಷಿಗಳು ಮರದ ಮೇಲಿಂದ ಹಾರಿ ಒಂದೊಂದು ದಿಕ್ಕಿಗೆ ಹೋಗುತ್ತವೆ. ಸ್ವಲ್ಪ ಸಮಯದ ನಂತರ ಮೂರು ಪಕ್ಷಿಗಳು ಮೊದಲು ಕೂತಿದ್ದ ಮರದ ಕೊಂಬೆಯ ಮೇಲೆ ಬಂದು ಕೂರುತ್ತವೆ. ಮೂರು ಪಕ್ಷಿಗಳಲ್ಲಿ ಒಂದು ಪಕ್ಷಿಗೆ ಮಾತ್ರ ಆಹಾರ ಸಿಕ್ಕಿರುತ್ತದೆ. ಉಳಿದ ಎರಡು ಪಕ್ಷಿಗಳು ಆಹಾರ ಹುಡುಕುತ್ತ ಹೋಗಿದ್ದರು ಕೂಡ ಅವುಗಳಿಗೆ ಸಿಕ್ಕಿರುವುದಿಲ್ಲ. ಆಗಂತ ಆಹಾರ ಸಿಕ್ಕ ಪಕ್ಷಿಯೊಂದೆ ಎಲ್ಲವನ್ನೂ ಸೇವಿಸುವುದಿಲ್ಲ, ಬದಲಾಗಿ ಉಳಿದ ಎರಡು ಪಕ್ಷಿಗಳಿಗೂ ಹಂಚಿ ತಾನು ಸೇವಿಸುತ್ತದೆ.

ಆ ಪಕ್ಷಿಯು ಈ ಆಹಾರವನ್ನು ನಾನು ಹುಡುಕಿಕೊಂಡು ಬಂದದ್ದು, ನಿಮಗೆ ಹೇಗೆ ನೀಡಲು ಸಾಧ್ಯ ಎಂದು ಹೇಳದೆ, ಹಂಚಿ ತಿನ್ನುವ ಮೂಲಕ ಆತ್ಮತೃಪ್ತಿಯ ಜೊತೆಗೆ ಮನುಷ್ಯರಲ್ಲಿ ಕಾಣದ ಮೌಲ್ಯಯುತ ಗುಣವನ್ನು ತೋರಿಸುತ್ತದೆ.

ಒಮ್ಮೆ ನಾನು ಬೆಟ್ಟವೊಂದಕ್ಕೆ ಹೋಗಿದ್ದೆ. ಆ ಬೆಟ್ಟದಲ್ಲಿ ಕೋತಿಗಳ ಸಂಖ್ಯೆ ಗಣನೀಯವಾಗಿತ್ತು. ಕೋತಿಗಳು ಆಹಾರವಿಲ್ಲದೇ ಪರಿತಪಿಸುವ ವಿಚಾರಗೊತ್ತಿದ್ದ ಒರ್ವ ವ್ಯಕ್ತಿ ಒಂದಷ್ಟು ಬನ್, ಬ್ರೆಡ್, ಬಿಸ್ಕತ್ ಗಳನ್ನು ತಂದು ಕೋತಿಗಳಿಗೆ ನೀಡಿದ. ವಿರ್ಪಯಾಸವೆಂದರೆ ಅಲ್ಲಿದ್ದ ಕೆಲ ಕೋತಿಗಳು ಕಿತ್ತಾಡದೆ ಪರಸ್ಪರ ಹಂಚಿಕೊಂಡು ಹೊಟ್ಟೆ ತುಂಬಿಸಿಕೊಂಡವು. ಕೋತಿಗಳು ಮನುಷ್ಯನ ರೀತಿ ಶಾಲಾ, ಕಾಲೇಜುಗಳಿಗೆ ಹೋಗಿ ಶಿಕ್ಷಣ ಪಡೆಯದಿರಬಹದು. ಆದರೆ ಅದಕ್ಕಿಂತ ಹೆಚ್ಚಿನ ಜೀವನ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದವು ಎಂಬುವುದೇ ಗ್ರೇಟ್.

ಹಾಗೇ ನೋಡಿದರೆ ಮನುಷ್ಯನಲ್ಲಿರುವಷ್ಟು ಅಸೂಹೆ, ಹೊಟ್ಟೆ ಕಿಚ್ಚು, ಸ್ವಾರ್ಥ, ದುರಾಸೆ, ಕೋಪ, ಪ್ರಾಣಿ ಪಕ್ಷಿ, ಮರ, ಗಿಡಗಳಲ್ಲಿ ಕಾಣಲು ಅಸಾಧ್ಯ. ಅವುಗಳಲ್ಲಿ ಕಾಣುವ ಅನ್ಯೋನ್ಯತೆ ಮನುಷ್ಯನಲ್ಲಿ ಕಾಣಲು ಹೇಗೆ ಸಾಧ್ಯ. ಇಂದು ಒಬ್ಬ ವ್ಯಕ್ತಿ ಜೀವನದಲ್ಲಿ ಬೆಳೆಯುತ್ತಿದ್ದಾನೆ, ಅಭಿವೃದ್ದಿ ಕಾಣುತ್ತಿದ್ದಾನೆ ಎಂದರೆ ಹೇಗಾದರೂ ಮಾಡಿ ಆತನ ಕಾಲೇಳೆದು ಆತನ ಬೆಳವಣಿಗೆಗೆ ಕೊಡಲಿ ಪೆಟ್ಟು ಕೊಡಲು ತುದಿಗಾಲಲ್ಲಿ ನಿಲ್ಲುವ ಜನ ವರ್ಗವೇ ಹುಟ್ಟಿಕೊಳ್ಳುತ್ತದೆ. ತಾನು ಬೆಳೆಯದಿದ್ದರೂ ಚಿಂತೆಯಿಲ್ಲ, ಮತ್ತೊಬ್ಬ ಬೆಳೆಯಬಾರದೆಂಬ ಧೋರಣೆ ಹಲವರು ಮೈಗೂಡಿಸಿಕೊಂಡಿದ್ದಾರೆ. ನನ್ನದು ಒಂದು ಕಣ್ಣೋದರು ಚಿಂತೆಯಿಲ್ಲ, ಆತನದು ಎರಡು ಕಣ್ಣು ಹೋಗಬೇಕು ಎಂಬ ಆಲೋಚನೆ ತುಂಬಾ ಜನರಲ್ಲಿ ಆಳವಾಗಿ ಬೇರೂರಿದೆ. 

ಅದೆಷ್ಟರ ಮಟ್ಟಿಗೆ ಅಂದರೆ ಅಣ್ಣ ಬೆಳೆಯುತ್ತಿದ್ದಾನೆ ಎಂದರೆ ತಮ್ಮ ಸಹಿಸುವುದಿಲ್ಲ. ತಮ್ಮ ಅಭಿವೃದ್ದಿಯಾಗುತ್ತಿದ್ದಾನೆ ಎಂದರೆ ಅಣ್ಣನಿಗೆ ನಿದ್ದೆಯೇ ಬರುವುದಿಲ್ಲ. ಅಕ್ಕ ಒಳ್ಳೆಯ ಹಂತಕ್ಕೆ ಹೋಗುತ್ತಾರೆ ಎಂದರೆ ನನಗೇನು ಲಾಭ ಎಂದು ತಂಗಿ ಆಲೋಚಿಸುತ್ತಾಳೆ. ಇನ್ನು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು, ಅತ್ತೆ, ಮಾವ, ಅಣ್ಣ, ತಮ್ಮನ ಮಕ್ಕಳು, ಅಕ್ಕ, ತಂಗಿಯ ಮಕ್ಕಳು ಶಿಕ್ಷಣದಲ್ಲೋ, ಉದ್ಯೋಗದಲ್ಲೋ, ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ ಅಭಿವೃದ್ದಿಯಾಗುತ್ತಿದ್ದಾರೆ ಎಂದರೆ ಖುಷಿ ಪಡುವ ಬದಲಾಗಿ ಅಸೂಹೆ ಉಂಟಾಗಿ, ಅವರ ಏಳಿಗೆಗೆ ಅಡ್ಡ ಬರಲು ನೋಡುತ್ತೇವೆ. ಅದು ಸಾಧ್ಯವಾಗದಿದ್ದಾಗ ಅಪಪ್ರಚಾರ ಮಾಡಿ, ಅವರ ಗೌರವಕ್ಕೆ ಚ್ಯುತಿ ತರುತ್ತೇವೆ. ಆ ಮೂಲಕ ವಿಕೃತ ಆನಂದ ಪಡುತ್ತೇವೆ. ಅಷ್ಟರ ಮಟ್ಟಿಗೆ ರಕ್ತ ಸಂಬಂಧಗಳಲ್ಲೇ ದೊಡ್ಡ ದೊಡ್ಡ ಬಿರುಕು ಮೂಡಿರುತ್ತದೆ. ಕುಟುಂಬದವರು ಬೆಳೆದರೆ, ಅಭಿವೃದ್ದಿಯಾದರೆ ಜೀರ್ಣಿಸಿಕೊಳ್ಳುವ ಮನಸ್ಥಿತಿ ಇಲ್ಲದ ಜನ, ಇನ್ನೂ ಸ್ನೇಹಿತರು, ಸಂಬಂಧಿಕರು ಎತ್ತರಕ್ಕೆ ಏರುತ್ತಾರೆ ಎಂದರೆ ನೋಡಿಕೊಂಡು ಸುಮ್ಮನೆ ಕುರುತ್ತಾರೆಯೇ, ನೋ ಚಾನ್ಸ್.

ನಾವು ಯಾವುದಾದರೂ ಒಂದು ಮರದ ಕೆಳಗೆ ಹೋದರೆ, ಅದು ನಮ್ಮನ್ನು ಇದು ನೀನು ಬೆಳೆಸಿದ ಮರ ನಾನಲ್ಲ, ಇಲ್ಲಿಗೇಕೆ ನೀನು ಬಂದೇ ಎಂದು ಕೇಳುವುದಿಲ್ಲ. ನಿನ್ನ ಜಾತಿ, ಧರ್ಮ ಯಾವುದೆಂದು ಪ್ರಶ್ನಿಸುವುದಿಲ್ಲ. ನೀನು ಬಡವ, ಶ್ರೀಮಂತನೇ ಎಂದು ಅಪ್ಪಿತಪ್ಪಿಯು ಕೇಳುವುದಿಲ್ಲ. ಮರದ ಬಳಿ ಯಾರೇ ಬಂದರು ಅವರಿಗೆ ನೆರಳು ನೀಡಿ ಆಶ್ರಯ ನೀಡುತ್ತದೆ, ಆಮ್ಲಜನಕ ಪೂರೈಸಿ, ಆರೋಗ್ಯ ಕಾಪಾಡುತ್ತದೆ. ಹಣ್ಣು, ಹಂಪಲು ನೀಡಿ ಹೊಟ್ಟೆ ತುಂಬಿಸುತ್ತದೆ. ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ನೂರಾರು ವರ್ಷ ಜನರ ಜೀವಕ್ಕೆ ಉಸಿರು ನೀಡುತ್ತದೆ. ವಿಪರ್ಯಾಸವೆಂದರೆ ಒಂದು ಮರಕ್ಕೆ ಇರುವ ಆಲೋಚನೆ, ಮನಸ್ಥಿತಿ, ಉದಾರತೆ ಮನೋಭಾವ ಮನುಷ್ಯನಿಗೆ ಇಲ್ಲದಾಯಿತೇ ಎಂಬುವುದೇ ದುರ್ದೈವ. 

ಯಾರಾದರೂ ಒಬ್ಬ ವ್ಯಕ್ತಿ ಅಭಿವೃದ್ದಿಯಾಗುತ್ತಾರೆ ಎಂದರೆ ನಮ್ಮ ಕೈಯಲ್ಲಾದರೆ ಸಹಾಯ ಮಾಡಬೇಕೆ ಹೊರತು ತೊಂದರೆ ನೀಡುವ ಗುಣವಿರಬಾರದು. ಅವರವರ ಸಾಮರ್ಥ್ಯ, ಆಸಕ್ತಿ, ಶ್ರಮದ ಆಧಾರದ ಮೇಲೆ ಪ್ರತಿಯೊಬ್ಬರ ಅಭಿವೃದ್ದಿ ನಿರ್ಧಾರವಾಗುತ್ತದೆ. ನಾವು ಬೆಳವಣಿಗೆಯಾಗ ಬೇಕು ಎಂದು ಭಾವಿಸುವುದು ಖಂಡಿತಾ ತಪ್ಪಲ್ಲ, ಆದರೆ ಬೇರೆಯವರು ಬೆಳೆಯಲೇಬಾರದು, ನಾನೊಬ್ಬನೆ ಅಭಿವೃದ್ದಿಯಾಗಬೇಕು ಎಂಬ ದೂರಲೋಚನೆಯು ಮಾತ್ರ ಮಹಾಪರಾಧ. 

ನಮ್ಮ ಮನಸ್ಸು ಹೇಗೆಂದರೆ ಬೇರೆಯವರ ವಿಚಾರಗಳು, ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅವರಿವರ ವೈಯಕ್ತಿಕ ವಿಷಯಗಳನ್ನು ತೆಗೆದುಕೊಂಡು, ಅವುಗಳ ಬಗ್ಗೆ ಚರ್ಚಿಸುತ್ತ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇವೆ. ಇದರಿಂದ ಬರುವ ಲಾಭವಾದರೂ ಏನು ಎಂದು ಎಂದಿಗೂ ಲೆಕ್ಕಚಾರ ಮಾಡುವುದಿಲ್ಲ.  

ನಾವು ನೆಮ್ಮದಿ ಜೀವನ ಸಾಗಿಸಬೇಕಾದರೆ ಮೊದಲು ಮಾಡಬೇಕಾದ ಕೆಲಸ ಅಹಂಕಾರ, ಅಸೂಹೆ, ಹೊಟ್ಟೆಕಿಚ್ಚು, ದುರಾಸೆ ಗುಣಗಳನ್ನು ಆದಷ್ಟು ದೂರ ತಳ್ಳಬೇಕು, ಹತ್ತಿರ ಸೇರಿಸಲೇಬಾರದು. ಎಲ್ಲರೂ ನಮ್ಮವರು ಎಂದು ಭಾವಿಸಿ ನೋಡಿ, ಅದರಲ್ಲಿ ಸಿಗುವ ಆತ್ಮತೃಪ್ತಿ ಅಪರಿಮಿತ. ಎಲ್ಲರೊಂದಿಗೂ ಸಣ್ಣ ಸಣ್ಣ ವಿಷಯಗಳಿಗೂ ದ್ವೇಷ ಸಾಧಿಸಿ, ಹಠ ಮಾರಿ ಧೋರಣೆಯಿಂದ ಬರುವ ಲಾಭವಾದರೂ ಏನು ? ಬೇರೊಬ್ಬರ ಗೆಲುವಿನಲ್ಲಿ ನಮ್ಮ ಸಂತೋಷ ಕಾಣಬೇಕು. ಅದು ಬಿಟ್ಟು ಗೆದ್ದನಲ್ಲ ಎಂದು ಕೊರಗಿದರೆ ನಮ್ಮ ಮಾನಸಿಕ ನೆಮ್ಮದಿಗೆ ನಾವೇ ಭಂಗ ಉಂಟು ಮಾಡಿಕೊಂಡಂಗೆ. 

ಅದು ಕುಟುಂಬದವರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ, ಸಹದ್ಯೋಗಿಗಳಾಗಲಿ ಅಥವಾ ಯಾರೇ ಆಗಲಿ ಅವರೊಂದಿಗೆ ಅನ್ಯೋನ್ಯತೆಯನ್ನು ಸಾಧಿಸಿ, ಪ್ರೀತಿ, ವಾತ್ಸಾಲ್ಯ ಹಂಚುವುದರಿಂದ ನಾವು ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಬದುಕುವ ಮೂರು ದಿನಕ್ಕೆ ಎಲ್ಲರೊಂದಿಗೆ ಆತ್ಮೀಯತೆ ಸಾಧಿಸಬೇಕೆ ಹೊರತು ಅಹಂಕಾರದಿಂದ ದ್ವೇಷ ಸಾಧಿಸುತ್ತ ಎಲ್ಲರನ್ನೂ ದೂರ ಮಾಡಿಕೊಳ್ಳುವ ವಿಧಾನವು ಮನುಷ್ಯನಿಗೆ ಒಪ್ಪುವ ಲಕ್ಷಣವಲ್ಲ. 

ಇತ್ತಿಚೀಗೆ ನಿಧನರಾದ ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ದೊಡ್ಡ ಸ್ಟಾರ್ ಆದರೂ ಎಂದು ಅಹಂಕಾರ, ಗರ್ವದಿಂದ ವರ್ತಿಸಿದವರಲ್ಲ. ಸದಾ ಮುಗುಳ್ನೆಗೆಯೊಂದಿಗೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತ ಜೀವಿಸಿದವರು. ಎಲ್ಲದಕ್ಕೂ ಹೆಚ್ಚಾಗಿ ತಮ್ಮ ಸೇವಾ ಕಾರ್ಯಗಳ ಮೂಲಕ ಆತ್ಮ ತೃಪ್ತಿಯನ್ನು ಪಡೆದುಕೊಂಡರು. ಅದೆಷ್ಟೋ ಅಶಕ್ತರ ಪಾಲಿಗೆ ಧ್ವನಿಯಾಗಿದ್ದರು. ಇಂದು ಅವರು ನಮ್ಮ ಮಧ್ಯದಲ್ಲಿ ಇಲ್ಲದಿದ್ದರು, ಎಲ್ಲರ ಮನಸ್ಸುಗಳಲ್ಲಿ ಸದಾ ಉಳಿದಿದ್ದಾರೆ, ಉಳಿಯುತ್ತಾರೆ ಕೂಡ.

ಎಲ್ಲರೂ ನಮ್ಮವರು, ನನ್ನ ಜೊತೆಗೆ ಬೇರೆಯವರೂ ಅಭಿವೃದ್ದಿಯಾಗಲಿ ಎಂದು ಭಾವಿಸುವ ಗುಣವಿದೇಯಲ್ಲ ಅದು ಎಲ್ಲರಿಗೂ ಬರುವುದಿಲ್ಲ. ಆ ಗುಣ ಇರುವವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಸತ್ತ ನಂತರ ಜನರ ಮನಸ್ಸಗಳಲ್ಲಿ ಸದಾ ಉಳಿಯುತ್ತಾರೆ. ಅದೆಕ್ಕೆ ಹೇಳುವುದು ಕೆಲವರು ಬದುಕಿದ್ದು ಸತ್ತಂಗೆ, ಮತ್ತೆ ಕೆಲವರು ಸತ್ತರು ಬದುಕ್ಕಿದಂಗೆ. ಸೋ ನಾವು ಬದುಕಿ ಸಾಯಬೇಕೋ, ಸತ್ತ ನಂತರವು ಬದುಕಬೇಕೋ ಎಂಬ ನಿರ್ಧಾರ ನಮ್ಮ ಕೈಯಲ್ಲೇ ಇದೆ. ನಮ್ಮ ಆಲೋಚನೆ, ವರ್ತನೆ, ಗುಣಗಳೇ ಅದನ್ನು ತೀರ್ಮಾನಿಸುತ್ತದೆ. ಅನ್ಯೋನ್ಯತೆಯಲ್ಲಿ ಕಾಣುವ ಆನಂದ, ಸಾವಿರ ಕೋಟಿ ಕೊಟ್ಟರು ಸಿಗಲ್ಲ ಏನಂತಿರಾ..

ಶುಕ್ರವಾರ, ಅಕ್ಟೋಬರ್ 15, 2021

“ಸೇವೆಯಿಂದಲೇ, ನಮ್ಮ ಜೀವನ ಪಾವನ”..

 👉 ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇಂಗ್ಲೀಷ್ ನಲ್ಲಿ ಒಳ್ಳೆಯ ಮಾತೊಂದಿದೆ, We Can’t help everyone, but everyone can help some one. ಅಂದರೆ ನಾವು ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲರೂ ಒಂದಾದರೆ ಕೆಲವರಿಗಾದರೂ ಸಹಾಯ ಮಾಡಲು ಸಾಧ್ಯವಿದೆ ಎಂಬ ಅರ್ಥವನ್ನು ನೀಡುತ್ತದೆ. ಸಹಾಯ ಎಂಬುವುದು ಮಾನವರಲ್ಲಿ ಇರಬೇಕಾದ ಮೊದಲ ಬಹುಮುಖ್ಯ ಗುಣ. ಹಾಗೆ ನೋಡಿದರೆ ನಮಗೆ ಅಷ್ಟೋ ಇಷ್ಟೋ ಸಮಾಜದಲ್ಲಿ ಗೌರವ, ಜೀವನದಲ್ಲಿ ಪುಣ್ಯ, ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರೆ ಇತರರಿಗೆ ಸಹಾಯ ಮಾಡುವುದರಿಂದ ಮಾತ್ರ ಎಂಬುವುದರಲ್ಲಿ ಎರಡನೇ ಮಾತಿಲ್ಲ. 

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಕಾಲೇಜಿನ ಕೆಲ ಸ್ನೇಹಿತರು ಒಟ್ಟಿಗೆ ಸೇರಿ ಆಗಾಗ ಕಾಲೇಜಿನ ಕ್ಯಾಂಟೀನ್ ನಲ್ಲಿ ಕುಳಿತುಕೊಳ್ಳುವುದು ವಾಡಿಕೆಯಾಗಿತ್ತು. ಆಗ ಚರ್ಚೆಯಾಗುತ್ತಿದ್ದ ವಿಷಯ ನಾವು ಏನಾದರೊಂದು ಸಣ್ಣ ಸಹಾಯವನ್ನಾದರೂ ಸಮಾಜಕ್ಕೆ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೇವು. ಆದರೆ ನಮ್ಮ ಯಾರ ಬಳಿಯು ಹಣವಿರಲಿಲ್ಲ, ಎಲ್ಲರೂ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರೆ ಆಗಿದ್ದರಿಂದ ಆರ್ಥಿಕವಾಗಿ ಎಲ್ಲರೂ ಅಶಕ್ತರಾಗಿದ್ದರು.

ಯಾರಿಗಾದರೂ ಸಹಾಯ ಮಾಡಬೇಕಾದರೆ ಹಣವೇ ಮುಖ್ಯ, ನಮ್ಮ ಯಾರ ಬಳಿಯು ಹಣವಿಲ್ಲ, ಆದ್ದರಿಂದ ನಮ್ಮಂತವರು ಏನು ಮಾಡಲು ಸಾಧ್ಯ ಎಂದು ನಾವೇ ಭಾವಿಸಿಕೊಂಡು ಸುಮ್ಮನಾಗುತ್ತಿದ್ದೆವು.

ಒಮ್ಮೆ ದಿನಪತ್ರಿಕೆಯೊಂದರಲ್ಲಿ ಕಣ್ಣು ಕಾಣದವರ (ಕುರುಡರು) ಪರೀಕ್ಷೆಯನ್ನು ಬರೆಯಲು ಸ್ಕ್ರೈಬ್ಗಳು ಸಿಗುತ್ತಿಲ್ಲ. ಇದರಿಂದ ಅಂದರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ಇದನ್ನು ಗಮನಿಸಿದ ನನ್ನ ಸ್ನೇಹಿತನೊಬ್ಬ ಕಣ್ಣು ಕಾಣದವರಿಗೆ ಸ್ಕ್ರೈಬ್ ಆಗಿ ಅನೇಕ ಪರೀಕ್ಷೆಗಳನ್ನು ಬರೆದುಕೊಟ್ಟ. ಯಾರೇ ಅಂದರು ಕರೆ ಮಾಡಿದರು ಹಿಂದೆ ಮುಂದೆ ನೋಡದೆ ಅವರ ಪರೀಕ್ಷೆಗಳನ್ನು ಬರೆದುಕೊಡುವ ಮೂಲಕ ಅವರ ಜೀವನಕ್ಕೆ ಆಸರೆಯಾದ. ಹಣವಿಲ್ಲದಿದ್ದರು ಸಹಾಯ ಮಾಡಬಹುದೆಂಬುವುದಕ್ಕೆ ನಿದರ್ಶನವಾದ. ಬಡ ಕುಟುಂಬದಿಂದ ಬಂದರೂ ಹಲವು ಅಂದರಿಗೆ ದಾರಿ ದೀಪವಾದ.

ಒಮ್ಮೆ ಬೆಂಗಳೂರಿನ ಹೆಸರಾಂತ ಮಠವೊಂದಕ್ಕೆ ಹೋಗಿದ್ದೆ. ಅಲ್ಲಿನ ಹಿರಿಯ ಸ್ವಾಮೀಜಿಯೊಬ್ಬರ ಪ್ರವಚನ ಕಾರ್ಯಕ್ರಮವಿತ್ತು. ಅವರ ಉಪನ್ಯಾಸದ ವಿಷಯವೆಂದರೆ ದಾನಗಳು ಮತ್ತು ಸೇವಾ ಕಾರ್ಯಗಳ ಕುರಿತಾಗಿತ್ತು. ಸ್ವಾಮೀಜಿ ಮಾತನಾಡುತ್ತ ಪ್ರಾಚೀನ ಕಾಲದಿಂದಲೂ ದಾನಗಳಿಗೆ ತುಂಬಾ ಮಹತ್ವ ಇದೆ. ಅದರಲ್ಲೂ ಸನಾತನ ಧರ್ಮದಲ್ಲಿ ದಾನವು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ದಾನಗಳಲ್ಲಿ ಪ್ರಮುಖವಾಗಿ ಶಿಕ್ಷಣ (ವಿದ್ಯೆ), ಭೂಮಿ, ಹಸು, ಕನ್ಯಾ, ಅನ್ನ (ಆಹಾರ) ಮುಂತಾದವುಗಳನ್ನು ಕಾಣಬಹುದು. ಈ ದಾನಗಳನ್ನು ಹಾಗೂ ಇತರೆ ಸೇವಾ ಕಾರ್ಯಗಳು ಮಾಡುವುದು ಅತ್ಯಂತ ಶ್ರೇಷ್ಠಕರ ಹಾಗೂ ಪುಣ್ಯ ಸಂಪಾದಿಸಲು ಮತ್ತು ಮಾನಸಿಕ ಸಂತೋಷಕ್ಕೆ ಮೂಲ ಕಾರಣವಾಗುತ್ತದೆ. ನಾವು ಜೀವನದಲ್ಲಿ ಮೋಕ್ಷವನ್ನು ಪಡೆಯಬೇಕಾದರೆ ದಾನ ಹಾಗೂ ಸೇವಾ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಮತ್ತೊಂದು ದಾರಿ ಇಲ್ಲ ಎಂದು ಭಕ್ತಾಧಿಗಳಿಗೆ ಹಿತವಚನ ನುಡಿದರು. 

ನಾವು ಸತ್ತ ನಂತರವೂ ಪುನಃಹ ಬದುಕುತ್ತೇವೆ ಯಾವಾಗ ಎಂದರೆ ಒಂದಷ್ಟು ಸೇವಾ ಕೆಲಸಗಳನ್ನು ಮಾಡಿದಾಗ ಮಾತ್ರ. ಹಾಗಂತ ಹಣ, ಐಶ್ವರ್ಯವಿದ್ದವರು ಮಾತ್ರ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬಹುದು, ಉಳಿದವರು ಏನು ಮಾಡಲು ತಾನೇ ಸಾಧ್ಯ ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿದ್ದರೆ ಈ ಕ್ಷಣವೇ ಅದನ್ನು ತೆಗೆದು ಹಾಕಿ. ಏಕೆಂದರೆ ಅದು ಶುದ್ದ ಸುಳ್ಳು, ಹಣವಿದ್ದವರಲ್ಲಿ ಕೆಲವೇ ಜನ ಮಾತ್ರ ಸಹಾಯ ಮಾಡುವ ಮನಸ್ಸು ಇರುತ್ತದೆ. ಹಣ ಇಲ್ಲದ ಹಲವರು ಬೇರೆ ಬೇರೆ ರೂಪಗಳಲ್ಲಿ ಹತ್ತಾರು ಜನರಿಗೆ ಸಹಾಯಹಸ್ತ ಚಾಚುತ್ತಲೇ ಇರುತ್ತಾರೆ ಎಂದರು.

ಸ್ವಾಮೀಜಿ ತಮ್ಮ ಮಾತನ್ನು ಮುಂದುವರೆಸುತ್ತಾ ನನ್ನ ಬಳಿ ಹಣ ಇಲ್ಲ, ನಾನು ಇಲ್ಲಿಯವರೆಗೂ ಯಾರಿಗೂ ಹಣ ಸಹಾಯ ಮಾಡಿಲ್ಲ, ನಾನು ಸನ್ಯಾಸ ಧೀಕ್ಷೆಯನ್ನು ಪಡೆದು ಸ್ವಾಮೀಜಿಯಾಗಿ ರೂಪಾಂತರಗೊಂಡು ಹಲವು ವರ್ಷಗಳಾಗಿದೆ. ನಾನು ಮಾಡುವ ಮುಖ್ಯ ಸಾಮಾಜಿಕ ಸೇವೆಯೆಂದರೆ ಮಠಕ್ಕೆ ಬರುವ ಭಕ್ತಾಧಿಗಳಿಗೆ ಜೀವನದ ಬಗ್ಗೆ ಪ್ರೀತಿ ಮೂಡಿಸಿ, ಸರಿದಾರಿಯಲ್ಲಿ ಸಾಗುವಂತೆ ಹಿತೋಪದೇಶ ಮಾಡುವುದು. ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿ ಹೇಳುತ್ತೇನೆ ಅಷ್ಟೇ. ನನ್ನ ಬಳಿ ಅಧಿಕಾರ, ಹಣ, ಐಶ್ವರ್ಯ ಇಲ್ಲದಿದ್ದರು ಜನ ಗೌರವಿಸುತ್ತಾರೆ, ನನಗೆ ನಮಸ್ಕರಿಸುತ್ತಾರೆ, ಪೂಜ್ಯ ಭಾವನೆಯಿಂದ ಕಾಣುತ್ತಾರೆ ಎಂದರೆ ಅದು ನಾನು ಮಾಡುವ ಸಣ್ಣ ಹಿತೋಪದೇಶ ಕಾರಣದಿಂದಾಗಿಯೇ ತಾನೇ, ಇದಕ್ಕೆ ನಾನು ಯಾವುದೇ ಹಣ ಖರ್ಚು ಮಾಡುವುದಿಲ್ಲ. ನನಗೆ ಗೊತ್ತಿರುವುದನ್ನು ಇತರರಿಗೆ ಹೇಳುತ್ತೇನೆ ಅಷ್ಟೇ ಎಂದು ಸಭಿಕರಿಗೆ ಕಿವಿಮಾತು ಹೇಳಿದರು.

ನಾವು ಅನೇಕ ಸಲ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕೆಂದು ಅಂದುಕೊಂಡರು ಆರ್ಥಿಕವಾಗಿ ಸದೃಢರಾಗಿಲ್ಲ, ಅಧಿಕಾರ ಇಲ್ಲ ಎಂದು ತಟಸ್ಥವಾಗಿ ಇದ್ದು ಬಿಡುತ್ತೇವೆ. ಗಮನಾರ್ಹ ಅಂಶವೆಂದರೆ ಮಾಡುವ ಮನಸ್ಸು, ಧ್ಯೇಯವಿದ್ದರೆ ಹಣವಿಲ್ಲದಿದ್ದರು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಅವಕಾಶ ಖಂಡಿತಾ ಇದ್ದೇ ಇರುತ್ತದೆ.

ಅದೆಷ್ಟೋ ಬಾರಿ ದುರಾಭ್ಯಾಸಗಳ ಕಾರಣಕ್ಕಾಗಿ ದುಂದುವೆಚ್ಚ ಮಾಡುತ್ತೇವೆ. ಕೆಲವರಂತೂ  ದುರಾಭ್ಯಾಸಗಳು (ಧೂಮಪಾನ, ಮದ್ಯಪಾನ, ಗುಟ್ಕಾ ಪದಾರ್ಥಗಳ ಸೇವನೆ ಸೇರಿದಂತೆ ಮತ್ತಿತರ)  ಅಭ್ಯಾಸದಿಂದ ಹಣವನ್ನು ವ್ಯರ್ಥ ಮಾಡುತ್ತಾರೆ. ಆದರೆ ಆ ಬಗ್ಗೆ ಎಂದೂ ಆಲೋಚಿಸುವುದಿಲ್ಲ. ನಾವು ಸಂಪಾದಿಸುವ ಹಣದಲ್ಲಿ ದುರಾಭ್ಯಾಸಗಳಿಗೆ ಖರ್ಚು ಮಾಡದೆ ಸ್ವಲ್ಪ ಪ್ರಮಾಣದಲ್ಲಿ ಹಣ ಉಳಿಸಿದರು, ಹಲವರ ಬದುಕಿಗೆ ಬೆಳಕಿನ ಜ್ಯೋತಿಯಾಗಬಹುದು ಎಂಬುವುದನ್ನು ಮರೆತು ಬಿಡುತ್ತೇವೆ.

ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭವಾಗಲಿ ನಂತರ ಆಗಲಿ ಅನೇಕ ಪುಸ್ತಕಗಳನ್ನು ಖರೀದಿಸುತ್ತೇವೆ. ಒಂದಷ್ಟು ವರ್ಷಗಳ ಕಳೆದ ನಂತರ ಅವುಗಳನ್ನು ಹಳೆ ಪೇಪರ್ ಗಳನ್ನು ಖರೀದಿಸುವವರಿಗೆ ಮಾರುತ್ತೇವೆ. ಇಲ್ಲಂದ್ರೆ ಎಲ್ಲಾದರೂ ಎಸೆದು ಬಿಡುತ್ತೇವೆ. ಅದರ ಬದಲು ಅದರ ಅಗತ್ಯ ಇರುವವರಿಗೆ ಕೊಟ್ಟರೆ ಅವರಿಗೆ ಆಗುವ ಅನುಕೂಲ ಅಷ್ಟಿಷ್ಟಲ್ಲ. ಇದರಿಂದ ನಮಗೆ ಆಗುವ ಹೊರೆಯಂತು ಏನು ಇಲ್ಲ.

ನಮಗೆ ಯಾವುದೇ ಒಂದು ವಿಷಯ ಅದು ಕನ್ನಡ, ಇಂಗ್ಲೀಷ್, ಇತಿಹಾಸ, ಹಿಂದಿ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅಷ್ಟೋ ಇಷ್ಟೋ ವಿಷಯಗಳಿಸಿ ಕೊಂಡಿರುತ್ತೇವೆ. ನಾವು ಪಡೆದ ಆ ಜ್ಞಾನವನ್ನು ನಮ್ಮಲ್ಲಿಯೇ ಉಳಿಸಿಕೊಂಡು ಮರೆಯುವುದಕ್ಕಿಂತ, ಆ ವಿಷಯದ ಜ್ಞಾನವನ್ನು ಅಗತ್ಯ ಇರುವವರಿಗೆ ನೀಡಿದರೆ ನಮ್ಮಿಂದ ನಾಲ್ಕು ಜನ ವಿಷಯದ ಜ್ಞಾನ ಪಡೆದುಕೊಂಡು ಜೀವನದಲ್ಲಿ ಅಭಿವೃದ್ದಿಯಾಗುತ್ತಾರೆ. ಜ್ಞಾನವನ್ನು ನೀಡುವುದಕ್ಕಿಂತ ಮತ್ತೊಂದು ಸೇವೆ ಏನಿದೆ. 

ಅದು ಬಿಡಿ ಪ್ರತಿ ವರ್ಷ ಜೂನ್.5 ರಂದು ಪರಿಸರ ದಿನಚಾರಣೆಯನ್ನು ಆಚರಿಸುತ್ತೇವೆ. ಅಂದು ಕಾಟಾಚಾರಕ್ಕೆಂಬಂತೆ ಆಚರಿಸುವುದೇ ಹೆಚ್ಚು. ನೆಡುವುದು ಒಂದು ಗಿಡವಾದರೂ ಪಬ್ಲಿಸಿಟಿ ಮಾತ್ರ ವಿಪರಿತವಾಗಿರುತ್ತದೆ. ನಮ್ಮ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೆ ಪ್ರತಿಯೊಬ್ಬರು ವಾರಕ್ಕೊಮ್ಮೆ ಗಿಡ ನೆಡುವುದು ದೊಡ್ಡ ವಿಚಾರವೇನಲ್ಲ. 10 ರೂ ಕೊಟ್ಟರು ವಿವಿಧ ತಳಿಗಳ ಸಸಿಗಳು, ಗಿಡಗಳು ಸಿಗುತ್ತವೆ. ಇಲ್ಲವೇ ಅರಣ್ಯ ಇಲಾಖೆಯ ನರ್ಸರಿಗಳಿಂದ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಗಿಡಗಳು ಸಿಗುತ್ತವೆ. ಅವುಗಳನ್ನು ದೇವಸ್ಥಾನ, ಶಾಲಾ, ಕಾಲೇಜು, ರಸ್ತೆಯ ಅಕ್ಕಪಕ್ಕಗಳಲ್ಲಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಬೆಳೆಸಿದರೆ ಮುಂದೊಂದು ದಿನ ಅವು ಮರವಾಗಿ, ಸಾವಿರಾರು ಜನರಿಗೆ ನೆರಳು ನೀಡುತ್ತದೆ. ಹಲವು ಪಕ್ಷಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಗಿಡದಲ್ಲಿ ಹಣ್ಣು, ಹಂಪಲು ಬಿಟ್ಟರೆ ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕರವರು ತಮ್ಮ ಬಳಿ ಹಣವಿಲ್ಲದಿದ್ದರು ನೂರಾರು ಗಿಡಗಳನ್ನು ರಾಮನಗರದ ಮಾಗಡಿ ತಾಲ್ಲೂಕಿನ ತಮ್ಮ ಗ್ರಾಮ ಹುಲಿಕಲ್ ನಲ್ಲಿ ನೆಟ್ಟು, ಅವುಗಳನ್ನು ಹೆಮ್ಮರವಾಗಿ ಬೆಳೆಸಿದ ಪರಿಣಾಮ ತಿಮ್ಮಕ್ಕರ ಪರಿಸರ ಸೇವೆ ಎಲ್ಲರಿಗೂ ಇಂದು ಪರಿಚಿತ. ಪರಿಸರದ ಸೇವೆಗಿಂತ ಮಿಗಿಲಾದ ಸೇವೆ ಮತ್ಯಾವುದು ಇದೆ ಹೇಳಿ ನೋಡೋಣ. 

ಇಂದು ಪ್ರತಿಯೊಂದು ನಗರ, ಪಟ್ಟಣಗಳಲ್ಲೂ ವೃದ್ದಾಶ್ರಮ, ಅನಾಥಶ್ರಮಗಳು ಎದ್ದು ಕಾಣುತ್ತವೆ. ಅಲ್ಲಿ ವಾಸಿಸುವ ಹಲವರು ತಮ್ಮ ಬಂಧು ಬಳಗದವರ ಆತ್ಮೀಯತೆ, ಹಾರೈಕೆ ಇಲ್ಲದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. ಸಂಬಂಧಗಳ ಅನುಬಂಧವಿಲ್ಲದೆ, ಒಬ್ಬಂಟಿಯಾಗಿ ಜೀವನ ಸಾಗಿಸಿರುತ್ತಾರೆ. ಕನಿಷ್ಟ ಇಂತವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವುದರಿಂದ ಕಳೆದುಕೊಳ್ಳುವುದಾದರೂ ಏನು ಇಲ್ಲ. ಆರು ತಿಂಗಳಿಗೋ, ವರ್ಷಕ್ಕೊಮ್ಮೆಯೋ ಅನಾಥಶ್ರಮ, ವೃದ್ದಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ಅನ್ನದಾನ ಹಾಗೂ ಅಗತ್ಯ ಇರುವ ಸಣ್ಣಪುಟ್ಟ ಸಹಾಯ ಮಾಡಿದರೆ ನಮ್ಮ ಆಸ್ತಿಯಂತು ಕರಗುವುದಿಲ್ಲ.

ಅದೆಷ್ಟೋ ಸರ್ಕಾರಿ, ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪುಸ್ತಕಗಳನ್ನು ತೆಗೆದುಕೊಳ್ಳಲು ಕೂಡ ಹಣವಿಲ್ಲದೆ ಪರದಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಅಂತಹ ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬರಿಗಾದರೂ ಪುಸ್ತಕಗಳನ್ನು ಖರೀದಿಸಿ ಕೊಟ್ಟರೆ ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ತರಬಹದು. ಇದಕ್ಕೇನು ಹೆಚ್ಚಿನ ಹಣದ ಅವಶ್ಯಕತೆ ಇಲ್ಲ. 

ಇಂದು ಪ್ರತಿಯೊಬ್ಬರು ಹೆಚ್ಚು ಬೆಲೆ ಬಾಳುವ ಮೊಬೈಲ್ ಪೋನ್ ಗಳನ್ನು ಬಳಸುತ್ತೇವೆ. ಈ ಪೋನ್ ಗಳ ಮೂಲಕವೇ ಸುಲಭವಾಗಿ ಸೇವೆ ಮಾಡಬಹುದು. ಸರ್ಕಾರದ ಸಾಲ, ಸಬ್ಸಿಡಿ ಯೋಜನೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಆಹ್ವಾನಿಸುವ ಖಾಲಿ ಹುದ್ದೆಗಳ ನೋಟಿಫಿಕೇಶನ್ ಸುದ್ದಿ ಹಾಗೂ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅರಿವು ಮೂಡಿಸುವ ವಿಚಾರಗಳು ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯವಾದ ಮಾಹಿತಿಯನ್ನು ಸೋಷಿಯಲ್ ಮೀಡಿಯಾ (ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಮತ್ತಿತರ) ಮೂಲಕ ಪ್ರಚಾರ ಮಾಡಿದರೆ ನಮ್ಮ ಹಲವು ಸ್ನೇಹಿತರಿಗೆ ವಿಷಯ ಗೊತ್ತಾಗಿ, ಅದರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. 

ವಾಸ್ತವ ಏನೆಂದರೆ ಎಷ್ಟೋ ಜನ ಮಾಹಿತಿಯ ಕೊರತೆಯಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೇ ಜೀವನದಲ್ಲಿ ಇನ್ನು ಹಿಂದುಳಿಯುವಂತಾಗಿದೆ. ಅಂತವರಿಗೆ ವಿಷಯ ಮುಟ್ಟಿಸುವ ಅವಕಾಶ ನಮ್ಮ ಕೈಯಲ್ಲಿರುವ ಮೊಬೈಲ್ ಪೋನ್ ಮೂಲಕ ಮಾಡಬಹುದು ಎಂಬುವುದೇ ವಿಶೇಷ. ಆದರೂ ಆ ಮೊಬೈಲ್ ಪೋನ್ ನ್ನು ಜನ ಗುಡ್ ಮಾರ್ನಿಂಗ್, ಗುಡ್ ನೈಟ್ ಸೇರಿದಂತೆ ಕೆಲಸಕ್ಕೆ ಬಾರದ ವಿಚಾರಗಳಿಗೆ ಬಳಸುತ್ತಿರುವುದು ಜಗತ್ತಿಗೆ ಗೊತ್ತು.

ಇಂದು ಸಮಾಜ ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಮಾಲ್ಯಗಳ ಕೊರತೆ. ಮಾನವೀಯ ಮೌಲ್ಯಗಳ ಕಣ್ಮರೆಯಿಂದ ಸಮಾಜದಲ್ಲಿ ಯುವ ಸಮೂಹ ಹಾದಿ ತಪ್ಪಿ ನಡೆಯುವಂತಾಗಿದೆ. ಹಲವರು ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಶಿಕ್ಷಣ, ಜೀವನ ಎರಡನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ನಮ್ಮ ಮನೆ ಹಾಗೂ ಪರಿಚಿತ ಸ್ನೇಹಿತರು, ಸಹದ್ಯೋಗಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವವಲ್ಲಿ ನಾವು ಪ್ರಧಾನ ಪಾತ್ರ ವಹಿಸಿದರೆ ನವ ಸಮಾಜ ನಿರ್ಮಾಣದಲ್ಲಿ ನಮ್ಮದು ಒಂದು ಪಾತ್ರವಿರುತ್ತದೆ. ನಮ್ಮ ಒಳ್ಳೆಯ ಮಾತಿನಿಂದ ಹಲವರ ಬದುಕು ಹಸನಾಗಬಹುದು.

ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಒಟ್ಟಿಗೆ ಸೇರಿಕೊಂಡು ಫೌಂಡೇಶನ್ ಅಥವಾ ಚಾರಿಟಬಲ್ ಟ್ರಸ್ಟ್ ಗಳನ್ನು ಸ್ಥಾಪಿಸಿ ಆ ಮೂಲಕ ನಿಯಮಿತವಾಗಿ ಒಂದಷ್ಟು ಸೇವಾ ಕಾರ್ಯಗಳನ್ನು ಮಾಡುವ ಅವಕಾಶವಂತು ಇದ್ದೇ ಇದೆ. 

ಪಾರ್ಟಿ, ಬಾರ್, ರೆಸ್ಟೋರೆಂಟ್, ರೆಸಾರ್ಟ್, ಜಾಲಿ ಟ್ರಿಪ್, ಮೋಜು ಮಸ್ತಿ ಎಂದು ಹಲವರು ಹಣವನ್ನು ನೀರಿನಂತೆ ಪೋಲು ಮಾಡುತ್ತಾರೆ. ಹಾಗಂತ ಜೀವನದಲ್ಲಿ ಮನರಂಜನೆ ಬೇಡ ಎಂದರ್ಥವಲ್ಲ. ಎಲ್ಲವೂ ಹಿತಿಮಿತಿಯಲ್ಲಿ ಇರಬೇಕಷ್ಟೇ. ಸಮಾಜದಲ್ಲಿ ಬದುಕುವ ನಾವು, ಈ ಸಮಾಜದಿಂದ ಅದೆಷ್ಟೋ ಅಪರಿಮಿತ ಸೌಲಭ್ಯಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆದುಕೊಂಡಿರುತ್ತೇವೆ. ಆದ್ದರಿಂದ ಸಮಾಜದಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಅಶಕ್ತರು, ಅಬಲರ ಕಷ್ಟಗಳಿಗೆ ಧ್ವನಿಯಾಗುವ ಮೂಲಕ ಒಂದಷ್ಟು ಪುಣ್ಯ, ಮಾನಸಿಕ ನೆಮ್ಮದಿ ಸಂಪಾದಿಸುವ ಕಡೆ ನಮ್ಮ ನಡೆ ಇದ್ದರೆ, ಅದಕ್ಕಿಂತ ಸೇವೆ ಮತ್ತೇನಿದೆ.

ನಿಜ ಎಂದರೆ ಸೇವಾ ಕಾರ್ಯಗಳಿಗೆ ಲಕ್ಷ ಲಕ್ಷ ಹಣ ಬೇಕು ಎಂಬುವುದು ಒಪ್ಪುವ ವಿಚಾರವಲ್ಲ. ಹಣ ಇಲ್ಲದೆಯೇ ಹಲವು ರೀತಿಯ ಸೇವೆಗಳನ್ನು ಮಾಡುವ ಅವಕಾಶ ಇದೆ. ಆದರೆ ಮಾಡುವ ಮನಸ್ಸಿದ್ದಾಗ ಮಾತ್ರ ಅದು ಸಾಧ್ಯ. ನಿಮಗೆ ಆ ಮನಸ್ಸು ಇದೆಯೇ.. ನನಗೆ ಗೊತ್ತಿಲ್ಲ, ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಿ..  

ಭಾನುವಾರ, ಮೇ 2, 2021

"ದುರಾಭ್ಯಾಸಗಳಿಗೆ ಸ್ಪೀಡ್ ಬ್ರೇಕ್ ಹಾಕಲ್ವೇ"..?

👉ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 
Burn your bad habbits, before they burn you ಎಂದು ಇಂಗ್ಲೀಷ್ ನ ಈ ವಾಕ್ಯವನ್ನು ಓದಿದರೆ ಖಂಡಿತಾ ನಾವು ಆತ್ಮಾವಲೋಕನ ಮಾಡಿಕೊಳ್ಳಲೇಬೇಕೆಂಬ ಭಾವನೆ ಮೂಡುತ್ತದೆ. ಈ ವಾಕ್ಯದ ಅರ್ಥವನ್ನು ಹುಡುಕಿದರೆ, ನಮ್ಮಲ್ಲಿ ಅಡಗಿ ಕುಳಿತಿರುವ ಕೆಟ್ಟ ಗುಣಗಳು ನಮ್ಮನ್ನ ಸುಡುವ ಮುನ್ನ, ಅವುಗಳನ್ನು ನಾವೇ ಸುಡಬೇಕು. ಕೆಟ್ಟ ಗುಣಗಳನ್ನು ಸುಡದೇ ಜೋಪಾನ ಮಾಡಿದರೆ, ಒಂದಲ್ಲಾ ಒಂದು ದಿನ ಆ ಗುಣಗಳೇ ನಮ್ಮನ್ನು ಬೆಂಕಿಗೆ ತಳ್ಳಿ, ಆಹುತಿ ಮಾಡುತ್ತದೆ ಎಂಬ ಒಳಾರ್ಥವನ್ನು ಈ ವಾಕ್ಯ ವಿವರಿಸುತ್ತದೆ.

ಈ ಪ್ರಪಂಚದಲ್ಲಿ ಅದೆಷ್ಟೋ ಜನ ಬುದ್ದಿವಂತರು, ಹಣವಂತರು, ವಿದ್ಯಾವಂತರು ಸೇರಿದಂತೆ ಎಲ್ಲಾ ರೀತಿಯ ಬಲವನ್ನು ಹೊಂದಿರುವ ಅನೇಕರು ಅಂತಿಮವಾಗಿ ತಮ್ಮ ಜೀವನದಲ್ಲಿ ಸೋಲನ್ನು ಒಪ್ಪಿಕೊಂಡು ಮುಗ್ಗರಿಸಿ ಎಡವಿ ಬೀಳುತ್ತಾರೆ. ಅದಕ್ಕೆ ಮೂಲ ಕಾರಣ ತಮಗೆ ಗೊತ್ತಿಲ್ಲದೆ ಬೆಳೆಸಿಕೊಳ್ಳುವ ದುರಾಭ್ಯಾಸಗಳ ಪ್ರಭಾವದಿಂದ ಎಂಬುವುದು ಕಟು ಸತ್ಯ. ದುರಾಭ್ಯಾಸಗಳ ಹೊರತಾದ ಜೀವನ ಸಾಗಿಸುವವನು ಮಾತ್ರ ದೋಣಿ ಎಂಬ ಗುರಿಯನ್ನು ಸರಿಯಾಗಿ ಚಲಾಯಿಸಿ ಅಂತಿಮವಾಗಿ ದಡ ಸೇರಿಸುತ್ತಾನೆ, ಗುರಿ ತಲುಪಿ ಒಳ್ಳೆಯ ನಾವಿಕನಾಗುತ್ತಾನೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ತೆಲುಗಿನ ವಕೀಲ್ ಸಾಬ್ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಚಿತ್ರದ ನಾಯಕ ನಟರಾಗಿದ್ದರಿಂದ, ಅದರಲ್ಲೂ ಅವರ ಹೊಸ ಚಿತ್ರ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದಿದ್ದರಿಂದ, ಸಹಜವಾಗಿಯೇ ಹೆಚ್ಚಿನ ಜನ ಅವರ ಅಭಿಮಾನಿಗಳು ಚಿತ್ರ ನೋಡಲು ಮುಗಿಬಿದ್ದಿದ್ದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿರುದ್ದ ಧ್ವನಿ ಎತ್ತುವ ಹಾಗೂ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣವೊಂದರ ವಾದ-ವಿವಾದಗಳ ಕುರಿತ ಕಥೆ ಆಧಾರಿತ ಚಿತ್ರವಿದು ಹಾಗೂ ಹಲವು ವಿಚಾರಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಅಂದು ಅದೇ ಚಿತ್ರ ಮಂದಿರದಲ್ಲಿ ಚಿತ್ರ ಪ್ರಾರಂಭಕ್ಕೂ ಮುನ್ನ ಪರದೆಯ ಮೇಲೆ ಧೂಮಪಾನ ಹಾಗೂ ಮದ್ಯಪಾನ, ಪಾನ್ ಮಸಾಲ ಆರೋಗ್ಯಕ್ಕೆ ಹಾನಿಕರ, ಇವುಗಳಿಂದ ಆದಷ್ಟೂ ದೂರವಿರಿ ಎಂದು ಸಂದೇಶ ಬರುತ್ತದೆ. ಜೊತೆಗೆ ಅವುಗಳಿಗೆ ಬಲಿಯಾದವರ ವಿಡಿಯೋವನ್ನು ತೋರಿಸಿ, ಪ್ರೇಕ್ಷಕರಿಗೆ ಕಿವಿಮಾತು ಹೇಳುತ್ತಾರೆ. ಆದರೂ ಅದೇ ಚಿತ್ರ ಮಂದಿರದಲ್ಲಿ ಚಿತ್ರ ವಿರಾಮದ ಮಧ್ಯೆ ಜನ ಗುಂಪಾಗಿ ಸೇರಿ ಧೂಮಪಾನ, ಪಾನ್ ಮಸಾಲಗಳನ್ನು ಬಳಸುತ್ತ, ಅವರ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಪಕ್ಕದವರ ಆರೋಗ್ಯವನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದರು. ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ತೋರಿಸಿ ಅರ್ಧಗಂಟೆಯು ಆಗಲಿಲ್ಲ, ಅದಾಗಲೇ ಆ ವಿಷಯವನ್ನು ಸುಲಭವಾಗಿ ಮರೆತು ಬಿಟ್ಟಿದ್ದರು.

ಮೊನ್ನೆ ದಿನಪತ್ರಿಕೆಯೊಂದರಲ್ಲಿ 18 ರಿಂದ 35 ವರ್ಷದೊಳಗಿನ ಯುವಕ-ಯುವತಿಯರ ಕುರಿತ ಸಮೀಕ್ಷಾ (ಸರ್ವೆ) ವರದಿಯೊಂದು ಪ್ರಕಟವಾಗಿತ್ತು. ಅದರಲ್ಲಿ ಬಹುಮುಖ್ಯವಾಗಿ ಯುವ ಸಮೂಹ ಎಷ್ಟರ ಮಟ್ಟಿಗೆ ದುರಾಭ್ಯಾಸಗಳಿಗೆ (ಸಿಗರೇಟ್, ಮದ್ಯಪಾನ, ಡ್ರಗ್ಸ್, ಪಾನ್ ಮಸಾಲಾ, ಗುಟ್ಕಾ ಸೇವನೆ ಮತ್ತಿತರೆ) ಬಲಿಯಾಗುತ್ತಿದ್ದಾರೆ ಎಂಬ ಕುರಿತ ಬೆಳಕು ಚೆಲ್ಲುವ ವರದಿ ಅದಾಗಿತ್ತು. ಅದರ ಪ್ರಕಾರ ಕಾಲೇಜು ಮೆಟ್ಟಿಲು ಕೂಡ ಹತ್ತದ ಅದೆಷ್ಟೋ ಯುವ ಸಮೂಹ ದುರಾಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಸತ್ಯವನ್ನು ಪತ್ರಿಕೆ ಸರ್ವೆ ರಿಪೋರ್ಟ್ ಆಧಾರದಲ್ಲಿ ಮೇಲೆ ಪ್ರಕಟಿಸಿತ್ತು. 

ನಾವು ಮನುಷ್ಯರೇ ಹಾಗೆ ಒಳ್ಳೆಯ ಕೆಲಸ, ಕಾರ್ಯಗಳನ್ನು ತಡವಾಗಿ ಕಲಿಯುತ್ತೇವೆ, ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ದುರಾಭ್ಯಾಸ ಮತ್ತು ಕೆಟ್ಟ ಚಟಗಳನ್ನು ಯಾರು ಕಲಿಸದಿದ್ದರು ಬೇಗ ಕಲಿಯುತ್ತೇವೆ, ಅತ್ಯುತ್ಸಾಹದಿಂದ ತಿಳಿದುಕೊಳ್ಳುತ್ತೇವೆ. ಚಾಚು ತಪ್ಪದೇ ಪಾಲಿಸುತ್ತೇವೆ. 

ವಿಪರ್ಯಾಸವೆಂದರೆ ಸಿಗರೇಟ್ ಪ್ಯಾಕ್ ಮೇಲೆ ಆರೋಗ್ಯಕ್ಕೆ ಹಾನಿಕರ, ಧೂಮಪಾನ ಮಾಡಬೇಡಿ ಎಂದು ಮುದ್ರಿಸಿರುತ್ತಾರೆ, ಆದರೂ ಜನ ಹಣಕೊಟ್ಟು ಖರೀದಿಸಿ  ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಎಳೆ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಯಾರು ಹೇಳುವ ಅವಶ್ಯಕತೆ ಇಲ್ಲ, ಎಲ್ಲರಿಗೂ ಗೊತ್ತು. ಆದರೂ ಬಹುಪಾಲು ಜನ ಕುಡಿಯುವುದೇ ಇಲ್ಲ, ಬದಲಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗಲು ಕಾರಣವಾದ ಮದ್ಯಪಾನದತ್ತ ಮೊರೆ ಹೋಗುತ್ತಾರೆ ಎಂಬುವುದನ್ನು ಅಲ್ಲೆಗೆಳಯಲು ಸಾಧ್ಯವೇ.  

ಹಾಗೆ ನೋಡಿದರೆ ದುರಾಭ್ಯಾಸಗಳೆಂದರೆ ಕೇವಲ ಧೂಮಪಾನ, ಮದ್ಯಪಾನ ಸೇವಿಸುವುದು, ಡ್ರಗ್ಸ್ ಗೆ ದಾಸರಾಗುವುದು, ಪಾನ್ ಮಸಾಲ ಜರಿಯುವುದು ಅಷ್ಟೇ ಅಲ್ಲ, ಅದರ ಹೊರತಾಗಿ ಹತ್ತಾರು ದುರಾಭ್ಯಾಸಗಳ ದೊಡ್ಡ ಪಟ್ಟಿಯೇ ಇದೆ. ಧೂಮಪಾನ, ಮದ್ಯಪಾನ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಿದರೆ, ಉಳಿದ ದುರಾಭ್ಯಾಸಗಳು ನಮ್ಮ ವ್ಯಕ್ತಿತ್ವಕ್ಕೆ ಕಳಂಕ ತಂದು ಸ್ವತಃ ಬೀದಿಯಲ್ಲಿ ತಂದು ನಿಲ್ಲಿಸಿ ಬಿಡುತ್ತದೆ. 

ಅನ್ಯರೊಬ್ಬರು ಬೆಳೆಯುತ್ತಿದ್ದಾರೆ, ಅಭಿವೃದ್ದಿಯಾಗುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ದ್ವೇಷಿಸುವುದು, ಹೊಟ್ಟೆಕಿಚ್ಚು ಪಡುವುದು, ವಿನಾ ಕಾರಣ ಇತರರ ಬಗ್ಗೆ ಸುಳ್ಳು ಹೇಳಿ ಅವರನ್ನು ತೇಜೋವಧೆ ಮಾಡುವುದು, ನಮಗಾಗದವರ ಬಗ್ಗೆ ಇತರರಿಗೆ ದೂರು ಹೇಳಿ, ಅವರ ಗೌರವಕ್ಕೆ ಧಕ್ಕೆ ತರುವುದು, ಸುಳ್ಳಗಳನ್ನೇ ಪದೇ ಪದೇ ಹೇಳಿ ಸತ್ಯವೆಂದು ನಂಬಿಸುವುದು, ಇತರರನ್ನು ವಿನಾ ಕಾರಣ ಟೀಕಿಸುವುದು, ಅವಮಾನ ಮಾಡುವುದು, ಅಪಹಾಸ್ಯಕ್ಕೆ ಗುರಿ ಮಾಡುವುದು, ಕೀಳಾಗಿ ಕಾಣುವುದು, ತಪ್ಪೆಂದು ಗೊತ್ತಿದ್ದರು ಅನ್ಯಾಯದ ಮಾರ್ಗದಲ್ಲಿ ಸಾಗುವುದು, ಹಣ ಮಾಡುವ ಸಲುವಾಗಿ ಇತರರಿಗೆ ಮೋಸ ಮಾಡುವಂತಹ ಲಕ್ಷಣಗಳೆಲ್ಲವೂ ದುರಾಭ್ಯಾಸಗಳ ಪಟ್ಟಿಗೆ ಒಳಪಡುತ್ತದೆ. ಇಂತಹ ದುರಾಭ್ಯಾಸ ಚಟಗಳು ನಮ್ಮ ವ್ಯಕ್ತಿತ್ವವನ್ನೇ ಅಲ್ಲಾಡಿಸಿ ಬೇರು ಸಮೇತ ಕಿತ್ತು ಎಸೆದು ಬಿಡುತ್ತದೆ. 

ಹಾಗೆ ನೋಡಿದರೆ ಜೀವನದಲ್ಲಿ ಯಾರಾದರೊಬ್ಬರು ಸಫಲತೆ ಕಾಣುತ್ತಿದ್ದಾರೆ, ಸಾಧನೆಯಲ್ಲಿ ಎತ್ತರಕ್ಕೆ ಏರುತ್ತಿದ್ದಾರೆ ಎಂದರೆ ಸಾಧ್ಯವಾದರೆ ಅವರ ಗುರಿ ತಲುಪಲು ಸಹಾಯ ಮಾಡಬೇಕೆ ಹೊರತು ಅನಗತ್ಯವಾಗಿ ಅವರಿಗೆ ತೊಂದರೆ ಕೊಟ್ಟು ಕಾಲೆಳೆಯುವ ಕೃತ್ಯಗಳಲ್ಲಿ ಭಾಗಿಯಾಗಲೇ ಬಾರದು. ಸಾಮಾನ್ಯವಾಗಿ ನಾವು ಯಾರನ್ನು ಶತ್ರುಗಳನ್ನಾಗಿ ಪರಿಗಣಿಸಬಾರದು. ಶತ್ರುಗಳನ್ನು ಸಂಪಾದಿಸಬೇಕೆಂಬ ಆಲೋಚನೆಯು ಇರಬಾರದು, ಅಜಾತಶತ್ರುವಿನ ಜೀವನ ನಮ್ಮದಾಗಿರಬೇಕು. ಆಕಸ್ಮಾತ್ ಒಂದು ವೇಳೆ ನಮಗೆ ಶತ್ರುಗಳಿದ್ದರು, ಅವರ ವಿರುದ್ದ ಇಲ್ಲಸಲ್ಲದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುವ, ಅವರನ್ನು ದ್ವೇಷಿಸಿ, ಹಠ ಸಾಧಿಸುವ ಕೆಲಸಕ್ಕೆ ಕೈಹಾಕಲೇ ಬಾರದು. ನಮ್ಮ ಮಧ್ಯೆ ಸದಾ ಸುಳ್ಳುಗಳನ್ನೇ ಹೇಳುತ್ತ ಜೀವನ ಸಾಗಿಸುವ ಜನ ವರ್ಗ ಕಡಿಮೆ ಏನಿಲ್ಲ. ನಾವು ಸುಳ್ಳುಗಳನ್ನು ಹೇಳುತ್ತ ಸಾಗಿದರೆ, ಅದೇ ಸುಳ್ಳುಗಳು ನಮ್ಮ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತದೆ. ಸುಳ್ಳುಗಳನ್ನು ಹೇಳುವ ಅಭ್ಯಾಸ ನಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ ಎಂಬ ಅರಿವು ಇರಬೇಕು.

ಇತರರನ್ನು ವಿನಾ ಕಾರಣ ಟೀಕೆ, ವಿಮರ್ಶೆಗಳಿಂದ ನೋಯಿಸುವುದು, ಕೀಳಾಗಿ ಕಂಡು ಅವರ ಮನಸ್ಸಿಗೆ ಘಾಸಿಯಾಗುವ ರೀತಿಯ ವರ್ತನೆಗಳು ಶೋಭೆ ತರುವಂತದ್ದಲ್ಲ. ಕೇವಲ ಹಣ ಮಾಡುವ ಸಲುವಾಗಿಯೇ ಅಡ್ಡದಾರಿಗಳನ್ನು ಆಯ್ಕೆ ಮಾಡಿಕೊಂಡು, ಅನ್ಯಾಯದ ಮಾರ್ಗದಲ್ಲಿ ಸಾಗುತ್ತ, ಅನ್ಯರಿಗೆ ಮೋಸ ಮಾಡುವ ಕಾಯಕ ನಮ್ಮ ಜೀವನವನ್ನೇ ಒಂದಲ್ಲಾ ಒಂದು ದಿನ ಪಾತಾಳಕ್ಕೆ ತಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.   

ನಮ್ಮ ಸ್ವಾರ್ಥ ಸಾಧನೆಯ ಹಿತಕ್ಕಾಗಿ ಸ್ನೇಹಿತರ, ಕುಟುಂಬದವರಿಗೆ ಅನ್ಯಾಯ ಮಾಡಿ, ನಂಬಿಕೆ ದ್ರೋಹ ಮಾಡುವಂತಹ ಪಾಪದ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ, ಅದು ನಮ್ಮ ಜೀವನದ ಬಹಳ ದೊಡ್ಡ ತಪ್ಪಾಗಿ ಪರಿಣಮಿಸಿ, ಎಂದೋ ಒಂದು ದಿನ ನಮ್ಮ ಅಧಃಪತನಕ್ಕೆ ದಾರಿ ಮಾಡಿಕೊಡುತ್ತದೆ. 

ಈಗೆ ಹೇಳುತ್ತ ಹೋದರೆ ಈ ರೀತಿಯ ಹಲವು ದುರಾಭ್ಯಾಸಗಳು ನಮ್ಮ ಸುತ್ತಲೂ ಸುತ್ತುತ್ತ ಗಿರಕಿ ಹೊಡೆಯುತ್ತಲೇ ಇರುತ್ತದೆ. ಇವು ನಮ್ಮಿಂದ ಬಹು ದೂರವಿದ್ದಷ್ಟು ನಮಗೆ ಆತ್ಮತೃಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಮತ್ತು ಇತರರಿಂದ ಗೌರವ ಪಡೆಯುತ್ತೇವೆ. ಅಪ್ಪಿತಪ್ಪಿ ಈ ದುರಾಭ್ಯಾಸಗಳು ಹತ್ತಿರ ಬಂದರಂತು, ನಾವು ಸಂಪೂರ್ಣ ಹಾಳಾಗುವುದರ ಜೊತೆಗೆ ನಮ್ಮ ಗುರಿ ತಲುಪಲು ಹೆಣಗಾಡಬೇಕಾಗುತ್ತದೆ.  

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ  ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಕಾರ್ಯಕ್ರಮವೊಂದರಲ್ಲಿ ಯುವಸಮೂಹವನ್ನು ಉದ್ದೇಶಿಸಿ ಮಾತನಾಡುತ್ತ, ನಮ್ಮ ವ್ಯಕ್ತಿತ್ವ ನಿರ್ಮಾಣದ ಹಿಂದೆ ನಮ್ಮ ಸದುದ್ದೇಶದ ಅಭ್ಯಾಸಗಳು ಬಹಳ ದೊಡ್ಡ ಪರಿಣಾಮ ಬೀರುತ್ತದೆ. ದುರಾಭ್ಯಾಸಗಳಿಗೆ ಬಲಿಯಾಗುವ ಗುಣ ನಮ್ಮದಾದರೆ ನಮ್ಮ ವ್ಯಕಿತ್ವ ಹಾಗೂ ಭವಿಷ್ಯ ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ. ದುರಾಭ್ಯಾಸಗಳು ಕ್ಷಣಿಕ ಸುಖವನ್ನು ನೀಡಬಹುದು, ಆದರೆ ಭವಿಷ್ಯದಲ್ಲಿ ಬಹಳ ದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂಬ ಅರಿವಿರಬೇಕು. ದುರಭ್ಯಾಸಗಳಿಂದ ಎದುರಾಗುವ ಸಂಕಷ್ಟಗಳ ಬಗ್ಗೆ ಗ್ರಹಿಸದೆ ಹೋದರೆ ನಮ್ಮ ಜೀವನಕ್ಕೆ ನಾವೇ ಕೊಡಲಿಪೆಟ್ಟು ಕೊಟ್ಟುಕೊಂಡಂಗೆ ಎಂಬ ಬಹಳ ಅರ್ಥಪೂರ್ಣವಾದ ವಿಚಾರವನ್ನು ಯುವಸಮೂಹದ ಮುಂದೆ ಮಂಡಿಸಿದ್ದರು.

ನಮಗೆ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿದ್ದರು, ಅವರು ಪಾಠದ ಜೊತೆಗೆ ಹೆಚ್ಚಾಗಿ ಮಾನವೀಯ ಗುಣಗಳು ಹಾಗೂ ನಮ್ಮಲ್ಲಿ ಧನಾತ್ಮಕ ಭಾವನೆ ಸೃಷ್ಟಿಯಾಗುವ ಕುರಿತು ವಿಷಯ ಪ್ರಸ್ತಾಪ ಮಾಡುತ್ತಿದ್ದರು. ಅವರೆಳಿದ ಮಾತು ನನಗಿನ್ನು ನೆನಪಿದೆ, ವಿದ್ಯಾರ್ಥಿಗಳೇ ನಿಮ್ಮ ಬಳಿ ಹಣವಿಲ್ಲ, ನೀವು ಬಡವರು ಎಂದು ಭಾವಿಸುತ್ತಿದ್ದಿರಾ ಚಿಂತೆ ಪಡಬೇಡಿ. ನಾನು ಎತ್ತರದಲ್ಲಿ ಕುಳ್ಳಗಿದ್ದೇನೆ, ಬಣ್ಣದಲ್ಲಿ ಕಪ್ಪಗಿದ್ದೇನೆ, ದೇಹದ ಆಕಾರ ದಪ್ಪಗಿದೆ ಎಂದು ಬೇಸರವಿದೆಯೇ ಪರವಾಗಿಲ್ಲ. ನನಗೆ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ, ನಾನು ವಿದ್ಯಾಭ್ಯಾಸದಲ್ಲಿ ತೀರ ಹಿಂದುಳಿದಿದ್ದೇನೆ ಎಂದು ಕೊರಗಿದೆಯೇ ತೊಂದರೆ ಇಲ್ಲ. ನೀವು ಬಡವರಾಗಿರಬಹುದು, ನೋಡಲು ಆಕರ್ಷಕರಾಗಿ ಕಾಣದಿರಬಹುದು, ವಿದ್ಯಾಭ್ಯಾಸದಲ್ಲಿ ಹಿಂದುಳಿದಿರಬಹುದು, ಇವೆಲ್ಲವೂ ನಿಮ್ಮ ನೂನ್ಯತೆಗಳಲ್ಲ, ಸಾಧನೆ ಮಾಡಲು ಖಂಡಿತಾ ಅಡ್ಡಿಯಾಗಲ್ಲ.

ಆದರೆ ಒಮ್ಮೆ ಆಲೋಚಿಸಿ ನಿಮ್ಮಲ್ಲಿ ಏನಾದರೂ ದುರಾಭ್ಯಾಸಗಳಿದ್ದರೆ, ಎಲ್ಲವೂ ಇದ್ದು ಏನು ಇಲ್ಲದ್ದಂತೆ ಜೀವನ ಕತ್ತಲಾಗುತ್ತದೆ. ನಮ್ಮಲ್ಲಿ ಹಣ ಇಲ್ಲದಿದ್ದರು, ವಿದ್ಯೆ ಇಲ್ಲದಿದ್ದರು, ಬ್ಯಾಕ್ಗ್ರೌಂಡ್ ಸಪೋರ್ಟ್ ಇರದೆ ಇದ್ದರು, ಸಾಧನೆ ಮಾಡಲು ಸಮಸ್ಯೆಯಾಗಲ್ಲ. ಆದರೆ ದುರಾಭ್ಯಾಸಗಳಿಗೆ ಬಲಿಯಾಗಿದ್ದರೆ ಮಾತ್ರ ಜೀವನವೇ ಮುಗಿದೇ ಹೋಯಿತು ಎಂದು ಸದಾ ಎಚ್ಚರಿಸುತ್ತಿದ್ದರು. 

ಅದೆಷ್ಟೋ ಜನ ದುರಾಭ್ಯಾಸದ ಚಟಗಳಿಗೆ ದಾಸರಾಗಿ ಕುಟುಂಬ, ವೃತ್ತಿ, ಭವಿಷ್ಯವನ್ನೇ ಹಾಳು ಮಾಡಿಕೊಂಡಿದ್ದಾರೆ. ಮಾನವೀಯ ಗುಣಗಳು ಬೆಳೆಯದಿರಲು ದುರಾಭ್ಯಾಸ ಚಟಗಳೇ ಅಡ್ಡಗಾಲಾಗಿ ಪರಿಣಮಿಸುತ್ತದೆ. ಯುವ ಸಮೂಹವಂತು ತಮ್ಮ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯವನ್ನೇ ಕತ್ತಲುಮಯ ಮಾಡಿಕೊಂಡಿದ್ದಾರೆ. ಈಗಿನ ಟ್ರೆಂಡ್ ಎಂದರೆ ಕಾಲೇಜು ಮೆಟ್ಟಿಲು ಹತ್ತಿದೆ ಕೂಡಲೇ ಮದ್ಯಪಾನ ಮಾಡಬೇಕು, ಧೂಮಪಾನಕ್ಕೆ ದಾಸರಾಗಬೇಕು, ಅಡ್ಡದಾರಿಗಳನ್ನು ಹಿಡಿದು ಬೆಳೆಯಬೇಕು. ಕೆಲವರು ಈ ಗುಣಗಳು ಇಲ್ಲದೇ ಹೋದರೆ ಕಾಲೇಜಿಗೆ ಸೇರಿದ್ದೆ ವ್ಯರ್ಥ ಎಂಬ ಧೋರಣೆಯನ್ನು ನಿರ್ಮಿಸಿದ್ದಾರೆ. 

ನಿಜ ಹೇಳಬೇಕೆಂದರೆ ದುರಾಭ್ಯಾಸಗಳು ನಮ್ಮಲ್ಲಿನ ಪ್ರೀತಿ, ವಾತ್ಸಾಲ್ಯ, ತಾಳ್ಮೆ, ಛಲ, ಸಹಾನಶಕ್ತಿಯನ್ನು ಸಂಪೂರ್ಣವಾಗಿ ಕಬಳಿಸುತ್ತದೆ. ಧನಾತ್ಮಕ ಚಿಂತನೆಯನ್ನು ಪೂರ್ಣವಾಗಿ ಮರೆಸುತ್ತದೆ. ಸ್ವಾರ್ಥದ ಹಾದಿ ತುಳಿಯುವಂತೆ ಸದಾ ಪ್ರೇರೆಪಿಸುತ್ತದೆ. ಬೆಳೆಯಬೇಕೆಂಬ ಒಂದೇ ಕಾರಣಕ್ಕಾಗಿ ಕಾನೂನು ವಿರೋಧಿ ಕೃತ್ಯಗಳನ್ನೂ ಮಾಡಿಸುತ್ತದೆ. ಮಾನವೀಯ ಗುಣಗಳು ಕಣ್ಮರೆಯಾಗುವಂತೆ ಮಾಡುತ್ತದೆ. ಅಂತಿಮವಾಗಿ ನಮ್ಮ ಜೀವನಕ್ಕೆ ದೊಡ್ಡ ಪುಲ್ಸ್ ಸ್ಟಾಪ್ ಇಟ್ಟು, ಅತಂತ್ರ ಬದುಕನ್ನು  ನಿರ್ಮಾಣ ಮಾಡಿಸುತ್ತದೆ, ಆದ್ದರಿಂದ ನಮ್ಮಲ್ಲಿನ ದುರಾಭ್ಯಾಸಗಳಿಗೆ ಬ್ರೇಕ್ ಹಾಕೋಣ, ಇಲ್ಲದೇ ಹೋದರೆ ಅಪಘಾತವಾಗುವ ಸಾಧ್ಯತೆ ದಟ್ಟವಾಗಿದೆ.    

ಭಾನುವಾರ, ಫೆಬ್ರವರಿ 7, 2021

ಜೀವನವೆಂಬ ಸಮಸ್ಯೆಗಳ ಸಾಗರ..

👉ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ                                             ಇತ್ತಿಚೀಗೆ ನಾನು ಬೆಂಗಳೂರಿನ ಆಧ್ಯಾತ್ಮಿಕ ಕೇಂದ್ರವೊಂದಕ್ಕೆ ಹೋಗಿದ್ದೆ. ಅಲ್ಲಿ ಬರೆದಿದ್ದ ಕೆಲ ಸಾಲುಗಳು ನನ್ನ ಗಮನ ತುಂಬಾ ಸೆಳೆಯಿತು ಹಾಗೂ ಜೀವನದ ಒಳಾರ್ಥವನ್ನು ವಿವರಿಸುವಂತಿತ್ತು. ಅದರಲ್ಲೂ ನನ್ನನ್ನು ತುಂಬಾ ಆಕರ್ಷಿಸಿದ ವಾಕ್ಯ ಎಂದರೆ “ ಚಿತೆ ಸತ್ತಿರುವ ವ್ಯಕ್ತಿಯನ್ನು ಸುಟ್ಟರೆ, ಚಿಂತೆ ಬದುಕಿರುವ ವ್ಯಕ್ತಿಯನ್ನು ಸುಡುತ್ತದೆ” ಎಂದು.

ಇಂದು ಪ್ರತಿಯೊಬ್ಬರು, ಪ್ರತಿಕ್ಷಣವು ಒಂದಲ್ಲಾ ಒಂದು ಸಮಸ್ಯೆಯ ಬಗ್ಗೆ ಆಲೋಚಿಸುತ್ತಿರುತ್ತೇವೆ. ತಿಂಡಿ, ಊಟ ಮಾಡಿರದ ದಿನಗಳು ಸಿಗಬಹುದೇನೋ, ಆದರೆ ಸಮಸ್ಯೆಗಳ ಬಗ್ಗೆ ಆಲೋಚಿಸದೇ ಇರದ ದಿನಗಳು ಸಿಗಲಾರವು. ಅದೆಷ್ಟರ ಮಟ್ಟಿಗೆ ಎಂದರೆ ನಮ್ಮ ಜೀವನದ ಬಹುಪಾಲು ಸಮಯ ಸಮಸ್ಯೆಗಳ ಬಗ್ಗೆ ಆಲೋಚಿಸುವುದರಲ್ಲೇ ಕಳೆದು ಹೋಗಿರುತ್ತದೆ. ಸಮಸ್ಯೆಗಳ ಬಗ್ಗೆ ಆಲೋಚಿಸಿ, ಆಲೋಚಿಸಿ ಅದೆಷ್ಟು ದಿನ ನಿದ್ದೆ ಇಲ್ಲದೇ ಕಳೆದಿದ್ದೇವೋ, ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ. 

ಒಬ್ಬಂಟಿಯಾಗಿ ಕೂತು ಸಮಸ್ಯೆಗಳ ಬಗ್ಗೆ ಚಿಂತಿಸುತ್ತ ಅದೆಷ್ಟೋ ಸಲ ಕಣ್ಣೀರಾಕಿರುತ್ತೇವೆ, ದೇವರಿಗೆ ಕರುಣೆಯೇ ಇಲ್ಲ, ಎಲ್ಲಾ ಸಮಸ್ಯೆಗಳನ್ನು ನನಗೊಬ್ಬನಿಗೆ ನೀಡಿದ್ದಾನೆ ಎಂದು ಸಾಕಷ್ಟು ಬಾರಿ ದೇವರನ್ನೇ ಬೈಯ್ದುಕೊಂಡಿರುತ್ತೇವೆ. ನನ್ನ ಹಣೆಬರಹ ಸರಿಯಿಲ್ಲ ಎಂದು ವಿಧಿ ನಿಯಮಕ್ಕೆ ಶಾಪ ಹಾಕಿರುತ್ತೇವೆ. ಸಮಸ್ಯೆಗಳ ಆಲೋಚನೆಯಲ್ಲಿ ಮುಳುಗಿ ಹೋಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡನ್ನು ಹದೆಗೆಡಿಸಿಕೊಳ್ಳುತ್ತೇವೆ. ಎಷ್ಟೋ ಬಾರಿ ಸಂತೋಷ ಪಡುವ ಕ್ಷಣಗಳು ಸಿಕ್ಕರೂ, ಅದನ್ನು ಮರೆತು ಮತ್ತೆ ಸಮಸ್ಯೆಗಳ ಬಗ್ಗೆ ಚಿಂತಿಸುತ್ತ ಕಳೆದ ದಿನಗಳು ಎಲ್ಲರ ಜೀವನದಲ್ಲೂ ಹತ್ತಾರು ಪುಟಗಳಷ್ಟಿದೆ, ಅಷ್ಟರ ಮಟ್ಟಿಗೆ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ.

ಸಮಸ್ಯೆ ಎಂಬ ಈ ಮೂರಕ್ಷರದ ಪದ ಇದೆಯಲ್ಲ, ಅದು ನಮ್ಮ ಜೀವನದ ಚಿತ್ರಣವನ್ನೇ ಅದಲು ಬದಲು ಮಾಡಿ ಬಿಡುತ್ತದೆ. ಇನ್ನೇನು ನನ್ನ ಜೀವನ ಬಹಳ ಸುಂದರ, ಖುಷಿಯಿಂದ ಸಾಗುತ್ತಿದೆ, ನನಗೆ ಯಾವುದೇ ಕೊರತೆ ಇಲ್ಲ ಎಂದು ಭಾವಿಸುತ್ತಿರುವಾಗಲೇ ಧಿಡೀರ್ ಎಂದು ಯಾವುದೋ ಒಂದು ರೂಪದಲ್ಲಿ ಬಂದರೆಗುವ ಸಮಸ್ಯೆ ನಮ್ಮ ಜೀವನಕ್ಕೆ ಪುಲ್ ಸ್ಟಾಪ್ ಇಟ್ಟು ಬಿಡುತ್ತದೆ. ಹಾಗೆ ನೋಡಿದರೆ ಪ್ರತಿಯೊಬ್ಬರು ಒಂದಲ್ಲಾ ಒಂದು ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲೇ ಬೇಕು ಎಂಬ ಕಲ್ಪನೆಯ ಗೋಪುರವನ್ನು ಸೃಷ್ಟಿಸಿಕೊಂಡಿರುತ್ತಾರೆ. ಆದರೆ ಜೀವನದಲ್ಲಿ ಬರುವ ಹಲವು ವಿಧವಾದ ಸಮಸ್ಯೆಗಳು ಗುರಿ ತಲುಪದಿರಲು ಹಾಗೂ ಬದಲಾಯಿಸಲು ಕಾರಣವಾಗುತ್ತದೆ. ಒಂದರ್ಥದಲ್ಲಿ ಗುರಿ ತಲುಪದಿರಲು ಸಮಸ್ಯೆ ಜೊತೆಗೆ ನಾವು ಕಾರಣರಾಗಿರುತ್ತೇವೆ. 

ವಾಸ್ತವವೆಂದರೆ ಸಮಸ್ಯೆಗಳು ಬಂದಾಗ ಅದರ ಬಗ್ಗೆ ಆಲೋಚಿಸಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವ ಜೊತೆಗೆ ಸಮಯ ವ್ಯರ್ಥ ಮಾಡುವ ಜನರೇ ಹೆಚ್ಚು ಸಿಗುತ್ತಾರೆ ಹೊರತು ಸಮಸ್ಯೆ ಬಗೆಹರಿಸಲು ಪರಿಹಾರವನ್ನು ಯಾರು ಹುಡುಕುವುದೇ ಇಲ್ಲ. ಸಮಸ್ಯೆ ಬಗ್ಗೆ ಆಲೋಚಿಸುವ ಬದಲು ಅದಕ್ಕೆ ಪರಿಹಾರವನ್ನು ಹುಡಕಲು ಪ್ರಯತ್ನಿಸಿದರೆ ನಮ್ಮ ಜೀವನದಲ್ಲಿ ಬರುವ ಬಹುಪಾಲು ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಸಣ್ಣ ಪರಿಜ್ಞಾನವನ್ನು ಮರೆತು ಬಿಡುತ್ತೇವೆ.

ವಿಶ್ವವಿದ್ಯಾಲಯವೊಂದರಲ್ಲಿ ಪ್ರಮುಖ ಸ್ವಾಮೀಜಿಯೊಬ್ಬರ ಭಾಷಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರಣ ಬಹುತೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ಹಾಗೂ ಆತ್ಮಸ್ಥೈರ್ಯ ಹೊಂದಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಧೈರ್ಯ ತುಂಬಿ, ಅವರ ಗುರಿಯತ್ತ ತಲುಪಲು ಮಾರ್ಗದರ್ಶನ ಮಾಡುತ್ತಾರೆ ಎಂಬ ಆಲೋಚನೆಯಿಂದ.

ಸ್ವಾಮೀಜಿಯವರ 2 ಗಂಟೆಯ ಭಾಷಣ ಮುಕ್ತಾಯವಾದ ಮೇಲೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳಿಗೆ ಅವಕಾಶ ಕಲ್ಪಿಸಲಾಯಿತು. ಆಗ ಒಬ್ಬ ವಿದ್ಯಾರ್ಥಿ ಎದ್ದುನಿಂತು ಸ್ವಾಮೀಜಿ, ನೀವು ಜೀವನದಲ್ಲಿ ಎಂದಾದರೂ ಕಷ್ಟಗಳೇ ಇಲ್ಲದಿರುವ ವ್ಯಕ್ತಿಯನ್ನು ನೋಡಿದ್ದೀರಾ, ನಾನು ಅಂತಹ ವ್ಯಕ್ತಿಯನ್ನು ನೋಡಬೇಕು ಎಂದು ಪ್ರಶ್ನೆ ಹಾಕಿದ. ಅದಕ್ಕೆ ಸ್ವಾಮೀಜಿ ಉತ್ತರಿಸುತ್ತ ಹೌದು ಎಂದರು, ಆಗ ಆ ವಿದ್ಯಾರ್ಥಿ ಯಾರು ಸ್ವಾಮೀಜಿ ಆ ವ್ಯಕ್ತಿ ಎಂದ, ಆಗ ಸ್ವಾಮೀಜಿ ಕಳೆದು ಎರಡು ಗಂಟೆಗಳಿಂದ ನಿನ್ನೆದೆರುಗೆ ಕೂತಿರುವ ನಾನೇ ಆ ವ್ಯಕ್ತಿ ಎಂದರು. ಎಲ್ಲರಿಗೂ ಆಶ್ಚರ್ಯ ಸ್ವಾಮೀಜಿಗಳಿಗೆ ಯಾವುದೇ ಕಷ್ಟಗಳಿಲ್ಲವೇ ಎಂದು ?  

ಸ್ವಾಮೀಜಿ ತಮ್ಮ ಮಾತು ಮುಂದುವರೆಸುತ್ತಾ ಹೇಳಿದರು, ಕಷ್ಟಗಳಿಲ್ಲದ ವ್ಯಕ್ತಿಗಳನ್ನು ಈ ಭೂಲೋಕದಲ್ಲಿ ನೀನು ಎಲ್ಲೂ ಹುಡುಕಲು ಸಾಧ್ಯವಿಲ್ಲ. ನೀನು ಹುಡುಕ ಬೇಕಾದದ್ದು ಕಷ್ಟಗಳಿಲ್ಲದ ವ್ಯಕ್ತಿಗಳನ್ನಲ್ಲ ಬದಲಾಗಿ ಅದೆಷ್ಟೇ ಕಷ್ಟಗಳಿದ್ದರೂ ಆತ್ಮಸ್ಥೈರ್ಯ, ನಂಬಿಕೆ ಕಳೆದುಕೊಳ್ಳದೇ, ಧೈರ್ಯವಾಗಿ ಕಷ್ಟಗಳನ್ನು ಎದುರಿಸುತ್ತ ಜೀವನವನ್ನು ಸಮತೋಲನವಾಗಿ ಆಶಾವಾದದಿಂದ ಸಾಗಿಸುತ್ತಿರುವ ವ್ಯಕ್ತಿಯನ್ನು ಹುಡುಕಿ ಅವರಿಂದ ಮಾರ್ಗದರ್ಶನ ಪಡೆ ಆಗ ನಿನ್ನ ಜೀವನಕ್ಕೆ ಅರ್ಥ ಸಿಗುತ್ತದೆ ಎಂದರು.

ಎಷ್ಟೋ ಬಾರಿ ನಾವು ಪ್ರಪಂಚದಲ್ಲಿರುವ ಕಷ್ಟಗಳೆಲ್ಲಾ ನಮಗೆ ಬಂದಿದೆ ಎಂದು ಸ್ವತಃಹ ಭಾವಿಸಿಕೊಳ್ಳುತ್ತೇವೆ, ಅದೇ ನಿಜ ಎಂದು ಬಲವಾಗಿ ನಂಬುತ್ತೇವೆ. ಆದರೆ ಪ್ರಪಂಚದ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಆರ್ಥಿಕ (ಹಣಕಾಸು), ಕೌಟುಂಬಿಕ, ಶೈಕ್ಷಣಿಕ, ವೃತ್ತಿ, ಆರೋಗ್ಯ, ಸಾಮಾಜಿಕ, ವ್ಯಾಪಾರ, ಉದ್ಯೋಗ ಸೇರಿದಂತೆ ಮತ್ತಿತರ ವಿಚಾರಗಳಿಗೆ ಸಂಬಂಧಪಟ್ಟಂತೆ ಸಹಜವಾಗಿಯೇ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ, ಈ ಸಮಸ್ಯೆಗಳಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅದು ವಿಧಿ ನಿಯಮ. 

ಆದರೆ ನಾವು ಮಾಡಬೇಕಾದದ್ದು ಮಾತ್ರ ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೂ ಎಲ್ಲೋ, ಯಾರಿಂದಲೋ ಪರಿಹಾರ ಇದ್ದೇ ಇರುತ್ತದೆ ಎಂಬ ನಂಬಿಕೆ ಎಂದು ಕಳೆದುಕೊಳ್ಳಬಾರದಷ್ಟೇ. 

ಶ್ರೀರಾಮನು ತನ್ನ ತಂದೆ ದಶರಥ ರಾಜನ ನಂತರ ಅಯೋಧ್ಯೆಯ ರಾಜನಾಗುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ದಶರಥ ಕೈಕೆಗೆ ಕೊಟ್ಟ ಮಾತಿನ ಕಾರಣದಿಂದ ಶ್ರೀರಾಮನ ಬದಲಾಗಿ ಭರತನನ್ನು ಅಯೋಧ್ಯೆಯ ರಾಜನಾಗಿ ಮಾಡಲಾಗುತ್ತದೆ. ಶ್ರೀರಾಮನು ತನ್ನ ತಂದೆ ಕೊಟ್ಟ ಮಾತನ್ನು ಉಳಿಸಲು 14 ವರ್ಷಗಳ ಕಾಲ ವನವಾಸ ಮಾಡಬೇಕಾಗುತ್ತದೆ. ರಾವಣ ಸೀತೆಯನ್ನು ಅಪಹರಣ ಮಾಡಿಕೊಂಡು ಹೋದಾಗ ಶ್ರೀರಾಮ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ತನ್ನ ಮಕ್ಕಳಾದ ಲವ-ಕುಶರ ಜೊತೆ ಯುದ್ದ ಮಾಡಬೇಕಾದ ಪ್ರಸಂಗವು ರಾಮನಿಗೆ ಬರುತ್ತದೆ. 

ರಾಮ ಹತ್ತಾರು ಕಷ್ಟಗಳನ್ನೆಲ್ಲಾ ಎದುರಿಸಿದ್ದಕ್ಕೆ ಇಂದು ಭಾರತ ದೇಶಾದ್ಯಂತ ವರ್ಷಕ್ಕೊಮ್ಮೆ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ದೇಶದ ತುಂಬಾ ಲಕ್ಷಾಂತರ ಶ್ರೀರಾಮನ ದೇಗುಲಗಳು ನಿರ್ಮಾಣವಾಗಿವೆ. ಅಲ್ಲಿ ಪ್ರತಿದಿನವು ರಾಮನಿಗೆ ಪೂಜೆ ನಡೆಯುತ್ತದೆ. ಒಮ್ಮೆ ಏನಾದರೂ ಶ್ರೀರಾಮ ಭರತನಿಗೂ ಮುನ್ನ ಅಯೋಧ್ಯೆಯ ರಾಜನಾಗಿದ್ದರೆ ಶ್ರೀ ರಾಮ 14 ವರ್ಷಗಳ ಕಾಲ ವನವಾಸ ಹೋಗುವ ಸ್ಥಿತಿ ಬರುತ್ತಿರಲಿಲ್ಲ. ವಾಲ್ಮೀಕಿ ಮಹರ್ಷಿಗಳು ರಾಮಾಯಣವು ಬರೆಯುವ ಸಂದರ್ಭವು ಸೃಷ್ಟಿಯಾಗುತ್ತಿರಲಿಲ್ಲ. ಅದರರ್ಥ ಕಷ್ಟಗಳನ್ನು ಎದುರಿಸಿ ಮುಂದೆ ಸಾಗಿದಾಗ ಮಾತ್ರ ಒಳ್ಳೆಯ ದಿನಗಳು ಸಿಗುತ್ತವೆ. ಕಷ್ಟಗಳೇ ನಮಗೆ ಬೇಡ ಎಂದು ಹೇಳುವವರು ದೊಡ್ಡ ಮಟ್ಟದ ಸಾಧನೆಯನ್ನು ಮಾಡಲು ಸಾಧ್ಯವೇ ಇಲ್ಲ ಎಂಬುವುದು ವಾಸ್ತವ.

ಶ್ರೀರಾಮ ಕಷ್ಟಗಳಲ್ಲಿ ಬೆಳೆದು ಬಂದಿದ್ದಕ್ಕೆ ಇಂದು, ಎಂದೆಂದೂ ಶಾಶ್ವತವಾಗಿರುತ್ತಾನೆ, ಶ್ರೀರಾಮನಿಗೆ ಕಷ್ಟಗಳೇ ಬರದಿದ್ದರೆ ಇತರೆ ಸಾಮಾನ್ಯ ರಾಜನಂತೆ ಅವರು ಒಬ್ಬರಾಗುತ್ತಿದ್ದರು ಅಷ್ಟೇ.

ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರಂತೆ, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳೇ ಬಂದಿಲ್ಲ ಎಂದರೆ ನಾವು ಹೋಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ ಎಂದು. ಕಷ್ಟಗಳೇ ನಮ್ಮ ಜೀವನದಲ್ಲಿ ಬಂದಿಲ್ಲ ಎಂದರೆ ಸಾಧನೆ ಮಾಡಬೇಕೆಂಬ ಗುರಿ ನಮ್ಮಲ್ಲಿ ಇಲ್ಲ ಎಂದು ಅರ್ಥ. ಸಾಧನೆ ಮಾಡಬೇಕೆಂಬ ಬಲವಾದ ಇಚ್ಛೆ ಇದ್ದವರಿಗೆ ಮಾತ್ರ ಕಷ್ಟಗಳು ಹೆಚ್ಚಾಗಿಯೇ ಬರುತ್ತದೆ. ಕಷ್ಟಗಳು ನಮಗೆ ಹೆಚ್ಚಿದ್ದರೆ ನಾವು ಏನೋ ಒಂದು ಸಾಧನೆ ಮಾಡಲು ಹೊರಟಿದ್ದೇವೆಂದು ಅರ್ಥ, ಸೋ ಕಷ್ಟಗಳು ನಮಗೆ ಹೆಚ್ಚಿದ್ದರೆ ಖುಷಿ ಪಡಬೇಕು ಹೊರತು ದುಖಃವನ್ನಲ್ಲ ಎಂದು ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದರಂತೆ.

ಮೊನ್ನೆ ವಾಟ್ಸಾಪ್ ನಲ್ಲಿ ವಿಡಿಯೋ ಒಂದು ಬಂದಿತ್ತು, ಒಬ್ಬ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ. ಅದೇ ರಸ್ತೆಯಲ್ಲಿ ಮತ್ತೊಬ್ಬ ವ್ಯಕ್ತಿ ಒಳ್ಳೆಯ ಬ್ರಾಂಡೆಡ್, ಹೆಚ್ಚು ಬೆಲೆ ಬಾಳುವ ಶೂ ಧರಿಸಿ ಹೋಗುತ್ತಿರುತ್ತಾನೆ. ಇದನ್ನು ನೋಡಿದ ಈತ ತನ್ನ ಕಾಲನ್ನು ನೋಡಿಕೊಳ್ಳುತ್ತಾನೆ. ಹಳೆಯ, ಕಿತ್ತು ಹೋದ ಚಪ್ಪಲಿ ಧರಿಸಿರುತ್ತಾನೆ. ಆಗ ಈತ ತನ್ನ ಮನಸ್ಸಲ್ಲಿ ಅಂದು ಕೊಳ್ಳುತ್ತಾನೆ, ದೇವರಿಗೆ ನನ್ನ ಮೇಲೆ ಕೋಪವೇಕೆ, ಕಿತ್ತುಹೋದ ಚಪ್ಪಲಿಯನ್ನು ಹಾಕಿಕೊಳ್ಳುವ ದುಸ್ಥಿತಿ, ನನಗೇಕೆ ಕೊಟ್ಟ ಎಂದು ಕೋಪಿಸಿಕೊಳ್ಳುತ್ತಾನೆ. ಸ್ವಲ್ಪ ಮುಂದೆ ಸಾಗಿದ ನಂತರ ಮತ್ತೊಬ್ಬ ವ್ಯಕ್ತಿಗೆ ಎರಡು ಕಾಲುಗಳು ಇರುವುದಿಲ್ಲ, ತುಂಬಾ ಕಷ್ಟ ಬಿದ್ದು ನಡೆದುಕೊಂಡು ಹೋಗುತ್ತಿರುತ್ತಾನೆ. ಆಗ ಈತ ತನ್ನ ಕಾಲನ್ನು ನೋಡಿಕೊಳ್ಳುತ್ತಾನೆ. ಆತನಿಗಿಂತ ನಾನೇ ಪರವಾಗಿಲ್ಲ, ನನಗೆ ಹಾಕಿಕೊಳ್ಳಲು ದುಬಾರಿ ಬೆಲೆಯ ಶೂಗಳು ಇಲ್ಲದಿದ್ದರು, ಕನಿಷ್ಠ ಪಕ್ಷ ಚಪ್ಪಲಿ ಹಾಕಿಕೊಳ್ಳಲಾದರೂ ಕಾಲುಗಳಿವೆ. ಆದರೆ ಆತÀ ಚಪ್ಪಲಿಗಳನ್ನು ಹಾಕಿಕೊಳ್ಳಲು ಕೂಡ ಸಾಧ್ಯವಿಲ್ಲವಲ್ಲ ಪಾಪ ಹೇಗೆ ಜೀವನ ಮಾಡುವುದು ಎಂದು ಜೀವನದ ಸತ್ಯಾಂಶವನ್ನು ಅರ್ಥ ಮಾಡಿಕೊಳ್ಳುತ್ತಾನೆ.

ಎಲ್ಲ ಕಷ್ಟಗಳು ನನಗೊಬ್ಬನಿಗೆ ಇದೆ ಎಂದು ಆಲೋಚಿಸುವುದೇ ಮಹಾನ್ ದೊಡ್ಡ ತಪ್ಪು, ಮೂರ್ಖತನ. ನಮಗಿಂತ, ನಾವು ಊಹೆ ಮಾಡಲು ಅಸಾಧ್ಯವಾದ ಅದೆಷ್ಟೋ ಕಷ್ಟಗಳನ್ನು ಲಕ್ಷಾಂತರ ಜನರು ಎದುರಿಸುತ್ತಿದ್ದಾರೆ. ಆದರೆ ಅವರೆಂದೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ, ಜೀವನದಲ್ಲಿ ಜಿಗುಪ್ಸೆ ಕಾಣುವುದಿಲ್ಲ. ಕಾರಣ ಇಂದಲ್ಲಾ ನಾಳೆ ಕಷ್ಟಗಳು ಬಗೆಹರಿಯುತ್ತದೆ, ಕಷ್ಟಗಳ ನಂತರ ಸುಂದರವಾದ ಜೀವನ ನಮಗೆ ಸಿಕ್ಕೆ ಸಿಗುತ್ತದೆ ಎಂಬ ಆಶಾವಾದದಿಂದ ಜೀವನ ಸಾಗಿಸುತ್ತಾರೆ ಹೊರತು ಕಷ್ಟಗಳ ಬಗ್ಗೆ ಆಲೋಚಿಸುತ್ತ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದಿಲ್ಲ. ಕಷ್ಟಗಳ ಬಗ್ಗೆ ಚಿಂತಿಸುತ್ತ ಈ ಅಲ್ಪ ಸಮಯದ ಮಾನವ ಜೀವನವನ್ನು ಏಕೆ ವ್ಯರ್ಥ ಮಾಡಿಕೊಳ್ಳಬೇಕು.

ಅಷ್ಟೇಕೆ ಭಗವಂತನನ್ನೇ ಈ ಕಷ್ಟಗಳು ಬಿಡುವುದಿಲ್ಲವೆಂದರೆ, ಇನ್ನು ಸಾಮಾನ್ಯ ಜನರು ನಾವು ಯಾವ ಲೆಕ್ಕ.. ಆತ್ಮಸ್ಥೈರ್ಯ, ಸಾಧಿಸುವ ಛಲವಿದ್ದರೆ ಸಮಸ್ಯೆಗಳು ಬಂದರೆನಂತೆ, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂಗ್ಲೀಷ್ ನಲ್ಲಿ ಒಂದು ಮಾತಿದೆ, Every problem is a gift, without problems we would not grow, ಅಂದರೆ ನಮ್ಮ ಜೀವನದಲ್ಲಿ ಬರುವ ಪ್ರತಿ ಸಮಸ್ಯೆಯು ನಮಗೆ ಉಡುಗೊರೆ ಇದ್ದಂಗೆ, ಸಮಸ್ಯೆಗಳೇ ಇಲ್ಲದೇ ಹೋದರೆ ನಾವು ಸಾಧಿಸಲು, ಬೆಳೆಯಲು ಸಾಧ್ಯವೇ ಇಲ್ಲ, ಸೋ ಲೆಟ್ಸ್ ವೆಲ್‍ಕಮ್ ಪ್ರಾಬ್ಲಮ್ಸ್..

ಭಾನುವಾರ, ನವೆಂಬರ್ 15, 2020

ನಮ್ದು ನೆಮ್ಮದಿ ಇಲ್ಲದ ಜೀವನ..

⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇತ್ತಿಚೀಗೆ ಬೆಂಗಳೂರು ನಗರದಲ್ಲಿರುವ ವೃದ್ದಾಶ್ರಮವೊಂದಕ್ಕೆ ಹೋಗಿದ್ದೆ, ಕಾರಣ ನನ್ನ ಸ್ನೇಹಿತನೊಬ್ಬ ಅಲ್ಲಿ ವ್ಯವಸ್ಥಾಪಕನಾಗಿದ್ದ. ಆತನನ್ನು ಮಾತನಾಡಿಸಿಕೊಂಡು, ಆ ವೃದ್ದಾಶ್ರಮ ನೋಡಿಕೊಂಡು ಬರಲು ಹೋಗಿದ್ದೆ. ಅಲ್ಲಿ 50ಕ್ಕೂ ಹೆಚ್ಚು ಜನ ವಯಸ್ಸಾದವರಿದ್ದರು. ಗಮನಿಸಬೇಕಾದ ಅಂಶವೆಂದರೆ ಆ ವೃದ್ದಾಶ್ರಮದಲ್ಲಿದ್ದ ಎಲ್ಲರಿಗೂ ಮಕ್ಕಳಿದ್ದರು, ಆದರೂ ಆ ಮಕ್ಕಳು ಇವರನ್ನು ಪೋಷಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳದ ಕಾರಣ ವೃದ್ದಾಶ್ರಮ ಸೇರಿದ್ದರು. 

ಇವರ ಕೆಲ ಮಕ್ಕಳಂತು ಉನ್ನತ ವ್ಯಾಸಾಂಗ ಮಾಡಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಒಳ್ಳೆಯ ವೇತನವು ಸಿಗುತ್ತಿದೆ. ಕುಟುಂಬದವರೆಲ್ಲರೂ ಇದ್ದರೂ ಯಾರು ಇಲ್ಲದಂತೆ ಅನಾಥರಾಗಿ ಜೀವನ ಸಾಗಿಸಬೇಕಾದ ದುಸ್ಥಿತಿ ವೃದ್ದಾಶ್ರಮದಲ್ಲಿದ್ದ ಬಹುತೇಕರದ್ದಾಗಿತ್ತು.

ಅಲ್ಲಿದ್ದ ಮೈಸೂರು ಮೂಲದ ರಾಮಣ್ಣ ಎಂಬ ಹಿರಿಯರೊಬ್ಬರನ್ನು ಮಾತನಾಡಿಸಿದರೆ, ಅವರು ಹೇಳುತ್ತಾರೆ, ನಾನು ಸುಮಾರು 32 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ, ನಿವೃತ್ತನಾಗಿದ್ದೆ. ನನ್ನ ಒಬ್ಬನೇ ಮಗನನ್ನು ಕಷ್ಟ ಬಿದ್ದು ಇಂಜಿನಿಯರಿಂಗ್ ಪದವಿ ಓದಿಸಿ, ಸ್ವಂತ ಮನೆ ಕಟ್ಟಿಕೊಂಡಿದ್ದೆ. ಮಗನಿಗೆ ಮದುವೆಯಾಗಿ 5 ವರ್ಷಗಳವರೆಗೂ ಅವರ ಜೊತೆಯಲ್ಲೇ ಇದ್ದೆ. ಆ ನಂತರ ಅವರು ನನಗೆ ವಯಸ್ಸಾಗಿದೆ, ಹಾರೈಕೆ ಮಾಡುವುದು ಕಷ್ಟ ಹಾಗೂ ಅವರಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ನನ್ನ ಮಗ ಈ ವೃದ್ದಾಶ್ರಮಕ್ಕೆ ತಂದು ಸೇರಿಸಿದ್ದಾನೆ. 6 ತಿಂಗಳಿಗೋ, ವರ್ಷಕ್ಕೊಮ್ಮೆಯೋ ಮಾತ್ರ ಬರುತ್ತಾನೆ ಎಂದು ತಮ್ಮ ನೋವು ತೊಡಿಕೊಂಡು, ಕಣ್ಣಿರಾಕಿದರು.

ಯಾರಾದರೂ ನಮ್ಮ ಬಳಿಗೆ ಬಂದು ನೀವು ಎಷ್ಟು ವರ್ಷ ಬದುಕುತ್ತೀರಾ ಎಂದು ಪ್ರಶ್ನೆ ಹಾಕಿದರೆ, ನಾವು ಕೊಡುವ ಉತ್ತರ ಎಲ್ಲಿಯವರೆಗೂ ಭಗವಂತನ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ಎಂಬ ಮರು ಉತ್ತರ ನೀಡುತ್ತೇವೆ. ಕಾರಣ ಎಲ್ಲರಿಗೂ ಅವರವರ ಜನ್ಮದಿನಾಂಕ ಗೊತ್ತಿದಿಯೇ ಹೊರತು ನಿಧನದ ದಿನಾಂಕ ಯಾರಿಗೂ ಗೊತ್ತಿರುವುದಿಲ್ಲ.

ಇಂದು ಬದುಕಿರುವವರು ನಾಳೆಗೆ ಏನೂ ಬೇಕಾದರೂ ಆಗಬಹುದು, ಯಾರಿಗೆ ಗೊತ್ತು. ನಾವು ಯಾವುದಾದರೂ ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಲು ಹೋದರೆ ಮೊದಲು ನೋಡುವುದು ಅದರ ಬೆಲೆ ಮತ್ತು ಎಷ್ಟು ವರ್ಷ ಗ್ಯಾರಂಟಿ ಇದೆ ಎಂದು,  ವಿಪರ್ಯಾಸವೆಂದರೆ ನಮಗೇನೆ ಯಾವುದೇ ಗ್ಯಾರಂಟಿ ಇಲ್ಲ ಹಾಗೂ ಅತ್ರಂತ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅಷ್ಟರ ಮಟ್ಟಿಗೆ ಗ್ಯಾರಂಟಿ ಮತ್ತು ವ್ಯಾರಂಟಿ ಎರಡು ಇಲ್ಲದ ಜೀವನ ಮನುಷ್ಯನ್ನದ್ದು ಮಾತ್ರ.

ಹಲವು ವರ್ಷಗಳ ಹಿಂದೆ ಕೆಲ ಗ್ರಾಮೀಣ ಭಾಗಗಳಲ್ಲಿ 100 ವರ್ಷ ದಾಟಿದ ಅಜ್ಜ, ಅಜ್ಜಿಯರನ್ನು ಕಾಣುತ್ತಿದ್ದೇವು. ಕೆಲವರಂತು ನಮ್ಮ ಅಜ್ಜನಿಗೆ, ಅಜ್ಜಿಗೆ 105 ವರ್ಷ, 110 ವರ್ಷ ಎಂದು ಖುಷಿಯಿಂದ ಹೇಳುತ್ತಿದ್ದನ್ನು ಕೇಳಿದ್ದೇವೆ. ಪತ್ರಿಕೆಗಳಲ್ಲೂ ವರದಿಗಳು ಬರುತ್ತಿದ್ದವು. ಹಾಗೆಯೇ ತುಂಬಾ ಜನ ಶತಕದ ಸಮೀಪದವರೆಗೂ ಬದುಕಿ ಔಟ್ ಹಾಕುತ್ತಿದ್ದರು. ಆದರೂ 80, 90 ವರ್ಷವಾದರೂ ಸುಖಿ ಜೀವನ ಸಾಗಿಸುತ್ತಿದ್ದರು.  

ಆದರೆ ಈಗ 60 ರಿಂದ 65 ವರ್ಷ ಬದುಕುವುದೇ ದೊಡ್ಡ ಸಾಧನೆ ಎಂಬಂತಾಗಿದೆ. ಇಂದಿನ ಬಹುತೇಕರ ಗುರಿ 60 ವರ್ಷ ಯಾವುದೇ ಸಮಸ್ಯೆ ಇರದೇ ಬದುಕುವುದು.  ಅಷ್ಟರ ಮಟ್ಟಿಗೆ ನಮ್ಮ ಜೀವನಗಳು ಅಭದ್ರತೆಯಿಂದ ಕೂಡಿದೆ ಹಾಗೂ ತುಂಬಾ ಶಾರ್ಟ್ ಆಗಿದೆ. ಆದರೂ ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ನಾವು ಇನ್ನು ಹೋಗಿಲ್ಲ. 

ನಾವು ಬದುಕುವುದೇ ಕೆಲವೇ ವರ್ಷಗಳಾದರೂ, ನೆಮ್ಮದಿ, ಆತ್ಮ ತೃಪ್ತಿ, ಸಂತೋಷ ಬಹುತೇಕರಿಗೆ ಇಲ್ಲ. ಅಂತಹ ಸಂತೋಷದ ದಿನಗಳನ್ನು ಪಡೆಯಲು ಸಂದರ್ಭ, ಸನ್ನಿವೇಶಗಳನ್ನೇ ಸೃಷ್ಟಿಸಿಕೊಳ್ಳುತ್ತಿಲ್ಲ. ಪ್ರತಿದಿನವೂ ಮನಸ್ತಾಪ, ಕೋಪಗಳಲ್ಲೇ ದಿನಗಳು ಕಳೆಯುತ್ತಿದ್ದೇವೆ. ಕುಟುಂಬದ ಸಂಬಂಧಗಳ ಅನ್ಯೋನ್ಯತೆಗಳ ಬಗ್ಗೆ, ಅದರ ಮಹತ್ವದ ಬಗ್ಗೆ ಅರಿತುಕೊಳ್ಳುವ ಮನಸ್ಸೇ ಮಾಡುತ್ತಿಲ್ಲ ಎಂಬುವುದೇ ದುರ್ದೈವ.

ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯಲ್ಲಿ ತೆಲುಗಿನ ಶತಮಾನಂ ಭವತಿ ಎಂಬ ಚಿತ್ರ ಹಾಕಿದ್ದರು. ಈ ಚಿತ್ರದ ನಟ, ನಟಿಯರು ಶರ್ವಾನಂದ್ ಹಾಗೂ ಅನುಪಮ, ಈ ಚಿತ್ರಕ್ಕೆ  ಸತೀಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಬಹುಪಾಲು ಕುಟುಂಬ ವ್ಯವಸ್ಥೆ ಆಧಾರಿತ ಕಥೆಯನ್ನು ಹೊಂದಿದೆ. ಕುಟುಂಬದ ಸದಸ್ಯರಲ್ಲಿ ಬರುವ ವೈಮನಸ್ಯಗಳು, ಅದರಿಂದಾಗುವ ತೊಂದರೆಗಳು, ಕುಟುಂಬದ ಮಹತ್ವ, ಸಂಬಂಧಿಕರೊಂದಿಗೆ ಹೇಗೆ ಅನ್ಯೋನ್ಯತೆಯಿಂದ ಕೂಡಿರಬೇಕು ಎಂಬುವುದರ ಬಗ್ಗೆ ಸೇರಿದಂತೆ ಒಂದು ಆದರ್ಶ ಕುಟುಂಬದ ಚಿತ್ರಣದ  ಬಗ್ಗೆನೇ ಬೆಳಕು ಚೆಲ್ಲಿದೆ.

2 ಗಂಟೆಗೂ ಹೆಚ್ಚಿನ ಕಾಲದ ಶತಮಾನಂ ಭವತಿ ಚಿತ್ರವು ಕೌಟುಂಬಿಕ ಮಹತ್ವದ ಬಗ್ಗೆ ಹೇಳುತ್ತದೆ. ಇತ್ತಿಚೀಗೆ ಬಿಡುಗಡೆಯಾಗುವ ಲಾಂಗು, ಮಚ್ಚುಗಳ ಚಿತ್ರಗಳಿಗಿಂತ ವಿಭಿನ್ನವಾಗಿ ಕೂಡಿದೆ ಹಾಗೂ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಸಾರುತ್ತದೆ. ಸಣ್ಣ ಸಣ್ಣ ವೈಮನಸ್ಯಗಳಿಂದ ದೂರವಾಗುವ ಸಂಬಂಧಿಕರು ಕೊನೆಗೆ ಜೀವನದ ಒಳಾರ್ಥವನ್ನು ತಿಳಿದುಕೊಂಡು ಕುಟುಂಬದ ಹಿರಿಯರಿಗೆ ಗೌರವ ಕೊಡುತ್ತ, ಪುನಃ ಮತ್ತೆ ಎಲ್ಲರೂ ಒಂದಾಗಿ ಸೇರಿ ಅರ್ಥಪೂರ್ಣ ಜೀವನ ಸಾಗಿಸಬೇಕು ಎಂಬ ಸಂದೇಶವನ್ನು ಈ ಚಿತ್ರ ಸಾರುತ್ತದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.

ಈ ಹಿಂದೆ ಅವಿಭಕ್ತ ಕುಟುಂಬಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವು, ತಾತ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ,  ಮಾವ, ಅಣ್ಣ, ತಮ್ಮ, ತಂಗಿ, ಅಕ್ಕ ಹೀಗೆ ಹಲವು ವಿಧಗಳಿಂದ ಕೂಡಿದ ಸಂಬಂಧಗಳ ಸಂಬಂಧಿಕರ ದೊಡ್ಡ ಸಮಾಗಮ ಅವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯವಾಗಿ ಇರುತ್ತಿತ್ತು. 

ಅವಿಭಕ್ತ ಕುಟುಂಬಗಳಲ್ಲಿ ಸಂಬಂಧಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿತ್ತು. ಏನೇ ಸಮಸ್ಯೆ ಬಂದರೂ, ಒಬ್ಬರಿಗೊಬ್ಬರು ಆಸರೆಯಾಗುತ್ತಿದ್ದರು. ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಅದು ಮನೆ ಕೆಲಸವಾಗಲಿ, ಕೃಷಿ, ಕಚೇರಿ ಏನೇ ಕೆಲಸವಾದರೂ ಎಲ್ಲರೂ ಹಂಚಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಕಷ್ಟಗಳಲ್ಲೂ ಸುಖವನ್ನು ಕಾಣುವ ಮನಸ್ಥಿತಿ ಇತ್ತು.

ಯುಗಾದಿ, ದೀಪಾವಳಿ, ದಸರಾ, ಸಂಕ್ರಾಂತಿ, ಗಣೇಶ ಚತುರ್ಥಿ ಸೇರಿದಂತೆ ಯಾವುದೇ ಹಬ್ಬ ಬಂದರೂ ದೊಡ್ಡವರು, ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದರು. ಅಂದು ಮನೆಗಳು ಮಾತ್ರ ದೊಡ್ಡದಿರುತ್ತಿರಲಿಲ್ಲ ಜೊತೆಗೆ ಮನಸ್ಸು ಕೂಡ ವಿಶಾಲವಾಗಿರುತ್ತಿತ್ತು ಅವಿಭಕ್ತ ಕುಟುಂಬಗಳಲ್ಲಿ. ಮಕ್ಕಳನ್ನು ಕೂಡ ಬಹಳ ಶಿಸ್ತಾಗಿ ಬೆಳೆಸುತ್ತಿದ್ದರು. ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವ ಜನ ವರ್ಗವಿರುತ್ತಿತ್ತು.

ಆದರೆ ಇಂದು ಅವಿಭಕ್ತ ಕುಟುಂಬಗಳನ್ನು ಕಾಣುವುದೇ ಅಪರೂಪ, ಅಲ್ಲೋ, ಇಲ್ಲೋ ಒಂದೆರಡನ್ನು ಕಾಣಬಹುದಷ್ಟೇ. ಇಂದು ಬಹುತೇಕ ವಿಭಕ್ತ ಕುಟುಂಬಗಳೇ, ಗಂಡ, ಹೆಂಡತಿ, ಒಂದಿಬ್ಬರು ಮಕ್ಕಳನ್ನು ಕಾಣಬಹುದಷ್ಟೇ. ಅವಿಭಕ್ತ ಕುಟುಂಬಗಳಲ್ಲಿ ಕಾಣುತ್ತಿದ್ದ ಸಂತೋಷ, ಸಡಗರಗಳನ್ನು ವಿಭಕ್ತ ಕುಟುಂಬಗಳಲ್ಲಿ ಎಲ್ಲಿ ಕಾಣಲು ಸಾಧ್ಯ. 

ಇಂದಿನ ವ್ಯವಸ್ಥೆ ಏಗಿದೆಯೆಂದರೆ ಪ್ರತಿಯೊಬ್ಬರಲ್ಲೂ ಸ್ವಾರ್ಥ, ಅಸೂಹೆ, ದುರಾಸೆ, ಅಹಂಕಾರ ಈ ನಾಲ್ಕು ಗುಣಗಳು ತುಂಬಿ ತುಳುಕುತ್ತಿವೆ. ಎಲ್ಲವೂ ನನಗೆ ಬೇಕು ಎಂಬ ಧೋರಣೆ, ಎಷ್ಟಿದ್ದರು ಸಾಲದು ಎಂಬ ದುರಾಸೆಯಿಂದ ಸ್ವತಃ ಅಣ್ಣ, ತಮ್ಮ, ದೊಡ್ಡಪ್ಪ, ಚಿಕ್ಕಪ್ಪ ಸೇರಿದಂತೆ ಸಂಬಂಧಿಕರನ್ನೇ ದೂರ ಮಾಡಿಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದೇವೆ. 

ಅಣ್ಣನೋ, ತಮ್ಮನೋ ಅಥವಾ ಮತ್ಯಾರೋ ಹತ್ತಿರದವರೆ ಜೀವನದಲ್ಲಿ ಸಾಧನೆ ಮಾಡುತ್ತಿದ್ದಾರೆ, ಬೆಳೆಯುತ್ತಿದ್ದಾರೆ ಎಂದರೆ ಸಹಿಸಲಾರದ ಸ್ಥಿತಿಗೆ ನಮ್ಮ ಮನಸ್ಸು ಬಂದು ನಿಂತಿದೆ. ಅವರು ಬೆಳೆದು ಬಿಟ್ಟರಲ್ಲಾ ಎಂದು ಅಸೂಹೆ ಪಡುವ ಮಟ್ಟಿಗೆ ನಮ್ಮ ಮನಸ್ಸು ಹೋಗುತ್ತದೆ ಎಂದರೆ ನಾವು ಎಂತಹ ಜೀವನ ಮಾಡುತ್ತಿದ್ದೇವೆ ಎಂದು ಅರ್ಥೈಸ ಬೇಕಾಗಿಲ್ಲ.

ಅದರಲ್ಲೂ ಪ್ರತಿಯೊಂದು ಕುಟುಂಬಗಳಲ್ಲೂ ಬರುವ ಆಸ್ತಿ, ಜಮೀನು, ಹಣ ಹಂಚಿಕೆ ವಿಚಾರದ ವೈಮನಸ್ಯಗಳು ಕುಟುಂಬದ ಸಂಬಂಧಿಕರನ್ನು ಶಾಶ್ವತವಾಗಿ ದೂರ ಮಾಡಿ ಬಿಡುತ್ತದೆ. ಎಷ್ಟೋ ಕುಟುಂಬಗಳಲ್ಲಿ ಸ್ವಂತ ಅಣ್ಣ ನಿಧನರಾದರೂ ಸ್ವಂತ ತಮ್ಮ ಶವ ಸಂಸ್ಕಾರಕ್ಕೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಸಂಬಂಧಗಳಲ್ಲಿ ಬಿರುಕು ಮೂಡಿರುತ್ತದೆ. ದೊಡ್ಡಪ್ಪನ ಮಕ್ಕಳನ್ನು ಚಿಕ್ಕಪ್ಪನ ಮಕ್ಕಳು ಮಾತನಾಡುವುದಿಲ್ಲ, ಚಿಕ್ಕಪ್ಪನ ಮಕ್ಕಳನ್ನು ದೊಡ್ಡಪ್ಪನ ಮಕ್ಕಳು ಮಾತನಾಡುವುದಿಲ್ಲ, ಸಂಬಂಧದಲ್ಲಿ ಅಣ್ಣ ತಮ್ಮಂದಿರಾದರೂ ಕನಿಷ್ಟ ಮಾತನಾಡುವ ಅವಕಾಶವನ್ನು ಕಳೆದುಕೊಂಡಿರುತ್ತಾರೆ. ಮದುವೆ ಸೇರಿದಂತೆ ಯಾವುದೇ ಶುಭ ಸಮಾರಂಭಗಳಾದರೂ ಪರಸ್ಪರ ಆಹ್ವಾನಿಸಿಕೊಳ್ಳುವ ಪದ್ದತಿಗಳನ್ನೇ ಕೈ ಬಿಟ್ಟಿರುತ್ತಾರೆ. ನಮ್ಮ ದುರಾಸೆಗಳಿಂದ ರಕ್ತ ಸಂಬಂಧಗಳಿಗೆ ಬೆಲೆ ಕೊಡದ ಪರಿಸ್ಥಿತಿ ನಿರ್ಮಿಸಿಕೊಂಡು ನಮ್ಮ ಸುತ್ತಲೂ ಒಂದು ದೊಡ್ಡ ಗೋಡೆಯನ್ನು ಕಟ್ಟಿಕೊಂಡಿದ್ದೇವೆ.

ಅಷ್ಟೇಕೆ ಆಸ್ತಿ, ಜಮೀನುಗಳ ಹಂಚಿಕೆಯಿಂದ ಶುರುವಾಗುವ ಕಲಹಗಳು ಕೊನೆಗೆ ಕೊಲೆ ಮಾಡುವ ಹಂತಕ್ಕೂ ಹೋದ ನಿದರ್ಶನಗಳು ಸಾವಿರಾರಿವೆ. ಕುಟುಂಬಗಳ ನಡುವೆ ನಡೆಯುವ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ನ್ಯಾಯಾಲಯಗಳಲ್ಲಿ ದಶಕಗಳಿಂದಲೂ ಕೊಳೆಯುತ್ತಿರುವ ಪ್ರಕರಣಗಳು ಹಾಗೂ ಪೊಲೀಸ್ ಠಾಣೆಗಳಲ್ಲಿನ ಎಫ್.ಐ.ಆರ್ ಕಾಫಿಗಳೇ ಸಾಕ್ಷಿ.

ನಮ್ಮಲ್ಲಿಂದು ಸಾಕಷ್ಟು ಅನಾಥಶ್ರಮಗಳು, ವೃದ್ದಾಶ್ರಮಗಳು ತಲೆ ಎತ್ತುತ್ತಿವೆ. ಕಾರಣ ಸ್ವತಃ ತಂದೆ, ತಾಯಿಗಳನ್ನೇ ಬೀದಿ ಪಾಲುವ ಮಾಡುವ ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ. ಜನ್ಮಕೊಟ್ಟು, ವಿದ್ಯಾಬ್ಯಾಸ ಕೊಡಿಸಿ, ಒಳ್ಳೆಯ ವೃತ್ತಿಗೆ ಸೇರಲು ನೆರವಾದ ತಂದೆ, ತಾಯಿಗಳನ್ನೇ ದೂರ ತಳ್ಳುವ ಮಕ್ಕಳು ನಮ್ಮಲ್ಲಿದ್ದಾರೆ. 

ಹೆಂಡತಿ ಮಾತನ್ನು ಕೇಳಿ ಗಂಡನೋ, ಅಥವಾ ಸ್ವಯಂ ನಿರ್ಧಾರದಿಂದ ಆತನೇ ವಯಸ್ಸಾದ ತನ್ನ ತಂದೆ, ತಾಯಿಗಳನ್ನು ವೃದ್ದಾಶ್ರಮಗಳಿಗೆ ಸೇರಿಸಿ ವರ್ಷಕ್ಕೊಮ್ಮೆ ಹೋಗಿ ಅವರ ಕೈಗೆ 500 ರೂ. ಕೊಟ್ಟು ಬಂದರೆ ಜವಾಬ್ದಾರಿ ಮುಗಿದೇ ಹೋಯಿತು ಎಂದುಕೊಳ್ಳುತ್ತೇವೆ. ಆ ಹಿಳಿ ವಯಸ್ಸಿನಲ್ಲಿ ಆ ಹಿರಿ ಜೀವಗಳು ತಮ್ಮ ಮಕ್ಕಳ ಆಸರೆ ಇಲ್ಲದೆ ಎಷ್ಟು ನೊಂದು ಕೊಳ್ಳುತ್ತಾರೋ, ಮಕ್ಕಳಿಗೆ ಹೇಗೆ ಗೊತ್ತಾಗಲು ಸಾಧ್ಯ. ಅವರಿಗೂ ನಾಳೇ ವಯಸ್ಸಾದ ನಂತರ ಅವರ ಮಕ್ಕಳು ಅವರನ್ನು ವೃದ್ದಾಶ್ರಮಗಳಿಗೆ ಸೇರಿಸುವ ಸಂದರ್ಭ ಬಂದಾಗ ಅವರಿಗೆ ತಾವು ಮಾಡಿದ ಮಹಾನ್ ತಪ್ಪಿನ ಬಗ್ಗೆ ಅರಿವಾಗಬಹುದು. 

ನಿಜವೆಂದರೆ ಈ ಜನ್ಮದಲ್ಲಿ ಮಾತ್ರ ಮನುಷ್ಯರಾಗಿ ಹುಟ್ಟಿದ್ದೇವೆ, ಮುಂದಿನ ಜನ್ಮದಲ್ಲಿ ಏನಾಗುತ್ತೇವೋ ಯಾರಿಗೂ ಗೊತ್ತಿಲ್ಲ. ನಮ್ಮ ಕುಟುಂಬದ ಸದಸ್ಯರೊಂದಿಗೆ, ಸಂಬಂಧಿಕರೊಂದಿಗೆ, ಸ್ನೇಹಿತರೊಂದಿಗೆ ವೈಮನಸ್ಯ, ಮನಸ್ತಾಪಗಳನ್ನು ಸೃಷ್ಟಿಸಿಕೊಂಡು ಸಣ್ಣ ಸಣ್ಣ ವಿಚಾರಗಳಿಗೂ ಜಗಳ ಮಾಡಿಕೊಂಡು ಅಮೂಲ್ಯವಾದ ಈ ಜೀವನವನ್ನು ನೆಮ್ಮದಿ ಇಲ್ಲದೇ ಬದುಕುವುದಾದರೂ ಯಾರಿಗೋಸ್ಕರವೆಂದು ಅರ್ಥವಾಗುವುದಿಲ್ಲ ? 

ಸ್ವಾರ್ಥ, ಅಸೂಹೆ, ಅಹಂಕಾರಗಳನ್ನು ಪಕ್ಕಕ್ಕಿಟ್ಟು ಎಲ್ಲರೊಂದಿಗೂ ಅನ್ಯೋನತೆಯಿಂದ ಇದ್ದು, ಸುಖಿ ಜೀವನ ಸಾಗಿಸುವುದು ಲೇಸು. ವಸುದೈವ ಕುಟುಂಬಕಂ ಎಂಬ ಮಾತಿನಂತೆ ನಾವೆಲ್ಲರು ಒಂದು ಎಂಬ ಭಾವನೆ ಬರಬೇಕು. ಕುಟುಂಬದ ಹಿರಿಯರೋ, ಕಿರಿಯರೋ ತಪ್ಪುಗಳು ಮಾಡಿದರೆ ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಬೆಳೆಸಿಕೊಂಡು ಜೀವನ ಸಾಗಿಸದಾಗ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯ.

ಅಷ್ಟಕ್ಕೂ ನೆಮ್ಮದಿ, ಸಂತೋಷ ಇಲ್ಲದೇ ನೂರು ವರ್ಷ ಬದುಕಿದರು  ಪ್ರಯೋಜನವೇನು? ಕೊನೆ ಪಕ್ಷ ಹೇಳಿಕೊಳ್ಳಲು ಒಂದೆರೆಡು ಖುಷಿಯ ನೆನಪುಗಳಾದರೂ ಉಳಿಯಬೇಕಲ್ಲವೇ..

ಭಾನುವಾರ, ಸೆಪ್ಟೆಂಬರ್ 20, 2020

ನಂಗೆ ನಾನೇ ಸ್ಪೂರ್ತಿ..

⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ವಾಮಿ ವಿವೇಕಾನಂದರ ಜಯಂತಿ ಸಲುವಾಗಿ ಆಯೋಜಿಸಿದ್ದ ಶಿಬಿರವೊಂದರಲ್ಲಿ ಭಾಗವಹಿಸಿದ್ದೆ. 20 ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಆ ಶಿಬಿರದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಪ್ರತಿ ಶಿಬಿರಾರ್ಥಿಯನ್ನು ಎಬ್ಬಿಸಿ, ನಿಮ್ಮ ಜೀವನಕ್ಕೆ ಸ್ಪೂರ್ತಿ ಯಾರೆಂದು ಪ್ರಶ್ನೆ ಹಾಕಿದರು. ಬಹಳಷ್ಟು ಶಿಬಿರಾರ್ಥಿಗಳು ನಮಗೆ ಸ್ಪೂರ್ತಿ ಮತ್ತು ರೋಲ್ ಮಾಡೆಲ್ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರು, ಸಿನಿಮಾ ನಟ, ನಟಿಯರು, ಕ್ರೀಡಾ ಆಟಗಾರರು, ಉದ್ಯಮಿಗಳು ಹಾಗೂ ತಮ್ಮ ಶಿಕ್ಷಕರ ಹೆಸರುಗಳನ್ನು  ಪ್ರಸ್ತಾಪಿಸಿದರು. 
ಆದರೆ 25 ವರ್ಷದ ಯುವಕನೊಬ್ಬ ಮಾತ್ರ ನನಗೆ ಸ್ಪೂರ್ತಿ ನಾನೇ ಎಂದು ಉತ್ತರಿಸಿದ. ಈ ಉತ್ತರವನ್ನು ಕೇಳಿದ ಸಂಪನ್ಮೂಲ ವ್ಯಕ್ತಿ ಸೇರಿದಂತೆ ಎಲ್ಲಾ ಶಿಬಿರಾರ್ಥಿಗಳು ಕ್ಷಣ ಹೊತ್ತು ಅಚ್ಚರಿಗೊಂಡರು. ಕಾರಣ ಬೇರೆ ಶಿಬಿರಾರ್ಥಿಗಳ ಉತ್ತರಕ್ಕೂ ಈತನ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಆತ ಉತ್ತರಿಸುತ್ತ ಹೌದು ಸಾರ್ ನನಗೆ ನಾನೇ ಸ್ಪೂರ್ತಿ, ನನ್ನ ಬಗ್ಗೆ ನನಗೆ ಪ್ರೀತಿ ಇದೆ, ಗೌರವವಿದೆ, ಬೇರೊಬ್ಬರನ್ನು ಸ್ಪೂರ್ತಿಯಾಗಿ ಪರಿಗಣಿಸುವುದು ತಪ್ಪಲ್ಲ. ಆದರೆ ಮೊದಲು ನನ್ನ ಬಗ್ಗೆ ನನಗೆ ಹೆಮ್ಮೆ ಇರಬೇಕು. ನಾನು ಅಂದುಕೊಂಡ ಗುರಿ ತಲುಪಬೇಕಾದರೆ ನನ್ನ ಬಗ್ಗೆ ನನಗೆ ನಂಬಿಕೆ ಇಲ್ಲದೆ ಹೋದರೆ ಏನು ಮಾಡಲು ಸಾಧ್ಯವಾಗಲ್ಲ. ಆತ್ಮ ವಿಶ್ವಾಸ, ನಂಬಿಕೆ ಬರಬೇಕಾದರೆ ನನ್ನ ಬಗ್ಗೆ ನನಗೆ ಪ್ರೀತಿ ಇರಲೇಬೇಕು. ಆ ಕಾರಣದಿಂದಲೇ ನನಗೆ ನಾನೇ ಸ್ಪೂರ್ತಿ ಎಂದು ವಿಭಿನ್ನವಾಗಿ ಉತ್ತರಿಸಿದ.
ನಾವೆಲ್ಲರೂ ಒಮ್ಮೆ ಒಬ್ಬಂಟಿಯಾಗಿ ಪ್ರಕೃತಿಯ ಮಡಿಲಲ್ಲಿ ಕೂತುಕೊಂಡ ಒಮ್ಮೆಯಾದರೂ ನಮ್ಮ ಬಗ್ಗೆ ಆಲೋಚಿಸಿಕೊಂಡರೆ ಇಲ್ಲಿಯವರೆಗೂ ನಮ್ಮ ಬಗ್ಗೆ ನಾವೇ ತಪ್ಪಾಗಿ ಗ್ರಹಿಸಿಕೊಂಡ, ನಕಾರಾತ್ಮಕವಾಗಿ ಆಲೋಚಿಸಿಕೊಂಡ ವಿಚಾರಗಳು ನೆನಪಾಗುತ್ತವೆ. ಬಹುತೇಕರು ತಮ್ಮ ಬಗ್ಗೆ ತಾವೇ ಭಾವಿಸಿಕೊಳ್ಳುವ ವ್ಯತಿರಿಕ್ತ ಅಂಶಗಳು ನೂರಾರಿರುತ್ತವೆ. ಈ ಪ್ರಪಂಚದಲ್ಲಿ ಎಲ್ಲರೂ ಶ್ರೇಷ್ಠ, ನಾನೊಬ್ಬ ಬಿಟ್ಟು. ಬಹುಃಶ ನನ್ನಷ್ಟು ದುರದೃಷ್ಟ ವ್ಯಕ್ತಿ ಎಲ್ಲಿ ಸಿಗಲಾರರು. ನಾನು ತುಂಬ ದಡ್ಡ, ನನಗಿಂತ ದಡ್ಡರು ಇರುವುದಿಲ್ಲ. ನನ್ನಷ್ಟು ಭಯ ಪಡುವವರು ಎಲ್ಲಿ ಇರುತ್ತಾರೆ, ನನ್ನಲ್ಲಿ ಧೈರ್ಯ ಯಾಕೆ ಇಲ್ಲ. ಜೀವನದಲ್ಲಿ ನನಗೆ ಬಂದಷ್ಟು ಕಷ್ಟಗಳು ಯಾರಿಗೆ ತಾನೇ ಬಂದಿರುತ್ತದೆ. ನಮ್ಮ ಕುಟುಂಬದಲ್ಲಿ ನಾನೆಂದರೆ ಯಾರಿಗೂ ಇಷ್ಟವಿಲ್ಲ, ಬೆಲೆ, ಗೌರವ ಮೊದಲೇ ಇಲ್ಲ. ಒಂದರ್ಥದಲ್ಲಿ ನಾನು ಅಪ್ರಯೋಜಕ. ನನ್ನ ಕೈಯಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ, ಕಾರಣ ನನಗೆ ಆ ಶಕ್ತಿ ಇಲ್ಲ. ನಾನು ಮಾಡುವ ಉದ್ಯೋಗ ಅತ್ಯಂತ ಕೀಳು, ನನಗೆ ಬರುವ ಅತ್ಯಂತ ಕಡಿಮೆ ಸಂಬಳ, ಬೇರೆ ಯಾರಿಗೂ ಬರುವುದಿಲ್ಲವೇನೊ. ಬೇರೆಯವರಿಗೆ ಹೋಲಿಸಿದರೆ ನಾನೇನು ಸೌಂದರ್ಯವಾಗಿಲ್ಲ. ದೇವರು ನನ್ನ ಬಗ್ಗೆ ಕರುಣೆಯೇ ತೋರುವುದಿಲ್ಲ, ನಾನು ಮನುಷ್ಯನಾಗಿ ಹುಟ್ಟದಿದ್ದರೆ ಚೆನ್ನಾಗಿರುತ್ತಿತ್ತು.
ಈಗೆ ಹಲವು ರೀತಿ, ಆಯಾಮಗಳಲ್ಲಿ ನಮ್ಮ ಬಗ್ಗೆ ನಾವೇ ನಕಾರಾತ್ಮಕತೆ ಅಂಶಗಳನ್ನು ಮನಸ್ಸಲ್ಲಿ ತುಂಬಿಸಿಕೊಂಡಿರುತ್ತೇವೆ. ಈ ರೀತಿ ಮನಸ್ಥಿತಿಯಿಂದಲೇ ಮಾನಸಿಕ ನೆಮ್ಮದಿ ಕಳೆದುಕೊಳ್ಳುವುದರ ಜೊತೆಗೆ ನಮ್ಮ ಜೀವನಕ್ಕೆ ನಾವೇ ಕೊಡಲಿಪೆಟ್ಟು ಹಾಕಿಕೊಂಡಿರುತ್ತೇವೆ. ಕೆಲವೊಮ್ಮೆ ಬೇರೆಯವರು ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎಂದು ಆಲೋಚಿಸುತ್ತೇವೆ, ನೊಂದುಕೊಳ್ಳುತ್ತೇವೆ. ಆದರೆ ನಾವೇ ಎಷ್ಟೋ ಬಾರಿ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುವುದಿಲ್ಲ ಎಂಬ ವಾಸ್ತವವನ್ನು ಮರೆತು ಬಿಡುತ್ತೇವೆ. ಆ ಮೂಲಕ ನಮ್ಮ ಸಾಧನೆಯ ದಾರಿಯಲ್ಲಿ ಸ್ವತಃ ನಾವೇ ಮುಳ್ಳಿನ ಹಾದಿಯನ್ನು ನಿರ್ಮಿಸಿಕೊಳ್ಳುತ್ತೇವೆ.
ಪ್ರಖ್ಯಾತ ತತ್ವಜ್ಞಾನಿಯೊಬ್ಬರು Loving yourself is the greatest revolution in your life ಎಂದು ಹೇಳುತ್ತಾರೆ. ಅಂದರೆ ನಮ್ಮನ್ನು ನಾವು ಪ್ರೀತಿಸಿದರೆ, ಗೌರವ ಕೊಟ್ಟುಕೊಂಡರೆ ನಮ್ಮ ಜೀವನದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಬಹುದು. ಆದರೆ ನಮ್ಮ ಬಗ್ಗೆ ನಾವೇ ನಿರ್ಲಕ್ಷ್ಯ ಮನೋಭಾವದಿಂದ ಕಾಣುತ್ತೇವೆ. ನಮ್ಮಲ್ಲಿ ಸಾಧಿಸಬೇಕೆಂಬ ಛಲ ಹುಟ್ಟುವುದು ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ನಮ್ಮ ಮೇಲೆ ನಮಗೆ ನಂಬಿಕೆ, ಪ್ರೀತಿ ಇದ್ದಾಗ ಮಾತ್ರ. ಹಲವರು ತಮ್ಮ ಬಗ್ಗೆ ತಾವೇ ಕೀಳರಿಮೆ ಬೆಳೆಸಿಕೆಂಡು, ತಾವು ಅಪ್ರಯೋಜಕರೆಂದು ಸ್ವತಃ ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೆ. ಸ್ನೇಹಿತರು, ಸಂಬಂಧಿಕರು, ಸಹದ್ಯೋಗಿಗಳು ಸೇರಿದಂತೆ ಸಿಕ್ಕಸಿಕ್ಕವರೆಲ್ಲರ ಬಳಿ ತಮ್ಮ ಬಗ್ಗೆ ತಾವೇ ನೆಗಟಿವ್ ಆಗಿ ಹೇಳಿಕೊಳ್ಳುತ್ತಾರೆ. ಈ ಮನಸ್ಥಿತಿಯೇ ನಮ್ಮನ್ನು ಸಾಧನೆಯ ಹಾದಿಯಿಂದ ಬಹು ದೂರ ಕರೆದುಕೊಂಡು ಹೋಗಿಬಿಡುತ್ತದೆ.
ಪ್ರಸಿದ್ದ ಲೇಖಕರೊಬ್ಬರು ತಮ್ಮ ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದರು. To fall in love with yourself is the first secret to happiness & success. ಅಂದರೆ ಒಬ್ಬ ವ್ಯಕ್ತಿಯ ಸಂತೋಷಕ್ಕೆ ಮತ್ತು ಸಾಧನೆಯ ಹಿಂದಿನ ಗುಟ್ಟು ಆತನನ್ನು ಆತ ಪ್ರೀತಿಸುವುದು.  ತನ್ನ ಜೀವನದಲ್ಲಿ ಸಂತೋಷದಿಂದಿರಲು ಮತ್ತು ಸಾಧನೆ ಮಾಡುವ ಆಲೋಚನೆಯಿದ್ದರೆ ಮೊದಲು ಮಾಡಬೇಕಾದದ್ದು ತನ್ನನ್ನು ತಾನು ಪ್ರೀತಿಸುವುದು. ಹೌದು ನಾವು ನಮ್ಮ ಜೀವನದಲ್ಲಿ ಕುಟುಂಬದವರನ್ನು, ಸ್ನೇಹಿತರು, ಸಹದ್ಯೋಗಿಗಳು, ಗುರುಗಳು ಸೇರಿದಂತೆ ಮತ್ತಿತರರನ್ನು ಗೌರವಿಸುವುದರ ಜೊತೆಗೆ ನಿರ್ಮಲ ಮನಸ್ಸಿನಿಂದ ಪ್ರೀತಿಸುತ್ತೇವೆ. ಇದು ತಪ್ಪೇನು ಅಲ್ಲ, ನಮ್ಮ ಜೀವನಕ್ಕೆ ದಾರಿ ತೋರಿ, ಕಷ್ಟ ಕಾಲದಲ್ಲಿ ಆಸರೆಯಾದವರ ಬಗ್ಗೆ ತುಸು ಹೆಚ್ಚು ಅಭಿಮಾನ ಹೊಂದುವುದು ಸಮಂಜಸ. ಆದರೆ ನಮ್ಮನ್ನು ನಾವೇ ಪ್ರೀತಿಸುವುದು ಮರೆತು ಬಿಡುತ್ತೇವೆ ಎಂಬುವುದೇ ವಿಪರ್ಯಾಸ, ವಿಸ್ಮಯ.
ನಮ್ಮ ಬಗ್ಗೆ ಯಾರಾದರೂ ಅತಿ ಹೆಚ್ಚು ನಕಾರಾತ್ಮಕವಾಗಿ ಚಿಂತಿಸಿದ್ದರೆ ಅದು ಬೇರ್ಯಾರು ಅಲ್ಲ ನಾವೇ ಆಗಿರುತ್ತೇವೆ. ನಮ್ಮ ಶಿಕ್ಷಣ, ಉದ್ಯೋಗ, ಎತ್ತರ, ಮೈ ಬಣ್ಣ, ಕುಟುಂಬ ಸೇರಿದಂತೆ ಪ್ರತಿಯೊಂದು ನಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ನಮ್ಮ ಬಗ್ಗೆಯೇ ನಕಾರಾತ್ಮಕವಾಗಿ ನಾವೇ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಇದರಿಂದ ಬೇರೆಯವರಿರಲಿ ನಮ್ಮ ಬಗ್ಗೆ ನಾವೇ ಗೌರವ ಕೊಟ್ಟುಕೊಳ್ಳಲು ಹಿಂಜರಿಯುವಂತಹ ಪರಿಸ್ಥಿತಿಗೆ ಮನಸ್ಸು ತಲುಪಿಬಿಡುತ್ತದೆ.
ಎಷ್ಟೋ ಬಾರಿ ಬೇರೆಯವರು ನನಗೆ ಅವಮಾನ ಮಾಡಿದ್ದಾರೆ, ನನ್ನ ಬಗ್ಗೆ ದೂರುಗಳು ಹೇಳಿದ್ದಾರೆ, ನನಗೆ ಗೌರವ ಕೊಡುವುದಿಲ್ಲ ಎಂದು ಬೇಸರ ಮಾಡಿಕೊಂಡು ಕಣ್ಣೀರು ಹಾಕುತ್ತೇವೆ. ಆದರೆ ಬೇರೆಯವರೂ ಗೌರವ ಕೊಡಲಿ ಬಿಡಲಿ, ಮೊದಲು ನಮ್ಮ ಬಗ್ಗೆ ನಾವು ಗೌರವವನ್ನು ಕೊಡುವುದರ ಬಗ್ಗೆ ಆಲೋಚಿಸಬೇಕು.

ಹಿರಿಯರೊಬ್ಬರು ಹೇಳುತ್ತಾರೆ, ನಮ್ಮ ಬಗ್ಗೆ ನಮಗೆ ಗೌರವ ಬಂದಾಗ ಸಹಜವಾಗಿಯೇ ನಮ್ಮೊಳಗೆ ಅಪ್ರತಿಮ ಶಕ್ತಿ ಹುಟ್ಟುತ್ತದೆ. ಮನಸ್ಸು ಸಂತೋಷದಿಂದ ಇದ್ದು, ಸಾಧಿಸುವ ಛಲ ಹಿಮ್ಮಡಿಯಾಗುತ್ತದೆ. ಸಾಮಾನ್ಯವಾಗಿ ನಮ್ಮ ಡ್ರೆಸ್ (ಉಡುಗೆ) ಹಾಗೂ ನಾವು ಸ್ಮಾರ್ಟ್ ಆಗಿ ಕಾಣಬೇಕು ಎಂಬುವುದು ಎಲ್ಲರ ಆಸೆ. ನಾವು ಹಾಕುವ ಬಟ್ಟೆ ಹಾಗೂ ನಾವು ಸ್ಮಾರ್ಟ್ ಆಗಿ ಕಾಣದಿದ್ದರು ಚಿಂತೆಯಿಲ್ಲ ನಮ್ಮ ಗುರಿ ಮಾತ್ರ ಸ್ಮಾರ್ಟ್ SMART ಆಗಿರಬೇಕು. S- Specific, M- Measurable, A- Achievable, R-Realistic, T-Timely.
ನಾವು ಹೊಂದುವ ಗುರಿ ಯಾವಾಗಲೂ Specific ಆಗಿರಬೇಕು, ಅಂದರೆ ನಿರ್ದಿಷ್ಟವಾಗಿರಬೇಕು. ನಾವೇನು ಸಾಧನೆ ಮಾಡಬೇಕು ಎಂಬ ಬಗ್ಗೆ ಗೊಂದಲವಿರಬಾರದು. ಸ್ಪಷ್ಟವಾಗಿ, ನಿಖರವಾಗಿ ಯಾವ ದಾರಿಯಲ್ಲಿ ಸಾಗಬೇಕೆಂಬ ಕಲ್ಪನೆ ಇರಬೇಕು. ನಮ್ಮ ಗುರಿ ಯಾವತ್ತು Measurable ಆಗಿರಬೇಕು. ಅಂದರೆ ನಮ್ಮ ವೈಯಕ್ತಿಕ ಶಕ್ತಿಯಲ್ಲಿ  ಅಳೆಯುವಂತಿರಬೇಕು. ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಗುರಿ ಪೂರಕವಾಗಿರಬೇಕು. ನಮ್ಮ ಗುರಿ ಯಾವಾಗಲೂ Achievable ಆಗಿರಬೇಕು. ಅಂದರೆ ನಮ್ಮ ಶಕ್ತಿಯ ಅನುಸಾರ ನಮ್ಮ ಗುರಿಯನ್ನು ಪೂರ್ಣವಾಗಿ ತಲುಪುವಂತಿರಬೇಕು. ನಮ್ನ ಗುರಿ Realistic ಆಗಿರಬೇಕು. ಅಂದರೆ ನಮ್ಮ ಜೀವನದ ವಾಸ್ತವತೆಗೆ, ನೈಜತೆಗೆ ತಕ್ಕಂತೆ ಗುರಿ ಇರಬೇಕು. ನಮ್ಮ ಗುರಿ Timely ಆಗಿರಬೇಕು. ಅಂದರೆ ನಮಗೆ ಇರುವ ನಿರ್ದಿಷ್ಟ ಕಾಲಾವಧಿಯಲ್ಲಿ ಗುರಿ ತಲುಪುವಂತೆ ಇರಬೇಕು.  
ಈಗೆ ನಮ್ಮ ಗುರಿ SMART ಆಗಿದ್ದಾಗ ಮಾತ್ರ ಜೀವನದಲ್ಲಿ ಗುರಿ ತುಲುಪಿ, ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಮೊದಲು ನಮ್ಮನ್ನು ನಾನು ಪ್ರೀತಿಸಿಬೇಕು, ನಮ್ಮ ಬಗ್ಗೆ ನಮಗೆ ಗೌರವ, ಹೆಮ್ಮೆ ಬರಬೇಕು, ನಮಗೆ ನಾವೇ ಸ್ಪೂರ್ತಿಯಾಗಬೇಕು. ಎಂತಹ ದೊಡ್ಡ ಗುರಿ ಇಟ್ಟುಕೊಂಡರು, ನಮ್ಮ ಬಗ್ಗೆ ಒಳ್ಳೆಯ ಭಾವನೆ ನಮಗೆ ಬರದೆ ಹೋದರೆ ಗುರಿ ತಲುಪುವುದು ಅಸಾಧ್ಯ, ಗುರಿ ಇಟ್ಟುಕೊಂಡು ಪ್ರಯೋಜವಾಗುವುದಿಲ್ಲ.
ನಾನು ಹೋಗುವ ದಾರಿಯಲ್ಲಿ ಪ್ರಾಮಾಣಿಕತೆ, ಸತ್ಯವಿದ್ದಾಗ ನನಗೆ ನಾನೇ ಸ್ಪೂರ್ತಿಯೆಂದು ಭಾವಿಸಿಕೊಳ್ಳುತ್ತೇನೆ. ಅಷ್ಟಕ್ಕೂ ನಾನು ಒಳ್ಳೆಯವನೆಂದು ನಾನೇ ಭಾವಿಸದಿದ್ದರೆ, ನನ್ನನ್ನು ನಾನೇ ಪ್ರೀತಿಸದಿದ್ದರೆ ಬೇರೆಯವರೂ ಎಲ್ಲಿ ಗೌರವಿಸುತ್ತಾರೆ ಹೇಳಿ ? ಬೇರೆಯವರು ನಮ್ಮ ಬಗ್ಗೆ ಏನೆಂದು ಭಾವಿಸಿದ್ದಾರೆ ಎಂದು ಆಲೋಚಿಸಿ, ಸಮಯ ವ್ಯರ್ಥ ಮಾಡುವ ಬದಲು, ನಮ್ಮ ಬಗ್ಗೆ ನಮ್ಮ ಮನಸ್ಸಿನಲ್ಲಿ ನಾವೇನು ಅಂದುಕೊಂಡಿದ್ದೇವೆ ಎಂಬ ವಿಚಾರದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳೋಣ.. 

ಭಾನುವಾರ, ಜುಲೈ 19, 2020

ಹುಟ್ಟು - ಸಾವು ನಡುವೆ ಇರುವುದೇ ಜೀವನ ?


⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಪ್ರತಿಯೊಬ್ಬರಿಗೂ ವರ್ಷಕ್ಕೊಮ್ಮೆ ಮಾತ್ರ ಬರುವ ಹಬ್ಬವೆಂದರೆ ಅದು ಹುಟ್ಟುಹಬ್ಬ ಅಥವಾ ಬರ್ತ್ ಡೇ. ಆದರೆ ಕೆಲವರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸು ಇರುವುದಿಲ್ಲ, ನಾವು ಜೀವನದಲ್ಲಿ ಇಲ್ಲಿಯವರೆಗೂ ಏನು ಸಾಧನೆಯೇ ಮಾಡಿಲ್ಲವಲ್ಲ, ಆದ್ದರಿಂದ ಆಚರಿಸಿಕೊಳ್ಳುವ ಅಗತ್ಯವು ಇಲ್ಲ ಎಂದು ಸುಮ್ಮನೆಯಿದ್ದು ಬಿಡುತ್ತಾರೆ. ಮತ್ತೆ ಕೆಲವರು ಹುಟ್ಟುಹಬ್ಬವನ್ನು ವೈಭವ, ವರ್ಣರಂಜಿತವಾಗಿ ಆಚರಿಸಿಕೊಳ್ಳುವವರು ಇದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬರುವ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧನೆ, ಗೆಲುವುಗಳು ಅಗತ್ಯವೇಕೆ, ಆಚರಿಸಬೇಕೆಂಬ ಮನಸ್ಸಿದ್ದರೆ ಸಾಕು ಎಂಬ ಭಾವನೆ ಇವರದ್ದು.
ಆ ದಿನಗಳು ನನಗಿನ್ನು ನೆನಪಿದೆ, 30 ವರ್ಷಗಳ ಕಾಲ ನಾವು ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದಾಗ, ಅಲ್ಲಿ ವಾಸವಿದ್ದ ಕುಟುಂಬಗಳಲ್ಲಿನ ಯಾವ ಮಕ್ಕಳಿಗಾದರೂ ಹುಟ್ಟು ಹಬ್ಬ ಬಂದರೆ ಅವರಿಗೆ ಏನೋ ಒಂದು ರೀತಿ ಸಂತೋಷ, ಖುಷಿ. ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳು ಹೊಸ ಬಟ್ಟೆ ಧರಿಸಿ, 50 ಪೈಸೆನೋ, 1 ರೂಪಾಯಿದೋ ಚಾಕೋಲೆಟ್‍ಗಳನ್ನು ಖರೀದಿಸಿ, ಡಬ್ಬಿ ತುಂಬ ಹಾಕಿಕೊಂಡು, ಶಾಲೆಗೆ ಹೋಗಿ ತಮ್ಮ ಶಿಕ್ಷಕರಿಗೆ, ಸಹಪಾಠಿಗಳಿಗೆ ಕೊಟ್ಟು ಸಂಜೆ ವಾಪಸ್ ಮನೆಗೆ ಬಂದ ನಂತರ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಮನೆಗಳಿಗೆ ಹೋಗಿ, ಚಾಕೋಲೆಟ್ ಕೊಟ್ಟು ಅವರಿಂದ ಆಶೀರ್ವಾದ ಪಡೆಯುತ್ತಿದ್ದರು. ಆಶೀರ್ವಾದ ನೀಡುವವರು 10, 20 ರೂ.ಗಳನ್ನು ಹುಟ್ಟುಹಬ್ಬ ಆಚರಿಸಿಕೊಳ್ಳುವವರ ಕೈಗೆ ಕೊಡುತ್ತಿದ್ದರು. ಮತ್ತೆ ಕೆಲವರು ಚಿಕ್ಕ ಕೇಕ್ ಒಂದನ್ನು ತಂದು, ಅಕ್ಕಪಕ್ಕದ ಎಲ್ಲ ಮನೆಯವರನ್ನು ಕರೆದು, ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚಿ ಹುಟ್ಟು ಹಬ್ಬ ಆಚರಿಸುವ ಪದ್ದತಿಯು ಇತ್ತು.  
ಆದರೆ ಕಾಲ ಉರುಳಿತ್ತಿದ್ದಂತೆ, ವರ್ಷಗಳು ಕಳೆಯುತ್ತಿದ್ದಂತೆ ಹುಟ್ಟುಹಬ್ಬ ಆಚರಿಸುವ ವೈಖರಿಯು ಸಂಪೂರ್ಣವಾಗಿ ಬದಲಾಗಿದೆ. ಈಗಂತು ಹುಟ್ಟು ಹಬ್ಬ ಎಂದರೆ ಕೆಲವರಿಗೆ ಅದೊಂದು ದೊಡ್ಡ ಸೆಲ್‍ಬ್ರೆಷನ್, ತಮ್ಮ ಶಕ್ತಿ ತೋರಿಸುವ ಪ್ರದರ್ಶನವು ಹೌದು. ದೊಡ್ಡ ದೊಡ್ಡ ಗಾತ್ರದ, ಕೆ.ಜಿಗಟ್ಟಲೆಯ ಕೇಕ್ ತಂದು ಕಟ್ ಮಾಡುವುದು, ದೊಡ್ಡ ದೊಡ್ಡ ರೆಸಾರ್ಟ್, ಹೊಟೇಲ್ ಗಳಲ್ಲಿ ಸ್ನೇಹಿತರಿಗೆ, ಸಂಬಂಧಿಕರಿಗಾಗಿ ಪಾರ್ಟಿ ಆಯೋಜನೆ, ಕೆಲವರಂತೂ ತಾವು ವಾಸಿಸುವ ಪ್ರದೇಶದ ಸುತಮುತ್ತ್ತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಗಳನ್ನು ಹಾಕಿಸುತ್ತಾರೆ. ಅದರಲ್ಲೂ ಕೆಲವರು ಫ್ಲೆಕ್ಸ್ ಗಳಲ್ಲಿ ಹಾಕುವ ಬಡವರ ಬಂಧು, ಯುವಕರ ಕಣ್ಮಣಿ, ಆರಾಧ್ಯ ಧೈವ, ಬಡವರ ಉದ್ದಾರಕ, ರಾಜ್ಯ ಮುಖಂಡ ಹೀಗೆ ಹತ್ತಾರು ವಾಕ್ಯಗಳನ್ನು ಹಾಕಿಸಿಕೊಳ್ಳುತ್ತಾರೆ. ಇನ್ನು ದುಡ್ಡಿರುವ ಹಣವಂತರಂತೂ ಟಿ.ವಿ ವಾಹಿನಿ ಮತ್ತು ಪತ್ರಿಕೆಗಳಲ್ಲಿ ಪುಟದ ತುಂಬ ಹುಟ್ಟು ಹಬ್ಬದ ಜಾಹೀರಾತು ಮತ್ತು ಪೇಯ್ಡ್ ನ್ಯೂಸ್ ಬರೆಸಿಕೊಳ್ಳುತ್ತಾರೆ. ಕೆಲವರಂತೂ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಕಲರ್ ಕಲರ್ ಡಿಸೈನ್ ಪೋಸ್ಟರ್ ಮಾಡಿಸಿ ಶೇರ್ ಮಾಡುವ ಪದ್ದತಿಯು ಇದೆ. ಹುಟ್ಟು ಹಬ್ಬದ ಆಚರಣೆಗೆ ಲಕ್ಷಾಂತರ ರೂ. ಖರ್ಚು ಮಾಡುವ ಜನರು ಇದ್ದಾರೆ. 
ಒಮ್ಮೆ ನಮಗೆ ಪರಿಚಯವಿದ್ದ ವಿಶ್ವವಿದ್ಯಾಲಯದ ಪ್ರೊಪೆಸರ್‍ರೊಬ್ಬರ ಹುಟ್ಟುಹಬ್ಬವಿತ್ತು. ಅವರಿಗೆ ಹುಟ್ಟು ಹಬ್ಬದ ಶುಭಾಶಗಳನ್ನು ತಿಳಿಸಲು, ಅವರ ವಿಭಾಗಕ್ಕೆ ಹೋಗಿದ್ದೆವು. ಹಾಗೆ ಹೋಗುವಾಗ ಹೂವಿನ ಬೊಕ್ಕೆ ಮತ್ತು ಹಣ್ಣು, ಶಾಲು, ಹಾರ ತೆಗೆದುಕೊಂಡು ಹೋಗಿದ್ದೆವು. ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ನಂತರ, ಶಾಲು ಹಾಗೂ ಹಾರ ಹಾಕಲು ಹೋದಾಗ, ಅವರು ಒಂದೇ ಮಾತಿನಲ್ಲಿ ಹೇಳಿದರು, ನೋಡಿ ನೀವೆಲ್ಲಾ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಬಂದಿದ್ದೀರಾ ತುಂಬಾ ಸಂತೋಷ. ಆದರೆ ಈ ಹಾರ, ಶಾಲು ನಾನು ಹಾಕಿಸಿಕೊಳ್ಳುವುದಿಲ್ಲ ಎಂದು ಅಲ್ಲೇ ಇದ್ದ ಅವರ ವಿಭಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡುವವರನ್ನು ಕರೆದು ಅವರಿಗೆ ಹಾಕಿದರು. ಬಹಳ ವರ್ಷಗಳಿಂದ ನಮ್ಮ ವಿಭಾಗದಲ್ಲಿ ಈತ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾನೆ. ಈ ಗೌರವ ಇವನಿಗೆ ಸಲ್ಲಬೇಕು ಎಂದು ಹಾರ ಹಾಕಿ ಶಾಲು ಹೊದಿಸಿದರು. ಹಣ್ಣುಗಳನ್ನು ವಿಭಾಗದ ವಿದ್ಯಾರ್ಥಿಗಳನ್ನು ಕರೆದು ಎಲ್ಲರೂ ಹಂಚಿಕೊಳ್ಳಿ ಎಂದು ಕಳುಹಿಸಿಕೊಟ್ಟರು. 
ಆ ನಂತರ ಅವರು ಹೇಳಿದ ಮಾತುಗಳು, ನನಗೆ ವಯಸ್ಸು 45 ವರ್ಷವಾಗಿದೆ, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ದ್ದಾನೆ. ಎಷ್ಟೋ ಜನ ನನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿದ್ದಾರೆ. ಆದರೂ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಾದರೆ ವೈಯಕ್ತಿಕವಾಗಿ ಸಮಾಜಕ್ಕೆ ಏನಾದರೂ ಒಂದಷ್ಟು ಕೊಡುಗೆ ಕೊಟ್ಟಿದ್ದೇವೆ ಎಂಬ ತೃಪ್ತಿಯಾದಾಗ ಮಾತ್ರ ಆಚರಿಸಲು ಮನಸ್ಸು ಬರುತ್ತದೆ. ಈ ಆಡಂಬರದ ಹುಟ್ಟುಹಬ್ಬಗಳು ಆಚರಿಸಿಕೊಳ್ಳುವ ಯೋಗ್ಯತೆ ನನಗಿದೆ ಎಂದು ನಾನು ಭಾವಿಸಿಲ್ಲ, ಆದ್ದರಿಂದ ಇಲ್ಲಿಯವರೆಗೂ ಹುಟ್ಟು ಹಬ್ಬ ಆಚರಿಸಿಲ್ಲ, ಮುಂದೆ ಯಾವಾಗಾದರೂ ಜೀವನದಲ್ಲಿ ಸಾರ್ಥಕತೆ ಕಂಡಾಗ ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಗಮನಾರ್ಹ ಅಂಶವೆಂದರೆ ಕೆಲವರು ಹುಟ್ಟಿದ ದಿನ ಮತ್ತು ನಿಧನ ಹೊಂದಿದ ದಿನಗಳು ಇತಿಹಾಸದ ಪುಟಗಳಲ್ಲಿ ಭದ್ರವಾಗಿ ದಾಖಲಾಗುತ್ತವೆ. ಅಪ್ರತಿಮ ಸಾಧನೆ, ತ್ಯಾಗ, ಸಾಮಾಜಿಕ
ಕಾರ್ಯಗಳ ಕಾರಣದಿಂದ ಕೆಲವರ ಹುಟ್ಟಿದ ದಿನಗಳನ್ನು ಇಡೀ ರಾಷ್ಟ್ರವೇ ನೆನಪಿನಲ್ಲಿಟ್ಟುಕೊಂಡು,ಆಚರಿಸುವಂತಾಗುತ್ತದೆ.ಇಂತವರ್ಯಾರು ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿಕೊಂಡು ಹುಟ್ಟುಹಬ್ಬ ಪ್ರಚಾರ ಮಾಡಿದವರಂತು ಅಲ್ಲ, ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟವರು ಅಲ್ಲ.ಯುವಕರ ಶಕ್ತಿ, ಸ್ಪೂರ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಪಶ್ಚಿಮ ಬಂಗಾಳದ ಕಲ್ಕತ್ತೆಯಲ್ಲಿ ಜನವರಿ 12, 1863 ರಲ್ಲಿ ಜನಿಸಿದ್ದರು. ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರು ಹುಟ್ಟಿದ ದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತೇವೆ. ಯುವಕರಿಗೆ ಸ್ಪೂರ್ತಿ ತುಂಬುವ ಕಾರ್ಯಕ್ರಮಗಳು ಸಾಕಷ್ಟು ಆಯೋಜನೆಗೊಳ್ಳುತ್ತದೆ. ಅಂದು ದೇಶದ ಎಷ್ಟೋ ಸ್ಥಳಗಳಲ್ಲಿ ವಿವೇಕಾನಂದರಿಗೆ ಗೌರವ ಸೂಚಿಸುವ ಕೆಲಸವಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ಗುಜರಾತಿನ ಪೋರ್‍ಬಂದರಿನಲ್ಲಿ ಅಕ್ಟೋಬರ್ 2, 1869 ರಲ್ಲಿ ಜನಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಹಾಗೂ ಅವರು ಬದುಕಿನ ಕೊನೆಯವರೆಗೂ ದೇಶಕ್ಕಾಗಿ ಜೀವನ ಅರ್ಪಿಸಿದ ತ್ಯಾಗದ ಫಲವಾಗಿ ದೇಶವ್ಯಾಪಿ ಅಕ್ಟೋಬರ್ 2ರಂದು ಅವರ ಜನ್ಮ ದಿನ ಆಚರಿಸುತ್ತೇವೆ. ಹಾಗೆಯೇ ಆ ದಿನದಂದೆ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ದೇಶದ ಎರಡನೇ ರಾಷ್ಟ್ರಪತಿ, ಮೊದಲ ಉಪರಾಷ್ಟ್ರಪತಿ, ತತ್ವಜ್ಞಾನಿ, ಪ್ರೊಪೆಸರ್, ಉಪಕುಲಪತಿಯಾಗಿದ್ದ ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರು ತಮಿಳುನಾಡಿನ ತಿರುತ್ತನಿಯಲ್ಲಿ ಸೆಪ್ಟೆಂಬರ್ 5, 1888ರಲ್ಲಿ ಜನ್ಮ ತಾಳಿದ್ದರು. ಡಾ.ಸರ್ವೆಪಲ್ಲಿ ರಾಧಕೃಷ್ಣನ್ ರವರು ಶಿಕ್ಷಕ ವೃತ್ತಿಯ ಮೂಲಕ ಎಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸಿದವರು. ಅವರ ಸ್ಮರಣಾರ್ಥ ಅವರು ಹುಟ್ಟಿದ ಸೆಪ್ಟೆಂಬರ್ 5 ರಂದು ದೇಶಾವ್ಯಾಪಿ ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಹಾಗೆ ಸರ್ವೆಪಲ್ಲಿ ರಾಧಕೃಷ್ಣರವರಿಗೆ ದೇಶದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯು ಬಂದಿತ್ತು. 
ಶೋಷಿತರ ಪರವಾಗಿ ಬಲವಾದ ಧ್ವನಿಯೆತ್ತಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರು ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ಏಪ್ರಿಲ್ 14, 1891 ರಂದು. ಕಷ್ಟಗಳಲ್ಲಿ ಹುಟ್ಟಿದರೂ ಉನ್ನತ ವ್ಯಾಸಾಂಗ ಪಡೆದು ಎಷ್ಟೋ ಜನರ ಬಾಳು ಬೆಳಗಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ರಾಷ್ಟ್ರಾದ್ಯಂತ ಎಲ್ಲಾ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲೂ ಆಚರಿಸಲಾಗುತ್ತದೆ.
ದೇಶದ ಶ್ವೇತ ಕ್ರಾಂತಿ ಪಿತಾಮಹ ಡಾ.ವರ್ಗೀಸ್ ಕುರಿಯನ್, ಅವರು ಕೇರಳದ ಕೊಜಿಕೊಡ್ ನಲ್ಲಿ ನವೆಂಬರ್ 26, 1921 ರಂದು ಜನನ. ಇಂದು ದೇಶದಲ್ಲಿ ಹೈನುಗಾರಿಕೆ ಅಭಿವೃದ್ದಿಯಾಗಲು ಮೂಲ ಕಾರಣ ವರ್ಗೀಸ್ ಕುರಿಯನ್. ರೈತರು ಇಂದು ಹೈನುಗಾರಿಕೆಯ ಮೂಲಕ ಆರ್ಥಿಕ ಸದೃಢರಾಗಿದ್ದಾರೆಂದರೆ ಅದರ ಹಿಂದಿನ ಶ್ರಮ ವರ್ಗೀಸ್ ಕುರಿಯನ್ ಅವರದ್ದು. ಅವರ ಸೇವೆಯ ನೆನಪಿಗಾಗಿ ದೇಶದ್ಯಾಂತ ಅವರ ಜನ್ಮದಿನದಂದು ರಾಷ್ಟ್ರೀಯ ಹಾಲಿನ ದಿನವನ್ನಾಗಿ ಆಚರಿಸಲಾಗುತ್ತದೆ. 
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಪ್ರೊಪೆಸರ್ ಆಗಿದ್ದ ಎಸ್.ಆರ್ ರಂಗನಾಥನ್ ಅವರು ಹುಟ್ಟಿದ್ದು ತಮಿಳುನಾಡಿನ ಶಿಯಾಲಿಯಲ್ಲಿ ಆಗಸ್ಟ್, 1892ರಲ್ಲಿ. ಅವರು ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಮಾಡಿದ ಬಹುದೊಡ್ಡ ಸಾಧನೆಗಾಗಿ ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರ ನೆನಪಿಗಾಗಿ ಆಗಸ್ಟ್ 12 ರಂದು ರಾಷ್ಟ್ರೀಯ ಗ್ರಂಥಾಲಯ ದಿನವನ್ನಾಗಿಯೂ ಆಚರಿಸಲಾಗುತ್ತದೆ. 
ದೇಶದ ಖ್ಯಾತ ಹಾಕಿ ಆಟಗಾರರಾಗಿದ್ದ ಧ್ಯಾನ್ ಚಂದ್ ರವರು ಹುಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಗಸ್ಟ್ 29, 1905ರಲ್ಲಿ. ಹಾಕಿ ಆಟ ಹಾಗೂ ಭಾರತೀಯ ಕ್ರೀಡಾ ವಲಯಕ್ಕೆ ಧ್ಯಾನ್ ಚಂದ್ ಮಾಡಿದ ಸೇವೆಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ಶಾಸ್ತ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರಣ ಅಂದು ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ರವರು ಹುಟ್ಟಿದ ದಿನ. ಅವರು ತಮಿಳುನಾಡಿನ ಇರೋಡ್ ನಲ್ಲಿ ಡಿಸೆಂಬರ್ 22, 1887ರಲ್ಲಿ ಜನ್ಮ ತಾಳಿದ್ದರು.
ಎಂ.ಹೆಚ್ ಮರಿಗೌಡರನ್ನು ತೋಟಗಾರಿಕೆ ಕ್ಷೇತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಆಗಸ್ಟ್ 8, 1916 ರಂದು. ಇವರು ತೋಟಗಾರಿಕೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಆಗಸ್ಟ್ 8 ರಂದು ರಾಷ್ಟ್ರೀಯ ತೋಟಗಾರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.
ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಎಷ್ಟೋ ಜನ ಸಾಧಕರು ತಮ್ಮ ಜೀವನದಲ್ಲಿ ಒಮ್ಮೆಯು ಹುಟ್ಟು ಹಬ್ಬ ಆಚರಿಸಿಕೊಂಡಿರುವುದಿಲ್ಲ. ಆದರೆ ಅವರು ಮಾಡಿದ ಸಾಧನೆಗಳು, ದೇಶಕ್ಕಾಗಿ ದುಡಿದ ಕಾರಣದಿಂದ ಅವರ ಹುಟ್ಟು ಹಬ್ಬವನ್ನು ಸ್ವತಹ ಭಾರತ ದೇಶವೇ ಶಾಶ್ವತವಾಗಿ ಆಚರಿಸುತ್ತದೆ, ಸ್ಮರಿಸುತ್ತದೆ. ಇಂತಹ ಸಾಧಕರು ತಮ್ಮ ಹುಟ್ಟಿದ ದಿನಗಳನ್ನು ಇತಿಹಾಸ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ ಕೀರ್ತಿ ಇವರದ್ದು.  
ವಾಸ್ತವವೆಂದರೆ ನಮ್ಮ ಗುರಿ, ಸಾಧನೆ ಮಾಡಲು ಇರುವ ಸಮಯವೆಷ್ಟೆಂದರೆ ನಮ್ಮ ಹುಟ್ಟಿದ ದಿನ ಮತ್ತು ಸಾವಿನ ದಿನದ ಮಧ್ಯೆ ಸಿಗುವ ಅಲ್ಪ ಸಮಯ ಮಾತ್ರ. ನಮಗೆ ಸಿಗಬಹುದಾದ ಆ ಕಡಿಮೆ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಗುರಿ ತಲುಪುದರ ಜೊತೆಗೆ ಸೇವಾ ಮನೋಭಾವ ಹೊಂದಿದಾಗ ಮಾತ್ರ ನಮ್ಮ ಬರ್ತಡೇಟ್ ಶಾಶ್ವತವಾಗಿ ನೆಲೆಯೂರುತ್ತದೆ. 
ಒಬ್ಬ ಯುವಕ ತನ್ನ ಬೈಕ್ ಮೇಲೆ ಈಗೆ ಬರೆದುಕೊಂಡಿದ್ದ, ನಮ್ಮ ಹುಟ್ಟು, ಸಾವು ಎರಡು ಇತಿಹಾಸವಾಗಬೇಕು. ಅದರರ್ಥ ನಾವು ಜೀವನದಲ್ಲಿ ಏನಾದರೊಂದು ಸಾಧನೆ ಮಾಡಿ, ಸಮಾಜಕ್ಕೆ ಅರ್ಪಿಸಿದಾಗ ಮಾತ್ರ ನಮ್ಮ ಹುಟ್ಟು ಮತ್ತು ಸಾವು ದೇಶಕ್ಕೆ ನೆನಪಿರುತ್ತದೆ. ಇಲ್ಲದೇ ಹೋದರೆ ನಾವು ಸತ್ತ ನಂತರ ನಮ್ಮ ಮನೆಗಳಲ್ಲಿ ಹಾಕುವ ಪೋಟೋದಲ್ಲಿ ಮಾತ್ರ ನಮ್ಮ ಹುಟ್ಟು ಮತ್ತು ಸಾವಿನ ದಿನಾಂಕ ಕಾಣುತ್ತದೆ ಅಷ್ಟೇ ಎಂದು. 
ಹುಟ್ಟು ಹಬ್ಬ ಆಚರಿಸಿಕೊಳ್ಳುವುದೇ ತಪ್ಪೆಂದು ಹೇಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ವಿಚಾರವು ಹೌದು. ಆ ದಿನ ಪ್ರತಿಯೊಬ್ಬ ವ್ಯಕ್ತಿಗೂ ಖುಷಿಯಿಂದ ಇರಲು ಸಿಗುವ ಒಂದು ದಿನ. ಆದರೆ ಹುಟ್ಟು ಹಬ್ಬ ಯಾವತ್ತೂ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿದ್ದಾಗ ಮಾತ್ರ ನಮಗೆ ವೈಯಕ್ತಿಕವಾಗಿ ಬೆಲೆ ಬರುತ್ತದೆ, ಸಾಮಾಜಿಕವಾಗಿ ಗೌರವ ಸಿಗುತ್ತದೆ. ಆಡಂಬರದ ಹಾಗೂ ಪ್ರಪಂಚದಲ್ಲಿ ಯಾರಿಗೂ ಹುಟ್ಟ ಹಬ್ಬ ಬರುವುದೇ ಇಲ್ಲ ಎಂಬ ಧೋರಣೆಯಿಂದ ಆಚರಿಸುವುದು ಮಾತ್ರ ತಪ್ಪು. ಹುಟ್ಟುಹಬ್ಬದ ದಿನದಂದು ಬಬ್ಬರಿಗಾದರೂ ಸಹಾಯವಾಗುವ ರೀತಿಯಲ್ಲಿ ಸರಳವಾಗಿ ಆಚರಿಸಿಕೊಂಡರೆ ಸಿಗುವ ಗೌರವ ಹೆಚ್ಚು.