ಭಾನುವಾರ, ಡಿಸೆಂಬರ್ 15, 2019

ಅವಮಾನ, ಅನುಮಾನ, ಸನ್ಮಾನ..

⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರು ಕಾಲೇಜೊಂದಕ್ಕೆ ಉಪನ್ಯಾಸ ನೀಡಲು ಹೋದಾಗ, ಒಬ್ಬ ವಿದ್ಯಾರ್ಥಿ ಸಾರ್ ನಿಮ್ಮ ಸಾಧನೆಗೆ ಸ್ಪೂರ್ತಿ ಏನು ಎಂದು ಪ್ರಶ್ನೆ ಹಾಕಿದನಂತೆ. ಆಗ ಅಬ್ದುಲ್ ಕಲಾಂರವರು ಉತ್ತರಿಸುತ್ತ My Best Motivations are Insult & Failure ಎಂದು ಹೇಳಿದ್ದರು. 
ನನ್ನ ಸಾಧನೆಗೆ ಪ್ರೇರಣೆ ನೀಡಿದ್ದು ನನಗಾದ ಅವಮಾನ ಹಾಗೂ ಸೋಲು. ಬೇರೆಯವರು ನಮ್ಮನ್ನು ಅವಮಾನಿಸಿದಾಗಲೇ ಸಾಧನೆ ಮಾಡಬೇಕೆಂಬ ಹಠ ನಮ್ಮಲ್ಲಿ ಹುಟ್ಟುತ್ತದೆ. ಸೋಲು ಕಂಡಾಗಲೇ ಅದರಿಂದ ಪಾಠ ಕಲಿತು ಗೆಲುವಿನ ಬೆನ್ನು ಹತ್ತುತ್ತೇವೆ. ಅವರೆಡು ಯಾರ ಜೀವನದಲ್ಲಿ ಆಗುವುದಿಲ್ಲವೋ, ಅವರು ನನ್ನ ಪ್ರಕಾರ ಸಾಧನೆಯ ಸಮೀಪಕ್ಕೂ ಸುಳಿಯಲು ಸಾಧ್ಯವಿಲ್ಲ ಎಂದು ಅತ್ಯದ್ಬುತವಾಗಿ ಹೇಳಿದ್ದರು. 
ಇಂದು ನಮ್ಮ ಶತ್ರು ಯಾವುದೆಂದರೆ ಅವಮಾನ, ಟೀಕೆ, ವಿಮರ್ಶೆಗಳನ್ನು ಎದುರಿಸುವ ಮಾನಸಿಕ ಶಕ್ತಿ ಇಲ್ಲದಿರುವುದು. ಸಾಧನೆಯ ಹಾದಿಯಲ್ಲಿ ಬಹುತೇಕರನ್ನು ಪದೇ ಪದೇ ಕಾಡುವ ಸಮಸ್ಯೆ ಅವಮಾನ. ಸಣ್ಣ ತಪ್ಪಿಲ್ಲದಿದ್ದರೂ ವಿನಾ ಕಾರಣ ಬೇರೆಯವರಿಂದ ಟೀಕೆ, ವಿಮರ್ಶೆಗಳಿಗೆ ಗುರಿಯಾಗುವುದು.
ಇಂದು ಎಷ್ಟೋ ಜನ ಈ ಅವಮಾನ, ಟೀಕೆಗಳ ಸಹವಾಸವೇ ಬೇಡವೆಂದು ತಟಸ್ಥರಾಗಿ ಇದ್ದು ಬಿಡುತ್ತಾರೆ. ಅಂದುಕೊಂಡ ಗುರಿಯ ಬೆನ್ನು ಹತ್ತುವುದು ಬಿಟ್ಟು ಮತ್ತೊಂದು ದಾರಿಯತ್ತ ಸಾಗುತ್ತಾರೆ. ಏಕೆಂದರೆ ಅವಮಾನಗಳಿಂದ ಆಗುವ ಮಾನಸಿಕಯಾತನೆ ಆ ರೀತಿಯ ಮನಸ್ಥಿತಿಯನ್ನು ಸೃಷ್ಠಿಸಿ ಬಿಡುತ್ತದೆ. ಗೆದ್ದೆ ಗೆಲ್ಲುವೆವು ಎಂದು ಬಲವಾದ ನಂಬಿಕೆ ಹೊಂದಿದ ಅದೆಷ್ಟೋ ಜನರು ಅವಮಾನಗಳಿಗೆ ಒಳಗಾಗಿ ಅರ್ಧದಲ್ಲಿಯೇ ಗುರಿಯ ಓಟ ನಿಲ್ಲಿಸಿ ಬಿಡುತ್ತಾರೆ. 
ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರಂತೆ, ನಮಗೆ ಅವಮಾನಗಳು ಎದುರಾದಾಗ ಧೃಡ ಮನಸ್ಸಿನಿಂದ ಅದನ್ನು ಸ್ವೀಕರಿಸಬೇಕು. ಅವಮಾನಗಳನ್ನು ಗೆಲುವಿನ ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳಬೇಕೆ ಹೊರತು ಭಯ, ನೋವು ಪಟ್ಟರೆ ಸಾಧಿಸುವುದಾದರೂ ಏನು? ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರಂತೆ. 
ನಾನು ಓದಿದ್ದು ಸರಕಾರಿ ಶಾಲೆ, ನಮ್ಮ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ್ದವರು. ನಮ್ಮ ಶಾಲೆಯ ಶಿಕ್ಷಕರೊಬ್ಬರು ಪಾಠದ ಜೊತೆಗೆ ದಿನನಿತ್ಯವು ನೈತಿಕ ಮೌಲ್ಯಗಳ ಬಗ್ಗೆ ಕನಿಷ್ಠ ಅರ್ಧಗಂಟೆಯಾದರೂ ನಮಗೆ ಹೇಳುತ್ತಿದ್ದರು. ಏಕೆಂದರೆ ನಮ್ಮ ಶಿಕ್ಷಕರು ಸ್ವತಹ ಅವಮಾನ, ಟೀಕೆಗಳಿಗೆ ಒಳಗಾಗಿ ಬದುಕು ಕಟ್ಟಿಕೊಂಡವರು. ಬಡತನದಿಂದ ಎದ್ದು ಗೆದ್ದು ಬಂದವರು, ಜೀವನದ ದಾರಿ ಉದ್ದಕ್ಕೂ ಹಲವರ ಅವಮಾನಗಳಿಗೆ ಒಳಗಾಗಿ ಹಲವು ಬಾರಿ ನೋವು ಕಂಡ ನಮ್ಮ ಮೇಷ್ಟ್ರು, ಅವಮಾನಗಳಿಂದ ಆಗುವ ಮಾನಸಿಕಯಾತನೆ ತಮ್ಮ ವಿದ್ಯಾರ್ಥಿಗಳಿಗೆ ಆಗಬಾರದೆಂದು ಶಾಲೆಯ ವಿದ್ಯಾರ್ಥಿಗಳಿಗೆಲ್ಲ ಧೈರ್ಯ ತುಂಬುವ ಮಾತುಗಳನ್ನು ಹೇಳುತ್ತಿದ್ದರು.   
ನೀವು ನಾನು ಮಾಡುವ ವಿಷಯದಲ್ಲಿ ಕಡಿಮೆ ಅಂಕ ತೆಗೆದುಕೊಳ್ಳಿ, ನಾನು ನಿಮ್ಮನ್ನು ಒಂದು ಮಾತು ಬೈಯುವುದಿಲ್ಲ, ಇಲ್ಲವೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಚಿಂತೆಯಿಲ್ಲ. ಬೇಕಾದರೆ ನಾನೇ ಹೆಚ್ಚುವರಿ ತರಗತಿ ತೆಗೆದುಕೊಂಡು ನಿಮಗೆ ಪಾಠ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಹಾಗೇ ಮಾಡುತ್ತೇನೆ. ಆದರೆ ನೀವು ನೈತಿಕ ಮೌಲ್ಯಗಳ ಜೊತೆಗೆ ಪ್ರಪಂಚದಲ್ಲಿ ಬದುಕುವ ಕಲೆ ರೂಡಿಸಿಕೊಳ್ಳಬೇಕು, ಅದಿಲ್ಲದಿದ್ದರೆ ಖಂಡಿತಾ ಜೀವನ ಸಾಗಿಸಲು ಸಾಧ್ಯವಿಲ್ಲ. 
ನೋಡ್ರಪ್ಪ ನಿಮ್ಮ ಬಳಿ ಹಾಕಲು ಸರಿಯಾದ ಬಟ್ಟೆಯಿಲ್ಲ, ಪುಸ್ತಕ ತೆಗೆದುಕೊಳ್ಳಲು ದುಡ್ಡಿಲ್ಲ, ಇಷ್ಟವಾದ ತಿಂಡಿಗಳನ್ನು ತಿನ್ನಲು ಸಾಧ್ಯವಿಲ್ಲ, ಬೇರೆ ಮಕ್ಕಳಂತೆ ಇಷ್ಟವಾದವುಗಳನ್ನು ಪಡೆದುಕೊಳ್ಳಲು ಕಷ್ಟ. ನಿಮ್ಮ ತಂದೆ, ತಾಯಿಗಳು ಕೂಲಿ ಕೆಲಸ ಮಾಡಿ ನಿಮ್ಮನ್ನು ಓದಿಸುತ್ತಿದ್ದಾರೆ. ಅವರಿಗೆ ಬರುವ ಆದಾಯದಲ್ಲಿ ನಿಮ್ಮ ಇಷ್ಟಗಳನ್ನು ಪೂರೈಸುವುದು ಅವರಿಗೆ ಕಷ್ಟ. ಪಾಪ ನೀವು ಕೇಳಲು ಹೋಗುವುದಿಲ್ಲ. 
ಆದರೂ ಕಾನ್ವೆಂಟ್ ಮಕ್ಕಳಿಗಿಂತ ನೀವೇ ಗ್ರೇಟ್ ಯಾಕೆಂದರೆ, ಅವಮಾನ, ಕಷ್ಟಗಳನ್ನು ಎದುರಿಸಿ ಬದುಕುತ್ತಿರುವ ನೀವು ಜೀವನದಲ್ಲಿ ಎಂತಹ ಸನ್ನಿವೇಶಗಳು ಬಂದರೂ ಧೈರ್ಯದಿಂದ ಎದುರಿಸುತ್ತಿರಾ ಎಂದು ನಮ್ಮ ಮೇಷ್ಟ್ರು ಪದೇ ಪದೇ ಹೇಳುತ್ತಿದ್ದರು.
ಅವಮಾನ, ಟೀಕೆಗಳಿಗೆ ಭಯಬಿದ್ದರೆ ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ.
ನಮಗೆ ಅವಮಾನವಾದರೆ ಅದನ್ನು ಸಕಾರಾತ್ಮವಾಗಿ ಸ್ವೀಕರಿಸಬೇಕು. ಏಕೆಂದರೆ ನಾವು ಸಾಧನೆಯಲ್ಲಿ ಬೆಳೆಯುತ್ತಿದ್ದೇವೆ ಎಂದಾಗ ಮಾತ್ರ ಅವಮಾನ, ಟೀಕೆಗಳು ಕೇಳಿ ಬರುತ್ತವೆ. ನಾವು ಏನು ಮಾಡದೆ ನಿರ್ಲಿಪ್ತರಾಗಿದ್ದೇವೆ ಎಂದರೆ ನಮಗೆ ಅವಮಾನಗಳೇ ಆಗುವುದಿಲ್ಲ, ಯಾರೂ ಕೂಡ ನಮ್ಮನ್ನು ವಿಮರ್ಶೆ ಮಾಡುವುದಿಲ್ಲಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು.
ಒಂದು ದಿನ ನಾನು ತರಗತಿ ತೆಗೆದುಕೊಂಡಿದ್ದೆ, ಆ ತರಗತಿಯಲ್ಲಿ ನಾನು ಮಾಡುತ್ತಿದ್ದ ವಿಷಯ ಸಮಸ್ಯೆಗಳ ಬಗೆಹರಿಯುವಿಕೆ ಮತ್ತು ಕ್ರಿಯಾಶೀಲತೆ. ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ವಿಕಲಚೇತನ ಎಷ್ಟೇ ಕಷ್ಟಗಳಿದ್ದರು, ಇತರರನ್ನು ಅವಲಂಭಿಸದೆ ಸ್ವಾವಲಂಭಿ ಜೀವನ ಸಾಗಿಸುತ್ತಿರುವ ದೃಶ್ಯದ ವಿಡಿಯೋ ಒಂದನ್ನು ತೋರಿಸಿದೆ. ಕಾರಣ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರು, ಅದೆಲ್ಲವನ್ನೂ ಮೆಟ್ಟಿ ನಿಂತು ಹೋರಾಟ ಮಾಡುತ್ತಿರುವವರ ಜೀವನದ ಬಗ್ಗೆ ತಿಳಿದರೆ ಶಿಬಿರಾರ್ಥಿಗಳು ಸ್ಪೂರ್ತಿ ಹೊಂದುತ್ತಾರೆ ಎಂದು. ತರಗತಿಯಲ್ಲಿ ಹಾಜರಿದ್ದ ಒಬ್ಬ ಮಹಿಳಾ ವಿಕಲಚೇತನ ಶಿಬಿರಾರ್ಥಿ ಈ ವಿಡಿಯೋ ನೋಡಿದ ನಂತರ ಕಣ್ಣೀರು ಹಾಕಿದಳು.
ನನಗೆ ಅವರು ಏಕೆ ಅಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ, ಯಾಕಮ್ಮ ಅಳುತ್ತಿದ್ದೀಯಾ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ನೋಡಿ ಸಾರ್ ನಾನು ವಿಕಲಚೇತನಳು ಎಂದು ಶಾಲೆಯಿಂದ ಹಿಡಿದು ಕುಟುಂಬದ ಸದಸ್ಯರವರೆಗೂ ಎಲ್ಲರೂ ಅವಮಾನಸಿದ್ದಾರೆ. ಆ ಅವಮಾನಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವೆಷ್ಟು ನೋವು ಕೊಟ್ಟಿದೆ ಎಂದರೆ ಸಾಕಷ್ಟು ಬಾರಿ ನಾನು ಯಾರಿಗೋಸ್ಕರ ಬದುಕಬೇಕು ಎಂದು ಹಲವು ಬಾರಿ ಪ್ರಶ್ನೆ ಹಾಕಿಕೊಂಡಿದ್ದೇನೆ, ಎಷ್ಟೋ ಬಾರಿ ಕಣ್ಣೀರು ಹಾಕಿದ್ದೇನೆ. ಆದರೂ ನನಗೆ ಧೈರ್ಯ ತುಂಬುವ ಮಾತುಗಳನ್ನು ಒಬ್ಬರು ಹೇಳಲಿಲ್ಲ. ನಾನು ಒಂದು ಸಣ್ಣ ಸಾಧನೆಯಾದರೂ ಮಾಡದೆ ಇದ್ದು ಬಿಟ್ಟರೆ ನನಗೆ ಅವಮಾನಗಳನ್ನು ಮಾಡಿದವರಿಗೆ ಪಾಠವಾದರೂ ಕಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಹಾಕಿದಳು.
ಆಗ ನನಗೆ ಅನಿಸಿದ್ದು ನಿಜಕ್ಕೂ ವಿಕಲಚೇತನ ಈ ಹುಡುಗಿಯಲ್ಲ. ಬದಲಾಗಿ ಅವಮಾನಗಳನ್ನು ಮಾಡಿದವರು ಹಾಗೂ ಅವಮಾನಗಳನ್ನು ಸ್ವೀಕರಿಸುವ ಶಕ್ತಿ ಇಲ್ಲದವರು.
ಒಂದು ಬಾರಿ ನನ್ನನ್ನು ಪರಿಚಿತರೊಬ್ಬರು ಕೇಳಿದ್ದರು, ಯಾವ ಕಾಲೇಜಿಗೆ ಸೇರಿದ್ದಿಯಾ ಎಂದು ಅದಕ್ಕೆ ನಾನು ಸರಕಾರಿ ಕಾಲೇಜಿಗೆ ಎಂದೆ. ಅದಕ್ಕೆ ಅವರು ಸರಕಾರಿ ಕಾಲೇಜೆಂದರೆ ಸ್ಲಮ್ ಜನ ಸೇರುವ ಕಾಲೇಜಲ್ಲವೇ ಎಂದು ಉತ್ತರಿಸಿದರು. ಅದರರ್ಥ ಸ್ಲಮ್ ಜನ ಹೋಗುವ ಕಾಲೇಜಿಗೆ ನೀನು ಹೋಗುತ್ತಿದ್ದೀಯಾ, ನಿನಗೆ ಯಾವ ಗೌರವವಿದೆ ಎಂದು ಅವರ ಒಳಾರ್ಥವಾಗಿತ್ತು. ಅವರ ಮಾತಿನಿಂದ ನನಗೆ ಬೇಸರವಾಗಲಿಲ್ಲ. ಕಾರಣ ಸರಕಾರಿ ಶಾಲೆ, ಕಾಲೇಜಿಗೆ ಸ್ಲಂ ಜನ ಹೋಗಬಹುದು. ಆದರೆ ಅವರ ಮನಸ್ಸಲ್ಲಿ ಕೊಳಚೆ ಇರುವುದಿಲ್ಲ. ಪರಿಶುದ್ದವಾದ ಪ್ರಾಮಾಣಿಕತೆ ಇರುವುದು ಸರಕಾರಿ ಶಾಲೆ, ಕಾಲೇಜಿನ ಮಕ್ಕಳಲ್ಲಿ ಎಂಬುವುದು ವಾಸ್ತವ.
ಪ್ರತಿಯೊಬ್ಬರಿಗೂ ಕೆಲವೊಮ್ಮೆ ಕುಟುಂಬದ ಸದಸ್ಯರಿಂದ, ಬಂಧುಗಳಿಂದ, ಸ್ನೇಹಿತರಿಂದ, ಸಹದ್ಯೋಗಿಗಳಿಂದ ಒಂದಲ್ಲಾ ಒಂದು ರೀತಿ ಅವಮಾನವಾಗುವ ಸನ್ನಿವೇಶಗಳು ಎದುರಾಗುತ್ತಲೇ ಇರುತ್ತವೆ. ನಮ್ಮಲ್ಲಿ ಹಣ, ಆಸ್ತಿ ಇಲ್ಲದಿದ್ದರೂ ಅವಮಾನ, ಕಡಿಮೆ ಅಂಕ ಬಂದರೆ, ಸರಿಯಾದ ಕೆಲಸ ಸಿಗದಿದ್ದರೆ ಅಥವಾ ಹೆಚ್ಚು ಸಂಬಳ ಕೊಡುವ ನೌಕರಿ ಸಿಗದಿದ್ದರೂ ಅವಮಾನ. ಕಪ್ಪಗಿದ್ದರೂ, ಕುಳ್ಳಗಿದ್ದರೂ ಅವಮಾನ, ಇತ್ತಿಚೀನ ದಿನಗಳಲ್ಲಂತೂ ಪ್ರಾಮಾಣಿಕವಾಗಿ ಸರಿಯಾಗಿ ಕೆಲ ಮಾಡಿದರೂ ಅವಮಾನ. ಇನ್ನು ನಾವು ಬೇರೆಯವರಿಗಿಂತ ಸಾಧನೆಯಲ್ಲಿ ಬೆಳೆಯುತ್ತಿದ್ದೀವಿ ಎಂದರೆ ಒಂದಲ್ಲಾ ಒಂದು ವಿಷಯಕ್ಕೆ ಅವಮಾನಕ್ಕೆ ಒಳಗಾಗುವ ಸಂದರ್ಭಗಳೇ ಸೃಷ್ಟಿಯಾಗುತ್ತವೆ. ಅವಮಾನದ ಜೊತೆ ಜೊತೆಗೆ ನಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳುವ ಜನವರ್ಗವೇ ಹುಟ್ಟಿಕೊಳ್ಳುತ್ತದೆ.
ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ, ಪ್ರಾಮಾಣಿಕರಾಗಿದ್ದೇವೆ ಎಂದರೆ ಸಹಜವಾಗಿಯೇ ನಮ್ಮ ಬಗ್ಗೆ ಟೀಕೆ, ವಿಮರ್ಶೆಗಳು ಹೆಚ್ಚಾಗುತ್ತವೆ. ಹೆಜ್ಜೆ, ಹೆಜ್ಜೆಗೂ ಅವಮಾನದ ಘಟನೆಗಳು ಎದುರಾಗುತ್ತಲೇ ಇರುತ್ತವೆ. ಅವಮಾನಗಳಿಗೆ ಕುಗ್ಗಿ ಬಿಟ್ಟರೆ ಅಂದುಕೊಂಡ ಗುರಿ ತಲುಪುವುದು ಸಾಧ್ಯವಿಲ್ಲ.
ಚಿತ್ರನಟ ಉಪೇಂದ್ರರವರು ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು, ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅವಮಾನ, ಅನುಮಾನ, ಸನ್ಮಾನ ಎಂಬ ಮೂರು ಅಂಶಗಳು ಒಳಗೊಂಡಿರುತ್ತವೆ. ನೀವು ಏನಾದರೊಂದನ್ನು ಸಾಧಿಸಲು ಹೋದಾಗ ಮೊದಲು ಎದುರಾಗುವುದು ಅವಮಾನ. ಅವಮಾನವನ್ನು ಮೆಟ್ಟಿನಿಂತು ಮುಂದಕ್ಕೆ ಹೆಜ್ಜೆ ಹಾಕಿದರೆ ಆಗ ಜನ ಅನುಮಾನಿಸುತ್ತಾರೆ. ಅವಮಾನ, ಅನುಮಾನವನ್ನು ಮೀರಿ ಬೆಳೆದು ನಿಂತರೆ ಕೊನೆಯಲ್ಲಿ ಸನ್ಮಾನ ಸಿಗುತ್ತದೆ. ಬೇರೆಯವರಿಂದ ಸನ್ಮಾನ ಸ್ವೀಕರಿಸಬೇಕಾದರೆ ಅವಮಾನ, ಅನುಮಾನಗಳಿಗೆ ಸಿದ್ದವಾಗಿರಬೇಕು ಎಂದು ಹೇಳಿದ್ದರು.
ಯಾರೋ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ, ಇಲ್ಲಸಲ್ಲದ ದೂರುಗಳನ್ನು ಹೇಳುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮಗೆ ಸದಾ ನೆನಪಿರಬೇಕಾದದ್ದು ನಮ್ಮ ಗುರಿ ಹಾಗೂ ಅದು ತಲುಪುವ ದಾರಿ ಮಾತ್ರ. ಬೇರೆಯವರ ಮಾತುಗಳಿಂದ ಅವಮಾನವಾಗುತ್ತದೆ ಎಂದು ಆಲೋಚಿಸಿ ಕುಳಿತಿಕೊಳ್ಳುವ ಸಮಯವೆಲ್ಲಿದೆ ಹೇಳಿ. ನಮಗೆ ಅವಮಾನ ಮಾಡಿ, ಟೀಕೆ ಮಾಡಿದ ಅದು ಸಂಬಂಧಿಕರಿರಲಿ, ಸ್ನೇಹಿತರಿರಲಿ, ಸಹದ್ಯೋಗಿಗಳಿರಲಿ ಅವರಿಗೆ ತಿರುಗೇಟು ಕೊಡುವ ಅಸ್ತ್ರ ನಮ್ಮ ಸಾಧನೆ ಮಾತ್ರ.
ಅವಮಾನಗಳನ್ನು ಎದುರಿಸುವ ತಾಕತ್ತು ನಿಮಗೆ ಇಲ್ಲದಿದ್ದರೆ, ಸುಮ್ಮನೆ ಇದ್ದು ಬಿಡುವುದು ಲೇಸು ಎಂದು ತತ್ವಜ್ಞಾನಿ ಒಬ್ಬರ ಮಾತು ನೆನಪಿನಲ್ಲಿರಲಿ.

ಗುರುವಾರ, ನವೆಂಬರ್ 14, 2019

ಬದುಕಿಗೆ ಭರವಸೆ ತುಂಬುವ "ಪದಗಳು"..


⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಗುರಿ ಇಟ್ಟುಕೊಳ್ಳುವುದು ಸುಲಭ, ಆದರೆ ಆ ಗುರಿ ತಲುಪುವುದು ಅಷ್ಟು ಸುಲಭವಲ್ಲ. ಸತತ ಪರಿಶ್ರಮ ಮಾತ್ರ ಗುರಿ ತಲುಪಲು ಇರುವ ಏಕೈಕ ಮಾರ್ಗ. ವಾಸ್ತವ ಏನೆಂದರೆ ನಮ್ಮ ಜೀವನವು ಹಾದಿ ತಪ್ಪದೇ ನಡೆಯಲು ಹಾಗೂ ನಮ್ಮ ಗುರಿ ಸಾಧಿಸಲು ಕೆಲವು ಪದಗಳ ಜೊತೆ ಆತ್ಮೀಯತೆ, ಅನುಬಂಧ ಹೊಂದುವುದು ತೀರ ಅಗತ್ಯ, ಅನಿವಾರ್ಯವು ಹೌದು.
ನಮ್ಮ ಮನಸ್ಸು ಚಂಚಲ, ಏನೇನೋ ಬೇಡವಾದವುಗಳೇ ಮನಸ್ಸಿನಲ್ಲಿ ಹೆಚ್ಚು ತುಂಬಿಕೊಳ್ಳುತ್ತಲೇ ಇರುತ್ತವೆ. ಮನಸ್ಸನ್ನು ಹತೋಟಿಯಲ್ಲಿಡುವ ಶಕ್ತಿ ನಮ್ಮಲ್ಲಿರಬೇಕು. ಮನಸ್ಸು ದಾರಿತಪ್ಪದೇ ನಿಯಂತ್ರಿಸುವ ಸಾಮರ್ಥ್ಯ ಈ ಪದಗಳಿಗೆ ಇವೆ. ಇವು ಕೇವಲ ಪದಗಳಲ್ಲ, ಬದುಕಿಗೆ ಭರವಸೆ ತುಂಬಿ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಈ ಪದಗಳಿಗೆ ಇದೆ. ಜಗತ್ತಿಗೆ ನಮ್ಮನ್ನು ಪರಿಚಯಿಸುವ ಅಪರಿಮಿತ ಶಕ್ತಿ ಈ ಅಮೂಲ್ಯವಾದ ಪದಗಳಿಗೆ ಇದೆ ಎಂಬುವುದು ಸತ್ಯ.
ಅವೆಂದರೆ ಪ್ರಾಮಾಣಿಕತೆ, ಆತ್ಮಸ್ಥೈರ್ಯ, ಭಾವನಾತ್ಮಕತೆ, ಅನುಕಂಪ, ಸರಳತೆ, ಆತ್ಮತೃಪ್ತಿ, ನಾವು ಎಂಬ ಪರಿಕಲ್ಪನೆ, ಸ್ಪೂರ್ತಿ, ತಾಳ್ಮೆ, ಸಂಸ್ಕಾರ, ಸಹನೆ, ವಿನಯ ಸೇರಿದಂತೆ ಮತ್ತಿತರ ಕೆಲವು ಪದಗಳು ವೈಶಿಷ್ಟತೆಯಿಂದ ಕೂಡಿದ್ದು, ಇಂತಹ ಪದಗಳು ನಮ್ಮ ಜೀವನದ ಒಂದು ಭಾಗವಾಗಿ, ನಮ್ಮ ಹೃದಯದ ಅಂತರಾಳ ಸೇರಬೇಕಿದೆ.
ಪ್ರಾಮಾಣಿಕತೆ ಈ ಪದ ಎಲ್ಲರಲ್ಲೂ ಇರಲೇಬೇಕಿತ್ತು, ಆದರೆ ಸಮಾಜದ ಬಹುಪಾಲು ಜನ ಈ ಪದದಿಂದ ತುಂಬಾನೇ ದೂರವಿದ್ದಾರೆ. ನಾವು ಯಾವುದೇ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಕೂಡ ಪ್ರಾಮಾಣಿಕತೆ ಎಂಬ ಅಂಶ ಮಾತ್ರ ಮರೆಯಲೇ ಬಾರದು. ಅಪ್ರಾಮಾಣಿಕ ಎಂದು ಸಮಾಜ ಗುರ್ತಿಸುತ್ತಿದೆ ಎಂದರೆ ನಾವು ನಮ್ಮ ಸೋಲಿಗೆ ತೀರ ಹತ್ತಿರದಲ್ಲಿದ್ದೇವೆ ಎಂದರರ್ಥ . ಇನ್ನು ಆತ್ಮಸ್ಥೈರ್ಯ ಅಥವಾ ಆತ್ಮವಿಶ್ವಾಸ ಈ ಅಂಶವು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಎಷ್ಟೋ ಜನ ಸಾಧನೆ ಮಾಡಬೇಕೆಂಬ ಆಸೆ ಇದ್ದರೂ ಏನು ಮಾಡದೆ ಸುಮ್ಮನೆ ಇದ್ದು ಬಿಡುತ್ತಾರೆ. ಅದಕ್ಕೆ ಮೂಲ ಕಾರಣ ಆತ್ಮವಿಶ್ವಾಸದ ಕೊರತೆ. ಪ್ರತಿನಿತ್ಯವು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಜನವರ್ಗವೇ ನಮ್ಮ ಸುತ್ತಲೂ ಇರುತ್ತದೆ. ಅದು ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು, ಸಂಬಂಧಿಕರು, ಸಹದ್ಯೋಗಿಗಳು ಸೇರಿದಂತೆ ಮತ್ತಿತರರ ರೂಪಗಳಲ್ಲಿ ನಮ್ಮ ವಿಶ್ವಾಸ ಕಳೆಗುಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. 
ಯಾರಾದರೂ ಒಬ್ಬ ಬೆಳೆಯುತ್ತಾನೆ ಎಂದರೆ ತುಳಿಯುವವರ ಸಂಖ್ಯೆ ಜಾಸ್ತಿಯಾಗುತ್ತಾರೆ ಹೊರತು ಬೆಳೆಸುವವರ ಸಂಖ್ಯೆಯಲ್ಲ, ಪ್ರಪಂಚವೇ ಆಗಿದೆ. ಇಂತಹ ಸಂದರ್ಭದಲ್ಲಿ ಆತ್ಮವಿಶ್ವಾಸ ಅಥವಾ ಆತ್ಮಸ್ಥೈರ್ಯ ನಮ್ಮಲ್ಲಿ ಕೆ.ಜಿ ಅಲ್ಲ, ಟನ್ ಗಟ್ಟಲೆ ಇರಬೇಕು. 
ಮತ್ತೊಂದು ಪದ ಸರಳತೆ, ಹೌದು ಈ ಪದವೇ ಒಂದು ರೀತಿಯಲ್ಲಿ ವಿಶೇಷತೆಯಿಂದ ಕೂಡಿದೆ. ಹಲವು ಬಾರಿ, ಹಲವು ಸಂದರ್ಭಗಳಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಜೀವನದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ಎಷ್ಟೇ ಹಣ ಸಂಪಾದಿಸಿದರು, ಉನ್ನತ ಹುದ್ದೆಗೆ ಹೋದರು ಸರಳವಾಗಿ ಜೀವನ ನಡೆಸುವ ಪದ್ದತಿ ಮಾತ್ರ ಕೈ ಬಿಡಬಾರದು. ಸರಳತೆ ನಮ್ಮ ವ್ಯಕ್ತಿತ್ವಕ್ಕೆ ಬೆಳಕು ನೀಡುತ್ತದೆ. ಏನು ಇಲ್ಲದಿದ್ದರು ಕೂಡ ದೊಡ್ಡದಾಗಿ ನಮ್ಮ ಬಳಿ ಆಸ್ತಿ ಅಂತಸ್ತು ಇದೆ ಎಂದು ಹೇಳುವ ಅವಶ್ಯಕತೆ ಖಂಡಿತಾ ಬೇಡ. ದೇವರು ಕೊಟ್ಟ ಶಕ್ತಿಯಲ್ಲೇ ಜೀವನ ಸಾಗಿಸೋಣ ಹೊರತು, ಇತರರ ಮುಂದೆ ಜಂಬ ಕೊಚ್ಚಿಕೊಳ್ಳಲು ಸರಳತೆ ಬಿಟ್ಟು ಜೀವನ ಸಾಗಿಸುವುದು ಸರಿಯಲ್ಲ. ಇತಿಹಾಸ ನೆನಪಿಟ್ಟುಕೊಳ್ಳುವುದು ಸರಳತೆಯಿಂದ ಜೀವನ ಸಾಗಿಸಿದ ವ್ಯಕ್ತಿಗಳನ್ನೇ ಹೊರತು ಐಷರಾಮಿ ಜೀವನ ಸಾಗಿಸಿದವರನಲ್ಲ ಎಂಬುವುದು ವಾಸ್ತವ. ಮಹಾತ್ಮ ಗಾಂಧಿಜೀಯವರು ಕಾಲವಾಗಿ ದಶಕಗಳು ಕಳೆದರು ನಾವು ಇನ್ನು ಅವರನ್ನು ನೆನಪಲ್ಲಿ ಇಟ್ಟುಕೊಂಡಿರುವುದು ಸ್ವಾತಂತ್ರ್ಯ ಹೋರಾಟಗಾರರು ಜೊತೆಗೆ ಅತ್ಯಂತ ಸರಳತೆಯಿಂದ ಜೀವನ ಸಾಗಿಸಿ ಆದರ್ಶವಾದರೂ ಎಂಬ ಭಾವನೆಯಿಂದ.
ಆತ್ಮತೃಪ್ತಿ ಈ ಪದವನ್ನಂತು ನಾವು ಎಂದೋ ಮರೆತು ಹೋಗಿದ್ದೇವೆ, ಯಾಕೆಂದರೆ ಇರುವುದರಲ್ಲಿ ತೃಪ್ತಿ, ಆನಂದ ಪಡುವ ಮನಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಎಷ್ಟೇ ಆಸ್ತಿ ಇದ್ದರೂ ತೃಪ್ತಿ ಇಲ್ಲ. ಸೈಕಲ್ ಇಲ್ಲದಿದ್ದಾಗ ಸೈಕಲ್ ಮೇಲೆ ಆಸೆ, ಸೈಕಲ್ ಖರಿದೀಸಿದರೆ ದ್ವಿಚಕ್ರ ವಾಹನದ ಮೇಲೆ ಪ್ರೀತಿ, ದ್ವಿಚಕ್ರ ವಾಹನ ಸಿಕ್ಕರೆ ಕಾರಿನ ಮೇಲೆ ವ್ಯಾಮೋಹ ಸೃಷ್ಟಿಯಾಗುತ್ತದೆ. ಕಾರು ಖರೀದಿಸಿದ ನಂತರವಾದರೂ ತೃಪ್ತಿಯಿಂದ ಇದ್ದೇವೆ ಎಂದರೆ ಆಗಲು ಇಲ್ಲ, ಯಾಕೆಂದರೆ ಕಾರನ್ನೇನೋ ಖರೀದಿಸಿದೆ, ಆದರೆ ಇನ್ನು ಹೆಚ್ಚು ಬೆಲೆ ಬಾಳುವ ಕಾರಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಮನಸ್ಸಲ್ಲಿ ಆಸೆ ಶುರುವಾಗುತ್ತದೆ. ಈಗೆ ಮನೆ, ಆಸ್ತಿ, ಕಾರು, ಅಪಾರ್ಟ್ ಮೆಂಟ್, ತೋಟ, ಜಮೀನು ಏನೇ ಇದ್ದರೂ ತೃಪ್ತಿ ಇಲ್ಲ.
ತೃಪ್ತಿ ಎಂಬ ಅಂಶವೇ ಇಲ್ಲದೇ ಜೀವನ ಸುಂದರವಾಗಿ ಕಳೆಯಲು ಹೇಗೆ ಸಾಧ್ಯ ? ಅದಕ್ಕೆ ಹೇಳುವುದು ಇರುವುದರಲ್ಲೇ ತೃಪ್ತಿ ಕಾಣಬೇಕು, ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ಆಸೆ ಪಟ್ಟರೆ ಏನು ಪ್ರಯೋಜನ? 
ಸಂಸ್ಕಾರ, ವಿನಯ ಈ ಪದಗಳು ತುಸು ಹೆಚ್ಚೆ ಗೌರವವನ್ನು ಪಡೆದಿದೆ. ಇಂದು ಜನರ ಬಳಿ ಹಣ, ಆಸ್ತಿ, ಅಧಿಕಾರ ಸೇರಿದಂತೆ ಎಲ್ಲವೂ ಇದೆ, ಒಂದನ್ನು ಬಿಟ್ಟು ಅದೇ ಸಂಸ್ಕಾರ. ಯಾವುದೇ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು ಸಂಸ್ಕಾರ, ವಿನಯ ಬಹು ಮುಖ್ಯ. ನಮ್ಮ ಸಂಸ್ಕಾರವೇ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಇಂದು ಶಿಕ್ಷಣವಂತರಾಗುತ್ತಿದ್ದೇವೆ ಆದರೆ ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದೇವೆ. ಹಿಂದಿನ ತಲೆಮಾರಿನ ಜನ ಮೂಲ ಶಿಕ್ಷಣ ಪಡೆಯುತ್ತಿರಲಿಲ್ಲ, ಆದರೆ ಸಂಸ್ಕಾರ ಶಿಕ್ಷಣ ನಮ್ಮಗಿಂತ ಹೆಚ್ಚಾಗಿ ಹೊಂದಿದ್ದರು. ಇಂದು ಪಾಠ ಮಾಡಿದ ಗುರುಗಳು ಎದುರಿಗೆ ಸಿಕ್ಕರು ನಮಸ್ಕಾರ ಮಾಡಬೇಕೆಂಬ ವಿವೇಚನೆಯೇ ವಿದ್ಯಾರ್ಥಿಗಳಿಗೆ ಇಲ್ಲ. ಹಿರಿಯರಿಗೆ ಗೌರವ ಕೊಡಬೇಕೆಂಬ ಮನಸ್ಥಿತಿ ಸತ್ತು ಹೋಗುತ್ತಿದೆ. ಬಸ್ ಅಲ್ಲಿ ಯಾರಾದರೂ ವಯಸ್ಸಾದವರೂ ನಿಂತುಕೊಂಡಿದ್ದರೆ, ಕನಿಷ್ಠ ಅವರಿಗೆ ಸೀಟು ಬಿಟ್ಟುಕೊಡುವ ಸೌಜನ್ಯವೇ ಇಂದಿನ ಜನಕ್ಕೆ ಇಲ್ಲ. ಇತರರನ್ನು ಗೌರವಯುತವಾಗಿ ಮಾತನಾಡಿಸುವ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಸಂಸ್ಕಾರ, ವಿನಯ ಇಲ್ಲದೇ ಜೀವನ ಸಾಗಿಸುವ ಜನ ಎಂದು ಕೂಡ ಅಭಿವೃದ್ದಿ ಕಾಣಲು ಸಾಧ್ಯವಿಲ್ಲ.
ಕರುಣೆ, ಅನುಕಂಪ ಮತ್ತು ಉದಾರತೆ ಈ ಮೂರು ಪದಗಳು ಹತ್ತಿರ ಸಂಬಂಧ ಹೊಂದಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಈ ಅಂಶಗಳೂ ಕೂಡ ಪರಿಣಾಮ ಬೀರುತ್ತದೆ. ಅಸಹಾಯಕರು, ಕಷ್ಟದಲ್ಲಿರುವವರ ಬಗ್ಗೆ ಸಹಜವಾಗಿಯೇ ನಮಗೆ ಅನುಕಂಪ ಮತ್ತು ಉದಾರತೆ ಇರಬೇಕು. ಕೋಟಿ ಕೋಟಿ ಹಣ ಸಂಪಾದಿಸುವುದು ದೊಡ್ಡ ಸಾಧನೆ ಅಲ್ಲ. ಯಾಕೆಂದರೆ ನಮಗಿಂತಲೂ ಮುಂಚೆ ಸಾವಿರಾರು ಜನ ಹಣ ಸಂಪಾದಿಸಿರುತ್ತಾರೆ. ನಮ್ಮ ನಂತರವು ಸಾವಿರಾರು ಜನ ಹಣ ಸಂಪಾದಿಸುತ್ತಾರೆ ಅದು ದೊಡ್ಡ ವಿಚಾರವೇ ಅಲ್ಲ. ನಮ್ಮ ಕೈಯಿಂದ ಕನಿಷ್ಠ ಇಬ್ಬರಿಗಾದರೂ ಸಹಾಯ ಮಾಡಿದರೆ ಅದರಿಂದ ಸಿಗುವ ಆನಂದ ಅಷ್ಟಿಷ್ಟಲ್ಲ. ನಾವು ನಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡರೆ, ನಮಗೂ ಒಂದಲ್ಲಾ ಒಂದು ದಿನ ಕಷ್ಟದಲ್ಲಿದ್ದಾಗ ಬೇರೆಯವರಿಂದ ನಮಗೆ ಸಹಾಯ ಸಿಗುತ್ತದೆ. ಸಮಾಜದಲ್ಲಿ ಎಷ್ಟೋ ಜನ ಜೀವನ ಸಾಗಿಸಲು ಸಾಧ್ಯವಾಗದ ಅಶಕ್ತರಿದ್ದಾರೆ, ಅಂತವರ ಬಗ್ಗೆ ಸ್ವಲ್ಪವಾದರೂ ಕರುಣೆ ಇರಬೇಕು. ಕರುಣೆ, ಅನುಕಂಪ, ಉದಾರತೆ ನಮ್ಮ ವ್ಯಕ್ತಿತ್ವಕ್ಕೆ ಪ್ಲಸ್ ಪಾಯಿಂಟ್ ಇದ್ದಂತೆ.
ಇನ್ನೊಂದು ವಿಚಾರ ನಾವು ಹೊಂದಿರಲೇ ಬಾರದ ಕೆಲವು ಪದಗಳಿವೆ, ಈ ಪದಗಳು ತುಂಬಾನೇ ಡೇಂಜರ್. ಅವೆಂದರೆ ಅಸೂಹೆ, ಅಹಂಕಾರ, ಗರ್ವ, ಸ್ವಾರ್ಥ ಮುಂತಾದವುಗಳು. ಅಸೂಹೆ ಅಥವಾ ಹೊಟ್ಟೆಕಿಚ್ಚು ಈ ಪದವನ್ನು ನಾವು ಮೈಗೂಡಿಸಿಕೊಂಡಿದ್ದರೆ ನಮಗೆ ನಾವೇ ಕೊಡಲಿ ಪೆಟ್ಟು ಕೊಟ್ಟುಕೊಂಡಂಗೆ. ನಮ್ಮಲ್ಲಿ ಬಹಳಷ್ಟು ಜನ, ಬೇರೊಬ್ಬರು ಬೆಳೆಯುತ್ತಿದ್ದಾರೆ ಎಂದು ಅಸೂಹೆ ಪಡುತ್ತಾರೆ. ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹಬ್ಬಿಸುತ್ತಾರೆ. ಅಯ್ಯೋ ಈತ ಬೆಳೆದು ಬಿಟ್ಟನ್ನಲ್ಲ ಎಂದು ಹೊಟ್ಟೆಕಿಚ್ಚು ಪಡುತ್ತಾರೆ. ನಮಗೆ ಶಕ್ತಿ ಇದ್ದರೆ ಅಥವಾ ಶಕ್ತಿಯನ್ನು ಸಂಪಾದಿಸಿಕೊಂಡು ಬೆಳೆಯಲು ಪ್ರಯತ್ನಿಸಬೇಕೆ ಹೊರತು ಬೇರೆಯವರು ಅಭಿವೃದ್ದಿಯಾಗುತ್ತಿದ್ದಾರೆ ಎಂದು ಅಸೂಹೆ ಪಟ್ಟರೆ ಆಗುವ ಲಾಭವಾದರೂ ಏನು ಇಲ್ಲ ? ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅಷ್ಟೇ..
ಅಹಂಕಾರ, ಗರ್ವ ಈ ಎರಡು ಪದಗಳು ಮನುಷ್ಯನ ಪರಮ ಶತ್ರುಗಳು. ಹಿರಿಯರೊಬ್ಬರು ಹೇಳುತ್ತಾರೆ, ಒಬ್ಬ ವ್ಯಕ್ತಿಯ ಅಹಂಕಾರ ಅಳೆಯಬೇಕಾದರೆ ಬಹಳ ಹೊತ್ತು ಬೇಕಿಲ್ಲ. ಆತನ ಬಳಿ ಒಂದು ನಿಮಿಷ ಮಾತನಾಡಿದರೆ ಸಾಕು ಆತ ಅಹಂಕಾರ ಹೊಂದಿದ್ದಾನೋ, ಇಲ್ಲವೋ ಹೇಳಬಹುದು ಎಂದು. ನಾವು ಮಾತನಾಡುವ ಭಾಷೆಯೇ ನಮ್ಮ ಅಹಂಕಾರದ ಬಗ್ಗೆ ಸುಳಿವು ನೀಡುತ್ತದೆ. ಮನುಷ್ಯನಲ್ಲಿ ಅಹಂಕಾರ ಹುಟ್ಟುವುದು ತಾನು ಎಲ್ಲರಿಗಿಂತ ಶ್ರೇಷ್ಠ, ತಾನೇ ಬುದ್ದಿವಂತ, ನಾನು ಸುಂದರವಾಗಿದ್ದಾನೆ ಉಳಿದವರು ನನ್ನ ಮುಂದೆ ವೇಸ್ಟ್ ಎಂಬ ಕಲ್ಪನೆ ಮನಸ್ಸಲ್ಲಿ ಹುಟ್ಟಿದಾಗ ಸಹಜವಾಗಿಯೇ ಅಹಂಕಾರ ಧಿಡೀರ್ ಎಂದು ಹೆಚ್ಚುತ್ತದೆ. 
ಅಹಂಕಾರವಿದ್ದರೆ ಗರ್ವ ತನ್ನಿಂದ ತಾನೇ ಹುಟ್ಟುತ್ತದೆ. ಈ ಎರಡು ಪದಗಳು ಜೊತೆಯಾದರೆ ನಮ್ಮ ಜೀವನವೇ ವ್ಯರ್ಥವನ್ನಾಗಿ ಮಾಡಿ ಬಿಡುತ್ತದೆ. ಇನ್ನು ಸಾಧನೆ ಮಾಡುವುದು ಎಲ್ಲಿಂದ ? 

ಇನ್ನು ಸ್ವಾರ್ಥ, ಈ ಪದವು ಒಂದು ರೀತಿ ಕಾಂಪ್ಲೀಕೆಟೇಡ್ ಪದ. ಎಲ್ಲರಲ್ಲೂ ಸ್ವಾರ್ಥ ತುಂಬಿ ತುಳುಕುತ್ತಿದೆ. ನಮಗೆ ಲಾಭವಿಲ್ಲದಿದ್ದರೆ ಒಂದು ಗ್ಲಾಸ್ ಕುಡಿಯುವ ನೀರು ಕೂಡ ಯಾರಿಗೂ ಕೊಡದ ಭಯಂಕರ ಪರಿಸ್ಥಿತಿಯನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಪ್ರತಿಯೊಂದರಲ್ಲೂ ಕ್ಯಾಲುಕುಲೇಶನ್, ನಾನು ಚೆನ್ನಾಗಿದ್ದಾರೆ ಸಾಕು ಉಳಿದವರು ಹಾಳಾಗಿ ಹೋದರು ಚಿಂತೆಯಿಲ್ಲ ಎನ್ನುವುದು ಬಹು ಜನರ ಆಲೋಚನೆ. ಬಹುತೇಕ ಜನ ಪ್ರತಿಯೊಂದರಲ್ಲೂ ಲಾಭ ಬರಬೇಕು ಎಂಬ  ದೃಷ್ಟಿಕೋನ ಹೊಂದಿರುತ್ತಾರೆ . ಸ್ವಾರ್ಥಕ್ಕಾಗಿಯೇ ಬದುಕುತ್ತಾರೆ, ಇಂತಹ ಜನ ಎಷ್ಟೇ ವರ್ಷ ಬದುಕಿದರು ಯಾರಿಗೂ ಒಂದು ಪೈಸೆ ಪ್ರಯೋಜನವಿಲ್ಲ.  ಯಾರು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. 
ಇನ್ನು ಕೋಪ ಈ ಅಂಶವಂತು ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರ ಪ್ರಮಾಣ ಎಷ್ಟಿದೆ ಎಂಬುವುದು ಮುಖ್ಯ. ಅನಗತ್ಯವಾಗಿ ಕೋಪ ಮಾಡಿಕೊಳ್ಳುವ ಜನರು ಈಗಲೂ ಇದ್ದಾರೆ. ಯಾರ್ಯಾರೋ ಮೇಲೆ ಕೋಪ ಮಾಡಿಕೊಂಡು ಸಮಸ್ಯೆಗೆ ಒಳಗಾಗ ಬೇಕಾದ ಸಂದರ್ಭವನ್ನು ಸ್ವತಃ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಆತ್ಮೀಯರನ್ನು ನಮ್ಮಿಂದ ದೂರ ಮಾಡಿಕೊಂಡಿದ್ದರೆ, ಅದಕ್ಕೆ ಒಂದು ಕಾರಣ ಕೋಪ. ಕೋಪ ಮಿತಿ ಮೀರಿದರೆ ಆಗುವ ಅನಾಹುತಗಳಿಗೆ ನಾವೇ ಹೊಣೆಯಾಗುತ್ತೇವೆ.
ಈಗೆ ಹಲವು ಪದಗಳು ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತವೆ. ವಿಪರ್ಯಾಸವೆಂದರೆ ನಮ್ಮ ಬಳಿಯೇ ಜೋಪಾನವಾಗಿ ಇಟ್ಟುಕೊಳ್ಳಬೇಕಾದ ಪದಗಳನ್ನು ದೂರ ತಳ್ಳಿದ್ದೇವೆ. ನಮ್ಮ ಸಮೀಪಕ್ಕೂ ಸೇರಿಸಬಾರದಾಗಿದ್ದ ಪದಗಳನ್ನು ನಮ್ಮ ಬಳಿ ಇಟ್ಟುಕೊಂಡಿದ್ದೇವೆ, ಇದು ವಿಚಿತ್ರ, ಆದರೂ ಸತ್ಯ. 
ಧನಾತ್ಮಕತೆಯಿಂದ ಕೂಡಿರುವ ಪದಗಳನ್ನು ನಾವು ಮೈಗೂಡಿಸಿಕೊಂಡಿದ್ದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಏಕೆಂದರೆ ಗುರಿಗೂ ಪದಗಳಿಗೂ ಅವಿನಾಭಾವ ಸಂಬಂಧವಿದೆ. ನಕಾರತ್ಮಕತೆಯನ್ನು ಸೃಷ್ಟಿಸುವ ಪದಗಳ ಬಗ್ಗೆ ನಮಗೆ ಎಚ್ಚರವಿರಬೇಕು.
ಯಾವು ಪದಗಳನ್ನು ಅನುಸರಿಸಬೇಕು, ಯಾವುದನ್ನು ಅನುಸರಿಸಬಾರದು ಎಂಬ ಜ್ಞಾನವೇ ಇಲ್ಲದೇ ಹೋದರೆ ಬದುಕಿನ ದಾರಿ ಕತ್ತಲಾಗುತ್ತದೆ. ಕತ್ತಲಾದ ದಾರಿಯಲ್ಲಿ ಪ್ರಯಾಣ ಹೇಗೆ ಮಾಡಲು ಸಾಧ್ಯ ?  ಆಲೋಚಿಸಿ..

ಬುಧವಾರ, ಅಕ್ಟೋಬರ್ 9, 2019

ಫ್ರೆಂಡ್ is a Forever & Ever..


⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ  

ಮೊನ್ನೆ ಟಿ.ವಿಯಲ್ಲಿ ತ್ರಿ ಇಡಿಯಟ್ಸ್ ಚಿತ್ರ ಹಾಕಿದ್ದರು. ಮೂರು ಜನ ಸ್ನೇಹಿತರ ನಡುವಿನ ಕಥಾ ಹಂದರವನ್ನು ಹೊಂದಿರುವ ಚಿತ್ರವದು. ಕಾಲೇಜಿನಲ್ಲಿ ಪರಿಚಯವಾಗುವ 3 ಜನ ಸ್ನೇಹಿತರು (ವಿಜಯ್, ಶ್ರೀಕಾಂತ್, ಜೀವ) ಅನೇಕ ಕಷ್ಟಗಳು ಎದುರಾದರೂ ಪರಸ್ಪರ ಸಹಕಾರದೊಂದಿಗೆ ತಮ್ಮ ಅಂತಿಮ ಗುರಿಯನ್ನು ತಲುಪುತ್ತಾರೆ. ಅದರಲ್ಲೂ ನಟ ವಿಜಯ್ ತನ್ನ ಇಬ್ಬರು ಸ್ನೇಹಿತರಿಗೆ ಕೊಟ್ಟ ಪ್ರೋತ್ಸಾಹ, ಹುಮಸ್ಸು ಅವಸ್ಮರಣೀಯ. ಹಾಸ್ಯ ಮಿಶ್ರಿತ ಚಿತ್ರವು ಸ್ನೇಹಿತರ ನಡುವೆ ಇರಬೇಕಾದ ಗುಣಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ನಿರ್ದೇಶಕ ಶಂಕರ್ ಚಿತ್ರದಲ್ಲಿ ಒಂದು ಒಳ್ಳೆಯ ಮೆಸೇಜ್ ನೀಡಿದ್ದಾರೆ.  
ವಿಶೇಷವೆಂದರೆ ಪ್ರತಿವರ್ಷವು ವಿಶ್ವದಾದ್ಯಂತ ಹಲವಾರು ದಿನಚಾರಣೆಗಳನ್ನು ಆಚರಿಸುವ ಪರಿಪಾಠ ಇದೆ. ವಿಶ್ವ ಮಣ್ಣು ದಿನ, ವಿಶ್ವ ಮಕ್ಕಳ ದಿನ, ವಿಶ್ವ ಆಹಾರ ದಿನ, ವಿಶ್ವ ಶಿಕ್ಷಕರ ದಿನ, ಶಾಂತಿ ದಿನ, ಯುವ ದಿನ, ಯೋಗ ದಿನ, ವಿಶ್ವ ಸ್ನೇಹಿತರ ದಿನ, ವಿಶ್ವ ಪರಿಸರ ದಿನ, ಪ್ರೇಮಿಗಳ ದಿನ, ಕಾರ್ಮಿಕರ ದಿನ, ಪ್ರವಾಸೋದ್ಯಮ ದಿನ, ರೈತರ ದಿನ ಸೇರಿದಂತೆ ಹತ್ತಾರು ದಿನಾಚರಣೆಗಳನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದರಲ್ಲಿ ಅತ್ಯಂತ ಪ್ರಮುಖವಾದ ದಿನ ಎಂದರೆ ಸ್ನೇಹಿತರ ದಿನ, ಭಾರತದಲ್ಲಿ ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಬರುವ ಮೊದಲ ಭಾನುವಾರದಂದು ಫ್ರೆಂಡ್ ಶಿಫ್ ಡೇ ಆಚರಿಸುವ ಪದ್ದತಿ ಬೆಳೆದಿದೆ.
ಹಾಗೆಯೇ ಬ್ರೆಜಿಲ್ ನಲ್ಲಿ ಜುಲೈ.20, ಫಿನ್ ಲ್ಯಾಂಡ್, ನೇಪಾಳ್ ನಲ್ಲಿ ಜುಲೈ.30, ಸ್ಪೇನ್ ಜುಲೈ.20, ಯು.ಎಸ್ ನಲ್ಲಿ ಫೆಬ್ರವರಿ 15, ಮೆಕ್ಸಿಕೋ ನಲ್ಲಿ ಜುಲೈ.14 ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಪದ್ದತಿಯಂತೆ ಆಯಾ ದಿನಗಳಂದು ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ಇತ್ತಿಚೀಗೆ ಸೋಷಿಯಲ್ ಮೀಡಿಯಾಗಳು ಬಂದ ಮೇಲಂತು ಪ್ರೆಂಡ್ ಶಿಫ್ ಡೇ ದಿನದಂದು ಶುಭಾಷಯಗಳ ವಿನಿಮಯದ ಸದ್ದು ಜೋರಾಗಿಯೇ ನಡೆಯುತ್ತದೆ. ಮೊದಲೆಲ್ಲ ಅಂಗಡಿಗಳಿಗೆ ಹೋಗಿ ಗ್ರಿಟಿಂಗ್ ಕಾರ್ಡ್ ಖರಿದೀಸಿ ಅದನ್ನು ತಮ್ಮ ಸ್ನೇಹಿತನಿಗೆ ಕೊಟ್ಟು ಶುಭಾಶಯ ಹೇಳಿ ಪ್ರೆಂಡ್ ಶಿಫ್ ಡೇ ಆಚರಿಸುವ ವ್ಯವಸ್ಥೆ ಇತ್ತು. ಸೋಷಿಯಲ್ ಮೀಡಿಯಾಗಳ ಹವಾದ ಮಧ್ಯೆ ಗ್ರೀಟಿಂಗ್ ಕಾರ್ಡ್ ಗಳು ಕಣ್ಮರೆಯಾದರೂ, ವಾಟ್ಸಾಪ್ ಮೇಸೆಜ್ ಗಳ ಮೂಲಕ ಶುಭಾಷಯಗಳ ವಿನಿಮಯ ನಡೆಯುತ್ತಿದೆ. ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಪ್ರೆಂಡ್ ಶಿಫ್ ಡೇಗೆ ಸಂಬಂಧಿಸಿದಂತೆ ಹಾಡೊಂದನ್ನು ಹಾಕಿ ಸಂಭ್ರಮಿಸುವ ಕಾಲವಿದು.
If you never had friends you never lived life ಎಂಬ ಮಾತಿದೆ. ಇದರರ್ಥ ಉತ್ತಮವಾದ ಸ್ನೇಹಿತರನ್ನು ಹೊಂದಿಲ್ಲದಿದ್ದರೆ ಜೀವನವನ್ನು ಪರಿಪೂರ್ಣವಾಗಿ ಸಾಗಿಸಲು ಸಾಧ್ಯವಿಲ್ಲ ಎನ್ನುತ್ತದೆ. ಈ ಮಾತು ಅಕ್ಷರಹ ಸತ್ಯವು ಹೌದು. ಪ್ರೆಂಡ್ ಶಿಫ್ ಎಂಬುವುದು ಅತ್ಯಂತ ಆತ್ಮೀಯತೆ, ಅನುಬಂಧವನ್ನು ಹೊಂದಿರುವ ಭಾವನಾತ್ಮಕ ಸಂಬಂಧಗಳಿಂದ ಕೂಡಿದ ವಿಚಾರ. ಈ ಜಗತ್ತಿನಲ್ಲಿ ಅಣ್ಣ, ಅಕ್ಕ, ತಂಗಿ, ತಮ್ಮ ಸೇರಿದಂತೆ ಮತ್ತಿತರ ಬಂಧಗಳು ಇಲ್ಲದಿರುವ ವ್ಯಕ್ತಿಗಳು ಸಿಗುತ್ತಾರೆ. ಆದರೆ ಸ್ನೇಹಿತರು ಇಲ್ಲದೇ ಜೀವನ ಮಾಡುತ್ತಿರುವ ವ್ಯಕ್ತಿಗಳು ಸಿಗಲಾರರು, ಕಾಣಲು ಸಾಧ್ಯವು ಇಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತರು ಬಹಳ ದೊಡ್ಡ ಪಾತ್ರ ವಹಿಸುತ್ತಾರೆ. 
ಸ್ನೇಹಿತರ ನಡುವೆ ರಕ್ತ ಸಂಬಂಧ ಇಲ್ಲದಿದ್ದರು ಅದಕ್ಕಿಂತ ಮಿಗಿಲಾದ ಒಂದು ಶ್ರೇಷ್ಠವಾದ ಸಂಬಂಧ ಸ್ನೇಹಿತರ ಜೊತೆಗಿನದ್ದು ಎಂದರೆ ತಪ್ಪೇನಿಲ್ಲ. ಯಾವುದೇ ಸ್ವಾರ್ಥ, ಪ್ರತಿಪಲಾಪೇಕ್ಷೆಗಳಿಲ್ಲದೇ ಹುಟ್ಟುವ ಸ್ನೇಹವು ಧೀರ್ಘ ಕಾಲದವರೆಗೂ ಉಳಿಯುತ್ತದೆ ಹಾಗೂ ನೈತಿಕವಾಗಿಯೂ ಗಟ್ಟಿಗೊಳ್ಳುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟಗಳಲ್ಲಿ ಹಲವು ಸ್ನೇಹಿತರು ಸಹಾಯಸಹ್ತ ಚಾಚಿ ಕಷ್ಟಗಳಿಂದ ಪಾರು ಮಾಡಿದ ನಿದರ್ಶನಗಳು ಎಲ್ಲರ ಬದುಕಿನಲ್ಲೂ ಇದ್ದೇ ಇರುತ್ತದೆ. ಸ್ವಂತ ಅಣ್ಣ, ತಮ್ಮ, ಅಕ್ಕ, ತಂಗಿಯರೇ ಹಲವು ಬಾರಿ ನಮಗೆ ಕಷ್ಟಗಳು ಎದುರಾದಾಗ ನಮ್ಮನ್ನು ಕೈಬಿಟ್ಟಿರುತ್ತಾರೆ. ಆದರೆ ಯಾವುದೇ ಪ್ರತಿಫಲವನ್ನು ಅಪೇಕ್ಷೆ ಪಡೆಯದೆ ಸ್ನೇಹಿತರು ಹತ್ತಿರ ಸಂಬಂಧಿಕರಿಗಿಂತ ಹೆಚ್ಚಾಗಿ ನಮ್ಮ ಕಷ್ಟದಲ್ಲಿ ಬೆನ್ನುಲುಬಾಗಿ ನಿಂತು, ಸಮಸ್ಯೆಯಿಂದ ಪಾರು ಮಾಡಿರುತ್ತಾರೆ.  ಬಹಳಷ್ಟು ಜನ ತಮ್ಮ ಸಾಧನೆಗೆ ತಮ್ಮ ಸ್ನೇಹಿತರೆ ಮೂಲ ಕಾರಣ ಅಂತ ಹೇಳಿಕೊಳ್ಳುವವರು ಬಹಳಷ್ಟಿದ್ದಾರೆ.
ನಮ್ಮ ವೈಯಕ್ತಿಕ ಎಷ್ಟೋ ವಿಚಾರಗಳು ಕುಟುಂಬದವರಿಗೆ ಗೊತ್ತಿರುವುದಿಲ್ಲ. ಆದರೆ ಅಂತಹ ವೈಯಕ್ತಿಕ ವಿಚಾರಗಳನ್ನು ಕೂಡ ಸ್ನೇಹಿತರ ಬಳಿ ಹೇಳಿಕೊಂಡಿರುತ್ತೇವೆ, ಅಷ್ಟರ ಮಟ್ಟಿಗೆ ಸ್ನೇಹಿತರನ್ನು ಆಳವಾಗಿ ನಂಬಿರುತ್ತೇವೆ.
“It’s better to have a few friends than hundreds of friends who are only there when they need you.” ಎಂಬ ಎರಡು ಸಾಲುಗಳ ಈ ಸಂದೇಶವು ಹಲವು ವಿಚಾರಗಳ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ನಮ್ಮ ಅವಶ್ಯಕತೆ ಸಹಾಯ ಬೇಕಾದಾಗ ಮಾತ್ರ ಬರುವಂತಹ ನೂರಾರು ಸ್ನೇಹಿತರನ್ನು ಸಂಪಾದಿಸುವುದಕ್ಕಿಂತ, ಪ್ರಾಮಾಣಿಕತೆಯಿಂದ ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಬೆರಳಣಿಕೆಯಷ್ಟು ಸ್ನೇಹಿತರ ಸಂಪಾದನೆ ಉತ್ತಮ ಎಂದು ಈ ಇಂಗ್ಲೀಷ್ ವಾಕ್ಯ ಹೇಳುತ್ತದೆ. ನಮಗೆ ನೂರಾರು ಜನ ಸ್ನೇಹಿತರು ಇದ್ದಾರೆ ಎಂದು ಸಂತೋಷ , ಜಂಬಕೊಚ್ಚಿಕೊಳ್ಳುವ ಅಗತ್ಯವಿಲ್ಲ. ಕಾರಣ ಆ ನೂರಾರು ಜನರಲ್ಲಿ ನಮ್ಮ ಕಷ್ಟಕ್ಕೆ ಬರುವ ಸ್ನೇಹಿತರು ಯಾರು ಇರುವುದಿಲ್ಲ. ಸ್ನೇಹಿತರ ಬಳಗ ದೊಡ್ಡದು ಮಾಡಿಕೊಳ್ಳುವುದಕ್ಕಿಂತ ವ್ಯಕ್ತಿತ್ವವುಳ್ಳ ಕೆಲವೇ ಕೆಲವು ಸೀಮಿತ ಸ್ನೇಹಿತರ ಬಳಗವೇ ಉತ್ತಮ.
ನಾನು ಕಾರ್ಯ ನಿಮಿತ್ತ ಹಲವು ಸರಕಾರಿ ಶಾಲೆಗಳಿಗೆ ಹೋಗುತ್ತಿರುತ್ತೇನೆ, ಒಂದು ಶಾಲೆಯ ಗೋಡೆಯ ಮೇಲೆ ಈಗಿತ್ತು. ನೀವು ಜೀವನದಲ್ಲಿ ನಿಮ್ಮ ಗುರಿ ತಲುಪಬೇಕಾದರೆ, ಸಾಧಿಸುವ ಮನೋಭಾವ ಬೆಳೆಯಬೇಕಾದರೆ ಸಜ್ಜನರ ಸ್ನೇಹ ಮಾಡಿ ಎಂಬ ಬರಹವಿತ್ತು. ಇದನ್ನು ಓದಿದ ನಂತರ ನಾನು ಆ ಶಾಲೆಯ ಮುಖ್ಯ ಶಿಕ್ಷಕರನ್ನು ಕೇಳಿದೆ ಈ ಬರಹವನ್ನು ಬರೆಸಿದ ಉದ್ದೇಶ ಏನು ಎಂದಾಗ ಅವರ ಪ್ರತಿಕ್ರಿಯೆ ಹೀಗಿತ್ತು, ನೋಡಿ ಸಾರ್ ನಾನು ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಜೀವನದಲ್ಲಿ ಸಾಧಿಸುವ ಹಂಬಲ ಇರುವವರು ಮೊದಲು ಮಾಡಬೇಕಾದದ್ದು ಸಜ್ಜನರ ಸಹವಾಸ. ನಮ್ಮ ವ್ಯಕ್ತಿತ್ವಕ್ಕೆ ಒಂದು ರೂಪ ಕೊಡುವುದೇ ನಮ್ಮ ಸ್ನೇಹಿತರ ಬಳಗ. ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ತಿಳಿಯಬೇಕಾದರೆ ಬಹಳ ಸುಲಭ, ಆತ ಆಯ್ಕೆ ಮಾಡಿಕೊಂಡಿರುವ ಸ್ನೇಹಿತರನ್ನು ನೋಡಿದರೆ ಸಾಕು ಆತನ ವ್ಯಕ್ತಿತ್ವದ ಸಂಪೂರ್ಣ ಚಿತ್ರಣ ಸಿಗುತ್ತದೆ ಎಂದರು. ನಮ್ಮ ಸಾಧನೆಯ ದಾರಿ ಹಾದಿ ತಪ್ಪದೇ ನಡೆಯಬೇಕಾದರೆ ನಮ್ಮ ಜೊತೆಗಿನ ಸ್ನೇಹಿತರ ಪಾತ್ರವು ಇರುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ವಿರುದ್ದ ದಿಕ್ಕಿನ ಸ್ನೇಹಿತರು ಇದ್ದರೆ ನಮ್ಮ ಬದುಕು ಎತ್ತ ಸಾಗುತ್ತದೆ ಹೇಳಲು ಸಾಧ್ಯವಿಲ್ಲ ಎಂದರು.  
ನಿಜ ಇಂದು ಶಾಲೆಗೆ ಹೋಗುವ ವಿದ್ಯಾರ್ಥಿ ಧೂಮಪಾನ, ಮದ್ಯಪಾನ ಸೇರಿದಂತೆ ಮತ್ತಿತರ ಕೆಟ್ಟ ಚಟಗಳಿಗೆ ದಾಸನಾಗಿದ್ದಾನೆ ಎಂದರೆ ಅದಕ್ಕೆ ಮೂಲ ಕಾರಣ ಆತನ ಸ್ನೇಹಿತರು. ಒಬ್ಬ ವಿದ್ಯಾರ್ಥಿ ಪ್ರಾಥಮಿಕ, ಫ್ರೌಢ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣನಾಗಿರುತ್ತಾನೆ. ಆದರೆ ಕಾಲೇಜಿನಲ್ಲಿ ಮಾತ್ರ ಅನುತ್ತೀರ್ಣನಾಗುತ್ತಾನೆ. ಅದಕ್ಕೆ ಕಾರಣ ಸಹವಾಸ ದೋಷ. ಕೆಲವರಂತು ನಾವು ಹೇಗೋ ಕೆಟ್ಟು ಹೋಗಿದ್ದೇವೆ, ಇತನನ್ನು ನಮ್ಮ ದಾರಿಗೆ ಹೇಳೆದು ಬಿಡೋಣ ಎಂದು ಎಷ್ಟೋ ಜನರು ತಮ್ಮ ಸ್ನೇಹಿತರ ಜೀವನವನ್ನೇ ಹಾಳು ಮಾಡಿದ ಪ್ರಸಂಗಗಳು ಸಾಕಷ್ಟಿವೆ. ಅಷ್ಟೇಕೆ ಎಷ್ಟೋ ಜನರು ತಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನ, ಕೌಟುಂಬಿಕ ಜೀವನವನ್ನು ಹಾಳು ಮಾಡಿಕೊಂಡಿದ್ದು ಸ್ವತಹ ತಮ್ಮ ಆತ್ಮೀಯ ಸ್ನೇಹಿತರಿಂದಲೇ ಎಂಬ ವಾಸ್ತವವನ್ನು ಮುಂದಿಡುತ್ತಾರೆ. ಇಂದು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಚಿಕ್ಕವಯಸ್ಸಿಗೆ ಜೈಲು ಸೇರುತ್ತಿರುವವವರ ಹಿಂದೆ ಸ್ನೇಹಿತರ ದೋಷ ಬಲವಾಗಿ ಎದ್ದು ಕಾಣುತ್ತದೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗಿ, ಆ ಪರಿಚಯವೇ ಹಾದಿ ತಪ್ಪಿಸಿ, ಭವಿಷ್ಯವನ್ನೇ ಹಾಳು ಮಾಡಿ ಬಿಡುವ ಹಂತಕ್ಕೆ ತಲುಪಿಸಿ ಬಿಡುತ್ತದೆ. ವ್ಯಾಪಾರ, ವ್ಯವಹಾರಗಳಲ್ಲೂ ಸ್ನೇಹಿತರನ್ನು ನಂಬಿ ಮೋಸ ಹೋದವರ ಸಂಖ್ಯೆ ಹೆಚ್ಚೆ ಇದೆ.
ಅದು ಶಾಲಾ-ಕಾಲೇಜು, ಕಾರ್ಯ ನಿರ್ವಹಿಸುವ ಕೆಲಸದ ಸ್ಥಳ ಸೇರಿದಂತೆ ಎಲ್ಲಿಯೇ ಆದರೂ ನಾವು ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಎಚ್ಚರವು ಅಗತ್ಯ. ಪ್ರತಿಯೊಬ್ಬರನ್ನು ದಿಢೀರ್ ಎಂದು ನಂಬುವುದು ತಪ್ಪು. ಅಳೆದು ತೂಗಿ ಹೆಜ್ಜೆ ಮುಂದೆ ಇಡಬೇಕಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣದ  ಮೇಲೆ ಸ್ನೇಹಿತರ ಸಹವಾಸ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಹತ್ತಿರವಿರುವ ಸ್ನೇಹ ಸಂಪಾದನೆ ನಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಹೌದು. 
Having few true friends is better than having a large network of pretentious friends. Quality beats quantity all the time. ದೊಡ್ಡ ಪ್ರಮಾಣದಲ್ಲಿ ಸ್ನೇಹಿತರ ವರ್ಗವನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ, ಕೆಲವೇ ಕೆಲವು ಸ್ನೇಹಿತರಿದ್ದರು ಚಿಂತೆಯಿಲ್ಲ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ. ಬಹು ಮುಖ್ಯವಾಗಿ ಸ್ನೇಹವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾದರೆ ಇಬ್ಬರಲ್ಲೂ ಹೊಂದಾಣಿಕೆಯ ಗುಣ ಇರಬೇಕು. ಹತ್ತಾರು ವರ್ಷಗಳ ಕಾಲ ಸ್ನೇಹಿತರಾಗಿದ್ದರು ಕೂಡ ಅವರ ಮಧ್ಯೆ ಬರುವ ಸಣ್ಣ ಮನಸ್ತಾಪಗಳು ( ಅಸೂಹೆ, ಅಹಂಕಾರ, ಸ್ವಾರ್ಥ, ಹಣದ ವ್ಯವಹಾರ, ಅಪನಂಬಿಕೆ ಮುಂತಾದುವುಗಳು) ಸಂಬಂಧಗಳಿಗೆ ಪೂರ್ಣವಾಗಿ ಪುಲ್ ಸ್ಟಾಪ್ ಇಟ್ಟು ಬಿಡುತ್ತದೆ, ಮತ್ತೆಂದು ಒಂದಾಗದ ಮಟ್ಟಿಗೆ ಸಂಬಂಧಗಳು ಹಳಸಿ ಹೋಗುತ್ತದೆ.
ನಮ್ಮ ಬಳಿ ಹಣ, ಅಂತಸ್ತು, ಅಧಿಕಾರ ಇದೆ ಎಂದು ಸ್ನೇಹ ಮಾಡುವ ವ್ಯಕ್ತಿಗಳಿಗಿಂತ ಆತ ಬಡವನಾಗಿದ್ದರು, ಕನಿಷ್ಟ ಎಲ್ಲಾದರೂ ಸಿಕ್ಕರೆ ಒಂದು ಸಣ್ಣ ಟೀ ಕೊಡಿಸುವ ಸಾಮರ್ಥ್ಯ ಇಲ್ಲದಿದ್ದರು ಚಿಂತೆಯಿಲ್ಲ, ಆತ ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಯಾದರೆ ಸಾಕು, ಅಂತವಹರ ಸ್ನೇಹ ಸಂಪಾದನೆ ಎಷ್ಟೋ ಉತ್ತಮ. ಹಣ, ಅಧಿಕಾರ ಶಾಶ್ವತ ಅಲ್ಲ, ಅಂತಿಮವಾಗಿ ಉಳಿಯುವುದು ಪ್ರಾಮಾಣಿಕತೆ ಮಾತ್ರ. 
ನಮ್ಮದ್ದೇಷ್ಟೋ ಕನಸುಗಳು ಇರುತ್ತವೆ. ಆ ಕನಸುಗಳು ನನಸಾಗುವ ಮಟ್ಟಕ್ಕೆ ತಲುಪಬೇಕಾದರೆ ನಮ್ಮ ಜೊತೆಗಿನ ಸ್ನೇಹಿತರ ಸಹಕಾರವು ಬಹಳ ಮುಖ್ಯ. ಯಾವುದೋ ಒಂದು ಉದ್ದೇಶಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದದವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಅವರಿಂದ ಸಮಸ್ಯೆ ಎದುರಿಸುವ ಜೊತೆಗೆ ಹಾದಿ ತಪ್ಪಬೇಕಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಎಲ್ಲರನ್ನೂ ಆತ್ಮೀಯ ಸ್ನೇಹಿತರೆಂದು ನಂಬಿ ಸಲುಗೆಯಿಂದ ಇರುವುದು ಬಹಳ ದೊಡ್ಡ ತಪ್ಪು. ನಮ್ಮ ವೈಯಕ್ತಿಕ ವಿಚಾರಗಳನ್ನು ಹಿಂದೆ ಮುಂದೆ ಆಲೋಚಿಸದೆ ಆತ್ಮೀಯ ಸ್ನೇಹಿತರೆಂದು ನಂಬಿ ಹಂಚಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ತೊಡಕಾಗಬಹುದು. ಸ್ನೇಹಿತರ ಅಂತರಾಳ ಅರಿಯುವುದು ಮುಖ್ಯ, ಇಲ್ಲದೇ ಹೋದರೆ ಸಮಸ್ಯೆ ಒಳಗಾಗಬೇಕಾಗುತ್ತದೆ. 
ಕಾಲ ಬದಲಾದಂತೆ ಮನುಷ್ಯರು ಬದಲಾಗುತ್ತಿದ್ದಾರೆ. ಯಾವುದೇ ಲಾಭವಿಲ್ಲದಿದ್ದರೆ ಸ್ನೇಹಿತರನ್ನು ಹತ್ತಿರಕ್ಕೂ ಸೇರಿಸಿಕೊಳ್ಳದ ವರ್ಗ ಹೆಚ್ಚುತ್ತಿದೆ. ಬಹುತೇಕರು ಕ್ಯಾಲುಕೆಲೇಷನ್ ಮಾಡಿ ಸ್ನೇಹ ಮಾಡುವ ಹಂತಕ್ಕೆ ಬಂದು ನಿಂತಿದ್ದೇವೆ. ಹಾಗೆಯೇ ನಿಜವಾಗಲೂ ನೈತಿಕತೆಯುಳ್ಳ ಸ್ನೇಹಿತರನ್ನು ಕೂಡ ಎಂದು ದೂರ ಮಾಡಿಕೊಳ್ಳುವ ಹಂತಕ್ಕೆ ಹೋಗಲೇಬಾರದು. ಏಕೆಂದರೆ ಈ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಾಗದ ಸಂಬಂಧಗಳ ಪೈಕಿ ಸ್ನೇಹವು ಒಂದು. ತೀರ ಅನುಮಾನಿಸುವುದು, ಅವಶ್ಯಕತೆ ಬಿದ್ದಾಗ ಮಾತ್ರ ಮಾತನಾಡುವುದು, ಅಗತ್ಯ ಇಲ್ಲದಿದ್ದಾಗ ದೂರ ಸರಿಸುವುದು ನಮ್ಮ ಮೇಲಿನ ಅಪನಂಬಿಕೆಗೆ ಕಾರಣವಾಗುತ್ತದೆ. ಇನ್ನೊಬ್ಬರನ್ನು ನೋಯಿಸಿ ಪಡೆಯುವ ಲಾಭವಾದರು ಏನು ಇಲ್ಲ. ಲಾಭಕ್ಕಾಗಿ, ದುರುದ್ದೇಶಕ್ಕಾಗಿ ಸ್ನೇಹ ಮಾಡಲೇಬಾರದು, ಭಾವನೆಗಳಿಗೆ ಬೆಲೆ ಕೊಡುವ ಸ್ನೇಹಿತರನ್ನು ಕಳೆದುಕೊಳ್ಳಲೇಬಾರದು. ಪವಿತ್ರವಾದ ಸ್ನೇಹವನ್ನು ಹೃದಯದಿಂದ ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಹೇಳುವುದು Best friend is a forever & ever..

ಭಾನುವಾರ, ಸೆಪ್ಟೆಂಬರ್ 15, 2019

ಸಮಯ + ಗುರಿ = ಸಾಧನೆ..

⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಇದು ಕಣ್ಣಿಗೆ ಕಾಣುವುದಿಲ್ಲ, ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ. ಅದರ ರೂಪ, ಆಕಾರ, ಗಾತ್ರವು ನಮ್ಮ ಊಹೆಗೂ ಸಿಗುವುದಿಲ್ಲ. ಯಾರಿಗಾಗಿಯೂ ಎಂದೂ ಕಾಯುವುದಿಲ್ಲ. ಅದನ್ನು ನಿಯಂತ್ರಿಸಲು ಮನುಷ್ಯನ ಕೈಯಲ್ಲಿ ಸಾಧ್ಯವಿಲ್ಲ. ಆದರೂ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾ ಒಂದು ಸಂದರ್ಭ, ಸನ್ನಿವೇಶದಲ್ಲಿ  ಅಗಾಧವಾದ ಪರಿಣಾಮ ಬೀರುತ್ತದೆ. ಆದರೂ ಕೂಡ ನಾವು ಅದರ ಬಗ್ಗೆ ಇನ್ನೂ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಅದೇ ಸರಳವಾಗಿ ಕನ್ನಡದಲ್ಲಿ ಮೂರಕ್ಷರ ಹಾಗೂ ಇಂಗ್ಲೀಷ್ ನಲ್ಲಿ ನಾಲ್ಕು ಅಕ್ಷರ ಪದವನ್ನು ಹೊಂದಿರುವ ಸಮಯ ಅಥವಾ Time.
ಒಂದು ಸುಂದರವಾದ ಮಾತಿದೆ “Life & Time are the best teachers. Life teaches us the use of time & the time teaches us the value of the life”. 
ಅಂದರೆ ಜೀವನ ಮತ್ತು ಸಮಯ ಎರಡು ಉತ್ತಮವಾದ ಶಿಕ್ಷಕರಿದ್ದಂತೆ. ಜೀವನವು ನಮಗೆ ಸಮಯದ ಮಹತ್ವದ ಬಗ್ಗೆ ತಿಳಿಸಿದರೆ, ಸಮಯವು ನಮಗೆ ಜೀವನದ ಮಹತ್ವದ ಬಗ್ಗೆ ತಿಳಿಸುತ್ತದೆ. ಅಂದರೆ ಯಾರಾದರೂ ಜೀವನದಲ್ಲಿ ಮಹತ್ವವಾದ ಸಾಧನೆ ಮಾಡಬೇಕು ಎಂದರೆ ಸಮಯ ಸದುಪಯೋಗದ ಬಗ್ಗೆ ಸ್ಪಷ್ಟವಾದ ಗುರಿ ಇರಬೇಕು. ಜೀವನ ಮತ್ತು ಸಮಯ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಆದರೂ ಅದ್ಯಾಕೋ ಈ ಟೈಂ ವಿಷಯದ ಬಗ್ಗೆ ಬಹುತೇಕರಿಗೆ ಅಸಡ್ಡೆ, ನಿರ್ಲಕ್ಷ್ಯ ಮನಸ್ಥಿತಿ ಇರುತ್ತದೆ. ಈ ವಿಷಯದ ಬಗ್ಗೆ ಶಿಸ್ತು, ಕಾಳಜಿ ಹೆಚ್ಚಿನ ಜನ ವಹಿಸುತ್ತಿಲ್ಲ ಎಂಬುವುದು ವಾಸ್ತವ. ಒಬ್ಬ ವ್ಯಕ್ತಿಯ ಜೀವನದ ಗುರಿ ಮತ್ತು ಅಭಿವೃದ್ದಿಯ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರುವ ಮಹತ್ವವಾದ ಶಕ್ತಿ ಯಾವುದಕ್ಕಾದರೂ ಇದೇ ಎಂದರೆ ಅದು ಸಮಯಕ್ಕೆ ಮಾತ್ರ. ಆದರೂ ಇಂದಿಗೂ ಕೂಡ ಸಾಕಷ್ಟು ಜನ ಸಮಯದ ಮೌಲ್ಯದ ಬಗ್ಗೆ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವುದಕ್ಕಿಂದ ಸಮಯದ ಬೆಲೆ ಗೊತ್ತಿದ್ದರು ಕಾಲ ಹರಣ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲ್ಲ.
ಒಂದು ದಿನ ಬೆಂಗಳೂರಿನ ನಮ್ಮ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಚಾರಗೋಷ್ಠಿಯೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ಅತಿಥಿಗಳ ಭಾಷಣವಿತ್ತು. ಮಧ್ಯಾಹ್ನ 3 ಘಂಟೆಗೆ ಊಟಕ್ಕೆ ಬಿಟ್ಟರು. ಬಿಟ್ಟಿದ್ದೇ ತಡ ಕಾರ್ಯಕ್ರಮದಲ್ಲಿ ಇದ್ದ ಸಭಿಕರೆಲ್ಲರೂ ಊಟ ಬಡಿಸುತ್ತಿದ್ದ ಕ್ಯೂನಲ್ಲಿ ನಿಂತರು. ನಾವು ಕೆಲ ಸ್ನೇಹಿತರು ಸುಮ್ಮನೆ ಮಾತನಾಡುತ್ತ ನಿಂತುಕೊಂಡು 15 ನಿಮಿಷದ ನಂತರ ಕ್ಯೂಗೆ ಹೋದೆವು. ನಮ್ಮೆಲ್ಲರಿಗೂ ತುಂಬ ಹಸಿವಾಗುತ್ತಿತ್ತು. ಇನ್ನೇನು ನಮ್ಮ ತಟ್ಟೆಗೆ ಊಟ ಬಡಿಸುತ್ತಾರೆ ಎನ್ನುವಾಗ, ನಮ್ಮ ದುರದೃಷ್ಟಕ್ಕೆ ಊಟ ಸಂಪೂರ್ಣವಾಗಿ ಖಾಲಿಯಾಗಿತ್ತು. ಅರ್ಧ ಗಂಟೆಯಿಂದ ಕ್ಯೂನಲ್ಲಿ ನಿಂತು ಇನ್ನೇನು ಊಟ ಸಿಗುತ್ತದೆ ಎನ್ನುವಾಗ ಊಟ ಖಾಲಿಯಾಗಿದೆ ಎಂದು ಊಟ ಬಡಿಸುವವರಿಂದ ಉತ್ತರ ಕೇಳಿದಾಗ ನಮ ಪರಿಸ್ಥಿತಿ ಏನಾಗಿರಬೇಡ. ಕಾರ್ಯಕ್ರಮ ಮುಗಿದ ಮೇಲೆ 15 ನಿಮಿಷ ಮಾತನಾಡಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಊಟ ಬಡಿಸುವ ಸರದಿ ಸಾಲಿಗೆ ಹೋಗಿದ್ದರೆ ಖಂಡಿತವಾಗಿಯೂ ನಮಗೆ ಊಟ ಸಿಗುತ್ತಿತ್ತು. 15 ನಿಮಿಷ ವ್ಯರ್ಥ ಮಾಡಿದ ಪರಿಣಾಮ ಊಟ ಇಲ್ಲದೆ ಸಮಸ್ಯೆ ಎದುರಿಸುವಂತಾಯಿತು.
ಬೆಂಗಳೂರಿನ ಪಾರ್ಕೊಂದರಲ್ಲಿ ಬರಹದ ಬೋರ್ಡುವೊಂದಿತ್ತು. ಅದರಲ್ಲಿ ನಿನಗೆ ಸಾಧಿಸುವ ಛಲ, ವಿಶ್ವಾಸವಿದ್ದರೆ ಮಾತ್ರ ಸಾಲದು. ಸಮಯದ ಅರಿವು ನಿನಗಿದ್ದಾಗಲೇ ಗುರಿಯ ಬೆನ್ನತ್ತಿ, ದಡ ಸೇರುತ್ತಿಯಾ ಎಂದು ಬರೆದಿತ್ತು. ನಿಜ ಇಂದು ನಾವು ಬಹುತೇಕರು ಸಮಯದ ಮೌಲ್ಯದ ಬಗ್ಗೆಯೇ ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದೇವೆ ಎಂದು ಅನ್ನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ಸಮಯ ವಹಿಸುತ್ತದೆ. ಆದರೂ ಸಮಯದ ಬೆಲೆ ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುತ್ತಿಲ್ಲ ಎಂಬುವುದೇ ವಿಪರ್ಯಾಸ. ಗುರಿ ಇಟ್ಟುಕೊಳ್ಳುತ್ತೇವೆ ಆದರೆ ಆ ಗುರಿ ತಲುಪಬೇಕಾದರೆ ಸಮಯ ಪಾಲಿಸಬೇಕೆಂಬ ನಿಯಮ ಮರೆತು ಬಿಡುತ್ತೇವೆ.
ಐ.ಎ.ಎಸ್ ಅಧಿಕಾರಿಯಾದ ಜಿ.ಜಗದೀಶ್ ಸಾರ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು ಬಹಳ ಅರ್ಥಪೂರ್ಣವಾಗಿದೆ. ಯಾರಿಗೆ ಆಗಲಿ ಜೀವನದಲ್ಲಿ ಯಶಸ್ಸುಗಳಿಸ ಬೇಕಾದರೆ ಅಡ್ಡದಾರಿಗಳಂತು ಇಲ್ಲ. ಶ್ರಮವಹಿಸಿ ಕಷ್ಟ ಬಿದ್ದಾಗಲೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಎಚ್ಚರವಿರಬೇಕು. ನಾನೊಬ್ಬ ಐ.ಎ.ಎಸ್ ಅಧಿಕಾರಿ, ನನ್ನ ಕಚೇರಿಗೆ ತಡವಾಗಿ ಹೋದರು ನನ್ನನ್ನು ಯಾರು ಕೇಳುವುದಿಲ್ಲ. ಆದರೂ ಬೆಳಗ್ಗೆ.10 ಗಂಟೆಯಾಗುತ್ತಿದ್ದರೆ ನನಗೆ ಬೆವರು ಬರುತ್ತದೆ. ಯಾಕೆಂದರೆ ನಾನೇ ಕಚೇರಿಗೆ ತಡವಾಗಿ ಹೋದರೆ ನನ್ನನ್ನು ನೋಡಿ ನಮ್ಮ ಇತರ ಸಿಬ್ಬಂದಿ ಕೂಡ ಕಚೇರಿಗೆ ತಡವಾಗಿ ಬರುವುದನ್ನು ಕಲಿಯುತ್ತಾರೆ. ನನಗೆ ಸಮಯದ ಅರಿವು ಇಲ್ಲದಿದ್ದರೆ, ನನ್ನ ಕೆಳಹಂತದ ಸಿಬ್ಬಂದಿ ಹೇಗೆ ತಾನೇ ಸಮಯಕ್ಕೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನೆ ಹಾಕಿದರು. ಅವರ ಮಾತಿನಲ್ಲಿ ಸಮಯದ ಮಹತ್ವದ ಬಗ್ಗೆ ಉಲ್ಲೇಖವಿತ್ತು.
ಒಮ್ಮೆ ಉದ್ಯಮಶೀಲತೆ ಮತ್ತು ಸ್ವ ಉದ್ಯೋಗಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಸೆಮಿನಾರ್ ಒಂದರಲ್ಲ್ಲಿ ಭಾಗವಹಿಸಿದ್ದೆ. ಸಂಪನ್ಮೂಲ ವ್ಯಕ್ತಿಯೊಬ್ಬರು ಸೆಮಿನಾರ್ ನಲ್ಲಿ ಭಾಗವಹಿಸಿದ್ದ ಸಭಿಕರಿಗೆ ಒಂದು ಪ್ರಶ್ನೆ ಹಾಕಿದರು. ನಿಮ್ಮ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಉಳಿತಾಯ ಮಾಡಿದ್ದೀರಾ ಎಂದರು. ಅದಕ್ಕೆ ಕೆಲವರು ಎಷ್ಟಿರುತ್ತೇ ಸಾರ್ 5 ಸಾವಿರ, ಮತ್ತೆ ಕೆಲವರು 10 ಸಾವಿರ ಎಂದರು, ಇನ್ನು ಕೆಲವರು ಬರುವ ಆದಾಯ ಸಂಪೂರ್ಣವಾಗಿ ಖರ್ಚಾಗುತ್ತದೆ. ಇನ್ನು ಉಳಿಸುವುದು ಎಲ್ಲಿಂದ ಎಂದು ಉತ್ತರಿಸಿದರು. 
ಅದಕ್ಕೆ ಆ ಸಂಪನ್ಮೂಲ ವ್ಯಕ್ತಿ ಸರಿ ನೀವೆಲ್ಲರು ನಿಮ್ಮ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಿರೀ.. ಅದಕೋಸ್ಕರ ನಿಮ್ಮ ಅಕೌಂಟ್ ಗಳಿಗೆ ನಾವೇ ಪ್ರತಿದಿನ ಬೆಳಗ್ಗೆ 86,400 ರೂ. ಹಣ ಹಾಕುತ್ತೇವೆ. ಒಂದು ಕಂಡೀಷನ್ ಎಂದರೆ ಪ್ರತಿದಿನ ರಾತ್ರಿ 7 ರ ಒಳಗೆ ಆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ನಿಮ್ಮಿಷ್ಟ ಏನು ಬೇಕಾದರೂ ಖರೀದಿಸಬಹುದು, ಆದರೆ ಹಣ ಉಳಿದರೆ ವಾಪಸ್ ಪಡೆಯುತ್ತೇವೆ. ಪ್ರತಿದಿನವು ಅಂದರೆ ನೀವು ಬದುಕಿರುವವರೆಗೂ ಪ್ರತಿನಿತ್ಯವು 86,400 ರೂ. ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಲೇ ಇರುತ್ತೇವೆ. ಎಷ್ಟು ಜನ ಆ ಹಣ ಪ್ರತಿನಿತ್ಯ ಖರ್ಚು ಮಾಡುವ ಸಾಮರ್ಥ್ಯವಿದೆ, ಕೈ ಎತ್ತಿ ಎಂದಾಗ ಸೆಮಿನಾರ್ ಹಾಲ್ ನಲ್ಲಿದ್ದ ಎಲ್ಲರು ಕೈ ಎತ್ತಿದರು. 
ಅರೇ ಸಾರ್ ನೀವು ಉಚಿತವಾಗಿ ಹಣ ಹಾಕಿದರೆ ಖರ್ಚು ಮಾಡಲು ನಮಗೇನು ಕಷ್ಟ. ಹಣ ಸಂಪಾದಿಸುವುದು ಕಷ್ಟ, ಆದರೆ ಖರ್ಚು ಮಾಡುವುದು ಕಷ್ಟವೇ. ನೀವು ನಮ್ಮ ಬ್ಯಾಂಕ್ ಅಕೌಂಟ್ ಗಳಿಗೆ ಹಣ ಹಾಕಿ ನೋಡಿ ಉಳಿಸಿದರೆ ನಮ್ಮ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇವೆ ಎಂದು ಸವಾಲಾಕಿದರು. ಅದಕ್ಕೆ ಸಂಪನ್ಮೂಲ ವ್ಯಕ್ತಿಗಳು 86,400 ರೂ. ಹಣವನ್ನು ಪ್ರತಿದಿನವೂ ಖರ್ಚು ಮಾಡುವ ಶಕ್ತಿ ಇದೆ ಎಂದು ನೀವು ಹೇಳುತ್ತಿದ್ದೀರಾ ಸಂತೋಷ. ಒಂದು ಗಮನಿಸಿ ಪ್ರತಿದಿನವೂ ನಿಮಗೆ 24 ಗಂಟೆ ಸಮಯ ಸಿಗುತ್ತದೆ. 24 ಗಂಟೆಯು 86,400 ಸೆಕೆಂಡ್ ಗಳನ್ನು ಒಳಗೊಂಡಿದೆ. ಪ್ರತಿದಿನವೂ ನೀವು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಜೀವನದ ಅಕೌಂಟ್ ಗೆ 24 ಗಂಟೆ ಅಂದರೆ 86,400 ಸೆಕೆಂಡ್ ಸಮಯದ ರೂಪದಲ್ಲಿ ಬರುತ್ತಿದೆ. ಆ ದಿನ ನೀವು ಸರಿಯಾಗಿ ಸಮಯ ಬಳಸದಿದ್ದರೆ ವಾಪಸ್ ಹೋಗುತ್ತಿದ್ದೆ. ನೀವು ಬದುಕಿರುವವರೆಗೂ ಪ್ರತಿದಿನವೂ 86,400 ಸೆಕೆಂಡ್ ಸಿಗುತ್ತದೆ. ಹಣವಾದರೆ ಸುಲಭವಾಗಿ ಖರ್ಚು ಮಾಡುತ್ತೇವೆ ಎಂದು ಹೇಳುತ್ತಿರಾ, ಆದರೆ ಸಮಯವನ್ನು ಸರಿಯಾಗಿ ಖರ್ಚು ಮಾಡಲು ಮಾತ್ರ ನಮಗೆ ಮನಸ್ಸೇ ಇಲ್ಲ. ಸಮಯಕ್ಕಿಂತ ನಮಗೆ ಹಣವೇ ಹೆಚ್ಚಾಯಿತು. ಇಲ್ಲಿಯವರೆಗೂ ಕೋಟ್ಯಾಂತರ ಸೆಕೆಂಡ್ ಗಳನ್ನು ವ್ಯರ್ಥ ಮಾಡಿದ್ದೇವೆ. ನೀವು ಒಂದು ನೆನಪಿನಲ್ಲಿ ಇಟ್ಟುಕ್ಕೊಳ್ಳಿ ಸಮಯವು ಹಣವನ್ನು ಮೀರಿದ್ದು, ಈ ವಿಷಯ ನಿಮಗೆ ಅರ್ಥವಾಗದೆ ಹೋದರೆ ಅದು ನಿಮ್ಮ ಕರ್ಮ ಎಂದು ತೀಕ್ಷ್ಣವಾಗಿ ಉತ್ತರಿಸಿದರು. 
ಈ ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಬಂದ ಮೇಲಂತೂ ಸಮಯವನ್ನು ಹೆಚ್ಚಾಗಿ ಕೊಲ್ಲುತ್ತಿದ್ದೇವೆ. ಅದರಲ್ಲೂ ಬಹುತೇಕ ಸಮಯವು ಸೋಷಿಯಲ್ ಮೀಡಿಯಾ (ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಫ್, ಯ್ಯೂಟುಬ್, ಇನ್ಸ್ ಟ್ರಾಗ್ರಾಮ್) ಮತ್ತಿತರಗಳ ವೀಕ್ಷಣೆಯಲ್ಲೇ ಕಳೆದು ಹೋಗುತ್ತಿದೆ. ಸಂವಹನ ದೃಷ್ಟಿಯಿಂದ ಸೋಷಿಯಲ್ ಮೀಡಿಯಾ ಬಳಕೆ ಅನಿವಾರ್ಯವಾದರೂ ಅಗತ್ಯಕ್ಕಿಂತ ಹೆಚ್ಚಾಗಿ ಅದಕ್ಕೆ ಸಮಯವನ್ನು ಮೀಸಲಿರಿಸುತ್ತಿದ್ದೇವೆ ಎಂದು ಅನ್ನಿಸುತ್ತದೆ. ಪತ್ರಿಕೆ ಓದಲು ಕೂಡ ಸಮಯ ಸಿಗದೆ ಪರಿಸ್ಥಿತಿಯನ್ನು ಸ್ವತಹ ನಾವೇ ನಿರ್ಮಾಣ ಮಾಡಿಕೊಂಡಿದ್ದೇವೆ. ಹಿಂದೆ ರಾತ್ರಿ ಊಟ ಮಾಡಿದ ನಂತರ ನಿದ್ದೆ ಬರುವವರೆಗೂ ಯಾವುದಾದರೂ ಕಥೆ, ಕಾದಂಬರಿ ಪುಸ್ತಕಗಳನ್ನು ಓದುತ್ತಿದ್ದೆವು. ಆದರೆ ಇಂದು ಆ ಪುಸ್ತಕಗಳ ಜಾಗಕ್ಕೆ ಮೊಬೈಲ್ ಪೋನ್ ಬಂದಿದೆ. 
ಹಣವನ್ನು ಬಿಕ್ಷುಕ, ರೌಡಿ, ಮೋಸ ಮಾಡುವವನು, ವ್ಯಾಪಾರ, ಕೆಲಸ ಮಾಡುವವರು ಸೇರಿದಂತೆ ಎಲ್ಲರೂ ಸಂಪಾದಿಸಲು ಅವಕಾಶವಿದೆ. ಆದರೆ ಪ್ರಪಂಚದ ಯಾರಿಂದಲೂ ಕೂಡ ಕಳೆದು ಹೋದ ಒಂದೇ ಒಂದು ಮಿಲಿ ಸೆಕೆಂಡನ್ನು ಕೂಡ ಮತ್ತೆ ವಾಪಸ್ ತರಲು ಸಾಧ್ಯವಿಲ್ಲ. ಏಕೆಂದರೆ ಸಮಯ ಕ್ಷಣಿಕ. ಅದಕ್ಕೆ ಹೇಳುವುದು ಸಮಯದ ಶಕ್ತಿ ಅಪರಿಮಿತ. ಕಣ್ಣಿಗೆ ಕಾಣದ ಈ ಸಮಯ ಹಲವರ ಜೀವನವನ್ನು ಎತ್ತರಕ್ಕೆ ತೆಗೆದುಕೊಂಡು ಹೋದರೆ, ಅದೇ ಸಮಯ ಮತ್ತೆ ಕೆಲವರ ಜೀವನವನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. 
ಸಮಯದ ಗುಣ ಲಕ್ಷಣಗಳೇ ವಿಚಿತ್ರ ಮತ್ತು ವಿಶೇಷವಾದದು. ಸಮಯವನ್ನು ಯಾರು ತರಕಾರಿ, ಹೂಗಳಂತೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹೋಗಲಿ ಹಣ ಕೊಟ್ಟು ಖರೀದಿಸೋಣ ಎಂದರೆ ಯಾವುದೇ ಅಂಗಡಿಗಳಲ್ಲೂ ಸಿಗುವುದಿಲ್ಲ. ಹೋಗಲಿ ಮನೆ ಅಥವಾ ವಾಹನವನ್ನು ಬಾಡಿಗೆ ಪಡೆದ ರೀತಿಯಲ್ಲಿ ಯಾರಿಂದಲಾದರೂ ಬಾಡಿಗೆಗೆ ಪಡೆಯೋಣವೆಂದರೆ ಸಾಧ್ಯವೇ ? ಸಮಯವು ಸಮುದ್ರದ ಅಲೆಗಳ ಹಾಗೆ, ಏಕೆಂದರೆ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಅಲೆಗಳು ಅದರ ಪಾಡಿಗೆ ಬಂದು ನದಿ ದಡಕ್ಕೆ ಅಪ್ಪಳಿಸಿ ಹೋಗುತ್ತವೆ. ಆತ ರಾಷ್ಟ್ರಪತಿಯಾಗಲಿ, ಪ್ರಧಾನಮಂತ್ರಿಯಾಗಲಿ ಅಥವಾ ಎಷ್ಟೇ ಪ್ರಭಾವಿ, ಅಧಿಕಾರ ಹೊಂದಿರುವ ವ್ಯಕ್ತಿಯಾದರೂ ಆತನಿಗೂ ಕಾಯುವುದಿಲ್ಲ. ಅಷ್ಟರ ಮಟ್ಟಿಗೆ ಸಮಯವು ವಿಶೇಷತೆಯನ್ನು ಹೊಂದಿದೆ. 
ಒಂದು ಕ್ಷಣದ ಬೆಲೆ ಗೊತ್ತಾದಬೇಕಾದರೆ ಕ್ರೀಡಾ ಸ್ಪರ್ಧೆಯಲ್ಲಿ ಸೋತ ವ್ಯಕ್ತಿಯನ್ನು ಕೇಳಬೇಕಂತೆ.  ಉದಾಹರಣೆಗೆ ಎ ಎಂಬ ವ್ಯಕ್ತಿ 15 ನಿಮಿಷಕ್ಕೆ ರನ್ನಿಂಗ್ ರೇಸ್ ಮುಗಿಸಿರುತ್ತಾನೆ. ಆದರೆ 14 ನಿಮಿಷಕ್ಕೆ ರನ್ನಿಂಗ್ ರೇಸ್ ಮುಗಿಸಿದ ಬಿ ಎಂಬ ಮತ್ತೊಬ್ಬ ವ್ಯಕ್ತಿಗೆ ಚಿನ್ನದ ಪದಕ, ಪ್ರಶಸ್ತಿ ಹಣ, ಮಾಧ್ಯಮದಲ್ಲಿ ಪ್ರಚಾರ ಸಿಕ್ಕಿರುತ್ತದೆ. ಕೇವಲ 1 ನಿಮಿಷ ತಡವಾಗಿದಕ್ಕೆ  ಎ ಎಂಬ ವ್ಯಕ್ತಿ ಚಿನ್ನದ ಪದಕ ಸೇರಿದಂತೆ ಎಲ್ಲವನ್ನು ಕಳೆದುಕೊಳ್ಳುತ್ತಾನೆ. 1 ನಿಮಿಷ ಈತನ ಬದುಕನ್ನೇ ಬುಡುಮೇಲು ಮಾಡಿ ಬಿಟ್ಟಿರುತ್ತದೆ. 
ಯಾರೋ ಹೇಳುತ್ತಿದ್ದರು ಈ ಸಮಯಕ್ಕೆ ಮನುಷ್ಯನ ತರ ಸ್ವಾರ್ಥ, ಭೇದಭಾವವಿಲ್ಲ. ಯಾಕೆಂದರೆ ಆತ ಗುಡಿಸಲಲ್ಲಿ ವಾಸಿಸುತ್ತಿರುವ ಬಡವನಾದರೂ ಅಥವಾ ಐಷರಾಮಿ ಬಂಗಲೆಯಲ್ಲಿ ಜೀವನ ನಡೆಸುತ್ತಿರುವ ವ್ಯಕ್ತಿಯಾದರೂ ಇಬ್ಬರಿಗೂ ಈ ಸಮಯವು ದಿನನಿತ್ಯ 24 ಗಂಟೆಗಳನ್ನೇ ದಯಪಾಲಿಸುತ್ತದೆ. ಬಡವ ಎಂದು ಕಡಿಮೆ ಸಮಯ, ಶ್ರೀಮಂತ ಎಂದು ಹೆಚ್ಚು ಸಮಯ ಈ ನಿಸರ್ಗದಲ್ಲಿ ಸಿಗುವುದಿಲ್ಲ. 
ಎಷ್ಟೋ ಬಾರಿ ಒಂದೆರೆಡು ನಿಮಿಷ ತಡವಾಗಿದಕ್ಕೆ ವಿಮಾನ, ರೈಲು, ಬಸ್ ಪ್ರಯಾಣದಲ್ಲಿ ಸಮಸ್ಯೆ ಎದುರಿಸಿರುತ್ತೇವೆ. ಎಷ್ಟೋ ಬಾರಿ ಶಾಲಾ, ಕಾಲೇಜಿನ ತಡವಾಗಿ ಶಿಕ್ಷಕರಿಂದ ಹೊಡೆಸಿಕೊಂಡಿದ್ದು, ಕಚೇರಿಗೆ ತಡವಾಗಿ ಹೋಗಿ ಹಿರಿಯ ಅಧಿಕಾರಿಗಳಿಂದ ಬೈಯಿಸಿಕೊಂಡ ಉದಾಹರಣೆಗಳು ಎಲ್ಲರ ಜೀವನದಲ್ಲೂ ಇರುತ್ತವೆ. ನಿಮಿಷಗಳು ತಡವಾಗಿದ್ದಕ್ಕೆ ನಮ್ಮ ವ್ಯಕ್ತಿತ್ವಕ್ಕೆ ನಾವೇ ಮಸಿ ಬಳಸಿಕೊಳ್ಳುವಂತಾಗುತ್ತದೆ.
ಜೀವನದಲ್ಲಿ ಗುರಿ ಇಟ್ಟುಕೊಳ್ಳುವುದು ಬಹಳ ಸುಲಭ. ಆದರೆ ಆ ಗುರಿ ತಲುಪಬೇಕಾದರೆ ಅಷ್ಟು ಸುಲಭವಲ್ಲ. ಅದನ್ನು ತಲುಪಲು ನಮಗೆ ಸೇತುವೆಯಾಗುವುದು ಸಮಯ ಮಾತ್ರ. ಸಮಯವನ್ನು ಸಮರ್ಕವಾಗಿ ಬಳಸಿಕೊಳ್ಳುವ ಮನಸ್ಥಿತಿ ಇಲ್ಲದೇ ಹೋದರೆ ನಮ್ಮ ಗುರಿ ಮುಟ್ಟುವುದು ಅಸಾಧ್ಯವಾದ ಮಾತು.  ಒಂದು ಪೂರ್ವ ಯೋಜನೆ ಹಾಕಿಕೊಂಡು, ನಮಗೆ ಸಿಗುವ ಸಮಯನ್ನು ಅಗತ್ಯವಿರುವ ವಿಷಯಗಳಿಗೆ ಹೆಚ್ಚು ಸಮಯದ ಆದ್ಯತೆ ಕೊಟ್ಟು, ಉಳಿದ ವಿಷಯಗಳಿಗೆ ಕಡಿಮೆ ಸಮಯ ಕೊಡುತ್ತ ಸಾಗಿದರೆ ಸಮಯದ ಸಮರ್ಪಕ ಬಳಕೆಯಾಗುತ್ತದೆ. ಆ ಮೂಲಕ ನಮ್ಮ ಗುರಿ ತಲುಪುವ ದಾರಿಯು ಸುಗಮವಾಗುತ್ತದೆ.   
ನಾವು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳದಿರಲು ಮೂಲ ಕಾರಣವೆಂದರೆ ಬಹುಶ ಅದು ನಮಗೆ ಉಚಿತವಾಗಿ ಬರುತ್ತಿರುವುದರಿಂದ. ಸಮಯಕ್ಕೆ ನಾವು ಯಾವುದೇ ಹಣ ಕೊಡುತ್ತಿಲ್ಲ. ಅಂಗಡಿಯಲ್ಲಿ 10 ನಿಮಿಷಕ್ಕೆ 50 ರೂ. ಹಣ ಕೊಟ್ಟು ಸಮಯ ಖರಿದೀಸುವ ವ್ಯವಸ್ಥೆಯು ಈ ಪ್ರಕೃತಿಯಲ್ಲಿ ಇದಿದ್ದರೆ ಆಗ ನಾವೆಲ್ಲರೂ ಸಮಯಕ್ಕೆ ಬೆಲೆ ಕೊಡುತ್ತಿದ್ದೇವೆನೋ, ಅದು ಉಚಿತವಾಗಿ ಬರುತ್ತಿರುವುದರಿಂದ ನಮಗೆ ಅದರ ಮೌಲ್ಯ ಗೊತ್ತಾಗುತ್ತಿಲ್ಲ. 
“You kill time until time kills you”, ನೀನು ಇಂದು ಸಮಯವನ್ನು ಕೊಂದರೆ, ಸಮಯವು ಇಂದಲ್ಲಾ, ನಾಳೆ ನಿನ್ನನ್ನು ಕೊಲ್ಲುತ್ತದೆ. ಈ ವಾಕ್ಯ ಸದಾ ನಮ್ಮ ಮನಸ್ಸಲ್ಲಿ ಇರಲಿ. 

ಗುರುವಾರ, ಜುಲೈ 25, 2019

ಮೈ ಲೈಪ್, ಮೈ ಜರ್ನಿ..


⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನನ್ನ ಸ್ನೇಹಿತನೊಬ್ಬ ಪದೇ ಪದೇ ಜೀವನದ ಬಗ್ಗೆ ಬೇಸರಿಸಿಕೊಳ್ಳುತ್ತಿದ್ದ, ಎಲ್ಲಾ ಇದ್ದರೂ ಏನು ಇಲ್ಲದಂತೆ  ಭಾವಿಸಿಕೊಂಡಿದ್ದ. ಸದಾ ನಕರಾತ್ಮಕ ಚಿಂತನೆಗಳಿಂದಲೇ ಜೀವನದಲ್ಲಿ ಸೋಲು ಒಪ್ಪಿಕೊಂಡಿದ್ದ, ಮನೆ ಮತ್ತು ಕಚೇರಿ ಎರಡೇ ಜೀವನ ಎಂಬ ಸ್ಥಿತಿ. ಸಣ್ಣ ಸಣ್ಣ ಸಮಸ್ಯೆಗಳಿಗೂ ವಿಪರಿತ ತಲೆ ಕೆಡಿಸಿಕೊಳ್ಳುತ್ತಿದ್ದ,  ಲೈಪ್ ನ್ನು ಎಂಜಾಯ್ ಮಾಡದೆ ಸ್ವತಃಹ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ. ಲೈಪ್ ಎಂಬ ಜರ್ನಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದ,  ಹೇಗಾದರೂ ಮಾಡಿ ಆತನ ಮನಸ್ಸು ಬದಲಿಸಬೇಕು ಎಂದು ತೀರ್ಮಾನಿಸಿ ಇಬ್ಬರು ಒಂದು ದಿನ ಲಾಂಗ್ ಬೈಕ್ ರೈಡ್ ಹೊರೆಟವು, 300 ಕೀ.ಮಿ ಪಯಣ ಅದು.
ಒಂದು ದಿನ ಶನಿವಾರ ಬೆಳಗ್ಗೆ.7ಕ್ಕೆ ಬೈಕ್ ಹತ್ತಿ ಇಬ್ಬರು ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯಣ ಆರಂಭಿಸಿದೆವು. ಅಂದು ತುಂತುರ ಮಳೆ ಬೇರೆ ಬೀಳುತ್ತಿತ್ತು, ಮೋಡಗಳು ಕವಿದ ವಾತಾವರಣದಲ್ಲಿ ಅದು ತುಂತುರು ಮಳೆಗಳ ಸಿಂಚನವಾಗುತ್ತಿದ್ದ ಸಂದರ್ಭದಲ್ಲಿ ಬೈಕ್ ಓಡಿಸುತ್ತ ಮಳೆ ಹನಿಗಳ ನಡುವೆ ಸಾಗುವುದು ಮನಸ್ಸಿಗೆ ಆಹ್ಲಾದವೆನಿಸುತ್ತದೆ. 
ಮೊದಲು ದಾರಿ ಮಧ್ಯೆ ಒಂದು ದೊಡ್ಡ ಕೆರೆ ಸಿಕ್ಕಿತು, ಕೆರೆ ಕಟ್ಟೆಯ ಮೇಲೆ ಹತ್ತಿ ಕೊನೆಯವರೆಗೂ ಹೋಗಿ ಬಂದವು. ಕೆರೆಯ ತುಂಬಾ ನೀರಿತ್ತು, ಅದು ಬೇರೆ ಮಳೆ ಬೀಳುತ್ತಿದ್ದರಿಂದ ತಣ್ಣಗೆಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ ನಿಶಬ್ದ, ಗಾಳಿಯ ರಭಸಕ್ಕೆ ಕೆರೆಯಲ್ಲಿ ಅಲೆಗಳು ಸೃಷ್ಟಿಯಾಗಿದ್ದವು.   
ಅಲ್ಲಿಂದ ಹೊರಟು ಮುಂದೆ ಸಾಗುತ್ತ ಹೋದಾಗ ದಾರಿ ಮಧ್ಯೆ ಸಣ್ಣದಾದ ಪೆಟ್ಟಿಗೆ ಅಂಗಡಿ ಇತ್ತು. ಅಲ್ಲಿ ಚಹಾ ಸೇವಿಸೋಣ ಎಂದು ಹೋದರೆ, ಅಂಗಡಿ ಮಾಲೀಕನ ಮಗ ಒಳಗೆ ಜೋರಾಗಿ ಓದುತ್ತಿದ್ದ, ಏನ್ ಸಾರ್ ಮಗ ಎಷ್ಟನೇ ತರಗತಿ ಓದುತ್ತಿದ್ದಾನೆ ಎಂದು ಪ್ರಶ್ನೆ ಹಾಕಿದರೆ, ಸಾರ್ ಆತ 3 ನೇ ತರಗತಿ, ನಮ್ಮೂರಿನ ಸರಕಾರಿ ಶಾಲೆಗೆ ಹೋಗುತ್ತಾನೆ. ನನ್ನ ಪತ್ನಿಗೂ, ನನಗೂ ದಿನವೂ ಜಗಳ, ಕಾರಣ ಊರಿನ ಎಲ್ಲರ ಮಕ್ಕಳು ಖಾಸಗಿ ಶಾಲೆಗೆ ಸ್ಕೂಲ್ ವ್ಯಾನ್ ನಲ್ಲಿ ಹೋಗಿ ಬರುತ್ತಾರೆ. ಅವರ ಯೂನಿಫಾರ್ಮ್, ಶೂ ಹಾಕುವ ಸ್ಟೈಲು, ಶಾಲೆಯ ಕಟ್ಟಡ ನೋಡಿದರೆ ನನ್ನ ಪತ್ನಿಗೆ ಖುಷಿಯಾಗುತ್ತದಂತೆ. ಆದರೆ ನಮ್ಮ ಮಕ್ಕಳು ಬೀಳುವ ಹಂತದಲ್ಲಿರುವ ಸರಕಾರಿ ಶಾಲೆಗೆ ಹೋಗುತ್ತಾರೆ. ನೀನು ನೆಟ್ಟಗೆ ಸಂಪಾದನೆ ಮಾಡಿ ಹಣ ಇಟ್ಟಿದ್ದರೆ ನಮ್ಮ ಮಕ್ಕಳು ಕೂಡ ಖಾಸಗಿ ಶಾಲೆಗೆ ಹೋಗುತ್ತಿದ್ದರು, ನಿನ್ನ ದುರದೃಷ್ಟದಿಂದ ನನ್ನ ಮಕ್ಕಳು ಸರಕಾರಿ ಶಾಲೆಗೆ ಕಳಿಸಬೇಕಾದ ದೌರ್ಭಾಗ್ಯ ಎಂದು ದಿನವೂ ನನ್ನ ಜೊತೆ ಜಗಳ ಆಡುತ್ತಾಳೆ ಎಂದು ಬೇಸರಿಸಿಕೊಂಡ.
ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರೂ ದೇಶವನ್ನೇ ಆಳಿದ್ದಾರೆ. ದೇಶದ ಎಲ್ಲಾ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರಿ ಶಾಲೆಗೆ ಹೋಗುತ್ತಾರೆ ಎಂದು ನೀವು ನೋವು ಪಡುವ ಅವಶ್ಯಕತೆ ಆದರೂ ಏನಿದೆ ? ಎಂದು ತಿಳಿ ಹೇಳಿದೆ.
ಅಲ್ಲಿಂದ ಮುಂದೆ ಹೋದಂಗೆ ಒಂದು ಸಣ್ಣ ಹಳ್ಳಿ, ಬಹುಃಶ ಆ ಹಳ್ಳಿಯಲ್ಲಿ 60 ಮನೆಗಳಿರಬಹುದು. ಆ ದಿನ ಆ ಗ್ರಾಮದ ಮುಖ್ಯ ದೇವರಾದ ಈಶ್ವರನಿಗೆ ವಿಶೇಷವಾದ ಪೂಜೆ ಇತ್ತು, ಹೆಚ್ಚು ಜನ ಕಂಡ ಕಾರಣ ನಾವು ಬೈಕ್ ಸೈಡ್ ಗೆ ಹಾಕಿ ಗ್ರಾಮದ ಒಳಗೆ ಪ್ರವೇಶಿಸಿದೆವು. ಗ್ರಾಮದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆ ಮುಂಭಾದಲ್ಲಿ ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿದ್ದರು. ಊರಿನ ಎಲ್ಲರು ಸೇರಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗ್ರಾಮದ ಎಲ್ಲರಲ್ಲೂ ಏನೋ ಒಂದು ಖುಷಿ. ಗ್ರಾಮದ ದೇವರಿಗೆ ವಿಶೇಷ ಪೂಜೆ ಇದ್ದರಿಂದ ದೂರದ ಊರುಗಳಲ್ಲಿ ಹೋಗಿ ಕೆಲಸ ಮಾಡುವವರು ತಮ್ಮ ಗ್ರಾಮಕ್ಕೆ ಬಂದಿದ್ದರು. ತೀವ್ರ ಬರಗಾಲದಿಂದ ಕೃಷಿ ಚಟುವಟಿಕೆಗಳು ಸರಿಯಾಗಿ ನಡೆಯದೆ ಗ್ರಾಮಸ್ಥರು ಆರ್ಥಿಕವಾಗಿ ಸಾಕಷ್ಟು ಹೊಡೆತಕ್ಕೆ ಒಳಗಾಗಿದ್ದರು. ಆದರೂ ಅವರ ಭರವಸೆ ಮಾತ್ರ ಕುಂದಿರಲಿಲ್ಲ. ದೇಗುಲದ ಒಳಗೆ ನಾವು ಹೋಗಿ ಒಂದು ನಮಸ್ಕಾರ ಹಾಕಿ ಅಲ್ಲಿಂದ ಹೊರಟು ಸೇರಿದ್ದು ಮತ್ತೊಂದು ಗ್ರಾಮ. 
ಆ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳಿದ್ದವು. ಊರಿನ ಒಳಗೆ ಹೋದರೆ ಸ್ವಚ್ಛತೆ ಇರಲಿಲ್ಲ, ರಸ್ತೆ ಅಧ್ವಾನವಾಗಿತ್ತು, ಗ್ರಾಮದ ನಲ್ಲಿಯ ಮುಂಭಾಗದಲ್ಲಿ ನೂರಾರು ಬಿಂದಿಗೆಗಳನ್ನು ಇಟ್ಟಿದ್ದರು. ಅವುಗಳ ಮೇಲೆ ಪೇಂಟ್ ನಲ್ಲಿ ಹೆಸರುಗಳು ಬೇರೆ ಬರೆದಿದ್ದರು. ವಾರಕ್ಕೆ 3 ದಿನ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ, ಅದು ಸರಿಯಾಗಿ ವಿದ್ಯುತ್ ಪೂರೈಕೆ ಇದ್ದರೆ ಮಾತ್ರ, ಆದ್ದರಿಂದಲೇ ನಮ್ಮ ಗ್ರಾಮದಲ್ಲಿ ನೀರಿಗೆ ಸಮಸ್ಯೆಯಾಗಿದೆ ಎಂದು ಗ್ರಾಮದ ಅಂಗಡಿ ಮುಂಭಾಗದಲ್ಲಿ ಕೂತಿದ್ದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ಹೇಳಿದರು. ಸಿಟಿಯ ಜನ ತರ ನಾವು ಪುಣ್ಯವಂತರಲ್ಲ. ಅದು ಬೆಂಗಳೂರಿನ ನಿಮಗೆ ಮನೆಗೆ ಒಳಗೆ ಪೈಪ್ ಲೈನ್ ಮುಖಾಂತರ ಕಾವೇರಿ ನೀರು ಪೂರೈಸುತ್ತಾರೆ. ಆದರೆ ನಾವು ಕೀ.ಮಿಗಟ್ಟಲೆ ಬಿಸಿಲ್ಲೇನದೆ ನಡೆದುಕೊಂಡು ಹೋಗಿ ಒಂದೆರೆಡು ಬಿಂದಿಗೆ ನೀರು ತರುತ್ತೇವೆ ಎನ್ನುವ ಅವರ ಮಾತಿನಲ್ಲಿ ನೋವಿತ್ತು. 
ನಮ್ಮ ಪ್ರಯಾಣದ ನಡುವೆ ಅರಣ್ಯ ಪ್ರದೇಶ ಕಾಣಿಸಿತು. ಸ್ವಲ್ಪ ಒಳಗೆ ಹೋದರೆ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು, ಪಕ್ಷಿಗಳ ಹಿಂಪಾದ ಧ್ವನಿ ಕೇಳಿಸುತ್ತಿತ್ತು. ಮಳೆ ಹನಿಗಳು ಮರದ ಎಲೆಗಳ ಮೇಲೆ ಬಿದ್ದು, ಭೂಮಿಯನ್ನು ಸ್ಪರ್ಶಿಸುತ್ತಿತ್ತು. ಮಳೆ ಬಿದ್ದು ನಿಂತಿದ್ದರಿಂದ ಮಣ್ಣಿನ ವಾಸನೆ ಸುಹಾಸಭರಿತವಾಗಿತ್ತು. ಅದೆಲ್ಲೋ ದೂರದಿಂದ ವಯಸ್ಸಾದ ಅಜ್ಜಿ ಒಬ್ಬರು ತಲೆ ಮೇಲೆ ಕಟ್ಟಿಗೆಯ ಕಟ್ಟನ್ನು ಇಟ್ಟುಕೊಂಡು ಕಷ್ಟ ಬಿದ್ದು ನಡೆದುಕೊಂಡು ಬರುತ್ತಿದ್ದರು. ಏನು ಅಜ್ಜಿ ಈ ಮಳೆಯಲ್ಲಿ, ಅದು ಕಾಡಿನಲ್ಲಿ ಈ ಕಷ್ಟ ಬೀಳುತ್ತಿದ್ದಿಯಾ ಎಂದರೆ ನಮ್ಮ ಮನೆಯಲ್ಲಿ ಓಲೆ ಹುರಿಯಬೇಕಾದರೆ ಕಟ್ಟಿಗೆ ಬೇಕೆ ಬೇಕು. ನಾವು ಇರುವುದು ಇಬ್ಬರು, ನಾನು ನಮ್ಮ ಯಜಮಾನ್ರು, ನಮ್ಮನೇಲಿ ಗ್ಯಾಸ್ ಇಲ್ಲ, ಊಟ ತಯಾರಿಸಿಕೊಳ್ಳಬೇಕಾದರೆ, ನೀರು ಕಾಯಿಸಿಕೊಳ್ಳಬೇಕಾದರೆ ಕಟ್ಟಿಗೆ ಅನಿವಾರ್ಯ. ಈ ಕಾಡೇ ನಮಗೆ ಆಸರೆ ಎಂದಳು. 
ಅಲ್ಲಿಂದ ಸ್ವಲ್ಪ ದೂರ ಹೋದರೆ ರಸ್ತೆಯ
ಬದಿಯಲ್ಲಿ ಐಸ್ ಕ್ಯಾಂಡಿ ನಿಂತಿತ್ತು, ತಿನ್ನೋಣ ಎಂದು ಗಾಡಿ ನಿಲ್ಲಿಸಿದೆ. 5 ರೂಪಾಯಿಯ ಎರಡು ಐಸ್ ಕ್ಯಾಂಡಿ ತಿಂದು ಖುಷಿ ಪಟ್ಟೆವು. ಐಸ್ ಕ್ಯಾಂಡಿ ಮಾರುವವನ ಹೆಸರು ಹರೀಶ್, ವಿಕಲಚೇತನ. ಪಿ.ಯು ಪಾಸಾಗಿದ್ದಾನೆ. ಕಳೆದ 6 ವರ್ಷಗಳಿಂದ ಐಸ್ ಕ್ಯಾಂಡಿ ಮಾರುತ್ತ ಜೀವನ ಸಾಗಿಸುತ್ತಿದ್ದೇನೆ. ಪ್ರತಿನಿತ್ಯ ಹೆಚ್ಚೆಂದರೆ 300 ರೂ. ಸಂಪಾದಿಸುತ್ತೇನೆ ಎಂದ. ಒಂದು ಕೈ ಅಪಘಾತದಲ್ಲಿ ಕಳೆದುಕೊಂಡಿದ್ದಾನೆ. ಐಸ್ ಕ್ಯಾಂಡಿ ತ್ರಿಚಕ್ರ ಸೈಕಲ್ ನ್ನು ತುಳಿದುಕೊಂಡು ಹಳ್ಳಿ, ಹಳ್ಳಿ ಸುತ್ತಿ ವ್ಯಾಪಾರ ಮಾಡುತ್ತಾನಂತೆ. ಆದರೂ ಆತನ ಉತ್ಸಾಹಭರಿತ ಜೀವನ, ಕಷ್ಟ ಬಿದ್ದರೆ ಮಾತ್ರ ಜೀವನ ನಡೆಯುತ್ತೆ ಎಂದು ಹೇಳುವ ಆತನ ಮಾತನ್ನು ಒಪ್ಪದಿರಲು ಸಾಧ್ಯವೇ. 
ಮಧ್ಯಾಹ್ನದ ಊಟಕ್ಕೆ ರಸ್ತೆಯಲ್ಲಿರುವ ದೊಡ್ಡ ಹೊಟೇಲ್ ಗೆ ಹೋಗುವುದು ಬೇಡ ಎಂದು ತೀರ್ಮಾನಿಸಿ ರಸ್ತೆ ಒಂದು ಭಾಗದಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯ ಹೋಟೆಲ್ ಗೆ ಹೋದೆವು. ಇಡ್ಲಿ ಹಾಗೂ ಚಿತ್ರಾನ್ನವಿತ್ತು, ದೊಡ್ಡ ಹೋಟೆಲ್ ನಲ್ಲಿ ಕೂರಲು ಕುರ್ಚಿಗಳು ಇರುತ್ತವೆ. ಇಲ್ಲಿ ಅದು ಇಲ್ಲ ಎನ್ನುವುದು ಬಿಟ್ಟರೆ ಕ್ವಾಂಟಿಟಿ, ಕ್ವಾಲಿಟಿಯಲ್ಲಿ ಪ್ರಶ್ನೆ ಮಾಡುವಂತಿಲ್ಲ. ಹೋಟೆಲ್ ಮಾಲೀಕರ ಹೆಸರು ಸರಸ್ವತಮ್ಮ. ಗಂಡ ತೀರಿ ಹೋಗಿ 10 ವರ್ಷವಾಗಿದೆ. ಕುಟುಂಬ ನಿರ್ವಹಣೆಗಾಗಿ ಹೋಟೆಲ್ ವೃತ್ತಿ ಮಾಡುತ್ತಿದ್ದೇನೆ, ಪರವಾಗಿಲ್ಲ ಜೀವನ ಸಾಗುತ್ತಿದೆ. ಆದರೂ ದೊಡ್ಡ ಹೋಟೆಲ್ ಗಿಂತ ಹೆಚ್ಚು ಶುಚಿ, ರುಚಿಯಾಗಿ ಅಡುಗೆ ಮಾಡಿದರೂ ಕೆಲವರು ಹೋಟೆಲ್ ಚಿಕ್ಕದು, ಹಳೆಯದು ಎಂದು ಬರಲು ಹಿಂದೇಟು ಹಾಕುತ್ತಾರೆ. ಆದರೂ ಬದಕು ಮಾತ್ರ ನಿಂತಿಲ್ಲ ಎಂದು ಹೇಳುತ್ತಾರೆ.
ನಮ್ಮ ಪಯಣ ಆಂಧ್ರ ಪ್ರದೇಶದ ವಿ.ಕೋಟ ಸಮೀಪದ ಕೈಗಲ್ ಎಂಬ ಸಣ್ಣ ಗ್ರಾಮದತ್ತ ಸಾಗಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ಒಂದು ಫಾಲ್ಸ್ ಇದೆ. ಅದಕ್ಕೆ ಕೈಗಲ್ ಫಾಲ್ಸ್ ಎಂದು ಹೆಸರಿಡಲಾಗಿದೆ. ಫಾಲ್ಸ್ ನಲ್ಲಿ ನೀರು ಹರಿಯುತ್ತಿರಲಿಲ್ಲ, ಆದರೆ ಸುತ್ತಲು ದಟ್ಟವಾದ ಅರಣ್ಯವಿತ್ತು. ಕೆಲ ದಿನಗಳಿಂದ ಸಣ್ಣ ಪ್ರಮಾಣದ ಮಳೆಯಾದ್ದರಿಂದ ಹಚ್ಚಹಸಿರಿನಿಂದ ಅರಣ್ಯವು ಕಂಗೊಳಿಸುತ್ತಿತ್ತು. ಎಲ್ಲೂ ಜನರ ಸುಳಿವು ಇರಲಿಲ್ಲ. ಫಾಲ್ಸ್ ಬಳಿ ಇದ್ದ ಬಂಡೆ ಕಲ್ಲಿನ ಮೇಲೆ ಕುಳಿತುಕೊಂಡು 1 ಗಂಟೆ ಕಾಲ ಪ್ರಕೃತಿ ಸೌಂದರ್ಯವನ್ನು ಆಹ್ಲಾಸಿದೆವು.
ಯಾವ ಜಂಜಾಟವು ಇಲ್ಲದೆ ನೆಮ್ಮದಿಯಾಗಿ ಗಿಡ ಮರಗಳ ಮಧ್ಯೆ ಕಳೆದ ಕೆಲ ಸಮಯವು ಮನಸ್ಸು ಹಗುರವಾಗುವಂತೆ ಮಾಡಿತು. ಸ್ನೇಹಿತನಿಗೆ ಹೇಳಿದೆ ನೋಡು ಈ ಗಿಡ, ಮರಗಳು ಎಂದು ಸ್ವಾರ್ಥಕ್ಕಾಗಿ ಏನು ಮಾಡಿಕೊಳ್ಳುವುದಿಲ್ಲ, ಬೇರೆವರಿಗೆ ತೊಂದರೆ ಕೊಡುವುದಿಲ್ಲ. ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತವೆ, ಆಗಂತ ಇವುಗಳಿಗೆ ಕಷ್ಟವಿಲ್ಲ ಎಂತಲ್ಲ ಜೋರಾಗಿ ಮಳೆ, ಗಾಳಿ ಬಂದರೆ ರೆಂಬೆಗಳು ಮುರಿಯಬಹುದು, ಬುಡವೇ ಅಲ್ಲಾಡಬಹುದು. ಜನರು ತಮ್ಮ ಸ್ವಾರ್ಥಕ್ಕಾಗಿ ಯಾವಾಗಾದರೂ ಮರಕ್ಕೆ ಕೊಡಲಿ ಪೆಟ್ಟು ಕೊಡಬಹದು. ಮಳೆ ಸರಿಯಾಗಿ ಬೀಳದೆ ನೀರಿನ ದಾಹ ನೀಗದೆ ಮರ ಒಣಗುವ ಸ್ಥಿತಿ ಬರಬಹುದು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಮರ, ಗಿಡಗಳು ಸದಾ ನಗುತ್ತಲೇ ಇರುತ್ತವೆ. ಜನರಿಗೆ ಹಣ್ಣು, ನೆರಳನ್ನು ಪ್ರಾಣ ಇರುವವರೆಗೂ ಪಕ್ಷಪಾತ ಮಾಡದೇ ನೀಡುತ್ತವೆ. ಏನೇ ಆಗಲಿ ಪ್ರಕೃತಿಯನ್ನು ನೋಡುತ್ತ ಕುಳಿತರೆ ಸಾಧಿಸಬೇಕೆಂಬ ಛಲ ಇಮ್ಮಡಿಯಾಗುತ್ತದೆ. ಕೈಗಲ್ ನಿಂದ ವಿ.ಕೋಟ ಪಟ್ಟಣಕ್ಕೆ ಬಂದು ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಟಿದ್ದು ಬೆಂಗಳೂರಿನತ್ತ.
ನನ್ನ ಸ್ನೇಹಿತನಿಗೆ ಹೇಳಿದೆ ಇಂದು ಇಡೀ ದಿನ ನಾವು ಹಲವು ಪ್ರದೇಶಗಳಿಗೆ ಹೋದೆವು, ಹಲವರ ಜೊತೆ ಸಮಾಲೋಚನೆ ಮಾಡಿದೆವು, ಕಷ್ಟದಲ್ಲಿದವರು ಸಿಕ್ಕರು. ಖುಷಿ ಜೀವನ ಮಾಡುತ್ತಿದ್ದವರು ಕಂಡರು. ಬರಗಾಲದ ಭೀಕರತೆಯ ಮಧ್ಯೆಯು ಚಿಂತಿಸದೆ ಖುಷಿಯಿಂದ ಹಬ್ಬ ಆಚರಿಸುತ್ತಿರುವ ಹಳ್ಳಿಯ ಜನ, ಗ್ರಾಮದವರ ಒಗ್ಗಟ್ಟು ನೋಡಿದೆವು. ಹಾಗೆಯೇ ಮತ್ತೊಂದು ಹಳ್ಳಿಯಲ್ಲಿ ಅಸ್ವಚ್ಚತೆಯ ಮಧ್ಯೆಯ ಬದುಕನ್ನು ಸಾಗಿಸುತ್ತಿರುವವರು, ಕುಡಿಯಲು ನೀರು ಬೇಕಾದರೂ ಹರಸಾಹಸ ಪಡುತ್ತಿರುವ ಜನರು ಎದುರಾದರು.
ವಿಕಲ ಚೇತನನಾದರೂ ಹಳ್ಳಿ ಹಳ್ಳಿಗೂ ಹೋಗಿ ಐಸ್ ಕ್ಯಾಂಡಿ ಮಾರುತ್ತ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುತ್ತ ಸಾಗುತ್ತಿದ್ದಾನೆ. ರಸ್ತೆಯಲ್ಲೇ ತಳ್ಳುವ ಬಂಡಿಯಲ್ಲಿ ಗಂಡ ಇಲ್ಲದಿದ್ದರು ಯಾರ ಹಂಗಿಗೂ ಒಳಗಾಗದೆ ಸ್ವಾಭಿಮಾನದಿಂದ ಹೋಟೆಲ್ ನಡೆಸುತ್ತ ಬದುಕಿಗೆ ಸವಾಲೆಸೆದು ಜೀವನ ಸಾಗಿಸುತ್ತಿರುವ ಮಹಿಳೆಯ ದರ್ಶನವಾಯಿತು. ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಿಲ್ಲ ಎಂದು ತನ್ನ ಪತ್ನಿಯಿಂದ ದಿನವೂ ಬೈಯಿಸಿಕೊಳ್ಳುತ್ತಿದ್ದರು, ಪೆಟ್ಟಿಗೆ ಅಂಗಡಿಯಲ್ಲಿ ಟೀ ಮಾರುತ್ತ ತನ್ನ ಕೈಯಲ್ಲಾದ ಮಟ್ಟಿಗೆ ಕುಟುಂಬ ನಿರ್ವಹಣೆ ಮಾಡುತ್ತ, ಬದುಕಿನ ಮೇಲೆ ಭರವಸೆ ಕಳೆದುಕೊಳ್ಳದೆ ಉತ್ಸಾಹದಿಂದ ಜೀವನ ನಡೆಸುತ್ತಿರುವವರು ಸಿಕ್ಕರು. ಮಳೆಯಲ್ಲೇ ಸೌಧೆ ತರಲು ಆ ಇಳಿ ವಯಸ್ಸಿನ ಅಜ್ಜಿ ಕಾಡಿಗೆ ನಡೆದುಕೊಂಡೆ ಹೋಗಿ ಕಷ್ಟ ಬೀಳುತ್ತಿದ್ದರು, ತನ್ನ ಜೀವನ ಯಾಕೆ ಈಗಾಯಿತು ಎಂದು ಬೇಸರಿಸಿಕೊಳ್ಳದೇ ಪ್ರತಿದಿನವು ಪ್ರೀತಿಯಿಂದ ಸ್ವಾಗತಿಸುವ ಆಕೆಯ ಛಲ ಯಾರಿಗಿರುತ್ತೆ. 
ಎಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಅನುಭವಿಸಿದೆವು. ಜನ ಜಂಗುಳಿ ಇಲ್ಲದೇ ಪ್ರಶಾಂತವಾದ ವಾತಾವರಣದಲ್ಲಿ ಮರ, ಗಿಡಗಳ ಮಧ್ಯೆ ಒಂದು ಗಂಟೆ ಕೂತ ಆ ಸಂದರ್ಭ ಕೋಟಿ ಕೊಟ್ಟರು ಸಿಗದು. ಒತ್ತಡದ ಜೀವನ, ಜಂಜಾಟಗಳಿಂದ, ಟ್ರಾಫಿಕ್ ಕಿರಿಕಿರಿ ಮಧ್ಯೆ ಹೈರಾಣದ ಬದುಕಿಗೆ ಈ ಪ್ರಕೃತಿ ಎಷ್ಟೊಂದು ಉತ್ಸಾಹ ತುಂಬಿತು. ಜನಗಳಲ್ಲಿ ಅಸೂಹೆ, ಕೋಪ, ಹೊಟ್ಟೆಕಿಚ್ಚು ಇರಬಹುದು. ಆದರೆ ಗಿಡ, ಮರಗಳಲ್ಲಿ ಎಲ್ಲಿದೆ, ನಿಸ್ವಾರ್ಥ ಮನಸ್ಥಿತಿಯ ಗಿಡಮರಗಳ ಮಧ್ಯೆ ಇರುವುದೇ ಅತ್ಯದ್ಬುತ.
ಇಂದು ಸಮಾಜದಲ್ಲಿ ಎಷ್ಟೋ ಜನ ಏನು ಕಳೆದುಕೊಂಡಂಗೆ ಜೀವನ ನಡೆಸುತ್ತಿದ್ದಾರೆ. ಕಷ್ಟಗಳು ನಮಗೆ ಮಾತ್ರ ಇದೆಯೆನೋ ಎಂದು ಭ್ರಮೆಯಲ್ಲಿರುತ್ತೇವೆ. ಕೂಲಿಗೆ ಹೋಗಿ ಬಿಸಿಲಲ್ಲಿ ದುಡಿಯುವ ಜನ ಕೂಡ ಯಾವತ್ತೂ ಜೀವನದ ಬಗ್ಗೆ ಬೇಸರ ಪಡುವುದಿಲ್ಲ. ಏಕೆಂದರೆ ಯಾವ ಕ್ಷಣಕ್ಕೆ ಏನು ಆಗಬೇಕೋ ಅದು ಆಗುತ್ತೇ ಎಂದು ನಂಬುತ್ತಾರೆ. ಕೂಲಿ ಮಾಡಿದರೂ ಕೂಡ ಕಷ್ಟಗಳನ್ನು ಸವಾಲೆಸುವ ಶಕ್ತಿ ಇವರಲ್ಲಿ ಇರುತ್ತದೆ. ಆದರೆ ವಿದ್ಯಾವಂತರು, ಬುದ್ದಿವಂತರು, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಕೂಲಿ ಮಾಡುವವರಲ್ಲಿ ಇರುವ ಆತ್ಮಸ್ಥೈರ್ಯ, ನಂಬಿಕೆ ಇರುವುದಿಲ್ಲ. ಕಷ್ಟಗಳಿಂದ ಹೊರತಾದ ಜೀವನ ಯಾರಿಗೆ ತಾನೇ ಇರುತ್ತದೆ ಹೇಳಿ..?
ಜೀವನ ಎಂದರೆ ನಿಜಕ್ಕೂ ನಮಗೆ ಏನು ಇಷ್ಟವಾಗುತ್ತದೋ ಅದು ಮಾಡಬೇಕು. ಕಷ್ಟಗಳು ನಮಗೆ ಇದೆ ಎಂದು ಕೂತರೆ ಆಗುದಾದರೂ ಏನು ? ಅಥವಾ ಸಾಧಿಸುವುದಾದರೂ ಏನು ? ಜೀವನದಲ್ಲಿ ಉತ್ಸಾಹ ಪಡೆಯಬೇಕಾದರೆ, ಸಕಾರಾತ್ಮಕ ಮನಸ್ಥಿತಿ ಪಡೆಯಬೇಕಾದರೆ, ನಮ್ಮ ವ್ಯಕ್ತಿತ್ವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಬೇಕು. ಇರುವ ಅನುಕೂಲಗಳಲ್ಲೇ ಖುಷಿ ಕಾಣಬೇಕು. ಇರುವುದನ್ನು ಬಿಟ್ಟು, ಇಲ್ಲದಿರುವುದರ ಬಗ್ಗೆ ಆಲೋಚಿಸುತ್ತಿದ್ದರೆ ಸಮಯ ವ್ಯರ್ಥವಾಗುವುದರ ಜೊತೆಗೆ ಮಾನಸಿಕ ಅಸಮತೋಲನಕ್ಕೆ ಒಳಗಾಗಬೇಕಾಗುತ್ತದೆ.
ಜೀವನ ಎಂದರೆ ನಮಗಿಷ್ಟವಾಗುವ ತರ ನಾವು ಬದುಕುವುದು. ಇಂದು ಏನಾಗಿದೆ ಎಂದರೆ ಬೇರೊಬ್ಬರು ಏನು ಅಂದುಕೊಳ್ಳುತ್ತಾರೋ, ಬೇರೆಯವರೆ ನನ್ನ ಬಗ್ಗೆ ಏನು ಭಾವಿಸುತ್ತಾರೋ ಎಂದು ಭಯದಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ನಮ್ಮದು.  ನಮಗೆ ಇರುವುದೇ ಒಂದು ಜನ್ಮ, ಮತ್ತೊಂದು ಜನ್ಮ ಇದಿಯೋ ಇಲ್ಲವೋ ಗೊತ್ತಿಲ್ಲ. ಈ ಜನ್ಮದಲ್ಲೇ ನಮಗಿಷ್ಟವಾಗುವ ರೀತಿ ಬದುಕದಿದ್ದರೆ, ಬದುಕುವುದಾದರೂ ಏತಕ್ಕೆ ? ನಿಜ ಸಮಾಜ, ಕುಟುಂಬ ಎಲ್ಲವೂ ಬೇಕು. ಜವಾಬ್ದಾರಿ, ಕರ್ತವ್ಯಗಳನ್ನು ನಿರ್ವಹಿಸಬೇಕು. ಜೊತೆಗೆ ನಮ್ಮ ಆಸೆಯ ರೀತಿಯಲ್ಲೂ ಜೀವನ ಸಾಗಿಸಬೇಕು. ವಿನಾ ಕಾರಣ ಆಲೋಚಿಸುವ ಅನಿವಾರ್ಯತೆ ಏಕೆ. ಜೀವನದಲ್ಲಿ ಸಾಧಿಸುವವ ಛಲ ಇರುವವರು ಅನಗತ್ಯ ಆಲೋಚನೆಗಳಿಂದ ಮುಕ್ತರಾಗಿರುತ್ತಾರೆ. ಬದುಕಿನ ಪ್ರತಿಕ್ಷಣವೂ ಇಂಪಾರ್ಟೆಂಟ್, ಯಾಕಂದ್ರೆ ಒಂದು ಸೆಕೆಂಡ್ ಕಳೆದುಕೊಂಡರೆ ಮತ್ತೆ ಸಿಗಲ್ಲ. ಭಯ, ಮಾನಸಿಕ ನೋವು, ಅಪನಂಬಿಕೆ ಎಂಬ ಸೋಲಿಸುವ ಸೂತ್ರಗಳನ್ನು ಆದಷ್ಟು ದೂರ ತಳ್ಳಿ, ನಮಗೆ ಇಷ್ಟವಾಗುವ ಜೀವನ ಸಾಗಿಸಬೇಕಿದೆ. ಸೋ ಲೆಟ್ಸ್ ಎಂಜಾಯ್ ಎವರಿಮೂಮೆಂಟ್, ಯಾಕೆಂದ್ರೆ ಇದು ನಮ್ಮ ಲೈಫ್, ನಮ್ಮ ಜರ್ನಿ.

ಬುಧವಾರ, ಜುಲೈ 3, 2019

ಕನಸು ಕಾಣುವ ಜೀವನ..

  ⏩ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ 

ನಮ್ಮದೊಂದು ರೀತಿ ಕನಸುಗಳ ಜೀವನ. ಕನಸುಗಳನ್ನು ಕಾಣದೇ ಜೀವನ      ಮಾಡುತ್ತಿರುವವರು ಬಹುಃಶ ಯಾರು ಸಿಗಲ್ಲ. ಪ್ರತಿದಿನವೂ ಒಂದೊಂದು ರೀತಿಯ ಕನಸುಗಳನ್ನು ಕಾಣುತ್ತಲೇ ಇರುತ್ತೇವೆ. ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಜೀವನಪರ್ಯಂತ ನಾವು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಒಮ್ಮೊಮ್ಮೆ ನಾವು ಅಂದುಕೊಂಡ ಕನಸುಗಳು ಈಡೇರದಿದ್ದಾಗ ಅಥವಾ ಅವು ಈಡೇರಲ್ಲಾ ಎಂದು ಗೊತ್ತಾದಾಗ ಮನಸ್ಸಿಗೆ ಆಗುವ ನೋವಿನ ಯಾತನೆ ಕಡಿಮೆ ಏನಲ್ಲ.
ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಬರುವ ಸಮಸ್ಯೆಗಳು ನಮ್ಮ ಕನಸುಗಳನ್ನು ನುಚ್ಚುನೂರು ಮಾಡಿಬಿಡುತ್ತವೆ. ಬಹುಪಾಲು ಜನ ತಮ್ಮ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಈ ಕನಸಿಗೆ ಕೊಳ್ಳಿ ಇಡುವುದೇ ಈ ಸಮಸ್ಯೆಗಳು ಎಂಬ ಮಹಾ ಶತ್ರು. 
ಮೊನ್ನೆ ಸ್ನೇಹಿತರೊಬ್ಬರ ಮದುವೆಗಾಗಿ ದೂರದ ವಿಜಯಪುರ (ಬಿಜಾಪುರ)ಕ್ಕೆ ಹೋಗಿದ್ದೆ. ಮೊದಲ ಬಾರಿ ಉತ್ತರ ಕರ್ನಾಟಕಕ್ಕೆ ಹೋದ ಸಂದರ್ಭವದು. ಇಂಡಿ ಪಟ್ಟಣದಿಂದ ಬಸ್ ನಲ್ಲಿ ವಿಜಯಪುರ ನಗರಕ್ಕೆ ಹೋಗುತ್ತಿದ್ದಾಗ ಎಲ್ಲೂ ಕೃಷಿ ಚಟುವಟಿಕೆಗಳೇ ಕಾಣುವುದಿಲ್ಲ. ಬಹುತೇಕ ಜಮೀನು ಮಳೆಯಾಶ್ರಿತ ಕೃಷಿ ಜಮೀನು. ಮಳೆ ಬಿದ್ದರೆ ಕೃಷಿ ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ. ಇಲ್ಲಿನ ಜನರು ಅಷ್ಟೇ ಅತ್ಯಂತ ಸರಳವಾಗಿ ಜೀವನ ನಡೆಸುವವರು, ಅವರನ್ನು ನೋಡುವಾಗಲೇ ಅದು ಅರ್ಥವಾಗುತ್ತದೆ. ಬಿಜಾಪುರ ನಗರವಂತು ಇತಿಹಾಸದ ಪುಟಗಳನ್ನೇ ಹೊಂದಿದ ನಗರ. ಹಲವು ಸಾಮ್ರಾಜ್ಯಗಳು ಆಳಿದ ಪ್ರದೇಶವಾದ್ದರಿಂದ ನಗರದ ಯಾವುದೇ ಭಾಗಕ್ಕೆ ಹೋದರು ಪುರಾತನವಾದ ಕೋಟೆಗಳ ದರ್ಶನವಾಗುತ್ತದೆ. 
ಬಿಜಾಪುರ ನಗರದಲ್ಲಿನ ಗೋಲಗುಮ್ಮಟವು ಪ್ರಸಿದ್ದವಾದ ಸ್ಮಾರಕ. ಪುರಾತನವಾದ ಈ ಸ್ಮಾರಕವು ನೋಡಲು ಹಾಗೂ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾಗಿದೆ. ಗೋಲಗುಮ್ಮಟದ ಮುಂಭಾಗದಲ್ಲಿನ ವಸ್ತು ಸಂಗ್ರಹಾಲಯದಲ್ಲಿನ ಹಲವು ಪುರಾತನವಾದ ಶಿಲ್ಪಕಲಾಕೃತಿಗಳು ಗಮನಸೆಳೆಯುತ್ತದೆ. 
ಗೋಲಗುಮ್ಮಟ ವೀಕ್ಷಿಸಿ ಗೇಟಿನ ಮುಂಭಾಗಕ್ಕೆ ಬಂದಾಗ ಅಲ್ಲಿ ಸುಮಾರು 45 ವರ್ಷದ ಬಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ತನ್ನ ಕೈಯಲ್ಲಿ ಹಿಡಿದಿದ್ದ ಚಿತ್ರಗಳ ಆಲ್ಬಮ್ ತೋರಿಸಿದರು. ನೋಡಿ ಸಾರ್ ಈ ಚಿತ್ರಗಳಲ್ಲಿನ ಸ್ಥಳಗಳು ಬಿಜಾಪುರ ನಗರದಲ್ಲಿವೆ. ನೀವು ನಡೆದುಕೊಂಡೋ, ಆಟೋದಲ್ಲೋ ಹೋಗಿ ನೋಡಲು ಸಾಧ್ಯವಿಲ್ಲ. ನನಗೆ 350 ರೂ.ಕೊಡಿ ನನ್ನ ಟಾಂಗ (ಜಟಾಕ ಬಂಡಿ) ದಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದ. 
ಆಟೋ, ಗಾಡಿ, ಬಸ್ ಗಳಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ನನಗೆ, ಟಾಂಗದಲ್ಲಿ (ಕುದುರೆಯ ಜಟಾಕ ಬಂಡಿ) ಒಮ್ಮೆಯು ಹೋಗಿರಲಿಲ್ಲ. ಟಾಂಗದಲ್ಲಿ ಹೋಗುವ ಆಸೆಯಿಂದ 250ರೂ. ಕೊಡುತ್ತೇನೆ ಎಂದು ಹೇಳಿ ಟಾಂಗ ಹತ್ತಿದೆ. ಟಾಂಗದಲ್ಲಿ ಹೋಗುವುದೇ ಒಂದು ರೋಮಾಂಚನ. ಅದರಲ್ಲಿ ಸಾಗುತ್ತಿದ್ದಾಗ ಹಾಗೆಯೇ ಸುಮ್ಮನೆ ಟಾಂಗ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಮಾತಿನತ್ತ ಸೆಳೆದೆ. ಆತ ಮಾತನಾಡುತ್ತ ಕಳೆದ 18 ವರ್ಷಗಳಿಂದ ಟಾಂಗ ಓಡಿಸುತ್ತಲೇ ಜೀವನ ಸಾಗಿಸುತ್ತಿದ್ದೇನೆ ಸಾರ್. ಇಬ್ಬರು ಮಕ್ಕಳು, ಒಬ್ಬರು 10 ನೇ ತರಗತಿ, ಮತ್ತೊಬ್ಬರು 8 ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಇಲ್ಲ, ಇರುವುದು 2 ಸಾವಿರ ರೂ.ಗಳ ಪುಟ್ಟದಾದ ಬಾಡಿಗೆ ಮನೆಯಲ್ಲಿ. ಪತ್ನಿಯು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಾಳೆ. ಇಬ್ಬರು ದುಡಿಯುವುದು ಅನಿವಾರ್ಯ. ದಿನಕ್ಕೆ ಹೆಚ್ಚೆಂದರೆ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ತೋರಿಸಿ 500 ರೂ. ಸಂಪಾದಿಸುತ್ತೇನೆ. ಖರ್ಚೆಲ್ಲಾ ಹೋಗಿ 350 ರೂ. ಉಳಿಯುತ್ತದೆ. ಅದರಲ್ಲೇ ಕುಟುಂಬ ನಿರ್ವಹಣೆ. ಬೇರೆಯವರ ರೀತಿ ಬದುಕು ನಮ್ಮದಲ್ಲ. ಬೆಳಗ್ಗೆ ಮಾಡಿದ ಊಟವನ್ನೇ ಮಧ್ಯಾಹ್ನ, ರಾತ್ರಿಯು ತಿನ್ನುತ್ತೇವೆ. ಹಬ್ಬ ಹರಿದಿನಗಳು ಬಂದರೆ ಮಾತ್ರ ವಿಶೇಷವಾದ ಅಡುಗೆ ಇರುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವ ಪದ್ದತಿ.  
ಇನ್ನು ನಾವು ಬಡವರಾಗಿರುವುದರಿಂದ ನಮ್ಮ ಸಂಬಂಧಿಕರ್ಯಾರು ನಮ್ಮನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ನಮ್ಮ ಮನೆಗೂ ಅವರು ಬರುವುದಿಲ್ಲ. ಆದರೂ ಜೀವನದಲ್ಲಿ ಸಂತೋಷದಿಂದ ಇದ್ದೇನೆ. ಅದರರ್ಥ ಕಷ್ಟಗಳು ಇಲ್ಲವೆಂದಲ್ಲಾ, ಕಷ್ಟಗಳಲ್ಲೇ ಸಂತೋಷವನ್ನು ಕಾಣುತ್ತಿದ್ದೇನೆ. ಬೇರೆಯವರನ್ನೂ ನೋಡಿದಾಗ ಕೆಲವೊಮ್ಮೆ ನನಗೂ ಬೇಸರವಾಗುತ್ತದೆ. ಆದರೆ ನನ್ನ ಸಾಮರ್ಥ್ಯ, ಶಕ್ತಿ ಅರಿವು ನನಗಿದೆ. ಇರುವುದರಲ್ಲೇ ನೆಮ್ಮದಿ ಕಾಣಬೇಕು ಎಂಬ ನಿಲುವು ನನ್ನದು ಸಾರ್ ಎಂದು ಹೇಳುವ ಆತನ ಮಾತುಗಳಲ್ಲಿ ಬದುಕಿನ ಬಗ್ಗೆ ಪ್ರೀತಿ, ಅಪಾರ ನಿರೀಕ್ಷೆ ಇತ್ತು. 
ಮೊನ್ನೆ ವಿಜಯಪುರ ಜಿಲ್ಲಾಧಿಕಾರಿಗಳು ಕಾರಿನಲ್ಲಿ ಹೋಗುತ್ತಿದ್ದರೆ ರಸ್ತೆಯಲ್ಲಿದ್ದ ಪೊಲೀಸರು ಕಾರನ್ನು ನೋಡಿದ ಕೂಡಲೇ ಸೆಲ್ಯೂಟ್ ಹೊಡೆದರು. ನನಗೆ ಆಗ ಅರ್ಥವಾಯಿತು ಅಧಿಕಾರಿಯಾದರೆ ಯಾವ ರೀತಿ ಗೌರವ ಸಿಗುತ್ತದೆ ಎಂದು. ಆ ಕಾರಣದಿಂದಲೇ ನನ್ನ ಒಬ್ಬ ಮಗನನ್ನಾದರೂ ಜಿಲ್ಲಾಧಿಕಾರಿ ಮಾಡಬೇಕೆಂಬ ಕನಸು ನನ್ನದು. ನನ್ನಂತಹ ಎಷ್ಟೋ ಬಡ ಕುಟುಂಬದವರ ಪಾಲಿಗೆ ನನ್ನ ಮಗ ನೆರಳಾಗಬೇಕು ಎನ್ನುವುದು ನನ್ನ ಆಸೆ. ಆತನನ್ನು ಓದಿಸುತ್ತಿದ್ದೇನೆ, ಮುಂದೆನಾಗುತ್ತದೋ ನೋಡೊಣ ಸಾರ್ ಎಂದು ಮಾತು ಮುಗಿಸಿದ. ತನ್ನ ಟಾಂಗದಲ್ಲೇ ಬಿಜಾಪುರ ನಗರದಲ್ಲಿನ ಬಿಜಾಪುರ ಕೋಟೆ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಜಮ್ಮಾ ಮಸೀದಿ, ಆಲಿ ಬುರ್ಜ್ ಸೇರಿದಂತೆ ಮತ್ತಿತರರ ಸ್ಥಳಗಳನ್ನು ತೋರಿಸಿದ. ಕಷ್ಟವಿದ್ದರು ಆ ಬಗ್ಗೆ ಚಿಂತಿಸದೆ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಆತನ ಚಿತ್ತವಿದ್ದದ್ದು ಮಾತ್ರ ಗಮನಾರ್ಹ. 
ಕಳೆದ ಹಲವಾರು ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಬಸ್ಗಳಲ್ಲಿ ಓಡಾಡುತ್ತಿದ್ದೇನೆ. ಕೆಲ ದಿನಗಳ ಹಿಂದೆ ಒಂದು ಘಟನೆ ನಡೆಯಿತು. ಬೆಂಗಳೂರಿನಿಂದ ಆಂಧ್ರಪ್ರದೇಶದ ಪುಟ್ಟಪರ್ತಿ ಹಾಗೂ ಅನಂತಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೋಗಿದ್ದೆ. ಕಂಡೆಕ್ಟರ್ ಪ್ರಯಾಣಿಕರಿಗೆಲ್ಲಾ ಟಿಕೆಟ್ ಕೊಟ್ಟು ಸಾಕಾಯಿತು ಎಂದು ತಮ್ಮ ಸೀಟ್ ನಲ್ಲಿ ಬಂದು ಕೂತರು. 
ಏನ್ ಸಾರ್ ಸಾಕಾಯಿತೇ ಎಂದೆ, ಅದಕ್ಕೆ ಅವರು ಬಿಡಿ ಸಾರ್ ನಮ್ಮ ಕಂಡೆಕ್ಟರ್ ಮತ್ತು ಡ್ರೈವರ್ ಗಳ ಕಥೆ ಹೇಳುವುದೇ ಬೇಡ. ಬರುವ ಕಡಿಮೆ ಸಂಬಳದಲ್ಲಿ ಜೀವನ ಮಾಡಬೇಕಾದ ಅನಿವಾರ್ಯತೆ ನಮ್ಮದು. ಹಲವು ಬಾರಿ ನಮ್ಮ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮಾಡಿದರೂ ಕನಿಷ್ಟ ವೇತನ ನಿಗದಿಪಡಿಸಿಲ್ಲ. ಬಸ್ ನಲ್ಲಿ ಓಡಾಡಿ ಓಡಾಡಿ ಸಾಕಾಗುತ್ತದೆ. ಕಾಲು ನೋವಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ. ಸರಿಯಾಗಿ ರಜೆಯು  ನೀಡುವುದಿಲ್ಲ. ನಮ್ಮ ಸಾಂದರ್ಭಿಕ ರಜೆಗಳನ್ನು ಪಡೆಯಬೇಕಾದರೂ ಡಿಪೋ ಮ್ಯಾನೇಜರ್ ಗಳ ಕೈ ಕಾಲು ಹಿಡಿಯಬೇಕು. ಅದು ಹೋಗಲಿ 35 ವರ್ಷ ವೃತ್ತಿ ಮಾಡಿದರೂ ನಿವೃತ್ತಿ ನಂತರ ಬರುವ ಪಿಂಚಣಿ ಯಾವುದಕ್ಕೆ ಸಾಕಾಗುತ್ತದೆ. ನಿಜವಾಗಲೂ ಹೇಳುತ್ತೇನೆ ಸಾರ್ ಪ್ರತಿದಿನವೂ ಬಸ್ ನಲ್ಲಿ ಏನೋ ರಾದ್ದಾಂತ ಇದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಚಿಲ್ಲರೆ ಸಮಸ್ಯೆ. ಕೆಲ ಪ್ರಯಾಣಿಕರಂತು ಚಿಲ್ಲರೆ ಕೂಡಲೇ ಕೊಡಬೇಕು ಎನ್ನುತ್ತಾರೆ. ಆದರೆ ಹಣ ಸಂಗ್ರಹವಾಗಿರುವುದಿಲ್ಲ, ಆ ಮೇಲೆ ಕೊಡುತ್ತೇನೆ, ಟಿಕೆಟ್ ಮೇಲೆ ಬರೆದುಕೊಡುತ್ತೇವೆ ಎಂದರು ಕೇಳುವುದಿಲ್ಲ. ಇಲ್ಲ ನೀವು ಹಣ ತೆಗೆದುಕೊಳ್ಳಲು ಈ ರೀತಿ ಚಿಲ್ಲರೆ ಇದ್ದರು ಕೂಡ ಕೊಡುವುದಿಲ್ಲ ಎನ್ನುತ್ತಾರೆ. 
ನಿಜ ಹೇಳುತ್ತಾನೇ ಸಾರ್ ಇಲ್ಲಿಯವರೆಗೂ ನಾನು ಪ್ರಯಾಣಿಕರ ಹಣ ಪಡೆದಿಲ್ಲ. ನಾನೇ ಹೋಗಿ ಯಾರಿಗಾದರೂ ಚಿಲ್ಲರೆ ಕೊಡಬೇಕಾದರೆ ಕೇಳಿ ಕೊಡುತ್ತೇನೆ. ಕೆಲವರು ಟಿಕೆಟ್ ಪಡೆಯದೆ ಪ್ರಯಾಣಿಸಿ ಚೆಕಿಂಗ್ ಅವರ ಕೈಗೆ ಸಿಗುತ್ತಾರೆ. ನಮಗೂ ದಂಡ, ಸಾಲದಕ್ಕೆ ಇನ್ಕ್ರಿಮೆಂಟ್ ಕಟ್. ಎಷ್ಟೇ ಸಾರಿ ಕೂಗಿ ಕೇಳಿದರೂ ಕೆಲವರು ಟಿಕೆಟ್ ಪಡೆಯದೆ ಸಮಸ್ಯೆ ತಂದೊಡ್ಡುತ್ತಾರೆ. ಕೆಲವೊಮ್ಮೆ ಬಸ್ ನಲ್ಲಿ ಇರುವ ಪ್ರಯಾಣಿಕರನ್ನು ಸ್ವಲ್ಪ ಒಳಕ್ಕೆ ಹೋಗಿ ಬೇರೆಯವರು ಹತ್ತಬೇಕು ಎಂದರೆ ನಮ್ಮ ಮೇಲೆ ದಬಾಯಿಸುತ್ತೀಯಾ ಎಂದು ಜೋರು ಮಾಡುತ್ತಾರೆ. ನಿಲ್ದಾಣ ಇಲ್ಲದಿದ್ದರು ಬಸ್ ನಿಲ್ಲಿಸುವಂತೆ ಒತ್ತಾಯಿಸುತ್ತಾರೆ. ನಿಲ್ಲಿಸದೆ ಹೋದರೆ ಜಗಳ. ಕೆಲ ಕಂಡೆಕ್ಟರ್ ಗಳು ಕೆಟ್ಟವರಿರಬಹುದು. ಆದರೆ ಎಲ್ಲರನ್ನೂ ದೂಷಿಸಲು ಸಾಧ್ಯವಿಲ್ಲ. 
8 ವರ್ಷಗಳ ನನ್ನ ಸರ್ವೀಸ್ ಲೈಪ್ ಸಾಕಾಗಿ ಹೋಗಿದೆ ಸಾರ್. ಒಂದು ದಿನ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್ ಸಂಚಾರ ನಿಲ್ಲಿಸಿದರೆ ಸಮಾಜದಲ್ಲಿ ಏನಾಗುತ್ತದೆ, ಜನಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತದೆ ಎಂದು ಹೇಳಬೇಕಾಗಿಲ್ಲ. ಆದರೂ ಸರಕಾರಗಳು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯನ್ನು ಮನುಷ್ಯರಂತೆ ಕಾಣುವುದಿಲ್ಲ. ಸಮಾಜದಲ್ಲೂ ನಮ್ಮನ್ನು ಬೇಕಾಬಿಟ್ಟಿಯಾಗಿ ಕಾಣುತ್ತಾರೆ. ನಮ್ಮ ಸೇವೆ ಬಗ್ಗೆ ಯಾರಿಗೂ ಬೆಲೆ ಇಲ್ಲ. ಕಳೆದ 8 ವರ್ಷಗಳಿಂದ ನಿಗದಿತ ಸಮಯಕ್ಕೆ ಎಷ್ಟೋ ಜನ ಪ್ರಯಾಣಿಕರನ್ನು ಅವರ ಕಚೇರಿ, ಮನೆ, ಶಾಲಾ, ಕಾಲೇಜು ತಲುಪಿಸಿದ್ದೇವೆ. ಆದರೆ ಇಲ್ಲಿಯವರೆಗೂ ಒಬ್ಬರೇ ಒಬ್ಬರು ನಮಗೆ ಥ್ಯಾಂಕ್ಸ್ ಹೇಳಿಲ್ಲ. ನಮಗೆ ಪ್ರಯಾಣಿಕರಿಂದ ಬೇಕಿರುವುದು ಒಂದು ಥ್ಯಾಂಕ್ಸ್, ಅವರಿಂದ ಗೌರವ ಅಷ್ಟೇ. 
ನಾನು ಕೂಡ ಸ್ನಾತ ಕೋತ್ತರ ಪದವೀಧರ. 
ಆದರೆ ಕುಟುಂಬ ದ ಆರ್ಥಿಕ ಪರಿಸ್ಥಿತಿಯಿಂದ ಕಂಡೆಕ್ಟರ್ ಹುದ್ದೆ ಸಿಕ್ಕಿತೆಂದು ಸೇರಿದೆ. ನಿಜ ಹೇಳಬೇಕೆಂದರೆ ನಾನು ಪಿ.ಎಸ್.ಐ ಆಗಬೇಕೆಂದು ಕನಸು ಕಂಡವನು. ಎಷ್ಟೋ ಬಾರಿ ಈ ವೃತ್ತಿ ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇದ್ದು ಬಿಡೋಣ ಎಂದರೆ ಊರಿನಲ್ಲಿ ಜಮೀನು ಕೂಡ ಇಲ್ಲ. ನನ್ನ ಕಟುಂಬಕ್ಕೆ ನಾನೇ ಆಧಾರ. ಮದುವೆಯಾಗಿ 3 ವರ್ಷವಾಗಿದೆ. ಈಗ ಕೆಲಸ ಬಿಡುತ್ತೇನೆ ಎಂದರೆ ಪತ್ನಿ ಒಪ್ಪುವುದಿಲ್ಲ. 
ಆದರೂ ಜೀವನದಲ್ಲಿ ಭರವಸೆಯಂತು ಕಳೆದುಕೊಂಡಿಲ್ಲ. ಏನೇ ಕಷ್ಟವಾದರೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಬೇಕು ಎಂಬ ನನ್ನ ಬಾಲ್ಯದ ಕನಸು ಈಗಲೂ ಕಾಡುತ್ತದೆ. ಇರಲಿ ಎಷ್ಟೇ ಕಷ್ಟಗಳು ಬರಲಿ, ಪಿ.ಎಸ್.ಐ ಆಗಬೇಕೆಂಬ ಆಸೆಗೆ ಅವು ಅಡ್ಡಿಬರಲಾರವು. ಅಷ್ಟಕ್ಕೂ ಪಿ.ಎಸ್.ಐ ಆಗಬೇಕು ಎನ್ನುವುದು ನನ್ನ ಕನಸಲ್ಲ, ಅದು ನನ್ನ ಪ್ರಾಣ ಎಂದರು. ಅವರಲ್ಲಿದ್ದ ಸಾಧಿಸುವ ಛಲ ಇಂದಲ್ಲಾ ನಾಳೆ ಎಸ್.ಐ ಆಗುವ ಲಕ್ಷಣವಿತ್ತು. ಅಷ್ಟರಲ್ಲಾಗಲೇ ಅನಂತಪುರ ಬಸ್ ನಿಲ್ದಾಣ ಬಂತು.  
ಒಬ್ಬರು ಹೇಳುತ್ತಾರೆ ಸಾರ್ ನಾನು 2 ವರ್ಷದ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಅಲ್ಲಿಂದಲೂ ಇಲ್ಲಿಯವರೆಗೂ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದೇನೆ. ವಿಧಿಯು ನನ್ನ ಜೀವನದಲ್ಲಿ ಚೆನ್ನಾಗಿ ಆಡಿದೆ ಎಂದು ಹೇಳಿದರು. ಮತ್ತೊಬ್ಬ ಮಹಿಳೆ ಹೇಳುತ್ತಾರೆ ನನ್ನ ಗಂಡ ವಿಪರಿತ ಕುಡುಕ, ಇಬ್ಬರು ಹೆಣ್ಣು ಮಕ್ಕಳು ಬೇರೆ ಇದ್ದಾರೆ. ನಾನು ಕೂಲಿ ಮಾಡಿ ಕುಟುಂಬ ಸಾಕಬೇಕು. ಮತ್ತೊಬ್ಬರು ಹೇಳುತ್ತಾರೆ ನಮ್ಮ ಅಣ್ಣ ಹಣದ ಆಸೆಗೆ ಬಿದ್ದು ಕುಡುಕನಿಗೆ ಅದರಲ್ಲೂ ಅದಾಗಲೇ ಎರಡು ಮದುವೆ ಆದವನಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ಮದುವೆ ಆದ ಕೆಲವೇ ತಿಂಗಳುಗಳಿಗೆ ಆತ ನನ್ನನ್ನು ಬಿಟ್ಟು ಹೋದ. ಒಬ್ಬ ಮಗನೊಂದಿಗೆ ಜೀವನ ಸಾಗಿಸುತ್ತಿದ್ದೇನೆ.
ಈಗೆ ಹಲವರು ತಮ್ಮದೇ ಆದ ನೋವುಗಳನ್ನು ಹೇಳಿಕೊಂಡ ಸಂದರ್ಭಗಳನ್ನು ನೋಡಿದ್ದೇನೆ. ಆದರು ಇವರ್ಯಾರು ಬದುಕಿನ ಮೇಲಿನ ಭರವಸೆ ಕಳೆದುಕೊಂಡವರಲ್ಲ. ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಕಂಡ ಕನಸನ್ನು ನನಸಾಗಿಸಲು ಹೋರಾಟ ಮಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ವಿನಯದಿಂದ ಸ್ವಾಗತಿಸಿ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ.  
ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಒಮ್ಮೆ ಹೀಗೆ ಹೇಳಿದ್ದರು, ನಾವು ನಡೆಯುತ್ತಿರುವ ದಾರಿಯಲ್ಲಿ ಕಷ್ಟಗಳು ಬಂದಿಲ್ಲ, ಎಂದರೆ ನಾವು ಸಾಗುತ್ತಿರುವ ದಾರಿ ಸರಿ ಇಲ್ಲವೆಂದೇ ಅರ್ಥ. ನಮಗೆ ಕಷ್ಟಗಳು ಬರುತ್ತಿವೆ ಎಂದರೆ ಅದರರ್ಥ ನೀವು ಯಾವುದೋ ಒಂದು ಸಾಧನೆ ಮಾಡಲು ಹೊರಟಿದ್ದೀರಾ ಎಂಬುವುದು ನಿಜ ಎಂದು ಬಹಳ ಅದ್ಬುತವಾಗಿ ಹೇಳಿದ್ದರು.
ಕನಸು ಕಾಣಿ, ಕನಸು ಕಾಣುವಲ್ಲೂ ಹಿಂಜರಿಕೆ ಬೇಡ. ಏಕೆಂದರೆ ಕನಸು ಕಾಣುವುದಕ್ಕೆ ಯಾವುದೇ ಸರಕಾರಗಳು ನೇರ ಅಥವಾ ಪರೋಕ್ಷ ತೆರಿಗೆಗಳು ಹಾಕುವುದಿಲ್ಲ. ನಮ್ಮ ಕನಸುಗಳು ಯಾವಾಗಲೂ ಉನ್ನತವಾಗಿರಲಿ. ಆದರೆ ಕನಸುಗಳನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯ, ಶಕ್ತಿ ನಾವೇ ಸಂಪಾದಿಸಿಕೊಳ್ಳಬೇಕು. 
ಒಂದಂತು ನಿಜ ನಮ್ಮ ಜೀವನದ ಕಷ್ಟಗಳು ಎಂದಿಗೂ ನಮ್ಮ ಕನಸಿಗೆ ಅಡ್ಡಿ ಬರಬಾರದು. ಕಷ್ಟಗಳನ್ನು ಮೀರಿ ಬದುಕು ಕಟ್ಟಿಕೊಂಡು ಕನಸುಗಳನ್ನು ನನಸಾಗಿಕೊಳ್ಳುವ ಧ್ಯೇಯ ನಮ್ಮದಾಗಿರಬೇಕು. ಕೇವಲ ಕನಸು ಕಾಣುತ್ತ ಸಾಗಿದರೆ ಏನು ಪ್ರಯೋಜನ, ಅದರ ಈಡೇರಿಕೆಗೆ ಅಪಾರ ಶ್ರಮ ಅಗತ್ಯ.
ಅಷ್ಟಕ್ಕೂ ನಿಮ್ಮ ಕನಸುಗಳು ಏನಂತಿರಾ.. ಅವುಗಳ ಬೆನ್ನತ್ತಿ ಹೊರಡಿ..    

ಭಾನುವಾರ, ಮೇ 26, 2019

ಜಗತ್ತನ್ನೇ ಗೆಲ್ಲುವ ಅಸ್ತ್ರ "ನಗು"..


 ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
 
ಮೊನ್ನೆ ಖಾಸಗಿ ಬಸ್ ನಲ್ಲಿ ಬೆಂಗಳೂರಿನಿಂದ ಆಂಧ್ರದ ಮದನಪಲ್ಲಿಗೆ ಹೋಗುತ್ತಿದ್ದೆ. ಹೆಚ್ಚು ಕಡಿಮೆ 3 ಗಂಟೆ ಪಯಣ. ಬಸ್ ನಲ್ಲಿ ಟಿ.ವಿವೊಂದಿತ್ತು, ಆದರೆ ಸ್ವಿಚ್ ಆನ್ ಮಾಡಿರಲಿಲ್ಲ. ಬಸ್ ನಲ್ಲಿದ್ದ ಒಬ್ಬ ವ್ಯಕ್ತಿ ಟಿ.ವಿ ಆನ್ ಮಾಡಿ ಚಿತ್ರ ಯಾವುದಾದರೂ ಹಾಕಿ ಬ್ರದರ್ ಎಂದು ಕಂಡೆಕ್ಟರ್ ಗೆ ಹೇಳಿದ. ಕಂಡೆಕ್ಟರ್ ಆತನ ಬಳಿಯಿದ್ದ ಚಲನಚಿತ್ರಗಳ ಸಿ.ಡಿಗಳನ್ನು ತಡಕಾಡಿ ಕೊನೆಗೆ ತೆಲುಗಿನ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ಹಾಕಿದ. 
ನನಗೂ ಬೇಸರವಾಗುತ್ತಿದ್ದರಿಂದ ಚಿತ್ರ ನೋಡುವತ್ತ ಮನಸ್ಸು ಮಾಡಿದೆ. 2013ರಲ್ಲಿ ಬಿಡುಗಡೆಯಾದ ಚಿತ್ರವಿದು. ಶ್ರೀಕಾಂತ್ ಅಡ್ಡಾಲ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖವಾಗಿ ವಿಕ್ಟರಿ ವೆಂಕಟೇಶ್, ಪ್ರಿನ್ಸ್ ಮಹೇಶ್ ಬಾಬು, ಸಮಂತಾ, ಅಂಜಲಿ, ಪ್ರಕಾಶ್ ರೈ ಸೇರಿದಂತೆ ಮತ್ತಿತರರು ನಟಿಸಿದ್ದಾರೆ. ಚಿತ್ರದ ಮುಖ್ಯ ಕಥಾ ಹಂದರವೆಂದರೆ ನಿಮ್ಮ ಎದುರಿಗೆ ಯಾರೇ ಬಂದರೂ ನಗುತ್ತ ಮಾತನಾಡಿಸಿ, ಅವರ ಕುಶಲೋಪರಿ ವಿಚಾರಿಸಿ. ಇದರಿಂದ ನಾವು ಕಳೆದು ಕೊಳ್ಳುವುದಾದರೂ ಏನು ಇಲ್ಲ. ಈ ಭೂಮಿ ಮೇಲೆ ಯಾರು ಶಾಶ್ವತ ಇಲ್ಲ, ಅಂತಹವುದರಲ್ಲಿ ಈ ಅಸೂಹೆ, ಹೊಟ್ಟೆಕಿಚ್ಚು ಪಡುವುದಾದರೂ ಏತಕ್ಕೆ. ಕೊನೆಗೆ ಉಳಿಯುವುದು ಪ್ರೀತಿ ಮಾತ್ರ. 
ಜೀವಮಾನವಿಡಿ ನಮಗೆ ಅನೇಕ ಸಂದರ್ಭಗಳಲ್ಲಿ ಎದುರಾಗುವ ವ್ಯಕ್ತಿಗಳನ್ನು ಗೌರವಿಸೋಣ, ಪ್ರೀತಿಸೋಣ ಅದು ಕೂಡ ಮುಗುಳ್ನೆಗೆಯಿಂದ ಎಂದು ಈ ಚಿತ್ರವು ನಗು ಹಾಗೂ ನಿಷ್ಕಲ್ಮಷ ಪ್ರೀತಿಯ ಬಗ್ಗೆ ತಿಳಿಸುತ್ತದೆ. 
ಬಸ್ ನಲ್ಲಿ ಸೀತಮ್ಮ ವಾಕಿಟ್ಲೋ, ಸಿರಿಮಲ್ಲೇ ಚೆಟ್ಟು ಚಿತ್ರ ವೀಕ್ಷಿಸುತ್ತ ಹೋಗುತ್ತಿದ್ದಾಗ ಘಟನೆಯೊಂದು ನೆನಪಾಯಿತು. ಆಂಧ್ರಪ್ರದೇಶದ ತಿರುಪತಿ ಬಳಿಯ ವಿಶ್ವವಿದ್ಯಾಲಯೊಂದಕ್ಕೆ ಅಧ್ಯಯನದ ದೃಷ್ಟಿಯಿಂದ ಹೋಗಿದ್ದೆ. ಅಲ್ಲಿ ಯುವಶಕ್ತಿಗೆ ಮಾರ್ಗದರ್ಶನ ಎಂಬ ವಿಷಯದ ಬಗ್ಗೆ ವಿಚಾರಸಂಕಿರಣವೊಂದು ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ  ಜಗತ್ತನ್ನು ಗೆಲ್ಲಬೇಕು ಎನ್ನುವುದು ನನ್ನ ಮುಖ್ಯ ಧ್ಯೇಯ. ಅದಕ್ಕಾಗಿ ನಾನೇನು ಮಾಡಬೇಕು ಎಂದು ಕಷ್ಟಕರವಾದ ಹಾಗೂ ಕ್ಲಿಷ್ಟ ಪ್ರಶ್ನೆ ಹಾಕಿದ. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಜಗತ್ತನ್ನು ಗೆಲ್ಲಬೇಕು ಎಂದು ನಿನ್ನ ಧ್ಯೇಯವಾದರೆ ಮೊದಲು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು, ಸಾಮರ್ಥ್ಯವನ್ನು ಬೆಳಸಿಕೊಂಡು ಹಗಲಿರುಳು ಶ್ರಮಿಸು ಪ್ರಪಂಚವನ್ನು ಗೆಲ್ಲುತ್ತಿಯಾ ಎಂದರು. 
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮಾತನಾಡಿ, ಜಗತ್ತನ್ನು ಗೆಲ್ಲಬೇಕಾದರೆ ಮೊದಲು ಇತಿಹಾಸ ತಿಳಿದುಕೊಳ್ಳಬೇಕು. ಸಾಮ್ರಾಜ್ಯಗಳಿದ್ದ ಕಾಲದಲ್ಲಿ ರಾಜರು ಆಳ್ವಿಕೆ ನಡೆಸುತ್ತಿದ್ದರು. ಆಗ ರಾಜರು ಹೊಂದಿದ್ದ ವ್ಯಕ್ತಿತ್ವ, ಧೈರ್ಯ ಬೆಳೆಸಿಕೊಂಡು ಪ್ರಯತ್ನಿಸು, ಜಗತ್ತನ್ನು ಗೆಲ್ಲದಿದ್ದರು ಒಂದಷ್ಟು ಸಾಧನೆ ಮಾಡಬಹುದು ಎಂದು ಉತ್ತರಕೊಟ್ಟರು. 
ಅದೇ ವಿಚಾರ ಸಂಕಿರಣದಲ್ಲಿದ್ದ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯು, ಆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ನನ್ನ ಗಮನ ಸೆಳೆಯಿತು. ಅವರು ಹೇಳಿದ ಉತ್ತರ ಹೀಗಿತ್ತು. ಜಗತ್ತನ್ನು ಗೆಲ್ಲಬೇಕು ಎಂದು ನೀನು ಧ್ಯೇಯ ಹೊಂದಿರುವುದೇ ಅಚ್ಚರಿ. ಸಾಮಾನ್ಯವಾಗಿ ನಿನ್ನಂತಹ ಯುವಕರು ಅಂದುಕೊಳ್ಳುವುದು ಶಿಕ್ಷಣ ಪೂರ್ಣಗೊಳಿಸಿ, ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಕೈ ತುಂಬ ಸಂಪಾದನೆ ಮಾಡಬೇಕು. ಆ ನಂತರ ಒಳ್ಳೆಯ ಹುಡುಗಿಯನ್ನು ಮದುವೆಯಾಗ ಬೇಕು ಎಂದು, ಆದರೆ ನೀನು ಮಾತ್ರ ಅದಕ್ಕೆ ತದ್ವಿರುದ್ದವಾಗಿ ಧ್ಯೇಯ ಇಟ್ಟುಕೊಂಡಿದ್ದಿಯಾ, ಸಾಲದಕ್ಕೆ ನಮಗೆ ಕಠಿಣ ಪ್ರಶ್ನೆ ಬೇರೆ ಹಾಕಿದ್ದೀಯಾ, ಆದರೂ ಪರವಾಗಿಲ್ಲ, ನಿನ್ನ ಪ್ರಶ್ನೆಗೆ ನನ್ನ ಬಳಿ ಹತ್ತಿರ ಉತ್ತರವಿದೆ. 
ಇದನ್ನು ಪ್ರಶ್ನೆ ಹಾಕಿದ ಇತನೊಬ್ಬನೆ ಅಲ್ಲ ಈ ಸಭಾಂಗಣದಲ್ಲಿನ ಎಲ್ಲರೂ ಈ ಉತ್ತರ ಕೇಳಲೇಬೇಕು ಎಂದರು. ಎಲ್ಲರಿಗೂ ಕುತೂಹಲವಾಯಿತು ಯಾಕೆಂದರೆ ಜಗತ್ತನ್ನು ಗೆಲ್ಲುವುದಕ್ಕೆ ಇವರ ಬಳಿ ಉತ್ತರವಿದೆ ಎಂದರೆ ಸಹಜವಾಗಿಯೇ ಎಲ್ಲರಿಗೂ ಅಚ್ಚರಿ. ಎಲ್ಲರೂ ಕೆಲ ಕಾಲ ಅವರ ಭಾಷಣ ಕೇಳಲು ಕಿವಿಕೊಟ್ಟರು.
ಜಗತ್ತನ್ನು ಗೆಲ್ಲಬೇಕಾದರೆ ನೀವು ಆಥರ್ಿಕವಾಗಿ ಸದೃಢರಾಗಬೇಕಾದ ಅಗತ್ಯವಿಲ್ಲ. ಗ್ರಂಥಾಲಯಕ್ಕೆ ಹೋಗಿ ಇತಿಹಾಸದ ಪುಟಗಳನ್ನೆಲ್ಲಾ ತಿರುವಿ ಹಾಕುವ ಅಗತ್ಯವಿಲ್ಲ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಯುದ್ದ ಮಾಡಬೇಕಿಲ್ಲ. ರಾಜಕೀಯಕ್ಕೆ ಎಂಟ್ರೀ ಕೊಟ್ಟು ಚುನಾವಣೆಗೆ ಸ್ಪರ್ಧಿಸುವ  ಅಗತ್ಯವಂತೂ ಇಲ್ಲವೇ ಇಲ್ಲ. 
ಜಸ್ಟ್ ನೀವು ಮಾಡಬೇಕಾದದ್ದು ನಿಮ್ಮ ಮುಖದಲ್ಲಿ ಸ್ಮೈಲ್ (ನಗು) ಸದಾ ಕಣ್ಮರೆಯಾಗದಂತೆ ನೋಡಿಕೊಂಡರೆ ಸಾಕು. ನಗುವಿನ ಮಹತ್ವ ಹಾಗೂ ಎಲ್ಲಿ, ಯಾವಾಗ ನಗಬೇಕೆಂಬ ಸಾಮಾನ್ಯ ಪ್ರಜ್ಞೆ ನಿನಗೆ ಗೊತ್ತಿದ್ದರೆ ಈ ಜಗತ್ತನ್ನು ಗೆಲ್ಲಬೇಕೆಂಬ ನಿನ್ನ ಛಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಜಗತ್ತು ಗೆಲ್ಲಬೇಕಾದರೆ ನಗುವಿನ ಲಕ್ಷಣ ಸಾಕು. ಮತ್ಯಾವ ಅಸ್ತ್ರಗಳು ನಿಮಗೆ ಬೇಕಾಗಿಲ್ಲ ಎಂದು ಹೇಳಿದರು. 
ಈ ಉತ್ತರ ಕೇಳಿದ ಎಲ್ಲರಿಗೂ ಶಾಕ್, ಅರೇ ಈ ವ್ಯಕ್ತಿ ಜಗತ್ತನ್ನು ಗೆಲ್ಲಬೇಕಾದರೆ ಧೀರ್ಘವಾದ ಉತ್ತರ ಹಾಗೂ ದೊಡ್ಡದಾದ ಉದಾಹರಣೆಗಳು ನೀಡುತ್ತಾರೆ ಎಂದು ಸಭಿಕರು ಭಾವಿಸಿದ್ದರು. ಆದರೆ ಅವರು ಹೇಳಿದ್ದು ಮಾತ್ರ ಎರಡಕ್ಷರದ ನಗು. ಅವರು ಮಾತು ಮುಂದುವರೆಸುತ್ತ ಹೇಳಿದರು, ನೀವು ನಂಬಿ ಅಥವಾ ಬಿಡಿ ಜಗತ್ತನ್ನು ಗೆಲ್ಲಬೇಕಾದರೆ ನಗುವಿನಿಂದ ಮಾತ್ರ ಸಾಧ್ಯ. ಸಾವಿರಾರು ಕೋಟಿಗಳು ಇರುವವರು ಕೂಡ ಜಗತ್ತನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಆದರೆ ನಗುವಿನ ಮಹತ್ವ ತಿಳಿದವರು ಜಗತ್ತನ್ನು ಗೆದ್ದು ಸಾಧಿಸಿ ತೋರುತ್ತಾರೆ ಎಂದು ಸ್ಪಷ್ಟವಾಗಿ ಪುನುರುಚ್ಚರಿಸಿದರು.
ಯಾವುದೇ ಸಂದರ್ಭ ಬಂದರೂ ಕೋಪ ಮಾಡಿಕೊಳ್ಳಬೇಡಿ. ಸುಮ್ಮನೆ ಇತರರ ಮೇಲೆ ಸಿಟ್ಟು ಮಾಡಿಕೊಳ್ಳಬೇಡಿ. ಅದು ಮನೆ, ಕಚೇರಿ ಅಥವಾ ಇನ್ಯಾವುದೇ ಸ್ಥಳವಾದರೂ ನಿಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ನಿಮ್ಮ ಜೀವಮಾನವಿಡಿ ನಿಮಗೆ ಯಾರೇ ಎದುರಾಗಲಿ, ಯಾರೇ ನಿಮ್ಮನ್ನು ಮಾತನಾಡಿಸಲಿ ಅವರೊಂದಿಗೆ ಮಾತನಾಡುವಾಗ ನಗುವಿನ ಮುಖವಿಟ್ಟುಕೊಂಡು ಸಂಭಾಷಣೆ ನಡೆಸಿ, ಮುಖದಲ್ಲಿ ತೇಜಸ್ಸು, ಹುಮ್ಮಸ್ಸು ಕಳೆದುಕೊಳ್ಳಬೇಡಿ. 
ಇದರಿಂದ ನಿಮಗೆ ಆಗುವ ಲಾಭವೇನು ಗೊತ್ತೆ.. ನಿಮ್ಮ ಜೀವನದಲ್ಲಿ ಭೇಟಿಯಾದ ಸಾವಿರಾರು ಜನರ ಪೈಕಿ ಶೇ.95% ಜನ ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮನ್ನು ಗೌರವಿಸುತ್ತಾರೆ, ನಿಮ್ಮ ಜೊತೆ ಮಾತನಾಡಲು ಮುಂದಾಗುತ್ತಾರೆ. ಇದಕ್ಕೆಲ್ಲ ನೀವು ಮಾಡಬೇಕಾದದ್ದು ನಗು ಸದಾ ಇರುವಂತೆ ನೋಡಿಕೊಳ್ಳುವುದು ಅಷ್ಟೇ. ಜನರನ್ನು ನಿಮ್ಮತ್ತ ಸೆಳೆಯುವುದು, ಅವರು ನಿಮ್ಮನ್ನು ಗೌರವಿಸುವುದು, ಪ್ರೀತಿಸುವಂತೆ ಮಾಡುವಂತೆ ನಿಮ್ಮ ಮುಖದ ನಗು ಮಾಡುತ್ತದೆ. ಸಾವಿರಾರು ಜನರ ಗೌರವ, ಪ್ರೀತಿಗೆ ಪಾತ್ರರಾಗುತ್ತಿರಾ ಎಂದರೆ ಜಗತ್ತು ಗೆದ್ದಂಗೆ ತಾನೇ ಎಂದು ಅವರ ಹೇಳಿದ ಉತ್ತರ ಕೇಳಿದ ನಂತರ ಎಲ್ಲರೂ ಆತ್ಮವಲೋಕ ಮಾಡಿಕೊಳ್ಳುವಂತೆ ಮಾಡಿತು.
ಕೆಲ ದಿನಗಳ ಹಿಂದೆ ಕೆಲಸ ನಿಮಿತ್ತ ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್ ತಾಲೂಕಿನ ಗ್ರಾಮವೊಂದಕ್ಕೆ ಹೋಗಿದ್ದೆ. ಅಚಾನಕ್ ಆಗಿ ನಮ್ಮ ತರಬೇತಿ ಸಂಸ್ಥೆಯ ಹಳೆಯ ಶಿಬಿರಾರ್ಥಿಯೊಬ್ಬರು ಸಿಕ್ಕರು. ಆ ಗ್ರಾಮ ಅವರದೆಂದು ನನಗೆ ಗೊತ್ತಿರಲಿಲ್ಲ. ತರಬೇತಿ ಸಂಸ್ಥೆಗೆ ಬಂದು ಅವರು ಕೆಲ ವರ್ಷಗಳು ಆಗಿದ್ದರಿಂದ ಅವರನ್ನು ನೆನಪು ಹಿಡಿಯುವುದು ಕಷ್ಟವಾಯಿತು. ಆದರೂ ಅವರೇ ತಮ್ಮ ಪರಿಚಯ ಮಾಡಿಕೊಂಡು, ಸಾರ್ ಇದು ನಮ್ಮೂರು, ಇಲ್ಲಿಗೇಕೆ ಬಂದಿದ್ದೀರಾ. ಮನೆಗೆ ಬನ್ನಿ ಸಾರ್ ಎಂದು ಕರೆದರು. ಅವರ ಆತ್ಮೀಯ ಕರೆಗೆ ಓಗೊಟ್ಟು ಮನೆಗೆ ಹೋದೆ. ಜ್ಯೂಸ್ ಮಾಡಿಕೊಟ್ಟರು. ನಂತರ ಹಾಗೆಯೇ ಮಾತನಾಡುತ್ತಿದ್ದಾಗ ಎಷ್ಟು ಜನ ಮಕ್ಕಳಮ್ಮ ನಿಮಗೆ, ಏನೇನು ಓದುತ್ತಿದ್ದಾರೆ ಎಂದೇ ಅದಕ್ಕೆ ಆಕೆ ಉತ್ತರಿಸುತ್ತ ಸಾರ್ ನನಗೆ ಇಬ್ಬರು ಗಂಡು ಮಕ್ಕಳು ಒಬ್ಬ 4ನೇ ತರಗತಿ ಮತ್ತೊಬ್ಬ 2ನೇ ತರಗತಿ ಎಂದು ಉತ್ತರಿಸಿದರು. 
ಅದೇ ಸಂದರ್ಭದಲ್ಲಿ ಆಕೆ ನನಗೊಂದು ಪಶ್ನೆ ಹಾಕಿದರು ಸಾರ್ ನಿಮಗೆ ಎಷ್ಟು ಜನ ಮಕ್ಕಳು ಎಂದು.. ಈ ಪ್ರಶ್ನೆ ನಾನು ಖಂಡಿತಾ ನಿರೀಕ್ಷಿಸರಿರಲಿಲ್ಲ, ಇಲ್ಲಮ್ಮ ನಾನು ಇನ್ನು ಮದುವೆಯಾಗಿಲ್ಲಮ್ಮ ಎಂದೇ. ಯಾಕೆ ಸಾರ್ ಎಂದಳು, ಇನ್ನು ಎರಡು ವರ್ಷಗಳು ಹೋಗಲಿ ತಾಯಿ, ಇರುವ ಕಷ್ಟಗಳು ಬಗೆಹರಿದರೆ ಮುಂದೆ ನೋಡೊಣ ಎಂದೇ, ಅದಕ್ಕೆ ಆಕೆ ಸಾರ್ ನಿಮಗೆ ಕಷ್ಟಗಳು ಇದೆಯೇ ಎಂದಳು. ಹೌದಮ್ಮ ಅದೇನು ಆಗೆ ಕೇಳುತ್ತಿರಾ, ಕಷ್ಟಗಳು ಇಲ್ಲದ ವ್ಯಕ್ತಿ ಯಾರು ಇದ್ದಾರೇ ಹೇಳಿ. ಅಲ್ಲಾ ಸಾರ್ ನಿಮ್ಮನ್ನು ನೋಡಿದರೆ ಹಾಗೆ ಕಾಣಿಸಲ್ಲ. ನೀವು ಸದಾ ನಗುತ್ತಿರುತ್ತೀರಾ, ನಿಮ್ಮ ನಗು ನೋಡಿದರೆ ಹೇಳಬಹುದು ನಿಮಗೆ ಕಷ್ಟಗಳು ಇಲ್ಲ ಎಂದರು. ನಗುವವರಿಗೆ ಕಷ್ಟಗಳು ಇಲ್ಲ ಎಂದು ಹೇಳಿದವರು ಯಾರಮ್ಮ ಎಂದು ಹೇಳಿ ಕೆಲಸದ ನಿಮಿತ್ತ ಅಲ್ಲಿಂದ ಹೊರಟೆ. 
ನನ್ನ ಕೆಲ ಸ್ನೇಹಿತರು ಆಗಾಗ ಕೇಳುತ್ತಾರೆ. ನೀನು ಸದಾ ನಗುತ್ತಲೇ ಇರುತ್ತಿಯಾ ಅದ್ಯಾವ ರೀತಿ.. ಅಷ್ಟೊಂದು ಆಸ್ತಿ, ಹಣ ನಿನ್ನ ಬಳಿ ಇದೆಯೇ, ಇಲ್ಲದಿದ್ದರೆ ನಗಲು ಮನಸ್ಸು ಎಲ್ಲಿತಾನೇ ಬರುತ್ತದೆ. ನಿಜ ಬಹುಪಾಲು ಜನ ಅಂದುಕೊಳ್ಳುವುದು ಯಾರಾದರೂ ಸದಾ ಹಸನ್ಮುಕಿಯಾಗಿ ನಗುತ್ತಿದ್ದರೆ ಅವರ ಬಳಿ ಬಹಳ ಆಸ್ತಿ, ಹಣ, ಜಮೀನು ಇದೆ. ಹಾಗೆಯೇ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ಭಾವಿಸಿರುತ್ತಾರೆ. ಆದರೆ ಬೇರೆಯವರಿಗೆ ಹೋಲಿಕೆ ಮಾಡಿಕೊಂಡರೆ ಸದಾ ನಗುತ್ತ ಮಾತನಾಡುವವರಿಗೆ ಹೆಚ್ಚು ಸಮಸ್ಯೆಗಳಿರುತ್ತದೆ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. 
ನಮ್ಮ ಎದುರಿಗೆ ಬಂದು ಮಾತನಾಡುವ ವ್ಯಕ್ತಿಗೆ ನಮ್ಮ ಸಮಸ್ಯೆಗಳ ಬಗ್ಗೆ ಆತನಿಗೆ ಅಗತ್ಯವಿಲ್ಲ. ಆತನಿಗೆ ಬೇಕಾಗಿರುವುದದು ಖುಷಿಯಿಂದ ನಾವು ಮಾತನಾಡಿಸುತ್ತವೆಯೇ ಇಲ್ಲವೇ ಎಂಬುವುದು ಅಷ್ಟೇ. ಸಮಸ್ಯೆಗಳು ಇದೇ ಎಂದು ಆಲೋಚಿಸುತ್ತ ಇರುವ ಸಮಯವನ್ನು ನೋವಿನಿಂದ ಕಳೆಯುವ ಬದಲು ಅದೆಲ್ಲವನ್ನು ಮರೆತು ನಗುತ್ತ ಖುಷಿಯಿಂದ ಜೀವನ ಸಾಗಿಸುವುದು ಒಳಿತು. 
ಒಬ್ಬ ಶಿಬಿರಾರ್ಥಿ ಸಾರ್ ನೀವು ಒಳ್ಳೆಯವರೋ, ಕೆಟ್ಟೊವರೋ ನನಗೆ ಗೊತ್ತಿಲ್ಲ. ಆದರೆ ಒಂದಂತು ಸತ್ಯ ನೀವು ಸದಾ ಕಾಲ ನಗುತ್ತಲೇ ಮಾತನಾಡುತ್ತಿರಾ, ಅದು ನನಗೆ ಇಷ್ಟವಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದ.
ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ಇದ್ದರು. ಅವರು ತುಂಬ ಬುದ್ದಿವಂತರು. ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿದ್ದವರು. ವಿಷಯದ ಬಗ್ಗೆ ಆಳವಾದ ಜ್ಞಾನವಿತ್ತು. ಆದರೂ ಅವರ ಪಾಠ ಮಾಡುವಾಗ ಬಹುಪಾಲು ವಿದ್ಯಾರ್ಥಿಗಳಿಗೆ ಬೇಸರವಾದರೆ, ಕೆಲವರಿಗಂತೂ ನಿದ್ದೆ ಬರುತ್ತಿತ್ತು. ಅದಕ್ಕೆ ಒಂದೇ ಕಾರಣ ಅವರು ಪಾಠ ಮಾಡುವಾಗ ಅವರ ಮುಖ ಕೋಪದಿಂದ ಕೂಡಿರುತ್ತಿತ್ತು. ಅಪ್ಪಿತಪ್ಪಿಯು ನಗುತ್ತಿರಲಿಲ್ಲ. ಅವರ ಮುಖ ನೋಡಿದರೆ ಬೇಸರ ಆಗುತ್ತಿತ್ತು. ಅವರು ಬುದ್ದಿವಂತರು, ಆದರೆ ನಗು ಎಂಬ ಅಮೂಲ್ಯವಾದ ಅಂಶ ಅಳವಡಿಸಿಕೊಳ್ಳುವುದನ್ನು ಮರೆತು ಬಿಟ್ಟಿದ್ದರು. ಅದರ ಎಫೆಕ್ಟ್ ಅವರ ಕ್ಲಾಸಿನಲ್ಲಿ ಕಾಣುತ್ತಿತ್ತು.  
ನಿಮಗೆ ಗೊತ್ತಿದೆಯೋ ಇಲ್ಲವೋ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುವ ತಾಕತ್ತು ನಗುವಿಗೆ ಇದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿ ನಗುವಿಗೆ ಇದೆ. ಹೆಚ್ಚು ನಗುವವರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುತ್ತಾರೆ.  ಅಷ್ಟೇಕೆ ನಗುತ್ತ ಜೀವನ ಸಾಗಿಸುವವರಿಗೆ ಹೆಚ್ಚು ಜನ ಸ್ನೇಹಿತರಾಗುತ್ತಾರೆ, ಗೌರವಿಸುತ್ತಾರೆ. ನಗುತ್ತ ಜೀವನ ಸಾಗಿಸುವವರು ಒಳ್ಳೆಯ ಹಾದಿಯನ್ನೇ ಹಿಡಿಯುತ್ತಾರೆ. ಬೇರೆಯವರ ಹೃದಯವನ್ನು ಗೆಲ್ಲುವ ತಾಕತ್ತು, ಸಾಮರ್ಥ್ಯ ಇರುವುದು ಏಕೈಕ ನಗುವೆಂಬ ಅಸ್ತ್ರಕ್ಕೆ ಮಾತ್ರ. 
ಇಂದು ಕೆಲ ನಗರಗಳಲ್ಲಿ ಲಾಪಿಂಗ್ ಕ್ಲಬ್ ಗಳು ನಡೆಯುತ್ತವೆ. ಅಲ್ಲಿ ಎಲ್ಲಾ ವಯೋಮಾನದವರು ಬೇಸರ ಮರೆತು ಖುಷಿಯಾಗಿ ನಕ್ಕಿ ಆರೋಗ್ಯ ವೃದ್ದಿಸಿಕೊಳ್ಳುತ್ತಾರೆ. ನಗುವಿನ ಉಪಯೋಗಗಳು ಹತ್ತು ಹಲವು.
ಆದರೆ ಬೇರೆಯವರಿಗೆ ನೋವು ಕೊಡುವ ರೀತಿಯ ನಗು ಅಗತ್ಯವಿಲ್ಲ. ಸಂದರ್ಭ, ಸನ್ನಿವೇಶದಲ್ಲಿ ಅಗತ್ಯವಿಲ್ಲದಿದ್ದರು ಸುಮ್ಮನೆ ನಗುವುದು ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುತ್ತದೆ. ಇಂಗ್ಲೀಷ್ನಲ್ಲಿ ಒಂದು ಮಾತಿದೆ. laughing is the best medicine, but if you're laughing for no reason, you need medicine. ನಗುವು ಜೀವನೋತ್ಸಾಹಕ್ಕೆ ಒಂದು ಒಳ್ಳೆಯ ಔಷಧಿ. ಆದರೆ ಕಾರಣವಿಲ್ಲದೆ ನಕ್ಕರೆ ನಮಗೆ ಔಷಧಿ ಅಗತ್ಯವಿದೆ ಎಂದರ್ಥ. ಅಂದರೆ ನಗು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಅಂದಹಾಗೆ ನಗುವಿಗೂ ಒಂದು ದಿನವಿದೆ ಗೊತ್ತಾ. ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರ ವಿಶ್ವ ನಗುವಿನ ದಿನ (ವರ್ಲ್ಡ್ ಸ್ಮೈಲ್ ಡೇ) ಎಂದು ಆಚರಿಸಲಾಗುತ್ತದೆ. 
ಏನಿವೇ ಇನ್ನಾದ್ರೂ ಬೇಸರ ಬಿಟ್ಟು ಸ್ವಲ್ಪ ನಕ್ಕಿ ಪ್ಲೀಸ್..