ಸೋಮವಾರ, ಡಿಸೆಂಬರ್ 11, 2017

ನಿರುದ್ಯೋಗಿಗಳ ಬಾಳಲ್ಲಿ ಬೆಳಕು ಮೂಡಿಸುವವರಾರು..?

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

2011ರ ಜನಗಣತಿಯಂತೆ ದೇಶದ ಒಟ್ಟು ಜನಸಂಖ್ಯೆ 121 ಕೋಟಿ ಇತ್ತು. ರಾಜ್ಯದ ಜನಸಂಖ್ಯೆ 6.1 ಕೋಟಿ ಎಂದು ಸರಕಾರದ ಅಧಿಕೃತ ದಾಖಲೆಗಳು ಹೇಳುತ್ತವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಯುವ ಸಮೂಹದವರು ಎಂಬುದು ಒಂದು ಬಗೆಯಲ್ಲಿ ಹೆಮ್ಮೆಯ ವಿಚಾರ. ನನ್ನ ಶಾಲಾ- ಕಾಲೇಜು ದಿನಗಳಲ್ಲಿ ದೇಶದಲ್ಲಿನ ಪ್ರಮುಖ ಸಮಸ್ಯೆ ಎಂದರೆ ಬಡತನ, ಜಾತೀಯತೆ, ಅಪೌಷ್ಠಿಕತೆ, ಅಸಮಾನತೆ ಮುಂತಾದವುಗಳೆಂದು ನಮ್ಮ ಶಿಕ್ಷಕರು ಹೇಳುತ್ತಿದ್ದರು. ಆದರೆ ಇಂದು ದೇಶಕ್ಕೆ ಭಾರಿ ಸಮಸ್ಯೆಯನ್ನು ತಂದೊಡ್ಡುತ್ತಿರುವ ವಿಷಯ ನಿರುದ್ಯೋಗ.
ದೇಶದ ಜನಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಅಂಕಿ-ಅಂಶಗಳ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ಜನ ಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಮ್ಮೆಟ್ಟಿಸುವ ಹಾದಿಯತ್ತ ಭಾರತ ಸಾಗಿದೆ. ಇತ್ತ ಜನಸಂಖ್ಯೆ ಏರುತ್ತಿದ್ದರೆ, ಅದಕ್ಕೆ ತಕ್ಕಂತೆ ಉದ್ಯೋಗವಕಾಶಗಳು ಸೃಷ್ಟಿಯಾಗದಿರುವುದರಿಂದ ಯುವ ಸಮೂಹ ಆತಂಕಕ್ಕೆ ಒಳಗಾಗುವಂತಾಗಿದೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದ್ದ ಕೃಷಿಯು ಮಳೆ ಕೊರತೆ, ಬೆಳೆ ನಷ್ಟ, ಬೆಲೆ ಇಳಿಕೆ ಮತ್ತಿತರ ಕಾರಣಗಳಿಗಾಗಿ ಸಮಸ್ಯೆಗೆ ಒಳಗಾಗಿರುವುದರಿಂದ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಇತ್ತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲೂ ಕೂಡ ಬಂಡವಾಳದ ಕೊರತೆ, ಮಾರುಕಟ್ಟೆ ವಿಸ್ತರಣೆ ಸಮಸ್ಯೆ, ಕೌಶಲ್ಯಯುತ ಕಾರ್ಮಿಕರ ಕೊರತೆ, ವಿದ್ಯುತ್‌ ಕಣ್ಣಾಮುಚ್ಚಾಲೆ, ಹದಗೆಟ್ಟ ರಸ್ತೆ, ಸಾರಿಗೆ ವ್ಯವಸ್ಥೆ, ದುಬಾರಿ ನಿವೇಶನ, ಮಳಿಗೆಯ ಬಾಡಿಗೆಯಂತಹ ಸಮಸ್ಯೆಗಳಿಂದ ಹೈರಾಣಾಗಿದ್ದು, ಅಲ್ಲೂ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗವಕಾಶ ಹುಟ್ಟುತ್ತಿಲ್ಲ.
ಈ ಮಧ್ಯೆ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಕ್ಷಗಳಲ್ಲಿ ವೇತನ ನೀಡುವ ಮೂಲಕ ಸಾಫ್ಟ್‌ವೇರ್‌ ನೌಕರರ ಸ್ವರ್ಗವಾಗಿತ್ತು. ಕಾಲ ಬದಲಾದಂತೆ ಐಟಿ ಬಿಟಿ ವಲಯದ ಕಂಪನಿಗಳು ಕೂಡ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ಮೂಲಕ ಅಲ್ಲಿನ ಉದ್ಯೋಗಿಗಳಿಗೆ ಶಾಕ್‌ ನೀಡುತ್ತಿವೆ. ಲಕ್ಷಗಳಲ್ಲಿ ವೇತನ ಪಡೆಯುತ್ತಿದ್ದ ಹಲವರು ಸಾವಿರ ರೂ.ಗಳಲ್ಲಿ ವೇತನ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಎಲ್ಲರ ಕಣ್ಣಿಗೂ ಕಾಣುವ ಸತ್ಯ. ಐಟಿ, ಬಿಟಿ ವಲಯದ ಕಂಪನಿಗಳು ಕೂಡ ಉದ್ಯೋಗಿಗಳಿಗೆ ಕತ್ತರಿ ಹಾಕಿ ಕಡಿಮೆ ಸಿಬ್ಬಂದಿಯಿಂದಲೇ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ಪಾಲಿಸುತ್ತಿರುವುದರಿಂದ ಯುವ ಸಮೂಹಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಹುತೇಕ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ಹೆಚ್ಚಿನವರು ಉದ್ಯೋಗದಿಂದ ವಂಚಿತರಾಗಲು ಮೂಲ ಕಾರಣ ಅವರಲ್ಲಿನ ಕೌಶಲ್ಯದ ಕೊರತೆ ಎನ್ನುವುದನ್ನು ಪ್ರತಿಪಾದಿಸುತ್ತಾರೆ. ಅದು ಸಂವಹನ, ಭಾಷೆಯಲ್ಲಿ ಹಿಡಿತ, ಸಮಯ ಪಾಲನೆ, ಸಮಸ್ಯೆ ಬಗೆಹರಿಸುವಿಕೆ, ನಾಯಕತ್ವದ ಕೊರತೆ, ವೃತ್ತಿಗೆ ಸಂಬಂಧಪಟ್ಟಂತೆ ಜ್ಞಾನದ ಕೊರತೆ ಮುಂತಾದ ವಿಷಯಗಳಲ್ಲಿ ಕೌಶಲ್ಯ ಇಲ್ಲದಿರುವುದೇ ಉದ್ಯೋಗದಿಂದ ವಂಚಿತರಾಗಲು ಕಾರಣ ಎಂಬ ಅಭಿಪ್ರಾಯವನ್ನು ಮುಂದಿಡುತ್ತಾರೆ.
ಕೇಂದ್ರ ಹಾಗೂ ಬಹುತೇಕ ರಾಜ್ಯ ಸರಕಾರಗಳು ಯುವ ಜನಾಂಗಕ್ಕೆ ನಾನಾ ರೀತಿಯ ಕೌಶಲ್ಯ ನೀಡಿ, ಉದ್ಯೋಗವಕಾಶಗಳನ್ನು ಒದಗಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ವರ್ಷವೂ ಮುಂಗಡ ಪತ್ರದಲ್ಲಿ ಈ ಯೋಜನೆಗಳಿಗೆ ಕೋಟ್ಯಂತರ ಹಣವನ್ನು ಮೀಸಲಿಡುತ್ತವೆ. ಕೌಶಲ್ಯಾಧಾರಿತ ತರಬೇತಿ ನೀಡುವ ಜವಾಬ್ದಾರಿಯನ್ನು ಸರಕಾರೇತರ ಸಂಸ್ಥೆ (ಎನ್‌ಜಿಓ)ಗಳಿಗೆ ಸರಕಾರಗಳು ವಹಿಸುತ್ತಿರುವುದರಿಂದ, ಗುಣಮಟ್ಟದ ತರಬೇತಿಗಳನ್ನು ಅವು ನೀಡುತ್ತಿವೆ ಎಂದು ಹೇಳಲು ಅಸಾಧ್ಯ. ಕೆಲ ಸಂಸ್ಥೆಗಳಂತೂ ಯುವಕ- ಯುವತಿಯರಿಗೆ ಕೌಶಲ್ಯ ನೀಡುವುದಕ್ಕಿಂತ ಸರಕಾರದಿಂದ ಬರುವ ಅನುದಾನದ ಮೇಲೆ ಕಣ್ಣು ನೆಟ್ಟಿರುವುದರಿಂದ ತರಬೇತಿಗಳು ಕಾಟಾಚಾರದ ಕೇಂದ್ರಗಳಾಗಿ ಬದಲಾಗಿವೆ ಎಂದರೆ ತಪ್ಪಿಲ್ಲ.
ಪ್ರತಿ ರಾಜಕೀಯ ಪಕ್ಷವೂ ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಯಾವುದೇ ಚುನಾವಣೆ ಬಂದರೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವುದು ನಿರುದ್ಯೋಗ ನಿವಾರಣೆ ಹಾಗೂ ಸ್ವ ಉದ್ಯೋಗ ಆಸಕ್ತರಿಗೆ ಪೋ›ತ್ಸಾಹ. ಈ ಎರಡು ಅಂಶಗಳ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಎನ್ನುವುದು ಬಿಡಿಸಿ ಹೇಳಬೇಕಾಗಿಲ್ಲ.
ಸಿಎಂಇಜಿಪಿ, ಪಿಎಂಇಜಿಪಿ ಯೋಜನೆ, ಕೈಗಾರಿಕಾ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಾ.ಬಿ.ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಇಲಾಖೆಗಳು ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವ ನಿರುದ್ಯೋಗಿಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.
ಗಮನಿಸಬೇಕಾದ ಅಂಶವೆಂದರೆ ಇಂತಹ ಯೋಜನೆಗಳ ಪಲಾನುಭವಿಯಾಗಬೇಕಾದರೆ ಇಲ್ಲಾ ಜನಪ್ರತಿನಿಧಿಯ ಆಶೀರ್ವಾದ ಇರಬೇಕು. ಇಲ್ಲದೆ ಹೋದರೆ ಇಲಾಖೆಯ ಅಧಿಕಾರಿಯ ಸ್ನೇಹವಿರಬೇಕು. ಎರಡೂ ಇಲ್ಲದಿದ್ದರೆ ಅರ್ಜಿ ಹಾಕಿ ಸುಮ್ಮನಿರಬೇಕು ಅಷ್ಟೇ.
ನಿರುದ್ಯೋಗ ನಿವಾರಣೆ ಹಾಗೂ ಸ್ವ ಉದ್ಯೋಗಿಗಳಿಗೆ ಪೋ›ತ್ಸಾಹ ನೀಡಲೆಂದು ಸರಕಾರಗಳು ನೀಡುತ್ತಿರುವ ಸಬ್ಸಿಡಿ ಸಹಿತ ಸಾಲಗಳು ಪ್ರಬಲರ ಪಾಲಾಗುತ್ತಿರುವುದರಿಂದ ನಿಜವಾದ ಹಾಗು ತನ್ನ ಜೀವನವನ್ನು ಸ್ವ ಉದ್ಯೋಗದ ಮೂಲಕ ರೂಪಿಸಿಕೊಳ್ಳಬೇಕೆಂಬ ಇಚ್ಛೆ ಇರುವ ಯುವಕ-ಯುವತಿಯರಿಗೆ ಕನಸು ಕಾಣುವುದು ಬಿಟ್ಟರೆ ಬೇರೇನೂ ಮಾರ್ಗ ಉಳಿದಿಲ್ಲ.  
ಇನ್ನು ಗ್ರಾಮೀಣ ಭಾಗದಲ್ಲಿ ಉದ್ಯೋಗಗಳು ಕ್ಷೀಣಿಸುತ್ತಿರುವುದರಿಂದ ಜನರು ನಗರಗಳತ್ತ ವಲಸೆ ಹೋಗುತ್ತಿರುವುದು ಸಾಮಾನ್ಯ ವಿಚಾರ. ಇದೇ ರೀತಿ ವಲಸೆ ಮುಂದುವರಿದರೆ ಆಗಬಹುದಾದ ಭಾರಿ ಅನಾಹುತಗಳ ಬಗ್ಗೆ ಚರ್ಚೆಯಾಗಬೇಕಿದೆ. ನಗರಗಳು ತಮ್ಮ ಶಕ್ತಿ ಮೀರಿ ಜನರನ್ನು ಹಿಡಿದಿವೆ. ನೀರಿನ ಸಮಸ್ಯೆ, ಸಂಚಾರ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಸದ ಸಮಸ್ಯೆ, ದುಬಾರಿ ಬಾಡಿಗೆ ಮತ್ತಿತರ ಸಮಸ್ಯೆಗಳು ಉಲ್ಬಣಗೊಂಡಿವೆ.
ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗದ ಮೂಲಕ ದುಡಿದು ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಆಸೆಯ ಕಣ್ಣುಗಳಿಂದ ಕಾಯುವ ಯುವ ಸಮೂಹಕ್ಕೆ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ಹೊಣೆಗಾರಿಕೆ ಆಳುವ ಸರಕಾರಗಳದ್ದು. ಸರಕಾರಿ ವಲಯದಲ್ಲಿ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಅರ್ಹರನ್ನು ಇಲಾಖೆಗಳಿಗೆ ನೇಮಿಸಿಕೊಳ್ಳಬೇಕು. ಕೃಷಿ, ಕೈಗಾರಿಕೆ ವಲಯಕ್ಕೆ ಆದ್ಯತೆ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು.  
ಸ್ವ ಉದ್ಯೋಗದಲ್ಲಿ ನಿಜವಾದ ಆಸಕ್ತಿ ಇರುವ ಯುವಕ-ಯುವತಿಯರಿಗೆ ಯೋಜನೆಗಳ ಲಾಭ ಸಿಗುವಂತೆ ಮಾಡುವ ಮೂಲಕ ಅರ್ಹರ ಕೈ ಹಿಡಿಯಬೇಕು. ಗೊತ್ತು ಗುರಿಯಿಲ್ಲದ ಎನ್‌ಜಿಓಗಳಿಗೆ ತರಬೇತಿಯ ಹೊಣೆ ನೀಡಿ ಹಣ ವ್ಯರ್ಥ ಮಾಡುವ ಬದಲು ಗುಣಮಟ್ಟಕ್ಕೆ ಆದ್ಯತೆ ನೀಡುವ ಸಂಸ್ಥೆಗೆ ಕೌಶಲ್ಯಯುತ ತರಬೇತಿ ಜವಾಬ್ದಾರಿ ವಹಿಸಬೇಕು.
ದೇಶದ ನಾಳಿನ ಪ್ರಜೆಗಳಾದ ಮಕ್ಕಳ, ವಿದ್ಯಾರ್ಥಿಗಳ, ಯುವ ಜನಾಂಗದ ಭವಿಷ್ಯ ಜೀವನದ ಬಗ್ಗೆ ಸರಕಾರಗಳು ಲಘುವಾಗಿ ಪರಿಗಣಿಸಬಾರದು. ಯುವ ಸಮೂಹವೇ ಈ ದೇಶದ ಆಸ್ತಿ. ಅವರ ಭವಿಷ್ಯ ಸೂರ್ಯನ ಥರ ಸದಾ ಬೆಳಕು ನೀಡುತ್ತಾ ಪ್ರಜ್ವಲಿಸುವಂತಾಗಲಿ. ಆಗ ದೇಶವು ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಕಾಣುತ್ತದೆ. ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ನಿಧಾನಗತಿಯನ್ನು ಸರಕಾರಗಳು ಪ್ರದರ್ಶಿಸಿದರೆ ಅದರಿಂದಾಗುವ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆಗೆ ಸಿಲುಕುವುದು ಖಚಿತ.
(ನನ್ನ ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)




ಬುಧವಾರ, ಅಕ್ಟೋಬರ್ 11, 2017

ಮಳೆಯಲ್ಲಿ ಮಿಂದೆದ್ದ ಕೋಲಾರ, ರೈತರಲ್ಲಿ ಹರ್ಷ..

 ➤ ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ

           ಬೇತಮಂಗಲ ಕೆರೆ ಕೋಡಿ ಬಿದ್ದಿರುವುದು
ನನಗಿನ್ನು ನೆನಪಿದೆ, ಅದು 2005 ನೇ ಇಸವಿ, ಆಗ ನಾನು ಫ್ರೌಡ ಶಾಲೆಯಲ್ಲಿ ಓದುತ್ತಿರಬೇಕು. ಆ ವರ್ಷ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿತ್ತು. 
ಕೆರೆ, ಕುಂಟೆಗಳೆಲ್ಲಾ ತುಂಬಿ  ಹರಿಯಲಾರಂಭಿಸಿದ್ದ ವರ್ಷವದು. 
ಜಿಲ್ಲೆಯ ಎಲ್ಲಾ ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಭರ್ತಿಯಾದ ವರ್ಷವಾದ್ದರಿಂದ ಮರೆಯಲು ಖಂಡಿತಾ ಸಾಧ್ಯವಿಲ್ಲ. ಆ ಸಮಯದಲ್ಲಿ ಬಿದ್ದ ಮಳೆಯ ಆರ್ಭಟ, ವರ್ಷಧಾರೆ ಇಂದಿಗೂ ನಮ್ಮ ಕಣ್ಣೆದುರೆ ಹಾದು ಹೋಗುತ್ತದೆ. ಜೈಲಲ್ಲಿ ಹಲವು ವರ್ಷಗಳು ಕಾಲ ಶಿಕ್ಷೆ ಅನುಭವಿಸಿ ಹೊರಬರುವ ಖೈದಿಗೆ ಹೇಗೆ ಸ್ವಾತಂತ್ರ್ಯ ಸಿಕ್ಕ ಖುಷಿಯಾಗುತ್ತೋ, ಅದೇ ರೀತಿಯಲ್ಲಿ ಕೆರೆಗಳು ಭರ್ತಿಯಾಗಿ ತನ್ನ ಸೌಂದರ್ಯವನ್ನು ಮರಳಿ ಪಡೆದಾಗ ಜನ ಸಾಮಾನ್ಯರಿಗೆ ಆದ ಸಂತೋಷವು ಊಹೆಗೂ ಮಿಗಿಲಾದದ್ದು. ಮಳೆಯ ಆರ್ಭಟಕ್ಕೆ ಅಂದು ಶಾಲಾ-ಕಾಲೇಜುಗಳಿಗೂ ಕೆಲ ದಿನ ರಜೆ ಘೋಷಿಸಲಾಗಿತ್ತು ಎಂದರೆ ಮಳೆಯ ಪ್ರತಾಪ ಅರ್ಥವಾಗಬಹುದು ನಿಮಗೆ.
ನಾನಾಗ ಬಂಗಾರಪೇಟೆ ತಾಲೂಕಿನ ಬೇತಮಂಗಲದ ಶಾಲೆಯಲ್ಲಿ ಓದುತ್ತಿದ್ದರಿಂದ ಪ್ರತಿದಿನವೂ ಕೆರೆ ತುಂಬಿತೆ ಎಂದು ತಿಳಿಯಲು ಬೇತಮಂಗಲದ ಕೆರೆಯತ್ತ ಒಂದು ವಿಸೀಟ್ ತಪ್ಪದೇ ಇರುತ್ತಿತ್ತು. ಅಂತೂ ಕೆಲ ದಿನಗಳ ನಂತರ ಕೆರೆ ತುಂಬಿತು ಎಂಬ ಶಬ್ದ ಕಿವಿಗೆ ಬಿದ್ದಿದೆ ತಡ ಕೆರೆಯತ್ತ ದೌಡಾಯಿಸಿ, ಪ್ರತಿದಿನವೂ ವರ್ಣಿಸಲಾಗದ ಕೆರೆಯ ಸೌಂದರ್ಯವನ್ನು ಆಹ್ಲಾದಿಸುತ್ತಿದ್ದ ದಿನಗಳು ನೆನಪಿಸಿಕೊಂಡರೆ ಮೈ ಪುಳುಕಗೊಳ್ಳುತ್ತದೆ. ಕೆರೆಯಲ್ಲಿನ ನೀರು ಗಾಳಿಯ ರಭಸಕ್ಕೆ ನೃತ್ಯ ಮಾಡುತ್ತಿದ್ದರೆ ನೋಡುವುದೇ ಆಗ ಆನಂದ. ಮತ್ತೊಂದೆಡೆ ಕೆರೆಯ ಕ್ರಸ್ಟ್ ಗೇಟ್ ಗಳ ಮುಖಾಂತರ ಕೆರೆಯ ನೀರು ರಾಮಸಾಗರ ಕೆರೆಯತ್ತ ಹಾದು ಹೋಗುವ ಸನ್ನಿವೇಶ ಅದ್ಬುತವಾದ ಅನುಭವಗಳನ್ನು ಕಟ್ಟಿಕೊಟ್ಟಿತ್ತು.
ವಿಧಿಯ ನಿಯಮವೋ ಏನೋ 2005ರಲ್ಲಿ ಬಿದ್ದ ರೀತಿಯಲ್ಲಿ ಮಳೆಯ ಆಗಮನವನ್ನು ಕಾಣಲು ದಶಕಗಳೇ ಕಾಯಬೇಕಾಯಿತು. 2005 ರ ನಂತರ ಮತ್ತೆ ಅವಿಭಜಿತ ಕೋಲಾರ ಜಿಲ್ಲೆಗಳ ಕೆರೆಗಳು ತುಂಬಿದ್ದು ಈಗ (2017) ರಲ್ಲಿ ಅಂದರೆ ಬರೋಬ್ಬರಿ 12 ವರ್ಷಗಳ ವನವಾಸದ ನಂತರ..
ಈ ವರ್ಷ (2017) ಈ ಮಟ್ಟಿಗೆ ಮಳೆರಾಯನ ಆಗಮನವಾಗುತ್ತದೆ ಎಂದು ಯಾರು ಕನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಮಳೆ ಸಿಂಚನವು ದೊಡ್ಡ ಪ್ರಮಾಣದಲ್ಲಿ ಬಂದ ಕಾರಣ ಒಂದು ಹನಿಯು ನೀರಿಲ್ಲದೇ ಬರಡಾಗಿ, ಬಾಯ್ತೆರೆದಿದ್ದ ಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಕೆರೆಗಳಿಗೀಗ ಜೀವ ಕಳೆ ಬಂದಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೇ ಹರಿಯುವ ನದಿಗಳಿಲ್ಲ. ಜಲಾಶಯಗಳ ಸುಳಿವು ಇಲ್ಲ. ನೀರಿನ ಮೂಲವು ಇಲ್ಲ. ಆ ಕಾರಣದಿಂದಲೇ ಪೂರ್ವಿಕರು ಗ್ರಾಮಕ್ಕೊಂದರಂತೆ ಕೆರೆಗಳನ್ನು ನಿರ್ಮಿಸಿದ್ದರು.. ಮಳೆ ಬಂದರೆ ಕೆರೆಗಳಲ್ಲಿ ನೀರು ಸಂಗ್ರಹವಾದರೆ ಗ್ರಾಮದ ಜನರಿಗೆ ಒಂದಷ್ಟು ಸಹಾಯವಾಗುತ್ತದೆ ಎಂಬ ಆಲೋಚನೆ ಅವರದಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆ ಅವಿಭಜಿತ ಕೋಲಾರ ಜಿಲ್ಲೆಗಿದೆ.
2005 ರ ನಂತರ ಬಯಲು ಸೀಮೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಜನರಿಗೆ ನಿಜಕ್ಕೂ ವನವಾಸದ ಸ್ಥಿತಿ ಒದಗಿ ಬಂದಿತ್ತು. ಆಗಾಗ ಅಲ್ಪ ಸ್ವಲ್ಪ ಮಳೆ ಬಿದ್ದರು, ಕೆರೆಗಳಲ್ಲಿ ನೀರು ಶೇಖರಣೆಯಾಗುವ ಮಟ್ಟಿಗೆ ಮಳೆ ಬರಲಿಲ್ಲ. ಅಂತರ್ಜಲ ಮಟ್ಟವಂತು ಪಾತಾಳಕ್ಕೆ ಇಳಿದಿತ್ತು. ಕೊಳವೆ ಬಾವಿಗಳು ಮಕಾಡೆ ಮಲಗಿ, ರೈತನ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿತು.
ಜಿಲ್ಲೆಯ ಜನರಂತು ಕೃಷಿಯ ಸಹವಾಸವೇ ಸಾಕು ಎಂದು ಕೂಲಿ ಕೆಲಸಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದಿಷ್ಟು ಜನ ಬೆಂಗಳೂರು ಸೇರಿದಂತೆ ಮತ್ತಿತರರ ನಗರಗಳ ಕಾರ್ಖಾನೆಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಸೇರಿ ಜೀವನ ರೂಪಿಸಿಕೊಂಡಿದ್ದರು.
ಇನ್ನೇನು ಈ ವರ್ಷವು ಮಳೆ ಪ್ರತಿ ವರ್ಷದಂತೆ ಕೈ ಕೊಡುತ್ತದೆ ಎಂದೇ ಜನ ಭಾವಿಸಿದ್ದರು. ರಾಗಿ, ಅವರೆ, ಭತ್ತ, ಜೋಳ, ನೆಲಕಡಲೆ ಮತ್ತಿತರ ಬೆಳೆಗಳು ಮಳೆ ಇಲ್ಲದೆ ಸೋರುಗುತ್ತವೆ ಎಂಬ ಕಲ್ಪನೆ ಎಲ್ಲರದ್ದಾಗಿತ್ತು. ಆದರೆ ಮಳೆ ಅನಿರೀಕ್ಷಿತ ಆಗಮನದಿಂದ ಕೃಷಿಗೆ ಮರುಜೀವ ಬಂದಿದೆ. ರಾಗಿ ತೆನೆ ಹಚ್ಚ ಹಸಿರಿನಿಂದ ಹೊಲಗಳಲ್ಲಿ ಬೆಳೆದು ಕಂಗೊಳಿಸುತ್ತಿರುವ ಚಿತ್ರಣ ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಢ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿ ಸಾಕಷ್ಟು ಕೆರೆಗಳು ತುಂಬಿ ಕೋಡಿ ಬಿದ್ದಿವೆ. 
ಅದರಲ್ಲೂ ಕೋಲಾರ ಜಿಲ್ಲೆಯ ಪೈಕಿ ದೊಡ್ಡ ಕೆರೆಗಳಲ್ಲಿ ಒಂದಾದ ಬಂಗಾರಪೇಟೆ ತಾಲೂಕಿನ  ಬೇತಮಂಗಲದ ದೊಡ್ಡೆ ಕೆರೆ 12 ವರ್ಷಗಳ ನಂತರ ಮೈ ತುಂಬಿ ಹರಿಯುತ್ತಿದೆ. ಬೇತಮಂಗಲ, ಕೆಜಿಎಫ್, ಬೆಮಲ್ ನಗರಗಳಿಗೆ ನೀರಿನ ದಾಹ ನೀಗಿಸುತ್ತಿದ್ದ ಬೇತಮಂಗಲ ಕೆರೆ ಮತ್ತೆ ಭ ರ್ತಿಯಾಗಿರುವುದರಿಂದ ಈ ಮೂರು ನಗರಗಳ ಜನಕ್ಕೆ ಒಂದಷ್ಟು ವರ್ಷ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.
ಬಾಗೇಪಲ್ಲಿಯ ಚಿತ್ರಾವತಿ ಜಲಾಶಯವು ಭ ರ್ತಿಯಾಗಿದೆ. ಕೋಲಾರ ಭಾಗದ ಆವಣಿ, ರಾಮಾಪುರ, ಹೊಳಲಿ, ಅರಾಭಿಕೊತ್ತನೂರು ಮತ್ತಿತರರ ಕೆರೆಗಳು ತುಂಬಿ ಹರಿದಿವೆ. ಕೋಲಾರದ ಅಂತರಗಂಗೆಯಲ್ಲಿ ಮಳೆಯ ರಭಸಕ್ಕೆ ಹೊಸ ಪಾಲ್ಸ್ ಸೃಷ್ಟಿಯಾಗಿದೆ.
ಆದರೆ ನೋವಿನ ವಿಚಾರವೆಂದರೆ ಈ ವರ್ಷ ಜೋರಾಗಿಯೇ ಮಳೆಯಾಗುತ್ತಿದ್ದರು ಕೂಡ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ರಾಜಕಾಲುವೆಗಳು ಮುಚ್ಚಿ ಹೋದರೆ, ಮತ್ತೊಂದಿಷ್ಟು ರಾಜಕಾಲುವೆಗಳು ಒತ್ತುವರಿಯಾಗಿವೆ. ಆ ಕಾರಣದಿಂದಲೇ ಮಳೆಯ ಅಬ್ಬರದ ಮಧ್ಯೆಯೂ ಕೆರೆಗಳಿಗೆ ವೇಗವಾಗಿ ನೀರು ಬರುತ್ತಿಲ್ಲ. ಇದಕ್ಕೆ ಉತ್ತಮ ನಿದರ್ಶನ ಕೋಲಾರ ನಗರದ ಕೋಲಾರಮ್ಮ ಕೆರೆ. ಈ ಭಾಗದಲ್ಲಿ ಮಳೆಯಾಗುತ್ತಿದ್ದರು ಕೋಲಾರಮ್ಮ ಕೆರೆಗೆ ಮಳೆ ನೀರು ಹರಿದು ಬರುತ್ತಿರುವುದು ಬಹಳ ಕಡಿಮೆ, ಕಾರಣ ರಾಜ ಕಾಲುವೆಗಳ ಒತ್ತುವರಿಯ ಪರಿಣಾಮ.
ಬಂಗಾರಪೇಟೆ, ಮಾಲೂರು ಭಾಗದ ಕೆಲ ಗ್ರಾಮಗಳಿಗೆ ಕುಡಿಯಲು ನೀರೊದೊಗಿಸುವ ಯರಗೋಳು ಜಲಾಶಯ ಕಾಮಗಾರಿ ದಶಕಗಳಿಂದಲೂ ಕುಂಟುತ್ತಲೇ ಸಾಗಿರುವುದರಿಂದ ಈಗ ಮಳೆ ಬರುತ್ತಿದ್ದರು ಸಂಗ್ರಹ ಮಾಡಿಕೊಳ್ಳುವ ಶಕ್ತಿ ಯರಗೋಳು ಜಲಾಶಯಕ್ಕೆ ಇಲ್ಲದಾಗಿದೆ. ರಾಜಕಾರಣಿಗಳ ಬೇಜಾವಾಬ್ದಾರಿಗೆ ಯರಗೋಳು ಕಾಮಗಾರಿ ಪೂರ್ಣಗೊಳ್ಳದಿರುವುದೇ ಉತ್ತಮ ನಿದರ್ಶನ. 
ನನ್ನ ಮೊಬೈಲ್ಗೆ ಪ್ರತಿದಿನವು 9ಕ್ಕೆ ಸರಿಯಾಗಿ ಹವಾಮಾನ ಇಲಾಖೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಎಷ್ಟು ಮೀ.ಮಿ ಮಳೆ ಬಿದ್ದಿದೆ ಎಂದು ಮಾಹಿತಿ ಬರುತ್ತದೆ. ಪ್ರತಿದಿನವೂ ಈ ಮಾಹಿತಿ ಗಮನಿಸುತ್ತಿದ್ದೆ. ಮಳೆ ಬೀಳದ ಪರಿಣಾಮ ಮಳೆ ಪ್ರಮಾಣ ಶೂನ್ಯ ತೋರಿಸುತ್ತಿತ್ತು, ಆಗ ನನಗೂ ಮಳೆರಾಯನ ಬಗ್ಗೆ ಕೋಪ ಬರುತ್ತಿತ್ತು. 
ಆದರೆ ಇತ್ತಿಚೀನ ದಿನಗಳಲ್ಲಿ ಬರುವ ಮೆಸೇಜ್ ನಲ್ಲಿ ಕೋಲಾರದಲ್ಲಿ 95 ಮೀ.ಮಿ, ಮುಳಬಾಗಿಲುವಿನಲ್ಲಿ 80 ಮೀ.ಮಿ, ಶ್ರೀನಿವಾಸಪುರದಲ್ಲಿ 65 ಮೀ.ಮಿ ಈಗೆ ಮಳೆ ಪ್ರಮಾಣ ದಾಖಲಾಗಿದೆ ಎಂದು ಮೇಸೆಜ್ ಬರುತ್ತಿದ್ದಂತೆ ಅಬ್ಬ ಅಂತು ಈ ವರ್ಷವಾದರೂ ಮಳೆಯರಾಯ ಕೋಪ ತಣ್ಣಾಗಾಗಿದೆ ಎಂದು ಅನ್ನಿಸಿತು.
ಈ ವರ್ಷ ಕೆರೆಗಳು ತುಂಬುತ್ತಿರುವುದರಿಂದ ಗ್ರಾಮಗಳ ಜನ ಕೆರೆಗಳಿಗೆ ಖುಷಿಯಿಂದ ಬಾಗಿನ ಅಪರ್ಿಸುತ್ತಿರುವುದನ್ನು ಕಂಡರೆ ಪ್ರತಿಯೊಬ್ಬರಿಗೂ ಸಂತೋಷವಾಗುತ್ತದೆ. ಮಳೆಯು ಪ್ರತಿವರ್ಷವೂ ಸಕಾಲದಲ್ಲಿ ಬಿದ್ದು, ಕೆರೆಗಳು ಭರ್ತಿಯಾಗುತ್ತಿದ್ದರೆ ಅನ್ನದಾತನ ಜೀವನ ಸರಾಗವಾಗಿ ನಡೆಯುತ್ತದೆ. ಅಂತರ್ಜಲ ಹೆಚ್ಚಾದರೆ ಬತ್ತಿ ಹೋಗಿರುವ ಕೊಳವೆ ಬಾವಿಗಳು ಪುನಃಹ ಪ್ರಾರಂಭವಾಗುತ್ತದೆ. ಇದರಿಂದ  ಕೃಷಿ ಚಟುವಟಿಕೆಗಳು ಯಾವುದೇ ಅಡೆತಡೆಗಳಿಲ್ಲದೇ ನಡೆದು ರಾಜ್ಯಕ್ಕೆ ಪೂರೈಕೆ ಮಾಡುವಷ್ಟು ಹಾಲು, ತರಕಾರಿ, ಹೂವು ಮತ್ತಿತರ ಬೆಳೆಗಳನ್ನೂ ಬೆಳೆಯುವ ಸಾಮರ್ಥ್ಯ ಅವಿಭಜಿತ ಕೋಲಾರ ಜಿಲ್ಲೆಗೆ ಇದೆ. ಆದರೆ ಮಳೆರಾಯ ಕೈ ಕೊಡಬಾರದಷ್ಟೇ.